ಇಂದುಧರ ಹೊನ್ನಾಪುರ ಅವರು ಕಾರಣಾಂತರಗಳಿಂದ ಬಂದಿಲ್ಲ. ಆದರಿಂದ ‘ದಲಿತರು ಮತ್ತು ಪರ್ಯಾಯ ರಾಜಕಾರಣ’ ಎಂಬ ಈ ಗೋಷ್ಠಿಯ ಕೇಂದ್ರ ವಿಷಯದ ಮೇಲೆ ಪ್ರಬಂಧ ಮಂಡನೆ ಆಗಲಿಲ್ಲ. ಪರ್ಯಾಯ ರಾಜಕಾರಣ ಕಟ್ಟಬೇಕೆಂದು ಮುಂದಾಗಿರುವ ಮುಖ್ಯರಲ್ಲಿ ಇಂದುಧರ ಅವರೂ ಒಬ್ಬರು ದಲಿತ ಚಿಂತಕರಲ್ಲಿಯೂ ಅವರು ಗಣ್ಯರು. ಈ ಸಂದರ್ಭದಲ್ಲಿ ಅವರ ಚಿಂತನೆಯ ಬಗ್ಗೆ ತಿಳಿಯುವುದು, ಇಂಥ ಪ್ರಜ್ಞಾವಂತರ ಸಭೆಯಲ್ಲಿ ಅವರ ಚಿಂತನೆ ಕುರಿತಂತೆ ಚರ್ಚೆ ನಡೆಯುವುದು ಅಗತ್ಯವಾಗಿತ್ತು; ಉಪಯುಕ್ತವೂ ಆಗುತ್ತಿತ್ತು. ಆ ಪ್ರಬಂಧ ಮಂಡನೆ ಆಗದೇ ಇರುವುದರಿಂದ ಈ ಗೋಷ್ಠಿಗೆ ಸಮಗ್ರತೆ ಬಂದಿಲ್ಲ; ಒಂದು ಬಗೆಯ ಕೊರತೆ ಉಂಟಾಗಿದೆ.

‘ಮಹಿಳೆ ಮತ್ತು ಪರ್ಯಾಯ ರಾಜಕಾರಣ’ ಎಂಬ ವಿಷಯದ ಮೇಲೆ ಡಾ. ಪಿ.ಎಲ್. ಧರ್ಮ ಅವರು ಪ್ರಬಂಧ ಮಂಡಿಸಿದರು. ಅವರ ಪ್ರಬಂಧದ ಬಗ್ಗೆ ಹೆಚ್ಚಿನ ಚರ್ಚೆ ಆಗಲಿಲ್ಲ. ‘ರೈತ ಮತ್ತು ಪರ್ಯಾಯ ರಾಜಕಾರಣ’ ಎಂಬ ವಿಷಯದ ಮೇಲೆ ರಾಜ್ಯ ರೈತ ಸಂಘದ ಅಧ್ಯಕ್ಷ ಶ್ರೀ ಕೆ.ಎಸ್. ಪುಟ್ಟಣ್ಣಯ್ಯನವರು ಪ್ರಬಂಧ ಮಂಡಿಸಲಿಲ್ಲ; ಮಾತನಾಡಿದರು. ಅವರು ಅವರ ಭಾಷಣದಲ್ಲಿ ಪ್ರಸ್ತಾಪಿಸಿದ ಅಂಶಗಳ ಒಳಗೂ ಹೊರಗೂ ಮಹತ್ವದ ಚರ್ಚೆ ನಡೆಯಿತು. ಚರ್ಚೆಯ ಸಂದರ್ಭದಲ್ಲಿ ಮೊಗಳ್ಳಿ ಗಣೇಶ್ ಮೊದಲಾದವರು ಕೆಲವು ಮಹತ್ವದ ಪ್ರಶ್ನೆಗಳನ್ನು ಎತ್ತಿದರು. ಭೂ ರಹಿತ ಕೂಲಿ-ಕಾರ್ಮಿಕ ಜನಸಮೂಹವಾಗಿರುವ ದಲಿತರು ಮತ್ತು ಭೂ ಒಡೆತನದ ರೈತ ಸಮೂಹ ಒಂದೇ ವೇದಿಕೆಯ ಅಡಿಯಲ್ಲಿ ಸಮಾನ ಕಾರಣ/ಸಮಸ್ಯೆಗಳಿಗಾಗಿ ಹೋರಾಟ ಮಾಡುವುದು ನಮ್ಮ ಸಾಮಾಜಿಕ ವಾಸ್ತವದ ಸಂದರ್ಭದಲ್ಲಿ ಹೇಗೆ ಸಾಧ್ಯ? ರೈತ ಸಂಘಗಳು ಮತ್ತು ದಲಿತ ಸಂಘರ್ಷ ಸಮಿತಿಗಳು ಒಟ್ಟುಗೂಡಿ ನಡೆಸಬೇಕೆಂದು ಹೊರಟಿರುವ ಪರ್ಯಾಯ ರಾಜಕಾರಣದ ಸ್ವರೂಪವು ಯಾವ ಬಗೆಯದಾಗಿರುತ್ತದೆ? -ಎಂಬಂಥ ಕೆಲವು ಗಂಭೀರ ಪ್ರಶ್ನೆಗಳ ಸುತ್ತ ಚರ್ಚೆ ಬೆಳೆಯಿತು. ಇಂದುಧರ ಅವರ ಪ್ರಬಂಧ ಮಂಡನೆ ಆಗದೆ ಇದ್ದದ್ದರಿಂದ ಚರ್ಚೆಗೆ ಗೋಷ್ಠಿಯ ಅಧ್ಯಕ್ಷನಾಗಿ ನಾನು ಹೆಚ್ಚಿನ ಕಾಲಾವಕಾಶ ನೀಡುವುದಕ್ಕೆ ಸಾಧ್ಯವಾಯಿತು. ಅದರಿಂದ ಪ್ರಯೋಜನವು ಆಯಿತು. ಆ ಚರ್ಚೆಯ ಭಾಗವೇ ಈ ಗೋಷ್ಠಿಯ ತಿರುಳಿದ್ದಂತೆ ಇತ್ತು.

ಪರ್ಯಾಯ ರಾಜಕಾರಣ ಕಟ್ಟಬೇಕೆಂದು ಮುಂದಾಗಿರುವ ಮುಖ್ಯರಲ್ಲಿ ಪುಟ್ಟಣ್ಣಯ್ಯನವರು ಒಬ್ಬರು. ಅದಕ್ಕೆ ಸಂಬಂಧಿಸಿದಂತೆ ಅವರ ಚಿಂತನೆಗೆ ಮಹತ್ವ ಇದೆ. ಅವರು ಎಂಥ ಚಿಂತನೆಯ ಹಿನ್ನೆಲೆಯಿಂದ ಪರ್ಯಾಯ ರಾಜಕಾರಣ ಕಟ್ಟಲು ಮುಂದಾಗಿದ್ದಾರೆ, ಎಂಬುದು ಸ್ಪಷ್ಟವಾಗಿ ತಿಳಿಯಬೇಕಾದದ್ದು ಅಗತ್ಯ. ಚರ್ಚೆಯ ಸಂದರ್ಭದಲ್ಲಿ ಪ್ರಸ್ತಾಪವಾದ ಎಲ್ಲ ಅಂಶಗಳೂ, ಸೂಚಿತವಾದ ಎಲ್ಲ ಸಲಹೆಗಳೂ ತುಂಬ ಮಹತ್ವದವು, ಒಪ್ಪಲೇಬೇಕಾದಂಥವು ಎಂದೇನಿಲ್ಲ. ಆದರೆ ಅವುಗಳಲ್ಲಿ ಕೆಲವಾದರೂ ಗಂಭೀರ ಪರಿಶೀಲನೆಗೆ, ಚಿಂತನೆಗೆ ಅರ್ಹವಾದವು. ಪುಟ್ಟಣ್ಣಯ್ಯನವರು ಅಂಥವುಗಳನ್ನು ಗಂಭೀರವಾಗಿ ಪರಿಶೀಲಿಸುವುದು ಅಗತ್ಯ, ಉಪಯುಕ್ತ.

ಈ ಗೋಷ್ಠಿಯಿಂದ ನಾನು ಇನ್ನೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದೆ. ಅದು ನಿರೀಕ್ಷಿತ ಪ್ರಮಾಣ ಮತ್ತು ಮಟ್ಟದಲ್ಲಿ ಈಡೇರಲಿಲ್ಲ, ಎಂದು ನನಗೆ ಅನಿಸಿದೆ. ಆದ್ದರಿಂದ ಈ ಗೋಷ್ಠಿಯಲ್ಲಿ ಮಂಡಿತವಾದ ಪ್ರಬಂಧ, ಉಪನ್ಯಾಸಗಳ ಬಗ್ಗೆಯೆ ಪ್ರತ್ಯೇಕವಾಗಿ ಮಾತನಾಡದೆ ಈ ವಿಚಾರ ಸಂಕಿರಣದ ವಿಷಯವಾದ ಪರ್ಯಾಯ ರಾಜಕಾರಣ ಕುರಿತಂತೆ ಈವರೆಗೆ ಇಲ್ಲಿ ಒಟ್ಟಿನಲ್ಲಿ ಪ್ರಸ್ತಾಪವಾದ ಕೆಲವು ಅಂಶಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ಹೇಳುತ್ತೇನೆ. ನೀವು ಒಪ್ಪಲೇಬೇಕೆಂಬ ಹುಂಬ ಹಠ ನನಗಿಲ್ಲ, ಅವುಗಳನ್ನು ಒಪ್ಪಬೇಕೆ, ಒಪ್ಪಬಹುದೆ ಎಂಬಂಥ ಪ್ರಶ್ನೆಗಳನ್ನು ಗಂಭೀರವಾಗಿ ಕೇಳಿಕೊಂಡು ಆ ಬಗ್ಗೆ ನಿಮ್ಮದೇ ತೀರ್ಮಾನ ಕೈಗೊಳ್ಳುವುದಕ್ಕೆ ಅದು ಆಹ್ವಾನಿಸುವಂತಾದರೆ ಸಾಕು.

ನಿನ್ನೆಯಿಂದ ಈ ವಿಚಾರ ಸಂಕಿರಣದಲ್ಲಿ ನಡೆದ ಎಲ್ಲಾ ಭಾಷಣಗಳನ್ನೂ ಮಂಡಿಸಿದ ಎಲ್ಲಾ ಪ್ರಬಂಧಗಳನ್ನೂ ನಡೆದ ಎಲ್ಲಾ ಚರ್ಚೆಗಳನ್ನೂ ಸಭೆಯಲ್ಲಿದ್ದು ಕೇಳಿಸಿಕೊಂಡಿದ್ದೇನೆ. ಕೇಂದ್ರದ ಮಾಜಿ ಮಂತ್ರಿ ಶ್ರೀನಿವಾಸ ಪ್ರಸಾದ್ ಅವರು ಉದ್ಘಾಟನಾ ಭಾಷಣ ಮಾಡಿದರು. ಈಗ ಬೇಕಾಗಿರುವುದು ಪರ್ಯಾಯ ರಾಜಕಾರಣವಲ್ಲ ; ಪರ್ಯಾಯ ರಾಜಕೀಯ ವ್ಯವಸ್ಥೆ ಎಂಬುದು – ನಾನು ಗ್ರಹಿಸಿರುವಂತೆ – ಅವರು ಪ್ರಸ್ತಾಪಿಸಿದ ಮುಖ್ಯ ಅಂಶವಾಗಿತ್ತು.

ಇಂಥ ಮಾತು, ಇಂಥ ಅಭಿಪ್ರಾಯ ಹೊಸತೇನಲ್ಲ ; ಬೇರೆ ಬೇರೆಯವರು, ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ರೀತಿಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆದರೂ ದೀರ್ಘಕಾಲದ ವಾಸ್ತವ ರಾಜಕಾರಣದ ಅನುಭವ ಇರುವ ಶ್ರೀನಿವಾಸ ಪ್ರಸಾದ್ ಅಂಥವರು ಈ ವಿಷಯವನ್ನು ಪ್ರಸ್ತಾಪಿಸಿದಾಗ ಅದನ್ನು ಗಂಭೀರವಾಗಿಯೆ ಪರಿಶೀಲಿಸಬೇಕಾಗುತ್ತದೆ.

ರಾಮಕೃಷ್ಣಹೆಗಡೆಯವರು ಈಗಿರುವ ಸಂಸದೀಯ ಪದ್ಧತಿಯ ರಾಜಕೀಯ ವ್ಯವಸ್ಥೆಯ ಬದಲು ಅಧ್ಯಕ್ಷೀಯ ಪದ್ಧತಿಯ ರಾಜಕೀಯ ಪರ್ಯಾಯ ವ್ಯವಸ್ಥೆಯ ಪರ ಇದ್ದಂತಿಲ್ಲ. ವಾಜಪೇಯಿ, ಆಡ್ವಾನಿ ಬಳಗದ ಬಿಜೆಪಿ ನೇತೃತ್ವದ ಎನ್.ಡಿ.ಎ. (ನ್ಯಾಷನಲ್ ಡೆಮೊಕ್ರೆಟಿಕ್ ಅಲಿಯನ್ಸ್) ಸರ್ಕಾರ ಕೇಂದ್ರದಲ್ಲಿ ಆಳುತ್ತಿದ್ದಾಗ ಹಿಂದೂ ರಾಷ್ಟ್ರದ ಪರಿಕಲ್ಪನೆಯರಾಜ್ಯ ವ್ಯವಸ್ಥೆಯ ಪರ ಒಲವುಳ್ಳದಾಗಿತ್ತು. ಅದರ ಭಾಗವಾಗಿ ಸಂವಿಧಾನ ಮರುಪರಿಶೀಲನೆ ಕುರಿತು ಚಿಂತನೆ ನಡೆಸಿ ಆ ಬಗ್ಗೆ ವರದಿ ಸಲ್ಲಿಸಲೆಂದು ಒಂದು ಸಮಿತಿಯನ್ನು ನೇಮಿಸಿತ್ತು. ಶ್ರೀನಿವಾಸ್ ಪ್ರಸಾದ್ ಅವರು ಆ ಎನ್.ಡಿ.ಎ. ಸರ್ಕಾರದ ಸಹಭಾಗಿತ್ವದ ರಾಜಕೀಯ ಪಕ್ಷವೊಂದರ ಸದಸ್ಯರಾಗಿದ್ದವರು. ಆ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು. ಸಂವಿಧಾನ ಮರುಪರಿಶೀಲನೆಗೆ ಸಂಬಂಧಿಸಿದಂತೆ ಆ ಸರ್ಕಾರದ ನಿಲುವಿಗೆ, ತೀರ್ಮಾನಕ್ಕೆ ಅವರ ವಿರೋಧವೇನೂ ಇರಲಿಲ್ಲ. ಅದಕ್ಕೆ ಅವರು ಬದ್ಧರಾಗಿದ್ದರು. ಅದರ ಪರವಾಗಿಯೆ ಅವರು ಸಾರ್ವಜನಿಕವಾಗಿಯೂ ಮಾತನಾಡಿದ್ದುಂಟು.

ಎನ್.ಡಿ.ಎ. ಸರ್ಕಾರದ ಸಂವಿಧಾನ ಮರುಪರಿಶೀಲನೆಯ ಹಿಂದೆ ಮತಧರ್ಮೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬಗೆಗಿನ ಒಲವಿತ್ತು. ನಮ್ಮ ದೇಶದ ಈಗಿರುವ ಸಂವಿಧಾನ ಪ್ರತಿಪಾದಿಸುವ ಸೆಕ್ಯುಲರ್, ಸೋಷಿಯಲಿಸ್ಟ್ ಅಂದರೆ ಜಾತಿ – ಮತಧರ್ಮ ನಿರಪೇಕ್ಷ ಸಮಾಜವಾದೀ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕಡೆ ಒಲವಿರಲಿಲ್ಲ. ಶ್ರೀನಿವಾಸ ಪ್ರಸಾದ್ ಮತಧರ್ಮೀಯ ಪ್ರಜಾಪ್ರಭುತ್ವದ ಪರ್ಯಾಯ ವ್ಯವಸ್ಥೆಯ ಪರ ಇದ್ದವರಲ್ಲ ; ಇರುವವರೂ ಅಲ್ಲ, ಎಂಬುದು ನನ್ನ ನಂಬಿಕೆ. ಆದರೂ ನಮ್ಮ ದೇಶದ ಈಗಿರುವ ಸಂವಿಧಾನದ ಬಗ್ಗೆ ಅವರಿಗೆ ಪೂರ್ಣ ಒಪ್ಪಿಗೆ ಇಲ್ಲ ; ಅತೃಪ್ತಿ ಇದೆ. ಆ ಅತೃಪ್ತಿ ಯಾಕೆ, ಯಾವ ಕಾರಣಕ್ಕೆ ಎಂಬುದು ಸ್ಪಷ್ಟವಾಗಲಿಲ್ಲ.

ಶ್ರೀನಿವಾಸ ಪ್ರಸಾದ್ ಅವರು ಎನ್.ಡಿ.ಎ. ಸರ್ಕಾರದಲ್ಲಿ ಕೇಂದ್ರದಲ್ಲಿ ಮಂತ್ರಿಯಾಗಿದ್ದ ಕಾಲದಲ್ಲಿ ಮೈಸೂರಿನ ಸಿ.ಎಫ್.ಟಿ.ಆರ್. ಐನ ದಲಿತ ಉದ್ಯೋಗಿಗಳ ಸಂಘದ ಅಂಬೇಡ್ಕರ್ ಜಯಂತಿ ಸಮಾರಂಭವೊಂದರಲ್ಲಿ ಅವರೂ ನಾನೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದೆವು. ನನ್ನ ಭಾಷಣದಲ್ಲಿ ಸಂವಿಧಾನ ಮರುಪರಿಶೀಲನೆಗೆ ಎನ್.ಡಿ.ಎ. ಸರ್ಕಾರ ಸಮಿತಿ ನೇಮಿಸಿದ ಬಗ್ಗೆ, ನೇಮಿಸಿದ ರೀತಿಯ ಬಗ್ಗೆ, ಸರಳ ಬಹುಮತವೂ ಇಲ್ಲದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನ ಮರುಪರಿಶೀಲನಾ ಸಮಿತಿಯ ರಚನೆಗ ರಾಷ್ಟ್ರಪತಿಯವರ ಒಪ್ಪಿಗೆ ಪಡೆದ ವಿಧಾನದ ಬಗ್ಗೆ, ಅದರ ಹಿಂದಿರುವ ಮತಧರ್ಮವಾದೀ ರಾಜಕೀಯ ವ್ಯವಸ್ಥೆಯ ಹುನ್ನಾರದ ಬಗ್ಗೆ ನಾನು ಮಾತನಾಡಿದ್ದೆ. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕಟುವಾಗಿ ಟೀಕಿಸುವ, ಆಗ ಕೇಂದ್ರದ ಮಂತ್ರಿಯಾಗಿದ್ದ ಅರುಣ್ ಶೌರಿ ಅವರ ‘Worshipping False Gods’ (‘ಹುಸಿ ದೇವರುಗಳ ಪೂಜೆ’) ಪುಸ್ತಕದ ಬಗ್ಗೆ ಹಾಗೂ ಬಾಬರಿ ಮಸೀದಿ ಒಡೆಯುವುದಕ್ಕೆ, ಅಣುಬಾಂಬು ಸ್ಫೋಟ ಮಾಡುವುದಕ್ಕೆ ಆರಿಸಿಕೊಂಡ ದಿನ, ದಿನಾಂಕಗಳ ಬಗ್ಗೆ – ಒಟ್ಟಿನಲ್ಲಿ ಸರ್ಕಾರದ / ಸಂಘ ಪರಿವಾರದ ಮುಸ್ಲಿಂ ವಿರೋಧಿ ಮಾತ್ರವಲ್ಲ ಡಾ. ಅಂಬೇಡ್ಕರ್ ಮತ್ತು ದಲಿತ ವಿರೋಧಿ ನಿಲುವಿನ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡಿದ್ದೆ.

ನನ್ನ ಭಾಷಣದ ಆನಂತರ ಮಾತನಾಡಿದ್ದ ಶ್ರೀನಿವಾಸ್ ಪ್ರಸಾದ್ ಅವರು ಎನ್.ಡಿ.ಎ. ಸರ್ಕಾರದ ಸಂವಿಧಾನ ಮರುಪರಿಶೀಲನೆಯನ್ನು ಸಮರ್ಥಸುವ ಧಾಟಿಯಲ್ಲಿಯೆ ಮಾತನಾಡಿದ್ದರು. ದಲಿತರಿಗೆ ಅನ್ಯಾಯವಾಗುವಂಥ ಅಂಶಗಳೇನಾದರೂ ವರದಿಯಲ್ಲಿದ್ದರೆ ಅದನ್ನು ವಿರೋಧಿಸುತ್ತೇನೆ; ವರದಿ ಬರಲಿ ನೋಡೋಣ, ಎಂದಿದ್ದರು. ಡಾ. ಅಂಬೇಡ್ಕರ್ ಅವರ ಅಧ್ಯಕ್ಷತೆಯ ಅಥವಾ ಅವರ ನೇತಾರತ್ವದಲ್ಲಿ ರಚನೆಯಾದ ಭಾರತದ ಸಂವಿಧಾನದಲ್ಲಿ ದಲಿತರಿಗೆ ದತ್ತವಾಗಿರುವ ‘ನ್ಯಾಯ’ ಅಥವಾ ‘ಸಾಮಾಜಿಕ ನ್ಯಾಯ’ಕ್ಕಿಂತ ಹೆಚ್ಚಿನದೇನಾದರೂ ಸಂವಿಧಾನ ಮರುಪರಿಶೀಲನೆಯಿಂದಾಗಿ ದೊರೆಯಬಹುದೆಂದು ಶ್ರೀನಿವಾಸ ಪ್ರಸಾದ್ ಅವರ ನಿರೀಕ್ಷೆ ಇತ್ತೆ? ಅಥವಾ ಅವರಲ್ಲಿ ಅಂಥ ನಿರೀಕ್ಷೆ ಇದೆಯೇ? ಇದ್ದರೆ ಅದು ಯಾವುದು? ಡಾ. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಸಂವಿಧಾನ ಪ್ರತಿಪಾದಿಸುವ ರಾಜಕೀಯ ವ್ಯವಸ್ಥೆ ಸರಿಯಾಗಿಲ್ಲ; ಪರ್ಯಾಯ ವ್ಯವಸ್ಥೆಯ ಅಗತ್ಯ ಇದೆ ಎಂದೇನಾದರೂ ಅವರು ಹೇಳುತ್ತಿದ್ದಾರೆಯೇ? ಹೌದಾದರೆ ಆ ವ್ಯವಸ್ಥೆ ಯಾವುದು? ಅದರ ಸ್ವರೂಪವೇನು?

ನಿನ್ನೆ ಅವರ ಭಾಷಣದಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆಯ ಅಗತ್ಯದ ಬಗ್ಗೆ ಮಾತನಾಡುತ್ತಾ ಈಗಿರುವ ರಾಜಕೀಯ ವ್ಯವಸ್ಥೆಯಲ್ಲಿಯೇ ತಪ್ಪೇನಾದರೂ ಇದೆಯೆ, ಸಂವಿಧಾನದಲ್ಲಿ ತಪ್ಪುಗಳೇನಾದರೂ ಇವೆಯೆ? ಸಂವಿಧಾನವನ್ನು ಬಳಸಿಕೊಂಡ ರೀತಿಯಲ್ಲಿಯೇ ಏನಾದರೂ ತಪ್ಪಾಗಿದೆಯೆ – ಎಂಬಂಥ ಪ್ರಶ್ನೆಗಳನ್ನು ಕೇಳಿಕೊಂಡು ಉದ್ದಕ್ಕೂ ಅವರು ಗಂಭೀರವಾಗಿಯೆ ಮಾತನಾಡಿದರು; ಪರ್ಯಾಯ ರಾಜಕೀಯ ವ್ಯವಸ್ಥೆಯ ಅಗತ್ಯವನ್ನು ಪ್ರತಿಪಾದಿಸಿದರು. ಆದರೂ ನಿರ್ದಿಷ್ಟವಾಗಿ ಯಾವ ಸ್ವರೂಪದ ಪರ್ಯಾಯ ರಾಜಕೀಯ ವ್ಯವಸ್ಥೆಯ ಪರಿಕಲ್ಪನೆ ಅವರ ಚಿಂತನೆಯ ಹಿಂದೆ ಇದೆ, ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಾಗಲಿಲ್ಲ.

ದೇಶದ ರಾಜಕಾರಣ ಗಬ್ಬೆದ್ದು ಹೋಗಿದೆ. ಈ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಶ್ರೀನಿವಾಸ ಪ್ರಸಾದ್ ಅವರೂ ಅವರ ಭಾಷಣದಲ್ಲಿ ರಾಜಕಾರಣ ಗಬ್ಬೆದ್ದು ಹೋಗಿದೆ ಎಂದರು. ನಾವು ನೀವೂ ಎಲ್ಲರೂ ಈ ವಿಷಯದಲ್ಲಿ ಏಕಾಭಿಪ್ರಾಯ ಉಳ್ಳವರೇ ಆಗಿದ್ದೇವೆ. ಹೀಗೆ ಗಬ್ಬೆದ್ದು ಹೋಗಿರುವ ಸ್ಥಿತಿ ಉಂಟಾಗಿರುವುದರಿಂದ ಪರ್ಯಾಯ ರಾಜಕಾರಣದ ಅಗತ್ಯ ಉಂಟಾಗಿದೆ, ಎಂಬುದು ಪರ್ಯಾಯ ರಾಜಕಾರಣದ ಮಾತನಾಡುತ್ತಿರುವವರ ಸಾಮಾನ್ಯ ಅಭಿಪ್ರಾಯವಾಗಿದೆ ಎಂಬುದು ನಿಜ.

ಹೀಗೆ ರಾಜಕಾರಣ ಗಬ್ಬೆದ್ದು ಹೋಗಿರುವುದಕ್ಕೆ ಕಾರಣ ಅಥವಾ ಕಾರಣಗಳು ಏನು? ಈವರೆಗೆ ರಾಜಕಾರಣ ಮಾಡುತ್ತ, ಆಡಳಿತ ನಡೆಸುತ್ತ ಬಂದ ರಾಜಕಾರಣಿಗಳು ಕಾರಣವೊ ಅಥವಾ ಬೇರೆ ಏನಾದರೂ ಕಾರಣ ಅಥವಾ ಕಾರಣಗಳು ಇವೆಯೊ, ಎಂಬುದು ಪ್ರಶ್ನೆಯಾಗಿದೆ.

ನಾವು ಒಪ್ಪಿರುವ ರಾಜಕೀಯ ವ್ಯವಸ್ಥೆಯೇ ಅದಕ್ಕೆ ಕಾರಣ ಎಂದು ಹೇಳುವವರು ಕಳೆದ ಅರ್ಥ ಶತಮಾನಕ್ಕಿಂತ ಹೆಚ್ಚು ಕಾಲದಿಂದ ದೇಶದ ಆಡಳಿತವನ್ನು ನಡೆಸುತ್ತ, ಆ ಪ್ರಕ್ರಿಯೆಯಲ್ಲಿ ಪಾಲುದಾರರಾಗುತ್ತ ಬಂದ ರಾಜಕಾರಣಿಗಳ ಮೇಲೆ ನೇರ ಆರೋಪ ಹೊರಿಸುವುದಿಲ್ಲ. ಸ್ವಾತಂತ್ರ್ಯಾನಂತರದ ಕಾಲದಲ್ಲಿ ನಾವು ಒಪ್ಪಿಕೊಂಡು ಬಂದ ರಾಜಕೀಯ ವ್ಯವಸ್ಥೆಯ ಮೇಲೆಯೇ ಅವರು ಹೆಚ್ಚಿನ ಹೊಣೆ ಹೊರಿಸುತ್ತಾರೆ. ಶ್ರೀನಿವಾಸ ಪ್ರಸಾದ್ ಅವರ ಚಿಂತನೆಯ ಧಾಟಿ, ಧೋರಣೆ ಆ ಬಗೆಯದಾಗಿ ನನಗೆ ತೋರಿತು. ಮತಧರ್ಮೀಯ ರಾಜ್ಯ ವ್ಯವಸ್ಥೆಯ ಪರವಾದಿಗಳ ಹಾಗೆ ಅಥವಾ ಮಾರ್ಕ್ಸ್‌ವಾದಿಗಳ ರೀತಿಯಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆ ಕುರಿತು ಯಾವುದೇ ಒಂದು ನಿರ್ದಿಷ್ಟ ರಾಜಕೀಯ ವಿಚಾರವಾದದ ಅಂದರೆ ‘ಪೊಲಿಟಿಕಲ್ ಐಡಿಯೊಲಜಿ’ಯ ಹಿನ್ನೆಲೆಯಿಂದ ಶ್ರೀನಿವಾಸ ಪ್ರಸಾದ್ ಯೋಚಿಸುತ್ತಿರುವಂತೆಯೂ ಕಾಣಲಿಲ್ಲ.

ನಮ್ಮ ಈಗಿನ ರಾಜಕೀಯ ವ್ಯವಸ್ಥೆಯ ನಿರೂಪಣೆ ನಮ್ಮ ಸಂವಿಧಾನದಲ್ಲಿದೆ. ಅದರ ಪ್ರಸ್ತಾವನೆಯಲ್ಲಿ, ನಮ್ಮ ಈಗಿನ ರಾಜಕೀಯ ವ್ಯವಸ್ಥೆಯ ನಿರೂಪಣೆಯಾಗಿರುವ ಸಂವಿಧಾನವು ಭಾರತದ ಸಮಗ್ರ ಜನತೆ ತಮಗೆ ತಾವೆ ಕೊಟ್ಟುಕೊಂಡ ಆಡಳಿತ ಸಂಹಿತೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಯಾರೇ ಯಾವುದೇ ರಾಜಕೀಯ ಅಧಿಕಾರ ವಹಿಸಿಕೊಳ್ಳುವಾಗ ಸಂವಿಧಾನಕ್ಕೆ ನಿಷ್ಠೆ ವ್ಯಕ್ತಪಡಿಸುವ ಪ್ರಮಾಣ ವಚನವನ್ನು ಸ್ವೀಕರಿಸಬೇಕಾಗುತ್ತದೆ.

ಇಂದು ದೇಶದ ರಾಜಕಾರಣ ಗಬ್ಬೆದ್ದು ಹೋಗಿದ್ದಕ್ಕೆ, ರಾಜಕಾರಣಿಗಳು ಭ್ರಷ್ಟರಾಗಿದ್ದಕ್ಕೆ, ಜನ ಹೊಣೆಗೇಡಿಗಳಾಗಿ ನಡೆದುಕೊಳ್ಳುವಂತಾಗಿದ್ದಕ್ಕೆ ಈಗಿರುವ ಸಂವಿಧಾನ ಮತ್ತು ಅದು ನಿರೂಪಿಸುವ ರಾಜ್ಯ ವ್ಯವಸ್ಥೆಯೇ ಕಾರಣ; ಆದ್ದರಿಂದ ಸಂವಿಧಾನದಲ್ಲಿ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಯಾದರೆ ಮಾತ್ರ ಈ ಗಬ್ಬೆದ್ದು ಹೋಗಿರುವ ಸ್ಥಿತಿಯಿಂದ ಹೊರಗೆ ಬರಬಹುದು, ಎಂಬುದು ರಾಜಕೀಯ ವ್ಯವಸ್ಥೆಯ ಬದಲಾವಣೆಯಲ್ಲಿಯೇ ಪರ್ಯಾಯ ರಾಜಕಾರಣದ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತಿರುವವರ ಅಭಿಪ್ರಾಯ ಎಂದಾಗುತ್ತದೆ. ಇಂಥ ಯೋಚನಾಕ್ರಮಕ್ಕೆ ಸಮರ್ಥನೆ ಇದೆಯೆ?

ದೇಶದ ಸಮಗ್ರ ಜನತೆಯ ಹೆಸರಿನಲ್ಲಿ ಸಂವಿಧಾನ ಇದೆಯಾದರೂ ವಾಸ್ತವದಲ್ಲಿ ಆ ಸಂವಿಧಾನವನ್ನು ಜನತೆ ರಚಿಸಿದ್ದಲ್ಲ; ಸಮಗ್ರ ಜನೆ ಸಂವಿಧಾನ ರಚಿಸುವುದು ಸಾಧ್ಯವೂ ಇಲ್ಲ. ಜನತೆಯ ಪರವಾಗಿ ಜನಪ್ರತಿನಿಧಿ ರಾಜಕಾರಣಿಗಳು, ಆ ಜನಪ್ರತಿನಿಧಿ ರಾಜಕಾರಣಿಗಳು ಆಯ್ಕೆ ಮಾಡಿದ ಸಂವಿಧಾನ ತಜ್ಞರು ದೇಶದ ಸಂವಿಧಾನವನ್ನು, ಆ ಮೂಲಕ ದೇಶದ ರಾಜಕೀಯ ವ್ಯವಸ್ಥೆಯನ್ನು ರೂಪಿಸಿದವರಾಗಿದ್ದಾರೆ; ನಿರೂಪಿಸಿದವರಾಗಿದ್ದಾರೆ. ಕಾನೂನು ದೃಷ್ಟಿಯಿಂದ ಅದು ಸಮಗ್ರ ಜನತೆಯ ಆಶೋತ್ತರಗಳನ್ನು ಪ್ರತಿನಿಧಿಸುವಂಥದೇ ಆಗಿರುತ್ತದೆ ;ಜನತೆ ತನಗೆ ತಾನೆ ಕೊಟ್ಟುಕೊಂಡದ್ದಾಗಿರುತ್ತದೆ. ಆದ್ದರಿಂದ ರಾಜಕಾರಣಿಗಳು ಮಾತ್ರವಲ್ಲ, ಅವರೂ ಸೇರಿದಂತೆ ದೇಶದ ಸಮಗ್ರ ಜನತೆ ಅದರ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ; ಆ ಸಂವಿಧಾನಕ್ಕೆ ಸಂಪೂರ್ಣ ನಿಷ್ಠೆಯಿಂದ ನಡದುಕೊಳ್ಳಬೇಕಾಗುತ್ತದೆ. ಆ ಸಂವಿಧಾನ ಪ್ರತಿಪಾದಿಸುವ ರಾಜಕೀಯ ವ್ಯವಸ್ಥೆಯನ್ನು ಸಂವಿಧಾನ ರಚನಾ ಸಮಿತಿಯೊ, ಸಂವಿಧಾನ ತಜ್ಞರೊ ದೇಶಕ್ಕೆ ನೀಡಿದ್ದೊ, ಸೂಚಿಸಿದ್ದೊ ಅಲ್ಲ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಕಲ್ಪಿಸಿಕೊಂಡಿದ್ದ ಸ್ವತಂತ್ರ ಭಾರತದ ರಾಜ್ಯವ್ಯವಸ್ಥೆಯಾದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಾರತದ ವಾಸ್ತವ ಸಂದರ್ಭದ ವಿವೇಕದಲ್ಲಿ ಆ ಕಾಲದ ತಜ್ಞರು, ಪ್ರಾಜ್ಞರು ರೂಪಿಸಿದ್ದು ಆ ಸಂವಿಧಾನ, ರಾಷ್ಟ್ರೀಯ ಕಾಂಗ್ರೆಸ್ಸಿನ ಹಾಗೂ ಅದರ ಪ್ರಶ್ನಾತೀತ ನೇತಾರರಾಗಿದ್ದ ಗಾಂಧೀಜಿಯವರ ನಿಲುವು, ಚಿಂತನೆಗಳನ್ನು ಉದ್ದಕ್ಕೂ ವಿರೋಧಿಸುತ್ತ ಬಂದ ಡಾ. ಅಂಬೇಡ್ಕರ್ ಅವರೂ ಈ ರಾಜಕೀಯ ವ್ಯವಸ್ಥೆಯನ್ನು ಒಪ್ಪಿಯೇ ರೂಪಿಸಿದ ಸಂವಿಧಾನ ಅದು. ಈ ಅಂಶವನ್ನು ಸರಿಯಾಗಿ ಗ್ರಹಿಸಬೇಕು.

ನವೆಂಬರ್ ೬, ೨೦೦೪ರಂದು ತಮಿಳುನಾಡಿನ ‘ಪುತಿಯ ತಮಿಝಗಂ’ದ (‘Puthiya Tamizagam’) ಸ್ಥಾಪಕ ಅಧ್ಯಕ್ಷರೂ, ತಮಿಳುನಾಡಿನ ಮಾಜಿ ಶಾಸನಸಭಾ ಸದಸ್ಯರೂ ಆದ ಡಾ. ಕೆ.ಕೃಷ್ಣಸ್ವಾಮಿ, ಎಂ.ಡಿ. ಅವರು ನನಗ ಫ್ಯಾಕ್ಸ್ ಮೂಲಕ ಒಂದು ಪತ್ರ ಕಳಿಸಿದ್ದರು. ‘Self Determination of S.C’s / S.T’s for Democracy at Groass Root Level’ ಎಂಬ ವಿಷಯದ ಮೇಲೆ ೪-೬, ಡಿಸೆಂಬರ್ ೨೦೦೪ರಂದು ನವದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ವಿಚಾರ ಸಂಕಿರಣಕ್ಕೆ ಬಂದು ಭಾಗವಹಿಸಬೇಕೆಂದು ನನ್ನನ್ನು ಆಹ್ವಾನಿಸಿದ್ದರು. ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರದ (Sepatate Electrorate) ಬಗ್ಗೆ ಹಕ್ಕೊತ್ತಾಯ ಮಾಡುವುದು, ಆ ಕುರಿತ ಹೇಳಿಕೆಯನ್ನು ಬಿಡುಗಡೆ ಮಾಡುವುದು ಆ ವಿಚಾರ ಸಂಕಿರಣದ ಉದ್ದೇಶ ಎಂದು ತಿಳಿಸಿದ್ದರು. ಅವರ ಆ ಆಭಿಪ್ರಾಯ, ನಿಲುವಿನ ಬಗ್ಗೆ ನನ್ನ ಸಹಮತ ಇಲ್ಲದ್ದರಿಂದ ಆ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ನನ್ನ ಒಪ್ಪಿಗೆ ಇಲ್ಲ, ಎಂದು ಫ್ಯಾಕ್ಸ್ ಮೂಲಕವೇ ನವೆಂಬರ್ ೮, ೨೦೦೪ ರಂದು ನಾನು ತಿಳಿಸಿದ್ದೆ. ಆ ವಿಚಾರ ಸಂಕಿರಣ ನಡೆಯಿತೆ ಇಲ್ಲವೆ ಎಂಬುದು ನನಗೆ ಆಮೇಲೆ ಗೊತ್ತಾಗಲಿಲ್ಲ.

ದಲಿತ ನಾಯಕರಾದ ಶ್ರೀನಿವಾಸ ಪ್ರಸಾದ್ ಅವರು ಪರ್ಯಾಯ ರಾಜಕೀಯ ವ್ಯವಸ್ಥೆಯನ್ನು ಪ್ರತಿಪಾದಿಸುವಾಗ ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರದ ಬಗ್ಗೆ ಡಾ. ಕೃಷ್ಣಸ್ವಾಮಿಯಂಥವರ ಹಾಗೆ ಏನಾದರೂ ಯೋಚಿಸುತ್ತಿದ್ದಾರೆಯೆ ಎಂಬುದೂ ಗೊತ್ತಾಗಲಿಲ್ಲ. ಅವರು ಅಂಥ ಪರ್ಯಾಯ ವ್ಯವಸ್ಥೆಯ ಬಗ್ಗೆ ಬಹುಶಃ ಯೋಚಿಸುತ್ತಿಲ್ಲ. ಹಾಗೇನಾದರೂ ಯೋಚಿಸಿದ್ದರೆ ಅವರು ಅದನ್ನು ಸಭೆಯ ಮುಂದಿಡುತ್ತಿದ್ದರು.

ಡಾ. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿರಲು ಒಪ್ಪಿದ್ದು, ಸಂವಿಧಾನ ರಚಿಸಿದ್ದು ‘ಪುಣೆ ಒಪ್ಪಂದ’ದ (Poona Pact) ಆನಂತರದ ಕಾಲದಲ್ಲಿ, ಅಂದರೆ ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರ ಬೇಕು ಎಂಬ ಅವರ ಹಕ್ಕೊತ್ತಾಯವನ್ನು ಬಿಟ್ಟುಕೊಟ್ಟು ದಲಿತರ ಹಿತಾಸಕ್ತಿಗೆ ಸಂಬಂಧಿಸಿದ ಇತರ ಹಲವು ಅವಕಾಶ, ಸೌಲಭ್ಯಗಳನ್ನು ಅವರು ಪಡೆದಂಥ, ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ನಡುವಿನ ಒಪ್ಪಂದದ ಆನಂತರದ ಕಾಲದಲ್ಲಿ. ಈ ಅಂಶವನ್ನೂ ಮರೆಯಬಾರದು.ಸ

ಯಾವ ಕಾರಣಕ್ಕೇ ಆಗಲಿ ಆಮರಣ ಉಪವಾಸ ಮಾಡುವುದು ಪ್ರಜಾಸತ್ತಾತ್ಮಕ ಮನೋಧರ್ಮಕ್ಕೆ ಸಂಗತವಾದದ್ದಲ್ಲ ಎಂಬ ಡಾ. ಲೋಹಿಯಾ ಅವರ ಅಭಿಪ್ರಾಯದ ಬಗ್ಗೆ ನನ್ನ ಸಹಮತವಿದೆ. ಆದರೂ ಗಾಂಧೀಜಿಯ ಆ ಆಮರಣ ಉಪವಾಸದ ಹಿಂದಿದ್ದ ಉದ್ದೇಶವು ರಾಜಕೀಯ ಮುತ್ಸದ್ದಿತನದ್ದು ಮಾತ್ರವಲ್ಲ ದಾರ್ಶನಿಕ ದೂರದರ್ಶಿತ್ವದ್ದಾಗಿತ್ತೆಂದೂ ನಾನು ತಿಳಿದಿದ್ದೇನೆ. ಆ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅವರು ತಳೆದ ನಿಲುವು, ಅವರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಕೂಡ ಮಹಾಮುತ್ಸದ್ದಿಯ ರಾಜಕೀಯ ವಿವೇಕದ್ದಾಗಿತ್ತೆಂದೂ ನಾನು ತಿಳಿದಿದ್ದೇನೆ. ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಇಬ್ಬರಿಂದಲೂ ಆ ಒಪ್ಪಂದದ ಮೂಲಕ ದಲಿತರಿಗೆ ಮತ್ತು ಒಟ್ಟಿನಲ್ಲಿ ದೇಶಕ್ಕೆ ಚಾರಿತ್ರಿಕ ಮಹತ್ವದ ಹಿತಸಾಧನೆ ಆಯಿತೆಂದು ನಾನು ಭಾವಿಸಿದ್ದೇನೆ. ಗಾಂಧೀಜಿಯನ್ನು ಆ ವಿಷಯದಲ್ಲಿ ಆಕ್ಷೇಪಿಸುವುದಾಗಲಿ, ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರದ ಮರುಹಕ್ಕೊತ್ತಾಯ ಮಾಡುವುದಾಗಲಿ ಸರಿಯೆಂದು ನನಗೆ ಅನಿಸುವುದಿಲ್ಲ. ಅದರಿಂದ ದಲಿತರಿಗಾಗಲಿ, ಸಮಗ್ರ ದೇಶಕ್ಕಾಗಲಿ ಒಳ್ಳೆಯದಾಗುತ್ತಿತ್ತು ಅಥವಾ ಒಳ್ಳೆಯದಾದೀತು ಎಂಬ ವಾದ ಸರಿಯಾದದ್ದಲ್ಲ. ಆ ಸಂದರ್ಭದ ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಅವರು ಸಾಮಾನ್ಯ ರಾಜಕಾರಣಿಗಳ (Politicians) ರೀತಿಯಲ್ಲಿ ನಡೆದುಕೊಳ್ಳದೆ ಮಹಾ ರಾಜನೀತಿಜ್ಞರ (Statesmen) ರೀತಿಯಲ್ಲಿ, ಮಹಾ ಮಾನವತಾವಾದಿಗಳ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲದ ಭಾರತದ ರಾಜಕೀಯವು ಈ ಅಭಿಪ್ರಾಯವನ್ನು ಪುಷ್ಟೀಕರಿಸುತ್ತದೆ. ಆ ಬಗ್ಗೆ ನಾನು ಇಲ್ಲಿ ಮಾತು ಬೆಳೆಸುವುದಿಲ್ಲ.

ದೇಶದ ಸಂವಿಧಾನಕ್ಕೆ ರಾಜಕಾರಣಿಗಳು ಸಮಗ್ರ ಜನತೆ ಸಂಪೂರ್ಣ ನಿಷ್ಠೆಯಿಂದ ನಡೆದುಕೊಂಡು ಬಂದಿದ್ದರೂ ಪರಿಸ್ಥಿತಿ ಗಬ್ಬೆದ್ದು ಹೋಗಿದೆ ಎಂಬುದು ನಿಜವಾಗಿದ್ದರೆ ಆಗ ನಮ್ಮ ದೇಶದ ಸಂವಿಧಾನದಲ್ಲಿಯೇ, ನಮ್ಮ ರಾಜಕೀಯ ವ್ಯವಸ್ಥೆಯಲ್ಲಿಯೇ ದೋಷವಿದೆ; ಆ ಕಾರಣದಿಂದಲೇ ದೇಶದ ರಾಜಕೀಯ ಗಬ್ಬೆದ್ದು ಹೋಗಿದೆ, ಎಂಬ ತೀರ್ಮಾನಕ್ಕೆ ಬರಬಹುದಾಗಿತ್ತು. ಆದರೆ ಹಾಗಾಗಿದೆಯೇ?

ಭ್ರಷ್ಟಚಾರ ಎಲ್ಲ ದೇಶಗಳಿಗೂ ಸಾಮಾನ್ಯವಾದ ಪಿಡುಗು. ಒಂದು ದೇಶದಲ್ಲಿ ಅದರ ಪ್ರಮಾಣ ಹೆಚ್ಚು. ಇನ್ನೊಂದರಲ್ಲಿ ಅದರ ಪ್ರಮಾಣ ಕಡಿಮೆ. ಒಂದು ಕಾಲದಲ್ಲಿ ಹೆಚ್ಚು. ಇನ್ನೊಂದು ಕಾಲದಲ್ಲಿ ಅದರ ಪ್ರಮಾಣ ಕಡಿಮೆ ಅಷ್ಟೆ. ಸಂಪೂರ್ಣ ಭ್ರಷ್ಟಾಚಾರ ಮುಕ್ತ ದೇಶ ಎಂಬುದಾಗಲಿ, ಸಂಪೂರ್ಣ ಭ್ರಷ್ಟಾಚಾರಮುಕ್ತ ರಾಜಕಾರಣಿಗಳೆಂಬವರಾಗಲಿ, ಸಂಪೂರ್ಣ ಭ್ರಷ್ಟಚಾರಮುಕ್ತ ಜನತೆ ಎಂಬುದಾಗಲಿ ಇಲ್ಲ; ಇರಲಿಲ್ಲ; ಇರುವುದು ಸಾಧ್ಯವೂ ಇಲ್ಲ. ಏನಿದ್ದರೂ ಅದು ಸಾಪೇಕ್ಷ ವ್ಯತ್ಯಾಸದ ಮಾತಷ್ಟೆ. ಈ ಮಾತು ಕಟು ಸತ್ಯವಾದರೂ ಅದು ವಾಸ್ತವ ಎಂಬುದನ್ನು ಅರಿತಿರಬೇಕು. ಎಲ್ಲಿಯವರೆಗೆ ಮನುಷ್ಯರು ಲೌಕಿಕರಾಗಿರುತ್ತಾರೆಯೊ ಅಲ್ಲಿಯವರೆಗೆ ಅದು ಅಷ್ಟೊ ಇಷ್ಟೊ ಇರುವಂಥದೇ. ಕ್ರಿ.ಪೂ. ೪೦೦ರ ಸುಮಾರಿನ ಪ್ರಾಜ್ಞ ಪ್ಲೇಟೋ ಅವನ ‘ಗಣರಾಜ್ಯ’ (‘Republic’)ದಲ್ಲಿಯೆ ಕಾಲ, ಜನ ಕೆಟ್ಟು ಹೋಗಿದ್ದಾರೆಂದು ಹೇಳಿರುವುದುಂಟು. ಹಾಗೆ ನೋಡಿದರೆ ರಾಜಕೀಯ ವ್ಯವಸ್ಥೆ ಅದು ಯಾವುದೇ ಆಗಿರಲಿ, ಅದು ಲೌಕಿಕ ವ್ಯವಸ್ಥೆಯೆ ಆಗಿರುತ್ತದೆ; ಲೌಕಿಕರಾಗಿರುವ ಮನುಷ್ಯ ಸಾಮಾನ್ಯರಿಗೆ ಸಂಬಂಧಿಸಿದ್ದೇ ಆಗಿರುತ್ತದೆ. ಆದ್ದರಿಂದ ಭ್ರಷ್ಟಾಚಾರದ ಪ್ರಮಾಣವನ್ನು ತೀರಾ ಕಡಿಮೆ ಪ್ರಮಾಣಕ್ಕೆ ಇಳಿಸುವ ಕಡೆಗೆ ಅದರ ಸೂಚ್ಯಂಕವನ್ನು ತೀರಾ ಕನಿಷ್ಠಾಂಶದ ಕಡೆಗೆ ತಳ್ಳುವುದರತ್ತ ನಮ್ಮ ಪ್ರಯತ್ನ, ಸಂಕಲ್ಪ ಇರಬೇಕಾಗುತ್ತದೆ, ಅಷ್ಟೇ. ಭ್ರಷ್ಟಾಚಾರವನ್ನು ಸಂಪೂರ್ಣ ಅಳಿಸಿ ಹಾಕುತ್ತೇವೆ ಎಂಬುದು ಕನಸಿನ ಸ್ವರ್ಗದ ಅಂದರೆ ‘ಉಟೋಪಿಯಾ’ದ ಮಾತು.

ಭ್ರಷ್ಟಾಚಾರ ಎಂಬುದು ಲಂಚ, ರುಷುವತ್ತುಗಳ ವ್ಯವಹಾರಕ್ಕೆ ಮಾತ್ರವೆ ಸಂಬಂಧಿಸಿದ್ದಲ್ಲ; ಸೀಮಿತವಾದದ್ದಲ್ಲ. ಅದೇನೊ ಇದ್ದೇ ಇದೆ. ಲಂಚ, ರುಷುವತ್ತುಗಳ ಭ್ರಷ್ಟಾಚಾರ ವ್ಯಕ್ತಿ ಸ್ವಾರ್ಥಕ್ಕೆ, ವ್ಯಕ್ತಿಗಳ ‘ಶೀಲದೋಷ’ಕ್ಕೆ ಸಂಬಂಧಿಸಿದ್ದು. ನಮ್ಮ ದೇಶದ ಚರಿತ್ರೆಯಲ್ಲಿ ‘ವ್ಯಕ್ತಿ ಶೀಲದೋಷ’ದ ಭ್ರಷ್ಟಾಚಾರಕ್ಕಿಂತ ‘ಸಮೂಹಶೀಲದೋಷ’ದ ಭ್ರಷ್ಟಾಚಾರ ಹೆಚ್ಚು ಭಯಂಕರವಾಗಿ ನಡೆದುಕೊಂಡು ಬಂದಿದೆ. ಮನುಷ್ಯ ಮನುಷ್ಯರಲ್ಲಿ ಭೇದ, ಹುಟ್ಟಿನಿಂದ ಮೇಲು-ಕೀಳು ಎಣಿಸುವ ಲಿಂಗ ತಾರತಮ್ಯ ಮತ್ತು ಜಾತಿ -ವರ್ಣಗಳು, ಮತಧರ್ಮಗಳ ನಂಬಿಕೆ, ಅವುಗಳ ನಡುವಿನ ಸ್ಪರ್ಧೆ-ದ್ವೇಷ, ಅವುಗಳನ್ನು ವೈಯಕ್ತಿಕ ಸ್ವಾರ್ಥಕ್ಕೆ, ಜಾತಿ-ಮತಧರ್ಮ ಮೂಲವಾದ ನಿರ್ದಿಷ್ಟ ಜನಸಮೂಹದ ಸ್ವಾರ್ಥಕ್ಕೆ ಬಳಸಿಕೊಳ್ಳುವ ಹುನ್ನಾರ – ಇವುಗಳಲ್ಲಿ ಭ್ರಷ್ಟಾಚಾರದ ಬಲವಾದ ಬೇರುಗಳಿವೆ. ವ್ಯಕ್ತಿ ಸ್ವಾರ್ಥ ಮೂಲ ಭ್ರಷ್ಟಾಚಾರಿಗಳನ್ನು ಕೂಡ ತಮ್ಮ ಜಾತಿಯಲ್ಲೊ, ತಮ್ಮ ಮತಧರ್ಮದಲ್ಲೊ ಹುಟ್ಟಿದವರೆಂಬ ಕಾರಣಕ್ಕೇ ರಕ್ಷಿಸುವ, ಪೋಷಿಸುವ ಕವಚವಾಗಿಯೂ ಗುರಾಣಿಯಾಗಿಯೂ ಈ ಜಾತಿ-ಮತ ಧರ್ಮಗಳ ನಂಬಿಕೆ, ನಿಷ್ಠೆ, ಸ್ವಜನ ಪಕ್ಷಪಾತಗಳು ಕೆಲಸ ಮಾಡುತ್ತವೆ; ಹಾಗೆ ಮಾಡುತ್ತ ಬಂದಿವೆ.

ವ್ಯಕ್ತಿ ಶೀಲದೋಷ ಮೂಲ ಭ್ರಷ್ಟಾಚಾರವನ್ನು ಬಹಿರಂಗವಾಗಿ ಮಾಡುವುದಕ್ಕೆ ಒಂದಷ್ಟು ನಾಚಿಕೆ, ಭಯ ಈಗಲೂ ಸಂಬಂಧಪಟ್ಟವರಲ್ಲಿ ಉಳಿದುಕೊಂಡು ಬಂದಿವೆ; ಕದ್ದು ಮುಚ್ಚಿ ಮಾಡಲು ದಾರಿ ಹುಡುಕುತ್ತಿರುತ್ತಾರೆ. ಆದರೆ, ಸಮೂಹ ಶೀಲಭ್ರಷ್ಟತೆಯ ಮೂಲದ ಅಂದರೆ ಜಾತಿ-ಮತಧರ್ಮವೇ ಮೂಲ ಕಾರಣವಾದ ಭ್ರಷ್ಟಾಚಾರವನ್ನು ಬಹಿರಂಗವಾಗಿ ಮಾಡುವುದಕ್ಕೆ ಜನರಲ್ಲಿ ನಾಚಿಕೆಯಾಗಲಿ, ಭಯವಾಗಲಿ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಜಾತಿ-ಮತ ಧರ್ಮದ ಹೆಸರಿನಲ್ಲಿ ನಡೆಯುವ ಸಮೂಹ ಶೀಲದೋಷದ ಬಗ್ಗೆ ಬಹಿರಂಗದಲ್ಲಿಯೂ ನಾಚಿಕೆಯಾಗದಂಥ, ಅಂತರಂಗದಲ್ಲಿಯೂ ಅಪರಾಧೀಭಾವ ಕಾಡದಂಥ ಮನಸ್ಸಿನ ಸ್ಥಿತಿ ಎಲ್ಲೆಲ್ಲೂ ಎಲ್ಲರಲ್ಲೂ ಕಾಣಿಸುತ್ತಿದೆ.ಅಪವಾದ ರೂಪದ ವ್ಯಕ್ತಿಗಳೊ ಸಂಸ್ಥೆಗಳೊ ಇಲ್ಲವೇ ಇಲ್ಲ ಎಂಬಂತಿಲ್ಲ. ಅವುಗಳ ಪ್ರಮಾಣ ತೀರಾ ಕಡಿಮೆ.

ಇನ್ನೊಂದು ಜಾತಿ-ಮತಧರ್ಮದವರ ಬಗ್ಗೆ ಅಂತಃಕರಣದ ಸಂವೇದನೆಯೆ ಮೊಂಡುಬಿದ್ದು ಹೋಗಿರುವಂಥ ಮನೋಧರ್ಮ ವಿಜೃಂಬಿಸುತ್ತಿದೆ. ಅದು ತನ್ನ ಪಾತಳಿಯನ್ನು ದಿನೇದಿನೇ ಹೆಚ್ಷಿಸಿಕೊಳ್ಳುತ್ತಲೇ ಹೋಗುತ್ತಿದೆ. ನಮ್ಮ ದೇಶದ ಸಂವಿಧಾನ ಪ್ರತಿಪಾದಿಸುವ ಜಾತಿ-ಮತ-ಧರ್ಮ ನಿರಪೇಕ್ಷತೆ (Secularism), ಸೋದರತೆ (Fraternity) ಮೊದಲಾದ ಪದಗಳು ಕ್ರಿಯಾಶೀಲ ಪರಿಕಲ್ಪನೆಗಳಾಗದೆ ಹೆಸರಿಗೆ ಮಾತ್ರ ಇರುವ ಶಬ್ದಗಳಾಗಿ ತತ್ವ, ಸತ್ವ ಎರಡನ್ನೂ ಕಳೆದುಕೊಳ್ಳುತ್ತಿವೆ. ದೇಶದ ಬಗೆಗಿನ ಪ್ರೇಮ, ನಿಷ್ಠೆಗಿಂತ, ಜಾತಿ-ಮತಧರ್ಮಗಳ ಬಗೆಗಿನ ಪ್ರೇಮನಿಷ್ಠೆ ದಿನೇ ದಿನೇ ಜನರಲ್ಲಿ ಬೆಳೆಯುತ್ತಿದೆ ಅಥವಾ ಬೆಳೆದಂತೆ ತೋರಿಸಿಕೊಳ್ಳಲಾಗುತ್ತಿದೆ. ನಿಜವಾಗಿ ನೋಡಿದರೆ ಅಂಥವರಲ್ಲಿ ಹೆಚ್ಚು ಜನಕ್ಕೆ ದೇಶದ ಬಗ್ಗೆಯಾಗಲಿ, ಜಾತಿ-ಮತಧರ್ಮದ ಬಗ್ಗೆಯಾಗಲಿ ನಿಜವಾದ ಪ್ರೇಮವೊ, ಕಾಳಜಯೊ ಇಲ್ಲ; ವೈಯಕ್ತಿಕ ಸ್ವಾರ್ಥಕ್ಕಾಗಿ ಜಾತಿ-ಮತಧರ್ಮದ ಹೆಸರನ್ನು ಬಳಸಿಕೊಳ್ಳುವ ಧೂರ್ತತನ ಮಾತ್ರ ಇದೆ.

ಭಾರತದ ಸಂವಿಧಾನ ರಚನಾ ಸಮಿತಿ ಸಿದ್ಧಪಡಿಸಿದ ಸಂವಿಧಾನದ ಕರಡನ್ನು ಸಂವಿಧಾಮ ರಚನಾಸಭೆ (Constituent Assembly) ೨೫, ೨೬ ನವೆಂಬರ್ ೧೯೪೯ರ ಸಭೆಗಳಲ್ಲಿ ಚರ್ಚಿಸಿ ೨೬.೧೧.೧೯೪೯ರಂದು ಅಂಗೀಕರಿಸಿತು. ಆ ಸಂದರ್ಭದಲ್ಲಿ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ರಚನಾಸಭೆಯ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್ ಅವರು ಹೇಳಿದ ಮಾತುಗಳ ಸ್ವಲ್ಪ ಭಾಗವನ್ನು ಗೊತ್ತಿದ್ದವರಿಗೆ ಇಲ್ಲಿ ನೆನಪಿಸುತ್ತೇನೆ; ಗೊತ್ತೇ ಇಲ್ಲದಿದ್ದವರಿಗೆ ಅವರ ಗಮನಕ್ಕೆ ತರುತ್ತೇನೆ :

“I feel, however good a constitution may be, it is sure to turn out to be bad because those who are called to work it, happen to be a bad lot. However bad a constitution may be, it may turn out be good if those who are called to work it, happen to be a good lot. Then working of a constitution does not depend wholly upon the nature of the constitution. The constitution can provide only organs of state such as the legislature, the executive and the judiciary. The factor on which working of those organs of State depend are the people and the political parties they will set up as their instruments to carry on their wishes and their politics. Who can say how the people of India and their parties will behave?

…In addition to our old enemies in the form of castes and creeds we are going to have political parties with diverse and opposing political creeds. Will Indians place the country above their creed or will they place creed above country? I do not know. But this much is certain that if the parties place creed above country, our independence will be put in jeopardy a second time and probably be lost for ever. This eventuality we must resolutely guard against. We must be determined to defend our independence with the last drop of our blood.”

[“ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಬಳಸುವವರು ಕೆಟ್ವರಾಗಿದ್ದರೆ ಅದು ನಿಶ್ಚಿತವಾಗಿ ಕೆಡುತ್ತದೆ. ಸಂವಿಧಾನ ಎಷ್ಟೇ ಕೆಟ್ಟದ್ದಾಗಿದ್ದರೂ ಅದನ್ನು ಬಳಸುವವರು ಒಳ್ಳೆಯವರಾಗಿದ್ದರೆ ಅದು ನಿಶ್ಚಿತವಾಗಿ ಉತ್ತಮವಾಗುತ್ತದೆ ಎಂಬುದು ನನ್ನ ಭಾವನೆ. ಸಂವಿಧಾನದ ಬಳಕೆ ಅದರ ಸ್ವರೂಪವನ್ನೇ ಇಡಿಯಾಗಿ ಅವಲಂಬಿಸಿಲ್ಲ. ಸಂವಿಧಾನವು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಂಥ ರಾಜ್ಯದ ಅಂಗಗಳನ್ನು ಮಾತ್ರ ಒದಗಿಸುತ್ತದೆ. ರಾಜ್ಯದ ಈ ಅಂಗಗಳು ಕೆಲಸ ಮಾಡುವ ಅಂಶಗಳು ಜನತೆ ಹಾಗೂ ಅವರು ತಮ್ಮ ಆಶಯ ಮತ್ತು ರಾಜಕೀಯಗಳನ್ನು ನಡೆಸಲು ನಿಯೋಜಿಸುವ ರಾಜಕೀಯ ಪಕ್ಷಗಳನ್ನು ಅವಲಂಬಿಸಿವೆ. ಭಾರತದ ಜನತೆ ಮತ್ತು ರಾಜಕೀಯ ಪಕ್ಷಗಳವರು ಹೇಗೆ ವರ್ತಿಸುತ್ತಾರೆ ಎಂದು ಯಾರು ಹೇಳಬಲ್ಲರು?

…ಜಾತಿ ಮತ್ತು ಮತಗಳ ರೂಪದ ನಮ್ಮ ಹಳೆಯ ಶತ್ರುಗಳ ಜತೆಗೆ ವೈವಿಧ್ಯಮಯವೂ ಪರಸ್ಪರ ವಿರೋಧಿಗಳೂ ಆಗಿರುವ ಹಲವು ರಾಜಕೀಯ ಪಕ್ಷಗಳನ್ನು ನಾವು ಪಡೆಯಲಿದ್ದೇವೆ. ಭಾರತೀಯರು ತಮ್ಮ ದೇಶವನ್ನು ಮತಕ್ಕಿಂತ ಮೇಲೆ ಇಡಬಲ್ಲರೆ ಅಥವಾ ಮತವನ್ನು ದೇಶಕ್ಕಿಂತ ಮೇಲೆ ಇಡುತಾರೆಯೆ? ನನಗೆ ಗೊತ್ತಿಲ್ಲ. ಆದರೆ ಪಕ್ಷಗಳು ತಮ್ಮ ರಾಜಕೀಯ ತತ್ತ್ವ (Political creed)ವನ್ನು ದೇಶಕ್ಕಿಂತ ಮೇಲೆ ಇಟ್ಟಲ್ಲಿ ನಮ್ಮ ಸ್ವಾತಂತ್ರ್ಯಕ್ಕೆಕ ಎರಡನೆಯ ಬಾರಿ ಧಕ್ಕೆಯಾಗುತ್ತದೆ, ನಾವು ಅದನ್ನು ಬಹುಶಃ ಶಾಶ್ವತವಾಗಿ ಕಳೆದುಕೊಳ್ಳುತ್ತೇವೆ. ಈ ಅನಾಹುತವಾಗದಂತೆ ದೃಢ ಸಂಕಲ್ಪ ಮಾಡಿ ಕಾಯ್ದುಕೊಳ್ಳಬೇಕು. ನಮ್ಮ ರಕ್ತ ಕೊನೆಯ ಹನಿ ಇರುವವರೆಗೆ ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದಕ್ಕೆ ನಾವು ದೃಢಸಂಕಲ್ಪ ಉಳ್ಳವರಾಗಬೇಕು.”]

ಡಾ. ಬಿ.ಆರ್. ಅಂಬೇಡ್ಕರ್

“If the people who are elected are capable and men of character and integrity and they would be able to make the best even of a defective constitution. If they are lacking in these, the constitution cannot help the country…. India needs today nothing more than a set of honest men who will have the interest of country before them…… We have communal differences, caste diffferences, language differences, provincial differences and so forth. It requires men of strong character, men of vision, men who will not sacrifice the interest of the country at large for the sake of smaller groups and areas and who will rise over the prejudices which are born of these differences. We can only hope that the country will throw up such men in abundance”

[“ಚುನಾಯಿತರಾದವರು ಸಮರ್ಥರೂ ಶೀಲವಂತರೂ ವ್ಯಕ್ತಿತ್ವದ ಘನತೆಯುಳ್ಳವರೂ ಆಗಿದ್ದಲ್ಲಿ ದೋಷಯುಕ್ತ ಸಂವಿಧಾನದಿಂದಲೂ ಅವರು ಅತ್ಯತ್ತಮ ಪ್ರಯೋಜನವನ್ನು ಪಡೆಯಬಲ್ಲರು. ಅವರಲ್ಲಿ ಅವೇ ಇಲ್ಲದಿದ್ದಲ್ಲಿ ಸಂವಿಧಾನವು ದೇಶವನ್ನು ಕಾಪಾಡಲಾರದು. ದೇಶದ ಹಿತವನ್ನು ತಮ್ಮ ಎದುರು ಇರಿಸಿಕೊಂಡಿರುವ ಅಂಥ ಪ್ರಾಮಾಣಿಕ ವ್ಯಕ್ತಿಗಳ ತಂಡಕ್ಕಿಂತ ಹೆಚ್ಚಿನದೇನೂ ಇಂದು ಭಾರತಕ್ಕೆ ಅಗತ್ಯವಿಲ್ಲ… ನಮ್ಮಲ್ಲಿ ಕೋಮು ಭಿನ್ನತೆಗಳಿವೆ, ಜಾತಿ ಭಿನ್ನತೆಗಳಿವೆ, ಭಾಷಾ ಭಿನ್ನತೆಗಳಿವೆ, ಪ್ರಾಂತೀಯ ಭಿನ್ನತೆಗಳಿವೆ ಮತ್ತು ಏನೇನೊ ಇವೆ. ಅವನ್ನು ಎದುರಿಸಲು ಸಣ್ಣ ಗುಂಪು, ಪ್ರದೇಶಗಳಿಗಾಗಿ ಸಮಸ್ತ ದೇಶದ ಹಿತವನ್ನು ಬಲಿಕೊಡದಿರುವ, ಅಂಥ ಬಿನ್ನಭಿಪ್ರಾಯಗಳಿಂದ ಹುಟ್ಟುವ ಪೂರ್ವಾಗ್ರಹಗಳನ್ನು ಮೀರಬಲ್ಲಂಥ ಶಕ್ತಿಶಾಲಿ ಶೀಲವಂತ ದಾರ್ಶನಿಕ ವ್ಯಕ್ತಿಗಳ ಅಗತ್ಯ ಇದೆ. ಅಂಥ ವ್ಯಕ್ತಿಗಳನ್ನು ದೇಶ ಸಮೃದ್ಧವಾಗಿ ನೀಡುತ್ತದೆ ಎಂದು ಮಾತ್ರ ಆಶಿಸಬಹುದು.”]

ಡಾ. ರಾಜೇಂದ್ರ ಪ್ರಸಾದ್

ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ರಾಜೇಂದ್ರ ಪ್ರಸಾದ್ ಅವರುಗಳ ಅಂದಿನ ಆತಂಕ, ಭಯ ನಿಜವಾಗಿ, ಅವರ ಆಶಾವಾದ ಹುಸಿಯಾಗಿರುವಂಥ ಕಾಲಸಂದರ್ಭದಲ್ಲಿ ನಾವಿಂದು ಇದ್ದೇವೆ.