. ನಿಮ್ಮ ದೃಷ್ಟಿಯಲ್ಲಿ ವಿಮರ್ಶೆ ಎಂದರೇನು?

ಮನುಷ್ಯ ಬುದ್ಧಿಜೀವಿ. ಸಾರಸಾರಾ ವಿಚಾರ ಮಾಡುವಂಥವನು. ಆ ಮೂಲಕ ತೀರ್ಮಾನಕ್ಕೆ ಬರುವಂಥವನು. ಬದುಕಿನ ಎಲ್ಲಾ ವ್ಯವಹಾರಗಳಲ್ಲಿಯೂ ಅದು ಸಾಮಾನ್ಯವಾಗಿ ಕಾಣಿಸುತ್ತದೆ. ಆ ಬಗೆಯ ಮನಸ್ಸಿನ ಚಟುವಟಿಕೆಗೆ ವಿಮರ್ಶೆ ಎನ್ನಬಹುದು. ಇದು ಸಾಮಾನ್ಯ ಅರ್ಥ. ಆದರೆ ಸಾಹಿತ್ಯದ ಸಂದರ್ಭದಲ್ಲಿ ಸಾಹಿತ್ಯ ಕೃತಿಯನ್ನು ಅಥವಾ ಕೃತಿ ಸಮೂಹವನ್ನು ಕುರಿತು ಅಧ್ಯಯನ ಮಾಡುವಾಗ ತನ್ನ ಮನಸ್ಸಿನಲ್ಲಿ ಮೂಡುವ ಭಾವ-ಭಾವನೆಗಳನ್ನು, ಅರಿವು-ವಿವೇಕಗಳನ್ನು ವಿವರಿಸುವ, ವಿಶ್ಲೇಷಿಸುವ, ವ್ಯಾಖ್ಯಾನಿಸುವ, ಬೆಲೆಕಟ್ಟುವ ಪ್ರಕ್ರಿಯೆಯನ್ನು ವಿಮರ್ಶೆ ಅಥವಾ ಸಾಹಿತ್ಯ ವಿಮರ್ಶೆ ಎನ್ನಬಹುದು.

. ಸಾಹಿತ್ಯ ಕ್ಷೇತ್ರದಲ್ಲಿ ನೀವು ವಿಮರ್ಶೆ ಆಯ್ಕೆ ಮಾಡಿಕೊಳ್ಳಲು ಕಾರಣವೇನು?

ಪ್ರಾರಂಭದಲ್ಲಿ ನಾನು ಕವನಗಳನ್ನು ಬರೆಯುತ್ತಿದ್ದೆ. ಕೆಲವು ಪ್ರಕಟವಾಗಿವೆ. ಅವು ಹಿರಿಯರ ಮೆಚ್ಚುಗೆಗೆ ಪಾತ್ರವಾಗಿದ್ದವು. ನಾನು ಕವಿಯಾಗಿ ಬೆಳೆಯಬಹುದು ಎಂಬ ನಿರೀಕ್ಷೆ ಅವರಿಗೆ ಇತ್ತು. ಮೈಸೂರಿಗೆ ನನ್ನನ್ನು ಕಾಲೇಜು ವಿದ್ಯಾಭ್ಯಾಸಕ್ಕೆಂದು ಕಳಿಸಿದವರು ಅಂಕೋಲಾದ ಕವಿ ಸ.ಪ. ಗಾಂವಕಾರ್. ನಾನು ದೊಡ್ಡ ಕವಿಯಾಗಿ ಬೆಳೆಯಬಹುದು ಎಂಬ ನಿರೀಕ್ಷೆಯೂ ಅವರಿಗೆ ಇತ್ತು. ಮೈಸೂರಿಗೆ ಕಳಿಸುವಾಗ ಕುವೆಂಪು ಅವರನ್ನು ನನ್ನ ಕಾವ್ಯಗುರುವಾಗಿ ಮಾಡಿಕೊಳ್ಳಬೇಕು ಎಂದು ಹೇಳಿ ಕಳುಹಿಸಿದ್ದರು. ೧೯೫೪ ಆಗಸ್ಟ್ ೮ ಭಾನುವಾರದಂದು ಕುವೆಂಪು ಅವರನ್ನು ಕಂಡು ನನಗೆ ಕಾವ್ಯಗುರುಗಳಾಗಬೇಕು ಎಂದು ಕೇಳಿಕೊಂಡಿದ್ದೆ. ಆ ಸಂದರ್ಭದಲ್ಲಿ ಡಾ. ಪ್ರಭುಶಂಕರ ಕೂಡ ಕುವೆಂಪು ಅವರ ಜೊತೆ ಮಾತನಾಡುತ್ತ ಕುಳಿತಿದ್ದರು. ನಾನು ದುಂಡಗಿನ ಅಕ್ಷರಗಳಲ್ಲಿ ಬರೆದುಕೊಂಡು ಹೋಗಿದ್ದ ಕವನಗಳನ್ನು ಕುವೆಂಪು ಅವರಿಗೆ ತೋರಿಸಲು ಮುಂದಾದೆ. ಅವರು ಅದನ್ನು ತೆಗೆದುಕೊಳ್ಳಲಿಲ್ಲ. ನನ್ನ ಕಡೆ ತಿರುಗಿ ಹೇಳದೆ, ಪ್ರಭುಶಂಕರ ಅವರ ಕಡೆ ತಿರುಗಿ “ಅಧ್ಯಾತ್ಮಕ್ಕೆ ಗುರು ಬೇಕು, ಕಾವ್ಯಕ್ಕೆ ಗುರು ಬೇಕೆಬೇಕೆಂದೇನಿಲ್ಲ; ಒಳಗೆ ಪ್ರತಿಭೆಯ ಕಿಡಿ ಇದ್ದರೆ ಅದು ಬೇಳಗುತ್ತದೆ” ಎಂದು ಹೇಳಿದರು. ನನ್ನ ಕಡೆ ತಿರುಗಿ “ಹಿರಿಯ ಕವಿಗಳ ಕಾವ್ಯವನ್ನು ಚೆನ್ನಾಗಿ ಓದಿ, ತಾನಾಗಿ ಬೆಳೆಯುತ್ತೀರಿ” ಎಂದರು. ಚಿಕ್ಕವನಾದ ನನ್ನನ್ನು ಬಹುವಚನದಿಂದ ಸಂಬೋಧಿಸಿ ಮಾತನಾಡಿದ್ದು ನನಗೆ ತುಂಬಾ ಮುಜುಗರ ಉಂಟುಮಾಡಿತು. ನನ್ನ ಕವನಗಳನ್ನು ಅವರು ಓದಿ ನೋಡಲಿಲ್ಲ. ಅದರಿಂದಾಗಿ ನನಗೆ ನಿರಾಶೆ ಆಗಿತ್ತು. ಆದರೆ ಕುವೆಂಪು ಅವರ ಜೊತೆ ಮಾತನಾಡಿದೆನಲ್ಲಾ ಎಂದು ಸಂತೋಷವಾಗಿತ್ತು.

ಕೆಲವು ಕಾಲದ ಮೇಲೆ ಕಿಂದರಿಜೋಗಿ ಎಂಬ ಕವನ ಬರೆದೆ. ಕುವೆಂಪು ಅವರ ‘ಕಿಂದರಿ ಜೋಗಿ’ ಎಂಬ ಕಥಕವನದಲ್ಲಿ ಒಬ್ಬ ಹೆಳವ ಬರುತ್ತಾನೆ. ನಾನು ಈ ಲೋಕದಲ್ಲಿ ಅಂಥ ಒಬ್ಬ ಹೆಳವ, ಮುಂದೆ ಹೋಗುವುದಕ್ಕೂ ಆಗದೆ, ಬಂದ ದಾರಿಗೆ ತಿರುಗಿ ಹೋಗಲು ಕೂಡ ಆಗದೆ ಪಾಡು ಪಡುತ್ತಿರುವ ಜೀವ ಎಂಬಂಥ ಒಂದು ಸಾಂಕೇತಿಕ ಅರ್ಥವಿಟ್ಟು ಮನುಷ್ಯನ ಸಾಮಾನ್ಯ ಸ್ಥಿತಿ ಇದು ಎಂದು ಕವನದಲ್ಲಿ ಅಭಿವ್ಯಕ್ತಿಸುವ ಪ್ರಯತ್ನಮಾಡಿದ್ದೆ. ಆ ಕವನವನ್ನು ಆಗ ನವ್ಯಕವನ, ನವ್ಯಕತೆ ಬರೆಯುತ್ತಿದ್ದ ಯು. ಆರ್. ಅನಂತಮೂರ್ತಿಯವರಿಗೆ ತೋರಿಸಿದೆ. ಕವನ ಚೆನ್ನಾಗಿದೆ ಎಂದು ಮೆಚ್ಚುಗೆಯನ್ನು ಸೂಚಿಸಿದ ಅವರು “ಕವನದಲ್ಲಿ ಅಧ್ಯಾತ್ಮ ಹೆಚ್ಚಾಯಿತು. ಈ ವಯಸ್ಸಿನಲ್ಲಿ ಅಂಥ ಭಾವನೆ ಎಷ್ಟು ನಿಜ?” ಎಂದು ಮುಂತಾಗಿ ನಯವಾಗಿಯೇ ಆದರೂ ಸ್ಪಷ್ಟವಾಗಿ ನನಗೆ ಮನವರಿಕೆಯಾಗುವಂತೆ ತಿಳಿಸಿ ಹೇಳಲು ಪ್ರಯತ್ನಿಸಿದರು. ಅಲ್ಲಿಂದ ಏಕೋ ಕವನ ಬರೆಯುವುದನ್ನು ಕೆಲವು ವರ್ಷಗಳವರೆಗೆ ನಿಲ್ಲಿಸಿಬಿಟ್ಟೆ. ಆಮೇಲೆಯೂ ಕೆಲವು ಕವನಗಳನ್ನು ಬರೆದದ್ದುಂಟು. ‘ಲಹರಿ’, ‘ಪ್ರಬುದ್ಧ ಕರ್ನಾಟಕ’ ಪತ್ರಿಕೆಗಳಲ್ಲಿ ಕೆಲವು ಪ್ರಕಟವಾಗಿವೆ. ಇನ್ನಷ್ಟು ಕವನಗಳನ್ನು ಬರೆದಿಟ್ಟುಕೊಂಡಿದ್ದೆ. ಆ ನೋಟ್ ಬುಕ್ ಕಳೆದು ಹೋಯಿತು. ಎಷ್ಟೋ ಸಾಲುಗಳು ಬಿಡಿಬಿಡಿಯಾಗಿ ನೆನಪಿವೆ. ಆದರೆ ಇಡಿಇಡೀ ಕವನಗಳ ನೆನಪು ಬರುತ್ತಿಲ್ಲ ಅನಂತಮೂರ್ತಿಯವರ ನವ್ಯ ಸಾಹಿತ್ಯ ಚಿಂತನೆಯ ಪ್ರಭಾವ, ಅವರ ಸೂಕ್ಷ್ಮ ಚಿಂತನಶಕ್ತಿಯ ಕಾರಣದಿಂದಾಗಿ, ಅವರ ಹತ್ತಿರವ ಒಡನಾಟದಿಂದಾಗಿ ನನ್ನ ಮೇಲೆ ಸಾಕಷ್ಟು ಪ್ರಭಾವ ಆಗಿರಬೇಕು.

ಆನಂತರದ ಕಾಲದಲ್ಲಿ ನವ್ಯ ಕವಿ ಎಂ. ಗೋಪಾಲಕೃಷ್ಣ ಅಡಿಗರ ಜೊತೆ ಮೈಸೂರಿನ ಕಾಫಿ ಹೌಸಿನಲ್ಲಿ ಸಾಹಿತ್ಯಚಿಂತನ, ಚರ್ಚೆ ಇವುಗಳನ್ನು ಕೇಳಿಸಿಕೊಳ್ಳುತ್ತ ಎಷ್ಟೋ ಸಂಜೆಗಳನ್ನು ಕಳೆಯುವ ಅವಕಾಶ ದೊರತಾಗ ಕವನವನ್ನು, ಕಥೆಯನ್ನು, ಕಾದಂಬರಿಯನ್ನು, ನಾಟಕವನ್ನು ಓದುವ ಮತ್ತು ವಿಮರ್ಶಿಸುವ ಬಗೆ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ನನ್ನಲ್ಲಿ ಸ್ಪಷ್ಟ ಕಲ್ಪನೆಗಳು ಮೂಡಿದವು.

ಆನಂತರದ ಕಾಲದಲ್ಲಿ ನವ್ಯ ಕವಿ. ಎಂ.ಗೋಪಾಲಕೃಷ್ಣ ಜೊತೆ ಮೈಸೂರಿನ ಕಾಫಿ ಹೌಸಿನಲ್ಲಿ ಸಾಹಿತ್ಯಚಿಂತನ, ಚರ್ಚೆ ಇವುಗಳನ್ನು ಕೇಳಿಸಿಕೊಳ್ಳುತ್ತ ಎಷ್ಟೋ ಸಂಜೆಗಳನ್ನು ಕಳೆಯುವ ಅವಕಾಶ ದೊರೆತಾಗ ಕವನವನ್ನು, ಕಥೆಯನ್ನು, ಕಾದಂಬರಿಯನ್ನು, ನಾಟಕವನ್ನು ಓದುವ ಮತ್ತು ವಿಮರ್ಶಿಸುವ ಬಗೆ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ನನ್ನಲ್ಲಿ ಸ್ಪಷ್ಟ ಕಲ್ಪನೆಗಳು ಮೂಡಿದವು.

ಕನ್ನಡ ಎಂ.ಎ. ಓದುತ್ತಿರುವ ವಿದ್ಯಾರ್ಥಿಯಾಗಿದ್ದಾಗ ‘ಮಾಸ್ತಿಯವರ ಕಾವ್ಯ’ ಎಂಬ ಒಂದು ಪ್ರಬಂಧವನ್ನು ವಿಚಾರಗೋಷ್ಠಿಯಲ್ಲಿ ಮಂಡಿಸಿದ್ದೆ. ಗೋಷ್ಠಿ ನಿರ್ವಹಿಸುತ್ತಿದ್ದ ಗುರುಗಳಾದ ಡಾ. ಜಿ.ಎಸ್.ಶಿವರುದ್ರಪ್ಪನವರು ನನ್ನ ಆ ಪ್ರಬಂಧವನ್ನು ‘ಎ-ಒನ್’ ಎಂದು ಗುರುತಿಸಿ ಮೆಚ್ಚಿದ್ದರು. ಪ್ರಬಂಧ ಮಂಡಿಸಿದ ಮೇಲೆ ಪ್ರೊ. ತೀಂ. ನಂ. ಶ್ರೀಕಂಠಯ್ಯನವರು, ಪ್ರೊ. ಡಿ. ಎಲ್. ನರಸಿಂಹಾಚಾರ್ ಅವರು ತುಂಬು ಮನಸ್ಸಿನಿಂದ ಮೆಚ್ಚುಗೆಯನ್ನು ಸೂಚಿಸಿದರು. ಅದು ನನ್ನಲ್ಲಿ ಹೆಚ್ಚಿನ ಆತ್ಮವಿಶ್ವಾಸ ಬೆಳೆಸಿತು. ಅದೇ ಪ್ರಬಂಧವನ್ನು ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ‘ಸಾಕ್ಷಿ’ ಪತ್ರಿಕೆಯ ಮೊದಲ ಸಂಚಿಕೆಯಲ್ಲಿ ಪ್ರಕಟಣೆಗೆಂದು ಕೊಟ್ಟೆ. ಅಡಿಗರು ‘ಚೆನ್ನಾಗಿದೆ ಆದರೆ….’ ಎಂದು ಹೇಳಿ ಸ್ವಲ್ಪ ಹೊತ್ತು ಬಿಟ್ಟು ಆಮೇಲೆ “ಇನ್ನೂ ಹೆಚ್ಚು ಸೂಕ್ಷ್ಮವಾಗಿ, ಆಳವಾಗಿ, ಅಧ್ಯಯನ ಮತ್ತು ವಿವೇಚನೆ ಮಾಡಿ ಬರೆದಾಗ ವಿಮರ್ಶೆಗೆ ಹೆಚ್ಚಿನ ತೂಕ ಬರುತ್ತದೆ” ಎಂದು ಹೇಳಿದರು. ನನ್ನ ಗುರುಗಳು ಸೂಚಿಸಿದ ಮೆಚ್ಚುಗೆಯಿಂದ ಬೆಳೆದ ಆತ್ಮವಿಶ್ವಾಸ ಕುಂದದಿದ್ದರೂ ಅಡಿಗರ ವಿಮರ್ಶೆ ಮತ್ತು ಮಾತುಗಳು ಇನ್ನೂ ನಾನು ಹೆಚ್ಚು ಬೆಳೆಯಬೇಕಾದದ್ದಿದೆ ಎಂದು ಅನಿಸುವಂತೆ ಮಾಡಿತು. ನನ್ನ ವಿಮರ್ಶನ ಪ್ರತಿಭೆ ಗಟ್ಟಿಯಾಗಿದೆ ಎಂಬ ಮಾತನ್ನು ಅಡಿಗರೂ ಹೇಳಿದ್ದರಿಂದ ನನ್ನ ಆತ್ಮವಿಶ್ವಾಸ ತೀರಾ ಕುಂದುವುದಕ್ಕೆ ಕಾರಣವಿರಲಿಲ್ಲ. ಬಹುಶಃ ವಿಮರ್ಶೆಯ ಕ್ಷೇತ್ರವನ್ನು ನಾನು ಅಯ್ಕೆ ಮಾಡಿಕೊಳ್ಳುವುದಕ್ಕೆ ನನ್ನ ಗುರುಗಳು ವ್ಯಕ್ತಪಡಿಸಿದ ಮೆಚ್ಚುಗೆ, ಅಡಿಗರು ನೀಡಿದ ಎಚ್ಚರಿಕೆ, ತಿಳಿವಳಿಕೆ ಕಾರಣವಾಗಿರಬೇಕು. ಈವರೆಗೂ ನನ್ನ ವಿಮರ್ಶೆಯ ಬರವಣಿಗೆಯ ಗುಣಸ್ವರೂಪವನ್ನು ನಿರ್ಧರಿಸುವಲ್ಲಿ ಅದು ಸಾಕಷ್ಟು ಪ್ರಭಾವ ಬೀರಿರಬೇಕು ಎಂದು ನಾನು ಭಾವಿಸಿದ್ದೇನೆ. ಒಟ್ಟಿನಲ್ಲಿ ವಿಮರ್ಶೆಯ ಕ್ಷೇತ್ರಕ್ಕೆ ನಾನು ನಿಶ್ಚಯಮಾಡಿ ಪ್ರವೇಶಿಸುವುದಕ್ಕೆ ಈ ಸಂದರ್ಭ ಮುಖ್ಯ ಕಾರಣವಾಗಿರಬೇಕು ಎಂದು ನಾನು ಅಂದುಕೊಂಡಿದ್ದೇನೆ.

. ವಿಮರ್ಶೆಯು ಸಾಹಿತ್ಯಕ್ಷೇತ್ರಕ್ಕೆ ಯಾವ ರೀತಿಯ ಕೊಡುಗೆಯಾಗಿದೆ?

ಸೃಜನಶೀಲ ಸಾಹಿತ್ಯದಲ್ಲಿ ಕೂಡ ಸಾಹಿತ್ಯ ಸೃಷ್ಟಿಸುವ ಮನಸ್ಸು ವಿಮರ್ಶನ ಪ್ರಜ್ಞೆಯನ್ನು ಒಳಗೊಂಡೇ ಇರುತ್ತದೆ. ವಿಮರ್ಶನ ಪ್ರಜ್ಞೆಗೆ ಬುದ್ಧಿಯ ಸೂಕ್ಷ್ಮಜ್ಞತೆಯ ಬಲ ಹೆಚ್ಚು. ಸೃಜನಶೀಲ ಪ್ರತಿಭೆಗೆ ಭಾವದ ಉತ್ಕಟತೆ, ಉಕ್ಕಂದ, ತೀವ್ರತೆ ಹೆಚ್ಚು. ಬುದ್ಧಿಬಾವಗಳ ವಿದ್ಯುದಾಲಿಂಗನ ಕಾವ್ಯ ಎಂದು ಕುವೆಂಪು ಹೇಳುವ ಮಾತು ಬಹುಪಾಲು ನಿಜ. ಸೃಜನಶೀಲ ಕೃತಿ ಕಾವ್ಯವಾಗಲಿ, ಕಥೆಯಾಗಲಿ, ಕಾದಂಬರಿಯಾಗಲಿ, ನಾಟಕವಾಗಲಿ ಇನ್ನಾವುದೇ ಆಗಲಿ ಸಾಂಸ್ಕೃತಿಕವಾಗಿಯೂ ಮಹತ್ವದ್ದಾಗಬೇಕಾದರೆ ಪ್ರಬುದ್ಧವಾದ ಅರಿವಿನ ನೆಲೆಗೆ ಮಾಗಬೇಕಾಗುತ್ತದೆ; ಪಾಕಗೊಳ್ಳಬೇಕಾಗುತ್ತದೆ. ಭಾವಾತಿರೇಕದ ಬರವಣಿಗೆಯಾಗಲಿ, ಕೇವಲ ಬುದ್ಧಿಶಕ್ತಿಯ ಮೇಲೆ ಬರೆದ ಕೃತಿಯಾಗಲಿ, ಪಾಂಡಿತ್ಯದ ದರ್ಪದಿಂದ ಬರೆದ ಕೃತಿಯಾಗಲಿ ಶ್ರೇಷ್ಠವಾಗಲು ಸಾಧ್ಯವಿಲ್ಲ. ವಿವೇಕದ, ಅರಿವಿನ ಪ್ರಬುದ್ಧಸ್ಪರ್ಶ ಮತ್ತು ಪ್ರಭಾವಳಿ ಇಲ್ಲದೆ ಇರುವ ಯಾವ ಕೃತಿಯೂ ಶ್ರೇಷ್ಠವಾಗುವುದಿಲ್ಲ. ಈ ಎಚ್ಚರ ಅಥವಾ ಸಂಸ್ಕಾರ ಸೃಜನಶೀಲಕೃತಿಯನ್ನು ರಚಿಸುವವರಿಗೆ ಅಂದರೆ ಕವಿ-ಸಾಹಿತಿಗಳಿಗೆ ಅಗತ್ಯವಾಗಿ ಇರಬೇಕಾಗುತ್ತದೆ. ಓದುಗನಿಗೂ ಸೃಜನಶೀಲ ಕೃತಿಯನ್ನು ತನ್ನ ಆಸ್ವಾದನೆಯ, ಅರಿವಿನ ಭಾಗವಾಗಿ ಮಾಡಿಕೊಳ್ಳುವ ಈ ತಿಳಿವಳಿಕೆ ಎಷ್ಟಿದ್ದರೂ ಅಷ್ಟು ಒಳ್ಳೆಯದು; ಅಪೇಕ್ಷಣೀಯವೂ ಹೌದು. ವಿಮರ್ಶಕನೂ ಓದುಗನೇ. ವಿಮರ್ಶಕ ಅತ್ಯುತ್ತಮ ಓದುಗ. ಅತ್ಯುತ್ತಮ ಓದುಗನು ತಾನು ಪಡೆದ ಅನುಭವವನ್ನು ವಿವರಿಸುವ, ವಿಶ್ಲೇಷಿಸುವ, ವ್ಯಾಖ್ಯಾನಿಸುವ ಕಾರ್ಯವನ್ನು ವಿಮರ್ಶೆ ಎಂದು ಹೇಳಬಹುದು. ಅಂಥ ವಿಮರ್ಶೆ ಸಾಹಿತ್ಯ ಕೃತಿಗಳ ಮೌಲ್ಯಮಾಪನ ಮಾಡುವುದರ ಜೊತೆಜೊತೆಗೇ ಸಂಸ್ಕೃತಿಯ ಫಲವಾದ ಸಾಹಿತ್ಯವು ಸಾಂಸ್ಕೃತಿಕವಾಗಿ ಕೂಡ ಹೆಚ್ಚು ಪ್ರಯೋಜನಕಾರಿ ಆಗುವಂತೆ ಮಾಡುವುದಕ್ಕೆ ನೆರವು ನೀಡಬಲ್ಲ ಶಕ್ತಿಯನ್ನೂ ಪಡೆದಿರುತ್ತದೆ. ಎಲ್ಲಾ ಸಾಹಿತ್ಯ ಪ್ರಕಾರದ ಬರವಣಿಗೆಯೂ ಮಾಡಬೇಕಾದ ಕಾರ್ಯ ಸಂಸ್ಕೃತಿಯನ್ನು ಕಟ್ಟುವುದೇ ಆಗಿದೆ. ಸಂಸ್ಕೃತಿಯ ಆರೋಗ್ಯಕರ ಕಟ್ಟುವಿಕೆಗೆ, ಸ್ವರೂಪದಲ್ಲಿ ವ್ಯತ್ಯಾಸವಿದ್ದರೂ, ಉದ್ದೇಶದಲ್ಲಿ ಮತ್ತು ಪರಿಣಾಮದಲ್ಲಿ ಸೃಜನಶೀಲಕೃತಿಗೂ ಸಾಹಿತ್ಯ ವಿಮರ್ಶೆಗೂ ಮೂಲಭೂತ ವ್ಯತ್ಯಾಸವಿಲ್ಲ.

ಮೌಲ್ಯಗಳನ್ನು ಶಾಸ್ತ್ರಗಳು, ಧರ್ಮಶಾಸ್ತ್ರಗಳು ನಿಗದಿಮಾಡುತ್ತಿದ್ದ ಸಾಮಾಜಿಕ ವ್ಯವಸ್ಥೆ ಇದ್ದ ಕಾಲದಲ್ಲಿ ಕಾವ್ಯ, ಕಥೆ, ನಾಟಕ ಇಂಥವು ಕಾಂತಾಸಂಮಿತಗಳು ಮಾತ್ರ ಎಂದು ಕಾವ್ಯಮೀಮಾಂಸಕಾರರು ಕವಿ-ಸಾಹಿತಿಗಳು ತಿಳಿದದ್ದಿತ್ತು. ಮೌಲ್ಯದ ಮಟ್ಟಿಗೆ ಅದರ ಒಳಿತು ಕೆಡುಕುಗಳನ್ನು ಚರ್ಚಿಸುವ, ಕೊರತೆಗಳನ್ನು ಗುರುತಿಸಿ ಪ್ರಶ್ನಿಸುವ, ಪರಿಶೋಧಿಸುವ ‘ಅಧಿಕಾರ’ವನ್ನು ಕವಿ ಸಾಹಿತಿಗಳಿಗೆ ಆ ಕಾಲದ ರಾಜಪ್ರಭುತ್ವವು ಹಾಗೂ ಧಾರ್ಮಿಕ ಪ್ರಭುತ್ವವು-ನೀಡಿರಲಿಲ್ಲ. ಹಾಗಾಗಿ ‘ಸಾಮಾಜಿಕ’ರು ಆ ಕಾರ್ಯವನ್ನು ಕವಿ-ಸಾಹಿತಿಗಳಿಂದ ನಿರೀಕ್ಷಿಸುವಂತಿರಲಿಲ್ಲ. ಅದರಿಂದಾಗಿ ಕಾವ್ಯದ ಪರಮ ಪ್ರಯೋಜನ ಆನಂದ, ರಸಾನಂದ ಎಂಬ ತಿಳಿವಳಿಕೆ ಇತ್ತು. ಒಪ್ಪಿತ ಮೌಲ್ಯಗಳನ್ನು ಪ್ರತಿಭಾವಂತರು ಪ್ರಶ್ನಿಸುವ ಅವಕಾಶ ‘ಅಧಿಕಾರ’ ಪಡೆದಿರಲಿಲ್ಲವಾದ್ದರಿಂದ ಸಮಾಜ ಜಡಗಟ್ಟಿ ಪರಿವರ್ತನೆಗೆ ತೆರೆದಿರದೆ ಇರುವಂಥ ಸ್ಥಿತಿ ಇರುತ್ತಿತ್ತು. ಆದ್ದರಿಂದ ಆ ಕಾಲದಲ್ಲಿ ಸಾಹಿತ್ಯವಿಮರ್ಶೆ ಒಂದು ಸಾಹಿತ್ಯಪ್ರಕಾರವಾಗಿ ಬೆಳೆಯಬೇಕಾದ ಅಗತ್ಯ ಅವರಿಗೆ ಕಂಡಿರಲಿಲ್ಲ. ವಿಮರ್ಶೆ ಮೂಲತಃ ಪ್ರಜಾಸತ್ತಾತ್ಮಕವಾದ ಸಂಸ್ಕೃತಿಯ ತಿಳಿವಳಿಕೆಯ ನೆಲೆಯಲ್ಲಿ ಜನ್ಮ ಪಡೆದದ್ದು. ವಿಮರ್ಶೆಯು ಯಾವುದನ್ನೂ, ಯಾರನ್ನೂ, ಪ್ರಶ್ನಿಸುವ, ಬೆಲೆಕಟ್ಟುವ ‘ಅಧಿಕಾರ’ ಮತ್ತು ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವ ಕ್ರಿಯೆಯಾಗಿದೆ.

. ಕವಿ ಮನೋಧರ್ಮ ವಿಮರ್ಶಕನಿಗೆ ಬೇಕೆ?

ಕವಿಮನೋಧರ್ಮ ಎಂದರೇನು ಎಂದು ಸುಲಭವಾಗಿ ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಕವಿಯ ಪ್ರತಿಭೆ ‘ಕಾರಯತ್ರೀ ಪ್ರತಿಭೆ’; ಓದುಗನದು ಅಥವಾ ಸಹೃದಯನದು ‘ಭಾವಯತ್ರೀ ಪ್ರತಿಭೆ’. ಕಾವ್ಯ ಸೃಷ್ಟಿಯ ಸಂದರ್ಭದಲ್ಲಿ ಕವಿ ಅನುಭವಿಸುವ ಆನಂದವೇ ಅವನು ಪಡೆಯುವ ಪರಮ ಪ್ರಯೋಜನ. ಕಾವ್ಯವನ್ನು ಓದುವ ಅಥವಾ ಅನುಭವಿಸುವ ಸಂದರ್ಭದಲ್ಲಿ ಓದುಗ ಅಥವಾ ಸಹೃದಯ ಪಡೆಯುವ ರಸಾನಂದವೇ ಅವನು ಪಡೆಯುವ ಪರಮಪ್ರಯೋಜನ ಎಂಬುದು ವಿಮರ್ಶೆಯ ಸಾಮಾನ್ಯತತ್ವ, ಸಿದ್ಧಾಂತ, ಕವಿ ಪಡೆದ ಆನಂದವನ್ನು ಸಹೃದಯನೂ ಪಡೆಯುತ್ತಾನೆ ಅಥವಾ ಪಡೆಯಬೇಕು ಎಂಬುದಾದರೆ ಕವಿಯ ಕೃತಿಯನ್ನು ಸಹೃದಯನ ಮನಸ್ಸು ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಳ್ಳಬೇಕಲ್ಲವೆ? ಕವಿಗೆ ಸಮಾನವಾದ ಮನಸ್ಸಿನ ಸಂಸ್ಕಾರ, ಸಿದ್ಧತೆ ಇಲ್ಲದವರು ಸಹೃದಯರಲ್ಲ; ನಿಜವಾದ ಓದುಗರಲ್ಲ. ಸಹೃದಯನಿಗೆ ಕವಿಹೃದಯ ಇರಬೇಕು ಎಂಬುದೇ ಅದರ ನಿಜವಾದ ಅರ್ಥ. ವಿಮರ್ಶಕನಿಗೆ ಇನ್ನೊಂದು ಅಥವಾ ವಿಮರ್ಶಕನ ಪ್ರಜ್ಞೆಗೆ ಇನ್ನೊಂದು ಆಯಾಮವೂ ಇದೆ. ಕೃತಿಯ ಓದಿನಿಂದ ಪಡದ ಅನುಭವವನ್ನು, ಅರಿವನ್ನು, ವಿವೇಕವನ್ನು ಭಾಷೆಯ ಮೂಲಕ ವಿವರಿಸುವ, ವಿಶ್ಲೇಷಿಸುವ ಹೊಣೆಗಾರಿಕೆ ವಿಮರ್ಶಕನಿಗಿರುತ್ತದೆ. ಆ ಕಾರಣದಿಂದಾಗಿ ವಿಮರ್ಶಕನ ಮನೋಧರ್ಮ ಸೃಜನಶೀಲ ಸಾಹಿತಿಯ ಮನೋಧರ್ಮಕ್ಕಿಂತ ಸ್ವರೂಪದಲ್ಲಿ ಮತ್ತು ಪ್ರಕ್ರಿಯಾ ವಿವರದಲ್ಲಿ ಭಿನ್ನ ಎಂದು ಮೇಲುನೋಟಕ್ಕೆ ತೋರುವುದಾದರೂ ಮೂಲತಃ ಭಿನ್ನವಾಗಬೇಕಾಗಿಲ್ಲ.

. ಒಂದು ಕೃತಿಯ ಬೆಲೆ ನಿರ್ಣಯ ಮಾಡುವವರು ಓದುಗರೊ ಅಥವಾ ವಿಮರ್ಶಕರೊ?

ಕೃತಿಯ ಓದುಗರಲ್ಲಿ ಅದನ್ನು ಅರ್ಥವಿಸಿಕೊಂಡು ಆಸ್ವಾದಿಸುವುದಕ್ಕೆ ಅಥವಾ ಅರಿವಿಗೆ ತಂದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ತರತಮ ವ್ಯತ್ಯಾಸವಿದೆ. ಎಲ್ಲಾ ಓದುಗರೂ ಒಂದೇ ರೀತಿಯಲ್ಲಿ ಕೃತಿಯ ಅನುಭವವನ್ನು ಪಡೆಯಲಾರರು. ಒಬ್ಬನೇ ಓದುಗ ಎಲ್ಲಾ ಸಂದರ್ಭದ.ಓದಿನಲ್ಲಿಯೂ, ಕೃತಿ ಒಂದೇ ಆದರೂ, ಒಂದೇ ರೀತಿಯ ಅನುಭವವನ್ನು ಪಡೆಯಲಾರ. ಪ್ರತಿ ದಿನ ಅನುಭವದಲ್ಲಿ ಅಷ್ಟೊ ಇಷ್ಟೊ ವ್ಯತ್ಯಾಸ ಆಗಿಯೇ ಆಗುತ್ತದೆ. ಹಾಗೆಯೇ ವಿಮರ್ಶಕರೂ ಕೂಡ. ಓದುಗರಲ್ಲಿ ಆಗಲಿ ವಿಮರ್ಶಕರಲ್ಲಿ ಆಗಲಿ ತರತಮ ವ್ಯತ್ಯಾಸ ಇದ್ದೇ ಇರುತ್ತದೆ. ಸಾಹಿತ್ಯ ಒಂದು ಕಲೆ. ಅದನ್ನು ಸಂಗೀತ, ಶಿಲ್ಪ, ನೃತ್ಯ ಮುಂತಾದ ಲಲಿತ ಕಲೆಗಳ ಜೊತೆಗೆ ಸೇರಿಸುವುದುಂಟು. ಪರಂಪರೆಯಿಂದ ಆ ಬಗೆಯ ದೃಷ್ಟಿ ಬೆಳೆದು ಬಂದಿದೆ. ಶಿಲ್ಪಕ್ಕೆ ಶಿಲೆ, ಸಂಗೀತಕ್ಕೆ ನಾದ, ನೃತ್ಯಕ್ಕೆ ದೇಹ ಮಾಧ್ಯಮವಾಗಿರುವಂತೆ ಸಾಹಿತ್ಯಕ್ಕೆ ಭಾಷೆ ಮಾದ್ಯಮ. ಈ ಭಾಷೆ ಯಾವುದೊ ಕವಿ ಅಥವಾ ವ್ಯಕ್ತಿ ಸೃಷ್ಟಿಸಿದ್ದಲ್ಲ. ಅದು ಸಮೂಹದ, ಸಮಾಜದ ಸೃಷ್ಟಿ. ಯಾವುದೇ ಪದಕ್ಕೆ ಇಂಥದೇ ಅರ್ಥ ಎಂಬುದು ಇಲ್ಲ. ಇಂಥದೇ ಅರ್ಥ ಅಥವಾ ಆರ್ಥಗಳು ಎಂದು ಒಂದು ಸಮೂಹದ ಒಂದು ಭಾಷೆಯನ್ನಾಡುವ ಜನ ಗ್ರಹಿಸುತ್ತಾರೆ. ಆದರೆ ಬೇರೆ ಭಾಷೆಯ ಜನ ಹಾಗೇ ಗ್ರಹಿಸಲಾರರು. ಏಕೆಂದರೆ ಆ ಪದಕ್ಕೆ ಅರ್ಥ ಎಂಬುದು ಇಲ್ಲವೇ ಇಲ್ಲ. ಆ ಅರ್ಥ ಎಂದು ನಿರ್ದಿಷ್ಟ ಸಮಾಜ, ನಿರ್ದಿಷ್ಟ ಭಾಷೆಯನ್ನು ಆಡುವ ಜನ ಕೊಟ್ಟುಕೊಂಡ ಅರ್ಥ. ಆದ್ದರಿಂದ ಸಾಹಿತ್ಯದ ಮಾಧ್ಯಮವಾದ ಭಾಷೆ ಬೇರೆ ಲಲಿತಕಲೆಗಳ ಮಾಧ್ಯಮಗಳ ಸ್ವರೂಪಕ್ಕಿಂತ ಭಿನ್ನವಾದದ್ದು; ಸೂಕ್ಷ್ಮವಾದದ್ದು.

ಕವಿಯ ಅನುಭವ ವಿಶಿಷ್ಟವಾದದ್ದು.ಅವನದೇ ಅಥವಾ ಅವಳದೇ ಆದದ್ದು. ಅವನ ಅಥವಾ ಅವಳ ಅನುಭವದಲ್ಲಿಯೂ ಅವನು ಅಥವಾ ಅವಳು ಪಡೆದ ಪರಂಪರೆಯ, ಸಂಸ್ಕೃತಿಯ ಪ್ರಭಾವದ ಪ್ರಮಾಣ ಇದ್ದೇ ಇರುತ್ತದೆ. ಇತರ ಹತ್ತು ಹಲವು ಪ್ರಭಾವದ ಎಳೆಗಳೂ ಸೇರಿಕೊಂಡಿರುತ್ತವೆ. ಆದರೂ ಅವನ ಅಥವಾ ಅವಳ ಸಂವೇದನಾ ವಿಶಿಷ್ಟಾಂಶವೂ ಕೂಡ ಒಂದು ಪ್ರಮಾಣದಲ್ಲಿ ಇದ್ದೇ ಇರುತ್ತದೆ. ಕವಿಗೆ ಅಂಥ ವಿಶಿಷ್ಟಾಂಶ ಇರುವಂತೆ ಪ್ರತಿಯೊಬ್ಬ ಓದುಗನಿಗೂ ಅಂಥ ವಿಶಿಷ್ಟಾಂಶ ಇರುತ್ತದೆ. ಆದ್ದರಿಂದ ಒಬ್ಬ ಓದುಗ ಕೃತಿಯನ್ನು ಅರ್ಥಮಾಡಿಕೊಳ್ಳುವುದಕ್ಕೂ ಇನ್ನೊಬ್ಬ ಓದುಗ ಕೃತಿಯನ್ನು ಅರ್ಥಮಾಡಿಕೊಳ್ಳುವುದಕ್ಕೂ ವ್ಯತ್ಯಾಸ ಇದ್ದೇ ಇರುತ್ತದೆ. ಒಬ್ಬನೇ ಓದುಗ ಒಂದು ಕಾಲ ಸಂದರ್ಭದ ಮನಃಸ್ಥಿತಿಯಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೂ ಇನ್ನೊಂದು ಕಾಲ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೂ ವ್ಯತ್ಯಾಸ ಇರುತ್ತದೆ. ಯಾವ ಕಲೆಯನ್ನು ಅರ್ಥಮಾಡಿ ಕೊಳ್ಳುವುದಕ್ಕೂ ಒಂದು ಪ್ರಮಾಣದ ಸಿದ್ಧತೆ ಅಗತ್ಯವಾಗುತ್ತದೆ. ಆ ಸಿದ್ಧತೆಯ ವ್ಯತ್ಯಾಸದಿಂದಲೂ ಕೃತಿಯಿಂದ ಓದುಗ ಪಡೆಯುವ ಅನುಭವದಲ್ಲಿ ವ್ಯತ್ಯಾಸ ಆಗುತ್ತದೆ. ವಿಮರ್ಶಕ ಈ ಸಿದ್ಧತೆಗೆ ಸಂಬಂಧಿಸಿದಂತೆ ಹೆಚ್ಚಿನ ಪರಿಣತಿ ಮತ್ತು ಪ್ರಬುದ್ಧತೆಯನ್ನು ಪಡೆದವನಾಗಿರುತ್ತಾನೆ. ಜೀವನದಲ್ಲಿ ಪರಿಣತವಲ್ಲದ ಅಭಿಪ್ರಾಯಕ್ಕೆ ಹಾಗೂ ಪ್ರಬುದ್ಧ ಅಭಿಪ್ರಾಯಕ್ಕೆ ಇರುವ ವ್ಯತ್ಯಾಸದಂತೆ ಓದುಗ, ವಿಮರ್ಶಕರ ಅಭಿಪ್ರಾಯದಲ್ಲೂ ವ್ಯತ್ಯಾಸ ಇರುತ್ತದೆ. ವಿಮರ್ಶಕರಲ್ಲಿಯೇ ಪರಿಣತಿ ವ್ಯತ್ಯಾಸ ಮತ್ತು ಸಂವೇದನ ಸೂಕ್ಷ್ಮದ ವ್ಯತ್ಯಾಸಗಳಿಂದ ಬೇರೆ ಬೇರೆ ಅಭಿಪ್ರಾಯ ಒಂದೇ ಕೃತಿಯ ಬಗ್ಗೆ ಮೂಡುವುದೂ ಉಂಟು. ಒಂದೇ ಕಾಲದಲ್ಲಿ ಬದುಕುತ್ತಿರುವ ಬೇರೆ ಬೇರೆ ವಿಮರ್ಶಕರಲ್ಲಿ ಒಂದೇ ಕೃತಿಯ ಬಗ್ಗೆ ಅಭಿಪ್ರಾಯ ವ್ಯತ್ಯಾಸ ಉಂಟಾಗಬಹುದಾದಂತ ಬೇರೆ ಬೇರೆ ಕಾಲದಲ್ಲಿ ಬದುಕುತ್ತಿರುವ ವಿಮರ್ಶಕರಲ್ಲಿಯೂ ಅದೇ ಕೃತಿಯ ಬಗ್ಗೆ ಬೇರೆ ಬೇರೆ ಅಭಿಪ್ರಾಯ ಬರುವುದು ಸಾಧ್ಯ.

. ಕವಿಯ ಪ್ರತಿಭಾ ಶಕ್ತಿಯನ್ನು ಅಳೆಯುವ ಮಾನದಂಡಗಳಾವುವು?

ಪ್ಲೇಟೋ, ಅರಿಸ್ಟಾಟನ್‌ನ ಕಾಲದಿಂದಲೂ, ಭರತನ ಕಾಲದಿಂದಲೂ ಸಾಹಿತ್ಯ ಕೃತಿಯ, ಕವಿ ಪ್ರತಿಭೆಯ ಸ್ವರೂಪವನ್ನು ಅಳೆಯುವುದಕ್ಕೆ ಅಥವಾ ಅರ್ಥಮಾಡಿಕೊಳ್ಳುವುದಕ್ಕೆ ಅಗತ್ಯವಾದ ಪರಿಕಲ್ಪನೆಗಳನ್ನು ಮಾನದಂಡಗಳನ್ನು ಕಂಡುಕೊಳ್ಳುವ ನಿರೂಪಿಸುವ ಪ್ರಯತ್ನ ನಡೆಯುತ್ತಲೇ ಬಂದಿದೆ. ಆ ಪ್ರಯತ್ನ ಮುಂದುವರೆಯುತ್ತಲೇ ಇದೆ. ಸಾಹಿತ್ಯ ಇರುವವರೆಗೆ, ಸಾಹಿತಿಗಳು ಇರುವವರೆಗೆ ಈ ಮಾನದಂಡಗಳ ಸ್ವರೂಪ ಚರ್ಚೆ ಇದ್ದೇ ಇರುವಂಥದು. ಅದೆಂದೂ ನಿಂತಲ್ಲೇ ನಿಂತು ಜಡಗಟ್ಟುವಂಥದಲ್ಲ. ಸಾಹಿತ್ಯ ಕೃತಿಯಾಗಲಿ, ಸಾಹಿತ್ಯ ಕುರಿತ ಪರಿಕಲ್ಪನೆಗಳಾಗಲಿ, ಮಾನದಂಡಗಳಾಗಲಿ ಮಾನವ ಸಂಸ್ಕೃತಿಯ ಚಲನೆಯ ಜೊತೆಯಲ್ಲಿಯೆ ಮರುಪರಿಶೀಲನೆಗೆ, ಪುನಾರಚನೆಗೆ ಒಳಗಾಗುತ್ತವೆ. ಈ ಎಲ್ಲಾ ಮಾನದಂಡಗಳೂ, ಪರಿಕಲ್ಪನೆಗಳೂ, ಪುನಾರಚನೆಗೆ ಒಳಗಾಗುತ್ತವೆ. ಈ ಎಲ್ಲಾ ಮಾನದಂಡಗಳೂ, ಪರಿಕಲ್ಪನೆಗಳೂ ವಿಮರ್ಶಕ ವ್ಯುತ್ಪತ್ತಿ ಅಂದರೆ ವಿದ್ವತ್ತು, ‘ಉಚಿತಾನುಚಿತ ವಿವೇಕ’ಗಳ ಮೂಲಕ ಬಳಸಿಕೊಳ್ಳಬಹುದಾದ ಉಪಕರಣಗಳು. ಅವುಗಳ ಜೊತೆಗೆ ವಿಮರ್ಶಕನಿಗೆ ವಿಶಿಷ್ಟವಾದ ಸಂವೇದನಾ ಸೂಕ್ಷ್ಮವೊಂದು ಇದ್ದೇ ಇರುತ್ತದೆ. ಅದರ ನಿರ್ದೇಶನವೂ, ತುಡಿತದ ಎಳೆತವೂ ಹೇಗೋ ವಿವರಿಸಲಾಗದ ಸೂಕ್ಷ್ಮದಲ್ಲಿ ಸೇರಿಕೊಂಡಿರುತ್ತವೆ. ಅದೇ ವಿಮರ್ಶಕನಲ್ಲಿಯೇ ಬೇರೆ ಬೇರೆ ಕಾಲ, ಸಂದರ್ಭಗಳಲ್ಲಿ ತನ್ನತನದ ಸೂಕ್ಷ್ಮತೆ ಒಂದೇ ರೀತಿ ಇರುತ್ತದೆ ಎಂದಾಗಲಿ, ಇರಬೇಕು ಎಂದಾಗಲಿ ಹೇಳುವಂತಿಲ್ಲ. ಅದೊಂದು ನಿತ್ಯ ತೆರೆದಿರುವ ಅಂದರೆ ವಿಮರ್ಶಕ ಇರುವವರೆಗೂ ತೆರೆದಿರುವ ಅಂಶ.

. ವಿಮರ್ಶೆಯಲ್ಲಿ ಪ್ರಾಮಾಣಿಕೆಯ ಸ್ಥಾನವೇನು?

ಉತ್ತಮ ಅಥವಾ ಆರೋಗ್ಯಕರ ಸಮಾಜದ ಕಲ್ಪನೆಯನ್ನು ಕಟ್ಟಿಕೊಳ್ಳುವಾಗ ಆ ಸಮಾಜದಲ್ಲಿರುವ ಎಲ್ಲರೂ ಪ್ರಾಮಾಣಿಕರಾಗಿರಬೇಕು ಎಂದು ನಿರೀಕ್ಷಿಸುವುದು ಸಹಜ. ಆದರ್ಶ ಸಮಾಜ ಹಾಗೇ ಇರಬೇಕಾದದ್ದು. ಆದರೆ ಎಂದೂ, ಯಾವ ಕಾಲದಲ್ಲಿಯೂ ಅಂಥ ಸಮಾಜ ನಿರ್ಮಾಣವಾದ ಉದಾಹರಣೆ ಇಲ್ಲ. ಅಂದರೆ ಎಲ್ಲರೂ ಪ್ರಾಮಾಣಿಕವಾಗಿ ಇದ್ದ ಸಮಾಜ ಎಂದೂ ಇದ್ದದ್ದಿಲ್ಲ. ಈ ವಾಸ್ತವ ಸತ್ಯದ ಅರಿವು ನಮಗೆ ನಿಮಗೆ ಎಲ್ಲರಿಗೂ ಇರಬೇಕಾದದ್ದು. ಸಾಹಿತ್ಯ ವಿಮರ್ಶಕನು ಯಾವ ಕಾಲದವನೇ ಆಗಲಿ ಸಮಾಜ ಜೀವಿ. ಎಲ್ಲ ವಿಮರ್ಶಕರೂ ಪ್ರಾಮಾಣಿಕರಾಗಿಯೇ ಎಲ್ಲಾ ಸಂದರ್ಭಗಳಲ್ಲಿಯೂ ಇದ್ದೇ ಇರುತ್ತಾರೆಂದು ಹೇಳುವಂತಿಲ್ಲ. ಹಾಗೆಂದು ಪ್ರಾಮಾಣಿಕ ವಿಮರ್ಶಕರೇ ಇಲ್ಲ ಎಂಬ ದುಡುಕಿನ ತೀರ್ಮಾನಕ್ಕೂ ಬರಬೇಕಾದದ್ದಿಲ್ಲ. ಶ್ರೇಷ್ಠರು, ಶ್ರೇಷ್ಠವಾದದ್ದು ಯಾವ ಕಾಲದಲ್ಲಿಯೆ ಆಗಲಿ, ಯಾವ ಕ್ಷೇತ್ರದಲ್ಲಿಯೇ ಆಗಲಿ ಅಪರೂಪವಾದದ್ದು. ಆದರೆ ಅಂಥ ಅಪರೂಪದ ವ್ಯಕ್ತಿ ಮತ್ತು ಸಂಗತಿಗಳಿಂದಲೇ ಮಾನವ ನಾಗರಿಕತೆ ಹೆಚ್ಚು ಹೆಚ್ಚು ಮಾನವೀಯವಾಗಿ ಬದುಕುವುದಕ್ಕೆ ಅರ್ಹವಾದ ಸಂಸ್ಕೃತಿ ಸಂದರ್ಭವನ್ನು ಕಟ್ಟಿಕೊಳ್ಳುತ್ತ ಬರುವುದು ಸಾಧ್ಯವಾಗಿದೆ. ಶ್ರೇಷ್ಠ ಸೃಜನಶೀಲ ಸಾಹಿತಿಗಳೂ ಹೇಗೆ ಅಪರೂಪವೋ ಹಾಗೆಯೆ ಶ್ರೇಷ್ಠ ವಿಮರ್ಶಕರೂ ಅಪರೂಪವೆ.

ವಿಮರ್ಶಕ ಪ್ರಾಮಾಣಿಕ ಆಗಿರುವುದೇ ಶ್ರೇಷ್ಠ ವಿಮರ್ಶೆಗೆ ಕಾರಣವಾಗುವುದಿಲ್ಲ. ಪ್ರಾಮಾಣಿಕರೆಲ್ಲ ವಿಮರ್ಶಕರಲ್ಲ. ಪ್ರಾಮಾಣಿಕತೆಯೊಂದೇ ಉತ್ತಮ ವಿಮರ್ಶೆಗೆ ಮಾನದಂಡವಲ್ಲ. ವಿಮರ್ಶೆಯಲ್ಲಿ ಪ್ರಾಮಾಣಿಕತೆ ಇರಬೇಕಾದದ್ದು; ಇರಲೇಬೇಕಾದದ್ದು. ಆದರೆ ಅದೊಂದೇ ವಿಮರ್ಶಕನ ವಿಮರ್ಶೆಯ ಗುಣವನ್ನು ನಿರ್ಧರಿಸುವ ಪ್ರಮಾಣವಲ್ಲ. ವಿಮರ್ಶಕ ಪ್ರಾಮಾಣಿಕನಾಗಿದ್ದೂ, ದಡ್ಡನಾಗಿರಬಹುದು. ಎದುರಿಗಿರುವ ಕೃತಿ ವಿಮರ್ಶೆಗೆ ಅಗತ್ಯವಾದ ಸಂವೇದನ ಸಂಸ್ಕಾರ, ವ್ಯುತ್ಪತ್ತಿಬಲ ವಿಮರ್ಶಕನಲ್ಲಿ ಇಲ್ಲದೆ ಇದ್ದಾಗ ಅವನ ಪ್ರಾಮಾಣಿಕತೆ ಎಂಬುದು ಹೆಚ್ಚಿನ ಪ್ರಯೋಜನಕ್ಕೆ ಬರಲಾರದು. ಹಾಗೆಯೆ ಸಂವೇದನ ಶೀಲತೆ, ವ್ಯುತ್ಪತ್ತಿಬಲ ಸಮೃದ್ಧ ಮತ್ತು ಸೂಕ್ಷ್ಮವಾಗಿದ್ದರೂ ಪ್ರಾಮಾಣಿಕತೆ ಇಲ್ಲದೆ ಇದ್ದರೆ ವಿಮರ್ಶೆ ಒಂದು ಮೋಸದ ವ್ಯವಹಾರ ಆಗಿಬಿಡುವ ಸಂಭವವೂ ಇದೆ; ಅಪಾಯವೂ ಇದೆ. ಸಂಸ್ಕೃತಿಯನ್ನು ಕಟ್ಟುವ ಹೊಣೆಗಾರಿಕೆಯಲ್ಲಿ ಸೃಜನಶೀಲ ಸಾಹಿತಿಯಂತೆಯೇ ಪಾಲುದಾರನಾಗಿರುವ ವಿಮರ್ಶಕನಲ್ಲಿ ಪ್ರಾಮಾಣಿಕತೆ ಇಲ್ಲದೆ ಇದ್ದರೆ ಸಂಸ್ಕೃತಿದ್ರೋಹ ಮಾಡುವಲ್ಲಿ ಅವನು ಪಾಲುದಾರನಾದಂತೆ ಆಗುತ್ತದೆ.

. “ನೀನೇರಬಲ್ಲೆಯಾ ನಾನೇರುವೆತ್ತರಕ್ಕೆ? ನೀ ಹಾರಬಲ್ಲೆಯಾ ನಾ ಹಾರುವಗಲಕ್ಕೆ? ನೀ ಮುಳುಗಬಲ್ಲೆಯಾ ನಾ ಮುಳುಗುವಾಳಕ್ಕೆ?” ಎಂದು ಕುವೆಂಪು ಅವರು ವಿಮರ್ಶಕರಿಗೆ ಸವಾಲು ಹಾಕುತ್ತಾರಲ್ಲಾ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಸಾಹಿತ್ಯ ವಿಮರ್ಶೆಯ ಪರಂಪರೆ ಬೆಳೆದದ್ದು ನಮ್ಮಲ್ಲಿ ತೀರಾ ಇತ್ತೀಚಿನ ಕಾಲದಲ್ಲಿ; ಸರಿಯಾಗಿ ಒಂದು ಶತಮಾನ ಕೂಡ ಆಗಿಲ್ಲ. ಪಾಶ್ಚಾತ್ಯದೇಶಗಳಲ್ಲಿ ಮುಖ್ಯವಾಗಿ ಗ್ರೀಸ್, ಗ್ರೇಟ್ ಬ್ರಿಟನ್, ಫ್ರಾನ್ಸ್ ಇಂಥ ದೇಶಗಳಲ್ಲಿ ನಮಗಿಂತ ಬಹಳ ಹಿಂದಿನಿಂದಲೂ ಸಾಹಿತ್ಯ ವಿಮರ್ಶೆ ಬೆಳೆದು ಬಂದಿದೆ. ನಮ್ಮಲ್ಲಿ ಸೃಜನಶೀಲ ಸಾಹಿತ್ಯ ಹಾಗೂ ಕಾವ್ಯ ಮೀಮಾಂಸೆಯ ಪರಂಪರೆ ಬಹಳ ಹಿಂದಿನಿಂದಲೂ ಬೆಳೆದು ಬಂದಿದೆಯಾದರೂ ಅಂಥ ಪ್ರಾಚೀನತೆ ಕೃತಿವಿಮರ್ಶೆಯ ಪರಂಪರೆಗೆ ಇಲ್ಲ. ಕಾವ್ಯ ಮೀಮಾಂಸೆಯನ್ನು ಪರಿಕಲ್ಪನೆ, ಸಿದ್ಧಾಂತ ರೂಪಗಳಲ್ಲಿ ಹೇಳುವ ಮಾತುಗಳು ಸಾರ್ವತ್ರಿಕವಾಗಿರುತ್ತವೆ; ನಿರ್ದಿಷ್ಟಕೃತಿ ಅಥವಾ ಕವಿ ಕುರಿತು ಹೇಳಿದ್ದಾಗಿರುವುದಿಲ್ಲ. ಆದ್ದರಿಂದ ಕವಿಗಳ ‘ಅಹಂ’ಕಾರಕ್ಕೆ ಸೂಜಿಮೊನೆ ತಾಗಿಸುವ ಪ್ರಶ್ನೆ ಅಲ್ಲಿ ಏಳುವುದೇ ಇಲ್ಲ. ಕೃತಿ ವಿಮರ್ಶೆ ಕೃತಿಯ ಬೆಲೆ ಕಟ್ಟುವ ಕೆಲಸವನ್ನು ಮಾಡುವಂಥದು. ಕೃತಿಯ ಅಭಿವ್ಯಕ್ತಿ ಸಮರ್ಪಕತೆ ಮತ್ತು ಕೃತಿಯ ಮೂಲಕ ಪರಿಣಾಮಗೊಳ್ಳುವ ಮೌಲ್ಯ ದೃಷ್ಟಿ ಕುರಿತ ವಿವೇಚನೆ, ಮೌಲ್ಯಮಾಪನ ವಿಮರ್ಶೆಯಲ್ಲಿ ನಡೆಯವುದರಿಂದ ಕೃತಿಯ ಶಕ್ತಿ,ದೌರ್ಬಲ್ಯ ಎರಡರ ಬಗೆಗಿನ ಚರ್ಚೆಯೂ ವಿಮರ್ಶೆಯಲ್ಲಿ ನಡೆಯುವಂತಾಗುತ್ತದೆ. ತನ್ನ ಕೃತಿ ಶ್ರೇಷ್ಠವಾಗಿದೆ, ಸರ್ವಾಂಗ ಸುಂದರವಾಗಿದೆ ಎಂದು ನಂಬಿರುವ ಅಥವಾ ಇತರರು ಹಾಗೆ ಅಂದುಕೊಳ್ಳಬೇಕು ಎಂದು ನಿರೀಕ್ಷಿಸುವ ಕವಿಗೆ ಅವನ/ಅವಳ ಕೃತಿಯ ಕೊರತೆಯನ್ನು ಕುರಿತು ಏಳಬಹುದಾದ ವಿಮರ್ಶೆಯ ಬಗೆಗೆ ಅಗತ್ಯವಾದ ಸಹಿಸುವ ಸಂಸ್ಕೃತಿಯ ಕೊರತೆ ಕಾಣುತ್ತದೆ. ಈ ಕೊರತೆ ಸಾಹಿತ್ಯ ಚರಿತ್ರೆಯ ಉದ್ದಕ್ಕೂ ಬಹುಪಾಲು ಕವಿ, ಸೃಜನಶೀಲ ಸಾಹಿತಿಗಳಲ್ಲಿ ಉಳಿದುಕೊಂಡು ಬಂದಿದೆ. ಸಾಹಿತ್ಯಕ್ಷೇತ್ರದಲ್ಲಿ ಸೃಜನಶೀಲ ಸಾಹಿತಿಗಳು, ಸಾಹಿತ್ಯಕ್ಷೇತ್ರದ ಪ್ರಥಮ ದರ್ಜೆಯ ಪ್ರಜೆಗಳೆಂತಲೂ ಅಥವಾ ಔರಸಪುತ್ರರೆಂತಲೂ ವಿಮರ್ಶಕರು ಸಾಕುಮಕ್ಕಳೆಂತಲೂ ಪರಿಭಾವಿಸುವ ಪರಿಪಾಠ ಬೆಳೆದುಬಂದಿದೆ. ಸಂವೇದನೆ ಕ್ಷೇತ್ರದಲ್ಲಿ ಈ ಸಾಕುಮಕ್ಕಳಿಗೆ ಸಮಪಾಲಿನ ಹಕ್ಕು ಇಲ್ಲ ಎಂಬ ಮನೋಧರ್ಮ ಬೆಳೆದುಬಂದಿದೆ. ಅದರ ಪರಿಣಾಮವೇ ಕುವೆಂಪು ಅಂಥವರೂ ಕೂಡ ‘ನಾನೇರುವೆತ್ತರಕೆ ನೀನೇರಬಲ್ಲೆಯಾ……” ಎಂಬಂಥ ಮಾತುಗಳನ್ನು ಆಡುವುದಕ್ಕೆ ಕಾರಣ. ಆದರೆ ಅದು ಸರಿಯಾದ ದೃಷ್ಟಿ ಅಲ್ಲ.

ಸೃಜನಶೀಲ ಕೃತಿರಚನೆಯ ಸಂದರ್ಭದಲ್ಲಿ ಎದುರಿಸುವ ಮೊದಲ ಸವಾಲು ಭಾಷೆಗೆ ಸಂಬಂಧಿಸಿದ್ದು ಕವಿ ಎಷ್ಟೇ ಸಮರ್ಥನಾಗಿದ್ದರೂ ಆತ ಬಳಸುವ ಭಾಷೆಗೆ ಸಂಬಂಧಿಸಿದಂತೆ ಸರ್ವ ಸಮರ್ಪಕವಾದ ರೀತಿಯಲ್ಲಿ ಬಳಸಬಲ್ಲನೆಂಬುದು ನಿಜವಲ್ಲ. ಪಂಪ, ಕುಮಾರವ್ಯಾಸ, ಕುವೆಂಪು, ಬೇಂದ್ರೆ, ಅಡಿಗ ಇಂಥವರು ಕನ್ನಡ ಭಾಷೆಯನ್ನು ಅತ್ಯಂತ ಸೃಜನಶೀಲವಾಗಿ, ಉಜ್ವಲ ಪ್ರತಿಭಾಶಕ್ತಿಯಿಂದ ಬಳಸಿದವರು. ಆದರೆ ಅವರೂ ಕೂಡ ಕನ್ನಡ ಭಾಷೆಗೆ ಸಾಧ್ಯವಾಗುವಂಥ ಅಭಿವ್ಯಕ್ತಿ ಶಕ್ತಿಯನ್ನು ಅದರೆಲ್ಲಾ ಸಾಧ್ಯತೆಗಳಲ್ಲಿ ಬಳಸಿದ್ದಾರೆಂದು ಹೇಳುವಂತಿಲ್ಲ. ಆದ್ದರಿಂದ ಮಾದ್ಯಮದ ಬಳಕೆಯಲ್ಲಿ ಪರಿಪೂರ್ಣತೆಯೆಂಬುದಿಲ್ಲ. ಪರಿಪೂರ್ಣ ಯಶಸ್ಸು ಎಂಬುದು ಇಲ್ಲ. ಯಶಸ್ಸಿನಲ್ಲಿ ತರತಮಗಳಿರುತ್ತವೆ; ಅಷ್ಟೆ.

ಅನುಭವದಲ್ಲಿ ಕೂಡ ಪ್ರಜ್ಞಾಪೂರ್ವಕ ನೆಲೆಯಲ್ಲಿ ಗ್ರಹಿಸಿದ ಅನುಭವ ಮಾತ್ರವೇ ಕಾವ್ಯದಲ್ಲಿ, ಸೃಜನಶೀಲ ಕೃತಿಯಲ್ಲಿ ಕ್ರಿಯಾಶೀಲವಾಗಿರುವುದಿಲ್ಲ. ಪ್ರಜ್ಞಾಪೂರ್ವಕ ಅನುಭವದ ಜೊತೆಗೆ ಅಪ್ರಜ್ಞಾಪೂರ್ವಕ ಅನುಭವದ ನೆಲೆಯಿಂದಲೂ, ಒಂದು ಸೃಜನಶೀಲ ಕ್ರಿಯೆ ನಡೆಯುತ್ತಿರುವಾಗ, ಅಚಾನಕ್ಕಾಗಿ ಕೂಡಿಕೊಳ್ಳುವ ಅನುಭವಾಂಶಗಳು ಅನುಭವ ಸಾಮಗ್ರಿಗಳು ಇದ್ದೇ ಇರುತ್ತವೆ. ಕೃತಿರಚನೆಗೆ ತೊಡಗುವ ಸಂದರ್ಭದಲ್ಲಿ ಪಡೆದ ಅನುಭವವು ಕೃತಿ ರಚನೆಯ ಪ್ರಕ್ರಿಯೆಯಲ್ಲಿ ಪುನಾರಚಿತವಾಗುತ್ತ ಇರುವುದರಿಂದಾಗಿ ಉಂಟಾಗುವ ಅನುಭವದ ಹೊಸ ಸ್ವರೂಪದ ಬಗ್ಗೆ, ಪರಿಣಾಮಗೊಳ್ಳುವ ಪಾಕದ ಬಗ್ಗೆ ಸ್ವತಃ ಕವಿಗೇ ಪರಿಪೂರ್ಣವಾದ ಅರಿವು ಪ್ರಜ್ಞಾನೆಲೆಯಲ್ಲಿ ಇರುವುದು ಸಾಧ್ಯವಿಲ್ಲ. ಕೃತಿರಚನೆಯಾದ ಮೇಲೆಯೂ ಕವಿಗೇ ಸ್ವತಃ ಗೋಚರವಾಗದೆ ಇರುವಂಥ, ಅವನ / ಅವಳ ಜಾಗೃತ ಪ್ರಜ್ಞೆಗೆ ಪ್ರವೇಶಗೊಂಡಿರದೇ ಇರುವಂಥ ಅರ್ಥ ಸೂಕ್ಷ್ಮಗಳು, ಅನುಭವ ಸೂಕ್ಷ್ಮಗಳು ಅವನ / ಅವಳ ಕೃತಿಯಲ್ಲಿಯೇ ಇರುವುದು ಸಾಧ್ಯ. ಆದ್ದರಿಂದ ಕವಿಗೇ ಅವನ ಕಾವ್ಯ ಸಂಪೂರ್ಣವಾಗಿ ಅರ್ಥವಾಗದೆ, ಸ್ವಾಧೀನವಾಗದೆ ಇರುವಾಗ, ಅವನಿಗೇ ಸಂಪೂರ್ಣವಾಗಿ ಅರ್ಥವಾಗದೇ ಇರಬಹುದಾದ ಅವನ ಕಾವ್ಯದ ಬಗೆಗೆ ಅಷ್ಟರಮಟ್ಟಿಗೆ ಆತ ಅವಿಮರ್ಶಕನಾಗಿರುತ್ತಾನೆ. “ತನ್ನ ಕಾವ್ಯಕೆ ತಾಂ ಮಹಾಕವಿ ಮಣಿಯುವಂತೆ” ಎಂಬ ಮಾತು ಕೂಡ ಕುವೆಂಪು ಅವರದೆ, ಕವಿಗೆ ತನ್ನ ಕಾವ್ಯಕ್ಕೇ ಮಣಿಯುವಂಥ ಭಾವ ಪ್ರೇರಣೆ ಉಂಟುಮಾಡುವ ಅಂಶ ಅಥವಾ ಸಂದರ್ಭ ಇರುತ್ತದೆ ಎಂದಾದಾಗ, ಕವಿಯೇ ವಿಸ್ಮಿತನಾಗುವಂತೆ ಕೃತಿಗೆ ಹೊಸ ಹೊಸ ಅರ್ಥಗಳನ್ನು ಸ್ಫುರಿಸುವ ಶಕ್ತಿ ಇರುತ್ತದೆ. ಓದುಗರೂ ಅಂಥ ಪ್ರತಿಭಾಸಂಪನ್ನರಾಗಿದ್ದರೆ ಅಂಥ ಹೊಸ ಹೊಸ ಅರ್ಥ ಪರಂಪರೆಗಳೂ ಅವರಿಗೂ ಗೋಚರವಾಗಬಹುದು, ಅವರಲ್ಲಿಯೂ ಸ್ಫುರಿಸಬಹುದು ಎಂಬ ತಿಳಿವಳಿಕೆ ಕವಿಗಿರಬೇಕಾಗುತ್ತದೆ. ವಿಮರ್ಶಕ ಅಂಥ ಓದುಗನಾಗಿರಲಾರ ಎಂದು ಭಾವಿಸುವುದು ಸರಿಯಾದ ತಿಳಿವಳಿಕೆಯಲ್ಲ.

. ನಿಮ್ಮ ದೃಷ್ಟಿಯಲ್ಲಿ ಜೀವನ ಎಂದರೇನು?

ಹುಟ್ಟಿದಂದಿನಿಂದ ಚಟ್ಟ ಏರುವವರೆಗಿನ ಅನುಭವದ ಮೊತ್ತ.

* ೦೧.೫.೨೦೦೧ ರಂದು ಎಂ. ಮಹೇಶ ಕುಮಾರ್ ಎಂಬ ಬಿ.ಇಡಿ ವಿದ್ಯಾರ್ಥಿ ಕೇಳಿದ ಪ್ರಶ್ನೆಗಳಿಗೆ ನೀಡಿದ ಉತ್ತರ.