ಕಾರಂತರ ಕಾರಣವಾದೀ ಕಥಾನಾಯಕರು ಕುವೆಂಪು ಅವರ ಕಥಾನಾಯಕರಂತೆ ಅಧ್ಯಾತ್ಮವಾದಿಗಳಲ್ಲ. ಕಾರಂತರಲ್ಲಿ ಆಧ್ಯಾತ್ಮದ ಬಗ್ಗೆ ಒಂದು ಬಗೆಯ ಸಿನಿಕ ಧೋರಣೆ ಸ್ಥಾಯಿಯಾಗಿಯೇ ಇದೆ. ಅವರು “ನನ್ನ ದೃಷ್ಟಿ ಪಾರಮಾರ್ಥಿಕದ್ದಲ್ಲ. ನಮ್ಮ ಪಾಲಿಗೆ ಇದಿರಾಗುವ ಬದುಕೆಂಬುದು ಪ್ರತಿಯೊಬ್ಬರ ಪಾಲಿಗೂ ಸಿಗುವ ಒಂದೇ ಒಂದು ಗಂಭೀರ ಅವಕಾಶವಾಗಿದೆ. ಈ ಅವಕಾಶದಲ್ಲಿ ತಾನು ಪಡೆಯಬಹುದಾದ ತಿಳಿವನ್ನೆಲ್ಲ ಆತ ದೊರಕಿಸಿಕೊಳ್ಳಬೇಕು. ತನ್ನಲ್ಲಿರುವ ಶಕ್ತಿಗಳನ್ನು ಎಷ್ಟು ಹೆಚ್ಚಿಸಿಕೊಳ್ಳಬಹುದೋ ಅಷ್ಟು ಹೆಚ್ಚಿಸಿಕೊಳ್ಳಬೇಕು. ಆ ಮೂಲಕ ತನ್ನ ಬೆಳವಣಿಗೆಯನ್ನು ಸಾಧಿಸಿಕೊಂಡು, ಸಾಧ್ಯವಾದಷ್ಟು ಸುಖ, ಶಾಂತಿಗಳನ್ನು ಪಡೆಯಬೇಕು ಎಂಬ ದೃಷ್ಟಿ ನನ್ನದು” (ಸ್ಮೃತಿ ಪಟಲದಿಂದ ಸಂಪುಟ, ೨, ೧೯೭೮, ಪುಟ ೬೨) ಎಂದು ಘೋಷಿಸಿಕೊಂಡು ಬಂದಿದ್ದಾರೆ.

ಅಧ್ಯಾತ್ಮ ಪ್ರತಿಪಾದಕ, ಪ್ರಚಾರಕ ಗುರು ವೇಷದ ಆಷಾಢಭೂತಿ ಸಾಧು ಸನ್ಯಾಸಿಗಳು ಕಾರಂತರ ಕಾದಂಬರಿಗಳಲ್ಲಿ ಮೇಲಿಂದ ಮೇಲೆ ಬರುತ್ತಾರೆ. ರಮಾನಂದ ಬುವಾ, ಕೃಷ್ಣಾನಂದ, ಮಂಜುಳಾನಂದ, ಭವಾನಂದ, ವಿಷ್ಣು ಸೋಮಯಾಜಿ, ಆಭೂತಾನಂದ, ಬ್ರಹ್ಮಾನಂದ (ಮುಕುಂದ ಕಮ್ತಿ), ಅರಬಳ್ಳಿ ಸ್ವಾಮಿ, ಅಲಕಾನಂದ, ಶುಚೀಂದ್ರ ತೀರ್ಥಸ್ವಾಮಿ, ಧವಳಕೀರ್ತಿ ಭಟ್ಟಾರಕ ಸ್ವಾಮಿ, ಅಲಕ್ಷಾನಂದ ಸ್ವಾಮಿ ಹೀಗೆ ಬೇರೆ ಬೇರೆ ಹೆಸರಿನ ಸನ್ಯಾಸಿಗಳು ಬೇರೆ ಬೇರೆ ಕಾದಂಬರಿಗಳಲ್ಲಿ ಇದ್ದಾರೆ. ಅವರು ಕಾರಂತರ ‘ಬಾಳ್ವೆಯೇ ಬೆಳಕು’ ಪ್ರತಿಪಾದಿಸುವ ಜೀವನದೃಷ್ಟಿಗೆ ವಿರುದ್ಧವಾದ ರೀತಿಯಲ್ಲಿ ಅಂದರೆ ಕಾರಂತರು ಒಪ್ಪದ ರೀತಿಯಲ್ಲಿ ಅಥವಾ ಕಾರಂತರ ಕಥಾನಾಯಕರು ಒಪ್ಪದ ರೀತಿಯಲ್ಲಿ ಬಾಳುವವರು. ಭಂಡ ಬದುಕಿಗೆ, ಡೋಂಗಿ ಸನ್ಯಾಸಕ್ಕೆ ನಿದರ್ಶನಗಳಾಗಿ ಅವರೆಲ್ಲ ಬರುತ್ತಾರೆ. ಸನ್ಯಾಸದ ಬಗ್ಗೆ, ಅವರು ಬೋಧಿಸುವ ಅಧ್ಯಾತ್ಮದ ಬಗ್ಗೆ ತೀಕ್ಷ್ಣವಾದ ವಿಮರ್ಶೆ, ಟೀಕೆಯ ದನಿ ಕಾದಂಬರಿಯಲ್ಲಿ ಉದ್ದಕ್ಕೂ ಇರುತ್ತದೆ.

ಕಾರಂತರು ‘ಸನ್ಯಾಸಿಯ ಬದುಕು’ (೧೯೪೮) ಕಾದಂಬರಿಯ ಮುನ್ನುಡಿಯಲ್ಲಿ “ಜನತೆಯಲ್ಲಿ ದೇವರನ್ನು ಕುರಿತಾದ ನಂಬುಗೆ ಬಹುಕಾಲದಿಂದ ಬಂದದ್ದು. ಅವನದೇ ಸೃಷ್ಟಿ ಅವನನ್ನು ತಿಳಿಯುವುದಕ್ಕೆ ಅಡ್ಡ ಬರುತ್ತದೆ, ಎಂಬ ಸಿದ್ಧಾಂತ ಆನಂತರ ಮೂಡಿತು. ಅಲ್ಲಿಂದ ಪ್ರಪಂಚದ ಮೇಲಿನ ವೈರಾಗ್ಯವೇ ದೇವರನ್ನು ಕಾಣುವ ಏಕಮಾತ್ರ ಹಾದಿಯೆಂದು ಹಲವರು ತಿಳಿದರು. ಅಂಥ ಜನರಲ್ಲಿ ಹಲವರು ಪ್ರಾಪಂಚಿಕವಾದ ಯಾವುದಾದರೊಂದು ನಿರಾಶೆಗೆ ಗುರಿಯಾಗಿ, ಜಗತ್ತಿಗೆ ತಮ್ಮ ಕರ್ತವ್ಯವೇನಿಲ್ಲವೆಂದು ತಿಳಿದು, ದೇವರನ್ನು ಅರಸಿ ಹೋಗುವುದು ಉಂಟು. ಅಂಥವರು ತಮ್ಮ ಮನಸ್ಸಿಗೆ ಒಪ್ಪುವ ದೇವರನ್ನು ಕಂಡಾರು. ಅವರ ಅನ್ವೇಷಣೆ ಪ್ರಾಮಾಣಿಕವಾಗಿದ್ದರೂ ಅಂಥವರು ತಿರುಗಿ ಯಾವುದೇ ಸೋಗಿನಲ್ಲಿ ಪ್ರಪಂಚವನ್ನು ಸೇರಿದರೂ, ಲೌಕಿಕರಿಗಿಂತ ಹಚ್ಚಿನ ಭೋಗಿಗಳಾಗಿ ಬಿಡುತ್ತಾರೆ. ಬಿಟ್ಟುಹೋದ ಸಂಸಾರಕ್ಕೇ, ಬೇರೆ ಹೆಸರಿಸಿ ಪ್ರಾಪಂಚಿಕ ವಾಸನೆಗಳನ್ನು ಅನುಭವಿಸುತ್ತಾರೆ. ಇಂತಹ ಆತ್ಮವಂಚನೆ ನಮ್ಮ ದೇಶದಲ್ಲಿ ಬಹುಕಾಲದಿಂದಲೂ ನಡೆದು ಬಂದಿದೆ,” ಎಂದು ಬರೆಯುತ್ತಾರೆ.

ಕಾರಂತರು ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ, ಅವರ ಸಂಪಾದಕತ್ವದಲ್ಲಿ ಪ್ರಕಟಿಸುತ್ತಿದ್ದ ‘ವಸಂತ’ ಪತ್ರಿಕೆಯ ಕಾಲದಿಂದ ಅಮೇಲಿನ ‘ದೇವದೂತರು’ ಕಾದಂಬರಿ ಬರೆದ ಕಾಲದಿಂದ ಈ ಸನ್ಯಾಸ, ಅಧ್ಯಾತ್ಮದ ವಸ್ತುಕುರಿತು ಸುಮಾರು ಐವತ್ತೈದೊ ಅರವತ್ತೊ ವರ್ಷಗಳ ಕಾಲ ಆಗಾಗ ಬೇರೆ ಬೇರೆ ಕಾದಂಬರಿಗಳಲ್ಲಿ ಬರೆಯುತ್ತಲೇ ಬಂದಿದ್ದಾರೆ. ಕಾರಂತರ ಅಭಿಪ್ರಾಯದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಆದಂತೆ ಕಾಣಿಸುವುದಿಲ್ಲ. ಈ ವಿಷಯದಲ್ಲಿ ಅವರ ಅಭಿಪ್ರಾಯ, ಅನುಭವ, ಅರಿವು, ತೀರ್ಮಾನ ಸ್ಥಿರವಾಗಿಯೆ ಇರುವುದು ಕಾಣಿಸುತ್ತದೆ. ಅದನ್ನು ಹೊಸ ತಿಳಿವಳಿಕೆ ಹೊಸ ಆಯಾಮಗಳಲ್ಲಿ ಮರುಪರಿಶೀಲಿಸಬೇಕೆಂಬ ಮತ್ತು ಅಥವಾ ಗಂಭೀರವಾದ ವ್ಯಕ್ತಿ, ಸಂದರ್ಭಗಳ ನೆಲೆಯಲ್ಲಿ ಶೋಧಿಸಬೇಕೆಂಬ ಸೃಜನಶೀಲ ಸವಾಲು, ಅಗತ್ಯ ಅವರಿಗೆ ಕಾಣಿಸಲೇ ಇಲ್ಲ. ಏಕೆ?

ಕಾರಂತರು ಚಿತ್ರಿಸಿರುವ ಸನ್ಯಾಸಿಗಳೆಲ್ಲ ಪಡಪೋಶಿ ಜನ, ನಿಷ್ಠೆ, ಅರಿವಿನ ದೃಷ್ಟಿಯಿಂದ ತೀರಾ ಸಾಮಾನ್ಯರು. ಆ ಸನ್ಯಾಸಿಗಳು ಯಾರೂ ಆಧುನಿಕ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳ ಪರಿಚಯವೊ, ಪರಿಶ್ರಮವೊ ವಿದ್ವತ್ತೊ ಇದ್ದವರಲ್ಲ. ಆ ಸಾಧು ಸನ್ಯಾಸಿಗಳು ಪರಂಪರಾಗತವಾಗಿ ಬಂದ ಮತ ಧಾರ್ಮಿಕ ಮತ್ತು ಆಧ್ಯಾತ್ಮಿಕ ತತ್ವ ಮೀಮಾಂಸೆ, ಚಿಂತನ ಪರಂಪರೆಗಳ ಬಗ್ಗೆ ಕೂಡ ಗಂಭೀರ ಅಧ್ಯಯನ ಬಲ, ವಿದ್ವತ್ತು, ವ್ಯಾಖ್ಯಾನ ಸಾಮರ್ಥ್ಯ, ಅನುಷ್ಠಾನ ಸಂಕಲ್ಪ ಇವು ಪ್ರಬುದ್ಧ ಪರಿಣತ ಮಟ್ಟದಲ್ಲಿ ಇಲ್ಲದೇ ಇರುವವರು, ಅವುಗಳಿಗೆ ಸಂಬಂಧಿಸಿದಂತೆ ಅವರು ಜೀವನ ವಿವೇಕದಿಂದ ಕೂಡಿದ ಗಟ್ಟಿಯಾದ ಸಾಮಾನ್ಯ ಜ್ಞಾನ ಕೂಡ ಇದ್ದವರಲ್ಲ. ಅವರ ತಿಳಿವಳಿಕೆ, ಶ್ರದ್ಧಾನಿಷ್ಠೆಗಳ ಟೊಳ್ಳುತನವನ್ನು ನಿದರ್ಶನವಾಗಿಯೊ ಆಧಾರವಾಗಿಯೊ ಮಾಡಿಕೊಂಡು ಆತ್ಮವಂಚನೆ, ಜನವಂಚನೆಯಲ್ಲಿ ಬಾಳುವ ಹೊಣೆಗೇಡಿಗಳಾದ ಇಂಥ ಸಾಧು ಸನ್ಯಾಸಿಗಳ ಬಗ್ಗೆ ಹುಷಾರಾಗಿರಿ ಎಂದು ಓದುಗರಿಗೆ ತಿಳಿವಳಿಕೆ ನೀಡುವ ಮಟ್ಟಿನ ಆಸಕ್ತಿ ಮಾತ್ರವೇ ಕಾರಂತರದು ಎಂಬಂತೆಯೊ ಇಲ್ಲ. ಅದೊಂದು ಜೀನವದರ್ಶನವೆಂಬಂತೆ ಪ್ರತಿಪಾದಿಸುವ ಮನೋಧರ್ಮ, ಚಿಂತನಹಠ ಕಾದಂಬರಿಕಾರ ಕಾರಂತರಲ್ಲಿ ಕಾಣಿಸುತ್ತದೆ.

‘ಮೈಮನಗಳ ಸುಳಿಯಲ್ಲಿ’ (೧೯೭೦) ಕಾದಂಬರಿಯಲ್ಲಿ ವೇಶ್ಯೆ ಮಂಜುಳೆಯಲ್ಲಿಗೆ ಮಾರುವೇಷದಲ್ಲಿ ವಿಟನಾಗಿ ಕದ್ದುಬರುವ ಮಠದ ಸನ್ಯಾಸಿ ಲಕ್ಷ್ಮಣತೀರ್ಥಸ್ವಾಮಿ ಎಂಬವನಿದ್ದಾನೆ. ಕಾದಂಬರಿಯಲ್ಲಿ ಈ ಕಳ್ಳ ವ್ಯವಹಾರವನ್ನು ಪ್ರಶ್ನಿಸುವ, ಟೀಕಿಸುವ ದನಿ ಇಲ್ಲ. ಸಹಾನುಭೂತಿಪರ ದನಿಯೇ ಇದೆ. ಅದು ಮಂಜುಳೆಯ ದಿನಚರಿ ಬರವಣಿಗೆಯ ತಂತ್ರದಲ್ಲಿ ನಿರೂಪಿತವಾಗಿರುವುದರಿಂದ ಆ ಸಹಾನುಭೂತಿಯ ದನಿ ಮಂಜುಳೆಯದು, ಕಾದಂಬರಿಕಾರ ಕಾರಂತರದಲ್ಲ ಎಂಬಂತಿಲ್ಲ. ಕಾರಂತರ ಕಾದಂಬರಿ ಪ್ರಪಂಚದ ‘ಸನ್ಯಾಸಿ ಶೀಲ ಮೀಮಾಂಸೆ’ಯ ದೃಷ್ಟಿಯಿಂದ ನೋಡಿದರೆ ಇದು ವಿಚಿತ್ರ ಮೆಚ್ಚಿಕೆಯ ದನಿ ಎಂದೇ ಹೇಳಬೇಕು. ‘ಸಮೀಕ್ಷೆ’ (೧೯೫೬) ಕಾದಂಬರಿಯಲ್ಲಿ ಪ್ರಯಾಣ ಸಂದರ್ಭದಲ್ಲಿ ಪರಿಚಿತನಾಗುವ ಸಿಂಹಳದ ಸನ್ಯಾಸಿ ಒಬ್ಬ ಬರುತ್ತಾನೆ. (೧೯೮೨ರ ಮುದ್ರಣ ಪುಟ ೧೫೩) ಮಿಂಚಿನಂತೆ ಹಾಗೆ ಬಂದು ಹೀಗೆ ಹೋಗುವಂಥ ಪಾತ್ರ ಅದು. ಸಾಚಾ ಸಾಧುತನದ ಲಕ್ಷಣ ತೋರುವ ‘ಪ್ರಾಮಾಣಿಕ ಜೀವಿ’, ಆತ್ಮ ವಿಮರ್ಶೆಯುಳ್ಳ ವ್ಯಕ್ತಿ ಆತ. ‘ಸನ್ಯಾಸಿಯ ಬದುಕು’ (೧೯೪೮) ಕಾದಂಬರಿಯಲ್ಲಿ ಬರುವ ತಪಸ್ವೀ ಮಹಾರಾಜ್ ಎಂಬ ಹೆಸರಿನ, ಹಿಮಾಲಯದ ತಪ್ಪಲಿನ ಒಬ್ಬ ಸನ್ಯಾಸಿ ಉಪನಿಷತ್ತಿನ ಋಷಿ ರೀತಿಯ ಹೊಳಹನ್ನು ಕಾಣಿಸುವಂಥವನು. ದೇವರನ್ನು ಸೃಷ್ಟಿಯ ಎಲ್ಲದರಲ್ಲಿ, ಎಲ್ಲರಲ್ಲಿ ಕಂಡು ಅರಿತು, ಲೋಕೋಪೊಕಾರಿಯಾಗಿ ಬಾಳುವ ಸಾಧು ಆತ. ಆ ಕಾದಂಬರಿಯಲ್ಲಿ ಕಾರಂತರು ಆತನನ್ನು ಪ್ರಧಾನ ಪಾತ್ರವನ್ನಾಗಿಯೇನೂ ಮಾಡಿಕೊಂಡಿಲ್ಲ. ತಪಸ್ವೀ ಮಹಾರಾಜ್‌ರಂಥ ಸಾಧು ಸನ್ಯಾಸಿಯನ್ನು ಚಿತ್ರಿಸಿರುವ ಕಾರಂತರಿಗೆ ಸನ್ಯಾಸದ ಬಗ್ಗೆಯೆ, ಅಧ್ಯಾತ್ಮದ ಬಗ್ಗೆಯೇ ಅಸಹನೆ, ಅಪನಂಬಿಕೆ ಎಂದು ಖಚಿತವಾದ ದನಿಯಲ್ಲಿ ಹೇಳುವುದು ಹೇಗೆ?

ರಾಮಕೃಷ್ಣ ಪರಮಹಂಸ, ವಸ್ವಾನಿ ಸ್ವಾಮಿ ಅವರಂಥ ಸಾಧು ಸನ್ಯಾಸಿ ಸಂತರನ್ನು ಸಾತ್ವಿಕ ಶ್ರೇಷ್ಠರೆಂದು ಕಾರಂತರು ಬಹುವಾಗಿ ಮೆಚ್ಚಿಕೊಂಡರು :

“ಮತ್ತೊಬ್ಬರು ಮಹಾಸಾಧುಗಳು, ಶುದ್ಧಭಾರತೀಯರು, ತಾನು ಮತ್ತು ಮಾತಾಜಿ ಬಲು ಹಿಂದಣ ಜನ್ಮದಲ್ಲಿ ಆಂಟನಿ ಮತ್ತು ಕ್ಲಿಯೋಪಾತ್ರ ಆಗಿದ್ದೆವೆಂಬ ಮಾತನ್ನು ಹೇಳಿದರಂತೆ. ಇಂಥವರ ಎಡೆಯಲ್ಲಿ ತಮ್ಮ ಭಾವಜೀವನದಲ್ಲಿ ಯಾವ ಅಪ್ರಾಮಾಣಿಕತೆಯೂ ಇಲ್ಲದ ರಾಮಕೃಷ್ಣಪರಮಹಂಸರಂತೆ ರಾಮನನ್ನೋ ಕೃಷ್ಣನನ್ನೋ ಪ್ರತ್ಯಕ್ಷ ದೇವರಾಗಿ ನಂಬಿ, ಆ ನಂಬಿಕೆಯ ಮೇಲಿಂದ ಅನುಭಾವೀ ಸಾಹಿತ್ಯವನ್ನು ಬರೆದವರಿದ್ದಾರೆ. ಸಾಧು ವಸ್ವಾನಿ ಅಂಥ ಒಬ್ಬ ವ್ಯಕ್ತಿ, ಅವರೊಡನೆ ಎರಡೋ ಮೂರೋ ದಿನಗಳನ್ನು ಕಳೆದ ನನಗೆ ನಿಜವಾದ ಆಧ್ಯಾತ್ಮಿಕ ಶ್ರದ್ಧೆಯುಳ್ಳ ಒಬ್ಬ ವ್ಯಕ್ತಿ ತನ್ನ ಬದುಕನ್ನು ಹೇಗೆ ನಡೆಯಿಸಿಯಾನು ಎಂಬ ಕಲ್ಪನೆಯನ್ನು ಸಾಕಷ್ಟು ಮಾಡಿಕೊಟ್ಟಿದೆ.” (ಸ್ಮೃತಿಪಟಲದಿಂದ, ಸಂಪುಟ ೨, ೧೯೭೮, ಪುಟ ೧೧೭-೧೮) ಎಂದು ಕಾರಂತರೇ ಬರೆದಿದ್ದಾರೆ. ೧೯೭೮ರಲ್ಲಿ ಡಾ. ಯು.ಆರ್. ಅನಂತಮೂರ್ತಿಯವರಿಗೆ ನೀಡಿದ ಸಂದರ್ಶನದಲ್ಲಿಯೂ, “ಈಗ ನಾನು ಪ್ರಾಮಾಣಿಕವಾಗಿ ಹೇಳಬಹುದಾದ್ರೆ ಒಬ್ಬನೇ ಒಬ್ಬ ವ್ಯಕ್ತಿಯನ್ನು ನಾನು ಕಂಡಿದ್ದೇನೆ ಸಾಧು ವಸ್ವಾನಿ. ಆತ Mystic. ಅಲ್ಲಿ, ಆತನ ಬದುಕಿನಲ್ಲಿ ಪ್ರೇಮ ಮೂರ್ತಿಮತ್ತಾಗಿ ಇದೆ, ಅಂತ ನಾನು ಗುರ್ತಿಸಿ ಸಂತೋಷಪಟ್ಟೆ, ಅಂಥ ವ್ಯಕ್ತಿ ಆತ.” (ಕಾರಂತ ಮಂಥನ-ಸಂ: ಟಿ.ಪಿ. ಅಶೋಕ, ಪು. ೪೯೦, ೧೯೯೪) ಎಂದು ಕಾರಂತರು ಹೇಳಿದ್ದಾರೆ.

ಹಾಗಿರುವಾಗ ಪ್ರಾಮಾಣಿಕವಾಗಿ ಅಧ್ಯಾತ್ಮ ಮಾರ್ಗವನ್ನು, ಸನ್ಯಾಸ ಜೀವನವನ್ನು ಜೀವನದ ಆದರ್ಶವಾಗಿ ಆಯ್ಕೆ ಮಾಡಿಕೊಂಡು ತನ್ನ ಬಾಳು ಕಟ್ಟಿಕೊಳ್ಳಲು ಹೊರಟ ಒಬ್ಬನಾದರೂ ಅಧ್ಯಾತ್ಮವಾದಿಯನ್ನು ಕುರಿತಂತೆ, ಕಾರಂತರಿಗೆ ಒಂದು ಕಾದಂಬರಿಯನ್ನು ಬರೆಯಬೇಕೆನಿಸಲಿಲ್ಲ, ಏಕೆ? ಆಷಾಡಭೂತಿ ಸನ್ಯಾಸಿಗಳ ಬಗ್ಗೆ ಮೇಲಿಂದ ಮೇಲೆ ಬೇರೆ ಬೇರೆ ಕಾದಂಬರಿಗಳಲ್ಲಿ ಬರೆಯುತ್ತಲೇ ಇದ್ದರೂ ಮತ್ತೆ ಅಂಥದೇ ಡೋಂಗಿ ಸನ್ಯಾಸಿಗೆ ಮೀಸಲಾದ ‘ಜಗದೋದ್ಧಾರ….ನಾ’ ದಂಥ ಕಾದಂಬರಿಯನ್ನು ಬರೆಯಬೇಕೆಂಬ ಪ್ರೇರಣೆ ಉಂಟಾದಂತೆ, ಅಧ್ಯಾತ್ಮವಾದೀ ಅಥವಾ ಅಧ್ಯಾತ್ಮಾರಾಧಕ ಪ್ರಾಮಾಣಿಕ ಒಬ್ಬ ವ್ಯಕ್ತಿಯ ಬದುಕನ್ನಾದರೂ ವಿವರದಲ್ಲಿ ಚಿತ್ರಿಸುವುದರ ಮೂಲಕ ಕಾರಂತರು ಅಧ್ಯಾತ್ಮದ ಅರಿವಿನ ಸೀಮೆಯನ್ನು ಗಂಭೀರವಾಗಿ ಶೋಧಿಸಿ ಅರಿಯುವ ಅಥವಾ ಶೋಧಿಸಿ ನೋಡುವ ಆಸಕ್ತಿಯನ್ನು ಏಕೆ ತೋರಿಸಲಿಲ್ಲ?

ಭಾರತೀಯ ಸಂಸ್ಕೃತಿ ಪರಂಪರೆ, ನಮ್ಮ ಕನ್ನಡ ಪರಂಪರೆ ಕೂಡ ಅಧ್ಯಾತ್ಮವನ್ನು ಪರಮ ಮೌಲ್ಯವೆಂದು ಭಾವಿಸುತ್ತಾ ಬಂದಿರುವಂಥದು. ಅದು, ಬದುಕಿನ ಸಾರ್ಥಕತೆ ಆಧ್ಯಾತ್ಮದ ಸಾಧನೆ, ಸಿದ್ಧಿಯಲ್ಲಿದೆ, ಎಂದು ನಂಬಿಕೊಂಡು ಬಂಧಿರುವಂಥದು, ಆ ಹಿನ್ನೆಲೆಯಿಂದಾಗಿ ಆದರ್ಶವಾದಿಗಳು ಬದುಕಿನಲ್ಲಿ ಯಾವ ಯಾವುದೊ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬಹುದಾದಂತೆ ಅಧ್ಯಾತ್ಮ ಮಾರ್ಗವನ್ನು ಆಯ್ಕೆ ಮಾಡಿಕೊಂಡು ತಮ್ಮ ಬಾಳನ್ನು ರೂಪಿಸಿಕೊಳ್ಳಲು ಸಂಕಲ್ಪ ಮಾಡಿ ಹೊರಡಬಹುದಾದದ್ದು ಅಸಂಭವವಲ್ಲ. ಅಧ್ಯಾತ್ಮ ಮಾರ್ಗ ಆಯ್ಕೆ ಮಾಡಿಕೊಳ್ಳುವವರೆಲ್ಲ ಡೋಂಗಿಗಳೇ, ಆಷಾಢಭೂತಿಗಳೇ, ಹೊಣೆಗೇಡಿಗಳೇ ಎಂದು ಸಿದ್ಧಾಂತ ಮಾಡುವುದು ಸರಿಯಾಗಲಾರದು. ಕಾರಂತರೂ ಹಾಗೆ ತಿಳಿದಿದ್ದಾರೆಂದು ಖಚಿತವಾಗಿ ಹೇಳುವಂತಿಲ್ಲ.

ಕಾರಂತ, ಕುವೆಂಪು ಅವರಂಥವರು ಕೂಡ ಅವರ ಜೀವನದ ಒಂದು ಕಾಲಘಟ್ಟದಲ್ಲಿ ತಮ್ಮ ಬದುಕಿನ ಆದರ್ಶವಾಗಿ ಬ್ರಹ್ಮಚರ್ಯದ ಆಯ್ಕೆಯ ಆದರ್ಶದ ಕಡೆಗೆ, ಅದರ ಮೂಲಕ ಅಧ್ಯಾತ್ಮದ ಕಡೆಗೆ ಒಲಿದಿದ್ದವರೆ ಅಲ್ಲವೆ? ಕಾರಂತರ ಅಧ್ಯಾತ್ಮದ ಆಕರ್ಷಣೆಯೊ, ಆದರ್ಶವೊ ಬ್ರಹ್ಮಚರ್ಯ ವ್ರತಕ್ಕೆ ಒಲಿದದ್ದು ಮಾತ್ರವಲ್ಲ, ಬ್ರಹ್ಮಚರ್ಯವ್ರತದ ಪಾಲನೆಗೆ ಸಂಬಂಧಿಸಿದಂತೆ ಅವರು ಇತರರಿಗೂ ಉಪದೇಶ, ಬೋಧನೆ ಮಾಡಲು ಉತ್ತರ ಕನ್ನಡ, ಉತ್ತರ ಕರ್ನಾಟಕ, ಅನಂತಪುರ, ಸೇಲಮುಗಳಿಗೂ ಹೋಗಿ ಉಪನ್ಯಾಸ ಮಾಡುತ್ತ ತಿರುಗಿದವರು; ಪ್ರಚಾರೋತ್ಸಾಹ ತೋರಿಸಿದವರು. ಇಪ್ಪತ್ತರ ದಶಕದಲ್ಲಿಯೆ ಅಂಥ ಬರಹಗಳ ಮೂಲಕ ಆ ಪ್ರಚಾರೋತ್ಸಾಹ ತೋರಿಸಿದವರು. ಇಪ್ಪತ್ತರ ದಶಕದಲ್ಲಿಯೆ ಅಂಥ ಬರಹಗಳ ಮೂಲಕ ಆ ಪ್ರಚಾರೋತ್ಸಾಹ ತೋರಿದ್ದರು. (‘ಹುಚ್ಚು ಮನಸ್ಸಿನ ಹತ್ತು ಮುಖಗಳು’ (೧೯೫೦) ೧೯೬೫ರ ಮುದ್ರಣ ಪುಟ ೮೯) ಅಂಥ ಬರಹವೊಂದಕ್ಕೆ ಗಾಂಧೀಜಿಯ ಮುನ್ನಡಿ ಸಹ ಕೇಳಿದ್ದರು.

ಕಾರಂತರ ಸಮಕಾಲೀನರು ಮಾತ್ರವಲ್ಲ ಸಮಾನ ಪ್ರತಿಭೆಯ, ಸಂಸ್ಕೃತಿ ಚಿಂತಕ ಕುವೆಂಪು ಅಧ್ಯಾತ್ಮವನ್ನು ಶ್ರೇಷ್ಠ ಅಥವಾ ಪರಮ ಮೌಲ್ಯವೆಂದೇ ಒಪ್ಪಿ ಕೊನೆಯವರೆಗೂ ಸಾಗಿದವರು. ಋಷಿ ಸಂಸ್ಕೃತಿಯನ್ನು ತಮ್ಮ ಬದುಕು ಬರಹಗಳ ಮೂಲಕ ಪುನಾರಚಿಸಿಕೊಳ್ಳಲು, ಆ ಅರಿವನ್ನು ಉಪನಿಷತ್ತಿನ ಋಷಿಯಂತೆ ‘ದರ್ಶನ’ವೆಂದೊ, ‘ಮಂತ್ರ’ವಂದೊ, ವಿಶ್ವಮಾನವ ಸಂದೇಶವೆಂದೊ ಕೊಟ್ಟು ಹೋಗುವಂಥ ಮಹತ್ವಾಕಾಂಕ್ಷೆಯನ್ನು ಕೂಡ ಪ್ರಕಟಪಡಿಸಿದವರು. ಕುವೆಂಪು ರೀತಿಯ ಅಧ್ಯಾತ್ಮದ ಒಲವು, ಎಳೆತ, ಪರಿಕಲ್ಪನೆಗಳನ್ನು ನಾನೊ, ಕಾರಂತರೊ ಒಪ್ಪದೆ ಇರಬಹುದು. (ನೋಡಿ : ಕಾರಂತರ ‘ವಿಶ್ವಮಾನವ’ ಎಂಬ ಕವನ, ೧೯೯೦ ರಲ್ಲಿ ಪ್ರಕಟವಾದ ಸೀಳ್ಗವನಗಳು ಕವನ ಸಂಕಲನದಲ್ಲಿ) ಕುವೆಂಪು ಮತಧಾರ್ಮಿಕ ನೆಲೆಯಿಂದ ಅಧ್ಯಾತ್ಮವನ್ನು ಜಾತಿ ಮತಧರ್ಮ ನಿರಪೇಕ್ಷ ನೆಲೆಗೆ ಬಿಡುಗಡೆ ಮಾಡಿಕೊಂಡರು. ಹಾಗೆ ಮಾಡುವಾಗ ಅವರು ಆಸ್ತಿಕ ನೆಲೆಯನ್ನು ಬಿಟ್ಟವರಾಗಿರಲಿಲ್ಲ. ಕುವೆಂಪು ಅವರ ಈ ಆಸ್ತಿಕ ನಿಷ್ಠೆ ಕಾರಂತರಂಥ ಮತ್ತು ನನ್ನಂಥ ಕಾರಣವಾದಿಗಳಿಗೆ ಒಪ್ಪಿಗೆಯಾಗದೆ ಇರಬಹುದು. ಅದೇನೆ ಇದ್ದರೂ ಕುವೆಂಪು ಮತ್ತು ಅವರ ಕಥಾನಾಯಕರು-ಕುವೆಂಪು ಕಾದಂಬರಿ ಬರವಣಿಗೆಯ ಸಂದರ್ಭದಲ್ಲಿಯೇ ಹೇಳುವುದಾದರೆ ‘ಕಾನೂರು ಹೆಗ್ಗಡಿತಿ’ಯ ಹೂವಯ್ಯನಂಥವರು ಪ್ರಾಮಾಣಿಕ ಅಧ್ಯಾತ್ಮಾರಾಧಕರು. ಅವರ ಪ್ರಾಮಾಣಿಕತೆಯನ್ನು ಅನುಮಾನಿಸುವುದಕ್ಕೆ ಕಾರಣಗಳಿಲ್ಲ. ಅಲ್ಲವೆ?

ಪ್ರಾಮಾಣಿಕವಾಗಿಯೆ ಬದುಕಿನ ಆದರ್ಶವೆಂದು ಸನ್ಯಾಸವನ್ನು ಆಯ್ಕೆ ಮಾಡಿಕೊಂಡು ಆ ಮಾರ್ಗದಲ್ಲಿ ಶ್ರದ್ಧಾನಿಷ್ಠೆ ಸಂಕಲ್ಪ ಬಲದಿಂದ ಸಾಗುತ್ತಿರುವವರಾದರೂ ಅವರ ಸಂಸ್ಕಾರ ಸಿದ್ಧತೆಗಿಂತ, ಎದುರಾಗುವ ಆಮಿಷದ ಎಳೆತ ಹೆಚ್ಚು ಬಲವಾಗಿದ್ದಾಗ ಮನಸ್ಸಿನ ತೋಲನ, ಹಿಡಿತ ತಪ್ಪಿ ಬಾಗಬಹುದಾದ, ಸೋಲಬಹುದಾದ ಜೀವನ ಸಂದರ್ಭ ಎದುರಾಗಬಹುದಾದದ್ದು ಅಸಂಭವವಲ್ಲ. ಪುರಾಣದ ವಿಶ್ವಮಿತ್ರಾದಿ ಋಷಿ ಮುನಿಗಳು, ಮಾತ್ರವಲ್ಲ ಲಿಯೊ ಟಾಲ್‌ಸ್ಟಾಯ್‌ನ ‘ಫಾದರ್ ಸೆರ್ಗಿಯಸ್’, ಯು.ಆರ್. ಅನಂತಮೂರ್ತಿಯವರ ‘ಸಂಸ್ಕಾರ’ದಂಥ ಪ್ರಖ್ಯಾತ ಸಾಹಿತ್ಯ ಕೃತಿಗಳ ಕಥಾ ನಾಯಕರು ಕೂಡ ಅಂಥ ಉದಾಹರಣೆಗಳಲ್ಲಿ ಸೇರುತ್ತಾರೆ. ಸನ್ಯಾಸದ ಅಳವನ್ನು ಮತ್ತು ಆಳವನ್ನು ಬೇರೆ ದೃಷ್ಟಿಯಿಂದ ಪರಿಶೋಧಿಸುವ ಮಾಸ್ತಿಯವರ ‘ಒಂದು ಹಳೆಯ ಕಥೆ’, ಗೌತಮಿ ಹೇಳಿದ ಕಥೆ’ ಇಂಥ ಸಣ್ಣ ಕಥೆಗಳನ್ನೂ ಬೇಕಾದರೆ ನೋಡಬಹುದು. ಕಾಮ ಪ್ರೇಮಕ್ಕೆ ಸಂಬಂಧಿಸಿದ ಆಮಿಷ, ಎಳೆತಗಳು ಮಾತ್ರವಲ್ಲ ಬೇರೆ ಬೇರೆ ಬಗೆಯ ಆಮಿಷ, ಎಳೆತಗಳು ಕೂಡ ಸಾಧಕನ, ಸಂಭಾವಿತ ಮನುಷ್ಯನ ದಿಕ್ಕು ತಪ್ಪಿಸಬಹುದಾದದ್ದು ಇದ್ದೇ ಇದೆಯಲ್ಲವೆ?

ಸನ್ಯಾಸದ ಬಗ್ಗೆ, ಸಾಂಪ್ರದಾಯಿಕ ಅಧ್ಯಾತ್ಮ ಪರಿಕಲ್ಪನೆಯ ಬಗ್ಗೆ ನಮ್ಮ ಅನುಭವ, ಅನುಮಾನ, ಅಭಿಪ್ರಾಯ, ನಿಲುವು ಏನೇ ಇರಲಿ ಡೋಂಗಿ ಆಷಾಢಭೂತಿ ಉದ್ದೇಶದಿಂದಲೇ ಸನ್ಯಾಸದ ಸೋಗು ಹಾಕುವ ರಾವಣ ಸನ್ಯಾಸಿಗಳ ಮಾತಿರಲಿ, ವ್ಯಕ್ತಿಯೊಬ್ಬ ಪ್ರಾಮಾಣಿಕವಾಗಿ ನಂಬಿ ನಿಷ್ಠೆಯಿಂದ ಅಧ್ಯಾತ್ಮದ ದಾರಿಯಲ್ಲಿ, ಸನ್ಯಾಸದ ದಾರಿಯಲ್ಲಿ ಸಾಗಬಹುದಾದದ್ದು ಅಸಂಭವವೇನಲ್ಲ. ಅಂಥ ವ್ಯಕ್ತಿಯ ಸೋಲನ್ನೂ ಸಾಹಿತಿಯಾದವನು ಸಿನಿಕ ದೃಷ್ಟಿಯಿಂದ, ಟೀಕೆ ಮಾಡುವ ದೃಷ್ಟಿಯಿಂದ ಮಾತ್ರ ನೋಡಬೇಕೆ? ಆ ಪತನದ ಸಂದರ್ಭದ ಮಾನವೀಯ ಆಯಾಮವನ್ನು, ಒಳತೋಟಿ ತುಮುಲಕ್ಕೆ ಒಳಗಾಗುವ ಸಂಕಟವನ್ನು ಅನುಕಂಪ, ಸಹಾನುಭೂತಿಯಿಂದಲೂ ಕಂಡು, ಶೋಧಿಸಿ ಅರಿಯುವ ಭಾವ ಸಂಸ್ಕಾರ, ಚಿಂತನಸೂಕ್ಷ್ಮ ತೋರಬಹುದಲ್ಲವೆ? ಕಾದಂಬರಿಕಾರ ಕಾರಂತರಲ್ಲಿ ಅಂಥ ಭಾವ ಸಂಸ್ಕಾರ, ಚಿಂತನ ಸೂಕ್ಷ್ಮದ ಕೊರತೆ ಸಾಧು ಸನ್ಯಾಸಿಗಳನ್ನು ಕುರಿತ ಚಿತ್ರಣದಲ್ಲಿ ಎದ್ದು ಕಾಣಿಸುತ್ತದೆಯಲ್ಲವೆ?

ಕಾರಂತರು ವೇಶ್ಯೆಯರ ಬದುಕಿನ ಬಗ್ಗೆ ಕೂಡ ಸಿನಿಕ ಧೋರಣೆ ತಾಳದೆ ಉದಾರದೃಷ್ಟಿಯಿಂದ ಅರಿತು ಬರೆಯಬಲ್ಲ ಸಂವೇದನ ಸಂಸ್ಕಾರ ತೋರುವವರು. ‘ಅಳಿದ ಮೇಲೆ’ ಕಾದಂಬರಿಯ ಧಾರೇಶ್ವರ ಸರಸಿ, ‘ಮೈಮನಗಳ ಸುಳಿಯಲ್ಲಿ’ ಕಾದಂಬರಿಯ ಮಂಜುಳೆ, ‘ಕರುಳಿನ ಕರೆ’ ಕಾದಂಬರಿಯ ಚಂಪಿ, ‘ಜಾರುವ ದಾರಿಯಲ್ಲಿ’ ಕಾದಂಬರಿಯ ಗುಲಾಬಿ ಅಂಥವರನ್ನು ಕುರಿತ ಬರವಣಿಗೆ ನೋಡಬಹುದು. ಆದರೆ ಸನ್ಯಾಸಿಗಳ ಬಗ್ಗೆ ಬರೆಯುವಾಗ ಕಾರಂತರು ಸಂವೇದನೆ ಸೂಕ್ಷ್ಮ ಇಲ್ಲದವರಂತೆ ಬರೆಯುವುದು ಕುತೂಹಲದ ಸಂಗತಿಯಾಗಿದೆ. ಕಾರಂತರ ಕಾರಣವಾದೀ ನಿಲುವು ಸನ್ಯಾಸ, ಅಧ್ಯಾತ್ಮದಂಥ ವಿಷಯ ಸಂಗತಿಗಳನ್ನು ಕುರಿತಾಗ ಚಲನಶೀಲ ಸಾಧ್ಯತೆಗೆ ತೆರೆದಿರದೆ ಮುಚ್ಚಿದ್ದಾಗಿ ತೋರುತ್ತದೆ. ಕಾರಣವಾದವು ಅವರ ಕೈಯಲ್ಲಿ ಒಂದು ಸ್ಥಿರ ವಿಚಾರವಾದ-ಐಡಿಯೋಲೋಜಿ-ಆಗಿಬಿಡುತ್ತದೆ. ಅದೊಂದು ಅನ್ವಯಿಸಿ ನೋಡುವ ಸ್ಥಿರಮಾಪನ ಉಪಕರಣ ಎಂಬಂತಾಗಿ ಬಿಟ್ಟಿರುವುದು ಅದಕ್ಕೆ ಕಾರಣ ಎಂದು ತೋರುತ್ತದೆ.

ದೇವರ ಅಸ್ತಿತ್ವ, ಇಹ-ಪರ, ಪಾಪ-ಪುಣ್ಯಗಳ ಸಾಂಪ್ರದಾಯಿಕ ನಂಬಿಕೆ, ಗ್ರಹಿಕೆಗಳನ್ನು ಒಪ್ಪದಿದ್ದವರೂ, ಮೌಲ್ಯಪ್ರಜ್ಞೆಯ ಆಧಾರದ ಮೇಲೆ ಅವರವರ ಆದರ್ಶದ ಪರಿಕಲ್ಪನೆಯಂತೆ ಬಾಳನ್ನು ನಿರಂತರ ಸಾಧಕ ನಿಷ್ಠೆಯಿಂದ ಕಟ್ಟಿಕೊಳ್ಳಬೇಕೆಂಬ ಹಂಬಲ ಇರುವವರೂ ಅಧ್ಯಾತ್ಮವಾದಿಗಳಲ್ಲ ಎನ್ನುವುದು ಹೇಗೆ, ಏಕೆ? ಕಾರಂತರನ್ನು ‘ಆಧುನಿಕ ಋಷಿ’ ಎಂದು ಗೋಪಾಲಕೃಷ್ಣ ಅಡಿಗರು ಕರೆದ್ದು ಈ ಅರ್ಥದಲ್ಲಿಯೆ. ಅಧ್ಯಾತ್ಮದ ಪರಿಕಲ್ಪನೆಯ ಸ್ವರೂಪದಲ್ಲಿ ವ್ಯತ್ಯಾಸ ಇರಬಹುದು. ನಮ್ಮ ಚೈತನ್ಯಾಂಶ ಅದರೆಲ್ಲ ಸಾಧ್ಯತೆಗಳಲ್ಲಿ ಮಾಗುವ, ಅರಳುವ ಪರಮಸ್ಥಿತಿ ಅಥವಾ ಶಿಖರ ಸ್ಥಿತಿಯೆ ಅಧ್ಯಾತ್ಮದ ಸ್ಥಿತಿ ಎಂದುಕೊಳ್ಳಬಹುದಲ್ಲವೆ? ನಮ್ಮ ನಮ್ಮ ಇಂದ್ರಿಯಗಳನ್ನು, ಮನುಷ್ಯ ಸಹಜ ತುಡಿತ, ಆಕಾಂಕ್ಷೆಗಳನ್ನು ಒಂದು ವ್ಯವಸ್ಥಿತ ಹೊಂದಾಣಿಕೆಯ ಪರಿಕಲ್ಪನೆಯಲ್ಲಿ ಶ್ರುತಿ ಹಿಡಿಯುತ್ತ, ತೋಲನ ಸ್ತಿಮಿತಕ್ಕೆ ಒಗ್ಗಿಸುತ್ತ, ಪಳಗಿಸುತ್ತ ಅರಿವಿನ ಶಿಖರ ಸ್ಥಿತಿಯತ್ತ ಮಾಗಿಸಲು, ಹೊರೆಸಲು ಎಚ್ಚರದ ಪ್ರಯತ್ನವನ್ನು ಪ್ರಜ್ಞಾವಂತರಾದವರು ಪ್ರಾಮಾಣಿಕವಾಗಿಯೇ ಮಾಡಬಹುದಲ್ಲವೆ? ತೊಟ್ಟಿಲಿನಿಂದ ಚಟ್ಟ ಏರುವವರೆಗೆ ಎಷ್ಟು,ಯಾವ ನೆಲೆಯಲ್ಲಿ ಮಾಗುವಿಕೆ ಫಲಿಸುತ್ತದೆ ಎಂಬುದು ಅವರವರ ಸತ್ವ ಮತ್ತು ಸಂದರ್ಭದಲ್ಲಿಯೇ ತೀರ್ಮಾನವಾಗುವಂಥದು. ನಾನು ನಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವಾಗ, ರೂಪಿಸಿಕೊಳ್ಳುವಾಗ ಪ್ರಜ್ಞಾಪೂರ್ವಕವಾಗಿಯೂ ಅಪ್ರಜ್ಞಾಪೂರ್ವಕವಾಗಿಯೂ ಈ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಏಳು ಬೀಳುಗಳೂ ಇರಲಾರವೆಂಬಂತಿಲ್ಲ. ಹಾಗೆಯೇ ಅದಕ್ಕೆ ದತ್ತ ಅಥವಾ ಪೂರ್ವನಿರ್ಧರಿತ ಶಿಖರ ಸ್ಥಿತಿ ಎಂಬುದಿಲ್ಲ. ಇರುವುದು ಸಾಧ್ಯವೂ ಇಲ್ಲ. ಜೀವನಾನುಭವಗಳ ಸಂದರ್ಭದಲ್ಲಿ ಪುನಾರಚನೆಗೆ ಸದಾ ತೆರೆದಿರುವುದು ಕಾರಣವಾದೀ ಚಿಂತನೆಯ ಜೀವಸತ್ವ.

ಆಸ್ತಿಕ ಸಂಪ್ರದಾಯವಾದೀ ಮಾರ್ಗದ ಅಧ್ಯಾತ್ಮಾರಾಧಕ ಸಾಧು ಸನ್ಯಾಸಿಗಳನ್ನು ವಿವರದಲ್ಲಿ ಚಿತ್ರಿಸುವುದರಲ್ಲಿ ಕಾರಂತರು ಹೇಗೆ ಆಸಕ್ತಿ ತೋರಿಸಲಿಲ್ಲವೊ ಹಾಗೆಯೇ ಕಾರಣವಾದೀ ಚಿಂತಕನ ಅರಿವು, ಸಂವೇದನೆಯ ವಿಕಸನ ಪ್ರಕ್ರಿಯೆಯನ್ನು ಜೀವನ ಸಂದರ್ಭದಲ್ಲಿಟ್ಟು, ಶೋಧಿಸುವ ಆಸಕ್ತಿಯನ್ನೂ ತೋರಿಸಿದಂತಿಲ್ಲ.

ಕಥಾನಾಯಕರಲ್ಲಿಯೂ ಕೆಲವರು ಸೇರಿದಂತೆ ಕಾರಂತರ ಕಾದಂಬರಿಗಳಲ್ಲಿ ಬರುವ ಕಲಾವಿದರು-ಚಿತ್ರಕಾರರು, ನೃತ್ಯಗಾರರು, ಗಾಯಕರು, ವಾದಕರು, ಅಭಿನೇತೃಗಳು-ಇವರನ್ನು ಇಹದ ಪರಿವೆ ಕಳಚಿದವರಂತೆ, ತನ್ಮಯಶೀಲ ಭಾವೋತ್ಕಟತೆಯ ಮೈಮರೆವಿನಲ್ಲಿ ಕಲೆಯ ಸಾರ್ಥಕ ಶಿಖರಾನುಭವವನ್ನು ಪಡೆಯುವವರೆಂಬಂತೆ ಚಿತ್ತಿಸಿರುವ ಸಂದರ್ಭಗಳುಂಟು. ಕಾರಂತರ ಕಾದಂಬರಿಗಳಲ್ಲಿ ಕಲೆ ನೋವನ್ನೊ, ನಲಿವನ್ನೊ ತೋಡಿಕೊಳ್ಳುವ ಒಂದು ರೇಚನ ಮಾಧ್ಯಮವಾಗಿಯೇ ಹೆಚ್ಚು ಕಡೆಗಳಲ್ಲಿ ಬಂದಿದೆ. ಹೊಟ್ಟೆ ಪಾಡಿಗೊ ಮತ್ತೊಂದಕ್ಕೊ ಕಲೆಯನ್ನು ವೃತ್ತಿಯಾಗಿ ಸ್ವೀಕರಿಸಿದವರು, ಪ್ರತಿಭಾವಂತರಾಗಿದ್ದರೂ ಪ್ರದರ್ಶನಪ್ರಿಯತೆ ಮತ್ತು ಜನಪ್ರಿಯತೆಯ ಗೀಳು ಬೆಳೆಸಿಕೊಂಡಂಥವರು. ಅಂಥವರನ್ನು ಬಿಟ್ಟರೂ ಪ್ರಾಮಾಣಿಕ ಶ್ರದ್ಧಾವಂತ ಕಲಾವಿದರೂ ಇದ್ದಾರೆ. ವೈಚಾರಿಕತೆ, ಜೀವನಶ್ರದ್ಧೆ, ಕಲಾಭಿರುಚಿ ಈ ಮುಪ್ಪುರಿಯಲ್ಲಿ ಜೀವನವನ್ನು ಸಂಪನ್ನಗೊಳಿಸಿಕೊಳ್ಳುವ ಸಹಜ ಹಸಿವುಳ್ಳ ಕಲಾವಿದರೂ ಇದ್ದಾರೆ. ಅವರು ಕೂಡ ಕಲೆಯನ್ನು ಜೀವನದೃಷ್ಟಿ ಅಥವಾ ಅಧ್ಯಾತ್ಮಿಕ ಅರಿವು, ಅನುಭವ ಶೋಧದ ಮಾಧ್ಯಮವಾಗಿ ಮಾಡಿಕೊಂಡವರಲ್ಲ. ಯಾವುದೋ ಒಂದು ನೃತ್ಯದ, ಹಾಡಿನ ಚಿತ್ರರಚನೆಯ, ಪಾತ್ರಾಭಿನಯದ ಸಂದರ್ಭದಲ್ಲಿ ಮೈಮರೆವಿನ ತನ್ಮಯಶೀಲ ಕ್ಷಣಗಳನ್ನು ಅನುಭವಿಸಬಹುದಾದ ಸಂಸ್ಕಾರವಂತರು ಅವರಲ್ಲಿದ್ದಾರೆ. ಅಂಥ ಮೈಮರವಿನ ತನ್ಮಯಶೀಲತೆ ಪ್ರಕಟವಾದ ಸಂದರ್ಭಗಳ ಬಗೆಗೆ ಕಾದಂಬರಿಕಾರ ಕಾರಂತರು ನೀಡುವ ನಿರೂಪಣೆ ಅಥವಾ ಮಾಡುವ ವ್ಯಾಖ್ಯಾನಗಳು ಭಾವೋತ್ಕಟತೆಯ ಬಗ್ಗೆ ಹೆಚ್ಚು ಒತ್ತು ಕೊಟ್ಟದ್ದಾಗಿಯೆ, ಹೆಚ್ಚು ರೊಮ್ಯಾಂಟಿಕ್ ಮನೋಧರ್ಮದ್ದಾಗಿಯೆ ಇವೆ, ಜೀವನದೃಷ್ಟಿಗೆ ಸಂಬಂಧಿಸಿದ ಅರಿವಿನ ನೆಲೆಯಲ್ಲಿ ಪರಿವೆ, ಪರಿಜ್ಞಾನಗಳನ್ನು ಶೋಧಿಸಿ ನೋಡುವಂಥವಾಗಿಲ್ಲ.

ಕಾರಂತರ ಕಾದಂಬರಿಗಳ ಕಥಾನಾಯಕರ ಚಿಂತನೆ, ವರ್ತನೆಗಳಲ್ಲಿ ಕಾಣಿಸುವ ಕಾರಣವಾದಿತ್ವ, ಹೆಚ್ಚು ಕಡಿಮೆ ಪೂರ್ವಸಿದ್ಧ ಸ್ಥಿತಿಯಾಗಿದೆಯೇ ಹೊರತು ಆ ಚಿಂತನೆ, ಆ ವರ್ತನೆಗಳಿಗೆ ಕಾರಣವಾದ ಸಂಸ್ಕಾರ ಸಿದ್ಧತೆಯ ಪ್ರಕ್ರಿಯೆಯನ್ನು ಕಾದಂಬರಿಕಾರ ಕಾರಂತರು ಶೋಧಿಸುವುದು ಕಾಣಿಸುವುದಿಲ್ಲ. ‘ಅಳಿದ ಮೇಲೆ’ ಕಾದಂಬರಿಯ ಕಥಾನಾಯಕ ಯಶವಂತರಾಯನ ಚಿತ್ರಣದಲ್ಲಿ ಉಳಿದ ಕಾದಂಬರಿಗಳಲ್ಲಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ, ಕಾಳಜಿಯಲ್ಲಿ ವ್ಯಕ್ತಿತ್ವ ಶೋಧ ಪ್ರಕ್ರಿಯೆ ಇರುವುದರಿಂದ ಅಂಥ ಒಂದು ಪರ್ಯಾಯವನ್ನು ನೀಡುವ ಪ್ರಯತ್ನವಿದೆಯೇನೊ ಎಂದು ಅನಿಸುವಂತಾಗುತ್ತದೆ. ಆದರೆ ಆ ಕಾದಂಬರಿಯ ತಂತ್ರದ ಸ್ವರೂಪದಿಂದಾಗಿ ವ್ಯಕ್ತಿತ್ವ ಶೋಧ ಕ್ರಿಯೆಗೆ ಸಂಬಂಧಿಸಿದಂತೆ ಅದೊಂದು ಪರೋಕ್ಷ ಮತ್ತು ಪರಿಮಿತಿ ಶೋಧ ಕ್ರಿಯೆಯಾಗುವುದರಿಂದ ಒಂದು ಅಧಿಕೃತತೆಯ ಛಾಪು ಮೂಡದಂತಾಗಿದೆ; ಸಮಗ್ರತೆಯ ರೂಪಲಕ್ಷಣ ಕಾಣಿಸದಂತಾಗಿದೆ. ಪ್ರತ್ಯೇಕವಾಗಿಯೆ ಒಂದು ಕಾದಂಬರಿಯಾಗಿ ನೋಡಿದಾಗ ‘ಅಳಿದ ಮೇಲೆ’ ಕಾದಂಬರಿಯ ಕಾರಂತರ ಮುಖ್ಯ ಮತ್ತು ಹೆಚ್ಚು ಯಶಸ್ವಿ ಕಾದಂಬರಿಗಳಾದ ‘ಸರಸಮ್ಮನ ಸಮಾಧಿ’, ‘ಚೋಮನ ದುಡಿ’, ‘ಮರಳಿ ಮಣ್ಣಿಗೆ’, ‘ಬೆಟ್ಟದ ಜೀವ’, ‘ಸಮೀಕ್ಷೆ’, ‘ಮೈಮನಗಳ ಸುಳಿಯಲ್ಲಿ’ , ಕಾದಂಬರಿಗಳ ಸಾಲಿಗೆ ಸೇರುವಂಥದ್ದು, ಎನ್ನಬಹುದು. “ಕಾರಂತರ ‘ಅಳಿದ ಮೇಲೆ’,” (೧೯೬೮) ಎಂಬ ಲೇಖನದಲ್ಲಿ ಕಾರಂತರ ಕಾದಂಬರಿಗಳ ಸಂದರ್ಭದಲ್ಲಿ ಯಶವಂತರಾಯ ಪಾತ್ರದ ವಿಶಿಷ್ಟತೆ ಕುರಿತು ನಾನು ಬರೆದಿದ್ದೇನೆ. (ಸಮಕಾಲೀನ, ೧೯೭೩, ಪುಟ ೬೦-೬೭)

ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯಲ್ಲಿ ಕಾರಂತರು ಕಾರಣವಾದೀ ಚಿಂತನೆಯನ್ನು, ಅಧ್ಯಾತ್ಮ ವಾದಕ್ಕೆ ಪರ್ಯಾಯವಾದ ಚಿಂತನ ಮಾರ್ಗವನ್ನು ‘ಅಳಿದ ಮೇಲೆ’ ಕಾದಂಬರಿಗಿಂತ ಹೆಚ್ಚಿನ ವಿವರ, ವ್ಯಾಪ್ತಿಯಲ್ಲಿ ಪ್ರತಿಪಾದಿಸುವ ಪ್ರಯತ್ನವಿದೆ. ‘ಅಳಿದ ಮೇಲೆ’ ಯಲ್ಲಿ ಯಶವಂತರಾಯನೆಂಬ ವ್ಯಕ್ತಿಯ ಬದುಕು, ಜೀವನದೃಷ್ಟಿಯ ಸಂದರ್ಭದಲ್ಲಿ ಪ್ರತಿಪಾದಿತವಾದರೆ, ‘ಮೂಕಜ್ಜಿಯ ಕನಸುಗಳು’ ಕಾದಂಬರಿಯಲ್ಲಿ ಮಾನವ ಇತಿಹಾಸದ ದೀರ್ಘ ಹಾಗೂ ವಿಸ್ತಾರವಾದ ಹಾಸುಹೊಕ್ಕಿನ ಭೀತಿಯ ಮೇಲೆ ಅದನ್ನು ಕಾಣಿಕಸುವ ಪ್ರಯತ್ನವಿದೆ. “ನಮ್ಮ ಸಮಾಜದ ಧಾರ್ಮಿಕ ಮತ್ತುಸ ಸಾಂಸ್ಕೃತಿಕ ವಿಚಾರಗಳಲ್ಲಿ ನನ್ನ ಸ್ವಂತ ವಿಚಾರ ಲಹರಿ ಯಾವರ ತೆರನಲ್ಲಿ ಹರಿದಿದೆ ಎಂಬುದನ್ನು ಈ ಕಾದಂಬರಿಯ ಓದುಗರಿಗೆ ಸ್ಥೂಲವಾಗಿ ತೋರಿಸಿ ಕೊಡಬಲ್ಲದು.” ಎಂದು ಕಾರಂತರೇ ಹೇಳಿದ್ದಾರೆ. (‘ಸ್ಮೃತಿ ಪಟಲದಿಂದ’, ಸಂಪು ೨, ೧೯೭೮, ಪುಟ ೧೨೩) ಸಾಮಾನ್ಯವಾಗಿ ಕಾದಂಬರಿ ತಂತ್ರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಕಾರಂತರು ಈ ಎರಡೂ ಕಾದಂಬರಿಗಳಲ್ಲಿ ತಂತ್ರ ನಾವೀನ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವಹಿಸಿದ್ದಾರೆ. ವರ್ತಮಾನದಿಂದ ಭೂತಕ್ಕೆ ಸರಿಯುವ, ಭೂತದಿಂದ ವರ್ತಮಾನಕ್ಕೆ ಜಿಗಿಯುವ ಚುಳುಕುತನ ಅಥವಾ ನಮ್ಮ ಗುಣ ಇರುವ ತಂತ್ರ ವಿಧಾನವನ್ನು ಎರಡೂ ಕಾದಂಬರಿಗಳಲ್ಲಿ ಬಳಸಿದ್ದಾರೆ. ‘ಅಳಿದ ಮೇಲೆ’ಯಲ್ಲಿ ವಾಸ್ತವದ ನೆಲೆಯಲ್ಲಿಯೆ ವಸ್ತು ಸಂಗತಿಗಳ ಚಲನೆ ಅಥವಾ ಅನಾವರಣ ಕ್ರಿಯೆ ನಡೆಯುತ್ತದೆ. ‘ಮೂಕಜ್ಜಿಯ ಕನಸುಗಳು’ ಕಾದಂಬರಿಯಲ್ಲಿ ವಾಸ್ತವದ ನೆಲೆಯಲ್ಲಿಯೇ ತಂತ್ರದ ನಡಗೆ, ವಿನ್ಯಾಸ ಇಲ್ಲ. ವರ್ತಮಾನದಿಂದ ಭೂತದ ನೆಲೆಗೆ, ಇಂದ್ರಿಯ ಗ್ರಾಹ್ಯ ನೆಲೆಯಿಂದ ಅತೀಂದ್ರಿಯ ಗ್ರಹಿಕೆಯ ನೆಲೆಗೆ ತಂತ್ರದ ನಡಗೆ, ವಿನ್ಯಾಸ ತೂಗುಯ್ಯಾಲೆಯಾಡುತ್ತದೆ. ‘ಅಳಿದ ಮೇಲೆ’ ಕಾದಂಬರಿಯಲ್ಲಿ ಕಾರಣವಾದೀ ನಿಲುವು, ನೋಟದ ಯಶವಂತರಾಯ ಮತ್ತು ನಿರೂಪಕ ಕಾರಂತ ಪಾತ್ರ ಇರುವಂತೆ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯಲ್ಲಿ ಮೂಕಜ್ಜಿ ಮತ್ತು ಸುಬ್ರಾಯ ಇದ್ದಾರೆ. ‘ಅಳಿದ ಮೇಲೆ’ಯ ಕಥಾವಸ್ತುವಿಗೆ ಬಳಕೆಯಾದ ತಂತ್ರ ವಿಧಾನ ಪರಿಣಾಮಕಾರಿಯಾಗಿ ಕಲಾತ್ಮಕವಾಗಿ ಯಶಸ್ವಿಯಾಗಿ ಬಳಕೆಯಾಗಿದೆ. ಯಶವಂತರಾಯನ ಬದುಕಿನ ಸಮಗ್ರ ಚಿತ್ರಣಕ್ಕೆ ಕೊರತೆಯಾಯಿತೆಂಬಂತೆ ತೋರಿದರೂ ಕಾರಣವಾದೀ ಚಿಂತನೆಯ ಜೀವನದರ್ಶನವನ್ನು ಪ್ರತಿಪಾದಿಸುವ ಆಶಯಕ್ಕೆ ಈ ತಂತ್ರದಿಂದ ವಿಪರ್ಯಾಸ ಉಂಟಾಗುವಂಥದೇನಿಲ್ಲ. ಆ ಮಾತುಗಳನ್ನು ‘ಮೂಕಜ್ಜಿಯ ಕನಸುಗಳು’ ಕಾದಂಬರಿಯ ತಂತ್ರದ ಬಗ್ಗೆಯೂ ಹೇಳಬಹುದೆ? ಕಾರಂತರು ಅವರ ಕಾದಂಬರಿಗಳಲ್ಲಿ ಸಾರ್ಥಕ ಬಾಳಿನ ಚಿತ್ರ ಕಟ್ಟಲು, ಕಾಣ್ಕೆ ಹೊರೆಸಲು ಕಾರಣವಾದೀ ಕಥಾ ನಾಯಕರನ್ನು, ಸಾತ್ವಿಕ ಮಾದರಿಯ ಮುದುಕಿಯರನ್ನು ತರುತ್ತಿದ್ದಂತೆ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯಲ್ಲಿಯೂ ತಂದಿದ್ದಾರೆ: ಮೂಕಜ್ಜಿ, ತಿಪ್ಪಜ್ಜಿ, ಸುಬ್ರಾಯ. ಆದರೆ ಮೂಕಜ್ಜಿಯ ಪಾತ್ರದ ಕಲ್ಪನೆ ಕಾರಣವಾದೀ ಪ್ರಜ್ಞೆಗೆ, ಕಾಣ್ಕೆಗೆ ಅನುಗುಣವಾಗಿಲ್ಲ; ವ್ಯತ್ಯಸ್ತ ಸ್ವರೂಪದ್ದಾಗಿದೆ. ಅಲ್ಲವೆ?

“ಉದ್ದಕ್ಕೂ ಸ್ವಾನುಭವ, ಕಾರಣವಾದಿ ದೃಷ್ಟಿ ಇವುಗಳನ್ನು ಅವಲಂಬಿಸಿ ಬರೆಯುತ್ತ ಬಂದ ಕಾರಂತರು ‘ಮೂಕಜ್ಜಿಯ ಕನಸುಗಳು’ ಕಾದಂಬರಿಯಲ್ಲಿ ಅತೀಂದ್ರಿಯ ಜ್ಞಾನದ ಅಸ್ತಿತ್ವದ ಬಗ್ಗೆ ಪತ್ರಿಕೆಯಲ್ಲೊ ಎಲ್ಲೊ ಓದಿದ ವರದಿಯನ್ನು ವಾಸ್ತವ ಸತ್ಯವೇ ಎಂದು ನಂಬಿ ಅಥವಾ ಸ್ವೀಕರಿಸಿ ವಾಸ್ತವ ಸತ್ಯದ ಶೋಧನೆಯ ಉಪಕರಣವಾಗಿ ಕಾದಂಬರಿಯಲ್ಲಿ ಬಳಸಿದ್ದು ಎಷ್ಟು ಸರಿ, ಎಷ್ಟು ಸಮರ್ಥನೀಯ? ಈ ಪ್ರಶ್ನೆ ಕೇಳಬಹುದಾದದ್ದು. (ನೋಡಿ : ‘ಸ್ಮೃತಿ ಪಟಲದಿಂದ’, ಸಂಪುಟ ೨, ೧೯೭೮, ಪುಟಗಳು ೧೨೧, ೨೩).

“ವಾಸ್ತವವಾದೀ ಪ್ರಕಾರವಾದ ಕಾದಂಬರಿಯಲ್ಲಿ ಪುರಾಣ, ಸಭ್ರಾಮಕ ತಂತ್ರ ಬಳಸಲೇಬಾರದೆಂದು ಯಾರೂ ಕಟ್ಟು ಮಾಡುವಂತಿಲ್ಲ, ಎಂಬುದೂ ನಿಜವೆ. ಆದರೆ ಶೋಧನ ಉಪಕರಣ ಮಾತ್ರ ಅವಾಸ್ತವ ಸ್ವರೂಪ ಮತ್ತು ನೆಲೆಯವಾಗಿ, ಶೋಧಿತವಾಗುವ ವಿಷಯ ಮತ್ತು ಅನುಭವಗಳು ವಾಸ್ತವ ತರ್ಕದ, ಕಾರಣವಾದೀ ಚಿಂತನೆಯ, ವೈಜ್ಞಾನಿಕ ಜ್ಞಾನದ ಸ್ವರೂಪ ಮತ್ತು ನೆಲೆಯವಾಗಿ ಇರುವುದರಿಂದ ಏಳಬಹುದಾದ ಕಲಾತ್ಮಕ ಅಸಾಂಗತ್ಯದ ಪ್ರಶ್ನೆಗೆ ಇರುವ ಉತ್ತರ ಯಾವುದು? ಕಾಫ್ಕಾನ ‘ಮೆಟಮಾರ್ಫಸಿಸ್’ ದಂಥ ಕಾದಂಬರಿಗಳ ಸ್ವರೂಪ ಲಕ್ಷಣ ಮತ್ತು ಅನುಭವ ಶೋಧನದ ರೀತಿಯೂ ಬೇರೆ, ಸ್ವತಃ ಕಾರಂತರ ‘ಸರಸಮ್ಮನ ಸಮಾಧಿ’, ‘ದೇವದೂತರು’ ಕಾದಂಬರಿಗಳಸ ಅನುಭವ ಶೋಧನದ ರೀತಿಯೂ ಬೇರೆ, ಅವುಗಳ ವಿವಕ್ಷಿತ ಅಥವಾ ಉದ್ದೇಶಿತ ಪರಿಣಾಮದ ಸ್ವರೂಪವೂ ಬೇರೆ. ಅವುಗಳನ್ನುಇಲ್ಲಿ ಉದಾಹರಿಸಿ ಸಮರ್ಥಿಸಿಕೊಳ್ಳುವುದೂ ಬಹುಶಃ ಸುಲಭವಲ್ಲ.

“ಈ ಕಾದಂಬರಿಯಲ್ಲಿ ಶೋಧಿತವಾಗುವ ಅಕಾಡೆಮಿಕ್ ಜ್ಞಾನದ ಪರಿಕರ ಸಾಮಗ್ರಿ ಮತ್ತು ಆಕರಗಳು ಎಷ್ಟೇ ಬೆಲೆಯುಳ್ಳವಾದರೂ ಸಾಹಿತ್ಯ ಕೃತಿಯಾದ ಈ ಕಾದಂಬರಿಯಲ್ಲಿ ಅವುಗಳನ್ನು ಜ್ಞಾನದ ನೆಲೆಯಿಂದ ಅನುಭವದ ನೆಲೆಗೆ ಹೊರೆಸುವ ಅಥವಾ ಮಾಗಿಸುವ ಅಥವಾ ಬಿಡುಗಡೆ ಮಾಡುವ ಸೃಜನಶೀಲ ಸಾಮರ್ಥ್ಯವು ಯಾವ ಮಟ್ಟದಲ್ಲಿ ಫಲಿಸಿದೆ ಈ ಪ್ರಶ್ನೆಯೂ ಕೇಳಬಹುದಾದದ್ದು. ಕನ್ನಡದಲ್ಲಿ ‘ಮೂಕಜ್ಜಿಯ ಕನಸುಗಳು’ ಒಂದು ಅಪೂರ್ವ ಸಾಹಿತ್ಯಕ ಪ್ರಯೋಗ ಎಂದು ಒಪ್ಪಿಯೂ ಇಂಥ ಪ್ರಶ್ನೆಗಳನ್ನು ಕೇಳಬೇಕೆನ್ನಿಸಿದರೆ ತಪ್ಪೇನಿಲ್ಲ.” (೧೯೭೮ರಲ್ಲಿ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಪುತ್ತೂರಿನಲ್ಲಿ ಕಾರಂತ ಅಭಿನಂದನ ಸಮಾರಂಭದ ಅಂಗವಾಗಿ ‘ಮೂಕಜ್ಜಿಯ ಕನಸುಗಳು’ ಕಾದಂಬರಿ ಕುರಿತ ಸಾಹಿತ್ಯ ವಿಚಾರಗೋಷ್ಠಿಯ ಅಧ್ಯಕ್ಷ ಭಾಷಣದಲ್ಲಿ ನಾನು ಹೇಳಿದ ಮಾತುಗಳಿವು- ನೋಡಿ: ‘ಕಾರಂತ ಯುಗಾಂತ’ ಸಂ.ಡಾ. ಜಯಪ್ರಕಾಶ ಮಾವಿನಕುಳಿ, ೧೯೯೯, ಪುಟ ೯೯)

ಕಾರಂತರು ಅತೀಂದ್ರಿಯ ಶಕ್ತಿಯನ್ನು ಕುರಿತ ವಿವರಗಳನ್ನು ವಾಸ್ತವ ಸತ್ಯವೆಂಬಂತೆಯೆ ಬಳಸಿದ್ದು ‘ಮೂಕಜ್ಜಿಯ ಕನಸುಗಳು’ ಕಾದಂಬರಿಗೆ ಮಾತ್ರ ಸೀಮಿತವಾಗಿಲ್ಲ. ಆಮೇಲಿನ ಕಾಲದಲ್ಲಿ ಬರೆದ ‘ಕಣ್ಣಿದ್ದೂ ಕಾಣರು’ (೧೯೮೧) ಎಂಬ ಕಾದಂಬರಿಯಲ್ಲಿಯೂ ಕಾರಂತರು ಜಾಣ ಎಂಬುವನ ಪಾತ್ರದಲ್ಲಿ ಕೂಡ ಅಂಥ ಅತೀಂದ್ರಿಯ ಶಕ್ತಿ ಕ್ರಿಯಾಶೀಲವಾಗುವುದನ್ನು ಕಾಣಿಸಿದ್ದಾರೆ. ಆ ಕಾದಂಬರಿಯ ‘ಮುನ್ನುಡಿ’ಯ ಕೆಲವು ವಾಕ್ಯಗಳನ್ನು ಉದ್ಧರಿಸುತ್ತೇನೆ:

“ಈ ಕಾದಂಬರಿಯಲ್ಲಿ ಬೇಕೆಂದೇ ಜಾಣನೆಂಬ ಒಬ್ಬ ಹೆಡ್ಡನನ್ನು ನಾನು ತಂದಿರಿಸುವ ಪ್ರಯತ್ನ ಮಾಡಿದ್ದೇನೆ. ಆದರೆ ಆತ ಅತೀಂದ್ರಿಯ ಜ್ಞಾನ ಪ್ರದರ್ಶಿಸುವ ಒಬ್ಬ ಸಾಮಾನ್ಯ ವ್ಯಕ್ತಿ; ಆದರೆ ಸಂತರ ಸಾಲಿಗೆ ಸೇರದವನು. ಕೆಲಕೆಲವು ಅತೀಂದ್ರಿಯ ಶಕ್ತಿಯುಳ್ಳವರು ಇವತ್ತಿಗೂ ಅಲ್ಲಿ ಇಲ್ಲಿ ಕಾಣಸಿಗುತ್ತಾರೆ. ಅವರ ಅತೀಂದ್ರಿಯ ಜ್ಞಾನಕ್ಕೆ ಅವರೇ ಕಾರಣವನ್ನು ಹೇಳಲಾರರು. ಆದರೆ ಅವರು ತಾವು ಹೇಳಿದ್ದೆಲ್ಲ ನಿಜವಾಗುತ್ತದೆ-ಎನ್ನದೇ ಹೋದರೂ, ಸಾಕಷ್ಟು ನಿದರ್ಶನಗಳು ನಿಜವೆಂದು ತಿಳಿದು ಬಂದಮೇಲೆಯೂ, ತಾವು ದೇವರ ಅವತಾರಿಗಳು, ಅತಿಮಾನವರು ಎಂದುಕೊಂಡಿಲ್ಲ. ಪೀಟರ್ ಹುರ್ಸಾಕ್ ಎಂಬ ಡಚ್ ತರುಣ ಗೋಡೆಗೆ ಬಣ್ಣ ಬಳಿಯುವಾಗ ಹತ್ತಿದ್ದ ಏಣಿಯಿಂದ ಕೆಳಕ್ಕೆ ಬಿದ್ದ. ಬಿದ್ದುದರಿಂದ ಆತನ ಮೆದುಳಿಗೆ ಪೆಟ್ಟಾಯಿತು. ಕೆಲವು ಕಾಲದ ಮೇಲೆ ಆ ಪೆಟ್ಟಿನ ಪ್ರಭಾವದಿಂದಲೋ ಏನೋ, ಆತನ ಅತೀಂದ್ರಿಯ ಶಕ್ತಿಯನ್ನು ಪ್ರದರ್ಶಿಸತೊಡಗಿದ. ಹಾಗೆಯೆ ನಾನು ನನ್ನೀ ಕತೆಯ ಜಾಣನನ್ನು ಮಾಡಿನ ಚಾವಣಿಗೆ ಹುಲ್ಲು ಹೊದೆಸಲು ಕಳುಹಿಸಿ, ಉದ್ದೇಶಪಟ್ಟು ಬೀಳಿಸಿದ್ದೇನೆ. ಇಲ್ಲಿ ನನ್ನ ಉದ್ದೇಶ, ಜಾಣನ ತಲೆಗೆ ಹುಟ್ಟಿನಿಂದ ಅಂಟಿ ಬಂದ ಸಾಂಸ್ಕೃತಿಕ ಪರಂಪರೆಗಳು ಕಳಚಿಹೋಗಿಕ, ಆತ ಒಂದು ಮಗುವಿನಂತೆ ಜಗತ್ತನ್ನು ನೋಡಲಿ ಎಂಬ ಬಯಕೆಯಿಂದ ಹಾಗೆ ಮಾಡಿದೆ. ಜತೆಗೆ ಆತ ಕೆಲವು ಬಾರಿ ಅತೀಂದ್ರಿಯ ಶಕ್ತಿಯನ್ನೂ ಪ್ರದರ್ಶಿಸುತ್ತಾನೆ. ಅದು ದೈವ ಸಾಕ್ಷಾತ್ಕಾರ ಮಾಡಿಕೊಂಡದ್ದರಿಂದ ಬಂದ ಶಕ್ತಿಯಲ್ಲ ಎಂದು ತಿಳಿಯಬಹುದು.” (ಪುಟ ೩-೪)

ಅತೀಂದ್ರಿಯ ಶಕ್ತಿಯ ಬಗೆಗಿನ ಕಾರಂತರ ಗ್ರಹಿಕೆ ತಂತ್ರದ ಮಟ್ಟಿಗೆ ಸೀಮಿತವಾದ ವ್ಯಕ್ತ್ಯತೀತ ಗ್ರಹಿಕೆ ಮಾತ್ರವೊ, ಕಾರಂತರ ವ್ಯಕ್ತಿಗತ ನಂಬಿಕೆಯ ಭಾಗವೇ ಆಗಿದೆಯೊ? ನಂಬಿಕೆಯ ಭಾಗವಾಗಿಲ್ಲ, ಎಂದು ಹೇಳುವುದು ಹೇಗೆ? ನಂಬಿಕೆಯಲ್ಲ ಎಂದರೂ ಕಾರಂತರ ಸ್ವಾನುಭವವಂತೂ ಅಲ್ಲ, ಕೇವಲ ಓದಿನಿಂದ ಪಡೆದ ಮಾಹಿತಿ ಎಂಬುದು ಸ್ಪಷ್ಟ. ಅದೇ ‘ಕಣ್ಣಿದ್ದೂ ಕಾಣರು’ ಕಾದಂಬರಿಯ ಒಳಗೇ ಕಾದಂಬರಿಯ ಭಾಗವೇ ಅದ ಸಂಭಾಷಣೆಯಲ್ಲಿ ಅತೀಂದ್ರಿಯ ಶಕ್ತಿ ಕುರಿತ ಚರ್ಚೆ ಬೇರೆ ಇದೆ. (ನೋಡಿ : ಪುಟ ೨೩೫-೩೬)

ವಸ್ತು ಸಂಗತಿಗಳನ್ನು ಕುರಿತ ಜ್ಞಾನವನ್ನು (Matter of fact knowledge) ಹೀಗೆ ಸ್ವಾನುಭವವೆಂದೊ, ಅರಿವೆಂದೊ ಕಾದಂಬರಿಕಾರ ಕಾರಂತರು ವಾಸ್ತವದಲ್ಲಿ ನಡೆದದ್ದೆಂಬಂತೆ ನೀಡಿ ಓದುಗರನ್ನು ಒಪ್ಪಿಸಲು ಮುಂದಾಗುತ್ತಾರೆ. ಸ್ವಾನುಭವ ನಿಷ್ಠೆಯನ್ನು ತಮ್ಮ ಸಾಹಿತ್ಯ ತತ್ವದ ಸ್ಥಾಯೀ ಸತ್ವವೆಂದು ಘೋಷಿಸಿಕೊಳ್ಳುವ ಕಾದಂಬರಿಕಾರ ಕಾರಂತರ ಸಂದರ್ಭದಲ್ಲಿ ಅದಕ್ಕೆ ಸಮರ್ಥನೆಯೇನು? ಅವರು ಚಾರಿತ್ರಿಕ, ಪೌರಾಣಿಕ ಕಾದಂಬರಿಗಳನ್ನು ಬರೆಯದೆ ಇರುವುದಕ್ಕೆ ಸ್ವಾನುಭವ ನಿಷ್ಠೆಯನ್ನು ಕುರಿತ ಅವರ ಚಿಂತನೆ, ನಿಲುವು ಬಲು ಮುಖ್ಯ ಕಾರಣ ಎಂಬುದನ್ನು ಇಲ್ಲಿ ನೆನೆಯಬಹುದಾಗಿದೆ.

ಕಾರಂತರ ಸಾಧು ಸನ್ಯಾಸಿ ವಿರೋಧಿ ಪುರೋಹಿತಶಾಹಿ ವಿರೋಧೀ ನಿಲುವಲ್ಲ. ಹಾಗೆಂದು, ಅವರು ಪುರೋಹಿತಶಾಹಿಗೆ ಪರವಾಗಿದ್ದಾರೆ, ಅದನ್ನು ಬೆಂಬಲಿಸುತ್ತಾರೆ, ಎಂದು ಅದರರ್ಥವಲ್ಲ. ಸ್ವಂತಕ್ಕೆ ಮತಧರ್ಮಪರ ನಂಬಿಕೆ, ಜೀವನದೃಷ್ಟಿಯನ್ನು ತಿರಸ್ಕರಿಸಿದರೂ ಅಥವಾ ಅವುಗಳಿಂದ ಬಿಡಿಸಿಕೊಂಡರೂ ಕಾರಂತರು ಪುರೋಹಿತಶಾಹಿಯನ್ನು ಸಹಿಸಿಕೊಳ್ಳುವವರು. ಡಾ. ಅಂಬೇಡ್ಕರ್ ಅಥವಾ ಕುವೆಂಪು ಅವರಂತೆ ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧವೇ ಸಮರ ಸಾರಿದವರಲ್ಲ. ಕುವೆಂಪು ಅಧ್ಯಾತ್ಮಾರಾಧಕ ಅಥವಾ ಅಧ್ಯಾತ್ಮಪರ ಜೀವನದೃಷ್ಟಿಯವರು. ಅವರ ಮತಧರ್ಮವನ್ನು, ಅದರ ಮಠಮಾನ್ಯ ವ್ಯವಸ್ಥೆಯನ್ನು ಅಂದರೆ ಪುರೋಹಿತಶಾಹಿಯನ್ನು, ಅದರ ಆಚಾರ ಭಾಗವನ್ನು ಪ್ರಶ್ನಿಸುವವರು; ಅದರ ವಿರುದ್ಧ ಚಿಂತನ ಸಮರ ಸಾರಿದವರು.

ಕಾರಂತರು ಬಿಡಿ ಸನ್ಯಾಸಿಗಳ ಬೇಟೆಯಾಡುವವರು. ಸನ್ಯಾಸಿಗಳ ಆತ್ಮ ವಂಚನೆ, ಜನವಂಚನೆಯ ವ್ಯವಹಾರವನ್ನು ಅವರ ಭಂಡ ಬಾಳನ್ನು ಪ್ರಶ್ನಿಸುವವರು, ಖಂಡಿಸುವವರು. ಅವರ ಭಂಡ ಬಾಳಿನಿಂದಾಗಿ ಅವರು ಧರ್ಮ, ದೇವರು, ಅಧ್ಯಾತ್ಮ ಎಂದು ನಂಬಿ ಬರುವವರನ್ನು ದಾರಿ ತಪ್ಪಿಸುತ್ತಾರೆ, ಎಂಬ ಕಾರಣದಿಂದ ಅವರನ್ನು ಸದೆಬಡಿಯಬೇಕೆಂಬ ಮನೋಧರ್ಮದವರು ಕಾರಂತರು. ಅಂಥ ಸಾಧು ಸನ್ಯಾಸಿಗಳನ್ನು ಪತ್ತೆ ಮಾಡಿ ಬೇಟೆಯಾಡಿದರೆ ಧರ್ಮ, ದೇವರು, ಅಧ್ಯಾತ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನೈತಿಕ ವ್ಯವಹಾರ ಕೊನೆಗೊಳ್ಳುತ್ತದೆ, ಅದರಿಂದ ಸಮಾಜ ಶುದ್ಧಿಯಾಗುತ್ತದೆ, ಎಂದು ಕಾರಂತರು ನಂಬುತ್ತಾರೇನೊ ಎಂಬಂತೆ ಬರೆಯುತ್ತಾರೆ. ಧರ್ಮ, ದೇವರು, ಅಧ್ಯಾತ್ಮ ಇವುಗಳ ಮಾಲೀಕತ್ವ, ಯಜಮಾನಿಕೆಯ ಸೂತ್ರ ಹಿಡಿದಿರುವ ಪುರೋಹಿತಶಾಹಿ ವ್ಯವಸ್ಥೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅದನ್ನೇ ಸದೆಬಡಿಯಬೇಕಾದ ಅಗತ್ಯವನ್ನು ಕುವೆಂಪು ಪ್ರತಿಪಾದಿಸುತ್ತಾರೆ. ಧರ್ಮ, ದೇವರು, ಅಧ್ಯಾತ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನೈತಿಕ ವ್ಯವಹಾರ, ಶೋಷಣೆ – ಇವು ಸಂಬಂಧಪಟ್ಟ ವ್ಯಕ್ತಿಗಳ ಶೀಲಭ್ರಷ್ಟತೆಯ ಪರಿಣಾಮ ಎಂದು ವ್ಯಾಖ್ಯಾನಿಸಿಕೊಳ್ಳುವ ಕಾರಂತರು ಅದಕ್ಕೆ ಸೋಗಿನ ಸಾಧು ಸನ್ಯಾಸಿಗಳನ್ನು ಗುರಿಯಾಗಿಸುತ್ತಾರೆ. ಪುರೋಹಿತಶಾಹಿ ವ್ಯವಸ್ಥೆಯೇ ಈ ಶೀಲಭ್ರಷ್ಟತೆಯ, ಈ ಶೋಷಣೆಯ ವ್ಯವಹಾರವನ್ನು ಹುಟ್ಟುಹಾಕುವ, ಬೆಳೆಸುವ ಕೇಂದ್ರವಾಗಿದೆ, ಎಂದು ವ್ಯಾಖ್ಯಾನಿಸಿಕೊಳ್ಳುವ ಕುವೆಂಪು ಮಠಧಾರ್ಮಿಕ ಮಠಮಾನ್ಯಗಳನ್ನು ಗುರಿಯಾಗಿಸಿಕೊಳ್ಳುತ್ತಾರೆ.

ಶೀಲಭ್ರಷ್ಟ ಸಾಧು ಸನ್ಯಾಸಿಗಳನ್ನು ಕುರಿತಂತೆ ಕನ್ನಡ ಸಾಹಿತ್ಯದಲ್ಲಿ ಕಾರಂತರೇ ಮೊದಲು ಬರೆದವರಲ್ಲ. ಕನ್ನಡದ ಮೊತ್ತಮೊದಲ ಸಾಮಾಜಿಕ ಕಾದಂಬರಿ ಗುಲವಾಡಿ ವೆಂಕಟರಾಯರ ‘ಇಂದಿರಬಾಯಿ’ (೧೮೯೯) ಕಾದಂಬರಿಯಲ್ಲಿಯೂ ಭಂಡ, ಲೋಲುಪ ಮಠಾಧಿಪತಿ ಚಂಚಲ ನೇತ್ರ ಶ್ರೀಪಾದಂಗಳು ಎಂಬ ಸನ್ಯಾಸಿಯ ಚಿತ್ರಣವಿದೆ. ಕಾರಂತರು ‘ವಾಗ್ದೇವಿ’ ಕಾದಂಬರಿಯನ್ನು ಅವರ ಲೇಖಕ ಬದುಕಿನ ಪ್ರಾರಂಭದ ವರ್ಷಗಳಲ್ಲಿಯೆ ಓದಿದ್ದರು. (ಹುಚ್ಚು ಮನಸ್ಸಿನ ಹತ್ತು ಮುಖಗಳು, (೧೯೫೦), ಅ೯೬೫ರ ಮುದ್ರಣ, ಪುಟ ೩೫) ಮುಂದೆ ಶಿವರಾಮ ಕಾರಂತರು ಮತ್ತು ಪ್ರಗತಿಶೀಲ ಬರಹಗಾರರು ಅಂಥ ಬರವಣಿಗೆಯ ಪರಂಪರೆಯನ್ನೇ ಬೆಳೆಸಿದರು. ಅಂದರೆ ಅಭಿಪ್ರಾಯವಿಷ್ಟೆ ದೇವರನ್ನು ನಂಬದ ಕಾರಂತರಂಥವರೂ ದೇವರನ್ನು ನಂಬುವ ಇತರರೂ ನೀತಿಭ್ರಷ್ಟ ಸನ್ಯಾಸಿಗಳ ಬಗ್ಗೆ ಬರೆಯುತ್ತಲೇ ಬಂದಿದ್ದಾರೆ. ಸುಧಾರಣಾವಾದೀ ಮನೋಧರ್ಮದ ಅಥವಾ ನೈತಿಕ ಕಾಳಜಿಯ ಶುದ್ಧೀಕರಣಾಸಕ್ತ ಧೋರಣೆಯ ಅಂಥ ಬರವಣಿಗೆಗಳು ಕನ್ನಡದಲ್ಲಿ ಸಾಕಷ್ಟು ಬಂದಿವೆ. ಆದರೆ ಪುರೋಹಿತಶಾಹಿ ವ್ಯವಸ್ಥೆಯನ್ನೇ ಅವರಾರು ಪ್ರಶ್ನಿಸಿದಂತಿಲ್ಲ.

ಪುರೋಹಿತಶಾಹಿ ವ್ಯವಸ್ಥೆಯನ್ನೇ ಪ್ರಶ್ನಿಸಿದ ಕನ್ನಡ ಸಾಹಿತಿಗಳಲ್ಲಿ ಬಹುಶಃ ಮೊತ್ತ ಮೊದಲಿಗರು ಕುವೆಂಪು. ಕುವೆಂಪು ಅವರ ಅಧ್ಯಾತ್ಮಪರ ಅಥವಾ ಅಧ್ಯಾತ್ಮಾರಾಧಕ ದೃಷ್ಟಿ ಪ್ರತಿಪಾದನೆಯಲ್ಲಿಯ ನೈತಿಕ ನಿಷ್ಠೆಯ ಪ್ರಶ್ನೆಯೂ ಒಳಗೊಂಡಿದೆ. ಕುವೆಂಪು ನಿಲುವು ಸಂಸ್ಕೃತಿ ಚಿಂತನೆಯ ದೃಷ್ಟಿಯಿಂದ ಅಥವಾ ಸಂಸ್ಕೃತಿ ಪುನಾರಚನೆಯ ದೃಷ್ಟಿಯಿಂದ ಹೆಚ್ಚು ಮಹತ್ವದ್ದಾಗುತ್ತದೆ. ಅವರ ನಿಲುವು ನೀತಿ ನಿಷ್ಠೆಯ ಪ್ರಶ್ನೆ ಮಾತ್ರವೇ ಆಗದೆ ತಾತ್ವಿಕ ಚಿಂತನೆಯ ನೆಲೆಯ ಪ್ರಶ್ನೆಯೂ ಆಗುತ್ತದೆ. ಕಾರಂತರು ಸಾಧು ಸನ್ಯಾಸಿಗಳ ಬಗ್ಗೆ ಬರೆದಿರುವಲ್ಲೆಲ್ಲ ಅವರ ನೀತಿ ಭ್ರಷ್ಟತೆಯ ವಿಷಯಕ್ಕೇ ಸೀಮಿತವಾಗಿರುವುದರಿಂದ ಧರ್ಮ, ದೇವರು, ಅಧ್ಯಾತ್ಮ ಕುರಿತ ತಾತ್ವಿಕ ಚಿಂತನೆಯ ನೆಲೆಯ, ಸಂಸ್ಕೃತಿ ಚಿಂತನೆಯ ನೆಲೆಯ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ: ಆಳವಾಗಿ ಪರಿಶೀಲಿಸುವುದಿಲ್ಲ.

ಸಾಧು ಸನ್ಯಾಸಿಗಳು, ಮಠಾಧಿಪತಿಗಳು ಮತಧಾರ್ಮಿಕ ನಂಬಿಕೆ, ಅಚಾರ ವಿಚಾರಗಳಿಗೆ ಸಂಬಂಧಿಸಿದಂತೆ ಶ್ರದ್ಧಾನಿಷ್ಠೆಗಳಿಂದ ನಡೆದುಕೊಳ್ಳುವವರಾದರೆ ಕಾರಂತರಿಗೆ ಅವರೊಂದಿಗೆ ತಾತ್ವಿಕ ಜಗಳವೇನಿಲ್ಲ. ಕಾರಂತರು ಅವರ ಕಾದಂಬರಿಗಳಲ್ಲಿ ಮೇಲಿಂದ ಮೇಲೆ ಬರುವ ಮುದುಕಿಯರನ್ನು ಮೆಚ್ಚಿ, ಒಪ್ಪಿ ಚಿತ್ರಿಸುವಂತೆ ಅವರನ್ನೂ ಚಿತ್ರಿಸಬಹುದಾದವರು, ಅವರವರ ನಂಬಿಕೆ ಅವರವರಿಗೆ ಎಂಬ ಉದಾರವಾದೀ ದೃಷ್ಟಿ ತಳೆಯಬಹುದಾದವರು. ಸಂಸ್ಕೃತಿ ಪುನಾರಚನೆಗೆ ಸಂಬಂಧಿಸಿದಂತೆ ಆಸ್ತಿಕ ಅಧ್ಯಾತ್ಮವಾದಿಯಾದ ಕುವೆಂಪು ಅವರೇ ಕಾರಣವಾದಿಯಾದ ಕಾರಂತರಿಗಿಂತ ಈ ವಿಷಯದಲ್ಲಿ ಹೆಚ್ಚು ವಾಸ್ತವವಾದಿ, ಹೆಚ್ಚು ಚಲನಶೀಲ ಚಿಂತಕರಾಗಿ ಕಾಣಿಸುತ್ತಾರೆ. ಕುವೆಂಪು ನಂಬಿರುವ ಭಗವದಿಚ್ಛೆ, ವಿಧಿ, ಜನ್ಮಾಂತರ, ಪರೋಕ್ಷಜ್ಞಾನ, ಪ್ರಾರ್ಥನೆಯ ಮಹಿಮೆಗಳ ಬಗೆಗಿನ ನಂಬಿಕೆಯನ್ನು ಒಳಗೊಳ್ಳುವ ಅಧ್ಯಾತ್ಮ ತತ್ವವನ್ನು, ಅಧ್ಯಾತ್ಮ ಪರಿಕಲ್ಪನೆಯನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಾಗದ, ಮುಜುಗರ ಪಡುವ ನನ್ನಂಥವರಿಗೂ ಕುವೆಂಪು ಅವರ ಪುರೋಹಿತಶಾಹಿ ವಿರೋಧಿ ನಿಲುವು ಸಂಸ್ಕೃತಿ ಚಿಂತನೆಯ ದೃಷ್ಟಿಯಿಂದ ಸಂಸ್ಕೃತಿ ಪುನಾರಚನೆಯ ಗ್ರಹಿಕೆ, ತಿಳಿವಿನ ದೃಷ್ಟಿಯಿಂದ ಕಾರಂತರ ದೃಷ್ಟಿಗಿಂತ ಹೆಚ್ಚು ಮೌಲಿಕವಾದದ್ದು, ಎಂದು ಅನಿಸುವುದಕ್ಕೆ ಕಾರಣವೇನು? ಈ ವಿಷಯವಾಗಿ ಒಂದು ಚರ್ಚೆ, ಚಿಂತನೆ ಬೆಳಸಬೇಕಾದ ಅಗತ್ಯವಿದೆ. ಅದು ಬೇರೊಂದು ಲೇಖನದ ಅಥವಾ ಉಪನ್ಯಾಸದ ವಿಷಯವೇ ಆಗಬೇಕಾದೀತು.