ನಿಮ್ಮ ಕಾಲದಲ್ಲಿ ಮೈಸೂರಲ್ಲಿ ಸಮಾಜವಾದಿ ಯುವಜನ ಸಭೆಯ ಚಟುವಟಿಕೆಗಳೂ ಇದ್ದವು. ತೇಜಸ್ವಿ, ನಂಜುಂಡಸ್ವಾಮಿ, ಶಾಮಣ್ಣ ಅವರೆಲ್ಲಾ ಅವರಲ್ಲಿದ್ರು. ಅವರ ಸಂಪರ್ಕ ನಿಮಗೆ ಬರಲಿಲ್ಲವಾ?

ನನಗೆ ಮೊದಲಿನಿಂದಲೂ ಒಂದು ಸ್ವಭಾವ, ಈಗಲೂ ಅದಿದೆ ಅಂತ ಅಂದ್ಕೊಂಡಿದ್ದೀನಿ. ಸೋಶಿಯಲಿಸ್ಟ್ ಅಂತಲೊ ಕಮ್ಯುನಿಸ್ಟ್ ಅಂತಲೊ ನಿರ್ದಿಷ್ಟವಾಗಿ ನನ್ನನ್ನು ಗುರುತಿಸಲಾರಿರಿ. ಎಷ್ಟೇ ಬಗೆಯ ಸಾಮಾಜಿಕ-ಸಾಹಿತ್ಯ ಚಿಂತನೆಗಳು ಇದ್ದರೂ ಕೂಡ, ನನ್ನ ನೆಲೆಯಿಂದಲೇ ನಾನು ಅಭಿಪ್ರಾಯ ರೂಪಿಸಿಕೊಳ್ಳೋನು. ಆದ್ದರಿಂದ ಸುಲಭವಾಗಿ ಗುಂಪಿನ ಜೊತೆಯಲ್ಲಿ ಜೈ ಹಾಕಲಿಕ್ಕೆ ಈಗಲೂ ಮನಸ್ಸು ಒಪ್ಪೋದಿಲ್ಲ. ಸಮಾಜವಾದಿ ಯುವಜನ ಸಭಾದವರು ಸಾಯಿಬಾಬ ಅವರಿಗೆ ಸವಾಲು ಹಾಕಿದ ಕಾರಣವಾದಿ ಚಿಂತಕ ಶ್ರೀಲಂಕಾದ ಅಬ್ರಾಹಂ ಕೋವೂರರನ್ನು ಮೈಸೂರಿಗೆ ೧೯೭೪ರಲ್ಲಿ ಕರ್ಸಿದ್ರು. ಸಾಯಿಬಾಬಾನ ಬೂದಿಮಂತ್ರ ಕೊಡೋದು ಬೂಟಾಟಿಕೆ ಅಂತ ತೋರಿಸಿದ್ರು. ನಾನು ಆ ಸಭೆಯ ಅಧ್ಯಕ್ಷತೆ ವಹಿಸಿದ್ದೆ. ಅಷ್ಟೊತ್ತಿಗಾಗಲೇ ಅವುಗಳ ಬಗ್ಗೆ ನನಗೆ ನಂಬಿಕೆ ಹೊರಟುಹೋಗಿತ್ತು. ಎಷ್ಟೋ ರಾತ್ರಿಗಳಲ್ಲಿ ಸ್ಮಶಾನ-ಗಿಶಾನ ಎಲ್ಲ ಒಬ್ಬನೇ ತಿರುಗಿ, ದೇವರು-ದೆವ್ವ ಎಲ್ಲಾ ಇಲ್ಲ ಎಂಬುದನ್ನು ದೃಢಪಡಿಸಿಕೊಂಡಿದ್ದೆ. ಆದ್ದರಿಂದ ದೇವರ ಭಯವೊ, ದೆವ್ವದ ಭಯವೊ, ಬಾಬಾಗಳ ಭಯವೊ ನನಗೆ ಇರಲಿಲ್ಲ. ೧೯೬೦ರಲ್ಲಿ ನಾನು ಲೆಕ್ಚರರ್ ಆಗಿ ಸೇರಿಕೊಂಡಿದ್ದು ಗ್ರಹಣದ ದಿನ. ರಾಶನಲಿಸ್ಟ್ ಎನ್ನಬಹುದಾದಂಥ ಮನೋಧರ್ಮ ಆಗಲೇ ಬೆಳೆದಿತ್ತು. ಸಮಾಜವಾದಿ ಮಿತ್ರರ ಜಾತಿವಿನಾಶ ಸಮ್ಮೇಳನದ ಬಗ್ಗೆ ನನಗೆ ಸಹಮತ ಇತ್ತು. ಆದರೆ ಬರಹಗಾರರ ಮತ್ತು ಕಲಾವಿದರ ಒಕ್ಕೂಟದ ಧೋರಣೆ ಬಗ್ಗೆ ಸಹಮತ ಇರಲಿಲ್ಲ. ಅವರ ಜೊತೆ ನಾನು ಸೇರಲಿಲ್ಲ. ಪರಿಚಯ ಇತ್ತಾದರೂ ತೇಜಸ್ವಿ ಸ್ನೇಹ ಉಂಟಾದದ್ದು ೧೯೬೪ರಲ್ಲಿ. ‘ಲಹರಿ’ ಪತ್ರಿಕೆ ಪ್ರಾರಂಭ ಕಾಲದಲ್ಲಿ. ಆ ವರ್ಷವೇ ಅವರ ‘ಯಮಳ ಪ್ರಶ್ನೆ’ ನಾಟಕಕ್ಕೆ ನನ್ನಿಂದ ಮುನ್ನುಡಿ ಬರೆಸಿದ್ರು. ಎಂ.ಡಿ.ನಂಜುಂಡಸ್ವಾಮಿ ಪರಿಚಯ ಆದದ್ದು ಕಾಫಿ ಹೌಸಿನಲ್ಲಿ. ಪೋಟೋ ಜರ್ನಲಿಸ್ಟ್ ಬಿ.ಎಸ್.ಆಚಾರ್ ಜತೆಗೆ ಬರತಿದ್ದರು. ಆಗ ತಾನೆ ಜರ್ಮನಿಯಿಂದ ತಿರುಗಿ ಬಂದಿದ್ರು. ತ್ರೀಫೀಸ್ ಸೂಟ್ ಧರಿಸಿ ‘ಭೋ’ ಹಾಕುತ್ತಿದ್ದರು. ಮಾತು ಬಹಳ ಕಡಿಮೆ ಆಡುತ್ತಿದ್ದರು. ಅವರ ತಂದೆ ಮಹಾಂತ ದೇವರು ಅಂತ. ಶ್ರೀಮಂತರು, ಆಢ್ಯರು, ಲಾಯರು; ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದರೆಂದು ನೆನಪು. ತೇಜಸ್ವಿಯಂತೆ ಇವರೂ ದೊಡ್ಡವರ ಮಗ. ತೇಜಸ್ವಿ ನೇರ, ಸರಳ, ತೇಜಸ್ವಿಗಿಲ್ಲದ ಅಥವಾ ತೇಜಸ್ವಿ ತೋರಿಸದ ಗಾಂಭೀರ್ಯ ಆಗ ನಂಜುಂಡಸ್ವಾಮಿಯವರದು. ಮುಂದೆ ಬೆಳೆವ ಧೀಮಂತ ರೈತನಾಯಕ ಅವರ ವ್ಯಕ್ತಿತ್ವದಲ್ಲಿ ಅಡಗಿ ಕುಳಿತಿದ್ದಾನೆ ಎಂದು ಅನಿಸುವುದಕ್ಕೆ ಆಗ ಸಾಧ್ಯವೇ ಇರಲಿಲ್ಲ. ಎನ್.ಡಿ.ಸುಂದರೇಶ್‌ರಲ್ಲಿಯೂ ಅಂಥ ರೈತ ನಾಯಕ ಅಡಗಿರಬಹುದೆಂದು ಅನಿಸಿರಲೇ ಇಲ್ಲ. ಈಗಲೂ ಆ ಇಬ್ಬರ ನೆನಪಾದಾಗ ನನ್ನಲ್ಲಿ ವಿಸ್ಮಯ, ಪ್ರಶಂಸೆ. ಟಿ.ಎನ್. ನಾಗರಾಜ್‌ರಂಥ ಸಂಭಾವಿತ ವಕೀಲರು ಹಿರಿಯ ಸಮಾಜವಾದಿ ಆಗಿದ್ದರು. ಅವರ ನಿಕಟ ಪರಿಚಯ ನನಗೆ ಇತ್ತು. ೧೯೬೪ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲದಲ್ಲಿ ಹಿಂದೀ ವಿರೋಧಿ ಚಳುವಳಿ ತೀವ್ರವಾಗಿದ್ದ ಕಾಲದಲ್ಲಿ ‘ಇಂಗಿಷ್ ಇಳಿಸಿ, ಕನ್ನಡ ಬೆಳೆಸಿ’ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ. ಟೌನ್ ಹಾಲಿನಲ್ಲಿ ಯುವಜನ ಸಭಾದವರು ಏರ್ಪಡಿಸಿದ ಮೆರವಣಿಗೆ ಸಭೆ ಆಗಿತ್ತು.

ನವ್ಯದ ಮುಖ್ಯ ತಾತ್ವಿಕ ಪರಿಕಲ್ಪನೆಗಳಲ್ಲಿ ಒಂದು ವ್ಯಕ್ತಿ ವಿಶಿಷ್ಟತೆ. ಸಮಾಜವಾದಿ ಚಳುವಳಿ ಇದಕ್ಕೆ ಪೂರಕವಾಗಿಲ್ಲ ಅನಿಸಿತಾ?

ವ್ಯಕ್ತಿ ವಿಶಿಷ್ಟತೆ ಅಂದರೆ ಏಕಾಕಿತನ, ವಿಕ್ಷಿಪ್ತತೆ ಎಂದಾದರೆ ಇದನ್ನೆಲ್ಲ ನಾನು ಎಂದೂ ಒಪ್ಪಿಲ್ಲ. ಲೆಕ್ಚರರ್ ಆದ ಮೇಲೆ ಸಾಮಾಜಿಕ ಜವಾಬ್ದಾರಿ ನನಗೂ ಇದೆ ಅಂತ ರಜೆ ದಿನಗಳಲ್ಲಿ ನಾನು ನಮ್ಮೂರಿಗೆ ಹೋಗಿದ್ದಾಗ ಊರೂರಿಗೆ ಹೋಗಿ-ಭಾಷಣಗಳ ವ್ಯವಸ್ಥೆ ಮಾಡತಿದ್ದೆ. ಬಡ ವಿದ್ಯಾರ್ಥಿಗಳನ್ನು ಓದಿಸುತ್ತಿದ್ದೆ. ನನಗೆ ಯಾವಾಗಲೂ ನನ್ನಷ್ಟಕ್ಕೆ ನಾನು ಇರಬೇಕು ಅಂತ ಅನ್ನಿಸಲಿಲ್ಲ. ಚಿಕ್ಕಂದಿನಿಂದಲೂ ಬಂದ ಗುಣ ಅದು. ಆ ಮಟ್ಟಿಗೆ ನಾನು ವ್ಯಕ್ತಿವಾದಿ ಅಲ್ಲ. ಆದರೆ ನಿಲುವು ತಳೆಯಬೇಕಾದಾಗ ಯಾವುದೇ ಸಂದರ್ಭ ನನಗೆ ಸರಿ ಅನಿಸೋದಿದ್ರೆ, ಬಹಳ ಗಟ್ಟಿಯಾದ ನಿಲುವನ್ನು ತಳೀತೀನಿ. ಪ್ರಶ್ನೆ ಎತ್ತೋ ಸ್ವಭಾವ ಚಿಕ್ಕ ವಯಸ್ಸಿನಲ್ಲೇ ಇತ್ತು. ನಾನು ಅಪ್ಪನನ್ನೂ ವಿರೋಧಿಸಿದ್ದು ಇದೆ. ಒಮ್ಮೆ ೧೯೫೭ರಲ್ಲಿ ಅವನು ಸಭೆಯ ಅಧ್ಯಕ್ಷನಾಗಿದ್ದೋನು ಸಭಾತ್ಯಾಗ ಮಾಡಬೇಕಾಯಿತು, ನಾನು ವಿರೋಧಿಸಿದ್ದರಿಂದ. ಅದು ನಮ್ಮೂರಿನ ಹಿತಾಹಿತಕ್ಕೆ ಸಂಬಂಧಿಸಿದ ವಿಷಯದ ಚರ್ಚೆ ನಡೆಯುತ್ತಿದ್ದ ಸಭೆಯಾಗಿತ್ತು. ನನ್ನಲ್ಲಿ ಸ್ವಲ್ಪ ಹಠಪ್ರವೃತ್ತಿ ಇತ್ತು ಅಂತ ಅನ್ಸುತ್ತೆ.

ನವ್ಯದ ಇಂಡಿವಿಜುಯಲಿಸಂನಲ್ಲೂ ಒಂದು ಬಗೆಯ ರಾಶನಾಲಿಟಿ ಗುಣ ಇತ್ತು. ನಿಜ. ಆದರೆ ಅದಕ್ಕೆ ವಿಶಾಲವಾದ ಸಾಮಾಜಿಕ ಆಯಾಮಗಳು ಇರಲಿಲ್ಲ.

ಇಂಡಿವಿಜುಯಾಲಿಟಿ ಬಗ್ಗೆ ನನ್ನ ಅನುಭವದಲ್ಲಿ ಹೇಳ್ತೀನಿ. ಮೊದಲು ಒಂದು ನಿಲುವು ತಳೆಯೊ ಹೊತ್ತಿಗೆ, ನನಗೆ ಒಂದು ಪ್ರಶ್ನೆ ಯವಾಗಲೂ ಇರೋದು. ನಾನು ಹೆಚ್ಚು ಓದ್ತಾ ಇದ್ದೆ. ಸ್ವತಂತ್ರವಾಗಿ ಯೋಚೆನ ಮಾಡ್ತಾ ಇದ್ದೆ. ವಿಚಾರಗಳಲ್ಲಿ ಜೀವನ ದೃಷ್ಟಿಯಲ್ಲಿ ಬದಲಾಗ್ತಾ ಇದ್ದೆ. ಅದು ನಮ್ಮನೆಯವರಿಗೆ ತಿಳೀತಾ ಇರಲಿಲ್ಲ. ಆದರೆ ಅವರು ಯಾಕೆ ಹಂಗೆ ಪ್ರತಿಕ್ರಿಯೆ ತೋರಿಸ್ತಾರೆ ಅಂತ ನನಗೆ ಗೊತ್ತಾಗುತ್ತಿತ್ತು. ನನ್ನ ಅಪ್ಪ ೧೯೫೯ರಲ್ಲಿ ತೀರಿಹೋದ. ಅವ್ವ ನಿರಕ್ಷರಿ. ನನ್ನ ನಿಲುವು, ನೋಟಗಳನ್ನು ಅವಳಿಗೆ ಅರ್ಥಮಾಡಿಸೋದು ಸುಲಭ ಆಗ್ತಿರಲಿಲ್ಲ. ಅಣ್ಣ ತಿಳುವಳಿಕಸ್ಥನಾದರೂ, ಅವನಿಗೂ ಅರ್ಥ ಮಾಡಿಕೊಳ್ಳೋದಕ್ಕೆ ಮೊದಮೊದಲು ಕಷ್ಟವೇ ಆಗ್ತಿತ್ತು. ಅವರ ಬಗ್ಗೆ ನನಗೆ ಗಾಢವಾದ ಪ್ರೀತಿ ಇತ್ತು. ಅವರಿಗೆ ನನ್ನ ಬಗ್ಗೆ ಗಾಢವಾದ ಪ್ರೀತಿ, ನಂಬಿಕೆ, ಅಭಿಮಾನ ಎಲ್ಲಾ ಇತ್ತು. ನನ್ನ ನಿಲುವು ನೋಟ ಅರ್ಥವಾಗದಿದ್ದಾಗ ಅವರು ನೊಂದುಕೊಳ್ತಾ ಇದ್ರು. ನನಗೆ ಸಂಕಟವಾಗ್ತಿತ್ತು. ಅವ್ವ ನೊಂದುಕೊಂಡಾಗ ನನ್ನ ಕರುಳು ಹಿಂಡಿದ ಹಾಗೆ ಆಗ್ತಿತ್ತು. ನನ್ನ ಕಣ್ಣುಗಳಿಂದ ನೀರು ಉಕ್ಕಿದ ಸಂದರ್ಭಗಳೂ ಇದ್ದವು. ಧೃತಿಗೆಡಿಸುವಂಥ ಸಂದರ್ಭಗಳೂ ಇದ್ದವು. ಇಂಗ್ಲಿಷ್ ಶಿಕ್ಷಣ, ಪ್ರಜಾಪ್ರಭುತ್ವದ ಹೊಸ ಕಾಲ, ನೈತಿಕ ಬಿಕ್ಕಟ್ಟು, ಆ ದ್ವಂದ್ವ ಇದೆಯಲ್ಲ, ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನವ್ಯ ಸಾಹಿತ್ಯದಿಂದ ಸಹಾಯವಾಯಿತು. ನವ್ಯದ ಬರವಣಿಗೆ ಕಡೆ ನನ್ನ ಒಲವನ್ನು ಹೆಚ್ಚು ದೃಢಗೊಳಿಸುವುದಕ್ಕೆ ಇದೂ ಒಂದು ಕಾರಣ ಆಗಿರಬಹುದು. ಅಡಿಗರ ಕಾವ್ಯ, ಅನಂತಮೂರ್ತಿಯವರ ‘ಕಾರ್ತೀಕ’, ‘ಪ್ರಶ್ನೆ’,’ಪ್ರಕೃತಿ’ ಯಂಥ ಕಥೆಗಳು, ‘ಸಂಸ್ಕಾರ’ದಂಥ ಕಾದಂಬರಿ ಇತ್ಯಾದಿ ನವ್ಯರ ಬರವಣಿಗೆಗಳು ನನ್ನ ಅರಿವನ್ನು ಆ ಕಾಲಘಟ್ಟದಲ್ಲಿ ಸೋಸಿಕೊಳ್ಳುವುದಕ್ಕೆ ನೆರವಾದವು. ನನ್ನ ಸಂವೇದನೆಯನ್ನು ಸೂಕ್ಷ್ಮಗೊಳಿಸಿದವು. ಅವನ್ನೆಲ್ಲ ಇಂಡಿವಿಜ್ಯುವಲಿಸಂನ ಬರವಣಿಗೆಗಳೆಂದು ಸರಳಗೊಳಿಸಿ ಹೇಳಲಾರೆ. ಹೊಸ ಹೊರಳುವಿಕೆಯ ಕಾಲಘಟ್ಟದಲ್ಲಿ ಸಮಾಜದ ಸಂವೇದನಶೀಲ ಮನಸ್ಸುಗಳ ಅನುಭವಗಳ ಲಯ ವಿನ್ಯಾಸವನ್ನು ಶೋಧಿಸುವಂಥ ಬರವಣಿಗೆಗಳಿಗೂ, ಸಾಮಾಜಿಕ ಆಯಾಮ ಸಾಮಾಜಿಕ ರೆಲೆವೆನ್ಸಿಇರುತ್ತದೆ. ಐಡಿಯಾಲಜಿ ಬದ್ಧ ಬರವಣಿಗೆಗಳ ಸಾಮಾಜಿಕ ಆಯಾಮ ಸಾಮಾಜಿಕ ರೆಲೆವೆನ್ಸಿಗಳಿಗೂ, ಇದಕ್ಕೂ ಸ್ವರೂಪ ವ್ಯತ್ಯಾಸ ಇದೆ. ಅದನ್ನು ಸಾಹಿತ್ಯ ವಿಮರ್ಶೆ ಗುರುತಿಸಿಕೊಳ್ಳಬೇಕಾಗುತ್ತದೆ.

ನೀವು ರೂಢಿಸಿಕೊಳ್ತಿದ್ದ ಆಲೋಚನಕ್ರಮ, ನೀವು ಹುಟ್ಟಿ ಬಂದ ಸಮುದಾಯದ ಮಧ್ಯೆ ಬೇರೆ ಎಂಥ ಬಿಕ್ಕಟ್ಟು ನಿರ್ಮಿಸಿತು?

ಆಶ್ಚರ್ಯ ಅಂದರೆ ಇವತ್ತಿಗೂ ನಿರ್ಮಿಸಿಲ್ಲ. ನನ್ನ ಅಪ್ರೋಚ್ ಇದೆಯಲ್ಲ ಅದು ಎಂದೂ ಉಢಾಫೆಯದಲ್ಲ ಅಂತ ಅಂದ್ಕೊಂಡಿದೀನಿ. ನನ್ನ ನಿಲುವಿನಲ್ಲಿ ರಾಜಿ ಮಾಡ್ಕೊಳ್ಲಿಕ್ಕೆ ಹೋಗಲ್ಲ ಸಾಮಾನ್ಯವಾಗಿ. ಆದರೆ ಜನರನ್ನು ಅರ್ಥ ಮಾಡಿಕೊಳ್ಳೋಕೆ ಬೇಕಾದಂಥ ಸಹಾನುಭೂತಿ ಪರವಾದ ಮನಸ್ಸು ಯಾವಾಗಲೂಇದ್ದೇ ಇರುತ್ತೆ. ನನ್ನ ಜೊತೇಲಿ ಚಿಕ್ಕಂದಿನಲ್ಲಿ ಓದಿದವರು, ನನ್ನನ್ನು ಚಿಕ್ಕಂದಿನಿಂದ ಬಲ್ಲವರು ಇದಾರಲ್ಲ, ಅವರು ಊರಿಗೆ ಹೋದರೆ ಆ ಪ್ರೀತಿ ವಿಶ್ವಾಸದಲ್ಲೇ ಅಷ್ಟೇ ಸಲಿಗೆಯಿಂದಲೆ ಈಗಲೂ ನನ್ನ ಜೊತೆಯಲ್ಲಿ ಇರಬಲ್ಲರು. ನಮ್ಮ ತಾಯಿ ವಿಷಯದಲ್ಲಿ ಸ್ವಲ್ಪ ಸಮಸ್ಯೆ ಇತ್ತು. ೧೯೬೫ರಲ್ಲಿ ನಾನು ವರದಕ್ಷಿಣೆ, ಊಟ, ವಾದ್ಯ, ಗರ್ನಾಲಂ ಇತ್ಯಾದಿಗಳಿಲ್ಲದೆ ಸರಳ ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದಾಗ, ಎದುರುಗಡೆ ಕೂಡಿಸಿಕೊಂಡು ಹೇಳ್ತಾ ಇದ್ರೂ ಅವಳಿಗೆ ಅರ್ಥ ಆಗಲಿಲ್ಲ. ನಾನು ಇಷ್ಟು ಸರಳವಾಗಿ ಮದುವೆ ಆಗುವುದು ಮನೆ ಮರ್ಯಾದೆಗೆ ಕಡಿಮೆ ಎಂದಳು. ಆವರೆಗೆ ಮೂಗುತಿ ಹಾಕಿಕೊಂಡಿರದ ವಧುವಿಗೆ, ಮೂಗುತಿ ಕಾಲುಂಗುರ ಹಾಕಿಸುವುದು ಬೇಡ ಎಂದದ್ದಕ್ಕೆ, ಅದು ದೊಡ್ಡ ಅಪಶಕುನ ಎಂದು ಬೆದರಿದಳು. ಅದು ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲ. ‘ಕಾನೂನಿಗೆ ವಿರುದ್ಧವಾಗಿ ೨೨ ಕೆರೆ‌ಟ್ಟಿನ ಚಿನ್ನದ್ದೇನನ್ನೂ ನಾನು ವಧುವಿಗೆ ಹಾಕುವುದಿಲ್ಲ. ೧೪ ಕೆರೆಟ್ಟಿನ ಮಣಿ ಮಾತ್ರ ಹಾಕಿ ಕರಿಮಣಿಸರದ ತಾಳಿ ಕಟ್ಟುತ್ತೇನೆ’ ಅಂದಾಗ ಹೌಹಾರಿದಳು. ನಾನೇನೊ ಹೇಳಿದಂತೆಯೇ ಮಾಡಿದೆ. ನನ್ನನ್ನೂ ಡಿಫೈನ್ ಮಾಡ್ಕೇಬೇಕಾದಾಗ, ನಿಲುವು ತಳೆಯೋ ಹೊತ್ತಿಗೆ ಸ್ಟಬರ್ನಾಗಿ ನಾನು ನಿಂತ್ಕೊಂಡಾಗ ತಕ್ಷಣ ಕಮ್ಯುನಿಕೇಟ್ ಆಗ್ತಾ ಇರಲಿಲ್ಲ. ಆದರೆ ನನ್ನ ವ್ಯಕ್ತಿತ್ವದ ಬಗ್ಗೆ ನಮ್ಮ ಪರಿಸರದಲ್ಲಿ ಯಾವಾಗಲೂ ಅಗೌರವ ಇರಲಿಲ್ಲ. ತಾಯಿಗೆ ನನ್ನ ವಿಷಯದಲ್ಲಿ ಒಂದು ಪ್ರಾಬ್ಲಂ ಇತ್ತು. ನಾನು ದೇವರು ಇಲ್ಲ, ದೆವ್ವ ಇಲ್ಲ ಅಂತ ಹೇಳ್ಲಿಕ್ಕೆ ಶುರು ಮಾಡಿದೆನಲ್ಲ. ಅವಳಿಗಿದ್ದ ಭಯ ಏನೆಂದರೆ, ನಮ್ಮದು ಪೂರ್ಣ ಧಾರ್ಮಿಕವಾದ ದೇವರು, ದೆವ್ವಗಳ ನಂಬಿಕೆಯಿದ್ದ ಮನೆ. ಅವಳಿಗೂ ನನ್ನ ಅಕ್ಕಂದಿರಿಗೂ ಮೈಮೇಲೆ ದೆವ್ವ ಬರ್ತಿತ್ತು. ‘ಇಂಗ್ಲೀಷ್ ಕಲಿತ ಇವನೊಬ್ಬನಿಗೇ ಎಲ್ಲಾ ಗೊತ್ತಾಗುತ್ತಾ? ಇವರ ಹಿರಿಯರಿಗೆಲ್ಲಾ ಏನೂ ಗೊತ್ತಾಗಿರಲಿಲ್ಲವಾ?’ ಎಂಬುದು ಅವಳ ಪ್ರಶ್ನೆ. ಎರಡನೇ ದೊಡ್ಡ ಆತಂಕ ಅಂದರೆ, ‘ಇವನು ಎಷ್ಟಿದ್ದರೂ ಹುಡುಗ. ದೇವರು, ದೆವ್ವ ಇಲ್ಲ ಅಂದಮೇಲೆ ನೀತಿ ಮೌಲ್ಯ ಎಂಬುದು ಇವನಿಗೆ ಇದೆಯಾ?’ ಇದು ಅವಳನ್ನು ಕಾಡ್ತಿತ್ತು. ನನಗೆ ಬಹಳ ದಿವಸ ಬೇಕಾಯಿತು ಅದನ್ನು ತಿಳ್ಕೊಳ್ಲಿಕ್ಕೆ. ನನ್ನ ನಡವಳಿಕೆಯನ್ನ ಗಮನಿಸ್ತಾ ಬಂದ ಅವಳಿಗೆ ನನ್ನ ಶೀಲ ನೀತಿ ನಿಷ್ಠೆ ಬಗ್ಗೆ ಆಮೇಲೆ ತುಂಬ ಭರವಸೆ ಬಂತು. ಆ ವಿಷಯದಲ್ಲಿ ಇದ್ದ ದೂರದ ಭಯ ಹೋಯ್ತು. ನನ್ನ ಮದುವೆಗಿಂತ ಸರಳವಾಗಿ ನಮ್ಮ ಒಬ್ಬಳೇ ಮಗಳ ಮದುವೆಯನ್ನು ನಾವು ೧೯೮೮ರಲ್ಲಿ ಮಾಡಿಸಿದಾಗ ಅವ್ವನಿಗೆ ೮೮ ವರ್ಷ. ಅವಳ ಎದುರಿನಲ್ಲಿ ಮದುಮಕ್ಕಳ ಹಾರ ವಿನಿಮಯ ಆಯ್ತು. ತುಂಬ ಸಂತೋಷ ವ್ಯಕ್ತಪಡಿಸಿದ್ದಳು. ನಾನು ಹುಟ್ಟಿ ಬೆಳೆದ ಪರಿಸರದ ಜನ ನನ್ನನ್ನು ಯಾವಾಗಲೂ ಪ್ರೀತಿ, ವಾತ್ಸಲ್ಯ, ಗೌರವಗಳಿಂದ ಕಂಡಿದ್ದಾರೆ.

ನಮ್ಮ ಸಮುದಾಯಗಳ ಸಾಂಸ್ಕೃತಿಕ ಲೋಕಾನ ಅರ್ಥ ಮಾಡಿಕೊಳ್ಳೊ ವಿಷಯದಲ್ಲಿ ಯುರೋಪಿನ ವಿಚಾರವಾದ ಮಾದರಿಗಳು ನಿರ್ಮಿಸಿದ ಬಿಕ್ಕಟ್ಟುಗಳ ಬಗ್ಗೆ ನಾವಿನ್ನೂ ಶೋಧಿಸಬೇಕಾದ್ದು ಬಹಳ ಇದೆ ಅಂತ ಅನಿಸುತ್ತೆ.

ಅಂದರೆ ಒಂದಾಯಿತು. ನಾವು ಇಂಗ್ಲಿಷ್ ಎಜುಕೇಶನ್ ಸಿಸ್ಟಂನಿಂದ ಒಂದು ರೀತೀಲಿ ನಮ್ಮ ಜನರಿಂದ ಪೂರ್ತ ಅಲ್ಲದೆ ಇರಬಹುದು, ತನ್ನಿಂದ ತಾನೆ ಬೇರೆ ಆಗ್ತಿದ್ದೋರು. ಬೇರೇದೇನನ್ನೊ ಕಲೀಲಿಕ್ಕೆ ಹೋಗ್ತಾ ಇದೀವಿ, ಹೊಸ ಕಾಲದ ಹೊಸ ತಿಳಿವಳಿಕೆಗೆ ಹೋಗ್ತಾ ಇದೀವಿ ಅನ್ನೋದು ನಮಗೆ ಇತ್ತು. ಆದರೆ ನಮಗೆ ಇನ್ನೊಂದು ಅನುಕೂಲ ಆಯ್ತು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಮಡಿಮೈಲಿಗೆ ಎಲ್ಲಾ ಹೊರಟೋಗಿತ್ತು. ಮನೇಲಿ ಪೊಲೀಸರು ಯಾವಾಗ ಬೂಟುಗಾಲಲ್ಲಿ ಬಂದರು, ಯಾವತ್ತಿಗೆ ಏನನ್ನು ಮಾಡುತ್ತಿದ್ದರು ಲೆಕ್ಕಿಲ್ಲ, ಜೈಲಿಗೆ ಹೋದವರು ಯಾರ ಜೊತೇಲಿ ಏನು ತಿಂದಿದ್ದಾರೆ ಉಂಡಿದ್ದಾರೆ ಗೊತ್ತಿಲ್ಲ. ದೊಡ್ಡ ದೊಡ್ಡವರ ಜತೆ ಜೈಲಲ್ಲಿ ಇದ್ದರಲ್ಲ, ಜೈಲಿಂದ ಬರೋವಾಗಲೇ ಎಲ್ಲರಿಗೂ ಮೇನ್‌ಸ್ಟ್ರೀಮಿನ ಕಲ್ಪನೆಗಳು ಬರಲಿಕ್ಕೆ ಶುರುವಾಗಿತ್ತು. ನಮ್ಮಲ್ಲಿ ಅದು ಎಷ್ಟು ವೇಗದಲ್ಲಿ ಎಜುಕೇಶನ್ ಶುರುವಾಯಿತು ಅಂದ್ರೆ, ಗಂಡುಮಕ್ಕಳು ಹೆಣ್ಣುಮಕ್ಕಳು ಎಸ್ಸೆಲ್ಸಿಯವರೆಗೆ ಓದದೆ ಇದ್ದವರು ಸಿಗುವುದೇ ಇಲ್ಲ. ಒಂಥರ ಬಿಡುಗಡೆಯ ಪರಿಸರದಲ್ಲಿ ನಾವು ಬೆಳೆದಿವಿ.

ಸಮುದಾಯದ ಸಂಸ್ಕೃತಿಗಳ ಜತೆ ಇನ್ನೂ ಆಪ್ತವಾಗಿ ಒಡನಾಡಲು ಬೇಕಾದ ಹಾಗೆ ನಮ್ಮ ರಾಶನಲಿಸ್ಟ್ ಚಿಂತನ ಕ್ರಮಾನ ಬದಲಿಸಿಕೊಳ್ಳೋ ಅಗತ್ಯ ಇದೆ ಅನಿಸೋಲ್ಲವಾ?

ನಂಗೆ ಹಾಗೆ ಅನಿಸಿಲ್ಲ. ಉದಾಹರಣೆಗೆ ವರದಕ್ಷಿಣೆ ಮದುವೆಗೆ ಹೋಗೋದಿಲ್ಲ ಅಂತ ನಾನೂ ನನ್ನ ಹೆಂಡತಿ ಮೀರಾ ಬಹಿಷ್ಕಾರ ಹಾಕಿದೆವು ಮೊದಲು. ಯಾರೂ ಹೋಗಲೇ ಇಲ್ಲ. ನಂತರ ಧಾರ್ಮಿಕ ಮದುವೆಗಳಿಗೂ ಹೋಗೋಲ್ಲ ಅಂತ ತೀರ್ಮಾನ ಮಾಡಿದೆವು. ಸರಳವಾದ ಮತ್ತು ಧಾರ್ಮಿಕವಲ್ಲದ ಮದುವೆಗಳಿಗೆ ಮಾತ್ರ ನಾನು ನನ್ನ ಮಡದಿ ಹೋಗ್ತೇವೆ. ನನಗೆ ಗೊತ್ತಿದೆ, ಅಷ್ಟೊಂದು ಎಕ್ಸ್‌ಟ್ರೀಮಲ್ಲಿ ನಿಲುವು ತಳೀಬೇಕಾಗಿರಲಿಲ್ಲ ಅಂತ. ಆದರೆ ಈ ನಿಲುವನ್ನು ತಳೆಯೋದು ಅಗತ್ಯ ಅಂತ ಯಾಕೆ ಮಾಡ್ತಾ ಇದೀನಿ ಅಂದ್ರೆ, ನನ್ನಂಥೋನು ಮಾಡಿದಾಗ ಇವನು ‘ಯಾಕೆ ಮದುವೆಗೆ ಬರಲ್ಲ’ ಅಂತ ಕೆಲವರಿಗಾದ್ರೂ ಯೋಚನೆ ಮಾಡೋಕೆ ಹಚ್ಚೇಹಚ್ಚುತ್ತೆ. ಬಯ್ಯೋಕಾದ್ರೂ ಚರ್ಚೆ ಮಾಡತಾರೆ. ಬೇರೆ ತರಹ ಅವರಿಗೆ ಕಮ್ಯುನಿಕೇಟ್ ಮಾಡಕಾಗಲ್ಲ. ಈಗ ವರದಕ್ಷಿಣೆ ಅನ್ನೋದು ಹೇಗಾಗಿದೆ ಅಂದ್ರೆ, ಅದಕ್ಕೆ ಸ್ಟ್ರಾಂಗ್ ಡಿಸೆಂಟ್ ಹಾಕಲೇಬೇಕು. ಅಂಥ ಮದುವೆಗೆ ಹೋದರೆ ಕಾನೂನನ್ನು ಧಿಕ್ಕರಿಸಿದಂತೆಯೂ ಆಗ್ತದೆ. ವರದಕ್ಷಿಣೆ ವಿರೋಧಿ ಮಾತನಾಡ್ತಾ, ವರದಕ್ಷಿಣೆ ವ್ಯವಹಾರ ಇರುವ ಮದುವೆಗೆ ಹೋಗಿ ಉಂಡು ಬರುವವರೂ ಅಪರಾಧ ಮಾಡಿದವರೇ ಆಗ್ತಾರೆ ಎಂಬುದು ನನ್ನ ಮತ್ತು ನನ್ನ ಹೆಂಡತಿಯ ಅಭಿಪ್ರಾಯ.

ನಮ್ಮ ಊರಿನ ಬೀರ ದೇವಸ್ಥಾನವನ್ನು ನವೀಕರಿಸಲು ದೇಣಿಗೆ ಎತ್ತಿದ್ರು. ನಮ್ಮನ್ನೂ ಕೇಳಿದ್ರು. ನಾವು ಅದಕ್ಕೆ ದೇಣಿಗೆ ಕೊಡ್ಲಿಲ್ಲ. ಊರಿನಲ್ಲಿ ಬಸ್ ತಂಗುಮನೆ ಇರಲಿಲ್ಲ. ಅದನ್ನು ಕಟ್ಟಿಸಿಕೊಟ್ಟೆವು. ನನ್ನ ಅಕ್ಕ ದೇವರು, ದೆವ್ವ ಅಂತ ನಂಬಿಕೆ ಇರುವವಳು. ಅವಳೇನೊ ಒಂದಷ್ಟು ಹಣ ಕೊಟ್ಟಳು. ಅವಳಿಗೆ ತಿಳಿಸಿ ಹೇಳಿ, ಅವಳು ದಾನ ಮಾಡಬೇಕೆಂದಿದ್ದ ಎರಡು ಲಕ್ಷ ರೂ. ಹಣವನ್ನು ದೇವಸ್ಥಾನದ ನವೀಕರಣದ ಕೆಲಸಕ್ಕೂ ಕೊಡಿಸ್ಲಿಲ್ಲ.; ಕಲ್ಯಾಣ ಮಂಟಪ ಕಟ್ಟಿಸುವವರಿಗೂ ಕೊಡಿಸಲಿಲ್ಲ; ಅಂಕೋಲೆಯ ಪಿ.ಎಂ.ಜ್ಯೂನಿಯರ್ ಕಾಲೇಜಿಗೆ ಕೊಡಿಸಿದೆವು. ಸಮುದಾಯದ ಸಂಸ್ಕೃತಿಗಳ ಜೊತೆ ಆಪ್ತವಾಗಿ ಒಡನಾಡಬೇಕೆಂಬ ಪರಿಕಲ್ಪನೆಯಲ್ಲಿಕೂಡ ಬದಲಾಗಬೇಕಾದ ಅಗತ್ಯ ಇದೆ. ‘ಸಮುದಾಯದ ಸಂಸ್ಕೃತಿ’ ಜತೆ ಎಂಬುದನ್ನು ‘ಸಮುದಾಯದ ಬದುಕಿನ ಜೊತೆ’ ಅಂತ ತಿದ್ದುಪಡಿ ಮಾಡಿಕೊಳ್ಳೋದು ಅಗತ್ಯ. ಜಾತಿ, ಮತಧರ್ಮ, ಮಂದಿರ, ಮಸೀದಿ, ಚರ್ಚ್ ಗುರುದ್ವಾರಗಳು ಇವೆಲ್ಲ ಸಮುದಾಯ ಸಂಸ್ಕೃತಿಯ ಅರ್ಥ ವ್ಯಾಖ್ಯಾನಗಳಲ್ಲಿ ಕಲಸಿ ಹೋಗುತ್ತಿವೆ. ಅಂಥ ಈ ಕಾಲದಲ್ಲಿ ಸಮುದಾಯದ ಸಂಸ್ಕೃತಿಯ ಪರಿಕಲ್ಪನೆ ಭಾರತದ ಸಮಗ್ರ ಜನತೆಯ ಸಂಸ್ಕೃತಿ ಕಟ್ಟೋಣದ ಪರಿಕಲ್ಪನೆಯದಾಗಬೇಕು. ತುಂಡು ತುಂಡು ಸಮುದಾಯಗಳ ವ್ಯಾಪ್ತಿಗೇ ನಿಲ್ಲಬಾರದು. ಜಾತಿ ಮತಧರ್ಮ ಸಂಬಂಧವಾದ ನಂಬಿಕೆಯು, ನಂಬುವವರ ಸ್ವಂತದ ಮತ್ತು ಖಾಸಗಿ ವ್ಯವಹಾರ ಮಾತ್ರ ಆಗಬೇಕು. ಮನುಷ್ಯ ಮನುಷ್ಯರ ನಡುವಿನ ಸಂಬಂಧದ ನಡುವೆ ಅದು ತಲೆಹಾಕುವಂತೆಯೊ ಮೂಗು ತೂರಿಸುವಂತೆಯೊ ಇರಬಾರದು. ಜಾತಿ ಮತಧರ್ಮ ನಿರಪೇಕ್ಷವಾದ ಸಮಾಜವಾದೀ ಸಮಾಜ, ಸಂಸ್ಕೃತಿಯನ್ನು ಕಟ್ಟುವ ಭಾರತದ ಸಂವಿಧಾನ ಪ್ರಣೀತ ಕನಸನ್ನು ಭಗ್ನಗೊಳಿಸುತ್ತಲೇ ಇರುವ, ಜಾತಿ-ಮತಧಾರ್ಮಿಕ ಚಟುವಟಿಕೆ, ಮನೋಧರ್ಮಗಳನ್ನು, ನಮ್ಮ ನಮ್ಮ ವೈಯಕ್ತಿಕ ಮಟ್ಟದಲ್ಲಿ ಆದರೂ ವಿರೋದಿಸಲೇ ಬೇಕಾಗಿದೆ. ಆದ್ದರಿಂದ ನಾವು ಧಾರ್ಮಿಕ ಆಚಾರ ವಿಧಿಗಳಂತೆ ನಡೆಯುವ ಮದುವೆಗಳಿಗೂ ಹೋಗೋದಿಲ್ಲ. ಮನೆಯಲ್ಲಿ ಮತಧಾರ್ಮಿಕ ಹಬ್ಬಗಳನ್ನು ಆಚರಿಸೋದಿಲ್ಲ. ರಾಷ್ಟ್ರೀಯ ದಿನಗಳೇ ನಮ್ಮನೆಯಲ್ಲಿ ಹಬ್ಬದ ದಿನಗಳು. ಹುಟ್ಟಿದ ಜಾತಿಯವರ ಜಾತಿ ಸಂಘದ ಜೊತೆಗೆ ಯಾವ ವಿಧವಾದ ಸಂಬಂಧವನ್ನೂ ನಾವು ಇಟ್ಟುಕೊಂಡಿಲ್ಲ. ನನ್ನ ಹೆಂಡತಿ ಮೀರಾ ೨೫ ವರ್ಷಗಳಿಂದ ಸಮತಾ ವೇದಿಕೆ ಎಂಬ ಮಹಿಳಾ ಸಮಾನತೆಗಾಗಿ ಹೋರಾಡುವ ಮಹಿಳಾ ವೇದಿಕೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬಳಾಗಿದ್ದು ಈವರೆಗೂ ಕ್ರಿಯಾಶೀಲಳಾಗಿದ್ದಾಳೆ. ೧೯೮೨ರಿಂದ ನಮ್ಮ ಮನೆಯೆ ಸಮತಾ ವೇದಿಕೆ-ಆಫೀಸು. ವೇದಿಕೆಯವರು ನೂರಾರು ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸ್ತಾ, ಪರಿಹಾರ ಮಾಡಲು ನೆರವು ನೀಡ್ತಾ ಬಂದಿದ್ದಾರೆ. ಸರ್ಕಾರದಿಂದಾಗಲಿ ಬೇರೆ ಯಾವದೇ ಸಂಸ್ಥೆಯಿಂದಾಗಲಿ, ಆರ್ಥಿಕ ನೆರವು ಪಡೆಯದೆ ಸ್ವಂತದ ಹಣ, ಬಿಡುವಿನ ಕಾಲ, ಶ್ರಮದಿಂದ ಸಮತಾದವರು ಈ ಕೆಲ್ಸ ಮಾಡ್ತಿದ್ದಾರೆ. ರಾಶನಲಿಸ್ಟ್ ಧೋರಣೆ ನನ್ನ ಹೆಂಡತಿಯಲ್ಲಿ ಬೆಳೆಯದೇ ಇದ್ದಿದ್ರೆ ಇಷ್ಟು ಜನಸಂಪರ್ಕ, ಈ ರೀತಿ ಆಸಕ್ತಿ, ಸಮಾಜದ ಬಗೆಗಿಮ ಇಂಥ ಕಾಳಜಿ ಅವಳಲ್ಲಿ ಬೆಳೀತಾ ಇರ್ಲಿಲ್ಲ ಅಂತ ನಾನು ತಿಳಿದಿದ್ದೀನಿ. ‘ಸಮುದಾಯದ ಬದುಕಿನ’ ಜೊತೆ ಆಪ್ತವಾಗಿ ಒಡನಾಡುವುದಕ್ಕೆ ರಾಶನಲಿಸಂ ಚಿಂತನಕ್ರಮ ತೊಡಕಾಗಬೇಕಿಲ್ಲ. ಬದಲಾಗಿ ಅದೊಂದು ಶಕ್ತಿ ಆಗಬಲ್ಲದು. ಆ ವಿಷಯದಲ್ಲಿ ಕಾರಂತರಿಗಿಂತ ಬೇರೆ ಉದಾಹರಣೆ ಬೇಕೆ?

ಕನ್ನಡದಲ್ಲಿ ಸಮುದಾಯಗಳ ಬದುಕಿನ ಜೊತೆ ಅರ್ಥಪೂರ್ಣವಾಗಿ ಒಡನಾಡುವಂತೆ ಹೊಸ ಚಿಂತನಕ್ರಮದ ಹುಡುಕಾಟ ನಡೀತಿದೆ ಅಂತ ನನಗೆ ಅನಿಸ್ತಿದೆ. ಈಚಿನ ಅನೇಕ ಸಾಂಸ್ಕೃತಿಕ ಅಧ್ಯಯನಗಳು ಇದಕ್ಕೆ ಸಾಕ್ಷಿ. ಸಾಹಿತ್ಯ ಸೃಷ್ಟಿಯಲ್ಲೂ ಇದು ಶುರುವಾಗಿದೆ. ಉದಾಹರಣೆಗೆಕುಸುಮಬಾಲೆ

ನಾವು ಹೊಸದಾಗಿ ಕಲ್ತುಕೊಳ್ಳಬೇಕಾದ್ದು ಪಡೀಬೇಕಾದ್ದು ಇಲ್ಲೂ ಇದೆ, ಇಲ್ಲಿದೆ ಅಂತ ಅನಿಸಿದಾಗ, ನಾವು ಬೆಳೆದ ಪರಿಸರದ ಸಂಸ್ಕೃತಿ ಸಂದರ್ಭದ ಲಯ ಇದೆಯಲ್ಲ, ಅದರಲ್ಲಿ ಆಸಕ್ತಿ ಮೂಡುತ್ತೆ. ಆದರೆ ಅನಂತಮೂರ್ತಿಯವರ ಆಸಕ್ತಿಗೂ ನಮ್ಮಂಥವರ ಆಸಕ್ತಿಗೂ ವ್ಯತ್ಯಾಸ ಇದೆ. ಅನಂತಮೂರ್ತಿಯವರು ‘ದಿವ್ಯ’ದಲ್ಲಿ ಅಗೀತಾ ಇರುವಂಥದು, ಅವರು ಮೊದಲು ಯಾವುದು ಸಲ್ಲದು ಅಂತ ತಿಳಕೊಂಡು ಬರೀತಾ ಇದ್ದರೊ ಅದನ್ನೇ. ಅದನ್ನ ಈಗ ಸಲ್ಲುವಂಥದು ಅಂತ ಸ್ಥಾಪನೆ ಮಾಡುವ ಧೋರಣೆ ಕಾಣಿಸ್ತಿದೆ. ಅದು ತಲೆಕೆಳಗಾಗಿ ಹೋಗುವ ದಿಕ್ಕಿನಲ್ಲಿದೆ. ನನ್ನ ಪ್ರಶ್ನೆ ಏನೆಂದರೆ, ನೀವು ಬದುಕಿನ ಲಯ ವಿನ್ಯಾಸಗಳನ್ನು ರಾಶನಲಿಸ್ಟ್ ಆಗಿಯೇ ಅರ್ಥ ಮಾಡಿಕೊಳ್ಳುವ ಒತ್ತಡಗಳಿಂದ ಒಳಹೊಕ್ಕು ನೋಡೋದಾದಾಗ, ಬಹಳ ಹ್ಯೂಮನ್ ಆಗಿರಬಹುದು-ಮನುಷ್ಯ ಮನುಷ್ಯ ಸಂದರ್ಭದಲ್ಲಿ ವ್ಯಾಲ್ಯೂಸ್ ದೃಷ್ಟಿಯಿಂದ. ನಮಗೆ ಜನ ಸಮುದಾಯಗಳ ಮೇಲೆ ಕನ್ಸರ್ನ್ ಇದೇ ಅಂತ ತಾನೇ ಈ ಬಗ್ಗೆ ನಾವು ಯೋಚನೆ ಮಾಡ್ತಾ ಇರೋದು? ಆದ್ದರಿಂದ ನಾವು ಬೆಳೆದು ಬಂದ ಪರಿಸರಾನ್ನ ವಿಚಾರವಾದದಿಂದ ತಿರುಗಿ ನಾವೀಗ ನೋಡ್ತಾ ಇರೋ ರೀತಿ ಇದೆಯಲ್ಲ, ಅದರಲ್ಲಿ ಒಂದು ಡಿಸ್ಟೆನ್ಸ್ ಸಾಧ್ಯವಾಗಿದೆ. ನಮ್ಮ ತಿಳುವಳಿಕೆ ನೆಲೆಯಿಂದ ಮೌಲ್ಯಮಾಪನ ಮಾಡಿ, ಸಲ್ಲುವ ಸಲ್ಲದೇ ಇರುವ ಬಗ್ಗೆ ಒಂದು ಡಿಸ್ಟ್ರಿಮಿನೇಟಿವ್ ನೋಟ ಸಾಧ್ಯ ಆಗಿದೆ. ಅದು ಅವರ ಜತೇಲೇ ಬದುಕ್ತಾ ಇದ್ದಾಗ ಸಾಧ್ಯವಾಗ್ತಿರಲಿಲ್ಲ. ‘ಕುಸುಮಬಾಲೆ’ ಮಾಡ್ತಾ ಇರೋದು ಇದೇ. ಅಲ್ಲಿ ಕಲೆಯ ಸಂದರ್ಭದಲ್ಲಿ ಆಗಿದೆ.

ಅಡಿಗರನ್ನು ಬಿಟ್ಟರೆ, ನಿಮ್ಮ ವಿಮರ್ಶೆಯ ಮೇಲೆ ಪ್ರಭಾವ ಬೀರದೋರು ಯಾರು ಸಾರ್?

ಕುರ್ತಕೋಟಿ ಅನ್ಸುತ್ತೆ. ೧೯೬೨ನೇ ಇಸ್ವಿಯಲ್ಲಿ ‘ಯುಗಧರ್ಮ ಮತ್ತು ಸಾಹಿತ್ಯ ದರ್ಶನ’ ಬಂತಲ್ಲ. ಆಗ ಒಂದು ಸಲ ಅವರ ವಿಮರ್ಶೆ ನನಗೆ ಹೊಸ ಅನುಭವ ಕೊಡ್ತು. ನನ್ನಲ್ಲಿ ಒಂದು ತಿರುವು, ಬೇರೆ ಸ್ಪರ್ಶ ಬಂದದ್ದು ಆಗ. ಆದರೆ ಒಂದು, ಮೊದಲಿಂದಲೂ ನನ್ನ ಸ್ವಭಾವದಲ್ಲೇ ಇದೆ. ಅಡಿಗರೇ ಇರಲಿ ಯಾರೇ ಇರಲಿ, ಯಾರಿಂದಲೂ ನಾನೂ ಪೂರ್ತ ಪ್ರಭಾವಿತನಾಗಲ್ಲ. ಯಾರದೇ ಭಕ್ತಾದಿಗಳಲ್ಲಿ ಬರೋದಿಕ್ಕೆ ಸಾಧ್ಯನೇ ಇಲ್ಲ. ಇಲ್ಲೂ ಅಷ್ಟೆ. ಕುರ್ತಕೋಟೀದು ಒಂದ್ಸಲ ನನಗೆ ಬರೆಯೋಕೆ ಹೊಸ ಸಾಧ್ಯತೆಗಳ ಸೂಚನೆ ಕೊಡ್ತು. ಒಂದು ದಿಕ್ಕು ಹುಡಕೋಕೆ ಪ್ರೇರಣೆ ಕೊಡ್ತು. ಆದರೆ ಅವರದು ಕೂಡ ಪೂರ್ತಿಯಾಗಿ ಒಪ್ಪಿಗೆಯಾಗಲಿಲ್ಲ. ಆಮೇಲೆ ಎಂ.ಜಿ. ಕೃಷ್ಣಮೂರ್ತಿಯವರ ಪ್ರಾಯೋಗಿಕ ವಿಮರ್ಶೆ ಇತ್ತಲ್ಲ, ಅದು ಒಂದು ಕೃತಿ ಅಧ್ಯಯನ ಮಾಡುವಾಗ ಸೂಕ್ಷ್ಮಗಳನ್ನು ಅರಿಯುವ ಪರಿಯನ್ನು ಕಲ್ಪಿಸಿ ಕೊಡ್ತು. ಇದನ್ನು ಹೇಳಲೇಬೇಕು. ಆದರೆ ಎಂಜಿಕೆ ಕೂಡ ಬಹಳ ಫ್ಯಾಸಿನೇಟ್ ಮಾಡ್ಲಿಲ್ಲ. ಕೃತಿಯನ್ನು ಅರ್ಥ ಮಾಡ್ಕೊಳ್ಳೋದಿಕ್ಕೆ ಸಂಬಂಧಿಸಿದಂಥ ಒಂದು ಶಿಸ್ತಿಗೆ ಅವರು ಪ್ರಭಾವ ಮಾಡಿದರು ಅಂತ ಹೇಳಬಹುದು. ಅನಂತಮೂರ್ತಿ ಮಟ್ಟಿಗೆ ಬಂದಾಗ, ಅವರು ಹೊಳಹುಗಳನ್ನು ಚೆಲ್ಲಾ ಇದ್ರಲ್ಲ, ಅದರ ಮೇಲೆ ಫೆಸಿನೇಶನ್ ಇತ್ತು. ಆದರೆ ಇದು ಕೂಡ ಒಂದು ಮಟ್ಟದವರೆಗೆ ಮಾತ್ರ. ಆದರೆ ಥಟ್ಟನೆ ಹೊಳೆಯಿಸುವ, ನಮಗೆ ಬೆರಗುಗೊಳಿಸಬಹುದಾದ ಶಕ್ತಿಯನ್ನು ನಾನು ಅವರಲ್ಲಿ ಬಹಳ ಸಲ ಕಂಡಿದ್ದೀನಿ. ವಿಮರ್ಶೆಗೆ ಈ ಮೂರೇ ಜನ ನನ್ನನ್ನು ಆ ಕಾಲದಲ್ಲಿ ಸೆಳೆದವರು.

ನಿಮ್ಮದು ಒಂದು ಬಗೆಯಲ್ಲಿ ನೈತಿಕ ಆದರ್ಶವಾದಿ ವ್ಯಕ್ತಿತ್ವ. ವಿಷಯದಲ್ಲಿ ಅನಂತಮೂರ್ತಿಯವರು ಚಂಚಲ. ಸಾಹಿತ್ಯ ಬಿಟ್ರೆ ಇತರೆ ವಿಷಯಗಳಲ್ಲಿ ಅವರ ನಿಮ್ಮ ಸಂಬಂಧ ಹೇಗಿತ್ತು?

ಯಾವಾಗಲೂ ಜೊತೇಲಿ ಸಾಹಿತ್ಯ ಅದೂ ಇದೂ ಅಂತ ಮಾತಾಡ್ತಾನೇ ಇದ್ದೆವಲ್ಲ, ಹೀಗಾಗಿ ಅವರ ಬಗ್ಗೆ ಹೆಚ್ಚು ಒಲವು ಬಂತು. ನಾನು, ಭಾವುಕ ಆಗದೇನೇ ಒಂದು ಅಂತರದಲ್ಲಿದ್ದು, ಸಾಹಿತ್ಯದ ಬಗ್ಗೆ ಕಲಿಸಬಹುದಾದೋರು ಇವರು ಅಂತ ನೋಡಿದೇನೆ. ಅವರು ಸಂಚಾರಿಯಾಗಿ ಹೆಚ್ಚು ಒಳನೋಟಗಳನ್ನು ಕೊಡಬಲ್ಲರು ಅಂತ ಬಲ್ಲೆ. ಆದರೆ ವ್ಯಕ್ತಿತ್ವ ಕಟ್ಟಿಕೊಳ್ಳೋ ವಿಷಯ ಬಂದಾಗ, ಕೊಡಬಹುದಾದೋರು ಅಂತ ಅನಿಸಲಿಲ್ಲ. ಅವರ ವ್ಯಕ್ತಿತ್ವ ನಾನು ಅನುಸರಿಸಬೇಕಾದ್ದು ಎಂಬ ಭಾವವನ್ನ ಯಾವ ಕಾಲದಲ್ಲೂ ಕೊಡಲಿಲ್ಲ. ಆದರೆ ಅಡಿಗರ ವಿಷಯದಲ್ಲಿ ಹಾಗಲ್ಲ. ‘ಪ್ರಶ್ನೆ’ ಸಂಕಲನದ ಕಥೆಗಳಿಂದ ಹಿಡಿದು ಮುಂದಿನ ಅವರ ಎಷ್ಟೋ ಕತೆಗಳನ್ನು ಹಾಗೂ ‘ಭಾರತೀಪುರ’ ಕಾದಂಬರಿಯನ್ನು ಪ್ರಕಟನೆಗೆ ಮೊದಲೇ ಕೈಬರಹದಲ್ಲಿರುವಾಗಲೇ ನನಗೆ ಅವರಾಗಿಯೆ ಕೊಟ್ಟು ಓದಿಸುವಷ್ಟು ಅನಂತಮೂರ್ತಿಯವರ ಒಡನಾಟ ನಿಕಟವಾಗಿತ್ತು. ‘ಭಾರತೀಪುರ’ವನ್ನಂತೂ ಪ್ರತಿ ಚಾಪ್ಟರ್ ಬರೆದಂತೆಲ್ಲ ಕೊಟ್ಟು ಓದಿಸಿದ್ದರು. ಅನಂತಮೂರ್ತಿ ಎನ್‌ಬಿಟಿಗೆ ‘ಆಧುನಿಕ ಕನ್ನಡ ಕಾವ್ಯ ಸಂಚಯ’, ಸಿಐಐಲ್‌ಗೆ ಕನ್ನಡ ಸಾಹಿತ್ಯ ಭಾಗಗಳ ಆಯ್ದ ಸಂಚಯ ಸಿದ್ಧಪಡಿಸುವಾಗಲೂ, ನನ್ನಿಂದ ಗಣನೀಯವಾದ ನೆರವು ಪಡೆದಿದ್ದರು. ಮುರಳೀಧರ ಉಪಾಧ್ಯ ಅವರು ತಂದ ‘ಯು.ಆರ್. ಅನಂತಮೂರ್ತಿ’ ಎಂಬ ಪುಸ್ತಕ ಓದಿದರೆ, ನನಗೂ ಅವರಿಗೂ ವೈಯಕ್ತಿಕ ಮಟ್ಟದಲ್ಲಿ ಯಾವುದೇ ಬಗೆಯ ಪರಿಚಯವೊ ಸಂಬಂಧವೊ ಇದ್ದಿರಬಹುದು ಎಂಬುದು ಕೂಡ ಗೊತ್ತಾಗದಂತೆ ಇದೆ.’ಭಾರತೀಪುರ’ ಬರೆಯುವಾಗ ಆಲನಹಳ್ಳಿ ಶ್ರೀ ಕೃಷ್ಣ ಅವರಿಗೆ ಮಾತ್ರ ಗೊತ್ತಿತ್ತು ಎಂದು ಸಂಪಾದಕೀಯದಲ್ಲಿ ಬೇರೆ ಇದೆ. ನೋಡಿ ಆಶ್ಚರ್ಯವಾಗಿತ್ತು. ‘ದಿವ್ಯ’ ಕಾದಂಬರೀನ ಕೂಡ ಅದು ಪ್ರಕಟವಾಗೋಕ್ಕಿಂತ ಮುಂಚೆ ನಾನು ಓದ್ಬೇಕು ಅಂತ ಹೇಳಿ ಪಂಡಿತಾರಾಧ್ಯರಿಗೆ ಇಂಗ್ಲೆಂಡಿನಿಂದ ಅನಂತಮೂರ್ತಿಯವರು ಇ-ಮೇಲೆ ಕಳಿಸಿದ್ರು. ನಾನು ಓದುವ ಉತ್ಸಾಹ ತೋರಿಸಲಿಲ್ಲ. ಪ್ರಕಟವಾದ ಮೇಲೆ ಓದಿದೆ. ೧೯೮೧ರಲ್ಲಿ ‘ರುಜುವಾತು’ ಪತ್ರಿಕೆ ಹೊರಬಂದ ಕಾಲದಿಂದ ದೂರ ಆಗದಿದ್ದರೂ, ಕಾರಣಾಂತರಗಳಿಂದ ಮೊದಲಿನಷ್ಟು ಹತ್ತಿರದ ಒಡನಾಟವನ್ನು ವೈಯಕ್ತಿಕ ಮಟ್ಟದಲ್ಲಿ ಮುಂದುವರಿಸುವ ಉತ್ಸಾಹ ನನ್ನಲ್ಲಿ ಉಳಿಯಲಿಲ್ಲ.

ವಿಶೇಷ ಎಂದರೆ ನಿಮ್ಮನ್ನು ಪ್ರಭಾವಿಸಿದ ಅಡಿಗರು, ಅನಂತಮೂರ್ತಿ ಇವರೆಲ್ಲ ಇಂಗ್ಲಿಷ್ ಸಾಹಿತ್ಯದ ಹಿನ್ನಲೆಯವರು. ನೀವು ಕನ್ನಡ ಅಧ್ಯಾಪಕರು. ಕನ್ನಡ ವಿಭಾಗಗಳ ಚಟುವಟಿಕೆಗಳು ನಿಮ್ಮ ವಿಮರ್ಶೆ ಕೆಲಸಕ್ಕೆ ಯಾವ ಪ್ರೇರಣೇನೂ ಕೊಡಲಿಲ್ಲವಾ?

ಈ ಒಂದು ಚಾರಿತ್ರಿಕ ಸಂದರ್ಭದಲ್ಲಿ ಗಮನಿಸಬೇಕಾದ್ದು ಮೈಸೂರಿನ ಕನ್ನಡ ಡಿಪಾರ್ಟ್‌ಮೆಂಟಿನ ಪರಿಸ್ಥಿತಿ. ಪ್ರೊ. ಸಿ.ಡಿ. ನರಸಿಂಹಯ್ಯನವರು ಕೇಂಬ್ರಿಜ್‌ನಲ್ಲಿ ಓದಿ ಬಂದವರಾಗಿದ್ರು. ಇಂಗ್ಲೆಂಡಿನ ಮಾಡರ್ನ್ ಲಿಟರೇಚರ್ ಅಧ್ಯಯನದಿಂದ ಆ ಬಗೆಯ ಸಾಹಿತ್ಯಕ್ಕೆ ಒಲಿದಿದ್ರು. ಟಿ.ಎಸ್. ಎಲಿಯಟ್, ಎಫ್‌ಆರ್ ಲೀವಿಸ್, ಐಎ ರಿಚರ್ಡ್ಸ್‌ರ ಪ್ರಭಾವಕ್ಕೆ ಒಳಗಾಗಿದ್ರು. ಅವರು ಲಿವೀಸ್ ವಿದ್ಯಾರ್ಥಿ ಕೂಡ ಆಗಿದ್ರು. ರಿಚರ್ಡ್ಸ್‌ರನ್ನು ಅವರು ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದಾಗ ಕರೆಸಿ ಭಾಷಣ ಮಾಡ್ಸಿದ್ರು. ಬಿಎಂಶ್ರೀ ಕಾಲದಿಂದ ಕನ್ನಡ ಮತ್ತು ಇಂಗ್ಲೀಷ್ ಡಿಪಾರ್ಟ್‌ಮೆಂಟಿನವರಿಗೆ ಸಾಹಿತ್ಯ ಕುರಿತಂತೆ ಇದ್ದ ಸಮಾನ ಅಭಿರುಚಿ ಸಂಬಂಧದ ಕೊಂಡಿ, ಸಿಡಿಎನ್ ಕಾಲದಲ್ಲಿ ಕಳಚುವಂತಾಯ್ತು. ಸಿಡಿಎನ್ ಸಾಹಿತ್ಯ ಅಧ್ಯಯನದ ಪಠ್ಯಕ್ರಮವನ್ನು ನವೀಕರಿಸಿದ್ರು. ಕುವೆಂಪು, ತೀನಂಶ್ರೀ ಅವರು ಸಿಡಿಎನ್ ಕಾಲದಲ್ಲಿಯೆ ಕನ್ನಡ ಡಿಪಾರ್ಟ್‌ಮೆಂಟಿನ ಮುಖ್ಯಸ್ಥರಾಗಿದ್ರು. ಅವರಿಬ್ಬರನ್ನೂ ದೊಡ್ಡವ್ರು ಅಂತ ವ್ಯಕ್ತಿಮಟ್ಟದಲ್ಲಿ ಸಿಡಿಎನ್ ಸಜ್ಜನಿಕೆ ಗೌರವದಿಂದ ಕಾಣ್ತಿದ್ರು. ಆದರೆ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಬೇರೆ ನೋಟ, ನಿಲುವು ಅವರದ್ದಾಗಿತ್ತು. ಕುವೆಂಪು, ಆಮೇಲೆ ತೀನಂಶ್ರೀ ಮಹಾರಾಜ ಕಾಲೇಜಿನ ಒಂದು ಕೊಠಡಿಯಲ್ಲೇ ಕನ್ನಡದ ನವೋದಯ ರೀತಿಯ ಪಾಠ ಹೇಳ್ತಿದ್ರೆ ಸಿಡಿಎನ್ ಪಕ್ಕದ ಕೊಠಡಿಯಲ್ಲೇ ಇಂಗ್ಲಿಷ್ ಮಾಡರ್ನ್ ಲಿಟರೇಚರ್ ಪಾಠ ಹೇಳ್ತಿದ್ರು. ಅನಂತಮೂರ್ತಿ, ಲಂಕೇಶ್, ಪೋಲಂಕಿ ರಾಮಮೂರ್ತಿ, ದಾಮೋದರರಾವ್, ರಾಜೀವ ತಾರನಾಥ ಇಂಥವರೆಲ್ಲ ಇಂಗ್ಲಿಷ್ ಡಿಪಾರ್ಟ್‌ಮೆಂಟಿನಲ್ಲಿ ತಯಾರಾಗ್ತಾ ಇದ್ರು. ಅವರ ಸ್ನೇಹ, ಒಡನಾಟ ನನಗೆ, ಚನ್ನಯ್ಯನವರಿಗೆ ಉಂಟಾಗಿತ್ತು. ಹೊರಗಡೆಯಿಂದ ಅಡಿಗರ ಜತೆ ಕಾಫಿ ಹೌಸಿನಲ್ಲಿ ಕನ್ನಡದ ನವ್ಯಕಾವ್ಯ ಕುರಿತ ಚಿಂತನೆ ಚರ್ಚೆಗಳಲ್ಲಿ ನಾನು ಚನ್ನಯ್ಯ ಭಾಗವಹಿಸಿದ್ದೆವು. ಅಡಿಗರ ನವ್ಯಕಾವ್ಯ, ಅನಂತಮೂರ್ತಿ ಕಥೆಗಳನ್ನ ಓದ್ತಾ ಇದ್ದೆವು.

ಪ್ರೊ. ಜವರೇಗೌಡರು ಕನ್ನಡ ಡಿಪಾರ್ಟ್‌ಮೆಂಟಿನ ಹೆಡ್ ಆಗುವ ಹೊತ್ತಿಗೇ ಇಂಥ ಹಿನ್ನೆಲೆಯೊಂದು ನಿರ್ಮಾಣವಾಗಿ ಬಿಟ್ಟಿತ್ತು. ಸಿಡಿಎನ್ ಮತ್ತು ಜವರೇಗೌಡ್ರು ಒಂದೇ ವಯೋಮಾನದವ್ರು. ದೇಜಗೌ ಅವರ ಸಾಹಿತ್ಯಾಸಕ್ತಿ ಮಟ್ಟ ಸಿಡಿಎನ್ ಅವರ ಮಟ್ಟದ ಜೊತೆ ಹೋಲಿಸುವಂತೆ ಇರಲಿಲ್ಲ. ಇಬ್ರೂ ಬ್ರಾಹ್ಮಣೇತರರು. ಸಿಡಿಎನ್ ಚಿಕ್ಕ ವಯಸಿನಲ್ಲಿಯೆ ಪ್ರೊಫೆಸರ್ ಆಗಿದ್ದರು. ಅವ್ರ ಅರ್ಹತೆ ಜೊತೆಗೆ ಜಾತಿ ಅನುಕೂಲವೂ ಇತ್ತು. ಅದ್ರೆ ಅವರು ಮಾತ್ರ ಜಾತಿವಾದಿಯಾಗಿರಲಿಲ್ಲ. ಆದ್ದರಿಂದ ಸಿಡಿಎನ್ ಬೇಗನೆ ವೈಸ್ ಛಾನ್ಸ್‌ಲರ್ ಆಗಬಹುದಾಗಿದ್ದ ಚಾನ್ಸ್ ಇತ್ತು. ಆ ಸ್ಥಾನದ ಮೇಲೆ ದೇಜಗೌ ಕೂಡ ಕಣ್ಣಿಟ್ಟವರಾಗಿದ್ರು. ಆದರಿಂದಾಗಿ ಒಂದು ಥರದ ರೈವಲ್ರಿ ಬೇರೆ ಬೆಳೆದಿತ್ತು. ಜೊತೆಗೆ ಅಡಿಗರು “ಕುವೆಂಪು ಕವಿಯೇ ಅಲ್ಲ; ‘ರಾಮಾಯಣ ದರ್ಶನಂ’ ಗಾತ್ರದಲ್ಲಿ ಮಹಾಕಾವ್ಯವೇ ಹೊರತು ಸತ್ವದಲ್ಲಿ ಅಲ್ಲ” ಎಂದು ೧೯೫೪ರಲ್ಲಿ ರಾಮಚಂದ್ರಶರ್ಮರಿಗೆ ನೀಡಿದ ಸಂದರ್ಶನದಲ್ಲಿ ಗರ್ಜಿಸಿದ್ದರು. ಹಾಗಿರುವಾಗ ನವ್ಯದ ಕಡೆ ಒಲಿದಿದ್ದ ಕನ್ನಡ ವಿದ್ಯಾರ್ಥಿಗಳಾಗಿದ್ದ ನಾನು, ಚನ್ನಯ್ಯನವರು ದೇಜಗೌ ಅವರಿಗೆ ಶತ್ರುಪಕ್ಷದವರ ಥರ ಕಂಡಿರಬೇಕು. ಹಾಗೇ ನಡೆಸಿಕೊಂಡ್ರು. ನನ್ನ ಮಟ್ಟಿಗೆ ಇನ್ನೂ ಹೆಚ್ಚಿನ ಅಸಹನೆ ತೋರಿಸಿದ್ರು. ನಾನು ಅವರ ಜಾತಿಯವನಾಗಿರ್ಲಿಲ್ಲ; ಮೈಸೂರು ಪ್ರದೇಶದವನೂ ಆಗಿರಲಿಲ್ಲ; ಎಲ್ಲಿಂದಲೋ ಬಂದವನು. ಜೊತೆಗೆ ಡೊಗ್ಗು ಸಲಾಮು ಹಾಕೋದಕ್ಕೆ ಎಂದೂ ತಯಾರಿದ್ದವನಾಗಿರ್ಲಿಲ್ಲ. ಕುವೆಂಪು ಸಾಹಿತ್ಯದ ಬಗ್ಗೆ ವಿಮರ್ಶೆಯ ಮಾತುಗಳನ್ನು ಆಡುವುದಕ್ಕೆ ಬೇರೆ ನಾನು ಶುರುಮಾಡಿದ್ದೆ. ಕನ್ನಡ ಡಿಪಾರ್ಟಮೆಂಟಿನ ಒಳಗಿನಿಂದ ಕುವೆಂಪು ಸಾಹಿತ್ಯ ಕುರಿತಂತೆ ವಿಮರ್ಶಾತ್ಮಕ ದನಿ ಎದ್ದಿದ್ದು, ನಾನು ತಿಳಿದಿರುವಂತೆ ಅದೇ ಮೊದಲು. ಹೀಗಿರುವಾಗ ನನ್ನ ವಿಮರ್ಶೆಯ ಕೆಲಸಕ್ಕೆ ಪ್ರೋತ್ಸಾಹಿಸುವುದೆಲ್ಲ ಬಂತು? ಜವರೇಗೌಡರ ಪ್ರಾಬಲ್ಯದಲ್ಲಿ ಕನ್ನಡ ವಿಭಾಗವು ಕುವೆಂಪು ಭಜನಾ ಮಂಡಳಿಯ ರೂಪ ಪಡಕೊಂಡುಬಿಟ್ಟಿತ್ತು. ಶಿವರುದ್ರಪ್ಪ, ಪ್ರಭುಶಂಕರ್ ಇವರೆಲ್ಲ ಜಾತಿವಾದಿಗಳಾಗಿರಲಿಲ್ಲ. ವಿದ್ಯಾರ್ಥಿಗಳ ಬಗ್ಗೆ ಸಣ್ಣತನ ತೋರಿಸೋರಾಗಿರಲಿಲ್ಲ. ನಾವು ಯಾವುದೇ ರೀತೀಲೂ ಒಪ್ಪಬಹುದಾದ ಮೇಷ್ಟ್ರುಗಳು. ಅವರಲ್ಲಿ ಕುವೆಂಪು ಬಗ್ಗೆ ಆರಾಧನಾ ಭಾವ ಇತ್ತಲ್ಲ, ಹೀಗಾಗಿ ಜವರೇಗೌಡರು ಅಧಿಕಾರದ ಬಲದಿಂದ ಅವರನ್ನು ನ್ಯೂಟ್ರಲೈಜ್ ಮಾಡಿಬಿಟ್ರು. ಅವರಿಗೆ ಯಾವುದೇ ರೀತಿಯಲ್ಲಿ ಕುವೆಂಪು ಅವರ ಸಮರ್ಥನೆ ಮಾಡ್ತಾ ಇದ್ದಂತಹ ಸಂದರ್ಭದ ಒಂದು ಅಬದ್ಧ ವಿಧಾನ ಇತ್ತಲ್ಲ, ಅದನ್ನು ಸರಿಪಡಿಸೋಕೆ ಆಗಲೇ ಇಲ್ಲ.

ಸಾಹಿತ್ಯ ವಿಮರ್ಶೆಯಲ್ಲಿ ನೀವು ತಳೆದ ನಿಲುವುಗಳಿಗೆ, ಕುವೆಂಪು ಆರಾಧನ ವಾತಾವರಣ ಏನಿತ್ತು. ಅದಕ್ಕೆ ಪ್ರತಿರೋಧ ಮಾಡಬೇಕು ಅನ್ನೋದು ಕಾರಣ ಆಗಿರಬಹುದು. ಆದರೆ ಪ್ರತಿರೋಧವೆ ಕುವೆಂಪು ಸಾಹಿತ್ಯದ ಬಗ್ಗೆ ಮೌಲ್ಯಮಾಪನ ಮಾಡಲು ಒಂದು ನೆಗಟೀವ್ ಧೋರಣೆಯನ್ನು ಬೆಳೆಸಿಬಿಡ್ತಾ ಅಂತ?

ಅಲ್ಲಲ್ಲ, ನವ್ಯದಲ್ಲಿ ಪ್ರಾಯೋಗಿಕ ವಿಮರ್ಶೆಯ ವಿಧಾನ ಬಂತಲ್ಲ, ಆಗ ಕೃತಿಯನ್ನು ಸೂಕ್ಷ್ಮವಾಗಿ ಅದು ಸಾರ್ಥಕವಾಗಿದೆಯಾ ಅಂತಾ ನೋಡುವ ಒಂದು ಶಿಸ್ತು ಬಂತಲ್ಲ, ಆ ರೀತಿಯ ಪರಿಶೀಲನೆ ಮಾಡಿದಾಗ, ಕುವೆಂಪುದು ಹೇಳಿಕೆಯ ಕಾವ್ಯವಾಗಿ ನಮಗೆ ಕಂಡದ್ದು ಹೌದು. ನಾನು ಅಲ್ಲಿ ಕಾವ್ಯದ ಬಗೆಗಿರುವ ನವ್ಯದ ಅಧ್ಯಯನ ಶಿಸ್ತನ್ನು ಹೆಚ್ಚಾಗಿ ಬಳಸಿದ್ದೀನಿ. ಅವರ ಕಾದಂಬರಿಗಳ ಬಗ್ಗೆ ಇನ್ನೂ ಹೆಚ್ಚು ಮುಕ್ತವಾಗಿರಬಹುದಾಗಿತ್ತು ಎಂದು ಗೊತ್ತಾದದ್ದು ಆಮೇಲೆ. ಕುವೆಂಪು ಸಾಹಿತ್ಯದ ಬಗ್ಗೆ ಅತಿ ಭಾವನಾತ್ಮಕವಾಗಿ ಹೋಗೋದು ಇದೆಯಲ್ಲ, ಅದು ನನಗೆ ಆಗಲಿಲ್ಲ. ನಾನು ಮೊದಲಿನಿಂದಲೂ ಆದರ್ಶವಾದಿಯೆ. ಹಾಗೆಂದು ಅದನ್ನು ಭಾವುಕವಾಗಿ ನೋಡೋಕೆ ಸಿದ್ಧನಿಲ್ಲ. ಕುವೆಂಪುರವರ ಆದರ್ಶವಾದದ ದಾರಿ ದಿಕ್ಕು ಇದೆಯಲ್ಲ ಅದು ಅಂಥ ಅಟ್ರಾಕ್ಟ್ ಮಾಡಿರಲಿಲ್ಲ ನನಗೆ. ಇನ್ನೊಂದು ಸಮಸ್ಯೆ ಎಲ್ಲಿ ಅಂದರೆ, ನಾನು ಮೊದಲು ಸಾಹಿತ್ಯದ ಬಗ್ಗೆ ಬರೀಲೇ ಇಲ್ಲ. ಹೆಚ್ಚು ವೇದಿಕೆಗಳಲ್ಲಿ ಸಾಹಿತ್ಯದ ಬಗ್ಗೆ ಭಾಷಣಗಳನ್ನೇ ಮಾಡ್ತಿದ್ದೆ. ವಿಮರ್ಶೆ ಬರಿಲೀಕ್ಕೆ ಶುರು ಮಾಡಿದ್ದು ಬಹಳ ಲೇಟಾಗಿ. ನನ್ನ ಮೊದಲ ಪುಸ್ತಕ ‘ಸಮಕಾಲೀನ’ ಬಂದಿದ್ದು ೩೮ನೇ ವಯಸ್ನಲ್ಲಿ.ಸ

ನಿಜ ಸಾರ್, ‘ಸಮಕಾಲೀನಓದುವಾಗ ಅದು ನೀವು ನಿಮ್ಮ ಪ್ರಾಯದಲ್ಲಿ ಬರೆದಿದ್ದು ಅನಿಸೋದಿಲ್ಲ. ಯಾಕಿಷ್ಟು ಅತಿ ಎಚ್ಚರದಲ್ಲಿ ವಿಮರ್ಶೆ ಬರಿಯೋಕೆ ಶುರು ಮಾಡಿದಿರಿ?

ಮೊದಲಿನಿಂದಲೂ ನನ್ನ ವ್ಯಕ್ತಿತ್ವದಲ್ಲಿ ಕಾನ್‌ಶಿಯಸ್ ಎಲಿಮೆಂಟ್ ಇತ್ತು. ಈಗಲೂ ಇರಬಹುದು. ನಾನು ಉಡಾಫೆಯ ಧ್ವನಿಯಲ್ಲಿ ಅಭಿಪ್ರಾಯ ಕೊಡಲಿಕ್ಕೆ ತಯಾರಿರಲಿಲ್ಲ. ನನ್ನ ಮೊದಲ ಬರವಣಿಗೆಯಲ್ಲೂ ಎಳೆತನದ ನೆಲೆ ಕಾಣ್ಸೋಲ್ಲ. ಆ ಭಾಷೆಯ ಬಿಗಿ ಹೊಸತಾಗಿ ಬರದೋನ ತರಹ ಕಾಣ್ಸೋಲ್ಲ ಅಂತ ನಿಮಗೆ ಅನ್ಸಿರೋದು ಅದಕ್ಕೆ. ಇದು ಕಾದದ್ದರಿಂದ ಬಂದದ್ದು. ನನಗೆ ನನ್ನ ಬರವಣಿಗೆ ಜತೆ ಪೂರ್ಣ ಪ್ರಮಾಣದ ಸಂಬಂಧ ಇರಬೇಕು. ಸರಿಯಾದದ್ದು ಹೇಳಬೇಕು. ಬೇರೆಯವರು ಒಪ್ಪಲ ಬಿಡಲಿ, ನನಗೆ ಮೊದಲು ಕನವಿನ್ಸ್ ಆಗಬೇಕು. ಯಾರನ್ನೊ ಪ್ರೀಸ್ ಮಾಡೋದಿಕ್ಕೆ ಹೇಳಬೇಕಾದ್ದಿಲ್ಲ. ಇದು ಆಗ್ಲೂ ಇತ್ತು. ಈಗಲೂ ಇದೆ.

ನಿಮಗೆ ಕೆಲವರುಕನ್ನಡದ ಎಫ್ ಆರ್ ಲಿವೀಸ್ಅಂತ ಕರಿದಿದ್ದಾರೆ.

ಆಶ್ಚರ್ಯ ಏನು ಅಂದರೆ, ನನ್ನ ಇಂಗ್ಲೀಷಿನ ಓದು ಬಹಳ ಕಡಿಮೆ. ನಿಜವಾದ ಅರ್ಥದಲ್ಲಿ ಹೇಳಬೇಕು ಅಂದರೆ, ಲಿವೀಸನ್ನ ನಾನು ಸರಿಯಾಗಿ ಓದೇ ಇಲ್ಲ. ಓದಿದ್ದು ಪಾಠ ಮಾಡೋಕೆ ಬಂದಾಗೇನೆ. ಕನ್ನಡದಲ್ಲೆ ನವ್ಯ ಬೆಳೀತಾ ಇತ್ತಲ್ಲ. ಅದರ ಶ್ರದ್ಧಾವಂತ ವಿದ್ಯಾರ್ಥಿಯಾಗಿದ್ದೆ ನಾನು. ಸೃಜನಶೀಲ ಸಾಹಿತ್ಯ ಬರ್ತಾಯಿತ್ತು. ಕಾದಂಬರಿ, ಸಣ್ಣಕತೆ, ನಾಟಕ ಆಗಬಹುದು, ವಿಮರ್ಶೆ ಆಗಬಹುದು, ಬರ್ತಾ ಇತ್ತಲ್ಲ, ಅದನ್ನು ಶ್ರದ್ಧೆಯಿಂದ ಅಧ್ಯಯನ ಮಾಡಕೊಂಡು, ಸ್ವಾಧೀನಪಡಿಸಿಕೊಳ್ಳೋಕೆ ಪ್ರಯತ್ನಿಸ್ತಿದ್ದೆ. ಇದರ ಫಲವಾಗಿ ನವ್ಯದ ಚಿಂತನೆಯಲ್ಲಿ ಕ್ರೋಢಿಕರಿಸಿಕೊಳ್ಳುವಾಗ ಲೀವೀಸ್ ಬಗೆಯ ಚಿಂತನೆ ಬಂದಿರಬಹುದು. ಆದರೆ ಪ್ರತ್ಯೇಕವಾಗಿ ಲಿವೀಸ್ ನನಗೆ ಪ್ರಭಾವ ಬೀರಿಲ್ಲ.

ಸಾರ್, ‘ಕರ್ವಾಲೊಗೆ ನೀವು ಬರೆದ ಹಿನ್ನುಡಿ ಈಗಲೂ ಓದೋಕೆ ಕಷ್ಟವಾಗುತ್ತೆ. ಅದೊಂದು ಜಟಿಲವಾದ ವಿಮರ್ಶೆಯ ಬರಹ ಅನಿಸುತ್ತೆ. ಈಗ ಅದನ್ನು ನೋಡುವಾಗ ನಿಮಗೆ ಏನನಿಸುತ್ತೆ?

ವಿಮರ್ಶೆಯಲ್ಲಿ ಸ್ಟೇಟ್‌ಮೆಂಟ್ ಮಾಡೋದಕ್ಕಿಂತ ಹೆಚ್ಚಾಗಿ ಅಧ್ಯಯನದ ವಿಧಾನ ಇದೆ ಅಂದ್ಕೊಂಡಿದೀನಿ. ಎಲ್ಲಾ ಸೂಕ್ಷ್ಮಗಳಲ್ಲಿ ಪರಿವೆಗಳನ್ನು ಪದರಗಳನ್ನು ಹುಡುಕೋವಂಥ ಮನೋಧರ್ಮ ಅದು. ಅದು ಮೂಲತಃ ಪ್ರಾಯೋಗಿಕ ವಿಮರ್ಶೆಯ ಶಿಸ್ತಿನಿಂದ ಬಂದಿದ್ದಿರಬಹುದು. ಈಗಲೂ ನಾನು ಏನಾದರೂ ಹೇಳುವಾಗ, ಸಾಕಷ್ಟು ಎವಿಡೆನ್ಸ್ ಆಧಾರ ಸಿಗದ ಹೊರತು ಹೇಳಿಕೆ ಮಾಡೋಕೆ ಇಷ್ಟಪಡೋದಿಲ್ಲ. ಪುರುಷೋತ್ತಮ ಬಿಳಿಮಲೆ ನನ್ನ ವಿಮರ್ಶೆ ‘ಯಕ್ಷಗಾನದ ತಾಳಮದ್ದಲೆಯಲ್ಲಿ ಅರ್ಥ ಹೇಳೋತರಹ ಕಾಣುತ್ತೆ’ ಅಂತ ಬರೆದಿದ್ದರು. ಒಂದು ಮಟ್ಟಿಗೆ ಇದು ನಿಜಾನೂ ಇರಬಹುದು.

ಆಧಾರ ಇಲ್ಲದೆ ಏನೂ ಹೇಳೋಲ್ಲ ಅನ್ನೋದು ವಿಮರ್ಶೆಯ ಶಿಸ್ತಾಗಿ ಸರಿ. ಆದರೆ ಇದು ವಿಮರ್ಶೆ ಮತ್ತು ಚಿಂತನೆಯನ್ನು ನ್ಯಾಯಾಲಯದ ಪರಿಭಾಷೆಗೆ ಒಯ್ಯಬಹುದು ಅನಿಸುತ್ತೆ. ಕೆಲವು ಸಾಂಸ್ಕೃತಿಕ ಸಂದರ್ಭದಲ್ಲಿ ಒಂದು ಚರ್ಚೆ ಚಲನೆ ಹುಟ್ಟಿಸೋದಕ್ಕಾದರೂ ಸ್ಟೇಟ್ಮೆಂಟುಗಳ ಅಗತ್ಯ ಇದೆಯಲ್ಲವಾ?

ಅದಿದ್ದೇ ಇದೆ. ನಾವು ಸಾಮಾಜಿಕ ಕೆಲಸ ಮಾಡುವಾಗ ನಿಲುವು ತಳೆದೇ ತಳೀತೀವಿ. ಆಗ ಸ್ಟೇಟ್‌ಮೆಂಟ್ ಬರುತ್ತೆ. ಆದರೆ ಅನುಭವಗಳನ್ನು ಅಭಿಪ್ರಾಯಗಳನ್ನು ನಾವು ದಾಖಲೆಯಾಗಿ ಇಡುವಾಗ ಹೆಚ್ಚಿನ ಹೊಣೆಗಾರಿಕೆ ಬರುತ್ತೆ. ಮಾತಾಡ್ತಾ ಇರುವಾಗ ನಾವು ಕಂಡದ್ದೇ ಇರ್ತದೆ. ಇಲ್ಲ ಅಂತಲ್ಲ. ಆದರೆ ಕಂಡದ್ದಕ್ಕೆ ಇನ್ನೂ ಒಂದು ಸರಿಯಾದ ಆಕಾರ ಬಂದಿರಲ್ಲ. ಅದು ಸಂಚಾರಿ ಆಗಿರ್ತದೆ. ಈಗ ಕಾವ್ಯ ಬರಿಯೊ ಹೊತ್ತಿಗೆ ಭಾಷೇಲಿ ಒಂದು ಆಕಾರ ಕೊಡೋ ಪ್ರಯತ್ನ ಇರುತ್ತೆ ಅಂತೀವಿ. ವಿಮರ್ಶೆಯಲ್ಲೂ ಈ ಆಕಾರ ಕೊಡೊ ಕಲ್ಪನೆ ಯಾಕಿರಬಾರದು?

ಹೇಳಿಕೆ ಮಾಡೋಕೆ ತೋರಿಸೊ ಹಿಂಜರಿಕೆ, ಅತಿ ಎಚ್ಚರಗಳು, ವಿಮರ್ಶೆಯಲ್ಲಿ ಮಿತಿ ಉಂಟು ಮಾಡ್ತವೆ ಅಂತನ್ನೋದು ನನ್ನ ಗುಮಾನಿ.

ಆಕ್ಚುವಲಿ ಅವನ್ನ ನಾನು ಹಿಂಜರಿಕೆ ಅನ್ನಲಾರೆ. ಸೆನ್ಸ್ ಆಫ್ ರೆಸ್ಪಾನ್ಸಬಿಲಿಟಿ ಅಂತೀನಿ. ನೀವು ವಿಮರ್ಶೆ ಯಾಕೆ ಬರೀತಾ ಇದೀರಿ? ಒಂದು ಸಾಂಸ್ಕೃತಿಕ ಸಂದರ್ಭದಲ್ಲಿ ನೀವು ಭಾಗವಹಿಸ್ತಿದೀರಿ ಅಂತ ತಾನೇ? ಸಂಸ್ಕೃತಿ ಕಟ್ಟುವ ಒಂದು ಕ್ರಿಯೆಯಲ್ಲಿ ಪಾಲ್ಗೊಳ್ತಾ ಇರುವಾಗ, ಸಾಂಸ್ಕೃತಿಕ ಹೊಣೆಗಾರಿಕೆ ಇದೆಯಲ್ಲ, ಅದಕ್ಕೆ ಏನು ಹೇಳಿದರೂ ಸಲ್ಲುತ್ತೆ ಅನ್ನೋ ತರಹ ಆಗಬಾರದು. ಅದಕ್ಕೇ ಪದಗಳನ್ನ ಭಾಷೇನ ಬಳಸುವಾಗ ನಾನು ಬಹಳ ಎಚ್ಚರವಾಗಿರತೀನಿ. ನಾನು ಒಪ್ಪದೇ ಇರೋದಿಕ್ಕೆ ‘ಮೂರ್ಖತನವಾದೀತು’ ಅಂತ ಎಂದೂ ಹೇಳಲಾರೆ. ನಿಮ್ಮನ್ನು ನಾನು ಒಪ್ಪದೇ ಇದ್ದರೂ ಕೂಡ ಸಹಿಸೊ ಸಂಸ್ಕಾರ ಇರಬೇಕು. ಆದರೆ ನಾನು ಒಪ್ಪೋದಿಲ್ಲ ಅಂತ ಹೇಳೋದಿಕ್ಕೆ ಹಿಂಜರೀಬಾರದು ಅಷ್ಟೆ.