ಪ್ರಿಯಮಿತ್ರ ವಿಷ್ಣು ನಾಯ್ಕರ ‘ದುಡಿಯುವ ಕೈಗಳ ಹೋರಾಟದ ಕತೆ’ಯಲ್ಲಿ ಮೂರು ದಶಕಗಳಿಗಿಂತ ಹೆಚ್ಚು ಕಾಲ, ಮುಖ್ಯವಾಗಿ ನಮ್ಮ ಅಂಕೋಲೆಯಲ್ಲಿ, ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ರೈತ ಹೋರಾಟದ, ಸಮಾಜವಾದೀ ಪಕ್ಷ ರಾಜಕಾರಣದ ಚರಿತ್ರೆ ಇದೆ. ಈ ಕೃತಿಗೆ ನಾನು ಮುನ್ನುಡಿ ಬರೆಯಬೇಕೆಂದು ವಿಷ್ಣು ನಾಯ್ಕರು ಬಯಸಿದ್ದಾರೆ. ಅವರ ಸದ್ಭಾವನೆಗೆ ನಾನು ಕೃತಜ್ಞನಾಗಿದ್ದೇನೆ.

‘ದುಡಿಯುವ ಕೈಗಳ ಹೋರಾಟದ ಕತ’ ಒಂದು ಕತೆಯಲ್ಲ; ಅದೊಂದು ಇತಿಹಾಸ. ಹಾಗೆ ನೋಡಿದರೆ ವಿಷ್ಣು ನಾಯ್ಕರ ಈ ಬರವಣಿಗೆಯನ್ನು ‘ಇತಿಹಾಸ’ ಎಂದು ಪೂರ್ತಿಯಾಗಿ ಹೇಳುವಂತೆಯೂ ಇಲ್ಲ. ಇತಿಹಾಸ ಎಂಬುದಕ್ಕೆ ‘ಹೀಗೆ ಆಯಿತಂತೆ’ (‘ಇತಿ ಹ ಆಸ’) ಎಂಬ ಅರ್ಥವಿದೆ. ಈ ಹೋರಾಟದ, ಸ್ಥೂಲವಾಗಿ ಮೊದಲ ಮೂರು ಹಂತಗಳ ನಿರೂಪಣೆಯಲ್ಲಿ ‘ಹೀಗೆ ಆಯಿತಂತೆ’ ಎಂಬ ದನಿಯೇನೊ ಇದೆ. ಆದರೆ ಅದನ್ನು ಸಾಕಷ್ಟು ಅಧ್ಯಯನ, ನಂಬಲರ್ಹವಾದ ಆಧಾರ ಸಾಮಗ್ರಿಗಳ ಮೂಲಕ ವಿಷ್ಣು ನಾಯ್ಕರು ನಿರೂಪಿಸಿದ್ದಾರೆಂಬುದು ಸ್ಪಷ್ಟವಾಗಿ, ನಿಚ್ಚಳವಾಗಿ ಕಾಣಿಸುತ್ತದೆ. ಅದರ ಮುಂದಿನ ಒಂದು ದಶಕದ ಅಂದರೆ ೧೯೬೨ರಲ್ಲಿ ಎಸ್.ವಿ.ಪಿಕಳೆ ಮಾಸ್ತರರು ಆ ಹೋರಾಟದ ಕಣದಿಂದ ದೂರವಾದ ಅಥವಾ ಬೇರ್ಪಟ್ಟ ಆನಂತರದ ಕಾಲದ, ಹೋರಾಟದ ಕಣದಿಂದ ದೂರವಾದ ಅಥವಾ ಬೇರ್ಪಟ್ಟ ಆನಂತರದ ಕಾಲದ, ಹೋರಾಟದ ನಾಲ್ಕನೆಯ ಅಂದರೆ ಕೊನೆಯ ಹಂತವೆಂದು ಹೇಳಬಹುದಾದ ಕಾಲದ ನಿರೂಪಣೆಯಲ್ಲಿ ‘ಹೀಗೆ ಆಯಿತಂತೆ’ ಎಂಬಂಥ ಆಧಾರ ಸಾಮಗ್ರಿಗಳನ್ನು ನೆಚ್ಚಿ ನಿರೂಪಿಸುವ ಇತಿಹಾಸಕಾರನ ದನಿಗಿಂತ ‘ಹೀಗೆ ಆಯಿತು’ ಎಂದು ಹೇಳುವ ಒಳಗಿನವನ, ಪ್ರತ್ಯಕ್ಷದರ್ಶಿಯ ದನಿ ಇದೆ.

ವಿಷ್ಣುನಾಯ್ಕರು ಅವರ ಬಾಲ್ಯ, ಕೌಮಾರ್ಯ ಕಾಲದಿಂದಲೂ ಹೋರಾಟದ ಒಡಲಲ್ಲಿಯೆ ಬೆಳೆದವರು. ಹಾಗೆ ನೋಡಿದರೆ ಅವರು ಹುಟ್ಟುವುದಕ್ಕಿಂತ ಮೊದಲೇ, ಅವರು ಹುಟ್ಟಿದ ಹಳ್ಳಿಯಾದ ಅಂಬಾರಕೊಡ್ಲದ ಪರಿಸರದಲ್ಲಿಯೆ ಆ ಹೋರಾಟದ ಗಾಳಿ ಇತ್ತು. ಗ್ರಾಮೀಣ ಭಾಗದಲ್ಲಿ ಈ ಹೋರಾಟ ಕುರಿತಂಥ ಮೊದಲ ಬೃಹತ್ ಸಭೆ ನಡೆದದ್ದೇ ಅವರ ಊರು ಅಂಬಾರಕೊಡ್ಲದಲ್ಲಿ ಅವರು ಹುಟ್ಟುವುದಕ್ಕಿಂತ ನಾಲ್ಕು ವರ್ಷ ಮೊದಲು ೧೯೪೦ರಲ್ಲಿ. ಭೂಮಾಲಿಕವರ್ಗದವರ ಪಿತೂರಿ ಕಾರಣವಾಗಿ, ದಿನಕರ ದೇಸಾಯಿಯವರಿಗೆ ‘ಹಾವಳಿ ಮಂಜ’ ಎಂದು ಕುಖ್ಯಾತಿಯ ನಾಮಕರಣ ಮಾಡಿ, ವರ್ಗಕಲಹ ಹುಟ್ಟುಹಾಕುತ್ತಿರುವರೆಂಬ ಆರೋಪ ಹೊರಿಸಿ, ಅವರನ್ನು ಗಡಿಪಾರು ಶಿಕ್ಷೆಗೆ ಆಗಿನ ಬ್ರಿಟಿಷ್ಸ ಸರ್ಕಾರ ಗುರಿಪಡಿಸಿದ್ದು ಅದೇ ವರ್ಷ. ಈ ರೈತ ಹೋರಾಟವೇ ಕಾವು ಕೊಟ್ಟು ವಿಷ್ಣುನಾಯ್ಕರ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಪ್ರಜ್ಞೆಯನ್ನು ಹೊರೆಸಿ, ಮೊಳಕೆಯೊಡೆಸಿ ಬೆಳೆಸಿದ್ದು. ಅವರು ಸಮಾಜವಾದವನ್ನೋ ಸಮತಾವಾದವನ್ನೋ ಅಧ್ಯಯನ ಮಾಡಿ ಪಡೆದ ತಿಳಿವು ಮತ್ತು ಪ್ರೇರಣೆಯಿಂದ ಈ ಹೋರಾಟಕ್ಕೆ ಪ್ರವೇಶಿಸಿದವರಲ್ಲ. ಆ ರೈತ ಹೋರಾಟದೊಂದಿಗೆ ಕೂಡಿಕೊಳ್ಳುವುದು ಅವರಿಗೆ ಒಂದು ತಾತ್ಕಾಲಿಕ ಉಮೇದಿಯ ವೇಷವೋ ಆವೇಶವೋ ಆಗಿರಲಿಲ್ಲ. ಈ ಹೋರಾಟ ಅವರ ಒಡಲ ಉರಿಹಸಿವೆಗೆ ದನಿಕೊಡುವ ಒಂದು ಸಹಜ ಭಾಷೆಯೂ ಆಗಿತ್ತು. ಅವರ ‘ಅರೆಖಾಸಗಿ’ ಅಂಕಣ ಬರಹವನ್ನು ಹಾಗೂ ‘ಅವ್ವ ಮತ್ತು ನಾನು’ ಎಂಬ ನೀಳ್ಗವನವನ್ನು ಓದಿದವರಿಗೆ ಆ ಉರಿಹಸಿವೆಯ ಪ್ರತ್ಯೇಕ ವಿವರಣೆ ಮತ್ತು ವ್ಯಾಖ್ಯೆಯ ಅಗತ್ಯವಿಲ್ಲ.

ವಿಷ್ಣುನಾಯ್ಕರು ಪ್ರಜ್ಞಾಪೂರ್ವಕವಾಗಿ ಮತ್ತು ಪ್ರಜ್ಞಾವಂತಿಕೆಯಿಂದ ಈ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ೧೯೬೨ರ ಆನಂತರದ ಹೋರಾಟದ ಕೊನೆಯ ಹಂತದ ಅಂದರೆ ಕೊನೆಯ ದಶಕದ ಕಾಲದಲ್ಲಿ. ಅವರು ಆ ಕಾಲಾವಧಿಯಲ್ಲಿಯೆ ಎರಡನೆಯ ಸಾಲಿನ ನೇತಾರತ್ವದ ಸ್ಥಾನಬಲದಲ್ಲಿದ್ದು ನಿಷ್ಠೆಯಿಂದ ದುಡಿದದ್ದು. ಆದ್ದರಿಂದ ಪ್ರಜ್ಞಾವಂತ ಪ್ರತ್ಯಕ್ಷದರ್ಶಿಯ ಋಜುದನಿಯ ಅಧಿಕೃತತೆ, ಹೋರಾಟದ ಹಿಂದಿನ ಸಮಾಜವಾದೀ ವಿಚಾರವಾದೀ ನೆಲೆ ನೋಟಗಳ ಪರಿಜ್ಞಾನ ಅವರ ಈ ಹಂತದ ಬರವಣಿಗೆಗೆ ಪ್ರಾಪ್ತವಾಗಿದೆ.

ಈ ಹೋರಾಟವನ್ನು ಪ್ರಾರಂಭಿಸಿದವರು, ಕೊನೆಯವರೆಗೂ ಹೋರಾಟದ ಒಳಗಿನವರೇ ಆಗಿದ್ದವರು, ದಿನಕರ ದೇಸಾಯಿಯವರು. ಅವರು ಈ ಚಳವಳಿಯ ಅಥವಾ ಹೋರಾಟದ ಮೂಲಕವೇ ನಮ್ಮ ಅಂಕೋಲೆಯ, ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಗೌರವಾನ್ವಿತ ಸಾರ್ವಜನಿಕ ವ್ಯಕ್ತಿತ್ವವಾಗಿ ಬೆಳೆದವರು. ಆ ಹೋರಾಟದ ಚರಿತ್ರೆಯನ್ನು ಸಮಗ್ರವಾಗಿ ದಾಖಲಿಸಬಹುದಾಗಿದ್ದವರು ಉದ್ದಕ್ಕೂ ಹೋರಾಟದ ನೇತಾರತ್ವದ ಸ್ಥಾನಬಲದಲ್ಲಿ, ಗೌರವದ ಸ್ಥಾನದಲ್ಲಿ ಇದದ ದಿನಕರ ದೇಸಾಯಿಯವರೊಬ್ಬರೇ ಆಗಿದ್ದರು. ಸಾಹಿತಿಯೂ ಆಗಿದ್ದ ಅವರು ಸ್ವಾತಂತ್ರ್ಯೋತ್ತರ ಕಾಲದ ಅತ್ಯಂತ ಮಹತ್ವದ ಈ ರೈತ ಜನಾಂದೋಲನದ ಚರಿತ್ರೆಯನ್ನು ದಾಖಲಿಸದೆ ಹೋದದ್ದು ಒಂದು ದೊಡ್ಡ ನಷ್ಟವೆಂದೇ ಹೇಳಬೇಕು.

ದಿನಕರ ದೇಸಾಯಿಯವರು ೧೯೪೦ರಲ್ಲಿ ಗಡಿಪಾರುಗೊಂಡ ಮೇಲಿನ ಹೋರಾಟದ ಆರೇಳು ವರ್ಷಗಳ ಸ್ತಬ್ಧ ಅವಧಿಯಲ್ಲಿ ಎಸ್.ವಿ.ಪಿಕಳೆಯವರು ಮುಂಬಯಿ ವಿಶ್ವವಿದ್ಯಾನಿಲಯದ ಎಂ.ಎ.ಪದವಿಗೆಂದು ೧೯೪೪ರ ಸುಮಾರಿಗೆ ತಮ್ಮ ಸಂಶೋಧನೆಯ ಬರಹ ಯೋಜನೆಯ ಸಿದ್ಧತೆಯ ಅಂಗವಾಗಿ ಹಾಲಕ್ಕಿ ಒಕ್ಕಲ ಸ್ಥಿತಿಗತಿ ಕುರಿತ ನಿಕಟ ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳಲ್ಲಿ ತೊಡಗಿದ್ದರು. ಆ ಅವಧಿಯಲ್ಲಿ ಹೊತ್ತಿಸಿದ್ದ ಹೋರಾಟದ ಕಿಡಿ ಸಂಪೂರ್ಣ ಆರಿಹೋಗದಂತೆ ಅದಕ್ಕೆ ಗಾಳಿ ಹಾಕಿ ಕಾಪಾಡಿಕೊಂಡು ಬಂದವರು ಎಸ್.ವಿ.ಪಿಕಳ ಮಾಸ್ತರರು. ೧೯೪೧ರಲ್ಲಿ ಸ್ಥಾಪನೆಯಾದ ಪೀಪಲ್ಸ್‌ ಹೈಸ್ಕೂಲಿನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದು, ಶಾಲೆಯ ಶಿಕ್ಷಕರಾಗಿ ಕೆಲಕಾಲ ಕೆಲಸ ಮಾಡಿ, ವಿದ್ಯಾಭ್ಯಾಸ ಮುಂದುವರಿಸಲು ಮುಂಬಯಿಗೆ ಹೋದ ಪಿಕಳೆಯವರು ಅಲ್ಲಿಯ ಆಂಗ್ಲೊ-ಬೆಂಗಾಲಿ ಇಂಗ್ಲಿಷ್ ಶಾಲೆಯಲ್ಲಿ ೧೯೪೫ರಲ್ಲಿ ಕೆಲಕಾಲ ಶಿಕ್ಷಕರಾಗಿದ್ದವರು. ತತ್ವದ ಕಾರಣಕ್ಕೆ ಆ ಶಾಲೆಯಿಂದ ಹೊರಬರುವಂತಾಗಿ ಸ್ವಂತವಾಗಿ ಟ್ಯುಟೋರಿಯಲ್ ಕಾಲೇಜನ್ನೂ ನಡೆಸಿದರು. ಅಂಕೋಲೆಯ ಪೀಪಲ್ಸ್ ಹೈಸ್ಕೂಲಿಗೆ ಮರಳಿ ೧೯೪೬ರಲ್ಲಿ ಶಿಕ್ಷಕರಾಗಿ ಬಂದು ಮುಖ್ಯೋಪಾಧ್ಯಾಯರಾದರು. ೧೯೪೭ರಿಂದ ‘ಹಾಲಕ್ಕಿ ಒಕ್ಕಲ ಸಂಘ’, ‘ಉತ್ತ ಕನ್ನಡ ಜಿಲ್ಲೆಯ ಆದಿವಾಸಿಗಳ ಸೇವಾ ಸಂಘ’ ಸ್ಥಾಪಿಸುವುದರ ಮೂಲಕ ಪಿಕಳೆ ಮಾಸ್ತರರು ಅಂಕೋಲೆಯ ಮಾತ್ರವಲ್ಲ, ಉತ್ತರ ಕನ್ನಡ ಜಿಲ್ಲೆಯ ರೈತ ಹೊರಾಟಕ್ಕೆ ಸಮರ್ಥವಾದ ರೀತಿಯಲ್ಲಿ ಮರುಚಾಲನೆ ನೀಡಿದರು. ಆಗ ಅವರು ೨೭ ವರ್ಷದ ಯುವಕ; ರೈತಹೋರಾಟವನ್ನು ೧೯೩೬ರಲ್ಲಿ ಪ್ರಾರಂಭಿಸಿದಾಗ ದೇಸಾಯಿಯವರೂ ೨೭ ವರ್ಷದ ಯುವಕರಾಗಿದ್ದರು.

೧೯೪೭ ರಿಂದ ೧೯೬೨ರ ವರೆಗಿನದು ರೈತ ಹೋರಾಟದ ಅತ್ಯಂತ ಶಕ್ತಿಯುತವಾದ ಕಾಲ. ಆ ಕಾಲಘಟ್ಟದಲ್ಲಿ ಮುಂಬಯಿಯಲ್ಲಿದ್ದು ಆಗಾಗ ಬಂದು ಸಂಘಟನೆಯ ಕಾರ್ಯ ಮತ್ತು ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡು ಮರಳಿ ಹೋಗುತ್ತಿದ್ದ ದಿನಕರ ದೇಸಾಯಿಯವರಿಗಿಂತಲೂ ಪಿಕಳೆ ಮಾಸ್ತರರು ನಿಜವಾದ ಅರ್ಥದಲ್ಲಿ ಹೋರಾಟದ ಸಂಘಟನೆಯ ಕೇಂದ್ರಸ್ಥಾನದಲ್ಲಿದ್ದ ನೇತಾರರಾಗಿದ್ದರು. ಅದು ಹೋರಾಟದ ಎರಡನೆಯ ಮತ್ತು ಮೂರನೆಯ ಘಟ್ಟ. ೧೯೪೭ ರಿಂದ ೧೯೫೩ರವರೆಗಿನ ಅಂದರೆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಪಿಕಳೆ ಮಾಸ್ತರರ ಈ ರೈತ ಹೋರಾಟದ ಚಟುವಟಿಕೆಗಳನ್ನು ಅಪಾಯಕಾರೀ ರಾಜಕೀಯ ಚಟುವಟಿಕೆಗಳೆಂದು ವ್ಯಾಖ್ಯಾನಿಸಿಕೊಂಡು, ಹಾಗೆಂದು ಆರೋಪ ಹೊರಿಸಿ, ‘ಭೂಮಿದೇವತೆಯ ಮನೆ’ ಹತ್ತಿರ ಇದ್ದ ಪೀಪಲ್ಸ್ ಹೈಸ್ಕೂಲಿನ ಸೇವೆಯಿಂದ ಭೂಮಾಲಿಕ ಕಾಂಗ್ರೆಸ್ಸಿಗರ ಪ್ರಾಬಲ್ಯದ ಆ ಸಂಸ್ಥೆಯ ಆಡಳಿತವು ಅವರನ್ನು ಸೇವೆಯಿಂದ ವಜಾ ಮಾಡಿದವರೆಗಿನ ಅವಧಿ ಹೋರಾಟದ ಎರಡನೆಯ ಕಾಲಘಟ್ಟ. ೧೯೫೩ರಿಂದ, ಕೆನರಾ ವೆಲ್‌ಫೇರ್ ಟ್ರಸ್ಟಿನ ಸೇವೆಯಿಂದ ಪಿಕಳೆ ಮಾಸ್ತರರನ್ನು ಸ್ವತಃ ದಿನಕರ ದೇಸಾಯಿಯವರ ಅಧ್ಯಕ್ಷತೆಯ ಆಡಳಿತವು ವಜಾಗೊಳಿಸಿದ ೧೯೬೨ರ ಮೇ ವರೆಗಿನ ಅವಧಿ ಹೋರಾಟದ ಮೂರನೆಯ ಘಟ್ಟ.

೧೯೪೭ರ ಜೂನ್ ತಿಂಗಳ ಪ್ರಾರಂಭದಲ್ಲಿ ಆಗಿನ ಪೀಪಲ್ಸ್ ಹೈಸ್ಕೂಲಿನ ವಿದ್ಯಾರ್ಥಿಯಾಗಿ ಸೇರಿಕೊಂಡಿದ್ದು ೧೯೫೪ರ ಏಪ್ರಿಲ್‌ವರೆಗೆ ಅಂದರೆ ಏಳು ವರ್ಷಗಳ ಕಾಲ ಅಲ್ಲಿಯೆ ವಿದ್ಯಾರ್ಥಿಯಾಗಿದ್ದ ನಾನು ನನ್ನದೇ ಆದ ರೀತಿಯಲ್ಲಿ ಈ ಅವಧಿಯ ಹೋರಾಟ ಮತ್ತು ಬೆಳವಣಿಗೆಗಳನ್ನು ಗಮನಿಸಿದವನು ಮತ್ತು ಪ್ರತಿಕ್ರಿಯಿಸುತ್ತ ಬಂದವನು. ಅ೯೫೩ ಮತ್ತು ೧೯೫೪ರಲ್ಲಿ, ಗ್ರಾಮೀಣ ಪ್ರದೇಶದ ಮಕ್ಕಳು, ಪಿಕಳೆ ಮಾಸ್ತರರನ್ನು ಸೇವೆಯಿಂದ ವಜಾ ಮಾಡಿದ ಶಾಲೆಗೆ ಹೋಗದೆ, ಪಿಕಳೆ ಮಾಸ್ತರರು ೧೯೫೩ರ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭಿಸಿದ್ದ ಕೆನರಾ ಎಗ್ರಿಕಲ್ಚರಲ್ಲ ಹೈಸ್ಕೂಲಿಗೆ ಹೋಗುವಂತೆ ಊರೂರುಗಳಲ್ಲಿ ಪ್ರಚಾರ ಮಾಡಿದ ಪಿಕಳೆ ಮಾಸ್ತರರ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬನಾಗಿದ್ದೆ. ೧೯೫೩-೫೪ರ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಸಿ. ವಿದ್ಯಾರ್ಥಿಯಾಗಿದ್ದ ನಾನು ಶಾಲೆಯ ವಿದ್ಯಾರ್ಥಿ ಸಂಸತ್ತಿನ ಚುನಾಯಿತ ಪ್ರಧಾನ ಮಂತ್ರಿಯಾಗಿದ್ದೆ. ಮುಂದೆ ಪೀಪಲ್ಸ್ ಮಲ್ಟಿಪರ್‌ಪಸ್ ಹೈಸ್ಕೂಲ್ ಆಗುವಂಥ ಬೆಳವಣಿಗೆಗೆ ಕಾರಣವಾದ ವಿದ್ಯಮಾನಗಳಲ್ಲಿ ಪಿಕಳೆ ಮಾಸ್ತರರ ವಿದ್ಯಾರ್ಥಿಗಳ ಈ ಪ್ರಚಾರ ಕಾರ್ಯವೂ ಒಂದು ಎಂಬುದು ತಪ್ಪದೆ ದಾಖಲಾಗಬೇಕಾದ ಸಂಗತಿ.

೧೯೬೨ರಲ್ಲಿ ದಿನಕರ ದೇಸಾಯಿಯವರ ಅಧ್ಯಕ್ಷತೆಯ ಕೆನರಾ ವೆಲ್‌ಫೇರ್ ಟ್ರಸ್ಟಿನ ಆಡಳಿತವು ಪಿಕಳೆ ಮಾಸ್ತರರನ್ನು ಟ್ರಸ್ಟಿನ ಸೇವೆಯಿಂದ ತೆಗೆದುಹಾಕಿದ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆಯ ಸ್ಥಾನದಿಂದ, ಸಭೆಯಲ್ಲಿ ಉಪಸ್ಥಿತರಿದ್ದ ದಿನಕರ ದೇಸಾಯಿಯವರನ್ನು ಆ ಬಗ್ಗೆ ನಾನು ಪ್ರಶ್ನೆ ಮಾಡಿದ್ದೆ. ಗೌರೀಶ ಕಾಯ್ಕಿಣಿಯವರು ಆ ಸಭೆಯ ಮುಖ್ಯ ಅತಿಥಿಗಳಾಗಿದ್ದರು.ಅಮ್ಮೆಂಬಳ ಆನಂದ, ಶಂಕರ ಕೇಣಿ, ವಿ.ಜೆ.ನಾಯಕ, ಶಾಂತಾರಾಮ ನಾಯಕ ಹಿಚ್ಕಡ ಮೊದಲಾದವರು ಆ ಸಭೆಯಲ್ಲಿ ಇದ್ದರು. ಅದರ ಮಾರನೆಯ ದಿನವೇ ಅಂಕೋಲೆ ಶಹರದಲ್ಲಿ ಪಿಕಳೆ ಮಾಸ್ತರರ ಪರವಾಗಿ, ದಿನಕರ ದೇಸಾಯಿಯವರ ಅಧ್ಯಕ್ಷತೆಯ ಆಡಳಿತವು ಪಿಕಳೆ ಮಾಸ್ತರರನ್ನು ಸೇವೆಯಿಂದ ತೆಗೆದುಹಾಕಿದ ತೀರ್ಮಾನದ ವಿರುದ್ಧವಾಗಿ ನಡೆದ ಹಳೆಯ ವಿದ್ಯಾರ್ಥಿಗಳ ಮೆರವಣಿಗೆ ಮತ್ತು ಆ ಸಂದರ್ಭದ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ನಾನು ಭಾಷಣವನ್ನೂ ಮಾಡುವುದರ ಮೂಲಕ ಭಾಗವಹಿಸಿದ್ದೆ. ವಿಷ್ಣುನಾಯ್ಕರ ಈ ಪುಸ್ತಕದಲ್ಲಿ ಪರಸ್ಪರ ದೂರಾದ ಪಿಕಳೆ ಮತ್ತು ದೇಸಾಯಿ ಎಂಬ ಭಾಗ – ೨೨ ರಲ್ಲಿ ಆ ಬಗ್ಗೆ ಸಂಕ್ಷಿಪ್ತ ಪ್ರಸ್ತಾಪವಿದೆ. (ನೋಡಿ – ಪುಟ ೧೨೩).

ಈಗಲೂ ಪಿಕಳೆ ಮಾಸ್ತರರು ಇದ್ದಾರೆ. ಅದೊಂದು ಅತ್ಯಂತ ಸಂತೋಷದ ಸಂಗತಿ. ಅವರಿಗೀಗ ೮೪ ವರ್ಷ. ಈ ಹೋರಾಟದ ಎರಡು ಮೂರನೆಯ ಘಟ್ಟದ ಚರಿತ್ರೆಯನ್ನು ಒಳಗಿನವರಾಗಿ ಅವರು ಕೊಡುವುದಾದರೆ ಅದೊಂದು ಅತ್ಯಂತ ಮಹತ್ವದ ದಾಖಲೆಯಾಗುತ್ತದೆ. ಪಿಕಳೆ ಮಾಸ್ತರರು ಕೂಡ ಹೋರಾಟದ ಮೊದಲ ಕಾಲಘಟ್ಟದ ಅಂದರೆ ೧೯೩೬ರಿಂದ ೧೯೪೦ರ ವರೆಗಿನ ಹಾಗೂ ೧೯೬೨ರ ಆನಂತರದ ಅಂತಿಮಘಟ್ಟದ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಿದವರೊ ತೊಡಗಿಕೊಂಡವರೊ ಅಲ್ಲ. ಆದ್ದರಿಂದ ಆ ಅವಧಿಯಲ್ಲಿ ನಡೆದ ಹೋರಾಟದ ಚರಿತ್ರೆಯನ್ನು ‘ಹೀಗೆ ಆಯಿತಂತೆ’ ಎಂಬ ಇತಿಹಾಸಕಾರನ ಧಾಟಿಯಲ್ಲಿ ಬರೆಯುವುದಕ್ಕೆ ಮಾತ್ರ ಸಾಧ್ಯವಾದೀತು. ‘ಹೀಗೆ ಆಯಿತು’ ಎಂದು ಪ್ರತ್ಯಕ್ಷದರ್ಶಿಯ ದೃಢದನಿಯಲ್ಲಿ ಅಥವಾ ಋಜುದನಿಯಲ್ಲಿ ದಾಖಲಿಸುವುದಕ್ಕೆ ನಿರೂಪಿಸುವುದಕ್ಕೆ ಅವರಿಗೂ ಸಂಪೂರ್ಣವಾಗಿ ಸಾಧ್ಯವಾಗುವ ಸ್ಥಿತಿ ಇಲ್ಲ.

ಹೋರಾಟದ ಅಥವಾ ಚಳವಳಿಯ ಒಳಗಿನವರಾಗಿ ಯಾರೇ ಹೋರಾಟದ ಚರಿತ್ರೆಯನ್ನು ನಿರೂಪಿಸುವುದರಲ್ಲಿಯೂ ಒಂದು ಮಿತಿ ಇದೆ. ಅವರದು ಎಷ್ಟೇ, ಎಂಥದೇ ಪ್ರಾಮಾಣಿಕ ಋಜುದನಿ ಇದ್ದರೂ ಆ ಹೋರಾಟ ನೆಡೆದು ಬಂದ ರೀತಿ, ಆ ಹೋರಾಟಕ್ಕೆ ‌ಪ್ರೇರಣೆಯಾದ ಅಥವಾ ಅದನ್ನು ಮುನ್ನಡೆಸಿದ ರಾಜಕೀಯ ವಿಚಾರವಾದದ ಬಗೆಗಿನ ಸ್ವಂತದ ನಿಲುವು, ನೋಟ ಇವುಗಳ ಶಕ್ತಿ ಮತ್ತು ಮಿತಿ ಈ ಎರಡೂ, ಬರವಣಿಗೆಯಲ್ಲಿ ಅನಿವಾರ್ಯವಾಗಿ ಸೇರಿಕೊಳ್ಳುತ್ತವೆ. ನೇತಾರರ ಮಧ್ಯೆ ತಾತ್ವಿಕ ಭಿನ್ನಾಭಿಪ್ರಾಯ ಬೆಳೆದು ಪರಸ್ಪರ ಬೇರ್ಪಡುವಷ್ಟು ದೂರ ಹೋದಾಗಲಂತೂ ಅವರಲ್ಲಿ ಯಾರು ಬರೆದರೂ ಅವರವರು ಗ್ರಹಿಸಿದ ರೀತಿ, ಅವರವರ ನಿಲುವು, ನೋಟಗಳಲ್ಲಿ ಎದ್ದು ಕಾಣುವ ವ್ಯತ್ಯಾಸ ಇದ್ದೇ ಇರುತ್ತದೆ. ಅದು ಸಹಜ; ಅನಿವಾರ್ಯ ಕೂಡ. ಆ ಇಬ್ಬರೂ ಪ್ರಾಮಾಣಿಕರಾಗಿದ್ದಾಗ ಯಾವುದು ಸರಿ, ಯಾವುದು ತಪ್ಪು ಎಂದು ಹೇಳುವುದು ಸುಲಭವಲ್ಲ. ಹಾಗೆ ನೋಡಿದರೆ ಆ ಇಬ್ಬರು ಗ್ರಹಿಸಿದ ರೀತಿ, ನಿಲುವು ನೋಟಗಳಲ್ಲಿ ಗಂಭೀರವಾಗಿ ಪರಿಗಣಿಸಬೇಕಾದ ಅಂಶಗಳಂತೂ ಇದ್ದೇ ಇರುತ್ತವೆ. ಆ ಇಬ್ಬರ ಬರವಣಿಗೆ ನೋಟಗಳು ಆ ಹೋರಾಟವನ್ನು ಹೆಚ್ಚಿನ ಪ್ರಜ್ಞಾವ್ಯಾಪ್ತಿಯಿಂದ ಅರ್ಥಮಾಡಿಕೊಳ್ಳುವುದಕ್ಕೆ, ವ್ಯಾಖ್ಯಾನಿಸುವುದಕ್ಕೆ, ಅರಿಯುವುದಕ್ಕೆ ಸಹಕಾರಿಗಳಾಗುತ್ತವೆ. ಅವು ಆ ಹೋರಾಟದ ಸ್ವರೂಪ, ಮಿತಿ-ಮೇರೆ, ಗುಣ-ದೋಷಗಳನ್ನು ಕುರಿತ ಅಧ್ಯಯನಕ್ಕೆ ನಂಬಲರ್ಹವಾದ ಗಟ್ಟಿ ಸಾಮಗ್ರಿಗಳಾಗುತ್ತವೆ.

ಈ ಹೋರಾಟದ ನಡುದಾರಿಯಲ್ಲಿ ತಾತ್ವಿಕ ಭಿನ್ನಾಭಿಪ್ರಾಯ ಕಾರಣವಾಗಿ ದಿನಕರ ದೇಸಾಯಿಯವರು ಮತ್ತು ಎಸ್.ವಿ.ಪಿಕಳೆ ಮಾಸ್ತರರು ಬೇರ್ಪಟ್ಟದ್ದು- ಈ ಹೋರಾಟದ ‘ಕಥೆ’ ಬಲ್ಲವರಿಗೆಲ್ಲ ಗೊತ್ತಿರುವ ಸಂಗತಿ. ವಿಷ್ಣುನಾಯ್ಕರು ಈ ಪುಸ್ತಕದಲ್ಲಿಯೂ ಆ ಬಗ್ಗೆ ಬರೆದಿದ್ದಾರೆ. ಕೀರ್ತಿಶೇಷರಾದ ದಿನಕರ ದೇಸಾಯಿಯವರು ಬರೆಯುವ ಸಂದರ್ಭ ಈಗ ಇಲ್ಲ. ‘ದಯಾನಂದ ನಾಡಕರ್ಣಿ : ಹೋರಾಟದ ಬದುಕು’ ಎಂಬು ಕಿರುಪುಸ್ತಕವೊಂದನ್ನು ೧೯೯೭ರಲ್ಲಿ ನಾಡಕರ್ಣಿಯವರಿಂದಲೇ ವಿವರ ಪಡೆದು ದಾವಣಗೆರೆಯ ಶ್ರೀ ನಾಗಾನಂದ (ಡಾ. ಟಿ. ವಿಶ್ವನಾಥರಾವ್) ಎಂಬುವರು ಬರೆದಿದ್ದಾರೆ. ಅದು ಏಕೋ ಜಾಳುಜಾಳಾಗಿದೆ. ಪಿಕಳೆ ಮಾಸ್ತರರು ಈ ವಯೋಮಾನದಲ್ಲಿ ವಿವರವಾಗಿ, ವಿಸ್ತಾರವಾಗಿ ಬರೆಯುವ ಸಂಭವ ಕಡಿಮೆ.

ಸ್ಥಿತಿ, ಸಂದರ್ಭ ಹೀಗಿರುವಾಗ ವಿಷ್ಣುನಾಯ್ಕರ ‘ದುಡಿಯುವ ಕೈಗಳ ಹೋರಾಟದ ಕತೆ’ ಬಂದಿರುವುದು ಅತ್ಯಂತ ಮಹತ್ವದ ಘಟನೆಯಾಗಿದೆ. ವಿಷ್ಣುನಾಯ್ಕರು ಅವರ ಬಾಲ್ಯಕಾಲದಿಂದಲೂ ಈ ಹೋರಾಟದ ಜೊತೆಗೆ ನಿಕಟವಾಗಿ ಒಂದಿಲ್ಲ ಒಂದು ಬಗೆಯಲ್ಲಿ, ನೆಲೆಯಲ್ಲಿ ಸಂಬಂಧ ಇಟ್ಟುಕೊಂಡು ಬಂದವರಾಗಿರುವುದಲ್ಲದೆ. ಇಂದು ಅವರು ಮಹತ್ವದ ಸಾಹಿತಿ, ಸಮಾಜ-ಸಂಸ್ಕೃತಿ ಚಿಂತಕ, ಉತ್ತರ ಕನ್ನಡ ಜಿಲ್ಲೆಯ ಪ್ರಜ್ಞಾವಿವೇಕವೆಂಬಂತೆ ಬೆಳೆಯು ಬೆಳೆಯುತ್ತಿರುವ ಸಂವೇದನಶೀಲ. ಈ ಎಲ್ಲ ಕಾರಣಗಳಿಂದಾಗಿ ವಿಷ್ಣುನಾಯ್ಕರ ಈ ಪುಸ್ತಕದ ಮೌಲಿಕತೆ ಹೆಚ್ಚಿದೆ. ಈ ಪುಸ್ತಕವು ಈ ಹೋರಾಟಕ್ಕೆ ಅವರು ಸಲ್ಲಿಸುವ ಋಣ ನೆನಕೆಯ ಗೌರವ ಎಂಬ ಅವರ ಪ್ರಾಮಾಣಿಕವಾದ ಭಾವನೆಯೂ ಅವರ ಈ ಬರವಣಿಗೆಯಲ್ಲಿ ಒಡಬೆರೆತಿದೆ. ಆದ್ದರಿಂದ ಬರವಣಿಗೆಗೆ ಒಂದು ವಿಶೇಷ ಬಗೆಯ ಆತ್ಮೀಯ ಸ್ಪರ್ಶ ಲಭ್ಯವಾಗಿದೆ.

ಈ ಹೋರಾಟದ ಚರಿತ್ರೆಗೆ ಶಿಕ್ಷಣ ಚಳವಳಿಯ ಗರುಡರೆಕ್ಕೆ ಕೆನರಾ ವೆಲ್‌ಫೇರ್ ಟ್ರಸ್ಟ್ ರೂಪದಲ್ಲಿ ಮೂಡಿದ್ದು ಹೋರಾಟದ ಮೂರನೆಯ ಘಟ್ಟದಲ್ಲಿ. ಹೋರಾಟವು ತನ್ನ ಸಮಾಜವಾದೀ ಚಳವಳಿಯ ಸತ್ವ, ತತ್ವ ಎರಡನ್ನೂ ಕಳೆದುಕೊಂಡಮೇಲೆ ಕೂಡ ಈ ಹೋರಾಟ ನೀಡಿದ, ಬಹುಕಾಲ ಉಳಿಯುವಂಥ ತಾಳಿಕೆಯ ಕೊಡುಗೆಯಾಗಿ ಈವರೆಗೆ ಉಳಿದಿರುವುದು, ಮುಂದೆಯೂ ಉಳಿದುಕೊಳ್ಳುವುದು ಈ ಶಿಕ್ಷಣ ಚಳವಳಿಯ ಫಲಶ್ರುತಿಯಾದ ಟ್ರಸ್ಟು ಮತ್ತು ಅದರ ಶಿಕ್ಷಣ ಸಂಸ್ಥೆಗಳಾದ ಶಾಲಾ-ಕಾಲೇಜುಗಳು.

ಪುರಾಣದ ಕೃಷ್ಣನ ಕತೆಯಲ್ಲಿ ಹೆತ್ತ ತಾಯಿ ದೇವಕಿ, ಸಾಕುತಾಯಿ ಯಶೋಧೆ ಇಬ್ಬರ ಹೆಸರುಗಳೂ ಮರೆಯದಂತೆ, ಮರೆಯಾಗದಂತೆ ಇಂದಿನವರೆಗೂ ಉಳಿದುಕೊಂಡೇ ಬಂದಿವೆ. ಆದರೆ ಕೇವಲ ಅರ್ಧಶತಮಾನದ ಚರಿತ್ರೆಯಾದ ಈ ಹೋರಾಟದ ಉಪಉತ್ಪನ್ನವೆಂಬಂತೆ, ಆದರೆ ಈ ಹೋರಾಟಕ್ಕೆ ಒಂದು ದೃಢನೆಲೆ ಒದಗಿಸುವ ಉದ್ದೇಶದಿಂದ ಹುಟ್ಟಿ ಬೆಳೆದ ಶಿಕ್ಷಣ ಚಳವಳಿಯ ಕತೆಯಲ್ಲಿ ಹೆತ್ತತಾಯಿ ದೇವಕಿಯಂತಿರುವ ಎಸ್.ವಿ.ಪಿಕಳೆ ಮಾಸ್ತರರ ಹೆಸರು ಇಂದು ಅದರ ಫಲಾನುಭವಿಗಳಿಗೆ ಕೂಡ ಸರಿಯಾಗಿ ಗೊತ್ತಾಗದಂತೆ ಮರೆಯಾಗಿ, ಮರವೆಯಾಗಿ ಹೋಗಿದೆ, ಹೋಗುತ್ತಿದೆ. ಇದು ವಿಷಾದದ ಸಂಗತಿಯಾಗಿದೆ.

೧೯೮೫ರಲ್ಲಿ ಪ್ರಕಟವಾದ, ಇತಿಹಾಸಕಾರರಾದ ಡಾ. ಸೂರ್ಯನಾಥ ಕಾಮತರು ಪ್ರಧಾನ ಸಂಪಾದಕರಾಗಿರುವ, ಉತ್ತರ ಕನ್ನಡ ಜಿಲ್ಲೆಯ ಗೆಜೆಟಿಯರ್‌ನಲ್ಲಿ ಸೆಕೆಂಡರಿ ಸ್ಕೂಲ್‌ಗಳ ಬಗ್ಗೆ ಬರೆದಿರುವ ಭಾಗದಲ್ಲಿ ೧೯೪೧ರಲ್ಲಿ ಸ್ಥಾಪನೆಯಾಗಿದ್ದ ಹಿಂದಿನ ಪೀಪಲ್ಸ್ ಹೈಸ್ಕೂಲ್ ಇತ್ತೆಂಬುದರ ಹಾಗೂ ೧೯೫೩ರಲ್ಲಿ ಸ್ಥಾಪನೆಯಾಗಿದ್ದ ಕೆನರಾ ಎಗ್ರಿಕಲ್ಚರಲ್ ಹೈಸ್ಕೂಲ್ ಇತ್ತೆಂಬುದರ ಸುಳಿವು ಸಿಗದಂತೆ ಬರವಣಿಗೆ ಇದೆ. ಪೀಪಲ್ಸ್ ಮಲ್ಟಿಪರ್‌ಪಸ್ ಹೈಸ್ಕೂಲ್ ೧೯೫೪ರಲ್ಲಿ ಸ್ಥಾಪನೆ ಆಯಿತೆಂಬ (!) ಹಾಗೂ ಪಿ.ಎಂ. ಹೈಸ್ಕೂಲ್ ಒಕ್ಕಲುತನದ ಶಿಕ್ಷಣವನ್ನು ಕೂಡ ಕೊಟ್ಟಿತೆಂಬ (!) ಮಾಹಿತಿಯನ್ನು ಅದು ನೀಡುತ್ತದೆ. (ನೋಡಿ : ಪುಟ೭೪೫-೪೬)

೧೯೮೫ರಲ್ಲಿಯೆ ಪ್ರಕಟವಾದ ‘Tenants’ Movement, Land Legislation and Agraian Change : The Case of Uttara Kannada’ ಎಂಬ, ಅರ್ಥಶಾಸ್ತ್ರದ ಅಧ್ಯಾಪಕರಾದ ಜಿ.ವಿ.ಜೋಶಿಯವರ ಲೇಖನವೊಂದಿದೆ. ಅದೊಂದು ಈ ಹೋರಾಟ ಕುರಿತ ಗಮನಾರ್ಹ ಲೇಖನವಾಗಿದೆ. ಆ ಲೇಖನ ಬರೆಯುವ ಮೊದಲು ಡಾ. ದಿನಕರ ದೇಸಾಯಿ, ಎಸ್.ವಿ. ಪಿಕಳೆ, ದಯಾನಂದ ನಾಡಕರ್ಣಿ, ಬಿ.ಪಿ.ಕದಂ, ಎಂ.ಎಂ. ಜಾಲಿಸತ್ಗಿ, ಪಿ.ಎಸ್.ಕಾಮತ್, ಡಾ. ಸೂರ್ಯನಾಥ ಕಾಮತ್ ಇವರಿಂದೆಲ್ಲ ಅಗತ್ಯವಾದ ಮಾಹಿತಿಗಳನ್ನು ಪಡೆದಿರುವುದಾಗಿ ಲೇಖಕ ಜಿ.ವಿ.ಜೋಷಿಯವರು ಹೇಳಿಕೊಂಡಿದ್ದಾರೆ. ಆದರೆ ಅದರಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಬರವಣಿಗೆ ಇರುವಲ್ಲಿ : “In April 1953, with the object of establishing educational and social welfare institutions in the villages, where the tenant classes lived, Dinakar Desai and his associates foundedthe Kanara Welfare Trust” ಎಂದು ಇದೆ (ನೋಡಿ : Social Science Probings ಎಂಬ ಪತ್ರಿಕೆಯ ಸಂಪುಟ ೨, ಸಂಚಿಕೆ ೩, ಸೆಪ್ಟೆಂಬರ್ ೧೯೮೫ರ ಸಂಚಿಕೆ, ಪುಟ ೩೩೮)

ಪಾಲಿಸಿ, ಪೋಷಿಸಿ ಬೆಳೆಸಿದ ಯಶೋದೆ ಕಡಿಮೆಯವಳಲ್ಲ; ನೆನೆಯಲೇ ಬೇಕಾದವಳು. ಹಾಗೆಂದು ಸಂಕಟ, ಯಾತನೆಯ ಪಾಡುಪಟ್ಟು ಪಡೆದವಳಾದ ದೇವಕಿ ಕಡೆಗಣಿಸಬೇಕಾದವಳಲ್ಲ; ಮರೆಯಬೇಕಾದವಳಲ್ಲ; ಮರೆಸಬೇಕಾದವಳಂತೂ ಅಲ್ಲವೇ ಅಲ್ಲ. ವಿಷ್ಣುನಾಯ್ಕರುಅವರ ‘ದುಡಿಯುವ ಕೈಗಳ ಹೋರಾಟದ ಕತೆ’ಯಲ್ಲಿ ಈ ದೇವಕಿಯನ್ನು ಕಡೆಗಣಿಸಿಲ್ಲ, ಮರೆತಿಲ್ಲ, ಮರೆಸಿಲ್ಲ. ‘ರೈತರೇ ಕಟ್ಟಿದ ಕೆನರಾ ವೆಲ್‌ಫೇರ್ ಟ್ರಸ್ಟ್ ಉದಯ’ ಎಂಬ ೧೪ನೆಯ ಭಾಗದಲ್ಲಿ “ಈ ಸಂಸ್ಥೆಯನ್ನು ಒಂದು ಮಾದರಿ ಸಂಸ್ಥೆಯಾಗಿ, ಬೆಳೆಸುವ ಉದ್ದೇಶ ಮತ್ತು ಉತ್ಸಾಹ ಪಿಕಳೆ ಮಾಸ್ತರರಿಗಿತ್ತು. ಅವರ ಉತ್ಸಾಹಕ್ಕೆ ನಿರ್ವ್ಯಾಜ ಮನೋಭಾವದಿಂದ ದಿನಕರ ದೇಸಾಯಿ ಮತ್ತು ನಾಡಕರ್ಣಿ ಬೆಂಬಲ ನೀಡುತ್ತಿದ್ದರು” (ಪುಟ-೮೧) ಎಂದು ವಿಷ್ಣುನಾಯ್ಕರು ಬರೆದಿದ್ದಾರೆ. ಈ ಪುಸ್ತಕದ ‘ಭೂ ಸುಧಾರಣಾ ಕಾನೂನು ಜಾರಿ’ ಎಂಬ ೪೩ನೆಯ ಭಾಗದಲ್ಲಿ, “ಎಷ್ಟೋ ಸಂದರ್ಭಗಳಲ್ಲಿ ತಳಮಟ್ಟದ ಸಂಘಟನೆಗಾಗಿ ಜೀವ ತೇಯ್ದುಕೊಂಡವರ ಹೆಸರು ಬೇರೆ ಬೇರೆ ಕಾರಣಗಳಿಗಾಗಿ ಪತ್ರಿಕೆಯ ಪುಟಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಉತ್ತ ಕನ್ನಡ ಜಿಲ್ಲೆಯ ಮಟ್ಟಿಗೆ ಸೀಮಿತಗೊಳಿಸಿ ಹೇಳುವುದಾದರೆ ಯಾವ ಪ್ರಚಾರವನ್ನೂ ಬಯಸದೆ ಆ ಮಾದರಿಯ ಕ್ಷೇತ್ರಕಾರ್ಯ ನಡೆಸಿದವರಲ್ಲಿ ಶೇಷಗಿರಿ ವೆಂಕಟರಾವ್ ಪಿಕಳೆ (ಗಿರಿ ಪಿಕಳೆ) ಅವರೇ ಮುಖ್ಯರು. ಸೈದ್ಧಾಂತಿಕ ಬದ್ಧತೆಯುಳ್ಳ ಈ ಜನನಾಯಕರು ನೇಪಥ್ಯದಲ್ಲಿ ನಿಂತೇ ಹೋರಾಟದ ಗುರಿ-ದಾರಿಗಳನ್ನು ತೋರಿಸಿಕೊಟ್ಟವರು.” (ಪುಟ ೨೨೭) ಎಂದು ಬರೆದಿರುವುದೂ ಗಮನಿಸುವಂತಿದೆ.

ಈ ಹೋರಾಟದಲ್ಲಿ ಎಸ್.ವಿ.ಪಿಕಳೆ ಮಾಸ್ತರರ ಪಾತ್ರವನ್ನು ಮತ್ತು ಕೊಡುಗೆಯನ್ನು ತಿಳಿದೂ ಮೆರೆಸುವ ಹುನ್ನಾರ, ಮರೆಯುವ ಜಾಣನಟನೆ, ತಿಳಿಯುವುದಕ್ಕೆ ಆಸಕ್ತಿ ತೋರಿಸದ ಪ್ರಜ್ಞಾಪೂರ್ವಕ ಉಪೇಕ್ಷೆ ವಿಷ್ಣುನಾಯ್ಕರ ‘ದುಡಿಯುವ ಕೈಗಳ ಹೋರಾಟ ಕತೆ’ಯಲ್ಲಿ ಕಾಣಿಸುವುದಿಲ್ಲ. ಪಿಕಳೆಯವರು ೧೯೫೯ರಲ್ಲಿ ಟ್ರಸ್ಟಿನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಪತ್ರ ಕೊಡುವ ಕಾಲಕ್ಕಾಗಲೇ ಟ್ರಸ್ಟಿನ ಆಶ್ರಯದಲ್ಲಿ ಬೇರ ಬೇರೆ ತಾಲೂಕುಗಳಲ್ಲಿ ಕೇವಲ ಆರು ವರ್ಷಗಳೊಳಗೆ ಒಂಬತ್ತು – ಹೈಸ್ಕೂಲುಗಳು ತಲೆಯೆತ್ತಿದ್ದವು ಎಂಬ ಸಂಗತಿಯನ್ನು ಕೂಡ ವಿಷ್ಣುನಾಯ್ಕರು ದಾಖಲಿಸಿದ್ದಾರೆ. ಇದು ಅವರ ಇತಿಹಾಸ ಪ್ರಜ್ಞೆ ಮತ್ತು ಸಹೃದಯತೆಗೆ ಶೋಭೆ ತರುವ ಸಂಗತಿಯಾಗಿದೆ. ೧೯೮೨ರಲ್ಲಿ ಅವರು ಪ್ರಕಟಿಸಿರುವ ಈ ಹೋರಾಟಕ್ಕೆ ಸಂಬಂಧಿಸಿದಂತೆಯೆ ಬರೆದ ‘ಹದ್ದುಪಾರಿನ ಹಿಂದೆ ಮುಂದೆ’ ಎಂಬ ಕಿರುಹೊತ್ತಿಗೆಯನ್ನು ಅವರು ಎಸ್.ವಿ. ಪಿಕಳೆಯವರಿಗೇ ಅರ್ಪಿಸಿರುವುದನ್ನು ಕೂಡ ಇಲ್ಲಿ ನೆನೆಯಬಹುದಾಗಿದೆ.

ಉತ್ತರ ಕನ್ನಡ ಜಿಲ್ಲೆ ಮುಖ್ಯವಾಗಿ ನಮ್ಮ ಅಂಕೋಲಾ ತಾಲೂಕು ೧೯೨೦ರ ದಶಕದಿಂದ ೧೯೭೦ರ ದಶಕದ ಮಧ್ಯದವರೆಗೆ ಅಂದರ ಸುಮಾರು ಐವತ್ತು ವರ್ಷಗಳ ಕಾಲ ನಿರಂತರವಾಗಿ ಹೋರಾಟದ ಕೆಂಡದ ಕೊಂಡ ಹಾದು ಬಂದು ಅದ್ಭುತ ಚರಿತ್ರೆ-ನಿರ್ಮಿಸಿದ್ದು ಈಗ ಇತಿಹಾಸ. ಇಂಥ ಮತ್ತು ಇಷ್ಟು ದೀರ್ಘ ಕಾಲಾವಧಿಯ ನಿರಂತರ ಹೋರಾಟ ಕರ್ನಾಟಕದಲ್ಲಿ ಬೇರೆ ಯಾವ ತಾಲೂಕಿನಲ್ಲಿಯೂ, ಯಾವ ಜಿಲ್ಲೆಯಲ್ಲಿಯೂ ನಡೆಯಲಿಲ್ಲ. ಇಂಥ ಮತ್ತು ಇಷ್ಟು ದೀರ್ಘಕಾಲದ ಜನಾಂದೋಲನದ ಚರಿತ್ರೆ ದೇಶದ ಬೇರೆ ಯಾವ ರಾಜ್ಯದಲ್ಲಿಯೂ ಬಹುಶಃ ಇಲ್ಲ. ಇದು, ಈ ಹೋರಾಟದಲ್ಲಿ ಅತ್ಯಂತ ಮುಖ್ಯ ಪಾತ್ರವಹಿಸಿದ್ದ ನಮ್ಮ ಅಂಕೋಲಾ ತಾಲೂಕಿಗೆ, ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಯಾವ ಕಾಲಕ್ಕೂ ಹೆಮ್ಮೆಯ ಸಂಗತಿಯಾಗಿ ಉಳಿಯುತ್ತದೆ.

ಸ್ವಾತಂತ್ರ್ಯಪೂರ್ವದ ಸರಿಸುಮಾರು ಕಾಲುಶತಮಾನದ ಕಾಲಾವಧಿಯಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯಿತು. ಸ್ವಾತಂತ್ರ್ಯ ಪಡೆಯುವುದಕ್ಕಿಂತ ಸರಿಸುಮಾರು ಒಂದು ದಶಕದಷ್ಟು ಕಾಲದ ಹಿಂದಿನಿಂದಲೆ ದಿನಕರ ದೇಸಾಯಿಯವರ ರೈತ ಹೋರಾಟ ಪ್ರಾರಂಭವಾಗಿತ್ತು. ಅದೊಂದು ಪ್ರಧಾನವಾದ, ಪ್ರಭಾವಶಾಲಿಯಾದ ಹೋರಾಟವಾಗಿ ಬೆಳೆದದ್ದು ಸ್ವಾತಂತ್ರ್ಯಾನಂತರದ ಕಾಲದಲ್ಲಿ, ಅಂದರೆ, ೧೯೪೭ರಿಂದ ಎಸ್.ವಿ. ಪಿಕಳೆ ಮಾಸ್ತರರು ಹೋರಾಟದಲ್ಲಿ ತಮ್ಮನ್ನು ನೇರವಾಗಿ ಮತ್ತು ಹೆಚ್ಚು ಕ್ರಿಯಾಶೀಲವಾಗಿ ತೊಡಗಿಸಿಕೊಂಡ ಮೇಲಿನ ಕಾಲದಲ್ಲಿ.

ಸ್ವಾತಂತ್ರ್ಯ ಹೋರಾಟದಲ್ಲಿ ಅದ್ಭುತ ದೇಶಭಕ್ತಿಯಿಂದ ದೀಪ್ತಗೊಂಡ ಮನಃಸ್ಥಿತಿಯಲ್ಲಿ ತೊಡಗಿಕೊಂಡು ಮನೆ ಮುಟ್ಟುಗೋಲು, ಜಮೀನು ಹರಾಜು, ಕಠಿಣ ಜೈಲುಶಿಕ್ಷೆ ಇವುಗಳನ್ನೆಲ್ಲ ದೃಢ ಸಂಕಲ್ಪಬಲದಿಂದ ಎದುರಿಸಿ ಕರನಿರಾಕಣೆಯ ಹೋರಾಟದಂಥ ಅತ್ಯಂತ ಕಠಿಣವಾದ ಹೋರಾಟವನ್ನು ಕೂಡ ಮಾಡಿ ಅಂಕೋಲಾ ತಾಲೂಕಿಗೆ ಎರಡನೆಯ ಬಾರ್ಡೋಲಿ ಎಂಬ ಖ್ಯಾತಿ ತಂದುಕೊಟ್ಟ ನಾಡವರು ನಮ್ಮ ಅಂಕೋಲಾ ತಾಲೂಕಿನವರೇ ಆದ ದಿನಕರ ದೇಸಾಯಿ ಮತ್ತು ಎಸ್.ವಿ. ಪಿಕಳೆ ಮಾಸ್ತರರು ಸಂಘಟಿಸಿದ್ದ ಈ ರೈತ ಹೋರಾಟದೊಂದಿಗೆ ತಮ್ಮನ್ನು ಗುರುತಿಸಿಕೊಂಡಿರಲಿಲ್ಲ. ಏಕೆ? ಈ ರೈತ ಹೋರಾಟವು ಇಡೀ ಅಂಕೋಲಾ ತಾಲೂಕಿನ, ಇಡೀ ಉತ್ತರ ಕನ್ನಡ ಜಿಲ್ಲೆಯ ಸಮಸ್ತ ರೈತ ಸಮುದಾಯದ ರೈತ ಹೋರಾಟವಾಗಲಿಲ್ಲ, ಏಕೆ? ದಿನಕರ ದೇಸಾಯಿ, ಎಸ್.ವಿ. ಪಿಕಳೆ, ದಯಾನಂದ ನಾಡಕರ್ಣಿ ಅವರುಗಳ ಮುಂದಾಳುತನದ ರೈತ ಹೋರಾಟದ ಚರಿತ್ರಕಾರರು ಈ ಪ್ರಶ್ನೆಗಳನ್ನು ಎದುರಿಸಿ ಉತ್ತರ ಕಂಡುಕೊಳ್ಳುವುದು ಅಗತ್ಯವಾಗುತ್ತದೆ.

ಪ್ರಣಬ್ ಬರ್ಧನ್ ಅವರು ‘ಅಗ್ರೇರಿಯನ್ ಕ್ಲಾಸ್ ಪೊರ್ಮೇಷನ್ ಇನ್ ಇಂಡಿಯಾ’ (೧೯೮೨)

[‘Agrarian class Formation in India’ – 1982] ಎಂಬ ಅವರ ಲೇಖನದಲ್ಲಿ ರೈತ ಹೋರಾಟ ಸಂದರ್ಭದಲ್ಲಿ ಪರಿಗಣನೆಗೆ ಬರುವವರೆಂದು ಭೂ ಮಾಲಿಕರು (Landlords), ಶ್ರೀಮಂತ ರೈತರು (Rich peasants), ಬಡರೈತರು (Poor Peasants), ಭೂರಹಿತ ಕೃಷಿಕೂಲಿ-ಕಾರ್ಮಿಕರು (Landless agricultural labourers) ಎಂದು ವರ್ಗೀಕರಿಸಿರುವುದನ್ನು ಜಿ.ವಿ. ಜೋಶಿಯವರು ತಮ್ಮ ಲೇಖನದಲ್ಲಿ ಉಲ್ಲೇಖಿಸುತ್ತಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ಜಾತಿ-ಜನಸಮೂಹಗಳಾಗಿ ಹೆಚ್ಚು ಕ್ರಿಯಾಶೀಲವಾಗಿ ತೊಡಗಿಸಿಕೊಂಡವರಲ್ಲಿ ಮುಖ್ಯರಾದವರು ನಾಡವರು, ಹವ್ಯಕರು, ಕೊಂಕಣಿಗರು, ಈ ಜಾತಿ-ಜನಸಮೂಹದವರು ದೇಸಾಯಿ, ಪಿಕಳೆಯವರ ನೇತಾರತ್ವದ ಈ ರೈತ ಹೋರಾಟದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲಿಲ್ಲ. ಬಿಡಿ ವ್ಯಕ್ತಿಗಳಾಗಿ ಗುರುತಿಸಿಕೊಂಡವರನ್ನು ಹೆಸರಿಸಬಹುದು. ವಿಷ್ಣುನಾಯ್ಕರ ಪುಸ್ತಕದಲ್ಲಿ ಅಂಥ ಕೆಲವು ವ್ಯಕ್ತಿಗಳ ಪ್ರಸ್ತಾಪವಿದೆ. ಈ ರೈತ ಹೋರಾಟದಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡ ಬಡರೈತ (Poor peasants) ಜಾತಿ-ಜನಸಮೂಹದವರಾದ ಹಾಲಕ್ಕಿ ಒಕ್ಕಲು, ಕೊಮಾರ ಪೈಕರು (ಕೊಮಾರ ಪಂತ?), ಪಡತಿಗಳು, ದೇಸಭಂಡಾರಿಗಳು, ನಾಮಧಾರಿಗಳು- ಇವರೂ ಜಾತಿ-ಜನಸಮೂಹವಾಗಿ ಸ್ವಾತಂತ್ರ್ಯಹೋರಾಟದಲ್ಲಿ ಅಂಕೋಲಾ ತಾಲೂಕಿನ ಮಟ್ಟಿಗಂತೂ ತೊಡಗಿಸಿಕೊಂಡಿರಲಿಲ್ಲ. ಬಿಡಿ ವ್ಯಕ್ತಿ, ಕುಟುಂಬಗಳಾಗಿ ಉಳವರೆ ರಾಮದಾಸ, ಹೊನ್ನದಾಸ ಮೊದಲಾದವರ ಕೆಲವು ಹಾಲಕ್ಕಿ ಒಕ್ಕಲ ಕುಟುಂಬಗಳು ಗುರುತಿಸಿಕೊಂಡದ್ದನ್ನು ಹೆಸರಿಸಬಹುದು. ಹೋರಾಟದ ಚೈತನ್ಯವನ್ನು, ಸತ್ವವನ್ನು ಅದ್ಭುತವಾದ ರೀತಿಯಲ್ಲಿ ಪ್ರಕಟಿಸಿದ್ದ ಈ ಎರಡೂ ಕಡೆಯ ಜಾತಿ ಜನಸಮೂಹಗಳವರಲ್ಲಿಯೆ ಈ ಬಗೆಯಲ್ಲಿ ಎದ್ದು ಕಾಣುವಂಥ ಅಂದರೆ ಸ್ವಾತಂತ್ರ್ಯ ಹೋರಾಟದಲ್ಲಿದ್ದ ಜಾತಿ-ಜನಸಮೂಹಗಳವರಲ್ಲಿಯೆ ಈ ಬಗೆಯಲ್ಲಿ ಎದ್ದು ಕಾಣುವಂಥ ಅಂದರೆ ಸ್ವಾತಂತ್ರ್ಯ ಹೋರಾಟದಲ್ಲಿದ್ದ ಜಾತಿ-ಜನಸಮೂಹ ರೈತ ಹೋರಾಟದಲ್ಲಿರಲಿಲ್ಲ; ರೈತ ಹೋರಾಟದಲ್ಲಿದ್ದ ಜಾತಿ-ಜನಸಮೂಹ ಸ್ವಾತಂತ್ರ್ಯಹೋರಾಟದಲ್ಲಿರಲಿಲ್ಲ ಎಂಬಂಥ ಗುಂಪು ವಿಂಗಡಣೆಯಾದದ್ದಕ್ಕೆ ಕಾರಣವೇನು?

ಭೂಮಾಲೀಕ ವರ್ಗದವರಾದ ಕೊಂಕಣಿಗರು ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡವರಾಗಿದ್ದರೂ ಅದರ ಭಾಗವೇ ಆಗಿದ್ದ ಕರನಿರಾಕರಣೆ ಹೋರಾಟದಲ್ಲಿ ಭಾಗವಹಿಸಿದವರಲ್ಲ, ಅದರ ಪರವಾಗಿ ಸಹಾನುಭೂತಿ ಉಳ್ಳವರೂ ಆಗಿರಲಿಲ್ಲ. ಅದರ ವಿರುದ್ಧ ಕೂಡ ಪ್ರಚಾರ ಮಾಡುತ್ತಿದ್ದರು ಎಂದು ಆ ಹೋರಾಟ ಕುರಿತ ಚರಿತ್ರೆ ದಾಖಲಿಸಿದೆ. [ನೋಡಿ : ಕರನಿರಾಕರಣೆಯ ವೀರಕಥೆ-ರಂಗನಾಥ ದಿವಾಕರ (೧೯೫೫) ಪುಟ ೫೯-೬೦ ; ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು- ಸಂ: ಡಾ. ಸೂರ್ಯನಾಥ ಕಾಮತ, ಸಂಪುಟ ಮೂರು, ಜೋಗಿ ಬೀರಣ್ಣನಾಯಕ, ಶೆಟಗೇರಿ ಅವರ ಲೇಖನ, ಪುಟ ೬೫ (ದ್ವಿತೀಯ ಮುದ್ರಣ ೧೯೯೮.)] ಈ ರೈತ ಹೋರಾಟವು ಹುಟ್ಟಿನಿಂದ ಭೂಮಾಲಿಕ ವರ್ಗದವರಾದ ಕೊಂಕಣಿಗರು ಭಾಗವಹಿಸದೆ ಇದ್ದದ್ದಕ್ಕೆ ವಿವರಣೆಯ ಅಗತ್ಯವಿಲ್ಲ; ಕಾರಣ ಹುಡುಕುವ ಪ್ರಶ್ನೆಯೂ ಇಲ್ಲ. ಅದು ಸ್ಪಷ್ಟವಾಗಿಯೇ ಇದೆ.

ಕರಾವಳಿ ಭಾಗದ ಹವ್ಯಕರನ್ನು ಜಿ.ವಿ. ಜೋಶಿ ಭೂಮಾಲಿಕ ವರ್ಗದಲ್ಲಿ ಸೇರಿಸಿದ್ದಾರೆ. ಘಟ್ಟದ ಮೇಲಿನ ಅಂದರೆ ಕರಾವಳಿಯವರಲ್ಲದ ಅಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದ, ಅದರಲ್ಲಿಯೂ ಕರನಿರಾಕರಣೆ ಹೋರಾಟದಲ್ಲಿಯೂ ಅದ್ಭುತ ರೀತಿಯ ಹೋರಾಟ ನೀಡಿದ್ದ ಸಿದ್ಧಾಪುರ, ಶಿರ್ಶಿ ತಾಲೂಕುಗಳ ಹಾಗೂ ಯಲ್ಲಾಪುರ ತಾಲೂಕಿನ ಹವ್ಯಕ ಜಾತಿ-ಜನಸಮೂಹವನ್ನು ಅಂಕೋಲೆಯ ನಾಡವರು ಮತ್ತು ಕಾರವಾರದ ಕೊಂಕಣ ಮರಾಠರೊಂದಿಗೇ ‘ಶ್ರೀಮಂತ ರೈತ’ ವರ್ಗಕ್ಕೆ ಅವರು ಸೇರಿಸಿದ್ದಾರೆ.

ಪ್ರಣಬ್ ಬರ್ಧನ್ ಅವರು ಶ್ರೀಮಂತ ರೈತ, ಬಡರೈತವರ್ಗಗಳ ನಡುವೆ ‘Family farmers’ ಎಂಬ ವರ್ಗವೊಂದನ್ನು ಹೆಸರಿಸುತ್ತಾರೆ. ಜಿ.ವಿ.ಜೋಶಿಯವರು ಅಂಥ ವರ್ಗವೊಂದು ಅಸ್ತಿತ್ವದಲ್ಲಿದೆ ಎಂಬುದನ್ನು ಒಪ್ಪುವುದಿಲ್ಲ. ತಮ್ಮದು ಹೆಚ್ಚು ವಾಸ್ತವಿಕ ದೃಷ್ಟಿಯ ವರ್ಗೀಕರಣವೆಂದು ಹೇಳಿ ಅಡಿ ಟಿಪ್ಪಣಿಯಲ್ಲಿ ಮಾತ್ರ ಅದನ್ನು ಕಾಣಿಸಿದ್ದಾರೆ. ಅಂಕೋಲೆಯ ನಾಡವರನ್ನು ಶ್ರೀಮಂತ ರೈತ ವರ್ಗದವರೆಂದು ವರ್ಗೀಕರಿಸಿರುವ ಜೋಷಿಯವರಿಗೆ ಆ ವಿಷಯದಲ್ಲಿ ಸ್ಪಷ್ಟ ಗ್ರಹಿಕೆಯೊ, ನಿಲುವೊ ಇದ್ದಂತಿಲ್ಲ. ಅವರ ಆ ಲೇಖನದಲ್ಲಿಯೆ ಬೇರೊಂದು ಕಡೆ ಅಂಕೋಲೆಯ ನಾಡವರನ್ನು ‘Owner farmers’ ಎಂದು ಹೇಳಿದ್ದಾರೆ. (ಪುಟ. ೩೨೦). ‘Rich farmers’, ‘Family farmers’, Owner farmers-ವಿವರ, ವ್ಯಾಖ್ಯೆಗಳಲ್ಲಿ ವ್ಯತ್ಯಾಸವಿದೆ. ಆ ಲೇಖನದಲ್ಲಿಯೆ ನೋಡಬಹುದು.

ನಾಡವರು’ಶ್ರೀಮಂತ ರೈತರಾದ್ದರಿಂದ ಮತ್ತು ಕಟ್ಟಾ ಕಾಂಗ್ರೆಸ್ಸಿಗರೆಂದು ಹೇಳಿಕೊಳ್ಳುವುದರಲ್ಲಿ ಅಪಾರ ಸಂತೋಷ (‘great pleasure’) ಪಡುತ್ತಿದ್ದವರಾದ್ದರಿಂದ ಈ ರೈತ ಹೋರಾಟದೊಂದಿಗೆ ಹೋರಾಟದ ಪ್ರಾರಂಭಿಕ ಹಂತದಲ್ಲಿ ಜೊತೆಗಿದ್ದರೂ ೧೯೪೮ರ ಹೊತ್ತಿಗೆ ರೈತ ಹೋರಾಟದಿಂದ ಬೇರ್ಪಟ್ಟದ್ದಲ್ಲದೆ, ಭೂಮಾಲಿಕರ ಜೊತೆಗೆ ಸೇರಿಕೊಂಡು ಅಂಕೋಲಾ ತಾಲೂಕ ರೈತ ಸಂಘವನ್ನು (ಎಟಿಆರ್‌ಎಸ್) ವಿರೋಧಿಸತೊಡಗಿದರು, ಎಂಬ ಜಿ.ವಿ. ಜೋಶಿಯವರ ಈ ಅಭಿಪ್ರಾಯ, ಹೇಳಿಕೆಗಳನ್ನು ಪೂರ್ಣಸತ್ಯವೆಂದು ನಂಬುವಂತಿಲ್ಲ. ಅದು ಹೆಚ್ಚು ಸಂಕೀರ್ಣವಾದ ಮತ್ತು ಹೆಚ್ಚು ವ್ಯಾಪಕವಾದ ಚರ್ಚೆಯನ್ನು ಆಹ್ವಾನಿಸುವಂಥದಾಗಿದೆ. ಇಲ್ಲಿ ಹೆಚ್ಚಿನ ವಿವರದಲ್ಲಿ ಅಲ್ಲದಿದ್ದರೂ ಸಂಕ್ಷಿಪ್ತವಾಗಿಯಾದರೂ ಚರ್ಚಿಸುವ ಅಥವಾ ಪ್ರಸ್ತಾಪಿಸುವ ಅಗತ್ಯ ಕಾಣುತ್ತದೆ.

ಈ ವರ್ಗೀಕರಣ ಯಾವ ಮಾನದಂಡಗಳನ್ನು ಆಧರಿಸಿ ಆಗಬೇಕು ಎಂಬ ಬಗ್ಗೆ ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯವಿಲ್ಲ. ಅದು. ಜಿ.ವಿ.ಜೋಶಿಯವರಿಗೂ ಗೊತ್ತಿದೆ (ನೋಡಿ-ಪುಟ ೩೧೪) ಅವರಿಗೂ ನಾಡವರನ್ನು ವರ್ಗೀಕರಿಸುವುದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ನಿಲುವೊ, ಗ್ರಹಿಕೆಯೊ ಇಲ್ಲ, ಎಂಬ ಬಗ್ಗೆ ಹಿಂದಿನ ಪ್ಯಾರಾದಲ್ಲಿ ಈಗಾಗಲೇ ಓದುಗರ ಗಮನವನ್ನು ಸೆಳೆದಿದ್ದೇನೆ. ಕರ್ನಾಟಕ ರಾಜ್ಯ ರೈತ ಸಂಘವು ಶ್ರೀಮಂತ ರೈತ ವರ್ಗವೊಂದು ಇದೆ ಎಂಬುದನ್ನೇ ಒಪ್ಪುವುದಿಲ್ಲ. ಅದರ ಅಧ್ಯಕ್ಷರಾಗಿದ್ದ ಹಾಗೂ ಲೋಹಿಯಾವಾದಿ ಸೋಷಿಯಲಿಸ್ಟರಾಗಿದ್ದ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರು ಶ್ರೀಮಂತ ರೈತರು ಎಂಬ ಒಂದು ವರ್ಗ ಅಸ್ತಿತ್ವದಲ್ಲಿದೆ ಎಂಬ ವಾದವನ್ನು ನಿರಾಕರಿಸಿದನ್ನು ಮಾರ್ಕ್ಸ್‌ವಾದೀ ಚಿಂತಕ ಹಾಗೂ ಖ್ಯಾತ ಸಾಹಿತ್ಯ ವಿಮರ್ಶಕ ಜಿ. ರಾಜಶೇಖರ ಅವರು ೧೯೮೨ರಲ್ಲಿ ಪ್ರಕಟಿಸಿದ ‘ಶಿವಮೊಗ್ಗ ರೈತ ಚಳವಳಿಯ ತಾತ್ತ್ವಿಕ ನೆಲೆಗಳು’ ಎಂಬ ಲೇಖನದಲ್ಲಿ ದಾಖಲಿಸಿದ್ದಾರೆ. (ಡಾ. ಯು.ಆರ್. ಅನಂತಮೂರ್ತಿಯವರ ಸಂಪಾದಕತ್ವದ ‘ರುಜುವಾತು’ ಪತ್ರಿಕೆಯ ಅಕ್ಟೋಬರ್-ಡಿಸೆಂಬರ್ ಸಂಚಿಕೆ, ಪುಟ ೩೬೮). ಪ್ರೊ. ನಂಜುಂಡಸ್ವಾಮಿಯವರ ಮತ್ತು ಅವರ ರೈತ ಸಂಘದ ಈ ನಿಲುವು, ಅಭಿಪ್ರಾಯ ಸರ್ವಸಮ್ಮತವೆಂದೇನೂ ಆಗಬೇಕಾಗಿಲ್ಲ. ಅಂಥ ಅಭಿಪ್ರಾಯವೂ ಇದೆ, ಎಂಬುದು ಗಮನಾರ್ಹ. ರಾಜ್ಯದ ಬೇರೆ ಭಾಗಗಳ ನೀರಾವರಿ ಸೌಲಭ್ಯವಿರುವ, ವಾಣಿಜ್ಯ ಬೆಳೆ ಬೆಳೆಯುವ ‘ಶ್ರೀಮಂತ ರೈತ’ರೊಂದಿಗೆ ನಾಡವರನ್ನು ಸಮೀಕರಿಸುವುದು ಸರಿಯಾದೀತೆ? – ಈ ಪ್ರಶ್ನೆ ಜಿ.ವಿ.ಜೋಶಿಯವರಿಂದ ಹೆಚ್ಚಿನ ವಿವರ ನಿರೀಕ್ಷಿಸುತ್ತದೆ.

ಹಿಂದುಳಿದ ಜಾತಿಗಳ ಆಯೋಗದ ಅಧ್ಯಕ್ಷರಾಗಿದ್ದ ಎಲ್.ಜಿ. ಹಾವನೂರರ ಅಧ್ಯಕ್ಷತೆಯ ಎಪ್ಪತ್ತರ ದಶಕದಲ್ಲಿ ಪ್ರಕಟವಾಗಿದ್ದ ‘ಹಾವನೂರ್ ಕಮಿಷನ್’ ವರದಿಯಲ್ಲಿ ಅಂಕೋಲೆಯ, ಒಟ್ಟಿನಲ್ಲಿ ಉತ್ತರ ಕನ್ನಡದ ನಾಡವರನ್ನು ಬಿಸಿಎಂಗಿಂತ ಕೆಳಗಿನ ಬಿಸಿಟಿ ಗುಂಪಿಗೆ ಸೇರಿಸಿದ್ದನ್ನೂ ಇಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ. ಆಗ ಹಾಲಕ್ಕಿ ಒಕ್ಕಲು, ಕುರುಬ ಮುಂತಾದ ಜಾತಿ-ಜನಸಮೂಹದವರನ್ನೂ ಬಿಸಿಟಿ ಗುಂಪಿನಲ್ಲಿಯೆ ವರ್ಗೀಕರಿಸಲಾಗಿತ್ತು. ಇಂಥ ಹಾಗೂ ಮತ್ತಿತರ ವಾಸ್ತವಿಕ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಜಿ.ವಿ.ಜೋಶಿಯವರು ನಾಡವರನ್ನು ಶ್ರೀಮಂತ ರೈತರೆಂದು ಗೃಹೀತ ಹಿಡಿದು ತೀರ್ಮಾನ, ಸಿದ್ಧಾಂತಗಳನ್ನು ರೂಪಿಸಲು ೧೯೮೫ರ ಅವರ ಲೇಖನದಲ್ಲಿ ಮುಂದಾದದ್ದು ಯಾಕೆಂಬುದು ಅರ್ಥವಾಗುತ್ತಿಲ್ಲ. ಈ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಅವರದು ಅವರು ಹೇಳಿಕೊಂಡಿರುವ ‘more realistic scheme’ – ಹೆಚ್ಚು ವಾಸ್ತವಿಕ ದೃಷ್ಟಿ ಅಥವಾ ಯೋಜನೆಯದು ಎಂಬುದಕ್ಕೆ ಅಗತ್ಯವಾದ ಸಮರ್ಥನೆ ದೊರೆಯುವುದಿಲ್ಲ.

ನಾಡವರು ದೇಸಾಯಿ, ಪಿಕಳೆ, ನಾಡಕರ್ಣಿ ತ್ರಯರ ನಾಯಕತ್ವದ ರೈತ ಹೋರಾಟದಲ್ಲಿ ಕ್ರಿಯಾಶೀಲವಾಗಿ ಏಕೆ ತೊಡಗಿಸಿಕೊಳ್ಳಲಿಲ್ಲ? ಅದರ ಬಗ್ಗೆ ವಿರೋಧದ ನಿಲುವನ್ನೊ, ತಟಸ್ಥ ನಿಲುವನ್ನೊ ಏಕೆ ತಳೆದರು? ವಿರೋಧದ ನಿಲುವು ಮೂಲತಃ ಈ ರೈತ ಹೋರಾಟದಮುಕ್ಯ ಗುರಿಯಾದ ‘ಉಳುವವನೇ ಭೂಮಿಯ ಒಡೆಯ’ ಎಂಬ ಹೋರಾಟಕ್ಕೆ ಸಂಬಂಧಿಸಿದ್ದಾಗಿತ್ತೊ ಅಥವಾ ಈ ರೈತ ಹೋರಾಟವು ರಾಜಕೀಯ ಪಕ್ಷಾತೀತವಾದದ್ದಾಗಿರದೆ ಪ್ರಜಾ ಸೋಷಯಲಿಸ್ಟ್ ಪಕ್ಷದ ಚುನಾವಣಾ ರಾಜಕೀಯದೊಂದಿಗೆ ಬೇರ್ಪಡಿಸಿ ನೋಡಲಾಗದಂಥ ಸಂಬಂಧದಲ್ಲಿ ಬೆಸೆದುಕೊಂಡ ಹೋರಾಟವಾಗಿದ್ದರಿಂದ ಉಂಟಾದದ್ದೊ ಎಂಬುದನ್ನು ಹೆಚ್ಚು ವಾಸ್ತವಿಕ ದೃಷ್ಟಿಯಿಂದ ನೋಡಿ ಅರ್ಥಮಾಡಿಕೊಳ್ಳುವ, ವಿಶ್ಲೇಷಿಸುವ, ವ್ಯಾಖ್ಯಾನಿಸುವ ಅಗತ್ಯವಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಕೊಂಕಣಿಗರು, ಹವ್ಯಕರು ಬ್ರಾಹ್ಮಣರಾಗಿದ್ದರೆ ನಾಡವರು ಶೂದ್ರರು ಅಥವಾ ಹಿಂದುಳಿದ ಜಾತಿ-ಜನಸಮೂಹಕ್ಕೆ ಸೇರಿದವರು. ದೇಸಾಯಿ, ಪಿಕಳೆ, ನಾಡಕರ್ಣಿ ನೇತಾರತ್ವದ ರೈತ ಹೋರಾಟದಲ್ಲಿ ನೇತಾರರಾದ ಅವರುಗಳು ಕೊಂಕಣಿ ಬ್ರಾಹ್ಮಣರಾಗಿದ್ದರೂ ಯಾರ ಸಲುವಾಗಿ, ಯಾರ ಪರವಾಗಿ ಹೋರಾಟ ನಡೆಯಿತೂ ಆ ಜಾತಿ-ಜನಸಮುದಾಯದವರಾದ ಹಾಲಕ್ಕಿ ಒಕ್ಕಲು, ಕೊಮಾರ ಪೈಕರು (ಕೊಮಾರ ಪಂತರು?), ಪಡತಿಗಳು, ದೇಸಭಂಡಾರಿಗಳು, ನಾಮಧಾರಿಗಳು ಅ ಕಾಲದ ಸಮಾಜಿಕ ಮೇಲು-ಕೀಳು ಜಾತಿ ವಿಂಗಡಣೆ ಲೆಕ್ಕಾಚಾರದಲ್ಲಿ ನಾಡವರಿಗಿಂತ ಕೆಳಗಿನ ಹಂತದ ಶೂದ್ರರು. ಆರ್ಥಿಕ ಅನುಕೂಲದ ದೃಷ್ಟಿಯಿಂದಲೂ, ಭೂಮಿ ಒಡೆತನದ ಮಾನದಂಡದಿಂದಲೂ ನಾಡವರಿಗಿಂತ ಕಡಿಮೆ ಸ್ಥಿತಿಯಲ್ಲಿದ್ದವರು. ಆದರೆ ಈ ಎರಡೂ ಹೋರಾಟಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡಿರದಿದ್ದ ಪರಿಶಿಷ್ಟ ಜಾತಿ ವರ್ಗಗಳಿಗೆ ಸೇರಿದ ಶೂದ್ರಾತಿಶೂದ್ರರೆಂದು ಪರಿಗಣಿತರಾದ ಭೂರಹಿತ ಜಾತಿ-ಜನಸಮೂಹದವರಿಗಿಂತ ಅವರು ಸಾಮಾಜಿಕವಾಗಿ ಮತ್ತು ಆರ್ಥಿಕ ಸ್ಥಿತಿಯ ದೃಷ್ಟಿಯಿಂದ ಒಂದಷ್ಟು ಮೇಲಿನ ಸ್ಥಿತಿಯಲ್ಲಿದ್ದವರು.

ನಾಡವರು ಸ್ವಾತಂತ್ರ್ಯ ಹೋರಾಟದ ಮಟ್ಟಿಗೆ ಕೊಂಕಣಿಗರು, ಸಿದ್ಧಾಪುರ, ಶಿರ್ಶಿ ಕಡೆಯ ಹವ್ಯಕರ ಜೊತೆಗಿದ್ದು ಹೋರಾಡಿದರೆಂಬುದು ನಿಜ. ಅಂಕೋಲೆಯ ಮಟ್ಟಿಗೆ ಈ ಹೋರಾಟದಲ್ಲಿ ಹವ್ಯಕರಿಗಿಂತ ಕೊಂಕಣಿಗರೆ ನಾಡವರಿಗೆ ಹತ್ತಿರದಲ್ಲಿದ್ದರವರು. ಶಿರ್ಶಿ, ಸಿದ್ಧಾಪುರಗಳಲ್ಲಿದ್ದಂತೆ ಅಂಕೋಲೆಯಲ್ಲಿ ಜಾತಿ-ಜನಸಮೂಹವಾಗಿ ಹವ್ಯಕರ ವಸತಿ, ಸಂಖ್ಯೆ ತೀರಾ ಕಡಿಮೆ. ಹಾಗೆಂದು, ಜಿ.ವಿ.ಜೋಶಿಯವರು ಹೇಳುವಂತೆ ನಾಡವರು ರೈತ ಹೋರಾಟದ ವಿಷಯದಲ್ಲಿ ಭೂಮಾಲಿಕ ಕೊಂಕಣಿಗರ ಪರ ಅಥವಾ ಅವರ ಜೊತೆಗೆ ಇದ್ದರೆಂಬುದು ನಿಜವಲ್ಲ. ದೇಸಾಯಿ, ಪಿಕಳೆಯವರ ರೈತ ಹೋರಾಟಕ್ಕೆ ಭೂಮಾಲಿಕ ವರ್ಗದವರು ತೋರಿದ ವಿರೋಧಕ್ಕೂ, ನಾಡವರು ತೋರಿದ ಪ್ರತಿಕ್ರಿಯೆ ಅಥವಾ ವಿರೋಧಕ್ಕೂ ಸ್ವರೂಪದಲ್ಲಿ ಮತ್ತು ವಿವರದಲ್ಲಿ ವ್ಯತ್ಯಾಸವಿದೆ.

ಸ್ವಾತಂತ್ರ್ಯ ಹೋರಾಟವು ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ. ಅದು ‘ ಭಾರತದ ಭೂಮಿ ಭಾರತೀಯರಾದ ನಮ್ಮದು. ನಾವೇ ಅದರ ಒಡೆಯರು. ಸ್ವಾತಂತ್ರ್ಯ ನಮ್ಮ ಆಜನ್ಮ ಸಿದ್ಧ ಹಕ್ಕು, ಪರಕೀಯರಾದ ನೀವು ಬ್ರಿಟಿಷರು ಭಾರತಬಿಟ್ಟು ತೊಲಗಿ’ ಎಂದು ಬ್ರಿಟಿಷ್ ಸರ್ಕಾರವನ್ನು ವಿರೋಧಿಸಿ ನಡೆಸಿದ ಹೋರಾಟ. ವಿಶಾಲವಾದ, ತಾತ್ವಿಕವಾದ ಅರ್ಥದಲ್ಲಿ ಅದೂ ಭೂಮಿ ಹೋರಾಟವೇ ಎನ್ನಬಹುದು.ಆ ಹೋರಾಟ ಭಾರತೀಯರೆಲ್ಲರಿಗೆ ಜಾತಿ-ಮತ-ಧರ್ಮ, ಪ್ರದೇಶ, ಆರ್ಥಿಕ ಸ್ಥಿತಿಗತಿಯ ಭೇದವಿಲ್ಲದೆ ಸಂಬಂಧಿಸಿದ್ಧಾಗಿತ್ತು. ಅದರ ಕರ್ಣಧಾರತ್ವವನ್ನು ಗಾಂಧೀಜಿಯ ನಾಯಕತ್ವದ ರಾಷ್ಟ್ರೀಯ ಕಾಂಗ್ರೆಸ್ ವಹಿಸಿತ್ತು. ಆ ಕಾಲದಲ್ಲಿ ಮೇಲ್ ಜಾತಿಯವರಾಗಿದ್ದು ಶಿಕ್ಷಣದ ಪರಂಪರೆ ಇದ್ದು, ಇಂಗ್ಲಿಷ್ ವಿದ್ಯಾಭ್ಯಾಸವನ್ನು ಮೊದಲಿಗರಾಗಿ ಪಡೆದ, ಮಧ್ಯಮ ವರ್ಗದ, ಬ್ರಾಹ್ಮಣರು ಸ್ವಾತಂತ್ರ್ಯ ಹೋರಾಟದಲ್ಲಿ ಮುಂದಾಗಿ ಮುಂದಾಳತ್ವದಲ್ಲಿ ನಿಂತು ಅದರಲ್ಲಿ ಮೊದಲಿನಿಂದ ಕೊನೆಯವರೆಗೂ ತೊಡಗಿಸಿಕೊಂಡಿದ್ದವರಾಗಿದ್ದರು.

ನಾಡವರು ಆ ಹೋರಾಟದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪ್ರೇರಣೆ ನೀಡಿದ್ದು ಗಾಂಧೀಜಿ ನಾಯಕತ್ವದ ರಾಷ್ಟ್ರೀಯ ಕಾಂಗ್ರೆಸ್. ಆದರೆ ಆ ಪ್ರೇರಣೆ ಉಂಟಾದದ್ದು ಇಂಗ್ಲಿಷ್ ಶಿಕ್ಷಣ ಪಡೆದ, ಮಧ್ಯಮವರ್ಗದ ಬ್ರಾಹ್ಮಣ ನೇತಾರರ ಮೂಲಕವೇ- ಮುಖ್ಯವಾಗಿ ಧಾರವಾಡದ ಕಡೆಯಿಂದ ಬಂದವರಿಂದ, ಹಳೆಯ ಮೈಸೂರು ಸಂಸ್ಥಾನದ ಕಡೆಯಿಂದ ಬಂದವರಲ್ಲಿಯೂ ಹಲವರು, ಸ್ಥಳೀಯರಾದ ಕೊಂಕಣಿಗ ಕಾಂಗ್ರೆಸ್ಸಿಗರಲ್ಲಿಯೂ ಹಲವರು ಇಂಗ್ಲಿಷ್ ಶಿಕ್ಷಣ ಪಡೆದ, ಮಧ್ಯಮವರ್ಗದ ಬ್ರಾಹ್ಮಣರೇ ಆಗಿದ್ದರು. ಆ ಹಿನ್ನೆಲೆಯಿಂದ ನೋಡಿದಾಗ ನಮ್ಮ ಅಂಕೋಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣೇತರ ಜಾತಿ-ಜನಸಮೂಹದವರಲ್ಲಿ ನಾಡವರು ಮಾತ್ರ ಇಡಿಯಾಗಿ ಉತ್ಸಾಹ, ಅಚಲ ನಿಷ್ಠೆ, ತ್ಯಾಗಶೀಲ ಮನೋಭಾವದಲ್ಲಿ ಆ ಹೋರಾಟದಲ್ಲಿ ತೊಡಗಿಸಿಕೊಂಡದ್ದು ವಿಶೇಷ ಸಂಗತಿಯಾಗಿ ಕಾಣಿಸುತ್ತದೆ. ಬ್ರಾಹ್ಮಣೇತರ ಇತರ ಜಾತಿ-ಜನಸಮೂಹದವರು ಆ ರೀತಿಯಲ್ಲಿ, ಆ ಪ್ರಮಾಣದಲ್ಲಿ ತೊಡಗಿಸಿಕೊಂಡಿರದೇ ಇದ್ದದ್ದು ನಾಡವರು ಮಾತ್ರ ಹಾಗೆ ತೊಡಗಿಸಿಕೊಂಡದ್ದು ಒಂದು ಗಂಭೀರವಾದ ಅಧ್ಯಯನವನ್ನು ಆಹ್ವಾನಿಸುವಂಥ ಸಂಗತಿಯಾಗಿದೆ.