‘ದ್ವೇಷಬಿಟ್ಟು ದೇಶ ಕಟ್ಟು’ ಮೈಸೂರು ಸಮಾವೇಶದ ಉದ್ಘಾಟನೆ ಇಂದು ಇಲ್ಲಿ ಈಗ ಈ ವೇದಿಕೆಯ ಮೂಲಕ ಆಗುತ್ತಲಿದೆ. ಯಾವ ಧರ್ಮದವರೇ ಬಗ್ಗೆಯೇ ಆಗಲಿ ದ್ವೇಷ ಇಟ್ಟುಕೊಳ್ಳುವುದು, ದ್ವೇಷ ಬೆಳೆಸಿಕೊಳ್ಳುವುದು ಮನುಷ್ಯತ್ವಕ್ಕೆ, ಮನುಷ್ಯ ಘನತೆಗೆ ಸಲ್ಲುವಂಥದಲ್ಲ. ದ್ವೇಷದಿಂದ ದೇಶ ಕಟ್ಟುವುದು ಸಾಧ್ಯವಿಲ್ಲ. ದ್ವೇಷದ ಗುಣ ಏನಿದ್ದರೂ ಕುಟ್ಟುವುದು, ಕೆಡಹುವುದು; ಕಟ್ಟುವುದಲ್ಲ. ಇಂಥ ಕುಟ್ಟುವ ಕೆಡಹುವ ಕ್ರಿಯೆ ಮತ್ತು ಮನೋಧರ್ಮದ ರಾಜಕೀಯವು ದೇಶದಲ್ಲಿ ದಿನೇ ದಿನೇ ವಿಜೃಂಭಿಸುತ್ತಲೇ ಹೋಗುತ್ತಿದೆ; ತೀವ್ರ ಆತಂಕವನ್ನು ಹುಟ್ಟಿಸುತ್ತಲೇ ಇದೆ.

ಶ್ರೀರಾಮ ಜನ್ಮಭೂಮಿಯ ಹೆಸರಿನಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಹಿಂದೂ ತೀವ್ರವಾದಿಗಳು ಕುಟ್ಟಿ ಕೆಡಹಿದ ೧೯೯೨ರ ಡಿಸೆಂಬರ್ ೬ನೆಯ ತಾರೀಖು ಒಂದು ಕರಾಳ ದಿನವಾಯಿತು. ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಕುಟ್ಟುವ ಕೆಡಹುವ ಕೆಟ್ಟ ರಾಜಕೀಯವು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಆ ದಿನದಿಂದಲೇ ಪ್ರಾರಂಭವಾಯಿತು.

ಆ ಕಾಲದಲ್ಲಿ ದೇಶದ ಅನೇಕ ಕಡೆಗಳಲ್ಲಿ ಕೋಮುಗಲಭೆಗಳಾದವು. ಶಾಂತಿಪ್ರಿಯರ ನೆಲೆಯಾದ ಈ ನಮ್ಮ ಮೈಸೂರಿನಲ್ಲಿಯೂ ಕೋಮುಗಲಭೆ ಉಂಟಾಗಿ ಕೊಲೆ ಸುಲಿಗೆಗಳೆಲ್ಲ ಆದವು. ಆ ದುಃಸ್ವಪ್ನದಂಥ ನೆನಪು ಈಗಲೂ ಮೈಸೂರಿನವರ ಮನಸ್ಸಿನಲ್ಲಿ ಕಾಡುವ ನೆನಪಾಗಿ ಉಳಿದುಕೊಂಡಿದೆ. ಆ ಕೋಮುಗಲಭೆಯ ಕಾಲದಲ್ಲಿ ಮೈಸೂರಿನ ‘ಮಾನವ ಸೌಹಾರ್ದ ಸಮಿತಿ’ಯ ಆಶ್ರಯದಲ್ಲಿ ರಚಿತವಾದ ಶಾಂತಿ ಸಮಿತಿಯ ಸದಸ್ಯರಲ್ಲಿ ಒಬ್ಬನಾಗಿ ನಾನೂ ಕೆಲಸ ಮಾಡಿದ್ದೆ. ಮಿತ್ರರಾದ ಕೆ.ಎಂ.ಜಯರಾಮಯ್ಯನವರು ಆ ಸಮಿತಿಯ ಸಂಚಾಲಕರಾಗಿದ್ದರು. ಲತಾ ಮೈಸೂರು, ಡಾ. ಹಿ.ಶಿ.ರಾಮಚಂದ್ರೇಗೌಡ, ಡಾ. ರಫೀಕ್ ಅಹಮ್ಮದ್, ಎನ್.ಎಸ್. ಗೋಪಿನಾಥ್ ನಮ್ಮ ಕಿರಿಯ ಸ್ನೇಹಿತರೂ, ಪ್ರೊ.ಸಿ.ಡಿ. ನರಸಿಂಹಯ್ಯ, ಪ್ರೊ.ಕೆ.ಶ್ರೀನಿವಾಸನ್, ಡಾ. ಎಚ್.ಎ.ಬಿ. ಪಾರ್ಪಿಯಾರಂಥ ಕೆಲವು ಹಿರಿಯರೂ, ರಾಮಕೃಷ್ಣಾಶ್ರಮದ ಸ್ವಾಮಿಯೊಬ್ಬರೂ, ಕ್ರೈಸ್ತ ಫಾದರ್ ಒಬ್ಬರೂ ಆ ಶಾಂತಿ ಸಮಿತಿಯ ಸದಸ್ಯರಾಗಿದ್ದರು. ಆ ಕೋಮು ಗಲಭೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಮೈಸೂರಿಗೆ ಪೊಲೀಸ್ ಕಮೀಷನರ್ ಆಗಿ ನೇಮಕಗೊಂಡು ವರ್ಗವಾಗಿ ಬಂದಿದ್ದ, ನನಗೆ ಪೂರ್ವಪರಿಚಿತರಾಗಿದ್ದ ಡಾ. ಅಜಯ ಕುಮಾರ್ ಸಿಂಗ್ ಅವರು ಗಲಭೆ ಪ್ರದೇಶಗಳಿಗೆ ಹೋಗಿ ಕೆಲಸ ಮಾಡಲೆಂದು ಶಾಂತಿ ಸಮಿತಿಯ ಸದಸ್ಯರಿಗೆ ವಿಶೇಷ ‘ಪಾಸ್’ಗಳನ್ನು ನೀಡಿದ್ದರು., ಇಲಾಖೆಯ ಕಡೆಯಿಂದ ಅಗತ್ಯ ನೆರವನ್ನೂ ನೀಡಿ ಯುಕ್ತವಾದ ರೀತಿಯಲ್ಲಿ ಸಹಕರಿಸಿದ್ದರು. ಗಲಭೆಪೀಡಿತ ಮೊಹಲ್ಲಾಗಳಲ್ಲಿ ಶಾಂತಿ ಮೆರವಣಿಗೆಗಳನ್ನು ಸಂಘಟಿಸಲಾಗಿತ್ತು. ಪ್ರಗತಿಪರ ಮಹಿಳಾ ವೇದಿಕೆಯಾದ ‘ಸಮತಾ ವೇದಿಕೆ’ಯ ಸದಸ್ಯೆಯರೂ ಅಲ್ಪಸಂಖ್ಯಾತರ ನಿರಾಶ್ರಿತ ಮಹಿಳೆಯರ ಶಿಬಿರಗಳಿಗೆಲ್ಲ ಹೋಗಿ ನೆರವು ನೀಡುವ ಸೇವಾ ಕಾರ್ಯ ಮಾಡಿದ್ದರು. ಹಾಗಾಗಿ ಕೋಮುಗಲೆಭೆಯ ಘೋರವನ್ನು, ಪಾತಕವನ್ನು ಹತ್ತಿರದಿಂದ ನೋಡಿ ಅರಿಯುವ ಅವಕಾಶ ಸ್ವಲ್ಪ ಮಟ್ಟಿಗೆ ನಮಗೆ ದೊರೆಯುವಂತಾಗಿತ್ತು.

ಈಗ ನಮ್ಮ ಕರ್ನಾಟಕದಲ್ಲಿಯೆ ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿಯ ದತ್ತಪೀಠವನ್ನು ಕರ್ನಾಟಕದ ಅಯೋಧ್ಯೆಯನ್ನಾಗಿ ಮಾಡುವುದಾಗಿ ಬಿಜೆಪಿ ಪಕ್ಷದ ಅದ್ಯಕ್ಷ ಅನಂತಕುಮಾರ್ ಅವರು ಘೋಷಿಸಿದ್ದಾರೆ. ಜಾತಿ ಮತಾತೀತತೆಯ ಮಾತನಾಡುವ ಬುದ್ಧಿಜೀವಿಗಳಿಗೆ, ಜಾತಿ, ಮತಧರ್ಮ ನಿರಪೇಕ್ಷವಾದಿಗಳಿಗೆ (ಸೆಕ್ಯುಲರಿಸ್ಟರಿಗೆ) ಮರಣ ದಂಡನೆಯನ್ನು ಜನರು ನೀಡುತ್ತಾರೆ ಎಂದು ಹೇಳುವ ಮಟ್ಟಿನ ಪ್ರಚೋದನಾತ್ಮಕ ಭಾಷಣ ಮಾಡುತ್ತ ತಿರುಗುವ ತೊಗಾಡಿಯಾ (ನೋಡಿ : ‘Hindutva storm will not be limited to Gujarat’ : Togadia – ಎಂಬ, ನೀನಾ ವ್ಯಾಸ್ ಅವರ ವರದಿ ಹಾಗೂ ಅದರೊಳಗೇ ಇರುವ ‘Hindutva opponents will get death sentence ಎಂಬ ಉಪಶೀರ್ಷಿಕೆ – ದಿ ಹಿಂದೂ ಪತ್ರಿಕೆ ೧೮-೧೨-೨೦೦೨) ಸಂಘಪರಿವಾರದ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದತ್ತಪೀಠ ಸಂಬಂಧವಾದ ವಿವಾದವನ್ನು ಹುಟ್ಟುಹಾಕಿದ್ದಲ್ಲದೆ, ನ್ಯಾಯಾಲಯವು ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗುವಂತೆ ಆದೇಶ ನೀಡಿರುವಾಗಲೂ ಅವರು ಅಂಥ ಬೆದರಿಕೆ ಹಾಕುವಷ್ಟು ಮುಂದಾಗಿರುವುದು ಅತ್ಯಂತ ಆತಂಕಕಾರಿಯಾದ, ಅಪಾಯಕಾರಿಯಾದ ಬೆಳವಣಿಗೆಯಾಗಿದೆ. ರಾಜ್ಯ ಸರ್ಕಾರವು ಕಾನೂನು ಸುವ್ಯವಸ್ಥೆಗೆ ಅಗತ್ಯವಾದ ಬಂದೋಬಸ್ತ ಮಾಡಿರುವುದಾಗಿ, ಸೂಕ್ತ ಕ್ರಮ ಕೈಗೊಂಡಿರುವುದಾಗಿ ಹೇಳುತ್ತಲೇ ಇದೆ. ಹಿಂದೂ ತೀವ್ರವಾದಿಗಳು ಬಾಬರಿ ಮಸೀದಿ ಕೆಡವಿದ ದಿನದಂದು ಕೂಡ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಸರ್ಕಾರಿ ಬಂದೋಬಸ್ತ್ ಭರವಸೆ ಹಾಗೂ ಆ ಬಗ್ಗೆ ಕೇಂದ್ರದ ಕಾಂಗ್ರೆಸ್ ಸರ್ಕಾರದ ಆಶ್ವಾಸನೆ ಇದಕ್ಕಿಂತ ಕಡಮೆ ಏನಿರಲಿಲ್ಲ. ಈಗ ನ್ಯಾಯಾಲಯದ ಆದೇಶ ಇರುವಂತೆ ಆಗಲೂ ಇತ್ತು. ಆದರೆ ಧರ್ಮಾಂಧತೆ ಎಂತೆಂಥ ಅನಾಹುತಗಳನ್ನು ಮಾಡಿಸೀತು ಎಂದು ಮುಂದಾಗಿ ಹೇಳಬಲ್ಲವರಾರು?

ಆದ್ದರಿಂದ ಕರ್ನಾಟಕದ ನಾವು, ಅದರಲ್ಲಿಯೂ ಮೈಸೂರಿನ ನಾವು, ನೀವು ಎಲ್ಲ ಸೇರಿ ಹಿಂದಿನ ಕೆಟ್ಟ ಅನುಭವದಿಂದ ಮುಂಜಾಗ್ರತೆಯಿಂದ ನಮ್ಮನ್ನೂ ಸೇರಿಸಿಕೊಂಡು ಮೈಸೂರು ನಗರದ ಸಮಸ್ತ ಜನತೆಯ ಕ್ಷೇಮದ ಬಗ್ಗೆ ಚಿಂತನೆ ಮಾಡಬೇಕಾಗಿದೆ. ‘ದ್ವೇಷ ಬಿಟ್ಟು ದೇಶ ಕೆಟ್ಟು’ ಎಂಬ ಸಂದೇಶವನ್ನು ಈ ಮೂಲಕ ಸಂಬಂಧಪಟ್ಟ ಕೋಮುವಾದಿಗಳಿಗೆಲ್ಲ ರವಾನಿಸಲೆಂದು ಹಾಗೂ ಮೈಸೂರು ನಗರದ ಶಾಂತಿಪ್ರಿಯ ಜನತೆಯೆಲ್ಲ ಈ ವಿಷಯದಲ್ಲಿ ನಮ್ಮೊಡನೆ ದನಿಗೂಡಿಸಲೆಂದು ಈ ದ್ವೇಷ ಬಿಟ್ಟು ದೇಶ ಕಟ್ಟು ಮೈಸೂರು ಸಮಾವೇಶವನ್ನು ಸಂಘಟಿಸಿ ಅದರ ಉದ್ಘಾಟನೆಯ ಕಾರ್ಯಕ್ರಮವನ್ನು ಈ ದಿನ ಇಲ್ಲಿ, ಹೀಗೆ ಇಟ್ಟುಕೊಂಡಿದ್ದೇವೆ. ಇದೇ ಸಂದರ್ಭದಲ್ಲಿ ಬೇರೆ ಬೇರೆ ವರ್ಗ, ವೃತ್ತಿಗಳಲ್ಲಿರುವ ಮೈಸೂರಿನ ಅರವತ್ತಕ್ಕಿಂತ ಹೆಚ್ಚು ಶಾಂತಿಪ್ರಿಯ ಹಿರಿಯ ನಾಗರಿಕರ ಶಾಂತಿ ಸಂದೇಶಸ ಜನಜಾಗೃತಿ ಮನವಿ ಪತ್ರದ ಬಿಡುಗಡೆಯೂ ಆಗುತ್ತಿದೆ. ಮೈಸೂರಿನ ಗೌರವಾನ್ವಿತ ಹಿರಿಯ ನಾಗರಿಕರ ಶಾಂತಿರಕ್ಷಕ ದನಿ ಮೈಸೂರಿನ ಸಮಸ್ತ ಜನತೆಗೆ ಕೇಳಿಸಲಿ ಎಂಬುದು, ಮೈಸೂರಿನ ಹೊರಗೂ, ದೇಶದ ಎಲ್ಲೆಲ್ಲೂ ಈ ಸಾತ್ವಿಕ ದನಿಗೆ ಸಹಮತದ ದನಿ ಕೇಳಿಸುವಂತಾಗಲಿ, ಎಂಬುದೂ ನಮ್ಮ ಆಶಯವಾಗಿದೆ.

ತಾನು ಹುಟ್ಟಿ ಬೆಳೆದು ಬಂದ ಧರ್ಮ, ಜಾತಿ ಸಂಬಂಧವಾದ ನಂಬಿಕೆ ಉಳಿಸಿಕೊಳ್ಳುವುದು, ಬಿಡುವುದು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವರ ಸ್ವಂತದ ವಿಷಯ. ಅದಕ್ಕೆ ಅವರಿಗೆ ಆ ಹಕ್ಕು ಇದೆ. ಆದರೆ ಧರ್ಮ, ಜಾತಿ ಸಂಬಂಧವಾದ ತನ್ನ ನಂಬಿಕೆ, ನಿಷ್ಠೆ ಉಳಿಸಿಕೊಳ್ಳುವ ಮತ್ತು ಅದರಂತೆ ಬದುಕುವ ಹೆಸರಿನಲ್ಲಿ ಇತರರ ಧರ್ಮ, ಜಾತಿ ಸಂಬಂಧವಾದ ನಂಬಿಕೆ, ನಿಷ್ಠೆ ಹಕ್ಕುಗಳ ಮೇಲೆ ದುರಾಕ್ರಮಣ ಮಾಡುವುದಕ್ಕೆ ಯಾರಿಗೂ ಹಕ್ಕಿಲ್ಲ. ತಾನು ಹುಟ್ಟಿ ಬೆಳೆದು ನಂಬಿ ಬಂದ ಧರ್ಮ, ಜಾತಿಗಳಿಗೆ ಸೇರಿದವರಲ್ಲ ಎಂಬ ಕಾರಣಕ್ಕೆ ಇತರರ ಹಕ್ಕುಗಳ ಮೇಲೆ ಆಕ್ರಮಣ ಮಾಡಿ ಅವರ ನಂಬಿಕೆ, ನಿಷ್ಠೆಯನ್ನೇ ಅಪರಾಧವೆಂದು ಭಾವಿಸುವುದು ಯುಕ್ತವಲ್ಲ. ಮಾನವ ಸಂಬಂಧದ ಬಗ್ಗೆ, ನಮ್ಮ ದೇಶದ ಸಂವಿಧಾನ ಪ್ರಣೀತ ಸಮಾಜವಾದೀ ಜಾತಿಮತಧರ್ಮ ನಿರಪೇಕ್ಷ ಸಮಾಜ ಸಂಸ್ಕೃತಿ ನಿರ್ಮಾಣದ ಆಶಯ, ಆದರ್ಶದ ಬಗ್ಗೆ ಗೌರವ, ನಿಷ್ಠೆ ಇರುವ ಯಾರೂ ಹಾಗೆ ಮಾಡುವುದಿಲ್ಲ; ಮಾಡಬಾರದು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಭೌಮತ್ವದ ಅಧಿಕಾರ ದೇಶದ ಜನತೆಯದು;ಸಮಸ್ತ ಜನತೆಯದು. ಸಂವಿಧಾನ ಮತ್ತು ಅದರ ವಿಧಿ ನಿಯಮಗಳು ದೇಶದ ಸಮಸ್ತ ಜನತೆಯ ದೇಶದ ಸಮಸ್ತ ಜನತೆಗೆ ಕೊಟ್ಟುಕೊಂಡದ್ದು. ಆ ಸಮಸ್ತ ಜನತೆಯ ಸಂಕಲ್ಪದ ಅಬಿವ್ಯಕ್ತಿ ದಾಖಲೆಯೇ ಸಂವಿಧಾನ. ಅದು ಕೇವಲ ಹಿಂದೂಗಳದ್ದಲ್ಲ, ಕೇವಲ ಮುಸಲ್ಮಾನರದ್ದಲ್ಲ, ಕೇವಲ ಕ್ರೈಸ್ತರದದಲ್ಲ ಅಥವಾ ಬೇರಾವುದೊ ಒಂದು ಮತಧರ್ಮದವರದ್ದೊ, ಜಾತಿಯವರದ್ದೊ, ಯಾವೊಂದು ನಿರ್ದಿಷ್ಟ ವಿಚಾರವಾದದವರದ್ದೊ ಅಲ್ಲ. ಅದು ಎಲ್ಲರದ್ದು;; ದೇಶದ ಸಮಸ್ತರಿಗೂ ಸಂಬಂಧಪಟ್ಟದ್ದು. ಮತಧರ್ಮ, ಜಾತಿಗಳ ಬಗೆಗಿನ ನಿಷ್ಠೆಗಿಂತ ಸಂವಿಧಾನದ ಬಗೆಗಿನ ನಿಷ್ಠೆಗೆ ಪ್ರಥಮ ಮತ್ತು ಪರಮ ಆದ್ಯತೆ. ಇದನ್ನು ಎಲ್ಲರೂ ಎಲ್ಲ ಜಾತಿಮತಧರ್ಮಗಳಿಗೆ ಸೇರಿದವರೂ ತಿಳಿದು ನಡೆದುಕೊಳ್ಳಬೇಕು.

ತೀವ್ರ ಹಿಂದೂತ್ವವಾದಿಗಳು ಹಿಂದೂಪರ ದೃಷ್ಟಿಯನ್ನು ರಾಷ್ಟ್ರಕ್ಷೇಮ, ರಾಷ್ಟ್ರಪ್ರೇಮದ ಜೊತೆ ತಳುಕು ಹಾಕಿ ಮಾತನಾಡುತ್ತಾರೆ. ಅದು ಸರಿಯಾದ ಧೋರಣೆಯಲ್ಲ. ಇಡೀ ರಾಷ್ಟ್ರದ ಕ್ಷೇಮ. ಇಡೀ ರಾಷ್ಟ್ರದ ಪ್ರೇಮ ಮುಖ್ಯವಾಗಬೇಕು. ನಿಜವಾಗಿ ರಾಷ್ಟ್ರಪ್ರೇಮಿಯಾದವರಿಗೆ, ರಾಷ್ಟ್ರದ ಕ್ಷೇಮವನ್ನು ನಿಜವಾಗಿ ಬಯಸುತ್ತೇವೆ ಎಂಬುವವರಿಗೆ ಹಿಂದೂಗಳ ಪರವೆಂದೊ ಮುಸ್ಲಿಮರ ಪರವೆಂದೊ ಕ್ರೈಸ್ತರ ಪರವೆಂದೊ, ಬೇರಾವುದೊ ಒಂದು ಧರ್ಮದ ಪರವೆಂದೊ ಹೇಳಿಕೊಳ್ಳುವುದು ಸಾಧ್ಯವಾಗಲಾರದು; ಸಾಧ್ಯವಾಗಬಾರದು.

ದೇಶವೆಂದರೆ ಒಂದು ಭೌಗೋಳಿಕ ವ್ಯಾಪ್ತಿಯ ಭೂಭಾಗ ಮಾತ್ರವಲ್ಲ, ಅದರ ನದಿನದಗಳಲ್ಲ, ಕಾಡುಮೇಡುಗಳಲ್ಲ, ಗುಡ್ಡಬೆಟ್ಟ ಪರ್ವತ ಶ್ರೇಣಿಗಳಲ್ಲ. ಅವೂ ಇವೆ ನಿಜ. ಆದರೆ ದೇಶವೆಂದರೆ ಮುಖ್ಯವಾಗಿ ರಾಷ್ಟ್ರದ ಜನ. ಜನ ಇಲ್ಲದಿದ್ದರೆ ಅದು ದೇಶವಾಗುವುದಿಲ್ಲ; ಪ್ರದೇಶ ಮಾತ್ರವಾಗುತ್ತದೆ. ರಾಷ್ಟ್ರದ ಕ್ಷೇಮವೆಂದರೆ ರಾಷ್ಟ್ರದಲ್ಲಿ ಇರುವ ಎಲ್ಲ ಜನರ ಕ್ಷೇಮ. ರಾಷ್ಟ್ರಪ್ರೇಮವೆಂದರೆ ರಾಷ್ಟ್ರದಲ್ಲಿ ಇರುವವರೆಲ್ಲರ ಬಗ್ಗೆ ಇರುವ ಪ್ರೇಮ, ಭಾರತದಲ್ಲಿ ಮುಸ್ಲಿಮರನ್ನು ಕ್ರೈಸ್ತರನ್ನು ದ್ವೇಷಿಸಿ ಕೇವಲ ಹಿಂದೂಗಳ ಪರ ಯೋಚಿಸುವವರು, ಕೇವಲ ಹಿಂದೂಗಳ ಪರ ಪ್ರೇಮ ತೋರಿಸುತ್ತೇವೆ ಎನ್ನುವವರು ರಾಷ್ಟ್ರಕ್ಷೇಮದ ಬಗ್ಗೆ ನಿಜವಾದ ಕಾಳಜಿ ಇರುವವರಲ್ಲ. ಅಂಥವರು ‘ಅಂಧ ರಾಷ್ಟ್ರೀಯವಾದಿಗಳು’, ಅಂಥವರು ದೇಶ ಕಟ್ಟುವವಲ್ಲ, ದ್ವೇಷ ಬಿತ್ತಿ ಬೆಳೆಯುವವರು. ಅಷ್ಟೆ ಹಿಂದೂಗಳನ್ನು ಕ್ರೈಸ್ತರನ್ನೂ ದ್ವೇಷಿಸಿ ಕೇವಲ ಮುಸ್ಲಿಮರ ಕ್ಷೇಮದಪರ ಯೋಚಿಸುವವರು, ಕೇವಲ ಮುಸ್ಲಿಮರ ಬಗ್ಗೆ ಪ್ರೇಮ ತೋರಿಸುವವರು ಕೂಡ ‘ಅಂಧ ರಾಷ್ಟ್ರೀಯವಾದಿಗಳೇ’ – ಅಂಥವರೂ ದೇಶ ಕಟ್ಟುವವರಲ್ಲ; ದ್ವೇಷವನ್ನು ಬಿತ್ತಿ ಬೆಳೆಯುವವರು. ಹಾಗೆಯೇ ಹಿಂದೂಗಳನ್ನೂ ಮುಸ್ಲಿಮರನ್ನೂ ದ್ವೇಷಿಸಿ ಕೇವಲ ಕ್ರೈಸ್ತರ ಕ್ಷೇಮದ ಪರ ಯೋಚಿಸುವವರೂ ರಾಷ್ಟ್ರಪ್ರೇಮದ ಬಗ್ಗೆ ನಿಜವಾದ ಕಾಳಜಿ ಇರುವವರಲ್ಲ. ಅಂಥವರೂ ‘ಅಂಧ ರಾಷ್ಟ್ರೀಯವಾದಿಗಳೇ’ – ಅವರೂ ದೇಶ ಕಟ್ಟುವವರಲ್ಲ, ದ್ವೇಷ ಬಿತ್ತಿ ಬೆಳೆಯುವವರು.

ನಿಜವಾಗಿ ನೋಡಿದರೆ ಎಲ್ಲ ಧರ್ಮಗಳವರಲ್ಲಿಯೂ ಇಂಥವರು, ಇಂಥ ವಿಘ್ನಸಂತೋಷಿಗಳುಕಡಮೆ; ತೀರಾ ಕಡಮೆ. ಆದರೆ ಆ ಕಡಮೆ ಜನವೇ ಜನರ ಮನಸ್ಸಿನಲ್ಲಿ ಧರ್ಮದ್ವೇಷ, ಕೋಮುದ್ವೇಷ, ಜಾತಿದ್ವೇಷದ ಬೆಂಕಿಹಚ್ಚುವ ದೇಶದ್ರೋಹಿಗಳು; ಜನದ್ರೋಹಿಗಳು. ಶೇಕಡಾ ೯೯ ರಷ್ಟು ಜನ, ಎಲ್ಲರೂ ಕೂಡಿಬಾಳುವ ನೆಮ್ಮದಿಯ ಬದುಕಿಗೆ ಕಾತರಿಸುವವರು. ಅಂಥವರ ಬಾಳಿನ ನೆಮ್ಮದಿಯನ್ನು ಕೆಡಿಸುವವರೆಲ್ಲ ಅವರು ಯಾವ ಧರ್ಮ, ಯಾವ ಕೋಮು, ಯಾವ ಜಾತಿಗೆ ಸೇರಿದವರೇ ಆಗಿರಲಿ ಅವರು ಖಂಡನಾರ್ಹರು. ಜನ ಅವರನ್ನು ಸಮಾಜಘಾತಕರು, ಅಪರಾಧಿಗಳು ಎಂದು ಪರಿಗಣಿಸಬೇಕು. ಜನತೆ ಅಂಥ ಧೈರ್ಯ ತೋರಿಸಬೇಕಾಗಿದೆ. ಅಂಥವರ ಅಪರಾಧೀ ಚಟುವಟಿಕೆಗಳ ಸುಳಿವು ಸಿಕ್ಕಿದರೆ ಹಾಗೆ ದೇಶದ್ರೋಹದ, ಜನದ್ರೋಹದ ಕೆಲಸ ಮಾಡದಂತೆ ಬುದ್ಧಿ ಹೇಳಬೇಕು, ಪ್ರಜಾಸತ್ತಾತ್ಮಕ, ಅಹಿಂಸಾತ್ಮಕ ವಿಧಾನಗಳ ಮೂಲಕ ತಡೆಯಬೇಕು. ಅದನ್ನು ಕೇಳಿಸಿಕೊಳ್ಳದಿದ್ದರೆ ಕಾನೂನುಪಾಲನೆ ಮಾಡಬೇಕಾದವರಿಗೆ ಕೂಡಲೆ ತಿಳಿಸುವ ಧೈರ್ಯ, ಹೊಣೆಗಾರಿಕೆ ತೋರಿಸಬೇಕು.

ದೇಶದಲ್ಲಿ ಅಲ್ಪಸಂಖ್ಯಾತರಾದವರಿಗೆ ಅದರಲ್ಲಿಯೂ ಮುಖ್ಯವಾಗಿ ಮುಸ್ಲಿಮರಿಗೆ ಕಳೆದ ಒಂದು ಒಂದೂವರೆ ದಶಕಗಳಿಂದ ಸುರಕ್ಷಿತತೆಯ ಪ್ರಶ್ನೆ ತೀವ್ರವಾಗಿ ಕಾಡುತ್ತಿದೆ. ಆ ಕಾರಣ ಹೇಳಿಕೊಂಡು ಅಥವಾ ಆ ಕಾರಣಕ್ಕಾಗಿಯೇ ಅವರಲ್ಲಿಯೂ ಮತೀಯ ಮೂಲಭೂತವಾದವನ್ನು ಪ್ರತಿಪಾದಿಸುವ ಕೆಲವರು ಸಂಘಟಿತರಾಗುತ್ತಲೇ ಇದ್ದಾರೆ. ‘ಸಿಮಿ’ಯಂಥ ಉಗ್ರವಾದೀ ಮುಸ್ಲಿಂ ವಿದ್ಯಾರ್ಥಿ ಸಂಘಟನೆಯವರು ಈ ದೇಶದ ಬಗ್ಗೆ ಹಾಗೂ ಈ ದೇಶದ ಮಹಾತ್ಮ ಎನಿಸಿಕೊಂಡಿರುವ, ಹಿಂದೂ-ಮುಸ್ಲಿಂ ಭಾವೈಕ್ಯಕ್ಕಾಗಿ ಜೀವಮಾನವಿಡೀ ದುಡಿದ, ಅದಕ್ಕಾಗಿ ಪ್ರಾಣಾರ್ಪಣೆಯನ್ನೂ ಮಾಡಿದ ಅಹಿಂಸಾಮೂರ್ತಿ ಮಹಾತ್ಮ ಗಾಂಧಿಯವರಂಥ ದೇಶನಾಯಕರ ಬಗ್ಗೆ ಕೂಡ ಸಿನಿಕ ಧೋರಣೆ, ಅಸಹನೆಯ ಭಾವನೆಯನ್ನು ಬೆಳೆಸಿಕೊಂಡಿದ್ದಾರೆ. (ನೋಡಿ : ಸಾಯಂತನ್ ಚಕ್ರವರ್ತಿಯವರ ‘Nursery of Hate’ ಎಂಬ ವರದಿ ಹಾಗೂ ‘ಸಿಮಿ’ಯ ಸೆಕ್ರೆಟರಿ ಜನರಲ್ ಸಫ್ತಾರ್ ನಗೋರಿಯವರ ಸಂದರ್ಶನ – ಇಂಡಿಯಾ ಟುಡೇ ೨ ಏಪ್ರಿಲ್ ೨೦೦೧, ಪು. ೩೮-೪೦, ೪೨) ಅವರೂ ದ್ವೇಷ, ಹಿಂಸೆಯನ್ನು ಪ್ರತಿಪಾದಿಸುತ್ತಿದ್ದಾರೆ. ಮುಸ್ಲಿಮರೂ ಸೇರಿದಂತೆ ಎಲ್ಲರೂ ಇಂಥ ಬೆಳವಣಿಗೆಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಬೇಕು.

ದೇಶದಲ್ಲಿ ಇಂಥ ವಾತಾವರಣ ಇರುವುದರ ಜೊತೆಗೆ ಗಡಿಯಾಚೆಯಿಂದ ಪಾಕಿಸ್ತಾನವು ದುಷ್ಟ ತಂತ್ರ ಕುತಂತ್ರಗಳನ್ನು ಹೂಡಿ ಆತಂಕವಾದಿಗಳನ್ನು ಗಡಿಯೊಳಕ್ಕೆ ನುಗ್ಗಿಸಿ ಹಿಂಸಾಚಾರವನ್ನು ದಿನನಿತ್ಯದ ವ್ಯವಹಾರ ಎಂಬಂತೆ ಮಾಡಿಕೊಂಡು ಬಿಟ್ಟಿದೆ. ಕಾಶ್ಮೀರದಲ್ಲಿ ಹಿಂದೂ ಪಂಡಿತರ ಹತ್ಯೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ತೀವ್ರ ಹಿಂದೂವಾದಿಗಳ ದ್ವೇಷ, ಹಿಂಸೆಯ ಚಟುವಟಿಕೆಗಳ ಬಗ್ಗೆ ಹೇಳಿದರೆ ದೇಶದೊಳಗಿನ ಮುಸ್ಲಿಮರಲ್ಲಿ ತೀವ್ರ ಮತೀಯವಾದಿಗಳು ಹಾಗೆ ಮಾಡುತ್ತಿಲ್ಲವೆ, ಗಡಿಯೊಳಕ್ಕೆ ನುಗ್ಗುತ್ತಿರುವ ಮುಸ್ಲಿಮರಾದ ಪಾಕಿಸ್ತಾನಿಗಳು ಹಾಗೆ ಮಾಡುತ್ತಿಲ್ಲವೆ ಎಂಬ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಸುಲಭ ಉತ್ತರ ಹೇಳಿ ಸುಮ್ಮನಾಗಿಬಿಡುವಂಥ ಸ್ಥಿತಿ ಇಲ್ಲದಂಥ ಪೇಚಿಗೆ, ಸಂಕಟಕ್ಕೆ ಪ್ರಜ್ಞಾವಂತರಾದವರೆಲ್ಲ, ನ್ಯಾಯವಂತರಾದ ಮುಸ್ಲಿಮರೆಲ್ಲ ಗುರಿಯಾಗುವಂತಾಗುತ್ತದೆ.ಯಾರೊ ಅಂಥ ಕೆಲವು ದುಷ್ಟರ ಕಾರಣದಿಂದಾಗಿ ಸಮಸ್ತ ನ್ಯಾಯವಂತ, ದೇಶಪ್ರೇಮಿ ಮುಸ್ಲಿಮರನ್ನು ಅನುಮಾನಿಸುವುದು ಅನ್ಯಾಯ, ಹಾಗೆಯೆ ಮುಸ್ಲಿಮರು ಕೂಡ ತೀವ್ರ ಹಿಂದೂವಾದಿಗಳ ಮುಸ್ಲಿಂ ವಿರೋಧಿ ರಾಜಕೀಯ ಚಟುವಟಿಕೆಗಳನ್ನು ಗಮನಿಸಿಎಲ್ಲ ಹಿಂದೂಗಳನ್ನೂ ಅನುಮಾನದಿಂದಲೇ ನೋಡುವಂತಾದೆ ಅದೂ ಕೂಡ ಅನ್ಯಾಯ.

ಪಾಕಿಸ್ತಾನದ ಕಡೆಯಿಂದ ಆಕ್ರಮಣ ನಡೆಸಿ ಹಿಂಸೆಯಲ್ಲಿ ತೊಡಗಿರುವ ಆತಂಕವಾದಿಗಳೂ ಮುಸ್ಲಿಮರು; ಭಾರತದ ಮುಸ್ಲಿಮರೂ ಅವರೂ ಒಂದೇ ಮತಧರ್ಮಕ್ಕೆ ಸೇರಿದವರು ಎಂಬ ಒಂದೇ ಒಂದು ಕಾರಣಕ್ಕೆ ಮುಸ್ಲಿಮರ ದೇಶಭಕ್ತಿಯನ್ನೇ ದೇಶಪರ ನಿಷ್ಠೆಯನ್ನೇ ಅನುಮಾನಿಸಲು ಮುಂದಾಗುವುದು ಘೋರ ಅನ್ಯಾಯ. ಹಾಗೆ ಹೇಳಿಕೊಂಡು ತ್ರಿಶೂಲ ದೀಕ್ಷೆ ನೀಡುವುದನ್ನು, ಅಯೋಧ್ಯೆಯ ಕರಸೇವಕಪುರಂ, ಕಾಶಿ, ಮಥುರಾ, ಮೀರತ್ ಮೊದಲಾದ ಸ್ಥಳಗಳಲ್ಲಿ ಬಂದೂಕು ತರಬೇತಿ ನೀಡುವ ಶಿಬಿರಗಳನ್ನು ನಡೆಸುವುದನ್ನು ಹಿಂದೂ ಪರಿವಾರದವರು ಹಿಂದೂ ಧರ್ಮದ ರಕ್ಷಣೆಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವುದು ಸರಿಯಲ್ಲ. (ನೋಡಿ : ದಿ ಟೈಮ್ಸ್ ಆಫ್ ಇಂಡಿಯಾ ಬಿಸ್ವಜೀತ್ ಬ್ಯಾನರ್ಜಿ ವರದಿ ‘Bajrang Dal begins fire arms camp to protect Hinduism’ ೨೦ ಜೂನ್ ೨೦೦೦). ಹಾಗೆ ಮಾಡುವುದು ತಪ್ಪು. ಅದರಿಂದ ಕ್ರೂರ ಫ್ಯಾಸಿಸ್ಟ್ ಮನೋಧರ್ಮ ಬೆಳೆಯುವುದಕ್ಕೆ ಕಾರಣವಾಗುತ್ತದೆ. ಹಿಟ್ಲರನ ಜರ್ಮನಿಯ ಕೆಟ್ಟ ಇತಿಹಾಸ ಭಾರತದಲ್ಲಿ ಪುನರಾವರ್ತನೆಯಾಗುವುದು ಬೇಡ. ಹಿಂದೂಗಳೂ, ಮುಸ್ಲಿಂ, ಕ್ರೈಸ್ತ ಧರ್ಮಗಳಿಗೆ ಸೇರಿದವರೂ, ಹುಟ್ಟಿದ ಕಾರಣಕ್ಕಾಗಿಯೆ ಆ ಮತಧರ್ಮ ಅಥವಾ ಯಾವುದೊ ಜಾತಿ ಮತಧರ್ಮದೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡದ ಜಾತಿಮತಧರ್ಮ ನಿರಪೇಕ್ಷವಾದಿಗಳೂ ಎಲ್ಲರೂ ಕೂಡಿ ಬಾಳುವಂಥ ದೇಶವನ್ನು ಕಟ್ಟುವ ಸಂಕಲ್ಪವನ್ನು ಮಾಡೋಣ.ಸಂವಿಧಾನ ಪ್ರಣೀತ ಸಮಾಜವಾದೀ ಜಾತಿಮತಧರ್ಮ ನಿರಪೇಕ್ಷ ಸಮಾಜ ಸಂಸ್ಕೃತಿ ಬಗೆಗಿನ ನಮ್ಮ ನಿಷ್ಠೆಯನ್ನು ದೃಢಪಡಿಸುವ ಸಂಕಲ್ಪ ಮಾಡೋಣ.

ಇಲ್ಲಿ ಈ ಸಂದರ್ಭದಲ್ಲಿ ಹೆಚ್ಚಿಗೆ ವಿವರದಲ್ಲಿ ಹೆಚ್ಚಿನ ವಿಷಯಗಳನ್ನು ಪ್ರಸ್ತಾಪಿಸುವುದಕ್ಕೆ ಕಾಲಾವಕಾಶವಿಲ್ಲ. ಅವಕಾಶವೂ ಇಲ್ಲ. ಬರುವ ೨೦೦೪ರ ಜನವರಿ ೩ನೆಯ ತಾರೀಖಿನವರೆಗೂ ದ್ವೇಷ ಬಿಟ್ಟು ದೇಶ ಕಟ್ಟು ಮೈಸೂರು ಸಮಾವೇಶ ನಡೆಯುತ್ತಿರುತ್ತದೆ. ಅದರ ಅಂಗವಾಗಿ ಈವರೆಗೆ ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮದ ರೂಪದಲ್ಲಿ ಬೀದಿಭಾಷಣ, ಸಮೂಹ ಹಾಡು, ಬೀದಿ ನಾಟಕಗಳನ್ನು ನಗರದ ಬೇರೆ ಬೇರೆ ಮೊಹಲ್ಲಾಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ ನಡೆಸುವುದೆಂದು ಯೋಚಿಸಲಾಗಿದೆ. ೨೦೦೪ನೆಯ ಜನವರಿ ೩ನೇ ತಾರೀಖಿನ ದಿನ ದ್ವೇಷ ಬಿಟ್ಟು ದೇಶ ಕಟ್ಟು ಮೈಸೂರು ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ನಿಮ್ಮೆಲ್ಲರ ಹಾಗೂ ಮೈಸೂರು ನಗರದ ಶಾಂತಿಪ್ರಿಯ ಸಮಸ್ತರ ಸಂಪೂರ್ಣ ಸಹಕಾರ, ಬೆಂಬಲವನ್ನು ಕೋರುತ್ತೇವೆ.

* ‘ದ್ವೇಷ ಬಿಟ್ಟು ದೇಶ ಕಟ್ಟು : ಮೈಸೂರು ಸಮಾವೇಶ’ದ ಉದ್ಘಾಟನಾ ಸಮಾರಂಭದ ಪ್ರಾಸ್ತಾವಿಕ ಭಾಷಣ (೬ ಡಿಸೆಂಬರ್ ೨೦೦೩)