ಡಾಮ್ ಮೊರೇಸ್ (Dominic Francis Moraes) ಇಂಗ್ಲಿಷ್ ಭಾಷೆಯ ಕವಿ ಹಾಗೂ ಗದ್ಯ ಲೇಖಕ. ಜುಲೈ ೧೯, ೧೯೩೮ರಲ್ಲಿ ಮುಂಬಯಿಯಿಂದ ಹುಟ್ಟಿದ ಅವರು ಇದೇ ಜೂನ್ ೨, ೨೦೦೪ರಂದು ಮುಂಬಯಿಯ ಹೊರವಲಯದಲ್ಲಿರುವ ಅವರ ಮನೆಯಲ್ಲಿ ನಿದ್ದೆಯಲ್ಲಿರುವಾಗಲೆ ಹೃದಯಘಾತದಿಂದ ನಿಧನರಾದರು. ಕೆನ್ಸರ್ ಕಾಯಿಲೆ ಇದ್ದ ಅವರಿಗೆ ಕೆನ್ಸರಿನ ಯಾತನೆ, ಭಾಧೆ ಇಲ್ಲದ ಶಾಂತ ಸಾವು ಕೊನೆಯಲ್ಲಿ ದೊರಕಿದ್ದು ಅವರ ದೃಷ್ಟಿಯಿಂದ ಒಳ್ಳೆಯ ಬಿಡುಗಡೆ ಎಂದೇ ಹೇಳಬಹುದು.

ಡಾಮ್ ಮೊರೇಸ್ ಅವರ ತಂದೆ ಫ್ರಾಂಕ್ ಮೊರೇಸ್ ; ಪತ್ರಕರ್ತರಾಗಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಖ್ಯಾತಿ ಪಡೆದವರು. ಅವರು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಸ್ವಾತಂತ್ರ್ಯಾ ನಂತರದ ಕಾಲದ ಮೊತ್ತ ಮೊದಲ ಭಾರತೀಯ ಸಂಪಾದಕರೆಂಬ ಗೌರವಕ್ಕೆ ಪಾತ್ರರಾದವರು. ತಾಯಿ-ತಂದೆ ನಡುವೆ ಹೊಂದಾಣಿಕೆ ಇಲ್ಲದ ಕೌಟುಂಇಕ ವಾತಾವರಣ, ಜೊತೆಗೆ ತಾಯಿಯ ಮಾನಸಿಕ ಅಸ್ವಸ್ಥತೆ ಇವುಗಳಿಂದಾಗಿ ಡಾಮ್ ಮೊರೇಸ್ ಅವರ ಬಾಲ್ಯ, ತಾರುಣ್ಯ ಸಂತೋಷದಾಯಕವಾಗಿರಲಿಲ್ಲ. ಅದರಿಂದಾಗಿಯೊ ಏನೊ ಅವರಕಾವ್ಯದಲ್ಲಿ ಏಕಾಕಿತನ, ಅಭದ್ರತೆಯ ಭಾವನೆ, ಪಲಾಯನಾಪೇಕ್ಷೆ ಸಾಮಾನ್ಯ ಅನುಭವವಾಗಿದೆ. ಅವರ ದಾಂಪತ್ಯ ಜೀವನವೂ ಹೆಚ್ಚು ಬಾಳಿಕೆಯದೊ, ತಾಳಿಕೆಯದೊ ಆಗಿರಲಿಲ್ಲ. ಹೆಂಡತಿ ಖ್ಯಾತ ಸಿನಿಮಾ ತಾರೆ ಲೀಲಾ ನಾಯ್ಡು ಅವರೊಂದಿಗೆ ವಿವಾಹ ವಿಚ್ಛೇದನವಾದ ಮೇಲೆ ಸರಯೂ ಶ್ರೀವತ್ಸ ಎಂಬಾಕೆಯ ಜೊತೆಗೆ – ಕೊನೆಯ ಸುಮಾರು ಒಂದುವರೆ ದಶಕಗಳ ಕಾಲ ನಿಕಟವಾಗಿದ್ದರಂತೆ. ‘Out of God’s Oven’ ಎಂಬ ಪುಸ್ತಕವನ್ನು ಸರಯೂ ಶ್ರೀವತ್ಸ ಅವರೊಂದಿಗೆ ಸಹ ಲೇಖಕರಾಗಿ ಬರೆದಿದ್ದಾರೆ.

ಭಾರತದಲ್ಲಿಯೆ ಹುಟ್ಟಿದವರಾದರೂ ಡಾಮ್ ಮೊರೇಸ್ ಅವರಿಗೆ ಭಾರತದ ಬಗ್ಗೆ ಯಾಕೊ ಹೆಚ್ಚಿನ ಪ್ರೀತಿ, ದೇಶಾಭಿಮಾನ ಬೆಳೆಯಲಿಲ್ಲ. ಇಂಗ್ಲಿಷ್ ಬಿಟ್ಟು ಭಾರತದ ಬೇರೆ ಯಾವ ಭಾಷೆಯನ್ನೂ ಅವರು ಮಾತನಾಡಲೂ ಇಲ್ಲ; ಕಲಿಯೂ ಇಲ್ಲ. ಡಾಮ್ ಮೊರೇಸ್ ಅವರ ವಿದ್ಯಾಭ್ಯಾಸವೂ ಲಂಡನ್, ಆಕ್ಸ್‌ಫರ್ಡ್‌ಗಳಲ್ಲಿಯೇ ಆಯಿತು. ಆಕ್ಸ್‌ಫರ್ಡಿನಲ್ಲಿ ಇಂಗ್ಲಿಷ್ ಸಾಹಿತ್ಯದ ಅಧ್ಯಯನ ಮಾಡಿದರು.

ಡಾಮ್ ಮೊರೇಸ್ ಅವರ ಹಿರಿಯರು ಗೋವಾ ಮೂಲದ ಕ್ರಿಶ್ಚಿಯನ್‌ರು. ಭಾರತವು ಪೋರ್ಚುಗೀಜರ ಹಿಡಿತದಿಂದ ಗೋವಾವನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಡಾಮ್ ಮೊರೇಸ್ ಅವರು ಅಸಮಾಧಾನಗೊಂಡು ಅದನ್ನು ಬಹಿರಂಗವಾಗಿಯೆ ಪ್ರತಿಭಟಿಸಿದ್ದುಂಟು. ೧೯೬೧ರಲ್ಲಿ ಅವರು ಇಂಗ್ಲಿಂಡ್ ದೇಶದ ಪೌರತ್ವವನ್ನು ಪಡೆದುಕೊಂಡರು. ಅವರ ಮನೋಧರ್ಮವೂ ಇಂಗ್ಲಿಷ್ ಅಥವಾ ಬ್ರಿಟಿಷ್ ಮನೋಧರ್ಮಕ್ಕೇ ಪೂರ್ತಿಯಾಗಿ ಹೊಂದಿಕೊಂಡಿದ್ದಾಗಿತ್ತು. ಆದರೂ ಅವರನ್ನು ಭಾರತೀಯ ಇಂಗ್ಲಿಷ್ ಕವಿ (Indian English Poet) ಎಂದೇ ಕರೆಯುವ ವಾಡಿಕೆಯೂ ಬೆಳೆದಿತ್ತು. ಅದೊಂದು ವ್ಯಂಗ್ಯ, ವಿಪರ್ಯಾಸ ಎಂಬ ಅಭಿಪ್ರಾಯವೂ ಇದೆ.

ಡಾಮ್ ಮೊರೇಸ್ ಕಳೆದ ಶತಮಾನದ ಎಂಬತ್ತರ ದಶಕದ ಕೊನೆಯ ಹೊತ್ತಿಗೆ ಭಾರತಕ್ಕೆ ಮರಳಿ ಬಂದರು. ಭಾರತದ ಬಗ್ಗೆ, ಭಾರತದ ಜನತೆಯ ಬಗ್ಗೆ ಸಹಾನುಭೂತಿ, ಅಂತಃಕರಣ ಸಂಬಂಧ ಬೆಳೆಸಿಕೊಳ್ಳಬೇಕೆಂದು ಪ್ರಯತ್ನಿಸಿದರೂ ಅದು ಅವರಿಂದ ಸಾಧ್ಯವಾಗಲಿಲ್ಲವಂತೆ. ಭಾರತ ದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯ ಮತ್ತು ಹಿಂಸಾಚಾರದ ಕಾರಣದಿಂದ ಭಾರತದ ಜನತೆಯ ಬಗ್ಗೆ ದಯಾದೃಷ್ಟಿ ಬೆಳೆಯಲಿಲ್ಲವಂತೆ! ಈ ಕಾರಣ ನಿಜವಾದದ್ದಾದರೆ ತುರ್ತು ಪರಿಸ್ಥಿತಿಯಂಥ ಅನಿರ್ಬಂಧಿತ ಹಿಂಸಾಚಾರ, ದಬ್ಬಾಳಿಕೆಯ ರಾಜ್ಯಭಾರ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ್ದೇ ಆದ ಕರ್ನಾಟಕ ಸರ್ಕಾರವು ಕರ್ನಾಟಕ ಕುರಿತು ಪುಸ್ತಕ ಬರೆಯಲು ನೀಡಿದ ಆಮಂತ್ರಣವನ್ನು ಆ ಕಾಲದಲ್ಲಿ ಒಪ್ಪಿಕೊಳ್ಳುವುದಕ್ಕೆ ಮುಜುಗರ ಪಡೆದ ಆ ಕೆಲಸಕ್ಕೆ ತಮ್ಮನ್ನು ತೊಡಗಿಸಿಕೊಂಡದ್ದು, ಅಂಥ ಪ್ರಸಿದ್ಧ ಲೇಖಕ ‘ತೆರೆದ ಕಣ್ಣು’ ಎಂಬಂಥ ಸಾಮಾನ್ಯ ಪುಸ್ತಕವನ್ನು ಬರೆದುಕೊಟ್ಟಿದ್ದು, ಏಕೆ ಹೇಗೆ ಎಂಬ ಪ್ರಶ್ನೆ ನಮ್ಮಲ್ಲಿ ಎದ್ದರೆ ಆಶ್ಚರ್ಯವಿಲ್ಲ !

ತಾಯಿ ತಂದೆಯರ ಕೌಟುಂಬಿಕ ವಾತಾವರಣ ಪ್ರೋತ್ಸಾಹದಾಯಕವಲ್ಲದಿದ್ದರೂ ತಂದೆಯ ಜೊತೆಗೆ ದೇಶ-ದೇಶಾಂತರಗಳ ಸಂಚಾರದ ಅಪರೂಪದ ಅವಕಾಶ ಬಾಲ್ಯ ಕಾಲದಲ್ಲಿಯೆ ದೊರೆತದ್ದರಿಂದ ಅವರ ಲೋಕಾನುಭವ, ನಾನಾ ದೇಶಗಳ ಜನಾಂಗಗಳ ಬಗೆಗಿನ ಜ್ಞಾನ ಸಮೃದ್ಧವಾಗಿಯೆ ಅವರಲ್ಲಿ ಬೆಳೆಯಿತು. ಡಾಮ್ ಮೊರೇಸ್ ಅವರ ತಂದೆ ೧೯೪೦ರಲ್ಲಿ ಬ್ರಹ್ಮದೇಶ ಮತ್ತು ಚೀಣಾ ಮುನ್ನೆಲೆಗಳಲ್ಲಿ ನಡೆಯುತ್ತಿದ್ದ ಎರಡನೆಯ ಮಹಾಯುದ್ಧದ ಸುದ್ಧಿಗಳನ್ನು, ವರದಿಗಳನ್ನು ನೀಡುತ್ತಿದ್ದ ಧೀರ ಪತ್ರಕರ್ತನಾಗಿದ್ದಂತೆ ಡಾಮ್ ಮೊರೇಸ್ ಕುಡ ಯುದ್ಧಭೂಮಿಯ ಕ್ರಾಂತಿ ನೆಲೆಯ ಹಾಗೂ ಜಾಗತಿಕ ಮಹತ್ವ ಪಡೆದುಕೊಂಡಿದ್ದ ಅಪರಾಧ ವಿಚಾರಣೆಯ ವರದಿಗಳನ್ನು ಕೊಡುತ್ತಿದ್ದ ಧೈರ್ಯಶಾಲಿ ಪತ್ರಿಕಾ ವರದಿಗಾರರೂ ಆಗಿದ್ದರೆಂಬುದು ಗಮನಿಸಬೇಕಾದ ಸಂಗತಿಯೇ ಆಗಿದೆ. ಡಾಮ್ ಮೊರೇಸ್ ‘My son’s Father’ (‘ನನ್ನ ಮಗನ ತಂದೆ’) ಎಂಬ ಆತ್ಮ ಚರಿತ್ರೆ ಬರೆದಿದ್ದಾರೆ. ‘Gone Away’ (೧೯೬೦), ‘A Matter of People’ (೧೯೭೪), ‘Never At Home’ (೧೯೯೪) ಅವರ ಕೃತಿಗಳಲ್ಲಿಯೂ ಅವರ ಆತ್ಮ ಚರಿತ್ರಾತ್ಮಕ ಘಟನೆ, ಸಂಗತಿಗಳನ್ನು ಕುರಿತ ವಿವರಗಳುಂಟು. ‘A Beginning’ (೧೯೫೭) ಎಂಬ ಕವನ ಸಂಕಲನದಿಂದ ಕೃತಿ ಪ್ರಕಟಿಸಲು ಪ್ರಾರಂಭಿಸಿದ ಡಾಮ್ ಮೊರೇಸ್ ಅವರು ಡಬ್ಲ್ಯೂ.ಎಚ್. ಆಡೆನ್, ಸ್ವೀಪನ್ ಸ್ಪೆಂಡರ್ ಅಂಥ ಇಂಗ್ಲಿಷ್ ಸಾಹಿತ್ಯ ಲೋಕದ ವಿಖ್ಯಾತರ ಮೆಚ್ಚುಗೆ ಗಳಿಸಿದ್ದರು. ಪ್ರಸಿದ್ಧ ಲೇಖಕನಾಗಿ ಬೆಳೆದು ಪ್ರತಿಷ್ಠಿತ ಹೊಥೊರ್ಡೆನ್ ಪ್ರೈಜ್ (Hawthorden Prize)ನ್ನು ಪಡೆದ ಏಕೈಕ ಬ್ರಿಟಿಷೇತರ ಲೇಖಕನೆಂಬ ಖ್ಯಾತಿಯೂ ಡಾಮ್ ಮೊರೇಸ್ ಅವರದಾಗಿದೆ.

‘ಡಾಮ್ ಮೊರೇಸ್’ ಅವರ ‘ತೆರೆದ ಕಣ್ಣು’ ಎಂಬ ಪುಸ್ತಕ ಪ್ರಕಟವಾದ ತುರ್ತು ಪರಿಸ್ಥಿತಿಯ ಕಾಲದಲ್ಲಿಯೆ ಆಗ ಕೆನರಾ ಲೋಕಸಭಾ ಸದಸ್ಯರಾಗಿದ್ದ ಶ್ರೀ.ಬಿ.ವಿ.ನಾಯಕರು ಆ ಪುಸ್ತಕವನ್ನು ಮತ್ತು ಅದನ್ನು ಬರೆಸಿದ್ದವರನ್ನು ನ್ಯಾಯವಾಗಿಯೆ, ಸರಿಯಾಗಿಯೆ ಸಮಾರಂಭವೊಂದರಲ್ಲಿ ಟೀಕಿಸಿದ್ದರು. ಆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಾನು ಆ ಪುಸ್ತಕವನ್ನು ಮತ್ತು ಬಿ.ವಿ.ನಾಯಕರು ಆಡಿದ ಮಾತುಗಳನ್ನು ನೆವ ಮಾಡಿಕೊಂಡು ತುರ್ತು ಪರಿಸ್ಥಿತಿಯನ್ನು, ತುರ್ತು ಪರಿಸ್ಥಿತಿ ಹೇರುವುದಕ್ಕೆ ಕಾರಣರಾದವರನ್ನು, ತುರ್ತು ಪರಿಸ್ಥಿತಿಯ ಕಾಲದಲ್ಲಿಯೆ ಖಂಡಿಸುವ ಅವಕಾಶವಾಗಿ ಬಳಸಿಕೊಂಡು ಬಿರುಸು ಭಾಷಣ ಮಾಡಿದ್ದೆ. ಕೆಲವು ವರ್ಷಗಳ ಹಿಂದೆ ಬರೆದಿಟ್ಟಿದ್ದ ಆ ಸಂದರ್ಭದ ನೆನಪನ್ನು ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ:

೧೯೭೭ರ ಜನವರಿ ೧ನೆಯ ತಾರೀಖು. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದ ಕಾಲ. ಅಂಕೋಲಾ ತಾಲೂಕಿನ ಶೆಟಗೇರಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಪ್ರೌಢಶಾಲೆಯ ವಾರ್ಷಿಕೋತ್ಸವ. ನಾನು ಆ ಸಮಾರಂಭದ ಅಧ್ಯಕ್ಷ. ಆಗಿನ ಕೆನರಾ ಲೋಕಸಭಾ ಕ್ಷೇತ್ರದ ಸದಸ್ಯರು ಶ್ರೀ ಬಿ.ವಿ.ನಾಯಕರು- ಇಂದಿರಾಗಾಂಧಿ ಕಾಂಗ್ರೆಸ್ಸಿನವರು. ಅವರು ಮತ್ತು ಈಗ ಕೀರ್ತಿಶೇಷರಾಗಿರುವ ಸಾಹಿತಿ ಶ್ರೀ ಕೃಷ್ಣಾ ಆಲನಹಳ್ಳಿಯವರು ಮುಖ್ಯ ಅತಿಥಿಗಳು.

ಇಂಗ್ಲಿಷ್ ಭಾಷೆಯ ಕವಿ ಡಾಮ್ ಮೊರೇಸ್ ಅವರ ‘ದಿ ಓಪನ್ ಆಯ್’ (‘ತೆರೆದ ಕಣ್ಣು’) ಎಂಬ, ಕರ್ನಾಟಕ ಕುರಿತ ಇಂಗ್ಲಿಷ್ ಪುಸ್ತಕ ಕೆಲವು ಕಾಲದ ಹಿಂದಷ್ಟೆ ಅಂದರೆ ತುರ್ತು ಪರಿಸ್ಥಿತಿಯ ಕಾಲದಲ್ಲಿಯೆ ಪ್ರಕಟವಾಗಿತ್ತು. ಆಗಿನ ದೇವರಾಜ ಅರಸು ಕಾಂಗ್ರೆಸ್ ಸರ್ಕಾರ ಅದನ್ನು ಬರೆಸಿತ್ತು. ಡಾಮ್ ಮೊರೇಸ್ ಕರ್ನಾಟಕವನ್ನೆಲ್ಲ ಸುತ್ತಾಡಿ, ವಿಷಯ ಸಂಗ್ರಹಿಸಿ ಬರೆದಿದ್ದರು. ಅದಕ್ಕೆಲ್ಲ ಕರ್ನಾಟಕ ರಾಜ್ಯ ಸರಕಾರವೆ ಏರ್ಪಾಟು ಮಾಡಿತ್ತು. ಆ ಕಾಲದಲ್ಲಿ ಅವರು ನಮ್ಮ ಅಂಕೋಲೆಗೂ ಬಂದಿದ್ದರು. ಅಂಕೋಲೆಯ ಬಗ್ಗೆ, ಗೋಖಲೆ ಸೆಂಟಿನರಿ ಕಾಲೇಜಿನ ಬಗ್ಗೆ ಕೂಡ ನಾಲ್ಕು ಸಾಲು ಬರೆದಿದ್ದಾರೆ.

ಲೋಕಸಭಾ ಸದಸ್ಯರು ತಮ್ಮ ಮುಖ್ಯ ಅತಿಥಿ ಭಾಷಣದ ಮಧ್ಯೆ ಆ ಪುಸ್ತಕದ ಬಗ್ಗೆ ಪ್ರಸ್ತಾಪಿಸಿದರು. ಅದನ್ನು ತೀವ್ರವಾಗಿ ಟೀಕಿಸಿದರು. ಅವರ ಮಾತಿನ ಸಾರಾಂಶ ಹೀಗಿತ್ತು:

ಡಾಮ್ ಮೊರೇಸ್ ಅವರಿಂದ ಬರೆಸಿದ್ದ ‘ದಿ ಓಪನ್ ಆಯ್’ ಪುಸ್ತಕಕ್ಕೆ ಮೂರು ಲಕ್ಷವೊ ಅದಕ್ಕಿಂತ ಹೆಚ್ಚೊ ಹಣ ಖರ್ಚಾಗಿದೆ. ಸರ್ಕಾರದ ಹಣ ಎಂದರೆ ಜನತೆಯ ಹಣ- ನಮ್ಮ ನಿಮ್ಮ ಹಣ. ಆ ಪುಸ್ತಕದಲ್ಲಿ ನಮ್ಮ ಅಂಕೋಲೆಯ ಬಗ್‌ಗೆ ಎರಡು ಮಾತನ್ನೇನೊ ಬರೆದಿದ್ದಾರೆ. ಆದರೆ ಈ ಪ್ರದೇಶದಲ್ಲಿ ನಡೆದ ಸ್ವಾತಂತ್ರ್ಯಹೋರಾಟದ ಬಗ್ಗೆ, ಹೋರಾಟಗಾರರಾದ ನಿಮ್ಮಂಥವರ ತ್ಯಾಗ, ಸಾಹಸಗಳ ಬಗ್ಗೆ ನಾಲ್ಕು ಸಾಲಿನ ಬರವಣಿಗೆ ಕೂಡ ಇಲ್ಲ. ಇದು ನಾಚಿಕೆಗೇಡು, ಖಂಡನೀಯ. ಕರ್ನಾಟಕದ ಬಗ್ಗೆ ಬರೆಯುವುದಕ್ಕೆ ಡಾಮ್ ಮೊರೇಸ್ ಅವರೇ ಬೇಕಾಗಿತ್ತೆ? ಬೇರೆ ಯಾರೂ ಇರಲಿಲ್ಲವೆ?- ಎಂದು ಮುಂತಾಗಿ ಏರುದನಿಯ ಅಬ್ಬರದಲ್ಲಿ ಲೋಕಸಭಾ ಸದಸ್ಯರು ಗರ್ಜಿಸಿ ಕೇಳಿದರು. ಸಭೆ ಚಪ್ಪಾಳೆ ಹೊಡೆದು ಆ ಮಾತುಗಳನ್ನು ಸ್ವಾಗತಿಸಿತು.

ಆ ಸಭೆಯಲ್ಲಿ ಸುತ್ತಮುತ್ತಲಿನ ಪ್ರದೇಶದ ಸ್ವಾತಂತ್ರ್ಯ ಹೋರಾಟಗಾರರು ಬಹುಸಂಖ್ಯೆಯಲ್ಲಿದ್ದರು. ಬಹಳ ಜನ ಕಿಕ್ಕಿರಿದು ಸೇರಿದ್ದ ಆ ಸಭೆಯಲ್ಲಿ ಬಿಳಿಧೋತರ, ಖಾದಿಯ ಬಿಳಿ ಅಂಗಿ/ಜುಬ್ಬ, ಖಾದಿ ಬಿಳಿ ಟೋಪಿಯ ಸ್ವಾತಂತ್ರ್ಯ ಹೋರಾಟಗಾರರೇ ಎದ್ದು ಕಾಣಿಸುತ್ತಿದ್ದರು. ಸಭೆಗೂ ಅವರಿಂದ ವಿಶೇಷ ಲಕ್ಷಣ, ಶೋಭೆ ಉಂಟಾಗಿತ್ತು. ಅಲ್ಲಿ ಸೇರಿದ್ದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರು ವೈಯಕ್ತಿಕವಾಗಿ ನನಗೆ ಪರಿಚಯದವರೇ ಆಗಿದ್ದರು. ನನಗೆ ಅತ್ಯಂತ ಆತ್ಮೀಯರಾದವರೂ ಅವರಲ್ಲಿ ಎಷ್ಟೊ ಜನ ಇದ್ದರು. ನಾನು ಕೂಡ ಆ ಪ್ರದೇಶದ ಸೂರ್ವೆಯಲ್ಲಿ, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದವನೇ ಆಗಿದ್ದೆ.

ಡಾ. ಹಾ. ಮಾ. ನಾಯಕರು ಕೆಲವು ದಿನಗಳ ಹಿಂದಷ್ಟೆ ಆ ಪುಸ್ತಕದ ಬಗ್ಗೆ, ಮತ್ತೂ ಬೇರೆ ಬೇರೆ ಅಂಶಗಳನ್ನು ಪ್ರಸ್ತಾಪಿಸಿ ಪತ್ರಿಕೆಯಲ್ಲಿ ಟೀಕೆ ಮಾಡಿದ್ದರು. ಲೋಕಸಭಾ ಸದಸ್ಯರಿಗೆ ಆ ಹಾ.ಮಾ. ನಾಯಕ, ಈ ನಾನು ಜಿ.ಎಚ್. ನಾಯಕ- ಹೆಸರಿನ ವಿಷಯದಲ್ಲಿ ಗೊಂದಲವಾದಂತಿತ್ತು. ಹಾ.ಮಾ. ನಾಯಕರು ಮಾಡಿದ ಟೀಕೆ ನಾನೇ ಮಾಡಿದ್ದೆಂಬ, ನೆನಪಿನ ತಪ್ಪಿನಿಂದ ಉಂಟಾದ ಗ್ರಹಿಕೆಯಿಂದ, ಆ ಪುಸ್ತಕದ ಬಗ್ಗೆ ನನ್ನ ಅಭಿಪ್ರಾಯವನ್ನೇ ಸಮರ್ಥಿಸುತ್ತಿದ್ದೇನೆ, ಬೆಂಬಲಿಸುತ್ತಿದ್ದೇನೆ ಎಂಬ ಭಾವನೆಯಿಂದಲೇ ಅವರು ಮಾತನಾಡಿದ್ದರು.

ತುರ್ತು ಪರಿಸ್ಥಿತಿಯ ಕಾಲವಲ್ಲದೆ ಬೇರೆ ಕಾಲವಾಗಿದ್ದರೆ ಲೋಕ ಸಭಾಸದಸ್ಯರ ಆ ಮಾತುಗಳನ್ನು ನಾನು ವಿರೋಧಿಸುವ ಇಲ್ಲವೆ ಖಂಡಿಸುವ ಪ್ರಮೇಯವೇ ಉಂಟಾಗುತ್ತಿರಲಿಲ್ಲ. ಆ ಪುಸ್ತಕದ ಬಗ್ಗೆ ಅವರು ಮಾಡಿದ ಟೀಕೆ, ಎತ್ತಿದ ಆಕ್ಷೇಪ ಸರಿಯಾಗಿಯೆ ಇತ್ತು. ಆ ಪುಸ್ತಕದ ಬಗ್ಗೆ ಅವರು ಮಾಡಿದ ಟೀಕೆಗೆ ನಾನು ಪೂರಕವಾಗಿಯೆ ಎರಡು ಮಾತು ಸೇರಿಸುತಿದ್ದೆನೇನೊ! ಹಾ.ಮಾ. ನಾಯಕರ ಲೇಖನದಲ್ಲಿದ್ದ ಟೀಕೆಯ ಮಾತುಗಳಿಗೆ ನನ್ನ ಸಹಮತವೂ ಇತ್ತು. ಆದ್ದರಿಂದ ಹಾ.ಮಾ. ನಾಯಕರ ಲೇಖನದಲ್ಲಿ ನಾಯಕರು ಮಾಡಿದ್ದ ಟೀಕೆಯ ಬಗ್ಗೆ ಲೋಕಸಭಾ ಸದಸ್ಯರು ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದರಿಂದ, ಅದು ನನ್ನ ಲೇಖನವಲ್ಲ ಡಾ. ಹಾ.ಮಾ.ನಾಯಕರ ಲೇಖನ ಎಂದು ಚಿಕ್ಕ ತಿದ್ದುಪಡಿಯ ಮಾತೊಂದನ್ನು ನಾನು ಹೇಳುತ್ತಿದ್ದೆ. ಆ ಬಗ್ಗೆ ಹೆಚ್ಚು ಮಾತನಾಡದೆ, ಮಾತನಾಡಿದ್ದರೆ ಆ ಪುಸ್ತಕ ಕುರಿತು ಅವರು ಆಡಿದ್ದ ಮಾತಿನ ಬಗ್ಗೆ ಎರಡು ಮೆಚ್ಚಿಕೆಯ ಮಾತುಗಳನ್ನೇ ಆಡಿ, ಬೇರೆ ವಿಷಯಗಳನ್ನು ಎತ್ತಿಕೊಂಡು ನನ್ನ ಅಧ್ಯಕ್ಷ ಭಾಷಣ ಮಾಡುತ್ತಿದ್ದೇನೇನೊ ! ಆದರೆ ಕಾಲ ಸಂಧರ್ಭ ಬೇರೆ ಇತ್ತು.

ಇಂದಿರಾ ಗಾಂಧಿ ಕಾಂಗ್ರೆಸ್ ಸರ್ಕಾರ ೧೯೭೫ರ ಜೂನ್ ೨೫-೨೬ಜ ಮಧ್ಯ ರಾತ್ರಿಯಿಂದ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿತ್ತು; ಜಯಪ್ರಕಾಶ ನಾರಾಯಣ ಅವರೇ ಮೊದಲಾದ, ವಿರೋಧದ ದನಿ ಎತ್ತಿದವರನ್ನು ಬಂಧಿಸಿ ಸೆರೆಮನೆಗಳಲ್ಲಿ ಇಟ್ಟಿತ್ತು. ಪತ್ರಿಕೆಗಳ ಮೇಲೆ ಸೆನ್ಸಾರ್ ಶಿಪ್‌ನ ಕರಾಳ ಕಾನೂನು ಜಾರಿ ಮಾಡಿತ್ತು. ರಾಷ್ಟ್ರತಿಯಾಗಿದ್ದ ಫಕ್ರುದ್ದೀನ್ ಆಲಿ ಅಹಮ್ಮದ್ ಅವರು ಇಂದಿರಾ ಗಾಂಧಿ ಸರ್ಕಾರದ ಕೇವಲ ರಬ್ಬರ್ ಸ್ಟಾಂಪ್ ಎಂಬಂಥ ಅಪಖ್ಯಾತಿಗೆ ಗುರಿಯಾಗಿದ್ದರು. ಸಂವಿಧಾನದ ತಿದ್ದುಪಡಿ- ೪೨ನೆಯ ತಿದ್ದುಪಡಿಯನ್ನು ೧೯೭೬ರಲ್ಲಿ ಮಾಡಲಾಗಿತ್ತು. ಹೇಬಿಯಸ್ ಕಾರ್ಪಸ್- ಅಂದರೆ, ನಮ್ಮ ದೇಹದ ಮೇಲೆ ನಮಗಿರುವ ಪೌರಹಕ್ಕನ್ನೂ ಕಿತ್ತುಕೊಳ್ಳಲಾಗಿತ್ತು. ಇಂಥ ತುರ್ತು ಪರಿಸ್ಥಿತಿಯನ್ನು ‘ಅನುಶಾಸನ ಪರ್ವ’ ಅಂದರೆ ಶಿಸ್ತಿನ ಕಾಲಮಾನ ಎಂಬ ಅರ್ಥದ ಮರ್ಯಾದಸ್ಥ ಹೆಸರಿನಿಂದ ಕರೆಯುವುದರ ಮೂಲಕ ‘ಸರ್ವೋದಯ ಸಂತ’ ವಿನೋಬಾ ಭಾವೆಯವರು ‘ಸರ್ಕಾರೀ ಸಂತ’ ಎಂಬ ಅಪಖ್ಯಾತಿ ಪಡೆದುಕೊಂಡು ಬಿಟ್ಟಿದ್ದರು.

ಸರ್ಕಾರದ ವಿರುದ್ಧವೊ, ದೇಶದ ಆಗುಹೋಗುಗಳ, ವಿದ್ಯಮಾನಗಳ ವಿರುದ್ಧವೊ ಅಭಿಪ್ರಾಯ ಹೇಳದಂತೆ ಬಾಯಿಗೆ ಬೀಗ ಜಡಿಯಲಾಗಿತ್ತು. ಸರ್ಕಾರವು ಅನುಮಾನ ಬಂದವರನ್ನೆಲ್ಲ ಬಂಧಿಸಿ ಹಿಂಸಿಸುವ ಕ್ರೂರ ‘ಅನುಶಾಸನ ಪರ್ವ’ (!)ದ ಬೇಟೆಯಾಟ ನಡೆಸಿತ್ತು. ಉತ್ತರ ಭಾರತದಲ್ಲಿಯಂತೂ ಇಂದಿರಾಗಾಂಧಿಯ ‘ಸುಪುತ್ರ’ ಸಂಜಯ ಗಾಂಧಿ ಮಕ್ಕಳು, ಮುದುಕರು ಎಂಬ ಭೇದವೂ ಇಲ್ಲದೆ ಗಂಡುಜಾತಿಗೆ ಸೇರಿದವರನ್ನೆಲ್ಲ ಹಿಡಿಸಿ ಬಲಾತ್ಕಾರದ ‘ನಸಬಂದಿ’ ಅಂದರೆ ಸಂತಾನಹರಣ ಮಾಡಿಸುವ ಶಸ್ತ್ರ ಚಿಕಿತ್ಸೆಯ ‘ಮಹಾಯಾಗ’ ದಲ್ಲಿ ನಿರತರಾಗಿದ್ದರು; ತುರ್ಕ್‌ಮನ್ ಗೇಟ್ ಘೋರ ದೌರ್ಜನ್ಯಕ್ಕೆ ಕಾರಣರಾಗಿದ್ದರು. ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರೂ ಇಂದಿರಾಗಾಂಧಿಯ ಮಗ- ಈ ‘ಚಕ್ರವರ್ತಿನಿ ಕುಮಾರ’ನಿಗೆ ಏರಿದ್ದ ಆನೆಯಿಂದಲೊ, ಎತ್ತರದ ವಾಹನದಿಂದಲೊ ಕೆಳಗೆ ಇಳಿಯುವುದಕ್ಕೊ ಏರುವುದಕ್ಕೊ ಹೆಗಲು ಕೊಡುವ ಗುಲಾಮ ಕೈಂಕರ್ಯ ಎಸಗಿದರೆಂಬ ಸುದ್ದಿಯ ತುಣುಕೊಂದು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಮಂತ್ರಿ ಮಹೋದಯರೆಲ್ಲ ಸಂಜಯಗಾಂಧಿಯ ಮತ್ತು ಆತನ ಅಮ್ಮನ ಕೃಪಾಭಿಕ್ಷೆಗಾಗಿ ತಾ ಮುಂದು ನಾ ಮುಂದು ಎನ್ನಬೇಕಾದಂಥ ವಂದಿಮಾಗಧರೊ, ಹಂದಿಮಾಗಧರೊ ಆಗಿ ಪರಿವರ್ತಿತರಾಗಿದ್ದ ಅಥವಾ ಪರಿವರ್ತಿತರಾಗಬೇಕಾಗಿದ್ದ ಕಾಲ ಅದಾಗಿತ್ತು.

ಕೆಲವು ದಿನಗಳ ಹಿಂದಷ್ಟೆ ಗುಲ್ಬರ್ಗಾಕ್ಕೆ ಸಂಜಯಗಾಂಧಿಯ ಸವಾರಿ ಬಂದು ಹೋಗಿತ್ತು. ಒಂದು ಕಾಲದಲ್ಲಿ ಸ್ವಾತಂತ್ರ್ಯ ಹೊರಾಟದಲ್ಲಿ ಎಲ್ಲ ಬಗೆಯ ತ್ಯಾಗ ಬಲಿದಾನಗಳನ್ನೂ ಮಾಡಿ ಅಹಿಂಸೆಯ ಆದರ್ಶವನ್ನು, ಅದರ ಮಹತ್ವವನ್ನು ಜಗತ್ತಿಗೇ ಸಾರಿ ಹೇಳಿದ್ದ, ಮಾಡಿ ತೋರಿಸಿದ್ದ ಕಾಂಗ್ರೆಸ್ ಪಕ್ಷದ ವಾರಸುದಾರರ ಮನಸೋ ಇಚ್ಛೆಯ ಈ ಸರ್ವಾಧಿಕಾರದಿಂದ ಹಿಂಸಾಚಾರದಿಂದ ದೇಶದ ಜನ ದಿನೇ ದಿನೇ ಸಹನೆ ಕಳೆದುಕೊಳ್ಳುತ್ತಿದ್ದ ಕಾಲ ಅದಾಗಿತ್ತು. ಜನರ ಬಡತನದ ಬವಣೆಯ, ಅಸಹಾಯಕತೆಯ ದುರುಪಯೋಗ ಪಡೆದು ‘ಇಪ್ಪತ್ತಂಶದ ಕಾರ್ಯಕ್ರಮ’ ಎಂಬ ಬಂಗಾರದ ಜಿಂಕೆಯ ಬೆಡಗಿನ ಕುಣಿತ ತೋರಿಸಿ ಮರಳು ಮಾಡುವ ಆಟ ಬೇರೆ ಸರಕಾರದ ಕಡೆಯಿಂದ ನಡೆದಿತ್ತು.

ಶ್ರೀ ಕೃಷ್ಣ ಆಲನಹಳ್ಳಿಯವರ ಭಾಷಣವಾದ ಮೇಲೆ ಲೋಕಸಭಾಸದಸ್ಯರಾದ ಶ್ರೀ ಬಿ.ವಿ.ನಾಯಕರ ಭಾಷಣವಾಗಿತ್ತು. ನಾನು ನನ್ನ ಅಧ್ಯಕ್ಷ ಭಾಷಣದಲ್ಲಿ ಆಲನಹಳ್ಳಿಯವರ ಬಗ್ಗೆ, ನನ್ನ-ಅವರ ವೈಯಕ್ತಿಕ ಸ್ನೇಹ ಸಂಬಂಧದ ಬಗ್ಗೆ, ಗಿರೀಶ ಕಾರ್ನಾಡರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಅವರ ‘ಕಾಡು’ ಕಾದಂಬರಿ ಖ್ಯಾತಿಗೊಳಿಸಿದ ಬಗ್ಗೆ ಮತ್ತು ಆ ಸಮಾರಂಭದಲ್ಲಿ ಅವರು ಮಾಡಿದ ಭಾಷಣದಲ್ಲಿ ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಸುಮಾರು ಹತ್ತೊ ಹದಿನೈದೊ ನಿಮಿಷ ಮಾತನಾಡಿ ಶ್ರೀ ಬಿ.ವಿ.ನಾಯಕರ ಭಾಷಣ ಕುರಿತು ಮಾತನಾಡಲು ಪ್ರಾರಂಭಿಸಿದೆ. ತುರ್ತುಪರಿಸ್ಥಿತಿ ಕುರಿತ ನನ್ನ ತೀವ್ರ ವಿರೋಧದ ಒಳಕುದಿ ಆ ಸಂದರ್ಭದಲ್ಲಿ ಸ್ಫೋಟಗೊಂಡಿತ್ತು. ಆ ಸಂಬಂಧದ ಸುಮಾರು ಇಪ್ಪತ್ತೊ ಇಪ್ಪತ್ತೈದೊ ನಿಮಿಷಗಳ ಮುಂದಿನ ನನ್ನ ಭಾಷಣದ ಸಾರಾಂಶ ಹೀಗಿತ್ತು :

ಲೋಕಸಭಾಸದಸ್ಯರು ಅವರ ಭಾಷಣದಲ್ಲಿ ಹೇಳಿದಂತೆ ಡಾಮ್ ಮೊರೇಸ್ ಅವರ ಪುಸ್ತಕದ ಬಗ್ಗೆ ಬರೆದವನು ನಾನಲ್ಲ. ಲೇಖನ ಬರೆದವರು ನನ್ನ ಗುರುಗಳೂ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರೂ ಆದ ಡಾ. ಹಾ.ಮಾ.ನಾಯಕರು. (ಆಗಿನ್ನೂ ಕನ್ನಡ ಅಧ್ಯಯನ ಸಂಸ್ಥೆಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಎಂದು ನಾಮಕರಣವಾಗಿರಲಿಲ್ಲ.) ಅವರ ಅಭಿಪ್ರಾಯಗಳನ್ನೆಲ್ಲ ನಾನೂ ಒಪ್ಪುತ್ತೇನೆ. ಆದರೆ, ಈ ಬಗ್ಗೆ ಟೀಕೆ ಮಾಡುವುದಕ್ಕೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಲೋಕಸಭಾಸದಸ್ಯರಿಗೆ ನೈತಿಕ ಹಕ್ಕು ಇದೆಯೆ, ಎಂಬುದು ನಾನು ಕೇಳುವ ಪ್ರಶ್ನೆ.

ಈ ಪುಸ್ತಕ ಬರೆಸಿದವರು, ಪ್ರಕಟಿಸಿದವರು ಬೇರೆ ಯಾರೊ ಅಲ್ಲ; ಕಾಂಗ್ರೆಸ್ ಪಕ್ಷದವರೇ; ಅವರ ಸರ್ಕಾರವೇ. ದೇವರಾಜು ಅರಸು ಅವರ ಸರ್ಕಾರ-ಕಾಂಗ್ರೆಸ್ ಸರ್ಕಾರವೇ ಅಲ್ಲವೆ? ಟೀಕಿಸುತ್ತಿರುವವರು ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯರು. ಮೆಚ್ಚಬೇಕಾದದ್ದೇ. ಕರ್ನಾಟಕದ ಬಗ್ಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅವರು ತೋರಿಸಿದ ಅಭಿಮಾನ, ಕಾಳಜಿ ಕೂಡ ಮೆಚ್ಚಬೇಕಾದದ್ದೇ. ಡಾಮ್ ಮೊರೇಸ್ ಹುಟ್ಟಿದ್ದೇನೊ ಮುಂಬಯಿಯಲ್ಲಿ. ಅಂದರೆ ನಮ್ಮ ದೇಶದಲ್ಲಿ. ಆದರೆ ಆತ ಈ ದೇಶದ ವಾಸಿ ಅಲ್ಲ; ಈ ದೇಶದ ಪೌರನು ಕೂಡ ಲಲ್ಲ. ಇಂಗ್ಲೆಂಡಿನ ಪೌರತ್ವ ಪಡೆದ ಇಂಗ್ಲಿಷ್ ಭಾಷೆಯ ಕವಿ ಆತ. ಭಾರತದ ಬಗ್ಗೆಯಾಗಲಿ ಭಾರತೀಯತೆಯ ಬಗ್ಗೆಯಾಗಲಿ ಹೇಳಿಕೊಳ್ಳುವಂಥ ಗೌರವವೊ ಅಭಿಮಾನವೊ ಇದ್ದವರೂ ಅಲ್ಲ. ಇಂಗ್ಲಿಷನ್ನು ಬಿಟ್ಟು ಈ ದೇಶದ ಬೇರೆ ಯಾವ ಭಾಷೆಯನ್ನು ಮಾತನಾಡಿದವರೂ ಅಲ್ಲ; ಅವರ ಅಜ್ಜನೊ, ಅಜ್ಜನ ಅಪ್ಪನೊ ಯಾರೊ ಕಾರವಾರದಲ್ಲಿಯೊ ಎಲ್ಲಿಯೊ ಇಂಜಿನಿಯರೊ ಏನೊ ಆಗಿದ್ದರಂತೆ. ಕರ್ನಾಟಕಕ್ಕೂ ಡಾಮ್ ಮೊರೇಸ್‌ಗೂ ಸಂಬಂಧ ಕಲ್ಪಿಸುವುದಕ್ಕೆ ಅದೊಂದು ದೂರದ, ಓಬಿರಾಯನ ಕಾಲದ, ಬಾದರಾಯಣ ಸಂಬಂಧದ ಸಂಗತಿ ಆಧಾರ. ಇದೊಂದು ವ್ಯಂಗ್ಯ, ವಿಪರ್ಯಾಸ.

ರಾಜಕಾರಣಿಗಳಿಗೆ, ಅದರಲ್ಲಿಯೂ ಕಾಂಗ್ರೆಸ್ಸಿನವರಿಗೆ ಅದೇನೂ ಮುಖ್ಯ ಅಲ್ಲ. ವ್ಯಕ್ತಿಯ ಯೋಗ್ಯತೆಯೂ ಮುಖ್ಯ ಅಲ್ಲ. ಅವರ ಅಪ್ಪನೊ ಅಮ್ಮನೊ ಅವರಿಗೆ ಮುಖ್ಯ. ಅಪ್ಪನೊ ಅಮ್ಮನೊ ದೊಡ್ಡವರಾದರೆ, ದೊಡ್ಡ ಸ್ಥಾನದಲ್ಲಿದ್ದವರಾದರೆ, ಪ್ರಭಾವಶಾಲಿ ವ್ಯಕ್ತಿಗಳಾದರೆ ಅವರಿಗಾಗಿ ಅವರ ಮಕ್ಕಳಿಗಾಗಿ ಏನು ಮಾಡುವುದಕ್ಕೂ ಸಿದ್ಧರಿರುತ್ತಾರೆ. ಡಾಮ್ ಮೊರೇಸ್ ಪ್ರತಿಭಾವಂತರೇ; ಪ್ರಖ್ಯಾತರೇ; ಆದರೆ ಈ ಕೆಲಸಕ್ಕೆ ತಕ್ಕ ಪ್ರತಿಭೆಯೊ, ವಿದ್ವತ್ತೊ ಅವರಿಗಿಲ್ಲ. ಆದರೆ ಅವರಪ್ಪ ಫ್ರಾಂಕ್ ಮೊರೇಸ್; ಪ್ರಖ್ಯಾತ ಪತ್ರಕರ್ತ. ಟೈಮ್ಸ್ ಆಫ್ ಇಂಡಿಯಾಎಂಬ ಪ್ರಭಾವಶಾಲೀ ಇಂಗ್ಲಿಷ್ ಪತ್ರಿಕೆಯ ಮೊತ್ತ ಮೊದಲ ಭಾರತೀಯ ಸಂಪಾದಕ. ರಾಷ್ಟ್ರೀಯ ಅಂತಾರಾಷ್ಟ್ರೀಯ ಮನ್ನಣೆ ಇರುವವರು. ಪತ್ರಿಕೆಗಳ ಮೇಲೆ ಸೆನ್ಸಾರ್‌ಶಿಪ್ ದಿಗ್ಭಂದನ ಹೇರಿದ್ದರೂ ದೊಡ್ಡ ದೊಡ್ಡ ಪತ್ರಕರ್ತರ ಸದ್ಭಾವನೆ ಕಾಂಗ್ರೆಸ್ಸಿಗರಿಗೆ ಬೇಕು. ಸದ್ಭಾವನೆ ಅಲ್ಲವಾದರೆ ವಿರೋಧವಾದರೂ ಇರದಂತೆ ನೋಡಿಕೊಳ್ಳಬೇಕು. ಇದು ಅವರ ರಾಜಕೀಯ.

ಇನ್ನು ಡಾಮ್ ಮೊರೇಸ್ ಅವರ ಪುಸ್ತಕದ ವಿಷಯ. ಇದು ಯಾರಾದರೂ ಖಂಡಿಸಬೇಕಾದದ್ದೆ. ನಮ್ಮಂಥವರು ಖಂಡಿಸಬಹುದು. ಹಾ.ಮಾ. ನಾಯಕರು ಈಗಾಗಲೇ ಅವರ ಒಂದು ಲೇಖನದಲ್ಲಿ ಖಂಡಿಸಿದ್ದಾರೆ. ಮಾನ್ಯ ಲೋಕಸಭಾ ಸದಸ್ಯರು ಅದನ್ನು ಖಂಡಿಸಿದ್ದೇನೊ ಸರಿಯೆ. ಅದರಲ್ಲಿ ತಪ್ಪಿಲ್ಲ. ಸರಿಯಾಗಿಯೆ ಖಂಡಿಸಿದ್ದಾರೆ. ಆದರೆ ಕೆಲವೇ ದಿನಗಳ ಹಿಂದಷ್ಟೆ ಗುಲ್ಬರ್ಗಾಕ್ಕೆ ಸಂಜಯಗಾಂಧಿ ಬಂದು ಹೋದರಲ್ಲಾ? ಅವರು ಬಂದಿದ್ದಾಗ ದೇವರಾಜ ಅರಸು ಅವರ ಕಾಂಗ್ರಸ್ ಸರ್ಕಾರ ಎಷ್ಟು ಖರ್ಚು ಮಾಡಿತ್ತು? ಏನೇನು ಮಾಡಿತ್ತು? ಈ ಬಗ್ಗೆ ಕೂಡ ಪ್ರಶ್ನೆ ಮಾಡುವುದಕ್ಕೆ ಧೈರ್ಯವೂ, ತಾಕತ್ತೊ, ಬಾಯಿಯೊ ಇದ್ದರೆ ಡಾಮ್ ಮೊರೇಸ್ ಬಗ್ಗೆ, ಆ ಪುಸ್ತಕಕ್ಕಾಗಿ ಕರ್ನಾಟಕ ಸರ್ಕಾರ ಮಾಡಿದ ಖರ್ಚುವೆಚ್ಚದ ಬಗ್ಗೆ ಮಾತನಾಡುವುದಕ್ಕೆ, ಟೀಕೆ ಮಾಡುವುದಕ್ಕೆ ನೈತಿಕ ಹಕ್ಕು ಇರುತ್ತದೆ. ಕಾಂಗ್ರೆಸ್ಸಿನವರು ಅಂದರೆ ಆಡಳಿತ ಕಾಂಗ್ರೆಸ್ಸಿನವರು ಲೋಕಸಭಾ ಸದಸ್ಯರೇ ಆಗಲಿ, ಯಾರೇ ಆಗಲಿ ಅವರಾರಿಗೂ ಆ ನೈತಿಕ ಹಕ್ಕು ಉಳಿದಿಲ್ಲ. ನಮ್ಮಂಥವರಿಗೆ ನೈತಿಕ ಹಕ್ಕು ಇದೆ. ಆದರೆ ಸರ್ಕಾರದ ವಿರುದ್ಧ ಮಾತನಾಡದಂತೆ ನಮ್ಮ ಬಾಯಿಗೆ ಬೀಗ ಜಡಿದಿದ್ದಾರಲ್ಲಾ ! ಸಂಜಯ ಗಾಂಧಿಯವರು ಸಂವಿಧಾನಾತ್ಮಕವಾದ ಯಾವ ದೊಡ್ಡ ಸ್ಥಾನ, ಹುದ್ದೆಯಲ್ಲಿ ಇದ್ದಾರೆ? ಇಂದಿರಾ ಗಾಂಧಿಯವರ ಮಗ ಎಂಬುದೇ ಅವರ ದೊಡ್ಡ ಅರ್ಹತೆಯಲ್ಲವೇ? ಸರ್ಕಾರಿ ಬೊಕ್ಕಸದ ಹಣ ಖರ್ಚುಮಾಡುವುದಕ್ಕೆ, ರಾಜ್ಯ ಸರ್ಕಾರವು ಅವರಿಗೆ ಅತಿಪ್ರತಿಷ್ಠೆತ ಮನ್ನಣೆಯ ಆತಿಥ್ಯ ನೀಡುವುದಕ್ಕೆ ಸಂವಿಧಾನಾತ್ಮಕ ಸಮರ್ಥನೆ ಏನಿದೆ? ಈ ಖರ್ಚು ವೆಚ್ಚದ ಮುಂದೆ ಡಾಮ್ ಮೊರೇಸ್ ಅವರ ಪುಸ್ತಕಕ್ಕೆ ಸಂಬಂಧಿಸಿದ ಹಾಗೆ ಮಾಡಿದ ಖರ್ಚುವೆಚ್ಚ ಮೂರು ಲಕ್ಷ ರೂಪಾಯಿಗಳೊ ಎಷ್ಟೊ ತೀರಾ ಜುಜುಬಿ, ಯಃಕಶ್ಚಿತ್ ಅಲ್ಲವೆ?

ಡಾಮ್ ಮೊರೇಸ್ ಅವರ ಪುಸ್ತಕದಲ್ಲಿ ಈ ಪ್ರದೇಶದ ಸ್ವಾತಂತ್ರ್ಯ ಹೋರಾಟದ ಬಗ್ಗೆ, ಹೋರಾಟಗಾರರ ಬಗ್ಗೆ ನಾಲ್ಕು ಸಾಲೂ ಬರೆದಿಲ್ಲ ಎಂದು ಮಾನ್ಯ ಲೋಕಸಭಾಸದಸ್ಯರು ಹೇಳಿದರು. ಅವರ ಮಾತು ನಿಜ. ಯಾರೇ ಪುಸ್ತಕ ಬರೆದಿದ್ದರೂ ಅದರಲ್ಲಿಯೂ- ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಎರಡನೆಯ ಬಾರ್ಡೋಲಿ ಎಂದು ಖ್ಯಾತಿ ಪಡೆದ ನಮ್ಮ ಅಂಕೋಲಾ ತಾಲೂಕಿನ ಬಗ್ಗೆ ಬರೆದಾಗ ಬರೆಯಲೇಬೇಕಾದ ವಿಷಯ ಅದು. ಆದ್ದರಿಂದ ಆ ಬಗ್ಗೆ ಬರೆಯದೆ ಇರುವ ಡಾಮ್ ಮೊರೇಸ್ ಅವರನ್ನು ಮತ್ತು ಆ ಪುಸ್ತಕವನ್ನು ಅವರಿಂದ ಬರೆಸಿ ಪ್ರಕಟಿಸಿದ ಕಾಂಗ್ರಸ್ ಸರ್ಕಾರವನ್ನು ಖಂಡಿಸಲೇಬೇಕು.

ಮಾನ್ಯ ಲೋಕಸಭಾ ಸದಸ್ಯರೇನೊ ಖಂಡಿಸಿದರು. ಈ ಸಭೆಯಲ್ಲಿ ಬಹಳಷ್ಟು ಜನ ಸ್ವಾತಂತ್ರ್ಯ ಹೋರಾಟಗಾರರು ಇದ್ದೀರಿ. ಸ್ವಾತಂತ್ರ್ಯ ನಮ್ಮ ಆಜನ್ಮಸಿದ್ಧ ಹಕ್ಕು ಎಂದು ಘೋಷಣೆ ಕೂಗುತ್ತ ಹೋರಾಟದಲ್ಲಿ ಮುನ್ನುಗ್ಗಿ ಜೈಲುವಾಸ ಅನುಭವಿಸಿದವರು ನೀವು, ಮನೆ ಜಮೀನು ಕಳೆದುಕೊಂಡು ಪಡಬಾರದ ಪಾಡು ಪಟ್ಟವರು ನೀವು- ಇಲ್ಲಿ ಇದ್ದೀರಿ. ಈ ವಿದ್ಯಾಸಂಸ್ಥೆಯೂ ಈ ಪ್ರದೇಶದ ಜನರು ನಡೆಸಿದ್ದ ಧೀರ ಸ್ವಾತಂತ್ರ್ಯ ಹೋರಾಟದ ನೆನಪಿನ ಸ್ಮಾರಕವಾಗಿ ಸ್ಥಾಪನೆಯಾದದ್ದು. ಈ ಶಾಲೆ ‘ಸತ್ಯಾಗ್ರಹ ಸ್ಮಾರಕ ವಿದ್ಯಾಲಯ’ ಎಂಬ ಹೆಸರನ್ನೇ ಹೊತ್ತು ನಿಂತಿದೆ. ಆದ್ದರಿಂದ ಅವರು ಇಲ್ಲಿ, ಈ ಸಭೆಯಲ್ಲಿ ಆ ವಿಷಯ ಪ್ರಸ್ತಾಪಿಸಿದದು ಒಂದರ್ಥದಲ್ಲಿ ಸರಿಯೆ; ಸಹಜವಾಗಿಯೆ ಪ್ರಸ್ತಾಪಿಸಿದರು. ಅವರು ಹಾಗೆ ಖಂಡಿಸಿ ಮಾತನಾಡಿದಾಗ ನಿಮ್ಮ ಬಗ್ಗೆ, ಸ್ವಾತಂತ್ರ್ಯದ ಬಗ್ಗೆ ಲೋಕಸಭಾ ಸದಸ್ಯರಿಗೆ ಬಹಳ ಹೆಮ್ಮೆ, ಗೌರವ ಇದೆ; ಅವರು ನಿಮ್ಮನ್ನು, ನೀವು ಮಾಡಿದ ಸ್ವಾತಂತ್ರ್ಯ ಹೋರಾಟವನ್ನು ಪ್ರಶಂಸಿಸಿದರು, ಎಂದು ಭಾವಿಸಿ ನೀವೂ ಜೋರಾಗಿ ಚಪ್ಪಾಳೆ ಹೊಡೆದು ನಿಮ್ಮ ಸಂತೋಷ ವ್ಯಕ್ತಿಪಡಿಸಿದ್ದೀರಿ.

ನಾನು ಕೇಳುತ್ತೇನೆ; ದೇಶದ ಸ್ವಾತಂತ್ರ್ಯಕ್ಕಾಗಿ ಧೀರ ಹೋರಾಟ ಮಾಡಿದ್ದ ನೀವು ಈಗ ಸ್ವತಂತ್ರರೇ? ನಿಮಗೆ ಸ್ವಾತಂತ್ರ್ಯ ಇದೆಯೆ? ನಿಮಗೆ ಕಣ್ಣು ಇದೆ; ಕಿವಿ ಇದೆ, ಬಾಯಿ ಇದೆಯೆ? ಇಲ್ಲ. ಅಂಥ ಸ್ಥಿತಿಗೆ ನಿಮ್ಮನ್ನು ತಳ್ಳಿದವರು ಯಾರು? ನಿಮ್ಮನ್ನು ಇಂಥ ಸ್ಥಿತಿಗೆ ತಳ್ಳಿ, ಮಾತನಾಡುವ ಸ್ವಾತಂತ್ರ್ಯವನ್ನು ಕಿತ್ತುಕೊಂಡಿರುವ ಪಕ್ಷ ಯಾವುದು? ಕಾಂಗ್ರೆಸ್ ಪಕ್ಷದವರೇ, ಅವರ ಸರ್ಕಾರವೇ ಇದಕ್ಕೆಲ್ಲ ಕಾರಣವಲ್ಲವೆ? ಅಂಥವರಿಗೆ, ಆ ಪಕ್ಷದ ಲೋಕಸಭಾಸದಸ್ಯರಾದವರಿಗೆ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದಕ್ಕೆ ಇಂದು ನೈತಿಕ ಹಕ್ಕು ಎಲ್ಲಿದೆ? ಸ್ವಾತಂತ್ರ್ಯ ಕಿತ್ತುಕೊಳ್ಳುವುದರಲ್ಲಿ ಪಾಲುದಾರರಾದವರು ಸ್ವಾತಂತ್ರ್ಯ ಹೋರಾಟಗಾರರಾದ ನಿಮ್ಮನ್ನು ಹೊಗಳಿದ್ದು ನಿಮಗೂ ಗೌರವವಲ್ಲ; ‘ಸ್ವಾತಂತ್ರ್ಯ’ ಎಂಬ ಮಾತಿಗೂ, ಸ್ವಾತಂತ್ರ್ಯ ಎಂಬ ಮೌಲ್ಯಕ್ಕೂ ಗೌರವ ತೋರಿಸಿದಂತಲ್ಲ; ಪರೋಕ್ಷವಾಗಿ ಅವಮಾನ ಮಾಡಿದಂತೆ. ಜನಹಿತದ ಮಾತನ್ನೇ ಆಡುತ್ತ, ಜನರನ್ನೇ ಹೊಗಳುತ್ತ, ಆ ಮೂಲಕ ಜನರನ್ನು ವಂಚಿಸುತ್ತ ಬಂದಿರುವುದು ಕಾಂಗ್ರೆಸ್ಸಿನ ರಾಜಕಾರಣದ ತಂತ್ರವಾಗಿದೆ. ಆ ತಂತ್ರದ ಪರಿಣಾಮವೇ ಈಗ ಅವರು ದೇಶದ ಮೇಲೆ ಹೇರಿರುವ ತುರ್ತುಪರಿಸ್ಥಿತಿ….

– ಈ ಧಾಟಿಯಲ್ಲಿ ನನ್ನ ಭಾಷಣ ಹೆಚ್ಚು ಹೆಚ್ಚು ಕಾವು ಪಡೆದುಕೊಳ್ಳುತ್ತ, ಹೆಚ್ಚು ಹೆಚ್ಚು ತೀಕ್ಷ್ಣವಾಗುತ್ತ ಸಾಗುತ್ತಲೇ ಇತು. ಸಭೆಯಲ್ಲಿದ್ದವರೆಲ್ಲ ತುಂಬು ಆಸಕ್ತಿ ಮತ್ತು ಆತಂಕದಿಂದ ಗಂಭೀರವಾಗಿ ನನ್ನ ಭಾಷಣವನ್ನು ಕೇಳಿಸಿಕೊಳ್ಳುತ್ತಿದ್ದರು. ನಡು ನಡುವೆ ಜೋರಾಗಿ ಚಪ್ಪಾಳೆ ಹೊಡೆದು ನನ್ನ ಮಾತುಗಳನ್ನು ಉತ್ಸಾಹದಿಂದ ಸ್ವಾಗತಿಸುತ್ತಲೂ ಇದ್ದರು.

ರಾಜಕೀಯ ವಿಷಯಗಳ ಬಗ್ಗೆ, ಸರ್ಕಾರದ ಬಗ್ಗೆ ಮುಕ್ತವಾಗಿ ಮಾತನಾಡಲು ಅವಕಾಶವೇ ಇಲ್ಲದಿದ್ದಂಥ, ಅದೊಂದು ಅಪರಾಧವಾಗಿ ಪರಿಗಣಿತವಾಗುತ್ತಿದ್ದಂಥ ಆ ಕಾಲದಲ್ಲಿ ನನ್ನ ಆ ಭಾಷಣದ ನೇರ ದಾಟಿಯ ತೀವ್ರ ಖಂಡನೆಯನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತ ಕೂತಿರುವುದು ಅದೂ ವೇದಿಕೆಯ ಮೇಲೆಯೇ ಕೂತಿರುವುದು- ಲೋಕಸಭಾಸದಸ್ಯರಿಗೆ ಸಾಧ್ಯವಾಗಲಿಲ್ಲ; ಸಾಧ್ಯವಾಗುವಂತೆಯೂ ಇರಲಿಲ್ಲ. ಇಂದಿರಾಗಾಂಧಿಯ ಕಾಂಗ್ರೆಸ್ಸಿನ ಲೋಕ ಸಭಾಸದಸ್ಯರಾಗಿದ್ದವರು ಆ ಕಾಲದಲ್ಲ ಅಂಥ ಭಾಷಣವನ್ನು ಕೇಳಿಸಿಕೊಳ್ಳುತ್ತ ಕೂತಿರುವುದರಲ್ಲಿ ಒಂದು ಅಪಾಯದ ಸಾಧ್ಯತೆ. ಅಂದರೆ ‘ರಿಸ್ಕ್’ ಕೂಡ ಇತ್ತು. ಕೇಳುವಷ್ಟು ಕೇಳಿಸಿಕೊಂಡು, ಇದಕ್ಕಿದ್ದಂತೆ ಕುಳಿತಲ್ಲಿಂದ ಸಿಡಿದೆದ್ದು ಸಮಾರಂಭದ ಭಾಷಣಗಳನ್ನು ಧ್ವನಿಮುದ್ರಿಸಿಕೊಳ್ಳುತ್ತಿದ್ದ ಅವರು ತಮ್ಮ ಟೇಪ್ ರೆಕಾರ್ಡರನ್ನು ಕೈಗೆತ್ತಿಕೊಂಡು, ನಾನು ಅವರ ಸರ್ಕಾರವನ್ನು, ಅವರ ನೇತಾರರಾದ ಇಂದಿರಾಗಾಂಧಿ ಮತ್ತು ಸಂಜಯಗಾಂಧಿ ಅವರನ್ನು ಟೀಕೆ ಮಾಡುತ್ತಿರುವುದನ್ನು ಏರಿದ ಧ್ವನಿಯಲ್ಲಿ ಪ್ರತಿಭಟಿಸುತ್ತ, ಮುಖ್ಯಮಂತ್ರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ನನ್ನನ್ನು ಜೈಲುಶಿಕ್ಷೆಗೆ ಗುರಿಪಡಿಸುವುದಾಗಿ ಅಬ್ಬರಿಸಿ, ಸಭಾತ್ಯಾಗ ಮಾಡುವುದಾಗಿ ಘೋಷಣೆ ಮಾಡಿ, ವೇದಿಕೆಯಿಂದ ದಡದಡನೆ ಇಳಿದು ಹೊರಟು ಬಿಟ್ಟರು.

ಸಭೆ ಅವಕ್ಕಾಯಿತು.ಮುಕ್ಕಾಲು ಭಾಗ ಮುಗಿದಿದ್ದ ನನ್ನ ಭಾಷಣವನ್ನು ಮುಂದೆ ಅರ್ಧ ನಿಮಿಷದೊಳಗೇ ಮುಗಿಸುವಂತಾಯಿತು. ಆಗಲೇ ಗದ್ದಲ, ಗಲಾಟೆಯ ವಾತಾವರಣ ಸೃಷ್ಟಿಯಾಗಿಬಿಟ್ಟಿತ್ತು.

ಸರ್ಕಾರ ನನ್ನನ್ನು ಬಂಧಿಸಿ ಜೈಲುಶಿಕ್ಷೆಗೆ ಗುರಿ ಮಾಡುತ್ತದೇನೊ ಎಂಬ ಆತಂಕಕ್ಕೆ ಶಾಲೆಯ ಆಡಳಿತ ವರ್ಗದವರು, ಅಧ್ಯಾಪಕವರ್ಗದವರು, ಸಭೆಗೆ ಸೇರಿದ ಜನ- ಎಲ್ಲಾ ಒಳಗಾದರು. ಲೋಕ ಸಭಾಸದಸ್ಯರ ಅಗಿನ ವರ್ತನೆಯನ್ನು ಕೆಲವರು ಯುವಕರು ಮುಖ್ಯವಾಗಿ ನನಗೆ ಅವರ ಬಾಲ್ಯಕಾಲದಿಂದಲೂ ಪರಿಚಿತರೂ ಪ್ರೀತಿಯವರೂ ಆದ ರಮಾನಂದ ನಾಯಕರೂ (ಮುಂದೆ ಉತ್ತರ ಕನ್ನಡ ಜಿಲ್ಲಾ ಪರಿಷತ್ತಿನ ಪ್ರಥಮ ಅಧ್ಯಕ್ಷರಾದವರು) ಸೇರಿದಂತೆ ಹಿಚ್ಚಡದ ಯುವಕರು ಖಂಡಿಸಿ ಮಾತನಾಡುತ್ತಿದ್ದರು. ಲೋಕಸಭಾಸದಸ್ಯರನ್ನು ಸಮಾಧಾನಗೊಳಿಸಲು, ಜೊತೆಗೆ ನನ್ನ ವಿರುದ್ಧ ಮುಂದುವರಿಯದಂತೆ ತಡೆಯಲು ಕೆಲವರು- ಆಗ ತಾಲೂಕು ಕಾಂಗ್ರಸ್ಸಿನ ಅಧ್ಯಕ್ಷರಾಗಿದ್ದ, ಹಾಗೂ ಶಾಲೆಯ ಮುಖ್ಯೋಪಾಧ್ಯಾಯ ವಿ.ಜೇ. ನಾಯಕರ ಸಂಬಂಧಿಕರಾಗಿದ್ದ ಕಣಗಿಲದ (ಸಾತು) ಬೀರಣ್ಣ ನಾಯಕ ಮೊದಲಾದವರು ಓಡಾಡಿದರು. ಜೈಲು ಶಿಕ್ಷೆ ಅನುಭವಿಸಬೇಕಾಗಿ ಬಂದರೆ ಅದಕ್ಕೂ ಮಾನಸಿಕ ಸಿದ್ಧತೆ ಮಾಡಿಕೊಳ್ಳುತ್ತ ನಾನೂ ಇದ್ದೆ. ಸರ್ಕಾರದ ವಿರುದ್ಧ ಟೀಕೆಗೆ ಚಾಲನೆಕೊಟ್ಟವರು ಒಂದರ್ಥದಲ್ಲಿ ಅವರೇ ಆಗಿದ್ದರಿಂದ ಅವರು ನನ್ನ ವಿರುದ್ಧ ಮುಖ್ಯಮಂತ್ರಿಗೊ ಯಾರಿಗೊ ದೂರು ನೀಡುವುದು ಸುಲಭವೇನಲ್ಲ ಎಂದು ಅಂದುಕೊಳ್ಳುತ್ತಲೂ ಇದ್ದೆ.

ಚಲೇಜಾವ್ ಚಳುವಳಿ ಕಾಲದಲ್ಲಿ ಅಂಕೋಲಾ ತಾಲೂಕಿನ ಪ್ರಖ್ಯಾತ ಉಳವರೆ ಪ್ರಕರಣದ ಹೋರಾಟ ಮುಂಚೂಣಿಯ ಮುಖ್ಯರಲ್ಲಿ ಒಬ್ಬನಾಗಿದ್ದು, ಮುಂದೆ ಬಂಧಿತನಾಗಿ ನಾಲ್ಕು ವರ್ಷಗಳ ಕಠಿಣ ಜೈಲುಶಿಕ್ಷೆ ಅನುಭವಿಸಿದ್ದ ಸ್ವಾತಂತ್ರ್ಯ ಹೋರಾಟಗಾರನೂ, ಮನುಷ್ಯನಾಗಿ ಉದಾರ ಅಂತಃಕರಣದ ವ್ಯಕ್ತಿಯೂ, ನನಗೆ ನಾನು ಬಾಲಕನಾಗಿದ್ದ ಕಾಲದಿಂದ ಅವನ ಜೀವನದ ಕೊನೆಯವರೆಗೂ ಅತ್ಯಂತ ಆತ್ಮೀಯ ಹಿರಿಯನೂ ಆಗಿದ್ದ ಹಿಚ್ಚಡದ ಹಮ್ಮಣಣ್ಣ (ಹಮ್ಮಣ್ಣ ವಿಠೋಬ ನಾಯಕ) ನನ್ನ ಆ ಭಾಷಣದ ಬಗ್ಗೆ ಅಪಾರ ಮೆಚ್ಚಿಕೆ ವ್ಯಕ್ತಪಡಿಸಿದ್ದ. ಆದರೂ ಸಭೆ ಮುಗಿಸಿದ ಆನಂತರದಲ್ಲಿ ಅಲ್ಲಿಯೆ ಬೇರೆ ಕಟ್ಟಡದಲ್ಲಿದ್ದ, ಶಾಳೆಯ ಮುಖ್ಯೋಪಾಧ್ಯಾಯರಮನೆಯ ‘ಹಾಲಿ’ (Hall) ನಲ್ಲಿ ಬಂದು ಕುಳಿತಿದ್ದಾಗ, ನಾನು ಕುಳಿತಿದ್ದ ಖುರ್ಚಿಯ ಹಿಂದೆಯೆ ಬಹಳ ಹೊತ್ತು ನನ್ನ ಬೆನ್ನಮೇಲೆ ಕೈಯಿಟ್ಟುಕೊಂಡು ನನ್ನ ಕ್ಷೇಮದ ಬಗ್ಗೆ ಅವನು ಚಿಂತಿತ ಮನಃಸ್ಥಿತಿಯಲ್ಲಿ ನಿಂತುಕೊಂಡದ್ದು ನಾನು ಮರೆಯಲಾಗದಂಥ ಅನುಭವವಾಗಿದೆ. ತುರ್ತು ಪರಿಸ್ಥಿತಿ ಸಡಿಲಿಸಿ ಇಂದಿರಾಗಾಂಧಿ ೧೯೭೭ರಲ್ಲಿ ಲೋಕಸಭೆಗೆ ಚುನಾವಣೆ ಘೋಷಿಸಿದಾಗ ತುರ್ತು ಪರಿಸ್ಥಿತಿ ಕಾಲದವರೆಗೂ ನಿಷ್ಠಾವಂತ ಕಾಂಗ್ರೆಸ್ಸಿಗನಾಗಿದ್ದ ಅವನು ಕಾಂಗ್ರೆಸ್‌ಗೆ ವಿರೋಧವಾಗಿ ಜನತಾಪಕ್ಷದ ಪರವಾಗಿ, ವೈಯಕ್ತಿಕ ಲಾಭದ ಲವಲೇಶವೂ ಇಲ್ಲದಿದ್ದರೂ ತತ್ವನಿಷ್ಠೆಯಿಂದ ರಾಷ್ಟ್ರದ ಕ್ಷೇಮದ ಚಿಂತನೆ, ತಿಳಿವಳಿಕೆಯಿಂದ ಪ್ರಚಾರಕಾರ್ಯದಲ್ಲಿ ಹಗಲಿರುಳೆನ್ನದೆ ಊರೂರು ಸುತ್ತಿದ್ದ. ಆ ಹಮ್ಮಣಣ್ಣನ ನೆನಪು ಈ ಬರವಣಿಗೆ ಮಾಡುತ್ತಿರುವ ಈ ಹೊತ್ತಿನಲ್ಲಿ ನನ್ನ ಮನಸ್ಸನ್ನು ತುಂಬಿ ಬಿಟ್ಟಿದೆ; ನನ್ನ ಕಣ್ಣುಗಳಲ್ಲಿ ಹನಿ ಒಡೆಸಿದೆ.

ತುರ್ತುಪರಿಸ್ಥಿತಿಯ ಕಾಲದ ಉದ್ದಕ್ಕೂ ಕುದಿಯುತ್ತಿದ್ದ ನನ್ನ ವಿರೋಧ, ಸಿಟ್ಟು ಆ ದಿನ ನನ್ನ ಭಾಷಣದ ಸಂದರ್ಭದಲ್ಲಿ ನೆರೆಯುಕ್ಕಿ ಬಂದಿತ್ತು. ಅಂಥ ಭಾಷಣವನ್ನು ಆ ಕಾಲದಲ್ಲಿ ಮಾಡುವುದಕ್ಕೆ ನನಗೆ ಸಾಧ್ಯವಾದದ್ದಕ್ಕೆ ನನ್ನ ಬಗ್ಗೆ ನನಗೇ ಅಭಿಮಾನ ಕೂಡ ಉಂಟಾಗಿತ್ತು. ಇಂದಿಗೂ ಆ ಭಾಷಣದ ನೆನಪು ಮರೆಯಲಾಗದ ನೆನಪುಗಳಲ್ಲಿ ಒಂದಾಗಿ ಉಳಿದುಕೊಂಡಿದೆ.

ಲೋಕಸಭಾ ಸದಸ್ಯರು ಅಬ್ಬರಿಸಿ ಸಭಾತ್ಯಾಗ ಮಾಡಿ ಹೋದರಷ್ಟೆ. ಮತ್ತೆ ಆ ವಿಷಯದಲ್ಲಿ ಜಿದ್ದಿನಿಂದ ಮುಂದುವರಿಯಲಿಲ್ಲ. ವ್ಯವಹಾರ ವಿವೇಕ ಅವರನ್ನು ಮುಂದುವರಿಯದಂತೆ ತಡೆದಿತ್ತೆಂದು ತೋರುತ್ತದೆ.

ಕಾಂಗ್ರೆಸ್ಸಿನ ಮಹಾಮುತ್ಸದ್ಧಿ ಮುಖ್ಯರಲ್ಲಿ ಒಬ್ಬರಾದ ಹಾಗೂ ಜನಬೆಂಬಲದ ಭೀಮಬಲ ಇದ್ದ ಹಾಗೂ ಕೇಂದ್ರದ ಇಂದಿರಾಗಾಂಧಿ ಸರ್ಕಾರದಲ್ಲಿ ಪ್ರಭಾವಶಾಲಿ ಸಂಪುಟ ಸಚಿವರಾಗಿದ್ದ ಹಿರಿಯ ರಾಜಕಾರಣಿ ಬಾಬು ಜಗಜೀವನರಾಮ್ ಅವರಂಥವರೂ ತುರ್ತುಪರಿಸ್ಥಿತಿ ಹೇರಿಕೆಯನ್ನು ಪ್ರತಿಭಟಿಸಲಾರದಂಥ, ಮಿಸುಕಾಡಲಾಗದಂಥ ರೀತಿಯ ಪೇಚಿನಲ್ಲಿ, ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದವರಂತೆ ಇರಬೇಕಾಗಿದ್ದ ಕಾಲ ಅದಾಗಿತ್ತು. ಜಗಜೀವನರಾಮ್ ಅವರು ಇಂದಿರಾಗಾಂದಿ ಕಾಂಗ್ರೆಸ್ಸಿನಿಂದ ಸಿಡಿದು ಹೊರಬಂದದ್ದು ಮುಂದೆ ಅಂದರೆ ತುರ್ತು ಪರಿಸ್ಥಿತಿ ಹೇರಿದ್ದ ಹದಿನೆಂಟು ತಿಂಗಳ ಮೇಲೆ – ಲೋಕಸಭಾ ಚುನಾವಣೆ ಘೋಷಿತವಾದ ಮೇಲೆ; ಅದಕ್ಕಿಂತ ಮೊದಲಲ್ಲ. ಪರಿಸ್ಥಿತಿ ಅಂಥದಿದ್ದಾಗ ಕೆನರಾ ಲೋಕಸಭ ಸದಸ್ಯರ ಆ ದಿನ ಇಕ್ಕಟ್ಟನ್ನು, ಅದರ ಪರಿಣಾಮವಾದ ಅವರ ಆ ಸಂದರ್ಭದ ಪ್ರತಿಭಟನೆ, ಸಭಾತ್ಯಾಗ, ಅಬ್ಬರದ ವರ್ತನೆಯನ್ನು ಮೇಚ್ಚಲಾಗದಿದ್ದರೂ ಅರ್ಥಮಾಡಿಕೊಳ್ಳಬಹುದಾಗಿದೆ.

ಮಾರನೆಯ ವರ್ಷದ ಅಂದೆ ೧೯೭೮ರ ಶಾಲಾ ವಾರ್ಷಿಕೋತ್ಸವದ ಹೊತ್ತಿಗೆ ತುರ್ತು ಪರಿಸ್ಥಿತಿಯೂ ಹೋಗಿತ್ತು; ಇಂದಿರಾಗಾಂಧಿ ಸರ್ಕಾರವೂ ಹೋಗಿತ್ತು. ಚುನಾವಣೆಯಲ್ಲಿ ಜನ ಇಂದಿರಾ ಗಾಂಧಿಯನ್ನು ಸೋಲಿಸಿದ್ದರು; ಅವರ ಸುಪುತ್ರ ಸಂಜಯ ಗಾಂಧಿಯವರನ್ನೂ ಸೋಲಿಸಿದ್ದರು. ತುರ್ತು ಪರಿಸ್ಥಿತಿಯ ಕರಾಳಪರ್ವಕ್ಕೆ ವಿದಾಯ ಹೇಳಲಾಗಿತ್ತು. ಜಯಪ್ರಕಾಶ ನಾರಾಯಣ ಅವರ ಸಮಗ್ರ ಕ್ರಾಂತಿಯ ಹೋರಾಟಕ್ಕೆ ನೈತಿಕ ವಿಜಯ ದೊರೆತಿತ್ತು. ಮುರಾರ್ಜಿ ದೇಸಾಯಿ ಪ್ರಧಾನಿಯಾದ ಜನತಾ ಪಕ್ಷದ ಸರ್ಕಾರ ಕೇಂದ್ರದಲ್ಲಿ ಬಂದಿತ್ತು. ಕಾಂಗ್ರೆಸ್ಸಿನ ಬಗ್ಗೆ ಧಾರ್ಮಿಕ ನಿಷ್ಠೆ ಎಂಬ ರೀತಿಯಲ್ಲಿ ಇದ್ದ ಅಂಕೋಲಾ ತಾಲೂಕಿನ ನಾಡವರು ಮುಖ್ಯವಾಗಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಸುತ್ತಮುತ್ತಲ ಪ್ರದೇಶದ ಸ್ವಾತಂತ್ರ್ಯಹೋರಾಟಗಾರರು- ಕಾಂಗ್ರೆಸ್ ಬಿಟ್ಟು ಜನತಾ ಪಕ್ಷಕ್ಕೆ ಒಲಿದಿದ್ದರು; ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ಸನ್ನು ಚುನಾವಣೆಯಲ್ಲಿ ಸೋಲಿಸಲೆಂದು ನಿಷ್ಠೆಯಿಂದ ದುಡಿದಿದ್ದರು. ಆ ಮೂಲಕ ಸ್ವಾತಂತ್ರ್ಯ ಮೌಲ್ಯದ ಬಗ್ಗೆ ಅವರಿಗಿರುವ ಸಹಜ, ಪ್ರಾಮಾಣಿಕ ನಿಷ್ಠೆಯನ್ನು ಮತ್ತೊಮ್ಮೆ ದೃಢವಾಗಿ ಸಾರಿದ್ದರು. ಜನತಾಪಕ್ಷದ ಅಭ್ಯರ್ಥಿಯಾಗಿ ಕೆನರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಮಕೃಷ್ಣ ಹೆಗಡೆಯವರು ಆಗಿನ ಚುನಾವಣೆಯಲ್ಲಿ ಸೋತರಾದರೂ ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಹತ್ತು ಸಾವಿರಕ್ಕಿಂತ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ್ದರು. ಬಿ.ವಿ.ನಾಯಕರು ಕಾಂಗ್ರೆಸ್ ಪಕ್ಷದಿಂದ ಸೀಟು ಸಿಗದೆ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಚುನಾವಣೆಯಲ್ಲಿ ಸೋತಿದ್ದರು.ಕೆನರಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಗೆದ್ದಿದ್ದರೂ ಕೇಂದ್ರದಲ್ಲಿ ಕಾಂಗ್ರೆಸ್ ಆಳ್ವಿಕೆ ಪತನವಾಗಿತ್ತು. (ಮುಂದೆ ಬಂದ ವಿಧಾನಸಭಾ ಚುನಾವಣೆಯಲ್ಲಿ ಅಂಕೋಲಾ ಚುನಾವಣಾ ಕ್ಷೇತ್ರದಿಂದ ಜನತಾಪಕ್ಷದ ಶ್ರೀಮತಿ ಅನುಸೂಯಾ ಶರ್ಮ ಗೆದ್ದಿದ್ದರು.).

೧೯೭೮ರ ಅಂದರೆ ಮಾರನೆ ವರ್ಷದ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭಕ್ಕೂ ನನ್ನನ್ನೇ ಸಮಾರಂಭದ ಅಧ್ಯಕ್ಷತೆಗೆ ಕರೆಸಿಕೊಂಡಿದ್ದರು. ಈಗ ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಸಾಹಿತಿಯಾಗಿರುವ ಡಾ. ಯು.ಆರ್. ಅನಂತಮೂರ್ತಿಯವರನ್ನು ಮುಖ್ಯ ಅತಿಥಿಯಾಗಿ ಕರೆಸಿಕೊಂಡಿದ್ದರು.

ಈ ಲೇಖನವನ್ನು ಮುಗಿಸುವ ಮೊದಲು ಒಂದು ಹಿತವಾದ ನೆನಪನ್ನೂ ಓದುಗರೊಂದಿಗೆ ಹಂಚಿಕೊಳ್ಳುತ್ತೇನೆ :

ಕೆಲವು ವರ್ಷಗಳ ಮೇಲೆ ಅಂಕೋಲೆಯ ಜೈಹಿಂದ್ ಹೈಸ್ಕೂಲಿನಲ್ಲಿ, – ತಾಲೂಕು ಕಛೇರಿಗೆ ಹತ್ತಿರ ಇರುವ ಕಟ್ಟಡದಲ್ಲಿ, ಕರ್ನಾಟಕ ಸಂಘದವರು ‘ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯ ತತ್ವಗಳು’ ಎಂಬ ವಿಷಯದ ಮೇಲೆ ನನ್ನ ಭಾಷಣ ಏರ್ಪಡಿಸಿದ್ದರು. ಆ ಭಾಷಣವನ್ನು ಕೇಳಲು ಆಗ ಮಾಜಿ ಲೋಕಸಭಾಸದಸ್ಯರಾಗಿದ್ದ ಶ್ರೀ ಬಿ.ವಿ.ನಾಯಕರು ಬಂದಿದ್ದರು. ಸಾಹಿತ್ಯದ, ಅದರಲ್ಲೂ ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯ ತತ್ವಗಳನ್ನು ಕುರಿತ ಭಾಷಣ ಕೇಳು ಅವರು ಬಂದದ್ದನ್ನು ಕಂಡು ನನಗೆ ಸೋಜಿಗವಾಗಿತ್ತು. ನನ್ನ ಭಾಷಣ ಕೇಳಲು ಅವರು ಸುಮಾರು ಹದಿನೆಂಟು ಕಿಲೋಮೀಟರ್ ದೂರದ ಅವರ ಊರಿನಿಂದ ಬಂದು ಕುಳಿತದ್ದು ನನಗೊಂದು ಗೌರವ ಎಂಬ ಭಾವನೆಯೂ ನನ್ನಲ್ಲಿ ಮೂಡಿತ್ತು. ಕೇಳುಗರಲ್ಲಿ ಒಬ್ಬರಾಗಿ ಕುಳಿತು ನನ್ನ ಭಾಷಣ ಪೂರ್ತಿ ಕೇಳಿದ ಅವರು ಭಾಷಣ ಮುಗಿಯುತ್ತಿದ್ದಂತೆ ಕುಳಿತಲ್ಲಿಂದ ಎದ್ದು ಬಂದು ತಾವಾಗಿ ನನಗೆ ಕೈ ನೀಡಿ ‘ಎಕ್ಸೆಲೆಂಟ್‌’ ಎಂದು ತುಂಬು ಮೆಚ್ಚಿಕೆಯ ಮಾತು ಹೇಳಿ ಕೈಕುಲುಕಿ ಹೋಗಿದ್ದರು. ಅವರಿಗೆ ಅವರ ಊರಿಗೆ ಹೋಗುವುದಕ್ಕೆ ಬಸ್ಸಿಗೆ ಹೊತ್ತಾಗಿತ್ತು. ಹಾಗಾಗಿ ನನ್ನ ಭಾಷಣದ ಮೇಲಿನ ಚರ್ಚೆ, ಸಭಾಧ್ಯಕ್ಷರ ಭಾಷಣ- ಇವುಗಳಿಗೆ ಅವರು ಇರಲಿಲ್ಲ. ಆ ಸಂದರ್ಭದಲ್ಲಿ ಅವರ ನಡವಳಿಕೆಯಲ್ಲಿ ವ್ಯಕ್ತವಾದ ಘನತೆ, ಹಿಂದಿನ ಕಹಿಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಅದನ್ನು ಮರೆತು ಅವರು ತಾವಾಗಿ ನೀಡಿದ ಉದಾರ ಸಹೃದಯ ಪ್ರತಿಕ್ರಿಯೆ ಒಂದು ಹಿತವಾದ ನೆನಪಾಗಿ ನನ್ನ ಮನಸ್ಸಿನಲ್ಲಿ ಉಳಿದುಕೊಂಡಿದೆ.*

* ಅಂಕೋಲೆಯ ಅಂಬಾರಕೊಡ್ಲದ ವಿಷ್ಣು ನಾಯ್ಕರ ಪ್ರಧಾನ ಸಂಪಾದಕತ್ವದ ‘ಸಕಾಲಿಕ’ ವಾರಪತ್ರಿಕೆಯಲ್ಲಿ ಜುಲೈ ೫, ೨೦೦೪ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.