ಕೃತಿಗೆ ಗೌರವ ಸಲ್ಲಬೇಕು ನಿಜ. ಆದರೆ ಅದಕ್ಕೆ ಅತಿಯಾದ ನಿಷ್ಠೆ ಕೊಟ್ಟಿದ್ದರಿಂದ ನವ್ಯವಿಮರ್ಶೆ ಒಂದು ಬಗೆಯ ಸಾಹಿತ್ಯಕ್ಕೆ ಅಧೀನ ಚಟುವಟಿಕೆಯಾಗೇ ಉಳೀತು. ಬೇರೆಬೇರೆ ಜಗತ್ತುಗಳನ್ನು ಒಳಗೊಳ್ಳೋಕೆ ಆಗಲಿಲ್ಲ?

ಹೌದು, ಹಾಗೆ ನೋಡಿದರೆ, ಕುವೆಂಪುರವರಲ್ಲಿ ಒಂಥರ ಋಷಿ ಸಂಸ್ಕೃತಿಯ ಆದರ್ಶ ಸಂಕಲ್ಪ ಸೇರಿಕೊಂಡಿದ್ದರಿಂದ, ಲಿಟರರಿ ಆದದ್ದನ್ನೂ ಒಂದು ಬದುಕಿನ ದರ್ಶನಕ್ಕೆ ಅಧ್ಯಾತ್ಮ ನೆಲೆಗೆ ಅವರು ವಿಸ್ತರಿಸಿಕೊಂಡ್ರು. ಇಡೀ ಕೃತಿಗೆ ಒಂದು ಪ್ರಬಂಧ ಧ್ವನಿ ಇರೋ ಹಾಗೆ, ಒಬ್ಬ ಲೇಖಕನ ಇಡೀ ಬರವಣಿಗೆಯಲ್ಲೂ ಒಂದು ಪ್ರಬಂಧ ಧ್ವನಿ ಹುಟ್ಟಿಕೊಳ್ಳುತ್ತೆ. ಕುವೆಂಪು ಅಂಥವರಲ್ಲಿ ಇಡೀ ಅಂದರೆ ಅವರ ಒಟ್ಟೂ ಕೃತಿಗಳಿಗೆ ಒಂದು ತಾತ್ವಿಕ ಚೌಕಟ್ಟು ಕಟ್ಟೋದು ಇದೆ. ಒಂದು ಪ್ರಬಂಧ ಧ್ವನಿ ಒಟ್ಟಾಗಿ ರೂಪಿಸೋದು ಇದೆ. ಅಡಿಗರಲ್ಲೂ ಇದಿದೆ. ಈ ತರಹದಲ್ಲಿ ಒಂದನ್ನ ಕಟ್ಟೋಕೆ ಹೋದವರು ಪ್ರೀ ಆಕ್ಯುಪೇಶನ್ ಇದೆಯಲ್ಲ, ಇಟೀಜ್ ನಾಟ್ ಮಿಯರ್ ಲಿಟರರಿ. ಈಗ ಒಟ್ಟು ಕಲ್ಚರ್‌ನ ಚೌಕಟ್ಟಿನಲ್ಲಿ ನಾನು ಇವರನ್ನ ನೋಡತೀನಿ.

ಬೇಂದ್ರೆ?

ಬೇಂದ್ರೆ ಲಿಟರರೀನೆ. ಬೇಂದ್ರೆ ಕುವೆಂಪುರವರಿಗಿಂತ ಬಹಳ ಸಾರ್ಥಕ ಕವನಗಳನ್ನ ಕೊಟ್ಟಿದ್ದಾರೆ ಅಂತನ್ನಿಸುತ್ತೆ. ಆದರೆ ಇಡೀ ಕಾವ್ಯದಲ್ಲಿ ಪ್ರಬಂಧ ಧ್ವನಿ ಅಂತ ನೋಡುವಾಗ, ಬೇಂದ್ರೆ ಎಮಾರ್ಫಸ್ ಆಗಿ, ಚಂಚಲವಾಗಿ ಕಾಣ್ತಾರೆ. ಹಿಡಿತಕ್ಕೆ ಸಿಗೋದಿಲ್ಲ. ಹಿಡಿತಕ್ಕೆ ಸಿಗದೇ ಇರೋದು ಕಳಪೆಯಾ ಅಲ್ಲವಾ, ಈ ಚರ್ಚೆ ಬೇರೆ. ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭವನ್ನು ಒಟ್ಟಾಗಿ ನೋಡಿದಾಗ, ಬಿಎಂಶ್ರೀ ‘ಲಿಟರರಿ’ ಅನ್ನೊ ನೆಲೆಯಿಂದ ಬಂದೋರು. ನರಸಿಂಹಸ್ವಾಮಿ, ಯಶವಂತ ಚಿತ್ತಾಲ, ಎಕ್ಕುಂಡಿ, ಕಣವಿ ಕೂಡ ಬರೇ ಲಿಟರರಿ. ಅವರ ಪ್ರತಿಭೆ ಕಡಿಮೆ ಅಂತಲ್ಲ. ಆದರೆ ಕಲ್ಚರಲಿ ಬಹಳ ದೊಡ್ಡ ಮಾತುಗಳನ್ನು ಅವರ ಸಾಹಿತ್ಯದ ಬಗ್ಗೆ ಹೇಳೋಕೆ ಆಗೋಲ್ಲ. ಇವರೆಲ್ಲ ಟ್ಯಾಲೆಂಟೆಡ್, ಆದರೆ ಕಲ್ಚರಲಿ ಸಂಕೀರ್ಣ ನೆಲೆಗಳಲ್ಲಿ ನಮ್ಮ ಮನಸ್ಸುಗಳನ್ನು ತೊಡಗಿಸಿಕೊಳ್ಳಬಹುದಾದಷ್ಟು ಶಕ್ತರಲ್ಲ.

ಸಾಹಿತ್ಯಕ ಪ್ರತಿಭೆ ಮತ್ತು ಸಾಂಸ್ಕೃತಿಕ ಮಹತ್ವದ ನಡುವಿನ ಸಂಬಂಧಗಳನ್ನು ಹೇಗೆ ರಿಲೇಟ್ ಮಾಡಬೇಕು ಅಂತ ಹೇಳತಿದೀರಿ?

ಸಾಹಿತ್ಯ ವಿಮರ್ಶೆಯ ಮೊದಲ ಪ್ರಶ್ನೆ ಏನು? ಅಭಿವ್ಯಕ್ತಿ ಹೇಗಾಗಿದೆ ಅನ್ನೋದು. ಅಭಿವ್ಯಕ್ತಿ ಹೇಗಾಗಿದೆ ಅನ್ನೋದು ಅಭಿವ್ಯಕ್ತಿ ಅನುಭವದಷ್ಟೇ ಗಂಭೀರ. ಭಾಷೆಯ ಬಳಕೆಗೆ ಸಂಬಂಧಿಸಿದಂತೆ ನವೋದಯದವರು ಮತ್ತು ಪ್ರಗತಿಶೀಲರು ಹೆಚ್ಚು ಮಹತ್ವ ಕೊಡಲಿಲ್ಲ. ಸಾಹಿತ್ಯ ಅನ್ನೋದು ಒಂದು ಕಲೆ. ಅದು ಬಾಷೆಯಲ್ಲಿ ಕಲೆಯಾಗಿ ಅಭಿವ್ಯಕ್ತಿ ಪಡೆಯೋದು ಬಹಳ ಮುಖ್ಯ. ಕುವೆಂಪು ಕಾವ್ಯ ಹೇಳಿಕೆಯಾಗುತ್ತೆ ಅಂತ ಅಂದಿದ್ದು ಇದಕ್ಕೇ. ಕುವೆಂಪು ವಿಷಯ ಬಂದಾಗ ಆಶಯ ಮತ್ತು ಅನುಭವಕ್ಕಿಂತ ಕ್ರಾಫ್ಟ್‌ಮನ್‌ಶಿಫ್ ಇದೆಯಲ್ಲ, ಅದರ ಮೇಲೆ ನವ್ಯ ವಿಮರ್ಶೆಯ ಲಕ್ಷ್ಯ ಹೆಚ್ಚು ಹೋದಹಾಗೆ ಕಾಣಿಸುತ್ತೆ. ಎಂಜಿಕೆ ವಿಮರ್ಶೆಯಲ್ಲಿ ಇದಾಗಿದೆ. ನನ್ನಲ್ಲೂ ಎಷ್ಟೋಕಡೆ ಪ್ರಾಯೋಗಿಕ ವಿಮರ್ಶೆಗಳಲ್ಲಿ ಇದಿದೆ. ಈ ಟ್ರೆಡಿಶನ್ ಸ್ವಲ್ಪಕಾಲ ಬಂತು. ಇದನ್ನು ನಾನು ಈಗಲೂ ಬೇಕು ಅನ್ನೋನೆ. ಕೃತಿಯನ್ನು ನೀವು ಅಧ್ಯಯನ ಮಾಡುವಾಗ ಅಂದಾಜಿನ ಮೇಲೆ ತೀರ್ಮಾನ ಮಾಡಿಕೊಂಡು ಹೋಗಕಾಗಲ್ಲ. ಆದರಿಂದ ಏನೇನು ಪಡೆಯಬಹುದೊ ಅದನ್ನು ಪಡಕೊಂಡು ನಿಮ್ಮ ಕಲ್ಚರಲ್ ಅನಾಲಿಸಿಸ್‌ಗೆ ರಿಲೇಟ್ ಮಾಡಿ ಅಂತೀನಿ. ಕೃತಿಯನ್ನು ಪಡೆದುಕೊಳ್ಳದೇನೆ ಅದನ್ನು ನೆವ ಮಾಡಿಕೊಂಡು ಹೇಳಿಕೆ ಕೊಡೋಕೆ ಶುರುಮಾಡಿದರೆ, ಅದನ್ನು ಎಷ್ಟರಮಟ್ಟಿಗೆ ನಂಬೋದು ಅಂತ ಕೇಳ್ತೀನಿ.

ಕೃತೀನ ಗಂಭೀರವಾಗಿ ಸೂಕ್ಷ್ಮವಾಗಿ ಪರಿಗಣಿಸದೆ, ಅದನ್ನ ನೆಪ ಮಾಡ್ಕೊಳ್ಳೊ ವಿಮರ್ಶೆ ಹೊಣೆಗೇಡಿ ಅಂತನ್ನೋದು ಸರಿ. ಪ್ರಶ್ನೆ ಇರೋದು ನಮ್ಮ ಸಮಾಜದ ಅನೇಕ ರಚನೆಗಳಲ್ಲಿ ಸಾಹಿತ್ಯ ಕೃತಿಯನ್ನೂ ಒಂದು ಅಂಶ ಅಂತ ಪರಿಗಣಿಸಿರೊ ಸಂಸ್ಕೃತಿ ವಿಮರ್ಶೆಯ ವಿಧಾನದ್ದು. ಕೃತಿಗೆ ಕಲಾತ್ಮಕತೆಗೆ ಬಹಳ ಮಹತ್ವ ಕೊಡುವ ನೀವು, ವಿಮರ್ಶೆಯ ಬದಲಾವಣೆಯನ್ನ ಹೇಗೆ ಗ್ರಹಿಸ್ತೀರಿ?

ಈಗ ನಾನೂ ನೀವೊ ಒಂದು ಕೃತೀನ ವಿಮರ್ಶೆ ಮಾಡುವಾಗ, ಆ ಕೃತಿಗೆ ಸಲ್ಲಬೇಕಾದ ನ್ಯಾಯಾ ಇದೆಯಲ್ಲ. ಅದನ್ನ ಸಲ್ಲಿಸೋಕೆ ತಯಾರಾಗಿ ಇರ್ತೀವಿ. ಕೃತಿಯನ್ನ ಪಡಕೊಳ್ಳೋಕೆ ನಮ್ಮನ್ನ ಅದಕ್ಕೆ ಸಂಪೂರ್ಣವಾಗಿ ಒಪ್ಪಿಸಿಕೊಳ್ತೀವಿ, ಹೌದಾ? ಅದರರ್ಥ ಓದ್ತಾ ಇರುವಾಗ ಎಲ್ಲ ಹಂತಗಳಲ್ಲೂ ಪೂರ್ತ ಒಪ್ಪಿಗೆ ಕೊಡ್ತೀವಿ ಅಂತಲ್ಲ. ಆದರೆ ಇಲ್ಲೇನೊ ಪಡೆದುಕೊಳ್ಳೋದಿದೆ ಅಂತನ್ನೊ ವಿನಯ ತೋರಸ್ತೀವಿ. ಇಡೀ ಕೃತಿ ಮುಗಿಯೋವರೆಗೆ ತಾಳ್ಮೆ ತೋರಸ್ತೀವಿ. ಕೃತಿಗೆ ಸಲ್ಲಬೇಕಾದ ನ್ಯಾಯ ಕೊಡೋದಿಕ್ಕೇ ತಯಾರಿಲ್ಲ ಅಂದರೆ ನೀವು ಓದಲೇಬೇಕಾಗಿಲ್ಲ. ಕೃತೀನ ಪಡೆದ ಮೇಲೆ ನಾವು ಏನು ಮಾಡ್ತೀವಿ ಅಂದರೆ, ಈ ಅನುಭವ ಪಡೆದ ವಿಧಾನ ಅದರ ವಿನ್ಯಾಸ ಹಿಡಿಯೋಕೆ ನೋಡ್ತೀವಿ. ಇದು ಒಂದರ್ಥದಲ್ಲಿ ಅಭಿವ್ಯಕ್ತಿಯ ಕಲಾತ್ಮಕ ಕಲ್ಪನೆ ಅಂತೀವಲ್ಲ, ಅದರ ಸೆನ್ಸಿಬಲಿಟಿಯ ರೇಂಜ್‌ನದು. ಇದು ಒಂದನೇ ಹಂತ. ಹಿಂದೆಲ್ಲ ಕುವೆಂಪು ಕವಿತೆ ಬಗ್ಗೆ ಪ್ರಾಯೋಗಿಕ ವಿಮರ್ಶೆ ಮಾಡಿದಾಗ ಇಲ್ಲಿ ನಿಂತುಬಿಟ್ಟಿ. ಬೇಂದ್ರೆ ಬಗ್ಗೆ ಅಡಿಗರ ಬಗ್ಗೆ ವಿಮರ್ಶೆ ಮಾಡಿದಾಗ ಇಲ್ಲಿಗೆ ನಿಂತ್ವಿ.

ಆಮೇಲೆ ನನಗೆ ಅನಿಸಿದ್ದು ಏನಂದ್ರೆ, ಸಾಹಿತ್ಯ ಸಂಸ್ಕೃತಿಯ ಫಲ ಅಂತ ಹೇಳ್ತೀವಿ. ಹಾಗೆ ಹೇಳಿದಾಗ ಸಂಸ್ಕೃತಿ ಸಂದರ್ಭದ ತಿಳಿವೂ ಸೇರುತ್ತೆ. ನನಗೂ ಲೋಕಾನುಭವ ಇದೆಯಲ್ಲ. ಕೃತಿ ಓದುವಾಗ ಮಾಡುವಾಗ ಹೇಗೆ ಒಪ್ಪಿಸ್ಕೊಳ್ತೀನೊ ಹಾಗೆ, ಅದರಿಂದ ದೂರನಿಂತು ಆಮೇಲೆ ಅದನ್ನು ಮೌಲ್ಯಮಾಪನ ಮಾಡತೀನಿ. ನನ್ನ ಬದುಕಿನ ಅನುಭವಗಳು ಲೋಕಾನುಭವಗಳ ಜತೆ ಮತ್ತು ಸಾಂಸ್ಕೃತಿಕ ಸಂದರ್ಭದ ಜತೆ ರಿಲೇಟ್ ಮಾಡ್ಕೊತೀನಿ. ಆಗ ಕೃತಿಯ ಮೌಲ್ಯಮಾಪನದ ಜೊತೆಯಲ್ಲೆ ಕೃತಿಕಾರನ ತಿಳಿವು, ಅದರ ಅರ್ಥವಂತಿಕೆ ಏನು ಅಂತ ಕೇಳ್ತೀನಿ. ಇದನ್ನೇ ನಾನು ಕಲ್ಚರಲ್ ಕ್ರಿಟಿಸಿಜಂ ಅಂತ ತಿಳ್ಕೊಂಡಿದೀನಿ.

ತಿಳುವಳಿಕೆಗೆ ಬಂದಮೇಲೆ, ಕುವೆಂಪು ಸಾಹಿತ್ಯಾನ ಹಿಂದಿಗಿಂತ ಭಿನ್ನವಾಗಿ ಪರಿಶೀಲಿಸಬೇಕು ಅಂತ ಅನಿಸ್ತಿದೆಯಾ?

ಖಂಡಿತಾ. ಬಹುಶಃ ಇವತ್ತಿಗೂ ಕನ್ನಡದಲ್ಲಿ ನಾವು ಇಡಿಯಾಗಿ ಒಪ್ಪಬಹುದಾದಂಥ ಸಾಹಿತ್ಯಕ ವ್ಯಕ್ತಿತ್ವಾನೇ ಬೆಳೆದಿಲ್ಲವೇನೊ ಅಂತನ್ನೊ ಒಂದು ಪ್ರಶ್ನೆ ನನಗೆ ಕಾಡ್ತಿದೆ. ಕುವೆಂಪು ಬಗ್ಗೆ ಮಾತ್ರವಲ್ಲ, ಕಾರಂತರ ಬಗ್ಗೇನೂ, ಬೇಂದ್ರೆ ಮಾಸ್ತಿ ಅಡಿಗರ ಬಗ್ಗೇನೂ ಹಾಗೇನೆ. ಇದು ನಮ್ಮ ಕಲ್ಚರಲ್ ಪ್ರಾಬ್ಲಮ್ಮೆ ಇರಬಹುದು ಅಂತ ಅನುಮಾನ ಕೂಡ ಇದೆ. ಇಡಿಯಾಗಿ ಆಗದೇ ಇರುವಂಥ ಈ ಗುಣ, ಬರೀ ವ್ಯಕ್ತಿತ್ವಕ್ಕೆ ಅಥವಾ ಪ್ರತಿಭೆಗೆ ಸಂಬಂಧಿಸಿದ್ದಲ್ಲ. ಯಾಕೆಂದರೆ ನಮ್ಮ ಈ ಲೇಖಕರೆಲ್ಲ ಕಡಿಮೆ ಪ್ರತಿಭಾವಂತರೇನೂ ಅಲ್ಲ. ಆದರೆ ಇಡಿಯಾಗಿ ಅವರ ಜೊತೆಯಲ್ಲಿ ಒಪ್ಪಿಗೆ ಕೊಡದೆ ಇರುವಂಥ ಸನ್ನಿವೇಶ ಇದೆ ನೋಡಿ, ಇದು ಒಟ್ಟು ನಮ್ಮ ಸಾಂಸ್ಕೃತಿಕ ಸಂದರ್ಭದ ಸಮಸ್ಯೇನೂ ಇರಬಹುದು. ಅದನ್ನು ಇನ್ನೂ ಶೋಧಿಸಬೇಕು ನಾವು.

ಇಡಿಯಾಗಿ ಒಪ್ಪೋದು ಅಂದರೆ?

ಅಂದ್ರೆ ಲೇಖಕನ ಒಟ್ಟು ಬರವಣಿಗೆ, ಚಿಂತನೆ ಇವನ್ನೆಲ್ಲ, ನಾವು ಒಂದು ಹಂತದವರೆಗೆ ಒಪ್ತೀವಿ. ಅವರ ಪ್ರತಿಭೆಯನ್ನು ಗುರುತಿಸ್ತೀವಿ. ಆದರೆ ನಮ್ಮ ಪೂರ್ತ ವ್ಯಕ್ತಿತ್ವಕ್ಕೆ ಮತ್ತು ಸಾಂಸ್ಕೃತಿಕ ಹಿನ್ನೆಲೆಗೆ ಅವರೇ ಗಟ್ಟಿಯಾದ ನೆಲೆಗಳನ್ನು ಕೊಡುವಂಥೋರು ಅಂತ ಯಾರೇ ಒಬ್ಬ ಸಾಹಿತಿಯ ಬಗ್ಗೆ ಅನಿಸೋದಿಲ್ಲ. ಒಂದು ಕವನಕ್ಕೆ, ಕೃತಿಗೆ, ಪ್ರಬಂಧ ಧ್ವನಿ ಅಂತ ಇರುತ್ತೆ ಅಂತೀವಲ್ಲಾ, ಹಾಗೇ ಒಬ್ಬ ಕೃತಿಕಾರನ ಎಲ್ಲ ಕೃತಿಗಳ ಮೊತ್ತಕ್ಕೂ ಪ್ರಬಂಧ ಧ್ವನಿ ಇರುತ್ತೆ. ಮತ್ತೆ ಆಯಾ ಕಾಲಮಾನದ ಮಹತ್ವದ ಕೃತಿಕಾರರೆಲ್ಲರ ಒಟ್ಟುಗೂಡಿದ ಬರವಣಿಗೆಯ ಮೊತ್ತಕ್ಕೂ ಪ್ರಬಂಧ ಧ್ವನಿ ಇರುತ್ತೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಹೀಗೇ ಬಿಡಿಬಿಡಿಯಾಗಿ ಆಯಾ ಸಾಹಿತ್ಯ ಮಾರ್ಗದ್ದೆಂಬ ಪ್ರಬಂಧ ಧ್ವನಿಗೆ ಸಂವೇದಿಸದೆ ಇದ್ರೆ, ಅವುಗಳ ವ್ಯತ್ಯಾಸವೇ ಗೊತ್ತಾಗೋಲ್ಲ. ಈ ಬಿಡಿಬಿಡಿಗಳೂ ಸಂಯೋಗಗೊಂಡು ಇಡಿಯಾಗುವ ನೆಲೆಯ ಪ್ರಬಂಧ ಧ್ವನಿಯೂ ಇರುತ್ತೆ. ಅದಕ್ಕೂ ಸಂವೇದಿಸುವ ಸೃಜನಶೀಲ ದೂರದ ಮನಃಸ್ಥಿತಿ ಸಂಸ್ಕೃತಿ ವಿಮರ್ಶೆಗೆ ಅಗತ್ಯ. ಅಲ್ಲಿಯೂ ಅಬ್ಜೆಕ್ಟಿವಿಟಿ ವಿಮರ್ಶಕನಿಗೆ ಸಂಪೂರ್ಣವಾಗಿ ಸಾಧ್ಯವಾಗುತ್ತೆ ಎಂದೇನಿಲ್ಲ. ಅವನವನ ಅನುಭವದ ಮಿತಿ, ವಿದ್ವತ್ತು ಅಥವಾ ವ್ಯುತ್ಪತ್ತಿ ಅಂತಾರಲ್ಲಾ, ಅದರ ಮಿತಿ, ಸಂವೇದನಾ ಸೂಕ್ಷ್ಮದ ಮಿತಿ, ಮೇರೆ ಎಲ್ಲಾ ಇದ್ದೇ ಇರ್ತದೆ. ಆ ಮಿತಿ ಮೇರೆಗಳ ಜೊತೆಗೇ ವಿಮರ್ಶಕನ ಸ್ವೋಪಜ್ಞತೆ ಅಂತೀವಲ್ಲಾ ಅದರ ಸ್ಪರ್ಶಾನೂ ಇರ್ತದೆ.

ಯಾವುದಾದರೂ ಚಾರಿತ್ರಿಕ ಸಂದರ್ಭದಲ್ಲಿ ನೀವು ಹೇಳುವಂಥಪರಿಪೂರ್ಣಲೇಖಕರು ಇರೋಕೆ ಸಾಧ್ಯ ಅನಿಸ್ತಿದೆಯಾ?

‘ಪರಿಪೂರ್ಣ ದೃಷ್ಟಿ’ ಇರೋಲ್ಲ ಅನ್ನೋದು ಸೈದ್ಧಾಂತಿಕವಾಗಿ ಸರಿ. ಅದಕ್ಕೇ ಮಿತಿ ಮೇರೆಯ ಮಾತು ಹೇಳಿದ್ದು. ಆದ್ದರಿಂದಲೇ ವಿಮರ್ಶೆಯಲ್ಲಿ ವಿನಯದ ಪರಿಕಲ್ಪನೆ ಹೇಳೋದು. ಆದರೆ ನಮ್ಮ ಕಲ್ಚರಲ್ ಕಾಂಟೆಕ್ಸ್ಟ್ ಇದೆಯಲ್ಲ, ಅಲ್ಲಿ ಸಮಸ್ಯೆಗಳಿವೆ. ಕುವಂಪು ತಮ್ಮ ಕಾಲದಲ್ಲಿ ಎಷ್ಟೇ ಪ್ರೋಗ್ರೆಸೀವ್ ರಾಶನಲಿಸ್ಟ್ ಆದ ಬ್ರಾಹ್ಮಣೇತರ ಚಿಂತನೆಯನ್ನು ಹುಟ್ಟು ಹಾಕಿರಲಿ, ಅವರಲ್ಲಿ ಬ್ರಾಹ್ಮಣೇತರ ಆಗಿರೊ ಕಾರಣದಿಂದಲೇ, ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ಸಮಗ್ರಕ್ಕೆ ಸ್ಪಂದಿಸುವ ಸಂವೇದನೆಯ ಕೊರತೆ ಇದ್ದೇ ಇದೆ, ಅರ್ಥವಾಯ್ತಾ? ಬ್ರಾಹ್ಮಣರಾದವರಿಗೆ ಈ ಸಾಂಸ್ಕೃತಿಕ ಸಂದರ್ಭಕ್ಕೆ ಸ್ಪಂದಿಸುವ ಹೊತ್ತಿಗೆ ಒಂದು ಸೂಕ್ಷ್ಮ ಕೊರತೆ ಇದೆಯಲ್ಲ, ಅಂಥ ಕೊರತೆ ಬೇರೆ ತರಹದಲ್ಲಿ ಶೂದ್ರನಿಗೂ ಇರುತ್ತೆ. ಅದರಿಂದ ನಮಗಿರೋವಂಥದ್ದು ಒಬ್ಬ ಲೇಖಕನ ಮೂಲಕ ಎಲ್ಲ ಪಡೀತೇವೆ ಅನ್ನುವಂಥ ಭ್ರಮೆ ಅಲ್ಲ. ಒಬ್ಬ ಪ್ರತಿಭಾವಂತನ ಒಂದು ಕೃತಿಗೆ ಇದ್ದ ಹಾಗೆ, ಒಬ್ಬ ಕೃತಿಕಾರನ ಒಟ್ಟು ಕೃತಿಗಳಿಗೂ ಒಂದು ಪ್ರಬಂಧ ಧ್ವನಿ ಇರುತ್ತೆ. ಆ ಧ್ವನಿ ಮೂಲಕ ನಾವು ಆ ಕಾಲಮಾನದ ಸಂವೇದನೆಯ ನೆಲೆಗಳನ್ನ ಗುರುತಿಸಿಕೊಳ್ಳೋದಿಕ್ಕೆ ಯತ್ನಿಸಿದಾಗ, ಇವರು ಪರಿಪೂರ್ಣ ಅಲ್ಲ ಅನಸೋಕೆ ಶುರುವಾಗುತ್ತೆ. ಪರಿಪೂರ್ಣ ಅಲ್ಲ ಅಂತ ಹೇಳಿದ್ದು ಈ ಅರ್ಥದಲ್ಲಿ.

ಅಪರಿಪೂರ್ಣತೆಯ ಕಲ್ಪನೆ ಒಳಗೇನೆ ಕುವೆಂಪು ಅವರನ್ನ ಈಗ ಹ್ಯಾಗೆ ನೋಡಬಹುದು?

ಸ್ವಾತಂತ್ರ್ಯ ಚಳವಳಿಯ ಆ ಕಾಲದಲ್ಲಿ, ಮೂರನೇದೊಂದನ್ನ ಪಡೀಬೇಕು ಅನ್ನೋ ಉತ್ಕಟ ಆಕಾಂಕ್ಷೆ ಇತ್ತು. ಕುವೆಂಪು ಬಿಟ್ಟರೆ ಆಗೆಲ್ಲ ರೈಟರ್ಸು ಬ್ರಾಹ್ಮಣರು ತಾನೇ? ಭಾರತೀಯ ಸಂಸ್ಕೃತಿಯನ್ನು ವೈಭವೀಕರಿಸುವುದು ಒಂದು ಚಾರಿತ್ರಿಕ ಅಗತ್ಯವಾಗಿದ್ದ ಈ ರಾಜಕೀಯ ಸಂದರ್ಭದಲ್ಲಿ, ಕುವೆಂಪು ಸೆಕ್ಯೂಲರ್ ಆಗಿರುವ ನೆಲೆಗಳನ್ನು ಹುಡುಕಲಿಕ್ಕೆ ಪ್ರಯತ್ನಪಟ್ಟರು. ಅವರಿಗೆ ಆಚಾರ ವಿಚಾರ ಭಾಗ ಒಟ್ಟಾಗೀನೇ ವೈಭವೀಕರಿಸುವುದರ ಬಗ್ಗೆ ಮುಜುಗರ ಇತ್ತು. ಆದರೆ ಅದನ್ನು ಮೂಲಭೂತವಾಗಿ ಪುನಾರಚಿಸೋದಕ್ಕೆ ಒಪ್ಪಲಿಲ್ಲ. ಕುವೆಂಪು ಆಚಾರ ಭಾಗದ ವಿಷಯದಲ್ಲಿ ಎಚ್ಚರ ಆದರು. ಅವರನ್ನು ಪ್ರಶ್ನಿಸಿದರು. ವಿಚಾರ ಭಾಗವನ್ನು ಅಧ್ಯಾತ್ಮಕ್ಕೆ ಸೋಸಿಕೊಂಡರು. ಅವರ ಮೇಲೆ ಪ್ರಭಾವ ಬೀರಿದ್ದ ಸ್ವಾಮಿ ವಿವೇಕಾನಂದ ಒಬ್ಬ ಬ್ರಾಹ್ಮಣೇತರ ಸನ್ಯಾಸಿ ಅನ್ನೋದು ಭಾಳ ಮುಖ್ಯ.

ಅವರು ಗೌರವಿಸುತ್ತಿದ್ದ ರಾಮಕೃಷ್ಣಪರಮಹಂಸರು ಬ್ರಾಹ್ಮಣರು.

ಆದರೆ ರಾಮಕೃಷ್ಣ ಆಧ್ಯಾತ್ಮಿಕಕ್ಕೆ ಮಾತ್ರ ಗುರುವಾಗಿದ್ದರು. ಸೋಶಿಯಲ್ ರಿಫಾರ್ಮಿಸ್ಟ್ ಥಿಂಕಿಂಗಿಗೆ ಅಲ್ಲ. ಕುವೆಂಪು ಭಾರತೀಯ ಸಂಸ್ಕೃತಿ ಅನ್ನೋದರ ಆಚಾರ ಭಾಗದಿಂದ ಅಧ್ಯಾತ್ಮಾನ ಬಿಡುಗಡೆ ಮಾಡಿಕೊಂಡರು. ಅಧ್ಯಾತ್ಮವನ್ನ ಸಾರ್ವತ್ರೀಕರಿಸುವುದು, ಮತಧರ್ಮದ ಚೌಕಟ್ಟಿನಲ್ಲಿದ್ದ ಅಧ್ಯಾತ್ಮದ ಪರಿಕಲ್ಪನೆಯನ್ನು ಸೆಕ್ಯುಲರ್ ನೆಲೆಗೆ ವೈಜ್ಞಾನಿಕ ನೆಲೆಗೆ ತರುವುದು ಮಾಡಿದರು. ಅಧ್ಯಾತ್ಮಾನ ಸಾರ್ವತ್ರೀಕರಿಸುವುದು ಅಂದರೆ, ಅದನ್ನು ಡೆಮಾಕ್ರಟೈಜ್ ಮಾಡುವುದು, ಕುವೆಂಪು ರೀತೀಲೇ ನಾನು ಆಧ್ಯಾತ್ಮ ಗ್ರಹಿಸದೆ ಇರಬಹುದು. ಆದರೆ ಕುವೆಂಪು ದೃಷ್ಟಿ ಅದನ್ನು ಒಬ್ಬ ಶೂದ್ರನಿಗೂ ಓಪನ್ ಮಾಡುತ್ತಲ್ಲ, ಅದು ಮುಖ್ಯ. ಹೀಗೆ ಕುವೆಂಪು ಒಂದು ಹಾದಿಯನ್ನು ತೆರೆದ ಹಾಗೆ ಕಾಣಿಸುತ್ತೆ. ಆದರೆ ಅವರು ಅನ್ನಮಯ, ಪ್ರಾಣಮಯ ಅಂತ ಹೇಳ್ತಾ ಇರೋ ಪರಿಭಾಷೆ ಯಾವುದು? ಅದು ಆ ಧರ್ಮದ್ದೆ. ಅದರಿಂದ ಪೂರ್ತಿಯಾಗಿ ಬಿಡಿಸಿಕೊಳ್ಳೋಕೆ ಆಗಲಿಲ್ಲ ಅವರಿಗೆ. ಆ ಪರಿಭಾಷೆಯನ್ನು ಬಳಸಿಕೊಂಡು ಸೆಕ್ಯೂಲರ್ ಆಗಿರುವಂಥದಕ್ಕೆ ವಿಸ್ತರಿಸಿಕೊಂಡಾಗಲೂ ಕೂಡ, ಆ ಮತಧರ್ಮ ನಿರಪೇಕ್ಷತೆಯ ನೆಲೆ ಇದೆಯಲ್ಲ, ಅದಕ್ಕೆ ಈ ಸ್ಪರ್ಶ ಇದ್ದೇ ಇತ್ತು. ಅದರಲ್ಲಿ ಪುನರ್ಜನ್ಮದ ನಂಬಿಕೆಗಳೆಲ್ಲ ಇವೆ. ಆದರೂ ಆ ಚಾರಿತ್ರಿಕ ಸಂದರ್ಭದಲ್ಲಿ ಇದೊಂದು ಬಿಡುಗಡೆ ಆಯಿತು. ಬಿಡುಗಡೆಗೆ ತೆರೆದ ಎರಡನೇ ನೆಲೆ ಬಹಳ ಮುಖ್ಯವಾದ ನೆಲೆ ಅಂದ್ರೆ ಪ್ರಕೃತಿ. ಪ್ರಕೃತಿ ಕೂಡ ಸೆಕ್ಯುಲರ್ ನೆಲೆಯದು. ನಮ್ಮ ನಮ್ಮ ಸಂಸ್ಕಾರ ಸಂವೇದನೆ ಸೂಕ್ಷ್ಮಗಳಿಗೆ ಅನುಗುಣವಾಗಿ ಪಡಕೋಬಹುದಾದ್ದು. ಹೀಗಾಗಿ ಸ್ವಾತಂತ್ರ್ಯಾನಂತರ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಬರೆಯೋಕೆ ಅವರಿಗೆ ದೊಡ್ಡ ಕಷ್ಟ ಆಗಲಿಲ್ಲ. ಆದರೆ ಬೇಂದ್ರೆಯಂಥವರಿಗೆ ಕಷ್ಟವಾಯಿತು.

ನೀವು ನಮ್ಮ ದೊಡ್ಡ ಲೇಖಕರಾದ ಬೇಂದ್ರೆ ಕಾರಂತ ಮಾಸ್ತಿಯವರ ಬಗ್ಗೆ ತುಂಬಾ ಕ್ರಿಟಿಕಲ್ಲಾಗಿ, ಅಂದ್ರೆ ಒಂಥರಾ ಕಠಿಣ ದನಿಯಲ್ಲಿ, ಈಚೆಗೆ ಮಾತಾಡ್ತಾ ಇದೀರಿ ಅಂತ ಅನಸ್ತಿದೆ. ಯಾಕೆ ನಿಲುವು?

ನನ್ನ ಹಿಂದಿನ ಬರಹಗಳನ್ನು ನೀವು ಸ್ವಲ್ಪ ಸರಿಯಾಗಿ ಗಮನಿಸಬೇಕು. ಅಡಿಗರ ಬಗ್ಗೆ ಪೂರ್ತ ಅಭಿಮಾನದಲ್ಲಿ ಬರೆದಿದ್ದಾಗಲೂ ೧೯೭೨ರಲ್ಲೇ “ರಾಜಕೀಯ ಸಾಮಾಜಿಕ ವಸ್ತು ವಿಷಯ ಕುರಿತ ಹಾಗೆ ಅವರಲ್ಲಿ ಪ್ರತಿಗಾಮಿ ಧೋರಣೆ ಕಾಣ್ತದೆ” ಅಂತ ಬರೆದಿದೀನಿ. ಅಡಿಗರು ‘ಸಮಗ್ರ ಗದ್ಯ’ದ ಮುನ್ನುಡಿಯಲ್ಲಿ ನನ್ನ ಹೆಸರು ಹೇಳದೇನೆ ತಾನು ಪ್ರತಿಗಾಮಿಯಲ್ಲ ಅಂತ ಸಾಧಿಸಿದ್ದಾರೆ ನೋಡಿ, ಅದು ನನಗೇ ಹೇಳಿರೋದು. ೧೯೭೦ರಲ್ಲಿ ಅನಂತಮೂರ್ತಿ ಕಥಾ ಸಾಹಿತ್ಯದ ಬಗ್ಗೆ ನಾನು ಬರೆದ ಲೇಖನ ನೋಡಿ. ಅಲ್ಲಿಯವರೆಗೆ ಅನಂತಮೂರ್ತಿ ಕಥಾ ಸಾಹಿತ್ಯದ ಬಗ್ಗೆ ನವ್ಯರಿಂದ ಅಂಥ ಕ್ರಿಟಿಕಲ್ ಲೇಖನ ಬಂದೇ ಇರಲಿಲ್ಲ. ಅಂದರೆ ಯಾವ ಕಾಲದಲ್ಲೂ ನಾನು ಕ್ರಿಟಿಕಲ್ಲಾಗೇ ಇರೋದು-ಎಲ್ಲರ ಬಗ್ಗ್ಯೂ. ಕಾರಂತರ ಬಗ್ಗೆ ಬರೆದಿರೋ ನನ್ನ ಲೇಖನ ಇದೆಯಲ್ಲ, ಅದನ್ನು ಸುಮ್ನೆ ನೊಡಿ. ಅದರ ಎಲ್ಲಾ ನೆಲೆಗಳ ಜೊತೆಯಲ್ಲಿ ಸೆಣೆಸಿದೀನಿ ನಾನು. ನಾನು ಮೊತ್ತಮೊದಲು ಬರೆದ ವಿಮರ್ಶೆಯ ಲೇಖನ, ಮಾಸ್ತಿ ಬಗ್ಗೇ ಆಗಿತ್ತು. ಅದು ಪ್ರಿಂಟ್ ಆಗಲಿಲ್ಲ.ಕಾರಣಾಂತರದಿಂದ. ಅದೂ ಕ್ರಿಟಿಕಲ್ ಆಗಿಯೇ ಇತ್ತು. ಕುವೆಂಪು ಬಗ್ಗೆ ನಾನು ಬರೆದಿದ್ದು ಮಾತ್ರ ಪ್ರಾಕ್ಟಿಕಲ್ ಕ್ರಿಟಿಸಿಸಂ ನೆಲೆಯದಾಗಿತ್ತು. ಲೆಕ್ಕದಲ್ಲಿ ಅವರ ಬಗ್ಗೆ ಸರಿಯಾದ ಅಸೆಸ್‌ಮೆಂಟ್ ಮಾಡೋ ಸಮಗ್ರ ಲೇಖನ ನನ್ನಿಂದ ಆಗಿಲ್ಲ. ಅಡಿಗರ ಬಗ್ಗೇನೂ ಅದೇ ಕಾರಣಕ್ಕೇ ನಾನು ಕಾದದ್ದು. ಮಾಸ್ತಿ ಬಗ್ಗೆ ಕಾರಂತರ ಬಗ್ಗೆ ಮಾತ್ರ ಲೇಖನ ಬರೆದಿರೋದು. ಬೇಂದ್ರೆ ಬಗ್ಗೆಯೂ ಇನ್ನೂ ಗಟ್ಟಿಯಾದ ಲೇಖನ ಬರೆದಿಲ್ಲ.

ಅಗತ್ಯಕ್ಕಿಂತ ಹೆಚ್ಚು ಕ್ರಿಟಿಕಲ್ಲಾದ್ರೆ ಲೇಖಕರ ಚಾರಿತ್ರಿಕ ಮಹತ್ವ ಅರಿಯೋಕೆ ಬೇಕಾದ ಸಹಾನುಭೂತೀನೇ ಹೋಗಿಬಿಡಬಹುದು ಅಂತ ಅನುಮಾನ ನನಗೆ.

ಕ್ರಿಟಿಕಲ್ ಅಂದ್ರೆ ಇಷ್ಟೆ. ಈ ರೈಟರ್ಸ್ ಇದಾರಲ್ಲ ಎರಡು ನೆಲೆಗಳಲ್ಲಿ ನಾವು ಅವರ ಜೊತೇಲಿ ಒಡನಾಡತಾ ಇದೀವಿ. ಒಂದು ಹಿಸ್ಟಾರಿಕಲ್ ಕಾಂಟೆಕ್ಟ್‌ನಲ್ಲಿ ಅವರ ಸಾಧನೆ ಸಾಧಾರಣ ಅಲ್ಲ. ಆದರೆ ನಾವು ಈಗ ದೂರ ಬಂದಿದ್ದೇವೆ. ಕಾಲದ ಅಂತರ ಇದೆ. ಈ ಅಂತರದಲ್ಲಿ ನಾನೊಬ್ಬನೇ ಅಲ್ಲ ಬೆಳೆದಿರೋದು. ಎಲ್ಲದರ ಫಲ ನನಗೆ ಸಿಕ್ಕಿದೆ. ಈ ದೂರದಲ್ಲಿ ನಾನು ನಿಂತು ನೋಡತಾ ಇರುವಾಗ ನನಗೆ ಅನೇಕ ಮಿತಿಗಳು ಕಾಣಿಸ್ತವೆ. ಗಾಂಧಿ ಅಂಬೇಡ್ಕರ್ ಲೋಹಿಯಾ ಇವರ ಬಗ್ಗೆ ಒಂದು ಕಾಲದಲ್ಲಿ ಯಾವ ತರಹ ಫ್ಯಾಸಿನೇಟ್ ಆಗಿದ್ದೆವು. ಈಗ ಆ ಫ್ಯಾಸಿನೇಶನ್ ಇಲ್ಲ. ಅದರರ್ಥ ಅವರು ದೊಡ್ಡವರಲ್ಲ ಅಂತ ಅಲ್ಲ. ಮೊದಲು ಯಾವ ಭಾವುಕತೆ ಇತ್ತೊ ಅದು ಈಗ ಇಲ್ಲ. ಈಗ ಕ್ರಿಟಿಕಲ್ ಆಗಿ ನೋಡೋಕೆ ಸಾಧ್ಯವಾಗ್ತಾ ಇದೆ ಅಂತ ಅಷ್ಟೆ. ಆದ್ದರಿಂದ ಈ ಚರಿತ್ರೆ ಚಲಿಸಿರುವ ಸಂದರ್ಭದಲ್ಲಿ ಅದು ಪಡಕೊಳ್ತಾ ಇರುವ ಬೇರೆಬೇರೆ ಆಯಾಮ ಮತ್ತು ಸಂಕೀರ್ಣತೆಗಳು ಇವೆಯಲ್ಲ, ಅವುಗಳ ಎದುರುಗಡೆ ಇರೋ ಪ್ರಶ್ನೆಗಳಿಗೆ ಉತ್ತರಿಸಬಹುದಾದಷ್ಟು ಸೂಕ್ಷ್ಮ ಸಂವೇದನಶೀಲತೆ, ಆ ತಲೆಮಾರಿನ ದೊಡ್ಡಸಾಹಿತಿಗಳಲ್ಲೂ ಇದೆ ಅಂತ ನನಗೆ ಅನಿಸ್ತಾ ಇಲ್ಲ.

ಈಗಿನ ತಲೆಮಾರಿನ ಲೇಖಕರಲ್ಲಿ ಬಹಳ ಸೂಕ್ಷ್ಮ ಸಂವೇದನೆ ಪ್ರಕಟಿಸ್ತಾ ಚೆನ್ನಾಗಿ ಬರೀತಿರುವ ಲೇಖಕರು ನಿಮ್ಮ ಗಮನದಲ್ಲಿ ಯಾರು?

ಎಳೆಯರ ಬರವಣಿಗೆಯನ್ನು ಬೆನ್ನಟ್ಟಿಕೊಂಡು ಹೋಗಿ ಓದ್ತಾ ಇರೋದು ಕಡಿಮೆಯಾಗಿದೆ. ಆದ್ದರಿಂದ ಮುಜುಗರ ಇದೆ. ನಾನು ಮೊದ್ಲು ಕಂಡಕಂಡದ್ನೆಲ್ಲ ಕ್ವಾಲಿಟಿ ಗೀಲಿಟಿ ನೋಡದೆ ಮೇಯ್ತಾ ಇದ್ದೆ. ವಿಮರ್ಶಕ ಅಂದಮೇಲೆ ಇನ್‌ಫರ್ಮೇಶನ್ ಮಟ್ಟಿಗಾದರೂ ಎಲ್ಲಾ ಗೊತ್ತಿರಬೇಕು ಅಂತ. ಈಗ ಸ್ವಲ್ಪ ಆಯ್ಕೆ ಮಾಡಕೋತೀನಿ. ಬಹುಶಃ ಒಂದು ವಯಸ್ಸು ಆಗ್ತಿದ್ದ ಹಾಗೇನೆ ಆಯ್ಕೆ ಮಾಡಿಕೊಳ್ಳೋಕೆ ಶುರು ಮಾಡಿಬಿಡ್ತೀವಿ ಅಂತ ಕಾಣುತ್ತೆ. ಆದ್ದರಿಂದ ಎಳೆಯ ತಲೆಮಾರಿನವರ ಬರವಣಿಗೆ ಬಗ್ಗೆ ಸಾರಾಸಗಟಾಗಿ ಮಾತಾಡೋಕೆ ಯಾವಗಲೂ ಸಂಕೋಚ ಇದೆ. ಇದಕ್ಕೆ ನನಗೆ ಪೂರ್ಣವಾದ ಅಧಿಕಾರ ಇಲ್ಲ. ನಾನು ಓದಿರೋದರ ಮೇಲೆ ಹೇಳೋದಾದರೆ, ಅವರು ಏನನ್ನೊ ಹುಡುಕ್ತಾ ಇದಾರೆ, ಅದರ ಲಯಕ್ಕೆ ನಮಗೆ ಇನ್ನೂ ಟ್ಯೂನ್ ಮಾಡಿಕೊಳ್ಳೋಕೆ ಸಾಧ್ಯವಾಗದೇ ಇರೋ ಸಾಧ್ಯತೆಯೂ ಇದೆ. ಅವರಿನ್ನೂ ಸಾಧನೆಯ ಹಾದಿಯಲ್ಲಿ ಇದ್ದಾರೆ. ಆ ಕಾರಣದಿಂದ ಅವರ ಅಚೀವ್‌ಮೆಂಟು ದೊಡ್ಡದಾಗಿ ಕಾಣದೆ ಇರಬಹುದು.

ದೇವನೂರರ ಬರೆಹದ ಬಗ್ಗೆ ನಿಮ್ಮ ರೀಡಿಂಗ್ ತಿಳಿಯೋ ಕುತೂಹಲವಿದೆ.

ಮಹಾದೇವ ನನ್ನ ವಿದ್ಯಾರ್ಥಿ. ಸಂಭಾವಿತ. ಆ ಬಗ್ಗೆ ನನಗೆ ಅಭಿಮಾನ ಇದೆ. ಮಾನವೀಯ ಸಂವೇದನೆಯ ಸೂಕ್ಷ್ಮ ಇರುವ ಮನುಷ್ಯ. ಆ ಬಗ್ಗೆ ನನಗೆ ಮೆಚ್ಚಿಕೆ ಮಾತ್ರ ಅಲ್ಲ, ಗೌರವ ಇದೆ. ಈವರೆಗೂ ಅವರು ಬರೆದ ಸೃಜನಶೀಲ ಬರವಣಿಗೆಗಳನ್ನು ಪ್ರಕಟ ಆಗುವ ಮೊದಲೇ ನನಗೆ ಕೊಟ್ಟು ಓದಿಸ್ತಾ ಬಂದಿದ್ದಾರೆ. ಮೇಷ್ಟ್ರಾದ ನನಗೆ ಅದು ಅವ್ರು ಸಲ್ಲಿಸ್ತಾ ಬಂದಿರುವ ಒಂದು ಗೌರವ ಅಂದ್ಕೊಂಡಿದೀನಿ. ಮಹಾದೇವರ ಅಸಕ್ತಿಯ ವ್ಯಾಪ್ತಿ ಇದೆಯಲ್ಲ ಅದು ಬಹಶಃ ಪರಿಮಿತ ಅಂತ ಅನಿಸುತ್ತೆ. ಇದನ್ನು ‘ಪುಸ್ತಕಗಳ ಸಂಖ್ಯೆ ಹೆಚ್ಚಾಗಿಲ್ಲ’ ಅನ್ನೋ ಅರ್ಥದಲ್ಲಿ ಹೇಳತಿಲ್ಲ. ತನ್ನ ಪರಿಮಿತಿಯಲ್ಲೆ ದೇವನೂರರ ಸಂವೇದನೆಯ ಸೂಕ್ಷ್ಮತೆ ಮಾತ್ರ ಮಹಾ ಪ್ರತಿಭಾವಂತನದು; ಸಾಮಾನ್ಯವಾದುದಲ್ಲ. ಆದರೆ ಕೃತಿಯಾಗಿ ಅವರ ಬರೆಹವನ್ನ ‘ಚೆನ್ನಾಗಿದೆ’ ಅನ್ನಬಹುದೇ ಹೊರತು, ಸಾಂಸ್ಕೃತಿಕವಾಗಿ ದೊಡ್ಡದನ್ನ ಕಟ್ಟಿಕೊಡೋ ಶಕ್ತಿಯುಳ್ಳದ್ದು ಅಂತ ಅನ್ಸಿಲ್ಲ. ಅವರ ಪ್ರತಿಭೆಯ ಮತ್ತು ಚಿಂತನೆಯ ಶಕ್ತಿ, ಒಂದು ಸಿವಿಲೈಜೇಶನ್ನಿಗೆ, ಒಂದು ಕಲ್ಚರಿಗೆ ನಮ್ಮ ಸಂವೇದನೆಯನ್ನು ಹಾಯಿಸೋವಷ್ಟು ವಿಸ್ತಾರವಾದದ್ದು ಅಲ್ಲ ಅನಿಸುತ್ತೆ. ‘ಡಬಲ್ ವಿಶನ್’ ಬರವಣಿಗೆಯ ವಿಧಾನ ವಿಶಿಷ್ಟ ರೀತಿಯಲ್ಲಿ ‘ಕುಸುಮಬಾಲೆ’ಯಲ್ಲಿದೆ. ಒಂದರಿಂದ ಇನ್ನೊಂದು ಪಡೆದುಕೊಳ್ಳುವ ಮತ್ತು ಬಿಟ್ಟುಕೊಡುವ ಸಂವೇದನೆಯ ಕಲಾತ್ಮಕ ಆಟ ಅಲ್ಲಿ ನಡೆದಿದೆ. ಸಂಸ್ಕೃತಿ ವಿಮರ್ಶೆಗೆ ಬಹುಶಃ ಇದು- ಈ ಡಬಲ್ ವಿಶನ್ ನೋಟ-ಹೆಚ್ಚು ಪ್ರಯೋಜನಕಾರಿ ಅನ್ನಿಸ್ತದೆ. ಹದಿನೆಂಟು ವರ್ಷಗಳಿಂದ ಸೃಜನಶೀಲ ಬರವಣಿಗೆ ಸ್ಥಗಿತಗೊಳಿಸಿಕೊಂಡಿರುವ ಮಹಾದೇವ, ಅನುಭವ ಮತ್ತು ಅರಿವಿನ ಹೊಸ ವಿಸ್ತಾರದಲ್ಲಿ ಮತ್ತೆ ಎದ್ದು ಬರುತ್ತಾರೆಯೇ? ಕಾಯಬೇಕು.

ತೇಜಸ್ವಿಯದು?

ತೇಜಸ್ವಿ ಇನ್ನೂ ತೆಕ್ಕೆಗೆ ಒಗ್ಗಿಸಿಕೊಳ್ಳೋದರಲ್ಲೇ ಇದಾರೆ ಅನಿಸುತ್ತೆ. ಅವರದು ಇನ್ನೂ ಚಲಿಸುವ ಪ್ರತಿಭೇನೇ. ವಿಜ್ಞಾನ, ಪರಿಸರ ಇತ್ಯಾದಿ ಅವರ ಆಸಕ್ತಿಯ ನೆಲೆಗಳನ್ನ ಘನಗೊಳಿಸುತ್ತ ಹೋಗ್ತಾ ಇದಾರೆ. ಅವರು ಚಾಚಿಕೊಳ್ತಿರೊ ಬಾಹುಗಳು ಹೆಚ್ಚಿವೆ. ಆದರೆ ಅವುಗಳ ಮೂಲಕ ಮತ್ತೆ ಪಡೆಯಬೇಕಾದದ್ದು, ಅದು ಗಟ್ಟಿಗೊಳ್ಳತ್ತಾ ಇದೆ. ನಾನು ಕಾರಂತರ ಬಗ್ಗೆ ಮಾತಾಡುವಾಗ ಯಾಕೆ ಕ್ರಿಟಿಕಲ್ ಆದೆ ಅಂದ್ರೆ, ಅವರು ತಮ್ಮ ನಾಲೆಜ್ಜನ್ನೇ ಎಕ್ಸ್‌ಪೀರಿಯನ್ಸ್ ಅಂತ ಕನ್‌ಪ್ಯೂಸ್ ಮಾಡಿಕೊಂಡಿದ್ದು ಬೇಕಾದಷ್ಟು ಕಡೆ ಕಾಣ್ತದೆ. ಒಬ್ಬ ರೈಟರು ಹಾಗೆ ತಿಳ್ಕೊಳ್ಳೋದು ಇದೆಯಲ್ಲ, ಅದು ಮೊದಲನೇ ಪ್ರಾಬ್ಲಂ. ಅವರ ರಾಶನಾಲಿಸಂ ಒಬ್ಬ ಮತಧರ್ಮವಾದಿ ಕರ್ಮಠನಿಗೆ ಇರುವಂಥ ನಿಷ್ಠೆಯ ರೀತಿಗೆ ಹತ್ತಿರವಾದುದು. ಈ ನಿಷ್ಠೆ ಹಾರಿಜಾಂಟಲ್ ಇರುತ್ತೆ ಹೊರತು, ತನ್ನನ್ನು ರೀಕನಸ್ಟ್ರಕ್ಟ್ ಮಾಡ್ಕೊಳ್ಳೋದಿಲ್ಲ. ‘ಬಾಳ್ವೆಯೇ ಬೆಳಕು’ ಹಂತದಲ್ಲಿ ಏನಿದೆಯೊ ಅದು ಅವರನ್ನ ಕೊನೇವರೆವಿಗೂ ತಂದಿದೆ. ಅದು ವಿಕಸನಶೀಲವಾಗಿಲ್ಲ. ಈ ಹಿನ್ನೆಲೇಲಿ ಅವರ ಕಥಾನಾಯಕರನ್ನು ನೋಡಿ ವ್ಯಾಸರಾಮ ಕೃಷ್ಣರಾಯ ಜಯರಾಮ-ಹೀಗೆ ಹೆಸರುಗಳು ಬದಲಿ ಇರಬಹುದು. ಅವರು ಸ್ವತಃ ಕಲಾವಿದರಾಗಿದ್ದು ವರ್ಟಿಕಲ್ಲಾಗಿ ತಮ್ಮ ಕ್ಷೇತ್ರದಲ್ಲಿ ಬೆಳೀತಾರೆ. ಆದರೆ ಅವರ ಸಂವೇದನೆ, ಜೀವನದೃಷ್ಟಿ ಪ್ರಾರಂಭದಿಂದ ಕೊನೆಯವರೆಗೂ ಬೆಳೆಯೋದೇ ಇಲ್ಲ. ಇದು ಒಂದನೇದು. ಎರಡನೇದು ಒಂದು ಮತಧರ್ಮವನ್ನು ಬರೀ ಬ್ರಾಹ್ಮಣನಾಗಿ ಕಳಕೊಳ್ಳೋದು. ಪ್ರಶ್ನೆ ಏನೆಂದರೆ, ಕಾರಂತರೂ ಅವರ ಕಥಾ ನಾಯಕರೂ ಕಳಕೊಂಡಿದ್ದು ಬರೀ ಬ್ರಾಹ್ಮಣಿಕೆಯನ್ನೇ. ಆದರೆ ನಮ್ಮ ಸಾಮಾಜಿಕ ಸಾಂಸ್ಕೃತಿಕ ಸಂದರ್ಭ ಇದೆಯಲ್ಲ, ಇದರ ಲಯ, ವಿನ್ಯಾಸಗಳ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಈ ಅಬಧ್ಧಗಳನ್ನು ಸಾಮಾಜಿಕ, ಸಾಂಸ್ಕೃತಿಕ ಒಂದು ಸ್ಟೇಟ್‌ಮೆಂಟಾಗಿ ಹೇಳುತ್ತಾರೆ ಹೊರತು, ಕೃತಿಯೊಳಗೆ ಮುಖಾಮುಖಿ ಮಾಡಲಿಲ್ಲ. ಅದರೆಲ್ಲ ಸಂಕೀರ್ಣತೆಯಲ್ಲಿ ಶೋಧಿಸಲಿಲ್ಲ. ತೇಜಸ್ವಿಯವರಲ್ಲಿರುವ ಸೃಜನಶೀಲ ರಾಶನಲಿಸ್ಟ್‌ನಲ್ಲಿ ಆ ನೆಲೆಯ ಶೋಧನೆ, ಸಂವೇದನೆ ಹೆಚ್ಚು ಕ್ರಿಯಾಶೀಲವಾಗಿದೆ.

ಚೋಮನ ದುಡಿ ಬಗ್ಗೇನೂ ಮಾತನ್ನು ಹೇಳೋಕಾಗುತ್ತಾ?

‘ಚೋಮನ ದುಡಿ’ ಒಂದು ಎಕ್ಸೆಪ್ಶನ್. ಆರಂಭದ ರಿಫಾರ್ಮಿಸ್ಟ್ ನಾವೆಲ್ಲುಗಳಲ್ಲೂ ಇದಿದೆ. ಸೋಶಿಯಲ್ ಹೈರಾರ್ಕಿ ಅವರಿಗೆ ಹಾಂಟ್ ಮಾಡಲಿಲ್ಲ. ಅಡಿಗರಾಗಲಿ ಕಾರಂತರಾಗಲಿ ನಮ್ಮ ದೇಶದ ರಾಜಕೀಯ ಸಂದರ್ಭವನ್ನ ರಿಕನ್‌ಸ್ಟ್ರಕ್ಟ್ ಮಾಡಬೇಕು ಅಂದವರೆ, ಆದರೆ ನಮ್ಮ ಸಾಂಸ್ಕೃತಿಕ ಸಂದರ್ಭವನ್ನ ಕೂಡ ರಿಕನ್‌ಸ್ಟ್ರಕ್ಟ್ ಮಾಡಿಕೊಳ್ಳಬೇಕಾದ್ದಿದೆ ಹೊಸ ಚಿಂತನೆಯ ಸಂದರ್ಭದಲ್ಲಿ ಅನ್ನೋದು ಕಾರಂತರಿಗೆ ಅಡಿಗರಿಗೆ ಎಷ್ಟು ಗೊತ್ತಾಯಿತು ಅಂತ?

ಬೇಂದ್ರೆ ವಿಷಯದಲ್ಲಿ ಹ್ಯಾಗೆ ಭಿನ್ನರಾಗ್ತಾರೆ?

ವೈದಿಕ ಭಾರತೀಯತೆಯನ್ನ ಕೀತೀಸೋ ವಿಷಯ ಬಂದಾಗ ಬೇಂದ್ರೆಗೂ ಸಮಸ್ಯೆಯಾಗಲಿಲ್ಲ. ಆದರೆ ಸ್ವಾತಂತ್ರ್ಯ ಬಂದ ಮೇಲೆ ಪ್ರಜಾಸತ್ತಾತ್ಮಕ ಸಂಸ್ಕೃತಿಯ ಪುನಾರಚನೆ ಮಾಡೋ ಸವಾಲು ಬಂದಾಗ, ಅವರಿಗೆ ತಮ್ಮನ್ನ ಮರು ಹೊಂದಿಸಿಕೊಳ್ಳೋಕೆ ಆಗಲಿಲ್ಲ. ‘ಆಗಾನ ಈಗಾನ ಸಾಕು ಮಾಡು ವೇದಾನ್ನ ಹಾಳತೆ ಮಾಡಿ ಅದನ್ನೆ ಹಾಡು’ ಎಂಬ ನೆಲೆಗೆ ಬಂದಿದ್ರು ಕಾರಂತರು, ಅಡಿಗರು ಮೇಲ್‌ನೋಟಕ್ಕೆ ಸೂಕ್ಷ್ಮ ಮನಸ್ಸಿನ ಪೊಲಿಟಿಕಲ್ ಕ್ರಿಟಿಕ್ಸ್ ಅಂತ ಕಾಣುತ್ತೆ. ಒಳಗಡೆ ಹೋಗಿ ನೋಡಿದರೆ ಅವರಿಗೂ ಪೂರ್ತಿ ಹೊಂದಿಕೊಳ್ಳೋಕೆ ಆಗಲಿಲ್ಲ. ಪ್ರಜಾಸತ್ತೆಯನ್ನು ಅಡಿಗರು ವ್ಯಕ್ತಿ ಸ್ವಾತಂತ್ರ್ಯವನ್ನ ನಿರ್ಣಾಯಕ ರೀತಿಯಲ್ಲಿ ಸಾಧಿಸಿಕೊಳ್ಳೋ ಸಾಧನಾ ಅಂತಾರೆ. ಆದರೆ ಅದನ್ನ ಪ್ರಜಾಸತ್ತೆಯಲ್ಲಿ ಬಹುಮತ ತೀರ್ಮಾನ ಮಾಡ್ತದೆ ಅಂದಾಗ ಹೆದರ್ತಾರೆ. ಈ ಸಮಸ್ಯೆ ಕಾರಂತರಲ್ಲೂ ಅಡಿಗರಷ್ಟಲ್ಲದಿದ್ರು- ಇತ್ತು. ಆದ್ರೆ ಕುವೆಂಪುಗೆ ಈ ಪ್ರಾಬ್ಲಂ ಆಗಲಿಲ್ಲ.

ನಮ್ಮ ದೊಡ್ಡ ಡೊಡ್ಡ ಲೇಖಕರೆಲ್ಲ ಹೊಂದಾಣಿಕೆಯ ಬಿಕ್ಕಟ್ಟು ಎದುರಿಸಿರೋದನ್ನ ಕಂಡಾಗ, ಮೂಲಭೂತ ಕಾರಣ ವೈಯಕ್ತಿಕವಾಗಿದೆ ಅನ್ಸುತ್ತೊ ಅಥವಾ ನಮ್ಮ ಸಮಾಜ ವ್ಯವಸ್ಥೆಯಲ್ಲೇ ಇದೆ ಅನ್ಸುತ್ತೋ? ಈಗ ಅನಂತಮೂರ್ತಿಯವರಸಂಸ್ಕಾರದಿಂದ ಹೊರಟುದಿವ್ಯಕ್ಕೆ ಬಂದು ನಿಂತಿರೊ ಬರವಣಿಗೆ ಗಮನಿಸಿದರೆ?

ಬೇಂದ್ರೆಯವರಲ್ಲಿ ಒಂಥರ ಕಾಲಾನ ಅರ್ಥ ಮಾಡಿಕೊಳ್ಳೋಕೆ ಆಗದಂಥ, ಅದರ ಬದಲಾವಣೆಗೆ ಟ್ಯೂನ್ ಆಗದಿರೋವಂಥ ಅಸಹಾಯಕತೆಯ ಸಮಸ್ಯೆ ಇದೆ. ಆದರೆ ಅನಂತಮೂರ್ತಿಯವರ ಬಗ್ಗೆ ಆ ತರಹ ಮಾತಾಡೋದು ಸಾಧ್ಯವಾ? ಅವರದು ತಾತ್ವಿಕ ಅಸಹಾಯಕತೆ ಅಲ್ಲ. ಇನ್ನೇನೊ ಸ್ಥಾಪಿಸುವ ಧೋರಣೆ. ಈ ಧೋರಣೆ ಇದೆಯಲ್ಲ ಇದು ಹೆಚ್ಚು ಅಪಾಯಕಾರಿ. ಕಾರಂತ ಬೇಂದ್ರೆಯವರಲ್ಲಿ ಈ ಸ್ಥಾಪಿಸುವ ಧೋರಣೆ ಕಾಣಿಸೋದಿಲ್ಲ. ಅಂದ್ರೆ ಬೇಂದ್ರೆ ಆರ್ಷೇಯ ವಾದವನ್ನೊ ಗಾಯತ್ರಿ ಮಂತ್ರಾನೊ ಇಂಟರ್‌ಪ್ರಿಟ್ ಮಾಡ್ತಾರೆ. ನಮ್ಮ ಪರಂಪರೆಯಲ್ಲಿ ಆ ರೀತಿ ಇಂಟರ್‌ಪ್ರಿಟೇಶನ್ ಇರಲಿಲ್ಲ. ಬೇಂದ್ರೆಯಂಥ ಒಂದು ಬ್ರಿಲಿಯಂಟ್ ಆಗಿರೊ ಮನಸ್ಸು ಈ ಹೊಸದನ್ನು ಕಾಣ್ತಿದೆ. ಆ ಮಟ್ಟಿಗೆ ಅದು ಹೊಸದಾದರೂ ಅದಕ್ಕೆ ಈ ಕಾಲದ ರೆಲವನ್ಸಿ ಇಲ್ಲ. ಡಿ.ಆರ್. ನಾಗರಾಜರವರ ‘ವಿಸ್ಮೃತಿ’ ಸಿದ್ಧಾಂತ ಇದೆಯಲ್ಲ, ಆ ಥರ. ಹೌದಪ್ಪ, ಇದು ವಿಸ್ಮೃತಿಗೆ ಒಳಗಾಗಿದೆ. ಆದರೆ ಇದು ಎಕ್ಸ್‌ಟೆನ್‌ಶನ್ ಆಫ್ ನಾಲೆಜ್ ಆಗುತ್ತೊ ಅಥವಾ ನನ್ನ ಈ ಕಾಲದ ಸಂವೇದನೆಯ ಎಕ್ಸ್‌ಟೆನ್ ಅನ್ನೂ ಮಾಡುತ್ತೋ? ಮಾಡೋಕಾಗಲ್ಲ ಅಂದರೆ ಅದಕ್ಕೆ ಏನು ಬೆಲೆ? ಈ ಪ್ರಶ್ನೆ ಇದೆ.

ಕುತೂಹಲವೆಂದರೆ, ಇಂಥ ಇಕ್ಕಟ್ಟನ್ನು ಬ್ರಾಹ್ಮಣ ಲೇಖಕರೇ ಹಾಯ್ತಾ ಇರೋದು.

ಕಾರಂತರ ಇಡೀ ಪರ್ಸನಾಲಿಟಿಯಲ್ಲಿ, ನಾವು ಒಪ್ಪಬಹುದು ಬಿಡಬಹುದು, ಈ ಗೊಂದಲ ಇಲ್ಲ. ಚಂಚಲವಾದ ಪ್ರತಿಭೆ ಇರೋ ಬೇಂದ್ರೇಲೂ ಗೊಂದಲ ಇಲ್ಲ. ಕುವೆಂಪು ಅವರಲ್ಲೂ ಇಲ್ಲ. ಹೀಗೆ ನೋಡೋಕೆ ಹೋದಾಗ ಅನಂತಮೂರ್ತಿ ಪರ್ಸನಾಲಿಟಿಯಲ್ಲಿ ಗೊಂದಲ ಇದೆ ಯಾಕೆ? ನಮ್ಮ ಹಿರಿಯ ಲೇಖಕರಲ್ಲಿ ಕರಿಯರಿಸ್ಟ್ ಟೆಂಡೆನ್ಸಿ ಕಡಿಮೆ ಇತ್ತು. ಇದು ಬಿಎಂಶ್ರೀಗೆ ಇತ್ತು. ಅನಂತಮೂರ್ತಿಗೆ ಇದೆ. ಇವರಿಬ್ಬರೂ ಲಿಟರೇಚರನ್ನ ಕರಿಯರಿಸ್ಟ್ ಕಾಂಟೆಕ್ಟ್ಸ್‌ನಲ್ಲೇ ನೋಡಿಕೊಂಡು ಬಂದೋರು. ಒಬ್ಬ ಪ್ರತಿಭಾವಂತ ಲೇಖಕ ಕರಿಯರಿಸ್ಟ್ ಆದಾಗ ಪರಿಣಾಮ ಬೇರೆ ರೀತಿ ಆಗ್ತದೆ. ಬಿ.ಎಂ.ಶ್ರೀ ಅವರಿಗೆ ಅವರ ಕಾಲದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕರಿಯರಿಸ್ಟ್ ಆಗೋ ಅವಕಾಶ ಇರಲಿಲ್ಲ. ಡಿಆರ್‌ಗೆ ಅನಂತಮೂರ್ತಿ ಅವರಿಗೆ ಇದೆ. ಡಿ.ಆರ್. ಬ್ರಾಹ್ಮಣ ಅಲ್ಲ. ಪ್ರಾದೇಶಿಕ ವ್ಯಾಪ್ತಿಯನ್ನು ಇಟ್ಟುಕೊಂಡ ಬರವಣಿಗೆಯ ನೆಲೆ ಇರುತ್ತಲ್ಲ. ಅಲ್ಲಿರುವವರೆ ಅನುಭವದ ಜತೆ ಅಥೆಂಟಿಕ್ಕಾಗಿ ವ್ಯವಹರಿಸ್ತಾರೆ. ಅದನ್ನ ಘನವಾಗಿ ಇಟ್ಟುಕೊಳ್ಳೋಕೆ ನೋಡ್ತಾರೆ. ಆದ್ರೆ ನ್ಯಾಶನಲ್ ಇಂಟರ್‌ನ್ಯಾಶನಲ್ ನೆಲೆಗೆ ಹೋದ ಕೂಡ್ಲೆ, ಅನುಭವಕ್ಕಿಂತ ಹೆಚ್ಚಾಗಿ ಐಡಿಯಾದ ಜತೆ ಆಟ ಆಡ್ತಿರ್ತಾರೆ. ಅಲ್ಲಿ ಐಡಿಯಾನ್ನ ಸಾರ್ವತ್ರೀಕರಿಸಿ ಕೇಟರಿಂಗ್ ಮಾಡುವಾಗ ಸಿನ್ಸಿಯಾರಿಟಿ ಪ್ರಶ್ನೆ ಬರ್ತದೆ.

ಬಿಎಂಶ್ರೀ ಅವರನ್ನು ನೀವು ಕರಿಯರಿಸ್ಟ್ ಅಂದಿರಿ. ಇದು ಅರ್ಥವಾಗಲಿಲ್ಲ.

ಬಿಎಂಶ್ರೀ ಒಬ್ಬ ಪ್ರೊಫೆಸರ್ ಆಫ್ ಇಂಗ್ಲೀಷ್ ಆಗಿ ಸಾಹಿತ್ಯಕ್ಕೆ ಬಂದೋರು. ಲಿಟರೇಚರ್ ಬಗ್ಗೆ ಎಕ್ಸ್‌ಪಿರಿಯನ್ಸ್‌ಗಿಂತ ಎಕ್ಸ್‌ಪೆರಿಮೆಂಟ್ ನೆಲೆಗಳಲ್ಲಿ ಇದ್ದೋರು. ರೋಮ್ಯಾಂಟಿಕ್ ಕಾವ್ಯಗಳನ್ನ ಅನುವಾದ ಮಾಡುವುದು, ಅದರ ಜೊತೆಯಲ್ಲೇನೇ ಕ್ಲಾಸಿಕಲ್ ಗ್ರೀಕ್ ನಾಟಕಗಳನ್ನು ತರುವುದು ಮಾಡದೋರು. ಕಾನ್ಸೆಪ್ಟ್ ಆಫ್ ಲಿಟರೇಚರ್ ವಿಷಯದಲ್ಲಿ ರೊಮ್ಯಾಂಟಿಕ್‌ಗೂ ಕ್ಲಾಸಿಕಲ್‌ಗೂ ವ್ಯತ್ಯಾಸ ಇದೆ. ಆದರೆ ಬಿಎಂಶ್ರೀಗೆ ಲಿಟರರಿಯಾಗಿ ಇದೂ ಒಂದು ಕೃತಿ, ಅದೂ ಒಂದು ಕೃತಿ. ಬೇರೆ ವಿಷನ್‌ನಲ್ಲಿ ಅವರಿಗೆ ಬೇಕಾಗಿಲ್ಲ. ಆಮೇಲೆ ‘ಕರ್ನಾಟಕ ಬೇಕು’ ಅಂತ ಹೇಳಿದಾಗ, ಮಹಾರಾಜರ ಕರ್ನಾಟಕ ಬೇಕು ಅಂತ ಹೇಳಿದ್ದೇ ಹೊರತು, ಪ್ರಜಾಸತ್ತಾತ್ಮಕ ಅಖಂಡ ಕರ್ನಾಟಕ ಬೇಕು ಅಂತ ಮುಕ್ತವಾಗಿ ಧೈರ್ಯವಾಗಿ ಹೇಳ್ಲಿಲ್ಲ. ಒಂದು ಕಡೆ ಗಾಂಧೀನ ಅಶಿಸ್ತುಕಾರಕ ಅಂತ ಅವರು ಹೇಳ್ತಾರೆ.

ಸಾರ್. ನಿಮ್ಮ ಕಾಮೆಂಟನ್ನ ಒಪ್ಸೋಕೆ ಕಷ್ಟವಾಗ್ತಿದೆ. ಅವರಕನ್ನಡ ಮಾತು ತಲೆ ಎತ್ತುವ ಬಗೆಭಾಷಣದಲ್ಲಿ ಒಂದು ನಾಡಿನ ಭಾಷೇನ ಆಧುನೀಕರಿಸೊ ಹಂಬಲ ಇದೆಯಲ್ಲ. ಅದು ಸಾಮುದಾಯಿಕ ಕಾಳಜಿಯದಲ್ಲವಾ?

ಹೌದೌದು, ಇದು ಒಬ್ಬ ಗುಡ್ ಅಕೆಡೆಮಿಶಿಯನ್ನಿಗೂ ಬರಬಹುದಾದುದು ಅಂತ ನಾನು ಹೇಳೋದು. ಒಬ್ಬ ಒಳ್ಳೇ ಅಕಡಮಿಶಿಯನ್‌ಗೆ ಇಂಗ್ಲಿಷ್ ಸಾಹಿತ್ಯದಲ್ಲಿ ಏನೇನು ನಡೆದಿದೆ ಅಂತ ಗೊತ್ತಿದ್ದಾಗ, ಅದನ್ನ ಕನ್ನಡದ ಸಂದರ್ಭದಲ್ಲಿ ತಂದುಕೊಂಡು ಕನ್ನಡದ ಕಾಂಟಕ್ಟ್ಸ್‌ನಲ್ಲಿ ಹೇಗೆ ಬಳಸೋದು ಅನ್ನೋ ವಿವೇಕದ ಕೊರತೆಯ ಬಗ್ಗೆ ಹೇಳ್ತಿಲ್ಲ ನಾನು. ಬಿಎಂಶ್ರೀ ಅದನ್ನೇ ಮಾಡಿದ್ದಾರೆ. ಅದನ್ನು ಮಾಡುವಾಗಲೂ ಅವರು ಎಷ್ಟು ಸೂಕ್ಷ್ಮವಾಗಿದ್ದಾರೆ? ‘ಇಂಗ್ಲಿಷ್ ಗೀತೆಗಳು’ ಅರ್ಪಣೆ ನೆನೆಸ್ಕೊಳ್ಳಿ. ಈ ಅರ್ಪಣೆ ಇಂಗ್ಲಿಷ್‌ನಲ್ಲಿದೆ. ಕ್ಯಾಪಿಟಲ್ ಲೆಟರುಗಳಲ್ಲಿದೆ. TO MY STUDENTS WHO BELIEVE IN THE BLENDING OF THE SOULS OF ENGLAND AND INDIA THESE VERSES ARE INSCRIBED ಆಂತ. ಏನು ಇದರರ್ಥ? ಕನ್ನಡ ಬಾರದ ಆಂಗ್ಲರೂ ಅಂದರೆ ಆ ಕಾಲದಲ್ಲಿ ಬ್ರಿಟಿಶ್ ಸರ್ಕಾರದ ಪ್ರತಿನಿಧಿಗಳಾಗಿ ಮೈಸೂರಿನಲ್ಲಿ ಇದ್ದ ರೆಸಿಡೆಂಟ್ ಆಂಗ್ಲರೂ ಇದನ್ನು ನೋಡಬೇಕು ಅಂತ ತಾನೇ?

ವಿಷಯದಲ್ಲಿ ನನ್ನ ರೀಡಿಂಗ್ ಬೇರೆ ತರಹ ಇದೆ ಸಾರ್. ಒಬ್ಬ ಚಳುವಳಿಗಾರನ ತುರ್ತು, ಒಂದು ವಿಶನ್, ಬಿಎಂಶ್ರೀಯವರ ಕನ್ನಡದ ಕೆಲಸಗಳಲ್ಲಿತ್ತು ಅಂತಲೇ ನಾನು ಭಾವಿಸತೀನಿ.

ಅದು ಇಲ್ಲ ಅಂತ ಖಂಡಿತ ಹೇಳತಿಲ್ಲ. ಒಂದು ಸಾಹಿತ್ಯ ಸಂದರ್ಭವನ್ನ ಹೊಸದಾಗಿ ಕಟ್ಟುವಂಥ ಕಳಕಳಿಯಿತ್ತು. ಇದರಲ್ಲಿ ಅನುಮಾನವಿಲ್ಲ. ಹಾಗೆ ಕಟ್ಟಿ ಕಾಣಿಸುವ ಸಾಮರ್ಥ್ಯದ ಕೊರತೆಯೊ ಕಾಣಿಸೋಲ್ಲ. ಆದರೆ ಈ ಕಟ್ಟುವಂಥದ್ದರ ಜತೆಯಲ್ಲೇನೇ ಅರಮೆನ ಸಂಬಂಧಾನೂ ಇಟ್ಕೋಬೇಕು ಅನ್ನೋದು….

ಬಿಎಂಶ್ರೀಯವರ ಕೆಲಸಗಳನ್ನು ಚಾರಿತ್ರಿಕ ಇಕ್ಕಟ್ಟುಗಳಲ್ಲಿ ನೋಡಬೇಕು ಅನಿಸುತ್ತೆ. ಅವರ ಕೆಲಸದ ಪರಿಣಾಮಗಳು ಏನಾದವು ಅಂತ ನೋಡೋಣ.

ಈ ಇಕ್ಕಟ್ಟುಗಳು ಉಳಿದವರಿಗೆ ಯಾಕೆ ಬರಲಿಲ್ಲ? ಅವರ ರೋಲ್ ಬಹಳ ಮುಖ್ಯವಾಗಿತ್ತು ಅನ್ನೋದಾದರೆ, ಅದಕ್ಕೆ ಕಾರಣ ಅವರ ಶಕ್ತಿ, ಸ್ಥಾನಬಲ, ಕನ್ನಡ ಮತ್ತು ಇಂಗ್ಲಿಷ್ ಪ್ರೊಫೆಸರು ಅವರು. ಡಿವಿಜಿ ಒಬ್ಬರನ್ನು ಬಿಟ್ರೆ ಮೈಸೂರು ಸಂಸ್ಥಾನದ ಮುಖ್ಯ ಸಾಹಿತಿಗಳೆಲ್ಲ – ಟಿಎಸ್ ವಂಕಣ್ಣಯ್ಯ, ಎಆರ್ ಕೃಷ್ಣಶಾಸ್ತ್ರಿಗಳೂ ಸೇರಿದಂತೆ ಅವರ ವಿದ್ಯಾರ್ಥಿಗಳು.

ಸದ್ಯದ ಕನ್ನಡ ವಿಮರ್ಶೆಯಲ್ಲಿ ನೀವು ಯಾವುದನ್ನು ದೊಡ್ಡ ಸಮಸ್ಯೆ ಅಥವಾ ತೊಡಕು ಅಂತ ಭಾವಿಸತೀರಿ?

ನನಗೆ ವಿಮರ್ಶೆಯಲ್ಲಿ ಸಿನ್ಸಿಯಾರಿಟಿ ಬಹಳ ಮುಖ್ಯ. ನಾವು ಎಲ್ಲವನ್ನ ಒಪ್ತೀವಿ ಅಂತ ಅಲ್ಲ. ಆದರೆ ಅವರ ದನಿಗಳ ಬಗ್ಗೆ ಗೌರನ ಇಡಬೇಕು. ಸಿನ್ಸಿಯರಾದ ಕ್ರಿಟಿಕ್, ಆಡಿಯನ್ಸನ್ನ ಹೊರಗಡೆ ಇಟ್ಟುಕೊಂಡು ನೋಡ್ತಾ ಇರ್ತಾನೆ ಅಂತ ನನ್ನ ಅನಿಸಿಕೆ. ತಾನು ಏನನ್ನ ಹೇಳತಾನೋ ಮೊದಲು ಅದರ ಬಗ್ಗೆ ಪ್ರಾಥಮಿಕ ಗೌರವ ಇಟ್ಟಿರ್ತಾನೆ. ಅದು ಉಳಿದವರಿಗೆ ಒಪ್ಪಿಗೆ ಆಗುತ್ತೊ ಇಲ್ಲವೋ, ಅದು ಬೇರೆ ವಿಷಯ. ಒಂದು ರೀತಿಯಲ್ಲಿ ನಿಷ್ಠೆ ಇರುತ್ತಲ್ಲ, ಆ ನಿಷ್ಠೆಯಲ್ಲಿ ಕಪಟ ಇರೋದಿಲ್ಲ. ಯಾರನ್ನೋ ಮೆಚ್ಚಿಸೋಕೆ ಮಾಡ್ತಿದಾರೆ ಅನಿಸೋದಿಲ್ಲ. ಕನ್ನಡದಲ್ಲಿ ಇಂಥ ಕ್ರಿಟಿಕ್ಸ್ ಬಹಳ ಕಡಿಮೆ.

ಸಂದರ್ಶಕರ ಟಿಪ್ಪಣಿ

ತಾವು ಆಡುವ ಮಾತು, ಬಳಸುವ ಪದ, ವ್ಯಕ್ತಮಾಡುವ ಅಭಿಪ್ರಾಯ ಆದಷ್ಟೂ ಸಮತೂಕದಲ್ಲಿರಬೇಕು ಎಂಬ ಬಗ್ಗೆ ಬಹಳ ಕಾಳಜಿ ಮಾಡುವ ಚಿಂತಕರೆಂದರೆ ಜಿಎಚ್ ನಾಯಕರು. ಇದು ಅವರ ಸಾಹಿತ್ಯ ವಿಮರ್ಶೆ, ಚಿಂತನೆ ಮತ್ತು ಜೀವನ ವಿಧಾನದ ಸ್ವರೂಪವನ್ನೂ ಕೂಡ ಸೂಚಿಸುತ್ತದೆ. ಆಡುವ ಮಾತಿಗೂ ಮಾಡುವ ಕ್ರಿಯೆಗೂ ಜವಾಬ್ಧಾರಿಯನ್ನು ಹೊರುವ ಈ ಗುಣದಿಂದ ಒಂದು ಬಗೆಯ ಪ್ರಜ್ಞಾಪೂರ್ವಕತೆ ಹಾಗೂ ಎಚ್ಚರದ ಪ್ರಜ್ಞೆ ಬರುತ್ತದೆ. ಬೀಸುಹೇಳಿಕೆ ಮಾಡಲು ನಾಯಕರು ಹಿಂಜರಿಯುತ್ತಾರೆ. ಸಮುದಾಯ ಸಂಸ್ಕೃತಿ ಎಂಬ ಪದವನ್ನು ಬಳಸಿ ಪ್ರಶ್ನೆ ಕೇಳಿದರೆ, ಅವರು ಸಮುದಾಯ ಬದುಕು ಎಂಬ ಪದ ಬಳಸಿಕೊಂಡು ಉತ್ತರಿಸುವುದನ್ನು ಗಮನಿಸಬೇಕು. ಆದರೆ ಈ ಅತಿ ಎಚ್ಚರವು ಅವರ ವಿಮರ್ಶೆ ಮತ್ತು ಚಿಂತನೆಯನ್ನು ಒಂದು ಬಗೆಯ ಪರಿಮಿತಿಗೂ ಸಿಲುಕಿಸುತ್ತದೆ. ನಾಯಕರು ಸಾಹಿತ್ಯ ವಿಮರ್ಶೆ, ಸಾಮಾಜಿಕ ಚಿಂತನೆ ಹಾಗೂ ವೈಯಕ್ತಿಕವಾದ ಜೀವನ ಇವನ್ನು ಬೇರೆ ಬೇರೆ ಮಾಡುವುದಿಲ್ಲ. ತಮ್ಮ ಪರಿಸರದಲ್ಲಿ ನಡೆನುಡಿಯಲ್ಲಿ ಅಪಾರವಾದ ಕಂದರಗಳ ಜತೆಗೆ ಬದುಕುವ ಲೇಖಕರನ್ನು ಬಹುಶಃ ನೋಡುತ್ತಿದ್ದ ಅವರು ಇವುಗಳ ನಡುವೆ ಅರ್ಥಪೂರ್ಣವಾದ ನೈತಿಕವಾದ ಸಂಬಂಧ ಇರಬೇಕೆಂದು ಬಯಸಿದರು. ಹೀಗಾಗಿ ಅವರ ಶಿಸ್ತು ಕೇವಲ ಸಾಹಿತ್ಯ ಕೃತಿಯ ಅನುಸಂಧಾನಕ್ಕೆ ಸಂಬಂಧಪಟ್ಟುದಲ್ಲ. ‘ಶೂದ್ರ ಲೇಖಕರಾಗಿ ನೀವು ಕುವೆಂಪು ಬದಲಾಗಿ ಅಡಿಗ ಅನಂತಮೂರ್ತಿಯವರ ಪ್ರಭಾವಕ್ಕೆ ಒಳಗಾದಿರಿ’ ಎಂಬ ಪ್ರಶ್ನೆಗೆ ಅವರು ನೀಡುವ ಸಂಕೀರ್ಣವಾದ ಉತ್ತರವನ್ನು ಗಮನಿಸಬೇಕು. ರಾಜಕೀಯ ಚಳುವಳಿಯ ಪರಿಸರದಿಂದ ಬಂದ ನಾಯಕರು ನವ್ಯದ ಚಳುವಳಿ ರಹಿತ ವ್ಯಕ್ತಿವಾದಿ, ಸಾಹಿತ್ಯವಾದಿ ಪರಿಸರದಲ್ಲಿ ವಿಮರ್ಶಕರಾಗಿ ಬರವಣಿಗೆ ಮಾಡಿದವರು. ಬಹುಶಃ ಇದರ ಕೊರತೆಯನ್ನು ಅವರು ತಮ್ಮ ಬರೆಹದ ಎರಡನೆಯ ಘಟ್ಟದಲ್ಲಿ ತುಂಬಿಸಿಕೊಂಡರು. ಅವರ ಈಚಿನ ಬರೆಹ ಹೆಚ್ಚಾಗಿ ಸಾಮಾಜಿಕ ಚರ್ಚೆಯನ್ನು ಒಳಗೊಂಡಿದೆ. ಈ ಸಂದರ್ಶನದಲ್ಲಿ ಮೈಸೂರಿನ ಕಾಫಿಕ್ಲಬ್ಬು, ಕುವೆಂಪು ಹೆಸರಲ್ಲಿ ಮೈಸೂರು ವಿವಿಯಲ್ಲಿ ನಡೆದ ಜಾತಿರಾಜಕಾರಣ, ಅಂಕೋಲೆಯ ಕರನಿರಾಕರಣೆ ಚಳುವಳಿ ಮುಂತಾದ ಚಾರಿತ್ರಿಕ ಚಿತ್ರಗಳು ಅಪೂರ್ವವಾಗಿವೆ. ಅದರಲ್ಲಿ ಕನ್ನಡದ ಪ್ರಮುಖ ಲೇಖಕರಾದ ಕುವೆಂಪು, ಕಾರಂತ, ತೇಜಸ್ವಿ, ಅನಂತಮೂರ್ತಿ, ಬಿಎಂಶ್ರೀ ಅವರ ಸಾಹಿತ್ಯದ ಮೇಲಿನ ನಾಯಕರ ಅಬ್ಸರ್‌ವೇಶನ್ ಹಾಗೂ ಮೌಲ್ಯಮಾಪನಗಳು ಕುತೂಹಲಕರವಾಗಿವೆ. ಸಾಹಿತ್ಯ ವಿಮರ್ಶೆಯ ವಿಧಾನ ಮತ್ತು ತತ್ವಗಳ ಬಗ್ಗೆ ಅವರ ಚರ್ಚೆಯು ಉಪಯುಕ್ತವಾಗಿದೆ. ಆದರೆ ಬಿಎಂಶ್ರೀ ಅವರನ್ನು ಕುರಿತ ಅವರ ತೀರ್ಮಾನಗಳು ಒಪ್ಪಲು ಕಷ್ಟ. ವಸಹಾತುಶಾಹಿ ಸಂದರ್ಭದ ಇಕ್ಕಟ್ಟಿನಲ್ಲಿ ನಮ್ಮ ಲೇಖಕರು ತಳೆದ ಸಂಕೀರ್ಣ ನಿಲುವುಗಳನ್ನು ನೋಡಲು ಕನ್ನಡದಲ್ಲಿ ಇನ್ನೂ ಸಂಕೀರ್ಣವಾದ ಸಾಂಸ್ಕೃತಿಕ ವಿಶ್ಲೇಷಣಾ ವಿಧಾನಗಳು ರೂಪುಗೊಳ್ಳಬೇಕೋ ಏನೋ.