ಡಾ. ಸೂರ್ಯನಾಥ ಕಾಮತ ಅವರಿಗೆ ವಂದನೆಗಳು

೧೬.೧೦.೧೯೯೭ರ ನಿಮ್ಮ ಪತ್ರ ತಲುಪಿದೆ. ಇದು ಒಕ್ಕಲಿಗರ ಇತಿಹಾಸ ಸಂಪುಟಕ್ಕೆ ಸಂಬಂಧಿಸಿದಂತೆ ನೀವು ನನಗೆ ಬರೆದ ನಾಲ್ಕನೆಯ ಪತ್ರ. ಒಂದು ಮತ್ತು ನಾಲ್ಕನೆಯ ಪತ್ರಗಳು ನನ್ನ ಜೀವನ ವಿವರ (Bio-data) ಮತ್ತು ಭಾವಚಿತ್ರ ಕಳುಹಿಸಿಕೊಡಲು, ಎರಡನೆಯ ಪತ್ರ ನನ್ನ ತಂದೆ ಸೂರ್ವೆ (ಭಾಗವತ) ಹಮ್ಮಣ್ಣ ರಾಕು ನಾಯಕರ ಜೀವನ ವಿವರ ಮತ್ತು ಭಾವಚಿತ್ರ ಕಳುಹಿಸಿಕೊಡಲು, ಮೂರನೆಯ ಪತ್ರ ಸ.ಪ.ಗಾಂವಕರ ಅವರ ಜೀವನ ವಿವರ ಮತ್ತು ಛಾಯಾಚಿತ್ರ ಕಳುಹಿಸಿಕೊಡಲು ಕೇಳಿದವು. ನಾನು ನಿಮಗೆ ಉತ್ತರ ಬರೆಯಲಿಲ್ಲವೆಂದು ಶ್ರೀ ಶೆಟಗೇರಿ ಜೋಗಿ ಬೀರಣ್ಣ ನಾಯಕರಿಗೆ ನೀವು ಪತ್ರ ಬರೆದು ತಿಳಿಸಿದ್ದರಿಂದ ಅವರು ನನ್ನ ಮೌನ ಮತ್ತು ಉಪೇಕ್ಷೆಗೆ ಕಾರಣ, ವಿವರಣೆ ತಿಳಿಯಬಯಸಿ ಒಂದೇ ದಿನ ೧೬.೭.೧೯೯೭ ರಂದು ಎರಡು ಪತ್ರಗಳನ್ನು ಬರೆದಿದ್ದರು.

ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದವರು ಬರೆಸುತ್ತಿರುವ, ನೀವು ಬರೆಯುತ್ತಿರುವ ಒಕ್ಕಲಿಗರ ಇತಿಹಾಸ ಸಂಪುಟಗಳ ಬಗ್ಗೆ ಜೋಗಿ ನಾಯಕರು ಪತ್ರದ ಮೂಲಕ ನಿಮ್ಮ ಮೊದಲ ಮೂರು ಪತ್ರಗಳು ಬರುವುದಕ್ಕಿಂತ ಮೊದಲೇ ತಿಳಿಸಿದ್ದರು (೨೧.೩.೧೯೯೭). ಆ ವಿಷಯವಾಗಿ ನೀವು ಅವರಿಗೆ ೧.೩.೧೯೯೭ ರಂದು ಬರೆದ ಪತ್ರದ ಜೆರಾಕ್ಸ್ ಪ್ರತಿಯನ್ನೂ ಕಳಿಸಿದ್ದರು. ನಾನು ಹುಟ್ಟಿದ ಜಾತಿಯವರಾದ ನಾಡವರನ್ನೂ ಹಾಗೂ ಬಂಟರು, ರೆಡ್ಡಿಗಳು ಮೊದಲಾದ ಸುಮಾರು ನಲವತ್ತು ಜಾತಿಗಳನ್ನು ಈ ‘ಒಕ್ಕಲಿಗ’ ರಲ್ಲಿ ಸೇರಿಸಲಾಗಿದೆಯೆಂದು ತಿಳಿಸಿದ್ದಲ್ಲದೆ ಇನ್ನೊಂದು ಪತ್ರದಲ್ಲಿ ನಾಡವರ ಬಗ್ಗೆ ಡಾ. ಎನ್. ಆರ್. ನಾಯಕರಿಗೆ ಬರೆಯಲು ತಿಳಿಸಿದ್ದಾರೆಂದೂ ಡಾ. ಎನ್.ಆರ್. ನಾಯಕರಿಗೆ ನಾಡವರನ್ನು ಕುರಿತಂತೆ ನನ್ನ ಬಳಿ ಇರುವ ಮತ್ತು ನನಗೆ ಗೊತ್ತಿರುವ ಐತಿಹಾಸಿಕ ಮಾಹಿತಿಗಳನ್ನು ಟಿಪ್ಪಣಿ ಮಾಡಿ ಕಳುಹಿಸಬೇಕೆಂದೂ ಅವರು ತಿಳಿಸಿದ್ದರು. ನಾನು ನಾಡವರ ಜಾತಿಯವರಲ್ಲಿ ಒಬ್ಬ ಮುಖ್ಯ ವ್ಯಕ್ತಿಯಾಗಿರುವೆನೆಂದೂ ಆದ್ದರಿಂದ ನನ್ನ ಜೀವನ ವಿವರ ಮತ್ತು ಭಾವ ಚಿತ್ರ ನಿಮಗೆ ಕಳುಹಿಸಿಕೊಡಬೇಕೆಂದೂ ಅವರು ಬರೆದಿದ್ದರು. ಆ ಪತ್ರಕ್ಕೂ ನಾನು ಉತ್ತರಿಸಿರಲಿಲ್ಲ; ಆಮೇಲಿನ ಅವರ ಪತ್ರಕ್ಕೂ ಉತ್ತರಿಸಿರಲಿಲ್ಲ.

ನಿಮ್ಮಿಂದ ಬರೆಸಲಾಗುತ್ತಿರುವ ಇತಿಹಾಸ ಸಂಪುಟಗಳಿಗೆ ಹಿನ್ನೆಲೆಯಾಗಿರುವ ಉದ್ದೇಶದಲ್ಲಿ ಶಕ್ತಿ ರಾಜಕೀಯದ ಸ್ವಹಿತಾಸಕ್ತಿ ಮತ್ತು ಧರ್ಮರಾಜಕೀಯದ ಸ್ವಹಿತಾಸಕ್ತಿ ಇವು ಮುಖ್ಯವಾಗಿವೆ ಎಂಬ ಬಗ್ಗೆ ಅನುಮಾನ ಯಾರಿಗೂ ಉಂಟಾಗುವಂತಿದೆ. ಜಾತಿವಾದ, ಮತ-ಧರ್ಮವಾದಗಳ ಕಳ್ಳಹೆಜ್ಜೆಗಳು ಈ ದೇಶದ ರಾಜಕೀಯ, ಸಾಂಸ್ಕೃತಿಕ ಮೊದಲಾದ ಎಲ್ಲ ರಂಗಗಳಲ್ಲಿಯೂ ವ್ಯಕ್ತರೂಪದಲ್ಲಿ ಮಾತ್ರವಲ್ಲ ಬಂಗಾರದ ಜಿಂಕೆಯ ರಾಕ್ಷಸ ಮಾಯಾ ರೂಪದಲ್ಲಿಯೂ ಚಲಿಸುತ್ತಿವೆ. ಇತಿಹಾಸಕಾರರಾದ ನಿಮಗೆ ಇದರ ಅರಿವೇ ಇಲ್ಲ ಎಂದು ಹೇಳಿದರೆ ನಂಬುವುದು ಕಷ್ಟ.

ಆದಿಚುಂಚನಗಿರಿ ಮಠ ಒಂದು ಜಾತಿಗೆ ಸೇರಿದ್ದು. ಅದು ಒಕ್ಕಲಿಗ (ಗೌಡ)ರೆಂದು ಮೈಸೂರು ಕಡೆ ಕರೆಯಲಾಗುತ್ತಿರುವ ಜಾತಿಯ ಸಂಪ್ರದಾಯವಾದಿಗಳಿಗೆ ಸೇರಿದ ಮಠ. ಮೂಲತಃ ಒಕ್ಕಲಿಗರ ಮಠ ಎಂಬುದೊಂದು ಇರಲೇ ಇಲ್ಲ ಎಂದೂ ಹೇಳಲಾಗುತ್ತಿದೆ. ಇತಿಹಾಸಕಾರರಾದ ನಿಮಗೆ ಆ ಬಗ್ಗ ಸರಿಯಾಗಿ ಗೊತ್ತಿರಬೇಕು. ಅದೇನೇ ಇರಲಿ, ನನಗೆ ಆ ಸಂಗತಿ, ಅದರ ಸತ್ಯಾಸತ್ಯತೆಯ ಬಗ್ಗೆ ತಿಳಿಯುವ ಅಸಕ್ತಿ ಇಲ್ಲ. ನನಗೆ ಅದು ಮುಖ್ಯವೂ ಅಲ್ಲ. ‘ಒಕ್ಕಲಿಗ’ ಜಾತಿಯ ತೆಕ್ಕೆಗೆ ಒಕ್ಕಲುತನ ಕಸುಬಾಗುಳ್ಳ ಇತರ ಜಾತಿ, ಪಂಗಡಗಳವರನ್ನೂ ಸೇರಿಸಿಕೊಂಡು ಅವರನ್ನೆಲ್ಲ ಒಂದೇ ಜಾತಿಯ ಹಾಗೂ ಒಂದೇ ಮಠದ ಛತ್ರದಡಿಯಲ್ಲ ಕಾಣಿಸುವ ಇತಿಹಾಸ ಸಂಪುಟಗಳನ್ನು ಪ್ರಕಟಿಸುವ ಉದ್ದೇಶವಾದರೂ ಏನು? ಇತಿಹಾಸಕಾರನ ಆಸಕ್ತಿ ಮತ್ತು ವಿಷಯದ ಆಯ್ಕೆ ಆ ಬಗೆಯವಾಗಲು ಶೈಕ್ಷಣಿಕ (academic) ಸಮರ್ಥನೆ ಏನು?

ನೀವು ಇತಿಹಾಸಕಾರನ ವಸ್ತುನಿಷ್ಠ ದೃಷ್ಟಿಗಿಂತ ಮತ್ತು ನಮ್ಮ ಭಾರತ ದೇಶದ ಜಾತಿ ಮತಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಸಂಸ್ಕೃತಿಯ ಪುನಾರಚನೆಯ ಬಗೆಗಿನ ಸಂವೇದನಶೀಲತೆಗಿಂತ ಹಲವು ಇತಿಹಾಸ ಸಂಪುಟಗಳನ್ನು ಪ್ರಕಟಿಸಿದ ಇತಿಹಾಸಕಾರನೆಂಬ ಖ್ಯಾತಿಗೆ ಪಾತ್ರನಾಗಬೇಕೆಂಬ ಕಾಳಜಿ ಮುಖ್ಯವಾಗಿ ಇರುವವರೆಂದು ನನಗೆ ಅನಿಸುವಂತಾಗಿದೆ. ನೀವು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಸಂಪಾದಿಸಿದ ಇತಿಹಾಸ ಸಂಪುಟಗಳನ್ನೂ, ಉತ್ತರ ಕನ್ನಡ ಜಿಲ್ಲೆಯ ಗೆಝಟಿಯರ್‌ನಲ್ಲಿ ಆ ಬಗ್ಗೆ ಬರೆದದ್ದನ್ನೂ, ನೀವು ಸಂಪಾದಕ ಮಂಡಳಿಯ ಸದಸ್ಯರಾಗಿರುವ ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರು (ಬೆಂಗಳೂರು ೧೯೯೩) ಎಂಬ ಕ್ವಿಟ್ ಇಂಡಿಯಾ ಸುವರ್ಣ ಸಂಚಿಕೆಯನ್ನೂ ಅದರಲ್ಲಿರುವ ‘ವೈವಿಧ್ಯಮಯ ಹೋರಾಟ ನೀಡಿದ ಕರ್ನಾಟಕ’ ಎಂಬ ನಿಮ್ಮದೇ ಆದ ಲೇಖನವನ್ನೂ, ಓದಿದಾಗಲೇ ನಿಮ್ಮ ಬಗ್ಗೆ ಹಾಗೆ ಅನಿಸಿತ್ತು. ಒಕ್ಕಲಿಗರ ಇತಿಹಾಸ ಸಂಪುಟಗಳನ್ನು ಬರೆಯಲು (ಸಂಪಾದಿಸಲು) ನೀವು ಒಪ್ಪಿ ಕಾರ್ಯ ಪ್ರವೃತ್ತರಾಗಿರುವ ಪರಿಯನ್ನು ನೋಡಿದಾಗಲಂತೂ ಈ ನನ್ನ ಅನಿಸಿಕೆ ಮತ್ತಷ್ಟು ದೃಢವಾಗಿದೆ. ನೀವು ಮಾಡುವ ಇತಿಹಾಸ ಬರವಣಿಗೆಗೆ ಸಂಬಂಧಿಸಿದಂತೆ ಮೌಲ್ಯನಿಷ್ಠೆಯ ಮತ್ತು ಸತ್ಯನಿಷ್ಠೆಯ ಪ್ರಶ್ನೆ ಎದುರಾಗುವುದಿಲ್ಲವೆ? ಎದುರಾಗಬೇಕಿಲ್ಲವೆ?

ಈ ಯೋಜನೆಯ ಪ್ರಕಾರ ಹಿಂದೆ ಈ ಮಠದ, ಆ ಮೂಲಕ ಅದರ ಮಠಾಧಿಪತಿಯ ಧರ್ಮ ಸಾಮ್ರಾಜ್ಯವನ್ನೊ ಧರ್ಮ ವಸಾಹತನ್ನೊ ವಿಸ್ತರಿಸಿಕೊಳ್ಳುವ ಹುನ್ನಾರ (strategy) ಇಲ್ಲ ಎಂದು ಹೇಳಬಹುದೆ? ಹಾಗೆಯೆ ಮಠಾಧಿಪತಿಗೆ ಬಹಳ ಹತ್ತಿರದವರಾದ ಮಾಜಿ ಪ್ರಧಾನಿ ಶ್ರೀ ಹಚ್.ಡಿ. ದೇವೇಗೌಡ. ಶ್ರೀ ಎಸ್.ಎಂ. ಕೃಷ್ಣ, ಶ್ರೀ ವೈ.ಕೆ. ರಾಮಯ್ಯ ಮೊದಲಾದ ರಾಜಕಾರಣಿಗಳೂ ಶಕ್ತಿರಾಜಕೀಯದ ಸ್ವಹಿತಾಸಕ್ತಿಯ ಕಾರಣದಿಂದಾಗಿ ಇದಕ್ಕೆ ಪ್ರೇರಣೆ, ಪ್ರಚೋದನೆ, ಬೆಂಬಲ ನೀಡುತ್ತಿಲ್ಲವೆಂದು ಭಾವಿಸಬಹುದೆ? ಹೀಗೆ ಇತರ ಕೆಲವು ಜಾತಿ ಪಂಗಡಗಳನ್ನೂ ಒಕ್ಕಲಿಗ ಜಾತಿಯ ಛತ್ರದಡಿಯಲ್ಲಿ ಧ್ರುವೀಕರಣ (Polarisation) ಮಾಡುವುದರ ಮೂಲಕ ಜಾತಿ ಸಂಯುಕ್ತ ರಂಗ (Caste United Front) ಸ್ಥಾಪಿಸುವ ಅಥವಾ ರೂಪಿಸುವ ಜಾತಿ/ಧರ್ಮರಾಜಕೀಯ ಮತ್ತು ಶಕ್ತಿ ರಾಜಕೀಯದ ಉದ್ದೇಶ ಈ ‘ಇತಿಹಾಸ’ ಸಂಪುಟ ರಚಿಸುವ ಯೋಜನೆಯಲ್ಲಿ ಇಲ್ಲವೆನ್ನಬಹುದೆ?

ತುಮಕೂರಿನಲ್ಲಿ ಜಿಲ್ಲಾ ಒಕ್ಕಲಿಗರ ಸಮಾವೇಶವೊಂದು ನಡೆಯಿತು. ಅದರ ವರದಿ ೧೦.೧೧.೧೯೯೭ರ ಪ್ರಜಾವಾಣಿ ಪತ್ರಿಕೆಯಲ್ಲಿ ‘ರಾಜಕಾರಣಕ್ಕೆ ಧಾರ್ಮಿಕ ಮುಖಂಡರ ಮಾರ್ಗದರ್ಶನ ಬೇಕು’ ಎಂಬ ತಲೆಬರಹದಡಿಯಲ್ಲಿ ಬಂದಿದೆ. ಅದನ್ನು ಓದಿದ್ದೀರಾ? ಸಮಾವೇಶವನ್ನು ಉದ್ಘಾಟಿಸಿ ಅದಿ ಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ‘ಇಂದಿನ ರಾಜಕಾರಣ ಸರಿದಾರಿಯಲ್ಲಿ ಹೋಗಬೇಕಾದರೆ ಧರ್ಮದ ಮಾರ್ಗದರ್ಶನ ಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಅದನ್ನು ರಾಜಗುರುಗಳು ಮಾಡಿದಂತೆ ಇಂದು ಆ ಕಾರ್ಯವನ್ನು ಧಾರ್ಮಿಕ ಮುಖಂಡರು ಮಾಡಬೇಕಾಗುತ್ತದೆ’, ಎಂದು ಹೇಳಿರುವುದನ್ನು ಗಮನಿಸಿದ್ದೀರಾ? (ಪು. ೫) ಮಾಜಿ ಉಪಮುಖ್ಯ ಮಂತ್ರಿ ಶ್ರೀ ಎಸ್.ಎಂ.ಕೃಷ್ಣರವರು ‘ಸಮಾಜವಾದಿ ಚಿಂತನೆಯ ಪ್ರೇರಣೆಯಿಂದ ಜಾತ್ಯತೀತನಾಗಿ ಉಳಿಯಬೇಕೆಂದು ಕಳೆದ ೩೦ ವರ್ಷಗಳಲ್ಲಿ ಜಾತಿಬಿಟ್ಟು ರಾಜಕೀಯ ಮಾಡಿದೆ. ಉಳಿದವರು ಜಾತಿಯನ್ನು ಉಳಿಸಿಕೊಂಡು ಮೇಲೇರಿದರು. ಆ ಅವಕಾಶ ನನಗೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ನಾನು ನನ್ನನ್ನು ಮರುವಿಮರ್ಶೆಗೆ ಒಳಪಡಿಸಬೇಕಾದ ಕಾಲ ಬಂದಿದೆ’ (ಪು.೫) ಎಂದಿದ್ದಾರೆ. ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಶ್ರೀ ವೈ.ಕೆ. ರಾಮಯ್ಯ ಅವರು ‘ಒಕ್ಕಲಿಗ ಜಾತಿಯ ಎಲ್ಲ ಒಳಪಂಗಡಗಳನ್ನು ಒಂದುಗೂಡಿಸುವ ಪ್ರಯತ್ನವಾಗಿ ಸಮ್ಮೇಳನ ನಡೆಸಲಾಗಿದೆ…. ಸಮಾಜದ ಸಂಘಟನೆಯ ‘ಪಾಪ’ದ ಕಾರ್ಯ ಮಾಡಿದ್ದಕ್ಕೆ ಕಳೆದೆರಡು ವಾರಗಳಿಂದ ಕೆಲವರು ನನಗೆ ಸಹಿಸಲಾರದ ಕಿರುಕುಳ ಕೊಟ್ಟಿದ್ದಾರೆ. ಅದನ್ನೆಲ್ಲ ಸಹಿಸಿಕೊಂಡಿದ್ದೇನೆ. ಆ ಬಗ್ಗೆ ಈಗ ಮಾತನಾಡುವುದಿಲ್ಲ. ಅವಕಾಶ ಸಿಕ್ಕಾಗ ಅದನ್ನು ಬರೆಯುತ್ತೇನೆ (ಪು.೫) ಎಂದಿದ್ದಾರೆ. ಡಾ. ಜೀವರಾಜ್ ಆಳ್ವ ಅವರು ‘ಬಂಟ ಜಾತಿಗೆ ಸೇರಿದ ನಾನು ಒಕ್ಕಲಿಗ ಸಮಾಜದವನೇ ಎಂದು ತಿಳಿದು ಅದರ ಒಳಿತಿಗಾಗಿ ಕೆಲಸ ಮಾಡಿದರೂ ಸಮಾಜದ ಸಂಘಟನೆಯಲ್ಲಿ ನನ್ನನ್ನು ಅಸ್ಪೃಶ್ಯನಂತೆ ನೋಡಿಕೊಳ್ಳಲಾಗುತ್ತಿದೆ. ಇದಕ್ಕೆ ನನ್ನ ಏಳಿಗೆಯನ್ನು ಸಹಿಸದ ಕೆಲವು ವ್ಯಕ್ತಿಗಳು ಕಾರಣ’ (ಪು.೫) ಎಂದು ಅದೇ ಸಮಾವೇಶದ ವೇದಿಕೆಯಲ್ಲಿ ತಮ್ಮ ಗೋಳನ್ನು ತೋಡಿಕೊಂಡಿದ್ದಾರೆ.

ಪ್ರಜಾವಾಣಿಯ ಅದೇ ದಿನದ ಸಂಚಿಕೆಯಲ್ಲಿಯೆ (ಪು.೫) ‘ಸಮ್ಮೇಳನಕ್ಕೆ ಆಹ್ವಾನ ದೇವೇಗೌಡರ ಪ್ರತಿಕ್ರಿಯೆ’ ಎಂಬ ತಲೆಬರಹದ ವರದಿಯಲ್ಲಿ ‘೨೦ನೆಯ ಶತಮಾನದಲ್ಲಿಯೂ ಶ್ರೇಣೀಕೃತ ವ್ಯವಸ್ಥೆಯ ಸಂರಚನೆ ಗಟ್ಟಿಮುಟ್ಟಾಗಿರುವುದರಿಂದ ಇಂತಹ ಸಮ್ಮೇಳನಗಳುಇಂದು ಕೂಡಾ ಅಗತ್ಯವಿದೆ ಎಂದು ಸಮ್ಮೇಳನ ನಡೆಸುವ ಸಮುದಾಯಗಳಲ್ಲಿ ಮೂಡಿದರೆ ಅದು ಸಹಜ. ಇದಕ್ಕೆ ಕಾರಣಕರ್ತರಾಗಿರುವ ಬಾಲಗಂಗಾಧರನಾಥ ಸ್ವಾಮೀಜಿಗಳು ಸಾಂಸ್ಕೃತಿಕವಾಗಿ ಕುವೆಂಪು ಮಾಡಿರುವುದನ್ನೇ ಧಾರ್ಮಿಕವಾಗಿ ತಾವು ಮಾಡುತ್ತಿದ್ದಾರೆ’ ಎಂದು ಶ್ರೀ ಎಚ್.ಡಿ. ದೇವೇಗೌಡರು ಅಭಿಪ್ರಾಯ ಪಟ್ಟಿದ್ದಾರೆ. ಈ ಪತ್ರಿಕಾ ವರದಿಗಳನ್ನು ನೀವು ಗಮನಿಸಿಯೇ ಇಲ್ಲವೆ?

ಕುವೆಂಪು ಗತಿಸಿ ಕೇವಲ ಮೂರು ವರ್ಷಗಳಾಗಿವೆ. ಒಕ್ಕಲಿಗ ಜಾತಿಯವರಲ್ಲಿ ಕುವೆಂಪು ಹುಟ್ಟಿದರೆಂಬ ಒಂದೇ ಒಂದು ಕಾರಣಕ್ಕೆ ಅವರ ‘ವಿಶ್ವಮಾನವ ಸಂದೇಶ’ವನ್ನು ಅವರು ಗತಿಸಿ ಸರಿಯಾಗಿ ಮೂರು ವರ್ಷ ತುಂಬಿದ ದಿನ ‘ಒಕ್ಕಲಿಗ ವಿಶ್ವ ಮಾನವ ಸಂದೇಶ’ವಾಗಿ ಈ ದೇಶದ ಮಾಜಿ ಪ್ರಧಾನಿಯಾಗಿದ್ದವರು ಅರ್ಥವಿಸಿ ವ್ಯಾಖ್ಯಾನಿಸುವುದರ ಮೂಲಕ ಕುವೆಂಪು ಅವರ ಜೀವನ ದರ್ಶನದ ಆಶಯದ ತಿಥಿ ಮಾಡಿದ ಈ ದುರಂತಕಕೆ ಏನೆನ್ನಬೇಕು? ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಆದಿ ಚುಂಚನಗಿರಿ ಮಠಾಧಿಪತಿಗಳನ್ನು ಟೀಕಿಸುವವರನ್ನು ಒಂದು ಕೈ ನೋಡಿಕೊಳ್ಳಿ ಎಂದು ಮಠದ ‘ಭಕ್ತಾಧಿ’ಗಳಿಗೆ ಕರೆಕೊಟ್ಟಿದ್ದೂ ಉಂಟು. ಈ ಸಂಗತಿ ನಿಮಗೆ ಗೊತ್ತೇ ಇಲ್ಲ ಎಂದು ನಾವು ಭಾವಿಸಬೇಕೆ?

ಕೇಂದ್ರ ರಾಜಕೀಯದಲ್ಲಿ ಶ್ರೀ ಎಚ್.ಡಿ. ದೇವೇಗೌಡರು ಜಾತಿಮತ ನಿರಪೇಕ್ಷ ರಾಜಕೀಯ ಪಕ್ಷಗಳ ಸಂಯುಕ್ತ ರಂಗದ (United Front) ಪ್ರಧಾನಿಯಾಗಿದ್ದವರು. ಈಗ ಕರ್ನಾಟಕದಲ್ಲಿ ಜಾತಿ ಸಂಯುಕ್ತರಂಗ (Caste United Front) ರಚನೆ ಮಾಡಿಕೊಳ್ಳುವುದಾದರೆ ಕರ್ನಾಟಕ ರಾಜಕೀಯದಲ್ಲಿ ವೀರಶೈವರು, ಕುರುಬರು, ದಲಿತರು ಮೊದಲಾದ ಬಹುಸಂಖ್ಯಾತರಿರುವ ಜಾತಿಗಳವರಿಗಿಂತ ಒಕ್ಕಲಿಗರು ಹೆಚ್ಚು ಪ್ರಬಲ ಮತ್ತು ಪ್ರಭಾವಶಾಲಿ ಜಾತಿಯವರಾಗುತ್ತಾರೆ. ಆ ಮೂಲಕ ಕರ್ನಾಟಕದಲ್ಲಿ ರಾಜಕೀಯ ಅಧಿಕಾರ ವಶಪಡಿಸಿಕೊಳ್ಳಬಹುದು. ಇಂಥ ಲೆಕ್ಕಾಚಾರವು ಅವರಂಥವರ ಚಿಂತನೆಯ ಹಿಂದೆ ಹಾಗೂ ಈ ಇತಿಹಾಸ ರಚನೆಯ ಯೋಜನೆಯ ಹಿಂದೆ ಇರಲಿಕ್ಕಿಲ್ಲ ಎಂದು ನಿಮಗೆ ಅನಿಸಿದೆಯೆ?

ಬ್ರಾಹ್ಮಣ ಮಠಗಳು, ವೀರಶೈವ ಮಠಗಳು ಹಲವಿವೆ. ಮಠಾಧಿಪತಿಗಳೂ ಹಲವರಿದ್ದಾರೆ. ಅವುಗಳಲ್ಲಿ ಎಷ್ಟೋ ಮಠಗಳು, ಮಠಾಧಿಪತಿಗಳು ಜಾತಿವಾದಿ ರಾಜಕೀಯವನ್ನು ಪ್ರೋತ್ಸಾಹಿಸುತ್ತಾ ಬಂದಿರುವುದು, ಜಾತಿವಾದಿ ರಾಜಕೀಯ ನಡೆಸುವ ರಾಜಕಾರಣಿಗಳು ಆ ಮಠ, ಮಠಾಧಿಪತಿಗಳ ಪ್ರಭಾವವನ್ನು ಬಳಸಿಕೊಳ್ಳುವುದು ಗುಟ್ಟಿನ ಸಂಗತಿಯಾಗಿ ಉಳಿದಿಲ್ಲ. ಈ ಜಾತಿಗಳವರಲ್ಲಿ ಮಠ, ಮಠಾಧಿಪತಿಗಳ ಸಂಖ್ಯೆ ಹೆಚ್ಚಾಗಿ ಇರುವುದರಿಂದ ಅವುಗಳಲ್ಲಿ ಯಾವುದೇ ಒಂದು ಮಠದ, ಅವರಲ್ಲಿ ಯಾರೇ ಒಬ್ಬ ಮಠಾಧಿಪತಿಯ ಪ್ರಭಾವ, ಹಿಡಿತ, ವರ್ಚಸ್ಸು ಆಯಾ ಜಾತಿಗಳವರ ಮೇಲೆ ಸಮಗ್ರವಾಗಿ ಇರುವುದು ಸಾಧ್ಯವಿಲ್ಲ. ಒಕ್ಕಲಿಗ ಮಠಾಧಿಪತಿಗಳಾದ ಅಧಿಚುಂಚನಗಿರಿಯ ಮಠಾಧಿಪತಿ ಪ್ರತಿನಿಧಿಸುತ್ತಿರುವ ಹಳೆಯ ಮೈಸೂರು ಸಂಸ್ಥಾನದ ಕಡೆಯ ಒಕ್ಕಲಿಗ ಜಾತಿಯವರಲ್ಲಿ ಅವರೊಬ್ಬರೇ ಮಠಾಧಿಪತಿ. ಕೆಲವು ಜಿ‌ಲ್ಲೆಗಳಲ್ಲಿ ಒಕ್ಕಲಿಗ ಮಠಾಧಿಪತಿಗಳೆಂಬವರು ಇರುವರಾದರೂ ಅವರೆಲ್ಲ ಈ ಮಠದ ಅಧೀನ ಮಠಾಧಿಪತಿಗಳಾಗಿದ್ದಾರೆ. ಅಂಥ ವ್ಯವಸ್ಥೆ ಈಗಾಗಲೇ ಇದೆ ಎಂಬುದು ನಿಮಗೆ ಗೊತ್ತಿದೆಯಲ್ಲವೆ?

ಒಕ್ಕಲಿಗರ ಇತಿಹಾಸದ ಹೆಸರಿನಲ್ಲಿ ಒಕ್ಕಲಿಗ ಜಾತಿಯ ಲೆಕ್ಕಕ್ಕ ಬಂಟ, ನಾಡವರು,ರೆಡ್ಡಿ ಮೊದಲಾದ ಜಾತಿಗಳನ್ನು ಕೂಡಿಸಿಬಿಟ್ಟರೆ ಈ ಮಠದ ಮತ್ತು ಮಠಾಧಿಪತಿಯ ಪ್ರಭಾವದ ವಿಸ್ತರಣೆ ಅತಿಶಯವಾಗಿ ಆಗುತ್ತದೆ. ಮಠ, ಮಠಾಧಿಪತಿಗಳು ಇಲ್ಲದಿರುವ ಬಂಟರು, ನಾಡವರು ಮೊದಲಾದ ಒಕ್ಕಲಿಗರೆಂದು ಇತಿಹಾಸಕಾರರಾದ ನೀವೊ, ಮಠಾಧಿಪತಿಗಳೊ ಪರಿಗಣಿಸಿರುವ ಜಾತಿಗಳವರಲ್ಲಿಯೂ ಮಠ ಮತ್ತು ಮಠಾಧಿಪತಿಗಳನ್ನು ಸ್ಥಾಪಿಸಬಹುದು. ಅವರನ್ನು ಈ ಆದಿಚುಂಚನಗಿರಿ ಮಠ ಮತ್ತು ಮಠಾಧಿಪತಿಗೆ ಅಧೀನರನ್ನಾಗಿ ಮಾಡಬಹುದು. ಬಂಟರು ಹಾಗೂ ನಾಡವರಲ್ಲಿಯೂ ಮಠ, ಮಠಾಧಿಪತಿ ಎಂಬ ಜಾತಿವಾದದ ಸೋಂಕು ರೋಗವನ್ನು ಹೊಸದಾಗಿ ಬಿತ್ತಿ ಬೆಳೆಸುವ ಆ ಮೂಲಕ ಸ್ವಹಿತಾಸಕ್ತಿಯ ಉದ್ದೇಶವನ್ನು ಪೂರೈಸಿಕೊಳ್ಳುವ, ಸಾಂಪ್ರದಾಯಿಕ ಧಾರ್ಮಿಕತೆಯ ಬಗ್ಗೆ ಒಲವಿರುವ ಮುಗ್ಧ ಜನರನ್ನು ಧರ್ಮದ/ಜಾತಿಯ ಶ್ರದ್ಧೆ ಅಥವಾ ಅಭಿಮಾನದ ಹೆಸರಿನಲ್ಲಿ ಮಂಕುಬೂದಿ ಎರಚಿ ಸ್ವಹಿತಾಸಕ್ತಿಗಾಗಿ ಶೋಷಿಸುವ ರಾಜಕೀಯದ ಹುನ್ನಾರ ಇದರಲ್ಲಿ ಇಲ್ಲವೆನ್ನುತ್ತೀರಾ?

ನಾಡವರಿಗೂ ಬಂಟರಿಗೂ ಮತ್ತಿತರ ಕೆಲವು ಜಾತಿಗಳವರಿಗೂ ಮಠ, ಮಠಾಧಿಪತಿ ಎಂಬ ಜಾತಿ/ಮತದ ಸೋಂಕುರೋಗ ತಟ್ಟುವಂತೆ ಮಾಡಿ ಒಕ್ಕಲಿಗ ತೆಕ್ಕೆಗೆ ಸೆಳೆದುಕೊಳ್ಳುವುದರ ಮೂಲಕ ಭಾರತದ ಸಂಪ್ರದಾಯವಾದೀ ಮುಸಲ್ಮಾನರಿಗೆ ದೆಹಲಿಯ ಜುಮ್ಮಾ ಮಸೀದಿಯ ಬುಖಾರಿಯಾ ಇರುವಂತೆ ಕರ್ನಾಟಕದಲ್ಲಿ ‘ಒಕ್ಕಲಿಗ’ರೆಂದು ನೀವು ಇತಿಹಾಸದಲ್ಲಿ ಸೇರಿಸುತ್ತಿರುವ ಜನಸಮಷ್ಟಿಗೂ ಒಬ್ಬ ಬುಖಾರಿಯಾ ಇರುವಂತೆ ಆಗಬೇಕೆಂಬ ಮತ ಧರ್ಮ ರಾಜಕೀಯ (Politics of Religion) ಹಾಗೂ ಶಕ್ತಿ ರಾಜಕೀಯ (Power Politics) ಇದರಲ್ಲಿ ಇದ್ದೀತು ಎಂದು ನಿಮಗೆ ಅನಿಸಿಯೇ ಇಲ್ಲವೆ? ಇತಿಹಾಸಕಾರರಾದ ನೀವು ಹಾಗೆ ಅನಿಸದೇ ಇರುವಷ್ಟು ಮುಗ್ಧರಿರಬಹುದೆಂದು ನಾವು ತಿಳಿಯಬೇಕೆ?

ಜಾತಿಮತ ನಿರಪೇಕ್ಷ ಸಮಾಜವಾದೀ ಸಮಾಜವನ್ನು ಕಟ್ಟಲು ಸಂವಿಧಾನಾತ್ಮಕವಾಗಿಯೇ ಸಂಕಲ್ಪ ಮಾಡಿ ಸಂವಿಧಾನದ ಪ್ರಸ್ತಾವನೆ (Preamble)ಯಲ್ಲಿಯೇ ಘೋಷಿಸಿಕೊಂಡಿರುವ ಈ ನಮ್ಮ ದೇಶದಲ್ಲಿ ಬೆಳೆಯಬೇಕಾಗಿರುವ ಪ್ರಜಾಸತ್ತಾತ್ಮಕ ಸಂಸ್ಕೃತಿ ರಚನೆಯ ದಾರಿಯಲ್ಲಿ ಈ ಬಗೆಯ ಜಾತಿವಾದದ, ಮತೀಯವಾದದ ಸೋಂಕು ರೋಗ ಹಬ್ಬಿಸಲು ಉತ್ತೇಜಕವಾಗುವಂಥ ಇತಿಹಾಸ ರಚಿಸಿ ಜಾತಿ ಸಂಯುಕ್ತರಂಗದ ಆಶಯವನ್ನು ಮಹತ್ವಾಕಾಂಕ್ಷೆಯನ್ನು ಕೆಲವು ಜಾತಿಯವರಲ್ಲಿ ಯಾರೇ ಆಧರೂ ಬಿತ್ತಿ ಬೆಳೆಸುವುದು ಸರಿಯೆ? ಪ್ರಜಾಸತ್ತಾತ್ಮಕ ಸಂಸ್ಕೃತಿಯ ಜೀವಚೈತನ್ಯವನ್ನು ಹಿಚುಕುವಂತಿರುವ ಜಾತಿವಾದ/ಮತೀಯವಾದದ ದುರಾಲೋಚನೆ/ದೂರಾಲೋಚನೆಗಳನ್ನು ಒಕ್ಕಲಿಗರು ಮಾತ್ರವೇ ಅಲ್ಲ ಯಾವ ಜಾತಿ ಮತದವರೇ ಆಗಲಿ, ತಾವು ಹುಟ್ಟಿಬಂದ ಜಾತಿ ಮತಗಳವರೇ ಆಗಲಿ ಮಾಡಿದರೆ ಅದನ್ನು ವಿರೋಧಿಸುವುದು ವಿದ್ಯಾವಂತರೆಲ್ಲರ ಕರ್ತವ್ಯವಾಗಬೇಕು. ಅದಕ್ಕೆ ಬದಲಾಗಿ ಅದನ್ನು ಪೋಷಿಸುವುದಕ್ಕೆ ವಿದ್ಯಾವಂತರೂ, ವಿದ್ವಾಂಸರೂ ಎಂದು ಖ್ಯಾತರಾದವರ ವಿದ್ವತ್ತು, ಪರಿಶ್ರಮಗಳು ವಿನಿಯೋಗವಾಗಬೇಕೆ? ಮಾಡಿದ ಕೆಲಸಕ್ಕೆ ಸಂಬಳ ಅಥವಾ ವೇತನ ಅಥವಾ ಗೌರವಧನ ನೀಡುತ್ತಾರೆಂಬ ಕಾರಣಕ್ಕೆ ಇತಿಹಾಸಕಾರರಾದವರು ತಮ್ಮ ವಿದ್ವತ್ತು, ವಿವೇಕಗಳನ್ನು ಯಾರೂ ಕೊಂಡುಕೊಳ್ಳಬಹುದಾದ ಸರಕುಗಳನ್ನಾಗಿ ಮಾಡಬಹುದೆ? ಹಾಗೆ ಮಾಡುವುದರ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಹೊಣೆಗಾರಿಕೆಯ ನೈತಿಕ ಪ್ರಶ್ನೆಯನ್ನು ಎದುರಿಸುವುದರಿಂದ ಇತಿಹಾಸಕಾರನೊ, ವಿದ್ವಾಂಸನೊ ತಪ್ಪಿಸಿಕೊಳ್ಳಲು ಹವಣಿಸಬಹುದೆ?

-ಜಾತಿವಾದ ಮತೀಯವಾದಗಳು ಎಲ್ಲೆಡೆಗಳಲ್ಲಿಯೂ ಪ್ರಬಲವಾಗುತ್ತ ಪ್ರೇತ ನೃತ್ಯ ನಡೆಸುತ್ತ ನಮ್ಮ ಆದರ್ಶವಾದ ಪ್ರಜಾಸತ್ತಾತ್ಮಕ ಸಂಸ್ಕೃತಿಯ ಕತ್ತು ಹಿಚುಕಲು ಮುಂದಾಗುತ್ತಿರುವ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಎಲ್ಲ ಪ್ರಶ್ನೆಗಳನ್ನು ನಿಮ್ಮ ಆತ್ಮಸಾಕ್ಷಿಗೆ ಕೇಳಿಕೊಳ್ಳಿ.

ನಾನು ಹುಟ್ಟಿದ ಜಾತಿಯವರಾದ ಉತ್ತರ ಕನ್ನಡ ಜಿಲ್ಲೆಯ ನಾಡವರು ಸ್ವಾತಂತ್ರ್ಯ ಹೋರಾಟದಲ್ಲಿ ಧೀರತನದಿಂದ ಸೆಣೆಸಿ ದೇಶದಲ್ಲಿಯೆ ಕೀರ್ತಿಶಾಲಿ ಇತಿಹಾಸ ಸೃಷ್ಟಿಸಿದವರು, ೧೯೩೦ರ ದಶಕದ ಕರ ನಿರಾಕರಣೆಯ ಹೋರಾಟಪರ್ವದಲ್ಲಿ ಮನೆ, ಜಮೀನು ಚರ ಆಸ್ತಿಗಳನ್ನು ಬ್ರಿಟಿಷ್ ಸರ್ಕಾರ ಮುಟ್ಟುಗೋಲು ಹಾಕಿಕೊಂಡರೂ ಜಪ್ತಿ, ಜಬರದಸ್ತು, ದಬ್ಬಾಳಿಕೆ ನಡೆಸಿದರೂ ಹಿಂಜರಿಯದೆ ದೇಶದಲ್ಲಿಯೇ ಅದ್ವಿತೀಯವಾದ ರೀತಿಯಲ್ಲಿ ಸಾಮೂಹಿಕವಾಗಿ ದೇಶ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದವರು. ೧೯೪೨ರ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿಯೂ ಮತ್ತಿತರ ಚಳವಳಿ, ಸತ್ಯಾಗ್ರಹಗಳಲ್ಲಿಯೂ ಸಾಮೂಹಿಕವಾಗಿಯೇ ಭಾಗವಹಿಸಿದವರು. ಸೆರೆಮನೆವಾಸ ಅನುಭವಿಸಿದವರು. ಸರ್ಕಾರದ ದಬ್ಬಾಳಿಕೆ ಕ್ರೌರ್ಯದ ಎದುರಿನಲ್ಲಿಯೇ ಸ್ವಾತಂತ್ರ್ಯಕ್ಕಾಗಿ, ಸ್ವತಂತ್ರ ಭಾರತದ ಆದರ್ಶಕ್ಕಾಗಿ ಎಂಥ ತ್ಯಾಗವನ್ನೂ ಮಾಡಿದವರು. ಅಂಥವರು ಜಾತಿ ರಾಜಕೀಯದ ಕೀಳು ಪ್ರಲೋಭನೆಗೆ ಒಳಗಾಗದೆ ಜಾತಿಮತ ನಿರಪೇಕ್ಷ ಸಮಾಜ/ಸಂಸ್ಕೃತಿಯ ಆದರ್ಶದ ಕಡೆ ಸಾಗುವಂತಾದಾಗ ಮಾತ್ರ ಅವರು ದೇಶ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟ, ತ್ಯಾಗಗಳಿಗೆ ಅರ್ಥ ಬರುತ್ತದೆ. ಸಾರ್ಥಕತೆ ಉಂಟಾಗುತ್ತದೆ. ಹಾಗಲ್ಲದೆ ಮಾನವೀಯ ಸಂವೇದನೆಯನ್ನು, ಸಮಾನತೆಯ ಮೌಲ್ಯಪ್ರಜ್ಞೆಯನ್ನು ವಿಕೃತಗೊಳಿಸುವ ಜಾತಿ ವಾದದ ತೆಕ್ಕೆಗೆ ಸಿಕ್ಕಿದರೆ ನಾಡವರು ಅವರ ಹಿರಿಯರು ಮಾಡಿದ ತ್ಯಾಗ ಬಲಿದಾನಗಳನ್ನು ಅಣಕಿಸುವುದಕ್ಕೆ ತಾವೇ ವ್ಯಂಗ್ಯ ಪ್ರತಿಮೆಗಳಾಗಿ ಹಾಸ್ಯಾಸ್ಪದರಾಗುತ್ತಾರೆ. ಪ್ರಜಾಸತ್ತಾತ್ಮಕ ಸಮಾಜವಾದೀ ಜಾತಿಮತ ನಿರಪೇಕ್ಷ ಸಮಾಜ ನಿರ್ಮಾಣದತ್ತ ಸಾಗುವುದಕ್ಕೆ ಕಾಲ್ತೊಡಕಾಗುವ, ಪ್ರಜಾಸತ್ತಾತ್ಮಕ ಸಂಸ್ಕೃತಿಯ ಜೀವಚೈತನ್ಯ (spirit) ವನ್ನು ಜೀವಂತವಾಗಿ ಉಳಿಸುವುದಕ್ಕೆ ಶಕ್ತಿಯುತವಾಗಿ ಬೆಳೆಸುವುದಕ್ಕೆ ಮಾರಕವಾಗುವ ಪ್ರತಿಗಾಮೀ ಸಂಸ್ಕೃತಿಯ ತೆಕ್ಕೆಗೆ ಅವರನ್ನು ಸೆಳೆದುಕೊಳ್ಳಲು ಯಾರೇ ಆದರೂ ಸ್ವಹಿತಾಸಕ್ತಿಯಿಂದ ಮಾಡುವ ಹುನ್ನಾರವು ಖಂಡನೀಯ. ಅದು ಸ್ವಾತಂತ್ರ್ಯವೀರರೆಂದು ದೇಶವಿಖ್ಯಾತರಾದ ಅವರಿಗೂ ಈ ಮೂಲಕ ಸ್ವಾತಂತ್ರ್ಯ ಮೌಲ್ಯಕ್ಕೂ ಸುವರ್ಣ ಸ್ವಾತಂತ್ರ್ಯದ ಈ ವರ್ಷದಲ್ಲಿ ಮಾಡುವ ಅಪಚಾರವಾಗುತ್ತದೆ.

ಈ ಇತಿಹಾಸ ರಚನೆಯ ವಿಷಯದಲ್ಲಿ ನಿಮ್ಮ ನಿಲುವು, ತೀರ್ಮಾನ ನಿಮಗೆ ಸಂಬಂಧಿಸಿದ್ದು. ಅದಕ್ಕೆ ನೀವು ಹೊಣೆಗಾರರು. ‘ಒಕ್ಕಲಿಗ’ರ ಇತಿಹಾಸ ಸಂಪುಟದ ಯೋಜನೆ ಅವರ ತೀರ್ಮಾನಕ್ಕೆ ಸಂಬಂಧಿಸಿದ್ದು. ಆದರೆ ಇಂಥ ವ್ಯವಹಾರದ ಭಾಗವಾಗಿ ನನ್ನನ್ನು ಸೇರಿಸುವುದಕ್ಕೆ ನೀವು ಕೇಳಿರುವ ನನ್ನ ಜೀವನವಿವರ ಮತ್ತು ಭಾವಚಿತ್ರ ಕಳುಹಿಸುವುದರ ಮೂಲಕ ನಾನು ಸಹಕರಿಸಲಾರೆ: ಹಾಗೆ ಕಳುಹಿಸುವುದು ಅನೈತಿಕವಾಗುತ್ತದೆ ಎಂದು ದೃಢವಾಗಿ ನಂಬಿದ್ದೇನೆ. ನಿಮ್ಮ ಕೋರಿಕೆಯಂತೆ ನಾಡವರ ಜಾತಿಯವರಲ್ಲಿ ಮುಖ್ಯ ವ್ಯಕ್ತಿಗಳೆಂದು ನೀವು ಪರಿಗಣಿಸಿದವರ ಪಟ್ಟಿಯಲ್ಲಿ ಸೇರಿರುವ ಈ ಪತ್ರದ ಮೊದಲಲ್ಲೇ ಉಲ್ಲೇಖಿಸಿದ ನನ್ನ ತಂದೆ ಸೂರ್ವೆ (ಭಾಗವತ) ಹಮ್ಮಣ ರಾಕು ನಾಯಕ ಮತ್ತು ಸ.ಪ. ಗಾಂವಕರರ ಜೀವನ ವಿವರ, ಭಾವಚಿತ್ರಗಳನ್ನು ನೀವು ಕೇಳಿದ ಉಪಯೋಗಕ್ಕಾಗಿ ಕಳುಹಿಸುವುದಿಲ್ಲ.

ನಿಮ್ಮ ಕೋರಿಕೆಯನ್ನು ನಾನು ಮನ್ನಿಸದೆ ಇದ್ದದ್ದಕ್ಕಾಗಿ ಕ್ಷಮಿಸಿ ಎಂಬ ಸೌಜನ್ಯದ ಮಾತನ್ನು ನಾನು ಬರೆಯುವುದಿಲ್ಲ. ಬದಲಾಗಿ ನನ್ನ ನಿಲುವು, ವಿಚಾರ ಕುರಿತು ಗಂಭೀರವಾಗಿ ಚಿಂತಿಸಿ ನಿಮ್ಮ ನಿಲುವನ್ನು, ನಿಮ್ಮ ತೀರ್ಮಾನವನ್ನು ಮರು ಪರಿಶೀಲಿಸಿಕೊಳ್ಳಿ ಎಂದು ವಿಶ್ವಾಸಪೂರ್ವಕವಾಗಿ ಸೂಚಿಸಬಯಸುತ್ತೇನೆ. ಆಗಿ ಹೋದದ್ದನ್ನು ಅಗೆದು ತೆಗೆದು ಅರ್ಥವಿಸಿಕೊಳ್ಳುವ, ವ್ಯಾಖ್ಯಾನ ಮಾಡುವ ಇತಿಹಾಸಕಾರರಾದ ನಿಮಗೆ ಕಣ್ಣೆದುರಿನ ವರ್ತಮಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಆರೋಗ್ಯಪೂರ್ಣವಾದ ಸಂವೇದನೆಗಳನ್ನು ಉಳಿಸಿಕೊಳ್ಳುವುದಕ್ಕೆ ಕಷ್ಟವಾಗಬಾರದು; ಸ್ವಹಿತಾಸಕ್ತಿಯ ಪ್ರಲೋಭನೆ ಇಲ್ಲದಿದ್ದರೆ ಕಷ್ಟವಾಗಲಾರದು.

ನಿಮ್ಮ ವಿಶ್ವಾಸದ,
ಜಿ.ಎಚ್. ನಾಯಕ

* ಇದು ಒಕ್ಕಲಿಗರ ಇತಿಹಾಸ ಸಂಪುಟದ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ಡಾ. ಸೂರ್ಯನಾಥ ಕಾಮತರಿಗೆ ಬರೆದ ಪತ್ರ. ಡಾ. ಬಿ.ವಿ. ವೈಕುಂಠರಾಜು ಅವರ ೫.೧೧.೧೯೯೮ರ ‘ವಾರಪತ್ರಿಕೆ’ಯಲ್ಲಿ ಪ್ರಕಟವಾಗಿತ್ತು.