ಸಿದ್ಧಾರ್ಥ ಹುಟ್ಟಿದ್ದು, ಬುದ್ಧನಾದದ್ದು, ಪರಿನಿರ್ವಾಣ ಹೊಂದಿದ್ದು ವೈಶಾಖ ಪೂರ್ಣಿಮೆಯಂದು, ಈ ಮಹದ್ ಘಟನೆಗಳೆಲ್ಲ ವೈಶಾಖ ಹುಣ್ಣಿಮೆಯಂದೇ ಘಟಿಸಿದವೆಂಬುದು ಸೋಜಿಗ. ಅದು ಐತಿಹಾಸಿಕ ಸತ್ಯವೊ, ನಂಬಿಕೆ ನೆಯ್ದ ಕಲ್ಪನೆಯ ಮನೋಹರ ದರ್ಶನ ಪ್ರತಿಮೆಯೊ, ಪ್ರತೀತಿಯೊ? ಹೀಗೆ ಎಂದು ಹೇಳುವುದು ಸುಲಭವಲ್ಲ. ಏನೇ ಆದರೂ ಪ್ರಕೃತಿಯ ಪ್ರಶಾಂತ ಬೆಳಕಿನ ಪೂರ್ಣಿಮೆಯ ತುಂಬು ವೈಭವದೊಂದಿಗೆ, ಮನುಷ್ಯ ಚೇತನವೊಂದು ಪ್ರೀತಿ ಕರುಣೆ ‘ಅಹಿಂಸೆ’ ತುಂಬಿದ ಅಸಾಧಾರಣ ಅಂತಃಕರಣದ ವೈಭವವನ್ನು ಕೂಡಿಸಿ, ಕರಗಿ ಒಂದಾಗಬಹುದಾದ ದಿವ್ಯ ಸಾಧ್ಯತೆಗೂ, ಕನಸಿಗೊ, ದರ್ಶನಕ್ಕೊ ಅದೊಂದು ಚಿರಂತನ ಮಹಾಪ್ರತಿಮೆಯಾಗಿ ನಿಂತಿದೆ ಎಂಬುದಂತೂ ನಿಜ.

ಜಗತ್ತಿನ ಇತಿಹಾಸದಲ್ಲಿ ಹಲವು ದರ್ಶನಗಳು ಕಾಲಕಾಲಕ್ಕೆ ಹುಟ್ಟಿವೆ; ಬೆಳೆದಿವೆ. ಆದರೆ ದೈವ-ದೇವರುಗಳನ್ನು ಮೆರೆಸದೆ, ಮನುಷ್ಯ ಚೇತನದ ಘನತೆಯನ್ನು, ಮನುಷ್ಯ ಬದುಕಿನ ಮೌಲಿಕತೆಯನ್ನು ಬುದ್ಧ ಬೋಧಿಸಿದ ದರ್ಶನದಷ್ಟು ವಿಶಾಲ ನೆಲೆಯಲ್ಲಿ ಉನ್ನತ ನೆಲೆಯಲ್ಲಿ ಬೇರೆ ಯಾವ ದರ್ಶನವೂ ಗುರುತಿಸಿ ಗೌರವಿಸಿದಂತೆ ತೋರುವುದಿಲ್ಲ. ಜೀವನ ಸ್ವೀಕಾರ ತತ್ವವನ್ನು ಭಾವಸಂಸ್ಕಾರದ, ಚಿಂತನ ಸಂಸ್ಕಾರದ ಅಂತಃಕರಣ ಸಂಸ್ಕಾರದ ಶಿಖರ ಸ್ಥಿತಿಯ ವಿವೇಕದಲ್ಲಿ ಬಾಳಿದವನು, ಬಾಳಿ ಬೋಧಿಸಿದವನು ಬುದ್ಧ ಮಾನವತ್ವದ ‘ಮರ್ಯಾದಾ ಪುರುಷೋತ್ತಮ’ನೆಂದು ಕರೆಸಿಕೊಳ್ಳುವುದಕ್ಕೆ ಸರ್ವಾರ್ಹತೆ ಇರುವವನು ಬುದ್ಧ.

ಅಂಥ ಬುದ್ಧನನ್ನು, ಆತ ಭೋದಿಸಿದ ಜೀವನ ದರ್ಶನದ ಜೀವತತ್ವಗಳನ್ನು ಈ ದೇಶವು ವಿಸ್ಮೃತಿಯ ಕೂಪಕ್ಕೆ ತಳ್ಳಿ, ಸುಮಾರು ಸಾವಿರ ವರ್ಷಗಳ ಕಾಲ ಅವುಗಳ ಸೊಲ್ಲೇ ಕೇಳಿಸದಂತೆ ಮಾಡಿ ತಾಮಸ ಸಂತೃಪ್ತಿಯಲ್ಲಿ ಮೈಮರೆತಿತ್ತು. ಬುದ್ಧನನ್ನು ಪಾಷಂಡಿ ಎಂದು ಕರೆದು ಬುದ್ಧನ ನೆನಪೊ, ಪ್ರೀತಿ, ಕರುಣೆ, ಅಹಿಂಸೆಗಳನ್ನು ಬೋಧಿಸುವ ಬೌದ್ಧಧರ್ಮದ ಮತ್ತು ಬೌದ್ಧ ಸಾಹಿತ್ಯ ಕೃತಿಗಳ ನೆನಪೊ ಉಳಿಯದಂತೆ ಅಳಿಸಿ ಹಾಕುವ ಯೋಜಿತ ಸಂಚು ಈ ದೇಶದ ಚರಿತ್ರೆಯಲ್ಲಿ ನಡೆದಿತ್ತು.

ಆ ವಿಸ್ಮೃತಿಯ ಕಾಲಾವಧಿಯಲ್ಲಿಯೆ ಭಾರತದ ಚರಿತ್ರೆ ಹಿಂದೆಂದೂ ಕಾಣದಂಥ ಅವಸಾನಮುಖಿಯಾಯಿತು. ಧಾರ್ಮಿಕ ಕ್ಷೇತ್ರದಲ್ಲಿ, ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ದರಿದ್ರ ಸ್ಥಿತಿಗೆ ಇಳಿಯಿತು. ಮನುಷ್ಯ-ಮನುಷ್ಯರ ನಡುವೆ ಮೇಲು-ಕೀಳು ಭಾವನೆಗಳನ್ನು ಅತಿಗೊಳಿಸಿತು. ಲೌಕಿಕ ಆಧ್ಯಾತ್ಮಿಕ ಎರಡೂ ಕ್ಷೇತ್ರಗಳಲ್ಲಿ ಅಸಮಾನತೆಯ ತರತಮ ನೆಲೆಗಳನ್ನು ಬಿಗಿಗೊಳಿಸಿತು. ಜಾತಿಭೂತದ, ಮತಧರ್ಮೀಯ ಮೇಲಾಟ-ಹೋರಾಟಗಳ ರಕ್ತ ಬೀಜಾಸುರ ಬೆಳೆಯನ್ನು ಬೆಳೆಯುವ ವಿಕೃತ ಸಂಸ್ಕೃತಿ ಅತಿಯಾಗಿ ವಿಜೃಂಭಿಸಿತು. ರಾಜಕೀಯ ಗುಲಾಮಗಿರಿಯ ದೈನ್ಯಕ್ಕೆ ಅವಮಾನಿತ ಹೀನ ಸ್ಥಿತಿಗೆ ಸಮಗ್ರ ಭಾರತ ಉಪಖಂಡವೇ ಬಲಿಯಾಗುವಂತಾಯಿತು.

ಆ ಗುಲಾಮಗಿರಿಯಿಂದ ಬಿಡುಗಡೆ ಪಡೆಯಲು ಚರಿತ್ರೆಯಲ್ಲಿ ಪರಸ್ಪರ ಕಚ್ಚಾಡುತ್ತಿದ್ದ, ಕಾದಾಡುತ್ತಿದ್ದ ರಾಜಮಹಾರಾಜರುಗಳೊ, ಸಾಮ್ರಾಟ ಚಕ್ರವರ್ತಿಗಳೊ ದೇಶಕ್ಕೆ ಮಾದರಿಯಾಗಲಿಲ್ಲ; ಅವರು ಆದರ್ಶವಾಗಲಿಲ್ಲ. ಪುರೋಹಿತಶಾಹಿಯು ಅದರ್ಶವೊ ಮಾದರಿಯೊ ಆಗಲಿಲ್ಲ. ಬುದ್ಧ ಬೋಧಿಸಿದ ಅಹಿಂಸೆ ಮಾದರಿಯಾಯಿತು; ಮಾರ್ಗದರ್ಶಕವಾಯಿತು. ಬುದ್ಧ ಬೋಧಿಸಿದ ಅಹಿಂಸೆಯ, ಪ್ರೀತಿ ಕರುಣೆಗಳ ಅಪ್ರತಿಮ ಆರಾಧಕ, ಅಸೀಮ ಅಂತಃಕರಣದ ಸಾರ್ವಭೌ, ಯುದ್ಧದಲ್ಲಿ ಗೆದ್ದು ಕೊಲೆಗೆ ಹೇಸಿ ಶಾಂತಿ ಸಂದೇಶ ನೀಡಿದ, ಹಾಗೆ ಬಾಳಿ ತೋರಿಸಿದ ಅಶೋಕ ಚಕ್ರವರ್ತಿ ಮಾದರಿಯಾದ; ಆದರ್ಶವಾದ. ಅಶೋಕ ಚಕ್ರ, ಅಶೋಕ ಸ್ಥಂಭ, ಸಿಂಹ ಚತುಷ್ಟಯ ಸಂಕೇತಗಳಾದವು. ಶಾಕ್ಯರ ಗಣರಾಜ್ಯ ಪರಿಕಲ್ಪನೆಯು ನಮ್ಮ ಪ್ರಜಾಪ್ರಭುತ್ವ ಪರಿಕಲ್ಪನೆಗೆ ದೇಶೀಯ ಪ್ರೇರಣಾ ಮೂಲಸೆಲೆ ಎಂಬಂತಾಯಿತು.

ದೇಶದ ಸಮಸ್ತ ಜನತೆಯ ಸಂಕಲ್ಪದ ಪ್ರತೀಕವಾದ ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷ ಗೌರವವನ್ನು ಪಡೆದು ‘ಭಾರತದ ಸಂವಿಧಾನ ಶಿಲ್ಫಿ’ ಎಂದು ಕೀರ್ತಿತರಾದವರು ಡಾ. ಬಿ.ಆರ್.ಅಂಬೇಡ್ಕರ್ ಅವರು. ಸ್ವತಂತ್ರ ಭಾರತದ ಪ್ರಜಾಸತ್ತಾತ್ಮಕ ಸಮಾಜ, ಸಂಸ್ಕೃತಿಯ ಪರಿಕಲ್ಪನೆಯನ್ನು ಸಂವಿಧಾನರೂಪದಲ್ಲಿ ಕಟ್ಟಿಕೊಡುವಾಗ ಅವರು ಮತ್ತು ಸಂವಿಧಾನ ಸಮಿತಿಯ ಇತರ ಗೌರವಾನ್ವಿತ ಸದಸ್ಯರು ಜಗತ್ತಿನ ಪ್ರಜಾಪ್ರಭುತ್ವ ರಾಷ್ಟ್ರಗಳ ಸಂವಿಧಾನಗಳ ಆಳವಾದ ಆದ್ಯಯನದ ವ್ಯುತ್ಪತ್ತಿ, ವಿದ್ವತ್ತು ಪಡೆದುಕೊಂಡಿದ್ದರೆಂಬುದು ಜನಜನಿತವಾದ ಸಂಗತಿಯಾಗಿದೆ. ಅದರ ಜೊತೆಗೇ ಬುದ್ಧನ ದರ್ಶನದಲ್ಲಿ ಆತ್ಮೋದ್ಧಾರದ ಬೆಳಕನ್ನು ಕಂಡುಕೊಂಡಿದ್ದ ಹಾಗೂ ಸಮಾನತಾ ತತ್ವದ ಬಗೆಗಿನ ಅರಿವನ್ನು ಬುದ್ಧನ ದರ್ಶನದ ಬೆಳಕಿನಲ್ಲಿಯೇ ತಿಳಿಗೊಳಿಸಿಕೊಂಡಿದ್ದ ಡಾ. ಅಂಬೇಡ್ಕರ್ ಅವರು ಸಂವಿಧಾನ ರಚಿಸುವಾಗ ಬುದ್ಧನ ದರ್ಶನ ಕಟ್ಟಿದ ಮಾನವೀಯತೆಯ ಕಾಣ್ಕೆಯು ತೋರಿದ ದಾರಿಯಲ್ಲಿಯೇ ಸಾಗಿದರು. ಆಧುನಿಕ ವಾಸ್ತವ ರಾಜಕೀಯದ ಸಂಕೀರ್ಣ ಸಂದರ್ಭದಲ್ಲಿ ಸಾಧ್ಯವಾದಷ್ಟೂ ನಿಷ್ಠೆಯಿಂದ ಆ ಕಾಣ್ಕೆಯನ್ನು ಸಂವಿಧಾನದಲ್ಲಿ ನೆಯ್ಗೆ ಮಾಡಿದ್ದು ಕಾಣಿಸುತ್ತದೆ.

ನಮ್ಮ ದೇಶವು ಸಂವಿಧಾನವು ಜಾತಿ – ಮತಧರ್ಮ ನಿರಪೇಕ್ಷ ಸಮಾಜವಾದೀ ಸಮಾಜ ಸಂಸ್ಕೃತಿಯನ್ನು ಕಟ್ಟುವ ಸಂಕಲ್ಪ, ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನತೆಯದೇ ಸಾರ್ವಭೌಮಾಧಿಕಾರ. ಸಂವಿಧಾನ ಎಂಬುದು ಸಮಗ್ರ ಜನತೆಯ ಸಂಕಲ್ಪದ, ಅಂದರೆ ಸಾರ್ವಭೌಮಾಧಿಕಾರ ಇರುವವರ ಸಂಕಲ್ಪದ ಪ್ರತೀಕ. ಆದರೆ ಈಗ ಏನಾಗಿದೆ? ಏನಾಗುತ್ತಿದೆ? ಮತಧರ್ಮವಾದೀ ಶಕ್ತಿ ದಿನೇ ದಿನೇ ಪ್ರಬಲವಾಗುತ್ತಿದೆ. ಅಂಥ ಅಬ್ಬರ ಕೇಳಿಸುತ್ತಿದೆ. ಮತೀಯ ಮೂಲಭೂತವಾದಿ ಸಂಘ, ಸಂಘಟನೆಗಳ ಕೇಕೆಯೂ ಮೊಳಗತೊಡಗಿದೆ. ಅದು ಜನತೆಯಲ್ಲಿ ಭೇದಭಾವವನ್ನು ಬಿತ್ತಿ ಅವರ ಮನಃಸ್ಥಿತಿಯನ್ನು ಕಲುಷಿತಗೊಳಿಸುತ್ತಿದೆ. ಸ್ವಾತಂತ್ರ್ಯಪಡೆದ ಹೊಸತರಲ್ಲಿಯೆ ಮತೀಯ ವಾದವು ಮೂಲಭೂತವಾದೀ ಪ್ರವೃತ್ತಿಗೆ ತಿರುಗಿ ಅಹಿಂಸಾಮೂರ್ತಿ ಗಾಂಧೀಜಿಯನ್ನು ಬಲಿತೆಗೆದುಕೊಂಡಿತು; ಹಿಂಸೆಯ ಜನಹತ್ಯೆಯ ಮಾರಣಹೋಮ ನಡೆಸಿತು. ಅದರಿಂದಾಗಿ ಮಾನವತೆಯೆ ನಾಚಿಕೆಯಿಂದ ತಲೆತಗ್ಗಿಸುವಂತಾಯಿತು. ಆ ಘೋರ ನೆನಪು ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಹುಟ್ಟಿದ್ದ ನಮ್ಮಂಥವರ ಮನಸ್ಸಿನಲ್ಲಿ ದುಃಸ್ವಫ್ನದ ನೆನಪಿನ ರೂಪದಲ್ಲಿ ಉಳಿದುಕೊಂಡಿದೆ.

ಜಾತಿ-ಮತಧರ್ಮದ ಹೆಸರಿನಲ್ಲಿ ಹಿಂಸೆಯ ವಾತಾವರಣ ಮತ್ತೆ ದೇಶದಲ್ಲಿ ಎಲ್ಲೆಲ್ಲೂ ನಿರ್ಮಾಣವಾಗುತ್ತಿದೆ. ಕಳವಳ, ಉದ್ವಿಗ್ನತೆ ದೇಶದ ಶಾಂತಿಪ್ರಿಯ ಜನತೆಯ ಧೃತಿಗೆಡಿಸುತ್ತಿದೆ. ಅಹಿಂಸೆಯ ಆವಾಹೆನ ಇಂದಿನ ಅಗತ್ಯವಾಗಿದೆ. ಬುದ್ಧನ ನೆನಪು, ಬುಧ್ಧ ಬೋದಿಸಿದ ಪ್ರೀತಿ ಕರುಣೆ ಅಹಿಂಸೆಯ ನೆನಪು ನಮ್ಮ ದೇಶದ ಜನತೆಯ ಜೀವ ಪೋಷಣೆಗೆ, ಭಾವ ಫೋಷಣೆಗೆ ಇಂದು ಜರೂರಾಗಿ ಒದಗಿ ಬರಬೇಕಾಗಿದೆ.

‘ಸೆಕ್ಯುಲರ್’ ಎಂಬುದನ್ನು ಜಾತಿ-ಮತಧರ್ಮ ನಿರಪೇಕ್ಷವೆಂದೂ, ಜಾತ್ಯತೀತವೆಂದೂ ವ್ಯಾಖ್ಯಾನಿಸಿಕೊಂಡು ಬರಲಾಗಿತ್ತಷ್ಟೆ. ಆದರೆ ಹಿಂದೂ ಮತೀಯವಾದಿಗಳು ಸೆಕ್ಯುಲರ್ ಎಂದರೆ ‘ಸರ್ವಧರ್ಮಸಮಭಾವ’ ಎಂದು ಅನುವಾದಿಸಿ ಹಾಗೆ ಹೇಳುತ್ತಿದ್ದಾರೆ; ವ್ಯಾಖ್ಯಾನಿಸುತ್ತಿದ್ದಾರೆ. ಭಾರತದ ಇಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೂ ಕೂಡ ಹಾಗೇ ಹೇಳುತ್ತ ಬರುತ್ತಿದ್ದಾರೆ. ಮೇಲು ನೋಟಕ್ಕೆ ಈ ಮಾತಿನಲ್ಲಿ ತಪ್ಪೇನಿಲ್ಲ, ಸರಿಯಾಗಿಯೆ ಇದೆಯಲ್ಲಾ ಎಂದು ಅನಿಸಿಬಿಡುತ್ತದೆ. ಆ ಮಾತು ಆ ವ್ಯಾಖ್ಯಾನ ‘ಸೆಕ್ಯುಲರಿಸ್ಟ್’ ರೆಂಬವರನ್ನೂ ಗೊಂದಲಗೊಳಿಸಿ ದಾರಿ ತಪ್ಪಿಸುತ್ತಿರುವಂತೆ ತೋರುತ್ತಿದೆ. ಆದರೆ ಅದನ್ನು ಸ್ವಲ್ಪ ಲಕ್ಷ್ಯವಿಟ್ಟು ಗಮನಿಸಿದರೆ ಅದೊಂದು ಅಪಾಯಕಾರಿಯಾದ ಮಾತು ಎಂಬುದು ಗೊತ್ತಾಗುತ್ತದೆ. ಬಹುಸಂಖ್ಯಾತವಾಗಿರುವ ಮತಧರ್ಮದವರ ಯಜಮಾನಿಕೆಯನ್ನು ಸ್ಥಿರಗೊಳಿಸುವ, ನಿರಂತರಗೊಳಿಸುವ ಹುನ್ನಾರ, ಕೆಟ್ಟ ರಾಜಕೀಯ ಅದರಲ್ಲಿರುವುದು ಕಾಣಿಸುತ್ತದೆ.

ಸೆಕ್ಯುಲರ್ ದೇಶ, ಸೆಕ್ಯುಲರ್ ಸರ್ಕಾರ ಅಂದರೆ ಆ ದೇಶ, ಆ ಸರ್ಕಾರವು ಯಾವ ಜಾತಿ-ಮತಧರ್ಮಕ್ಕೂ ಸೇರಿದ್ದಲ್ಲ; ಯಾವ ಜಾತಿ-ಮತಧರ್ಮವೂ ತನ್ನದೆಂದು ಹೇಳಿಕೊಳ್ಳುವಂಥದಲ್ಲ. ಸರ್ಕಾರಕ್ಕೆ ಮತಧರ್ಮವಿಲ್ಲ. ಜನರಿಗೆ ಜಾತಿ-ಮತಧರ್ಮ ಎಂಬುದಿದ್ದರೆ, ಆ ಬಗ್ಗೆ ನಂಬಿಕೆ ನಿಷ್ಠೆ ಇದ್ದರೆ ಅದು ಅವರ ಖಾಸಗಿ ನಂಬಿಕೆ, ಸ್ವಂತದ ವ್ಯವಹಾರದ ಭಾಗ, ಅಷ್ಟೆ. ಅದು ಇತರ ಪೌರರ, ಇತರ ಜಾತಿ-ಮತಧರ್ಮಗಳಿಗೆ ಸೇರಿದ ಜನತೆಯ ಸಂವಿಧಾನದತ್ತ ಹಕ್ಕುಗಳಿಗೆ ಧಕ್ಕೆ ತರದಂತೆ ನಡೆಯಬಹುದಾದ ವ್ಯವಹಾರ. ಅಂದರೆ ಈ ಖಾಸಗಿ ನಂಬಿಕೆ, ಹಕ್ಕು ಎಂಬುದೂ ಸಕಾರಣ ನಿರ್ಬಂಧಕ್ಕೆ ಒಳಪಟ್ಟಿರುವಂಥದು. ಜನ ಯಾವ ಜಾತಿ-ಮತಧರ್ಮಕ್ಕೆ ಸೇರಿದವರಾಗಿರಲಿ, ಅವರೆಲ್ಲ ದೇಶಕ್ಕೆ ಸೇರಿದವರು. ದೇಶವು ಎಲ್ಲ ಧರ್ಮಗಳಿಗೂ, ಧರ್ಮಗಳವರಿಗೂ ಸಮಾನ ರಕ್ಷಣೆ ನೀಡುತ್ತದೆ. ಹಾಗೆಂದು ಅವರವರ ನಂಬಿಕೆ ನಿಷ್ಠೆಯ ಜಾತಿ-ಮತಧರ್ಮಗಳು ದೇಶದ ಸರ್ಕಾರಕ್ಕೆ ಸಂಬಂಧಪಟ್ಟವಲ್ಲ. ಯಾವೊಂದು ಮತಧರ್ಮವನ್ನು ದೇಶದ ಧರ್ಮವೆಂದು, ಎತ್ತಿಹಿಡಿಯುವಂತಿಲ್ಲ. ಇದು ‘ಸೆಕ್ಯುಲರ್’ ಎಂಬುದಕ್ಕೆ ಇರುವ, ಇರಬೇಕಾದ ಅರ್ಥವಿವರಣೆ. ಆದರೆ ‘ಸರ್ವಧರ್ಮಸಮಭಾವ’ ಎಂದು ಅರ್ಥವಿವರಣೆ, ವ್ಯಾಖ್ಯಾನ ಮಾಡಿದರೆ ಆಗ ಸರ್ಕಾರಕ್ಕೆ ದೇಶದಲ್ಲಿರುವ ಎಲ್ಲ ಧರ್ಮಗಳೂ ಸಂಬಂಧಪಟ್ಟವು ಎಂದಂತಾಗುತ್ತದೆ. ಸರ್ಕಾರ ಯಾವ ಮತಧರ್ಮಕ್ಕೂ ಸಂಬಂಧಪಟ್ಟದ್ದಲ್ಲ ಎಂಬುದಕ್ಕೂ ಸರ್ಕಾರ ಎಲ್ಲ ಮತಧರ್ಮಗಳಿಗೂ ಸಂಬಂಧಪಟ್ಟದ್ದೆಂಬುದಕ್ಕೂ ವ್ಯತ್ಯಾಸವಿದೆ. ಪರಿಣಾಮದಲ್ಲಿಯೂ ವ್ಯತ್ಯಾಸವಾಗುತ್ತದೆ. ಆದ್ದರಿಂದ ಸೆಕ್ಯುಲರ್ ಎಂಬುದಕ್ಕೆ ಈಗಿರುವಂತೆ ಅಥವಾ ಈಗ ಹೇಳುತ್ತ ಬಂದಿರುವಂತೆ ‘ಜಾತಿ-ಮತಧರ್ಮ ನಿರಪೇಕ್ಷ’ ಎಂಬ ಬದಲು ಬೇರೊಂದು ಅನುವಾದವೇ ಬೇಕೆಂದಾದರ, ‘ಸರ್ವಜನ ಸಮಭಾವ’ ಎಂದು ಹೇಳಿಕೊಳ್ಳಬಹುದು. ‘ಸರ್ವಜನ ಸಮಭಾವ’ ಎಂದು ಹೇಳಿದರೆ ಸಂವಿಧಾನದ ಆಶಯಕ್ಕೆ, ಅದರ ಜೀವತತ್ವಕ್ಕೆ ಅಂದರೆ Spiritಗೆ ‘ಸರ್ವಧರ್ಮ ಸಮಭಾವ’ ಎಂದು ಹೇಳಿದಾಗ ಆಗುವಂತೆ, ಆಗುವಷ್ಟು ಧಕ್ಕೆ ಆಗುವುದಿಲ್ಲ. ಸೆಕ್ಯುಲರ್ ಎಂಬುದಕ್ಕೆ ಪ್ರಧಾನಿ ವಾಜಪೇಯಿ ‘ಸರ್ವಧರ್ಮ ಸಮಭಾವ’ ಎಂದೇ ಹೇಳುತ್ತಿರುವುದಕ್ಕೂ, ಅದೇ ವಾಜಪೇಯಿ ಸರ್ಕಾರವು ನಮ್ಮ ದೇಶದ ಸಂವಿಧಾನ ‘ಮರು ಪರಿಶೀಲನೆ’ಗೆ ಮುಂದಾಗಿರುವುದಕ್ಕೂ ಸಂಬಂಧವಿಲ್ಲ ಎನ್ನಬಹುದೆ?

ಪಾಕಿಸ್ತಾನದ ನಿರಂತರ ಉಪಟಳ, ಉಗ್ರಗಾಮಿಗಳ ಮೂಲಕ ಅದು ಮಾಡುತ್ತಿರುವ ಹತ್ಯಾಕಾಂಡ, ದುರಾಕ್ರಮಣಗಳಿಗೆ ಒಂದು ಬೆದರಿಕೆಯನ್ನು ಒಡ್ಡುವ ತಂತ್ರಕ್ಕಾಗಿ ಪ್ರೋಕ್ರಾನ್‌ನಲ್ಲಿ ಅಣುಬಾಂಬ ಸ್ಫೋಟ್ ಮಾಡಿದ್ದು ಎಂದು ಭಾವಿಸಲಾಗಿದೆ. ಅದರಲ್ಲಿ ಸತ್ಯಾಂಶವಿಲ್ಲ ಎಂಬಂತಿಲ್ಲ. ಪಾಕಿಸ್ತಾನದ ದುಸ್ಸಾಹಸ ಅತಿಯಾಗುತ್ತಿದೆ. ಆದರ ಸ್ಫೋಟವನ್ನು ಬುದ್ಧ ಪೂರ್ಣಿಮೆಯ ದಿನದಂದೇ ಕೇಂದ್ರದ ವಾಜಪೇಯಿ ಸರ್ಕಾರ ಮಾಡಿಸಿದದು, ಮಹಾಮಾನವತಾವಾದಿಯೊ ಅಹಿಂಸಾವಾದಿಯೊ ಆಗಿದ್ದ ‘Buddha Smiles’ ‘ಬುದ್ಧ ಮುಗುಳ್ನಗುತ್ತಿದ್ದಾನೆ’ ಎಂದು ಹೇಳಿದ್ದು ವ್ಯಂಗ್ಯದ, ಅಣಕದ ದನಿಯಲ್ಲವೆ? ಅದು ಯಾವ ಸಂದೇಶವನ್ನು ರವಾನಿಸುತ್ತದೆ? ಅಹಿಂಸೆಯನ್ನೇ ಮಂತ್ರವಾಗಿ, ಅಸ್ತ್ರವಾಗಿ ಬಳಸಿ ಸ್ವಾತಂತ್ರ್ಯ ಪಡೆದ ಈ ದೇಶದ ಆಡಳಿತದ ಚುಕ್ಕಾಣಿ ಹಿಡಿದವರೇ ಹೀಗೆ ಅಹಿಂಸಾಮೂರ್ತಿ ಬುದ್ಧನನ್ನು, ಆತ ಬೋಧಿಸಿದ ಅಹಿಂಸಾತತ್ವವನ್ನು ಅಪಹಾಸ್ಯ ಮಾಡುತ್ತಿರುವ ಹೊಣೆಗೇಡಿತನಕ್ಕೆ ಏನೆನ್ನಬೇಕು?

ಇಂಥ ಕಾಲದಲ್ಲಿ ದೇಶದಲ್ಲಿ ಇರುವವರೆಲ್ಲ ಜಾತಿ-ಮತಧರ್ಮಭೇದವಿಲ್ಲದ ಪ್ರೀತಿ, ಕರುಣೆ ಅಹಿಂಸೆಯನ್ನು ನಂಬಿ ಕೂಡಿ ಬಾಳುವ, ಕ್ಷೇಮದಿಂದ ಬಾಳುವ ಅಗತ್ಯದ ಬಗ್ಗೆ ತಿಳಿಸಿಹೇಳುವುದಕ್ಕೆ ಬುದ್ಧನ ನೆನಪು ಮಾಡಿಕೊಳ್ಳುವ, ನೆನಪು ಮಾಡಿಕೊಡುವ ಇಂಥ ಸಮಾರಂಭ ಅಗತ್ಯವಾಗುತ್ತದೆ. ರಾಜಸ್ಥಾನದ ಮರುಭೂಮಿಯಲ್ಲಿ ಅಣುಬಾಂಬು ಸ್ಫೋಟಿಸಿದ ಪ್ರಧಾನಿ ವಾಜಪೇಯಿ ಸರ್ಕಾರವು ನಮ್ಮ ದೇಶದ ಜನತೆಯ ಅಂತಃಕರಣದಲ್ಲಿ ಪ್ರೀತಿ,ಕರುಣೆ, ಅಹಿಂಸೆಯ ಜೀವಜಲ ಬತ್ತಿಸಿ ಅದನ್ನು ಮರುಳುಗಾಡಾಗಿ ಮಾಡದಿರಲಿ ಎಂದು ಹಾರೈಸೋಣ.

ಬೌದ್ಧಧರ್ಮವೇ ಆಗಲಿ, ವೈದಿಕ ಅಥವಾ ಹಿಂದೂ ಧರ್ಮವೇ ಆಗಲಿ, ಮುಸಲ್ಮಾನ ಧರ್ಮವೇ ಆಗಲಿ, ಕ್ರೈಸ್ತ ಧರ್ಮವೇ ಆಗಲಿ, ಇನ್ನಾವ ಮತಧರ್ಮವೇ ಆಗಲಿ, ಜಾತಿ-ಮತಧರ್ಮ ನಿರಪೇಕ್ಷ ಸಮಾಜ, ಸಂಸ್ಕೃತಿ ನಿರ್ಮಾಣದಲ್ಲಿ ನಂಬಿಕೆ ಇರುವ ನಮಗೆ ಮುಖ್ಯವಲ್ಲ. ನಾವು ಹುಟ್ಟಿ ಬಂದ ಕಾರಣಕ್ಕೇ ನಾವು ಹುಟ್ಟಿದ ಜಾತಿಯೊ, ಮತಧರ್ಮವೊ ಶ್ರೇಷ್ಠವೆಂದು ಆರಾಧಿಸುವುದಾಗಲಿ, ನಾವು ಹುಟ್ಟಿ ಬರದಿದ್ದ ಕಾರಣಕ್ಕೇ ಬೇರೆ ಜಾತಿ-ಮತ ಧರ್ಮ ಕನಿಷ್ಠವೆಂದಾಗಲಿ, ಖಂಡನೀಯವೆಂದಾಗಲಿ ಭಾವಿಸುವುದು ಸರಿಯಲ್ಲ. ನಾವು ಯಾರೂ ಇಂಥ ಜಾತಿಯಲ್ಲಿಯೊ, ಮತಧರ್ಮದಲ್ಲಿಯೊ ಹುಟ್ಟಬೇಕೆಂದು ಮುಂದಾಗಿ ಅರ್ಜಿ ಹಾಕಿಕೊಂಡು ಹುಟ್ಟಿ ಬಂದವರಲ್ಲ. ನಮ್ಮ ಹುಟ್ಟು ನಮ್ಮ ಇಚ್ಛೆಗೆ ಸಂಬಂಧಿಸಿದ್ದಲ್ಲ; ಕೇವಲ ಆಕಸ್ಮಿಕ. ದೇಶದಲ್ಲಿ ಇರುವ ಎಲ್ಲರೂ ಪರಸ್ಪರ ಪ್ರೀತಿ, ಸೌಹಾರ್ದ, ಸಮಭಾವದಲ್ಲಿ ಸ್ವತಂತ್ರವಾಗಿ ಬಾಳುವುದು, ಎಲ್ಲರ ಕ್ಷೇಮಕ್ಕಾಗಿ ಸಹಕರಿಸುವುದು, ದುಡಿಯುವುದು, ಹಾರೈಸುವುದು ಮುಖ್ಯ ಅಂಥ ಬಾಳ್ವೆಗೆ ಅಗತ್ಯವಾದ ಮನೋಧರ್ಮವನ್ನು ರೂಪಿಸುವ ‘ಧರ್ಮದೃಷ್ಟಿ’ ನಮ್ಮ ದೇಶದ ಸಂವಿಧಾನದ ಜೀವತತ್ವವಾಗಿದೆ. ಆದ್ದರಿಂದ ನಮ್ಮ ಪ್ರಜಾಪ್ರಭುತ್ವ ಮತ್ತು ನಮ್ಮ ದೇಶದ ಸಂವಿಧಾನವೇ ನಮ್ಮ ಧರ್ಮ, ನಮ್ಮ ಆದರ್ಶ, ನಮ್ಮ ಮಾರ್ಗದರ್ಶಕ ಗುರು. ಅದೇ ನಮಗೆ ಪ್ರಥಮ; ಅದೇ ನಮಗೆ ಪ್ರಧಾನ. ಯಾವ ಮತಧರ್ಮವೂ, ಯಾವ ಧರ್ಮಗುರುವೂ ಇಂದು ನಮಗೆ ಪೂರ್ಣಾದರ್ಶವಲ್ಲ; ಆಗಬೇಕಾಗಿಲ್ಲ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ‘ರಾಷ್ಟ್ರಪಿತ’ ಮಹಾತ್ಮ ಗಾಂಧಿ, ಸಮಾನತಾ ತತ್ವ ಬೋಧಿಸಿದ ‘ಸಂವಿಧಾನ ಶಿಲ್ಪಿ’ ಡಾ. ಬಿ.ಆರ್.ಅಂಬೇಡ್ಕರ್, ಡಾ. ಲೋಹಿಯಾ ಮೊದಲಾದ ಹಿರಿಯ ನೇತಾರರು ಅಹಿಂಸೆಯನ್ನು ನಮ್ಮ ರಾಷ್ಟ್ರದ ಮತ್ತು ರಾಷ್ಟ್ರ ರಾಜಕೀಯದ ‘ಶೀಲಾದರ್ಶ’ವೆಂದು ನಂಬಿದರು; ಹಾಗೆ ನಡೆದುಕೊಂಡರು. ಅಹಿಂಸೆ ನಮ್ಮ ಸಂವಿಧಾನದ ಉಸಿರಾಗಿ ಇರುವಂತೆ ನೋಡಿಕೊಂಡರು. ಅಂಥ ಸಾತ್ವಿಕ ಮನಃಸ್ಥಿತಿಯ ‘ಸಂಸ್ಕೃತಿ ಶ್ರುತಿ’ ಕೆಡದಂತೆ ನಾವಿಂದು ನೋಡಿಕೊಳ್ಳಬೇಕಾಗಿದೆ.ಅದಕ್ಕೆ ಅಹಿಂಸೆಯನ್ನು ಬೋಧಿಸಿದ, ಮನುಷ್ಯತ್ವದ ಘನತೆಯನ್ನು ಪ್ರತಿಪಾದಿಸಿದ ಬುದ್ಧನಂಥ ಮಾನವತೆಯ ಬೆಳಕಿನ ಸ್ತಂಭಗಳ ನೆನಪು ಮಸುಕಾಗದಂತೆ, ಮರೆಯಾಗದಂತೆ ಕಾಪಾಡಿಕೊಳ್ಳಬೇಕಾಗಿದೆ. ನಮ್ಮ ಪ್ರಜಾಪ್ರಭುತ್ವವನ್ನು ಅಹಿಂಸಾಪಥಭ್ರಷ್ಟವಾಗದಂತೆ, ನಮ್ಮ ಜನತೆಯನ್ನು ಅಹಿಂಸಾಪಥಭ್ರಷ್ಟ ರಾಗದಂತೆ, ಕಾಯುವುದಕ್ಕೆ ಕಾಪಾಡಿಕೊಳ್ಳುವುದಕ್ಕೆ ಅಂಥ ನೆನಪೂ ಅಗತ್ಯವಾಗಿದೆ. ಈ ‘ಬುದ್ಧಸಂಗಮ’ ಕಾರ್ಯಕ್ರಮ, ಸಮಾರಂಭ ಈ ತಿಳಿವಳಿಕೆಯ ಫಲವಾಗಿದೆ.

ಜಾತಿ-ಮತಧರ್ಮದ ಹೆಸರಿನಲ್ಲಿ ದೇಶದ ಜನತೆಯನ್ನು ಒಡೆಯುವುದು ಬೇಡ : ಎಲ್ಲರೂ ಕೂಡಿ ಬಾಳೋಣ. ಅಹಿಂಸೆಯ ಅಡಿಪಾಯದ ಮೇಲೆ ಸಮಾನತೆಯ, ಜಾತಿ-ಮತಧರ್ಮ ನಿರಪೇಕ್ಷ ಮನೋಧರ್ಮದಲ್ಲಿ ಸುಭದ್ರ ದೇಶವನ್ನು ಕಟ್ಟೋಣ. ಅಂಥ ಸಾತ್ವಿಕ ಸಂಕಲ್ಪಕ್ಕೆ ಬುಧ್ಧನಂಥವನ ನೆನಪು ಸಂಜೀವಿನಿ ಶಕ್ತಿಯಾಗಲಿ.

* ಬುದ್ಧ ಪೂರ್ಣಿಮೆಯ ದಿನ ೧೬-೫-೨೦೦೩ ರಂದು ಮೈಸೂರಿನ ರಂಗಾಯಣದ ‘ವನರಂಗ’ದಲ್ಲಿ ನಡೆದ ‘ಬುದ್ಧ ಸಂಗಮ’ ಸಮಾರಂಭದಲ್ಲಿ ಮಾಡಿದ ಪ್ರಾಸ್ತಾವಿಕ ಭಾಷಣದ ಲಿಖಿತ ರೂಪ.