ಶಿವರಾಮ ಕಾರಂತರು ಬದುಕಿದ್ದರೆ ಈಗ ತೊಂಬತ್ತೊಂಬತ್ತು ಕಳೆದು ನೂರನೆಯ ವರ್ಷದಲ್ಲಿ ಅಂದರೆ ಶತಮಾನದ ವರ್ಷದಲ್ಲಿ ಸಾಗುತ್ತಿರುವುದನ್ನು ನೋಡುವ ಸಂತೋಷ ನಮ್ಮದಾಗುತ್ತಿತ್ತು; ನಾಡಿನದಾಗುತ್ತಿತ್ತು. ಅವರು ಖಂಡಿತ ಶತಾಯುಷಿಯಾಗುತ್ತಾರೆ ಎಂದು ನಂಬಿಕೊಂಡಿದ್ದವರಲ್ಲಿ ನಾನೂ ಒಬ್ಬನಾಗಿದ್ದೆ. ನಾನು ಅವರನ್ನು ಕೊನೆಯ ಸಲ ನೋಡಿದ್ದು ಇದೇ ಮಂಗಳೂರಿನಲ್ಲಿ – ೧೯೯೭ರ ಮಾರ್ಚ್ ೧೮ರಂದು. ಅವರು ಒಂದು ಕಾಲದಲ್ಲಿ ಓದಿದ್ದ ಮಂಗಳೂರು ಸರ್ಕಾರಿ ಕಾಲೇಜು ಈಗ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಾಗಿದೆ. ಆ ಕಾಲೇಜಿನ ೧೨೫ನೆಯ ವರ್ಷದ ಅಚರಣೆಯ ಸಮಾರಂಭದ ಅಂಗವಾಗಿ ದಿನವಿಡೀ ನಡೆದ ‘ದಕ್ಷಿಣ ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಅನನ್ಯತೆ’ ಕುರಿತ ಆ ದಿನದ ಸಾಹಿತ್ಯ ಗೋಷ್ಠಿಯ ಉದ್ಘಾಟಕರಾಗಿ ಕಾರಂತರು ಬಂದಿದ್ದರು. ನಾನು ಸಮಾರೋಪ ಭಾಷಣಕಾರನಾಗಿ ಬಂದಿದ್ದೆ. ಆ ದಿನ ಕಾರಂತರನ್ನು ಕಂಡಾಗ, ಅವರೊಡನೆ ಮಾತನಾಡಿದಾಗ, ಅವರು ಸುಮಾರು ಒಂದು ತಾಸು ನಿಂತುಕೊಂಡೇ ತರ್ಕ ತಪ್ಪದೆ, ನೆನಪುಗಳಿಗಾಗಿ ತಡಕಾಡದೆ ನಿರರ್ಗಳವಾಗಿ ತೊಂಬತ್ತೈದರ ಆ ವಯಸ್ಸಿನಲ್ಲಿ ಭಾಷಣ ಮಾಡಿದ್ದನ್ನು ಸ್ವತಃ ಕಂಡಾಗ, ಕೇಳಿದಾಗ ಸಂತೋಷ, ವಿಸ್ಮಯ ಆಗಿತ್ತು. ಜೊತೆಗೇ, ಅವರು ಇನ್ನೂ ಕೆಲವು ವರ್ಷ ನಮ್ಮ ಜೊತೆಗೆ ಇದ್ದಾರು, ಶತಮಾನ ದಾಟಿ ಮುನ್ನಡೆದಾರು ಎನಿಸಿತ್ತು. ಅದೇ ವರ್ಷದ ಡಿಸೆಂಬರ್ ೯ ರಂದು ಅಂದರೆ ಅಷ್ಟು ಬೇಗ-ಒಂಬತ್ತು ತಿಂಗಳ ಒಳಗೇ-ತೀರಿಹೋಗಬಹುದೆಂದು ನಾನು ಊಹಿಸಿರಲಿಲ್ಲ. ಆ ಸಮಾರಂಭದಲ್ಲಿ ನಾನು ಅವರನ್ನು ನೋಡಿದ್ದೇ ಕೊನೆಯ ಸಲ ನೋಡಿದ್ದಾಗಿ ಬಿಡುತ್ತದೆ, ಎಂದು ನಾನು ಭಾವಿಸಿರಲಿಲ್ಲ.

ಕಾರಂತರು ನೂರು ವರ್ಷ ಬದುಕಲಿಲ್ಲವಾಧರೂ ತೊಂಬತ್ತೈದು ವರ್ಷಗಳ ದೀರ್ಘಾಯುಷಿಯಾಗಿದ್ದರಲ್ಲಾ ಅದೇ ನಾಡಿನ ಭಾಗ್ಯ ಎಂದು ಸಮಾಧಾನಪಟ್ಟುಕೊಳ್ಳಬೇಕಾಗಿದೆ. ಒಂದು ಆಯುರ್ಮಾನದಲ್ಲಿ ಕೊಡಬಹುದಾದದ್ದನ್ನೆಲ್ಲ ಕೊಟ್ಟು ಹೋಗಬಹುದಾದ ಅವಕಾಶದಿಂದ ಅವರು ವಂಚಿತರಾಗಲಿಲ್ಲ, ಎಂಬುದು ಆ ಸಮಾಧಾನಕ್ಕೆ ಕಾರಣ. ಅವರು ಹುಟ್ಟಿದ್ದು ಇಪ್ಪತ್ತನೆಯ ಶತಮಾನದ ಆದಿಯಲ್ಲಿ ೧೯೦೬ರ ಅಕ್ಟೋಬರ್ ೧೦ರಂದು. ಅಂದರೆ ಇಪ್ಪತ್ತನೆಯ ಶತಮಾನದ ಮೊದಲ ಒಂದೂ ಮುಕ್ಕಾಲು ವರ್ಷ ಹಾಗೂ ಕೊನೆಯ ಎರಡು ವರ್ಷ ಬಿಟ್ಟರೆ ಉಳಿದಂತೆ ಕಾರಂತರು ಇಪ್ಪತ್ತನೆಯ ಶತಮಾನವನ್ನು ಪೂರ್ತಿಯಾಗಿ ಕಂಡವರು. ಆ ಶತಮಾನದುದ್ದಕ್ಕೂ ಅವರಷ್ಟು ಕ್ರಿಯಾಶೀಲರಾಗಿದ್ದ ಸಾಹಿತಿ ಕನ್ನಡ ನಾಡಿನಲ್ಲಿ ಬೇರೊಬ್ಬರಿಲ್ಲ : ಭಾರತದಲ್ಲಿಯೂ ಬಹುಶಃ ಯಾರೂ ಇರಲಿಲ್ಲ. ಕಾರಂತರಿಗಿಂತ ಎರಡು ವರ್ಷ ಮೊದಲು ಅಂದರೆ ೧೯೦೦ ಜೂನ್ ೧೬ ರಂದು ಹುಟ್ಟಿ ಇಡೀ ಶತಮಾನ ಬಾಳಿ ಮುಂದಕ್ಕೆ ಸಾಗಿರುವ ಪ್ರೊ. ಎ.ಎನ್.ಮೂರ್ತಿರಾಯರಂಥ ಸಾಹಿತಿ ಕನ್ನಡದಲ್ಲಿಯೆ ಈಗಲೂ ಇದ್ದಾರಾದರೂ ಕಾರಂತರಂತೆ, ಕಾರಂತರಷ್ಟು ಕ್ರಿಯಾಶೀಲರಾಗಿದ್ದರೆಂದು ಹೇಳುವಂತಿಲ್ಲ. ಕಾರಂತರಿಗಿಂತ ಎರಡು ವರ್ಷ ಕಿರಿಯರಾಗಿದ್ದ ಅಂದರೆ ೧೯೦೪ರ ಡಿಸೆಂಬರ್ ೨೯ ರಂದು ಹುಟ್ಟಿದ ಕುವೆಂಪು, ಕಾರಂತರಂತೆಯೇ ಅತ್ಯಂತ ಮಹತ್ವದ ಸಾಧನೆ ಮಾಡಿದ, ಕೊಡುಗೆ ನೀಡಿದ ಶಿಖರ ಸದೃಸ ಸಾಹಿತಿಯಾದರೂ ಅವರು ಕಾರಂತರಿಗಿಂತ ಮೂರು ವರ್ಷ ಮೊದಲೇ ಅಂದರೆ ೧೯೯೪ರಲ್ಲಿ ತೀರಿಹೋದವರು. ಅವರು ‘ಕುಟೀಚಕ’ ಪ್ರವೃತ್ತಿಯ ಸಾಹಿತಿ-ಸಾಧಕರಾಗಿದ್ದರೆ ಕಾರಂತರು ‘ಬಹೂದಕ’ ಪ್ರವೃತ್ತಿಯ ಸಾಹಿತಿ-ಸಾಧಕರಾಗಿದ್ದರು. ಚುರುಕು ಚಟುವಟಿಕೆ, ಕ್ರಿಯಾಶೀಲತೆಯ ದೃಷ್ಟಿಯಿಂದ ನೋಡುವುದಾದರೆ ಕುವೆಂಪು ಅವರನ್ನೂ ಕಾರಂತರು ಮೀರಿಸಿದವರಾಗಿದ್ದರು. ಅಂಥ ಅದಮ್ಯ, ಅವಿರತ ಚಟುವಟಿಕೆಯ ಕ್ರಿಯಾಶೀಲ ವ್ಯಕ್ತಿತ್ವವಾಗಿ ಬಾಳಿ, ಬೆಳಗಿ ಚರಿತ್ರೆಯಲ್ಲಿ ತಮ್ಮ ಹೆಸರನ್ನು ಶಾಶ್ವತವಾಗಿ ಉಳಿಸಿಹೋದವರು ಕಾರಂತರು. ಸಾವಿರ ವರ್ಷಕ್ಕಿಂತ ಹೆಚ್ಚು ಕಾಲದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಾರಂತರಂಥ ಮತ್ತು ಕಾರಂತರಷ್ಟು ಕ್ರಿಯಾಶೀಲ ಮತ್ತು ಆಸಕ್ತಿ ವಿಸ್ತಾರದ ವ್ಯಕ್ತಿತ್ವದ ಸಾಹಿತಿ ಇದ್ದರೆಂಬುದಕ್ಕೆ ದಾಖಲೆ ಇಲ್ಲ. ಅಂಥ ಅಪೂರ್ವ ವ್ಯಕ್ತಿತ್ವ ಅವರದು. ಅಂಥವರನ್ನು ನೆನೆಯುವ, ಅವರ ಬರವಣಿಗೆಗಳನ್ನು ಕುರಿತು ಚಿಂತಿಸುವ, ಚರ್ಚಿಸುವ, ಮೌಲ್ಯಮಾಪನ ಮಾಡುವ ಇಂಥ ‘ಶಿವರಾಮ ಕಾರಂತ : ಸಾಂಸ್ಕೃತಿಕ ಅನುಸಂಧಾನ’, ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಮ್ಮಿಕೊಂಡ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಅಭಿನಂದನೆಗೆ ಅರ್ಹವಾಗಿವೆ.

ಇಪ್ಪತ್ತನೆಯ ಶತಮಾನವು ಮಾನವ ಇತಿಹಾಸದಲ್ಲಿ ಅತ್ಯಂತ ಸಂಕೀರ್ಣವಾದದ್ದು. ಹತ್ತು ಹಲವು ಬಗೆಯ ಸವಾಲುಗಳನ್ನು ಎದುರಿಸುತ್ತ, ಬಿಕ್ಕಟ್ಟುಗಳಿಂದ ಬಿಡಿಸಿಕೊಳ್ಳುತ್ತ, ಬಿಡಿಸಿಕೊಂಡಂತೆ ತೋರಿದ ಪರಿಹಾರಗಳ ಒಡಲಲ್ಲಿಯೆ ಹುಟ್ಟಿಕೊಂಡ ಬೇರೆ ಸ್ವರೂಪದ ಸಮಸ್ಯೆಗಳಿಗೆ ಎದುರಾಗುತ್ತ ಸಾಗಬೇಕಾದ ಅದಮ್ಯ ಒತ್ತಡ ಮತ್ತು ಆತಂಕಗಳಲ್ಲಿ ಆ ಶತಮಾನವನ್ನು ಭಾರತವು ಕಳೆದಿದೆ. ಬ್ರಿಟಿಷ್ ವಸಾಹತುಶಾಹಿಯ ಹಿಡಿತದಿಂದ ಬಿಡುಗಡೆ ಪಡೆಯುವ ಹಂಬಲ, ಸುಮಾರು ಸಾವಿರ ಸಂಖ್ಯೆಯ ದೇಶಗಳಾಗಿ ಹಂಚಿಹೋಗಿದ್ದ ಭರತಖಂಡವೆಂಬ ಉಪಖಂಡ ಸ್ವರೂಪದ ಭೂಪ್ರದೇಶವನ್ನು ಅಂದರೆ ಪುರಾಣ ಪ್ರತೀತಿಯ ‘ಮರ್ತ್ಸಲೋಕ’ವನ್ನು ಏಕದೇಶ ಹಾಗೂ ಏಕದೇಶಾಭಿಮಾನದ ಪರಿಕಲ್ಪನೆ ಮತ್ತು ಭಾವನೆಯಲ್ಲಿ ಬೆಸೆಯುವ ಅಪೂರ್ವ ಸಾಹಸ, ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ಅಹಿಂಸಾಮಾರ್ಗದಲ್ಲಿ ಹೋರಾಟ ನಡೆಸಿ ಸ್ವಾತಂತ್ರ್ಯ ಪಡೆವ ಸಾತ್ವಿಕ ಸಂಕಲ್ಪದಿಂದ ನಡೆಸಿದ ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಪಡೆಯುತ್ತಿರುವ ಸಂಭ್ರಮದೊಂದಿಗೆ ಮತಧರ್ಮದ ಆಧಾರದ ಮೇಲೆ ದೇಶ ಎರಡು ದೇಶಗಳಾಗಿ ಇಬ್ಭಾಗವಾದ ಯಾತನೆ, (ಮುಂದೆ ಮೂರು ದೇಶಗಳಾಗಿ ಸೀಳಿಹೋದದ್ದೂ ಆಯಿತು) ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಯ ಅಂಗೀಕಾರ, ಹಲವು ಭಾಷೆಗಳ ಅಸ್ತಿತ್ವ ಒಡ್ಡಿದ ಸಮಸ್ಯೆಗಳು, ಪಾಶ್ಚಾತ್ಯ ಮತ್ತು ಭಾರತೀಯ ಸಂಸ್ಕೃತಿಗಳ ಮುಖಾಮುಖಿಯಲ್ಲಿ ಪಡೆಯುವ-ತಿರಸ್ಕರಿಸುವ ಅನಿವಾರ್ಯ ಸಂಕೀರ್ಣ ಸವಾಲುಗಳು, ಶತಶತಮಾನಗಳಿಂದ ಹುಟ್ಟು ನಿರ್ಧರಿಸುತ್ತ ಬಂದ ಜಾತಿ – ಜಾತಿಗಳ ನಡುವಿನ ಮೇಲು-ಕೀಳು ಎಂಬಂಥ ಸಾಮಾಜಿಕ ಅಸಮಾನತೆ, ಮತಧರ್ಮಗಳ ನಡುವಿನ ಅನುಮಾನ ಆತಂಕ ಘರ್ಷಣೆ – ಗಲಭೆಗಳು ಒಡ್ಡಿದ ಬಿಕ್ಕಟ್ಟುಗಳು, ಪುರುಷ ಮೇಲು ಸ್ತ್ರೀ ಕೀಳು ಎಂಬಂಥ ಲಿಂಗಾಧಾರಿತ ಪರಂಪರಾಗತ ಮನಃಸ್ಥಿತಿ; ಒಂದೇ, ಎರಡೆ ಇಂಥ ನೂರಾರು ಸಮಸ್ಯೆ ಸವಾಲುಗಳನ್ನು ದೇಶ ಇಪ್ಪತ್ತನೆಯ ಶತಮಾನದಲ್ಲಿ ತೀವ್ರವಾಗಿ ಎದುರಿಸಿದೆ. ಭಾರತ ದೇಶದ ಜನತೆ ಸಮಗ್ರದೇಶದ ಸಂಸ್ಕೃತಿ ಪುನಾರಚನೆಗಾಗಿ ನಿರಂತರವಾಗಿ ನಡೆಸಿದ ದೊಡ್ಡ ಸಾಧನೆ, ದೊಡ್ಡ ಸೋಲು ಎರಡನ್ನೂ ಕಂಡ ಅತ್ಯಂತ ಸಂಕೀರ್ಣವಾದ ಹೋರಾಟದ, ಸಾಧನೆಯ ಕಾಲ ಅದಾಗಿತ್ತು.

ಈ ಹೋರಾಟ ಕೂಡ ಶತಮಾನದುದ್ದಕ್ಕೂ ಏಕಮುಖವಾಗಿ ಸಾಗಿ ಬಂದದ್ದಲ್ಲ. ಸ್ವಾತಂತ್ರ್ಯಪೂರ್ವದ ಅಂದರೆ ಆ ಶತಮಾನದ ಉತ್ತರಾರ್ಧದ ಕಾಲಮಾನದ ಸಮಸ್ಯೆಗಳ ಸ್ವರೂಪ ಮತ್ತು ಸಂಕೀರ್ಣತೆಗಳಲ್ಲಿ ಉಂಟಾದ ವ್ಯತ್ಯಾಸಗಳೂ ಚರಿತ್ರೆಯ ಭಿನ್ನಗತಿಯ ಹೊರಳಿಕೊಳ್ಳುವಿಕೆಯ ಸ್ವರೂಪವನ್ನು ನಿರ್ಧರಿಸುವ ಭಾಗಗಳಾಗಿ ಬಿಟ್ಟವು. ಯುರೋಪಿನ ಎಷ್ಟೋ ಶತಮಾನಗಳನ್ನು ಅರಿವಿಗೆ ತಂದುಕೊಳ್ಳುವ, ಸ್ವೀಕರಿಸುವ, ನಿರಾಕರಿಸುವ ಪೂರ್ವಾಪರ ವಿವೇಚನೆಯಿಂದ ಅರಗಿಸಿಕೊಳ್ಳುವ ತೀವ್ರತರವಾದ ಸಾಂಸ್ಕೃತಿಕ ಸವಾಲುಗಳನ್ನು ದೇಶ ಎದುರಿಸುವಂತಾಯಿತು. ಇದು ದೇಶದ ಜನಸಾಮಾನ್ಯರು, ಚಿಂತಕರು, ರಾಜಕಾರಣಿಗಳು ಮಾತ್ರ ಎದುರಿಸಿದ ಪ್ರಶ್ನೆ, ಸವಾಲುಗಳಾಗಿರದೆ ದೇಶಾದ್ಯಂತದ ಎಲ್ಲ ಭಾಷಾ ಸಾಹಿತ್ಯ ಕ್ಷೇತ್ರದ ಸಾಹಿತಿಗಳೂ ಎದುರಿಸುವಂಥ ಪರಿಸ್ಥಿತಿ ಎದುರಾಗಿತ್ತು. ಕನ್ನಡ ಆಧುನಿಕ ಸಾಹಿತ್ಯ ಮುಖ್ಯವಾಗಿ ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಅಂದರೆ ಸಾಹಿತಿಗಳು ಎದುರಿಸಿದ ಸವಾಲು ಬಿಕ್ಕಟ್ಟುಗಳ ಮಟ್ಟಿಗೂ ವಿಸ್ತರಿಸಿ ಹೇಳಬಹುದಾದಂಥ ಮಾತು ಇದು.

ಆಧುನಿಕ ಕನ್ನಡ ಸಾಹಿತ್ಯ ಅಂದರೆ ಪ್ರಧಾನವಾಗಿ ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ, ಹೀಗೆ ನಾಲ್ಕು ಪ್ರಧಾನ ಸಾಹಿತ್ಯ ಮಾರ್ಗಗಳಲ್ಲಿ ಬೆಳೆದು ಬಂತು. ‘ಬೆಳೆದು ಬಂತು’ ಎಂದು ಹೇಳುವುದಕ್ಕೆ ಮುಜುಗರ ಪಡುವವರಿದ್ದಾರೆ ‘ಅವಸ್ಥಾಂತರ ಹೊಂದುತ್ತ ಬಂತು’ ಎಂದು ಬೇಕಾದರೂ ಹೇಳಬಹುದು. ಆ ಎಲ್ಲ ಸಾಹಿತ್ಯ ಮಾರ್ಗಗಳ ಸಾಹಿತ್ಯ ಪರಿಕಲ್ಪನೆಯಲ್ಲಿ ಮಾತ್ರವಲ್ಲ ಸಂಸ್ಕೃತಿ ಪರಿಕಲ್ಪನೆ, ಪರಿಭಾವನೆಗಳಲ್ಲಿ ಕೂಡ ವ್ಯತ್ಯಾಸವಿದೆ. ಆದರೂ ಈ ಎಲ್ಲ ಸಾಹಿತ್ಯ ಮಾರ್ಗಗಳಿಗೂ ಸ್ಥಾಯಿಯಾದ ಕಾಳಜಿ ಸಮಗ್ರ ದೇಶದ ಸಂಸ್ಕೃತಿ ಪುನಾರಚನೆಯೇ ಆಗಿದೆ ಎಂಬುದು ನನ್ನ ಗ್ರಹಿಕೆ. ಆಧುನಿಕ ಕನ್ನಡದ ಅತ್ಯಂತ ಮಹತ್ವದ ಸಾಹಿತಿಗಳ (ಗತಿಸಿದವರು ಮತ್ತು ಇರುವವರೂ ಸೇರಿದಂತೆ) ಸೃಜನಶೀಲ ಸಾಹಿತ್ಯ ಕೃತಿಗಳನ್ನು ಮತ್ತು ಚಿಂತನ ಬರಹಗಳನ್ನು ನೋಡಿದಾಗ ಸಂಸ್ಕೃತಿ ಪುನಾರಚನೆಯ ಕಾಳಜಿ ನಿರಂತರವಾಗಿ, ಸ್ಥಾಯಿಯಾಗಿ ಇರುವುದು ಎದ್ದು ಕಾಣಿಸುವಂತಿದೆ.

ಮೇಲೆ ಹೆಸರಿಸಿದ ನಾಲ್ಕು ಸಾಹಿತ್ಯ ಮಾರ್ಗಗಳು ಶತಮಾನದ ಬೇರೆ ಬೇರೆ ಕಾಲಘಟ್ಟಗಳಲ್ಲಿ ಆಯಾ ಹೆಸರಿನಲ್ಲಿ ಘೋಷಿತವಾದವು, ಎಂಬುದೇನೊ ನಿಜ. ನನ್ನ ತಿಳುವಳಿಕೆಯಂತೆ ಈ ಎಲ್ಲ ಸಾಹಿತ್ಯ ಮಾರ್ಗಗಳೂ ನವೋದಯ ಕಾಲಮಾನದಲ್ಲಿಯೆ ಘೋಷಿತವಾಗಬಹುದಾಗಿದ್ದವು. ಆದರೆ ಶತಮಾನದ ಚರಿತ್ರೆಯ ಚಲನೆಯ ಸ್ವರೂಪ, ಅದು ಉಂಟು ಮಾಡಿದ ಒತ್ತಡಗಳ ಮತ್ತು ಪರಿವೆಗಳ ತೀವ್ರತೆಯ ಸ್ವರೂಪ ವ್ಯತ್ಯಾಸ, ಇವುಗಳ ಕಾರಣದಿಂದಾಗಿ ಆಯಾ ಸಾಹಿತ್ಯ ಮಾರ್ಗದ ಪ್ರಧಾನ ಕಾಳಜಿಗಳು ಬೇರೆ ಬೇರೆ ಕಾಲ ಘಟ್ಟಗಳಲ್ಲಿ ಹೆಚ್ಚು ಒತ್ತು, ಮಹತ್ವ ಪಡೆದುಕೊಂಡವು ಎಂದು ಹೇಳಬಹುದು. ಈ ಮಾತಿಗೆ ಹೆಚ್ಚಿನ ವಿವರಣೆ ಬೇಕು, ಎಂಬುದನ್ನು ನಾನು ಬಲ್ಲೆ. ಆದರೆ ಆ ವಿವರ ನೀಡುವುದಕ್ಕೆ ಇಲ್ಲಿ ಅವಕಾಶ ಇಲ್ಲ. ಬೇರೆ ಸಂದರ್ಭದಲ್ಲಿ ಇದಕ್ಕೆ ಒಂದು ಲೇಖನ ರೂಪ ಕೊಟ್ಟು ವಿವರಿಸುವುದಕ್ಕೆ ಅವಕಾಶವಿದೆ. ಅದೇನೇ ಇರಲಿ, ಸಂಸ್ಕೃತಿ ಪುನಾರಚನೆಯ ಸವಾಲನ್ನು ತಮ್ಮ ಬರವಣಿಗೆಯ ಬದುಕಿನ, ಏಳೂವರೆ-ಎಂಟು ದಶಕಗಳ ಕಾಲಮಾನದ ಉದ್ದಕ್ಕೂ ಒಪ್ಪಿ ಎದುರಿಸಿದವರು, ಚಿಂತಕನಾಗಿಯೂ ಸೃಜನಶೀಲ ಸಾಹಿತಿಯಾಗಿಯೂ ಪ್ರಜ್ಞಾಪೂರ್ವಕವಾಗಿ ಎದುರಿಸಿದವರು, ಹಾಗೆ ಎದುರಿಸಿದ ಮುಖ್ಯರಲ್ಲಿ ಒಬ್ಬರಾಗಿದ್ದವರು ಕಾರಂತರು. ಅವರು ಈ ನಾಲ್ಕೂ ಸಾಹಿತ್ಯ ಮಾರ್ಗಗಳನ್ನು ಕಂಡವರು, ಈ ಎಲ್ಲ ಕಾಲಮಾನಗಳಲ್ಲಿ ಬರವಣಿಗೆ ಮಾಡುತ್ತಿದ್ದವರು.

ಬ್ರಿಟಿಷ್ ವಸಾಹತುಶಾಹಿಯ ಆಳ್ವಿಕೆ ಪ್ರಾರಂಭವಾದ ಮೇಲೆ ಭಾರತದಲ್ಲಿ ಭಾರತೀಯ ಸಂಸ್ಕೃತಿ ಪುನಾರಚನೆಯ ಮಹತ್ವಾಕಾಂಕ್ಷೆಯಿಂದ ಪ್ರೇರಿತರಾದ ಮಹಾನ್ ಚಿಂತಕರು ದೇಶಾದ್ಯಂತ ಬಂದರು. ಅದರಲ್ಲಿಯೂ ಆಗಿನ ಬಂಗಾಲ್ ಪ್ರೆಸಿಡೆನ್ಸಿ, ಬಾಂಬೇ ಪ್ರೆಸಿಡೆನ್ಸಿಗಳಿಂದ ಅಂಥವರು ಹೆಚ್ಚಿನ ಸಂಖ್ಯೆಯಲ್ಲಿ ಬಂದವರು. ಆದರೆ ಕರ್ನಾಟಕ ಅಥವಾ ಕನ್ನಡದವರಲ್ಲಿ ಅಂಥ ಸಂಸ್ಕೃತಿ ಚಿಂತಕರು ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಬರಲಿಲ್ಲ. ಕನ್ನಡ ನಾಡಿನಲ್ಲಿ, ಸಾಹಿತಿಗಳೇ ಆ ಹೊಣೆಗಾರಿಕೆಯನ್ನು ಹೊತ್ತು ಸಾಗಿದರು. ಅಂಥವರಲ್ಲಿ ಅತ್ಯಂತ ಮುಖ್ಯರಾದವರಲ್ಲಿ, ಕಾರಂತರೂ ಒಬ್ಬರು.

ಕಾರಂತರು ನವೋದಯ ಸಾಹಿತ್ಯ ತಲೆಮಾರಿಗೆ ಸೇರಿದ ಸಾಹಿತಿ. ಅವರ ತಲೆಮಾರಿನ ಸಾಹಿತ್ಯ ಚಳುವಳಿ ಕಾವ್ಯವನ್ನು ಉಳಿದೆಲ್ಲ ಸಾಹಿತ್ಯ ಪ್ರಕಾರಗಳಿಗಿಂತ ಮುಖ್ಯವೆಂದು, ಮಹತ್ವದ್ದೆಂದು ಮೆರೆಸಿತ್ತು. ಕವಿಗಳಿಗೆ ಗದ್ಯ ಲೇಖಕರಿಗಿಂತ ಹೆಚ್ಚಿನ ಮನ್ನಣೆ ಇತ್ತು ಎಂದು ಸ್ವತಃ ಕಾರಂತರೇ ಹೇಳಿದ್ದುಂಟು. ಆದರೂ ಕಾರಂತರು ಕಾವ್ಯಕ್ಕೆ ಒಲಿಯಲಿಲ್ಲ. ಎರಡು ಕವನ ಸಂಕಲನಗಳನ್ನೇನೊ ಪ್ರಕಟಿಸಿದ್ದಾರೆ. ಆದರೂ ಅವರನ್ನು ಕವಿ ಎಂದೇನೂ ಹೇಳುವಂತಿಲ್ಲ. ಆ ಕಾಲದ ಕಾವ್ಯದಲ್ಲಿ, ಕಾವ್ಯ ಪರಿಕಲ್ಪನೆಯಲ್ಲಿ ಇಂಗ್ಲೆಂಡಿನ ರೊಮ್ಯಾಂಟಿಕ್ ಸಂಪ್ರದಾಯದ ಸಾಹಿತ್ಯ ಪರಿಕಲ್ಪನೆ ಪ್ರಭಾವಶಾಲಿಯಾಗಿತ್ತು, ಪ್ರಧಾನವಾಗಿತ್ತು. ಕಾರಂತರು ರೊಮ್ಯಾಂಟಿಕ್ ಕಾವ್ಯ ಸಂಪ್ರದಾಯದ ಸಾಹಿತ್ಯ ಪರಿಕಲ್ಪನೆಗೆ ಒಲಿಯಲಿಲ್ಲ.

ಆ ಕಾಲಮಾನದ ಚಾರಿತ್ರಿಕ ಒತ್ತಡದಿಂದಾಗಿ ‘ಭಾರತೀಯತೆ’ಯ ಪರಿಕಲ್ಪನೆಯೊಂದು ರೂಪುಗೊಂಡಿತ್ತು. ಭಾರತೀಯ ಸಂಸ್ಕೃತಿಯನ್ನು ಮೆರೆಸುವ, ವೈಭವೀಕರಿಸುವ ಭಾವನಾತ್ಮಕ ಮನೋಧರ್ಮ ಪ್ರಧಾನವಾಗಿತ್ತು. ಆಗ ಭಾರತೀಯ ಸಂಸ್ಕೃತಿ ಎಂಬುದು ವೈದಿಕ ಸಂಸ್ಕೃತಿಯೆಂದು ವ್ಯಾಖ್ಯಾನಿತವಾಗಿತ್ತು. ಕಾರಂತರಿಗೆ ಭಾರತೀಯ ಸಂಸ್ಕೃತಿ ಎಂಬುದನ್ನು ಮೆರೆಸುವುದರಲ್ಲಿ, ಕೀರ್ತಿಸುವುದರಲ್ಲಿ, ವೈಭವೀಕರಿಸುವುದರಲ್ಲಿ ಉತ್ಸಾಹ ಇರಲಿಲ್ಲ. ಮತಧರ್ಮ, ದೇವರ ಅಸ್ತಿತ್ವ, ಭಗವತ್ ಸಂಕಲ್ಪ, ವಿಧಿವಿಲಾಸ, ಆಧ್ಯಾತ್ಮ ಇವುಗಳ ಬಗ್ಗೆ ನಂಬಿಕೆ ಅಂದರೆ ಆಸ್ತಿಕ ಮನೋಧರ್ಮ ಅವರ ತಲೆಮಾರಿನ ಸಾಹಿತಿಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತದೆ. ಮುಖ್ಯ ಸಾಹಿತಿಗಳೆಲ್ಲ ಕುವೆಂಪು ಒಬ್ಬರನ್ನು ಬಿಟ್ಟು ಹುಟ್ಟಿನಿಂದ ಬ್ರಾಹ್ಮಣರೇ ಆಗಿದ್ದರು. ಕುವೆಂಪು ಪುರೋಹಿತಶಾಹಿಯ ಬಗ್ಗೆ, ಮತಧಾರ್ಮಿಕ ಆಚಾರ ವಿಚಾರಗಳ ಬಗ್ಗೆ ನಿಷ್ಠುರ ವಿಮರ್ಶಕ ನಿಲುವು ತಳೆದವರಾಗಿದ್ದರು; ಅದನ್ನು ಖಂಡಿಸುವವರಾಗಿದ್ದರು. ಆದರೆ ವೈದಿಕ ಸಂಸ್ಕೃತಿಯ ವಿಚಾರ ಭಾಗವನ್ನು ಅವರು ಅಧ್ಯಾತ್ಮ ಚಿಂತನೆಯ ನೆಲೆಗೆ ಬಿಡುಗಡೆ ಮಾಡಿಕೊಂಡರು; ಜಾತಿ ಮತಧರ್ಮ ನಿರಪೇಕ್ಷವಾದ ಅಂದರೆ ‘ಸೆಕ್ಯುಲರ್’ ನೆಲೆಗೆ ಭಾರತೀಯ ಸಂಸ್ಕೃತಿಯ ಸಾರ ಸತ್ವವನ್ನು ವ್ಯಾಖ್ಯಾನಿಸಿಕೊಳ್ಳುವ ಆಸಕ್ತಿ, ಧೋರಣೆ ಅವರದಾಗಿತ್ತು. ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಅದರ ಅಧ್ಯಾತ್ಮ ಪರಂಪರೆಯಲ್ಲಿ, ಋಷಿ ಸಂಸ್ಕೃತಿಯಲ್ಲಿ ಗುರುತಿಸಿಕೊಂಡು ಕುವೆಂಪು ಕೀರ್ತಿಸಿದರು. ಆದರೆ, ದೇವರ ಅಸ್ತಿತ್ವ, ಭಗವತ್ ಸಂಕಲ್ಪ, ವಿಧಿವಿಲಾಸ, ಪ್ರಾರ್ಥನೆಯ ಮಹಿಮೆ, ಜನ್ಮಾಂತರ ಇವುಗಳ ಬಗ್ಗೆ ಅವರು ನಂಬಿಕೆ ಉಳ್ಳವರಾಗಿದ್ದರು. ಆ ಮೂಲಕ ‘ಭಾರತೀಯತೆ’ಯನ್ನು ಕೀರ್ತಿಸುವುದರಲ್ಲಿ, ಮೆರೆಸುವುದರಲ್ಲಿ, ವೈಭವೀಕರಿಸುವುದರಲ್ಲಿ ಕುವೆಂಪು ಕೂಡ ಉತ್ಸಾಹದಿಂದಲೇ ಪಾಲ್ಗೊಂಡರು.

ಅದೇ ಕಾಲದಲ್ಲಿ ಕಾರಂತ, ಕುವೆಂಪು ಅವರಿಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದ, ಡಾ. ಬಿ.ಆರ್.ಅಂಬೇಡ್ಕರ್ (೧೮೯೧-೧೯೫೬) ಅವರು ರಾಷ್ಟ್ರ ಮಟ್ಟದಲ್ಲಿ, ವೈದಿಕ ಸಂಸ್ಕೃತಿಯನ್ನು ಇಡಿಯಾಗಿಯೆ ಪ್ರಶ್ನಿಸುತ್ತಿದ್ದರೆಂಬುದು ಈ ಸಂದರ್ಭದಲ್ಲಿ ಗಮನಿಸಬಹುದಾದ ಒಂದು ಸಂಗತಿ. ಕುವೆಂಪು ಭೂ ಮಾಲೀಕ ಶೂದ್ರ ಸಮುದಾಯದ ಹಿನ್ನೆಲೆಯಿಂದ ಬಂದವರಾಗಿದ್ದದ್ದು, ಅಂಬೇಡ್ಕರ್ ಅವರು ಶೂದ್ರಾತಿ ಶೂದ್ರ ಪಂಚಮರೆಂದು ಅಸ್ಪೃಶ್ಯರೆಂದು ಪರಿಗಣಿತರಾಗಿದ್ದ ಜನಸಮುದಾಯದ ನೆಲೆಯಿಂದ ಬಂದವರೆಂಬುದು ಆ ಕಾಲದ ಸಂಸ್ಕೃತಿ ಪುನಾರಚನೆಯ ಪ್ರಕ್ರಿಯೆ ಮತ್ತು ಸ್ವರೂಪ ಕುರಿತಂತೆ ಮಹತ್ವದವಾದ ಅಂಶಗಳ ಕಡೆಗೆ ಗಮನ ಸೆಳೆಯುವಂತಿದೆ.

ಕಾರಂತರು ಹುಟ್ಟಿನಿಂದ ಬ್ರಾಹ್ಮಣರೇ ಆಗಿದ್ದರೂ, ಅಂದರೆ ವೈದಿಕ ಪುರೋಹಿತಶಾಹಿ ಹಿನ್ನೆಲೆಯಿಂದ ಬಂದವರೇ ಆಗಿದ್ದರೂ ‘ಭಾರತೀಯ’ ತೆಯ ಹೆಸರಿನಲ್ಲಿ ವೈದಿಕ ಸಂಸ್ಕೃತಿಯನ್ನು ಮೆರೆಸುವುದರಲ್ಲಿ, ಕೀರ್ತಿಸುವುದರಲ್ಲಿ, ವೈಭವೀಕರಿಸುವುದರಲ್ಲಿ ಅವರು ಉತ್ಸಾಹ ತೋರಲಿಲ್ಲ. ಮತಧರ್ಮ, ದೇವರ ಅಸ್ತಿತ್ವ, ಭಗವತ್ ಸಂಕಲ್ಪ, ವಿಧಿ ವಿಲಾಸ, ಜನ್ಮಾಂತರಗಳ ಬಗೆಗಿನ ನಂಬಿಕೆ ಇವುಗಳನ್ನೆಲ್ಲ ಅವರು ನಿರಾಕರಿಸಿದರು. ಕುವೆಂಪು ಅವರು ಭಾರತೀಯ ಸಂಸ್ಕೃತಿಯ ಹಿರಿಮೆ ಎಂದು ಕೀರ್ತಿಸುವ ‘ಅಧ್ಯಾತ್ಮ’ದ ಬಗ್ಗೆ ಕೂಡ ಕಾರಂತರು ಸಿನಿಕ ಧೋರಣೆ ತಳೆದರು. ಕಾರಂತರ ಈ ನಿಲುವು, ದೃಷ್ಟಿ ಕುವೆಂಪು ಅವರ ನಿಲುವಿಗಿಂತ ಡಾ. ಅಂಬೇಡ್ಕರ್ ಅವರ ನಿಲುವಿಗೆ ಹತ್ತಿರವಾಗಿದೆಯೇನೊ ಎಂದು ಭಾಸ ಹುಟ್ಟಿಸುವಂತಿದೆ. ಕಾರಂತರ ಒಟ್ಟೂ ಚಿಂತನ ಬರವಣಿಗೆಗಳ ಮತ್ತು ಕಾದಂಬರಿಗಳ ಅಧ್ಯಯನ ಮಾಡಿದಾಗ ತೀರ ಬೇರೆಯದೇ ಆದ ಉತ್ತರಗಳು ದೊರೆಯುವಂತೆ ತೋರುತ್ತದೆ.

ಬ್ರಾಹ್ಮಣ, ಶೂದ್ರ, ದಲಿತ ಈ ಸಾಮಾಜಿಕ ಶ್ರೇಣೀ ವ್ಯತ್ಯಾಸದಿಂದ ಬೆಳೆದು ಬಂದ ಈ ಮೂವರೂ ಧೀಮಂತರು ಆಧುನಿಕ ವೈಚಾರಿಕ ಸಿದ್ಧತೆಯ ಹಿನ್ನೆಲೆಯಿಂದಲೇ ವೈದಿಕ ಸಂಸ್ಕೃತಿಯನ್ನು ತೀವ್ರವಾಗಿ, ನಿಷ್ಠುರವಾಗಿ ಪ್ರಶ್ನಿಸುವವರಾದರೂ ಅವರ ಚಿಂತನಾ ವಿವರದಲ್ಲಿ ಕಾಣಿಸುವ ಭಿನ್ನತೆಗೆ ಕಾರಣವೇನು? ಅವರವರ ವೈಯಕ್ತಿಕ ಚಿಂತನ ಸ್ವರೂಪ, ಸಂವೇದನಾ ಸೂಕ್ಷ್ಮದ ವ್ಯತ್ಯಾಸ ಮಾತ್ರವೇ ಕಾರಣವೆ, ಬೇರೆ ಸಾಮಾಜಿಕ, ಸಾಂಸ್ಕೃತಿಕ, ಕಾರಣಗಳು ಕೂಡ ಇರಬಹುದಲ್ಲವೆ, ಎಂದು ಕೇಳಿಕೊಳ್ಳಬೇಕೆನಿಸಿದರೆ ಆಶ್ಚರ್ಯವಿಲ್ಲ. ಅಂಥ ಪ್ರಶ್ನೆಗಳನ್ನು ಎತ್ತಿಕೊಂಡು ಚರ್ಚಿಸುವುದಕ್ಕೆ ಇಲ್ಲಿ ಅವಕಾಶವಿಲ್ಲ.

ಡಾ. ಅಂಬೇಡ್ಕರ್ ಅವರೂ ಕಾರಂತ, ಕುವೆಂಪು ಅವರಂತೆ ಸೃಜನಶೀಲ ಸಾಹಿತಿಯೂ ಆಗಿದ್ದರೆ ಅವರ ಕೃತಿಗಳಲ್ಲಿ ಸಂಸ್ಕೃತಿ ಪುನಾರಚನೆಗೆ ಸಂಬಂಧಿಸಿದ ಅವರ ವಿಚಾರಗಳು, ವೈದಿಕ ಸಂಸ್ಕೃತಿ ವಿರೋಧಿ ಚಿಂತನೆಗಳು ಯಾವ ರೂಪದಲ್ಲಿ ಅಭಿವ್ಯಕ್ತಿ ಪಡೆಯುತ್ತಿದ್ದವು ಎಂದು ಕೇಳಿಕೊಳ್ಳುವುದೂ ಕೇವಲ ಊಹೆಯ ಪ್ರಶ್ನೆಯಾಗುತ್ತದೆ, ಎಂಬುದು ನಿಜ. ಆದರೂ ಸಂಸ್ಕೃತಿ ವಿಚಾರ ಅಥವಾ ವಿಚಾರವಾದವು ವಾಸ್ತವ ಬದುಕಿನ ಮನುಷ್ಯ ಸಂಬಂಧ ಮತ್ತು ಮನುಷ್ಯ ಸಂದರ್ಭಗಳಲ್ಲಿ ಕಲಾತ್ಮಕ ಪರಿಶೀಲನೆಗೆ ಒಡ್ಡಲ್ಪಟ್ಟಾಗ ವೈಚಾರಿಕ ಮೂಲರೂಪವು ಮಾನವೀಯ ಹೊಂದಾಣಿಕೆ ಮಾಡಿಕೊಳ್ಳುವ ಪರಿ ಕುತೂಹಲಕಾರಿಯಾಗಿರುತ್ತದೆ. ಅಂಥ ಪರೀಕ್ಷೆಗೆ೩ ಕಾರಂತ, ಕುವೆಂಪು ಅಂಥವರು ಒಳಗಾದದ್ದರಿಂದ ಎದುರಿಸಿದ ಬಿಕ್ಕಟ್ಟುಗಳನ್ನು ಅಂಬೇಡ್ಕರ್ ಸ್ವತಃ ಎದುರಿಸಬೇಕಾಗಿ ಬರಲಿಲ್ಲ. ಅದು ಗುಣವೆಂದೊ ದೋಷವೆಂದೊ ನಾನು ಇಲ್ಲಿ ಹೇಳುತ್ತಿಲ್ಲ. ನವೋದಯದ ಆ ಕಾಲಮಾನದಲ್ಲಿ ಸಿದ್ಧಲಿಂಗಯ್ಯ ಅಥವಾ ದೇವನೂರ ಮಹಾದೇವ ಅವರಂಥ ದಲಿತವರ್ಗದಿಂದ ಬಂದ ಪ್ರತಿಭಾವಂತ ಸಂಸ್ಕೃತಿ ಚಿಂತಕ ಸಾಹಿತಿಗಳಾದರೂ ಬಂದಿದ್ದರೆ ಸಂಸ್ಕೃತಿ ಪುನಾರಚನೆಯ ಇನ್ನೊಂದು ಸೃಜನಶೀಲ ಆಯಾಮವು ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಗೆ ಸೇರಿಕೊಳ್ಳಬಹುದಾಗಿತ್ತು. ಹಾಗೆ ಆಗದೆ ಇದ್ದದ್ದರಿಂದ ಇಂಥ ಮಹತ್ವದ್ದು ದಾಖಲಾಗಬಹುದಾಗಿದ್ದ ಅವಕಾಶದಿಂದ ಆ ಕಾಲಮಾನದ ಕನ್ನಡ ಸಾಹಿತ್ಯ ವಂಚಿತವಾದಂತಾಯಿತು ಎಂಬುದು, ಆ ಕಾಲಮಾನದಲ್ಲಿ ಶೂದ್ರವರ್ಗದಿಂದ ಕುವೆಂಪು ಅವರಂಥ ಪ್ರತಿಭಾವಂತ ಬಾರದೆ ಇದ್ದಿದ್ದರೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಪುನಾರಚನೆಗೆ ಸಂಬಂಧಿಸಿದಂಥ ಅರಿವಿನ ಕೊರತೆ ಎಂಥದಿರುತ್ತಿತ್ತು ಎಂದು ಯೋಚಿಸಿದಾಗ ಅರ್ಥವಾಗುತ್ತದೆ.

ಸಂಸ್ಕೃತಿ ಚಿಂತಕ ಸೃಜನಶೀಲ ಸಾಹಿತಿಯೂ ಆಗಿದ್ದಾಗ ಎದುರಿಸಬೇಕಾಗಿ ಬಂದ ಹಾಗೂ ಬರುವ ಸಂಕೀರ್ಣ ಸ್ವರೂಪದ ಸಮಸ್ಯೆಗಳ ಅಧ್ಯಯನವು ಕನ್ನಡದಲ್ಲಿ ಹೆಚ್ಚು ಗಂಭೀರ ನೆಲೆಯಲ್ಲಿ ನಡೆಯಬೇಕಾಗಿದೆ. ಇದು ಆಧುನಿಕ ಕನ್ನಡ ಸಾಹಿತ್ಯದ ‘ಸಾಹಿತ್ಯಿಕ’ ಮಹತ್ವಕ್ಕಿಂತ ‘ಸಾಂಸ್ಕೃತಿಕ’ ಮಹತ್ವದ ಬಗ್ಗೆ ಹೆಚ್ಚಿನ ಅರಿವನ್ನು ಸೋಸಿಕೊಳ್ಳುವುದಕ್ಕೆ ಅನುಕೂಲವಾದೀತು. ಅಂಥ ಅಧ್ಯಯನ ನಡೆದಿಲ್ಲ ಎಂದೇನಿಲ್ಲ. ಆದರೆ ನಡೆಯಬೇಕಾದಷ್ಟು ಅಥವಾ ನಡೆಯಬಹುದಾದಷ್ಟು ನಡೆದಿಲ್ಲ. ಕಾರಂತರ ಚಿಂತನ ಬರಹಗಳು, ಸೃಜನಶೀಲ ಬರಹಗಳು, ಅವರ ವಿಜ್ಞಾನ ಸಂಬಂಧವಾದ ಬರಹಗಳು, ಅವರ ಕಲೆಯ ಪ್ರಕಾರಗಳಿಗೆ ಸಂಬಂಧಿಸಿದಂತೆ ಮಾಡಿದ ಪ್ರಯೋಗಗಳು ಮತ್ತು ಚಿಂತನೆಗಳು ಅಂದರೆ ಒಟ್ಟಿನಲ್ಲಿ ಕಾರಂತರ ಸಂಸ್ಕೃತಿ ಸಂಬಂಧವಾದ ಸಮಗ್ರ ಸೃಜನಶೀಲ, ಸೃಜನೇತರ, ದಾಖಲಿತ ಚಟುವಟಿಕೆಗಳು ಅಂಥ ಗಂಭೀರ ಅಧ್ಯಯನವನ್ನು ಎದುರು ನೋಡುತ್ತಿವೆ.

ಕಾರಂತರ ಜೀವನದೃಷ್ಟಿ ಅವರ ‘ಬಾಳ್ವೆಯೇ ಬೆಳಕು’ (೧೯೪೫) ಎಂಬ ವೈಚಾರಿಕ ಕೃತಿಯಲ್ಲಿ ಪ್ರತಿಪಾದಿತವಾಗಿದೆ. ‘ಬಾಳ್ವೆಯೇ ಬೆಳಕು’ ಜೀವನ ಸ್ವೀಕಾರವನ್ನು ದೃಢವಾಗಿ ಪ್ರತಿಪಾದಿಸುತ್ತದೆ. ಜೀವನ ನಿರಾಕರಣೆಯ ದೃಷ್ಟಿಯನ್ನು ಖಂಡಿಸುತ್ತದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಾರಂತರೂ ಸೇರಿದಂತೆ ಅವರ ತಲೆಮಾರಿನವರು ನಿರ್ಮಿಸಿದ ಅಥವಾ ಪ್ರತಿನಿಧಿಸುವ ‘ನವೋದಯ’ ಎಂದು ಹೇಳಲಾಗುತ್ತಿರುವ ಸಾಹಿತ್ಯ ಮಾರ್ಗವು ಮತಧರ್ಮೀಯ ಸಾಹಿತ್ಯ ಮಾರ್ಗ ಎಂದು ಹೇಳುವಂತಿಲ್ಲ. ಆ ಮಾರ್ಗದ ಲೇಖಕರು ಆಸ್ತಿಕ ಮನೋಭಾವದವರಾಗಿದ್ದರು. ಈ ದೃಷ್ಟಿಯಿಂದ ನೋಡಿದರೆ ಕಾರಂತರು ಕನ್ನಡ ಸಾಹಿತ್ಯದ ಸಾವಿರ ವರ್ಷಕ್ಕಿಂತ ಹೆಚ್ಚು ದೀರ್ಘಕಾಲದ ಚರಿತ್ರೆಯಲ್ಲಿಯೇ ವಿಶಿಷ್ಟ ಬಗೆಯ ಅಪೂರ್ವ, ಅನನ್ಯ ಎಂದು ಹೇಳಬಹುದಾದಂಥ ಜೀವನದೃಷ್ಟಿ ಧೋರಣೆ ಉಳ್ಳ ಸಾಹಿತಿಯಾಗಿ ಕಾಣಿಸುತ್ತಾರೆ.

ಕನ್ನಡದ ಆಧುನಿಕ ಪೂರ್ವ ಸಾಹಿತ್ಯವು ಮತಧರ್ಮಪರ ಜೀವನದೃಷ್ಟಿ, ಧೋರಣೆಗಳ ನೆಲೆಯಲ್ಲಿ ಜೀವನಾನುಭವಗಳ ಜೊತೆ ಒಡನಾಡುವ ಮನಃಸ್ಥಿತಿ ಪ್ರಧಾನವಾದ ಸಾಹಿತ್ಯವಾಗಿದೆ. ಅದು ಜೈನ ಸಾಹಿತ್ಯವಾಗಿರಲಿ, ವೀರಶೈವ ಸಾಹಿತ್ಯವಾಗಿರಲಿ (ವಚನ ಸಾಹಿತ್ಯ ಸ್ವಲ್ಪ ಮಟ್ಟಿಗೆ ಭಿನ್ನ ಎನ್ನಬಹುದಾದರೂ!) ವೈದಿಕ ಅಥವಾ ಬ್ರಾಹ್ಮಣ ಸಾಹಿತ್ಯವಾಗಿರಲಿ ವಿವರಗಳಲ್ಲಿ ವ್ಯತ್ಯಾಸ ಇದೆಯಾದರೂ ಈ ಎಲ್ಲ ಸಾಹಿತ್ಯ ಮಾರ್ಗಗಳಿಗೂ ಸಾಮಾನ್ಯವಾದ ಅಂಶ ಇಹಕ್ಕಿಂತ ಪರಕ್ಕೆ, ಜೀವನ ಸ್ವೀಕಾರಕ್ಕಿಂತ ಲೌಕಿಕ ಜೀವನ ನಿರಾಕರಣೆಗೆ ಹೆಚ್ಚು ಒತ್ತು ನೀಡಿದ್ದು, ಮತಧಾರ್ಮಿಕ ತತ್ವಪ್ರಣಾಲಿ, ಮೌಲ್ಯನಿಷ್ಠೆ, ನಂಬಿಕೆಗಳಂತೆ ಬಾಳುವುದರ ಮೂಲಕ ಜನ್ಮ ಸಾರ್ಥಕ ಮಾಡಿಕೊಳ್ಳಬೇಕೆಂದು ಬೋಧಿಸುವ, ತಿಳಿ ಹೇಳುವ ಮತಧಾರ್ಮಿಕ ಸಾಹಿತ್ಯಗಳ ಜೀವನದೃಷ್ಟಿಯು ಜೀನವ ನಿರಾಕರಣೆಯ ದೃಷ್ಟಿ ಹೇಗಾಗುತ್ತದೆ, ಜೀವನ ಸ್ವೀಕಾರವು ಹೆಚ್ಚಿನ ಶ್ರದ್ಧಾನಿಷ್ಠೆಗಳಿಂದ ಕೂಡಿದ್ದಾಗಿರಬೇಕು, ಎಂದೇ ಅದು ಬೋಧಿಸುತ್ತದೆ, ಒತ್ತಿ ಹೇಳುತ್ತದೆ ಅಲ್ಲವೆ, ಎಂದು ವಾದಿಸುವ ಸಾಧ್ಯತೆ ಇದ್ದೀತು, ಆದರೂ ಕನ್ನಡದ ಪ್ರಾಚೀನ ಸಾಹಿತ್ಯ ಪರಂಪರೆಯು ಇಹಕ್ಕಿಂತ ಪರದಲ್ಲಿ ಸಲ್ಲುವುದು, ಲೌಕಿಕಾತೀತವಾದ ಪರದ ನಿಯತಿಗೆ ಬಾಗುವುದು, ಕ್ಷಣಿಕವಾದ ನೀರಮೇಲಣ ಗುಳ್ಳೆಯಂತೆ ತೋರಿ ಅಡಗುವ ಈ ಬದುಕನ್ನು ಪರದ ಶಾಶ್ವತ ಆನಂದಸ್ಥಿತಿಯನ್ನು ಪಡೆಯುವುದಕ್ಕೆ ಪೂರ್ವ ಸಿದ್ಧತೆಯ ಕರ್ಮಭೂಮಿಯಾಗಿ ಮಾಡಿಕೊಳ್ಳುವುದು- ಇವು ಆದರ್ಶವಾಗಿರುವಂಥದು, ಅಂಥ ಮಹತ್ವಾಕಾಂಕ್ಷೆಯನ್ನು ಮನಃಸ್ಥಿತಿಯನ್ನು ಓದುಗರಲ್ಲಿ ರೂಪಿಸಲು ಹವಣಿಸುವಂಥದು, ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಕಾರಂತರ ಜೀವನದೃಷ್ಟಿ, ಜೀವನ ಸ್ವೀಕಾರ ದೃಷ್ಟಿ ಈ ಪರಂಪರೆಯ ತಿಳಿವಳಿಕೆಗೆ ತೀರಾ ಭಿನ್ನವಾದದ್ದು, ವಿರುದ್ಧವಾದದ್ದು. ಕೈಲಾಸಂ, ಸಂಸ, ಎ.ಎನ್.ಮೂರ್ತಿರಾವ್ ಇಂಥ ಕೆಲವು ಸಾಹಿತಿಗಳಲ್ಲಿಯೂ ಹಿಂದಿನವರಂತೆ ಮತ್ತು ಅವರ ಸಮಕಾಲೀನ ಇತರ ಸಾಹಿತಿಗಳಂತೆ ದೇವರ ಅಸ್ತಿತ್ವದ ಬಗ್ಗೆ ನಂಬಿಕೆಯೊ, ಇಹ-ಪರಗಳ ಪರಿಕಲ್ಪನೆ ಕುರಿತ ನಂಬಿಕೆಯೊ ಇದ್ದಂತೆ ಕಾಣಿಸುವುದಿಲ್ಲ. ಅವರುಗಳಲ್ಲಿ ಕಾರಂತರಂತೆ ಒಂದು ಸಾಂಸ್ಕೃತಿಕ ಹೊರಳುವಿಕೆಯನ್ನು, ಜನಸಮೂಹದ ಮನಃಸ್ಥಿತಿಯ ಪಲ್ಲಟವನ್ನು ಈ ಚಿಂತನೆಯ ಜಾಡಿನಲ್ಲಿ ಆಗುಮಾಡಬೇಕು ಎಂಬ ಪ್ರಚಾರೋತ್ಸಾಹ ಕಾಣಿಸುವುದಿಲ್ಲ. ಅವರುಗಳಲ್ಲಿ ಕಾರಂತರಂತೆ ಒಂದು ಸಾಂಸ್ಕೃತಿಕ ಹೊರಳುವಿಕೆಯನ್ನು, ಜನಸಮೂಹದ ಮನಃಸ್ಥಿತಿಯ ಪಲ್ಲಟವನ್ನು ಈ ಚಿಂತನೆಯ ಜಾಡಿನಲ್ಲಿ ಆಗುಮಾಡಬೇಕು ಎಂಬ ಪ್ರಚಾರೋತ್ಸಾಹ ಕಾಣಿಸುವುದಿಲ್ಲ. ಕಾರಂತರ ಈ ಉತ್ಸಾಹ ಅವರ ಸೃಜನಶೀಲ ಬರವಣಿಗೆಯ ಮೇಲೆ, ಸಂವೇದನೆಯ ಮೇಲೆ ಪ್ರಭಾವ ಮಾಡಿದೆ; ಪರಿಣಾಮ ಬೀರಿದೆ.

ಶಿವರಾಮ ಕಾರಂತರು ಮತಧರ್ಮದ ನಂಬಿಕೆ, ದೇವರ ಅಸ್ತಿತ್ವದ ಬಗ್ಗೆ ನಂಬಿಕೆ ಇವುಗಳನ್ನು ಪ್ರಶ್ನಿಸುವ ಕಾರಣವಾದಿ(Rationalist) ಎನ್ನಬಹುದು. ಅವರು ಮಾನವೀಯ ಮೌಲ್ಯಗಳನ್ನು ನಂಬದೆ ಇರುವವರಲ್ಲ. ಮಾನವ ಬದುಕು ಸಹನೀಯವಾಗಬೇಕಾದರೆ ಒಪ್ಪಿ, ಅರಿತು ಎಲ್ಲರೂ ನಡೆದುಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ನಂಬಿಕೆ, ನಿಷ್ಠೆ ಅಗತ್ಯ ಎಂದು ನಂಬಿರುವವರು; ಅದನ್ನು ಪ್ರತಿಪಾದಿಸುವವರು. ಅವರು, ‘ಋಣಂ ಕೃತ್ವಾ ಘೃತಂ ಪಿಬ’ – ‘ಸಾಲ ಮಾಡಿ ತುಪ್ಪ ತಿನ್ನು’ – ರೀತಿಯ ನಾಸ್ತಿಕರೂ ಅಲ್ಲ. ಅಥವಾ ಮೌಲ್ಯ ಎಂಬುದೇ ಇಲ್ಲ ಪ್ರತಿಯೊಬ್ಬರು ತಮ್ಮ ಅಸ್ತಿತ್ವದ ಸಂದರ್ಭದಲ್ಲಿಯೆ ಮೌಲ್ಯಗಳನ್ನು ಸೃಷ್ಟಿಸಿಕೊಳ್ಳುವಹೊಣೆ ಹೊರಬೇಕೆಂಬ ಸಾರ್ತ್‌, ಕಮೂ ಅವರ (ದೇವರ ಅಸ್ತಿತ್ವವನ್ನು ಒಪ್ಪದ) ಪಂಥದವರಂಥ ಅಸ್ತಿತ್ವವಾದೀ ಚಿಂತಕರೂ ಅಲ್ಲ. ಮೌಲ್ಯಗಳ ಮೇಲಿನ ಅವರ ನಂಬಿಕೆ ನೈತಿಕ ನಿಷ್ಠೆಯ ಮಟ್ಟದ್ದು. ‘ಬಾಳ್ವೆಯೇ ಬೆಳಕು’ ಕೃತಿಯಲ್ಲಿ ಕಾರಂತರು ಪ್ರತಿಪಾದಿಸುವ ಕಾರಣವಾದೀ ಜೀವನದೃಷ್ಟಿಯನ್ನು ಹೀಗೆ ಸಂಗ್ರಹಿಸಬಹುದು.:’

“ನಾವು ಹುಟ್ಟುವುದಕ್ಕೆ ಮೊದಲು ಏನಾಗಿದ್ದೆವೆಂಬುದು ನಮಗೆ ಗೊತ್ತಿಲ್ಲ. ಸತ್ತನಂತರ ಬೂದಿಯೊ ಮಣ್ಣೊ ಆಗುತ್ತೇವೆಂಬುದರ ಹೊರತಾಗಿ ಬೇರೇನೂ ಗೊತ್ತಿಲ್ಲ. ಈಗ ನಾವು, ನೀವು ಬದುಕುತ್ತಾ ಇರುವಷ್ಟು ಕಾಲ, ನಮ್ಮ ನಮ್ಮ ನಡುವಿನ ಮನುಷ್ಯ ಸಂಬಂಧಗಳಲ್ಲಿ ಜೀವನದ ಅರ್ಥವನ್ನುಸ ಕಂಡುಕೊಳ್ಳಬೇಕು. ನಾವೆಲ್ಲ ಸೌಹಾರ್ದಯುತವಾಗಿ, ಅರ್ಥಪೂರ್ಣವಾಗಿ ಬಾಳುವ ಬಗೆಯನ್ನು ರೂಪಿಸಿಕೊಳ್ಳಬೇಕು. ಮಾನವೀಯತೆ, ಅಂತಃಕರಣ ನಮ್ಮೆಲ್ಲರ ತಿಳಿವಳಿಕೆ, ಬುದ್ಧಿಶಕ್ತಿ ಅದಕ್ಕೆ ವಿನಿಯೋಗವಾಗಬೇಕು. ಇಂಥ ಬದುಕುವ ದಾರಿಯನ್ನು ಹುಡುಕಿಕೊಂಡು ಹೋಗುವ ಒಂದು ದೃಷ್ಟಿ ಕಾರಣವಾದಿಯದು. ಈ ರೀತಿಯ ಚಿಂತನೆ ಮನುಷ್ಯ ಪ್ರಯತ್ನದ ವಿಷಯದಲ್ಲಿ ವಿಶ್ವಾಸವನ್ನು ಬೆಳೆಸುವಂಥದು.

“ಮತಧರ್ಮದ ದೃಷ್ಟಿ, ಧೋರಣೆ ದೈವ ಸಂಕಲ್ಪದ ಮೇಲೆ ಅಪಾರವಾದ ನಂಬಿಕೆ ಇಟ್ಟುಕೊಂಡು ವ್ಯವಹರಿಸುವಂಥದು. ದೈವ ಸಂಕಲ್ಪ, ದೈವೇಚ್ಛೆಯನ್ನು ನಂಬಿಕೊಂಡಾಗ ನಾವು ದೀನವಾಗಿ, ದೈನ್ಯಭಾವದಲ್ಲಿ ಬದುಕನ್ನು ಸಾಗಿಸುತ್ತೇವೆ; ಎದುರಿಸುತ್ತೇವೆ. ಕಾರಣವಾದೀ ಚಿಂತನೆಯಲ್ಲಿ ಈ ದೈನ್ಯಭಾವವಿರುವುದಿಲ್ಲ; ಅಹಂಕಾರವೂ ಇರುವುದಿಲ್ಲ. ಅದೊಂದು ವಿನಯದ ದಾರಿ. ನಮ್ಮ ನಮ್ಮ ಶಕ್ತಿಯ ಮಿತಿ, ಮೇರೆ ನಮಗೆ ಗೊತ್ತಿದೆ. ಆ ಮಿತಿ, ಮೇರೆಯಲ್ಲಿಯೇ ಆದರೂ ನಾವು ನಮ್ಮ ಪ್ರಜ್ಞಾವಂತಿಕೆಯಿಂದ, ವಿವೇಕದಿಂದ ವರ್ತಿಸಿದರೆ ನಮ್ಮ ಪರಿಸರವನ್ನು ಇನ್ನಷ್ಟು ಚಂದಮಾಡಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ಈ ಬಗೆಯ ಚಿಂತನೆಯಲ್ಲಿ ಇರುತ್ತದೆ” (ಸಕಾಲಿಕ: ಜಿ.ಎಚ್. ನಾಯಕ, ೧೯೯೫, ಪು. ೪೦-೪೧)

ಇಂಥ ಜೀವನ ಸ್ವೀಕಾರ ದೃಷ್ಟಿ ಒಪ್ಪುವಂಥ ಮೌಲ್ಯಗಳ ಪ್ರತಿಪಾದನೆ ಕಾರಂತರ ಸ್ವಂತದ ಬದುಕು, ಚಿಂತನ ಮತ್ತು ಸೃಜನಶೀಲ ಬರವಣಿಗೆಗಳಲ್ಲಿ ಕಾಣಿಸುತ್ತದೆ.

ಕಾರಂತರ ಇಂಥ ನಿಲುವು, ಜೀವನದೃಷ್ಟಿ ನನ್ನಂಥವರ ಚಿಂತನೆಗೆ ಹತ್ತಿರವಾದದ್ದು. ನಮಗಿಂತ ಹಿರಿಯ ತಲೆಮಾರಿನವರಾದ ಕಾರಂತರು ಇಂಥ ಜೀವನದೃಷ್ಟಿಯನ್ನು ಪ್ರತಿಪಾದಿಸಿದ್ದು ನನ್ನಂಥವರಲ್ಲಿ ಬೆಳದ ಕಾರಣವಾದೀ ಚಿಂತನಕ್ರಮಕ್ಕೆ ಕಾರಣವಾಗಿರಬಹುದು. ಆ ಬಗ್ಗೆ ಅವರಿಗೆ, ಅವರಂಥ ಇತರ ಹಿರಿಯ ಚಿಂತನಕ್ರಮಕ್ಕೆ ಕಾರಣವಾಗಿರಬಹುದು. ಆ ಬಗ್ಗೆ ಅವರಿಗೆ, ಅವರಂಥ ಇತರ ಹಿರಿಯ ಚಿಂತಕರಿಗೆ ನಾನು ಋಣಿಯಾಗಿದ್ದೇನೆ. ಕಾರಂತರ ಕಾರಣವಾದೀ ಚಿಂತನೆಯ ಬಗ್ಗೆ ನನ್ನಂಥವರಲ್ಲಿ ಸಹಮತವೇ ಹೆಚ್ಚಾಗಿದೆ; ಅಭಿಪ್ರಾಯ ಭೇದ ಕಡಿಮೆ ಇದೆ. ಕಾರಂತರು ನಮ್ಮ ಬಹುದೊಡ್ಡ ಲೇಖಕರಲ್ಲಿ ಒಬ್ಬರು; ಮಹತ್ವದ ಸಂಸ್ಕೃತಿ ಚಿಂತಕರೆಂದು ಖ್ಯಾತರಾದವರು. ಅವರು ತಮ್ಮ ಸೃಜನಶೀಲ ಬರವಣಿಗೆಯ ಪ್ರಧಾನ ಮಾಧ್ಯಮವಾಗಿ ಕಾದಂಬರಿ ಪ್ರಕಾರವನ್ನು ಆಯ್ಕೆ ಮಾಡಿಕೊಂಡವರು. ಕಾರಂತರು ಒಟ್ಟು ನಲ್ವತ್ಮೂರು ಕಾದಂಬರಿಗಳನ್ನು ಬರೆದಿದ್ದಾರೆ. (ಅವರು ಕೆಲವು ಕಾದಂಬರಿಗಳನ್ನು ಹೇಳಿ ಬರೆಸಿದ್ದೂ ಉಂಟು.) ಪ್ರಾರಂಭದ ‘ವಿಚಿತ್ರಕೂಟ’ (೧೯೨೩-೨೪); ‘ಭೂತ’ ಈ ಪತ್ತೇದಾರಿ ಕಾದಂಬರಿಗಳನ್ನು ಬಿಟ್ಟು ಲೆಕ್ಕ ಹಾಕಿದರೆ ಒಟ್ಟು ನಲ್ವತ್ತೊಂದು ಕಾದಂಬರಿಗಳನ್ನು ಅವರು ಪ್ರಕಟಿಸಿದ್ದಾರೆ. ಅವೆಲ್ಲ ವಾಸ್ತವವಾದೀ ಕಾದಂಬರಿಗಳು, ವಾಸ್ತವವಾದೀ ಸಾಮಾಜಿಕ ವಸ್ತು ವಿಷಯಗಳನ್ನು ಒಳಗೊಂಡವು. ವಾಸ್ತವವಾದೀ ಮಾರ್ಗದ ಕಾದಂಬರಿಗಳ ಜೊತೆ ಜೊತೆಗೇ ಕನ್ನಡದಲ್ಲಿ ಬೆಳೆದು ಬಂದಿದ್ದ ಚಾರಿತ್ರಿಕ, ಪೌರಾಣಿಕ ಕಾದಂಬರಿ ಬರೆಯಲಿಲ್ಲ. ಅವರ ಕಾದಂಬರಿಗಳಲ್ಲಿ ಅವರಲ್ಲಿನ ಕಾರಣವಾದಿ, ಸಂಸ್ಕೃತಿ ಚಿಂತಕ ಮತ್ತು ಸೃಜನಶೀಲ ಲೇಖಕ ಒಟ್ಟಾಗಿ ಕ್ರಿಯಾಶೀಲರಾಗಿದ್ದಾರೆ. ಆ ಕ್ರಿಯಾಶೀಲತೆ ಪರಿಣಾಮಗೊಳಿಸಿಕೊಟ್ಟಿರುವ ಸಂಸ್ಕೃತಿ ಪುನಾರಚನೆ ಮತ್ತು ಅದು ಸೋಸಿಕೊಡುವ ಅರಿವು, ಜೀವನ ವಿವೇಕದ ಸ್ವರೂಪ ಕುರಿತಂತೆ ಈ ಸಂದರ್ಭದಲ್ಲಿ ನನಗೆ ಎದುರಾಗಿರುವ ಕೆಲವು ಪ್ರಶ್ನೆಗಳನ್ನು ಮುಂದಿನ ಚರ್ಚೆಗಾಗಿ ಎತ್ತಲು ಬಯಸುತ್ತೇನೆ.

ಕಾರಂತರ ಕಾದಂಬರಿಗಳ ಕಥಾನಾಯಕರು ಕಾರಂತರ ಜೀವನ ದೃಷ್ಟಿಯನ್ನು ಬಾಳಿ ತೋರಿಸುವವರು, ರಾಮ, ವ್ಯಾಸ, ಶ್ರೀನಿವಾಸ, ಶಂಕರ, ರಾಧಾಕೃಷ್ಣ, ವಸಂತ ದೇಸಾಯಿ, ಯಶವಂತರಾಯ, ಜಗನ್ನಾಥರಾಯ, ಕೃಷ್ಣರಾಯ, ಆನಂದರಾಯ, ಜಯರಾಮ, ನಾಗೇಂದ್ರ, ಅಡಾವುಡಿ ಚಂದ್ರಯ್ಯ, ಗೋಪಾಲಯ್ಯ, ಗಣಪತಿ ಹೆಗಡೆ, ಗಣೇಶ ಕಾಸರಕ-ಹೀಗೆ ಅವರು ಬೇರೆ ಬೇರೆ ಹೆಸರುಗಳಲ್ಲಿ ಬೇರೆ ಬೇರೆ ಕಾದಂಬರಿಗಳಲ್ಲಿ ಬರುತ್ತಾರೆ. ‘ಮೂಕಜ್ಜಿಯ ಕನಸುಗಳು’ ಕಾದಂಬರಿಯ ಸುಬ್ರಾಯ, ‘ಅಳಿದಮೇಲೆ’ ಕಾದಂಬರಿಯ ನಿರೂಪಕ ಕಾರಂತ (ಪಾತ್ರ), ‘ಬೆಟ್ಟದ ಜೀವ’ದ ಶಿವರಾಮ ಇಂಥವರನ್ನೂ ಈ ಪಟ್ಟಿಗೇ ಸೇರಿಸಬಹುದು. ಇವರೆಲ್ಲರ ಜೀವನದೃಷ್ಟಿ, ಧೋರಣೆ, ಮೌಲ್ಯಪ್ರಜ್ಞೆ ಇವುಗಳಿಗೆ ಸಂಬಂಧಿಸಿದಂತೆ ಅವರೆಲ್ಲ ಹೆಚ್ಚು ಕಡಿಮೆ ಒಂದೇ ಎರಕದಲ್ಲಿ ಹೊಯ್ದವರಂತೆ ಕಾಣಿಸುತ್ತಾರೆ. ಕಥೆಯ ವಸ್ತು-ವಿವರಗಳಿಗೆ ಸಂಬಂಧಿಸಿದಂತೆ ವಿವರದಲ್ಲಿ ವ್ಯತ್ಯಾಸವಿರುವುದರಿಂದ ಅಂಥ ಕಥಾನಾಯಕರು ಬೇರೆ ಬೇರೆ ಜೀವನ ಸಂದರ್ಭಗಳಲ್ಲಿ ಇಡಲ್ಪಟ್ಟಿದ್ದಾರೆಯೆ ಹೊರತು ಆಯಾ ಕಾದಂಬರಿಗಳಲ್ಲಿ ಮೊದಲಿನಿಂದ ಕೊನೆಯವರೆಗೂ ಜೀವನದೃಷ್ಟಿ, ಮೌಲ್ಯಪ್ರಜ್ಞೆಯ ಮಟ್ಟಿಗೆ ಅವರಲ್ಲಿ ಬೆಳವಣಿಗೆಯೊ, ಪಲ್ಲಟವೊ, ಸಂವೇದನೆ ಅಥವಾ ಅರಿವಿನ ವಿಸ್ತರಣೆಯ ಅಥವಾ ಪುನಾರಚನೆಯ ಒತ್ತಡವೊ ಕಾಣಿಸುವುದಿಲ್ಲ. ಅವರಲ್ಲಿ ಎಷ್ಟೋ ಜನ ಕಲಾವಿದರಿದ್ದಾರೆ. ರಾಮ, ವ್ಯಾಸ, ವಸಂತದೇಸಾಯಿ, ಯಶವಂತರಾಯ, ಕೃಷ್ಣರಾಯ, ಆನಂದರಾಯ, ಜಯರಾಮ ಇಂಥವರು. ಅವರವರ ಕಲಾ ಪ್ರಕಾರದ ಆಯ್ಕೆ ಮತ್ತು ಆಸಕ್ತಿ ಮತ್ತು ಅದರ ಸ್ವರೂಪ ವ್ಯತ್ಯಾಸದ ಕಾರಣದಿಂದಾಗಿ ಅವರವರ ಕಲೆಗಾರ ವ್ಯಕ್ತಿತ್ವದಲ್ಲಿ ಅನುಭವ ಮತ್ತು ಸಾಧನೆ-ಸಿದ್ಧಿಯ ವ್ಯತ್ಯಾಸದ ದೃಷ್ಟಿಯಿಂದ ಭಿನ್ನತೆಯನ್ನು ಅವರು ಕಾಣಿಸುತ್ತಾರೆ.

ಆದರೆ ವ್ಯಕ್ತಿಗಳಾಗಿ, ವ್ಯಕ್ತಿತ್ವಗಳಾಗಿ ಜೀವನದೃಷ್ಟಿ, ಮೌಲ್ಯಪ್ರಜ್ಞೆಗೆ ಸಂಬಂಧಿಸಿದಂತೆ ಅವರೆಲ್ಲ ಕಾರಂತರ ಕಾರಣವಾದೀ ಚಿಂತನೆಯ ಮಾನಸಪುತ್ರರಂತೆ ಕಾಣಿಸುತ್ತಾರೆ. ಕಾರಂತರು ಅವರ ಆತ್ಮಚರಿತ್ರೆಯ ಮೊದಲ ಪುಸ್ತಕವನ್ನು ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ (೧೯೫೦) ಎಂದು ಕರೆದಿದಾರಷ್ಟೆ. ಅವರ ಕಲಾವಿದ ಕಥಾನಾಯಕರೆಲ್ಲ ಈ ಹುಚ್ಚು ಮನಸ್ಸಿನ ಹತ್ತು ಮುಖಗಳ ಕಾರಂತರ ಬಿಡಿ ಬಿಡಿ ತುಣುಕುಗಳಾಗಿಯೆ ಕಾಣಿಸುತ್ತಾರಲ್ಲವೆ?

ಕಾರಂತರು ಕಾದಂಬರಿಕಾರರಾಗಿ ಅನುಭವದ ವಿಸ್ತಾರ, ಸಮೃದ್ಧಿಯನ್ನು ಕಾಣಿಸುವ ಲೇಖಕರು, ವೈವಿಧ್ಯಪೂರ್ಣವಾದ ಕ್ಷೇತ್ರ, ನೆಲೆ, ನಿಟ್ಟುಗಳಲ್ಲಿ ಅವರ ಕಾದಂಬರಿಗಳೊಳಗಿನ ಅನುಭವವಲಯದ ವಿಸ್ತಾರವಿದೆ. ಕಾದಂಬರಿಗಳ ಹೊರಗಿನ ಅವರ ಕ್ರಿಯಾಶೀಲ ಚಟುವಟಿಕೆಗಳಲ್ಲಿಯೂ ಅಂಥ ವೈವಿಧ್ಯಕ್ಕೆ ಕೊರತೆಯಿಲ್ಲ. ಕಾರಂತರು ಸ್ವಾನುಭವದ ಮೇಲೆ ಒತ್ತು ಕೊಡುವ ವಾಸ್ತವವಾದೀ ಲೇಖಕರು. ಅವರ ಆನಂತರದ ತಲೆಮಾರಿನವರಾದ ‘ನವ್ಯಕವಿ’ ಗೋಪಾಲಕೃಷ್ಣಅಡಿಗರಿಗಿಂತ ಮೊದಲೇ ಅವರು ಸಾಹಿತ್ಯದಲ್ಲಿ ‘ಸ್ವಾನುಭವ ನಿಷ್ಠೆ’ ಯನ್ನು ಒತ್ತಿ ಹೇಳಿದ, ದೃಢವಾಗಿ ಪ್ರತಿಪಾದಿಸಿದ ಲೇಖಕರು. ಸೃಜನಶೀಲ ಸಾಹಿತಿಗಳಾಗಿ ಅಡಿಗರು ಮುಖ್ಯವಾಗಿ ಕವಿಗಳು, ಕಾರಂತರು ಮುಖ್ಯವಾಗಿ ಕಾದಂಬರಿಕಾರರು, ಸ್ವಾನುಭವದ ಪ್ರಶ್ನೆ ಮತ್ತು ಪರಿಕಲ್ಪನೆಯ ವ್ಯಾಪ್ತಿ, ವಿಸ್ತಾರ, ಅದು ಕ್ರಿಯಾಶೀಲವಾಗುವ ಬಗೆ ಈ ಪ್ರಕಾರ ವ್ಯತ್ಯಾಸಗಳ ಕಾರಣದಿಂದ ಭಿನ್ನವಾಗಬಹುದಾದದ್ದು. ಆ ಭಿನ್ನತೆಯ ಸ್ವರೂಪ ಮತ್ತು ಪರಿಣಾಮ ಕುರಿತ ಚರ್ಚೆಯನ್ನು ಇಲ್ಲಿ ಬೆಳೆಸುವುದಿಲ್ಲ.

ಇಲ್ಲಿ, ಕಾರಂತರ ಮಟ್ಟಿಗೇ ಹೇಳುವುದಾದರೆ, ಅವರ ಕಾದಂಬರಿಗಳ ಕಥಾ ನಾಯಕರು “ಸ್ವಾನುಭವಗಳ ಸಂದರ್ಭದಲ್ಲಿಯೇ ಕಾರಣವಾದೀ ಧೋರಣೆಯ ಮೂಲಕ ಬದುಕಿನ ಅರ್ಥವನ್ನು ಅನ್ವೇಷಿಸಬೇಕೆಂಬ, ಅರಿಯಬೇಕೆಂಬ ಮನೋಭಿಪ್ರಾಯವುಳ್ಳುವರು. ಆದರೆ ದುಡಿಮೆ, ಋಣದ ಕಲ್ಪನೆ, ಕೃತಜ್ಞತೆ, ಮಾನವೀಯ ಅಂತಃಕರಣ ಇಂಥವುಗಳಿಗೆ ಸಂಬಂಧಿಸಿದ ಅವರ ಮೌಲ್ಯ ಪ್ರಜ್ಞೆ ಮತ್ತು ವೈಚಾರಿಕ ನಿಲುವುಗಳು ಮೊದಲಿನಿಂದಲೂ ಒಂದು ಸಹಜ ತುಡಿತವೆಂಬಂತೆಯೆ ಸಾಮಾನ್ಯವಾಗಿ ಪ್ರಕಟಗೊಳ್ಳುತ್ತ ಹೋಗುತ್ತವೆ. ಆ ಮೌಲ್ಯಗಳನ್ನು ಕುರಿತಂಥ ಅವರ ಪೂರ್ವಗ್ರಹಿಕೆಗಳು ಬದುಕಿನ ಯಾವ ಹಂತದಲ್ಲಿಯೂ ಎಂಥ ಬಿಕ್ಕಟ್ಟಿನಲ್ಲಿಯೂ ಬಲವಾದ ಸವಾಲುಗಳನ್ನು ಎದುರಿಸುವುದಿಲ್ಲ. ಶಿಕ್ಷಣ, ಕಲಾಜೀವನ, ಉದ್ಯೋಗ, ವಿಷಯ ಜ್ಞಾನ ಇಂಥವುಗಳಿಗೆ ಸಂಬಂಧಿಸಿದಂತೆ ಕಥಾ ನಾಯಕರ ಬದುಕು ವಿಕಸನಶೀಲ, ಚಲನಶೀಲ ಎಂಬಂತೆ ಕಂಡರೂ ಸೌಲಭ್ಯಗಳನ್ನು ಕುರಿತಂಥ ಪೂರ್ವಗ್ರಹಿಕೆಗಳು ಮಾತ್ರ ಹೆಚ್ಚು ಕಡಿಮೆ ಸ್ಥಿರ ತಿಳಿವಳಿಕೆಯ ನೆಲೆಯಲ್ಲಿಯೆ ಕೊನೆಯವರೆಗೂ ಅಬಾಧಿತವಾಗಿ ಇರುತ್ತವೆ. ಅಂದರೆ ಬದುಕಿನಲ್ಲಿ ರೂಢಿಸಿಕೊಂಡು ಬಂದ ಮೌಲ್ಯಗಳು ಮತ್ತು ವಿಚಾರಗಳು ಹೊಸ ಮತ್ತು ನಿಷ್ಠುರ ಜೀವನ ಸಂದರ್ಭಗಳ ಎದುರಿನಲ್ಲಿ ಪುನರ್ಪರಿಶೀಲನೆಗೆ ಒಳಗಾಗುವ, ಆ ಮೂಲಕ ಮೌಲ್ಯಗಳ ಬಗೆಗಿನ ಪೂರ್ವಗ್ರಹಿಕೆಗಳು ಹೊಸ ಆಯಾಮ ಮತ್ತು ಅರ್ಥವಂತಿಕೆಯಲ್ಲಿ ಪುನರ್ನಿರ್ಮಿತವಾಗುವ ಬಲವಾದ ಸಂಘರ್ಷ ಸಂದರ್ಭಗಳು ಕಥಾನಾಯಕರಿಗೆ ಅಷ್ಟಾಗಿ ಎದುರಾಗುವುದಿಲ್ಲ.

“ಜೀವನದಲ್ಲಿ ಎದುರಾಗುವ ಎಂಥ ಬಿಕ್ಕಟ್ಟುಗಳಿಗೂ ಅವರಲ್ಲಿ ಪೂರ್ವನಿರ್ಧರಿತ ಉತ್ತರಗಳು ಇವೆಯೇನೊ ಎಂದು ತೋರುವಂತೆ ಅವರು ಮನಸಿನ ಹೊಯ್ದಾಟ, ದ್ವಂದ್ವ, ಪೇಚುಗಳಿಗೆ ಹೆಚ್ಚು ಒಳಗಾಗದೆ ವ್ಯವಹರಿಸುತ್ತಾರೆ. ಅದರಿಂದಾಗಿ, ಕಾರಂತರ ಜೀವನದೃಷ್ಟಿಯನ್ನು ಹೆಚ್ಚು ನಿಕಟವಾಗಿ ಮತ್ತು ಸಮಗ್ರವಾಗಿ ಪ್ರತಿನಿಧಿಸುವಂತಿರುವ ಈ ಕಥಾನಾಯಕರಿಗೆ ಅವರ ಮಾನಸಿಕ ಸಿದ್ಧತೆ ಅಥವಾ ಸಂಸ್ಕಾರ ಸತ್ವಕ್ಕಿಂತ ಹೆಚ್ಚು ಬಲವಾದ ಸವಾಲುಗಳನ್ನು ಎಸೆಯುವಂಥ ಜೀವನ ಸಂದರ್ಭಗಳೇ ಎದುರಾಗುವುದಿಲ್ಲವೋ ಅಥವಾ ಈ ಕಥಾನಾಯಕರ ಸಂವೇದನಶೀಲತೆಗೆ ಸೂಕ್ಷ್ಮ ಸ್ಪಂದಿತ್ವಗುಣ ಉನ್ನತ ಮಟ್ಟದ್ದಾಗಿಲ್ಲವೋ ಎಂಬ ಪ್ರಶ್ನೆಗಳು ವಿಮರ್ಶಕರಿಗೆ ಎದುರಾಗುತ್ತವೆ. ಅಂಥ ಜೀವನ ಸಂದರ್ಭಗಳು ಎದುರಾಗುವುದಿಲ್ಲ ಎಂಬುದು ನಿಜವಾದರೆ ಸ್ವಾನುಭವದ ಮೂಲಕವೇ ಬದುಕಿನ ಅರ್ಥವನ್ನು ಅರಿಯುವ ಧೋರಣೆಯುಳ್ಳ ಕಾರಂತರ ಕಾದಂಬರಿಗಳ ಅನುಭವ ದ್ರವ್ಯವೇ ಅದು ಎಷ್ಟೇ ವ್ಯವಿಧ್ಯಮಯ ಮತ್ತು ವಿಸ್ತಾರವಾದ ವಲಯಗಳಲ್ಲಿ ವ್ಯವಹರಿಸಿದರೂ ಘನವಾದದ್ದಲ್ಲ, ಎಂದಂತಾಗುತ್ತದೆ. ಕಥಾನಾಯಕರ ಸಂವೇದನಶೀಲತೆಗೆ ಸೂಕ್ಷ್ಮ ಸ್ಪಂದಿತಗುಣವೇ ಉನ್ನತ ಮಟ್ಟದ್ದಾಗಿಲ್ಲವೆಂದರೆ ಜೀವನಶ್ರದ್ಧೆಗೆ ಸಂಬಂಧಿಸಿದಂತೆ ಕಥಾನಾಯಕರ, ಆ ಮೂಲಕ ಕಾರಂತರ ತಿಳಿವಳಿಕೆಗೆ ಹೆಚ್ಚಿನ ಆಳವಿಲ್ಲ ಎಂದಂತಾಗುತ್ತದೆ” (ನಿರಪೇಕ್ಷ : ಜಿ.ಎಚ್. ನಾಯಕ ೧೯೮೪, ಪುಟ ೧೮೯-೧೯೦) ಅಲ್ಲವೆ?