ಮೈಸೂರು ದಸರಾ ಉತ್ಸವ ಆಚರಣೆ ಕುರಿತು ನನ್ನ ಅಭಿಪ್ರಾಯವನ್ನು ಸಂಬಂಧಪಟ್ಟವರು ತಿಳಿಯಬಯಸಿರುವುದರಿಂದ ಅದನ್ನು ಈ ಸಭೆಯ ಮುಂದಿಡುತ್ತಿದ್ದೇನೆ:

೧. ಬೇರೆ ಬೇರೆ ಜಾತಿ, ಧರ್ಮಗಳವರು ಈ ದೇಶದಲ್ಲಿ ತಮ್ಮ ತಮ್ಮ ನಂಬಿಕೆಗೆ ಅನುಗುಣವಾಗಿ ಸಂವಿಧಾನದ ಮೂಲಭೂತ ಆಶಯಕ್ಕೆ ಅಡ್ಡಿಯಾಗದಂತೆ ಬಾಳುವುದಕ್ಕೆ, ಅವರವರ ಪರಂಪರೆಯ ಹಬ್ಬ ಆಚರಣೆಗಳನ್ನು ನಡೆಸಿಕೊಂಡು ಬರುವುದಕ್ಕೆ, ಅವರು ನಂಬಿರುವ ದೈವದ ಪೂಜೆ ಪುರಸ್ಕಾರಗಳನ್ನು ಮಾಡುವುದಕ್ಕೆ ಅವರಿಗೆ ಸಂವಿಧಾನದತ್ತವಾದ ಹಕ್ಕು ಇದೆ. ಅದನ್ನು ನಾನು ವಿರೋಧಿಸುತ್ತಿಲ್ಲ; ಅಲ್ಲಗಳೆಯುತ್ತಿಲ್ಲ.

ಖಾಸಗಿ ವ್ಯಕ್ತಿಗಳು ಅಥವಾ ಒಂದು ಜನ ಸಮೂಹದವರು ತಮ್ಮ ಖರ್ಚುವೆಚ್ಚದಲ್ಲಿಯೇ ನಡೆಸುವ ಹಬ್ಬ, ಆಚರಣೆ ಆಗಿದ್ದರೆ ಅದನ್ನು ಪ್ರಶ್ನಿಸಬೇಕಿಲ್ಲ; ಪ್ರಶ್ನಿಸುವ ಹಕ್ಕೂ ನನಗಿಲ್ಲ. ನನಗೆ ಅದರ ಜೊತೆ ಸೇರಿಹೋಗಲು ಇಷ್ಟವಿಲ್ಲದಿದ್ದರೆ ಮೌನವಾಗಿರಬಹುದು. ‘ದಸರಾದಂಥ ನಾಡಹಬ್ಬವನ್ನು ಜನರೇ ಆಚರಿಸುವ ರೀತಿಯಲ್ಲಿ ಬದಲಾವಣೆ ಬಂದಾಗ ಮಾತ್ರ ಅವುಗಳ ಆಚರಣೆ ಅರ್ಥಪೂರ್ಣವಾಗಲು ಸಾಧ್ಯ’ ಎಂದು ಉಪಮುಖ್ಯಮಂತ್ರಿಯಾಗಿದ್ದಾಗ ಶ್ರೀ ಜೆ.ಎಚ್. ಪಟೇಲರು ಹೇಳಿದ್ದು ಸರಿಯಾಗಿದೆ (ಪ್ರಜಾವಾಣಿ : ೧೬-೯-೧೯೯೫). ನಾಡಿನ ಸಂಸ್ಕೃತಿ ವೈವಿಧ್ಯವನ್ನು ಉಳಿಸಬಹುದಾದ ಬಗೆ ಇದು. ಈಗ ಮುಖ್ಯಮಂತ್ರಿಯಾಗಿರುವ ಅವರು ಅಂಥ ಅರ್ಥಪೂರ್ಣವಾದ ರೀತಿಯನ್ನು ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರಬೇಕು.

ನಾಶನು ಸಂಸ್ಕೃತಿ/ಪರಂಪರೆ ವೈವಿಧ್ಯಗಳ ವಿರೋಧಿಯಲ್ಲ. ಯಾವುದೇ ಒಂದು ಸಂಸ್ಕೃತಿ/ಪರಂಪರೆ ಅದರ ಚೈತನ್ಯ ಶಕ್ತಿ ಜೀವಂತವಾಗಿರುವವರೆಗೆ ಉಳಿಯುತ್ತದೆ. ಆಮೇಲೆ ಅದು ಕ್ರಮೇಣ ಚರಿತ್ರೆಯ ನೆನಪಾಗಿಬಿಡುತ್ತದೆ.ಕಾಲ, ದೇಶ, ಪರಿಸರ ತನ್ನ ಅರಿವು ಮತ್ತು ಇರವು ತೋರುವ ಬಗೆಯಲ್ಲಿ ಸಂಸ್ಕೃತಿ ಸಂದರ್ಭವನ್ನು ಪುನಾರಚಿಸಿಕೊಳ್ಳಲು ಯತ್ನಿಸುತ್ತದೆ. ಪರಂಪರೆ ಎಂಬುದು ಎಂದೋ ಆಗಿಹೋಗಿರುವಂಥದಲ್ಲ; ನಿರಂತರವಾಗಿ ಆಗುವ ಪ್ರಕಿಯೆ. ತನ್ನ ಇರವಿಕೆಯ ಅರ್ಥಪೂರ್ಣತೆಯನ್ನು ಸಮರ್ಥಿಸಿಕೊಳ್ಳಲಾಗದ ಯಾವ ಒಂದು ಪರಂಪರೆಯೂ ಉಳಿಯಲಾರದು.

೨. ಹಿಂದೆ ಅರಸನು ನಡೆಸುತ್ತಿದ್ದ ದಸರಾ ಸಾಮ್ರಾಜ್ಯಶಾಹಿ ಯುದ್ಧೋತ್ಸಾಹದ ಆಚರಣೆ ಮಾತ್ರವಾಗಿತ್ತು. ಸೀಮೋಲ್ಲಂಘನೆಯ ಸಂಕೇತವಾಗಿ ಅರಸರು ಸೇನಾಸಮೇತರಾಗಿ ಜಂಬೂಸವಾರಿ ಮರೆವಣಿಗೆಯಲ್ಲಿ ಊರ ಆಚೆ ಹೋಗಿ ಬನ್ನಿಮರವನ್ನು ಕಡಿದು ವಿಜಯೋತ್ಸವವನ್ನು ಆಚರಿಸಿ ಹಿಂದಿರುಗುತ್ತಿದ್ದರು. ಆಗ ಅವರು ತಮ್ಮ ಜೊತೆ ಜಂಬೂಸವಾರಿಯಲ್ಲಿ ಯಾವ ದೇವತೆಯನ್ನೂ ಕೊಂಡೊಯ್ಯುತ್ತಿರಲಿಲ್ಲ. ದೇಶ ಸ್ವಾತಂತ್ರ್ಯವಾಗಿ ಪ್ರಜಾಪ್ರಭುತ್ವ ರಾಜ್ಯ ಪದ್ಧತಿಯನ್ನು ಒಪ್ಪಿಕೊಂಡ ಮೇಲೆ ಮಹಾರಾಜರು ಜಂಬೂಸವಾರಿಯಲ್ಲಿ ಹೊರಡುವುದನ್ನು ಸರಕಾರ ನ್ಯಾಯವಾಗಿಯೇ ರದ್ದು ಮಾಡಿತು. ಆದರೆ ಮಹಾರಾಜರ ಬದಲು ಹಿಂದೆ ಇರದಿದ್ದ, ಚಾಮುಂಡೇಶ್ವರಿಯ ಜಂಬೂಸವಾರಿಯನ್ನು ಸರಕಾರ ಹೊಸದಾಗಿ ಹುಟ್ಟುಹಾಕಿತು. ಅದರಿಂದಾಗಿ ದಸರೆಯ ಪರಂಪರಾಗತ ಲಕ್ಷಣವೂ ಈಗ ಉಳಿದಿಲ್ಲ.

೩. ದಸರೆ ಖಾಸಗಿ ವ್ಯಕ್ತಿಗಳ ಅಥವಾ ಒಂದು ಜನಸಮುದಾಯದವರ ಖರ್ಚುವೆಚ್ಚದಲ್ಲಿ ನಡೆಯುವ ಹಬ್ಬವಾಗಿಲ್ಲ. ಸರಕಾರವೇ ಯಜಮಾನಿಕೆ ವಹಿಸಿ ದಸರಾವನ್ನು ನಾಡಿನ ಎಲ್ಲ ಜನತೆಯ ‘ನಾಡಹಬ್ಬ’ ಎಂದು ಘೋಷಿಸಿ ಆಚರಿಸುತ್ತಿದೆ. ನಮ್ಮ ಸಂವಿಧಾನದ ಪ್ರಕಾರ ಸರಕಾರ ಯಾವ ಜಾತಿ ಮತಕ್ಕೂ ಸೇರಿದ್ದಲ್ಲ; ಸೇರಿದ್ದಾಗಬಾರದು. ಮತಧರ್ಮನಿರಪೇಕ್ಷವಾದ ಸಮಾಜವಾದೀ ಸಮಾಜ ನಿರ್ಮಾಣವು ಧ್ಯೇಯೋದ್ದೇಶವಾಗಿ ಉಳ್ಳ ಸಂವಿಧಾನದ ವಿಧಿ ವಿಧಾನಗಳಂತೆ ಆಡಳಿತ ನಡೆಸುವುದಾಗಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರವಹಿಸಿಕೊಂಡ ಸರಕಾರ ಮತ್ತು ಸರಕಾರವನ್ನು ನಡೆಸುವವರು ಯಾವುದೇ ಮತಧರ್ಮದವರ ನಂಬಿಕೆಯ ದೈವವನ್ನು ಮೆರವಣಿಗೆಯಲ್ಲಿ ಮೆರೆಸುವುದು ಸಂವಿಧಾನ ಸಮ್ಮತವಾಗುವುದಿಲ್ಲ; ಜನತೆಗೆ ನೀಡಿದ ವಚನವನ್ನು ಪಾಲಿಸಿದಂತೆಯೂ ಆಗುವುದಿಲ್ಲ.

ಸರಕಾರವೇ ಹೊಸದಾಗಿ ಹುಟ್ಟುಹಾಕಿದ (ಚಾಮುಂಡೇಶ್ವರಿಯನ್ನು ಮೆರವಣಿಗೆಯಲ್ಲಿ ಒಯ್ಯುವ) ಈ ಹೊಸ ಸಂಪ್ರದಾಯ ಬಹುಸಂಖ್ಯಾತರ ದೈವವನ್ನು ಮೆರೆಸುವುದಾದ್ದರಿಂದ ಚರ್ಚೆಗೆ , ವಿರೋಧಕ್ಕೆ ಬಹಿರಂಗವಾಗಿ ಗುರಿಯಾಗಿಲ್ಲದಿರಬಹುದು. ಇದರ ಬದಲು ಅಥವಾ ಇದರ ಜೊತೆಗೆ ಅಲ್ಪ ಸಂಖ್ಯಾತರ ದೈವಗಳನ್ನೂ ಜಂಬೂಸವಾರಿಯಲ್ಲಿ ಕೊಂಡೊಯ್ದರೆ ಬಹುಸಂಖ್ಯಾತ ಧರ್ಮದ ಸಂಪ್ರದಾಯವಾದಿಗಳ ಪ್ರತಿಕ್ರಿಯೆ ಏನಾಗಿರುತ್ತಿತ್ತು? – ಈ ಪ್ರಶ್ನೆಯನ್ನೂ ತೆರೆದ ಮನಸ್ಸಿನಿಂದ ಕೇಳಿಕೊಳ್ಳುವ ಅಗತ್ಯವನ್ನು ಹೊಸ ಸಂಪ್ರದಾಯವನ್ನು ಹುಟ್ಟುಹಾಕುವಾಗ ಆಗ ಸರಕಾರ ನಡೆಸುವವರು ಕೇಳಿಕೊಳ್ಳಬೇಕಾಗಿತ್ತು. ಧಾರ್ಮಿಕ ನಂಬಿಕೆಗೆ ಸಂಬಂಧಿಸಿದ ವಿಷಯಗಳನ್ನು ಹೊಸದಾಗಿ ಹುಟ್ಟುಹಾಕುವಾಗ, ಅದನ್ನು ಮುಂದುವರಿಸಿಕೊಂಡು ಹೋಗುವಾಗ ಸರಕಾರವು ಹೆಚ್ಚಿನ ಸೂಕ್ಷ್ಮಜ್ಞತೆ ಮತ್ತು ಹೊಣೆಗಾರಿಕೆಯಿಂದ ವ್ಯವಹರಿಸುವುದು ಅಪೇಕ್ಷಣೀಯ. ಸರಕಾರ ನಡೆಸುವವರಲ್ಲಿ ಆ ಅರಿವು ಇದ್ದಿದ್ದರೆ ಹಿರಿಯ ಸಮಾಜವಾದಿಗಳಾದ ಈಗಿನ ಮುಖ್ಯಮಂತ್ರಿ ಶ್ರೀ ಜೆ.ಎಚ್.ಪಟೇಲರು ‘ದಸರಾ ಮೊದಲಾದ ಜನತೆಯ ನಾಡಹಬ್ಬಗಳನ್ನು ಸರಕಾರ ಆಚರಿಸುವ ವಿಪರ್ಯಾಸ ಪರಿಸ್ಥಿತಿ ನಿರ್ಮಾಣವಾಗಿದೆ’ (ಪ್ರಜಾವಾಣಿ ೧೬-೯-೧೯೯೫) ಎಂದು ಹೇಳಬೇಕಾದ ವಿಪರ್ಯಾಸ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ.

ಕಾಂಗ್ರೆಸ್ ಸರಕಾರ ಹುಟ್ಟುಹಾಕಿದ್ದ, ಇಂಥ ಮುಂದಾಲೋಚನೆಯಿಲ್ಲದ ಸಂಪ್ರದಾಯವನ್ನು ಸಮಾಜವಾದಿ ತಾತ್ತ್ವಿಕ ಸಿದ್ಧಾಂತದ ಹಿನ್ನೆಲೆಯಲ್ಲಿ ಬಂದಿರುವ ಮುಖ್ಯಮಂತ್ರಿ ಮತ್ತು ಕೆಲವು ನೇತಾರರಾದರೂ ಇರುವ ಜನತಾದಳ ಸರಕಾರವು ಮುಂದುವರಿಸದೆ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮತಧರ್ಮಾತೀತ ಲಕ್ಷಣವನ್ನು ಪಡೆದುಕೊಂಡಂತಹ ಉತ್ಸವವನ್ನು ನಾಡಹಬ್ಬದ ಹೆಸರಿನಲ್ಲಿ ರೂಪಿಸುವುದರ ಬಗ್ಗೆ ಇನ್ನಾದರೂ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ.

೪. ಧಾರ್ಮಿಕ ಮೂಲಭೂತವಾದವನ್ನು ಪ್ರತಿಪಾದಿಸುವ ಅಥವಾ ಪೋಷಿಸುವ ಪಕ್ಷ/ಪಕ್ಷಗಳು ಒಂದೊಮ್ಮೆ ಸರಕಾರ ನಡೆಸುವ ಅವಕಾಶ ಪಡೆದದ್ದಾದರೆ ಆಗ ಈ ನಾಡಹಬ್ಬ ಯಾವ ಬಗೆಯ ಸ್ವರೂಪ, ಅರ್ಥವ್ಯಾಖ್ಯಾನ ಪಡೆದುಕೊಂಡೀತು ಎಂಬ ಬಗ್ಗೆಯೂ ಜನತೆ ಮತ್ತು ಇಂದು ಸರಕಾರ ನಡೆಸುತ್ತಿರುವವರು ಮುಂದಾಗಿ ಯೋಚಿಸುವ ಅಗತ್ಯವಿದೆ.

ಸ್ವಾತಂತ್ರ್ಯ ಹೋರಾಟಕಾಲದಲ್ಲಿ ರಾಷ್ಟ್ರೀಯತೆಯ ಹೆಸರಿನಲ್ಲಿ ಭಾರತೀಯರನ್ನೆಲ್ಲ ಒಂದುಗೂಡಿಸುವ ಉದ್ದೇಶದಿಂದ ಗಣೇಶನ ಉತ್ಸವವನ್ನು ರಾಷ್ಟ್ರೀಯ ಉತ್ಸವವೆಂದು ಲೋಕಮಾನ್ಯ ತಿಲಕರು ಹುಟ್ಟುಹಾಕಿದರು. ಕಾಲಕ್ರಮದಲ್ಲಿ ಅದು ಧಾರ್ಮಿಕ ಮೂಲಭೂತವಾದಿಗಳಿಂದ ಆಗಾಗ ಮತೀಯ ಗಲಭೆಗಳಿಗೆ ಕಾರಣವಾಗುತ್ತ ಬಂದದ್ದು, ಈಗಲೂ ಅಂಥ ಭಯ ಉಳಿದೇ ಬಂದದ್ದು ಆಧುನಿಕ ಭಾರತದ ಚರಿತ್ರೆಯ ಭಾಗವಾಗಿ ಹೋಗಿದೆ. ಬೆಂಗಳೂರಿನಲ್ಲಿ ೧೯೨೮ರಲ್ಲಿ ಅಧ ಮತೀಯ ಗಲಭೆ ಗಣೇಶನ ಉತ್ಸವದ ಕಾರಣದಿಂದಲೇ ಆದದ್ದು.

ಮಹಾತ್ಮ ಗಾಂಧಿ ರಾಮರಾಜ್ಯದ ಕಲ್ಪನೆಯನ್ನು ಬಿತ್ತಿದ್ದರು. ಆಗ ಅದು ಉನ್ನತ ಮೌಲ್ಯಗಳನ್ನು ಎತ್ತಿಹಿಡಿಯುವ, ಅವುಗಳ ಬಗ್ಗೆ ಅಚಲ ನಿಷ್ಠೆ ತೋರುವ ಧರ್ಮರಾಜ್ಯ ಕಲ್ಪನೆಯನ್ನು ಪ್ರತಿಪಾದಿಸುವ ಸದಾಶಯ ಉಳ್ಳದಾಗಿತ್ತು. ಈಗ ಮೂಲಭೂತವಾದಿಗಳ ಕೈಗೆ ಸಿಕ್ಕು ಆ ರಾಮ, ಆ ರಾಮರಾಜ್ಯದ ಕಲ್ಪನೆ ಯಾವ ರೂಪ ತಳೆದಿದೆ, ತಳೆಯುತ್ತಿದೆ ಎಂಬ ಬಗ್ಗೆ ಸ್ವಲ್ಪ ಯೋಚಿಸಬೇಕು. ೧೯೯೨ರ ಅಂತ್ಯದಲ್ಲಿ ರಾಷ್ಟ್ರಾದ್ಯಂತ ಮಾತ್ರವಲ್ಲ ಇದೇ ಮೈಸೂರಿನಲ್ಲಿಯೂ ಅದರ ವಿಕೃತಿಯ ಅನುಭವ ಆದದ್ದನ್ನು ಮರೆಯುವುದು ಹೇಗೆ?ಆ ಕಾಲದಲ್ಲಿ ಮೈಸೂರಿನ ಮಾನವ ಸೌಹಾರ್ದ ಸಮಿತಿಯು ರಚಿಸಿದ್ದ ‘ಶಾಂತಿ ಸಮಿತಿ’ಯ ಸದಸ್ಯನಾಗಿ ಕೆಲಸಮಾಡಿದ ಅನುಭವವೂ ಇರುವವನು ನಾನು ಎಂಬುದನ್ನು ನಮ್ರವಾಗಿ ನಿವೇದಿಸುತ್ತೇನೆ. ಆನಂತರದ ಕಾಲದಲ್ಲಿ ನಡೆದ, ರಾಜ್ಯದ ವಿಧಾನಸಭೆಯ ಚುನಾವಣೆಯಲ್ಲಿ ಮೈಸೂರು ನಗರದ ಮತದಾರರು ಯಾವ ಪಕ್ಷದ ಹುರಿಯಾಳುಗಳನ್ನು ಆಯ್ಕೆ ಮಾಡಿದರೆಂಬುದನ್ನು ಗಮನಿಸದಿರುವುದು ಹೇಗೆ?

ಚರಿತ್ರೆ ಕಲಿಸಿದ ಇಂಥ ಅಹಿತಕರ ಪಾಠ, ಸೂಚನೆಗಳನ್ನು ಜನತೆ ಮರೆಯಬಾರದು; ಜಾತಿ-ಮತಧರ್ಮ ನಿರಪೇಕ್ಷ (ಸೆಕ್ಯುಲರ್) ಸಮಾಜವಾದೀ ಸಂಸ್ಕೃತಿ ನಿರ್ಮಾಣದ ಹೊಣೆಯಿರುವ ಸರಕಾರ ನಡೆಸುವವರಂತೂ ಮರೆಯಲೇಬಾರದು.

೫. ವಿವಿಧ ದೇಶಗಳಲ್ಲಿ ಭಾರತ ನಡೆಸುತ್ತ ಬಂದಿರುವ ‘ಭಾರತ ಉತ್ಸವ’ಕ್ಕೆಯಾವುದೇ ಮತಧರ್ಮದ ಸೋಂಕು ಇಲ್ಲ.ಕರ್ನಾಟಕ ಸರಕಾರವೇ ಕರಾವಳಿ ಉತ್ಸವ, ಮಲೆನಾಡು ಉತ್ಸವಗಳನ್ನು ಯಾವ ಮತಧರ್ಮದ, ಯಾವ ದೈವದ ಸೋಂಕೂ ಇಲ್ಲದಂತೆ ನಡೆಸುತ್ತಿದೆ. ಜನವರಿ ೨೬ರಂದು ನವದೆಹಲಿಯಲ್ಲಿ ನಡೆಯುವ ಸೇನಾಪಡೆಯ ಪ್ರದರ್ಶನದ ಗಣರಾಜ್ಯೋತ್ಸವಕ್ಕೂ ಯಾವುದೇ ಮತಧರ್ಮದ, ದೈವದ ಸೋಂಕು ಇಲ್ಲ. ಈ ಎಲ್ಲ ಉತ್ಸವಗಳಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯತ್ತವೆ. ನಾಡಹಬ್ಬವನ್ನು ನವೆಂಬರ್ ೧ರಂದು ನಡೆಯುವ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿಯಾಗಲಿ, ದಸರಾ ಕಾಲದಲ್ಲಿಯೇ ‘ಕರ್ನಾಟಕ ಉತ್ಸವ’ ಎಂದಾಗಲಿ, ಜಾತಿ ಮತಾತೀತವಾದ ಲಕ್ಷಣಗಳಿಂದ ಕೂಡಿದ ಹಬ್ಬವಾಗಿ ಆಚರಿಸಬಹುದು. ಅದರಲ್ಲಿ ಈಗ ದಸರಾ ಅಂಗವಾಗಿ ನಡೆಯುತ್ತಿರುವ ಕವಿಗೋಷ್ಠಿ, ನೃತ್ಯ, ಸಂಗೀತ, ಕ್ರೀಡೆಗಳು, ವಸ್ತುಪ್ರದರ್ಶನ, ಉತ್ಸವ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಬಹುದು.

ಒಟ್ಟಿನಲ್ಲಿ ನಾನು ಈ ಎಲ್ಲ ಅಂಶಗಳ ಬಗ್ಗೆ ಜನತೆ, ಸರಕಾರ ನಡೆಸುವವರು ಮುಕ್ತವಾಗಿ ವಿಚಾರ ಮಾಡಲು ಮುಂದಾಗಬೇಕೆಂದು ಮನವಿ ಮಾಡುತ್ತೇನೆ. ಇಂಥ ಮನವಿಯನ್ನು ಎರಡು ವರ್ಷಗಳ ಹಿಂದೆ ನಾನು, ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಡಾ. ಪಂಡಿತಾರಾಧ್ಯ, ಪ್ರೊ. ಎನ್.ಎಸ್. ರಘುನಾಥ ಸಾರ್ವಜನಿಕರ ಮುಂದೆ ಇಟ್ಟಿದ್ದನ್ನು (ಆಂದೋಲನ ೧೮.೧೦.೧೯೯೫) ಈ ಸಂದರ್ಭದಲ್ಲಿ ನೆನಪಿಸಲು ಬಯಸುತ್ತೇನೆ.

* ೨೭-೭-೧೯೯೭ ರಂದು ಮೈಸೂರಿನ ದಸರಾ ಮಹೋತ್ಸವದ ವಿಶೇಷಾಧಿಕಾರಿಗಳು ಸರ್ಕಾರದ ಪರವಾಗಿ ಸಂಘಟಿಸಿದ್ದ ‘ದಸರಾ ಮಹೋತ್ಸವ’- ವಿಚಾರ ಸಂಕಿರಣ’ ದಲ್ಲಿ ಆಹ್ವಾನಿತನಾಗಿ ನಾನು ಮಂಡಿಸಿದ್ದ ಟಿಪ್ಪಣಿ. ಆ ಟಿಪ್ಪಣಿಯ ಪ್ರತಿಯನ್ನು ಸರಕಾರದ ಪರಿಶೀಲನೆಗೆಂದು ಆಗಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರಿಗೆ ೧-೮-೧೯೯೭ ರಂದು ಕಳಿಸಲಾಗಿತ್ತು.