೧೯೫೨ರ ಚುನಾವಣೆಯ ಕಾಲದಲ್ಲಿ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ನಾನು ಉತ್ಸಾಹದಿಂದ ಸ.ಪ. ಗಾಂವಕಾರರ ಪರ ಅಂದರೆ ಅಂಕೋಲಾ ಕಾಂಗ್ರೆಸ್ ಪಕ್ಷದ ಪರ, ಅಧಿಕೃತ ಪ್ರಚಾರಕನಲ್ಲದಿದ್ದರೂ ಮಿತ್ರರ ಜೊತೆ ಸೇರಿಕೊಂಡು ಪ್ರಚಾರ ಮಾಡಿದ್ದೆ. ಸ್ವಾತಂತ್ರ ಹೋರಾಟ ಕಾಲದಲ್ಲಿ ಕಠಿಣತಮವಾದ ಕರನಿರಾಕರಣೆಯ ಹೋರಾಟದಲ್ಲಿ ಬೇರೆಲ್ಲ ಊರವರಿಗಿಂತ ನಮ್ಮೂರು ಸೂರ್ವೆಯವರು ಹೆಚ್ಚು ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದರು. ಒಟ್ಟು ೩೯ ಖಾತೆದಾರರಲ್ಲಿ ೩೩ ಖಾತೆದಾರರು- ನಮ್ಮ ಕುಟುಂಬವೂ ಸೇರಿದಂತೆ ಮನೆ, ಜಮೀನು ಇತ್ಯಾದಿಗಳನ್ನು ಕಳೆದುಕೊಂಡು ಪಡಬಾರದ ಪಾಡು ಪಟ್ಟವರಾಗಿದ್ದರು. ನಮ್ಮ ದಾಯವಾದಿಯೆ ಆಗಿದ್ದ ನಮ್ಮೂರಿನ ಬೊಮ್ಮಯ್ಯ ಪೊಕ್ಕ ನಾಯಕ ನಾನು ಹುಟ್ಟಿದ, ಬೆಳೆದ ಮನೆಯ ಪಕ್ಕದ ಕಾಂಪೌಂಡಿನಲ್ಲಿಯೇ ಇದ್ದ ಕಳಶ ದೇವಸ್ಥಾನದ ಪ್ರಾಂಗಣದಲ್ಲಿ ಸೇರಿದ ಕಾಂಗ್ರೆಸ್ಸಿಗರ ಐತಿಹಾಸಿಕ ಸಭೆಯಲ್ಲಿ ಕರನಿರಾಕರಣೆ ಘೋಷಿಸಿದ ಮೊತ್ತಮೊದಲಿಗೆ. ನನ್ನ ದೊಡ್ಡವ್ವನ ಗಂಡ ದೊಡ್ಡಪ್ಪ ಅಂದರೆ ಬೋಳೆ ಊರಿನ ದೇವಣ್ಣ ಕೃಷ್ಣನಾಯಕ ಎರಡನೆಯವ (ನೋಡಿ : ಕರನಿರಾಕರಣೆಯ ವೀರಕಥೆ- ರಂಗನಾಥ ದಿವಾಕರ, ೧೯೫೫, ಪುಟ ೫೭), ನನ್ನ ಸೋದರಮಾವ ವಾಸ್ರೆ ಸುಬ್ರಾಯ ನಾಯಕ ಪಟೇಲಕಿಗೆ ರಾಜಿನಾಮೆ ಕೊಟ್ಟವರಲ್ಲಿ ಮೊತ್ತಮೊದಲಿಗ. (ಅದೇ ಪುಟ ೬೧) ಜೊತೆಗೆ ನನ್ನ ಅಪ್ಪ, ಅಣ್ಣ, ಅಕ್ಕನ ಗಂಡ ಭಾವ-ಹಿಚ್ಕಡದ ವಿಠಲ (ನಾರಾಯಣ) ನಾಯಕ, ಸೋದರಮಾವ, ದೊಡ್ಡಪ್ಪ (ಅಪ್ಪನ ದೊಡ್ಡಪ್ಪನ ಮಗ) ರಾಮಕೃಷ್ಣ ನಾಯಕ, ಅವರ ಹಿರಿಯ ಮಗ ಗಣಪತಣ್ಣ (ಬೀರಣ್ಣ), ಬೋಳೆ ಊರಿನ ನನ್ನ ದೊಡ್ಡವ್ವನ ಗಂಡ, ಅವನ ಮಗ ಕೃಷ್ಣನಾಯಕ- ಇವರೆಲ್ಲ ಕಠಿಣ ಜೈಲು ಶಿಕ್ಷೆಯನ್ನೂ ಅನುಭವಿಸಿದವರಾಗಿದ್ದರು. ಚಲೇಜಾವ್ ಚಳವಳಿಯನ್ನು ಅಂಕೋಲಾ ತಾಲೂಕಿನಲ್ಲಿ ಮೊತ್ತಮೊದಲಿಗರಾಗಿ ಪ್ರಾರಂಭಿಸಿದವರೂ ನಮ್ಮೂರಿನವರೇ ಆಗಿದ್ದರು. ಕರನಿರಾಕರಣೆಯನ್ನು ಮೊದಲಿಗರಾಗಿ ಘೋಷಿಸಿದ ಬೊಮ್ಮಯ್ಯ ಪೊಕ್ಕ ನಾಯಕರ ಹಿರಿಯ ಮಗ ಬಿ.ಬಿ.ನಾಯಕರ ಮುಂದಾಳುತನದಲ್ಲಿ ಅದು ಪ್ರಾರಂಭವಾಗಿತ್ತು. (ನೋಡಿ : ದಯಾನಂದ ಪ್ರಭು ಅವರ ‘ಭೂಗತನ ನೆನಪುಗಳು’ ೧೯೯೨ ಪುಟ ೧,೫, ೩೪).

ಅಂಥ ಹಿನ್ನೆಲೆಯ ಕಾರಣದಿಂದಾಗಿ ಕಾಂಗ್ರೆಸ್ ಅಂದರೆ ನಮ್ಮದು, ನಾವು ಕಾಂಗ್ರೆಸ್ಸಿನವರು ಎಂಬ ಭಾವನೆ ನನ್ನಲ್ಲಿ ದೃಢವಾಗಿ ಬೇರೂರಿತ್ತು. ಆ ಕಾಲದಲ್ಲಿ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಎಸ್.ವಿ.ಪಿಕಳೆ ಮಾಸ್ತರರ ಪ್ರಭಾವಶಾಲಿ ವ್ಯಕ್ತಿತ್ವಕ್ಕೆ ಮಾರುಹೋಗಿದ್ದ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬನಾಗಿದ್ದೆ. ಅವರ ಬಗ್ಗೆ ಅಪಾರ ಗೌರವ ಬೆಳೆದಿತ್ತು. ಅವರು ನನ್ನ ಕಣ್ಣ ಮುಂದಿನ ಆದರ್ಶ ವ್ಯಕ್ತಿಯಾಗಿದ್ದರು. ಆದರೂ ದಿನಕರ ದೇಸಾಯಿ ಜೊತೆ ಸೇರಿಕೊಂಡು ಕಾಂಗ್ರೆಸ್ ವಿರುದ್ಧ ಅವರು ಹೋರಾಟ ಸಾರುತ್ತಿದ್ದ ವಿಷಯದಲ್ಲಿ ಮಾತ್ರ ಆಗ ರಾಷ್ಟ್ರೀಯ ಕಾಂಗ್ರೆಸಿನ ಸೇವಾದಳದ (ಆರ್.ಎಸ್.ಡಿ.) ಸ್ವಯಂ ಸೇವಕನೂ ಆಗಿದ್ದ, ಹದಿನಾರು-ಹದಿನೇಳರ ಹುಡುಗನಾಗಿದ್ದ ನನಗೆ ಸಹಾನುಭೂತಿ ಬೆಳೆದಿರಲಿಲ್ಲ; ಹಾಗೆ ಕೇಳಿದರೆ ಅದೊಂದು ವಿಷಯದಲ್ಲಿ ವಿರೋಧ ಎಂದು ಹೇಳಬಹುದಾದಂಥ ಮನಸ್ಥಿತಿಯೇ ಇತ್ತು.

ದಿನಕರ ದೇಸಾಯಿಯವರು ಪಿ.ಎಸ್.ಪಿ.ಯ ಚುನಾವಣಾ ಪ್ರಚಾರಕ್ಕೆ ಹಾಡುಗಳನ್ನು ಬಳಸುತ್ತಿದ್ದರು, ಬರೆಯುತ್ತಿದ್ದರು.

ಬನ್ನಿರಿ ಬನ್ನಿರಿ ಓಟನು ತನ್ನಿರಿ
ಆಲದ ಮರಕೇ ಹಾಕಿ ಬಿಡಿ;
ಆಲದ ಮರದ ಆಶ್ರಯದಲ್ಲಿ
ಜನತಾ ರಾಜ್ಯವ ಕಟ್ಟಿಬಿಡಿ

ಎಂಬುದೊಂದು ಅಂಥ ಹಾಡು. ಆ ಪಕ್ಷದ ಗುರುತು ಆಲದ ಮರವಾಗಿತ್ತು. ವಿಷ್ಣುನಾಯ್ಕರು ಆ ಹಾಡನ್ನು ಅವರ ಪುಸ್ತಕದಲ್ಲಿ ಎರಡು ಕಡೆಗಳಲ್ಲಿ ದಾಖಲಿಸಿದ್ದಾರೆ. (ಪುಟ. ೯೧, ೧೪೩) ನಾನು ಅದಕ್ಕೆ ವಿರುದ್ಧವಾಗಿ,

ಬನ್ನಿರಿ ಬನ್ನಿರಿ ಓಟನು ತನ್ನಿರಿ
ಕಾಂಗ್ರೆಸ್ ಪಕ್ಷಕೆ ಹಾಕಿಬಿಡಿ
ಕಾಂಗ್ರೆಸ್ ರಾಜ್ಯದ ಆಶ್ರಯದಲ್ಲಿ
ಆಲದಮರವ ಕಡಿದು ಬಿಡಿ

-ಎಂದು ಅಣಕು ಹಾಡುಕಟ್ಟಿದ್ದೆ. ಅದನ್ನು ರಸ್ತೆ, ಗೋಡಗಳ ಮೇಲೆಲ್ಲ ಮಿತ್ರರ ಜೊತೆ ಸೇರಿ ಬರೆದಿದ್ದೆ; ಹಾಡುತ್ತಾ ತಿರುಗಿದ್ದೂ ಇತ್ತು.

ದೇಸಾಯಿ, ಪಿಕಳೆ, ನಾಡಕರ್ಣಿಯವರ ರೈತ ಹೋರಾಟದ ಮಹತ್ವ ಮತ್ತು ಅಗತ್ಯದ ಬಗ್ಗೆ ನನ್ನಲ್ಲಿ ಸರಿಯಾದ ತಿಳಿವಳಿಕೆ ಮೂಡುವಂತಾದದ್ದು, ಮೆಚ್ಚಿಕೆ ಬೆಳೆಯುವಂತಾದದ್ದು ಮೈಸೂರಿನ ನನ್ನ ಮಹಾರಾಜ ಕಾಲೇಜು ದಿನಗಳಲ್ಲಿ. ಶಿವಮೊಗ್ಗ ಕಡೆಯ, ಶಾಂತವೇರಿ ಗೋಪಾಲಗೌಡರ ಸಮಾಜವಾದೀ ರಾಜಕೀಯ ಚಿಂತನೆಯಿಂದ ಪ್ರಭಾವಿತರಾಗಿದ್ದ ಯು.ಆರ್. ಅನಂತಮೂರ್ತಿ, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಕಡಿದಾಳ ಶಾಮಣ್ಣ, ಕೋಣಂದೂರು ಲಿಂಗಪ್ಪ ಹಾಗೂ ಮೈಸೂರಿನ ಎಂ.ಡಿ. ನಂಜುಂಡಸ್ವಾಮಿ, ಹಿರಿಯ ನ್ಯಾಯವಾದಿ ಟಿ.ಎನ್. ನಾಗರಾಜ್ ಇಂಥವರ ಒಡನಾಟಕ್ಕೆ ಬಂದಮೇಲಿನ ದಿನಗಳಲ್ಲಿ. ಡಾ. ರಾಮ ಮನೋಹರ ಲೋಹಿಯಾರ ಸಮಾಜವಾದೀ ಚಿಂತನೆಯ ಬಗ್ಗೆ ಆಸಕ್ತಿ ಬೆಳೆದದ್ದೂ ಆ ಕಾಲದಲ್ಲಿಯೆ. ಲೋಹಿಯಾ ಚಿಂತನೆಯ ಓದು, ಅಧ್ಯಯನ ಮಾಡುತ್ತಿರುವಾಗಲೂ ನನಗೆ ನೆಹರೂ ಮತ್ತು ಕಾಂಗ್ರಸ್ಸಿನ ಪ್ರಭಾವದಿಂದ ಬಿಡಿಸಿಕೊಳ್ಳುವುದಕ್ಕೆ, ವಿಮರ್ಶಾತ್ಮಕವಾಗಿ ನೋಡುವುದಕ್ಕೆ ತಡವೇ ಆಯಿತು. ನೆಹರೂ ಮೇಲಿನ ಲೋಹಿಯಾರ ಟೀಕೆ ನನಗೆ ಆಗ ಇಷ್ಟವಾಗುತ್ತಿರಲಿಲ್ಲ; ಉಗ್ರ ಎಂದೇ ಅನಿಸುತ್ತಿತ್ತು. ನವ್ಯ ಸಾಹಿತ್ಯದ ‘ಕಾಫಿ ಹೌಸ್ ದಿನ’ಗಳಲ್ಲಿ ಕವಿ ಗೋಪಾಲಕೃಷ್ಣ ಅಡಿಗರೂ ಸಮಾಜವಾದೀ ಚಿಂತನೆಯ ನೆಲೆಯಿಂದಲ್ಲದಿದ್ದರೂ ಬಲಪಂಥೀಯ ನೆಲೆಯಿಂದ ನೆಹರೂ ಮತ್ತು ಕಾಂಗ್ರೆಸ್ ರಾಜಕೀಯವನ್ನು ಕಟುವಾಗಿ ಟೀಕಿಸುತ್ತಿದ್ದರು. ಇವೆಲ್ಲ ಸೇರಿಕೊಂಡು ನನ್ನ ಆಲೋಚನಾ ಕ್ರಮದ ಮೇಲೆ ಪ್ರಭಾವ ಬೀರಿದವು. ನನ್ನಲ್ಲಿ ಕಾರಣವಾದೀ ಚಿಂತನೆ (Rationalism), ಸಮಾಜವಾದೀ ಚಿಂತನೆ, ಅಂಬೇಡ್ಕರ್‌ವಾದೀ ಚಿಂತನೆ, ನವ್ಯ ಸಾಹಿತ್ಯದ ವಾಸ್ತವವಾದೀ ಚಿಂತನೆಗಳು ಜೊತೆ ಜೊತೆಯಲ್ಲಿಯೆ ಒಂದರೊಡನೊಂದು ಹೆಣೆದುಕೊಳ್ಳುತ್ತ ಬೆಳೆದವು. ಆ ದಿನಗಳಲ್ಲಿ ನನ್ನ ಚಿಂತನೆ, ವ್ಯಕ್ತಿತ್ವದಲ್ಲಿ ಮಹತ್ವದ ಬದಲಾವಣೆಗಳಾದವು; ಆಮೇಲಿನ ವರ್ಷಗಳಲ್ಲಿ ಅವು ದೃಢಗೊಂಡವು.

ದಿನಕರ ದೇಸಾಯಿಯವರು ರೈತ ಹೋರಾಟ ಪ್ರಾರಂಭಿಸಿದ್ದು ೧೯೩೬-೪೦ರ ಕಾಲದಲ್ಲಿ. ಆ ಕಾಲದಲ್ಲಿ ನಾಡವರು ಸಂಪೂರ್ಣ ತನ್ಮಯತೆ, ನಿಷ್ಠೆಯಿಂದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. “ದೇಶದ ಜನತೆಯ ಶಕ್ತಿ ಸಾಮರ್ಥ್ಯಗಳೆಲ್ಲವೂ ಸ್ವಾತಂತ್ರ್ಯಗಳಿಕೆಗಾಗಿ ವ್ಯಯಿಸಲ್ಪಡಬೇಕು. ಬೇರೆ ಬೇರೆ ಧ್ಯೇಯ, ಸಾಧನೆಗಳಲ್ಲಿ ನಮ್ಮ ಶಕ್ತಿಯನ್ನು ವಿಚ್ಛಿದ್ರಗೊಳಿಸಬಾರದು” (‘ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’ ದ್ವಿತೀಯ ಸಂಪುಟ – ವಿ.ಎಸ್. ನಾರಾಯಣರಾವ್ – ಪುಟ ೧೦೯) ಎಂಬುದು ಗಾಂಧಿ ಮತ್ತು ಕಾಂಗ್ರೆಸ್ಸಿನ ಆದೇಶವಾಗಿತ್ತು. ಬಾಸಗೋಡ ರಾಮ ನಾಯಕರು ಪ್ರಾರಂಭಿಸಬೇಕೆಂದಿದ್ದ ರೈತ ಚಳವಳಿಗೇ ಅನುಮತಿ ನೀಡದೆ ತಡೆ ಒಡ್ಡಲಾಗಿತ್ತು. ಈ ಹಿನ್ನೆಲೆಯಲ್ಲಿ ದೇಸಾಯಿಯವರ ರೈತ ಹೋರಾಟವನ್ನು ನಾಡವರು ಬೆಂಬಲಿಸುವುದು ಸಾಧ್ಯವಿರಲಿಲ್ಲ.

ಆ ರೈತ ಹೋರಾಟದ ಮೊದಲ ಹಂತದಲ್ಲಿ ದೇಸಾಯಿಯವರ ಘೋಷಣೆ ಗೇಣಿ ಪ್ರಮಾಣ ಕಡಮೆ ಮಾಡುವುದಕ್ಕೆ ಸಂಬಂಧಿಸಿದ್ದಾಗಿತ್ತೆ ಹೊರತು ಬಾಸಗೋಡ ರಾಮ ನಾಯಕರ ರೀತಿಯ ‘ಉಳುವವನೇ ಭೂಮಿಯ ಒಡೆಯ’ ಎಂಬ ಘೋಷಣೆಯನ್ನು ದೇಸಾಯಿ, ಪಿಕಳೆಯವರ ರೈತ ಹೋರಾಟಗಾರರು ಮಾಡಿದ್ದು ಹೊನ್ನಾವರದ ಹಳದಿಪುರದಲ್ಲಿ ನಡೆದ ರೈತ ಸಮಾವೇಶದಲ್ಲಿ, ೬-೫-೧೯೪೭ರಂದು.

ದಿನಕರ ದೇಸಾಯಿಯವರು ೧೯೩೦ರಲ್ಲಿ ನಡೆದ ಅಂಕೋಲೆಯ ಉಪ್ಪಿನ ಸತ್ಯಾಗ್ರಹದ ಕಾಲದಲ್ಲಿ,

ನಾಡವರೇ ನಿಜ ನಾಡಿಗರು
ನೋಡು ಕಾಳಗವ ಹೂಡಿಹರು
ಸ್ವಾತಂತ್ರ್ಯದ ರಸದೂಟವನುಂಡು
ವಿಜಯನಗರದಲಿ ಕಾದಿದ ದಂಡು
ನಾಡವರಿಂದಿನ ದಾಸ್ಯವ ಕಂಡು
ಉಪ್ಪು ಮಾಡುವರು ಮುಂದಕೆ ಬಂದು

ಹಿಂದಿನ ಹುರುಪೇ ಇಂದಿಗೆ ಮೂಡಿ
ನಾಡವರೆಲ್ಲ ಒಂದೆಡೆ ಕೂಡಿ
ಗಾಂಧಿ ಮಹಾತ್ಮರ ಕೊಂಬನು ಕೇಳಿ
ನೆಗೆದು ಕಾದುವರು ಧೈರ್ಯವ ತಾಳಿ

– ಎಂದು ಮುಂತಾಗಿ ಸ್ವಾತಂತ್ರ್ಯ ಹೋರಾಟದ ಪರವಾದ ಮತ್ತು ನಾಡವರ ಸ್ವಾತಂತ್ರ್ಯ ಪ್ರೀತಿಯನ್ನು ಕೀರ್ತಿಸುವಂಥ ಹಾಡುಗಳನ್ನು ಬರದಿದ್ದ ಬಗ್ಗೆ ದೇಸಾಯಿಯವರ ವಿಷಯದಲ್ಲಿ ಸದ್ಭಾವನೆ ಇತ್ತಾದರೂ ಅವರು ಸ್ವತಃ ಸ್ವಾತಂತ್ರ್ಯ ಹೋರಾಟದಲ್ಲಿ ಎದ್ದು ಕಾಣುವಂತೆ ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಜೈಲು ಶಿಕ್ಷೆ ಇತ್ಯಾದಿ ಕಷ್ಟಗಳನ್ನು ಅನುಭವಿಸಿದವರಾಗಿರಲಿಲ್ಲವಾದ್ದರಿಂದ ಅವರಲ್ಲಿ ನಾಡವರು ನೇತಾರತ್ವದ ಬಿಂಬವನ್ನು ಕಂಡಿರಲಿಲ್ಲ. ೧೯೪೦ರ ನಂತರ ಗಡಿಪಾರುಗೊಂಡು ದೇಸಾಯಿಯವರು ಮುಂಬಯಿಯಲ್ಲಿದ್ದ ಕಾಲದಲ್ಲಿ ಚಲೇಜಾವ್ ಚಳವಳಿಯಲ್ಲಿಯೂ ಅವರು ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಜೈಲುಶಿಕ್ಷೆಗೆ ಒಳಗಾದವರಾಗಿರಲಿಲ್ಲ. ಹೀಗಾಗಿ ೧೯೪೨ರ ನಂತದ ಕಾಲದಲ್ಲಿ ದಯಾನಂದ ಪ್ರಭು ಅವರಲ್ಲಿ ಕಂಡಂಥ ನೇತಾರತ್ವದ ಬಿಂಬವನ್ನೂ ದೇಸಾಯಿಯವರಲ್ಲಿ ನಾಡವರು ಕಂಡಿರಲಿಲ್ಲ. ಎಸ್.ವಿ. ಪಿಕಳೆಯವರು ಚಲೇಜಾವ್ ಚಳವಳಿಯ ಕಾಲದಲ್ಲಿ ೨೨ ವರ್ಷದ ಯುವಕರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರಲಿಲ್ಲ. ಆಗಿನ್ನೂ ಅವರ ವಿದ್ಯಾರ್ಥಿ ದೆಸೆಯೂ ಮುಗಿದಿರಲಿಲ್ಲ. ನಾಡವರ ದೃಷ್ಟಿಯಲ್ಲಿ ಸ್ವಾತಂತ್ರ್ಯಹೋರಾಟದಲ್ಲಿ ತೊಡಗಿಸಿಕೊಳ್ಳುವುದು ನೇತಾರತ್ವದ ಅರ್ಹತೆಯ ಅಗತ್ಯ ಅಂಶವೇ ಆಗಿತ್ತು. ಹೀಗಾಗಿ ೧೯೪೭ರ ನಂತರದ ಕಾಲದಲ್ಲಿಯೂ ದೇಸಾಯಿಯವರಲ್ಲಿ ಮತ್ತು ಪಿಕಳೆಯವರಲ್ಲಿ ನಾಡವರನ್ನು ಆಕರ್ಷಿಸುವ ನೇತಾರತ್ವದ ಆ ಕಳೆ ಅಥವಾ ಪ್ರಭಾವಳಿ ಇರಲಿಲ್ಲ.

ರೈತ ಹೋರಾಟದ ೧೯೪೭-೧೯೬೨ರ ವರೆಗಿನ ಎರಡು ಮತ್ತು ಮೂರನೆಯ ಕಾಲಘಟ್ಟದಲ್ಲಿಯೂ ನಾಡವರು ಜಾತಿ-ಜನಸಮೂಹವಾಗಿ ದೇಸಾಯಿ, ಪಿಕಳೆಯವರ ರೈತ ಹೋರಾಟದಲ್ಲಿ ಸೇರಿಕೊಂಡಿರಲಿಲ್ಲ. ನಾಡವರು ಎರಡು ದಶಕಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರಿಂದ ಅತಿಯಾಗಿ ದಣಿದಿದ್ದರು. ೧೯೩೦-೩೨ರ ಕಾಲದ ಕರನಿರಾಕರಣೆ ಹೋರಾಟವಂತೂ ಅವರನ್ನು ಆರ್ಥಿಕವಾಗಿಯೂ ಹೈರಾಣಗೊಳಿಸಿತ್ತು. ಆ ಕಾಲದಲ್ಲಿ ಕಳೆದುಕೊಂಡಿದ್ದ ಮನೆ, ಜಮೀನುಗಳು ತಿರುಗಿ ಬಂದದ್ದು ೧೯೩೭ರಲ್ಲಿ ಅವುಗಳನ್ನು ಒಂದು ವ್ಯವಸ್ಥೆಗೆ ತಂದುಕೊಳ್ಳುವುದಕ್ಕೆ, ಜಮೀನನ್ನು ವ್ಯವಸಾಯ ಯೋಗ್ಯವನ್ನಾಗಿ ಮಾಡಿಕೊಳ್ಳುವುದಕ್ಕೆ ಅತಿಯಾಗಿ ಶ್ರಮ ಪಡುತ್ತಿರುವ ಕಾಲಕ್ಕಾಗಲೇ ೧೯೪೨ರಲ್ಲಿ ಚಲೇಜಾವ್ ಚಳವಳಿ ಬಂದಿತು. ಗಂಡಸರೆಂಬವರೆಲ್ಲ ಭೂಗತರಾಗಿಯೊ, ಬಂಧಿತರಾಗಿ ಜೈಲಿನಲ್ಲಿಯೊ ಇದ್ದರು. ಚಳವಳಿಯ ಕಾವು, ತೀವ್ರತೆ ಕಡಮೆಯಾಗುವ ಹೊತ್ತಿಗಾಗಲೆ ಹೋರಾಟಗಾರರಲ್ಲಿ ಬಹುಪಾಲು ಜನ ಬಂಧಿತರಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದರು. ಅವರವರಿಗೆ ವಿಧಿಸಲಾಗಿದ್ದ ಶಿಕ್ಷೆಯ ಕಾಲಾವಧಿಗೆ ಅನುಗುಣವಾಗಿ ಅವರು ೧೯೪೭ರ ವರೆಗೂ, ಹೆಚ್ಚು ಕಡಮೆ ಸ್ವಾತಂತ್ರ್ಯ ಪಡೆಯುವವರೆಗೂ ಜೈಲುಗಳಿಂದ ಬಿಡುಗಡೆಯಾಗಿ ಹೊರಬರುತ್ತಲೇ ಇದ್ದರು. ಪ್ರಖ್ಯಾತ ಉಳವರೆ ಪ್ರಕರಣದಲ್ಲಿ ಬಂಧಿತರಾಗಿ ಧೀರ್ಘಕಾಲದ ಶಿಕ್ಷೆಗೆ ಒಳಗಾಗಿದ್ದ, ನನ್ನ ಜೀವನದ ಅತ್ಯಂತ ಪ್ರೀತಿಯ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ ಹಿಚ್ಕಡದ ಹಮ್ಮಣ್ಣ ವಿಠೋಬ ನಾಯಕ ಮತ್ತು ನನ್ನ ದೊಡ್ಡಪ್ಪನ ಮಗ ಸೂರ್ವೆಯ ಬೀರಣ್ಣ (ಗಣಪತಿ) ರಾಮಕೃಷ್ಣ ನಾಯಕ ಇವರಿಬ್ಬರೂ ನಾಲ್ಕು ವರ್ಷಗಳಿಗಿಂತ ಹೆಚ್ಚು ಕಾಲದ ಜೈಲು ಶಿಕ್ಷೆಯಿಂದ ೧೯೪೭ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿ ಬಂದದ್ದು ನನಗೇ ಸ್ವತಃ ನೆನಪಿದೆ.

ನಾಡವರಿಗೆ ತಮ್ಮ ಹೋರಾಟ ಸಫಲವಾಯಿತೆಂಬ ಧನ್ಯಭಾವ ಇತ್ತಾದರೂ ಅದನ್ನು ಹರ್ಷಚಿತ್ತದಿಂದ ಅನುಭವಿಸುವುದಕ್ಕೆ ಬೇಕಾದ ಪರಿಸ್ಥಿತಿ ಇರಲಿಲ್ಲ. ಆರ್ಥಿಕವಾಗಿ ನುಜ್ಜುಗುಜ್ಜಾಗಿ ಹೋಗಿದ್ದ ತಮ್ಮ ಕುಟುಂಬಗಳನ್ನು ಹಿಂದಿನ ಅನುಕೂಲದ ಸ್ಥಿತಿಗೆ ತಂದುಕೊಳ್ಳುವುದಕ್ಕೆ ಇನ್ನಿಲ್ಲದಂತೆ ಹೆಣಗಬೇಕಾದ ಪರಿಸ್ಥಿತಿ ಅವರದಾಗಿತ್ತು. ಇನ್ನೊಂದು ಹೋರಾಟಕ್ಕೆ ತೊಡಗಿಸಿಕೊಳ್ಳುವುದಕ್ಕೆ ಬೇಕಾದ ಉಮೇದಿಯೊ ಉತ್ಸಾಹವೊ ತ್ರಾಣವೊ ಅವರಲ್ಲಿ ಇರಲೇ ಇಲ್ಲ. ೧೯೫೯ ರಲ್ಲಿ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರ ಸಂತ್ರಸ್ತರ ಮಕ್ಕಳಿಗೆ ವಿದ್ಯಾರ್ಥಿವೇತನ ಘೋಷಿಸಿದ್ದರಿಂದ ಅವರ ಮಕ್ಕಳಿಗೆ ಶಿಕ್ಷಣ ಪಡೆಯುವುದಕ್ಕೆ ಅನುಕೂಲವಾಗಿತ್ತಾದರೂ ಎಸ್. ನಿಜಲಿಂಗಪ್ಪನವರ ಕಾಂಗ್ರೆಸ್ ಸರ್ಕಾರವು ೧೯೬೨ರ ಹೊತ್ತಿಗೆ ಸ್ವಾತಂತ್ರ್ಯ ಹೋರಾಟಗಾರ ಸಂತ್ರಸ್ತರಿಗೆ (ಅವರು ತೀರಿ ಹೋಗಿದ್ದರೆ ಅವರ ಹೆಂಡತಿಗೆ) ಪಿಂಚಣಿ ವೇತನ ಘೋಷಿಸುವವರೆಗೆ ಅವರ ಆರ್ಥಿಕ ಪರಿಸ್ಥಿತಿಯಲ್ಲಿ ಹೇಳಿಕೊಳ್ಳುವಂಥ ಬದಲಾವಣೆಯೇನೂ ಆಗಿರಲಿಲ್ಲ. ಆನಂತರದ ವರ್ಷಗಳಲ್ಲಿ ಶಿಕ್ಷಣ ಮತ್ತು ಆರ್ಥಿಕ ಸ್ಥಿತಿಯಲ್ಲಿ ನಾಡವರು ವೇಗವಾಗಿ ಬೆಳೆದದ್ದು ಒಂದು ರೋಚಕ ಕತೆ.

ಸ್ವಾತಂತ್ರ್ಯ ಹೋರಾಟದಿಂದಾಗಿ ಕಷ್ನನಷ್ಟ ಅನುಭವಿಸುವಂತಾಗಿದ್ದರೂ ನಾಡವರಲ್ಲಿ ಕಾಂಗ್ರೆಸ್ ನಿಷ್ಠೆ ದೃಢವಾಗಿಯೆ ಇತ್ತು. ಜಿ.ವಿ. ಜೋಷಿಯವರು ಅವರ ಲೇಖನದಲ್ಲಿ ಹೇಳಿರುವಂತೆ ನಾಡವರಿಗೆ ಕಾಂಗ್ರೆಸ್ಸಿಗರೆಂದು ಹೇಳಿಕೊಳ್ಳುವುದರಲ್ಲಿ ‘great pleasure’ (‘ಅಪಾರ ಸಂತೋಷ’) ಇತ್ತು ಎಂಬುದಕ್ಕಿಂತ ‘Strong sense of belonging’ ಅಂದರೆ ತಾವು ಕಾಂಗ್ರೆಸ್ಸಿಗೆ ಸಂಬಂಧಿಸಿದವರು, ಕಾಂಗ್ರೆಸ್ ನಮ್ಮದು ಎಂಬಂಥ ಗಾಢವಾದ ಭಾವನೆ ಇತ್ತು, ಎಂದು ಹೇಳಬಹುದು. ದೇಸಾಯಿ, ಪಿಕಳೆ, ನಾಡಕರ್ಣಿ ನೇತಾರತ್ವದ ರೈತ ಹೋರಾಟವು ಕಾಂಗ್ರೆಸ್ಸನ್ನು ವಿರೋಧಿಸುವ ಪ್ರಜ ಸೋಷಯಲಿಸ್ಟ್ ಪಕ್ಷ ರಾಜಕೀಯದಿಂದ ಬೇರ್ಪಡಿಸಿ ನೋಡಲಾಗದಂತೆ ರೈತ ಹೋರಾಟವಾಗಿ ಬೆಳೆದಿತ್ತು. ಅದನ್ನು ಹಾಗೆಯೆ ಬೆಳೆಸಲಾಗಿ‌ತ್ತು. ಆ ರೈತ ಹೋರಾಟದಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದ ಜಾತಿ-ಜನಸಮೂಹದವರು ಈ ಬರವಣಿಗೆಯಲ್ಲಿ ಹಿಂದೆಯೆ ಹೇಳಿದಂತೆ ಜಾತಿ-ಜನಸಮೂಹವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿರಲಿಲ್ಲ. ಅವರಲ್ಲಿ ಕೆಲವು ನಾಮಧಾರಿ ವ್ಯಕ್ತಿಗಳು (ಕೆಲವು ಮುಸಲ್ಮಾನ ವ್ಯಕ್ತಿಗಳೂ ಇದ್ದರು) ಕರನಿರಾಕರಣೆ ಹೋರಾಟ ಕಾಲದಲ್ಲಿ ಕರಕೊಡದ ನಾಡವರೆ ಮನೆ, ಜಮೀನುಗಳನ್ನು ಸರ್ಕಾರ ಹರಾಜಿಗಿಟ್ಟಾಗ ಕೊಂಡುಕೊಂಡಿದ್ದರು. (ನೋಡಿ :ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು, ತೃತೀಯ ಸಂಪುಟ, ಪುಟ-೬೫) ಇಂಥ ಕಾರಣಗಳಿಂದಾಗಿ ನಾಡವರಿಗೆ ಆ ರೈತ ಚಳವಳಿ ಅವರ ವಿರೋಧಿ ಪಕ್ಷದವರ ಚಳವಳಿಯಾಗಿ ಕಂಡಿತು; ಆ ರೈತ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದವರಿಗೆ ಕಾಂಗ್ರೆಸ್ಸನ್ನು ಬೆಂಬಲಿಸುವ ನಾಡವರು ಅವರ ವಿರೋಧ ಪಕ್ಷದವರಾಗಿ ಕಂಡರು.

ವಿಷ್ಣುನಾಯ್ಕರ ಈ ಪುಸ್ತಕದ ೫೫ನೆಯ ಪುಟದಲ್ಲಿ ಪ್ರಸ್ತಾಪವಾದ, ಹಿರೇಗುತ್ತಿ ಸಭೆಯಲ್ಲಿ ದಿನಕರ ದೇಸಾಯಿ ಮತ್ತಿತರರ ಮೇಲೆ ನಡೆದ ಹಲ್ಲೆ ಪಕ್ಷರಾಜಕೀಯದ ವಿರೋಧ ವ್ಯಕ್ತಪಡಿಸುವ ತೀರಾ ಕೆಟ್ಟ ರೀತಿಯ ಅಭಿವ್ಯಕ್ತಿಯೇ ಆಗಿತ್ತು. ದೇಸಾಯಿಯವರು ಅವರ ಭಾಷಣದಲ್ಲಿ ತಮ್ಮ ರೈತರ ಪಕ್ಷದವರು ಗೋಕರ್ಣದ “ಶ್ರೀ ಮಹಾಬಲೇಶ್ವರ ದೇವರಿಗೆ ಮೂರು ಪ್ರದಕ್ಷಿಣೆಗಳನ್ನು ಹಾಕಿ ಅಶ್ವಮೇಧದ ಕುದುರೆ ಬಿಡುತ್ತೇವೆ. ಆ ಕುದುರೆಯನ್ನು ಕಟ್ಟಿ ಹಾಕುವ ಸಾಹಸಿ ಬಭ್ರುವಾಹನರು ಯಾರಾದರೂ ಇದ್ದರೆ ಮುಂದೆ ಬರಲಿ,” ಎಂಬಂಥ ಯಕ್ಷಗಾನದ ಪರಿಭಾಷೆಯಲ್ಲಿ ಸವಾಲನ್ನು ಎಸೆದಿದ್ದರು. (ಪುಟ ೫೫). ಆ ಸವಾಲನ್ನು ಸ್ವೀಕರಿಸುವುದಾಗಿ ‘ಬಭ್ರುವಾಹನರಾಗಿ’ ಮುಂದೆ ಬಂದು ದಾಂಧಲೆ ಎಬ್ಬಿಸಿದವರು (ಆ ಸಭೆಯಲ್ಲಿ ಸ್ವತಃ ಇದ್ದ, ಆ ಹಲ್ಲೆಯಿಂದ ಹೇಗೊ ತಪ್ಪಿಸಿಕೊಂಡವರಲ್ಲಿ ಒಬ್ಬರಾದ ಪಿಕಳೆ ಮಾಸ್ತರರು ಹೇಳಿದಂತೆ) “ಕೆಲವು ಕಾಂಗ್ರೆಸ್ ಪುಂಡ ಹುಡುಗರಾಗಿದ್ದರು.” ಆ ‘ಪುಂಡ ಹುಡುಗ’ರೆಂಬವರು ನಾಡವರೇ ಆಗಿದ್ದರು.

ಹಿರೇಗುತ್ತಿಯು, ಅಂಕೋಲಾ ಸೀಮೆ, ಗೋಕರ್ಣ ಸೀಮೆ- ಈ ಎರಡೂ ಸೀಮೆಗಳ, ಸಮಸ್ತ ನಾಡವರ ಜಾತಿ-ಜನಸಮೂಹದ ಮುಖ್ಯಸ್ಥ ‘ಸೀಮೆಗಾಂವಕಾರ’ರ ಊರು. ಆ ಕಾಲದಲ್ಲಿ ಮುಂಬಯಿ ಪ್ರಾಂತದ ಕಾಂಗ್ರಸ್ ಸರ್ಕಾರದಲ್ಲಿ ಉಪಮಂತ್ರಿ ಹುದ್ದೆಯ ಪಾರ್ಲಿಮೆಂಟರಿ ಸೆಕ್ರೆಟರಿಯಾಗಿದ್ದ ಸ.ಪ. ಗಾಂವಕಾರರು ನಾಡವರಾಗಿದ್ದರು; ಆ ಹಿರೇಗುತ್ತಿ ಊರಿನ ಕೆರೆಮನೆಯ ಅಳಿಯನಾಗಿದ್ದರು; ಗೋಕರ್ಣ ಸೀಮೆಯವರೂ ಆಗಿದ್ದರು. ಅವರ ಹೆಂಡತಿಯ ತಂಗಿ ಹಿರೇಗುತ್ತಿಯ ಸೀಮೆಗಾಂವಕಾರ ಕೀರ್ತಿಶೇಷ ಬೊಮ್ಮಯ್ಯ ಗಾಂವಕಾರರ ಕಿರಿಯ ಹೆಂಡತಿ ಈ ಸಂಬಂಧ ಬೇರೆ. ವಕೀಲರಾಗಿದ್ದ ಕಾಂಗ್ರೆಸ್ಸಿನ ಆರ್.ಬಿ. ನಾಯಕರು (ಮುಂದೆ ಕರ್ನಾಟಕ ರಾಜ್ಯವಾದ ಮೇಲೆ ಉಪಸಭಾಪತಿಯಾದವರು) ಹಿರೇಗುತ್ತಿಯ ‘ಸೀಮೆ ಗಾಂವಕಾರ’ ಮನೆತನದವರಾಗಿದ್ದರು. ನಾಡವರಲ್ಲೆಲ್ಲ ಜಾತಿ ಅಭಿಮಾನದಲ್ಲಿ ಹಿರೇಗುತ್ತಿಯವರು ಸೂಕ್ಷ್ಮಮತಿಗಳೆಂದು ಅಭಿಮಾನ ಶೂರರೆಂದು ಪ್ರಸಿದ್ಧರಾಗಿದ್ದವರು. ಈ ಎಲ್ಲಾ ಕಾರಣಗಳಿಂದಾಗಿ ಕಾಂಗ್ರೆಸ್ ಅಥವಾ ಕಾಂಗ್ರೆಸ್ಸಿಗರ ವಿರುದ್ಧ ಆ ಕಾಲದಲ್ಲಿ ದೇಸಾಯಿಯವರು ಸಭೆಯಲ್ಲಿ ಏಕಾಏಕಿ ಅಂಥ ಪ್ರಚೋದನಕಾರಿ ಸವಾಲೆಸೆಯುವುದಕ್ಕೆ, ಅಂಥ ಸವಾಲೆಸೆದು ದಕ್ಕಿಸಿಕೊಳ್ಳುವುದಕ್ಕೆ ಹಿರೇಗುತ್ತಿ ಕಠಿಣವಾದ, ‘ತೀರಾ ಸೂಕ್ಷ್ಮವಾದ ಪ್ರದೇಶ’ವಾಗಿತ್ತು. ಮಾತಿನ ರಭಸದಲ್ಲಿ ಆ ಸವಾಲೆಸೆಯುವಾಗ ಅದು ದೇಸಾಯಿಯವರ ಗಮನದಲ್ಲಿರಲಿಲ್ಲವೆಂದು ತೋರುತ್ತದೆ ! ಅವರ ಮೇಲಿನ ಈ ಹಲ್ಲೆಗೆ ಏನೇ ಕಾರಣಗಳನ್ನು ಹೆಕ್ಕಿ ಅಥವಾ ಊಹಿಸಿ ಹೇಳಿದರೂ ಎಂಥದೇ ವಿವರಣೆ ನೀಡಿದರೂ ನಮ್ಮ ಅಂಕೋಲೆ. ಒಟ್ಟಿನಲ್ಲಿ ನಮ್ಮ ಉತ್ತರ ಕನ್ನಡ ಜಿಲ್ಲೆ ಪಡೆದ ಭಾಗ್ಯದ ಬೆಳಕು ಎಂಬಂಥ ವ್ಯಕ್ತಿಶ್ರೇಷ್ಠರಲ್ಲಿ ಒಬ್ಬರಾದ ದಿನಕರ ದೇಸಾಯಿಯವರ ಮೇಲೆ ನಡೆದ ಹಲ್ಲೆ ಈ ರೈತ ಹೋರಾಟದ ಚರಿತ್ರೆಯಲ್ಲಿ ಒಂದು ಕೆಟ್ಟ ನೆನಪಾಗಿ ಉಳಿಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಒಟ್ಟಿನಲ್ಲಿ ದೇಸಾಯಿ, ಪಿಕಳೆ, ನಾಡಕರ್ಣಿಯವರ ನೇತಾರತ್ವದ ರೈತ ಚಳವಳಿಗೆ ಸಂಬಂಧಿಸಿದಂತೆ ಭೂಮಾಲೀಕವರ್ಗದವರ ವಿರೋಧದ ಸ್ವರೂಪಕ್ಕೂ ನಾಡವರ ವಿರೋಧದ ಸ್ವರೂಪಕ್ಕೂ ವ್ಯತ್ಯಾಸವಿತ್ತು. ಇದು ಆ ರೈತ ಹೋರಾಟ ಕುರಿತ ಚರಿತ್ರಕಾರರು, ಜಿ.ವಿ.ಜೋಶಿಯವರಂಥ ಲೇಖಕರು ಗಮನಿಸಬೇಕಾದ ಸಂಗತಿ.

ಅಂಕೋಲಾ ಶಹರದ ಭೂಮಾಲಿಕ ವರ್ಗದ ಕಾಂಗ್ರೆಸ್ಸಿಗರು ಬಾಸಗೋಡ ರಾಮನಾಯಕರನ್ನು ನಿವಾರಿಸಿಕೊಂಡ ಮೇಲೆ ಎಸ್.ವಿ. ಪಿಕಳೆಯವರನ್ನು ನಿವಾರಿಸಿಕೊಳ್ಳುವ ಆ ಮೂಲಕ ರೈತ ಹೋರಾಟದ ಮತ್ತು ಪಿ.ಎಸ್.ಪಿ.ಯ ಪ್ರಾಬಲ್ಯ ತಗ್ಗಿಸುವ ತಂತ್ರ ರೂಪಿಸಿದರು. ಆ ಸಂದರ್ಭದಲ್ಲಿಯೂ ಶಹರದ ಭೂಮಾಲಿಕವರ್ಗದ ಕಾಂಗ್ರೆಸ್ಸಿನವರನ್ನು ನೇರವಾಗಿ ಹೊಣೆಗಾರರೆಂದು ಹೆಸರಿಸಿ ಹೇಳಲಾಗದಂಥ ರೀತಿಯಲ್ಲಿ ಚಾಣಕ್ಯತನದಿಂದ ಅದನ್ನು ಪರೋಕ್ಷವಿಧಾನದಲ್ಲಿ ಆಗುಮಾಡಲಾಗಿತ್ತು.

ಪಿಕಳೆ ಮಾಸ್ತರರು, ದೇಸಾಯಿಯವರು, ದಯಾನಂದ ನಾಡಕರ್ಣಿಯವರು ಜೊತೆಗೂಡಿ ರೈತ ಸಂಘಟನೆಯನ್ನು ಬೆಳೆಸುತ್ತಿದ್ದರು. ರೈತ ಹೋರಾಟವೂ ಈಗಾಗಲೆ ಹೇಳಿದಂತೆ ಪ್ರಜಾಸಮಾಜವಾದೀ ಪಕ್ಷದ ಪಕ್ಷರಾಜಕೀಯದ ಹೋರಾಟದ ಭಾಗವೇ ಆಗಿತ್ತು. ಅಂಕೋಲೆಯ ಮಟ್ಟಿಗೆ ದಿನಕರ ದೇಸಾಯಿ-ಪಿಕಳೆ ಮಾಸ್ತರರು ನಡೆಸುತ್ತಿರುವ ಹೋರಾಟ ಎಂಬಂತಾಗಿಬಿಟ್ಟಿತ್ತು. ಸ್ವತಃ ಕವಿಯೂ ಆಗಿದ್ದ ದಿನಕರ ದೇಸಾಯಿಯವರಂತೂ ಹಾಡುಕಟ್ಟಿ ಜಮೀನ್ದಾರರನ್ನು ನಿಷ್ಠುರವಾಗಿ ಕಠಿನ ಮಾತುಗಳಿಂದ ಛೇಡಿಸುತ್ತಿದ್ದರು, ಖಂಡಿಸುತ್ತಿದ್ದರು.

ಕೇಶವ ಕಮ್ತಿ ಕೇಳೋ ಸಂಗ್ತಿ
ಊರಿಗೆ ದೊಡ್ಡ ಒಡೆಯಾ
ದೆವ್ವದಗಿಂತ ಕಡೆಯಾ….

-ಈ ಹಾಡು ಒಂದು ‘ಸ್ಯಾಂಪಲ್’ ಅಷ್ಟೆ. ವಿಷ್ಣು ನಾಯಕರೂ ಅವರ ‘ದುಡಿಯುವ ಕೈಗಳ ಹೋರಾಟದ ಕತೆ’ಯಲ್ಲಿ ಈ ಹಾಡನ್ನು ವಿವರವಾಗಿ ಉದಾಹರಿಸಿದ್ದಾರೆ (ಪುಟ ೭೨). ರೈತ ಕೂಟಗಳಲ್ಲಿ, ಬಹಿರಂಗ ಸಭೆಗಳಲ್ಲಿ, ಹಾಲಕ್ಕಿ ಗೌಡರ ಗುಮಟೆ ಪಾಂಗುಗಳ ಹಾಡುಗಳಲ್ಲಿ ಇಂಥ ಎಷ್ಟೋ ಹಾಡುಗಳು ಅನುರಣಿಸುತ್ತಿದ್ದವು. ಕೇಶವ ಕಾಮತರಂಥ ಪ್ರತಿಷ್ಠಿತ ಶ್ರೀಮಂತರ ಹೆಸರು ಹೇಳಿಯೂ ಅವರನ್ನು ರೈತ ಸಭೆಗಳಲ್ಲಿ ದೇಸಾಯಿ ಖಂಡಿಸುತ್ತಿದ್ದರು. ಶಾಲೆಯ ಮಕ್ಕಳಾದ ನಾವೂ ಇಂಥ ಹಾಡುಗಳ ಸಾಲುಗಳನ್ನು ಗಟ್ಟಿಯಾಗಿ ಏರುದನಿಯಲ್ಲಿ ಹೇಳಿಕೊಂಡು ಹೋಗುತ್ತಿದ್ದುದ್ದಿತ್ತು. ಈ ‘ಕೇಶವ ಕಮ್ತಿ ಕೇಳೋ ಸಂಗ್ತಿ’ ಹಾಡು ಗೊತ್ತಿಲ್ಲದ ಒಬ್ಬ ವಿದ್ಯಾರ್ಥಿಯೂ ಪಿಕಳೆ ಮಾಸ್ತರರ ಪೀಪಲ್ಸ್ ಹೈಸ್ಕೂಲಲ್ಲಿ ಬಹುಶಃ ಇರಲಿಲ್ಲ ಎಂದರೆ ಅತಿಶಯೋಕ್ತಿಯಲ್ಲ.

ದೇಸಾಯಿಯವರು ಪ್ರಭಾವಶಾಲೀ ಭಾಷಣಕಾರರಾಗಿದ್ದರು. ಅವರ ಭಾಷಣ ಖಾರವಾಗಿರುತ್ತಿತ್ತು. ಜಮೀನ್ದಾರರನ್ನು ನೇರವಾಗಿ ಚುಚ್ಚಿ ಚುಚ್ಚಿ ಆಡುವ ರಣಹದ್ದುತನದ ಮಾತಿನಶೈಲಿ ಅವರ ಭಾಷಣದಲ್ಲಿಯೆ ಹೆಚ್ಚಾಗಿರುತ್ತಿತ್ತು. ಬೋಳಿಮಗ, ತಾಯಿಗಂಡ-ಇಂಥ ಬೈಗುಳ ಮಾತುಗಳೂ ಅವರ ಭಾಷಣಗಳ ನಡುನಡುವೆ ಎಗ್ಗಿಲ್ಲದೆ ನುಗ್ಗಿ ಬರುತ್ತಿದ್ದವು. ರೈತರ ಸಭೆ ಅದನ್ನೂ ಅಸ್ವಾದಿಸಿ ಚಪ್ಪಾಳೆ ಮತ್ತು ‘ಹಾ’ ‘ಹೋ’ ಉದ್ಗಾರಗಳ ಮೂಲಕ ಸ್ವಾಗತಿಸಿ ಉತ್ಸಾಹದ ಪ್ರತಿಕ್ರಿಯೆ ತೋರುತ್ತಿತ್ತು. ದೇಸಾಯಿಯವರ ‘ಬಾಯಿ ಹೊಲಸು’ ಎಂದು ಇತರರು ಆಡಿಕೊಳ್ಳುತ್ತಿದ್ದುದೂ ಇತ್ತು. ಆಗ ಹುಡುಗರಾಗಿದ್ದ ನಮಗೇ ಹಾಗೆನಿಸಿದ್ದೂ ಉಂಟು. ಪಿಕಳೆ ಮಾಸ್ತರರು ಬಹಿರಂಗ ಸಭೆಯಲ್ಲಿ ದೇಸಾಯಿಯವರಷ್ಟು ಪರಿಣಾಮಕಾರೀ ಭಾಷಣಕಾರರಾಗಿರಲಿಲ್ಲ. ಅವರು ಯಾವಾಗಲೂ ಗಂಭೀರ ಸ್ವಭಾವದವರು. ಅಧ್ಯಯನಶೀಲರು, ಕಂಡದ್ದನ್ನು ಖಂಡತುಂಡವಾಗಿ ಹೇಳಬಲ್ಲ ಎದೆಗಾರಿಕೆ, ಸತ್ಯನಿಷ್ಠೆ ಉಳ್ಳವರು. ಶಿಕ್ಷಕರಾಗಿದ್ದ ಅವರು ವಿಷಯವನ್ನು ಶಿಕ್ಷಕನಂತೆ ಮುಂದಿಡುತ್ತಿದ್ದರು. ಮಾತಿನ ಚಲಾಕಿ ಬಲ್ಲ ಬಯಲುವಾಗ್ಮಿಯಾಗಿರಲಿಲ್ಲ.

ಕಾಂಗ್ರೆಸ್ ಚುನಾವಣೆಯಲ್ಲಿ ಅದೂ ಸ್ವಾತಂತ್ರ್ಯಾನಂತರದ ಮೊತ್ತಮೊದಲ ಚುನಾವಣೆಯಲ್ಲಿ- ಸ್ವಾತಂತ್ರ್ಯಹೋರಾಟದಲ್ಲಿ ಎರಡನೆಯ ಬಾರ್ಡೋಲಿ ಎಂದು ಖ್ಯಾತಿ ಪಡೆದ ಅಂಕೋಲೆಯಲ್ಲಿಯೆ ಕಾಂಗ್ರೆಸ್ ಸೋತುದರಿಂದ ಮುಖಭಂಗವಾಗಿ ಅದರಲ್ಲಿಯೂ ಕಾಂಗ್ರೆಸ್ಸಿನಲ್ಲಿದ್ದ ಭೂಮಾಲೀಕ ವರ್ಗದ ‘ಲಾಬಿ’ಗೆ, ಪಿ.ಎಸ್.ಪಿ.ಯ ರೈತ ಹೋರಾಟದ ಬಲ ಹೆಚ್ಚುವಂತಾದ್ದರಿಂದ ಮುಖಭಂಗದ ಜೊತೆಗೆ ಭಯವೂ ಆಗಿತ್ತೆಂದು ತೋರುತ್ತದೆ. ಬಾಸಗೋಡ ರಾಮ ನಾಯಕರ ನೇತಾರತ್ವವನ್ನು ನಿವಾರಿಸಿಕೊಳ್ಳುವುದರ ಮೂಲಕ ಕಾಂಗ್ರೆಸ್ಸಿನೊಳಗೇ ಇದ್ದ ರೈತಪರ ಹೋರಾಟದ ತೀವ್ರವಾದೀ ದನಿಯನ್ನು ಅಡಗಿಸಿದೆವೆಂದು ನೆಮ್ಮದಿಯಾಗಿದ್ದವರ, ಕಾಂಗ್ರೆಸ್ಸಿನ ಸೋಲನ್ನು ನಿರೀಕ್ಷಿಸಿರದಿದ್ದವರ ನೆಮ್ಮದಿಯು ಚುನಾವಣೆಯಲ್ಲಿ ಉಂಟಾದ ಸೋಲಿನಿಂದ ಕೆಟ್ಟಿತ್ತು. ಆ ಭಯ ಮತ್ತು ನೆಮ್ಮದಿಗೇಡಿ ಸ್ಥಿತಿಯೇ ಜನವರಿ ೭, ೧೯೫೨ರ ರೈತ ಜಾಥಾದಲ್ಲಿ ಭಾಗವಹಿಸಿದ್ದನ್ನು ನೆವಮಾಡಿಕೊಂಡು ಅದೂ ಜಾಥಾನಡೆದ ಒಂದು ವರ್ಷದ ಮೇಲೆ ಪಿಕಳೆ ಮಾಸ್ತರರನ್ನು ಶಾಲೆಯ ಸೇವೆಯಿಂದ ವಜಾಮಾಡುವುದಕ್ಕೆ ಮುಖ್ಯ ಕಾರಣವಾಗಿತ್ತು.

ರೈತ ಜಾಥಾದ ಧುರೀಣತ್ವ ವಹಿಸಿದ ಮೂವರಲ್ಲಿ ಬಿ.ಪಿ.ಕದಂ ಕಾರವಾರದವರು. ಆ ಮೇಲಿನ ಚುನಾವಣೆಯಲ್ಲಿ ಪಿ.ಎಸ್.ಪಿ. ಅಭ್ಯರ್ಥಿಯಾಗಿ ನಿಂತು ಗೆದ್ದವರು. ಇನ್ನೊಬ್ಬರು ದಯಾನಂದ ನಾಡಕಣಿ, ಗಂಗಾವಳಿ ನದಿ ಆಚೆಯ ಕುಮಟಾ ತಾಲೂಕಿಗೆ ಸೇರಿದ್ದ ಬಂಕಿಕೊಡ್ಲದವರು. ಅಂಕೋಲೆ ಶಹರವೇ ನೆಲೆಯಾಗಿದ್ದವರು ಪಿಕಳೆ ಮಾಸ್ತರರೊಬ್ಬರೇ ಆಗಿದ್ದರು. ದಿನಕರ ದೇಸಾಯಿಯವರು ಮೂಲತಃ ಅಂಕೋಲೆಯ ಹತ್ತಿರದ ಅಲಗೇರಿ ಎಂಬ ಹಳ್ಳಿಯವರು. ಆ ದೃಷ್ಟಿಯಿಂದ ವರು ಅಂಕೋಲೆಯವರೇ ಆಗಿದ್ದರು. ಆದರೆ ಗೋಖಲೆಯವರ ಭಾರತ ಸೇವಕ ಸಮಾಜದ ಅಜೀವ ಸದಸ್ಯರಾದ ಅವರು ಮುಂಬಯಿಯಲ್ಲಿ ವಾಸವಾಗಿ ಇದ್ದವರಾಗಿದ್ದರು. ಅಂಕೋಲೆಯಲ್ಲಿ ಮಾತ್ರವಲ್ಲ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳೆಯುತ್ತಿದ್ದ ಪಿ.ಎಸ್.ಪಿ.ಯವರ ಸಮಾಜವಾದೀ ಆಂದೋಲನದ ಪ್ರಥಮ ಮಹತ್ವದ ಧುರೀಣಗೌರವ ಪಡೆದವರಾಗಿದ್ದರೂ ದೇಸಾಯಿಯವರು ರಾಜಕೀಯ ಹಂಗಾಮಿಗೆ ಅಂಕೋಲೆಗೆ ಬಂದು ಹೋಗಿ ಮಾಡುವ, ಮುಂಬಯಿಯನ್ನೇ ತಮ್ಮ ಕಾರ್ಯಕ್ಷೇತ್ರದ ಮತ್ತು ವಾಸ್ತವ್ಯದ ಮುಖ್ಯ ನೆಲೆಯಿಂದ ಮಾಡಿಕೊಂಡವರಾಗಿದ್ದರು. ಪಿಕಳೆಯವರು ನನಗೆ ತಿಳಿದಿದ್ದಂತೆ ಪಿ.ಎಸ್.ಪಿಯ ಅಧಿಕೃತ ಸದಸ್ಯರಾಗಿರಲಿಲ್ಲ. ಪಿಕಳೆಯವರು ನನಗೆ ತಿಳಿದಿದ್ದಂತೆ ಪಿ.ಎಸ್.ಪಿಯ ಅಧಿಕೃತ ಸದಸ್ಯರಾಗಿರಲಿಲ್ಲ. ಆದರೂ ಅಂಕೋಲಾ ತಾಲೂಕಿನಲ್ಲಿ ಅವರೇ ಆ ಪಕ್ಷದ ನಿಜವಾದ ಸ್ಥಳೀಯಶಕ್ತಿಯಾಗಿದ್ದರು; ಕೆಳವರ್ಗದ ರೈತ ಜಾತಿ-ಜನಸಮೂಹದ ಅಪಾರ ಜನಪ್ರಿಯತೆಗಳಿಸಿಕೊಂಡಿದ್ದ ಧುರೀಣರಾಗಿದ್ದರು.

ಪಿಕಳೆ ಮಾಸ್ತರರ ಮೇಲೆ ಕ್ರಮಕೈಗೊಳ್ಳಬಹುದಾದಂತೆ ರೈತ ಜಾಥದ ಉಳಿದ ಧುರೀಣರಾಗಿದ್ದ ಇತರರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಶಾಲೆಯ ಆಡಳಿತಮಂಡಳಿಗೂ ಇರಲಿಲ್ಲ;ಶಹರದ ಭೂಮಾಲೀಕ ವರ್ಗದ ಕಾಂಗ್ರೆಸ್ಸಿಗರಿಗೂ ಇರಲಿಲ್ಲ. ಪಿಕಳೆ ಮಾಸ್ತರ ಮತ್ತು ಅವರ ರೈತ ಆಂದೋಲನ ಕುರಿತಂತೆ ಭೂಮಾಲೀಕ ವರ್ಗಕ್ಕೆ ಇದ್ದ ರೊಚ್ಚಿಗೆ ಪಿಕಳೆ ಮಾಸ್ತರರನ್ನು ಬಲಿಪಶು ಮಾಡುವ, ಪಿ.ಎಸ್.ಪಿ. ರಾಜಕೀಯ ಪ್ರಾಬಲ್ಯವನ್ನು ‘ಲಂಗಡಾ’ ಮಾಡುವ ಹುನ್ನಾರ ಆ ಕ್ರಮದ ಹಿನ್ನೆಲೆಯಲ್ಲಿ ಇತ್ತು.

ಪಿಕಳೆ ಮಾಸ್ತರರನ್ನು ಶಾಲೆಯ ಸೇವೆಯಿಂದ ವಜಾಗೊಳಿಸುವುದರ ಮೂಲಕ ನೌಕರಿ ನಂಬಿಕೊಂಡು ಬದುಕುತ್ತಿದ್ದ ಅವರನ್ನು ಅಂಕೋಲೆಯಿಂದ ನೆಲೆತಪ್ಪಿಸುವ ಹುನ್ನಾರ ಶಾಲೆಯ ಆಡಳಿತದವರದಾಗಿತ್ತೇನೊ! ಶಾಲೆಯ ಸೇವೆಯಿಂದ ವಜಾ ಮಾಡಿದರೆ ಜೀವನಕ್ಕೆ ನೌಕರಿಯನ್ನೇ ನಂಬಿಕೊಂಡಿದ್ದ ಅವರು ಅಂಕೋಲೆಯಿಂದಲೇ, ಉತ್ತರ ಕನ್ನಡ ಜಿಲ್ಲೆಯಿಂದಲೇ ತಮ್ಮನ್ನು ತಾವೇ ಗಡಿಪಾರುಮಾಡಿಕೊಂಡು ಹೋಗುವಂತಾದೀತು ಎಂಬ ಲೆಕ್ಕಾಚಾರ ಅವರದಾಗಿದ್ದಂತೆ ತೋರುತ್ತದೆ.

ಪಿಕಳೆ ಮಾಸ್ತರರು ಆ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಬರುವ ಮೊದಲು ಜೀವನೋಪಾಯಕ್ಕಾಗಿ ಕೆಲಕಾಲ ಮುಂಬಯಿನಗರವನ್ನು ಆಶ್ರಯಿಸಿದ್ದರು. ಆ ಕಾಲದಲ್ಲಿ ವಿದ್ಯಾವಂತರೆಲ್ಲ ತಮ್ಮ ಭವಿಷ್ಯ ಹುಡುಕಿಕೊಂಡು ಮುಂಬಯಿ ಮಹಾನಗರಕ್ಕೆ ಹೋಗುವುದು ಸಾಮಾನ್ಯವಾಗಿತ್ತು. ಅದರಲ್ಲಿಯೂ ಪಿಕಳೆಯವರು ಹುಟ್ಟಿದ ಗೌಡಸಾರಸ್ವತ ಕೊಂಕಣಿಗ ವಿದ್ಯಾವಂತರಂತೂ ‘ಇಲ್ಲಿರುವುದು ಸುಮ್ಮನೆ ಅಲ್ಲಿರುವುದು ನಮ್ಮ ಮನೆ’ ಎಂಬಂಥ ಮನೋಭಾವವನ್ನು ಮುಂಬಯಿ ವಿಷಯದಲ್ಲಿ ಬೆಳೆಸಿಕೊಂಡವರಾಗಿದ್ದರು. ಮುಂಬಯಿಯಲ್ಲಿ ನೌಕರಿ ಮಾಡುವ ಹುಡುಗರಿಗೆ ಮದುವೆಯಾಗಿ ಹೋಗುವುದಕ್ಕೆ ವಿಶೇಷ ಅರ್ಹತೆಯೆಂದು ಕೊಂಕಣಿಗರು ತಮ್ಮ ಹೆಣ್ಣುಮಕ್ಕಳಿಗೆ ಮರಾಠಿಭಾಷೆಯ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಿ ಓದಿಸುತ್ತಿದ್ದುದೂ ಸಾಮಾನ್ಯವಾಗಿತ್ತು. ಸಾಮಾನ್ಯವಾಗಿ ನಾವೆಲ್ಲ ಕನ್ನಡ ಮತ್ತು ಮರಾಠಿ ಎರಡೂ ಭಾಷೆಗಳು ಶಿಕ್ಷಣ ಮಾಧ್ಯಮವಾಗಿದದ ತರಗತಿಗಳಲ್ಲಿ ಜೊತೆಯಲ್ಲಿಯೆ ಕಲಿಯುವಂತಾಗಿತ್ತು.

ಪಿಕಳೆಯವರ ವಜಾ ಆದಮೇಲೆ ದೇಸಾಯಿಯವರು ಪಿಕಳೆಯವರನ್ನು ಮುಂಬಯಿಗೇ ಕರೆಸಿಕೊಳ್ಳುವ ಯೋಚನೆ ಮಾಡಿದ್ದರೆಂದು ವಿಷ್ಣು ನಾಯ್ಕರು ಬರೆದಿದ್ದಾರೆ.ಪಿಕಳೆ ಮಾಸ್ತರರು ಹಾಗೆಂದು ವಿಷ್ಣು ನಾಯ್ಕರಿಗೆ ಹೇಳಿದಂತೆಯೇ ನನ್ನೊಡನೆಯೂ ಒಂದು ಸಂದರ್ಭದಲ್ಲಿ ಹೇಳಿದ್ದುಂಟು. ಜೊತೆಗೆ ೧೯೫೨ರ ಚುನಾವಣೆಯಲ್ಲಿ ಕೆನರಾ ಲೋಕಸಭಾ ಕ್ಷೇತ್ರದಿಂದ ಪಿ,ಎಸ್.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಿನಕರ ದೇಸಾಯಿಯವರು,ಜಿಲ್ಲೆಯವರಲ್ಲದ, ಜಿಲ್ಲೆಯ ಜನಕ್ಕೆ ಪೂರ್ವಪರಿಚಿತರೂ ಅಲ್ಲದ ಜಿಲ್ಲೆಗಾಗಿ ಏನನ್ನೂ ಮಾಡಿರದ ಕಾಂಗ್ರೆಸ್ಸಿನ ಜೋಕಿಂ ಆಳ್ವಾ (ಮಾರ್ಗರೆಟ್ ಆಳ್ವಾ ಅವರ ಮಾವ) ಅವರಿಂದ ಸೋಲು ಅನುಭವಿಸಿದ್ದರಿಂದ ಹತಾಶರಾಗಿದ್ದರು. ಜೋಕಿಂ ಆಳ್ವಾ ಅವರ ಹೆಂಡತಿ ವಯೊಲೆಟ್ ಆಳ್ವಾ ನೆಹರೂ ಕುಟುಂಬದವರೊಂದಿಗೆ ನಿಕಟ ಸಂಪರ್ಕಹೊಂದಿದ್ದ ಪ್ರಭಾವೀ ಮಹಿಳೆಯಾಗಿದ್ದರು. ದಿನಕರ ದೇಸಾಯಿಯವರು ಜಿಲ್ಲೆಯಲ್ಲಿ ರಾಜಕೀಯ ಹೋರಾಟ ಮಾಡುವ ಹುಮ್ಮಸ್ಸನ್ನೇ ಕಳೆದುಕೊಂಡವರಂತೆ ಮಾತನಾಡುತ್ತಿದ್ದರು. ಚುನಾವಣಾ ನಂತರ ಮುಂಬಯಿಗೆ ಮರಳಿ ಹೊರಡುವಾಗ ಹುಬ್ಬಳ್ಳಿಯ ರೈಲ್ವೇ ನಿಲ್ಧಾಣದಲ್ಲಿ ದೇಸಾಯಿಯವರು ಆ ಬಗ್ಗೆ ಹತಾಶದನಿಯಲ್ಲಿ ಮಾತನಾಡಿದ್ದರು. ಹಾಗೆ ಹತಾಶರಾಗದೆ ಪಕ್ಷದ ಸಂಘಟನೆಯನ್ನು ಹೆಚ್ಚು ವ್ಯಾಪಕವಾಗಿ ಬೆಳೆಸುವುದು ಸಾಧ್ಯ. ಹತಾಶರಾಗುವ ಅಗತ್ಯವಿಲ್ಲ ಎಂದು ಪಿಕಳೆ ಮಾಸ್ತರರು ಹೇಳಿ ಅವರನ್ನು ಸಮಾಧಾನ ಮಾಡಿ ಕಳಿಸಿದ್ದರಂತೆ.

೧೯೫೨ರಲ್ಲಿ ಪಿಕಳೆ ಮಾಸ್ತರರು ಸೇವೆಯಿಂದ ವಜಾ ಆದ ಸಂದರ್ಭದಲ್ಲಿ ಅವರನ್ನು ಮುಂಬಯಿಗೆ ಬಾ ಎಂದು ದೇಸಾಯಿಯವರು ಕರೆದಾಗ ಪಿಕಳೆಯವರು ಅದಕ್ಕೆ ಒಪ್ಪಲಿಲ್ಲವಂತೆ. “ರಾಜಕೀಯದಲ್ಲಿ ಏಳು ಬೀಳು ಇದ್ದದ್ದೇ. ಮಕ್ಕಳಿಗೆ ಶಿಕ್ಷಣ ಕೊಡಿಸುವುದೂ ಮುಖ್ಯ. ಆ ಕೆಲಸವನ್ನು ನಾನು ಬಿಟ್ಟು ಬಿಡುವುದಿಲ್ಲ, , ಎರಡನ್ನೂ ಜೊತೆ ಜೊತೆಗೇ ಮಾಡಬೇಕು” ಎಂದು ತಮ್ಮ ನಿಲುವನ್ನು ದೇಸಾಯಿಯವರಿಗೆ ಪಿಕಳೆ ಮಾಸ್ತರರು ಸ್ಪಷ್ಟ ಪಡಿಸಿದ್ದರಂತೆ. ಅದರ ಫಲವೇ ಕೆನರಾ ಎಗ್ರಿಕಲ್ಚರಲ್ ಹೈಸ್ಕೂಲ್ ಸ್ಥಾಪನೆ. ಈ ಸಂಗತಿಗಳನ್ನು ಕೂಡ ಪಿಕಳೆ ಮಾಸ್ತರರು ನನ್ನೊಡನೆ ಹೇಳಿದ್ದುಂಟು.

ಒಂದೊಮ್ಮೆ ಆಗ ಅಂದರೆ ೧೯೫೩ರಲ್ಲಿ ಅಂಕೋಲಾ ಶಹರದ ಭೂಮಾಲೀಕ ವರ್ಗಕ್ಕೆ ಸೇರಿದ ಕಾಂಗ್ರೆಸ್ಸಿಗರ ನಿರೀಕ್ಷೆಯಂತೆ, ದಿನಕರ ದೇಸಾಯಿಯವರ ಯೋಚನೆಯಂತೆ ಪಿಕಳೆ ಮಾಸ್ತರರು ಮುಂಬಯಿಗೆ ಹೋಗಿದ್ದರೆ ಪಕ್ಷದ ರಾಜಕೀಯದ ಮೇಲೆ, ರೈತ ಹೋರಾಟದ ಮೇಲೆ ಎಂಥ ವಿರುದ್ಧ ಪರಿಣಾಮವಾಗುತ್ತಿತ್ತು ಎಂಬ ಪ್ರಶ್ನೆ ಕೇಳಿಕೊಳ್ಳಬೇಕಾದದ್ದು. ಹಾಗೆಯೆ ಅಂಕೋಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಆನಂತರದ ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆದ ಅದ್ಭುತ ಪ್ರಗತಿಯ ಗತಿ ಏನಾಗುತ್ತಿತ್ತು, ಹೇಗಿರುತ್ತಿತ್ತು, ಎಂಬ ಪ್ರಶ್ನೆ ಅದಕ್ಕಿಂತ ಮುಖ್ಯವಾಗಿ ಕೇಳಿಕೊಳ್ಳಬೇಕಾದದ್ದು. ಹಾಗೆಯೆ ಅಂಕೋಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಆನಂತರದ ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆದ ಅದ್ಭುತ ಪ್ರಗತಿಯ ಗತಿ ಏನಾಗುತ್ತಿತ್ತು, ಹೇಗಿರುತ್ತಿತ್ತು, ಎಂಬ ಪ್ರಶ್ನೆ ಅದಕ್ಕಿಂತ ಮುಖ್ಯವಾಗಿ ಕೇಳಿಕೊಳ್ಳಬೇಕಾದದ್ದು. ಈ ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರಗಳನ್ನು ತೆರೆದ ಮನಸ್ಸಿನಿಂದ ಮತ್ತು ಪ್ರಮಾಣಿಕ ಚರಿತ್ರಕಾರನ ನಿಷ್ಠೆಯಿಂದ ಕಂಡುಕೊಳ್ಳಲು ಮುಂದಾದರೆ ಅಂಕೋಲೆಯ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿಕ್ಷಣ ಕ್ಷೇತ್ರದ ಪುರೋಬಿವೃದ್ಧಿಯಲ್ಲಿ ಪಿಕಳೆ ಮಾಸ್ತರರ ಪಾತ್ರ ಮತ್ತು ಕೊಡುಗೆಯ ಮಹತ್ವ ಗೊತ್ತಾಗುತ್ತದೆ.

ಒಂಬತ್ತು ವರ್ಷಗಳ ನಂತರ ಅಂದರೆ ೧೯೬೨ರಲ್ಲಿ ದೇಸಾಯಿಯವರ ಅಧ್ಯಕ್ಷತೆಯ ಕೆನರಾ ವೆಲ್‌ಫೇರ್ ಟ್ರಸ್ಟ್ ಪಿಕಳೆ ಮಾಸ್ತರರನ್ನು ಟ್ರಸ್ಟಿನ ಸೇವೆಯಿಂದ ವಜಾಮಾಡಿತು. ಆ ಬಗ್ಗೆ ವಿಷ್ಣು ನಾಯ್ಕರು ಅವರ ‘ದುಡಿಯುವ ಕೈಗಳ ಹೋರಾಟದ ಕತೆ’ಯಲ್ಲಿ ವಿವರವಾಗಿ ಬರೆದಿದ್ದಾರೆ. ನಾನೂ ಈಗಾಗಲೆ ಆ ಬಗ್ಗೆ ಉಲ್ಲೇಖ ಮಾಡಿದ್ದೇನೆ. ೧೯೪೬ರಲ್ಲಿ ಮತ್ತು ೧೯೫೨ರಲ್ಲಿ ಬಾಸಗೋಡ ರಾಮ ನಾಯಕರ ನೇತಾರತ್ವವನ್ನು ಮುರಿಯಲು, ೧೯೫೩ರಲ್ಲಿ ಪಿಕಳೆ ಮಾಸ್ತರರ ನೇತಾರತ್ವವನ್ನು ಮುರಿಯಲು ಭೂಮಾಲೀಕವರ್ಗದ ಕಾಂಗ್ರೆಸ್ಸಿಗರು ಪ್ರತ್ಯಕ್ಷವಾಗಿಯೊ ಪರೋಕ್ಷವಾಗಿಯೊ ಮುಂದಾದದ್ದು ಸರಳವಾಗಿ, ಸುಲಭವಾಗಿ ಅರ್ಥವಾಗುವಂಥದು. ಆದರೆ ೧೯೬೨ರಲ್ಲಿ ದಿನಕರ ದೇಸಾಯಿಯವರ ಅಧ್ಯಕ್ಷತೆಯ ಕೆನರಾ ವೆಲ್‌ಫೇರ್ ಟ್ರಸ್ಟ್ ಪಿಕಳೆ ಮಾಸ್ತರರನ್ನು ಟ್ರಸ್ಟ್ ಸೇವೆಯಿಂದ ವಜಾ ಮಾಡಿದ್ದು ಅಷ್ಟು ಸರಳವಾಗಿ, ಸುಲಭವಾಗಿ ಅರ್ಥವಾಗುವಂಥದಾಗಿಲ್ಲ. ಸಂದರ್ಭ ಸಂಕೀರ್ಣವಾದದ್ದಾಗಿದೆ.

ಬಿರ್ಲಾ, ಟಾಟಾ, ಸೋಮಾನಿ, ಬಂಗೂರ, ಲೊಲಿ- ಇಂಥ ಉದ್ಯೋಗ ಪತಿಗಳಿಂದ ಟ್ರಸ್ಟಿನ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಲು ಹಣದ ನೆರವು ಪಡೆಯುವುದಕ್ಕೆ ಸಂಬಂಧಿಸಿದಂತೆ ಪಿಕಳೆ ಮಾಸ್ತರರು ವಿರೋಧ ವ್ಯಕ್ತಪಡಿಸಿದ್ದೊ, ಅಡ್ಡಿಯಾಗಿ ನಿಂತದ್ದೊ ಅರ್ಥವಾಗುತ್ತದೆ. ಆ ಕಾಲದಲ್ಲಿ ಪಿಕಳೆಯವರು ಮಾರ್ಕ್ಸ್‌ವಾದೀ ಚಿಂತನೆಗೆ ಒಲಿದು, ಕಾರ್ಮಿಕಪರ ಹೋರಾಟದಲ್ಲಿ ತೊಡಗಿಸಿಕೊಂಡವರಾಗಿದ್ದರೆಂಬ ಕಾರಣವಲ್ಲದೆ ಸಮಾಜವಾದೀ ಚಿಂತನೆಯ ನೆಲೆಯಲ್ಲಿಯೇ ಉಳಿದುಕೊಂಡವರಾಗಿದ್ದರೂ ತತ್ವದ ನೆಲೆಯಲ್ಲಿ ಬಂಡವಾಳಶಾಹಿಗಳ ನೆರವು ಪಡೆಯುವ ಬಗ್ಗೆ ವಿರೋಧವ್ಯಕ್ತಪಡಿಸಿದ್ದರೆ ಆಗಲೂ ಅದು ಅಸಹಜವೆಂದು ಅನಿಸುತ್ತಿರಲಿಲ್ಲ; ಅದು ತತ್ವನಿಷ್ಠೆಯ ನಿಲುವೆಂದೇ ಅನಿಸುತ್ತಿತ್ತು. ಮೇಲೆ ಹೆಸರಿಸಿದ ಉದ್ಯೋಗಪತಿಗಳು, ಪಿಕಳೆಯವರು ತಮ್ಮ ಹಿತಾಸಕ್ತಿಗೆ ತೊಡಕಾಗುವುದರಿಂದ ಅವರನ್ನು ಟ್ರಸ್ಟಿನಿಂದ ನಿವಾರಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ದೇಸಾಯಿಯವರ ಮೇಲೆ ಒತ್ತಡ ತಂದದ್ದರ ಜೊತೆಗೆ, ೧೯೬೨ರ ಚುನಾವಣೆಯಲ್ಲಿ ಪಿ,ಎಸ್.ಪಿ. ಬೆಂಬಲಿತ, ಲೋಕಸಭಾ ಅಭ್ಯರ್ಥಿ ಭಾರತೀಯ ಇಂಗ್ಲಿಷ್ ಲೇಖಕ, ಉತ್ತರ ಕನ್ನಡ ಜಿಲ್ಲೆಯವರೇ ಆದ, ಮನೋಹರ ಮಳಗಾಂವಕರ ಅವರು ರೈತಪರ ಹೋರಾಟದಲ್ಲಿ ಸಕ್ರಿಯವಾಗಿದ್ದವರಲ್ಲ ಎಂಬ ಕಾರಣ ಹೇಳಿ ಪಿಕಳೆ ಮಾಸ್ತರರು ಅವರ ಪರ ಚುನಾವಣಾ ಪ್ರಚಾರ ಮಾಡುವುದಕ್ಕೆ ನಿರಾಕರಿಸಿದರೆಂಬ ಅಂಶವೂ ದೇಸಾಯಿಯವರ ತೀರ್ಮಾನಕ್ಕೆ ಇನ್ನೊಂದು ಕಾರಣವಾಗಿತ್ತು ಎನ್ನಲಾಗಿದೆ. ಇವೇ ಕಾರಣಗಳಾಗಿದ್ದು ನಿಜವಾದದ್ದಾಗಿದ್ದರೆ ಪಿಕಳೆಯವರ ನಿಲುವಿನಲ್ಲಿ ಕಾಣಿಸುವಂಥ ತತ್ವನಿಷ್ಠೆಯು ದೇಸಾಯಿಯವರು ತಳೆದ ನಿಲುವು, ತೆಗೆದುಕೊಂಡ ತೀರ್ಮಾನದಲ್ಲಿ ಕಾಣಿಸುವುದಿಲ್ಲ, ಎಂಬುದು ನನ್ನ ಅನಿಸಿಕೆಯಾಗಿದೆ.

ಕಾಂಗ್ರೆಸ್ಸಿನ ಭೂಮಾಲೀಕ ವರ್ಗದವರು ಬಾಸಗೋಡ ರಾಮ ನಾಯಕರನ್ನು ಹಾಗೂ ಪಿಕಳೆ ಮಾಸ್ತರರನ್ನು ನಿವಾರಿಸಿಕೊಳ್ಳುವುದಕ್ಕಾಗಿ ತಳೆದ ನಿಲುವು, ತೆಗೆದುಕೊಂಡ ತೀಮಾನಗಳಿಗೂ ಕೆನರಾ ವೆಲ್‌ಫೇರ್ ಟ್ರಸ್ಟಿನ ಅಧ್ಯಕ್ಷ ದೇಸಾಯಿಯವರು, ಕಾರ್ಯದರ್ಶಿ ದಯಾನಂದ ನಾಡಕರ್ಣಿ ಅವರು ತಳೆದ ಈ ನಿಲುವು, ತೆಗೆದುಕೊಂಡ ತೀರ್ಮಾನಕ್ಕೂ ಮೂಲಭೂತವಾದ ವ್ಯತ್ಯಾಸವೇನು, ಎಂದು ಕೇಳುವಂತಾಗುತ್ತದೆ.

“ಉದ್ಯಮಪತಿಗಳ ದುಡ್ಡು ಯಾರದು? ಬಡ ಕಾರ್ಮಿಕರೇ ಬೆವರು ಸುರಿಸಿದ್ದರಿಂದ ಗಳಿಸಿದ್ದಲ್ಲವೋ? ಬಡವರ ದುಡ್ಡು ಈ ಬಡಜಿಲ್ಲೆಗೆ ತಂದಿದ್ದೇನೆ. ಅದರಲ್ಲಿ ಹುಳುಕು ಹೆಕ್ಕುವಂಥದೇನಿದೆ?….. ದುಡ್ಡು ತೆಗೆದುಕೊಂಡ ಮಾತ್ರಕ್ಕೆ ಸಿದ್ಧಾಂತಗಳನ್ನು ಮಾರಾಟ ಮಾಡಿದಂತಾಗುತ್ತದೆಯೊ?” (‘ದುಡಿಯುವ ಕೈಗಳ ಹೋರಾಟದ ಕಥೆ’ ಪುಟ ೧೨೫) ಎಂಬ ದೇಸಾಯಿಯವರ ಪ್ರಶ್ನೆಗಳಿಗೆ ಸಿದ್ಧಾಂತ ನಿಷ್ಠೆಯ ದೃಷ್ಟಿಯಿಂದ ಸಮರ್ಥನೆ ಇಲ್ಲ ಎಂಬುದೇನೊ ನಿಜ. ಆದರೆ “ದಿನಕರ ದೇಸಾಯಿ ಬಂಡವಾಳ ಶಾಹಿಗಳಿಂದ ದುಡ್ಡನ್ನು ಯಾರ ಸಲುವಾಗಿ ತಂದ? ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ ಏಕೆ?” ಎಂದು ಅವರು ವಿಷ್ಣು ನಾಯ್ಕರನ್ನು ಕೇಳಿದರೆನ್ನಲಾದ ಪ್ರಶ್ನೆಗಳು ನಮ್ಮನ್ನು ಯೋಚನೆಗೆ ಹಚ್ಚುವಂತೆ ಮಾಡುತ್ತವೆ. ತತ್ವದ ವಿಷಯದಲ್ಲಿ ಮಾಡಿಕೊಳ್ಳುವ ಒಂದು ಮಟ್ಟದ ಹೊಂದಾಣಿಕೆಯ ಹಿಂದಿನ ಇಚ್ಛೆ (Intention), ಆದರಿಂದಾಗುವ ಪರಿಣಾಮ, ಸ್ವಂತ ಸ್ವಾರ್ಥಕ್ಕಲ್ಲದೆ ಪರೋಪಕಾರಿ, ಸಾರ್ವಜನಿಕ ಪ್ರಯೋಜನದ ದೃಷ್ಟಿಯಿಂದ ಆದದ್ದಾದರೆ ಅದು ಕೃತಿಯಲ್ಲಿಯೂ ನಿಚ್ಚಳವಾಗಿ ಕಾಣುವುದಾದರೆ ಅದನ್ನು ತತ್ವಭ್ರಷ್ಟತೆ ಎನ್ನಬೇಕೆ, ಎನ್ನಬಹುದೆ? ಇದು ಸಂಕೀರ್ಣವಾದ ಪ್ರಶ್ನೆ. ೧೯೬೨ರ ನಂತರದ ಕಾಲದಲ್ಲಿ ದಿನಕರ ದೇಸಾಯಿಯವರು ಶಿಕ್ಷಣ ಸಂಸ್ಥೆಗಳನ್ನು ಒಂದಾದ ಮೇಲೊಂದರಂತೆ ಕಟ್ಟಿ ಬೆಳೆಸಿ ಬಡಜಿಲ್ಲೆಯಾದ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದ ಉತ್ತರ ಕನ್ನಡ ಜಿಲ್ಲೆಗೆ ಮಾಡಿದ ಉಪಕಾರ, ಅದರ ಪ್ರಮಾಣ, ಅದರ ಶಾಶ್ವತ ಪ್ರಯೋಜನ ಕುರಿತು ಯೋಚಿಸಿದಾಗ ಇಂಥ ಪ್ರಶ್ನೆಗಳು ಏಳುತ್ತವೆ.

“ಕೇವಲ ರಾಜಕೀಯ ಸ್ವಾತಂತ್ರ್ಯ ಸಾಧನೆಯಿಂದ ನಮ್ಮ ಅಂತಿಮ ಧ್ಯೇಯವು ಸಫಲವಾಗಿಲ್ಲವೆಂಬ ಅರಿವು ನಮ್ಮ ಜಿಲ್ಲೆಯ ಜನತೆಗೆ ಇದೆ. ರಾಜಕೀಯ ಸ್ವಾತಂತ್ರ್ಯದೊಂದಿಗೆ ಪ್ರತಿಯೊಬ್ಬ ನಾಗರಿಕನು ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯಬೇಕೆಂಬುದೇ ನಮ್ಮ ಮುಖ್ಯ ಗುರಿ. ಈ ಗುರಿಯನ್ನು ಮುಟ್ಟಲು ಸಮಾಜವಾದೀ ಸಮಾಜರಚನೆ ಅತ್ಯಾವಶ್ಯಕ” (‘ದುಡಿಯುವ ಕೈಗಳ ಹೋರಾಟದ ಕತೆ’ ಪುಟ-೧೫೩) – ಇದು ದೇಸಾಯಿಯವರ ಮಾತು. ದೇಸಾಯಿ, ಪಿಕಳೆ ಇಬ್ಬರೂ ಈ ಗುರಿ ಸಾಧನೆಯ ದಾರಿಯಲ್ಲಿಯೆ ರೈತ ಹೋರಾಟವನ್ನು ನಡೆಸಿಕೊಂಡು ಬಂದವರು. ಪಿಕಳೆ ಮಾಸ್ತರರ ಚಿಂತನೆ ‘ಸಮಾಜವಾದೀ ಸಮಾಜ ರಚನೆ’ಯ ಬದಲು ‘ಸಮತಾವಾದೀ ಸಮಾಜ ರಚನೆ’ ಆಗಬೇಕೆಂಬ ಕಡೆ ಐವತ್ತರ ದಶಕದ ಉತ್ತರಾರ್ಧದ ಕಾಲಕ್ಕಾಗಲೇ ಒಲಿದಿದ್ದಂತೆ ತೋರುತ್ತದೆ. ಉಳಿದಂತೆ ಇಬ್ಬರೂ ಪ್ರತಿಯೊಬ್ಬ ನಾಗರಿಕನ ‘ಆರ್ಥಿಕ ಸ್ವಾತಂತ್ರ್ಯ’ ಅಥವಾ ಆರ್ಥಿಕ ಸಮಾನತೆಯ ಬಗ್ಗೆಯೆ ಒ‌ತ್ತುಕೊಟ್ಟಂಥ ಚಿಂತನೆಯ ಹಿನ್ನೆಲೆಯಲ್ಲಿಯೆ ಸಮಾಜವಾದವನ್ನು ಗ್ರಹಿಸಿಕೊಂಡು ಬಂದಿದ್ದಂತೆ ತೋರುತ್ತದೆ.

ಸಮಾಜವಾದಿಗಳು ಆರ್ಥಿಕ ಸ್ವಾತಂತ್ರ್ಯಕ್ಕೆ ಸಮಾನವಾದ ಮಹತ್ವವನ್ನು ಸಾಮಾಜಿಕ ಸ್ವಾತಂತ್ರ್ಯಕ್ಕೂ ಕೊಟ್ಟುಕೊಂಡು ಬಂದದ್ದನ್ನು ಕಾಣುತ್ತೇವೆ. ಆದರೆ ದೇಸಾಯಿ, ಪಿಕಳೆ, ನಾಡಕರ್ಣಿಯವರ ನೇತಾರತ್ವದ ಪಿ.ಎಸ್.ಪಿ. ಪಕ್ಷ ರಾಜಕೀಯದ ಹೋರಾಟದಲ್ಲಿ ಸಾಮಾಜಿಕ ಸ್ವಾತಂತ್ರ್ಯ ಅಥವಾ ಸಾಮಾಜಿಕ ಸಮಾನತೆಯ ಹೋರಾಟವನ್ನು ಆರ್ಥಿಕ ಸ್ವಾತಂತ್ರ್ಯ ಅಥವಾ ಆರ್ಥಿಕ ಸಮಾನತೆಯ ಹೋರಾಟದಷ್ಟೇ ಕಾಳಜಿ, ನಿಷ್ಠೆಯಿಂದ ನಡೆಸಿಕೊಂಡು ಬಂದಂತೆ ತೋರುವುದಿಲ್ಲ. ಇದು ಅಂಕೋಲಾ ತಾಲೂಕು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಸಮಾಜವಾದೀ ಆಂದೋಲನದಲ್ಲಿ ಎದ್ದು ಕಾಣುವ ಮಿತಿಗಳಲ್ಲಿ ಒಂದು ಎಂದು ಅನಿಸುತ್ತದೆ.

ನನ್ನ ಗ್ರಹಿಕೆಯಂತೆ ಈ ರೈತ ಹೋರಾಟವು ದೇಸಾಯಿ ಮತ್ತು ಪಿಕಳೆಯವರು ಪರಸ್ಪರ ಬೇರ್ಪಟ್ಟ ಹಂತದಲ್ಲಿಯೆ ತನ್ನ ಜೀವಂತಿಕೆ ಮತ್ತು ಅರ್ಥಪೂರ್ಣತೆಯನ್ನು ಕಳೆದುಕೊಂಡು ಬಿಟ್ಟಿತ್ತು. ಆ ಹೊತ್ತಿಗಾಗಲೇಈ ರೈತ ಹೋರಾಟ, ಅದರ ಬೇಡಿಕೆಗಳು ಕೇವಲ ಅಂಕೋಲಾ ತಾಲೂಕು, ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಸೀಮಿತವಾದ ಹೋರಾಟವಾಗಿರದೆ ಅದು ದೇಶವ್ಯಾಪೀ ಆಂದೋಲನದ ಭಾಗವಾಗಿ ಬಿಟ್ಟಿದ್ದರಿಂದ ಆಳುವ ಕಾಂಗ್ರೆಸ್ಸು ಕೂಡ ಅದನ್ನು ಕಡೆಗಣಿಸಲಾಗದ ಸ್ಥಿತಿಗೆ ತಲುಪುತ್ತಿರುವುದು ಕಾಂಗ್ರೆಸ್ಸಿನ ನಮ-ನಮೂನೆಯ ಸಮಾಜವಾದದ ಘೋಷಣೆಗಳ ಮೂಲಕ ಸ್ಪಷ್ಟವಾಗುತ್ತಲೇ ಇತ್ತು. ಅದು ಆಳುವವರ ಆಡಳಿತದ ನಡಗೆಯ ವೇಗದ ಕಾಲಮಿತಿಯ ರಾಜಕೀಯದ ವಿಷಯವಾಗಿ ಬಿಟ್ಟಿತ್ತು ಎಂಬುದು ಸೂಕ್ಷ್ಮವಾಗಿ ಗಮನಿಸುವವರಿಗೆ ಕಾಣಿಸುವಂತಿತ್ತು. ಅದನ್ನು ದೇಸಾಯಿ, ಪಿಕಳೆ ಇಬ್ಬರೂ ಗಮನಿಸಿದ್ದರೆಂದೇ ನನ್ನ ತಿಳಿವಳಿಕೆ. ಹಾಗೆ ನೋಡಿದರೆ ದೇಸಾಯಿ ಮತ್ತು ಪಿಕಳೆಯವರ ರಾಜಕೀಯ ಚಿಂತನೆಯಲ್ಲಿಯೂ ಆ ಹಂತದಲ್ಲಿ ಪರಸ್ಪರ ದೂರವಾಗಬೇಕಾದದ್ದು ಅನಿವಾರ್ಯ ಎಂಬಂಥ ರೀತಿಯ ತೀರಾ ಭಿನ್ನವಾದ ತಾತ್ವಿಕ ಒತ್ತಡ ಇದ್ದಂತೆಯೂ ತೋರುವುದಿಲ್ಲ. ಆ ವಿಷಯದಲ್ಲಿ ಪಿಕಳೆಯವರು ಸ್ವಲ್ಪ ಹೆಚ್ಚು ‘ಸೆನ್ಸಿಟಿವ್’ ಆಗಿದ್ದಂತೆ ತೋರುತ್ತದೆಯಾದರೂ ದೇಸಾಯಿಯವರಿಗೆ ಅಂಥ ಮನಃಸ್ಥಿತಿ ಇದ್ದಂತೆ ತೋರುವುದಿಲ್ಲ. ಈ ಅಭಿಪ್ರಾಯಗಳು ಹೆಚ್ಚಿನ ವಿವರ, ವಿವರಣೆಯನ್ನು ಬೇಡುತ್ತವೆ ಎಂಬ ಅರಿವು ನನಗಿದೆ.

೧೯೬೨ರಲ್ಲಿ ದೇಸಾಯಿಯವರಿಂದ ದೂರವಾದ ಮೇಲೆ ಪಿಕಳೆಯವರು ರೈತ ಹೋರಾಟದಿಂದ ದೂರವಾಗಿಯೆ ಹೋದರು; ಕಾರ್ಮಿಕಪರ ಹೋರಾಟದಲ್ಲಿಯೂ ನಿಷ್ಠೆ, ನಿರಂತರತೆಯಲ್ಲಿ ತೊಡಗಿಸಿಕೊಳ್ಳಲಿಲ್ಲ. ಪಿಕಳೆಯವರು ಅವರ ಪತ್ನಿ ಪ್ರೇಮಾ ಪಿಕಳೆಯವರೊಂದಿಗೆ ಶಿಕ್ಷಣ ಸಂಸ್ಥೆಗಳನ್ನು, ಆಸ್ಪತ್ರೆ ಇತ್ಯಾದಿಗಳನ್ನು ಅಂಕೋಲೆಯಲ್ಲಿ ಕಟ್ಟಿ ಬೆಳೆಸುವುದರಲ್ಲಿ ತಮ್ಮ ಕಾಲ, ಶಕ್ತಿಯನ್ನು ಮುಖ್ಯವಾಗಿ ಬಳಸಿದರು. ದಿನಕರ ದೇಸಾಯಿಯವರು ಕೂಡ ಮುಖ್ಯವಾಗಿ ಕೆನರಾ ವೆಲ್‌ಫೇರ್ ಟ್ರಸ್ಟಿನ ಆಶ್ರಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದಕ್ಕೆ ಮೊದಲ ಆದ್ಯತೆ ನೀಡಿದರು. ಶಿಕ್ಷಣ ಚಳವಳಿ ದೇಸಾಯಿ, ಪಿಕಳೆಯವರ ಹೋರಾಟದ ಉಪಉತ್ಪನ್ನವೆಂಬಂತೆ, ಅನಿರೀಕ್ಷಿತವಾಗಿ ಹುಟ್ಟಿಕೊಂಡದ್ದು. ಅದು ಅವರಿಬ್ಬರ ಜನಸೇವೆಯ ಬದುಕಿನ ಸಾರ್ಥಕತೆಯ ಶಾಶ್ವತ ಸಂಕೇತ ಶಿಖರವಾಯಿತು. ಆ ಹಂತದಲ್ಲಿ ಪಿ,ಎಸ್.ಪಿ. ಪಕ್ಷದ ಚುನಾವಣಾ ರಾಜಕೀಯಕ್ಕೆ ರೈತ ಸಂಘಟನೆ, ಹೋರಾಟ ಬಳಕೆಯಾಯಿತೇ ಹೊರತು, ರೈತ ಹೋರಾಟಕ್ಕಾಗಲಿ ಪಿ.ಎಸ್.ಪಿ. ಪಕ್ಷ ರಾಜಕೀಯಕ್ಕಾಗಲಿ ಹೊಸ ಶಕ್ತಿ ಸೇರಿಕೊಳ್ಳಲಿಲ್ಲ. ೧೯೬೭ರಲ್ಲಿ ಪಿ,ಎಸ್.ಪಿ.ಯು ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಡೆದ ಜಯಭೇರಿ ಆ ಪಕ್ಷ ಜನಮನ್ನಣೆಯ ಪರಾಕಾಷ್ಠೆ ತಲುಪಿತೆಂಬ ಭಾಸಹುಟ್ಟಿಸಿತು, ಅಷ್ಟೆ. ೧೯೭೧ರ ಮಹಾಚುನಾವಣೆ ಆ ಅನಿಸಿಕೆಯನ್ನು ಭ್ರಮನಿರಸನಗೊಳಿಸಿತೆಂಬುದು ಈಗ ಇತಿಹಾಸ.

ಸೆಪ್ಟೆಂಬರ್ ೨೦೦೪