ಉತ್ತರ ಕನ್ನಡ ಜಿಲ್ಲೆಯಲ್ಲಿ ಕರನಿರಾಕರಣೆ ಚಳುವಳಿ ಭುಗಿಲೆದ್ದ ಉತ್ತರ ಕನ್ನಡ ಪರಿಸರದಲ್ಲಿ ನೀವು ಹುಟ್ಟಿ ಬೆಳೆದವರು. ಅದರ ಯಾವ ನೆನಪುಗಳು ನಿಮಗಿವೆ?

ಕರನಿರಾಕರಣೆಯ ಚಳುವಳಿಯ ಹೊತ್ತಿಗೆ ನಾನು ಹುಟ್ಟಿರಲಿಲ್ಲ. ಅದು ೧೯೩೦-೩೨ರ ಕಾಲ. ಕರನಿರಾಕರಣೆ ಘೋಷಣೆ ಆಗಿದ್ದು ನಮ್ಮೂರು ಸೂರ್ವೆಯಲ್ಲೇ. ನಮ್ಮ ಸೋದರಮಾವ ವಾಸ್ರೆ ಸುಬ್ರಾಯ ನಾಯಕ ಅಂತ, ಮೊಟ್ಟಮೊದಲು ಪಟೇಲಿಕೆಗೆ ರಾಜೀನಾಮೆ ಕೊಟ್ಟೋನು. ಇವನು ಕರನಿರಾಕರಣೆ ಕಾಲದಲ್ಲಿ ಭೂಗತನಾಗಿ ಘೋರಾರಣ್ಯದ ಶಿಬಿರದಲ್ಲಿದ್ದಾಗ, ಜೋಡು ಹುಲಿಗಳಿಗೆ ಬಲಿಯಾಗುವುದರಲ್ಲಿದ್ದು ಪಾರಾದವನು. ಅವನ ಮನೆ, ಜಮೀನು ಮುಟ್ಟುಗೋಲಾಗಿತ್ತು. ಅವನ ಹೆಂಡತಿ ಕೂಡ ಹೋರಾಟಗಾರ್ತಿ. ಚಂದ್ರಿ ಅಂತಿದ್ಲು. ಬೊಮ್ಮಯ್ಯ ಪೊಕ್ಕ ನಾಯಕ ಅನ್ನೋರು, ನಮ್ಮ ದಾಯಾದಿ. ಮೊತ್ತಮೊದಲು ಕರನಿರಾಕರಣೆ ಘೋಷಣೆ ಮಾಡದೋರು. ನಮ್ಮ ಅಪ್ಪ, ಅವನ ಸೋದರ ಮಾವಂದಿರು ಮೂವರು ಕಣಗಿಲದವರು ಹಾಗೂ ಅವರ ಕಸಿನ್ಸ್ ಅಂದರೆ ನನ್ನ ದೊಡ್ಡಪ್ಪಂದರು ಕೂಡ ಕರನಿರಾಕರಣೆ ಮಾಡಿದವರು. ಅವರ ಮನೆ, ಜಮೀನೂ ಮುಟ್ಟುಗೋಲಾಗಿತ್ತು. ಈ ಹೋರಾಟದಲ್ಲಿ ನಮ್ಮನೆ, ಜಮೀನೆಲ್ಲ ಬಾಂಬೆ ಸರಕಾರಕ್ಕೆ ಮುಟ್ಟುಗೋಲಾಗಿ ಹೋಗಿತ್ತು. ಅದು ೧೯೩೭ರಲ್ಲಿ ತಿರುಗಿ ಬಂತು. ಅದನ್ನ ಸರಿ ಮಾಡೋಣ ಅನ್ನೋ ಹೊತ್ತಿಗೆ ೧೯೪೨ರ ಕ್ವಿಟ್ ಇಂಡಿಯಾ ಮೂಮೆಂಟ್ ಬಂತು. ನಮ್ಮಪ್ಪ, ಭಾಗವತ ಹಮ್ಮಣ್ಣ ನಾಯಕ ಅಂತ, ಮುಲ್ಕಿ ಪಾಸ್ ಮಾಡಿದ್ದ ನನ್ನ ಅಣ್ಣನ್ನ ವಾಸ್ರೆ ಗಾಂವಠಿ ಶಾಲೆಗೆ ಮಾಸ್ತರಾಗಿ ಸೇರಿಸಿದ್ದ. ನನ್ನಣ್ಣ ನಮ್ಮಪ್ಪನಿಗೆ ಹೇಳದೇ ಕೇಳದೆ, ಸರ್ಕಾರದ ವಿರುದ್ಧ ಮೆರವಣಿಗೆಯಲ್ಲಿ ಹೊರಟು ಬಹಿರಂಗ ಭಾಷಣ ಮಾಡಿ ಅರೆಸ್ಟ್ ಆದ. ಜೈಲು ಶಿಕ್ಷೆ ಆಗಿ ಮಾಸ್ತರಿಕೆ ಕಳಕೊಂಡ. ಅದಾದ ಒಂದು ತಿಂಗಳೊಳಗೆ, ನಮ್ಮಪ್ಪನನ್ನೂ ಅರೆಸ್ಟ್ ಮಾಡಿದರು. ನಮ್ಮ ಸೋದರ ಮಾವನಿಗೆ ವಾರೆಂಟು ಇತ್ತು. ಅವನೂ ಭೂಗತನಾಗಬೇಕಾಯಿತು. ಅವನಿಗೂ ಜೈಲು ಶಿಕ್ಷೆ ಆಯಿತು. ಎಲ್ಲ ಜೈಲಿಗೆ ಹೋದರಲ್ಲ ಅಂತ ಹೇಳಿ, ನಮ್ಮ ಅಕ್ಕನ ಗಂಡ ಹಿಚಕಡದ ವಿಠಲ ನಾಯಕ ಹಾಗೂ ಬೊಳೆ ಊರಿನ ನನ್ನ ದೊಡ್ಡಪ್ಪನ ಮಗ ಕೃಷ್ಣಣ್ಣ ನಮಗೆ ಸಹಾಯ ಮಾಡಬೇಕಂತ ಬಂದೋರು, ನಮ್ಮ ಕಣ್ಣೆದುರಿಗೇನೆ ನಮ್ಮನೆಯಲ್ಲಿ ಅರೆಸ್ಟಾಗಿ ಹೋದರು. ನನ್ನ ದೊಡ್ಡವ್ವನ ಗಂಡ ಬೊಳೆ ಊರಿನ ದೇವಣ್ಣ ಕೃಷ್ಣನಾಯಕ ಹಾಗೂ ದೊಡ್ಡಪ್ಪ ರಾಮಕೃಷ್ಣ ನಾಯಕ, ಅವನ ಹಿರಿಯ ಮಗ ಗಣಪತಪ್ಪ ಎಲ್ಲಾ ಹೋರಾಟಗಾರರು, ಜೈಲು ಶಿಕ್ಷೆ ಅನುಭವಿಸಿದೋರು. ಹೀಗೆ ಪ್ರಾಯಕ್ಕೆ ಬಂದ ಹುಡುಗರು ಒಬ್ಬರೂ ಊರಲ್ಲಿ ಇರದ ಹಾಗೆ ಅರೆಸ್ಟ್ ಮಾಡ್ತಿದ್ರು. ಕಣ್ಣೆದುರಿಗೇನೇ ದೊಡ್ಡ ಹೋರಾಟವನ್ನು ನೋಡ್ತಾ ಇದ್ದೆವು. ನನಗಾಗ ಎಂಟನೆ ವರ್ಷ. ನನ್ನ ದೊಡ್ಡಪ್ಪ ಬೊಳೆ ದೇವಣ್ಣ ನಾಯಕ ಅಂಕೋಲಾ ತಾಲೂಕಿನಲ್ಲಿ ಕರನಿರಾಕರಣೆಯನ್ನು ಘೋಷಿಸಿದವರಲ್ಲಿ ಎರಡನೆಯವನು. ಅವನ ತಮ್ಮ ಬೊಳೆ ಬೊಮ್ಮಯ್ಯ ನಾಯಕ ಕೂಡ ಮುಖ್ಯ ಹೋರಾಟಗಾರರಲ್ಲಿ ಒಬ್ಬ.

ನಾಡವರ ಸಮುದಾಯ ಇಂಥದೊಂದು ಚಳುವಳಿಗೆ ಧುಮುಕಲಿಕ್ಕೆ ಏನು ಕಾರಣ?

ಅವರದ್ದು ರೈತಾಪಿ ಸಮುದಾಯವಾಗಿದ್ದು ಒಂದು ಕಾರಣ ಇರಬೇಕು. ಜತೆಗೆ ನಾಡವರು ಒಂದು ವೀರಪರಂಪರೆಯ ಜನ ಅಂತ ಕಾಣಿಸುತ್ತೆ. ವಿಜಯನಗರದಲ್ಲಿ ಕಾದಿದ್ದ ದಂಡಿನವರು ಅಂತ ಹೇಳ್ತಾರೆ. ‘ನಾಯಕ’ ಅಂತ ಹೆಸರು ಬಂದಿದ್ದು ಹೀಗಂತೆ. ಆಮೇಲೆ ರಂ ರಾ ದಿವಾಕರ, ದ ಪ ಕರ್ಮರ್‌ಕರ್, ಶ್ರೀಮತಿ ಕೃಷ್ಣಾಬಾಯಿ ಪಂಜೀಕರ್ ಮೊದಲಾದವರೆಲ್ಲ ಬಂದು ಚಳುವಳಿಗೆ ಸಾಕಷ್ಟು ಪ್ರಚಾರ ಮಾಡಿದರು. ಮೈಸೂರು ಕಡೆಯಿಂದ ವಿಎಸ್ ನಾರಾಯಣರಾವ್, ಎಂ.ಎನ್. ಜೋಯಿಸ್ ಅವರೆಲ್ಲ ಬಂದರು. ಧಾರವಾಡ ಮೈಸೂರು ಕಡೆಯಿಂದ ಬಂದಂತಹವರು ಎಲ್ಲ ಇಂಗ್ಲೀಷ್ ಎಜುಕೇಶನ್ ಇದ್ದೋರು. ಸ್ಥಳೀಯ ಹೋರಾಟಗಾರರೂ ಸೇರಿದ್ರು. ಒಂದು ಹೊಸ ಅಲೆಯನ್ನು ಎಬ್ಬಿಸಿದ್ರು. ಸ್ವಾತಂತ್ರ್ಯ ಹೋರಾಟದ ‘ಸರ್ವಾಧಿಕಾರಿ’ ಎಂದು ಖ್ಯಾತರಾಗಿದ್ದ ಬಾಸಗೋಡ ರಾಮ ನಾಯಕರಂಥ ಅಪ್ರತಿಮ ಹೋರಾಟಗಾರರು ಮುಂದೆ ಬಂದ್ರು. ಈ ರಾಮ ನಾಯಕರು ನನ್ನ ಹೆಂಡತಿ ಮೀರಾಳ ಅಜ್ಜ-ತಾಯಿಯ ತಂದೆ. ಆ ಕಥೆ ಸಂದರ್ಶನದಂಥ ಕಿರು ಅವಕಾಶದಲ್ಲಿ ಹೇಳಿ ಮುಗಿಸುವಂಥದಲ್ಲ. ಅದೊಂದು ಹೋರಾಟದ ಮಹಾ-ವೀರಗಾಥೆ.

ನೀವು ವಿಮರ್ಶಕ ಆದುದರಿಂದಲೊ ಏನೊ ಇವೆಲ್ಲ ಅನುಭವ ಜಗತ್ತು ಕನ್ನಡ ಓದುಗರಿಗೆ ಸಿಗಲಿಲ್ಲ.

ಈಗ ಆತ್ಮಚರಿತ್ರೆ ವಿಸ್ತಾರವಾಗೇ ಬರೀತಾ ಇದೀನಿ. ಅದಿನ್ನೂ ಬಾಲ್ಯದಿಂದಲೇ ಹೊರಗೆ ಬಂದಿಲ್ಲ. ನಾನು ಹುಟ್ಟಿ ಬೆಳೆದು ಬಂದ ಜಾಡನ್ನೆಲ್ಲ ಕಟ್ಟಿ ಕೊಡೋದಕ್ಕೆ ಪ್ರಯತ್ನಿಸುತ್ತಾ ಇದೀನಿ. ಒಂದು ಕಲ್ಚರಲ್ ಎಥೋಸ್‌ನಲ್ಲಿ ಬೆಳದಿದೀನಿ. ಅದು ಇನ್ನು ಮುಂದೆ ಸಿಗೋದಿಲ್ಲ. ರೆಕಾರ್ಡ್ ಮಾಡಿದರೇನೇ ಉಳಿದುಕೊಳ್ಳೋದು. ಆ ತರಹದಲ್ಲಿ ಬರೀತಾ ಇದೀನಿ. ಯಾವಾಗ ಮುಗಿಯುತ್ತೋ ನೋಡೋಣ. ನಾನು ಬಹಳ ನಿಧಾನಿ.

ಉತ್ತರ ಕನ್ನಡದವರು ಓದೋಕೆ ಮುಂಬೈಗೊ ಧಾರವಾಡಕ್ಕೊ ಹೋಗೋದು ಇತ್ತು. ನೀವು ಮೈಸೂರಿನ ಕಡೆ ಬಂದ್ರಿ. ದಿಕ್ಕು ಬದಲಾವಣೆಗೆ ಕಾರಣ ಏನು?

ಮೈಸೂರಿಗೆ ಬರೋದು ನಾನಾಗೇ ಯೋಚನೆ ಮಾಡಿದ್ದಲ್ಲ. ನನಗೇನು ಕಾಲೇಜಿಗೆ ಹೋಗಬೇಕು, ಓದಬೇಕು ಎಂಬ ಆಸೆ ದೃಢವಾಗಿಯೇ ಇತ್ತು. ಅಷ್ಟೇ. ನನ್ನ ಅಕ್ಕಂದಿರಲ್ಲಿ ಕಿರಿಯವಳ ಗಂಡ ಮುಂಬಯಿಯ ಜೋಗೇಶ್ವರಿಯಲ್ಲಿ ಇರುವ ಇಸ್ಮಾಯಿಲ್ಲ ಯುಸೂಫ್ ಕಾಲೇಜಿನಲ್ಲಿ ಮೆಥಮೆಟಿಕ್ಸ್ ಪ್ರೊಫೆಸರ್ ಆಗಿದ್ದ. ಕಾಲೇಜ್ ಲೆಕ್ಚರರ್‌ಗೂ ನಮ್ಮ ಕಡೆಯಲ್ಲಿ ಪ್ರೊಫೆಸರ್ ಅನ್ನುತ್ತಿದ್ದರು. ಈಗಲೂ ಆ ರೂಢಿ ಹೋಗಿಲ್ಲ. ಅವನು ನಾಡವರ ಜಾತಿ ಸಮುದಾಯದಲ್ಲಿ ಮೊದಲ ಕಾಲೇಜ್ ಅಧ್ಯಾಪಕನಾಗಿದ್ದ. ಅವನಿಗೆ ಬುದ್ಧಿಭ್ರಮಣೆ ಆಯ್ತು. ಬೇರೆ ದಾರಿ ಕಾಣದೆ ಧಾರವಾಡದ ಹುಚ್ಚಾಸ್ಪತ್ರೆಗೆ ಸೇರಿಸಿದ್ರು. ಅಲ್ಲಿಯೇ ತೀರ್ಕೊಂಡ. ಅಕ್ಕನ ಬಾಳು ಭಗ್ನವಾಯ್ತು. ಮುಂಬಯಿಗೆ ಹೋಗಿ ಕಾಲೇಜು ಶಿಕ್ಷಣ ಮುಂದುವರಿಸಬಹುದು ಅಂತ ನಾನು ಕನಸು ಕಟ್ಟಿಕೊಂಡಿದ್ನಲ್ಲಾ ಅದೂ ಭಗ್ನವಾಯ್ತು. ಆಗ ಸ.ಪ. ಗಾಂವಕರ್ ಅಂತ ನಮ್ಮ ಕಡೆಯವರು, ಕನ್ನಡದ ಕವಿ ಅವರು, ನನ್ನ ಜೀವನದಲ್ಲಿ ಪ್ರವೇಶವಾದರು. (ಭಾವುಕ ದನಿಯಲ್ಲಿ) ನಾನು ನನ್ನ ಬದುಕಿನಲ್ಲಿ ಅಷ್ಟು ದೊಡ್ಡವರನ್ನು ನೋಡಿಲ್ಲ. ನಿಜವಾಗಿಯೂ ಅಸೀಮ ಅಂತಃಕರಣದ ವ್ಯಕ್ತಿತ್ವ ಅವರದು. ಅವರು ರವೀಂದ್ರನಾಥ ಟಾಗೂರರ ‘ಗೀತಾಂಜಲಿ’ ಅನುವಾದ ಮಾಡಿದೋರು. ಜಾತಿ ಮತಧರ್ಮ ಅಂತ ತಲೆಗೆ ಹಾಕ್ಕೊಳ್ತಿರಲಿಲ್ಲ. ಕಷ್ಟದಲ್ಲಿರೋರು ಯಾರು ಬಂದರೂ ಸಹಾಯ ಮಾಡತಿದ್ರು. ನಾನು ಹೈಸ್ಕೂಲಿನಲ್ಲಿದ್ದಾಗ ಕವನಗಳನ್ನು ಬರೀತಾ ಇದ್ದೆ. ಗೋಪಾಲಕೃಷ್ಣ ಅಡಿಗರು ಇಂಗ್ಲಿಷ್ ಪ್ರೊಫೆಸರಾಗಿ ಕುಮಟೆಯ ಕೆನರಾ ಕಾಲೇಜಿನಲ್ಲಿ ಇದ್ದರಲ್ಲ, ವಿದ್ಯಾರ್ಥಿ ಕವಿಗೋಷ್ಠಿಗೆ ಅಂತ ನಮ್ಮ ಸ್ಕೂಲಿಗೆ ಬಂದಿದ್ದರು. ನಾವೆಲ್ಲ ಕವನ ಓದಿದೆವು. ಕವಿಗೋಷ್ಠಿ ಆದಮೇಲೆ ನನ್ನೊಬ್ಬನ ಕವನ ಚೆನ್ನಾಗಿದೆ., ಇನ್ನುಳಿದವರದು ಸರಿಯಿಲ್ಲ. ಅನಭವಕ್ಕೆ ಸಂಬಂಧಪಟ್ಟದ್ದಲ್ಲ ಅಂತ ಏನೊ ಅಡಿಗರು ಭಾಷಣದಲ್ಲಿ ಹೇಳಿದರು. ಗಾಂವಕರ್ ಆ ಸಭೆಯಲ್ಲಿ ಕೂತಿದ್ದರು. ಅವರೂ ಕವಿ ತಾನೇ? ಸಭೆ ಮುಗೀತಿದ್ದ ಹಾಗೇನೆ ತಾವಾಗಿ ಬಂದು, ನನ್ನನ್ನು ಅರೆತಬ್ಬಿಕೊಂಡು ಮಾತಾಡಿಸಿದರು. ಅಲ್ಲಿಂದ ನನ್ನ ಮೇಲೆ ಅವರಿಗೆ ಪ್ರೀತಿ. ನಾನು ಕಾಲೋಜೋದೋಕೆ ಬೆಳಗಾವಿಗೆ ಹೋದರೆ ಅಂತ ಅಲ್ಲಿನ ನಾಗನೂರು ಮಠದಲ್ಲಿ ಊಟದ ವ್ಯವಸ್ಥೇನೂ ಮಾಡಿದ್ರು. ಆದರೆ ನಾನು ಮೈಸೂರಿಗೆ ಹೋಗಬೇಕು, ದೊಡ್ಡಕವಿಯಾಗಬೇಕು ಅಂತ ಅವರಿಗೆ ಆಸೆ. ಅಷ್ಟೊತ್ತಿಗಾಗಲೇ ಅಡಿಗರು ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿಗೆ ಬಂದಿದ್ದರು. ಆಗ ಗಾಂವಕರರು ಮೈಸೂರಿನ ಟಿ.ಎಸ್. ಸುಬ್ಬಣ್ಣನವರ ಸಾರ್ವಜನಿಕ ಹಾಸ್ಟಲಿಗೆ ಸೇರೋಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿದುರ. ಹಂಗಾಗಿ ಆ ಕಡೆ ಹೊರಟೋನು, ಈ ಕಡೆ ಬಂದೆ. ಆ ಕಾಲದಲ್ಲಿ ನನ್ನಪ್ಪನ ಆರ್ಥಿಕ ಸ್ಥಿತಿ ಕೆಟ್ಟು ದರಿದ್ರಾವಸ್ಥೆಯಲ್ಲಿತ್ತು. ಆಗ ಪಾರ್ವತಿ ಎಂಬ ವಿಧವೆ ಕುಂಬಾರವಳು, ನಮ್ಮೂರಿನ ಬೀರದೇವರ ಗುನಗನ ಅಂದರೆ ಪೂಜಾರಿಯ ಮಗಳು, ಇನ್ನೂರು ರೂಪಾಯಿ ಸಾಲ ಕೊಟ್ಟಳು. ಅವಳ ಗಂಡ ಫಾರೆಸ್ಟ್ ಗಾರ್ಡ್ ಆಗಿದ್ದವನು. ತೀರಿ ಹೋಗಿದ್ದ. ಆ ಪಾರ್ವತಕ್ಕ ಈಗಲೂ ಇದ್ದಾಳೆ. ನನ್ನ ವಿಷಯದಲ್ಲಿ ಅಪಾರ ಪ್ರೀತಿ, ಅಭಿಮಾನ ಈಗಲೂ ತೋರಿಸ್ತಾಳೆ. ಗಾಂವಕರರ ಹಾಗೆ ಅವಳನ್ನೂ ನೆನೆಯುತ್ತಿರುತ್ತೇನೆ. ಗಾಂವಕರ್ ಕುವೆಂಪು ಅಭಿಮಾನಿ, ಬರುವಾಗ ಅವರು “ಕುವೆಂಪು ಅವರನ್ನು ಗುರುವಾಗಿ ಮಾಡ್ಕೋಬೇಕು, ಕವಿಯಾಗಿ ಬೆಳೀಬೇಕು” ಅಂತ ಹೇಳಿ ಮತ್ತೆ “ಅಡಿಗರೂ ಪ್ರತಿಭಾವಂತ ಕವಿ, ಆದರೂ ಕುವೆಂಪು ದಾತಿ ಆತ್ಮೋದ್ಧಾರದ ದಾರಿ” ಎಂದು ಹೇಳಿದ್ರು.

ಆಮೇಲೆ? ಮೈಸೂರಿಗೆ ಬಂದಮೇಲೆ ಕುವೆಂಪು ಅವರನ್ನ ಭೇಟಿಯಾದಿರಾ?

ಬಂದೋನೇ ಕುವೆಂಪು ಇದ್ದಲ್ಲಿ ಹೋಗಿದ್ದೆ, ಕಾವ್ಯ ಗುರುವಾಗಿ ಅಂತ ಕೇಳ್ಕೊಳೋಕೆ (ನಗು). ‘ಕುವೆಂಪು ಯಾರನ್ನೂ ಮಾತಾಡಿಸಲ್ಲ’ ಅಂತೆಲ್ಲ ಹೇಳೋರು. ೧೯೫೪ ಆಗಸ್ಟ್ ೮ನೇ ತಾರೀಕು ಭಾನುವಾರ ಬೆಳಿಗ್ಗೆ ಕುವೆಂಪು ಇದ್ದಲ್ಲಿ ಹೋದೆ. ಹೋಗಿ ಗೇಟ್ ಹತ್ತಿರ ನಿಂತೆ, ಕುವೆಂಪು ಯಾರದೊ ಜೊತೆಯಲ್ಲಿ ಹುಲ್ಲುಹಾಸಿನ ಮೇಲೆ ಬೆತ್ತದ ಕುರ್ಚಿ ಹಾಕಿಬಿಟ್ಟು ಕೂತಿದ್ದರು. ಅವರು ಪ್ರಭುಶಂಕರ ಅಂತ ಆಮೇಲೆ ಗೊತ್ತಾಯಿತು. ಕುವೆಂಪು ನನ್ನನ್ನು ನೋಡಿದವರೇ ‘ಬಾ’ ಅಂತ ಕೈಸನ್ನೆ ಮಾಡಿದರು. ನಾಲ್ಕು ಕವನಗಳನ್ನು ಚೆಂದ ಅಕ್ಷರಗಳಲ್ಲಿ ಬರೆದುಕೊಂಡು ರೆಡಿ ಮಾಡಿಕೊಂಡು ಹೋಗಿದ್ದೆ. ಹೋದ ತಕ್ಷಣ ಅವರಿಗೆ ಕೊಡಲು ಕೈಯನ್ನ ಮುಂದೆ ಚಾಚಿ “ಸಾರ್, ನನ್ನನ್ನು ಅಂಕೋಲೆಯ ಸ.ಪ. ಗಾಂವಕರ್ ಕಳ್ಸಿದಾರೆ. ನಾನು ಕವನ ಬರೀತೀನಿ. ತಾವು ನನಗೆ ಗುರು ಆಗಬೇಕು” ಅಂತ ಒಂದೇ ಸಲ ಪಟಪಟ ಅಂತ ಹೇಳಿದೆ. ಅವರು ನೇರವಾಗಿ ಉತ್ತರವನ್ನೂ ಹೇಳಲಿಲ್ಲ. ಪ್ರಭುಶಂಕರ್ ಕಡೆ ತಿರುಗಿ ‘ಅಧ್ಯಾತ್ಮಕ್ಕೆ ಗುರು ಬೇಕು, ಕಾವ್ಯಕ್ಕೆ ಗುರು ಬೇಕೇಬೇಕು ಎಂದೇನು ಇಲ್ಲ’ ಅಂತ ಹೇಳಿದರು. ನನ್ನ ಕಡೆ ತಿರುಗಿ ‘ಒಳಗಡೆ ಪ್ರತಿಭೆಯ ಕಿಡಿ ಇದ್ರೆ ತನಗೆ ತಾನೆ ಒಂದು ರೂಪ ಪಡೆದುಕೊಳ್ತದೆ. ಹಿರಿಯರು ಬರೆದ ಕಾವ್ಯ ಓದುತ್ತಿರಬೇಕು’ ಅಂದುಬಿಟ್ಟರು. ಕೊನೆಗೆ ಗಾಂವಕರ್ ಬಗ್ಗೆ ಎಲ್ಲಾ ಕೇಳಿದರು.

ಗಾಂವಕರ್ ರಮ್ಯ ಸಂಪ್ರದಾಯದಲ್ಲಿ ಕವಿತೆ ಬರೀತಿದ್ದೋರು ಅಂತ ಗೊತ್ತಿದೆ. ಅವರು ಸಾರ್ವಜನಿಕ ವ್ಯಕ್ತಿಯಾಗಿ ಏನಾಗಿದ್ದೋರು ಗೊತ್ತಿಲ್ಲ.

ಅವರು ಕನ್ನಡ ಶಾಲೆ ಮಾಸ್ತರಾಗಿ ಇನ್ಸ್‌ಪೆಕ್ಟರಾಗಿ ರಿಟೈರಾದವರು. ಚಲೇಜಾವ್ ಚಳವಳಿಯಲ್ಲಿ ಹೋರಾಟಕ್ಕಿಳಿದು ಜೈಲುಶಿಕ್ಷೆ ಅನುಭವಿಸಿದವರು. ಆಮೇಲೆ ಎಂಎಲ್‌ಎ ಆದರು. ಪಾರ್ಲಿಮೆಂಟರಿ ಸೆಕ್ರೆಟರಿಯಾದರು-ಬಿ.ಜಿ.ಖೇರ್ ಅವರ ಗವರ್ಮೆಂಟಿನಲ್ಲಿ. ಉತ್ತರ ಕರ್ನಾಟಕದಲ್ಲಿ ಕರ್ನಾಟಕದ ಏಕೀಕರಣದ ಬಹುದೊಡ್ಡ ಹೋರಾಟಗಾರರಲ್ಲಿ ಅವರೂ ಒಬ್ಬರು. ಮುಖ್ಯವಾಗಿ ಸಾಮಾಜಿಕವಾಗಿ ದೊಡ್ಡ ಕೆಲಸ ಮಾಡಿದವರು. ಎಷ್ಟು ಜನರನ್ನು ಓದಿಸಿದ್ದಾರೆ ಅಂತ ಲೆಕ್ಕ ಮಾಡಕ್ಕಾಗಲ್ಲ.

ಕುವೆಂಪುಗಾಂವಕರ್ ಅವರಿಗೂ ಯಾವ ತರಹದ ಸಂಬಂಧ ಬಂತು ಸರ್?

ಬಹಳ ಇಂಟರೆಸ್ಟಿಂಗ್. ಗಾಂವಕರ್ ಅವರಿಗೆ ಕುವೆಂಪು ಯಾಕಷ್ಟು ಗೊತ್ತಿತ್ತು ಅಂದರೆ, ಕುವೆಂಪು ಅವರನ್ನ ಒಬ್ಬಳು ಲವ್ ಮಾಡ್ತಾ ಇದ್ದಳು, ಕೊಡಗಿನವಳು. ಅದು ಒನ್ ಸೈಡೆಡ್ ಲವ್. ಬಹಳ ಚೆಂದ ಇದ್ಲಂತೆ. ಕುವೆಂಪು ಮದುವೆಯಾಗಲ್ಲ ಅಂತ ಇತ್ತಲ್ಲ, ಅವಳಿಗೆ ಹೋಗಿ ಕೇಳ್ಲಿಕ್ಕೆ ಧೈರ್ಯಾನೆ ಬರಲಿಲ್ಲ. ಆಕೆ ಗಾಂವಕರ್ ಹತ್ತ ಹೋಗಿ ‘ನಾನು ಅವರನ್ನ ಇಷ್ಟಪಟ್ಟಿದೀನಿ. ನೀವೇನಾದರೂ ಮಾಡಿ’ ಅಂತ ಹೇಳಿದಾಗ, ಗಾಂವಕರರು ಕುವೆಂಪು ಅವರಿಗೆ ಪತ್ರ ಬರೆದಿದ್ದರಂತೆ. ಗಾಂವಕರ್ ಅವರು ಆ ಕಾಲದಲ್ಲಿ ಆರ್ಯಧರ್ಮದ ಪ್ರಚಾರಕರಾಗಿದ್ರು. ಕುವೆಂಫು ತಮ್ಮ ಜೀವನದ ತತ್ವಗಳ ಬಗ್ಗೆ ಸಿದ್ಧಾಂತಗಳ ಬಗ್ಗೆ ಹೇಳ್ಕೊಂಡು, ಕೊನೆಗೆ ‘ನನ್ನನ್ನು ಬಲ್ಲ ನಿಮಗೆ ಈ ವಿಷಯದಲ್ಲಿ ಏನೂ ಹೇಳಬೇಕಾದ್ದಿಲ್ಲ’ ಅಂತ, ಒಟ್ನಲ್ಲಿ ಮದುವೆ ಬಗ್ಗೆ ಯೋಚ್ನೇ ಮಾಡ್ತಾ ಇಲ್ಲ ಅನ್ನೋ ತರಹ, ಏನೋ ಬರೆದಿದ್ದರಂತೆ. ಅದು ನನಗೆ ಆಮೇಲೆ ಊರಿಗೆ ಬಂದ ಮೇಲೆ ಗಾಂವಕರರಿಂದ ಗೊತ್ತಾಯಿತು. ಗಾಂವಕರ್ ಒಬ್ಬ ಭಾವಜೀವಿ. ಅಧ್ಯಾತ್ಮ ಹೇಳುತಿದ್ದರಷ್ಟೇ ಅಲ್ಲ, ಅದನ್ನ ಬಾಳ್ತಿದ್ದವರು. ಹಾಗಾಗಿ ಕುವೆಂಪು, ಕುವೆಂಪು ಕಾವ್ಯ ಅಂದ್ರೆ ಅವರಿಗೆ ಅಭಿಮಾನ.

ಕಾಲೇಜಲ್ಲಿ ಕುವೆಂಪು ನಿಮಗೆ ಗುರುಗಳಾಗಿದ್ದರಾ?

ಇಲ್ಲ. ಅವರು ೧೯೫೫ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದರು. ೧೯೫೬ರಲ್ಲಿ ನಾನು ಆ ಕಾಲೇಜಿಗೆ ಬರತಾ ಇದ್ದಾಗೇನೆ ವೈಸ್ ಛಾನ್ಸಲರಾಗಿ ಹೊರಟು ಹೋದರು. ಆಗ ತೀನಂಶ್ರೀ ಇನ್ನೂ ಬಂದಿರಲಿಲ್ಲ. ಅವರು ಕರ್ನಾಟಕ ಯೂನಿವರ್ಸಿಟಿಗೆ ಪ್ರೊಫೆಸರಾಗಿ ಹೋದವರು ಆಮೇಲೆ ಬಂದ್ರು. ಡಿ.ಎಲ್. ನರಸಿಂಹಾಚಾರ್, ತೀನಂಶ್ರೀ ಇವರಿಬ್ಬರೇ ನಮಗೆ ಗಟ್ಟಿಯಾದ ಪ್ರಾಧ್ಯಾಪಕರು. ಇವರ ಪಾಠದ ಬಗ್ಗೆ, ವಿದ್ವತ್ತಿನ ಬಗ್ಗೆ, ಬಹಳ ಗೌರವ ನಮಗೆ. ವ್ಯಕ್ತಿಯಾಗಿ ಡಿಎಲ್‌ಎನ್ ಹೆಚ್ಚು ಹತ್ತಿರಕ್ಕೆ ಬಂದೋರು. ಏಕವಚನದಲ್ಲೇ ಮತಾಡಿಸ್ತಿದ್ರೂ ಅವರ ಬಗ್ಗೆ ಪೇರೆಂಟಲ್ ಫೀಲಿಂಗ್ ಇರೋದು. ಜಾತಿ ಭಾವನೆಗಳು ಏನೂ ಸೋಕದೆ ಇದ್ಧಂಥ ಮೇಷ್ಟ್ರು ಅವರು. ವಿದ್ವತ್ತಿಗಿಂತ ಅವರ ಸಮಭಾವ, ಅಫೆಕ್ಷನ್ ಇತ್ತಲ್ಲ, ಅದು ಬಹಳ ಗೌರವ ಹುಟ್ಟಿಸುವಂತಹದ್ದು. ಅವರ ಮುಗುಳು ನಗುವಿನದೇ ಒಂದು ಅಪರೂಪದ ಸೊಗಸು.

ತೀನಂಶ್ರೀಯವರು ಸಾಮಾಜಿಕವಾಗಿ ಅಷ್ಟು ಉದಾರವಾಗಿರಲಿಲ್ಲ ಅಂತ ಅನೇಕರು ಕಾಮೆಂಟ್ ಮಾಡಿರೋದನ್ನ ಓದಿದ್ದೇನೆ.

ಅದೇನಂತ ನಾನು ಹತ್ತಿರದಿಂದ ವಿಶ್ಲೇಷಣೆ ಮಾಡಿ ಹೇಳಲಾರೆ. ನನಗೂ ಹಿತವಲ್ಲದ ಅನುಭವ ಒಂದೆರಡು ಸಂದರ್ಭಗಳಲ್ಲಿ ಆದದ್ದಿದೆ. ತರಗತಿಯಲ್ಲಿ ಮಾತ್ರ ಬಹಳ ಕ್ರಮಬದ್ಧತೆ ಶಿಸ್ತು ಅನುಕರಿಸೋ ಹಾಗಿತ್ತು. ನಮಗೆ ಸಲುಗೆ ಅಂತ ಮಾಡ್ಕೊಳ್ಳಿಕ್ಕೆ ಆಗಲಿಲ್ಲ. ಡಿಎಲ್‌ಎನ್ ಹತ್ತಿರಾನೂ ಸಲುಗೆ ಇರಲಿಲ್ಲ. ಆದರೆ ಅವರು ಸುಮ್ನೆ ‘ಏನಯ್ಯಾ ಚೆನಾಗಿದೀಯಾ?’ ಅಂತ ಕೇಳಿದರೇನೇ ಹಿತವಾದ ಭಾವನೆ ಬರತಾ ಇತ್ತು. ನನ್ನ ಕ್ಲಾಸ್‌ಮೇಟ್ ಮಿತ್ರ ಬಿವಿ ವೈಕುಂಠರಾಜುಗೆ ಡಿಎಲ್‌ಎನ್ ಬಗ್ಗೆ ಅಪಾರ ಗೌರವ. ಅಷ್ಟೇ ಸಲುಗೆ ಇತ್ತು. ಆರು ಜನ ಹೆಣ್ಣು ಮಕ್ಕಳ ತಂದೆಯಾಗಿದ್ದ ಡಿಎಲ್‌ಎನ್ ಅವರು ವೈಕುಂಠರಾಜುವನ್ನ ಸ್ವಂತ ಮಗನೊ ಎಂಬಂಥ ಪ್ರೀತಿ ವಾತ್ಸಲ್ಯದಿಂದ ಕಾಣುತ್ತಿದ್ದರು. ಅವರ ತುಂಟತನಗಳನ್ನೆಲ್ಲ ಅವರು ಮುಗುಳು ನಗೆಯ ಲೇಪದಲ್ಲಿ ಲೇವಡಿ ಮಾಡುವ, ಛೇಡಿಸುವ ರೀತಿ ಅನನ್ಯವಾಗಿತ್ತು. ವೈಕುಂಠರಾಜು ಜಾತಿಯಿಂದ ಬ್ರಾಹ್ಮಣನಲ್ಲ. ಅದು ಅವರಿಗೂ ಗೊತ್ತಿತ್ತು. ಒಟ್ಟಿನಲ್ಲಿ ತೀನಂಶ್ರೀಗಿಂತ ಡಿಎಲ್‌ಎನ್ ನಮಗೆ ಹೆಚ್ಚು ಪ್ರಿಯರಾಗಿದ್ದರು.

ಶಿವರುದ್ರಪ್ಪ, ಪ್ರಭುಶಂಕರ್ ಕೂಡ ಆಗ ಮಹಾರಾಜಾಸ್ನಲ್ಲಿ ಇದ್ರು

ಹೌದು, ಇದ್ರು, ಶಿವರುದ್ರಪ್ಪನವರು ಎಳೆಯ ತಲೆಮಾರಿನವರಲ್ಲಿ ಸಮರ್ಥರು ಅಂತ ಅನಿಸೋದು. ಆಗ ನನಗೆ ಇಷ್ಟವಾದ ವ್ಯಕ್ತಿ ಹಾಗೂ ಮೇಷ್ಟು ಅವರು. ತುಂಬು ಶ್ರದ್ಧೆಯಿಂದ ಪಾಠ ಮಾಡೋರು. ಸಾಹಿತ್ಯ ಸಂಬಂಧವಾದ ಎಷ್ಟೋ ಹೊಸ ವಿಷಯಗಳನ್ನು ಹೇಳೋರು. ಸ್ವತಃ ಕವಿಬೇರೆ ಆಗಿದ್ದರಲ್ಲವಾ? ಅವರ ಬಗ್ಗೆ ನಮಗೆ ಕುತೂಹಲ, ಆಸಕ್ತಿ ಇತ್ತು. ಆದರೆ ನಾನು, ಎಚ್‌ಎಂ ಚನ್ನಯ್ಯ ನವ್ಯದ ಅಡಿಗರು- ಅನಂತಮೂರ್ತಿಯವರ ಪ್ರಭಾವಕ್ಕೆ ಒಳಗಾಗಿ ಬಿಟ್ಟಿದ್ದೆವು. ಮುಂದೆ ಶಿವರುದ್ರಪ್ಪನವರು ಸಾಹಿತಿಯಾಗಿ, ಬೆಂಗಳೂರಿನ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಮೌಲಿಕ ಸಾಧನೆ ಮಾಡಿದರು. ಅನೇಕ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸಿದರು. ೧೯೭೨ರಲ್ಲಿ ತಾವಾಗಿ ನನ್ನನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ‘ಬಾ’ ಎಂದು ಕರೆಯುವಂಥ ಸದ್ಭಾವನೆಯನ್ನು ತೋರಿಸಿದ್ದರು. ಕಾರಣಾಂತರದಿಂದ ನಾನು ಒಪ್ಪಿಕೊಂಡಿರಲಿಲ್ಲ. ನಮಗೆ ಪ್ರಭುಶಂಕರ ಕೂಡ ಇದ್ದರು ಮೇಷ್ಟ್ರಾಗಿ. ಕುವೆಂಪು ಪ್ರಭಾವ ವಲಯದಿಂದ ಅವರಿನ್ನೂ ಬಿಡುಗಡೆ ಪಡ್ಕೊಂಡ ಹಾಗೆ ಕಾಣ್ತಿರಲಿಲ್ಲ. ನಮ್ಮ ಗುರುಗಳಲ್ಲೆಲ್ಲ ಅವರು ತುಂಬ ಉದಾರಿ, ಧೈರ್ಯಶಾಲಿ.

ಗ್ರಾಮೀಣ ಪ್ರದೇಶದಿಂದ ಬಂದ ನಿಮಗೆ ರೊಮ್ಯಾಂಟಿಕ್ ಕವಿಗಳೆ ಮೊದಲು ಸೆಳೀಬೇಕಾಗಿತ್ತು. ಬದಲಾಗಿ ನವ್ಯ ಲೇಖಕರಾದ ಅನಂತಮೂರ್ತಿ ನಿಮ್ಮನ್ನು ಸೆಳೆದರು. ಇದು ಹ್ಯಾಗೆ ಸಾಧ್ಯವಾಯ್ತು?

ನಾನು ಟಿಎಸ್ ಸುಬ್ಬಣ್ಣನವರ ಸಾರ್ವಜನಿಕ ಹಾಸ್ಟೆಲಿಗೆ ಹೋದಾಗ, ಅಲ್ಲಿ ಅನಂತಮೂರ್ತಿ ಓದ್ತಾ ಇದ್ದರು. ಅವರ ಪರಿಚಯ ಮೊದಲಾಗಿದ್ದು ಅಲ್ಲೆ. ಅವರು ಥರ್ಡ್ ಆನರ್ಸಿನಲ್ಲಿ ಇದ್ದರು. ಅವರು ಹಾಸ್ಟೆಲಿನಲ್ಲಿ ನಡೆಯೋ ಆಗಸ್ಟ್ ೧೫ರ ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು. ನನಗೆ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಇದ್ದುದರಿಂದ ಉತ್ಸಾಹ ಇತ್ತಲ್ಲ, ನಾನೂ ಭಾಷಣ ಮಾಡಿದೆ. ‘ಅನಂತಮೂರ್ತಿ ಎಷ್ಟು ಚೆನ್ನಾಗಿ ಮಾತಾಡ್ತಾರಪ್ಪ, ಮೈಸೂರು ಭಾಷೆ ಎಷ್ಟು ಚೆಂದ. ನಾನೂ ಹಂಗೆ ಮಾತಾಡಲು ಕಲೀಬೇಕಲ್ಲಾ’ ಅಂತ ಅನಿಸ್ತು. ನನಗೆ ಅದೇ ವರ್ಷ ಇಂಟರ್ ಹಾಸ್ಟೆಲಿನ ಡಿಬೇಟ್‌ನಲ್ಲಿ ಫಸ್ಟ್‌ಪ್ರೈಜ್ ಬಂತು. ಸಿಲ್ವರ್ ಕಪ್ಪು. ಅನಂತಮೂರ್ತಿ ನನಗೆ ವಿಷಯ ಹೇಳಿಕೊಟ್ಟಿದ್ದರು. ಆಗ ನನಗೆ ‘ಇವರೆಷ್ಟು ದೊಡ್ಡವರು’ ಅಂತ ಭಾವನಾತ್ಮಕವಾಗಿ ಗೌರವ ಬಂತು. ಊಟ ಮಾಡುವಾಗ ಒಂದೊಂದು ದಿನಾ ನನ್ನ ಪಕ್ಕದಲ್ಲಿ ಕೂರೋರು. ಹಾಸ್ಟೆಲಲ್ಲಿ ಊಟಕ್ಕೆ ರಾಗಿ ಮುದ್ದೆ ಬೇಕಷ್ಟು ಹಾಕೋರು. ಅನ್ನಕ್ಕೆ ಮಾತ್ರ ಲಿಮಿಟ್. ಒಂದೇ ಅಳತೆ ಪ್ರಮಾಣ. ರಾಗಿಮುದ್ದೆ ಗೊತ್ತಿಲ್ಲದ ಕಡೆಯಿಂದ ಬಂದಿದ್ದೋನು ನಾನು. ಮುದ್ದೆ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳೋಕೆ ಸ್ವಲ್ಪ ಕಾಲ ಬೇಕಾಯ್ತು. ಹಾಗಾಗಿ ಹೊಟ್ಟೆ ತುಂಬಾ ಊಟ ಆಗ್ತಿರಲಿಲ್ಲ. ಹಸಿವೆ ಜಾಸ್ತಿ ಆಗ್ತಿತ್ತು. ಅನಂತಮೂರ್ತಿ ಎರಡೊ ಮೂರೊ ಸಲ ತಮ್ಮ ಅನ್ನವನ್ನು ತೆಗೆದು ಸ್ವಲ್ಪ ನನಗೆ ಹಾಕಿದ್ದರು. ಭಾವನಾತ್ಮಕವಾಗಿ ಅನಂತಮೂರ್ತಿ ಹತ್ತಿರ ನನಗೆ ಆದದ್ದಕ್ಕೆ, ಅವರ ಮೇಲೆ ಇಂಟಿಮೇಟ್ ಭಾವನೆಗಳು ಬೆಳೆದಿದ್ದಕ್ಕೆ, ಇದೂ ಒಂದು ಕಾರಣ ಇರಬಹುದು. ಜೊತೆಗೆ, ಕಾಲೇಜಿಗೆ ಹೋಗುವಾಗ ಅವರ ಜೊತೆಯಲ್ಲೆ ಹೆಚ್ಚಾಗಿ ಹೋಗ್ತಿದ್ದೆ. ಕುವೆಂಪು ಬೇಂದ್ರೆ ಕಾರಂತ ಮಾಸ್ತಿ ಅಡಿಗ ಎಂದು ಹೆಸರು ಹೇಳಬಹುದಾದಷ್ಟು ಆಸಕ್ತಿ ಇತ್ತು. ಒಂದಷ್ಟು ಸಾಹಿತ್ಯದ ಓದಿನ ಹಿನ್ನೆಲೆ ನನಗೆ ಆಗಲೇ ಇತ್ತು. ಸಾಹಿತ್ಯದ ಬಗ್ಗೆ ಅನಂತಮೂರ್ತಿ ಉತ್ಸಾಹದಿಂದ ಪರಿಣಾಮಕಾರಿಯಾಗಿ ಮಾತಾಡ್ತಿದ್ದರು. ಹೊಸ ಹೊಸ ವಿಚಾರಗಳನ್ನು ಹೇಳ್ತಾ ಇದ್ರು. ‘ಪ್ರಬುದ್ಧ ಕರ್ನಾಟಕ’ದಲ್ಲಿ, ಅಲ್ಲಿ ಇಲ್ಲಿ ಅವರ ‘ಎಂದೆಂದೂ ಮುಗಿಯದ ಕಥೆ’ ಸಂಕಲನದ ಕಥೆಗಳು ಒಂದೊಂದೇ ಪ್ರಕಟವಾಗ್ತಾ ಇದ್ದವು. ಓದ್ತಾ ಇದ್ದೆ. ಶಿವರುದ್ರಪ್ಪ, ಪ್ರಭುಶಂಕರ್ ಇವ್ರೆಲ್ಲ ನನಗೆ ಗುರುಗಳಾದದ್ದು ೧೯೫೬ರಿಂದ. ಅನಂತಮೂರ್ತಿ ಸಂಬಂಧ ೧೯೫೪ ರಿಂದ ಪ್ರಾರಂಭವಾದದ್ದು.

ನೀವು ಪದ್ಯ ಬರೀತಾ ಇದ್ದೋರು. ಯಾಕೆ ನಿಲ್ಲಿಸಿದಿರಿ?

ನಾನು ಕವನ ಬರೀತಿದ್ದದ್ದೇ ಛಂಧೋಬದ್ಧವಾಗಿ. ನವೋದಯದವರ ರೀತಿಯಲ್ಲಿ “ನೂರು ಸೀರೆಯ ಓರೆನೋಟ ಕರೆಯುತ್ತಿಹುದು ಬಾರೊ ಬೃಂದಾವನಕೆ ಕೃಷ್ಣನಾಗು” “ಹೂವನು ಹೂವೇ ಕೊಯ್ಯುವುದೇನೊ ಏನೋ ಎಂಬಂತೆ ಆ ಕಿರುಬೆರಳುಗಳೆಲ್ಲವು ಕಾಂಬವು ಸುಮದಾ ಎಸಳಂತೆ” – ಈ ತರಹ ಎಲ್ಲ ಕವನ ಬರೀತಿದ್ದೆ. ಒಂದ್ಸಲ ‘ಕಿಂದರಿ ಜೋಗಿ’ ಅಂತ ಒಂದು ಕವನ ಬರೆದು ಅನಂತಮೂರ್ತಿಗೆ ತೋರಿಸ್ದೆ. ಕುವೆಂಪು ಕವನದಲ್ಲಿ ಒಬ್ಬ ಕುಂಟ ಬರ್ತಾನಲ್ಲ, ನಾನೂ ಅವನ ತರಹ ಹೆಳವ ಅಂತಿಟ್ಕೊಂಡು ಏನೇನೊ ಆಧ್ಯಾತ್ಮಿಕವಾಗಿ ಬರೆದಿದ್ದೆ. ಅನಂತಮೂರ್ತಿ ಓದಿ ‘ಚೆನ್ನಾಗಿದೆ. ಆದರೆ ನಾಯಕರೆ, ಈ ಅಧ್ಯಾತ್ಮ ಅನ್ನೋದಿದೆಯಲ್ಲ ಪ್ರಾಮಾಣಿಕ ಅನ್ನಿಸ್ತಾ ಇಲ್ಲ ಈ ವಯಸ್ನಲ್ಲಿ’ ಅಂದ್ರು. ಆ ಕಾಲದಲ್ಲಿ ಅನಂತಮೂರ್ತಿ ಅವರ ಪ್ರಭಾವಕ್ಕೆ ಒಳಗಾಗಿದ್ದರಿಂದ ನನಗೆ ಯೋಚ್ನೆ ಮಾಡೋ ಹಾಗೆ ಆಯ್ತು. ಮುಂದೆ ಕವನ ಬರೆಯೋದರಲ್ಲಿ ಉತ್ಸಾಹ ಕಡಿಮೆ ಆಯ್ತು. ಸ್ವಾರಸ್ಯ ಅಂದರೆ, ಆ ಕವನ ಮೊದಲೇ ನನ್ನ ಗುರುಗಳಾಗಿದ್ದ ಸುಜನಾ ಅವರಿಗೂ ತೋರಿಸಿದ್ದೆ. ಮೆಚ್ಚಿಕೊಂಡು ಅವರು ತೀನಂಶ್ರೀಯವರಿಗೂ ತೋರಿಸಿದ್ದರಂತೆ. ತೀನಂಶ್ರೀ ಚೆನ್ನಾಗಿದೆ ಅಂದ್ರಂತೆ – ತರಗತಿಯಲ್ಲಿಯೇ ಸುಜನಾ ಹಾಗೆ ಹೇಳಿದ್ರು. ಆದ್ರೂ ಯಾಕೊ ಅನಂತಮೂರ್ತಿ ಅಭಿಪ್ರಾಯವೇ ಮುಖ್ಯವಾಗಿ ಕಂಡಿತು. ‘ಅಲ್ಲಮ’, ‘ಗೆಳೆಯ’, ‘ಬೀಟ್ ಪೊಲೀಸ್’, ‘ಎದೆಯಾಳ’, ‘ದಿಲ್ಲಿಯಿಂದ ದೇವಗಿರಿಗೆ’ ಮೊದಲಾದ ಕೆಲವು ಕವನಗಳನ್ನು ಆಮೇಲೆಯೂ ಪ್ರಕಟಿಸಿದ್ದೆ.

ನೀವು ವಿಮರ್ಶೆ ಬರೆಯೋಕೆ ಶುರುಮಾಡಿದ್ದು ಯಾವಾಗ? ನಿಮ್ಮ ಮೊದಲ ವಿಮರ್ಶೆ ಬರಹ ಯಾವುದು ಅಂತ ಕೇಳಬಹುದಾ?

೧೯೫೮-೫೯ರಲ್ಲಿ ಮೂರನೇ ಆನರ್ಸ್ ವಿದ್ಯಾರ್ಥಿ ಆಗಿದ್ದಾಗ ‘ಮಾಸ್ತಿಯವರ ಕಾವ್ಯ’ ಕುರಿತು ಕನ್ನಡ ವಿಭಾಗದವರ ಸಾಹಿತ್ಯ ಗೋಷ್ಠಿಯಲ್ಲಿ ಮಂಡಿಸಲೆಂದು ಒಂದು ಪ್ರಬಂಧ ಬರೆದಿದ್ದೆ. ಅದೇ ನಾನು ಬರೆದ ಮೊದಲ ವಿಮರ್ಶನ ಲೇಖನ. ಗೋಷ್ಠಿ ನಿರ್ವಾಹಕ ಮೇಷ್ಟ್ರು ಶಿವರುದ್ರಪ್ಪನವರು ಪರಿಶೀಲಿಸಿ, ‘ಎ-೧’ ಎಂದು ಶರಾ ಬರೆದಿದ್ರು. ಮಂಡಿಸಿದಾಗ ತೀನಂಶ್ರೀ, ಡಿಎಲ್‌ಎನ್ ಮೆಚ್ಚಿಕೆ ಸೂಚಿಸಿದರು. ಅದರಿಂದಾಗಿ ಪ್ರಬಂಧಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿತು. ‘ಪ್ರಬುದ್ಧ ಕರ್ಣಾಟಕ’ಕ್ಕೆ ಕೊಡುವುದಕ್ಕೆ ತೀನಂಶ್ರೀಯವರೇ ಹೇಳಿದ್ದರಿಂದ ಕೊಟ್ಟೆ. ದೊಡ್ಡ ಲೇಖಕರ ಬಗ್ಗೆ ಹೆಚ್ಚು ವಿಮರ್ಶಾತ್ಮಕವಾಗಿದೆ ಎಂಬ ಕಾರಣದಿಂದಾಗಿ ಪ್ರಕಟವಾಗಲಿಲ್ಲ. ಆಗ ಸುಜನಾ ಸಂಪಾದಕರೆಂದು ನೆನಪು. ಲೇಖನ ವಾಪಸ್ಸು ಇಸಕೊಂಡೆ. ಅದೇ ಒಂದು ಸುದ್ಧಿಯಾಯಿತು. ಆಗ ಇಂಗ್ಲೀಷ್ ಎಂಎ ವಿದ್ಯಾರ್ಥಿಯಾಗಿದ್ದ ಪಿ. ಲಂಕೇಶ್ ಆ ಲೇಖನದ ಬಗ್ಗೆ ಆಸಕ್ತಿ ತಾಳಿ ಓದಿ ಚರ್ಚಿಸಿ ಒಂದೊ ಎರಡೊ ಚಿಕ್ಕ ಬದಲಾವಣೆ ಸೂಚಿಸಿದರು.ಸ ಅವರು ಯಾರೊ ಆಸಕ್ತಿ ತೋರಿದ್ದರಿಂದ ಮಹಾರಾಜ ಕಾಲೇಜಿನ ಕರ್ನಾಟಕ ಸಂಘದವರು, ಅಲ್ಲಿ ನಾನು ಆ ಪ್ರಬಂಧ ಓದಬೇಕೆಂದು ಕರೆದರು. ಡಾ. ಸಿ.ಡಿ.ಗೋವಿಂದರಾವ್ ಇಂಗ್ಲೀಷ್ ಮೇಷ್ಟ್ರು-ಸಭಾಧ್ಯಕ್ಷರು. ದೊಡ್ಡ ಸಾಹಿತಿ ಬಗ್ಗೆ ವಿಮರ್ಶೆ ಮಾಡಿದ ನನ್ನ ದಾರ್ಷ್ಟ್ಯಕ್ಕೆ ಚೆನ್ನಾಗಿ ಬೈದರು. ಲಂಕೇಶ್ ಸೂಚಿಸಿದ್ದ ಸೇರ್ಪಡೆಗಳಿಗೆ ಸಂಬಂಧಪಟ್ಟಂತೆಯೇ ಹೆಚ್ಚಾಗಿ ಬೈಸಿಕೊಂಡೆ. ಮಧ್ಯೆ ಎಲ್ಲಿಯೂ ‘ಸದ್ಗೃಹಸ್ಥ ದನಿ ಕೇಳಿಸುತ್ತದೆ’ ಎಂದು ನಾನು ಮೊದಲು ಬರೆದಿದ್ದೆ. ಲಂಕೇಶ್ ‘ನಿವೃತ್ತ ಅಧಿಕಾರಿಯ ದನಿ ಕೇಳಿಸುತ್ತದೆ ಅಂತ ಬರಿ’ ಎಂದು ಸೂಚಿಸಿದ್ದರು. ‘ನಿವೃತ್ತ ಅಧಿಕಾರಿ’ ಎಂದು ಮಾತು ಬಳಸಿದ್ದಕ್ಕೂ ಡಾ. ಗೋವಿಂದರಾವ್ ಬೈದರು. ಸಭೆ ಮುಗಿಸಿ ಹೊರಗೆ ಬಂದಾಗ ಲಂಕೇಶರ ಕ್ಲಾಸ್‌ಮೇಟ್ ಆಗಿದ್ದ ಬಿ. ದಾಮೋದರರಾವ್ ಅವರು ‘ಈ ಬೈಗುಳ ಲಂಕೇಶಪ್ಪನವರ ಕಾಣಿಕೆ, ಪ್ರಸಾದ’ ಎಂದು ತಮಾಷೆಯಾಗಿ ಹೇಳಿ ನಸುನಕ್ಕರು. ಲಂಕೇಶ್ ಸಭೆಯಿಂದ ಹೊರಬಂದವರು ನನ್ನ ಹತ್ತಿರ ಬಂದು ‘ಬೇಜಾರ ಮಾಡಿಕೊಳ್ಳಬೇಡಯ್ಯಾ ಆ ಗಲ್ಲಿ ಗೋವಿಂದರಾಯಗೆ ಲಿಟರೇಚರ್ ಏನಿ ಗೊತ್ತಾಗ್ತದೆ? ಕುಡುಬಿ ಬ್ರಾಹ್ಮಣ ಬೊಡ್ಡೀಮಗ’ ಎಂದು ಗಟ್ಟಿಯಾಗಿಯೇ ಹೇಳಿದರು. ತಮ್ಮ ಮೇಷ್ಟ್ರ ಬಗ್ಗೆಯೇ ಲಂಕೇಶ್ ಹೀಗೆ ಹೇಳ್ತಾರಲ್ಲಪ್ಪಾ ಅನಿಸ್ತು. ಮೊದಲೇ ನವರ್ಸ್ ಆಗಿದ್ದ ನಾನು ಇನ್ನೂ ನರ್ವಸ್ ಆದೆ.

ಇವೆಲ್ಲದರ ಪ್ರಸ್ತಾಪೊ ಕಾಫಿ ಹೌಸಿನಲ್ಲಿ ಬಂತು. ಹತ್ತಿರದಲ್ಲೇ ಇದ್ದ ‘ಹೋಟೆಲ್ ದಾಸ್‌ಪ್ರಕಾಶ್’ನಲ್ಲಿ ನವ್ಯ ಸಾಹಿತಿಗಳನ್ನೆಲ್ಲ ಸೇರಿಸಿ ಓದುವುದೆಂದು ತೀರ್ಮಾನ ಆಯ್ತು. ಅಡಿಗರೂ ಇದ್ರು. ಅಲ್ಲಿ ಓದಿದೆ. ಹೆಚ್ಚು ಜನ ಮೆಚ್ಚಿಕೆ ಸೂಚಿಸಿದರು. ಅಡಿಗರು ‘ಸಾಕ್ಷಿ’ ಪತ್ರಿಕೆ ಮೊದಲ ಸಂಚಿಕೆ ತರುವಾಗ ಇಸಗೊಂಡು ಮತ್ತೆ ಓದಿದರು. ಪ್ರಕಟಿಸುವುದು ಬೇಡ ಎಂದು ತೀರ್ಮಾನಿಸಿದ ಅವರು ‘ಲೇಖನ ಒಟ್ಟಿನಲ್ಲಿ ಚೆನ್ನಾಗಿದ್ದರೂ ಕೈ ಇನ್ನೂ ಪಳಗಬೇಕು. ಮಾಸ್ತಿ ಕಾವ್ಯ ಇನ್ನೂ ಒಮ್ಮೆ ಓದಿ ನೋಡಿ’ ಎಂದೇನೊ ಹೇಳಿ ಹಿಂದಕ್ಕೆ ಕೊಟ್ಟರು. ಆಗಿನ್ನೂ ತೇಜಸ್ವಿ ನಿಕಟ ಪರಿಚಯ ಇರಲಿಲ್ಲ. ಆದ್ರೂ ಈ ಲೇಖನದ ಬಗ್ಗೆ ಯಾರೊ ಹೇಳಿದ್ದನ್ನು ಕೇಳಿ ಬಂದು ಇಸಕೊಂಡ್ರು. ಆ ಲೇಖನ ಹೇಗೊ ಅವರ ಕೈಯಲ್ಲಿ ಕಳೆದು ಹೋಯಿತು. ಬೇರೆ ಪ್ರತಿ ಇರಲಿಲ್ಲ. ಇಷ್ಟೆಲ್ಲ ಚರಿತ್ರೆ ಆ ಲೇಖನದ್ದು. ಆ ಲೇಖನ ಈಗ ನೋಡುವುದಕ್ಕೆ ಸಿಕ್ಕುವಂತಿದ್ದರೆ ನನಗೇ ಏನನಿಸುತ್ತಿತ್ತೊ?

ನವ್ಯಪಂಥವನ್ನು ರೂಪಿಸಿದ ಜಾಗಗಳಲ್ಲಿ ಮೈಸೂರಿನಕಾಫಿಹೌಸ್ ಪ್ರಸ್ತಾಪ ಬಹಳ ಬರುತ್ತೆ. ಅದರ ಚಟುವಟಿಕೆ ಬಗ್ಗೆ ಹೇಳಿ ಸಾರ್.

‘ಕಾಫಿ ಹೌಸ್’ ಪ್ರಭಾ ಟಾಕೀಸಿನ ಪಕ್ಕದಲ್ಲಿತ್ತು. ಮಂದಣ್ಣ ಎಂಬವರು ಮಾಲೀಕರು. ಈಗ ಅದು ಹೋಟೆಲ್ಲಾಗಿ ಇಲ್ಲ. ಬದಲಾವಣೆ ಆಗಿದೆ. ಅಲ್ಲಿ ಅಡಿಗರು, ಡಿ.ವಿ. ಅರಸು, ಅನಂತಮೂರ್ತಿ, ಕೆ.ಸದಾಶಿವ, ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ರಾಜೀವ ತಾರಾನಾಥ, ಚನ್ನಯ್ಯ, ವೈಕುಂಠರಾಜು, ದಾಮೋದರರಾವ್, ಗಿರಿ ಹೆಗ್ಡೆ, ಜಿ.ಎಸ್. ಸದಾಶಿವ, ಎಂ.ಎಸ್. ತಿಮ್ಮಪ್ಪ, ವಿ.ಕೆ. ನಟರಾಜ, ಕೆ.ಎಚ್. ಶ್ರೀನಿವಾಸ, ಎಂ.ಡಿ. ನಂಜುಂಡಸ್ವಾಮಿ, ಬಿ.ಎಸ್. ಆಚಾರ್, ಬಿ.ಕೆ. ಚಂದ್ರಶೇಖರ್, ಬಿ.ಎನ್. ರಾಮು, ಕಡಿದಾಳ್ ಶಾಮಣ್ಣ, ಎನ್.ಡಿ. ಸುಂದರೇಶ್, ನಾರಾಯಣ ಹೆಗ್ಡೆ, ಪೋಲಂಕಿ ರಾಮಮೂರ್ತಿ, ಕೃಷ್ಣಮೂರ್ತಿ ಐತಾಳ, ತುಮರಿ ಪ್ರಭಾಕರ ಇವರೆಲ್ಲ ಬರ್ತಿದ್ರು. ಪ್ರತಿದಿವಸ ಎಲ್ಲಾ ಬರ್ತಿದ್ರಂತಲ್ಲ. ಒಂದೇ ವರ್ಷದಲ್ಲಿ ಇವ್ರೆಲ್ಲ ಬರ್ತಿದ್ರು ಅಂತಲೂ ಅಲ್ಲ. ಎಂಟ್ಹತ್ತು ವರ್ಷಗಳ ಕಾಲಾವಧಿಯಲ್ಲಿ ಬಂದು ಹೋಗಿದ್ದವರ ಹೆಸರನ್ನು ನೆನಪಿಗೆ ಬಂದಂತೆ ಹೇಳಿದ್ದೇನೆ. ಈ ಎಲ್ಲರೂ ‘ನವ್ಯ’ ಸಾಹಿತಿಗಳೇ ಅಲ್ಲ. ತಂತಮ್ಮ ವಿಷಯದಲ್ಲಿ, ಆಸಕ್ತಿ ಕ್ಷೇತ್ರದಲ್ಲಿ ಹೊಸ ಚಿಂತನೆಗಳಿಗೆ ಮನಸ್ಸು ತೆರೆದುಕೊಂಡಿದ್ದವರು. ಇವ್ರಲ್ಲಿ ಅನೇಕರು ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿದರೆಂಬುದು ಈಗ ಇತಿಹಾಸ. ಸುಮತೀಂದ್ರ ನಾಡಿಗರು ಅಪರೂಪಕ್ಕೆ ಬೆಂಗಳೂರಿಂದ ಬಂದು ಹೋಗ್ತಿದ್ದರೆಂದು ನೆನಪು. ಎ.ಕೆ. ರಾಮಾನುಜನ್, ಗಂಗಾಧರ ಚಿತ್ತಾಲ, ಎಂ.ಜಿ. ಕೃಷ್ಣಮೂರ್ತಿ ಮೈಸೂರಿಗೆ ಬಂದ್ರೆ ಅಲ್ಲಿಗೆ ಬರ್ತಿದ್ರು. ಕಾಫಿಹೌಸಿನಲ್ಲಿ ಸಂಜೆ ಅರು ಘಂಟೆ ಮೇಲೆ ಸೇರೋದು. ಅಡಿಗರು ಬರೋದಿಕ್ಕೆ ತಡವಾದರೆ ಡಿ.ವಿ.ಅರಸು ಸುತ್ತ ಕುಳಿತುಕೊಳ್ತಿದ್ದೆವು. ಅರಸು ಇರುವಾಗ ರಾಷ್ಟ್ರೀಯ ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಮಾತು, ಚರ್ಚೆ; ಅಡಿಗರು ಇರುವಾಗ ಸಾಹಿತ್ಯ ಚರ್ಚೆ ಮುಖ್ಯವಾಗಿ ಇರತಿತ್ತು. ರಾಜಕೀಯ ವಿದ್ಯಮಾನಗಳ ಚರ್ಚೆ, ಮಾತೂ ಇರುತ್ತಿತ್ತು. ಅಡಿಗರು, ಅರಸರು ಇಬ್ಬರೂ ‘ಪ್ರಿಸೈಡಿಂಗ್ ಡೇಟಿ’ ಅಂತಾರಲ್ಲಾ ಆ ಥರ ಇದ್ರು. ಅಡಿಗರು ಸಾಗರದ ಲಾಲ್ ಬಹಾದ್ದೂರ್ ಕಾಲೇಜ್ ಪ್ರಾರಂಭವಾದಾಗ ಪ್ರಿನ್ಸಿಪಾಲರಾಗಿ ಹೋದ್ರು, ೧೯೬೪-೬೫ ಸುಮಾರಿಗೆ. ಮೈಸೂರು ವಿಶ್ವವಿದ್ಯಾಲಯದ ಆಡಳಿತದಲ್ಲಿ ಸೇರಿಕೊಂಡ ಮೇಲೆ ಅರಸು ಅವರೂ ಬರುವುದು ನಿಂತಿತು. ಆಮೇಲೂ ನಾವು ಕೆಲವರು ಮೈಸೂರಿನಲ್ಲಿದ್ದವು, ಆಗೀಗ ‘ಕಾಫಿ ಹೌಸ್’ಗೆ ಹೋಗಿ ಬಂದದ್ದುಂಟು. ಹೆಚ್ಚು ಕಾಲ ಅಲ್ಲ. ಅಡಿಗರ ‘ಸಾಕ್ಷಿ’, ಅರಸರ ‘ಕೌಟಿಲ್ಯ’ ಎಂಬ ಇಂಗ್ಲಿಷ್ ಪತ್ರಿಕೆ ‘ಕಾಫಿಹೌಸ್’ ದಿನಗಳಲ್ಲೇ ಬಂದಿದ್ದು. ಆ ಪತ್ರಿಕೆಗಳಲ್ಲೂ ‘ಕಾಫಿ ಹೌಸ್’ ಸ್ನೇಹಿತರ ಪಾತ್ರ ಇತ್ತು. ‘ಕೌಟಿಲ್ಯ’ದ ಧ್ಯೇಯವಾಕ್ಯಗಳ ಪ್ರಾಸ್ತಾವಿಕ ಟಿಪ್ಪಣಿಯನ್ನು ದಾಮೋದರರಾವ್ ಬರೆದಿದ್ರು. ‘ಸಾಕ್ಷಿ’ ಪ್ರೂಫ್ ನಾನೂ ಚನ್ನಯ್ಯನವರೂ ತಿದ್ದಿದ್ದೆವು. ‘ಕೌಟಿಲ್ಯ’ದ ಎರಡೇ ಸಂಪುಟಗಳು ಬಂದದ್ದು. ಮೊದಲದರ ಬಿಡುಗಡೆ ಡಾ. ಎಸ್. ರಾಧಾಕೃಷ್ಣನ್ ಮಾಡಿದ್ದರು. ಅದರದೇ ದೊಡ್ಡ ಕಥೆ. ಬಿ.ಎನ್.ಶ್ರೀರಾಮ ಸಂಪಾದಕತ್ವದ ‘ಲಹರಿ’ ಪತ್ರಿಕೆ ಬಳಗದ ಹತ್ತು ಜನರೂ ‘ಕಾಫಿಹೌಸ್’ ಗೆಳೆಯರೇ ಆಗಿದ್ದೆವು. ಅಡಿಗರ ಅಧ್ಯಕ್ಷತೆಯ ಸಾಹಿತ್ಯ ಸಂಘ ಒಂದಿತ್ತು. ನಾನು ಖಜಾಂಚಿ. ಟೌನ್ ಹಾಲಿನಲ್ಲೆ ಟಿಕೆಟ್ ಇಟ್ಟು ಕವಿಗೋಷ್ಠಿ ಮಾಡಿದ್ದೆವು.

ಅಡಿಗರು ನಿಮ್ಮ ಮೇಲೆ ಇಷ್ಟೊಂದು ಗಾಢ ಪ್ರಭಾವ ಬೀರೋಕೆ ಕಾರಣ ಏನು?

ಇವತ್ತಿಗೂ ಅಡಿಗರ ಬಗ್ಗೆ ನನ್ನಲ್ಲಿ ತುಂಬಾ ಗೌರವ ಭಾವನೆ ಇದೆ. ಅವರು ನನ್ನ ವಿಷಯದಲ್ಲಿ ತುಂಬ ಪ್ರಾಮಾಣಿಕವಾಧ ಪ್ರೀತಿ ತೋರಿಸಿದವ್ರು. ಬೆಚ್ಚಗಿನ ಆತ್ಮೀಯ ಭಾವನೆಯನ್ನು ಉಳಿಸಿಹೋದವ್ರು. ಮೈಸೂರಿಗೆ ಬಂದಾಗ ನನ್ನ ಮನೆಗೆ ಬರತಿದ್ರು. ಉಳೀತಿದ್ರು. ನನ್ನ ಹೆಂಡತಿ ಮಗಳಿಗೂ ಅವರ ವಿಷಯದಲ್ಲಿ ಪ್ರೀತಿ, ಗೌರವ. ಮನೆಗೆ ಬಂದ ಹಿರಿಯರೆಂದು ನಾವೆಲ್ಲ ಅವರನ್ನು ಕಾಣುತ್ತಿದ್ದೆವು. ಹಿಂದೇನೆ ಅವರು ಕುಮಟೆಯಲ್ಲಿದ್ದಾಗ ಏನೋ ಒಂದು ಒಲವು-ಅರ್ಥ ಗೊತ್ತಿದ್ದದ್ದಲ್ಲ- ಇತ್ತು. ಅವರು ನನ್ನ ಪದ್ಯ ಚೆನ್ನಾಗಿದೆ ಅಂದಿದ್ದಕ್ಕೆ ಬಹುಶಃ ಆ ವಯಸ್ಸಿನಲ್ಲಿ ಪ್ರೀತಿ ಬೆಳೆದಿರಬಹುದು. ಮೈಸೂರಿಗೂ ಬಂದಾಗ ಅನಂತಮೂರ್ತಿಯವರೂ ಅಡಿಗರ ಹೆಸರು ಹೇಳ್ತಾ ಇದ್ರಲ್ಲ, ಆದ್ದರಿಂದ ಆ ಕಡೆ ನನ್ನ ಒಲವು ಹೋಯಿತು. ಅವರ ಸಾಹಿತ್ಯಕ ಚಿಂತನೆ ಆ ಕಾಲದಲ್ಲಿ ಹೊಸದು ಅನ್ನೊ ಕಾರಣಕ್ಕೂ ನಾನು ಒಪ್ಪಿಕೊಂಡಿರಬಹುದು. ಅವರಲ್ಲಿ ಹೊಸ ಬಗೆಯ ಆಲೋಚನೆ ಮಾಡೋ ಶಿಸ್ತನ್ನು ಮೆಚ್ಚಿದೀನಿ. ಅದಕ್ಕಿಂತ ಹೆಚ್ಚಾಗಿ ನನ್ನ ವ್ಯಕ್ತಿತ್ವದ ಮೇಲೆ ಬಹಳ ಪ್ರಭಾವ ಮಾಡಿದರು ಅನ್ಸುತ್ತೆ. ಮೊದಲನೆಯದಾಗಿ, ಅವರಿಗೆ ಏನಾದರೂ ಅನಿಸಿದರೆ, ಅದನ್ನು ನೇರವಾಗಿ ಸ್ಪಷ್ಟವಾಗಿ ಹೇಳ್ತಿದ್ದರೇ ಹೊರತು, ಆಡಿಯನ್ಸ್ ಕಾನ್‌ಶಿಯಸ್ ಆಗಿ ಮುಚ್ಚುಮರೆ ಮಾಡಿ ಮಾತಾಡಿದ್ದು ನನಗೆ ನೆನಪೇ ಬರೋಲ್ಲ. ಎರಡನೇದು, ಅಡಿಗರು ಎಂದೂ ತಮ್ಮ ಕಾವ್ಯದ ಬಗ್ಗೆ ಮಾತಾಡ್ತಿರಲಿಲ್ಲ. ಅವರು ಬಹಳ ಸೂಕ್ಷ್ಮ. ತಮ್ಮ ಸಾಹಿತ್ಯದ ಬಗ್ಗೆ ಹೇಳೋವಾಗ ಮುಜುಗರ ಪಡ್ತಿದ್ರು. ‘ಸಾರ್ ಇದರರ್ಥ ಏನು’ ಅಂತ ಕೇಳಿದರೆ ನಕ್ಕುಬಿಡೋರು. ಬೇರೆಯವರ ಬಗ್ಗೆ ಎಂಥಾ ಚರ್ಚೆಯಾದರೂ ಮಾಡೋರು. ತಮ್ಮ ಕಾವ್ಯದ ಬಗ್ಗೆ ಈ ಅರ್ಥ ಇಟ್ಕಂಡು-ಬರೆದಿದೀನಿ ಅಂತ ಯಾವ ಕಾಲದಲ್ಲೂ ಹೇಳಲಿಲ್ಲ. ಅವರ ಮೌಲ್ಯದ ಕಲ್ಪನೆ, ಸಾಮಾಜಿಕ ರಾಜಕೀಯ ಚಿಂತನೆಯ ದೃಷ್ಟಿಕೋನ, ಎಲ್ಲ ಈ ಹೊತ್ತು ನಾವು ಪ್ರಶ್ನೆ ಮಾಡಬಹುದು. ನಾನು ಎಷ್ಟೋ ಸಲ ‘ಇದನ್ನು ಒಪ್ಪೋಕಾಗಲ್ಲ’ ಅಂತ ನೇರವಾಗಿ ಹೇಳತಾ ಇದ್ದೆ. ಒಂದ್ಸಲ ‘ನೀವು ಬರೆಯೋ ಹೊತ್ತಿಗೆ ದ್ವಂದ್ವಗಳು, ಏನೆಲ್ಲ ಸೂಕ್ಷ್ಮಗಳು ಅನುಭವದಲ್ಲಿರುತ್ತೆ ಅಂತ ನಿಮಗೆ ಗೊತ್ತಾಗುತ್ತೆ. ಮಾತಾಡುವಾಗ ಯಾಕೆ ದುಡುಕು ಮಾಡ್ತೀರಿ?’ ಅಂತ ಕೇಳಿದೆ……

ಶೂದ್ರ ನೆಲೆಯಿಂದ ಬಂದ ಮೇಲೆ ಕುವೆಂಪು ಬದಲಾಗಿ ಅಡಿಗರು ಆವರಿಸಿಕೊಂಡ್ರು. ಅವರ ಚಿಂತನೆಯಲ್ಲಿದ್ದ ಬ್ರಾಹ್ಮಣ ಪ್ರಜ್ಞೆ ತಾತ್ವಿಕವಾಗಿ ನಿಮಗೆ ಎಂದಾದರೂ ತೊಡಕು ಉಂಟು ಮಾಡಿತ್ತಾ?

ಒಂದಂಶ ಗಮನಿಸಬೇಕು. ಅದು ಸಾಂಸ್ಕೃತಿಕ ಚಾರಿತ್ರಿಕ ಸಂದರ್ಭಕ್ಕೆ, ಕಾಲಮಾನಕ್ಕೆ ಸಂಬಂಧಿಸಿದ್ದು. ಬ್ರಾಹ್ಮನೈಜೇಶನ್‌ನ ಪ್ರಾಸೆಸ್‌ನಲ್ಲಿ ಬೆಳೆಯೋದೆ ಪ್ರಗತಿ ಅಂತ ಕಲ್ಪನೆ ಇದ್ದ ಕಾಲ ಅದು. ನಮ್ಮ ಎದುರುಗಡೆ ಆದರ್ಶ ಅವರೇ ತಾನೇ? ನಾನು ಹಂಗೆ ಬಂದವನಾದ್ದರಿಂದ, ಸಾಮಾನ್ಯವಾಗಿ ಅವೈದಿಕ-ವೈದಿಕ ವಿಶ್ಲೇಷಣೆ ಮಾಡಿ ವಿಮರ್ಶೆ ಮಾಡಬೇಕು ಅಂತನ್ನೋದು ಆ ವಯಸ್ಸಿಗೆ ಬಂದಿರಲಿಲ್ಲ. ಕೊನೆಗೆ ನಿಧಾನವಾಗಿ ಬೆಳಸ್ಕೋತ ಹೋದಾಗ ಆ ಎಚ್ಚರ ಬಂತಷ್ಟೆ. ಅಡಿಗರು ಜನಸಂಘದ ಅಭ್ಯರ್ಥಿಯಾಗಿ ಲೋಕಸಭೆಗೆ ನಿಂತಾಗ ನಾನು ‘ಅದು ಸರಿಯಲ್ಲ’ ಎಂದಿದ್ದೆ. ಲಂಕೇಶ್ ಮೈಸೂರಿಗೆ ಬಂದು ಅಡಿಗರ ಪರ ಪ್ರಚಾರಕ್ಕೆ ಕರೆದಾಗ ನಾನು ಒಪ್ಪಿರಲಿಲ್ಲ; ಅನಂತಮೂರ್ತಿಯವರೂ ಒಪ್ಪಿರಲಿಲ್ಲ. ಲಂಕೇಶ್ ಅಡಿಗರ ಪರ ಹಗಲೂ ರಾತ್ರಿ ಆರ್‌ಎಸ್‌ಎಸ್ ಹುಡುಗರ ಜೊತೆ ದುಡಿದಿದ್ರು. ಆದ್ರೂ ಲಂಕೇಶ ಅನಂತಮೂರ್ತಿ ಇವರೆಲ್ಲ ಲೋಹಿಯಾವಾದಿಗಳೂ ಆಗಿದ್ದರಲ್ಲವೇ? ನಾನು ಬೆಳೆದ ಪರಿಸರದಲ್ಲಿ ಕಾಲೇಜು ಶಿಕ್ಷಣ ಪಡೆದ ಮೊದಲ ತಲೆಮಾರಿಗೆ ಸೇರಿದವನಾಗಿದ್ದೆ. ನಾನು ಹುಟ್ಟಿದ ಜಾತಿಯವರಲ್ಲಿ ಅಂಕೋಲಾ ಸೀಮೆಗೇ ಮೊತ್ತಮೊದಲ ಕಾಲೇಜು ಅಧ್ಯಾಪಕನಾದವನಾಗಿದ್ದೆ. ನಾನು ನನಗಿಂತ ಹೆಚ್ಚು ವಿದ್ಯಾವಂತರಾದವರನ್ನು ನೋಡಿ, ಅವರೊಡನೆ ಒಡನಾಡಿ, ನನ್ನ ತಿಳಿವಳಿಕೆ ಜ್ಞಾನ ಆಸಕ್ತಿಯ ವಿಸ್ತರಣೆ ಮಾಡಿಕೊಳ್ಳೋದು ಬಹುಶಃ ಅನಿವಾರ್ಯವಾಗಿತ್ತೇನೊ! ನಾನು ಮೈಸೂರಿಗೆ ಬಂದ ಹೊಸತರಲ್ಲಿಯೆ ಅನಂತಮೂರ್ತಿಯವರ ಸಂಪರ್ಕಕ್ಕೆ ಬಂದುಬಿಟ್ಟಿದ್ದೆ. ಅವರಿಗೆ ಅಡಿಗರು ಆದರ್ಶವಾಗಿದ್ರು. ಅಡಿಗರ ಬಗ್ಗೆ ಹಿಂದೆಯೇ ಆಕರ್ಷಣೆ ಒಲವು ಉಂಟಾಗಿತ್ತಲ್ಲ? ಅವರಿಬ್ಬರೂ ಬ್ರಾಹ್ಮಣರಾಗಿದ್ರು ಎಂಬುದು ಆಕಸ್ಮಿಕ ಮತ್ತು ಮುಖ್ಯ ಅಲ್ಲ. ಅವರಿಬ್ಬರೂ ನನ್ನಂಥವನ ಮೇಲೆ ಪ್ರಭಾವ ಬೀರಬಲ್ಲಂಥ ಪ್ರತಿಭಾಶಾಲಿ ವಿದ್ಯಾವಂತರೆಲ್ಲ ಸಾಮಾನ್ಯವಾಗಿ ಬ್ರಾಹ್ಮಣರೆ ಆಗಿದ್ದರಲ್ಲ? ಕುವೆಂಪು ನನಗೆ ಕಾವ್ಯ ಗುರುವಾಗಲು ಒಪ್ಪಿಗೆ ಸೂಚಿಸಿ ಬಳಿಗೆ ಕರೆದಿದ್ದರೆ ಏನಾಗುತ್ತಿದ್ದೆನೊ, ಹೇಗಾಗುತ್ತಿದ್ದೆನೊ! ಜವರೇಗೌಡರ ರೀತಿಯ ತಳಿಗೆ ಸೇರುತ್ತಿದ್ದೆನೊ, ಶಿವರುದ್ರಪ್ಪನವರ ರೀತಿಯ ಸಾಹಿತ್ಯ ಸಂಸ್ಕಾರ ಪಡೆಯುತ್ತಿದ್ದೆನೊ! ಈಗ ಹೇಗೆ ಹೇಳಲಿ?

ಆದರೆ ಅಡಿಗರದು ‘ಬ್ರಾಹ್ಮಣ ಪ್ರಜ್ಞೆ’ ಎಂದು ಸರಳಗೊಳಿಸಿ ಗುಂಡುಸುತ್ತಿ ಹೇಳೋದನ್ನು ನಾನು ಒಪ್ಪೋದಿಲ್ಲ. ಅಡಿಗರು ಕುವೆಂಪು ಕಾವ್ಯವನ್ನು ಕಟುವಾಗಿ ಟೀಕಿಸಿದ್ದು, ವಿಮರ್ಶಿಸಿದ್ದು ನಿಜ. ಅದು ಮೂಲತಃ ಅವರಿಗೆ ಬ್ರಾಹ್ಮಣಿಕೆಯ ಅಗತ್ಯ ಆಗಿರ್ಲಿಲ್ಲ. ಸೃಜನಶೀಲ ದಾರಿಯನ್ನು ಅನ್ವೇಷಿಸಿಕೊಳ್ಳುವ ಪ್ರಕ್ರಿಯೆಯ ಭಾಗವಾಗಿತ್ತು. ಕುವೆಂಪು ಕಾವ್ಯರೀತಿಗೆ ತೀರಾ ಭಿನ್ನವಾದಂಥ ಹೊಸ ಕಾವ್ಯರೀತಿಯನ್ನು ಅಡಿಗರು ಕನ್ನಡದಲ್ಲಿ ರೂಢಿಸಿದರೆಂಬುದೂ ನಿಜವಲ್ಲವೆ? ನವೋದಯದವರಲ್ಲಿ ಕುವೆಂಪು ಬಿಟ್ಟರೆ ಎಲ್ಲ ಬ್ರಾಹ್ಮಣರೇ. ಹಾಗೆಂದು ಅಡಿಗರು ಆ ಬ್ರಾಹ್ಮಣ ಸಾಹಿತಿಗಳ ಸಾಹಿತ್ಯ ಪರಿಕಲ್ಪನೆಗಳನ್ನೂ ಒಪ್ಪಿದವರಲ್ಲ. ಕುವೆಂಪು ಜೊತೆ ಮಾಸ್ತಿಯವರಿಗೇ ಸಾಹಿತ್ಯಕ ಭಿನ್ನಾಬಿಪ್ರಾಯ ಇತ್ತಲ್ಲ? ಅಡಿಗರ ‘ಮತ್ತೆ ಮೊಳಗಲಿ ಪಾಂಚಜನ್ಯ’, ‘ನಾನು ಹಿಂದೂ, ನಾನು ಬ್ರಾಹ್ಮಣ’ ಇಂಥ ಕವನಗಳನ್ನು ಓದಿದಾಗ ಸಹಜವಾಗಿಯೆ ಹಾಗೆನಿಸುವಂತಿದೆ ನಿಜ. ಆದರೂ ಭಾರತದ ಆಧುನಿಕ ಚರಿತ್ರೆಯ ಸಂಕೀರ್ಣ ಸಂದರ್ಭದ ಪರಿವೆಯಲ್ಲಿ ಇಂಥ ಪ್ರಶ್ನೆಗಳನ್ನು ಚರ್ಚಿಸಿದರೆ, ಗಂಭೀರವಾದ ಉತ್ತರಗಳು ಸಿಗಬಹುದು ಎಂಬೋದು ನನ್ನ ಅನಿಸಿಕೆ. ಬ್ರಾಹ್ಮಣ ಪ್ರಜ್ಞೆ ಮಾತ್ರ ಉಳ್ಳವರಿಗೆ ‘ಭೂಮಿಗೀತೆ’, ‘ಭೂತ’, ‘ಕೂಪಮಂಡೂಕ’, ‘ಶ್ರೀ ರಾಮನವಮಿಯ ದಿವಸ’, ‘ವರ್ಧಮಾನ’ದಂಥ ಕವನಗಳನ್ನು ಬರೆಯುವುದು ಸಾಧ್ಯವೇ? ಶೂದ್ರಪ್ರಜ್ಞೆ ಮಾತ್ರ ಇದ್ದವರಿಗೆ ಕುವೆಂಪು ಅವರ ಅಧ್ಯಾತ್ಮ ವಿಚಾರವಾದ ಸಾಧ್ಯವೆ? ‘ಶ್ರೀ ರಾಮಾಯಣ ದರ್ಶನಂ’, ‘ಬೆರಳ್ಗೆ ಕೊರಳ್’, ‘ಶೂದ್ರ ತಪಸ್ವಿ’ ಬರೆಯಲು ಸಾಧ್ಯವೆ? ಪ್ರಾರಂಭ ಹಂತದಲ್ಲಿ ನಾನು ಮಾತ್ರ ಅಲ್ಲ ಲಂಕೇಶ, ತೇಜಸ್ವಿ, ಪಾಟೀಲ, ಚನ್ನಯ್ಯ, ಗಿರಡ್ಡಿ, ಕಂಬಾರ, ಶಾಂತಿನಾಥ ದೇಸಾಯಿ, ಆಲನಹಳ್ಳಿ ಇಂಥ ಬ್ರಾಹ್ಮಣೇತರ ಪ್ರತಿಭಾವಂತರೂ, ನವ್ಯದ ಅಡಿಗರ ಆಕರ್ಷಣೆಗೆ ಒಳಗಾದದ್ದು ಯಾಕೆ, ಹೇಗೆ? ಅನಂತಮೂರ್ತಿ, ಲಂಕೇಶ, ತೇಜಸ್ವಿ-ಶಿವಮೊಗ್ಗ ಕಡೆಯ ಈ ಸಾಹಿತಿಗಳೆಲ್ಲ ಅಡಿಗರ ಹತ್ತಿರ ಮಾತ್ರ ಹೋದವರಲ್ಲ; ಲೋಹಿಯಾ, ಗೋಪಾಲಗೌಡರಿಂದಲೂ ಆಕರ್ಷಿತರಾಗಿದ್ದವರು. ತೀನಂಶ್ರೀ, ಡಿಎಲ್‌ಎನ್‌ರಂಥ ಘನ ವಿದ್ವಾಂಸರ, ಅಡಿಗ, ಅನಂತಮೂರ್ತಿ ಅವರಂಥ ಪ್ರತಿಭಾಶಾಲಿಗಳ ಸಂಪರ್ಕಕ್ಕೆ ಆ ವಯಸ್ಸಿನಲ್ಲಿ ಬರುವಂಥಾದದ್ದರ ಬಗ್ಗೆ ನಾನು ಇಂದೂ ಅಭಿಮಾನ ಪಟ್ಟುಕೊಳ್ಳುತ್ತೇನೆ.