ಕಾರಂತರು ಅಧ್ಯಾತ್ಮ, ಸನ್ಯಾಸಿಗಳ ಬಗ್ಗೆ ತೋರುವಂಥ ಅಸಹೆನ, ನಿಷ್ಠುರ ವಿರೋಧ ಇವುಗಳನ್ನು ದೇಶದ ರಾಜಕಾರಣ, ರಾಜಕಾರಣಿಗಳ ಬಗ್ಗೆ ಕೂಡ ತೋರಿಸುತ್ತ ಬಂದವರು. ರಾಜಕೀಯ ವಸ್ತು ವಿಷಯಗಳನ್ನು ಕುರಿತೇ ಕೆಲವು ಕಾದಂಬರಿಗಳನ್ನು ಅವರು ಬರೆದಿದ್ದಾರೆ. ಇತರ ಕೆಲವು ಕಾದಂಬರಿಗಳಲ್ಲಿಯೂ ರಾಜಕಾರಣ, ರಾಜಕಾರಣಿಗಳನ್ನು ಕುರಿತ ಪ್ರಸ್ತಾಪ ಬರುವುದುಂಟು. ರಾಜಕೀಯ ವಸ್ತು ವಿಷಯಗಳ ಪ್ರಸ್ತಾಪ ಪ್ರಧಾನವಾಗಿಯೊ ಅನುಷಂಗಿಕವಾಗಿಯೊ ಇರುವ ಕಾದಂಬರಿಗಳೆಂದು ‘ಮರಳಿ ಮಣ್ಣಿಗೆ’, ‘ಔದಾರ್ಯದ ಉರುಳಲ್ಲಿ’ ‘ಮುಗಿಯದ ಯುದ್ಧ’, ‘ಜಾರುವ ದಾರಿಯಲ್ಲಿ’, ‘ಗೊಂಡಾರಣ್ಯ’, ‘ಸಮೀಕ್ಷೆ’, ‘ಆಳ-ನಿರಾಳ’, ‘ಉಕ್ಕಿದ ನೊರೆ’, ‘ಮೂಜನ್ಮ’, ‘ಅದೇ ಊರು, ಅದೇ ಮರ’, ‘ನಾವು ಕಟ್ಟಿದ ಸ್ವರ್ಗ’, ‘ಗೆದ್ದ ದೊಡ್ಡಸ್ತಿಕೆ’, ‘ನಷ್ಟ ದಿಗ್ಗಜಗಳು’, ಇವುಗಳನ್ನು ಹೆಸರಿಸಬಹುದು.

ಕಾರಂತರು ೧೯೨೦ರ ಗಾಂಧೀಜಿ ಮತ್ತು ರಾಷ್ಟ್ರೀಯ ಕಾಂಗ್ರೆಸ್ಸು ಅಸಹಕಾರ ಚಳವಳಿಗೆ ತೊಡಗಿದ ಕಾಲದಿಂದಲೂ ದೇಶದ ರಾಜಕೀಯದ ಬಗ್ಗೆ ಆಸಕ್ತಿ ತಳೆದವರು. ಎಳೆಯ ವಯಸ್ಸಿನ ಗಾಂಧೀಭಕ್ತಿ, ಬಾವುಕ ದೇಶಭಕ್ತಿಯ ಕಾಲವನ್ನು ಬಿಟ್ಟರೆ ಮುಂದಿನ ಸುಮಾರು ಮುಕ್ಕಾಲು ಶತಮಾನದ ಕಾಲಮಾನದಲ್ಲಿ ಕಾರಂತರು ದೇಶದ ರಾಜಕಾರಣ, ರಾಜಕಾರಣಿಗಳ ಬಗ್ಗೆ ಕಟುವಿಮರ್ಶಕರಾಗಿದ್ದವರು. ಸ್ವಾತಂತ್ರ್ಯಪೂರ್ವದಲ್ಲಿಯೂ ಗಾಂಧೀಜಿಯವರನ್ನು ಕೂಡ ವಿಮರ್ಶಾತ್ಮಕವಾಗಿ ಅವರು ನೋಡುತ್ತ ಬಂದವರು. ಭಾರತೀಯತೆಯ ಹೆಸರಿನಲ್ಲಿ ವೈದಿಕ ಧರ್ಮದ ಪ್ರಾಚೀನ ಸಂಸ್ಕೃತಿಯನ್ನು ವೈಭವೀಕರಿಸುತ್ತಿದ್ದುದನ್ನೂ ಒಪ್ಪದಿದ್ದವರು. ಗಾಂಧೀಜಿ ಮತ್ತು ರಾಷ್ಟ್ರೀಯ ಕಾಂಗ್ರೆಸ್ಸಿನ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟದಿಂದ ಬ್ರಿಟಿಷರು ದೇಶಬಿಟ್ಟು ತೊಲುಗುವಂತಾಗಿ ದೇಶಕ್ಕೆ ಸ್ವಾತಂತ್ರ್ಯ ಬಂತು ಎಂಬುದನ್ನು ಒಪ್ಪದೆ, ಬ್ರಿಟಿಷ್ ಸಾಮ್ರಾಜ್ಯಶಾಹಿ ಎದುರಿಸುವಂತಾದ ಇತರ ಜಾಗತಿಕ ವಿದ್ಯಮಾನಗಳ ಪರಿಣಾಮವೇ ಮುಖ್ಯವಾಗಿ ಬ್ರಿಟಿಷರು ಭಾರತ ಬಿಟ್ಟು ತೊಲಗುವುದಕ್ಕೆ ಕಾರಣವಾಯಿತೆಂದು ಅವರು ವ್ಯಾಖ್ಯಾನಿಸುತ್ತಿದ್ದವರು. ಇದೇ ಮಂಗಳೂರಿನಲ್ಲಿಯೇ ನಾನು ಕೇಳಿದ ಅವರ ಕೊನೆಯ ಭಾಷಣದಲ್ಲಿಯೂ ಕಾರಂತರು ಈ ನಿಲುವನ್ನೇ ಬಲವಾಗಿ ಪ್ರತಿಪಾದಿಸಿದ್ದರು.

ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯದ ಬಗ್ಗೆಯಂತೂ ಕಾರಂತರು ಉದ್ವಿಗ್ನತೆ, ಕಳವಳದಿಂದ ವಿಮರ್ಶೆ, ಟೀಕೆ ಮಾಡುತ್ತ ಬಂದವರು. ಆಳುವ ಕಾಂಗ್ರೆಸ್ಸು, ಆಳಿದ ಜವಹರಲಾಲ್ ನೆಹರೂ, ಇಂದಿರ ಗಾಂಧಿ, ಮೊದಲಾದವರ ಆಡಳಿತ ವೈಖರಿ, ದೇಶಕಟ್ಟುವ ಅವರ ರಾಜಕೀಯ ಕಾರ್ಯಕ್ರಮಗಳು, ನೆಹರೂ ವಿದೇಶಾಂಗ ನೀತಿ ಇತ್ಯಾದಿಗಳ ಬಗ್ಗೆ ಅವರು ನಿಷ್ಠುರ ವಿಮರ್ಶಕರಾಗಿದ್ದರು. ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹೇರಿದ್ದ ಕಾಲದಲ್ಲಿ ಅದಕ್ಕೆ ಪ್ರತಿಭಟನೆಯಾಗಿ ‘ಪದ್ಮಭೂಷಣ’ ಪ್ರಶಸ್ತಿಯನ್ನು ರಾಷ್ಟ್ರಪತಿಗೆ ಹಿಂತಿರುಗಿಸುವಂಥ ಧೀರ ನಿಲುವು ತಳೆದವರು. ಒಟ್ಟಿನಲ್ಲಿ ದೇಶದ ಹಿತದ ಬಗೆಗಿನ ಅವರ ತೀವ್ರ ಕಳಕಳಿ, ದೇಶದ ರಾಜಕಾರಣದ ಬಗೆಗಿನ ಅವರ ಗಂಭೀರ ಆಸಕ್ತಿ, ಯಾವ ಬಗೆಯ ವೈಯಕ್ತಿಕ ಆಸೆ ಲಾಭಗಳ ಮೇಲೆಯೂ ದೃಷ್ಟಿ ಇಟ್ಟುಕೊಳ್ಳದ ಅವರ ನೇರ, ಧೀರ ದನಿಯ ಪ್ರಾಮಾಣಿಕತೆ ಪ್ರಶ್ನಾತೀತವಾದದ್ದು.

ರಾಜಕೀಯ ಕುರಿತ ಕಾರಂತರ ದೃಷ್ಟಿ ಮೂಲತಃ ನೈತಿಕ ನಿಷ್ಠೆಯದು; ವ್ಯಕ್ತಿಶೀಲ ಶುಭ್ರತೆಯ ಬಗ್ಗೆ ವಿಶೇಷ ಒತ್ತುಕೊಂಡುವಂಥದು. ದೀರ್ಘಕಾಲದ ವೈಯಕ್ತಿಕ ಬದುಕಿನಲ್ಲಿಯೂ ದೃಢನಿಷ್ಠೆಯಿಂದ ಅದನ್ನು ಪಾಲಿಸಿಕೊಂಡು ಬಂದ ಅವರ ಪ್ರಾಮಾಣಿಕತೆ ಉನ್ನತ ಮಟ್ಟದದು. ಸ್ವಂತದ ಬದುಕಿಗೂ ಬರವಣಿಗೆಗೂ ಅವಿನಾಸಂಬಂಧದ ಶ್ರುತಿ ಕಾಪಾಡಿಕೊಳ್ಳಲು ನಿರಂತರ ಎಚ್ಚರವಹಿಸಿದ ಎತ್ತರದ ಸಾಂಸ್ಕೃತಿಕ ವ್ಯಕ್ತಿತ್ವ ಅವರದು. ‘ರಾಜಕೀಯದಲ್ಲಿ ಪ್ರಾಮಾಣಿಕತೆಯನ್ನು ಬಯಸಿದರೆ ಸಹರಾ ಮರುಭೂಮಿಯಲ್ಲಿ ಓಯಸಿಸ್ ಹುಡುಕುವಷ್ಟು ಕಷ್ಟವಾದೀತು. ಮನುಷ್ಯ ಬಾಳಬೇಕಾದರೆ ಆ ಓಯಸಿಸ್ಸನ್ನು ಹುಡಕಲೇ ಬೇಕಲ್ಲ!!” (ಸ್ಮೃತಿ ಪಟಲದಿಂದ, ಸಂಪುಟ ಮೂರು, ಪುಟ ೧೦೩, ೧೯೭೯) ಎಂಬ ಅರಿವು, ನಿಷ್ಠೆ, ಪೌರ ಹೊಣೆಗಾರಿಕೆ ಕುರಿತ ಪ್ರಾಜ್ಞಪ್ರಜ್ಞೆಯ ಹಿನ್ನೆಲೆಯಲ್ಲಿಯೆ ದೇಶದ ರಾಜಕೀಯದ ಬಗ್ಗೆ ಕಾರಂತರು ಚಿಂತಿಸುತ್ತ, ಬರೆಯುತ್ತ ಬಂದವರು, ಆದ್ದರಿಂದ ಅವರ ನೈತಿಕ ನಿಷ್ಠೆಯ ಹಿಂದಿನ ಪ್ರಾಮಾಣಿಕತೆಯನ್ನೂ, ಅವರ ಶುಭ್ರ ಶೀಲವಂತಿಕೆಯನ್ನು ಪ್ರಶ್ನಿಸುವ ಮಾತೇ ಇಲ್ಲ.

“೧೯೫೨ ರಿಂದ ಮುಂದೆ ಇಂದಿನ ತನಕವೂ ನಾಡಿನ ಆರ್ಥಿಕ ಭವಿಷ್ಯ, ಸಂಪದಭಿವೃದ್ಧಿ, ಜನಗಳ ಹಿತ, ರಾಜಕೀಯದ ಶುಚಿಯಿಂದಲೇ ಉಳಿಯಬೇಕಾದದ್ದು, ಎಂಬ ಗಾಢ ಅರಿವು ನನಗಿದೆ. ಹಿಂದಿನಿಂದ ಇಂದಿನ ತನಕವೂ ಬಲು ಕುತೂಹಲದಿಂದ ಅದನ್ನು ಅಭ್ಯಸಿಸುತ್ತ ಬಂದಿದ್ದೇನೆ. ಪಾಸ್ಚಾತ್ಯ ರಾಷ್ಟ್ರಗಳ ಮತ್ತು ಯುನೈಟೆಡ್ ಸ್ಟೇಟ್ಸಿನ ರಾಜಕೀಯ ಹವಾಮಾನವನ್ನು ಇಂದಿನ ತನಕ ಸ್ಥೂಲವಾಗಿ ಪರಿಶೀಲಿಸುತ್ತ ಬಂದಿದ್ದೇನೆ. ಅಲ್ಲಿನ ಜನಗಳು, ಪತ್ರಿಕೆಗಳು ಆ ಬಗ್ಗೆ ಎಚ್ಚು ಎಚ್ಚರ ತಾಳಿವೆ ಎಂಬುದನ್ನು ಕಂಡಾಗ ನನಗೆ ವಿಸ್ಮಯವಾಗುತ್ತದೆ.” ಎಂದು ಕಾರಂತರು ಹೇಳಿದ್ದಾರೆ. (ಸ್ಮೃತಿಪಟಲದಿಂದ, ಸಂಪುಟ ಮೂರು ಪುಟ ೧೮೩, ೧೯೭೯)

ಪಾಶ್ಚಾತ್ಯ ರಾಷ್ಟ್ರಗಳ, ಯುನೈಟೆಡ್ ಸ್ಟೇಟ್ಸಿನ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಆಡಳಿತ ವ್ಯವಹಾರಗಳ ಬಗ್ಗೆ, ಜನತೆ ಹಾಗೂ ಪತ್ರಿಕೆಗಳು ಎಚ್ಚರ ತಾಳಿರುವ ಬಗ್ಗೆ ಕಾರಂತರಿಗೆ ವಿಸ್ಮಯ, ಪ್ರಶಂಸೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ಜನತೆ, ಪತ್ರಿಕೆಗಳು, ಆಡಳಿತ ವ್ಯವಹಾರಗಳು ಕೂಡ ಹಾಗೆ ಇದ್ದದ್ದಾದರೆ ಪ್ರಜಾಪ್ರಭುತ್ವದಲ್ಲಿ ಒಂದಿಷ್ಟು ಆಸೆ ಇನ್ನೂ ಉಳಿಯುತ್ತದೆ ಎಂಬುದು ಅವರ ಅಂಬೋಣ.

ಇಂಗ್ಲೆಂಡ್, ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಮೊದಲಾದ ಪಾಶ್ಚಾತ್ಯ ದೇಶಗಳು ಪ್ರಜಾಪ್ರಭುತ್ವ ವ್ಯವಸ್ಥೆ ಇಟ್ಟುಕೊಂಡೇ ಪ್ರಜಾಪ್ರಭುತ್ವದ ಜೀವತತ್ವಕ್ಕೆ ವಿರುದ್ಧವಾದ ವಸಾಹತುಶಾಹಿ, ಸಾಮ್ರಾಜ್ಯಶಾಹಿ, ರಾಜಕಾರಣದ ದುಷ್ಟರುಚಿ ಬೆಳೆಸಿಕೊಂಡದ್ದು, ಅಂಥ ಚರಿತ್ರೆಯನ್ನು ಬೆಳೆಸಿದ್ದು, ಬೆಳೆಸುತ್ತಿರುವುದು ಹೇಗೆ, ಏಕೆ? ಭಾರತದಲ್ಲಿ ಆದ ಸಂಸ್ಥಾನಗಳ ವಿಲೀನೀಕರಣದ ವಿಧಾನದ ಬಗ್ಗೆ ಟೀಕೆ ಮಾಡುವ, ರಾಜಮಹಾರಾಜರುಗಳ ‘ಪ್ರಿವಿಪರ್ಸ್ ರದ್ಧತಿ’ಯ ಬಗ್ಗೆ, ಭೂಸುಧಾರಣಾ ಕಾಯಿದೆಯ ಬಗ್ಗೆ, ಸಾಮಾಜಿಕ ನ್ಯಾಯದ ಕಾರ್ಯಕ್ರಮ, ಕಾರ್ಯಯೋಜನೆಗಳ ಬಗ್ಗೆ ವಿರೋಧ ವ್ಯಕ್ತಪಡಿಸುವ ಕಾರಂತರಿಗೆ ಅವರು ಮೆಚ್ಚುವ ಪ್ರಜಾಪ್ರಭುತ್ವ ರಾಷ್ಟ್ರಗಳ ಸಾಮ್ರಾಜ್ಯಶಾಹಿ ಬೆಳವಣಿಗೆ ಹಾಗೂ ಬೇರೆ ದೇಶದವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಆಕ್ರಮಣಶೀಲತೆ ಪ್ರಶ್ನೆಯಾಗಿ ಕಾಡಲಿಲ್ಲ, ಏಕೆ?>

ಕಾರಂತರು ಭಾರತದಲ್ಲಿ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಒಂದಿಷ್ಟೂ ಆಸೆ ಉಳಿದಿಲ್ಲ, ಎಂಬಂಥ ಮಾತುಗಳನ್ನು ಆಡುತ್ತಿದ್ದ ಕಾಲದಲ್ಲಿಯೆ ಸಮಸ್ತ ಮಾನವ ಕುಲಕ್ಕೇ ಭವಿಷ್ಯ ಇದೆಯೇ, ಎಂಬಂಥ ಪ್ರಶ್ನೆಯು ನೊಬೆಲ್ ಪ್ರಶಸ್ತಿ ಪಡೆದ ಬರ್ಟ್ರಾಂಡ್ ರಸೆಲ್‌ರಂಥ ಇಪ್ಪತ್ತನೆಯ ಶತಮಾನದ ಶ್ರೇಷ್ಠ ಚಿಂತಕರನ್ನು, ಮಹಾ ಮೇಧಾವಿಗಳನ್ನು ಕಾಡುತ್ತಿತ್ತಲ್ಲವೆ? ರಸೆಲ್‌ನ ‘Has Man A Future?’ (‘ಮನುಷ್ಯನಿಗೆ ಭವಿಷ್ಯ ಇದೆಯೆ?)ದಂಥ ಪುಸ್ತಕ ಅಂಥ ಆತಂಕದ ಫಲ. ಈ ಪ್ರಶ್ನೆ ಎದ್ದದ್ದು ಕಾರಂತರು ಹೆಸರಿಸಿರುವ ಪಾಶ್ಚಾತ್ಯಾ ರಾಷ್ಟ್ರಗಳ ‘ರಾಜಕೀಯ ಹವಾಮಾನ’ದ ಸಂದರ್ಭದಲ್ಲಿಯೆ, ಅಲ್ಲವೆ?

೧೯೧೯ ಏಪ್ರಿಲ್ ೧೩ ರಂದು ಜಲಿಯನ್ ವಾಲಾಬಾಗ್‌ನಲ್ಲಿ ಅಮಾಯಕ ನಿರಾಯುಧ ಜನರ ಮೇಲೆ ಪೂರ್ವ ಸೂಚನೆಯನ್ನೊ, ಎಚ್ಚರಿಕೆಯನ್ನೊ ನೀಡದೆ ಅನಿರ್ಬಂಧಿತ ಗುಂಡಿನ ಸುರಿಮಳೆ ಕರೆಯಲು ಆಜ್ಞೆ ಮಾಡಿ ಸರ್ಕಾರಿ ಲೆಕ್ಕದ ಪ್ರಕಾರವೇ ೩೭೯ ಜನರ ಘನಘೋರ ಹತ್ಯಾಕಾಂಡಕ್ಕೆ ಕಾರಣನಾದ ಜನರಲ್ ಡಯರ್‌ನ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಹಂಟರ್ ಆಯೋಗ, ಇಂಗ್ಲೆಂಡಿನ ಪ್ರಜಾಪ್ರಭುತ್ವದ ಆಡಳಿತ ಹೌಸ್ ಆಫ್ ಲಾರ್ಡ್ಸ್ ಯಾವ ನಿಲುವು ತಳೆದವು? ‘ಮಾರ್ನಿಂಗ್ ಪೋಸ್ಟ್’ ಎಂಬ ಲಂಡನ್ನಿನ ಪತ್ರಿಕೆ ಜನರಿಂದ ನಿಧಿಸಂಗ್ರಹಿಸಿ ಆ ಕಾಲದ ೨೬೦೦೦ ಪೌಂಡ್‌ಗಳನ್ನು ಜನರಲ್ ಡಯರ್‌ಗೆ ನೀಡಿ ಹೇಗೆ, ಎಂಥ ಪ್ರಶಂಸೆ, ಗೌರವ ಸೂಚಿಸಿತು? ಈ ಸಂಗತಿ ಮತ್ತು ವಿವರ ಕಾರಂತರಿಗೆ ಗೊತ್ತಿಲ್ಲದ್ದೇನಲ್ಲ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡಿನ ಪ್ರಜಾಪ್ರಭುತ್ವದ, ಅಲ್ಲಿನ ಜನತೆಯ, ಪತ್ರಿಕೆಗಳ ರಾಜಕೀಯ ಶುಚಿ ಮತ್ತು ಮಾನವೀಯ ನ್ಯಾಯ ಕುರಿತ ದೃಷ್ಟಿ, ನಿಲುವು ಯಾವ ಮಟ್ಟದ್ದಾಗಿತ್ತು?

ಇಂಥ ಎಷ್ಟೋ ಪ್ರಶ್ನೆಗಳನ್ನು ಕಾರಂತರು ಗಂಭೀರವಾಗಿ ಕೇಳಿಕೊಂಡಿದ್ದರೆ ಆ ರಾಷ್ಟ್ರಗಳ ‘ರಾಜಕೀಯದ ಶುಚಿಯ’ ಬಗ್ಗೆ ವಿಸ್ಮಯ, ಪ್ರಶಂಸೆ ಆ ಪ್ರಮಾಣದಲ್ಲಿ ಅವರಲ್ಲಿ ಉಂಟಾಗುತ್ತಿರಲಿಲ್ಲವೇನೊ ! “ರಾಜಕೀಯದಲ್ಲಿ ಪ್ರಾಮಾಣಿಕತೆಯನ್ನು ಬಯಸಿದರೆ ಸಹರಾ ಮರುಭೂಮಿಯಲ್ಲಿ, ಓಯಸಿಸ್ ಹುಡುಕುವಷ್ಟು ಕಷ್ಟವಾದೀತು” ಎಂಬ ಕಾರಂತರ ಮಾತು, ಅವರು ‘ವಿಸ್ಮಯ’ ಪಡುವ ಆ ಪಾಶ್ಚಾತ್ಯ ರಾಷ್ಟ್ರಗಳ ಮತ್ತು ಯುನೈಟೆಡ್ ಸ್ಟೇಟ್ಸಿನ ರಾಜಕೀಯಕ್ಕೂ ಅನ್ವಯಿಸುವ ಮಾತು ಎಂಬುದನ್ನು ಮರೆಯುತ್ತಿರಲಿಲ್ಲವೆಂದು ತೋರುತ್ತದೆ.

ನೈತಿಕ ನಿಷ್ಠೆ, ಶುಭ್ರ ಶೀಲವಂತಿಕೆಯ ಪ್ರಶ್ನೆ ಎಲ್ಲ ಕಾಲ, ದೇಶ, ಸಂಸ್ಕೃತಿ ಸಂದರ್ಭಗಳಿಗೂ ಸಂಬಂಧಿಸಿದ ಪ್ರಶ್ನೆ. ಅದನ್ನು ಕುರಿತ ಪರಿಕಲ್ಪನೆಯಲ್ಲಿ, ವ್ಯಾಖ್ಯಾನದಲ್ಲಿ ಭಿನ್ನತೆ, ವ್ಯತ್ಯಾಸ ಇರಬಹುದು. ಆದರೆ ಅದು ಸಾಮಾನ್ಯ ಸಾರ್ವತ್ರಿಕ ಸಾರ್ವಕಾಲಿಕ ಪ್ರಶ್ನೆ. ಅದು ಮನುಷ್ಯಕುಲದ ಚರಿತ್ರೆಯ ಉದ್ದಕ್ಕೂ ಮಾನ್ಯತೆ ಪಡೆದುಕೊಂಡು ಬಂದಿದೆ. ಮುಂದೆಯೂ ಮಾನ್ಯತೆ ಪಡೆದುಕೊಳ್ಳುವಂಥದು, ನಾಗರಿಕ ಸಮಾಜವು ಅದರ ಬಗ್ಗೆ ನಿಷ್ಠೆ ತೋರುವಂಥದಾಗಿರುತ್ತದೆ. ಅದರ ಬಗ್ಗೆ ನಿಷ್ಠೆ ತೋರಿಸದಿರುವ ಸಮಾಜ, ದೇಶ ಪತನಮುಖಿಯಾಗಿ ಅಧಃಪತನ ಹೊಂದುತ್ತದೆ. ಅದು ಚರಿತ್ರೆಯೆ ಸಾಬೀತುಮಾಡಿ ತೋರಿಸಿರುವ ಸತ್ಯ, ಕಾರಂತರು ಸನ್ಯಾಸ, ಅಧ್ಯಾತ್ಮ, ದೇಶದ ರಾಜಕಾರಣ ಇತ್ಯಾದಿಗಳ ಬಗ್ಗೆ ತೋರುವ ಅಸಹನೆ, ಕಳವಳ, ಆತಂಕ ಈ ಅರಿವಿನಿಂದ ಬಂದದ್ದು. ಸಮಾಜದ ಹಿತ, ದೇಶದ ಹಿತ, ಕಾಳಜಿ ಉಳ್ಳವರೆಲ್ಲ ಜನರ, ಜನಪ್ರತಿನಿಧಿಗಳ, ಆಳುವ ಹೊಣೆಗಾರಿಕೆ ಹೊತ್ತವರ ನೈತಿಕ ನಿಷ್ಠೆಯ ಬಗ್ಗೆ ಸದಾ ಎಚ್ಚರದ ವಿಮರ್ಶಕರಾಗಿರುವುದು ಸಹಜ; ಆಳುವ ಹೊಣೆಗಾರಿಕೆ ಹೊತ್ತವರ ನೈತಿಕ ನಿಷ್ಠೆಯ ಬಗ್ಗೆ ಸದಾ ಎಚ್ಚರದ ವಿಮರ್ಶಕರಾಗಿರುವುದು ಸಹಜ; ಅಗತ್ಯ. ಈ ವಿಷಯದಲ್ಲಿ ಕಾರಂತರಷ್ಟು, ಕಾರಂತರಂತೆ ಜಾಗೃತರಾಗಿದ್ದವರು ವಿರಳ, ಅಪರೂಪ.

ರಾಜಕೀಯದ ಶುಚಿ, ರಾಜಕೀಯದ ಹವಾಮಾನ ತೀರಾ ಕೆಟ್ಟಿದೆ; ಜನತೆಯ, ಜನಪ್ರತಿನಿಧಿಗಳ, ಅಧಿಕಾರವರ್ಗದವರ, ಇತರ ಎಲ್ಲ ಕ್ಷೇತ್ರಗಳವರ ‘ಶೀಲದೋಷ’ (Fault of Character’) ಭ್ರಷ್ಟಾಚಾರ ಮೀತಿಮೀರಿದೆ ಎಂಬ ಅಭಿಪ್ರಾಯದಲ್ಲಿ ಕಾರಂತರೊಂದಿಗೆ ಭಿನ್ನಾಭಿಪ್ರಾಯಕ್ಕೆ ಕಾರಣವೇ ಇಲ್ಲ. ಅದು ಸಾರ್ವತ್ರಿಕವಾಗಿ ಪ್ರಜ್ಞಾವಂತರೆಲ್ಲರ ಆತಂಕವೂ ಆಗಿದೆ. ಜನಸಾಮಾನ್ಯರೂ ಅಸಹಾಯಕರಾಗಿ ಅದರ ತಾಪ ಅನುಭವಿಸಲಾರದ, ಬಿಡಲಾರದ ಸ್ಥಿತಿಯಲ್ಲಿ ಇದ್ದಾರೆ. ಇಂಥ ಸ್ಥಿತಿ ದೇಶದಲ್ಲಿ ಇರುವುದರಿಂದ ರಾಜಕೀಯದಲ್ಲಿರುವ ಶೀಲದೋಷದ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಕಾರಂತರು ಎಷ್ಟು ಕಟುವಾಗಿ ಬರೆದರೂ, ಎಂಥ ವ್ಯಂಗ್ಯ ವಿಡಂಬನೆಯ ಧಾಟಿಯಲ್ಲಿ ಬರೆದರೂ, ಮೇಲಿಂದಮೇಲೆ ಬರೆಯುತ್ತಲೇ ಇದ್ದರೂ ಜನ ಓದುತ್ತ ಬಂದಿದ್ದಾರೆ. ಕಾರಂತರ ಶೀಲಶುಭ್ರತೆ ಉನ್ನತ ಮಟ್ಟದ್ದಾದ್ದರಿಂದ ದೇಶದ ರಾಜಕೀಯದ, ರಾಜಕಾರಣಿಗಳ ಶೀಲದೋಷದ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಅಂಥವರು ಹೇಳಬೇಕು, ಹೇಳುತ್ತಿರಬೇಕು ಎಂಬಂಥ, ಜನರ ನಿರೀಕ್ಷೆ, ಅಪೇಕ್ಷೆ ಕೂಡ ಅದಕ್ಕೆ ಇನ್ನೊಂದು ಕಾರಣವಾಗಿರಬಹುದು. ಕಾರಣ ಏನೇ ಇರಲಿ, ಕಾರಂತರ ರಾಜಕೀಯ ಚಿಂತನೆ, ‘ಗ್ರಹಿಕೆ’ (‘Understanding’) ಕುರಿತ ವಿಮರ್ಶೆ, ಚರ್ಚೆ ಮಾತ್ರ ಆಗಬೇಕಾದಷ್ಟು ಆಗಿಲ್ಲ.

ಇಂಗ್ಲೆಂಡ್, ಅಮೆರಿಕದಂಥ ದೇಶಗಳು ಪ್ರಜಾಪ್ರಭುತ್ವ ರಾಜ್ಯವ್ಯವಸ್ಥೆ ಕುರಿತಂತೆ ಕಾಲಮಾನದ ದೃಷ್ಟಿಯಿಂದ ಹೆಚ್ಚಿನ ಹಿರಿತನ ಇರುವಂಥವು; ಅನುಭವ ಇರುವಂಥವು. ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಇತರ ಜ್ಞಾನ-ವಿಜ್ಞಾನ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿರುವ ದೃಷ್ಟಿಯಿಂದ ಕೂಡ ಹೆಚ್ಚಿನ ಹಿರಿತನ ಇರುವಂಥವು; ಅನುಭವ ಇರುವಂಥವು. ಅವುಗಳನ್ನು ಮಾದರಿಯಾಗಿ ಸ್ವೀಕರಿಸಿ ಅವು ನಡೆದ ಮತ್ತು ನಡೆಯುತ್ತಿರುವ ದಾರಿದಿಕ್ಕುಗಳನ್ನು ಹಿಡಿದು ಅಭಿವೃದ್ಧಿಶೀಲ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ಸಾಗಿದರೆ ಚಿಂತೆಗೆ, ಆತಂಕಕ್ಕೆ ಕಾರಣವಿಲ್ಲ, ಎಂಬುದು ಕಾರಂತರ ದೃಷ್ಟಿ. ಹಾಗೆ ನಡೆಯುತ್ತಿಲ್ಲವಲ್ಲ, ಎಂಬುದು ಅವರ ಅಸಹನೆ, ಆತಂಕಕ್ಕೆ ಕಾರಣ.

ಕಾರಂತರು ಕಮ್ಯುನಿಸಂನ ಕಡು ವಿರೋಧಿಗಳು; ಸಮಾಜವಾದದ ಬಗ್ಗೆ ತೀವ್ರ ಅಸಹನೆ ಇರುವವರು. ಅವರು ಮೆಚ್ಚುವ, ವಿಸ್ಮಿತರಾಗುವ ಪಾಶ್ಚಾತ್ಯ ರಾಷ್ಟ್ರಗಳ, ಯುನೈಟೆಡ್ ಸ್ಟೇಟ್ಸಿನ ‘ರಾಜಕೀಯದ ಶುಚಿ’, ‘ರಾಜಕೀಯ ಹವಾಮಾನ’ ಕುರಿತ ದೃಷ್ಟಿ, ಧೋರಣೆಯ ನೆಲೆಯಿಂದಲೇ ಅವರ ಈ ವಿರೋಧ, ಅಸಹನೆ ಹುಟ್ಟಿರುವುದು ಸ್ಪಷ್ಟವಾಗಿದೆ. ಆದ್ದರಿಂದಲೇ ಸ್ವತಂತ್ರ ಭಾರತದ ರಾಜಕೀಯವು, ಅದರ ಆಡಳಿತವು ಪಂಡಿತ್ ಜವಾಹರಲಾಲ್ ನೆಹರೂ ಕಾಲದಿಂದ ಕಮ್ಯುನಿಸ್ಟ್ ರಾಷ್ಟ್ರಗಳೊಂದಿಗೆ-ಮುಖ್ಯವಾಗಿ ಸೋವಿಯಟ್ ರಷ್ಯಾದೊಂದಿಗೆ-ಬೆಳೆಸಿಕೊಂಡು ಬಂದ ಸಖ್ಯ ಹಾಗೂ ಸಮಾಜವಾದದ ಹೆಸರಿನಲ್ಲಿ ರೂಪಿತವಾಗಿ ಅನುಷ್ಠಾನಗೊಂಡು ಸರ್ಕಾರದ ಕಾರ್ಯಕ್ರಮ ಕಾರ್ಯ ಯೋಜನೆಗಳು-ಇವುಗಳ ಬಗ್ಗೆ ಕಾರಂತರ ಟೀಕೆ ಏರುದನಿಯಲ್ಲಿ ಅವರ ಬರವಣಿಗೆಯಲ್ಲಿ ಕೇಳಿಸುತ್ತಲೇ ಇರುತ್ತದೆ. ಭೂ ಮಾಲೀಕರು (‘ಗೊಂಡಾರಣ್ಯ’, ‘ಗೆದ್ದ ದೊಡ್ಡಸ್ತಿಕೆ’), ಉದ್ಯಮಪತಿಗಳು (‘ನಾವು ಕಟ್ಟಿದ ಸ್ವರ್ಗ’), ಮಾಜಿ ರಾಜಮಹಾರಾಜರುಗಳು (‘ಗೊಂಡಾರಣ್ಯ’, ‘ನಷ್ಟ ದಿಗ್ಗಜಗಳು’)- ಇವರುಗಳ ಹಿತಾಸಕ್ತಿಗೆ ವಿರೋಧವಾದ ಕಾಯ್ದೆ ಕಾನೂನುಗಳ ಬಗ್ಗೆ ಅಥವಾ ಅವರ ವಿರುದ್ಧರ ಪ್ರತಿಭಟನೆ ಮುಷ್ಕರಗಳ ಬಗ್ಗೆ ಕಾರಂತರಿಗೆ ಸಹಾನುಭೂತಿ ಇಲ್ಲ; ವಿರೋಧವಿದೆ. ಅವರು ಟೀಕಿಸುವ ಸರ್ಕಾರದ ವಿರುದ್ಧವೇ ಆದರೂ ನಡೆಯುವ ಮುಷ್ಕರ, ಮೆರವಣಿಗೆಗಳ ಬಗ್ಗೆ ಕಾರಂತರ ಟೀಕೆ ತೀಕ್ಷ್ಣವಾಗಿರುತ್ತದೆ. (‘ಆಳ ನಿರಾಳ’, ‘ನಾವು ಕಟ್ಟಿದ ಸ್ವರ್ಗ’)

ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಚಿಂತಕರಲ್ಲಿ, ಕ್ರಿಯಾಶೀಲ ರಾಜಕಾರಣಿಗಳಲ್ಲಿ ಕಾರಂತರ ಚಿಂತನೆಗೆ ಹತ್ತಿರವಾದವರು ರಾಜಾಜಿ ಎಂದು ಖ್ಯಾತರಾಗಿದ್ದ, ಕಾರಂತರ ಹಿರಿಯ ಸಮಕಾಲೀನರಾದ ಚಕ್ರವರ್ತಿ ರಾಜಗೋಪಾಲಾಚಾರಿಯವರು. ಅವರೂ ಕಾರಂತರಂತೆ ಕಮ್ಯುನಿಸಮ್ಮಿನ ಕಡು ವಿರೋಧಿಗಳು. ರಾಜಾಜಿಯವರು ಕಮ್ಯುನಿಸಮ್ಮಿಗೆ ಪರಮ ವಿರೋಧಿಯಾದ ಬಲಪಂಥೀಯ ರಾಜಕೀಯ ಪಕ್ಷವಾಗಿದ್ದ ‘ಸ್ವತಂತ್ರ ಪಕ್ಷದ’ ಸಂಸ್ಥಾಪಕರು; ಬಂಡವಾಳಶಾಹಿ ಆರ್ಥಿಕ ನೀತಿ, ಖಾಸಗೀಕರಣಗಳ ಪ್ರಬಲ ಪ್ರತಿಪಾದಕರು. ಕಾರಂತರಂತೆ ಪಾಶ್ಚಾತ್ಯ ರಾಷ್ಟ್ರಗಳ, ಯುನೈಟೆಡ್ ಸ್ಟೇಟ್ಸಿನ ರಾಜಕೀಯದ ಶುಚಿ, ರಾಜಕೀಯ ಹವಾಮಾನದ ಬಗ್ಗೆ ಅವರೂ ಅತಿಯಾದ ಒಲವು. ಪ್ರಶಂಸೆ ಇದ್ದವರು; ನೆಹರು ಮತ್ತು ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ತೀವ್ರ ಟೀಕಾಕಾರರಾಗಿದ್ದವರು. ಸ್ವತಂತ್ರ ಪಕ್ಷದ ಮುಖವಾಣಿಯಾಗಿದ್ದ ‘ಸ್ವರಾಜ್ಯ’ ಎಂಬ ಇಂಗ್ಲೀಷ್ ಪತ್ರಿಕೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ಆಡಳಿತದ ಮೇಲೆ ರಾಜಾಜಿ, ಎನ್.ಜಿ. ರಂಗಾ ಮೊದಲಾದವರ ತೀವ್ರತರವಾದ ಟೀಕಾ ಪ್ರಹಾರ ನಿರಂತರವಾಗಿ ನಡೆಯುತ್ತಲೇ ಇರುತ್ತಿತ್ತು. ಕಾರಂತರು ರಾಜಾಜಿಯವರ ‘ಸ್ವತಂತ್ರ್ಯ ಪಕ್ಷ’ದ ಪ್ರಚಾರ ಸಭೆಯಲ್ಲಿ ಭಾಷಣ ಮಾಡುವಷ್ಟು ಅದರೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದರು. ತುರ್ತುಪರಿಸ್ಥಿತಿಯ ಕಾಲದಲ್ಲಿ ಸಂವಿಧಾನಕ್ಕೆ ತಂದಿದ್ದ ೪೨ನೆಯ ತಿದ್ದುಪಡಿಯನ್ನು ಸಾರ್ವಜನಿಕವಾಗಿ ಪ್ರತಿಭಟಿಸಲು, ರಾಜಾಜಿಯವರ ಪ್ರೇರಣೆಯಿಂದಲೇ ಹುಟ್ಟಿಕೊಂಡಿದ್ದ ಸಂಸ್ಥೆಯಾದ ಅಖಿಲ ಭಾರತ ಎಗ್ರಿಕಲ್ಚರಲ್ ಫೆಡರೇಷನ್ ನಡೆಸಿದ ಸಮ್ಮೇಳನದ ಸ್ವಾಗತಾಧ್ಯಕ್ಷ ಭಾಷಣವನ್ನೂ ಕಾರಂತರು ಮಾಡಿದ್ದರು. ಆ ಕಾಲದಲ್ಲಿ ರಾಜಾಜಿಯವರು ಬದುಕಿರಲಿಲ್ಲ.

ತುರ್ತುಪರಿಸ್ಥಿತಿಯ ಕರಾಳ ಕಾಲದಲ್ಲಿ ಸರ್ಕಾರದ ನಿಲುವನ್ನು ಪ್ರಶ್ನಿಸುವಂಥ ಯಾವುದೇ ಸಮ್ಮೇಳನ ಆಯೋಜಿಸುವುದಕ್ಕೆ, ಹಾಗೆ ಮುಂದಾಳಾಗಿ ನಿಂತು ಭಾಗವಹಿಸುವುದಕ್ಕೆ ಎಂಟೆದೆಯೆ ಬೇಕಾಗಿತ್ತು. ಕಾರಂತರು ಅಂಥ ಅಸಾಧಾರಣ ಧೈರ್ಯ ತೋರಿಸಿದ್ದರು.

ವಿರೋಧಿಸಲೇಬೇಕಾದಂಥ ಎಷ್ಟೋ ಅಂಶಗಳು ಆ ತಿದ್ದುಪಡಿಯಲ್ಲಿದ್ದವು, ಎಂಬುದು ನಿಜ. ತುರ್ತುಪರಿಸ್ಥಿತಿ ಹೇರಿದ ಬಗ್ಗೆ, ಸಂವಿಧಾನಕ್ಕೆ ತಿದ್ದುಪಡಿ ತಂದ ಕಾಲಸಂದರ್ಭ, ಅದನ್ನು ಹೇರುತ್ತಿರುವ ರೀತಿ ಇವುಗಳ ಬಗ್ಗೆ ತೀವ್ರ ವಿರೋಧದ ನಿಲುವು ಉಳ್ಳವರಿಗೂ ಆ ತಿದ್ದುಪಡಿಯಲ್ಲಿ ಕೆಲವು ಅಂಶಗಳು ವಿರೋಧಿಸಬೇಕಾದವಲ್ಲ ಎಂದು ಅನಿಸಿದ್ದೂ ಉಂಟು. ತುರ್ತುಪರಿಸ್ಥಿತಿಯ ಆನಂತರದ ಕಾಲದಲ್ಲಿ ಜನತಾ ಸರ್ಕಾರ ೧೯೭೭ರಲ್ಲಿ ಅಧಿಕಾರಕ್ಕೆ ಬಂದಾಗ ಆ ತಿದ್ದುಪಡಿಯಲ್ಲಿದ್ದ ಎಷ್ಟೋ ಅಂಶಗಳನ್ನು ತೆಗೆದುಹಾಕಲಾಯಿತು. ನಮ್ಮ ಸಂವಿಧಾನವನ್ನು ‘ಸಂಪೂರ್ಣ ಧ್ವಂಸ’ ಮಾಡಿದ್ದೆಂದು ಕಾರಂತರು ಹೇಳಿರುವ (ಸ್ಮೃತಿಪಟಲದಿಂದ, ಮೂರನೆಯ ಸಂಪುಟ. ೧೦೮) ಅದೇ ೪೨ನೆಯ ತಿದ್ದುಪಡಿಯಲ್ಲಿ ಸಂವಿಧಾನದ ‘ಪ್ರಿಯಾಂಬಲ್’ (ಪ್ರಸ್ತಾವನೆ)ಗೆ ‘ಸೋಷಿಯಲಿಸ್ಟ್’, ‘ಸೆಕ್ಯುಲರ್’ ಎಂಬೆರಡು ಪದಗಳ ಸೇರ್ಪಡೆಯೂ ಆಗಿತ್ತು. ಮುಂದೆಯೂ ಕೂಡ ಅದು ಇರುವುದು ಅಗತ್ಯ ಎಂದು ಭಾವಿಸಿದ್ದರಿಂದ ಅವುಗಳನ್ನು ಈವರೆಗೂ ಉಳಿಸಿಕೊಂಡು ಬರಲಾಯಿತಲ್ಲವೆ? “ಕಾರಂತರು ಕಮ್ಯೂನಿಸಂ ಮಾತ್ರವಲ್ಲ ಸಮಾಜವಾದದ ಎಲ್ಲ ಛಾಯೆಗಳನ್ನು ವಿರೋಧಿಸುವವರೆ, ಕೆಂಪು, ನಸುಗೆಂಪು, ಗುಲಾಬಿ ಇತ್ಯಾದಿ ಯಾವ ಭೇದವನ್ನೂ ಅವರು ಎಣಿಸುವುದಿಲ್ಲ.” (ಜಿ. ರಾಜಶೇಖರ, ‘ಕಾರಂತರು ಮತ್ತು ಕಮ್ಯುನಿಸ್ಟರು’ ೧೯೭೮) ಕಾರಂತರು ಈ ಸೇರ್ಪಡೆಯನ್ನೂ ಬಹುಶಃ ಒಪ್ಪಿರಲಿಲ್ಲ.

ಕಾರಂತರು ಸ್ವಾಗತಾಧ್ಯಕ್ಷರಾಗಿದ್ದ ಆ ಸಮ್ಮೇಳನದಲ್ಲಿ ಖಂಡಿಸಿದ ಮುಖ್ಯ ಅಂಶಗಳಲ್ಲಿ ಭೂವಿತರಣಾ ನೀತಿಗೆ ಸಂಬಂಧಿಸಿದ್ದೂ ಇತ್ತು ಎಂಬುದು ಕೂಡ ಇಲ್ಲಿ ಗಮನಿಸಬೇಕಾದ ಸಂಗತಿ. ಏಕೆಂದರೆ ಕಾರಂತರು ತೀವ್ರವಾಗಿ ಮತ್ತು ನಿರಂತರವಾಗಿ ಟೀಕಿಸುತ್ತ ಬಂದ, ಸರ್ಕಾರದ ರಾಜಕೀಯ ನೀತಿಗಳಲ್ಲಿ ಭೂಸುಧಾರಣಾ ನೀತಿಯೂ ಒಂದು. ಭೂ ಸುಧಾರಣಾ ಕುರಿತಂಥ ಕಾರಂತರ ನಿಲುವನ್ನು ಪ್ರಶ್ನಿಸುವ ವಿಮರ್ಶಕರಿಗೆ ‘ನಾವು ಕಟ್ಟಿದ ಸ್ವರ್ಗ’ (೧೯೮೦) ಕಾದಂಬರಿಯ ‘ಮುನ್ನುಡಿ’ಯಲ್ಲಿ ಅವರು ನೀಡಿರುವ ಉತ್ತರ, ವಿವರಣೆಯ ಕೆಲವು ವಾಕ್ಯಗಳನ್ನು ಇಲ್ಲಿ ಉದ್ಧರಿಸುತ್ತೇನೆ: “…..ಉಳುವವನೇ ಹೊಲದೊಡೆಯನಾಗಬೇಕೆಂಬ ಧೋರಣೆಯ ವಿಚಾರದಲ್ಲಿ. ಸಮಾಜದಲ್ಲಿ ಭೂಸಂಪತ್ತನ್ನು ಇರಿಸಿಕೊಳ್ಳುವುದಾಗಲೀ, ಇತರರ (ಇತರ?) ಸಂಪತ್ತನ್ನು ಗಳಿಸುವುದಾಗಲಿ ಅಪರಾಧವೆಂದು ನನ್ನಂಥವನು ತಿಳಿದಿಲ್ಲ……. ‘ಪಾವುಲನಿಗೆ ದಾನ ಮಾಡಲಿಕ್ಕೆ ಪೀಟರ್‌ನಿಂದ ಕಿತ್ತುಕೊಳ್ಳುವುದು’ ದರೋಡೆ. ಅದು ಸಮಾಜವಾದವಲ್ಲ. ಇದು ನನ್ನ ಭಾವನೆ. ಸಾಮಾಜಿಕ ನ್ಯಾಯ ಎಂಬುದಿದೆ. ಆ ನ್ಯಾಯವನ್ನು ಸಲ್ಲಿಸುವುದಕ್ಕೆ ಬೇಕಾದ ಹೊಣೆಯನ್ನು ಯಾವತ್ತೂ ಸಮಾಜ ನಿರ್ವಹಿಸಬೇಕು. ನಮಗೆ ಇಷ್ಟ ಬಂದವರಿಂದ ಹಣ ಕಿತ್ತು ಇಷ್ಟ ಬಂದವರಿಗೆ ಕೊಡಬಲ್ಲ ರೀತಿ ನೀತಿಯಲ್ಲ…. ಈ ದೇಶದಲ್ಲಿ ಜನಗಳ ಬಡತನ ಹೋಗಬೇಕಾದ್ದು ತೀರಾ ಅವಶ್ಯ. ಆದರೆ ಅದು ಭಿಕ್ಷೆ ನೀಡುವಿಕೆಯಿಂದ ಹೋಗಲಾರದು. ಜನಗಳಲ್ಲಿ ಸಂಪತ್ತು ಉತ್ಪಾದನೆಯ ಶಕ್ತಿಯನ್ನು ಬೆಳೆಯಿಸಿಯೇ ಹೋಗಬೇಕು ಎಂಬ ನಂಬಿಕೆ ನನ್ನದು ”

ನಿಮ್ನ ವರ್ಗದವರನ್ನು (ದಲಿತರನ್ನು) ‘ಮೇಲಕ್ಕೆ ತರುವುದಕ್ಕೆ’ ಸಂಬಂಧಿಸಿದಂತೆ ಕಾರಂತರು ಯೋಚಿಸುವ ರೀತಿ ಎಂಥದೆಂಬುದಕ್ಕೆ ಅವರ ಆತ್ಮ ಚರಿತ್ರಾತ್ಮಕ ಬರವಣಿಗೆ ‘ಸ್ಮೃತಿ ಪಟಲದಿಂದ’ (ಸಂಪುಟ : ಮೂರು, ೧೯೭೯) ಕೆಲವು ವಾಕ್ಯಗಳನ್ನೂ ಇಲ್ಲಿಯೆ ಉದ್ಧರಿಸುತ್ತೇನೆ :

:”ನಿಮ್ನ ವರ್ಗದ ಹೆಚ್ಚಿನ ಜನರು ವಿದ್ಯಾಭ್ಯಾಸ ಪಡೆದು ಸರ್ಕಾರಿ ಚಾಕರಿಯ ಕಡೆ ಮನಸ್ಸು ಮಾಡುತ್ತಿದ್ದಾರೆಯೇ ಹೊರತು, ಸ್ವಂತ ಕಾಲಿನ ಮೇಲೆ ನಿಂತು, ಏನಾದರೊಂದು ವೃತ್ತಿಯನ್ನು ಸಾಧಿಸಬೇಕೆಂಬ ಆಸೆ ತಾಳುವುದು ಕಾಣಿಸುತ್ತಲಿಲ್ಲ” (ಪುಟ-೪೨) “(ಕೊರಗರು) ಅನೇಕ ಬಾರಿ ಪರರು ಎಸೆವ ಎಂಜಲೆಲೆಗಳನ್ನು ಸಂಗ್ರಹಿಸಿ, ಅದರ ಅನ್ನವನ್ನು ತಂದು ಒಣಗಿಸಿ ಬದುಕಬೇಕು. ಸತ್ತ ಜಾನುವಾರುಗಳನ್ನು ತಿಂದು ಬದುಕಬೇಕು ಅಥವಾ ಬೇಡಿ ಬದುಕಬೇಕು. ಸರ್ಕಾರ ತಮಗೆ ಕೊಟ್ಟನೆಲದಲ್ಲಿ ಹೋಗಿ ಅವರು ನೆಲೆಸತೊಡಗಿದ್ದು ಜೀವನದ ಈ ಅಲ್ಪದಾರಿಯನ್ನು ಕಸಿದುಕೊಂಡಂತಾಗಿದೆ.” (ಪುಟ. ೪೩)

“ಯಾವುದಾದರೂ ಒಂದು ವೃತ್ತಿಯಿಂದ ಸಂಪಾದನೆ ಮಾಡುತ್ತ ಸ್ವಂತ ಕಾಲಿನ ಮೇಲೆ ನಿಂತು ಬದುಕಬಲ್ಲ ಅವಕಾಶವನ್ನು ಅವರ ಸಲುವಾಗಿ, ಪ್ರತಿಯೊಂದು ಸ್ಥಳದಲ್ಲಿಯೂ ಯೋಚಿಸದೆ ಹೋದರೆ, ಈ ಜನರನ್ನು ಈಗಿರುವ ಸ್ಥಿತಿಯಿಂದ ಮೇಲಕ್ಕೆ ತರಬಹುದೆಂಬ ಭರವಸೆ ನನಗಂತು ಕಾಣಿಸುವುದಿಲ್ಲ” (ಪುಟ.೪೩)

“ಹಿಂದುಳಿದ ಎಲ್ಲರಿಗೂ ಉದ್ಯೋಗವನ್ನು ದೊರಕಿಸಿಕೊಟ್ಟು ಸರಕಾರವೇ ಅವರ ಜೀವನದ ಯಾವತ್ತೂ ಹೊಣೆ ಹೊತ್ತೀತು, ಹೊರಬೇಕು ಎಂಬ ಯಾವ ಯೋಜನೆಯೂ ಯಶಸ್ವಿಯಾಗಲಾರದು.” (ಪು.೪೩)

“ಕೆಲವು ವರ್ಷಗಳೊಳಗಾಗಿ ಅವರಿಗೆ ಸ್ವತಂತ್ರ ಜೀವನದಲ್ಲಿ ಭರವಸೆ ಹೆಚ್ಚಿಸುವ ಅವಕಾಶವನ್ನು ಸಮಾಜವೋ, ಸರಕಾರವೋ ತೋರಿಸಬೇಕಾದುದು ಆದ್ಯ ಕರ್ತವ್ಯವಾಗಿದೆ” (ಪುಟ. ೪೩)

ಪ್ರಜಾಪ್ರಭುತ್ವದಲ್ಲಿ ಆಸೆ ಉಳಿಯುವುದಕ್ಕೆ ಸಂವಿಧಾನ ಶುಚಿಯಾಗಿರಬೇಕು, ಭದ್ರವಾಗಿರಬೇಕು, ಎಂದೂ ಅಂಬೇಡ್ಕರ್ ಮೊದಲಾದ ಧೀಮಂತ ನ್ಯಾಯವಾದಿಗಳು ರೂಪಿಸಿಕೊಟ್ಟ ಭಾರತದ ಸಂವಿಧಾನವನ್ನು ತಂದಿಟ್ಟುಕೊಂಡು ಓದಿ, ಅವರು ಸಂತೋಷಪಟ್ಟಿದ್ದರೆಂದೂ, ಹೆಮ್ಮೆಪಟ್ಟಿದ್ದರೆಂದೂ ಕಾರಂತರು ಹೇಳುತ್ತಾರೆ. (ಸ್ಮೃತಿ ಪಟಲದಿಂದ, ಸಂಪುಟ ಮೂರು, ಪುಟ ೧೦೪. ೧೯೭೯) ನೆಹರೂ ಕಾಲದಲ್ಲಿ ಮೊತ್ತ ಮೊದಲ ತಿದ್ದುಪಡಿಯ ಸೇರ್ಪಡೆ ಆಗುವ ಮೊದಲೇ ಸಾಮಾಜಿಕ ನ್ಯಾಯದ (‘ಸೋಷಿಯಲ್ ಜಸ್ಟಿಸ್’) ಪರಿಕಲ್ಪನೆಯನ್ನು ಆ ಸಂವಿಧಾನದಲ್ಲಿಯೇ ಅಳವಡಿಸಲಾಗಿತ್ತಲ್ಲವೆ? ಕಾನ್‌ಸ್ಟಿಟ್ಯುಯಂಟ್ ಅಸೆಂಬ್ಲಿಯ ಮುಕ್ತಾಯ ಭಾಷಣದಲ್ಲಿ ಡಾ. ಅಂಬೇಡ್ಕರ್ ಅವರು “Political democracy cannot last unless there lies at the base of it social democracy. What does social democracy mean? It means a way of life which recognises liberty, equality and fraternity which are not to be treated as separate items in a trinity. They form a union of trinity in the sense that to divorce one from the other is to defeat the very purpose of democracy. Liberty cannot be divorced from equality, equality cannot be divorced from liberty. Nor can liberty and equality be divorced from fraternity” ಎಂದು ಹೇಳಿದ್ದುಂಟು. ಅಲ್ಲವೆ? ಹಾಗಿದ್ದೂ ಕಾರಂತರು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಬಂದ ಸರ್ಕಾರದ ಕಾರ್ಯಕ್ರಮ, ಕಾರ್ಯಯೋಜನೆಗಳ ವಿಷಯದಲ್ಲಿ ಉದ್ದಕ್ಕೂ ಟೀಕೆ ಮಾಡುತ್ತ, ಅಸಹನೆ ತೋರುತ್ತ ಬಂದರು. ಈ ಟೀಕೆ, ಅಸಹನೆ ಇವು ಅನುಷ್ಠಾನ ಸಂದರ್ಭದ ಶೀಲದೋಷ ಅಥವಾ ಭ್ರಷ್ಟಾಚಾರಕ್ಕೆ ಮಾತ್ರ ಸಂಬಂಧಿಸಿದ್ದಾಗಿಲ್ಲ. ಅದು ಕಾರಂತರ ರಾಜಕೀಯ ಚಿಂತನೆಗೆ ಸಂಬಂಧಿಸಿದ ತಾತ್ವಿಕ ಭಿನ್ನಾಭಿಪ್ರಾಯದ ಮೂಲದಿಂದಲೇ ಮುಖ್ಯವಾಗಿ ಬಂದದ್ದಾಗಿ ಕಾಣಿಸುತ್ತದೆ.

ಸಂವಿಧಾನ ರಚಿತವಾದ ಹೊಸತರಲ್ಲಿ ಸಂವಿಧಾನದಲ್ಲಿ ಪ್ರಜೆಯ ಮೂಲಭೂತ ಹಕ್ಕುಗಳನ್ನು ಸ್ಪಷ್ಟಪಡಿಸಿ ಸಂವಿಧಾನ ರಚಿಸಿದವರು ಕಾಯ್ದಿಟ್ಟ ಬಗೆಯ ಬಗ್ಗೆ ಹೆಮ್ಮೆ ತಾಳಿದ್ದಾಗಿ ಹೇಳಿಕೊಂಡಿರುವ ಕಾರಂತರು ಸಂವಿಧಾನದ ಮೊತ್ತಮೊದಲ ತಿದ್ದುಪಡಿಯಿಂದ ತೊಡಗಿ “ಅಲ್ಲಿಂದ ತಿದ್ದುಪಡಿಗಳ ಮೇಲೆ ತಿದ್ದುಪಡಿಗಳು ಬರತೊಡಗಿ ಪ್ರಜೆಯ ಮೂಲಭೂತ ಹಕ್ಕು ನಾಡಿನ ಭೂತಗಳಿಗೆ ಬಲಿಯಾಯಿತು” (ಸ್ಮೃತಿಪಟಲದಿಂದ, ಸಂಪುಟ-ಮೂರು ಪುಟ ೧೦೪, ೧೯೭೯) ಎಂದು ಕೂಡ ಹೇಳಿದ್ದಾರೆ. ಅದನ್ನು ನೋಡಿದರೆ, ಕಾರಂತರ ಜಗಳವು ನೆಹರೂ ಮತ್ತು ನೆಹರೂ ಕಾಲದಿಂದ ನಡೆದು ಬಂದ ಕಾಂಗ್ರೆಸ್ ರಾಜಕೀಯದ ಶುಚಿ, ಕಾಂಗ್ರೆಸ್ ರಾಜಕೀಯ ಸೃಷ್ಟಿಸಿದ ರಾಜಕೀಯ ಹವಾಮಾನಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಸೀಮಿತವಾದದ್ದಲ್ಲ ಎನಿಸುತ್ತದೆ. ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಚಿಂತನೆ ಮತ್ತು ರಾಜಕೀಯದ ಚಲನೆಯ ರೀತಿ, ಸ್ವರೂಪದ ಬಗ್ಗೆಯೆ ಒಟ್ಟಿನಲ್ಲಿ ಇರುವ ಮೂಲಭೂತವಾದ ಅಸಮ್ಮತಿಯೆ, ವಿರೋಧವೆ ಕಾರಂತರ ಕಾದಂಬರಿಗಳಲ್ಲಿ, ಲೇಖನಗಳಲ್ಲಿ ವ್ಯಂಗ್ಯ, ವಿಡಂಬನೆ, ಟೀಕೆಗಳ ರೂಪದಲ್ಲಿ ವ್ಯಕ್ತವಾಗುತ್ತ ಬಂದಿದೆ ಎಂದು ಅನ್ನಿಸುತ್ತದೆ.

ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯದಲ್ಲಿ ಸಮಾಜವಾದ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸ್ವೋಪಜ್ಞ ಚಿಂತನೆಯ ನೆಲೆಯಲ್ಲಿ ಪ್ರತಿಪಾದಿಸುವುದರಲ್ಲಿ ಜನಪರ ಕಾರ್ಯಕ್ರಮ, ಕಾರ್ಯಯೋಜೆನಗಳನ್ನು ರೂಪಿಸಿ ಕಾರ್ಯರೂಪಕ್ಕೆ ತಂದಿದ್ದರೆ ಯಾವ ರಾಜಕೀಯ ಪಕ್ಷವೂ ಅಧಿಕಾರ ಪಡೆಯುವುದಾಗಲಿ, ಅಧಿಕಾರದಲ್ಲಿ ಮುಂದುವರಿಯುವುದಾಗಲಿ ಸಾಧ್ಯವೇ ಇಲ್ಲ ಎಂಬಂಥ ‘ರಾಜಕೀಯ ಹವಾಮಾನ’ವನ್ನು ಸೃಷ್ಟಿಸುವುದರಲ್ಲಿ ಅತ್ಯಂತ ಮುಖ್ಯ ಪಾತ್ರವಹಿಸಿದವರು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಲೋಹಿಯಾ. ಅವರಿಬ್ಬರೂ ಬದುಕಿದ್ದಾಗ ಮಾತ್ರವಲ್ಲ ಅವರುಗಳ ಮರಣಾನಂತರವೂ (ಕಾರಂತರ ಕೊನೆಗಾಲದವರೆಗೂ) ಅವರುಗಳ ರಾಜಕೀಯ ಚಿಂತನೆ ಭಾರತದ ರಾಜಕೀಯದ ಮೇಲೆ ಜೀವಂತ ಪ್ರಭಾವ ಬೀರುತ್ತ ಬಂದದ್ದನ್ನು ಕಾರಂತರು ಅರಿಯದವರೇನಾಗಿರಲಿಲ್ಲ. ಸಮಾಜವಾದದ ಬಗ್ಗೆ, ಸಾಮಾಜಿಕ ನ್ಯಾಯದ ಕಾರ್ಯಕ್ರಮ ಕಾರ್ಯಯೋಜನೆಗಳ ಬಗ್ಗೆ ವ್ಯಂಗ್ಯ, ವಿಡಂಬನೆಯ ದಾಟಿ-ಧೋರಣೆಯಲ್ಲಿ ಬರೆಯುತ್ತ ಬಂದ ಕಾರಂತರು ಎಲ್ಲಿಯೂ ಡಾ. ಅಂಬೇಡ್ಕರ್ ಮತ್ತು ಡಾ. ಲೋಹಿಯಾ ಅವರ ಚಿಂತನೆಗಳಿಗೆ ಗಂಭೀರವಾಗಿ ಮುಖಾಮುಖಿ ಆಗುವುದೇ ಇಲ್ಲ. ಕಾರಂತರು ಅವರು ಒಪ್ಪದ, ತೀವ್ರವಾಗಿ ವಿರೋಧಿಸುವ ಕಮ್ಯುನಿಸಮ್ಮಿನ ತತ್ವ ಸಿದ್ಧಾಂತಗಳಿಗೂ ಗಂಭೀರ ನೆಲೆಯಲ್ಲಿ ಮುಖಾಮುಖಿಯಾಗುವುದೇ ಇಲ್ಲ. ಏಕೆ?

ಡಾ. ಅಂಬೇಡ್ಕರ್, ಡಾ. ಲೋಹಿಯಾ ಅಂಥವರು ಸಮಾಜವಾದೀ ಚಿಂತನೆಯ ಬಗ್ಗೆ, ಅಂಥ ಕಾರ್ಯಕ್ರಮ, ಕಾರ್ಯಯೋಜನೆಗಳಿಗೆ ಸಂಬಂಧಿಸಿದಂತೆ ಜನಾಭಿಪ್ರಾಯವನ್ನು ರೂಪಿಸಿದ ಹಂತದಲ್ಲಿ ಅವುಗಳನ್ನು ತಮ್ಮ ಸರ್ಕಾರದ ಕಾರ್ಯಯೋಜನೆಯಾಗಿ ಮಾಡಿಕೊಳ್ಳುವ ತಂತ್ರವನ್ನು ಕಾಂಗ್ರೆಸ್ ಸರ್ಕಾರ ಮಾಡಿಕೊಂಡೇ ಬಂದಿದೆ. ಅಂಥ ಕಾರ್ಯಯೋಜನೆಗಳನ್ನು ನೆಹರೂ ಕಾಲದ ಆವಡಿ ಅಧಿವೇಶನದ (೧೯೫೫)) “ಸಮಾಜವಾದೀ ನಮೂನೆ ಸಮಾಜ” (Socialistic Pattern of Society), ಪ್ರಜಾಸತ್ತಾತ್ಮಕ ಸಮಾಜವಾದ (Democratic Socialism), ಇಂದಿರಾ ಗಾಂಧಿಯವರ ಕಾಲದ ‘ನಮ್ಮದೇ ಆದ ಛಾಪಿನ ಸಮಾಜವಾದ, (Our own brand of Socialism) (ಸ್ಟೇಟ್ಸ್‌ಮನ್ ಪತ್ರಿಕೆ ೨೫-೧೦-೨೯೭೯ ಪು: ೧ ಹಾಗೂ ೨೮-೧೦-೧೯೭೯ ಪು.೧) ಘೋಷಣೆಗಳಿಗೆ ಪರಿವರ್ತಿಸಿಕೊಂಡು ಕಾಂಗ್ರೆಸ್ ಅನುಷ್ಠಾನಗೊಳಿಸುತ್ತ ಬಂದದ್ದು ಎಲ್ಲರಿಗೂ ಗೊತ್ತಿರುವಂಥದು. ಅದನ್ನು ಡಾ. ಅಂಬೇಡ್ಕರ್/ಅಂಬೇಡ್ಕರ್ ವಾದಿಗಳು, ಡಾ. ಲೋಹಿಯಾ/ಲೋಹಿಯಾವಾದಿಗಳು ಯಾವಾಗಲೂ ಕಟುವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಆಗುತ್ತಿದ್ದ ಶೀಲದೋಷದ ಬಗ್ಗೆ ಅಂದರೆ ಭ್ರಷ್ಟಾಚಾರದ ಬಗ್ಗೆ ಕೂಡ ಅವರು ವಿರೋಧ, ಟೀಕೆ, ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ. ಆದರೆ ಅಂಬೇಡ್ಕರ್/ಅಂಬೇಡ್ಕರ್‌ವಾದಿಗಳೂ, ಲೋಹಿಯಾ/ಲೋಹಿಯಾವಾದಿಗಳೊ ಮಾಡುತ್ತಿದ್ದ ಟೀಕೆಗಳನ್ನೂ ಅವರು ಪ್ರತಿಪಾದಿಸುತ್ತ ಬಂದ ವಾದಗಳನ್ನೂ ರಾಜಕೀಯ ಚಿಂತನೆಗಳನ್ನೂ ಕಾರಂತರು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. ಅವರುಗಳ ವಾದವನ್ನು ಕಾರಂತರು ನೆಹರೂ, ಇಂದಿರಾ ಗಾಂಧಿಯವರ ‘ಸಮಾಜವಾದ’ದೊಂದಿಗೆ ಗುಂಡುಸುತ್ತಿ ಸರಳಗೊಳಿಸಿ ವ್ಯಾಖ್ಯಾನಿಸಿಕೊಳ್ಳುತ್ತ ಬಂದಂತೆ ಕಾಣುತ್ತದೆ. ಕಮ್ಯುನಿಸ್ಟರು ಮಾಡುತ್ತಿದ್ದ ಟೀಕೆ, ವಿರೋಧಗಳನ್ನು ಕೂಡ ಕಾರಂತರು ಗಂಭೀರವಾಗಿ ಪರಿಗಣಿಸಿದಂತೆ ತೋರುವುದಿಲ್ಲ.

೧೦

ಕಾರಂತರಂತೆ ಕವಿ ಗೋಪಾಲಕೃಷ್ಣ ಅಡಿಗರೂ ಕಾಂಗ್ರೆಸ್ಸಿನ ನೆಹರೂ, ಇಂದಿರಾಗಾಂಧಿ ಮೊದಲಾದವರ ರಾಜಕೀಯ ಚಿಂತನೆ, ಆಡಳಿತ ಶೈಲಿಯ ಬಗ್ಗೆ ವಿಮರ್ಶಕರಾಗಿದ್ದರು. ಅಡಿಗರು ಸ್ವಾತಂತ್ರ್ಯಪೂರ್ವದಲ್ಲಿ ಎಡಪಂಥೀಯ ಒಲವಿನ ಕವನಗಳನ್ನು ಬರೆದಿದ್ದರಾದರೂ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಕಮ್ಯೂನಿಸಮ್ಮಿನ ಕಡು ವಿರೋಧಿಯಾಗಿದ್ದರು. ಸಮಾಜವಾದದ ಬಗ್ಗೆ ಕೂಡ ಅವರು ಸಹಮತ ಉಳ್ಳವರಾಗಿರಲಿಲ್ಲ. ‘ಸಮಾಜವಾದ ತೊಣಚಿ’ (‘ಎಡ-ಬಲ’ ಕವನ ೧೯೬೩) ಎಂದು ಕರೆದದ್ದೂ ಉಂಟು. ಕಾರಂತರಂತೆ ಅವರು ವ್ಯಕ್ತಿವಾದಿಯಾಗಿದ್ದರು; ಖಾಸಗೀಕರಣದ ಪರವಾಗಿದ್ದರು. ಎಡಪಂಥೀಯ ಚಿಂತನೆ ವ್ಯಕ್ತಿ ಸ್ವಾತಂತ್ರ್ಯವನ್ನು ಹರಣಮಾಡುವಂಥದು. ಆದ್ದರಿಂದ ಪ್ರಜಾಪ್ರಭುತ್ವದ ಬಗ್ಗೆ, ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಂಬಿಕೆ ನಿಷ್ಠೆ ಇರುವವರು, ಸಾಹಿತಿ ಕಲಾವಿದರಾದವರು ಅದನ್ನು ವಿರೋಧಿಸಬೇಕೆಂಬ ಅಭಿಪ್ರಾಯದವರಾಗಿದ್ದರು. ಅದು ಅವರ ಕಾವ್ಯದಲ್ಲಿ ಮತ್ತು ‘ಮಣ್ಣಿನ ವಾಸನೆ’ ಲೇಖನ ಸಂಕಲನದ ಬರಹಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಅಡಿಗರೂ ಕಾರಂತರಂತೆ ಭಾರತದಲ್ಲಿ ಜನತಂತ್ರದ ಬಹುಮತಾಭಿಪ್ರಾಯದ ತೀರ್ಮಾನಕ ಶಕ್ತಿಯ ಬಗ್ಗೆ ಹೆದರಿಕೆ, ಸಿನಿಕ ಧೋರಣೆ ಉಳ್ಳವರಾಗಿದ್ದರು. (‘ಬಹುಮತ’ ಕವನ, ‘ಬತ್ತಲಾರದ ಗಂಗೆ’ ಸಂಕಲನ, ೧೯೮೩)

ನೆಹರೂ ಅವರ ‘ಅಲಿಪ್ತ’ ವಿದೇಶಾಂಗ ನೀತಿಯ ಬಗ್ಗೆ ಅಡಿಗರು ಕಾರಂತರಂತೆ ಬಹುಶಃ ಅವರಿಗಿಂತ ಹೆಚ್ಚು ತೀವ್ರ ಟೀಕಾಕಾರರಾಗಿದ್ದರು. “ಎರಡೂ ದೋಣಿಯ ಮೇಲೆ ಕಾಲನಿಟ್ಟು ಸಾಗುವ ಶೂರ, ಇಲ್ಲದ ತೃತೀಯ ಕ್ರಮಕ್ಕೆ ಠಾವೆಲ್ಲಂದು ಕುದಿವ ಕುವರ” ಎಂದು ನೆಹರೂ ಅವರನ್ನು, ದುರಂತದೆಡೆಗೆ ಮುನ್ನುಗ್ಗುತ್ತಿರುವ, ದೇಶವನ್ನು ಅತ್ತ ದೂಡುತ್ತಿರುವ ಎಳಸು, ಅಪ್ರಬುದ್ಧ, ನಾಟಕೀಯ ವ್ಯಕ್ತಿತ್ವದ ನಾಯಕನೆಂದೂ ‘ನೆಹರೂ ನಿವೃತ್ತರಾಗುವುದಿಲ್ಲ'(೧೯೫೮) ಎಂಬ ಅವರ ಕವನದಲ್ಲಿ ಗೇಲಿ-ಮಾಡಿದವರು. ಕಾರಂತರೂ ಭಾರತದ ರಾಜಕೀಯದ ಬಗ್ಗೆ ಬರೆದ ಕಾದಂಬರಿಗಳು ವ್ಯಂಗ್ಯ, ವಿಡಂಬನೆಯ ದನಿ-ಧಾಟಿಯವೇ ಆಗಿವೆ.

ಕಾರಂತರಂತೆ ಅಡಿಗರೂ ಕೂಡ ಸ್ವತಂತ್ರ ಪಕ್ಷಕ್ಕೆ ಒಲಿದಿದ್ದರು. ಮೈಸೂರಿನ ಪುರಭವನದ ಮೈದಾನದಲ್ಲಿ ಸ್ವತಂತ್ರ ಪಕ್ಷದ ಪ್ರಚಾರದ ಬಹಿರಂಗ ಸಭೆಯ ವೇದಿಕೆಯ ಮೇಲಿಂದ ರಾಜಾಜಿಯವರ ಭಾಷಣವನ್ನು ಆಶು ಭಾಷಾಂತರಿಸಿ ಹೇಳುವಷ್ಟು ಆ ಪಕ್ಷದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. (ನಾನು ಆ ಸಭೆಗೆ ಪ್ರತ್ಯಕ್ಷದರ್ಶಿಯಾಗಿದ್ದೆ). ಕಾರಂತರಂತೆ ಅಡಿಗರೂ ಚುನಾವಣೆಗೆ ಎರಡು ಸಲ ಸ್ಪರ್ಧಿಸಿದ್ದರು, ಸೋತಿದ್ದರು; ಒಮ್ಮೆ ಲೋಕಸಭೆಗೆ (೧೯೭೧), ಮತ್ತೊಮ್ಮೆ ವಿಧಾನಸಭೆಗೆ (೧೯೮೫).

ಅಡಿಗರ ರಾಜಕೀಯ ಚಿಂತನೆ, ನಿಲುವು ‘ಪ್ರತಿಗಾಮಿ’ ಎಂದು ಲೋಹಿಯಾವಾದಿ, ಅಂಬೇಡ್ಕರ್‌ವಾದಿ ಸಾಹಿತಿಗಳು, ವಿಮರ್ಶಕರು ತೀವ್ರವಾಗಿ ಟೀಕಿಸಿದರು. ಅಡಿಗರ ಸಾಮಾಜಿಕ ವಸ್ತು ವಿಷಯಗಳಿಗೆ ಸಂಬಂಧಿಸಿದ ಕವನಗಳಲ್ಲಿ ಪ್ರತಿಗಾಮಿ ಧೋರಣೆ ಕಾಣಿಸುತ್ತದೆ ಎಂದು ೧೯೭೨ರಷ್ಟು ಹಿಂದೆಯೇ ನಾನೂ ಹೇಳಿದ್ದುಂಟು. (ಸಮಕಾಲೀನ, ಪು. ೬೯ ಮತ್ತು ೭೨, ೧೯೭೩) ಕಾರಂತರು ಮತ್ತು ಅವರ ರಾಜಕೀಯ ಚಿಂತನೆ ಅಂಥ ತೀವ್ರ ಟೀಕೆಗೆ ಒಳಗಾಗಲಿಲ್ಲ. ಏಕೆ, ಎಂಬುದು ಕೇಳಬಹುದಾದ ಪ್ರಶ್ನೆ.

ಮಾರ್ಕ್ಸ್‌ವಾದಿ ಚಿಂತಕರೂ, ಸಾಹಿತ್ಯ ವಿಮರ್ಶಕರೂ ಆದ ಜಿ. ರಾಜಶೇಖರ ಅವರು ಕಾರಂತರ ರಾಜಕೀಯ ಚಿಂತನೆಯನ್ನು ಪ್ರತಿಗಾಮಿ ಎಂದು ಕರೆದದ್ದುಂಟು; ಆ ಬಗ್ಗೆ ಬರೆದದ್ದೂ ಉಂಟು. ಕಾರಂತ ಸಂದರ್ಶನ ಒಂದರಲ್ಲಿ ಆ ಬಗ್ಗೆ ಕಾರಂತರನ್ನು ಸಾಕಷ್ಟು ಪ್ರಶ್ನೆ ಕೇಳಿ ಜಗ್ಗಾಡಿದ್ದರಿಂದ ‘ನಿಮಗೆ ಕಮ್ಯೂನಿಸಮ್ಮಿನ ಖಾಯಿಲೆ ಇದೆ” ಎಂದು ಅವರಿಂದ ಬೈಸಿಕೊಂಡದ್ದು ಉಂಟು. (ನೋಡಿ : ‘ಕಾರಂಥ ಮಂಥನ’ ಸಂ: ಟಿ.ಪಿ. ಅಶೋಕ, ೧೯೯೪)

ಬರಗೂರು ರಾಮಚಂದ್ರಪ್ಪನವರೂ ವಿಮರ್ಶಾತ್ಮಕವಾಗಿ ಆ ಬಗ್ಗೆ ಬರೆದದ್ದುಂಟು. (‘ಕಾರಂತರ ಕಾದಂಬರಿಗಳಲ್ಲಿ ಸಾಮಾಜಿಕ ನ್ಯಾಯ ಪರಿಕಲ್ಪನೆ’) ಮಾರ್ಕ್ಸ್‌ವಾದೀ ಚಿಂತಕರು, ಆ ವಿಚಾರವಾದಕ್ಕೆ ಒಲಿದವರು, ಕಾರಂತರ ಮತ್ತು ಅಡಿಗರ ರಾಜಕೀಯ ಚಿಂತನೆಯನ್ನು ಪ್ರಶ್ನಿಸುವುದರಲ್ಲಿ ವಿಶೇಷವೇನೂ ಇಲ್ಲ; ಪ್ರಶ್ನಿಸದಿದ್ದರೇ ಆಶ್ಚರ್ಯಪಡಬೇಕು. ಆದರೆ ಅಂಬೇಡ್ಕರವಾದಿ, ಲೋಹಿಯಾವಾದಿ ಸಾಹಿತಿಗಳು, ವಿಮರ್ಶಕರು, ಅಡಿಗರ ರಾಜಕೀಯ ನಿಲುವುಗಳನ್ನು ಪ್ರಶ್ನಿಸಿದಂತೆ ಮತ್ತು ಪ್ರಶ್ನಿಸಿದಷ್ಟು ತೀವ್ರವಾಗಿ ಕಾರಂತರ ರಾಜಕೀಯ ಚಿಂತನೆಯನ್ನು ಪ್ರಶ್ನಿಸಲಿಲ್ಲ. ಇದು ಕುತೂಹಲದ ಸಂಗತಿಯಾಗಿ ಕಾಣಿಸುತ್ತದೆ.

ಕಾರಂತರ ವ್ಯಕ್ತಿತ್ವ ಮತ್ತು ಬರವಣಿಗೆಯಲ್ಲಿ ‘ಸೆಕ್ಯುಲರ್ ಇಮೇಜ್’ (‘ಜಾತಿ ಮತ ಧರ್ಮಾತೀತ ಬಿಂಬ’) ಅಡಿಗರ ವ್ಯಕ್ತಿತ್ವ ಮತ್ತು ಬರವಣಿಗೆಯಲ್ಲಿ ಆದಂತೆ ಕೊನೆಯವರೆಗೂ ಮಸುಕಾಗಲಿಲ್ಲ. ಕಾರಂತರ ಕೊಟ್ಟ ಕೊನೆಯ ವರ್ಷಗಳಲ್ಲಿ ರಾಮಜನ್ಮ ಭೂಮಿ ವಿವಾದದ ಕಾಲದಲ್ಲಿ ಕಾರಂತರದೆಂದು ಬರೆದ ಪತ್ರಿಕಾವರದಿಗಳು, ಹೇಳಿಕೆಗಳು ಹುಬ್ಬೇರಿಸುವಂತೆ ಮಾಡಿದ್ದರೂ ಅಂಥ ವರದಿಗಳಿಗೆ, ಹೇಳಿಕೆಗಳಿಗೆ ತೊಂಬತ್ತರಾಚೆಯ ವಯೋಮಾನದ ಕಾರಣದಿಂದಾಗಿಯೋ ಏನೊ ಅವುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆನಿಸಿದ್ದಿಲ್ಲ. ಡ. ಎಂ. ಚಿದಾನಂದಮೂರ್ತಿಯವರಂಥ ಮತೀಯವಾದಿಗಳು ಅಂಥವನ್ನು ಉದ್ಧರಿಸಿ ಕಾರಂತರು ಹಿಂದುತ್ವಪರ ಇರುವವರೆಂದು ತೋರಿಸಲು ಪ್ರಯತ್ನಿಸಿದ್ದೇನೊ ಇದೆ. ( ೨೦೦೦ದಲ್ಲಿ ಜನಗಣತಿ ವಿವಾದ ಸಂದರ್ಭದಲ್ಲಿ ಡಾ. ಎಂ. ಚಿದಾನಂದಮೂರ್ತಿಯವರು ಹಂಚಿದ ದಿನಾಂಕ ನಮೂದಿಸಿರದ ಕರಪತ್ರವೊಂದರಲ್ಲಿದೆ) ಕಾರಂತರು ಒಂದು ಬ್ರಾಹ್ಮಣ ಸಮಾವೇಶದಲ್ಲಿ ಭಾಗವಹಿಸಿ ‘ಇಂದಿನ ಕಾಲದಲ್ಲಿ ಬ್ರಾಹ್ಮಣರೂ ಸಂಘಟಿತರಾಗುವುದು ಅಗತ್ಯವಾಗಿದೆ….. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರಿಗೆ ಜಾತಿಸಂಘಟನೆಯ ಅವಶ್ಯಕತೆ ಬರುತ್ತದೆ” ಎಂದು ಮುಂತಾಗಿ ಹೇಳಿದರೆಂದು ಹೇಳಿ, “ಕಾಲಕ್ಕೆ ತಕ್ಕ ಇರಬೇಕಾದ ಔಚಿತ್ಯ, ಸಾಮಾನ್ಯ ಜ್ಞಾನ ಅವರಲ್ಲಿ ವಿಫುಲವಾಗಿದೆ,” ಎಂದು ಕಾರಂತರ ಔಚಿತ್ಯ ಪ್ರಜ್ಞೆ, ಸಾಮಾನ್ಯ ಜ್ಞಾನದ ಬಗ್ಗೆ ಪ್ರಶಂಸಾತ್ಮಕ ದನಿಯಲ್ಲಿ ಬರೆದವರೂ ಇದ್ದಾರೆ (ಕಾರಂತ ಯುಗಾಂತ, ಪು. ೧೮೧, ೧೯೯೯). ಅದೇ ‘ಕಾರಂತ ಯುಗಾಂತ’ ಪುಸ್ತಕದಲ್ಲಿಯೆ “ಬರಬರುತ್ತಾ ಅವರ (ಕಾರಂತರ) ಸುತ್ತ ತುಂಬಿಕೊಂಡವರು, ಅವರ ಹೆಸರನ್ನು ಬಳಸಿಕೊಳ್ಳೋದಿಕ್ಕೆ ಶುರು ಮಾಡಿದರು ಅನ್ಸುತ್ತೆ” ಎಂದು ಕಾರಂತರ ಮಗ ಉಲ್ಲಾಸ ಕಾರಂತರು ಹೇಳಿದ್ದೂ ಉಂಟು. (ಪು. ೨೫೨)

ಕಾರಂತರು ಎರಡೂ ಸಲ ಚುನಾವಣೆಗೆ ಸ್ಪರ್ಧಿಸಿದ್ದಾಗ ಅಡಿಗರಂತೆ ಅವರ ‘ಸೆಕ್ಯುಲರ್ ಇಮೇಜ್‌ಗೆ ಕುಂದುಬರುವಂಥದೇನಿರಲಿಲ್ಲ. ಮೊದಲ ಸಲ ೧೯೫೨ರಲ್ಲಿ ಸ್ಪರ್ಧಿಸಿದ್ದಾಗ ಆಚಾರ್ಯ ಕೃಪಲಾನಿ ಕಾಂಗ್ರೆಸ್ಸನ್ನು ತ್ಯಜಿಸಿ ಬಂದು, ಸಮಾಜವಾದಿಯಾದ ಅಶೋಕ ಮೆಹತಾ (Democratic Socialism ‘ಪ್ರಜಾಸತ್ತಾತ್ಮಕ ಸಮಾಜವಾದ’ ಎಂಬ ಪುಸ್ತಕವನ್ನೂ ಬರೆದವರು) ಅಂಥವರನ್ನು ಕೂಡಿಕೊಂಡು ಸ್ಥಾಪಿಸಿದ ಕಿಸಾನ್ ಮಜ್ದೂರ್ ಪಕ್ಷದ (ಕೆ.ಎಂ.ಪಿ.) ಶಾಸನ ಸಭಾ ಅಭ್ಯರ್ಥಿಯಾಗಿದ್ದರು. ಎರಡನೆಯ ಸಲ ೧೯೮೯ರಲ್ಲಿ ಲೋಕಸಭೆಗೆ ಕೆನರಾ (ಉತ್ತರ ಕನ್ನಡ) ಕ್ಷೇತ್ರದಿಂದ ಪರಿಸರ ರಕ್ಷಣೆಯ ಹೆಸರಿನಲ್ಲಿ ಪಕ್ಷಾತೀತವಾಗಿ – ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ನಡುವೆ ತುರ್ತು ಪರಿಸ್ಥಿತಿಯ ಆನಂತರದ ಕಾಲದ ೧೯೭೭ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಗಾಂಧಿ ಸೋತ ಆನಂತರ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಉಪಚುನಾವಣೆಗೆ ಅವರು ಅಭ್ಯರ್ಥಿಯಾಗಿದ್ದಾಗ ಅವರಿಗೆ ಎದುರಾಳಿಯಾಗಿ ಕಾರಂತರನ್ನು ನಿಲ್ಲಿಸಬೇಕೆಂದು ಜನತಾಪಕ್ಷ ಯೋಚಿಸಿತ್ತು. ಆ ಕಾಲದಲ್ಲಿ ಗೌರವಾನ್ವಿತ ಸಮಾಜವಾದಿ ಆಗಿದ್ದ, ತುರ್ತು ಪರಿಸ್ಥಿತಿಯ ಕಾಲದಲ್ಲಿ ‘ಹೀರೋ’ ಎಂದು ಖ್ಯಾತರಾಗಿದ್ದ ಜಾರ್ಜ್ ಫರ್ನಾಂಡೀಸರೇ ಕಾರಂತರಲ್ಲಿಗೆ ಬಂದು ಸ್ಪರ್ಧಿಸಲು ಒತ್ತಾಯಿಸಿದ್ದರು. (ನೋಡಿ ‘ನಾವು ಕಟ್ಟಿದ ಸ್ವರ್ಗ’ ಕಾದಂಬರಿಯ ಮುನ್ನುಡಿ, ೧೯೮೦) ಅಂದರೆ ಕಾರಂತರು ಒಪ್ಪಿದ್ದರೆ ಜನತಾಪಕ್ಷದ ಅಭ್ಯರ್ಥಿಯಾಗಬಹುದಾದಂಥ ಸನ್ನಿವೇಶ ಉಂಟಾಗಿತ್ತು.

ಅಡಿಗರು ಎರಡು ಸಲ ಚುನಾವಣೆಗೆ ಸ್ಪರ್ಧಿಸಿದಾಗಲೂ ಜನಸಂಘದ (ಬಿಜೆಪಿಯ ಆ ಕಾಲದ ಹೆಸರು) ಅಭ್ಯರ್ಥಿಯಾಗಿದ್ದರು. ಜೊತೆಗೆ ಅಡಿಗರು ಚುನಾವಣೆಗೆ ಸ್ಪರ್ಧಿಸಿದ ಕಾಲಾನಂತರದಲ್ಲಿ ‘ನಾನು ಹಿಂದೂ, ನಾನು ಬ್ರಾಹ್ಮಣ’ (‘ಬತ್ತಲಾರದ ಗಂಗೆ’ – ೧೯೮೩) ‘ಮತ್ತೆ ಮೊಳಗಲಿ ಪಾಂಚಜನ್ಯ’ (‘ಚಿಂತಾಮಣಿಯಲ್ಲಿ ಕಂಡ ಮುಖ’- ೧೯೮೭) ದಂಥ ಕವನಗಳನ್ನೂ ಬರೆದರು. ಅದರಲ್ಲಿಯೂ ‘ಮತ್ತೆ ಮೊಳಗಲಿ ಪಾಂಚಜನ್ಯ’ ಕವನದಲ್ಲಿ ಇರುವ,

ಹಿಂದುತ್ವದ ಮಹಾಸಿಂಧು ಭೋರ್ಗರೆದು ಬೊಬ್ಬಿರಿದು ಗಡಿಬಿಡಿ ತೊಡೆದು
ನುಗ್ಗಲೆಲ್ಲಾ ಕಡೆಗು ನಾಡಿನುದ್ದ….
ಹಿಂದುಗಳನೊಂದಾಗಿ ಹಿಡಿದಿದ್ದ ಅದೃಶ್ಯ ಸರಪಣಿ ಕೊಂಡಿ
ಕೊಂಡಿ ಕಳಚಿವೆ ಗೊಣಸು ಗೊಣಸು
ಕಿತ್ತುಬಿದ್ದಿವೆ ಅಲ್ಲಿ ಇಲ್ಲಿ ಚಲ್ಲಾಪಿಲ್ಲಿ
ಪ್ರತಿ ಹಿಂದು ಬದುಕು ಮತ್ತೊಮ್ಮೆ ಧಗಧಗ ಕುಲುಮೆ,
ಸೋದರತ್ವದ ಪ್ರೀತಿ ಪ್ರಜ್ವಲಿಸಲಿ
ಹೃದಯ ಹೃದಯದ ರಕ್ತ ಕುದಿದು ಬೆಸೆಯಲಿ ಮತ್ತೆ
ಸರಪಣಿಯ ಗೊಣಸು ಗೊಣಸು….
ಕತ್ತಲಲ್ಲೂ ಮುಳುಗದಿರಲಿ ಹಿಂದೂ ಸೂರ್ಯ,
ನಡೆಸೋಣ ನವ್ಯ ಅವತಾರ ಕಾರ್ಯ!

ಎಂಬಿತ್ಯಾದಿ ಸಾಲುಗಳು ಅಡಿಗರ ಹಿಂದೂತ್ವವಾದೀ ಜನಸಂಘೀಯ ದೃಷ್ಟಿಧೋರಣೆಯ ಬಗೆಗಿನ ಒಲವನ್ನು ಸಾಬೀತು ಪಡಿಸುವಂತಿದ್ದವು.

ಜಾತಿ-ಮತ ಧರ್ಮೀಯವಾದದ ವಿರುದ್ಧ, ಅದರಲ್ಲಿಯೂ ಹಿಂದೂ ಪುರೋಹಿತಶಾಹಿ ವ್ಯವಸ್ಥೆ ನಿರ್ಮಿಸಿದ್ದ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ನಾಶಮಾಡಿ ಸಮಾನತೆ, ಜಾತಿ-,ಮತಧರ್ಮ ನಿರಪೇಕ್ಷ ತತ್ವದ ಆಧಾರದ ಮೇಲೆ ಸಂಸ್ಕೃತಿ ಪುನಾರಚನೆಯನ್ನು ಆಗು ಮಾಡಬೇಕೆಂಬ ಸಂಕಲ್ಪಕ್ಕೆ ಬದ್ಧರಾಗಿದ್ದ ಲೋಹಿಯಾವಾದಿಗಳು, ಅಂಬೇಡ್ಕರ್‌ವಾದಿಗಳು ಅಡಿಗರ ರಾಜಕೀಯ ಚಿಂತನೆಯ ಬಗ್ಗೆ ನಿಷ್ಠುರ ವಿರೋಧ ವ್ಯಕ್ತಪಡಿಸುತ್ತ, ಟೀಕಿಸುತ್ತ ಬಂದದ್ದು ಸಹಜ.

ಅಡಿಗ ಮತ್ತು ಕಾರಂತ ಅವರ ರಾಜಕೀಯ ಚಿಂತನೆಯಲ್ಲಿ ಇದ್ದ ಮುಖ್ಯ ವ್ಯತ್ಯಾಸ ಮತೀಯವಾದೀ ರಾಜಕೀಯದ ಜೊತೆಗಿನ ಸಂಪರ್ಕ, ಒಲವಿಗೆ ಸಂಬಂಧಿಸಿದ್ದು. ಅಡಿಗರು ಜನಸಂಘೀಯ ರಾಜಕಾರಣಕ್ಕೆ ಒಲಿದವರಾಗಿದ್ದಾರೆ, ಕಾರಂತರು ಯಾವುದೇ ಬಗೆಯ ಜಾತಿ-ಮತ ಧರ್ಮವಾದೀ ಚಿಂತನೆಯನ್ನು ವಿರೋಧಿಸುವವರಾಗಿದ್ದರು. ಅವರು ಜಾತಿ ಮತೀಯವಾದೀ ವಿಚಾರಸರಣಿ ಯಾವುದೇ ರೂಪದಲ್ಲಿಯಾದರೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಜಕಾರಣದಲ್ಲಿ ಮುಖ್ಯ ಸಂಗತಿಯಾಗಬೇಕಾಗಿಲ್ಲ, ಎಂಬ ನಿಲುವಿನವರಾಗಿದ್ದರು. ಜಾತಿಯ ಮೇಲು, ಕೀಳು ಪರಿಭಾಷೆಯಲ್ಲಿ ರಾಜಕೀಯ ಚಿಂತನೆಯನ್ನು ರೂಪಿಸಿಕೊಳ್ಳುವುದು, ವ್ಯಾಖ್ಯಾನಿಸಿಕೊಳ್ಳುವುದು ಸರಿಯಲ್ಲ; ಅದು ಜಾತಿ ಜಾತಿಗಳ ನಡುವೆ ವೈಷಮ್ಯವನ್ನು ದ್ವೇಷವನ್ನು ಬೆಳೆಸುತ್ತದೆ, ಎಂಬ ಅಭಿಪ್ರಾಯ ಅವರದಾಗಿತ್ತು. ಜಾತಿ ಮತಧರ್ಮೀಯ ಸಂಬಂಧವನ್ನು ವೈಯಕ್ತಿಕ ಮತ್ತು ಸಾಮೂಹಿಕ ಎರಡೂ ನೆಲೆಗಳಲ್ಲಿ ಅಂಟಿಸಿಕೊಳ್ಳುವುದನ್ನು ಕಾರಂತರು ಒಪ್ಪದವರಾಗಿದ್ದರು. ವೈಯಕ್ತಿಕ ನೆಲೆಯಲ್ಲಿಯಾದರೆ ಅದು ಅವರವರ ನಂಬಿಕೆಗೆ ಸಂಬಂಧಿಸಿದ್ದೆಂದು ಉದಾರವಾದೀ ದೃಷ್ಟಿಯಿಂದ ನೋಡುವವರಾಗಿದ್ದರೂ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಅದನ್ನು ಒಪ್ಪುವವರಾಗಿರಲಿಲ್ಲ. ಸಮಾನತಾ ಆಂದೋಲನದ ಅಥವಾ ಸಾಮಾಜಿಕ ನ್ಯಾಯದ ಭಾಗವಾಗಿ ಅಥವಾ ಅದರ ಹೆಸರಿನಲ್ಲಿ ಶ್ರೇಣೀಕೃತ ಜಾತಿವ್ಯವಸ್ಥೆಯ ವಿರುದ್ಧ, ಪುರೋಹಿತಶಾಹಿ ವಿರುದ್ಧ ನಡೆಸುತ್ತಿರುವ ಸಾಮಾಜಿಕ, ರಾಜಕೀಯ ಹೋರಾಟವನ್ನು ಕಾರಂತರು ಒಪ್ಪಿದವರಾಗಿರಲಿಲ್ಲ. “ತಮ್ಮ ಜನಗಳ ನಿಕೃಷ್ಟ ಪರಿಸ್ಥಿತಿಗೆ ಅದು ಯಾವುದೇ ರೂಪದ್ದಿರಲಿ ಅಲ್ಪಸಂಖ್ಯಾತರಾದ ಮೇಲಣ ಜಾತಿಯವರೇ ಕಾರಣರು-ಎಂದು ತೋರಿಸುವ ಚಾಪಲ್ಯ ಬೆಳೆಯಿತು…. ಜಾತಿಯಲ್ಲಿ ಹಿಂದುಳಿದಿರುವುದು ವ್ಯಕ್ತಿ ಸ್ವಾರ್ಥಕ್ಕೆ ಒಂದು ಅನುಕೂಲ ಸಾಧನವಾಯಿತು” (ಸ್ಮೃತಿ ಪಟಲದಿಂದ, ಮೂರನೆಯ ಸಂಪುಟ, ಪುಟ ೪೧, ೧೯೭೯) ಎಂದು ಮುಂತಾಗಿ ಕಾರಂತರು ಬರೆದಿರುವುದೂ ಉಂಟು. ಜಾತ್ಯತೀತತೆ ಮತ್ತು ಸಮಾನತೆಯ ಸಮಾಜವನ್ನು, ಸಂಸ್ಕೃತಿಯನ್ನು ಸಮಾಜವಾದದ ಮೂಲಕ ಕಟ್ಟಬಹುದೆಂಬ ಬಗ್ಗೆ ಕಾರಂತರಿಗೆ ನಂಬಿಕೆ ಇರಲಿಲ್ಲ.

ದೇಶದಲ್ಲಿ ಜಾತಿಯ ಮೇಲು ಕೀಳು ಭಾವನೆಯ ವಾಸ್ತವ ಇದೆಯಾದರೂ ಅದನ್ನು ತೊಡೆದು ಹಾಕುವ ಅಗತ್ಯ ಇದೆಯಾದರೂ ಆ ಸಮಸ್ಯೆಯನ್ನು ಆರ್ಥಿಕ ಸಮಾನತೆಯ ದೃಷ್ಟಿಯಿಂದಲೇ ನೋಡಿ ದೇಶದ ಸಂಪತ್ತಿನ ಉತ್ಪಾದನೆಯನ್ನು ಹೆಚ್ಚಿಸುವ, ದಲಿತರೂ ಸೇರಿದಂತೆ ಹಿಂದುಳಿದವರಿಗೆ, ಬಡವರಿಗೆ ಸ್ವಂತ ವೃತ್ತಿ, ಸ್ವತಂತ್ರ ಉದ್ಯೋಗ ಒದಗಿಸುವ ಕಾರ್ಯಕ್ರಮ, ಕಾರ್ಯಯೋಜನೆಗಳಮೂಲಕವೇ ಬಗೆಹರಿಸಬಹುದು, ಬಗೆಹರಿಸಬೇಕು ಎಂಬ ವಿಚಾರ ಕಾರಂತರದಾಗಿತ್ತು. ಆ ಆರ್ಥಿಕ ಸಂಪತ್ತಿನ ಉತ್ಪಾದನೆ ಮತ್ತು ಹಂಚುವಿಕೆ ಕಮ್ಯೂನಿಸ್ಟ್ ಮಾದರಿಯಲ್ಲಿ ಆಗಬೇಕಾದದ್ದಲ್ಲ; ಪಾಶ್ಚಿಮಾತ್ಯ ರಾಷ್ಟ್ರಗಳ, ಯುನೈಟೆಡ್ ಸ್ಟೇಟ್ಸಿನ ಮಾದರಿಯದಾಗಬೇಕು, ಎಂಬುದು ಅವರ ವಿಚಾರವಾಗಿತ್ತು.

ಜಾತಿಯ ಮೇಲು ಕೀಳು ಪರಿಭಾಷೆಯಲ್ಲಿ ರಾಜಕೀಯ ಚಿಂತನೆಯನ್ನು ವ್ಯಾಖ್ಯಾನಿಸಿಕೊಳ್ಳುವುದನ್ನು ಕಾರಂತರು ಅವರ ಕಾದಂಬರಿಗಳಲ್ಲಿ ಕೂಡ ಪ್ರಶ್ನಿಸುತ್ತಲೇ ಬಂದಿದ್ಧಾರೆ.

ಮಾರ್ಕ್ಸ್‌ವಾದಿಗಳಂತೆ ‘ವರ್ಗ’ ಪರಿಕಲ್ಪನೆ, ಅಂಬೇಡ್ಕರ್‌ವಾದಿ ಮತ್ತು ಲೋಹಿಯವಾದಿಗಳಂತೆ ‘ಜಾತಿ’ ವ್ಯವಸ್ಥೆಯಿಂದ ಉಂಟಾಗಿರುವ ಅಸಮಾನತೆ ಕುರಿತ ವಾದ ಇವುಗಳನ್ನು ನಮ್ಮ ದೇಶದ ಪ್ರಜಾಪ್ರಭುತ್ವ ರಾಜಕೀಯದಲ್ಲಿ ಮುಖ್ಯ ಸಂಗತಿಗಳಾಗಿ ಪರಿಗಣಿಸುವ ಬಗ್ಗೆ ಕಾರಂತರಿಗೆ ನಂಬಿಕೆ ಇರಲಿಲ್ಲ. ಅವರಿಗೆ ರಾಜಕೀಯ ಪ್ರಜಾಪ್ರಭುತ್ವದ (Political Democracy) ಬಗ್ಗೆ ನಿಷ್ಠೆ ಇದ್ದಂತೆ ಸಾಮಾಜಿಕ ಪ್ರಜಾಪ್ರಭುತ್ವ (Social Democracy) ಪರಿಕಲ್ಪನೆಯ ಬಗ್ಗೆ ನಿಷ್ಠೆ, ಸಹಾನುಭೂತಿ ಇದ್ದಂತೆ ಕಾಣುವುದಿಲ್ಲ. ರಾಜಕೀಯ ಪ್ರಜಾಪ್ರಭುತ್ವದ ಅಂದರೆ ಪ್ರಜಾಪ್ರಭುತ್ವದ ಸಾಮಾನ್ಯ ತತ್ವದ ಸಂದರ್ಭದಲ್ಲಿಯೆ ಸಮಾನತೆ, ಜಾತ್ಯತೀತತೆಗಳನ್ನು ಸಾಧಿಸುವ ದಾರಿಗಳನ್ನು ಹುಡುಕಿ ಸಾಗಬೇಕು, ಎಂಬುದು ಅವರ ರಾಜಕೀಯ ಚಿಂತನೆಯ ರೀತಿಯಾಗಿತ್ತು. ಅಡಿಗರ, ಹಿಂದೂತ್ವವಾದೀ ಜನಸಂಘದ ಬಗೆಗಿನ ಒಲವು ಅಥವಾ ಹಿಂದೂ ಸಂಸ್ಕೃತಿಯಲ್ಲಿ ಮೌಲಿಕವಾದದ್ದು ಇದೆ ಎಂಬ ನಂಬಿಕೆ, ನಿಷ್ಠೆ ಕಳದೆರೆ ಉಳಿದಂತೆ ಕಾರಂತರ ರಾಜಕೀಯ ಚಿಂತನೆಗೂ ಅಡಿಗರ ರಾಜಕೀಯ ಚಿಂತನೆಗೂ ಹೇಳಿಕೊಳ್ಳುವಂಥ ವ್ಯತ್ಯಾಸವೇನೂ ಇದ್ದಂತೆ ತೋರುವುದಿಲ್ಲ.

ಅಂಬೇಡ್ಕರ್‌ವಾದಿ, ಲೋಹಿಯವಾದಿ ಸಾಹಿತಿಗಳಿಗೆ, ಹೋರಾಟಗಾರರಿಗೆ, ರಾಜಕೀಯ ಚಿಂತಕರಿಗೆ ಕಾರಂತರ ಜೊತೆ ಜಗಳಕ್ಕೆ, ಭಿನ್ನಾಭಿಪ್ರಾಯಕ್ಕೆ ಕಾರಣಗಳು ಹೇರಳವಾಗಿಯೇ ಇದ್ದವಲ್ಲವೆ? ಇವೆಯಲ್ಲವೆ? ವೈಯಕ್ತಿಕ ಮಟ್ಟದಲ್ಲಿ ಕಾರಂತರು ಅಂತರ್ಜಾತೀಯ ವಿವಾಹವಾದದ್ದು, ದೇವರು ಮತಧರ್ಮಗಳನ್ನು ನಿರಾಕರಿಸಿದ್ದು, ಅವರ ಕಾದಂಬರಿಗಳಲ್ಲಿ ಬಿಡಿ ಸನ್ಯಾಸಿಗಳನ್ನು ನಿರಂತರವಾಗಿ ಸದೆಬಡಿಯುತ್ತ ಬಂದದ್ದು ಅಂಬೇಡ್ಕರ್‌ವಾದಿಗಳಿಗೆ, ಲೋಹಿಯವಾದಿಗಳಿಗೆ ಅಂದರೆ ಒಟ್ಟಿನಲ್ಲಿ ಸಮಾಜವಾದಿಗಳಿಗೆ ಮೆಚ್ಚಿಕೆಯ ಸಂಗತಿಯಾಗಿ ಕಂಡರೂ ಕಾರಂತರ ರಾಜಕೀಯ ಚಿಂತನೆ ಒಪ್ಪಿಗೆಯಾಗುವುದಕ್ಕೆ, ಮೆಚ್ಚಿಕೆಯಾಗುವುದಕ್ಕೆ ಕಾರಣವಿರಲಿಲ್ಲ; ಕಾರಣವಿಲ್ಲ ಅಲ್ಲವೆ?

ಅಕ್ಟೋಬರ್ ೧೩, ೨೦೦೧

—-
* ೨೦೦೧ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮಂಗಳೂರಿನಲ್ಲಿ ನಡೆಸಿದ್ದಶಿವರಾಮ ಕಾರಂತ : ಸಾಂಸ್ಕೃತಿಕ ಅನುಸಂಧಾನವಿಚಾರ ಸಂಕಿರಣದ ಸಮಾರೋಪ ಭಾಷಣ. ಲೇಖನ ರೂಪದಲ್ಲಿ ಪ್ರಕಟವಾದದ್ದು ೨೦೦೩ರಲ್ಲಿ.