ದೇಸಾಯಿ, ಪಿಕಳೆಯವರ ರೈತ ಹೋರಾಟ ‘ಉಳುವವನೆ ಭೂಮಿಯ ಒಡೆಯ’ ಎಂಬ ಘೋಷಣೆಯದಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರು ನಡೆಸಿದ್ದ ಕರನಿರಾಕರಣೆಯ ಚಳವಳಿಯೂ ರೈತರ ಹೋರಾಟವೇ. ಅದರ ಸ್ವರೂಪ, ಸಂದರ್ಭ, ಗುರಿ ಬೇರೆ ಇತ್ತು. ಆ ಹೋರಾಟದಿಂದ ಸ್ವಂತಕ್ಕೆ ಅಥವಾ ತಮ್ಮ ಜಾತಿ-ಜನಸಮೂಹಕ್ಕೆ ದೇಶ ಸ್ವಾತಂತ್ರ್ಯಕ್ಕೆ ಹೊರತಾದ ಬೇರೆ ಯಾವುದೋ ಲಾಭವನ್ನು ಪಡೆದುಕೊಳ್ಳುವ ಉದ್ದೇಶ ನಾಡವರಲ್ಲಿ ಇರಲಿಲ್ಲ. ಅದು ಇದ್ದದ್ದನ್ನು ಕಳೆದುಕೊಳ್ಳುವ ತ್ಯಾಗ, ಸತ್ಯಾಗ್ರಹದ ಹೋರಾಟವಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಭೂಮಾಲೀಕ ವರ್ಗದವರಾದ ಕೊಂಕಣಿಗರು ಕರನಿರಾಕರಣೆ ಹೋರಾಟದಲ್ಲಿ ಇರಲಿಲ್ಲ. ಬಾರ್ಡೋಲಿಯವರಂತೆ ಸಿದ್ಧಾಪುರ, ಶಿರ್ಶಿ ತಾಲ್ಲೂಕುಗಳ ಹವ್ಯಕರಿಗೆ ಕರನಿರಾಕರಣೆ ಹೋರಾಟದಲ್ಲಿ ತೊಡಗುವಾಗ ಬೆಳೆಕೆಟ್ಟ ಕಾರಣವೊಂದು ಇತ್ತು. ಅದರಿಂದಾಗಿ ಕರಕೊಡುವುದೇ ಕಷ್ಟ ಎಂಬಂಥ ಸ್ಥಿತಿಯೇನೊ ಇತ್ತು. ಆದರೆ ನಾಡವರ ಮಟ್ಟಿಗೆ ಅಂಥ ಸ್ಥಿತಿ, ಪರಿಸ್ಥಿತಿಯೇನೂ ಇರಲಿಲ್ಲ. ನಾಡವರಿಗೆ ಅದು ಸ್ವಾತಂತ್ರ್ಯ ಹೋರಾಟದ ಒಂದು ಪ್ರಭಾವಶಾಲಿ ಅಸ್ತ್ರವಾಗಿತ್ತು. ಈ ಅಂಶ ಗಮನಾರ್ಹವಾದದ್ದಾಗಿದೆ.

‘ಉಳುವವನಿಗೇ ಭೂಮಿಯ ಒಡೆತನ’ ಎಂಬ ಘೋಷಣೆ, ಗುರಿಯ ರೈ ಹೊರಾಟ ಬಡ ರೈತ (Poor peasants) ಜನ-ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವುದಕ್ಕೆ ಸಂಬಂಧಿಸಿದ, ಭೂಮಿಯ ಹಕ್ಕಿಗೆ ಸಂಬಂಧಿಸಿದ ಆ ಮೂಲಕ ಆರ್ಥಿಕ ಸಮಾನತೆಯ ಕಡೆ ಚಲಿಸುವ ಹೋರಾಟವಾಗಿತ್ತು. ಅದರಲ್ಲಿ ಪಡೆದುಕೊಳ್ಳುವ ಅಂಶ ಇತ್ತು;ಕಳೆದುಕೊಳ್ಳುವ ಅಂಶ ಇರಲಿಲ್ಲ. ಈ ರೈತ ಹೋರಾಟದ ಎರಡನೆಯ ಹಂತದ ಹೊತ್ತಿಗೆ ಸರ್ಕಾರವೂ ಪರಕೀಯರ ಸರ್ಕಾರವಾಗಿರಲಿಲ್ಲ. ಭಾರತೀಯರದೇ ಆದ ಪ್ರಜಾಪ್ರಭುತ್ವದ ಸರ್ಕಾರವಾಗಿತ್ತು. ಮೊದಲನೆಯ ಹಂತದಲ್ಲಿಯೂ ಆ ರೈತ ಹೋರಾಟ ಬ್ರಿಟಿಷ್ ಸರ್ಕಾರದ ವಿರುದ್ಧ ಇರಲಿಲ್ಲ; ಭೂಮಾಲೀಕ ವರ್ಗದ ವಿರುದ್ಧ ಇತ್ತು. ಕಳೆದುಕೊಳ್ಳುವವರು ಭೂಮಾಲೀಕರಾಗಿದ್ದರು. ಅವರು ವಿರೋಧಿಸಿದರು.

ದೇಸಾಯಿ, ಪಿಕಳೆ ನಾಯಕತ್ವದ ಈ ರೈತ ಹೋರಾಟದ ಕಾರಣದಿಂದ ನಾಡವರು ಕಳೆದುಕೊಳ್ಳುವುದೇನೂ ಇರಲಿಲ್ಲ. ಕೆಲವೇ ಕೆಲವು ವ್ಯಕ್ತಿ, ಕುಟುಂಬಗಳ ಮಟ್ಟದಲ್ಲಿ ಇದ್ದಿರಬಹುದಾಗಿದ್ದರೂ ಜಾತಿ-ಜನಸಮೂಹದ ಒಟ್ಟಿನ ನೆಲೆಯಲ್ಲಿ ಅವರು ಕಳೆದುಕೊಳ್ಳುವಂಥದೇನೂ ಇರಲಿಲ್ಲ. ಆದ್ದರಿಂದ ನಾಡವರಿಗೆ ಈ ರೈತ ಹೋರಾಟ ವಿರೋಧಿಸುವುದಕ್ಕೆ ಭೂಮಾಲೀಕರಾದ ಕೊಂಕಣಿಗರಿಗೆ ಇದ್ದಂತೆ ಕಳೆದುಕೊಳ್ಳುವ ಭಯ ಇರಲಿಲ್ಲ; ಅದು ಕಾರಣವಾಗಿರಲಿಲ್ಲ. ಬೆಳೆಯ ಹಂಗಾಮುಗಳ ಕಾಲದಲ್ಲಿ ನಾಡವರ ರೈತರಿಗೆ ಬೇಕಾಗುವ ಭೂರಹಿತ ಕೃಷಿಕ ಕೂಲಿ-ಕಾರ್ಮಿಕ ವರ್ಗದವರು ಜಾತಿ-ಜನಸಮೂಹವಾಗಿ ದೇಸಾಯಿ, ಪಿಕಳೆ ನೇತಾರತ್ವದ ರೈತ ಹೋರಾಟದಲ್ಲಿ ತೊಡಗಿಕೊಂಡಿರಲಿಲ್ಲ. ಅದರಿಂದಾಗಿ ಹಂಗಾಗಮಿ ಕಾಲದಲ್ಲೊ, ಬೇರೆ ಅಗತ್ಯವಾದ ಸಂದರ್ಭಗಳಲ್ಲಿಯೊ ಹಿಂದಿನಿಂದ ನಡೆದು ಬಂದ ಪ್ರಕಾರ ಅವರ ಶ್ರಮದ ನೆರವನ್ನು ಪಡೆಯುವುದಕ್ಕೆ ನಾಡವರಿಗೆ ಸಮಸ್ಯೆಯೇನೂ ಉಂಟಾಗಿರಲಿಲ್ಲ. ಆದ್ದರಿಂದ ನಾಡವರು ಈ ರೈತ ಹೋರಾಟದೊಂದಿಗೆ ಮೊದಲು ಸೇರಿಕೊಂಡಿದ್ದು ಆಮೇಲೆ ಸೇರಿಕೊಳ್ಳದೆ ಇದ್ದದ್ದಕ್ಕೆ ಅಥವಾ ವಿರೋಧದ ನೆಲೆಯಲ್ಲಿ ತಮ್ಮನ್ನು ಗುರುತಿಸಿಕೊಂಡದ್ದಕ್ಕೆ ಕಾರಣ ಕಂಡುಕೊಳ್ಳುವ ಅಗತ್ಯವೇನೊ ಇಂದಿಗೂ ಇದೆ. ಹಾಗೆಂದು ನಾಡವರನ್ನು ಭೂಮಾಲೀಕ ವರ್ಗದವರ ಜೊತೆ ಜಿ.ವಿ.ಜೋಶಿಯವರು ಮಾಡಿದಂತೆ ಹೀಗೆ ಗುಂಡುಸುತ್ತಿ ಸೇರಿಸಲು ಸಮೀಕರಿಸಲು ಮುಂದಾಗುವುದು ಸರಿಯಾಗಲಾರದು ಎಂಬುದು ನನ್ನ ತಿಳಿವಳಿಕೆ. ಹಾಗೆ ಮಾಡಿದರೆ ಅದು ಅಂಥವರ ಅಧ್ಯಯನದ ದಾರಿ ತಪ್ಪಿಸಿಬಿಡುತ್ತದೆ. ನಾಡವರನ್ನು ಶ್ರೀಮಂತ ರೈತರೆಂದು ತಾಂತ್ರಿಕವಾಗಿ ಅಥವಾ ಯಾಂತ್ರಿಕವಾಗಿ ವರ್ಗೀಕರಿಸಿ ಅಧ್ಯಯನದ ದಾರಿ, ವಿಧಾನವನ್ನು ಸಲೀಸುಗೊಳಿಸಿಕೊಳ್ಳುವುದರಿಂದಲೂ ಅಧ್ಯಯನದ ಫಲಿತಾಂಶ ತನ್ನ ನಂಬಲರ್ಹತೆಯನ್ನು ಕಳೆದುಕೊಳ್ಳುತ್ತದೆ.

ದಿನಕರ ದೇಸಾಯಿಯವರು ರೈತ ಹೋರಾಟ ಪ್ರಾರಂಭಿಸಿದ್ದು ೧೯೩೬-೩೭ರ ಕಾಲಕ್ಕೆ. ಅದಕ್ಕಿಂತ ಮೊದಲೇ ೧೯೩೦-೩೨ರ ಕರನಿರಾಕರಣೆ ಹೋರಾಟದ ಕಾಲದಲ್ಲಿ ಆ ಬಗ್ಗೆ ಬಾಸಗೋಡ ರಾಮ ನಾಯಕರು ಉತ್ಸುಕರಾಗಿದ್ದರು. ೧೯೩೨ರಲ್ಲಿ ದ.ಪ.ಕರಮಕರರ ಬಂಧನವಾದ ಮೇಲೆ ಅವರು ಹೋರಾಟದ ‘ಡಿಕ್ಟೇಟರ್’ (‘ಸರ್ವಾಧಿಕಾರಿ’) ಆಗಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಅವರು ‘the most notable moving spirit in Ankola taluk’ ಎಂದು ಕೀರ್ತಿತರಾಗಿದ್ದ ಜನನಾಯಕರಾಗಿದ್ದರು. (ಉತ್ತರ ಕನ್ನಡ ಜಿಲ್ಲೆಯ ಗೆಜೆಟಿಯರ್, ೧೯೮೫, ಪುಟ ೧೭೬). ಆ ಕಾಲದಲ್ಲಿಯೆ ಕಾಂಗ್ರೆಸ್ಸಿನ ರಾಮ ನಾಯಕರು ‘ಉಳುವವನೇ ಭೂಮಿಯ ಒಡೆಯ’ ಎಂಬ ರೈತ ಚಳವಳಿಯನ್ನು ಕೂಡ ಪ್ರಾರಂಭಿಸಬೇಕೆಂಬ ಉತ್ಸಾಹದಲ್ಲಿದ್ದರು. ಕರನಿರಾಕರಣೆ ಹೋರಾಟದಲ್ಲಿ ಅವರಿಗೆ ಸಲಹೆ, ಸಹಕಾರ ನೀಡಲೆಂದು ಮೈಸೂರು ಸಂಸ್ಥಾನದಿಂದ ಬಂದಿದ್ದ ವಿ.ಎಸ್. ನಾರಾಯಣರಾಯರು ಆ ಬಗ್ಗೆ ಬರೆದಿದ್ದಾರೆ :

“ಇದೇ ಸಮಯದಲ್ಲಿ ಭೂಮಾಲೀಕರಿಗೆ ಗೇಣಿ ಕೊಡುವುದನ್ನು ತಪ್ಪಿಸಿ ಉಳುವವನನ್ನೇ ಭೂಮಾಲಿಕನನ್ನಾಗಿ ಮಾಡುವ ಚಳುವಳಿ ಹೂಡಬೇಕೆಂದು ರಾಮನಾಯ್ಕರು ಕಾತರರಾಗಿದ್ದರು. ಅಂಕೋಲಾ ತಾಲೂಕು ಕಾಂಗ್ರೆಸ್ ಪೈ (ಪೈ ಅಂದರೆ ಅಂಕೋಲೆಯ ಹರಿ ಅನಂತ ಪೈ) ಇದನ್ನು ವಿರೋಧಿಸುತ್ತಿದ್ದರು. ಸಾಮಾನ್ಯವಾಗಿ ಸಾರಸ್ವತರು ಭೂಮಾಲೀಕರಾಗಿಯೂ, ನಾಡವರು ಮತ್ತು ಒಕ್ಕಲಿಗರು ಗೇಣಿ ಮತ್ತು ಗುತ್ತಿಗೆದಾರರಾಗಿಯೂ ಇರುತ್ತಿದ್ದರು. ಈ ಚಳವಳಿಯಿಂದ ಸಣ್ಣ ರೈತರಿಗೆ ಗೇಣಿದಾರರಿಗೆ ತುಂಬಾ ಅನುಕೂಲವಾಗುವ ಸಂಭವವಿತ್ತು. ಆದರೆ ಮಹಾತ್ಮ ಗಾಂಧಿ ಮತ್ತು ಕಾಂಗ್ರೆಸ್ ಇದಕ್ಕೆ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿದ್ದರು. ಮೊದಲು ಬ್ರಿಟಿಷರು ಕಾಲ್ತೆಗೆಯುವಂತೆ ಮಾಡಿ ಆನಂತರ ಈ ವಿಷಯ ತೆಗೆದುಕೊಳ್ಳಬೇಕೆಂದು ಅವರ ಅಭಿಮತವಿತ್ತು.” (ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು, ಸಂಪಾದಕ : ಡಾ. ಸೂರ್ಯನಾಥ ಕಾಮತ್, ದ್ವಿತೀಯ ಸಂಪುಟ ೧೯೯೮, ಪುಟ ೧೦೮-೧೦೯).

ಆ ಕಾಲದಲ್ಲಿ ಬಾಸಗೋಡ ರಾಮ ನಾಯಕರು ಅಂಕೋಲಾ ನಾಡವರ ಪ್ರಶ್ನಾತೀತ ನೇತಾರರಾಗಿದ್ದರು. ಜೊತೆಗೆ ಆ ಕಾಲದಲ್ಲಿ ಅಂಕೋಲಾ ತಾಲೂಕಿನ ನಾಡವರಲ್ಲಿ ಬಾಸಗೋಡ ರಾಮನಾಯಕರೇ ನಾನು ತಿಳಿದಿರುವಂತೆ ಎಲ್ಲರಿಗಿಂತ ಹೆಚ್ಚು ಜಮೀನು ಉಳ್ಳವರಾಗಿದ್ದರು. (ರಾಮ ನಾಯಕರು ನನ್ನ ಹೆಂಡತಿ ಮೀರಾ ನಾಯಕಳ ಅಜ್ಜ-ತಾಯಿಯ ತಂದೆ).

ಕಾಂಗ್ರೆಸ್ಸಿಗರಾಗಿದ್ದರೂ ಹೋರಾಟದಲ್ಲಿ ತೊಡಗಿಕೊಂಡವರಾಗಿದ್ದರೂ ಅಂಕೋಲೆಯ ಭೂಮಾಲೀಕ ವರ್ಗದ ಕೊಂಕಣಿಗ ನೇತಾರರು ಕರನಿರಾಕರಣೆ ಹೋರಾಟಕ್ಕೆ ಬೆಂಬಲ ನೀಡಿರಲಿಲ್ಲ. ನಾಡವರು ಧಾರವಾಡ, ಮೈಸೂರು ಕಡೆಯಿಂದ ಬಂದಿದ್ದವರ ನೇತಾರತ್ನವನ್ನು ಒಪ್ಪಿಕೊಂಡಂತೆ ಸ್ಥಳೀಯರೇ ಆಗಿದ್ದ ಕೊಂಕಣಿಗ ಕಾಂಗ್ರೆಸ್ಸಿಗರ ನೇತಾರತ್ನವನ್ನು ಒಪ್ಪಿಕೊಂಡಿರಲಿಲ್ಲ. ಆ ವಿಷಯದಲ್ಲಿ ಹೋರಾಟದ ಉದ್ದಕ್ಕೂ ಶೀತಲ ಯುದ್ಧವೊಂದು ಕೊಂಕಣಿಗ ಮತ್ತು ನಾಡವರ ಹೋರಾಟಗಾರರ ನಡುವೆ ನಡದೇ ಇತ್ತು. ಕರನಿರಾಕರಣೆಯ ಕಾಲದಲ್ಲಿ ಹೋರಾಟಕ್ಕೆ ಸಂಬಂಧಿಸಿದಂತೆ, ಮಾಡುವುದಕ್ಕೆ ಕೆಲಸವಿಲ್ಲದೆ ಕೊಂಕಣಿಗ ಹೋರಾಟಗಾರ ಮುಖ್ಯರಾದ ಹರಿ ಅನಂತ ಪೈ ಮುಂತಾದವರು ಇರುವಂತಾಯಿತು. ಅಂಕೋಲೆಯ ಹರಿ ಅನಂತ ಪೈಯವರು ಸಲಹಾ ಮಂಡಳಿಯ ಮೊತ್ತಮೊದಲನೆ ಕ್ರಮಾಂಕದಲ್ಲಿ ಹೆಸರಿಸಲ್ಪಟ್ಟಿರುವ ಸದಸ್ಯರಾಗಿರುವ, ಡಾ. ಸೂರ್ಯನಾಥ ಕಾಮತರು ಸಂಪಾದಕರಾಗಿರುವ, ’ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’ ತೃತೀಯ ಸಂಪುಟ (೧೯೯೮)ದಲ್ಲಿರುವ ಜೋಗಿ ಬೀರಣ್ಣ ನಾಯಕ ಶೆಟಗೇರಿ ಅವರ ಲೇಖನದ ಕೆಲವು ಸಾಲುಗಳನ್ನು ಉದ್ಧರಿಸುತ್ತೇನೆ:

“ಬಾಸಗೋಡ ರಾಮ ನಾಯ್ಕರು ಸರ್ವಾಧಿಕಾರಿಯಾಗಿ ಕೆಲಸ ಮುಂದುವರಿಸಿದರು. ಆಗ ವಿ.ಎಸ್. ನಾರಾಯಣರಾವ್ ಮುಂತಾದ ನುರಿತ ಕಾರ್ಯಕರ್ತರು ವ್ಯವಸ್ಥಿತವಾಗಿ ಕೆಲಸ ಮುಂದುವರಿಸಿದುರ. ಇಷ್ಟೊತ್ತಿಗೆ ಶಹರದ ಕಾರ್ಯಕರ್ತರಾದ ರಾಮರಾವ್, ಸುಬ್ಬರಾವ್ ಮೊದಲಾದವರು ಪೆರೋಲಿನ ಮೇಲೆ ಬಿಡುಗಡೆಯಾದವರು ಪೆರೋಲ್ ಮುರಿದು ಮತ್ತೆ ಜೈಲುಕಂಡರು. ಹರಿ ಪೈ, ದಾಸ ಮಹಾಲೆ, ಜಗನ್ನಾಥ ಮಹಾಲೆ, ಅನಂತ ಮಹಾಲೆ ಇವರುಗಳು ಹಳ್ಳಿಯ ಶಿಬಿರದಲ್ಲಿ ಉಳಿದರು. ಆದರೆ ಹಳ್ಳಿಯ ಕಾರ್ಯಕರ್ತರಿಗೂ ಶಹರದ ಕಾರ್ಯಕರ್ತರಿಗೂ ಸೇರಿಬರಲಿಲ್ಲ. ಕಾಗದ ಪತ್ರ, ಕರಪತ್ರ ಮತ್ತು ಹಣಕಾಸಿನ ಅಧಿಕಾರಗಳೆಲ್ಲ ತಮ್ಮ ಕಡೆಗೆ ಇರಬೇಕೆಂದು ತಾವು ಶಹರದಿಂದ ಗುಪ್ತರೀತಿಯಿಂದ ಅದನ್ನು ನಡೆಸುತ್ತೇವೆಂದೂ ಅವರುಗಳು ಹೇಳುತ್ತಿದ್ದರು. ಬಾಸಗೋಡ ರಾಮ ನಾಯಕ ಮುಂತಾದವರು ಶಹರದವರ ಕೈಯಲ್ಲಿ ಯಾವುದೇ ಜವಾಬ್ಧಾರಿ ನೀಡಲು ಸಿದ್ಧರಿದ್ದಿಲ್ಲ. ಹೀಗೆ ಮತಭೇದಗಳಾದ ಕಾರಣ ಹರಿ ಪೈ ಮುಂತಾದವರು ಹಳ್ಳಿಗಳನ್ನು ಬಿಟ್ಟು ಹೋದರು. ಮುಂದೆ ಹರಿ ಪೈ ಪೋಲಿಸರ ಮುಂದೆ ಹಾಜರಾಗಿ ಜೈಲು ಸೇರಿದರು.” (ಪುಟ ೬೦)

ಧಾರವಾಡ, ಮೈಸೂರು ಕಡೆಯಿಂದ ಬಂದಿದ್ದವರನ್ನು ಹೋರಾಟದ ನೇತಾರರೆಂದು ನಾಡವರು ಒಪ್ಪಿಕೊಂಡಿದ್ದರೇ ಹೊರತು ಸ್ಥಳೀಯರಾದ ಅಂಕೋಲೆಯ ಭೂಮಾಲಿಕವರ್ಗದ ಕೊಂಕಣಿಗ ಕಾಂಗ್ರೆಸ್ಸಿಗರನ್ನು ನೇತಾರರೆಂದು ಒಪ್ಪಿಕೊಂಡಿರಲಿಲ್ಲ, ಎಂದು ಈಗಾಗಲೆ ಹೇಳಿರುವೆನಷ್ಟೆ. ಅದರಿಂದಾಗಿ ಅಸಮಾಧಾನ ಮತ್ತು ಉದ್ವಿಗ್ನಗೊಂಡ ಹರಿ ಪೈಯಂಥವರು ಹೊರಗಿನಿಂದ ಬಂದ ಅಂಥ ನೇತಾರರನ್ನು “ಬಾಡಿಗೆ ಕುದುರೆಗಳು” ಎಂದು ಛೇಡಿಸುತ್ತಿದ್ದರೆಂದು ವಿ.ಎಸ್.ನಾರಾಯಣರಾಯರು ಅವರ ಸ್ಮೃತಿ ಬರವಣಿಗೆಯಲ್ಲಿ ಹೇಳಿದ್ದಾರೆ. (ಪುಟ ೧೦೬)

ಸರ್ದಾರ್ ವೆಂಕಟರಾಮಯ್ಯನವರು ‘ಸತ್ಯಾಗ್ರಹಿ ಒಂದು ಜೀವನ ಕತೆ’ (೧೯೮೩) ಎಂಬ ಅವರ ಪುಸ್ತಕದಲ್ಲಿಯೂ ಹೊರಗಿನಿಂದ ಬಂದವರ ನೇತಾರತ್ವದ ಬಗ್ಗೆ ತಕರಾರು, ಭಿನ್ನಾಭಿಪ್ರಾಯ ತೀವ್ರವಾಗಿ ಬೆಳೆದು ಅದನ್ನು ಪರಿಹರಿಸಲು ಅವರು ವಾಸ್ಕೋಡಿಗಾಮದಲ್ಲಿ ಅತೃಪ್ತರ ಸಭೆಕರೆದದ್ದು, ಸಭೆಗೆ ಹರಿ ಪೈ ಮೊದಲಾದವರು ಬಂದಿದ್ದು, ಮನವೊಲಿಸಿ ಹೋರಾಟದಲ್ಲಿ ಅವರು ಸಹಕರಿಸುವಂತೆ ಮಾಡಲು ಪ್ರಯತ್ನಸಿದ್ದು ಇವುಗಳ ಬಗ್ಗೆ ಬರೆದಿದ್ದಾರೆ. ಎಷ್ಟು ಹೇಳಿದರೂ ಕೆಲವರು ಇಲ್ಲಿರಲು ಒಪ್ಪದೆ ಮುಂಬಯಿಗೆ ಹೋಗಿ ಅಲ್ಲಿ ಕೆಲಸ ಮಾಡಲು ಇಷ್ಟಪಟ್ಟರೆಂದೂ “ಅತ್ಯಂತ ಕಷ್ಟಕರವಾದ ದಿನಗಳಲ್ಲಿ ಜಿಲ್ಲೆಯ ನಾಲ್ಕು ಮಂದಿ ಒಳ್ಳೆಯ ಕೆಲಸಗಾರರಿಂದ ಬೇರ್ಪಡುವ ದುಃಖ ನಮ್ಮ ಪಾಲಿಗೆ ಬಂದಿತು” (ಪುಟ ೩೦೬-೦೮, ದ್ವಿತೀಯ ಮುದ್ರಣ, ೧೯೮೫) ಎಂದೂ ಬರೆದಿದ್ದಾರೆ.

ಸ್ವಾತಂತ್ರ್ಯಾನಂತರದ ಕಾಲದಲ್ಲಿ ಬಾಸಗೋಡ ರಾಮ ನಾಯಕರಂಥವರು ಸ್ವಾತಂತ್ರ್ಯಪೂರ್ವದಲ್ಲಿಯೆ ಅಂದರೆ ಸ್ವಾತಂತ್ರ್ಯಹೋರಾಟ ಕಾಲದಲ್ಲಿಯೆ ಕಂಡ ‘ಉಳುವವನಿಗೇ ಭೂಮಿ’ ಎಂಬಂಥ ರೈತಪರ ಹೋರಾಟದ ಕನಸನ್ನು ನನಸುಗೊಳಿಸಬೇಕೆಂಬ ಬಗ್ಗೆ ಶಹರದ ಕಾಂಗ್ರೆಸ್ಸಿಗರು, ಭೂಮಾಲೀಕ ವರ್ಗಕ್ಕೆ ಸೇರಿದ ಕಾಂಗ್ರೆಸ್ಸಿಗರು ಆಸಕ್ತಿ, ಉತ್ಸಾಹ ತೋರಿಸಲೇ ಇಲ್ಲ. ಅದಕ್ಕೆ ಕಾರಣ ಈವರೆಗಿನ ಬರವಣಿಗೆಯ ಹಿನ್ನೆಲೆಯಿಂದ ತಕ್ಕಮಟ್ಟಿಗಾದರೂ ಓದುಗರಿಗೆ ಗೊತ್ತಾಗಿರಬಹುದು. ರಾಮ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರೂ, ಕಾಂಗ್ರೆಸ್ಸಿಗರೂ ಆಗಿದ್ದ ಆ ಕಾಲದ ಅಂಕೋಲೆಯ ನಾಡವರು ಇಂಗ್ಲಿಷ್ ಬಾರದ ಗ್ರಾಮೀಣ ನಾಯಕರಾಗಿದ್ದರಿಂದ, ಅವರು ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಪ್ರಭಾವಶಾಲಿಗಳಾಗಿದ್ದಂತೆ ಆಮೇಲೆ ಆಗಲಿಲ್ಲ.

ಇಷ್ಟಾದರೂ ಬಾಸಗೋಡ ರಾಮ ನಾಯಕರು ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಅವರು ಗಳಿಸಿಕೊಂಡಿದ್ದ ವೈಯಕ್ತಿಕ ವರ್ಚಸ್ಸು, ಪ್ರಭಾವ, ಪರ ಊರುಗಳಲ್ಲಿದ್ದ- ಮುರಾರ್ಜಿ ದೇಸಾಯಿಯವರೂ ಸೇರಿದಂತೆ- ಕಾಂಗ್ರೆಸ್ಸಿನ ಧುರೀಣರೊಂದಿಗೆ ಅವರಿಗಿದ್ದ ಸಂಪರ್ಕ ಸದ್ಭಾವನೆಗಳನ್ನು ಬಳಸಿಕೊಂಡು ‘ರಾಮ ನಾಯಕ ಯೋಜನೆ’ ಎಂದೇ ಕರೆಯಲ್ಪಡುವಂತಾದ ‘ಹಿಲ್ಲೂರ್ ಸ್ಕೀಂ’ (ಹಿಲ್ಲೂರು ಯೋಜನೆ) ತಯಾರಿಸಿ ಪಡಬಿದ್ದ ಸಾವಿರಾರು ಎಕರೆ ಜಮೀನುಗಳನ್ನು ಬಡರೈತ ಕುಟುಂಬಗಳಿಗೆ ಹಂಚಿಕೆಯಾಗುವಂತೆ ಮಾಡಿದರು. ೧೯೪೮ರ ಜೂನ್-ಜುಲೈ ಹೊತ್ತಿಗಾಗಲೆ ಅಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ಒಂದು ವರ್ಷ ತುಂಬುವುದರೊಳಗೇ ಅವರು ಈ ಕೆಲಸ ಮಾಡಿದ್ದರು. ೨೦೦೧ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆಂದು ರಾಜ್ಯ ಸರ್ಕಾರ ಕೊಡುವ ರಾಜ್ಯ ಪ್ರಶಸ್ತಿ ಪಡೆದ ನಮ್ಮೂರು ಸೂರ್ವೆಯ ರಾಮಚಂದ್ರ ಹಮ್ಮಣ್ಣನಾಯಕರು ಹಿಲ್ಲೂರಿಗೆ ಹೋಗಿ ಅಲ್ಲಿ ನೆಲೆಸುವಂತಾದದ್ದು ಈ ಯೋಜನೆಯಿಂದಲೇ. ಅವರು ಹಿಲ್ಲೂರಿಗೆ ಹೋದದ್ದು ೧೯೪೮ರ ಆಗಸ್ಟ್ ೩ರಂದು. ಇಂದಿನ ಹಿಲ್ಲೂರು ಗ್ರಾಮವು ಬಾಸಗೋಡ ರಾಮ ನಾಯಕರ ಸಾಹಸದ, ಸ್ವತಂತ್ರ್ಯ ಹೋರಾಟ ಕಾಲದಲ್ಲಿ ಅವರು ಗಳಿಸಿಕೊಂಡಿದ್ದ ವೈಯಕ್ತಿಕ ಮಟ್ಟದ ಏಕಾಂಗ ಹೋರಾಟದ ಮತ್ತು ಕಾಳಜಿಯ ಫಲ. ಅದು ಅಂಕೋಲೆಯ ಆ ಕಾಲದ ಕಾಂಗ್ರೆಸ್ಸಿನ ಅಥವಾ ಕಾಂಗ್ರೆಸ್ಸಿಗರ ಸಾಮೂಹಿಕ ಅಥವಾ ಸಂಘಟಿತ ಪ್ರಯತ್ನದ ಫಲವಾಗಿರಲಿಲ್ಲ.

ರಾಮ ನಾಯಕರೇ ಬಡರೈತ ಕುಟುಂಬಗಳನ್ನು ಗುರುತಿಸಿ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಹೋರಾಟದಲ್ಲಿ ಧುಮುಕಿದ್ದರಿಂದ ಆರ್ಥಿಕವಾಗಿ ನುಜ್ಜುಗುಜ್ಜಾಗಿ ಹೋಗಿದ್ದವರನ್ನು ಗುರುತಿಸಿ, ಮನೆಮನೆಗೆ ಅವರೇ ಸ್ವತಃ ಕಾಲುನಡಿಗೆಯಲ್ಲಿಯೆ ಹೋಗಿ, ಕಂಡು ತಿಳಿವಳಿಕೆ ಹೇಳಿ ಅರ್ಜಿ ಬರೆಸಿ ಸಹಿ ಹಾಕಿಸಿಕೊಂಡು ಹೋಗುವ ಕೆಲಸವನ್ನು ಕೂಡ ಮಾಡಿದ್ದುಂಟು. ಆಗ ಹನ್ನೆರಡು-ಹದಿಮೂರರ ಹುಡುಗನಾಗಿದ್ದ ನಾನು ಸ್ವತಃ ಅದನ್ನು ಕಂಡಿದ್ದೇನೆ. ನಮ್ಮೂರಿನಲ್ಲಿ ಯಕ್ಷಗಾನ ಬಯಲಾಟ ನಡೆಯುತ್ತಿದ್ದಾಗ ಅಲ್ಲಿ ಅವರು ಬಂದು ಹಿಲ್ಲೂರು ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದು ಹೇಳಿ ಆ ಯೋಜನೆ, ಇರುವ ಅವಕಾಶದ ಬಗ್ಗೆ ಭಾಷಣ ಮಾಡಿ ತಿಳಿಸಿದ್ದರು. ಆದರಿಂದಲೇ ಗೊತ್ತಾಗಿ ಹಿಲ್ಲೂರಿಗೆ ಹೋಗುವುದಕ್ಕೆ ಜಮೀನಿಗೆಂದು ತಾವೆಲ್ಲ ಅರ್ಜಿ ಹಾಕಿಕೊಂಡದ್ದೆಂದು ಹಿಲ್ಲೂರಿನ (ಸ್ವಾತಂತ್ರ್ಯ ಹೋರಾಟಗಾರ ಸೂರ್ವೆಯ) ರಾಮಚಂದ್ರ ನಾಯಕರು ಹೇಳುತ್ತಾರೆ.

ನನ್ನ ಅಣ್ಣನನ್ನೂ (ಸೂರ್ವೆಯ ನಾರಾಯಣ ಹಮ್ಮಣ್ಣನಾಯಕ) ಹಿಲ್ಲೂರಿಗೆ ಕಳಿಸುವಂತೆ ನನ್ನ ಅಪ್ಪನ ಮನವೊಲಿಸಿ ಒಪ್ಪಿಸಲು ನಾವೆಲ್ಲ ‘ಹಾಪಿ ರಾಮಣ್ಣ’ ಎಂದು ಕರೆಯುತ್ತಿದ್ದ ಬಾಸಗೋಡ ರಾಮ ನಾಯಕರು ನಮ್ಮ ಮನೆಗೆ ಬಂದಿದ್ದರು. ನನ್ನ ಅಣ್ಣ ನಾರಾಯಣ ಚಲೇಜಾವ್ ಚಳವಳಿಯಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧದ ೧೯೪೨ರ ಸೆಪ್ಟೆಂಬರ್ ೬ರಂದು ನಡೆದ ಬಹಿರಂಗ ಮೆರವಣಿಗೆಯಲ್ಲಿ ಭಾಗವಹಿಸಿದ್ದರಿಂದ ಬಂಧಿತನಾಗಿ ಒಂಬತ್ತು ತಿಂಗಳ ಕಠಿಣ ಜೈಲುಶಿಕ್ಷೆಗೆ ಒಳಗಾಗಿ, ಜೈಲುಶಿಕ್ಷೆ ಮುಗಿಸಿ ಬಂದವನಾಗಿದ್ದ; ಇದ್ದ ಶಾಲಾ ಮಾಸ್ತರಿಕೆಯನ್ನು ಆ ಕಾರಣದಿಂದ ಕಳೆದುಕೊಂಡವನಾಗಿದ್ದ. ಅಪ್ಪ ಯಾಕೊ ಅಣ್ಣನನ್ನು ಹಿಲ್ಲೂರಿಗೆ ಕಳಿಸಿಕೊಡಲು ಮನಸ್ಸು ಮಾಡಿರಲಿಲ್ಲ. ನನ್ನ ಅಣ್ಣನಿಗೆ ಅವನು ಕಳೆದುಕೊಂಡಿದ್ದ ಶಿಕ್ಷಕ ವೃತ್ತಿಗೆ ಸಮಾನವಾದ ಗ್ರೇಡಿನ ಸರ್ಕಾರಿ ನೌಕರಿ ಕೊಡಬೇಕೆಂದು ಆಗಿನ ಮುಂಬಯಿ ಸರ್ಕಾರ ಆದೇಶ ಹೊರಡಿಸಿದ್ದರೂ ಖಾಯಂ ನೌಕರಿ ಸಿಗದೆ ಇದ್ದದ್ದರಿಂದ ಬೇಸತ್ತು ೧೯೫೨-೫೩ರಲ್ಲಿ ಹಿಲ್ಲೂರು ಆಚೆಯ, ಕುಂಟಕಣಿಗೆ ಹೋಗುವ ದಾರಿಮಧ್ಯೆ ಹತ್ತಿರದಲ್ಲಿರುವ ಹಲಸನಹಳ್ಳಿ ಎಂಬ ಕಾಡಿಗೆ, ನಮ್ಮೂರಿನ ಇತರ ಮೂವರೊಂದಿಗೆ ಹೋಗಿ ಗದ್ದೆ ಮಾಡಿದ್ದ. ಖಾಯಂ ನೌಕರಿ ಸಿಕ್ಕಿದ ಮೇಲೆ ತಿರುಗಿ ಬಂದಿದ್ದ. ಅವನ ಜೊತೆ ಹೋಗಿ ಗದ್ದೆ ಮಾಡಿದ್ದವರಲ್ಲಿ ಕೃಷ್ಣನಾಯಕರ ಕುಟುಂಬ ಮತ್ತು ಗುತ್ತಿಕೇರಿ ನಾಯಕರ ಕಡೆಯವರು ಇಂದಿಗೂ ಅಲ್ಲಿ ಸಾಗುವಳಿ ಮಾಡಿಕೊಂಡಿದ್ದಾರೆ.

ರಾಮ ನಾಯಕರ ಈ ರೈತ ಹೋರಾಟದ ನಿಟ್ಟಿನ ಚಟುವಟಿಕೆಗಳ ಕಾರಣದಿಂದಾಗಿ ಅವರ ನೇತಾರತ್ವವನ್ನು ಮುರಿಯುವ ತಂತ್ರರಾಜಕೀಯವನ್ನು ಭೂಮಾಲೀಕ ವರ್ಗದ ಕಾಂಗ್ರೆಸ್ಸಿಗರು ಜಾಣತನದಿಂದ ನಡೆಸಿಕೊಂಡು ಬಂದಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಅಸದೃಸ ಹೋರಾಟ ನೀಡಿದ್ದ ನಾಡವರ ಜಾತಿಜನಸಮೂಹದವರನ್ನು ಕಾಂಗ್ರೆಸ್ ಚುನಾವಣಾ ರಾಜಕೀಯದಲ್ಲಿ ಕಡೆಗಣಿಸುವುದು ಸಾಧ್ಯವೇ ಇರದಂಥ ಸ್ಥಿತಿ ಇತ್ತು. ಬಾಸಗೋಡ ರಾಮ ನಾಯಕರೇ ನಾಡವರ ಪ್ರಶ್ನಾತೀತ ಸ್ಥಳೀಯ ನೇತಾರರಾಗಿದ್ದರು. ಆದರೆ ಅವರು ಕಾಂಗ್ರೆಸ್ಸಿನ ಭೂಮಾಲೀಕ ವರ್ಗದವರಿಗೆ ನುಂಗಲಾರದ ಉಗುಳಲಾರದ ತುತ್ತಾಗಿದ್ದರು. ನಾಡವರಲ್ಲಿಯೆ ಇನ್ನೊಬ್ಬರನ್ನು ನೇತಾರರೆಂದು ಕಾಣಿಸುವುದು ಅವರಿಗೆ ಅನಿವಾರ್ಯ ಅಗತ್ಯವಾಗಿತ್ತು.

ಸ್ವಾತಂತ್ರ್ಯಪೂರ್ವದಲ್ಲಿ ೧೯೪೬ರಲ್ಲಿ ಮುಂಬಯಿ ವಿಧಾನ ಸಭೆಗೆ ನಡೆದ ಚುನಾವಣಯಲ್ಲಿಯೆ ಬಾಸಗೋಡ ರಾಮ ನಾಯಕರ ನೇತಾರತ್ವವನ್ನು ಮುರಿಯುವ ತಂತ್ರ ರಾಜಕೀಯ ನಡೆಸಲಾಯಿತು. ಅದು ಮೇಲು ನೋಟಕ್ಕೆ ಗೊತ್ತಾಗದಂತೆ ನಾಜೂಕಾಗಿ ನಡೆಯಿತು. ಆ ಚುನಾವಣೆ ಕಾಂಗ್ರೆಸ್ಸಿನ ಮಟ್ಟಿಗೆ ಅವಿರೋಧ ಆಯ್ಕೆ ಎಂಬ ರೀತಿಯ ಚುನಾವಣೆಯಾಗಿತ್ತು. ಬೇರೆಯವರು ಸ್ಪರ್ಧಿಸಿದ್ದರೂ ನಾಮಕೇವಾಸ್ತೇ ವಿರೋಧ ಅಥವಾ ಸ್ಪರ್ಧೆ ಎಂಬ ರೀತಿಯದಾಗಿತ್ತು. ಅಂದರೆ ಕಾಂಗ್ರೆಸ್ಸು ಯಾರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದರೂ ಗೆಲ್ಲುವುದು ಗ್ಯಾರಂಟಿ ಎಂಬಂಥದಾಗಿತ್ತು.

ಉತ್ತರ ಕನ್ನಡ ಜಿಲ್ಲೆಗೆ ನಾಲ್ಕು ಸ್ಥಾನಗಳಿದ್ದವು. ಅದರಲ್ಲಿ ಕಾಂಗ್ರೆಸ್ ಅಂಕೋಲೆಯವರಿಗೆ ಎರಡು ಸ್ಥಾನಗಳನ್ನು ನೀಡಿತ್ತು: ಒಂದು ಸ.ಪ. ಗಾಂವಕಾರರಿಗೆ, ಇನ್ನೊಂದು, ದಯಾನಂದ ಪ್ರಭು (ಆರ್.ಎಂ. ಪ್ರಭು) ಅವರಿಗೆ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಜಾತಿ-ಜನಸಮೂಹವಾಗಿ ಹೆಚ್ಚು ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು ನಾಡವರು ಮತ್ತು ಕೊಂಕಣಿಗರೇ ಅಗಿದ್ದರು. ಆದ್ದರಿಂದ ನಾಡವರಿಗೊಂದು, ಕೊಂಕಣಿಗರಿಗೊಂದು ಸೀಟು ಕೊಟ್ಟಂತಾಗಿತ್ತು. ಚುನಾವಣಾ ರಾಜಕೀಯದಲ್ಲಿ ಜಾತಿ ಲೆಕ್ಕಾಚಾರವನ್ನು ನೆಹರೂ ನಾಯಕತ್ವದ ಕಾಂಗ್ರೆಸ್ ಸ್ವಾತಂತ್ರ್ಯಪೂರ್ವದ ಆ ಚುನಾವಣೆಯಿಂದಲೇ ಪ್ರಾರಂಭಿಸಿಬಿಟ್ಟಿತ್ತು.

ವ್ಯಕ್ತಿಯಾಗಿ ಸ.ಪ. ಗಾಂವಕಾರರು ಉದಾತ್ತ ಅಂತಃಕರಣದವರು. ಕಷ್ಟದಲ್ಲಿ ಇರುವ ಯಾರಿಗೇ ಆಗಲಿ ಸಂತ ಕರುಣೆಯಿಂದ ಸಹಾಯ ಮಾಡಲು ಮುಂದಾಗುವ ಸಜ್ಜನ ಶ್ರೇಷ್ಠರು. ದಿನಕರ ದೇಸಾಯಿಯವರೇ ಅವರನ್ನು ಕುರಿತು ಬರೆದ ಪದ್ಯವೊಂದರಲ್ಲಿ ಹೇಳಿದಂತೆ ಸಣ್ಣಪ್ಪ ಪರಮೇಶ್ವರ ಗಾಂವಕಾರರು “ಕರುಣಾಳು ಸಣ್ಣಪ್ಪ”ನವರಾಗಿದ್ದರು. (ಅವರಿಂದ ಉಪಕೃತನಾಗಿ ಬದುಕು ಬೆಳೆಸಿಕೊಂಡವರಲ್ಲಿ ನಾನೂ ಒಬ್ಬ.) ಅವರು ಕವಿಗಳು, ನಾಡಿನುದ್ದಕ್ಕೂ ಗಣ್ಯರಾದವರ ಸಂಪರ್ಕ ಸಹವಾಸ ಇದ್ದವರು, ಆರ್ಯಧರ್ಮದ ದಕ್ಷಿಣ ಭಾರತದ ಗಣ್ಯ ಪ್ರಚಾರಕರು. ೧೯೪೧ರಲ್ಲಿ ಸರ್ಕಾರಿ ನೌಕರಿಯಿಂದ ನಿವೃತ್ತರಾಗಿ ಬಂದು ಅಂಕೋಲೆಯಲ್ಲಿ ನೆಲೆಸಿದ್ದರು. ೧೯೪೨ರ ಚಲೇಜಾವ್ ಚಳವಳಿಯ ಕಾಲದಲ್ಲಿ ಭಾರತ ಸಂರಕ್ಷಣಾ ಕಾನೂನಿನ ಅಡಿಯಲ್ಲಿ ಬಂಧಿತರಾಗಿ ಅರು ತಿಂಗಳು ಜೈಲುಶಿಕ್ಷೆ ಅನುಭವಿಸಿದ್ದವರು. ಹುಟ್ಟಿನ ಲೆಕ್ಕದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಅಸಾಧಾರಣ ತ್ಯಾಗ, ಸಾಹಸ ಮೆರೆದ ನಾಡವರ ಜಾತಿ-ಜನಸಮುದಾಯಕ್ಕೆ ಸೇರಿದವರಾಗಿದ್ದರು; ಪದವೀಧರರಾಗಿದ್ದರು; ಶುಭ್ರ ಶೀಲವಂತರಾಗಿದ್ದರು. ಜನಪ್ರತಿನಿಧಿಯಾಗುವುದಕ್ಕೆ ಇದಕ್ಕಿಂತ ಹೆಚ್ಚಿನ ಅರ್ಹತೆ ಏನು ಬೇಕು, ಎಂದು ಯಾರೂ ಕೇಳಬಹುದಾದಂಥ ವ್ಯಕ್ತಿತ್ವದ ಪ್ರಭಾವಳಿ ಇದ್ದವರಾಗಿದ್ದರು. ವಿಷ್ಣು ನಾಯ್ಕರೂ ಅವರ ಈ ಪುಸ್ತಕದಲ್ಲಿ ಅವರ ಹೆಸರು ಪ್ರಸ್ತಾಪವಾದಲ್ಲೆಲ್ಲ ಗಾಂವಕಾರರ ಸಜ್ಜನಿಕೆಯ ಬಗ್ಗೆ ಹೇಳಿರುವುದನ್ನೂ ಗಮನಿಸಬಹುದು. (ಪುಟ ೪೦, ೪೩, ೮೫, ೮೬, ೮೮ ಇತ್ಯಾದಿ.) ಆಗ ಅವರು ಅರವತ್ತು ವರ್ಷದವರಾಗಿದ್ದರು.

ದಯಾನಂದ ಪ್ರಭು (ದಯಾನಂದ ಯಾನೆ ರಾಮಚಂದ್ರ ಮುಕುಂದ ಪ್ರಭು) ಹುಟ್ಟಿನಿಂದ ಕೊಂಕಣಿಗರು; ಅಂಕೋಲಾ ತಾಲೂಕಿನಲ್ಲಿಯೆ ಪ್ರಥಮ ಗಣನೆಯ ಶ್ರೀಮಂತರೆಂದು ಖ್ಯಾತರಾಗಿದ್ದ ಶಿರೂರಿನ ಮುಕುಂದ ಪ್ರಭು ಅವರ ಹಿರಿಯ ಮಗ, ಪದವೀಧರರಾಗಿದ್ದಲ್ಲದೆ ಕಾನೂನು ಪದವೀಧರರೂ ಆಗಿ ಕೆಲಕಾಲ ವಕೀಲಿ ವೃತ್ತಿಯನ್ನು ಕೂಡ ನಡೆಸಿದ್ದವರು. ೧೯೪೨ರ ಚಲೇಜಾವ್ ಚಳವಳಿಯಲ್ಲಿ ಬಾಸಗೋಡ ರಾಮ ನಾಯಕ, ಶಾಮರಾವ್ ಶೇಣ್ವಿ, ಬಾಬು ಕಾಮತ್ ಮೊದಲಾದ ಹಿರಿಯ ಹೋರಾಟಗಾರರು ಭಾರತ ಸಂರಕ್ಷಣಾ ಕಾನೂನಿನಡಿಯಲ್ಲಿ ಬಂಧಿತರಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಕಾಲದಲ್ಲಿ ಯುವಕ ದಯಾನಂದ ಪ್ರಭು ಹೋರಾಟದ ಮುಂಚೂಣಿಯ ಮುಖ್ಯರಲ್ಲಿ ಒಬ್ಬರಾಗಿ ಬೆಳೆದವರು. ಆ ಚಳವಳಿ ಕಾಲದಲ್ಲಿ ಬೇರೆಲ್ಲ ಊರುಗಳವರಿಗಿಂತ ಅದ್ಭುತವಾದ ರೀತಿಯಲ್ಲಿ ಹೋರಾಟ ಮಾಡಿದ್ದ ಮತ್ತು ಹೋರಾಟದ ಸಂಘಟನೆಯ ಕೇಂದ್ರ ನೆಲೆ ಎಂದು ಖ್ಯಾತಿ ಪಡೆದಿದ್ದ ನಾಡವರ ಊರಾದ ಹಿಚ್ಕಡದಲ್ಲಿ, ಹಿಚ್ಕಡದ ವಾತ್ರವಲ್ಲ, ಆ ಚಳವಳಿಯಲ್ಲಿ ನಾಡವರ ನೇತಾರ ಎಂಬಂತಿದ್ದ ಹಿಚ್ಕಡದ ಗಾಂವಕಾರ ಬೀರಣ್ಣ ನಾಯಕ ಹಾಗೂ ಸಗಡಗೇರಿ ವೆಂಕಟರಮಣ ನಾಯಕ, ಧಾರವಾಡದ ಕೆ.ಜಿ.ಜೋಶಿ ಅವರುಗಳೊಂದಿಗೆ ಸೇರಿಕೊಂಡು ಹೋರಾಟ ಮಾಡಿದ, ಹೋರಾಟದ ತಂತ್ರ, ಯೋಜನೆಗಳನ್ನು ರೂಪಿಸಿದ ಮುಂಚೂಣಿಯ ಮುಖ್ಯರಲ್ಲಿ ದಯಾನಂದ ಪ್ರಭು ಒಬ್ಬರಾಗಿದ್ದರು. ೧೯೪೬ರಲ್ಲಿ ಅವರು ಮೂವತ್ಮೂರು ವರ್ಷದ, ಚಾರಿತ್ರ್ಯ ಶುದ್ಧಿಯುಳ್ಳ ಪ್ರಜ್ಞಾವಂತ ಯುವಕರಾಗಿದ್ದರು. ಅವರು ಜನಪ್ರತಿನಿಧಿಯಾಗುವುದಕ್ಕೆ ಎಲ್ಲ ರೀತಿಯ ಅರ್ಹತೆ ಉಳ್ಳವರೇ ಅಗಿದ್ದರು.

ಹಾಗೆ ನೋಡಿದರೆ ಗಾಂವಕಾರ ಮತ್ತು ಪ್ರಭು ಅವರ ಆಯ್ಕೆಯಲ್ಲಿ ಮೇಲುನೋಟಕ್ಕೆ ತಪ್ಪು ಕಾಣಿಸುವಂಥದೇನಿರಲಿಲ್ಲ. ನಾಡವರೇ ಆದ ಸ.ಪ.ಗಾಂವಕಾರರನ್ನು ಮುಂದೆ ಮಾಡಿ ಬಾಸಗೋಡ ರಾಮ ನಾಯಕರನ್ನು ಅಂಕೋಲಾ ತಾಲೂಕಿನ ಕಾಂಗ್ರೆಸ್ ರಾಜಕೀಯದಲ್ಲಿ ನೇತಾರತ್ವ ಸ್ಥಾನದಿಂದ ದೂರಸರಿಸುವುದರ ಜೊತೆಗೆ ದಯಾನಂದ ಪ್ರಭು ಅವರನ್ನು ಮುಂದೆ ಮಾಡುವ ತಂತ್ರವನ್ನೂ ಶಹರದ ಭೂಮಾಲೀಕ ಕಾಂಗ್ರೆಸ್ಸಿಗರು ನಾಜೂಕಾಗಿ ನಡೆಸಿದ್ದು ಮೇಲೆದ್ದು ಕಾಣಿಸಲೇ ಇಲ್ಲ. ಕೊಂಕಣಿಗ ಹಿರಿಯ ಕಾಂಗ್ರೆಸ್ಸಿಗರಲ್ಲಿ ಯಾರ ಹೆಸರನ್ನು ಮುಂದೆ ಮಾಡಿದರೂ ರಾಮ ನಾಯಕರ ಹೆಸರನ್ನು ಹಿಂದೆ ಸರಿಸುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ. ನಾಡವರ ಜೊತೆಯಲ್ಲಿ ಸೇರಿಕೊಂಡು ಚಲೇಜಾವ್ ಚಳವಳಿ ಕಾಲದಲ್ಲಿ ಹೋರಾಟ ಮಾಡಿ ನಾಡವರ ಪ್ರೀತಿ ಸಂಪಾದಿಸಿಕೊಂಡಿದ್ದ ದಯಾನಂದ ಪ್ರಭು ಅವರ ಹೆಸರನ್ನು ಮುಂದೆ ಮಾಡಿದ್ದರಿಂದ ರಾಮ ನಾಯಕರ ಹೆಸರಿಗೆ ಅದು ಡಿಕ್ಕಿ ಹೊಡೆಯುವಂತಿರಲಿಲ್ಲ.

ಸ.ಪ. ಗಾಂವಕಾರರು ನಾಡವರೇ ಆಗಿದ್ದರೂ ಅವರು ಮೂಲತಃ ಅಂಕೋಲಾ ತಾಲೂಕಿನವರಾಗಿರಲಿಲ್ಲ ; ಕುಮಟಾ ತಾಲೂಕಿನ ತೊರ್ಕೆಯವರಾಗಿದ್ದರು. ತೊರ್ಕೆಯವರು ಆ ಕಾಲದಲ್ಲಿ ನಾಡವರಲ್ಲೆಲ್ಲ ವಿದ್ಯಾಭ್ಯಾಸದಲ್ಲಿ ಮುಂದುವರಿದು ನೌಕರಿ ಬೆನ್ನು ಹತ್ತಿ ಹೋದವರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಇತರ ಊರುಗಳ ನಾಡವರಂತೆ- ಎ.ಡಿ. ಗಾಂವಕಾರರಂಥವರನ್ನು ಅಪವಾದರೂಪದ ಉದಾಹರಣೆಯಾಗಿ ಕೊಡಬಹುದಾದರೂ ತೊರ್ಕೆಯವರು ತೊಡಗಿಸಿಕೊಂಡದ್ದು ಕಡಿಮೆ. ಆಗ ಹಿಂದಿನ ನಾಲ್ಕೈದು ವರ್ಷಗಳಿಂದ ಅಂಕೋಲೆಗೆ ಬಂದು ನೆಲೆಸಿದವರಾಗಿದ್ದರಿಂದ ಅಂಕೋಲೆಯವರಾಗಿಬಿಟ್ಟಿದ್ದ ಸ.ಪ. ಗಾಂವಕಾರರಿಗೆ ಸೀಟು ಕೊಟ್ಟದ್ದರಿಂದ ಅಂಕೋಲಾ ಮತ್ತು ಕುಮಟಾ ಎರಡೂ ತಾಲೂಕುಗಳಿಗೂ, ಜೊತೆಗೆ ನಾಡವರಿಗೂ ಪ್ರಾತಿನಿಧ್ಯ ಕೊಟ್ಟಂತಾಯಿತೆಂಬ ಲೆಕ್ಕಾಚಾರ ಕಾಂಗ್ರೆಸ್ಸಿನವರದಾಗಿತ್ತು.

ಅದರಿಂದಾಗಿ ಕಾಲುಶತಮಾನದ ಕಾಲ ನಿರಂತರವಾಗಿ ಸ್ವಾತಂತ್ರ್ಯ ಹೋರಾಟದಲ್ಲಿದ್ದು ಅದ್ಭುತ ಚರಿತ್ರೆ ನಿರ್ಮಿಸಿದ್ದ ಅಂಕೋಲಾ ತಾಲೂಕಿನ ನಾಡವರನ್ನು ಹಾಗೂ ಅವರ ಅಪ್ರತಿಮ ನೇತಾರರಾಗಿದ್ದ ಬಾಸಗೋಡ ರಾಮ ನಾಯಕರನ್ನು ಕಡೆಗಣಿಸಲಾಯಿತು. ಶಹರದ ಕಾಂಗ್ರೆಸ್ಸಿಗರಿಗೆ ಅಂದಿನ ಮಾತ್ರವಲ್ಲ, ಮುಂದಿನ ಕಾಂಗ್ರಸ್ ರಾಜಕೀಯದ ದೃಷ್ಟಿಯಿಂದಲೂ ಅಂಕೋಲಾ ತಾಲೂಕಿನ ನಾಡವರ, ಮುಖ್ಯವಾಗಿ ಬಾಸಗೋಡ ರಾಮ ನಾಯಕರ ರಾಜಕೀಯ ಪ್ರಭಾವ, ಪ್ರಾಬಲ್ಯ ತಡೆಯುವುದು ಬೇಕಾಗಿತ್ತು ಅದರಲ್ಲಿ ಅವರು ಯಶಸ್ವಿಯಾಗಿದ್ದರು. ರಾಮ ನಾಯಕರಿಗೆ ಇಂಗ್ಲಿಷ್ ಬರುವುದಿಲ್ಲ ಎಂಬ ಕಾರಣವನ್ನು ಮುಂದುಮಾಡಿ ಅವರನ್ನು ನಿವಾರಿಸಿಕೊಳ್ಳಲಾಗಿತ್ತೆಂಬ ಮಾತು ಕೇಳಿಬಂದಿತ್ತು.

ಸ.ಪ. ಗಾಂವಕಾರ್ ಮತ್ತು ದಯಾನಂದ ಪ್ರಭು ನಿರೀಕ್ಷೆಯಂತೆ ಆಯ್ಕೆಯಾದರು. ಗಾಂವಕಾರರು ಉಪಮಂತ್ರಿ ಸ್ಥಾನಮಾನದ ಪಾರ್ಲಿಮೆಂಟರಿ ಸೆಕ್ರೆಟರಿಯಾದರು. ಅವರಿಗೆ ೧೯೪೯ರಲ್ಲಿ ಆರೋಗ್ಯ ಕೆಟ್ಟು ತಂಪುಹವೆಯ ಗಿರಿಧಾಮದಲ್ಲಿ ಆರೋಗ್ಯ ಸುಧಾರಣೆಗಾಗಿ ಹೋಗಿ ಉಳಿಯುವಂತಾಯಿತು. ದಯಾನಂದ ಪ್ರಭು ಅವರೇ ಗಾಂವಕಾರರಿದ್ದ ಪಾರ್ಲಿಮೆಂಟರಿ ಸೆಕ್ರೆಟರಿ ಸ್ಥಾನಕ್ಕೆ ನೇಮಕಗೊಂಡು ಆ ಕಾರ್ಯ ನಿರ್ವಹಿಸಿದರು.

ಸ್ವಾತಂತ್ರ್ಯ ಬಂದಮೇಲೆ ೧೯೫೨ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ಬಂದಾಗ ದಯಾನಂದ ಪ್ರಭು ಚುನಾವಣಾ ರಾಜಕೀಯದಿಂದ ದೂರ ಉಳಿಯಬಯಸಿದರು. ೧೯೪೬-೫೨ರ ಅವಧಿಯಲ್ಲಿ ಆರೋಗ್ಯ ಕೆಟ್ಟದ್ದರಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಸ್ಥಲೀಯ ಜನರ ಮಧ್ಯೆ ಇದ್ದು ತಮ್ಮ ರಾಜಕೀಯ ವ್ಯಕ್ತಿತ್ವದ ಪ್ರಭೆ, ಪ್ರಭಾವ ಬೆಳೆಸಿಕೊಳ್ಳಲು ಗಾಂವಕಾರರಿಗೆ ಸಾಧ್ಯವಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಅವರು ಮೊದಲಿನಿಂದ ಭಾಗವಹಿಸಿದವರಾಗಿರಲಿಲ್ಲ. ಚಲೇಜಾವ್ ಚಳವಳಿ ಕಾಲದಲ್ಲಿ ಬಂಧಿತರಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದರೂ ಮುಖ್ಯ ಹೋರಾಟಗಾರರೊ, ಹೋರಾಟದ ನೇತಾರ ಸ್ಥಾನದಲ್ಲಿದ್ದವರೊ ಆಗಿರಲಿಲ್ಲ. ಗಾಂವಕಾರರಿಗೆ ೧೯೫೨ರ ಹೊತ್ತಿಗೆ ಅರವತ್ತಾರು ವರ್ಷ ವಯಸ್ಸು ಕೂಡ ಆಗಿ‌ತ್ತು. ಈ ನಡುವೆ ದೇಸಾಯಿ, ಪಿಕಳೆ ಅವರ ರೈತ ಹೋರಾಟದ ಜೊತೆಗೆ, ಹಿಂದೆ ಕಾಂಗ್ರೆಸ್ಸಿನವರೇ ಆಗಿದ್ದ, ಗಂಗಾವಳಿ ನದಿಯಾಚೆಯ ಗೋಕರ್ಣ ಸೀಮೆಯ ರೈತ ಹೋರಾಟದ ಮುಂದಾಳಾಗಿದ್ದ ದಯಾನಂದ ನಾಡಕರ್ಣಿಯವರೂ ೧೯೪೮ರಲ್ಲಿ ಬಂದು ಸೇರಿಕೊಂಡಿದ್ದರು. ವಿಷ್ಣುನಾಯ್ಕರು ಅವರ ಈ ‘ದುಡಿಯುವ ಕೈಗಳ ಹೋರಾಟದ ಕತೆ’ಯಲ್ಲಿ ಹೇಳಿರುವಂತೆ “೧೯೪೮ರಿಂದ ೧೯೫೨ರ ನಡುವೆ ಇಡೀ ಉತ್ತರ ಕನ್ನಡ ಜಿಲ್ಲೆ ರೈತ ಜನಾಂದೋಲನದ ಬಿಸಿ ಮೈದಾನವಾಗಿತ್ತು.” (ಪುಟ-೮೯) ಆ ಕಾಲದ ಅಂಕೋಲ-ಕಾರವಾರ ಚುನಾವಣಾ ಕ್ಷೇತ್ರದಲ;ಲಿ ಅದರ ಬಿಸಿ, ಅಬ್ಬರ ಉಳಿದ ಕಡೆಗಳಿಗಿಂತ ಹೆಚ್ಚು ಜೋರಾಗಿತ್ತು. ರಾಷ್ಟ್ರಮಟ್ಟದಲ್ಲಿ ಸಮಾಜವಾದೀ ಚಿಂತನೆಯೂ ಮೈಮುರಿದೆದ್ದು ಬಲಪಡೆದುಕೊಳ್ಳತೊಡಗಿತ್ತು.

ಸ್ಥಳೀಯ ಸಂದರ್ಭದಲ್ಲಿ ಕಾಂಗ್ರೆಸ್ಸಿನವರ ಮಟ್ಟಿಗೆ ಹೇಳುವುದಾದರೆ ಬಾಸಗೋಡ ರಾಮ ನಾಯಕರೊಬ್ಬರಿಗೆ ಮಾತ್ರ ಕಾಲುಶತಮಾನದ ಅದ್ವೀತೀಯ ಹೋರಾಟದ ನೇತಾರತ್ವದ ದಾಖಲೆಯ ಹಿನ್ನೆಲೆಯ ಜೊತೆಗೆ ಈ ಮೊದಲೇ ಪ್ರಸ್ತಾಪಸಲಾಗಿರುವ ‘ಹಿಲ್ಲೂರು ಯೋಜನೆ’ಯ ಕಾರಣದಿಂದಾಗಿ ಅವರ ವ್ಯಕ್ತಿತ್ವಕ್ಕೆ ರೈತಪರ ಹೋರಾಟದ ಹೊಸ ಆಯಾಮವೂ ಕೂಡಿಕೊಂಡಿತ್ತು. ಮೂವತ್ತರ ದಶಕದಿಂದಲೂ ರೈತಪರ ಹೋರಾಟದ ಬಗ್ಗೆ ಕಾಳಜಿ, ಕಾತರ ತೋರಿಸುತ್ತ ಬಂದಿದ್ದ ರಾಮ ನಾಯಕರು ಆ ಬಗೆಗಿನ ಅವರ ನಿಷ್ಠೆಯನ್ನು ಏಕವ್ಯಕ್ತಿ ಸಾಹಸದಿಂದಲೇ ಮಾಡಿ ತೋರಿಸಿದ್ದರು. ನಿಜವಾದ ಅರ್ಥದಲ್ಲಿ ತೃಣಮೂಲ ನೆಲೆಯ ನೇತಾರರಾಗಿದ್ದ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ದೇಸಾಯಿ, ಪಿಕಳೆಯವರಿಗಿಂತ ದೀರ್ಘಕಾಲದ ಅನುಭವದ ಮತ್ತು ಮಹತ್ವದ ಸಾಧನೆಯ ಹಿನ್ನೆಲೆ ಇತ್ತು. ಸ.ಪ. ಗಾಂವಕಾರರಿಗಿಂತ ಎಂಟುವರ್ಷಗಳಷ್ಟು ಕಿರಿಯರಾಗಿದ್ದರು. ಅಂದರೆ ೧೯೫೨ರಲ್ಲಿ ಅವರು ೫೮ ವರ್ಷದವರಾಗಿದ್ದರು.

ಇಂಥ ಸಂದರ್ಭದಲ್ಲಿ ಯಾವ ದೃಷ್ಟಿಯಿಂದ ನೋಡಿದರೂ ೧೯೫೨ರ ಚುನಾವಣೆಯಲ್ಲಿ ದೇಸಾಯಿ, ಪಿಕಳೆ, ನಾಡಕರ್ಣಿಯವರ ರೈತ ಹೋರಾಟ ಮತ್ತು ಪ್ರಜಾ ಸಮಾಜವಾದೀ ಪಕ್ಷ ರಾಜಕೀಯಕ್ಕೆ ಸಮರ್ಥವಾಗಿ ಎದುರು ನಿಂತು ಆಗಿನ ಕಾರವಾರ-ಅಂಕೋಲಾ ಕ್ಷೇತ್ರದ ಚುನಾವಣೆಯಲ್ಲಿ ಅದನ್ನು ಮಣಿಸಬಹುದಾದ ಸಾಧ್ಯತೆಯುಳ್ಳ ರಾಜಕೀಯ ವ್ಯಕ್ತಿತ್ವದ ವರ್ಚಸ್ಸು ಸ್ಥಳೀಯ ಕಾಂಗ್ರೆಸ್ಸಿಗರಲ್ಲಿ ರಾಮ ನಾಯಕರಿಗೆ ಮಾತ್ರ ಇತ್ತು. ರಾಮ ನಾಯಕರು ನಾಡವರ ನೇತಾರ ಮಾತ್ರ ಆಗಿರದೆ ದೇಸಾಯಿ, ಪಿಕಳೆಯವರ ರೈತ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಜಾತಿ ಜನಸಮೂಹದವರಲ್ಲಿಯೂ ಸದ್ಭಾವನೆ, ಜನಪ್ರಿಯತೆ ಇದ್ದವರಾಗಿದ್ದರು.

ರಾಮ ನಾಯಕರಿಗೆ ಇಂಗ್ಲಿಷ್ ಬರುವುದಿಲ್ಲ ಎಂಬುದನ್ನೇ ದೊಡ್ಡದಾಗಿ ಆಡಿ ಅವರನ್ನು ನೇತಾರತ್ವದಿಂದ ೧೯೫೨ರಲ್ಲಿಯೂ ಬದಿಗೆ ಸರಿಸುವುದಕ್ಕೆ ಕಾರಣವಾಗಬೇಕಾಗಿರಲಿಲ್ಲ. ಆಗ ಲೋಕಸಭೆಗೆ ಅಭ್ಯರ್ಥಿಯಾಗಿ ಹೊರಗಿನಿಂದ, ಜೋಕಿಂ ಆಳ್ವಾರಿಗೆ ನಡೆಮಡಿ ಹಾಸಿ ಕರೆತಂದು ನಿಲ್ಲಿಸಿ ಗೆಲ್ಲಿಸುವ ಬದಲು ಸ.ಪ. ಗಾಂವಕಾರರನ್ನೇ ಲೋಕಸಭೆಗೆ ನಿಲ್ಲಿಸಿದ್ದರೂ ಅವರು ಸುಲಭವಾಗಿ ಗೆಲ್ಲುತ್ತಿದ್ದರು. ಅವರ ವ್ಯಕ್ತಿತ್ವದ ಸ್ವರೂಪ ವಿಧಾನಸಭೆಗಿಂತ ಲೋಕಸಭೆಗೆ ಹೆಚ್ಚು ಸಲ್ಲವುವಂಥದಾಗಿತ್ತು. ಲೋಕಸಭೆಗೆ ಸ.ಪ.ಗಾಂವಕಾರರನ್ನು ನಿಲ್ಲಿಸಿದರೆ ಬಾಸಗೋಡ ರಾಮ ನಾಯಕರನ್ನು ವಿಧಾನ ಸಭೆಗೆ ಅಭ್ಯರ್ಥಿಯಾಗಿ ಕಾಂಗ್ರೆಸ್ ಆಯ್ಕೆ ಮಾಡದಂತೆ ತಡೆಯುವುದು ೧೯೪೬ರಲ್ಲಿ ಆದರಂತೆ, ಮತ್ತು ಅದಷ್ಟು ಸುಲಭವಾಗುತ್ತಿರಲಿಲ್ಲ. ಹಾಗೆ ಆದರೆ, ಅಂದರೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ರಾಮ ನಾಯಕರನ್ನು ನಿಲ್ಲಿಸಿದರೆ ಇಬ್ಬರು ನಾಡವರು ನೇತಾರರಾಗಿ ಬಿಡುತ್ತಾರಲ್ಲಾ ಎಂಬ ಲೆಕ್ಕಾಚಾರ ಮುಂದುಮಾಡಿ ಆಗಲೂ ರಾಮ ನಾಯಕರನ್ನು ನೇತಾರತ್ವದಿಂದ ದೂರ ಸರಿಸಲಾಯಿತು.

ಸ.ಪ.ಗಾಂವಕಾರರನ್ನೇ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರಕ್ಕೆ ನಿಲ್ಲಿಸಿ ಅವರನ್ನು ಕೂಡ ಬಲಿಪಶು ಮಾಡಲಾಯಿತು. ಅವರ ರಾಜಕೀಯ ಜೀವನವನ್ನು ಕೊನೆಗಾಣಿಸಲಾಯಿತು. “ಇಡೀ ಅಂಕೋಲಾ ತಾಲೂಕು ಮತ್ತು ಗೋಕರ್ಣ ಸೀಮೆ ದಿನಕರ ದೇಸಾಯಿ, ಪಿಕಳೆ ಮತ್ತು ನಾಡಕರ್ಣಿಯವರ ಬಿಗಿ ಹಿಡಿತದಲ್ಲಿ ಇದ್ದ ರೈತಕೊಪ್ಪಗಳಿಂದ ಕೂಡಿದ ಭಾಗವಾಗಿದ್ದುದರಿಂದಲೂ ಸಮತಾವಾದಿಗಳ ವ್ಯವಸ್ಥಿತ ಕ್ಷೇತ್ರಕಾರ್ಯ ಕಾರವಾರ ಭಾಗದಲ್ಲಿ ಚೆನ್ನಾಗಿ ನಡದಿರುವುದರಿಂದಲೂ ಬಿ.ಸಿ.ಕದಂ ಗೆದ್ದರು.” (ಪುಟ ೯೩) ಎಂದು ವಿಷ್ಣುನಾಯ್ಕರು ‘ದುಡಿಯುವ ಕೈಗಳ ಹೋರಾಟದ ಕಥೆ’ಯಲ್ಲಿ ಹೇಳಿದ್ದಾರೆ. ಪಿ,ಎಸ್.ಪಿ.ಯವರು ಗಾಂವಕಾರರ ತೊರ್ಕೆ ಊರಿನವರೇ ಆದ, ನಾಡವರೇ ಆದ, ಧಾರವಾಡದಲ್ಲಿ ವಾಸವಾಗಿದ್ದ, ರಾಜಕೀಯ ವರ್ಚಸ್ಸು ಇಲ್ಲದಿದ್ದ ಎನ್.ಜಿ. ನಾಯಕರನ್ನು ಕುಮಟಾ ಮತದಾರ ಕ್ಷೇತ್ರದಿಂದ ನಿಲ್ಲಿಸುವುದರ ಮೂಲಕ ಕಾರವಾರ – ಅಂಕೋಲಾ ಕ್ಷೇತ್ರದ ನಾಡವರ ಮತಗಳನ್ನು ಒಂದಷ್ಟು ಒಡೆಯುವ, ಪಿ.ಎಸ್.ಪಿ. ಅಭ್ಯರ್ಥಿಯಾಗಿದ್ದ ಬಿ.ಪಿ.ಕದಂ ಅವರ ಕಡೆ ಸೆಳೆಯುವ ಹೊಂಚು ಹಾಕಿದ್ದರೆಂಬ ಅಂಶವನ್ನೂ ಇಲ್ಲಿ ನೆನೆಯಬಹುದು. ಅವು ಮಾತ್ರವೇ ಕಾರಣವಲ್ಲ, ಕಾಂಗ್ರೆಸ್ಸಿನ ಕೆಟ್ಟ ರಾಜಕೀಯ ತಂತ್ರಗಾರಿಕೆಯೂ ಕಾರಣ, ಎಂಬುದು ನನ್ನ ಅನಿಸಿಕೆ, ಅಭಿಪ್ರಾಯ.

ಸ.ಪ. ಗಾಂವಕಾರರು ವೈಯಕ್ತಿಕವಾಗಿ ಜನಪ್ರೀತಿಯ ಮನುಷ್ಯರಾಗಿದ್ದರೂ ರಾಜಕೀಯ ಪರಿಭಾಷೆಯಲ್ಲಿ ಹೇಳುವುದಾದರೆ ತೃಣಮೂಲನೆಲೆಯ ಅಂದರೆ ಜನರ ಮಧ್ಯದಿಂದ ಹೋರಾಟದ ಕಾರ್ಯ ಚಟುವಟಿಕೆಗಳ ಮೂಲಕವೇ ಬಾಸಗೋಡ ರಾಮ ನಾಯಕರಂತೆ ಹಾಗೂ ದಿನಕರ ದೇಸಾಯಿ, ಪಿಕಳೆ ಮಾಸ್ತರರಂತೆ ಮೇಲೆದ್ದು ಬಂದ ಜನನಾಯಕರಾಗಿರಲಿಲ್ಲ. ಅವರಿಗೆ ೧೯೫೨ರ ಹೊತ್ತಿಗೆ ವಯಸ್ಸಿನ ಸಮಸ್ಯೆಯ ಜೊತೆಗೆ ಜನಪರವಾದ ನಿರ್ದಿಷ್ಟ ದೊಡ್ಡ ಪ್ರಮಾಣದ ಕಾರ್ಯಯೋಜನೆಗಳು ಕಣ್ಮುಂದೆ ಇದ್ದಿರಲಿಲ್ಲ; ರಾಮ ನಾಯಕರಿಗೆ ರೈತ ಹೋರಾಟದ ಕನಸಿತ್ತು. ಸ್ವಾತಂತ್ರ್ಯ ಪಡೆಯುವವರೆಗೆ ರೈತಪರವಾದ ‘ಉಳುವವನಿಗೇ ಭೂಮಿಯ ಒಡೆತನ’ ಎಂಬ ಹೋರಾಟ ಬೇಡವೆಂದು ಮೇಲಿನ ಕಾಂಗ್ರಸ್ ಮೂವತ್ತರ ದಶಕದಲ್ಲಿ ತಡೆದದ್ದರಿಂದ ಆ ಹೋರಾಟವನ್ನು ತಡೆಹಿಡಿದಿದ್ದ ರಾಮ ನಾಯಕರು ಸ್ವಾತಂತ್ರ್ಯ ಹೋರಾಟದ ರಭಸ, ನೇರ ಕಾರ್ಯಚಟುವಟಿಕೆಗಳು ಕಡಮೆಯಾಗುತ್ತಿದ್ದಂತೆಯೇ ಈಗಾಗಲೇ ಹೇಳಿದಂತೆ ‘ಹಿಲ್ಲೂರು ಯೋಜನೆ’ಯಲ್ಲಿ ಏಕಾಂಗಿಯಾಗಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದರು; ನೂರಾರು ಬಡ ರೈತ ಕುಟುಂಬಗಳಿಗೆ ಬದುಕು ಕೊಟ್ಟಿದ್ದರು. ಅವರ ವ್ಯಕ್ತಿತ್ವಕ್ಕೆ ರಾಜಕೀಯ ಮುತ್ಸದ್ಧಿತನಕ್ಕೆಶಾಸನ ಸಭೆಯ ಸದಸ್ಯತ್ವದ ಬಲವೂ ಸೇರಿಕೊಂಡಿದ್ದರೆ ಅವರು ರೈತರ ಪರವಾಗಿ ಹೋರಾಟ ಮಾಡಲು ಹೆಚ್ಚಿನ ಶಕ್ತಿ ಕೂಡಿಕೊಳ್ಳುತ್ತಿತ್ತು.

ಪಿ.ಎಸ್.ಪಿ.ಯು ಪಕ್ಷ ರಾಜಕೀಯದ ಧ್ವಜದಡಿಯಲ್ಲಿ ರೈತ ಹೋರಾಟವನ್ನು ಬೆಳೆಸುವುದರ ಮೂಲಕವೇ ಪಕ್ಷವನ್ನು ಕಾಂಗ್ರೆಸ್ಸಿಗೆ ಪ್ರತಿಸ್ಪರ್ಧಿಯಾಗಿ ಬಲಪಡಿಸುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ಸಿಗೆ ರಾಮ ನಾಯಕರಂಥವರ ನಾಯಕತ್ವ ಇದ್ದರೆ ಕಾಂಗ್ರಸ್ಸಿಗೆ ರೈತವಿರೋಧಿ ಎಂಬ ‘ಲೇಬಲ್’ ಅನ್ನು ಹಚ್ಚಿ ವಿರೋಧಿಸುವುದಕ್ಕೆ ಪಿ.ಎಸ್.ಪಿ.ಗೆ, ಆ ಮೂಲಕ ರೈತ ಹೋರಾಟದ ಸಂಘಟಕರಿಗೆ ಸುಲಭವಾಗುತ್ತಿರಲಿಲ್ಲ. ಸಮಾಜವಾದದತ್ತ ತೆಳುವಾಗಿಯಾದರೂ ಸರಿಯುವ ಅಗತ್ಯವನ್ನು ಕಾಂಗ್ರೆಸ್ ಕಂಡುಕೊಳ್ಳತೊಡಗಿದ್ದ ಕಾಲವೂ ಅದಾಗಿತ್ತು. ಮುಂದೆ ೧೯೫೫ರ ಆವಡಿ ಅಧಿವೇಶನದ ಹೊತ್ತಿಗಾಗಲೇ ಕಾಂಗ್ರೆಸ್ ‘ಸಮಾಜವಾದೀ ನಮೂನೆ ಸಮಾಜ’ (‘Socialistic Pattern of Society’) ಘೋಷಣೆ ಮಾಡಿತೆಂಬುದನ್ನೂ, ಆಮೇಲೆ ಸ್ವಲ್ಪ ಕಾಲದಲ್ಲಿಯೇ ‘ಪ್ರಜಾಸತ್ತಾತ್ಮಕ ಸಮಾಜವಾದ’ (‘Democratic Socialism’) ಘೋಷಣೆ ಮಾಡಿತೆಂಬುದನ್ನೂ ನೆನಪಿಗೆ ತಂದುಕೊಂಡರೆ ಈ ಮಾತು ಅರ್ಥವಾಗುತ್ತದೆ.

ಕರನಿರಾಕರಣೆ ಹೋರಾಟ ಕಾಲದಲ್ಲಿ ೧೯೩೨ರಲ್ಲಿ ದ.ಪ. ಕರಮಕರರ ಬಂಧನವಾದ ಮೇಲೆ ಹೋರಾಟದ ‘ಸರ್ವಾಧಿಕಾರಿ’ಯಾಗಿ ಆಗಿನ ಕಾಂಗ್ರೆಸ್ಸಿನಿಂದ ನೇಮಕಗೊಂಡ ರಾಮ ನಾಯಕರು ಅತ್ಯಂತ ಯಶಸ್ವಿಯಾಗಿ ಹೋರಾಟಕ್ಕೆ ನಾಯಕತ್ವ ನೀಡಿದ್ದ ಹಿನ್ನಲೆ ಇತ್ತು. ಅವರಿಗೆ ಇಂಗ್ಲಿಷ್ ಬರದಿದ್ದರೂ ಹಿಂದಿ ಭಾಷೆ ಅಷ್ಟೊ ಇಷ್ಟೊ ಬರುತ್ತಿತ್ತು. ಅದರ ಬಲದಿಂದಲೇಆ ಕಾಲದ ಮುಂಬಯಿ ಪ್ರಾಂತದ ಮುರಾರ್ಜಿ ದೇಸಾಯಿ ಮೊದಲಾದ ನೇತಾರರ ಪರಿಚಯ, ಸಂಪರ್ಕ ಬೆಳೆಸಿಕೊಂಡಿದ್ದರು. ಅವರಿಗೆ ಇಂಗ್ಲಿಷ್ ಬರದಿದ್ದರೂ ಹೊರಗಿನ ಹೋರಾಟಗಾರರೊಂದಿಗೆ, ಮೇಲಿನ ಕಾಂಗ್ರೆಸ್ಸಿನೊಂದಿಗೆ ಪತ್ರವ್ಯವಹಾರ ಇತ್ಯಾದಿಗಳಿಗೆಂದು ಅವರು ಹೋರಾಟದ ‘ಸರ್ವಾಧಿಕಾರಿ’ ಯಾಗಿದ್ದಾಗ ಮೊದಲ ಕೆಲವು ತಿಂಗಳುಗಳ ಕಾಲ ಮೈಸೂರಿನ ಎಂ.ಎನ್.ಜೋಯಿಸರನ್ನು, ಜೋಯಿಸರ ಬಂಧನವಾದ ಮೇಲೆ ಬೆಂಗಳೂರಿನ ವಿ.ಎಸ್.ನಾರಾಯಣರಾಯರನ್ನು ಕಾಂಗ್ರಸ್ಸು ರಾಮ ನಾಯಕರ ನೆರವಿಗೆ ಕಳಿಸಿತ್ತು. ಜನಪ್ರಭುತ್ವದ ಸ್ವತಂತ್ರ ಭಾರತದಲ್ಲಿ ಅಗತ್ಯವಾದ ಅಂಥ ವ್ಯವಸ್ಥೆ ಮಾಡುವುದಕ್ಕೆ ಅಡ್ಡಿಯೇನೂ ಇರಲಿಲ್ಲ; ಇರಬೇಕಾಗಿರಲಿಲ್ಲ.

ಮುಂದೆ ೧೯೫೭ರ ಚುನಾವಣೆಯಲ್ಲಿ ದಿನಕರ ದೇಸಾಯಿಯವರ ಪ್ರಜಾ ಸೋಷಿಯಲಿಸ್ಟ್ ಪಕ್ಷದವರು ಬೆಳಂಬಾರದ ಶಿವು ಬೊಮ್ಮ ಗೌಡರಂಥ ನಿರಕ್ಷರಿ ಹಾಲಕ್ಕಿ ಒಕ್ಕಲ ರೈತರೊಬ್ಬರನ್ನು ಆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದನ್ನು ನೆನಪು ಮಾಡಿಕೊಳ್ಳಬಹುದು. ಮುಲ್ಕಿ ತರಗತಿವರೆಗೆ ಶಿಕ್ಷಣ ಪಡೆದಿದ್ದ, ೧೯೨೧ರಿಂದ ನಿರಂತರವಾಗಿ ದೇಶದ ರಾಜಕಾರಣದ, ದೇಶ-ವಿದೇಶಗಳ ಇತರ ವಿದ್ಯಮಾನಗಳ ಬಗ್ಗೆ ಅಪಾರ ಆಸಕ್ತಿಯಿಂದ ವರ್ತಮಾನ ಪತ್ರದ ಸಮಗ್ರ ಓದಿನ ಅಭ್ಯಾಸ ಬೆಳೆಸಿಕೊಂಡಿದ್ದ, ಸ್ವಾತಂತ್ರ್ಯ ಹೋರಾಟದಂಥ ಕಠಿಣತಮ ಹೋರಾಟದ ನೇತಾರತ್ವದ ದೀರ್ಘಕಾಲದ ಅನುಭವವಿದ್ದ ರಾಮ ನಾಯಕರನ್ನು ಇಂಗ್ಲಿಷ್ ಬರುವುದಿಲ್ಲ ಎಂಬುದನ್ನು ನೆವಮಾಡಿ, ೧೯೫೨ರಲ್ಲಿಯೂ ಅಭ್ಯರ್ಥಿಯಾಗಿ ನಿಲ್ಲಿಸುವುದಕ್ಕೆ ಕಾಂಗ್ರೆಸ್ಸಿಗೆ ಅದು ಅಡ್ಡಿಯಾಗಬೇಕಾಗಿರಲಿಲ್ಲ. ಅವರ ರಾಜಕೀಯ ವ್ಯಕ್ತಿತ್ವ ಸತ್ವವನ್ನು ಆಗಿನ ಕಾಂಗ್ರೆಸ್ಸು ಅಂಕೋಲೆಯ ಭೂಮಾಲೀಕವರ್ಗದ ಕಾಂಗ್ರೆಸ್ಸಿಗರ ಪಿತೂರಿಯಿಂದಾಗಿ ಆ ನೆವವೊಡ್ಡಿ ಮುರಿದದ್ದು ಕಾಂಗ್ರೆಸ್ ಎಸಗಿದ ಅಪರಾಧವೆಂದೇ ಹೇಳಬೇಕಾಗಿದೆ. ಶಿವು ಬೊಮ್ಮು ಗೌಡರು ಚುನಾವಣೆಯಲ್ಲಿ ಆರಿಸಿ ಬಂದರೆ ತಾವು ಅವರ ಕಾರ್ಯದರ್ಶಿಯಾಗಿ ಕೆಲಸ ಮಾಡುವುದಾಗಿ ದಿನಕರ ದೇಸಾಯಿಯವರು ಘೋಷಿಸಿದ್ದನ್ನು ವಿಷ್ಣುನಾಯ್ಕರು ಅವರ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. (ಪುಟ ೧೧೩)

ಬಾಸಗೋಡ ರಾಮ ನಾಯಕರ ನೇತಾರತ್ವದ ಆನಂತರದ ಕಾಲದಲ್ಲಿ ಇಲ್ಲಿಯವರೆಗೂ ಅಂಕೋಲಾ ಕಾಂಗ್ರೆಸ್ಸಿಗರಲ್ಲಿ ಯಾರೂ ಅಂಥ ಸಾಮರ್ಥ್ಯದ ಜನನಾಯಕರು ಬಂದೇ ಇಲ್ಲ. ಮೊನ್ನೆ ತಾನೆ ಅಂದರೆ, ೧೨-೮-೨೦೦೪ರಂದು ನಿಧನರಾದ ಶತಾಯುಷಿ, ಕರ್ನಾಟಕ ಉಚ್ಛ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿದ್ದ, ಮಾಜಿ (ಹಂಗಾಮಿ) ರಾಜ್ಯಪಾಲರೂ ಆಗಿದ್ದ, ಕರನಿರಾಕರಣೆ ಹೋರಾಟದ ಕಾಲದಲ್ಲಿ ಕಷ್ಟಕ್ಕೆ ಒಳಗಾಗಿದ್ದಂಥ ಅಂಕೋಲಾ ತಾಲೂಕಿನ ಹೋರಾಟಗಾರರ ನೆರವಿಗೆಂದು ಪ್ರತಿ ತಿಂಗಳೂ ಹಣ ಕೂಡಿಸಿ ಕಳಿಸುತ್ತಿದ್ದ ‘ಗುಪ್ತ ಸಮಿತಿ’ಯ ಮೂವರು ಸದಸ್ಯರಲ್ಲಿ ಒಬ್ಬರಾಗಿದ್ದ ನಿಟ್ಟೂರ ಶ್ರೀನಿವಾಸರಾಯರು ಅವರ ‘ನೂರರ ನೆನಪು’ ಎಂಬ ಪುಸ್ತಕದಲ್ಲಿ (೨೦೦೩) ಬಾಸಗೋಡ ರಾಮ ನಾಯಕರ ಸಂಘಟನಾಶಕ್ತಿಯ ಬಗ್ಗೆ ‘ಜಿ ಎಚ್. ನಾಯಕ’ ಎಂಬ ಉಪ ಶೀರ್ಷಿಕೆ ಭಾಗದಲ್ಲಿ ಹೇಳಿರುವುದು ಇಲ್ಲಿ ದಾಖಲಿಸಲು ಯೋಗ್ಯವಾಗಿದೆ :

“ಸ್ವಾತಂತ್ರ್ಯ ಹೋರಾಟದಲ್ಲಿ ೧೯೩೨ರ ಆಂದೋಳನ ಬಹುಮುಖ್ಯವಾದದ್ದಾಗಿತ್ತು. ಅಂಕೋಲಾದಲ್ಲಿ ಕೆಲವು ವರ್ಷಗಳ ಹಿಂದೆ ಸುವರ್ಣ ಮಹೋತ್ಸವ ನಡೆಸಿದರು. ಅಲ್ಲಿ ಒಬ್ಬರು ತುಂಬ ಒಳ್ಳೆಯ ಸಂಘಟನಕಾರರು, ಪ್ರಭಾವೀ ವ್ಯಕ್ತಿತ್ವದವರಾಗಿದ್ದರು. ಅವರ ಹೆಸರು ಬಾಸಗೋಡು ರಾಮ ನಾಯಕ್ ಎಂದು. ಈ ಕಾರ್ಯಕ್ರಮಕ್ಕೆ ಹೋಗುವ ವೇಳೆಗೆ ಅವರು ನಿಧನರಾಗಿದ್ದರು. ಚಳವಳಿಯ ಸಂದರ್ಭದಲ್ಲಿ ಅವರ ಸಂಘಟನಾ ಸಾಮರ್ಥ್ಯದ ಅರಿವಾಯಿತು. ಸ್ವಾತಂತ್ರ್ಯ ಬಂದಮೇಲೂ ಬೆಂಗಳೂರಿಗೆ ಬಂದು ಭೇಟಿಯಾಗುತ್ತಿದ್ದರು. ಅವರದು ಒಂದಲ್ಲ, ಒಂದು ಚಟುವಟಿಕೆ….(ಜಿಎಚ್.) ನಾಯಕರ ಜೊತೆ ಮಾತನಾಡುತ್ತಿರುವಾಗ ತಿಳಿಯಿತು – ರಾಮ ನಾಯಕರ ಮೊಮ್ಮಗಳೇ ಅವರ ಪತ್ನಿ ಎಂದು ಆಮೇಲೆ ಮೈಸೂರಿನಲ್ಲಿ ಅವರ ಮನೆಗೆ ಹೋಗಿದ್ದೆ.” (ಪುಟ ೨೩೪-೩೫).