ಸ್ವಾತಂತ್ರ್ಯಪೂರ್ವದಲ್ಲಿಯೆ ಅಂದರೆ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿಯೆ ಅಸಾಮಿ, ಒಡಿಯಾ, ಕನ್ನಡ, ತೆಲುಗು, ಬಿಹಾರಿ ಮೊದಲಾದ ಭಾಷೆಗಳ ಭಾಷಾವಾರು ರಾಜ್ಯ ರಚನೆಯ ಬೇಡಿಕೆ, ಆ ಸಂಬಂಧವಾದ ಹೋರಾಟಗಳು ‘ಸ್ವದೇಶೀ’ ಹೋರಾಟಗಳಾಗಿಯೇ ಬೆಳೆದುಕೊಂಡು ಬಂದಿದ್ದವು. ಬಿ.ಎಂ.ಶ್ರೀಕಂಠಯ್ಯನವರು ಸ್ವತಃ ಸ್ವಾತಂತ್ರ್ಯ ಹೋರಾಟದಲ್ಲಿ ಇದ್ದವರಲ್ಲವಾದರೂ ಕನ್ನಡನಾಡು, ನುಡಿ, ಕರ್ನಾಟಕ ಏಕೀಕರಣ ಸಂಬಂಧವಾದ ಹೋರಾಟದಲ್ಲಿ, ಸಾಹಿತ್ಯದ ಪುರೋಭಿವೃದ್ಧಿಯ ಕಾಯಕದಲ್ಲಿ, ದೀಕ್ಷಾಬದ್ಧರಾದ ಮುಂಚೂಣಿಯ ಮುಖ್ಯ ಸಾಹಿತಿಯಾಗಿದ್ದರು. ಕರ್ನಾಟಕ ಏಕೀಕರಣದ ಹೋರಾಟಕ್ಕೆ ಗಾಂದೀಜಿ ಮತ್ತು ರಾಷ್ಟ್ರೀಯ ಕಾಂಗ್ರೆಸ್ಸಿನ ಮಾನ್ಯತೆಯೂ ಇತ್ತು. ೧೯೨೦ರಲ್ಲಿಯೆ ಕರ್ನಾಟಕ ಮಂಡಲ ಕಾಂಗ್ರೆಸ್ ಕೂಡ ಆಗಿತ್ತು. ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಸೇರಿದ್ದ ೧೯೨೪ರ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮಹಾಧಿವೇಶನದಲ್ಲಿ ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚಲುವ ಕನ್ನಡನಾಡು’ ಹಾಡನ್ನು ಹಾಡಲಾಗಿತ್ತು. ದೇಶ ಸ್ವತಂತ್ರವಾದೊಡನೆ ಭಾಷವಾರು ಪ್ರಾಂತ ರಚನೆಯ ಕನಸು ನನಸಾಗುತ್ತದೆ, ಆದರ್ಶ ವಾಸ್ತವವಾಗುತ್ತದೆ ಎಂದು ನಂಬಿಕೊಂಡಿದ್ದ, ಉತ್ಕಂಠಿತರಾಗಿ ಎದುರು ನೋಡುತ್ತಿದ್ದ ಕನ್ನಡಿಗರೂ ಸೇರಿದಂತೆ ದೇಶೀಯ ಭಾಷಿಕರಿಗೆ ನಿರಾಸೆ, ಆ ಪಕ್ಷದ ಸರಕಾರವೇಕೇಂದ್ರದಲ್ಲಿ ಪ್ರತಿಷ್ಠಾಪನೆಗೊಂಡಿದ್ದರೂ ಕಾಂಗ್ರೆಸ್‌ನಿಂದ ವಚನದ್ರೋಹದ ಅನುಭವ ಕಾದಿತ್ತು.

೧೯೪೭ರ ಆಗಸ್ಟ್ ೧೫ ರಂದು ದೇಶ ಸ್ವತಂತ್ರವಾಯಿತು. ದೇಶ ಸ್ವತಂತ್ರವಾದ ಐದೂವರೆ ತಿಂಗಳುಗಳಲ್ಲಿಯೆ ಅಂದರೆ ೧೯೪೮ರ ಜನವರಿ ೩೦ ರಂದು ಗಾಂದೀಜಿ ಹತ್ಯೆಯಾಯಿತು. ಗಾಂದೀಜಿ ಗತಿಸಿದ ಮೇಲೆ, ಗಾಂಧೀಜಿಯ ‘ರಾಜಕೀಯ ವಾರಸುದಾರ’ರೆಂದು ಕೀರ್ತಿತರಾದ, ಗಾಂಧೀಜಿಯವರಿಂದಲೇ ಹಾಗೆಂದು ಘೋಷಿಸಲ್ಪಟ್ಟ, ಪಂಡಿತ ಜವಹರಲಾಲ ನೆಹರೂ “ಅವರೇ ಕಾಂಗ್ರೆಸ್ಸು, ಕಾಂಗ್ರೆಸ್ಸೇ ಅವರು” (ಡಾ. ಬಿ.ಆರ್.ಅಂಬೇಡ್ಕರ್, ಡಾ. ಬಾಬಾಸಾಹೇಬ್ ಅಂಬೇಡ್ಕರ್ ರೈಟಿಂಗ್ಸ್ ಅಂಡ್ ಸ್ಪೀಚಸ್ ಸಂ.೧, ಪು. ೧೪೫(೧೯೮೯) ಎಂಬಂತೆ ಆಗಿಬಿಟ್ಟಿದ್ದರಿಂದ ಅಧಿಕಾರ ಮತ್ತು ವರ್ಚಸ್ಸು ಅವರಲ್ಲಿ ಕೇಂದ್ರೀಕೃತವಾಗುವಂತಾಯಿತು. ಸ್ವಾತಂತ್ರ್ಯವು ಬರುತ್ತಿದ್ದಂತೆ ನೆಹರೂ ಸರಕಾರ ಭಾಷಾವಾರು ರಾಜ್ಯಗಳ ರಚನೆಯ ಪ್ರಸ್ತಾವನೆಗೆ ಒಲವು ತೋರಲಿಲ್ಲ; ಪೋಷಕ ನಿಲವು ತಳೆಯಲಿಲ್ಲ. ಕಾಲಹರಣದ ತಂತ್ರದ ಭಾಗವಾಗಿ ಜವಹರಲಾಲ ನೆಹರೂ ಅವರ ಅಧ್ಯಕ್ಷತೆಯ ವಲಭಭಾಯಿ ಪಟೇಲ, ಪಟ್ಟಾಭಿ ಸೀತಾರಾಮಯ್ಯನವರು ಸದಸ್ಯರಾಗಿರುವ ತ್ರಿಸದಸ್ಯ ಸಮಿತಿ (ಜೆ ವಿ ಪಿ ಸಮಿತಿ)ಯನ್ನು ೧೯೪೮ರ ಡಿಸೆಂಬರಿನಲ್ಲಿ ಜಯಪುರದಲ್ಲಿ ಸಮಾವೇಶಗೊಂಡ ಕಾಂಗ್ರೆಸ್ಸು ನೇಮಿಸಿ ವರದಿ ಕೇಳಿತು. ಆ ಸಂದರ್ಭದಲ್ಲಿ, ಭಾಷಾವಾರು ರಾಜ್ಯಗಳ ರಚನೆಯ ಬಗ್ಗೆ ಅವರ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಅಥವಾ ಸ್ವಾತಂತ್ರ್ಯಹೋರಾಟ ಕಾಲದಲ್ಲಿಯೆ ಒಪ್ಪಿ ಕೊಟ್ಟ ವಚನ ಮುರಿದು ಭ್ರಷ್ಟರಾಗುವುದು, ಜನರಿಗೆ ವಿಶ್ವಾಸದ್ರೋಹ ಬಗೆಯುವುದು ತಪ್ಪು ಎಂದು ನೈತಿಕ ರಾಜಕಾರಣದದ ತಿಳಿವಳಿಕೆ ಹೇಳುವುದಕ್ಕೆ ಗಾಂಧೀಜಿ ಆಗ ಬದುಕಿರಲೇ ಇಲ್ಲ. ಜೆ.ವಿ.ಪಿ. ಸಮಿತಿಯು ಆಂಧ್ರ ಬಿಟ್ಟು ಉಳಿದ ಭಾಷಿಇ ರಾಜ್ಯ ರಚನೆಯ ಪ್ರಸ್ತಾವನೆಯನ್ನು ತಿರಸ್ಕರಿಸಿದ ವರದಿ ನೀಡಿತು. ಬಹಳ ಹಿಂದೆಯೆ ಅಂದರೆ ೧೯೨೮ರಲ್ಲಿಯೆ ಜವಹರಲಾಲ ನೆಹರೂ ಅವರ ತಂದೆ ಮೋತಿಲಾಲ ನೆಹರೂ ಅಧ್ಯಕ್ಷತೆಯಲ್ಲಿ ಸುಭಾಷ್‌ಚಂದ್ರ ಬೋಸ್, ಸರ್ ತೇಜ್ ಬಹಾದ್ದೂರ್ ಸಪ್ರು, ಸರ್ ಆಲಿ ಇಮಾಂ, ಎಂ ಎಸ್ ಅಣೆ, ಎನ್ ಎಂ ಜೋಶಿ ಮೊದಲಾದ ಒಂಬತ್ತು ಹೆಸರಾಂತ ನಾಯಕರಿಂದ ಕೂಡಿದ್ದ ಸಮಿತಿಯ (‘ನೆಹರೂ ಸಮಿತಿ’ ಎಂದು ಹೆಸರಾದ ಸಮಿತಿ) ಜನತೆಯ ಇಚ್ಛೆ ಹಾಗೂ ಆಯಾ ಪ್ರದೇಶದ ಭಾಷಾ ವಿಷಯಕ ಏಕತೆ ಈ ಅಂಶಗಳನ್ನು ಪ್ರಧಾನವಾಗಿ ಪರಿಗಣಿಸಿ ಕರ್ನಾಟಕ ರಾಜ್ಯ ನಿರ್ಮಾಣದ ಬಗ್ಗೆ ಅಂದರೆ ಏಕೀಕೃತ ಕರ್ನಾಟಕದ ಬಗ್ಗೆ ಶಿಫಾರಸು ಮಾಡಿತ್ತು. ಅದು ೩೪ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದ ‘ಸರ್ವಪಕ್ಷೀಯ ಸಮ್ಮೇಲನ’ವು ನೇಮಕ ಮಾಡಿದ ಸಮಿತಿಯಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಗಾಂಧೀಜಿಯ ಹತ್ಯೆಯಾಗುವುದಕ್ಕಿಂತ ಕೇವಲ ಏಳೆಂಟು ದಿನಗಳ ಮೊದಲು ಎಸ್ ನಿಜಲಿಂಗಪ್ಪನವರ ನೇತೃತ್ವದ ಕರ್ನಾಟಕ ಪ್ರತಿನಿಧಿಗಳ ಶಿಷ್ಟ ಮಂಡಲವೊಂದು ಆಗ ಸಂವಿಧಾನ ರಚನಾ ಸಮಿತಿಯ (ಕಾನ್‌ಸ್ಟಿಟ್ಯೂಯೆಂಟ್ ಎಸೆಂಬ್ಲಿ) ಅಧ್ಯಕ್ಷರಾಗಿದ್ದ ಬಾಬು ರಾಜೇಂದ್ರ ಪ್ರಸಾದರನ್ನು ಕಂಡು ಕರ್ನಾಟಕ ರಾಜ್ಯ ರಚನೆಯ ಪ್ರಸ್ತಾಪ ಮಾಡಿದಾಗ ಅವರು ಕರ್ನಾಟಕದ ಪರ ಆಶಾದಾಯಕ ಆಶ್ವಾಸನೆಯ ಮಾತುಗಳನ್ನಾಡಿ ಕಳಿಸಿದ್ದು ಕೂಡ ಜವಹರಲಾಲ್ ನೆಹರೂ ಅಧ್ಯಕ್ಷತೆಯ ಜೆ ವಿ ಪಿ ಸಮಿತಿಯ ಮೇಲೆ ಪ್ರಭಾವ ಬೀರಲಿಲ್ಲ.

ತೆಲುಗು ಭಾಷಿಕರ ರಾಜ್ಯ ರಚನೆಗೆ ಕೇಂದ್ರ ಸರಕಾರವನ್ನು ಒತ್ತಾಯಿಸಲೆಂದು ಆಂದ್ರದ ಪೊಟ್ಟಿ ಶ್ರೀರಾಮುಲು ಎಂಬ ಧುರೀಣರೊಬ್ಬರು ೧೯೫೨ರಲ್ಲಿ ೫೮ ದಿನಗಳ ಅಮರಣ ಉಪವಾಸ ಮಾಡಿ ಡಿಸೆಂಬರ್ ೧೫ ರಂದು ಮರಣಹೊಂದಿದಾಗ ಆಂಧ್ರಾದ್ಯಂತ ತೆಲುಗು ರಾಜ್ಯ ರಚನೆಯ ಪರ ವಿಧ್ವಂಸಕ ರೂಪದ ಚಳವಳಿಯ ಜ್ವಾಲೆ ಭುಗಿಲೆದ್ದಿತು. ನಾಲ್ಕೇ ದಿನಗಳೊಳಗೆ – ಡಿಸೆಂಬರ್ ೧೯ ರಂದು – ಪ್ರಧಾನಿ ಜವಹರಲಾಲ ನೆಹರೂ ಅವರು ತೆಲುಗು ಭಾಷಿಕರ ರಾಜ್ಯ ರಚನೆಯ ಬಗ್ಗೆ ಘೋಷಿಸಿದರು.

ಕನ್ನಡಿಗರ ಏಕೀಕೃತ ಕರ್ನಾಟಕದ ಬೇಡಿಕೆಗೆ ಅನುಕೂಲಕರವಾದ ಪ್ರತಿಕ್ರಿಯೆ ದೊರೆಯಲಿಲ್ಲ. ತೆಲುಗರಿಗೆ ನೀಡಿದಂಥ ಆಶ್ವಾಸನೆ ಕನ್ನಡಿಗರಿಗೆ ದೊರೆಯಲಿಲ್ಲ. ೧೯೫೩ರ ಜನವರಿಯಲ್ಲಿ ಹೈದರಾಬಾದ್ (ನಾನಲ್ ನಗರ)ನಲ್ಲಿ ಸೇರಿದ್ದ ಕಾಂಗ್ರೆಸ್ ಮಹಾಧೀವೇಶನದಲ್ಲಿ ಆಂಧ್ರ ರಾಜ್ಯ ರಚನೆಯ ಹೊರತಾಗಿ ಬೇರಾವ ರಾಜ್ಯ ರಚನೆ ಮಾಡುವುದಿಲ್ಲವೆಂದು ಅಬುಲ್ ಕಲಾಂ ಆಜಾದರ ಮೂಲಕ ಘೋಷಿಸಲಾಯಿತು. ಕನ್ನಡಿಗರು ನಿರಾಶರಾದರು. ಆಗ ಮೈಸೂರಿನ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ಕರ್ನಾಟಕ ಪರ ವಾದಿಸಿದ್ದು ಫಲನೀಡಲಿಲ್ಲ. ಕನ್ನಡಿಗರು ತಾಳ್ಮೆಗೆಟ್ಟರು. ಉತ್ತರ ಕರ್ನಾಟಕ ಭಾಗಗಳಲ್ಲಿ ಧರಣಿ, ಅಮರಣ ಉಪವಾಸ ಸತ್ಯಾಗ್ರಹ ನಡೆಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರು ಸಾಮೂಹಿಕ ರಾಜಿನಾಮೆಯ ಬೆದರಿಕೆ ಹಾಕಿದರು. ಶಾಸನ ಸಭೆಗಳಲ್ಲಿ, ಪಾರ್ಲಿಮೆಂಟಿನಲ್ಲಿ ಇರುವ ಕರ್ನಾಟಕದ ಪ್ರತಿನಿಧಿಗಳು, ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ನಿರ್ಣಯ ಅಂಗೀಕರಿಸಿದರು. ಎಸ್. ನಿಜಲಿಂಗಪ್ಪ, ಆರ್ ಆರ್ ದಿವಾಕರ ಮುಂತಾದವರ ಧೀಮಂತ ನಾಯಕತ್ವ ಮತ್ತು ಛಲಬಿಡದ ಹೋರಾಟ ಶಕ್ತಿ ಎಲ್ಲವೂ ಸೇರಿದವು. ಎಲ್ಲ ಕಡೆಗಳಿಂದಲೂ ರಾಜಕಾರಣಿಗಳೂ, ಸಾಹಿತಿಗಳೂ ಬಲವಾದ ಒತ್ತಾಸೆ ನೀಡಿದರು. ಮೈಸೂರು ಕಡೆಯಿಂದ ಎದ್ದ ಕೆಲವರ ಜಾತಿವಾದಿ ರಾಜಕಾರಣದ ವಿರೋದ ದನಿ ಎದ್ದಂತೆಯೇ ತ್ರಾಣ ಸಾಲದೆ ಕರಗಿಹೋಯಿತು. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಂಥ ರಾಜಕೀಯ ವ್ಯಕ್ತಿಗಳ ಏಕೀಕರಣ ಪರವಾದ ಅಚಲ ನಿಲುವು, ಕುವೆಂಪು ಮೊದಲಾದ ಕವಿ ಸಾಹಿತಿಗಳ ಒಕ್ಕೊರಲ ಬೆಂಬಲ ನೈತಿಕ ಶಕ್ತಿ,ಕರ್ನಾಟಕದ ಸಂಪನ್ಮೂಲ ಸಮೃದ್ಧಿಯ ಬಗ್ಗೆ ಸರ್. ಎಂ. ವಿಶ್ವೇಶ್ವರಯ್ಯನವರು ನೀಡಿದ ಅಮೂಲ್ಯ ಪರಿಣತ ಅಭಿಪ್ರಾಯಗಳು ಒಗ್ಗೂಡಿದವು. ಕೇಂದ್ರದ ನೆಹರೂ ಸರಕಾರ ಮಣಿಯಲೇಬೇಕಾಯಿತು. ಈ ಎಲ್ಲ, ಇನ್ನೆಷ್ಟೋ ಹೋರಾಟ, ತ್ಯಾಗ ಬಲಿದಾನಗಳ ಪರಿಣಾಮವಾಗಿ ೧೯೫೬ ನವಂಬರ್ ೧ ರಂದು ಭಾಷಾವಾರು ಪ್ರಾಂತ ರಚನೆಯಾದದ್ದಕ್ಕೆ ಆ ಬಗ್ಗೆ ನೆಹರೂ ರಾಜಕಾರಣದಲ್ಲಿ ಭಾಷಾವಾರು ಪ್ರಾಂತ ರಚನೆಯಾದದ್ದಕ್ಕೆ ಆ ಬಗ್ಗೆ ನೆಹರೂ ಅವರಿಗಿದ್ದ ನಿಷ್ಠೆ ಕಾರಣವಾಗಿರಲಿಲ್ಲ; ಅವರ ಅನುಕೂಲಸಿಂಧು ರಾಜಕಾರಣ ಕಾರಣವಾಗಿತ್ತು ಎಂಬುದು ಗಮನಿಸಬೇಕಾದ ಅಂಶ.

ಈ ನಡುವೆ ಸ್ವತಂತ್ರ ಭಾರತ ಗಣರಾಜ್ಯದ ಪ್ರಜಾಸತ್ಮಾತ್ಮಕ ಸಂವಿಧಾನವು ರಚಿತವಾಗಿ, ಅಂಗೀಕಾರವಾಗಿ, ೧೯೫೦ರ ಜನವರಿ ೨೬ ರಿಂದ ಜಾರಿಗೆ ಬಂದು ಬಿಟ್ಟಿತ್ತು. ಅಂದರೆ ಸಂವಿಧಾನ ರಚನೆಯ ಕಾಲದಲ್ಲಿ ಮತ್ತು ಅದು ಅಂಗೀಕಾರವಾದ ಕಾಲದಲ್ಲಿ ಭಾಷಾವಾರು ರಾಜ್ಯರಚನೆ ಇನ್ನೂ ಆಗಿರಲಿಲ್ಲ. ಭಾಷಾವಾರು ರಾಜ್ಯಗಳ ರಚನೆ ಆಗಬೇಕೆಂಬ ಬಗ್ಗೆ ಆಗಿನ ಕೇಂದ್ರ ಸರಕಾರವೂ ಒಲವು, ಆಸಕ್ತಿ ಹೊಂದಿರಲಿಲ್ಲ. ಪ್ರಜಾಸತ್ತಾತ್ಮಕ ರಾಜ್ಯ ಪದ್ಧತಿಯ ಸಾರ್ವತ್ರಿಕ ಮತ್ತು ಸಾಮಾನ್ಯ ತತ್ವಾಂಶಗಳ ಜೊತೆಗೆ ದೇಶದೊಳಗಿನ ನಿರ್ದಿಷ್ಟ ವಾಸ್ತವಾಂಶಗಳನ್ನೂ ಪರಿಗಣನೆಗೆ ತೆಗೆದುಕೊಂಡು ಸಂವಿಧಾನದ ವಿಧಿಗಳು ರಚಿತವಾಗುವಾಗ, ನಮ್ಮ ದೇಶದ ಅಲ್ಪಸಂಖ್ಯಾತ ಮತಧರ್ಮೀಯರ ಧಾರ್ಮಿಕ ಮತ್ತು ಭಾಷಿಕ ಇರುವಿಕೆಯನ್ನೂ ಸಂವಿಧಾನ ಕರ್ತೃಗಳು ಪರಿಗಣಿಸಿದ್ದರು. ಭಾಷೆಗಳ ಆಧಾರದ ಮೇಲೆ ಮುಂದೆ ಭಾಷಾವಾರು ರಾಜ್ಯಗಳು ರಚಿತವಾದಾಗ ದೇಶದ ಸರಕಾರಗಳ ಆಡಳಿತ ಸ್ವರೂಪ ಅಥವಾ ಕ್ರಮವ್ಯವಸ್ಥೆಯಲ್ಲಿ, ಲಕ್ಷಣದಲ್ಲಿ ಮತ್ತು ಉದ್ದೇಶದಲ್ಲಿ ಸಹಜವಾಗಿಯೇ ಬದಲಾವಣೆಯಾಯಿತು. ಈ ಬದಲಾವಣೆಯ ವಸ್ತುಸ್ಥಿತಿಯನ್ನು ಪೂರ್ವಭಾವಿಯಾಗಿ ಕಲ್ಪಿಸಿಕೊಂಡು ಸಂವಿಧಾನದ ವಿಧಿಗಳನ್ನು ರೂಪಿಸುವುದು ಸಾಧ್ಯವಿರಲಿಲ್ಲ. ಆದ್ದರಿಂದ ದೇಶದೊಳಗಿನ ವಾಸ್ತವಾಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಾಗ ಆ ಅಂಶ ಸಹಜವಾಗಿಯೆ ಸಂವಿಧಾನ ಕರ್ತೃಗಳ ಗಮನದಲ್ಲಿರಲಿಲ್ಲ.

೧೯೫೬ರ ನವೆಂಬರ್ ೧ರ ಆನಂತರದಲ್ಲಿ ಭಾಷಾವಾರು ರಾಜ್ಯಗಳು ಅಸ್ತಿತ್ವಕ್ಕೆ ಬಂದದ್ದು ವಸ್ತುಸ್ಥಿತಿಯಾದ ಮೇಲೆ ಭಾಷಾವಾರು ಪ್ರಾಂತಗಳ ರಾಜ್ಯ ರಚನೆಯ ಕಾರಣದಿಂದ ಭಾರತದ ರಾಜ್ಯಾಡಳಿತ ಕ್ರಮವ್ಯವಸ್ಥೆಯ (Polity) ಸ್ವರೂಪ ಲಕ್ಷಣಗಳಲ್ಲಿ ಬದಲಾವಣೆಯಾಯಿತು. ಭಾಷಾವಾರು ರಾಜ್ಯ ರಚನೆಗಾಗಿ ಹೋರಾಟ ತ್ಯಾಗ ಬಲಿದಾನಗಳನ್ನು ಮಾಡಿದ ಭಾಷಿಕ ಸಮುದಾಯದವರ ಮನಸ್ಸಿನಲ್ಲಿ ಇದ್ದ ಅಪೇಕ್ಷೆ ಮತ್ತು ಉದ್ದೇಶಗಳಿಗೆ ಅನುಗುಣವಾಗಿ, ಸಂವಿಧಾನದಲ್ಲಿರುವ ಭಾಷ ಸಂಬಂಧವಾದ ವಿದಿಗಳಲ್ಲಿ ಯುಕ್ತ ತಿದ್ದುಪಡಿಗಳನ್ನು ಮಾಡಲಿಲ್ಲ; ಆ ಬಗ್ಗೆ ಆಸಕ್ತಿಯನ್ನೂ ಕೇಂದ್ರ ಸರಕಾರ ತೋರಿಸಲಿಲ್ಲ. ಆದ್ದರಿಂದ ಭಾಷೆ, ಶಿಕ್ಷಣ ಇವುಗಳಿಗೆ ಸಂಬಂಧಿಸಿದಂತೆ ಭಾಷಾವಾರು ರಾಜ್ಯದ ರಚನೆಯ ಮೂಲ ಉದ್ದೇಶವೇ ಭಗ್ನಗೊಳ್ಳುವಂತಾಯಿತು. ರಾಜ್ಯಭಾಷೆಯ ವಿಕಾಸಕ್ಕೆ ಅಡ್ಡಿಯಾಗಿರುವ, ಪೂರ್ವಸಿದ್ಧವಾದ ಸಂವಿಧಾನದ ವಿಧಿಗಳನ್ನು ಉಳಿಸಿಕೊಂಡೇ ಬರಲಾಯಿತು.

ಕಾಂಗ್ರೆಸ್ಸು ಭಾಷಾವಾರು ರಾಜ್ಯ ರಚನೆಯ ವಿಷಯದಲ್ಲಿ ಅವರದೇ ಆದ ‘ರಾಜಕೀಯ’ ದೃಷ್ಟಿಯನ್ನು ಬದಲಿಸಿಕೊಳ್ಳದಿದ್ದುದು ಇದಕ್ಕೆಲ್ಲ ಮುಖ್ಯ ಕಾರಣವಾಗಿತ್ತು. ಆ ಪಕ್ಷವೇ ಮೊದ ಮೂವತ್ತು ವರ್ಷಗಳವರೆಗೆ ಕೇಂದ್ರದಲ್ಲಿ (ನಮ್ಮ ಕರ್ನಾಟಕದಲ್ಲಿ ಇನ್ನೂ ಹೆಚ್ಚು ಕಾಲ) ನಿರಂತರವಾಗಿ ಆಳ್ವಿಕೆ ನಡೆಸಿಕೊಂಡು ಬಂದಿದ್ದರಿಂದ ಆ ಸ್ಥಿತಿಯೆ ಮುಂದುವರೆಯಿತು. ಲಾಲ್ ಬಹದ್ದೂರ್ ಶಾಸ್ತ್ರಿಗಳ ಒಂದೂವರೆ ವರ್ಷದ ಪ್ರಧಾನಿ ಸ್ಥಾನದ ಕಾಲಾವಧಿಯನ್ನು ಬಿಟ್ಟರೆ ಪಂಡಿತ ಜವಹರಲಾಲ ನೆಹರೂ ಮತ್ತು ಅವರ ಮಗಳು ಇಂದಿರಾಗಾಂಧಿಯವರೇ ಪ್ರಧಾನಿಗಳಾಗಿ ಕಾಂಗ್ರಸ್ಸಿನ ಆಡಳಿತದ ಚುಕ್ಕಾಣಿ ಹಿಡಿದುಕೊಂಡಿದ್ದರಷ್ಟೆ. ಮುಂದೆ ೧೯೭೭ರ ಅನಂತರದಲ್ಲಿ ಬೇರೆ ಪಕ್ಷಗಳ ಬೇರೆ ಬೇರೆ ಪ್ರಧಾನಿಗಳ ಆಳ್ವಿಕೆ ಆಗೀಗ ದೇಶದಲ್ಲಿ ಸಂಚಾರಿ ಭಾವಗಳಂತೆ ಬಂದು ಹೋದರೂ ಆಮೇಲಿನ ವರ್ಷಗಳಲ್ಲಿಯೂ ಹೆಚ್ಚು ಕಾಲ ಕೇಂದ್ರದಲ್ಲಿ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ಸೇ ಆಳ್ವಿಕೆ ನಡೆಸಿತು. ಕಾಂಗ್ರೆಸ್ಸು ಭಾಷಾ ವಿಷಯವನ್ನೂ ‘ಮತ ಬ್ಯಾಂಕಿ’ನ ರಾಜಕೀಯದ ಸಾಮಗ್ರಿಯನ್ನಾಗಿ ಮಾಡಿಕೊಂಡು ಬಂದದ್ದರಿಂದ ಮುಂದೆ ಆಳ್ವಿಕೆ ನಡೆಸಿದ ಇತರ ರಾಜಕೀಯ ಪಕ್ಷಗಳೂ ಆ ವಿಷಯದಲ್ಲಿ ಅಗತ್ಯವಾದ, ಭಿನ್ನವಾದ ದಿಟ್ಟ ನಿಲುವು ತೆಗೆದು ತೆಗೆದುಕೊಳ್ಳುವುದಕ್ಕೆ ಧೈರ್ಯ ಮಾಡಲಿಲ್ಲ.

ಭಾಷೆಯ ವಿಷಯದಲ್ಲಿ ಎಲ್ಲರಿಗಿಂತ ಹೆಚ್ಚು ಗಂಭೀರವಾಗಿ ಮತ್ತು ಆಳವಾಗಿ ‘ದಾರ್ಶನಿಕ’ ರೀತಿಯಲ್ಲಿ ಚಿಂತನೆ ಮಾಡಿದವರು. ಆ ಬಗ್ಗ ಬರೆದವರು ಪ್ರಚಾರ ಮಾಡಿದವರು ಡಾ. ರಾಮ ಮನೋಹರ ಲೋಹಿಯಾ, ಲೋಹಿಯಾ ಪ್ರಭಾವ ನಮ್ಮ ಕನ್ನಡ ಸಾಹಿತಿಗಳ ಮೇಲೆಯೂ ಸಾಕಷ್ಟಾಗಿದೆ. ಲೋಹಿಯಾವಾದಿ ಸಮಾಜವಾದಿಗಳು ಅಧಿಕಾರಕ್ಕೆ ಬಂದಾಗ ಅವರು ಕೂಡ ಕಾಂಗ್ರೆಸ್ಸಿನ ‘ಮತ ಬ್ಯಾಂಕ್’ ರಾಜಕೀಯದ ಲಾಭ ನಷ್ಟ ದೃಷ್ಟಿಯ ಲೆಕ್ಕಾಚಾರದ ದಾರಿಯಲ್ಲಿಯೇ ನಡೆದರು. ಕರ್ನಾಟಕದಲ್ಲಿಯಂತೂ ಲೋಹಿಯವಾದಿ ಸಮಾಜವಾದಿ ಗಳಾಗಿಯೇ ತಮ್ಮ ರಾಜಕೀಯ ಜೀವನವನ್ನು ರೂಪಿಸಿಕೊಂಡು ಬಂದು ಮುಖ್ಯಮಂತ್ರಿಗಳೂ ಆದ ಎಸ್. ಬಂಗಾರಪ್ಪ, ಜೆ ಹೆಚ್ ಪಟೇಲ್ ಅವರ ಸರಕಾರಗಳು ಕೂಡ ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಭಾಷೆಯಾದ ಕನ್ನಡವನ್ನು ಸದೃಢಗೊಳಿಸುವ ವಿಷಯದಲ್ಲಿ ಹಿಂದಿನ ಕಾಂಗ್ರೆಸ್ ಸರಕಾರಗಳಿಗಿಂತ ಪುರೋಗಾಮಿಯಾದ ಕ್ರಮಗಳನ್ನೇನೂ ಕೈಗೊಳ್ಳಲಿಲ್ಲ. ಎಸ್ ಬಂಗಾರಪ್ಪನವರು ಕಾಂಗ್ರೆಸ್ಸಿನವರಾಗಿಯೆ ಮುಖ್ಯಮಂತ್ರಿಯಾಗಿದ್ದರಲ್ಲವೆ? ಜೆ.ಎಚ್.ಪಟೇಲ್, ಎಸ್. ಬಂಗಾರಪ್ಪ ಅವರಿಬ್ಬರೂ ಭಾಷೆಯ ವಿಷಯದಲ್ಲಿಯೂ ತಮ್ಮ ಪೂರ್ವಾಶ್ರಮದ ಸಮಾಜವಾದೀ ಘೋಷಿತ ನಿಷ್ಠೆಗೆ ಅನುಗುಣವಾಗಿ ನಡೆದುಕೊಳ್ಳಲಿಲ್ಲ. ಕುವೆಂಪು ಅವರು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದಾಗ (೧೯೫೬-೬೦) ಉನ್ನತ ಶಿಕ್ಷಣದಲ್ಲಿಯೂ ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡುವ ಬಗ್ಗೆ ಮಾಡಿದ ಪ್ರಯತ್ನ, ತೋರಿದ ದಾರಿಯ ಜಾಡನ್ನು ಹಿಡಿದು ವಿಸ್ತರಿಸಿಕೊಳ್ಳುವ ಕಡೆಗೆ ಅವರು ಲಕ್ಷ್ಯ ಕೊಡಬಹುದಾಗಿತ್ತು. ಅದನ್ನು ಮಾಡಲು ದೃಢ ನಿಲುವು ತಳೆದು ಮುಂದಾಗಬಹುದಿತ್ತು.

ಕನ್ನಡ ಭಾಷಾವಾರು ರಾಜ್ಯ ರಚನೆಯಾದದ್ದು ೧೯೫೬ರ ನವೆಂಬರ್ ೧ ರಂದು. ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ನಿಧನರಾದದ್ದು ಅದಾದ ಕೇವಲ ಒಂದು ತಿಂಗಳು, ಐದು ದಿನಗಳ ಆನಂತರ ಡಿಸೆಂಬರ್ ೬ ರಂದು. ಭಾಷಾವಾರು ರಾಜ್ಯ ರಚನೆಯ ಕಾರಣದಿಂದಾಗಿ ಬದಲಾದ ಸ್ಥಿತಿಯಲ್ಲಿ ಭಾಷಾ ಸಂಬಂಧವಾದ ಸಂವಿಧಾನದ ವಿಧಿಗಳ ಸಮರ್ಪಕತೆ ಅಥವಾ ಅಸಮರ್ಪಕತೆಯ ಬಗ್ಗೆ ಹೇಳುವ ಸ್ಥಿತಿಯಲ್ಲಿ ಅಥವಾ ತಿದ್ದುಪಡಿಗಳ ಅವಶ್ಯಕತೆ ಇದೆಯೆ ಇಲ್ಲವೇ ಎಂದು ತಾವಾಗಿ ಸಲಹೆ ಮಾಡುವ ಸ್ಥಿತಿಯಲ್ಲಿ ಡಾ ಅಂಬೇಡ್ಕರ್ ಅವರ ಆರೋಗ್ಯ ಸ್ಥಿತಿಯೂ ಇರಲಿಲ್ಲ ; ಸ್ವತಃ ಕೇಂದ್ರ ಸರಕಾರಕ್ಕೇ ಆ ಬಗ್ಗೆ ಮರುಚಿಂತಿಸಬೇಕೆಂದು ಗಂಭೀರವಾಗಿ ಅನಿಸಲಿಲ್ಲ. ಭಾಷೆ ಮತ್ತು ಶಿಕ್ಷಣಕ್ಕೆ ಸಂಬಂಧಪಟ್ಟ ಸಂವಿಧಾನದ ವಿಧಿಗಳು ಹೊಸ ಪರಿಸ್ಥಿತಿಗೆ ಅಗತ್ಯವಾದ ರೀತಿಯಲ್ಲಿ ತಿದ್ದುಪಡಿಯಾಗಲಿಲ್ಲ.

ದೇಶ ಸ್ವತಂತ್ರವಾದ ಹೊಸತರಲ್ಲಿ ಅಖಂಡ ಭಾರತದ ಕನಸು ಭಗ್ನವಾಯಿತು. ಮತಧರ್ಮದ ಹೆಸರಿನಲ್ಲಿ ಭಾರತ-ಪಾಕಿಸ್ತಾನ ಎಂದು ಎರಡು ರಾಷ್ಟ್ರಗಳಾದವು.ಆ ಸಂದರ್ಭದಲ್ಲಿ ಭಯಂಕರ ಕೋಮು ಗಲಭೆಗಳಾಗಿದ್ದವು. ಮತಧರ್ಮಾಂಧತೆಯ ಮನೋಧರ್ಮವೇ ಗಾಂದೀಜಿಯ ಹತ್ಯೆಗೂ ಹಿನ್ನೆಲೆಯಾಗಿತ್ತು. ಮತಧರ್ಮೀಯ ಕಾರಣವನ್ನೇ ಮುಂದೆ ಮಾಡಿಕೊಂಡು ಪಾಕಿಸ್ತಾನವು ಕಾಶ್ಮೀರವನ್ನು ಆಕ್ರಮಿಸಿಕೊಳ್ಳಲು ಯುದ್ಧ ಮಾಡಿತ್ತು. ಆ ಎಲ್ಲ ಕಾರಣಗಳಿಂದಾಗಿ ಆ ಕಾಲದ ಭಾರತದ ರಾಜಕೀಯ ನಾಯಕರಲ್ಲಿ – ಮುಖ್ಯವಾಗಿ ನೆಹರೂ, ಅಬುಲ್ ಕಲಾಂ ಆಜಾದ್ ಅಂಥವರಲ್ಲಿ-ಮತಧರ್ಮ ಸಂಬಂಧವಾದ ವಿಷಯ, ಸಂಗತಿಗಳ ಬಗ್ಗೆ ಅತಿಸೂಕ್ಷ್ಮ ಮನಃಸ್ಥಿತಿ, ಒಂದು ಬಗೆಯ ಎದೆಗುಂದಿದ ಮನಃಸ್ಥಿತಿ, ಭಯಚಕಿತ ಸ್ಥಿತಿ ಇತ್ತು. ಆದರೆ ಅವರ ಅಂಥದೇ ಮನಃಸ್ಥಿತಿ ದೇಶೀಯ ಭಾಷೆಗಳ ವಿಷಯದಲ್ಲಿ ಕೂಡ ಸರಿಯಲ್ಲದ ರೀತಿಯಲ್ಲಿ ಏಕೋ ಸಮೀಕರಣಗೊಳ್ಳುವಂತಾದದ್ದು ದುರದೃಷ್ಟಕರ.

ಮತಧರ್ಮದ ಹೆಸರಿನಲ್ಲಿ ದೇಶ ಇಬ್ಬಾಗವಾದಂತೆ ಹಲವು ದೇಶೀಯ ಭಾಷೆಗಳುಳ್ಳ ಭಾರತವು ಭವಿಷ್ಯದಲ್ಲಿ ಭಾಷೆಯ ಹೆಸರಿನಲ್ಲಿ ಮತ್ತೆ ಹೋಳು ಹೋಳಾದೀತೇನೊ ಎಂಬ ಊಹಾತ್ಮಕ ದೂರದ ಭಯವೇ ಅದಕ್ಕೆ ಸಂರ್ಪೂ ಕಾರಣವಾಗಿರದಿದ್ದರೂ ಅದು ಮುಖ್ಯ ಕಾರಣವಂತೂ ಆಗಿತ್ತು. ಹಾಗೆಯೆ ಸಂವಿಧಾನದಲ್ಲಿ ಭಾಷಾ ಅಲ್ಪಸಂಖ್ಯಾತರ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆಂದು ಇರುವ ಭಾಷೆ ಮತ್ತು ಶಿಕ್ಷಣ ಸಂಬಂಧವಾದ ವಿಧಿಗಳು ಭಾಷೆಯ ಆಧಾರದ ಮೇಲೆಯೆ ರಾಜ್ಯ ರಚನೆಯಾದರೂ ಆಯಾ ಭಾಷೆಗಳ ಬೆಳೆಯಬೇಕಾದ ರೀತಿಯಲ್ಲಿ ಬೆಳೆಯಲು ತೊಡಕುಂಟುಮಾಡಿದವು.

ಆಧುನಿಕ ನಾಗರಿಕತೆಯ ಹೆಸರಿನಲ್ಲಿ ಬೆಳೆಯುತ್ತಿರುವ ಏಕವಿನ್ಯಾಸಗತಿಯ ಜಾಗತಿಕ ಸಂಸ್ಕೃತಿ ಅಥವಾ ಜಾಗತೀಕರಣ ಸಂಸ್ಕೃತಿ ನಮ್ಮ ಭಾಷೆ, ಸಂಸ್ಕೃತಿ ಸಂದರ್ಭದಲ್ಲಿ ಇತರ ಕ್ಷೇತ್ರಗಳ ಮೇಲೆ ಮಾಡಿದಂತೆಯೆ ತೊಡಕು ಬಿಕ್ಕಟ್ಟು ದಿಗ್ಬ್ರಮೆಗಳನ್ನುಂಟು ಮಾಡಿದೆ,. ಮಾಡುತ್ತಿದೆ. ನಮಗೆ ಈ ಅರ್ಥಸಂಸ್ಕೃತಿಯ ಅಂದರ ಸಂಪತ್ತಿನ ಸಂಸ್ಕೃತಿಯ ಹಿಂಬಾಲಕರಾಗಿ ಹೋಗಬೇಕಾದಂಥ ಒಂದು ಸನ್ನಿವೇಶ ನಿರ್ಮಾಣವಾಗಿ ಬಿಟ್ಟಿದೆ. ಎಷ್ಟೇ ವೇಗದಲ್ಲಿ ಅರ್ಥಸಂಸ್ಕೃತಿಯ ಈ ಮುಂದೋಟದಲ್ಲಿ ಕೂಡಿಕೊಂಡು ಸಾಗಿದರೂ ನಾವು ಹಿಂಬಾಲಕರಾಗಿಯೇ ಇರುವುದು ಶಾಶ್ವತ ಸ್ಥಿತಿಯಾಗುತ್ತದೆ. ಅಮೆರಿಕ ಮತ್ತಿತರ ಮುಂದುವರೆದ ದೇಶಗಳನ್ನು ಹಿಂದೆ ಹಾಕಿ ಅರ್ಥ ಸಂಸ್ಕೃತಿಯ ಮುಂದೋಟದಲ್ಲಿ ನಾವು ಯಾವಾಗ ಮುಂದೆ ಹೋಗಲು ಸಾಧ್ಯ? ಈ ಜಾಗತೀಕರಣ ಅಥವಾ ಅರ್ಥ ಸಂಸ್ಕೃತಿಯ ಲಾಲಸೆ, ದುರಾಸೆ ಹುಟ್ಟಿಸಿ ಆತಂಕವನ್ನು ಬೆಳೆಸುತ್ತದೆ. ಲಾಲಸೆ, ದುರಾಸೆ, ಆತಂಕ ಈ ಮೂರನ್ನೂ ಮಡಿಲಲ್ಲಿ ಇಟ್ಟುಕೊಂಡು ಅವುಗಳನ್ನು ಸಾಕುತ್ತಿರುವ ಅರ್ಥ ಸಂಸ್ಕೃತಿಗೆ, ಮಾರುಕಟ್ಟೆ ಸಂಸ್ಕೃತಿಗೆ ಆಧುನಿಕತೆಯ ಹೆಸರಿನಲ್ಲಿ ನಾವು ಹಿಂಬಾಲಕರಾಗಿ ಅಥವಾ ಮುಂದುವರೆದವರ ಶೋಷಣೆಗೆ ಸಮೃದ್ಧ ಬಲಿಪಶುಗಳಾಗಿ ಸಾಗುತ್ತಿರುವುದೇ ದೊಡ್ಡ ದುರಂತವಾಗಿದೆ. ನಮಗೆ ರಾಜಕೀಯ ಸ್ವಾತಂತ್ರ್ಯವೇನೊ ಇದೆ. ಆದರೆ ಜಾಗತೀಕರಣ ಅರ್ಥಸಂಸ್ಕೃತಿಯ ಮುಂದೋಟದಲ್ಲಿ ಶಾಶ್ವತವಾದ ಹಿಂಬಾಲಕ ಸ್ಥಿತಿಯನ್ನು, ಶೋಷಿತ ಸ್ಥಿತಿಯನ್ನು ಇಲ್ಲವೆ ಕೈಯೊಡ್ಡಿ ನಿಲ್ಲಬೇಕಾದಂಥ ಸ್ಥಿತಿಯನ್ನು ಒಪ್ಪಿ ಸಾಗುತ್ತಿರುವ ನಾವು ಬೇರೆ ರೀತಿಯಲ್ಲಿ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದೇವೆ. ಈ ವಿಪರ್ಯಾಸ ಸ್ಥಿತಿಯಲ್ಲಿ ಸಾಗುತ್ತಿದ್ದೇವೆ. ಸಹಜವಾಗಿಯೆ ಮುಂಚೂಣಿಯಲ್ಲಿರುವ ಮುಂದುವರಿದಿರುವ ರಾಷ್ಟ್ರಗಳ ಜೊತೆಯಲ್ಲಿಕ ನಾವು ಸಂಪರ್ಕವನ್ನು ಏರ್ಪಡಿಸಿಕೊಳ್ಳುವುದು ಅಗತ್ಯ, ಅನಿವಾರ್ಯ ಎಂಬಂಥ ಸ್ಥಿತಿಯೂ ಉಂಟಾಗಿದೆ. ಆದ್ದರಿಂದ ಸಂಪರ್ಕ ಸಾಧನವಾಗಿ ಒಂದು ವಿದೇಶೀ ಭಾಷೆಯ ಅಗತ್ಯವೂ ಉಂಟಾಗಿದೆ.

ಬ್ರಿಟಿಷ್ ವಸಾಹತುಶಾಹಿಯ ಕಾರಣದಿಂದಾಗಿ ಇಂಗ್ಲಿಷ್ ನಮಗೆ ಒದಗಿ ಬಂದಿದೆ. ಇದು ಒಂದು ಆಕಸ್ಮಿಕ. ಆದರೂ ಇದು ನಮ್ಮ ದೇಶದ ಚರಿತ್ರೆಯ ಒಂದು ಭಾಗ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಬೇರೆ ಬಾಷೆಗಳಿಗಿಂತ ಇಂಗ್ಲಿಷ್ ಸಾಪೇಕ್ಷವಾಗಿ, ಪ್ರಮಾಣದಲ್ಲಿ ಹೆಚ್ಚು ಅನುಕೂಲಕರವಾದ ಭಾಷೆಯೂ ಆಗಿ ಈಗಿನ ಜಗತ್ತಿನ ಸಂದರ್ಭದಲ್ಲಿ (ನಮ್ಮ ರಾಷ್ಟ್ರೀಯ ಪ್ರಸ್ತುತ ಸಂದರ್ಭದಲ್ಲಿ ಕೂಡ) ಇರುವಂಥದು. ಆದ್ದರಿಂದ ಇಂಗ್ಲಿಷನ್ನು ನಾವು ಚೆನ್ನಾಗಿ ಕಲಿಯುವುದು ಉಪಯುಕ್ತ, ಎಂಬುದು ನಿಜ. ಆದರೆ ಅದನ್ನು ಸಂಪರ್ಕ ಸಾಧನವಾಗಿ, ಉಪಕರಣ ರೂಪದಲ್ಲಿ, ಜ್ಞಾನಾರ್ಜನೆ, ಪರಾಮರ್ಶನ ರೂಪದಲ್ಲಿ ಬಳಸಿಕೊಳ್ಳಬೇಕು ಎಂಬುದನ್ನು ನಾವು ಮರೆತಿದ್ದೇವೆ. ಅದನ್ನೇ ನಮ್ಮ ದೇಶದ ಮಕ್ಕಳ ಶಿಕ್ಷಣ ಮಾಧ್ಯಮವಾಗಿಯೂ ಮಾಡಿಕೊಳ್ಳಲು ಹೊರಟಿದ್ದೇವೆ. ಅದರಿಂದಾಗಿ ಪ್ರಾಥಮಿಕ ಹಂತದಲ್ಲಿ ಕೂಡ ಮಕ್ಕಳ ಮಾತೃಭಾಷೆ/ಪ್ರದೇಶ ಭಾಷೆ ಅಪಾಯವನ್ನು ಎದುರಿಸುವಂತಾಗಿದೆ. ಇದು ಅನ್ಯಾಯ.

ಇಂಗ್ಲಿಷನ್ನು ಶಿಕ್ಷಣ ಮಾಧ್ಯಮವಾಗಿಯೂ ಮಾಡಿಕೊಂಡು ಹೊರಟಿದ್ದರಿಂದ ಕನ್ನಡ ಭಾಷೆ ಮತ್ತು ಅದರ ನಿರ್ದಿಷ್ಟ ಸಾಂಸ್ಕೃತಿಕ ಸಂದರ್ಭವೇ ಪುಟಿಸಿ ಎಬ್ಬಿಸಬಹುದಾದ ಸೃಜನಶೀಲ ಮೂಲ ಸೆಲೆಗಳು, ಚೈತನ್ಯಾಂಶಗಳು ಬತ್ತಿ ಹೋಗುತ್ತವೆ. ಕನ್ನಡ ಭಾಷೆಯ ಮೂಲಕವೇ ಸೃಜನಶೀಲ ಕ್ರಿಯೆ ಹೆಚ್ಚು ಶಕ್ತಿಯುತವಾಗಿ ಬೆಳೆಯುವುದಕ್ಕೆ ಆಗದೇ ಇರುವ ಸ್ಥಿತಿ ನಿರ್ಮಾಣವಾಗುತ್ತ ಇದೆ. ನಮ್ಮ ಸೃಜನಶೀಲ ಚೈತನ್ಯವನ್ನು ಆರ್ದ್ರವಾಗಿರಿಸದೆ ಒಣಗಿಸಿಬಿಡುವಂಥ ಜಾಗತಿಕ ಏಕವಿನ್ಯಾದ ಸಂಸ್ಕೃತಿಯ ಜೊತೆ ತಾವು ನಮ್ಮನ್ನು ಸೇರಿಸಿಕೊಂಡು ಹೋಗುತ್ತಿದ್ದೇವೆ ಅಥವಾ ಅಂಥ ಸ್ಥಿತಿಯನ್ನು ತಂದುಕೊಂಡಿದ್ದೇವೆ. ಹಿಂಬಾಲಕತನವನ್ನು ಒಪ್ಪಿಕೊಂಡು ಸಾಗುವ ದೈನ್ಯ, ಸೃಜನಶೀಲತೆಯನ್ನು ಒಣಗಿಸಿಕೊಳ್ಳುತ್ತ ಹೋಗುವ ದಾರಿದ್ಯ್ರ ಎರಡೂ ನಮ್ಮ ಪಾಡಾಗಿದೆ.

ಈ ಸ್ಥಿತಿಯನ್ನು ತಡೆಯುವುದು ಮಾತ್ರವಲ್ಲ ಭಾಷೆಯ ಪುರೋಭಿವೃದ್ಧಿಗೆ ಮತ್ತೆ ಹೋರಾಡಬೇಕಾಗಿದೆ. ಈ ದಿಶೆಯಲ್ಲಿ ಮೊದಲು ಆಗಬೇಕಾದ್ದು ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದ ಹೋರಾಟ. ರಾಜ್ಯದೊಳಗಿಣ ಶಿಕ್ಷಣ ಮತ್ತು ಭಾಷೆ ಸಂಬಂಧವಾದ ವಿಷಯಗಳಲ್ಲಿನ ತೀರ್ಮಾನ ಕೈಗೊಂಡು ಅನುಷ್ಠಾನಕ್ಕೆ ತರಲು ರಾಜ್ಯಕ್ಕೆ ಸಂಪೂರ್ಣ ಅಧಿಕಾರ ಅಥವಾ ಭಾಷಾ ಸ್ವಾಯುತ್ತತೆ (Language Autonomy) ಗಾಗಿ ಹೋರಾಟದ ಮೂಲಕ ಹಕ್ಕೊತ್ತಾಯ ಮಾಡಬೇಕಾಗಿದೆ. ಅದಕ್ಕೆ ವೇದಿಕೆಯಾಗುವ ಶಕ್ತಿ, ಸಾಮರ್ಥ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಅರ್ಜಿಸಿಕೊಳ್ಳಬೇಕಾದದ್ದು ಅಗತ್ಯವಾಗಿದೆ. ನನ್ನ ಈ ಅಭಿಪ್ರಾಯವನ್ನು ಕನ್ನಡ ಪರ ಚಿಂತಕರ, ಸಂಬಂಧಪಟ್ಟ ಎಲ್ಲರ ಪರಿಶೀಲನೆಗೆ, ಚರ್ಚೆಗೆ, ಈ ವೇದಿಕೆಯ ಮೂಲಕ ಒಪ್ಪಿಸುತ್ತಿದ್ದೇನೆ.

ಕನ್ನಡ ಕುರಿತಂತೆ ಇತ್ತೀಚಿನ ಕೆಲವು ವಿದ್ಯಮಾನಗಳ ಬಗ್ಗೆ ಎರಡು ಮಾತು ಹೇಳುತ್ತೇನೆ. ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆ ಅಥವಾ ಪ್ರದೇಶ ಭಾಷೆಯಲ್ಲಿ ನೀಡಬೇಕಾದ ಕರ್ನಾಟಕ ಉಚ್ಛನ್ಯಾಯಾಲಯ ನೀಡಿದ್ದ ತೀರ್ಪನ್ನು ಸರ್ವೋನ್ನತ ನ್ಯಾಯಾಲಯ ಎತ್ತಿಹಿಡಿದಿದೆ. ಶಿಕ್ಷಣವು ರಾಜ್ಯ ಸರಕಾರದ ನೀತಿಯ ವಿಷಯವಾಗಿದ್ದು ಅದರಲ್ಲಿ ತಾನು ಮಧ್ಯೆ ಪ್ರವೇಶಿಸುವುದಿಲ್ಲವೆಂದೂ ಸರ್ವೋನ್ನತ ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದರಿಂದ ಇದಕ್ಕೆ ಮೊದಲು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದ್ದ ಪ್ರಕರಣಗಳು ನಿರರ್ಥಕವಾದವು. ಅದನ್ನು ಹಿಂದಕ್ಕೆ ಪಡೆಯುವ ತಾಂತ್ರಿಕ ಅಂಶ ಮಾತ್ರ ಬಾಕಿ ಇದ್ದು ಅದು ಸರಕಾರದ ೨೯-೪-೧೯೯೪ರ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಆಂಶಿಕವಾದ ತಡೆಯನ್ನೊಡಿದೆ. ಇದನ್ನು ನಿವಾರಿಸಲು ಕರ್ನಾಟಕ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಬರುವ ಶಿಕ್ಷಣ ವರ್ಷದಿಂದಲೇ ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆ ಅಥವಾ ಪ್ರವೇಶ ಭಾಷೆಯ ಶಿಕ್ಷಣ ಸಂಪೂರ್ಣವಾಗಿ ಜಾರಿಗೆ ಬರಬೇಕು.

ಸರಕಾರದ ೨೯-೪-೧೯೯೪ರ ಆದೇಶದಲ್ಲಿ ಪ್ರಾಥಮಿಕ ೧ನೆಯ ತರಗತಿಯಿಂದ ೪ನೆಯ ತರಗತಿಯವರೆಗೆ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆ/ಪ್ರದೇಶ ಭಾಷೆಯೇ ಶಿಕ್ಷಣ ಮಾಧ್ಯಮವಾಗುವಂತೆ ಕಡ್ಡಾಯಗೊಳಿಸಿರುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯ ತಜ್ಞರ ಸಮಿತಿಯ ತಿದ್ದುಪಡಿ ಸೂಚಿಸಿದೆ. ಅದೇ ರೀತಿ ಪ್ರಾಥಮಿಕ ಶಿಕ್ಷಣವು ಹಿರಿಯ ಪ್ರಾಥಮಿಕ ಶಿಕ್ಷಣವನ್ನೂ ಒಳಗೊಳ್ಳಬೇಕು. ಅದರಂತೆ ಪೂರ್ವ ಪ್ರಾಥಮಿಕವೂ ಸೇರಿದಂತೆ ೧ ರಿಂದ ೭ನೆಯ ತರಗತಿಯವರೆಗೆ ಮಾತೃಭಾಷೆ / ಪ್ರದೇಶಭಾಷೆಯ ಶಿಕ್ಷಣ ಮಾಧ್ಯಮವಿರಬೇಕು ಎಂದು ಶಿಫಾರಸು ಮಾಡಿದೆ. ಕಳೆದ ಮಾರ್ಚಿ ೬ರಂದು ಮೈಸೂರಿನ ಕನ್ನಡ ಕ್ರಿಯಾ ಸಮಿತಿ ಏರ್ಪಡಿಸಿದ್ದ ನನ್ನ ಅಧ್ಯಕ್ಷತೆಯಲ್ಲಿ ದಿನವಿಡೀ ನಡೆದ ಚಿಂತನ ಸಮಾವೇಶದಲ್ಲಿ ‘ಬರಗೂರು ವರದಿ’ಯ ಬಗ್ಗೆ ಗಂಭೀರವಾದ ಚರ್ಚೆ ನಡೆದು ವರದಿಯನ್ನು ಸ್ವಾಗತಿಸಿ, ಅನುಮೋದಿಸಲಾಯಿತು. ಸಭೆಯ ಸಮಾರೋಪದಲ್ಲಿ ಭಾಗವಹಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಎಚ್. ವಿಶ್ವನಾತ್ ಅವರು ವರದಿಯ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಅಷ್ಟರ ಮಟ್ಟಿಗೆ ಇದೊಂದು ಸ್ವಾಗತಾರ್ಹ ಬೆಳವಣಿಗೆ ಎನ್ನಬೇಕು. ಆದರೆ ಇಷ್ಟಕ್ಕೇ ತೃಪ್ತಿ ಪಡುವಂತಿಲ್ಲ.

ಕನ್ನಡ ಮಾದ್ಯಮದಲ್ಲಿ ಓದಿದವರಿಗೆ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಪ್ರವೇಶದಲ್ಲಿ ಹಾಗೂ ಉದ್ಯೋಗಾವಕಾಶಗಳಲ್ಲಿಕ ಆದ್ಯತೆ ನೀಡಲು ಸರಕಾರ ಯೋಚಿಸಿರುವುದು ಸ್ವಾಗತಾರ್ಹ.

ಪ್ರಾಥಮಿಕ ಶಿಕ್ಷಣವನ್ನು ‘ಮಕ್ಕಳ ಮೂಲಭೂತ ಹಕ್ಕು’ ಎಂದು ಪರಿಗಣಿಸಬೇಕಾದ ಸಂದರ್ಭದಲ್ಲಿ ೨೦೦೦ ಪ್ರಾಥಮಿಕ ಶಾಲೆಗಳನ್ನು ಮುಚ್ಚುವುದಾಗಿ ಸಂಬಂಧಪಟ್ಟ ಮಂತ್ರಿಗಳು ಪ್ರಕಟಿಸಿರುವುದು ಶಿಕ್ಷಣದ ಬಗ್ಗೆ ಕಳಕಳಿ ಇರುವವರಿಗೆಲ್ಲ ಆಘಾತವನ್ನುಂಟುಮಾಡಿದೆ. ಮಧ್ಯದಲ್ಲಿಯೇ ಶಾಲೆಯನ್ನು ಬಿಡುವ ಪರಿಸ್ಥಿತಿಯಲ್ಲಿರುವ ಮಕ್ಕಳು ಮತ್ತೆ ಶಾಲೆಗೆ ಬರುವಂತೆ ಮಾಡುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ. ಹಳ್ಳಿಗಾಡಿನ, ಕೆಳವರ್ಗದ, ಬಡವರ ಪಾಲಿಗೆ ಇರುವ ಸರಕಾರಿ ಶಾಲೆಗಳು ಮುಚ್ಚಿಹೋದರೆ ಆ ವರ್ಗದ ಮಕ್ಕಳ ಪಾಲಿಗೆ ಶಿಕ್ಷಣದ ಅವಕಾಶ ಮುಚ್ಚಿ ಹೋಗುತ್ತದೆ. ಆದ್ದರಿಂದ ಶಾಲೆಗಳನ್ನು ಮುಚ್ಚುವ ಯೋಚನೆ ಮಾಡುವ ಬದಲು ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುವ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಪುಸ್ತಕಗಳ ಮೇಲೆ ಈ ವರ್ಷದ ಮುಂಗಡ ಪತ್ರದಲ್ಲಿ ಶೇ ೪ರ ಮಾರಾಟ ತೆರಿಗೆಯನ್ನು ವಿಧಿಸಲಾಯಿತು. ಯುನೆಸ್ಕೊ ನೀತಿಗೂ ವಿರುದ್ಧವಾದ, ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ, ದೇಶದ ಬೇರಾವ ರಾಜ್ಯದಲ್ಲಿಯೂ ಇಲ್ಲದ ಈ ಕ್ರಮದ ಬಗ್ಗೆ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗಿ ಅದನ್ನು ಸರಕಾರ ಹಿಂತೆಗೆದುಕೊಂಡಿದ್ದು ಸಮಾಧಾನದ ಸಂಗತಿ. ಈ ವರ್ಷದ ಮುಂಗಡ ಪತ್ರದಲ್ಲಿನ ಗಣಕ ತಂತ್ರಾಂಶಗಳ ಮೇಲೆಯೂ ಮಾರಾಟ ತೆರಿಗೆ ವಿಧಿಸಿರುವುದು ಕನ್ನಡ ತಂತ್ರಾಂಶಗಳ ಬೆಳವಣಿಗೆಗೆ ಮಾರಕವಾಗಿದೆ. ಸರಕಾರವೇ ಕನ್ನಡ ತಂತ್ರಾಂಶಗಳ ದೊಡ್ಡ ಗ್ರಾಹಕ. ಸರಕಾರ ತಾನು ಕೊಳ್ಳುವ ಕನ್ನಡ ತಂತ್ರಾಂಶಗಳಿಗೆ ತಾನೇ ತೆರಿಗೆ ನೀಡುವಂತಾಗುತ್ತದೆ. ಕನ್ನಡ ತಂತ್ರಾಂಶಗಳನ್ನು ಕೊಳ್ಳುವವರಿಗೆ ಇದು ಹೆಚ್ಚಿನ ಹೊರೆಯಾಗುವುದರಿಂದ ಕನ್ನಡ ತಂತ್ರಾಂಶಗಳ ಬಳಕೆಗೆ ಅತ್ಯಗತ್ಯವಾಗಿರುವ ಪ್ರೋತ್ಸಾಹ ಇಲ್ಲದಂತಾಗುತ್ತದೆ. ಆದ್ದರಿಂದ ಸರಕಾರ ಕನ್ನಡ ತಂತ್ರಾಂಶಗಳ ಮೇಲೆ ವಿಧಿಸಿರುವ ಮಾರಾಟ ತೆರಿಗೆಯನ್ನೂ ಕೂಡಲೆ ರದ್ದುಪಡಿಸಬೇಕು.

ಕನ್ನಡವನ್ನು ಬಳಸುವಂತೆ ಸರಕಾರ ಕೈಗೊಂಡಿರುವ ಕ್ರಮಗಳನ್ನು ಮೆಚ್ಚಬೇಕು. ಕನ್ನಡ ಬೆರಳಚ್ಚು ಯಂತ್ರದಲ್ಲಿ ಕನ್ನಡ ಅಂಕಿಗಳನ್ನು ಅಳವಡಿಸಲಾಗಿದೆ. ಎಲ್ಲ ಸರಕಾರಿ ವಾಹನಗಳ ನೋಂದಣಿ ಫಲಕಗಳು ಕಡ್ಡಾಯವಾಗಿ ಕನ್ನಡ ಅಕ್ಷರ ಮತ್ತು ಕನ್ನಡ ಅಂಕಿಗಳಲ್ಲಿ ಇರಬೇಕೆಂಬ ಆದೇಶವಿದೆ. ಆದರೆ ಆದೇಶವನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುವುದಕ್ಕೆ ಅಗತ್ಯ ಕ್ರಮಗಳನ್ನು ಸಂಬಂಧಪಟ್ಟವರು ಕೈಗೊಳ್ಳಬೇಕಾಗಿದೆ. ದೂರದರ್ಶನದ ವಿವಿಧ ವಾಹಿನಿಗಳಲ್ಲಿ ಕನ್ನಡ ಅಂಕಿಗಳು ಕಾಣಿಸಿಕೊಳ್ಳುತ್ತಿವೆ. ಇದು ಸಂತೋಷದ ಸಂಗತಿ. ಅಂತರಜಾಲ ಆವೃತ್ತಿಯಲ್ಲಿ ಕನ್ನಡ ಅಂಕಿಗಳನ್ನು ಬಳಸುವ ನಾಡಿನ ದೊಡ್ಡಪತ್ರಿಕೆಗಳು ತಮ್ಮ ಮುದ್ರಣ ಆವೃತ್ತಿಯಲ್ಲಿ ಮಾತ್ರ ಇನ್ನೂ ಇಂಗ್ಲಿಷ್ ಅಂಕಿಗಳನ್ನೇ ಬಳಸುತ್ತಿವೆ. ‘ಸಂಪೂರ್ಣವಾಗಿ ಕನ್ನಡ ಅಂಕಿಗಳನ್ನು ಬಳಸುವ ಕನ್ನಡ ಪತ್ರಿಕೆಗಳ ಜಿಲ್ಲೆ’ ಎಂಬ ವಿಶಿಷ್ಟತೆ ಚಾಮರಾಜನಗರ ಜಿಲ್ಲೆಯ ಪ್ರದೇಶಗಳೂ ಸೇರಿದ ಅವಿಭಜಿತ ಮೈಸೂರು ಜಿಲ್ಲೆಯದಾಗಿತ್ತು. ಈಗ ಜಿಲ್ಲೆಯಲ್ಲಿ ಆರಂಭವಾಗಿರುವ ಹೊಸ ಕನ್ನಡ ಪತ್ರಿಕೆಗಳು ಕೂಡ ಈ ವಿಶಿಷ್ಟತೆಯನ್ನು ಮುಂದುವರೆಸುವುದು ಸೂಕ್ತ.

ಈವರೆಗ ಓದಿದ ಮುದ್ರಿತ ಭಾಷಣದಲ್ಲಿ ಇಲ್ಲದ ಒಂದೆರಡು ವಿಷಯಗಳನ್ನು ಈ ಸಂದರ್ಭದಲ್ಲಿಯೆ ನಾನು ಪ್ರಸ್ತಾಪಿಸುವುದಕ್ಕೆ ಇಚ್ಛೆಪಡುತ್ತೇನೆ :

ಮಳೆಯ ಕಾರಣದಿಂದಾಗಿ ‘ಸಮ್ಮೇಳನದ ಮೆರವಣಿಗೆ’ ನಿಯೋಜಿತವಾದ ರೀತಿಯಲ್ಲಿ ಆಗಲಿಲ್ಲ. ನಿಜ. ಆದರೆ ಮೆರವಣಿಗೆ ಒಂದು ದೇವಸ್ಥಾನದ ಟ್ರಸ್ಟಿನ ಆವರಣದಿಂದ ಹೊರಡುತ್ತದೆ ಎನ್ನುವುದು ನನ್ನ ಗಮನಕ್ಕೆ ಬಂದದ್ದು ಆಹ್ವಾನ ಪತ್ರಿಕೆ ಮುದ್ರಣವಾದ ಮೇಲೆ. ಈ ಹೊತ್ತು ಮೆರವಣಿಗೆ ದೇವಸ್ಥಾನದ ಹತ್ತಿರದಿಂದ ಬರಬಹುದು, ಅದಕ್ಕಿಂತ ಬೇಗ ಮಠಗಳ ಹತ್ತಿರದಿಂದ ಬರಬಹುದು. ಆ ರೀತಿಯ ಸಂಪ್ರದಾಯ ಒಂದು ಕಡೆ ಒಂದು ಸಲ ತೆರೆದರೆ ಈ ದೇಶದಲ್ಲಿ ಅಂಥದನ್ನು ಗಬಕ್ಕನೆ ಪೂರ್ವಾಪರ ವಿವೇಚನೆ ಮಾಡದೆ ಸಂಪ್ರದಾಯ ಮಾಡಿಕೊಳ್ಳುವುದಕ್ಕೆ ಮುಂದಾಗುವವರಿಗೆ ಕೊರತೆ ಇಲ್ಲ.

ಸಂಘಟಕರು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅಂತ ಹೇಳಿದಾಗ ‘ಸಮ್ಮೇಳನಾಧ್ಯಕ್ಷರ ಮೆರವಣಿಗೆ’ ಅಂತ ಮಾಡಕೂಡದು ಎಂದು ನಾನು ಕರಾರು ಹಾಕಿದೆ. ಜಾನಪದ ಕಲಾವಿದರಿಗೆ ಇಲ್ಲಿ, ಸಮ್ಮೇಳನದಲ್ಲಿ, ಮೆರವಣಿಗೆಯಲ್ಲಿ ಅವಕಾಶ ಮಾಡಿಕೊಡಬೇಕಾಗುತ್ತದೆ ಎಂದರು. ಸರಿ. ಹಾಗೆ ಅವಕಾಶ ಮಾಡಿಕೊಡುವುದರಲ್ಲಿ ತಪ್ಪಿಲ್ಲ, ಅದು ಸ್ವಾಗತಾರ್ಹ. ಆದರೆ ‘ಸಮ್ಮೇಳನಾಧ್ಯಕ್ಷರ ಮೆರವಣಿಗೆ’ ಅಂತ ಆಗಬೇಕಾಗಿಲ್ಲ. ಅದನ್ನು ನಾನು ಒಪ್ಪುವುದಿಲ್ಲ; ‘ಸಮ್ಮೇಳನದ ಮೆರವಣಿಗೆ’ ಅಂತ ಮಾಡಿಕೊಳ್ಳುವುದಿದ್ದರೆ ಮಾಡಿಕೊಳ್ಳಬಹುದು ಎಂದು ಹೇಳಿದ್ದೆ. ಆದರೆ ಅದು ದೇವಸ್ಥಾನದ ಕಡೆಯಿಂದ ಬರುವ ಹಾಗೆ ಆದದ್ದು ಹೇಗೆ, ಏಕೆ? ಇದು ಯೋಚನೆ ಮಾಡಬೇಕಾದದ್ದು.

ಅವರವರ ನಂಬಿಕೆಗಳು ದೇವಸ್ಥಾನದ ಬಗ್ಗೆ ಇರಲಿ, ಚರ್ಚ್ ಬಗ್ಗೆ ಇರಲಿ, ಮಸೀದಿ ಬಗ್ಗೆ ಇರಲಿ, ಮಠಗಳ ಬಗ್ಗೆ ಇರಲಿ ಅದು ಅವರವರ ಅಥವಾ ಆಯಾ ಜನಸಮೂಹದ ಖಾಸಗಿ ನಂಬಿಕೆಗಳಿಗೆ ಸಂಬಂಧಪಟ್ಟದ್ದು. ಕನ್ನಡ ಸಾಹಿತ್ಯ ಪರಿಷತ್ತು ಪ್ರಜಾಸತ್ತಾತ್ಮಕವಾದ ಸಾರ್ವಜನಿಕ ವೇದಿಕೆ. ಅದಕ್ಕೆ ಯಾವ ಜಾತಿಯೂ ಇಲ್ಲ. ಧರ್ಮವೂ ಇಲ್ಲ; ಅದು ಕನ್ನಡಿಗರೆಲ್ಲರಿಗೆ ‘ಯಾವ ಜಾತಿ ಮತ ಭೇದವೂ ಇಲ್ಲದೆ’ – ಸೇರಿದ್ದು. ನಾವು ಒಪ್ಪಿಕೊಂಡಿರುವ ಈ ಪ್ರಜಾಸತ್ತೆ ಅದರ ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಸ್ಪಷ್ಟವಾಗಿ ನಮ್ಮದು ‘ಸಾರ್ವಭೌಮ ಪ್ರಜಾಸತ್ತಾತ್ಮಕ ಸಮಾಜವಾದೀ ಜಾತಿಮತಧರ್ಮ ನಿರಪೇಕ್ಷ ಭಾರತ ಗಣರಾಜ್ಯ’ ಎಂದು ಘೋಷಿಸಿಕೊಂಡಿದೆ. ಹಾಗಿರುವಾಗ ಸಾರ್ವಜನಿಕವಾದ, ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ಸಂಬಂಧಪಟ್ಟ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆಯ ‘ಮತಧರ್ಮ ನಿರಪೇಕ್ಷ’ (ಸೆಕ್ಯುಲರ್) ಲಕ್ಷಣವನ್ನು ಕಾಪಾಡಿಕೊಳ್ಳುವುದು ಸಂಬಂಧಪಟ್ಟವರ ಕರ್ತವ್ಯಭಾಗ.

ಮೆರವಣಿಗೆಗೆ ಮಳೆ ಬರದೇ ಇದ್ದರೂ ನಾನು ಹೋಗುತ್ತಾ ಇರಲಿಲ್ಲ.ಹೋಗಬಾರದು ಅಂತ ತೀರ್ಮಾನ ಮಾಡಿದ್ದೆ. ಏಕೆಂದರೆ ಮತಧರ್ಮ ನಿರಪೇಕ್ಷವಾದಂಥ ಲಕ್ಷಣವನ್ನು ಪಡೆದುಕೊಂಡಿರದೇ ಇದ್ದಾಗ ನಾನು ಅಲ್ಲಿ ಹೋಗಿ ಭಾಗವಹಿಸುವುದು ತಪ್ಪಾಗುತ್ತದೆ ಅಂತ ನನಗೆ ಅನ್ನಿಸಿದ್ದರಿಂದ ನಾನು ಹೋಗಲಿಕ್ಕೆ ತಯಾರಿರಲಿಲ್ಲ. ಆದ್ದರಿಂದ ನೇರವಾಗಿ ಇಲ್ಲಿಗೆ – ಸಮ್ಮೇಳನದ ವೇದಿಕೆ ಇರುವಲ್ಲಿಗೇ – ಬಂದೆ. ಇಂಥ ವಿಷಯಗಳಲ್ಲಿ ಸಾಹಿತ್ಯ ಪರಿಷತ್ತು ಮುಂದಾದರೂ ಗಂಭೀರವಾಗಿ ಯೋಚನೆಮಾಡಬೇಕಾದ ಅಗತ್ಯ ಇದೆ. ಮೂರೊ ನಾಲ್ಕೊ ದಿನಗಳ ಹಿಂದಷ್ಟೆ ಆಹ್ವಾನ ಪತ್ರಿಕೆ ನೋಡಿದಾಗ, ನನ್ನ ಗಮನಕ್ಕೆ ಈ ವಿಷಯ ಬಂತು. ಸೌಜನ್ಯದ ದೃಷ್ಟಿಯಿಂದ ಆಗಲೇ ಹೇಳಿಕೆ ಕೊಟ್ಟಿರಲಿಲ್ಲ.

ಇದನ್ನು ಬೇರೆ ಕಾರಣಕ್ಕಾಗಿಯೂ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ನಾವು ಕೆಲವು ದಿನಗಳ ಹಿಂದೆ, ‘ಬರಗೂರು ವರದಿ’ಯ ಬಗ್ಗೆ ಚರ್ಚೆ ಮಾಡುತ್ತ ಇದ್ದ ಸಭೆಯಲ್ಲಿ ಒಬ್ಬರು ಮಹಮ್ಮದೀಯ ಮಿತ್ರರು ಇದ್ದರು. ಕನ್ನಡ ಭುವನೇಶ್ವರಿ ಅಂತ ಹೇಳಿಕೊಳ್ಳುತ್ತಿದ್ದರೆ ಮೂರ್ತಿ ಪೂಜೆಯಲ್ಲಿ ನಂಬಿಕೆ ಇಲ್ಲದವರಿಗೆ ಕನ್ನಡ ಅಂದರೆ ಹಿಂದೂಗಳದ್ದು ಅಂತ ಆಗುತ್ತದೆ. ಆ ಭಾವನೆ ನಮ್ಮಲ್ಲಿ ಅನೇಕರಲ್ಲಿ ಇದೆ ಎಂದು ಅವರು ಹೇಳಿದರು. ಕನ್ನಡವನ್ನು ಭುವನೇಶ್ವರಿಯ ಜೊತೆ ಸಮೀಕರಿಸುವುದು ಸರಿ ಎಂದಲ್ಲ; ವೈಯಕ್ತಿಕವಾಗಿ ಅದನ್ನು ನಾನು ಒಪ್ಪುವುದೂ ಇಲ್ಲ. ಹಾಗೆಂದು ಆ ಮಿತ್ರರು ಆ ರೀತಿ ಯೋಚನೆ ಮಾಡುವುದೂ ಸರಿಯಲ್ಲ. ದೇಶ, ಭಾಷೆಗಳ ವಿಷಯದಲ್ಲಿ ಯಾರೇ ಆಗಲಿ ಮತಧರ್ಮೀಯ ನೆಲೆಯಲ್ಲಿ ಯೋಚಿಸುವುದು, ವಾದಿಸುವುದು, ವರ್ತಿಸುವುದು ಸರಿಯಲ್ಲ. ಆದರೆ ಧೀರ್ಘಕಾಲದ ಚರಿತ್ರೆಯ ಹಿನ್ನಲೆಯುಳ್ಳ ಹಾಗೂ ಜಾತಿ ಮತ ಧರ್ಮ ನಿರಪೇಕ್ಷವಾದ ಸಂಸ್ಕೃತಿಯನ್ನು ಕಟ್ಟುವ ಆಶಯವುಳ್ಳ ನಮ್ಮಂಥ ದೇಶದಲ್ಲಿ ಎಷ್ಟೋ ವಿಷಯಗಳಲ್ಲಿ ಸಹಬಾಳ್ವೆ, ಭ್ರಾತತ್ವದ ಭಾವ ಸಂಬಂಧದದ ಹೊಂದಾಣಿಕೆ ಕೂಡ ಅಗತ್ಯವಾಗುತ್ತದೆ. ಅಂಥ ವಿಷಯಗಳನ್ನು ಗುರುತಿಸಿಕೊಳ್ಳುವಾಗ ಜಾತಿ- ಮತಧರ್ಮಪರ ದೃಷ್ಟಿಯಲ್ಲ; ಮನುಷ್ಯಪರ ದೃಷ್ಟಿ ಪ್ರಧಾನವಾಗಿರಬೇಕಾಗುತ್ತದೆ. ಆದ್ದರಿಂದ ಅದನ್ನು ತೀರಾ ಅತಿಗೆ ಎಳೆದು ವಾದಮಾಡುವುದು, ವ್ಯಾಖ್ಯಾನ ಮಾಡುವುದು ಸರಿಯಲ್ಲ. ಅಂಥ ಮಾತುಗಳನ್ನು ಅಂಥ ವಾದ -ವ್ಯಾಖ್ಯಾನಗಳನ್ನು ಜಾತಿ ಮತಧರ್ಮ ನಿರಪೇಕ್ಷ ಸಂಸ್ಕೃತಿಯ ಬಗ್ಗೆ ದೃಢ ನಿಲುವು ಉಳ್ಳವರು ಮುಂದಿಟ್ಟಾಗ ಇರುವ ಅಥವಾ ಬರುವ ಅರ್ಥವು ಈಗ ಪ್ರಸ್ತಾಪಿಸಿದ ಮಹಮ್ಮದೀಯ ಮಿತ್ರರಂಥ ಮತೀಯವಾದೀ ಮನೋಧರ್ಮದವರು ಮುಂದಿಟ್ಟಾಗ ಇರುವುದಿಲ್ಲ ; ಬರುವುದಿಲ್ಲ. ನನ್ನ ಅಭಿಪ್ರಾಯ ಇಷ್ಟೇ : ಇವತ್ತು ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಹಿಂದೂಗಳದ್ದೊ ಯಾವುದೇ ಜಾತಿಯವರದೋ ಮತಧರ್ಮದವರದೊ ಎಂಬ ಭಾವನೆ ಹುಟ್ಟಿಸುವಂತಿರಬಾರದು. ಅದು ಸ್ವತಂತ್ರ ಭಾರತದ ಸಂವಿಧಾನ ಪ್ರತಿಪಾದಿಸುವ ಜಾತಿ ಮತಧರ್ಮ ನಿರಪೇಕ್ಷ ಲಕ್ಷಣದಿಂದ ಕೂಡಿರಬೇಕಾದದ್ದು ಅಗತ್ಯ. ಆದ್ದರಿಂದ ಅದು ದೇವಸ್ಥಾನದಿಂದ ಬರುವುದೊ, ಅದಕ್ಕೆ ಹತ್ತಿರದಲ್ಲಿಯೇ ಇರುವ, ಅದಕ್ಕೆ ಸಂಬಂಧಿಸಿದ ಸಂಸ್ಥೆಯ ಅಥವಾ ಟ್ರಸ್ಟಿನ ಆಶ್ರಯದಲ್ಲಿ ಬರುವುದೊ, ಮಠದಿಂದ ಬರುವುದೊ ಆಗಬೇಕಾಗಿಲ್ಲ.

ನಾನು ಅಧ್ಯಕ್ಷತೆಯನ್ನು ಒಪ್ಪಿಕೊಳ್ಳುವುದಕ್ಕೆ ಮೊದಲು ಹಾಕಿದ ಕರಾರುಗಳಲ್ಲಿ ಇನ್ನೊಂದು ಇದೆ : ಮಠಾಧಿಪತಿಗಳೊ ರಾಜಕಾರಣಿಗಳೊ ವೇದಿಕೆಗೆ ಬರಬಹುದು. ಯಾರೇ ಬಂದರೂ ಸಮಗೌರವದಲ್ಲಿ, ಸಮಾನತಾ ಮೌಲ್ಯದ ನೆಲೆಯಲ್ಲಿ ವೇದಿಕೆಯ ಮೇಲಿರಬೇಕು. ಕಾರ್ಯಕ್ರಮದಲ್ಲಿ ‘ಸನ್ನಿಧಾನ’, ‘ದಿವ್ಯ ಸನ್ನಿಧಿ’ , ‘ಆಶೀರ್ವಚನ’ ಅಂತ ಕೆಲವು ವಿಶೇಷಣಗಳನ್ನು ಸೇರಿಸಿ ಕೆಲವರ ಹೆಸರುಗಳನ್ನು ಬರೆದುಕೊಂಡು ಬಂದಿದ್ದರು. ಅವನ್ನೆಲ್ಲ ಇಲ್ಲಿ ವಿವರಿಸುವುದಕ್ಕೆ ಹೋಗುವುದಿಲ್ಲ.

ಮಠಾಧಿಪತಿಗಳಾಗಿರಲಿ, ರಾಜಕಾರಣಿಗಳಾಗಿರಲಿ, ಸಾಹಿತಿಗಳಾಗಿರಲಿ, ಸಾಹಿತ್ಯಾಭಿಮಾನಿಗಳಾಗಿರಲಿ ಯಾರೇ ಆದರೂ ಪರಿಷತ್ತಿನ ವೇದಿಕೆಗೆ ಬರುವ ಹಕ್ಕು ಇದ್ದೇ ಇದೆ. ಪರಿಷತ್ತಿನ ನಿಯಮಾವಳಿಗಳಲ್ಲಿಯೂ ಅದಕ್ಕೆ ಅವಕಾಶ ಇದೆ. ಆದರೆ ಯಾರೇ ಆಗಲಿ ಬಂದಾಗ ಸಮಗೌರವದಲ್ಲಿ ವೇದಿಕೆಯ ಮೇಲೆ ಇರಬೇಕಾದದ್ದು ಅತ್ಯಂತ ಅಗತ್ಯವಾದದ್ದು. ಸಮ್ಮೇಳನದ ದೃಷ್ಟಿಯಿಂದ ಇದು ಇನ್ನು ಮುಂದಾದರೂ ಬಹಳ ಮುಖ್ಯ. ಆ.ನ.ಕೃಷ್ಣರಾಯರು ಆ ಕಾಲದಲ್ಲಿ, ೪೦ ವರ್ಷಗಳ ಹಿಂದೆಯೆ, ಹೇಳಿದ ಮಾತನ್ನು ಇವತ್ತಿಗೂ ನಾವು ನೆನಪಿಸಿಕೊಳ್ಳದೇ ಇರುವುದು ಸರಿಯಲ್ಲ. ಅಧ್ಯಕ್ಷ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸುವುದು ಬೇಡ ಎಂದುಬಿಟ್ಟಿದ್ದೆ. ಈ ಸಂದರ್ಭದಲ್ಲಿ ಮೆರಣಿಗೆಯ ಪ್ರಸ್ತಾಪ ಮಾಡಬೇಕಾಗಿ ಬಂದದ್ದರಿಂದ ಈ ವಿಷಯವನ್ನೂ ಪ್ರಸ್ತಾಪಿಸಬೇಕಾಯಿತು.

‘ಸನ್ನಿಧಾನ’ , ‘ದಿವ್ಯ ಸನ್ನಿಧಿ’. ‘ಆಶೀರ್ವಚನ’ ಬೇಡ ಅಂತ ಅಂದರೆ ‘ಪೂಜ್ಯ’ ಅಂತ ಮಾರನೇ ದಿನ ಬರೆದುಕೊಂಡು ಬಂದರು. ಅದೂ ಆಗಕೂಡದು ಎಂದೆ. ಜಾತಿ ಮತಧರ್ಮದ ಆಸ್ತಿಕರಿಗೆ ಭಕ್ತಾಧಿಗಳಿಗೆ ಅವರು ಪೂಜ್ಯರಾಗಿರಬಹುದು. ನಮಗೆ ಅವರು ಸಾರ್ವಜನಿಕ ಗೌರವಾನ್ವಿತ ವ್ಯಕ್ತಿಗಳು, ಗೌರವಾನ್ವಿತ ಪೌರರು -ನಮ್ಮ ನಿಮ್ಮ ಎಲ್ಲರ ಹಾಗೆ, ವೈಯಕ್ತಿಕ ವರ್ಚಸ್ಸಿನಿಂದ ನಿಜವಾಗಿಯೂ ದೊಡ್ಡವರಾದರೆ, ಮಠಾಧಿಪತಿಗಳೇ ಆಗಿರಲಿ, ಯಾರೇ ಆಗಿರಲಿ ನಾನು ಅವರ ಪಾದಕ್ಕೂ ಬೀಳಬಲ್ಲೆ. ಅದು ವೈಯಕ್ತಿಕ ವರ್ಚಸ್ಸಿನ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆ. ರಾಜಕಾರಣಿಗಳ ವಿಷಯವೂ ಅಷ್ಟೆ. ನಾನು ಅವರನ್ನು ವ್ಯಕ್ತಿತ್ವದ ಋರ್ಜು ವರ್ಚಸ್ಸಿದ್ದರೆ ಅತ್ಯಂತ ಗೌರವದಿಂದ ಕಾಣಬಲ್ಲೆ. ಆದರೆ ಅವರು ರಾಜಕಾರಣಿಗಳೊ,ಮಠಾಧಿಪೊತಿಗಳೊ ಆಗಿರುವ ಕಾರಣಕ್ಕೇ ಅವರು ಉಳಿದೆಲ್ಲರಿಗಿಂತ ಶ್ರೇಷ್ಠರು, ಪೂಜ್ಯರು, ದಿವ್ಯರು, ಎಲ್ಲರಿಗೂ ಆಶೀರ್ವಚನ ನೀಡುವ ಸ್ಥಾನದಲ್ಲಿರುವವರು ಎಂಬಂತೆ ಬ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸಾರ್ವಜನಿಕರ ಮನಸ್ಸಿನಲ್ಲಿ ಬಿಂಬಿಸುವ ಕೆಲಸ ಮಾಡುವುದು ತಪ್ಪು. ನಾವು ಒಪ್ಪಿರುವ ಪ್ರಜಾಸತ್ತಾತ್ಮಕ ಸಂವಿಧಾನವು ರೂಪಿಸಲು ಸಂಕಲ್ಪಿಸಿರುವ ಸಂಸ್ಕೃತಿ ಪರಿಕಲ್ಪನೆಯ ಜೀವತತ್ವಕ್ಕೆ ಅದು ಒಪ್ಪುವಂಥದಲ್ಲ. ಆ ಮಾತುಗಳನ್ನು ಸಂಬಂಧಪಟ್ಟವರನ್ನು ಟೀಕೆ ಮಾಡುವ ಉದ್ದೇಶದಿಂದ ನಾನು ಹೇಳುತ್ತಿಲ್ಲ. ಪ್ರಜಾಸತ್ತಾತ್ಮಕ ಸಂಸ್ಕೃತಿ ನಿರ್ಮಾಣದ ದೃಷ್ಟಿಯಿಂದ ಈ ಮಾತು, ಈ ದೃಷ್ಟಿ ಅಗತ್ಯ ಎಂಬ ಕಾರಣಕ್ಕೆ ಹೇಳಿದ್ದೇನೆ.

ಇಷ್ಟನ್ನು ಹೇಳಿ, ತಾಳ್ಮೆಯಿಂದ ಈವರೆಗೆ ನನ್ನ ಮಾತುಗಳನ್ನು ಕೇಳಿಸಿಕೊಂಡ ನಿಮಗೆಲ್ಲರಿಗೂ ಕೃತಜ್ಞತಾಪೂರ್ವಕವಾದ, ವಿನಯಪೂರ್ವಕವಾದ ವಂದನೆಗಳನ್ನು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ. ನಮಸ್ಕಾರ.

೧೩೨೦೦೧