ಮಿತ್ರರೇ,

‘ಜನಮನ’ ದ ಮಿತ್ರರಾದ ನೀವು ರಾಷ್ಟ್ರೀಯ ರಂಗಕರ್ಮಿ ಸಫ್ದರ್ ಹಶ್ಮಿ ಅವರ ನೆನಪಿನ ಅಂಗವಾಗಿ ಒಂದು ಬೀದಿ ನಾಟಕವನ್ನು ಈ ಮೈಸೂರು ನಗರದ ಬೇರೆ ಬೇರೆ ನಾಲ್ಕು ಸ್ಥಳಗಳಲ್ಲಿ ಇಂದು ಪ್ರದರ್ಶಿಸುವವರಿದ್ದೀರಿ. ಮೊದಲನೆಯ ಪ್ರದರ್ಶನ ಇಲ್ಲಿ ಹುತಾತ್ಮನಾದ ರಾಮಸ್ವಾಮಿ ಹೆಸರಿನ ಈ ವೃತ್ತದ ಸ್ಥಳದಲ್ಲಿಯೇ ಆಗಲಿದೆ. ನೀವು ಆಡಲಿರುವ ಆ ಬೀದಿ ನಾಟಕವನ್ನು ನಾನು ನೋಡಿಲ್ಲ. ಇತರ ಪ್ರೇಕ್ಷಕರ ಜೊತೆಗೇ ನಾನೂ ನೋಡಲಿದ್ದೇನೆ. ಈ ವರೆಗಿನ ನಿಮ್ಮ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚಿಕೆ ಇರುವನಾನು ನಿಮ್ಮ ಕೋರಿಕೆಗೆ ಒಪ್ಪಿ ಈ ಬೀದಿ ನಾಟಕದ ಸರಣಿ ಪ್ರದರ್ಶನಗಳ ಉದ್ಘಾಟನೆ ಮಾಡುತ್ತಿದ್ದೇನೆ.

ರಾಷ್ಟ್ರೀಯ ರಂಗಕರ್ಮಿ ಸಫ್ದರ್ ಹಶ್ಮಿ ಅವರನ್ನು ನಾಟಕ ಪ್ರದರ್ಶನ ಮಾಡುತ್ತಿರುವ ಕಾಲದಲ್ಲಿಯೇ ೧೯೮೯ರಲ್ಲಿ ದುಷ್ಟರ ಗುಂಪೊಂದು ಕೊಲೆ ಮಾಡಿತ್ತು. ಅದು ರಾಜಕೀಯ ಕೊಲೆ ಎಂದು ಹೇಳಲಾಗಿದೆ. ಆ ಕೃತ್ಯ ಖಂಡನೀಯವಾದದ್ದು. ಎಂಥದೇ ಅಭಿಪ್ರಾಯ ಭೇದ ಇದ್ದರೂ ಹಿಂಸೆ, ಕೊಲೆಯ ಮೂಲಕ ಅದನ್ನು ಪರಿಹರಿಸಲು, ನಿವಾರಿಸಲು, ಇಲ್ಲ ಗೈಯಲು ಮುಂದಾಗುವುದು ಅನಾಗರಿಕವಾದದ್ದು; ಅಮಾನುಷವಾದದ್ದು, ಹೇಡಿತನದ್ದು. ಅಂಥ ಕೃತ್ಯ ಅಥವಾ ಕೃತ್ಯಗಳು ಎಲ್ಲಿ ನಡೆದರೂ ಅವುಗಳನ್ನು ಖಂಡಿಸಬೇಕಾದದ್ದು ಅಗತ್ಯ.

‘ಅಭಿವ್ಯಕ್ತಿ ಸ್ವಾತಂತ್ರ್ಯ’ವು ಪ್ರಜಾಪ್ರಭುತ್ವ ದೇಶದಲ್ಲಿ ಹೆಮ್ಮೆಯ ಹಕ್ಕು. ಅದನ್ನು ಪಡೆಯುವುದು ನಮ್ಮ ಹಕ್ಕು; ಕಾಪಾಡುವುದು ನಮ್ಮ ಕರ್ತವ್ಯ ಎಂಬ ಪ್ರಜ್ಞೆ ಎಲ್ಲರಲ್ಲಿಯೂ ಇರಬೇಕು. ಅಂಥ ಪ್ರಜ್ಞೆ ಇಲ್ಲದಿರುವ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದು ಸಾಧ್ಯವಿಲ್ಲ. ಆದ್ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕೆಂಬವರೆಲ್ಲರಲ್ಲಿ ಆ ಪ್ರಜ್ಞೆ ಸದಾ ಜಾಗೃತವಾಗಿರಬೇಕು.

ಹಾಗೆಯೇ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹಕ್ಕು ಪ್ರಜಾಪ್ರಭುತ್ವ ವ್ಯವಸ್ಥೆ ಮಾತ್ರ ನೀಡಬಹುದಾದ ಹಕ್ಕು. ಆ ವ್ಯವಸ್ಥೆ ಮಾತ್ರ ನೀಡಬಹುದಾದ ಹಕ್ಕನ್ನು ಪಡೆಯಲು, ರಕ್ಷಿಸಲು ಬಯಸುವವರು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕು, ಬೆಳೆಯಬೇಕು ಎಂಬುದನ್ನು ಬಯಸುವವರು ಎಂಬುದು ಸಂಶಯಕ್ಕೆ ಎಡೆ ಇಲ್ಲದಂಎ ಸ್ಪಷ್ಟವಾಗಬೇಕಾಗುತ್ತದೆ. ಪ್ರಜಾಪ್ರಭುತ್ವ ರಾಜ್ಯವ್ಯವಸ್ಥೆಯ ಬಗ್ಗೆ ನಂಬಿಕೆ, ನಿಷ್ಠೆ ಇಲ್ಲದವರಿಗೆ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಬಗ್ಗೆ ಗೌರವ, ಸಹನೆ ಇರುವುದು ಸಾಧ್ಯವಿಲ್ಲ. ತನಗೆ, ತನ್ನನ್ನು ಬೆಂಬೆಲಿಸುವವರಿಗೆ ಮಾತ್ರ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಬೇಕು ಎಂದು ಕೇಳುವವರು ತನ್ನನ್ನು ತನ್ನ ಅಭಿಪ್ರಾಯವನ್ನು ಬೆಂಬಲಿಸದೆ ಇರುವವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಬಾರದೆಂಬವರು ಪ್ರಜಾಪ್ರಭುತ್ವದ ವಿರೋಧಿಗಳು. ಅಂಥವರು ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಪರ ಮಾತನಾಡಿದರೆ ಅದೊಂದು ಬೂಟಾಟಿಕೆ. ಅಂಥವರು ಅಪಾಯಕಾರಿಗಳು.

ನಮ್ಮದು ಪ್ರಜಾಪ್ರಭುತ್ವ ದೇಶ. ನಮ್ಮ ಸಂವಿಧಾನವು ಜಾತಿಮತ ಧರ್ಮ ನಿರಪೇಕ್ಷ ಸಮಾಜವಾದೀ ಪ್ರಜಾಸತ್ತಾತ್ಮಕ ಗಣರಾಜ್ಯದ ಸಂಸ್ಕೃತಿಯನ್ನು ಕಟ್ಟುವ ಸಂಕಲ್ಪವನ್ನು ವ್ಯಕ್ತಪಡಿಸುತ್ತದೆ. ಸಂವಿಧಾನದ ಸಂಕಲ್ಪ ಎಂದರೆ ಬೇರೆನೂ ಅಲ್ಲ; ನಮ್ಮ ದೇಶದ ಸಮಸ್ತ ಜನತೆಯ ಸಂಕಲ್ಪ ಎಂದೇ ಅರ್ಥ. ಯಾಕೆಂದರೆ ಪ್ರಜಾಪ್ರಭುತ್ವ ದೇಶದಲ್ಲಿ ಸಾರ್ವಭೌಮಾಧಿಕಾರ ಇರುವುದು ಜನತೆಯಲ್ಲಿ. ಆದ್ದರಿಂದ ಜನತೆಯ ಸಂಕಲ್ಪಭಂಜಕವಾದ ಯಾವ ಮಾತನ್ನೇ ಆಗಲಿ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ಚೆಂದದ ಮಾತಿನಲ್ಲಿ ಸಮರ್ಥಿಸಿಕೊಳ್ಳುವುದಕ್ಕೆ ಮುಂದಾಗಬಾರದು.

ನಮ್ಮ ದೇಶದಲ್ಲಿ ಜಾತಿಮತಧರ್ಮನಿರಪೇಕ್ಷವಾದ ಸಮಾಜವಾದೀ ಸಮಾಜ ರಚನೆಯ ಸಂಕಲ್ಪವನ್ನು ಘೋಷಿಸಿಕೊಂಡಿರುವಾಗ ಆ ದಿಕ್ಕಿನಲ್ಲಿ ರಾಷ್ಟ್ರನಿರ್ಮಾಣಕಾರ್ಯದತ್ತ ಸಾಗುವುದನ್ನು ಬಿಟ್ಟು ಜಾತಿಮತಧರ್ಮಗಳ ಸಮಾಜಗಳನ್ನು ಬಲಗೊಳಿಸುವ ದಿಕ್ಕಿನಲ್ಲಿ, ಆ ಮೂಲಕ ಬೇರೆ ಬೇರೆ ಜಾತಿಮತಧರ್ಮಗಳ ಗುಂಪು, ಪಂಗಡ, ವರ್ಗಗಳನ್ನು ನಿರ್ಮಾಣಮಾಡುತ್ತ ದೇಶದ ಜನರನ್ನು ಬೇರೆ ಬೇರೆಯಾಗಿ ವಿಂಗಡಿಸಿ ಭಾವೈಕ್ಯಭಂಗ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವವರು ಯಾರೇ ಆದರೂ ಅವರು ದೇಶಕಟ್ಟುವವರಲ್ಲ; ದೇಶವನ್ನು ಕುಟ್ಟಿ ಕೆಡಹುವವರು.

ಸಂವಿಧಾನದಲ್ಲಿ ಒಪ್ಪಿತವಾದ ಯಾವುದೇ ಆದರೂ ಕಾಲ ದೇಶ ಸಂದರ್ಭದಲ್ಲಿ ಬದಲಾಗಬೇಕಾದ ಅಗತ್ಯವಿದೆ ಅನಿಸಿದರೆ ಅದನ್ನು ತಿದ್ದುಪಡಿಗಳ ಮೂಲಕ ಬದಲಾಯಿಸುವುದಕ್ಕೆ ವಿಧಾನವಿದೆ. ಆ ವಿಧಾನವೂ ಸಂವಿಧಾನದತ್ತವಾದ ಹಕ್ಕು. ಹಾಗೆಂದು ಬದಲಾವಣೆಯ ಅಗತ್ಯವನ್ನು ಪೂರ್ವಭಾವಿಯಾಗಿ ಪ್ರತಿಪಾದಿಸಿದ್ದಲ್ಲದೆ ಏಕಾಏಕಿ ಬದಲಾವಣೆ ತರಲಾಗುವುದಿಲ್ಲ ಎಂಬುದೂ ನಿಜವೆ. ಆದರೆ ಅಂಥ ಪ್ರತಿಪಾದನೆ ಅಹಿಂಸಾತ್ಮಕವಾದ, ಪ್ರಜಾಸತ್ತಾತ್ಮಕವಾದ ವಿಧಾನದಿಂದ ಕಾನೂನುಬದ್ಧ ರೀತಿಯಲ್ಲಿ ಆಗಬೇಕಾದದ್ದು. ಹೊರತು ಹಿಂಸೆ, ದಬ್ಬಾಳಿಕೆ, ಕೊಲೆ-ಸುಲಿಗೆಗಳ ಮೂಲಕ ಆಗುವಂಥದಲ್ಲ. ಜನತೆಯನ್ನು ಅಂಥ ಸಂವಿಧಾನ ವಿರೋಧಿ ವಿಧಾನದಲ್ಲಿ ಹೋರಾಟಕ್ಕೆ ಸಿದ್ಧಪಡಿಸುವುದಕ್ಕೆ ಮುಂದಾಗುವುದೂ ಅಪರಾಧವಾಗುತ್ತದೆ. ಅಂಥ ಅಪರಾಧವನ್ನು ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹೆಸರಿನಲ್ಲಿ ಸಮರ್ಥಿಸಲಾಗುವುದಿಲ್ಲ. ಸಂಯಮ, ಹೊಣೆಗಾರಿಕೆಯ ಪ್ರಜ್ಞೆ ಇಲ್ಲದವರು ಸ್ವಂತದ ಜೀವನವನ್ನೂ ಸುಖಮಯವಾಗಿ ಮಾಡಿಕೊಳ್ಳಲಾರರು. ಅಂಥವರು ರಾಷ್ಟ್ರದ ಜನಕೋಟಿಯ ಜೀವನವನ್ನು ಸುಖಮಯವಾಗಿ ಮಾಡಬಲ್ಲ ಸಮರ್ಥರೆಂದು ನಂಬುವುದು ಸಾಧ್ಯವಿಲ್ಲ.

ಪ್ರಗತಿಪರರೆಂಬ ಹಣೆಚೀಟಿ ತಾವೇ ಹಚ್ಚಿಕೊಂಡು ಓಡಾಡಿದರೆ, ವೇದಿಕೆಯ ಭಾಷಣಗಳಲ್ಲಿ ಮಾತ್ರ ಪ್ರಗತಿಪರ ಚಿಂತನೆಯ ಗುಡುಗು ಮಿಂಚು ಹಾರಿಸಿದರೆ ಪ್ರಗತಿಪರರಾಗುವುದಿಲ್ಲ. ಅದು ಅವರ ಬದುಕಿನಲ್ಲಿ, ವರ್ತನೆಯಲ್ಲಿ ಕಾಣಿಸಬೇಕಾಗುತ್ತದೆ. ಪ್ರಗತಿಪರರು ಯಾರು? ಎಂಬ ಪ್ರಶ್ನೆಯನ್ನು ಇಂದು ನಾವು, ನೀವು ಎಲ್ಲರೂ ಕೇಳಿಕೊಳ್ಳಬೇಕಾಗಿದೆ. ಭಾರತದ ಸಂವಿಧಾನ ಎಂಥ ಸಾಮಾಜಿಕ, ಸಾಂಸ್ಕೃತಿಕ, ರಾಷ್ಟ್ರೀಯ ಕಲ್ಪನೆಗಳನ್ನು ಕಟ್ಟಿಕೊಟ್ಟಿದೆಯೋ ಅದನ್ನು ರಾಷ್ಟ್ರಜೀವನದ ವಾಸ್ತವದಲ್ಲಿ ಆಗುಮಾಡುವುದಕ್ಕೆ ಅಗತ್ಯವಾದ ತಿಳಿವಳಿಕೆಯನ್ನು ನೀಡಬಲ್ಲವರು ಹಾಗೂ ತಮ್ಮ ವೈಯಕ್ತಿಕ ಜೀವನ ಶೈಲಿಯ ಮೂಲಕ ಆ ಬಗೆಯ ತಿಳಿವಳಿಕೆಯನ್ನು ಸ್ಪಷ್ಟಪಡಿಸಿಕೊಡಬಲ್ಲವರು ಪ್ರಗತಿಪರರು.

ನಾಟಕವನ್ನೊ ಬೀದಿ ನಾಟಕವನ್ನೊ ಆಡುವುದು ಹವ್ಯಾಸವಾಗಬಹುದು. ಹಾಗೆ ಆಡುವವರು ಹವ್ಯಾಸಿ ಕಲಾವಿದರಾಗಬಹುದು. ಪ್ರಗತಿಪರರು ಹವ್ಯಾಸಿ ಪ್ರಗತಿಪರ ಕಲಾವಿದರಲ್ಲ; ಹಾಗಾಗಬಾರದು. ಅದು ಅವರ ಒಟ್ಟೂ ಬದುಕಿನ ನಡೆ, ನೋಟವಾಗಬೇಕು. ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಬಗ್ಗೆ ನಿಷ್ಠೆ ಇರುವುದು ನಿಜವೇ ಆದಲ್ಲಿ ಯಾವುದೋ ಒಂದು ಜಾತಿಯವರೊ, ಒಂದು ಧರ್ಮದವರೊ, ಒಂದು ರಾಜಕೀಯ ಪಕ್ಷದವರೊ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿದರೆ ಮಾತ್ರ ತಪ್ಪು ಎಂದು ಅಬ್ಬರಿಸುವುದಲ್ಲ. ಯಾರಿಂದ ಆದರೂ ಅದರ ವಿರುದ್ಧ ದನಿ ಎತ್ತಬಲ್ಲ ನೈತಿಕ ನಿಷ್ಠೆ ಮತ್ತು ನೈತಿಕ ಧೈರ್ಯ ಪ್ರಗತಿಪರರಿಗೆ ಇರಬೇಕಾಗುತ್ತದೆ. ಸಂಘಪರಿವಾರದ ಹಿಂದೂ ಮೂಲಭೂತವಾದಿಗಳು ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ವಿರುದ್ಧ ಹಲ್ಲೆ ಮಾಡಿದರೆ ವಿರೋಧಿಸುವ, ಪ್ರತಿಭಟಿಸುವ ಧೈರ್ಯ ಮಾತ್ರ ಇದ್ದರೆ ಸಾಲದು, ಆ ಧೈರ್ಯ ಬೇಕೇ ಬೇಕು. ಆದರೆ ಮುಸಲ್ಮಾನರೊ, ಕ್ರಿಶ್ಚಿಯನ್ನರೊ, ವೀರಶೈವರೊ, ಬ್ರಾಹ್ಮಣರೊ, ಒಕ್ಕಲಿಗರೊ, ಕುರುಬರೊ, ಯಾವ ರಾಜಕೀಯ ಪಕ್ಷ-ಸಂಘಟನೆಗಳವರೊ ಯಾರೇ ಹಲ್ಲೆ ಮಾಡಿದರೂ- ಅದನ್ನು ವಿರೋಧಿಸುವ, ಪ್ರತಿಭಟಿಸುವ ನೈತಿಕ ನಿಷ್ಠೆ, ಧೈರ್ಯವೂ ಇರಬೇಕಾಗುತ್ತದೆ.

ಸರ್ವಾಧಿಕಾರವನ್ನು ಪ್ರತಿಪಾದಿಸುವ ಬಾಳ ಠಾಕರೆಯಂಥವರನ್ನು ಭಾರತದ ಬಿ.ಜೆ.ಪಿ. ನೇತಾರತ್ವದ ಎನ್.ಡಿ.ಎ. ಸರ್ಕಾರದ ಗೃಹ ಮಂತ್ರಿಯೊ ಪ್ರಧಾನ ಮಂತ್ರಿಯೊ ಓಲೈಸಲು ಧಾವಿಸುವುದು ಹೇಗೆ ತಪ್ಪೊ ಹಾಗೆಯೆ ದೇಶವನ್ನು ವಿಚ್ಛಿದ್ರಗೊಳಿಸುವಂಥ ರಾಜಕೀಯ ತತ್ವ ಪ್ರಣಾಳಿಯನ್ನು ಪ್ರತಿಪಾದಿಸುವ ನೆಡುಮಾರನ್ ಅಂಥವರನ್ನು ಓಲೈಸಲು, ಸನ್ಮಾನಿಸಲು ಪ್ರಗತಿಪರರೆಂಬವರು ಧಾವಿಸುವುದೂ ತಪ್ಪು. ಅದೂ ಪ್ರಗತಿ ವಿರೋಧಿಯಾದ ಕಾರ್ಯವೇ ಆಗುತ್ತದೆ. ಈ ಅರಿವು ಪ್ರಗತಿಪರರಿಗೂ ಆಡಳಿತ ನಡೆಸುವವರಿಗೂ ತೀರಾ ಅಗತ್ಯವಾಗಿದೆ. ನಮ್ಮ ನಮ್ಮ ಭಾಷೆಗಳ ಮತ್ತು ಭಾಷಿಕರ ಅಸ್ತಿತ್ವ ಮತ್ತು ಬೆಳವಣಿಗೆಗೆ ಈಗಿರುವುದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯವನ್ನು ಕೇಳಬೇಕಾದದ್ದಿದೆ. ನಮ್ಮ ಸಂವಿಧಾನ ಸ್ವೀಕೃತವಾದದ್ದು ೧೯೫೦ರ ಜನವರಿ ೨೬ರಂದು, ಭಾಷಾವಾರು ರಾಜ್ಯಗಳ ರಚನೆಯಾದದ್ದು ೧೯೫೬ರ ನವೆಂಬರ್ ೧ರಂದು. ಆ ಸಂವಿಧಾದನ ಒಪ್ಪಿತವಾದ ಆನಂತರದ ಕಾಲದಲ್ಲಿ ದೇಶದ ಆಡಳಿತ ವ್ಯವಸ್ಥೆ ಪ್ರಾದೇಶಿಕ ಸ್ವರೂಪ ರಚನೆಗಳಲ್ಲಿ ವ್ಯತ್ಯಾಸಗಳಾಗಿವೆ. ಆದ್ದರಿಂದ ಆ ಸ್ವರೂಪ ವ್ಯತ್ಯಾಸ ಅಗತ್ಯವಾಗಿ ಕೇಳುವ ಬದಲಾವಣೆಗಳು ಖಂಡಿತ ಆಗಬೇಕಾದದ್ದಿದೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ೧೯೫೬ರ ಡಿಸೆಂಬರ್ ೬ರಂದು ಅಂದರೆ, ಭಾಷಾವಾರು ರಾಜ್ಯ ರಚನೆಯಾದ ಒಂದು ತಿಂಗಳ ಆರು ದಿನಗಳಲ್ಲಿ ನಿಧನರಾದರು. ಅವರು ಬದುಕಿದ್ದಿದ್ದರೆ ರಾಜ್ಯಗಳ ಸ್ವರೂಪ ವ್ಯತ್ಯಾಸ ಭಾಷೆಯ ಆಧಾರದ ಮೇಲೆಯೇ ಪ್ರಧಾನವಾಗಿ ಆಗಿರುವುದರಿಂದ ಸಂವಿಧಾನದ ‘Language Chapter’ನಲ್ಲಿ ತಿದ್ದುಪಡಿಗಳನ್ನು ತರಬೇಕಾದ ಅಗತ್ಯದ ಬಗ್ಗೆ ಅವರು ಹೇಳುತ್ತಿದ್ದರೇನೊ! ನಾವು ಈಗ ಆ ವಿಷಯದಲ್ಲಿ ಕೇಳಿಕೆಗಳನ್ನು, ಹಕ್ಕೊತ್ತಾಯಗಳನ್ನು ಮುಂದುಮಾಡಲು ಪ್ರಜಾಸತ್ತಾತ್ಮಕ ವಿಧಾನದಲ್ಲಿ ಹೋರಾಟ ನಡೆಸಬಹುದು; ನಡೆಸಬೇಕು. ಅದು ತಪ್ಪಲ್ಲ. ಆದರೆ ಭಾಷೆ ಮತ್ತು ನಾಡಿನ ಹೆಸರಿನಲ್ಲಿ ನೆಡುಮಾರನ್, ಪ್ರಭಾಕರನ್ ಗಳಂಥವರನ್ನು ಸಮರ್ಥಿಸುವುದಕ್ಕೆ ಸನ್ಮಾನಿಸುವುದಕ್ಕೆ ಉತ್ಸುಕರಾಗುವುದರಲ್ಲಿ ಅರ್ಥವಿಲ್ಲ. ಅದು ಅಪಾಯಕಾರಿ ಎಂಬ ಅರಿವು ನಮ್ಮ ‘ಪ್ರಗತಿಪರ’ರೆಂಬವರಲ್ಲಿ ಕೆಲವರಿಗೆ ಅಗತ್ಯವಾಗಿ ಉಂಟಾಗಬೇಕಾಗಿದೆ. ನಾನು ಸಂಕ್ಷಿಪ್ತವಾಗಿ ಮಾತ್ರ ಇಲ್ಲಿ ಈ ಸಂದರ್ಭದಲ್ಲಿ ಈ ವೇದಿಕೆಯಲ್ಲಿ ಮಾತನಾಡುವ ಅವಕಾಶ ಇದ್ದದ್ದರಿಂದ ಇಷ್ಟನ್ನು ಸೂಚ್ಯವಾಗಿ ಪ್ರಸ್ತಾಪಿಸಿದ್ದೇನೆ. ಈ ನನ್ನ ಅಭಿಪ್ರಾಯ ನಿಲುವುಗಳ ಬಗ್ಗೆ ಹೆಚ್ಚಿನ ವಿವರಣೆಯ ಅಗತ್ಯವಿದೆ. ಬೇರೆ ಸೂಕ್ತ ವೇದಿಕೆಯನ್ನು ಬಳಸಿಕೊಳ್ಳುತ್ತೇನೆ. ಇಲ್ಲಿ ಇಷ್ಟಕ್ಕೆ ಮಾತು ಮುಗಿಸುತ್ತೇನೆ.

..೨೦೦೧