ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೆ, ಮೈಸೂರು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೆ, ಪದಾಧಿಕಾರಿಗಳೆ, ವೇದಿಕೆಯ ಮೇಲಿರುವ ಆತ್ಮೀಯ ಸಾಹಿತಿಗಳೆ, ಸನ್ಮಾನ್ಯರುಗಳಾದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರೆ, ಕನ್ನಡ ಮತ್ತು ಸಂಸ್ಕೃತಿ ಸಚಿವೆಯವರೆ, ಸಂಸದರೆ, ಶಾಸಕರೆ, ಮೈಸೂರು ಜಿಲ್ಲಾಧಿಕಾರಿಗಳೆ, ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರೆ, ಮಾಜಿ ಮಹಾ ಪೌರರೆ ಹಾಗೂ ಕನ್ನಡಾಭಿಮಾನಿ ಸಹೃದಯರೆ,

೧೯೧೫ರ ಮೇ ತಿಂಗಳ ೩ನೆಯ ದಿನಾಂಕದಂದು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಅಂದೇ ಮೊದಲ ಸಾಹಿತ್ಯ ಸಮ್ಮೇಳನವೂ ನಡೆದು ಅದರ ಚರಿತ್ರೆಯೂ ಪ್ರಾರಂಭವಾಯಿತು. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ ಕನ್ನಡ ಸಾಹಿತಿಯಾದವನು ಪಡೆಯಬಹುದಾದ ಅತ್ಯುನ್ನತ ಮನ್ನಣೆ ಎಂಬ ಭಾವನೆ ಸಾಹಿತಿಗಳೆಲ್ಲರಲ್ಲಿ ಸಾಮಾನ್ಯವಾಗಿ ಇದ್ದ ಕಾಲ ಒಂದಿತ್ತು. ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ಏಕೀಕರಣದ ಅಂದರೆ ಅಖಂಡ ಕರ್ನಾಟಕದ ತೀವ್ರ ಹಂಬಲ, ಕನ್ನಡ ಭಾಷೆಯ ಬಗೆಗಿನ ಅದಮ್ಯ ಅಭಿಮಾನ, ಕನ್ನಡ ಸಾಹಿತ್ಯವನ್ನು ಸಮೃದ್ಧವಾಗಿ ಬೆಳೆಸಬೇಕೆಂಬ ಛಲವಂತ ಮಹತ್ವಾಕಾಂಕ್ಷೆ – ಇವೆಲ್ಲ ಕನ್ನಡಿಗರಲ್ಲಿ ಜ್ವಲಂತವಾಗಿದ್ದ ಕಾಲ ಅದಾಗಿತ್ತು. ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಕನ್ನಡ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು, ಕನ್ನಡಾಭಿಮಾನಿಗಳಾದ ಕನ್ನಡಿಗರು ವರ್ಷಕ್ಕೊಮ್ಮೆ ಒಂದೆಡೆ ಸೇರಿ ಕನ್ನಡನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಕುರಿತ ಗಂಭೀರ ಚರ್ಚೆ – ಚಿಂತನೆ, ವಿಮರ್ಶೆ – ವಿವೇಚನೆಗಳನ್ನು ಮಾಡುವ, ಹೊಸ ಕಾಲದ ಸಾಹಿತ್ಯದ, ಸಾಹಿತಿಗಳ ‘ಅನುಭವ ಮಂಟಪ’ ಎಂಬಂಥ ಭಾವನೆ ಆ ಕಾಲದವರಲ್ಲಿತ್ತು.

ಬೇರೆ ಬೇರೆ ಆಡಳಿತಗಳಿಗೆ ಸೇರಿಹೋಗಿದ್ದ ಕನ್ನಡ ಸಾಹಿತಿಗಳು, ಕನ್ನಡಿಗರು ಬಂದು, ಸಮ್ಮೇಳನದ ವೇದಿಕೆಯ ಮೇಲಿದ್ದೊ, ವೇದಿಕೆಯ ಮುಂದಿದ್ದೊ ಭಾಗವಹಿಸುವುದರ ಮೂಲಕ ತಾವೆಲ್ಲ ಒಂದು ಎಂಬಂಥ, ‘ಕನ್ನಡಾಂಬೆಯ ಮಕ್ಕಳು’ ಎಂಬಂಥ ಆತ್ಮೀಯ ಆತ್ಮ ಸಮ್ಮಿಳನದ ಸುಖವನ್ನು ಪಡೆಯುವ ಹಾಗೂ ಕನ್ನಡತನವನ್ನು, ಕನ್ನಡಾಭಿಮಾನವನ್ನು ಹೃದಯ ಮನಸ್ಸುಗಳಿಗೆ ಅವಾಹಿಸಿಕೊಂಡು ಕನ್ನಡನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಪುರೋಭಿವೃದ್ಧಿಗೆ ದುಡಿಯುವ ಸಂಕಲ್ಪಕ್ಕೆ, ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸುವವ ಕನ್ನಡ ಸಾಹಿತ್ಯ ಸಮ್ಮೇಳನವು ದೀಕ್ಷೆಯನ್ನು ಪಡೆಯುವ ಸ್ಫೂರ್ತಿಕೇಂದ್ರ ಎಂಬಂಥ ಭಾವನೆ ಇತ್ತು.

ಇಂಥ ಭಾವನೆ ೧೯೫೬ರಲ್ಲಿ ಭಾಷಾವಾರು ರಾಜ್ಯಗಳ ರಚನೆಯಾಗಿ, ಕನ್ನಡನಾಡು ಭಾಷೆಯ ಆಧಾರದ ಮೇಲೆ ಒಂದು ರಾಜ್ಯವಾಗಿ, ಒಂದು ಆಡಳಿತ ವ್ಯವಸ್ಥೆಯ ಒಳಗೆ ಬರುವವರೆಗೆ ಜ್ವಲಂತವಾಗಿತ್ತು. ಆಮೇಲೆಯೂ ಆ.ನ.ಕೃಷ್ಣರಾಯರು ೧೯೬೨ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವವರೆಗೂ ಸಾಹಿತಿಗಳಲ್ಲಿ ಅಂಥ ಭಾವನೆ ಇದ್ದಂತೆ ತೋರುತ್ತದೆ. ‘ಪ್ರಗತಿಶೀಲ’ ಸಾಹಿತ್ಯ ಮಾರ್ಗಪ್ರವರ್ತಕರು ಮಾತ್ರವಲ್ಲ ಕನ್ನಡ ಭಾಷೆಯ ಬಗ್ಗೆ ಕನ್ನಡಿಗ ಜನಸಮೂಹದ ಅಭಿಮಾನ, ಪ್ರೀತಿಯನ್ನು ಬೆಳೆಸುವುದರಲ್ಲಿ ಮಹತ್ವದ ಪಾತ್ರವಹಿಸಿದ ಸಾಹಿತಿ ಮುಖ್ಯರಲ್ಲಿ ಒಬ್ಬರಾದ ಕೃಷ್ಣರಾಯರು ತಮ್ಮ ಅಧ್ಯಕ್ಷ ಭಾಷಣದಲ್ಲಿ,

“ಇಂದು ಪರಿಷತ್ತಿನಲ್ಲಿ ಸಾಹಿತಿಗೆ, ಕನ್ನಡ ಸೇವೆ ಮಾಡಿ ಧನ್ಯನಾಗಲು ಬಯಸುವವನಿಗೆ ಎಡೆಯಿಲ್ಲ. ಅಧಿಕಾರಿ ವರ್ಗದವರ ಹಾಗೂ ರಾಜಕೀಯ ಮುಂದಾಳುಗಳ ಮೆರವಣಿಗೆ, ಸನ್ಮಾನೋತ್ಸವ, ಉಪಹಾರ ಮೇಳ, ಸತ್ಕಾರ ಸಮಾರಂಭಗಳಿಗೆ ಪರಿಷತ್ತು ತನ್ನ ಜನ್ಮವನ್ನು, ಸರಕಾರದ ದಾನದ್ರವ್ಯವನ್ನು ನಿವೇದಿಸಿದೆ…. ಕರ್ನಾಟಕದ ಸಮಸ್ಯೆಗಳೆಲ್ಲ ಬಗೆಹರಿದು, ಕರ್ನಾಟಕ ಸರ್ವಪರಿಪೂರ್ಣವಾಗಿದೆ ಎಂಬ ಭ್ರಾಂತಿ ಪರಿಷತ್ತಿನ ಅಧಿಕಾರಿಗಳನ್ನು ಕಬಳಿಸಿರಬೇಕು….. (ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳು ಸಂ ೩ ೧೯೭೨ ಪು.೨೪೬)

“….ಮಂತ್ರಿಗಳನ್ನೂ ರಾಜಕಾರಣಿಗಳನ್ನೂ ಮಠಾಧಿಪತಿಗಳನ್ನೂ ಪರಿಷತ್ತಿಗೆ ಬರಮಾಡಿಕೊಂಡು ಅವರಿಗೆ ಬಿನ್ನವತ್ತಳೆ ಅರ್ಪಿಸಿ, ಅಳತೆಮೀರಿ ಹೊಗಳುವುದನ್ನು ಬಿಟ್ಟುಬಿಡಬೇಕು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಾಧ್ಯಾನ್ಯವಿರಬೇಕಾದುದು ಸಾಹಿತಿಗಳಿಗೇ ವಿನಾ ರಾಜಕಾರಣಿಗಳಿಗಲ್ಲ (ಈ ಒತ್ತು ಕೂಡ ಅವರದೇ) (ಅದೇಪು. ೨೪೮).

– ಎಂದು ಸಾಹಿತ್ಯ ಪರಿಷತ್ತನ್ನು, ಪರಿಷತ್ತಿನ ಅಧಿಕಾರಿಗಳನ್ನು ನಿಷ್ಠುರ ಮಾತುಗಳಲ್ಲಿ ಟೀಕಿಸಿದ್ದರೂ ಸಮ್ಮೇಳನಾಧ್ಯಕ್ಷ ಸ್ಥಾನದ ಮಹತ್ತಿನ ಬಗ್ಗೆ, ತನಗೆ ಆ ಗೌರವ ಸಂದಾಯವಾದ ಬಗ್ಗೆ ಆ.ನ.ಕೃಷ್ಣರಾಯರು, ” ಈ ಸ್ಥಾನವನ್ನು ನನ್ನ ಗುರುಸ್ವರೂಪರಾದ ಹಿರಿಯರು, ಹಾಗೂ ಕನ್ನಡ ಸಾರಸ್ವತ ಪ್ರಪಂಚದಲ್ಲಿ ನಂದಾದೀಪದಂತೆ ಬೆಳಗುತ್ತಿರುವ ನನ್ನ ಮಿತ್ರರು ಅಲಂಕರಿಸಿದ್ದಾರೆ. ಅವರೆಲ್ಲರಿಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ ಪಾಂಡಿತ್ಯದಲ್ಲಿ ಕಿರಿಯವನಾದ ನನಗೆ ಈ ಗೌರವ ಸಂದಾಯವಾಗಿರುವುದು ನನ್ನ ಅಪೂರ್ವ ಭಾಗ್ಯವೆಂದು ಭಾವಿಸುತ್ತೇನೆ,” ಎಂದು ಹೇಳಿರುವುದು ಗಮನಿಸುವಂತಿದೆ. (ಅದೇ ಪು. ೨೨೧).

ಈವರೆಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೌರವ ಪ್ರಾಪ್ತವಾದ ಸಂದರ್ಭದಲ್ಲಿ ಸಂಬಂಧಪಟ್ಟ ಸಾಹಿತಿಗಳು ಆ ಸ್ಥಾನದ ಮಹತ್ವವನ್ನು ಒಪ್ಪಿಕೊಂಡು ಆ ಬಗ್ಗೆ ವಿನಯಪೂರ್ವಕವಾಗಿಯೆ ಮಾತನಾಡುವುದು ಸಂಪ್ರದಾಯವೆಂಬಂತೆ ಮುಂದುವರಿದುಕೊಂಡು ಬಂದಿದೆ. ಆದರೂ ಈಗ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಹಿಂದಿದ್ದ ಆಕರ್ಷಣೆ, ಮಹತ್ತು ಉಳಿದಿಲ್ಲ. ಕಾಲ, ದೃಷ್ಟಿ ಬದಲಾಗಿದೆ. ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ, ಕಬೀರ ಸಮ್ಮಾನ್, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತರತ್ನ, ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಗಳು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ವಿಶ್ವವಿದ್ಯಾನಿಲಯಗಳು ನೀಡುವ ಗೌರವ ಡಾಕ್ಟರೇಟ್ ಮತ್ತು ನೋಡೋಜ ಪ್ರಶಸ್ತಿ – ಇತ್ಯಾದಿಗಳನ್ನು ಕನ್ನಡ ಸಾಹಿತಿಗಳೂ ಪಡೆಯುತ್ತಿರುವ, ಪಡೆಯಬಹುದಾದ ಸಂದರ್ಭ, ಅವಕಾಶಗಳು ಉಂಟಾಗಿವೆ. ಕನ್ನಡ ಭಾಷೆಗೆ ಕನ್ನಡ ಸಾಹಿತ್ಯಕ್ಕೆ ರಾಷ್ಟ್ರೀಯ ಗೌರವ ತಂದುಕೊಟ್ಟ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳನ್ನು ಕೂಡ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡದೇ ಇದ್ದರೂ ಆ ಗೌರವವನ್ನು ಅವರಿಗೆ ಯಾಕೆ ನೀಡಿಲ್ಲ ಎಂದು ಪರಿಷತ್ತನ್ನು ಕೇಳಬೇಕು, ಪ್ರಶ್ನಿಸಬೇಕು ಎಂದು ಸಾಹಿತಿಗಳಿಗೆ ಸಾಹಿತ್ಯಾಸಕ್ತರಿಗೆ ಅನಿಸುತ್ತಿಲ್ಲ. ಹೀಗಿರುವಾಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವವು ಒಂದು ‘ಅಪೂರ್ವ ಭಾಗ್ಯ’ವೆಂದೂ ‘ಅಪೂರ್ವ ಅವಕಾಶ’ವೆಂದೊ (ಅಂದೋಲನ ೪-೪-೨೦೦೧ ಪು.೨) ಭಾವಿಸುವ ಸ್ಥಿತಿ ಉಳಿದಿಲ್ಲ ಅದರೂ ಸಾಹಿತ್ಯ ಸಂಬಂಧವಾದ ಅಧ್ಯಕ್ಷ ಗೌರವ ತಾನಾಗಿ ಪ್ರಾಪ್ತವಾದಾಗ ಸಾಹಿತಿಯಾದವರಿಗೆ ಅದೊಂದು ಸಾರ್ವಜನಿಕ ಮನ್ನಣೆ, ಗೌರವ ಎಂಬ ಭಾವನೆ ಉಂಟಾಗುವುದಂತೂ ನಿಜ. ಆದ್ದರಿಂದ ನನಗೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ ಪ್ರಾಪ್ತವಾಗಿರುವ ಈ ಸಂದರ್ಭದಲ್ಲಿ ಸಹಜವಾಗಿಯೆ ಸಂತೋಷವಾಗಿದೆ. ಈ ಸಮ್ಮೇಳನಾಧ್ಯಕ್ಷ ಗೌರವವನ್ನು ಅಯಾಚಿತವಾಗಿ ನನಗೆ ನೀಡಿದ, ನೀಡುವುದಕ್ಕೆ ಕಾರಣರಾದ ಎಲ್ಲರಿಗೆ, ಅವರ ಸದ್ಭಾವನೆಗೆ ಕೃತಜ್ಞತೆಗಳನ್ನು ಹೇಳುತ್ತೇನೆ.

ನನಗಾದ ಸಹಜ ಸಂತೋಷಕ್ಕೆ ಬೇರೊಂದು, ಸ್ವಂತದ, ಭಾವನಾತ್ಮಕ ಕಾರಣವೂ ಇದೆ. ನಾನು ಹುಟ್ಟಿನಿಂದ ಮೈಸೂರು ಜಿಲ್ಲೆಯವನಲ್ಲ; ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಎಂಬ ಹಳ್ಳಿಯವನು. ೧೮ ವರ್ಷದ ಹರೆಯದವರೆಗಿನ ನನ್ನ ಜೀವನ ಕಳೆದದ್ದು, ಬೆಳೆದದ್ದು ಅಲ್ಲಿ. ಆನಂತರದ ಜೀವನವೆಲ್ಲ ಮೈಸೂರಿನಲ್ಲಿಯೆ ಕಳೆದಿದೆ; ಬೆಳೆದಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮನೆ ಮುಟ್ಟುಗೋಲು, ಜಮೀನು ಹರಾಜು, ಜೈಲುವಾಸವೇ ಮೊದಲಾದ ಕಷ್ಟನಷ್ಟಗಳನ್ನೆಲ್ಲ ಅನುಭವಿಸಿ ಆರ್ಥಿಕವಾಗಿ ನುಜ್ಜುಗುಜ್ಜಾಗಿ ಹೋಗಿದ್ದ ನಮ್ಮ ಕುಟುಂಬದ ಪರಿಸ್ಥಿತಿಯಿಂದಾಗಿ ಕಾಲೇಜು ಶಿಕ್ಷಣ ಮುಂದುವರಿಸುವುದಕ್ಕೆ ‘ದಾರಿ ದಿಕ್ಕು’ ಕಾಣದಂಥ ಸ್ಥಿತಿಯಲ್ಲಿದ್ದ ನನ್ನನ್ನು, ಆಗಲೇ ನನ್ನಲ್ಲಿದ್ದ ಸಾಹಿತ್ಯಾಸಕ್ತಿಯನ್ನು ಗುರ್ತಿಸಿ, ೧೯೫೪ರಲ್ಲಿ ಬೇರೆಯ ರಾಜ್ಯವಾಗಿದ್ದ, ನನ್ನನ್ನು ಬಿಟ್ಟು ಬೇರೆ ಯಾರೊಬ್ಬರ ಮುಖಪರಿಚಯ ಕೂಡ ಇಲ್ಲದ ಈ ಮೈಸೂರಿಗೆ, ಇದೇ ನನ್ನ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡು ಆ ಕ್ಷೇತ್ರದಲ್ಲಿ ನಾನು ಮುಂದುವರೆಯುವುದಕ್ಕೆ ಪ್ರಶಸ್ತವಾದ ಊರೆಂದು ಹೇಳಿಯೆ, ಹಾರೈಸಿಯೆ ನನ್ನನ್ನು ಇಲ್ಲಿಗೆ ಕಳಿಸಿದವರು ಉದಾತ್ತ ವ್ಯಕ್ತಿತ್ವದ, ಉದಾರ ಅಂತಃಕರಣದ, ಸ್ವಾತಂತ್ರ್ಯ ಹೋರಾಟಗಾರ, ಕವಿ ಅಂಕೋಲೆಯ ಸ ಪ ಗಾಂವಕಾರ ಅವರು, ಎಲ್ಲಿಂದಲೋ ಬಂದ ನನಗೆ ಊಟ, ವಸತಿ, ವಾತ್ಸಲ್ಯ ನೀಡಿ ವಿದ್ಯಾಭ್ಯಾಸ ಮುಂದುವರೆಸಲು ಎಲ್ಲ ಬಗೆಯ ನೆರವು ನೀಡಿದವರು ಮೈಸೂರಿನ ವಿದ್ಯಾರಣ್ಯಪುರದ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಗಾಂಧೀವಾದಿ, ಧೀರ ಸ್ವಾತಂತ್ರ್ಯ ಹೋರಾಟಗಾರ, ತ್ಯಾಗಜೀವಿ ಟಿ.ಎಸ್.ಸುಬ್ಬಣ್ಣನವರು. ೧೯೯೦ರಲ್ಲಿ ಮೈಸೂರಿನ ಅರಮನೆಯ ಆವರಣದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯ ವಿಮರ್ಶೆಯ ಗೋಷ್ಠಿಯ ಉದ್ಘಾಟಕ ಗೌರವ ಅಯಾಚಿತವಾಗಿ ನನಗೆ ಪ್ರಾಪ್ತವಾದಾಗಲೂ ಈ ಕಾರಣದಿಂದ, ಇಂಥದೇ ಸಹಜ ಸಂತೋಷದ ಭಾವಸುಖವನ್ನು ನಾನು ಅನುಭವಿಸಿದ್ದೆ. ನನಗೆ ಪೂಜ್ಯರಾದ ಅವರಿಬ್ಬರನ್ನೂ ಈ ಸಂದರ್ಭದಲ್ಲಿ ಅತ್ಯಂತ ಗೌರವ ಮತ್ತು ಕೃತಜ್ಞತಾಪೂರ್ವಕವಾಗಿ ನೆನೆದು, ಮೈಸೂರು ನಗರದಲ್ಲಿ ನಡೆಯುತ್ತಿರುವ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಈ ಅಧ್ಯಕ್ಷ ಸ್ಥಾನಕ್ಕಿರುವ ಗೌರವಭಾಗವನ್ನು, ಅದೆಷ್ಟೇ ಇರಲಿ, ಅದನ್ನು ಅವರಿಗೇ ಸಮರ್ಪಿಸಿ, ಅದರ ಮುಖ್ಯ ಕಾರ್ಯಭಾಗವಾದ ಅಧ್ಯಕ್ಷ ಭಾಷಣವನ್ನು ನನ್ನ ಹೊಣೆಗಾರಿಕೆಯ ಭಾಗವಾಗಿ ಉಳಿಸಿಕೊಂಡು ನನ್ನ ಭಾಷಣವನ್ನು ಪ್ರಾರಂಭಿಸುತ್ತೇನೆ.

ಕನ್ನಡಿಗರೆಲ್ಲರ ಪ್ರಾತಿನಿಧಿಕ ಸಂಸ್ಥೆಯೆಂಬಂತೆ ಹುಟ್ಟಿಕೊಂಡು ಬೆಳೆದುಬಂದ ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕಾದ ಮತ್ತು ಮಾಡಬಹುದಾದ ಕಾರ್ಯಗಳಲ್ಲಿ ಮುಖ್ಯವಾದ ಕರ್ನಾಟಕ ಏಕೀಕರಣ ಅಥವಾ ಅಖಂಡ ಕರ್ನಾ(ರ್ಣಾ)ಡಕದ ಪ್ರಾದೇಶಿಕ ಒಗ್ಗೂಡುವಿಕೆಯ ಕನಸು, ಆದರ್ಶ ೧೯೫೬ರ ನವೆಂಬರ್ ೧ರಂದು ಈಡೇರಿತಷ್ಟೆ. ಆ ಬಹುಕಾಲದ ಬಯಕೆ ಈಡೇರಿದ ತರುಣದಲ್ಲಿ ಅಂದರೆ ೧೨-೧೨-೧೯೫೬ರಂದು ಆಗ ಮೈಸೂರಿನ ರಾಜ್ಯಪಾಲರಾಗಿದ್ದ, ಮೈಸೂರಿನ ಮಾಜಿ ‘ಶ್ರೀಮನ್ಮಹಾರಾಜ’ರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅರ್ಪಿಸಿದ ‘ವಿಜ್ಞಾಪನಾ ಪತ್ರಿಕೆ’ಗೆ ಅವರು ನೀಡಿದ ಉತ್ತರ ರೂಪದ ಪತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಗಬೇಕಾದ ಬದಲಾವಣೆಯ ಅಗತ್ಯ, ಅದರ ಸ್ವರೂಪ ಕುರಿತು ಅವರು ಹೇಳಿದ್ದನ್ನು ಅ.ನ.ಕೃಷ್ಣರಾಯರು ತಮ್ಮ ಅಧ್ಯಕ್ಷ ಭಾಷಣದಲ್ಲಿ (೧೯೬೨) ಒಪ್ಪಿ ಉದ್ಧರಿಸಿದ್ದಾರೆ. ಅದನ್ನು ನಿಮ್ಮ ಗಮನಕ್ಕೆ ತರುತ್ತೇನೆ :

“ಇನ್ನು ಮುಂದೆ ಪರಿಷತ್ತಿನ ಕಾರ್ಯದಲ್ಲಿ ಸ್ವಲ್ಪ ಬದಲಾವಣೆಯಾಗಬೇಕೆಂದು ನನಗೆ ತೋರುತ್ತದೆ ; ಬಹುಶಃ ತಮಗೂ ಹಾಗೆಯೇ ತೋರಿರಬೇಕು. ಒಂದಾನೊಂದು ಕ
ಕಾಲದಲ್ಲಿ ಕನ್ನಡದ ಸ್ಥಾನಮಾನಗಳಿಗಾಗಿ ಯುದ್ಧ ಹೂಡಬೇಕಾಗಿತ್ತು. ಜನರನ್ನು ಎಚ್ಚರಿಸಿ ಹುರಿದುಂಬಿಸುವುದಕ್ಕಾಗಿ ಪ್ರಚಾರ, ಭಾಷಣಗಳು, ಉತ್ಸವಗಳು, ಭಾವೋದ್ರೇಕ ಇವೆಲ್ಲ ಅವಶ್ಯಕವಾಗಿದ್ದವು. ಈಗ ಕನ್ನಡ ಗೆದ್ದಿದೆ. ಸುಮಾರು ಅರ್ಧ ಶತಮಾನದ ಉಳಿಮೆ ಸ್ವಾದುವಾದ ಫಲ ಕೊಟ್ಟಿದೆ…. ಇನ್ನು ಕನ್ನಡದ ಬಾವುಟದ ಮೆರವಣಿಗೆ ಅವಶ್ಯಕವಿಲ್ಲ – ಆ ಬಾವುಟ ಭವನದ ಮೇಲೆ ಗೆಲುವಾಗಿ ಹಾರಾಡುತ್ತಿದೆ. ಅಂದಮೇಲೆ ಇನ್ನು ಮುಂದೆ ಭವನದೊಳಗೆ ಕ್ರಮ ವ್ಯವಸ್ಥೆಗಳನ್ನು ಅನುಗೊಳಿಸುವ ಪ್ರಯತ್ನ ನಡೆಯಬೇಕು. ಆತ್ಮ ವಿಶ್ವಾಸವನ್ನು ಪಡೆಯುವುದಕ್ಕಾಗಿ ನಮ್ಮ ಹೆಚ್ಚಳವನ್ನು ನಾವು ಉತ್ಪ್ರೇಕ್ಷೆ ಮಾಡಿಕೊಂಡದ್ದು ಸ್ವಾಭಾವಿಕವೇ. ಆದರೆ ಇನ್ನು ಮುಂದೆ ನಿಷ್ಪಕ್ಷಪಾತವಾಗಿ ಆತ್ಮ ಪರೀಕ್ಷೆ ಮಾಡಿಕೊಳ್ಳಬೇಕು. ದಿವಂಗತ ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು ಒಂದು ಬಾರಿ ಹೇಳಿದಂತೆ ‘ಕೊನೆಗೆ ನಿಲ್ಲುವುದು ಅಭಿಮಾನವಲ್ಲ, ಸತ್ಯ’. ಈ ಸತ್ಯವನ್ನು ಎದುರಿಸುವುದಕ್ಕೆ ನಾವು ಹೆದರಬೇಕಾದ್ದೇನೂ ಇಲ್ಲ. ಕನ್ನಡ ಭಾಷೆಯ ಸ್ವರೂಪ, ವ್ಯಾಕರಣ, ಅದಕ್ಕೂ ಇತರ ಭಾಷೆಗಳಿಗೂ ಇರುವ ಸಂಬಂಧ, ಕನ್ನಡ ಛಂದಸ್ಸು, ಲಯ, ಕನ್ನಡ ಸಾಹಿತ್ಯದ ಹಿನ್ನೆಲೆಯಾಗಿರುವ ಮತ್ತು ಕಾಲಕ್ಕೆ ತಕ್ಕಂತೆ ಬದಲಾವಣೆಯಾಗುತ್ತಿರುವ ರಾಜಕೀಯ, ಸಾಮಾಜಿಕ, ಮತೀಯ ಪರಿಸ್ಥಿತಿ – ಇವೆಲ್ಲದರ ವಿಷಯದಲ್ಲೂ ನಿಷ್ಕೃಷ್ಟವಾದ ಪಾಂಡಿತ್ಯವನ್ನು ಪಡೆಯಬೇಕು. ಇನ್ನು ಮುಂದೆ ಸಾಹಿತ್ಯ ಪರಿಷತ್ತಿನ ಕೆಲಸ ಇದೇ ಎಂದು ನನ್ನ ಭಾವನೆ. ಪರಿಷತ್ತು ಸಾಹಿತ್ಯವನ್ನು ಸೃಷ್ಟಿಮಾಡಲಾರದು. ಯಾವೊಂದು ಸಂಸ್ಥೆಯೂ ಆ ಕೆಲಸ ಮಾಡಲಾರದು. ದೈವದತ್ತವಾದ ಪ್ರತಿಭೆಯುಳ್ಳವರಿಗೆ ಆ ಕೆಲಸವನ್ನು ಬಿಡೋಣ. ಪರಿಷತ್ತಿನ ಕೆಲಸವೆಂದರೆ ಆ ಸಾಹಿತ್ಯದ ಬೆಲೆಯನ್ನು ಅಧಿಕಾರಯುತವಾಗಿ ನಿರ್ಣಯಿಸುವುದು ಕೂಡ ಅಲ್ಲ. ಅದರ ಕರ್ತವ್ಯ ಅಂಥ ನಿರ್ಣಯಕ್ಕೆ ಬೇಕಾದ ಪಾಂಡಿತ್ಯವನ್ನೂ, ಉದ್ವೇಗರಹಿತವಾದ ಮತ್ತು ಪೂರ್ವಗ್ರಹಿಕೆಗಳಿಗೆ ನಿಲುಕದ ಸ್ವಚ್ಛವಾದ ವಿಮರ್ಶನ ದೃಷ್ಟಿಯನ್ನೂ ಬೆಳೆಸುವುದು, ಹತ್ತಾರು ಕಡೆಗಳಿಂದ ಅಭಿಪ್ರಾಯ ಬೆಳೆದುಬಂದು ಅವುಗಳ ಘರ್ಷಣೆಯಿಂದ ಸತ್ಯಮೂಡಿಬರುವಂತೆ ಸೌಕರ್ಯಗಳನ್ನು ಕಲ್ಪಸುವುದು, ನಿಘಂಟು, ವಿಶ್ವಕೋಶ ಮುಂತಾದ್ದನ್ನು ಪ್ರಕಟಿಸುವುದು, ಸಂಶೋಧನೆ ನಡೆಸುವುದು-ಇತ್ಯಾದಿ ಕಾರ್ಯಕ್ರಮಗಳಿಗೆ ಪರಿಷತ್ತು ಮೀಸಲಾಗಬೇಕು. ಇದೆಲ್ಲಾ ಮೈ ಬಗ್ಗಿ ಕುಳಿತು ಮಾಡಬೇಕಾದ ಕೆಲಸ. ಇದರಿಂದ ಸುಲಭ ಮನರಂಜನೆ ಸಾಧ್ಯವಿಲ್ಲ ; ಕ್ಷಣ ಕ್ಷಣಕ್ಕೂ ಜನರಿಂದ ಕರತಾಡನಗಳು ಬರುವುದಿಲ್ಲ. ಕರತಾಡನದ ಆಸೆ, ಅದಕ್ಕೆ ಬೇಕಾದ ಆಡಂಬರ- ಇದನ್ನೆಲ್ಲಾ ಪರಿಷತ್ತು ಬಿಟ್ಟುಕೊಡಬೇಕು….. ಕನ್ನಡ ಜನತೆಯೂ ಈ ಬಗೆಯ ಕೆಲಸವನ್ನು ಪರಿಷತ್ತು ಮಾಡಬೇಕೆಂದು ಬಯಸಬಾರದು ; ಅದರ ಆವರಣದಿಂದ ಕೊಂಬು ಕಹಳೆ ತುತ್ತೂರಿಗಳ ಘೋಷ ಕೇಳಿ ಬರಲಿಲ್ಲವಲ್ಲ ಎಂದು ಆತಂಕಪಡಬಾರದು. ಪರಿಷತ್ತಿನ ಕೆಲಸ ಸದ್ಯದಲ್ಲಿ ಜನರ ಕಣ್ಣು ಕೋರೈಸುವಂಥದಲ್ಲವಾದರೂ ನೂರು ಕಾಲ ಬಾಳುವಂಧದಾಗಬೇಕು (ಅದೇ ಪು.೨೪೪ -೪೬)

ಸುಮಾರು ಇಪ್ಪತ್ಮೂರು ವರ್ಷಗಳ ಆನಂತರದಲ್ಲಿ ಅಂದರೆ ೧೯೭೯ರಲ್ಲಿ ಧರ್ಮಸ್ಥಳದಲ್ಲಿ ನಡೆದ ೫೧ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಪರಿಷತ್ತು ಮಾಡಬೇಕಾದ ಕೆಲಸದ ಬಗ್ಗೆ ಹೆಚ್ಚು ಕಡಿಮೆ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಹೇಳಿದ ಮಾತುಗಳಿಗೆ ಸಂವಾದಿಯಾಗಿಯೊ ಪೂರಕವಾಗಿಯೊ ಇರುವಂಥ ಮಾತುಗಳನ್ನು ಕವಿ ಎಂ.ಗೋಪಾಲಕೃಷ್ಣ ಅಡಿಗರು ಹೇಳಿದರು. ಅವರ ಆ ಮಾತುಗಳನ್ನೂ ಇಲ್ಲಿಯೆ ನಿಮ್ಮ ಗಮನಕ್ಕೆ ತರುವುದು ಸೂಕ್ತವೆಂದು ಭಾವಿಸಿದ್ದೇನೆ :

“….ಸಿದ್ಧಿಯ ತಾರತಮ್ಯವನ್ನು ಅಳೆಯುವ ಪ್ರಶ್ನೆ. ಈಗ ಸಾಹಿತ್ಯ ಪರಿಷತ್ತು ಮಾಡಬೇಕಾದ ಕೆಲಸವು ಇದೇ. ಆಡಂಬರ, ಜಾತ್ರೆ, ಮೇಳ ಇವುಗಳಿಂದ ನೋಡಿದವರ ಕಣ್ಣು ಸೆಳೆಯುವ ಕೆಲಸವಲ್ಲ. ಮನೋರಂಜನೆ ಒದಗಿಸುವ ವಿವಿಧ ವಿನೋದಾವಳಿಯಲ್ಲ, ಸಾಹಿತ್ಯಕೃತಿಗಳ ಅಧ್ಯಯನಕ್ಕೂ ಅವುಗಳನ್ನು ತೂಗಿನೋಡುವ ಕೆಲಸಕ್ಕೂ ತಕ್ಕ ಮಾನಸಿಕ ಸಲಕರಣೆಗಳನ್ನು ನಮ್ಮ ಜನಕ್ಕೆ, ನಮ್ಮ ಜನರಲ್ಲಿ ಸಾಹಿತ್ಯಪ್ರಿಯರಾದವರಿಗೆ ಒದಗಿಸಿಕೊಡುವ ಕೆಲಸ. ಸಾಹಿತ್ಯಕ್ಕೆ ಸಂಬಂಧಪಟ್ಟ ಒಂದು ಸಂಸ್ಥೆ ಕನ್ನಡ ಅಭಿಮಾನವನ್ನು ಭಾಷಣಗಳ ಮೂಲಕ ಪ್ರದರ್ಶನಗಳ ಮೂಲಕ ಮೆರವಣಿಗೆಯ ಮೂಲಕ ಪ್ರದರ್ಶಿಸುವುದಲ್ಲ. ಕನ್ನಡ ಜನಕ್ಕೆ ಆಧುನಿಕ ಜ್ಞಾನವನ್ನು, ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನಃಶಾಸ್ತ್ರ ಮುಂತಾದ, ಸಾಹಿತ್ಯಕ್ಕೆ ಹತ್ತಿರವಾದ ಆಧುನಿಕ ಶಾಸ್ತ್ರಗಳಲ್ಲಿ ನಡೆದ ಸಂಶೋಧನೆಗಳ ಸಾರವನ್ನು ಬಹುಜನಕ್ಕೆ ಮುಟ್ಟಿಸಿ ಆ ಮೂಲಕವೇ ಈ ಯುಗಧರ್ಮಕ್ಕೆ ತಕ್ಕ ಕೆಲಸವನ್ನು ಮಾಡುವುದು. ಇದು ಮಾತ್ರ ಸಲ್ಲುವ ಕೆಲಸ, ಉಳಿದದ್ದೆಲ್ಲ ವ್ಯರ್ಥ…. ಇದು ಮುಖ್ಯವಾಗಿ ಶಿಕ್ಷಣದ ಪ್ರಶ್ನೆ, ಸಾಹಿತ್ಯ ಪರಿಷತ್ತಿನ ದೃಷ್ಟಿಯಿಂದ ಸಾರ್ವಜನಿಕ ಶಿಕ್ಷಣದ ಪ್ರಶ್ನೆ” (ಧರ್ಮಸ್ಥಳ ಸಾಹಿತ್ಯ ಸಮ್ಮೇಳನ, ೧೯೭೯, (೧೯೮೦) ಪು ೬೩-೬೪).

“…..ನಮ್ಮಲ್ಲಿ ಪ್ರತಿಯೊಂದು ಸಂಸ್ಥೆಯೂ ಬಹುಬೇಗ ಜಡವಾಗಿ ಹೋಗುವಂತೆ ಈ ಸಂಸ್ಥೆಯೂ ತೀರ ಜಡವಾಗಿ ಯಾಂತ್ರಿಕವಾಗಿ ಈವರೆಗೆ ಮಾಡಿಕೊಂಡು ಬಂದದ್ದನ್ನೇ ಮಾಡುತ್ತ ಹೋಗುತ್ತಿದೆ. ಇದನ್ನು ನಿವಾರಿಸುವ ದಾರಿ ಯಾವುದು ಎಂದು ನಾವೆಲ್ಲರೂ ಯೋಚಿಸಬೇಕು” (ಅದೇ ಪುಲ.೬೬).

ಶ್ರೀ ಜಯಚಾಮರಾಜೇಂದ್ರ ಒಡೆಯರ್ ಹಾಗೂ ಪ್ರೊ. ಎಂ. ಗೋಪಾಲಕೃಷ್ಣ ಅಡಿಗರ ಮಾತುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಯಾವ ಯಾವ ಕೆಲಸಗಳನ್ನು ಮಾಡಬೇಕೆಂದು ಅವರು ಹೇಳಿದರೊ, ಬಯಸಿದರೊ ಆ ಎಲ್ಲ ಕೆಲಸಗಳು ಪರಿಷತ್ತಿನಿಂದ ಮತ್ತು ಪರಿಷತ್ತಿನ ಮೂಲಕವೇ ಆಗದಿದ್ದರೂ ರಾಜ್ಯ ಸರಕಾರ, ವಿಶ್ವವಿದ್ಯಾನಿಲಯಗಳ ಮೂಲಕ ಬಹುಶಃ ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚೇ ಆಗಿದೆ; ಆಗುತ್ತಿದೆ.

ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಗಿದೆ. ಕನ್ನಡವು ಕರ್ನಾಟಕ ಸರಕಾರದ ಆಡಳಿತ ಭಾಷೆಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಇಲಾಖೆ, ಸಾಕ್ಷರತಾ ಅಂದೋಲನ, ಮೈಸೂರಿನ ನಾಟಕ-ಕರ್ನಾಟಕ ರಂಗಾಯಣದಂಥ ಸಂಸ್ಥೆ – ಇಂಥ ಎಷ್ಟೋ ಇಲಾಖೆ, ಅಕಾಡೆಮಿ, ಪ್ರಾಧಿಕಾರಗಳ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ರಕ್ಷಣೆ, ಪೋಷಣೆ, ಪ್ರೋತ್ಸಾಹಕ್ಕೆ ಸಂಬಂಧಿಸಿದಂತೆ ಎಷ್ಟೋ ಬಗೆಯ ಕೆಲಸಗಳನ್ನು ಕರ್ನಾಟಕ ಸರಕಾರ ಮಾಡುತ್ತಿದೆ ಅಥವಾ ಮಾಡಿಸುತ್ತಿದೆ. ಕರ್ನಾಟಕ ರತ್ನ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಜಾನಪದ ಶ್ರೀ ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ – ಬಹುಮಾನಗಳು, ಹೀಗೆ ಹತ್ತು ಹಲವು ಪ್ರಶಸ್ತಿ – ಬಹುಮಾನ, ಬಿರುದುಗಳನ್ನು ನೀಡುವುದರ ಮೂಲಕ ಸಾಹಿತಿಗಳ ಕಲಾವಿದರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ; ಗೌರವಿಸುತ್ತಲಿದೆ. ದಸರಾ ಉತ್ಸವ, ಕರಾವಳಿ ಉತ್ಸವ, ಹಂಪಿ ಉತ್ಸವ, ಕದಂಬೋತ್ಸವ ಮಲೆನಾಡು ಉತ್ಸವ -ಹೀಗೆ ಉತ್ಸವಗಳ ಮೂಲಕವೂ ಸಾಹಿತಿ ಕಲಾವಿದರುಗಳಿಗೆ ಪ್ರೋತ್ಸಾಹ, ಮನ್ನಣೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆಗಳೂ ಈ ಅವಧಿಯಲ್ಲಿ ಹೆಚ್ಚಿವೆ. ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಅಧ್ಯಯನ ಸಂಸ್ಥೆ, ಪೀಠ, ಕೇಂದ್ರಗಳಾಗಿವೆ; ಪ್ರಸಾರಾಂಗಗಳಾಗಿವೆ. ಇಲ್ಲವೆ ಪುಸ್ತಕ ಪ್ರಕಟನ ವಿಭಾಗಗಳಾಗಿವೆ. ಕನ್ನಡದ ಹೆಸರಿನಲ್ಲಿ ಕನ್ನಡಕ್ಕಾಗಿಯೆ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾನಿಲಯವಾಗಿದೆ. ಆಧುನಿಕ ಕನ್ನಡ ಕವಿ ಒಬ್ಬರ – ಕುವೆಂಪು ಅವರ – ಹೆಸರನ್ನು ಕೂಡ ಒಂದು ವಿಶ್ವವಿದ್ಯಾನಿಲಯಕ್ಕೆ ಇಡಲಾಗಿದೆ. ಕವಿ ಮನೆಗಳಾಗಿವೆ. ಹೀಗೆ ಮತ್ತೆಷ್ಟನ್ನೊ ಹೆಸರಿಸುತ್ತ ಹೋಗಬಹುದು.

ಇವೆಲ್ಲವನ್ನೂ ಇಷ್ಟೆಲ್ಲವನ್ನೂ ಕಳೆದ ೪೫ ವರ್ಷಗಳಲ್ಲಿ ರಾಜ್ಯ ಸರಕಾರ ಮಾಡಿದೆ. ಅಥವಾ ಸರಕಾರದ ಅಧೀನ ಸಂಸ್ಥೆಗಳು ಮಾಡಿವೆ. ಯಾವ ಪಕ್ಷದ ಸರಕಾರ ಬಂದರೂ ಇಷ್ಟು ವರ್ಷಗಳಲ್ಲಿ ಸಾಹಿತಿಗಳಿಗೆ ಮಾಸಾಶನ ನೀಡುವಂಥ – ಎಲ್ಲೊ ಒಂದೊ ಎರಡೋ ಯೋಜನೆಗಳನ್ನು ಬಿಟ್ಟರೆ – ಹಿಂದಿನ ಸರಕಾರ ಮಾಡಿದ ಉಳಿದೆಲ್ಲವನ್ನೂ ಪಕ್ಷಭೇದವಿಲ್ಲದೆ ಮುಂದಿನ ಸರಕಾರಗಳು ಮುಂದುವರಿಸಿಕೊಂಡು ಬಂದಿವೆ; ಬರುತ್ತಲಿವೆ.

ಪರಿಷತ್ತು ಮಾಡಬೇಕಾದ ಅಥವಾ ಮಾಡಬಹುದಾದ ಅಥವಾ ಅದು ಮಾಡಬೇಕೆಂದು ಬಯಸುವ ಕೆಲಸಗಳೆಲ್ಲ ಹೀಗೆ ಹತ್ತು ಹಲವು ಕಡೆಗಳಲ್ಲಿ ಮುಖ್ಯವಾಗಿ ಸರಕಾರದ ಅಂಗಸಂಸ್ಥಗಳಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಹಂಚಿಹೋಗಿವೆ. ಪರಿಷತ್ತು ಕೂಡ ಅಂಥ ಕೆಲಸಗಳಲ್ಲಿ ಅಷ್ಟೊ ಇಷ್ಟೊ ಮಾಡುತ್ತಲೇ ಇದೆಯಾದರೂ ಅದರ ಕೆಲಸದ ಪಾಲು ಹಿಂದಿನಂತೆ ಹೆಚ್ಚೆಂದು ಹೇಳಬಹುದಾದಂಥದೇನೂ ಇಲ್ಲ. ಹೀಗಾಗಿ ರಾಜ್ಯೋದಯಕ್ಕಿಂತ ಮೊದಲು ಸಾಹಿತ್ಯ ಸಂಸ್ಥೆಯಾಗಿ ಇದ್ದಂಥ ಕೆಂದ್ರ ಮಹತ್ವ ಈಗ ಕನ್ನಡ ಸಾಹಿತ್ಯ ಪರಿಷತ್ತಿಗೆ ಉಳಿದಿಲ್ಲ. ಆದ್ದರಿಂದಲೊ ಏನೊ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗುವುದೊಂದು ಹಿಂದಿನಂತೆ ದೊಡ್ಡ ಆಕರ್ಷಣೆಯಾಗಿ ಉಳಿದಿಲ್ಲ. ಅಕಾಡೆಮಿಗಳ ಅಧ್ಯಕ್ಷರಾಗುವುದಕ್ಕೆ ಇರುವಂಥ ಆಕರ್ಷಣೆಯೂ ಉಳಿದಿಲ್ಲ.

ಪರಿಷತ್ತಿನ ಅಧ್ಯಕ್ಷರ ಆಯ್ಕೆ ಚುನಾವಣೆಯ ಮೂಲಕ ಆಗುವಂಥದು. ಈ ಅರ್ಥದಲ್ಲಿ ಅದೊಂದು ಪ್ರಜಾಸತ್ತಾತ್ಮಕ ವ್ಯವಸ್ಥೆ. ಆದರೆ ಏಕೊ ಹೇಗೊ ಚುನಾವಣೆಗಳಲ್ಲಿ ‘ಜಾತಿಭೂತ’ ಸೇರಿಕೊಂಡು ಪ್ರಭುತ್ವ ನಡೆಸಿಬಿಡುತ್ತದೆ ಎಂಬ ವದಂತಿ, ಪ್ರಚಾರವಂತೂ ಇದೆ. ಆ ವದಂತಿ, ಪ್ರಚಾರಗಳಲ್ಲಿ ಹುರುಳಿಲ್ಲ ಎಂದು ಧೈರ್ಯವಾಗಿ ಹೇಳುವ ಸ್ಥಿತಿಯಲ್ಲಿ ಯಾರೂ ಇದ್ದಂತಿಲ್ಲ. ಅದೇನು ಇಂದು ನಿನ್ನೆಯದಲ್ಲ. ಜಾತಿಭೂತದ ಮಾತು ಕೇಳಿಬರುವುದಕ್ಕೆ ತೊಡಗಿ ಸುಮಾರು ನಾಲ್ಕು ದಶಕಗಳೇ ಆದವು. ಜಿಲ್ಲಾ, ತಾಲ್ಲೂಕು ಸಾಹಿತ್ಯ ಪರಿಷತ್ತುಗಳ ಅಧ್ಯಕ್ಷರೊ ಪದಾಧಿಕಾರಿಗಳೊ ಆಗುವುದರಲ್ಲಿಯೂ ಸಾಹಿತ್ಯ ಕೇತ್ರದಲ್ಲಿ ಮಹತ್ವದ ಸಾಧನೆ ಮಾಡಿದವರಿಗೆ ಮಾಡುತ್ತಿರುವವರಿಗೆ ಹೆಚ್ಚಿನ ಆಕರ್ಷಣೆ ಉಳಿದಿಲ್ಲ. ಹವ್ಯಾಸಿ ಸಾಹಿತಿಗಳೊ ಹವ್ಯಾಸಿ ಸಾಹಿತ್ಯಾಸಕ್ತರೊ ಅಲ್ಲಿ – ಕೆಲವರನ್ನು ಬಿಟ್ಟರೆ – ಬಹುಪಾಲು ಇರುವಂಥ ಪರಿಸ್ಥಿತಿ ಉಂಟಾಗಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೇ ಮಾಡಬೇಕಾದ ಕೆಲಸ ಇಂಥದೇ ಅಥವಾ ಇಂಥವೇ ಎಂದು ಖಚಿತ ರೂಪ – ರೇಖೆ, ನಿರ್ದಿಷ್ಟ ಯೋಜನಾ ಸ್ವರೂಪ ಇಲ್ಲದಂತಾಗಿರುವ ಈ ಕಾಲದಲ್ಲಿ ಜಿಲ್ಲಾ, ತಾಲೂಕು ಸಾಹಿತ್ಯ ಪರಿಷತ್ತುಗಳಂಥವುಗಳಿಂದ ಏನೇನೊ ದೊಡ್ಡದನ್ನು ನಿರೀಕ್ಷಿಸುವುದು, ಅಪೇಕ್ಷಿಸುವುದು ಸಾಧ್ಯವೆ, ಸಾಧುವೆ? ಏನೇನೊ ಕೊರತೆಗಳನ್ನು ಬೆಟ್ಟುಮಾಡಿ ತೋರಿಸುವ ಮೊದಲು ಸಾಹಿತಿಗಳು, ಸಾಹಿತ್ಯ ಪರಿಷತ್ತು ನಾಡಿಗೆ ಹೆಚ್ಚು ಪ್ರಯೋಜನಕಾರಿಯಾದ ಸಂಸ್ಥೆಯಾಗಿ ಇರಬೇಕೆಂಬ ಕಾಳಜಿ ನಿಜವಾಗಿಯೂ ಇದ್ದವರಾದರೆ ಅವರು ಕನಿಷ್ಠ ಸಾಹಿತ್ಯ ಪರಿಷತ್ತಿನ ಸದಸ್ಯರಾದರೂ ಆಗಿದ್ದೇವೆಯೆ ಎಂದು ತಮ್ಮನ್ನು ತಾವೆ ಮೊದಲಾಗಿ ಕೇಳಿಕೊಳ್ಳುವುದು ಅಗತ್ಯ. ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಯ ಬಗ್ಗೆ ನಿಜವಾದ ಕಳಕಳಿ ಇರುವವರೆಲ್ಲ ಪ್ರಜಾಸತ್ತಾತ್ಮಕ ವೇದಿಕೆಯಾದ ಈ ಸಾಹಿತ್ಯ ಪರಿಷತ್ತನ್ನು ಪುನರುಜ್ಜೀವನಗೊಳಿಸಿ ಕನ್ನಡ ಪರ ಹೊಸ ಹೋರಾಟದ ಸ್ವತಂತ್ರ ವೇದಿಕೆಯಾಗುವಂತೆ ರೂಪಿಸುವುದಕ್ಕೆ ಸಾಧ್ಯವೆ, ಎಂಬ ಬಗ್ಗೆ ಗಂಭೀರವಾಗಿ ಚಿಂತಿಸುವ ಕಾಲ ಆಗಲೇ ಬಂದುಬಿಟ್ಟಿದೆ. ಪರಿಷತ್ತು ಕನ್ನಡ ಪರ ಹೋರಾಟದ ಸ್ವತಂತ್ರ ವೇದಿಕೆಯಾಗಿ ರೂಪುಗೊಳ್ಳಬೇಕಾದರೆ ಆರ್ಥಿಕವಾಗಿ ತನ್ನಕಾಲ ಮೇಲೆ ತಾನು ದೃಢವಾಗಿ ನಿಂತುಕೊಳ್ಳುವ ಸ್ಥಿತಿ ಉಂಟಾಗಬೇಕಾದದ್ದು ಅನಿವಾರ್ಯ.

ಸಂಬಂಧಪಟ್ಟವರು ಸಾಹಿತ್ಯ ಪರಿಷತ್ತಿಗೆ ಹಿಂದೆ ಇದ್ದ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಲಕ್ಷಣವನ್ನು ಮರಳಿ ತಂದುಕೊಡುವ ಸಂಕಲ್ಪ ಮಾಡಬೇಕಾಗಿದೆ. ಜಾತಿಭೂತದ ಹಾವಳಿ ಇದೆ ಎಂಬಂಥ ವದಂತಿಗೆ, ಪ್ರಚಾರ ಕೂಡ ಒಂದಿನಿತೂ ಅವಕಾಶ ದೊರೆಯದಂತೆ ಅದನ್ನು ಬೇರು ಸಹಿತ ಕಿತ್ತು ಹಾಕುವ ದಿಕ್ಕಿನಲ್ಲಿ ನಿಷ್ಠೆಯಿಂದ ಕ್ರಿಯಾಶೀಲರಾಗಬೇಕಾಗಿದೆ. ಕನ್ನಡ ಸಾಹಿತಿಗಳು, ಸಾಹಿತ್ಯಾಸಕ್ತರು ಎಲ್ಲರೂ ಪರಿಷತ್ತಿನ ಸದಸ್ಯರಾಗುವುದು ಈ ದಿಸೆಯಲ್ಲಿ ಮಾಡಬೇಕಾದ ಮೊದಲ ಕರ್ತವ್ಯವಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತು ವಿಶಿಷ್ಟವಾದಂಥ ಕಾರ್ಯರೂಪ, ಕಾರ್ಯಯೋಜನೆಗಳನ್ನು ಮರುರೂಪಿಸಿಕೊಳ್ಳಬೇಕಾಗಿದೆ. ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಉಳಿವಿಗೆ ಸಂಬಂಧಿಸಿದಂತೆ ಜಾಗತೀಕರಣದ ಆಕ್ರಮಣಶೀಲತೆಯಿಂದ ಎದುರಾಗಿರುವ ಕಠಿಣತಮ ಸವಾಲುಗಳನ್ನು ಎದುರಿಸುವುದಕ್ಕೆ ಸಮಸ್ತ ಕನ್ನಡಿಗರನ್ನು ಸಜ್ಜುಗೊಳಿಸುವ ಜೀವಂತ ವೇದಿಕೆಯಾಗುವ ಕಡೆ ಗಂಭೀರವಾಗಿ ಯೋಚಿಸಿ, ಆಲೋಚಿಸಿ ಕಾರ್ಯ ಪ್ರವೃತ್ತವಾಗಬೇಕಾಗಿದೆ. ಅಖಂಡ ಕರ್ನಾಟಕದ ಕನಸನ್ನು ನನಸು ಮಾಡುವುದರಲ್ಲಿ ಕ್ರಿಯಾಶೀಲ ಸಂಕಲ್ಪದಿಂದ ತೊಡಗಿಕೊಂಡು ಇತಿಹಾಸ ನಿರ್ಮಿಸಿದ ಕನ್ನಡ ಸಾಹಿತ್ಯ ಪರಿಷತ್ತು ಮತ್ತೊಮ್ಮೆ ಅಂಥ, ಅಷ್ಟೇ ಅಲ್ಲ ಅದಕ್ಕಿಂತ ಮಹತ್ವದ ಮತ್ತು ಕಠಿಣವಾದ, ಹೋರಾಟಕ್ಕೆ ತಾನೂ ಸಿದ್ಧವಾಗಿ ಕನ್ನಡಿಗರನ್ನೂ ಸಿದ್ಧಗೊಳಿಸಬೇಕಾಗಿದೆ.

ಶ್ರೀ ಜಯರಾಮರಾಜೇಂದ್ರ ಒಡೆಯರ್ ಮತ್ತು ಕವಿ ಎಂ.ಗೋಪಾಲಕೃಷ್ಣ ಅಡಿಗರು ಕರ್ನಾಟಕ ರಾಜ್ಯೋದಯವಾದ ಮೇಲೆ ಹೋರಾಟದ ಪರ್ವ ಮುಗಿಯಿತು ; ಗೆಲುವು ನಮ್ಮದಾಗಿದೆ; ಇನ್ನೇನಿದ್ದರೂ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಸತ್ವವೃದ್ಧಿಗಾಗಿ ನಮ್ಮೆಲ್ಲ ಕನ್ನಡಾಭಿಮಾನ ಶಕ್ತಿ ಸಾಮರ್ಥ್ಯಗಳನ್ನು ವಿನಿಯೋಗಿಸುವುದು, ಆ ಮೂಲಕ ಆಧುನಿಕ ಯುಗದ ಜ್ಞಾನ ಸ್ಪರ್ಧೆಯಲ್ಲಿ ‘ನಾವು ಸಮ ನಿಮಗೆಂದು’ ಇತರ ಭಾಷೆಯವರ ಜೊತೆ, ಇತರ ಜನಾಂಗದವರ ಜೊತೆ ತಲೆ ಎತ್ತಿ ನಿಲ್ಲುವಂಥ ಆತ್ಮ ಪ್ರತ್ಯಯ, ಆತ್ಮಗೌರವ ಬೆಳೆಸಿಕೊಳ್ಳುವುದಕ್ಕೆ ಅಗತ್ಯವಾದ ಕಾಯಕ ನಿಷ್ಠೆ ತೋರುವುದು ಅಗತ್ಯವೆಂದು ಹೇಳಿದ್ದು ತಪ್ಪು ಎಂದು ಹೇಳುವಂತಿಲ್ಲ. ಏನಾಗಬೇಕೆಂದು ಅವರು ಹೇಳಿದ್ದರೊ ಅವೆಲ್ಲ ಆಗಬೇಕಾದವು ಎಂಬುದೂ ನಿಜ. ಆದರೆ ಆಗಲೇಬೇಕಾದದ್ದು ಅದಷ್ಟೇ ಅಲ್ಲ, ಅದು ಮಾತ್ರ ಅಲ್ಲ, ಎಂಬ ಬಗ್ಗೆ ಇರಬೇಕಾದ ಸಮಗ್ರ ದೃಷ್ಟಿಯ ಕೊರತೆ ಅವರ ಆ ಮಾತುಗಳಲ್ಲಿ, ಆ ನಿಲುವುಗಳಲ್ಲಿ ಕಾಣಿಸುತ್ತದೆ. ಅವರ ಅನಿಸಿಕೆಯ ಹಿಂದಿದ್ದ ಪ್ರಾಮಾಣಿಕ ಕಳಕಳಿ, ಸಾಹಿತ್ಯ ಸಂಸ್ಕೃತಿವರ್ಧನೆಯ ಬಗ್ಗೆ ಇದದ ಋಜುನಿಷ್ಠೆ ಇವುಗಳನ್ನು ಪ್ರಶ್ನಿಸಬೇಕಾಗಿಲ್ಲ; ಪ್ರಶ್ನಿಸುವಂತಿಲ್ಲ ಆದರೆ ಕನ್ನಡನಾಡು ಒಂದಾದ ಮೇಲೆ ಅಂದರೆ ಕನ್ನಡ ಭಾಷೆಯ ಆಧಾರದ ಮೇಲೆಯೆ ರಾಜ್ಯ ವಿಂಗಡಣೆಯಾಗಿ ಭಾಷಾವಾರು ರಾಜ್ಯವೊಂದು ವಾಸ್ತವ ಸತ್ಯವಾದ ಮೇಲೆ ಕನ್ನಡಿಗರು ಗೆದ್ದಿದ್ದಾರೆ, ಕನ್ನಡಕ್ಕೆ ಅಪಾಯವಿಲ್ಲದ ಸ್ಥಿತಿ ಶಾಶ್ವತವಾಗಿ ಉಂಟಾಗಿದೆ ಎಂಬ ಅವರುಗಳ ಗ್ರಹಿಕೆ ದೂರದೃಷ್ಟಿಯದಾಗಿರಲಿಲ್ಲ; ಸಮಗ್ರ ದೃಷ್ಟಿಯದಾಗಿರಲಿಲ್ಲ, ಆಂಶಿಕ ದೃಷ್ಟಿಯದಾಗಿತ್ತು ಎಂಬುದು, ಕನ್ನಡ ಭಾಷೆಯ ಅಳಿವು ಉಳಿವಿನ ಸಮಸ್ಯೆಯನ್ನು, ಸವಾಲನ್ನು ಹಿಂದೆಂದಿಗಿಂತಲೂ ತೀವ್ರತರವಾಗಿ ಕನ್ನಡ ಭಾಷೆಯು ಎದುರಿಸುತ್ತಿರುವ, ಜಾಗತೀಕರಣದ ದುರಾಕ್ರಮಣದ ಈ ಬಿಕ್ಕಟ್ಟಿನ ಕಾಲಘಟ್ಟದಲ್ಲಿ, ನಿಚ್ಚಳವಾಗಿ ಕಾಣಿಸುತ್ತಿದೆ.

ಕನ್ನಡ ನಾಡು, ನುಡಿ, ಸಾಹಿತ್ಯ ಸಂಸ್ಕೃತಿಯ ಪುನರುಜ್ಜೀವನ, ಪುರೋಭಿವೃದ್ಧಿಯ ವಿಷಯದಲ್ಲಿ ಪ್ರಾಂಜಲ ದೃಷ್ಟಿಯಿಂದ ನೆರವು, ಪ್ರೋತ್ಸಾಹಗಳನ್ನು ತಮ್ಮ ರಾಜಾಸ್ಥಾನದಲ್ಲಿ ನೀಡುತ್ತ ಬಂದದ್ದು ಮಾತ್ರವಲ್ಲದೆ, ಮೈಸೂರು ವಿಶ್ವವಿದ್ಯಾನಿಲಯ, ಕನ್ನಡ ಸಾಹಿತ್ಯ ಪರಿಷತ್ತು, ಪ್ರಾಚ್ಯವಿದ್ಯಾ ಸಂಶೋಧನಾಲಯಗಳಂಥ ಸಂಸ್ಥೆಗಳ ಸ್ಥಾಪನೆ, ಪೋಷಣೆ ಮಾಡುತ್ತ ಬಂದಿದ್ದ ಮೈಸೂರು ರಾಜವಂಶ ಪರಂಪರೆಯಲ್ಲಿ ಬಂದು ಸ್ವತಃ ಮಹಾರಾಜರಾಗಿದ್ದು ಆ ಪರಂಪರೆಯನ್ನು ನಿಷ್ಠೆಯಿಂದ ಮುಂದುವರೆಸಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಮನಸ್ಸಿನಲ್ಲಿ, ಕನ್ನಡ ಸಾಹಿತ್ಯ ಭವಿಷ್ಯದಲ್ಲಿ ಮಾಡಬೇಕಾದ ಕೆಲಸ, ಮಾಡಬಾರದ ಕೆಲಸಗಳ ಬಗ್ಗೆ ಹೇಳುವಾಗ ಸ್ವಾತಂತ್ರ್ಯನಂತರದ ಜನಪ್ರತಿನಿಧಿಗಳು ಕನ್ನಡ ಭಾಷಾಭಿವೃದ್ಧಿಯ ಮೂಲಭೂತ ವಿಷಯಗಳಲ್ಲಿ ಅಂದರೆ ಶಿಕ್ಷಣದಲ್ಲಿ ಕನ್ನಡವನ್ನು, ಜನಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡಿ ಬೆಳೆಸುವುದರಲ್ಲಿ ಮಾಡಬಹುದಾದ ಪ್ರಜಾವಂಚನೆಯ ಸಂಭವನೀಯ ಕಲ್ಪನೆ ಕುಡ ಸುಳಿದಿರಲಿಲ್ಲ ಎಂದು ತೋರುತ್ತದೆ. ಪ್ರೊ. ಗೋಪಾಲಕೃಷ್ಣ ಅಡಿಗರು ಸ್ವಾತಂತ್ರ್ಯಾನಂತರ ಪ್ರಧಾನಿ ಜವಹರಲಾಲನೆಹರೂ ಸೇರಿದಂತೆ ರಾಜಕೀಯ ‘ಪ್ರಭು’ಗಳ ಕುಟಿಲತೆ, ನಯವಂಚಕ ಬುದ್ಧಿ, ಮುಂದಾಲೋಚನೆಯ ಅಭಾವ ಇತ್ಯಾದಿಗಳ ಬಗ್ಗೆ ತೀಕ್ಷ್ಣ ವಿಮರ್ಶಕರೂ ಟೀಕಾಕಾರರೂ ಆಗಿದ್ದವರು. ಯಾಕೊ ‘ಶ್ರೇಷ್ಠತೆ’ಯ ಪರಿಕಲ್ಪನೆಯ ರುಚಿರತಿಯಲ್ಲಿ ಪ್ರಜ್ಞಾವಂತರ, ಶಿಷ್ಟ ಚಿಂತನಶೀಲರ ನಿರೀಕ್ಷೆಯ ಮಟ್ಟಿಗೆ ಅವರು ಹೆಚ್ಚಿನ ಒತ್ತುನೋಟ ಬೀರಿದರೆಂದು ತೋರುತ್ತದೆ. “ಈ ದೇಶ ಸ್ವತಂತ್ರವಾದ ಕೂಡಲೆ ಶಿಕ್ಷಣ ಮಾಧ್ಯಮದ ಪ್ರಶ್ನೆ ಪ್ರಶ್ನೆಯಾಗುಳಿಯುವುದಿಲ್ಲ” ಎಂದು ಗಾಂಧೀಜಿಯವರೇ ಅತ್ಮ ವಿಶ್ವಾಸದಿಂದ ಘೋಷಿಸಿದ ಹಿನ್ನೆಲೆಯಿಂದಾಗಿ, ಕನ್ನಡ ಭಾಷೆಯ ಆಧಾರದ ಮೇಲೆಯೆ ರಚಿತವಾಗಿರುವ ಈ ರಾಜ್ಯದಲ್ಲಿ ಶಿಕ್ಷಣವು ಕನ್ನಡ ಮಾಧ್ಯಮದಲ್ಲಿ ಆಗಬೇಕು, ಆಗುತ್ತದೆ ಎಂಬುದು ಗೃಹೀತ ಸಂಗತಿ ಎಂದು ಸಹಜವಾಗಿಯೆ ನಂಬಿದ್ದರಿಂದ ಅವರಿಬ್ಬರೂ ಆ ಬಗ್ಗೆ ಪ್ರತ್ಯೇಕವಾಗಿ ಹೇಳದೆ ಇದ್ದಿರಬಹುದೆಂದು ನಾವು ಊಹಿಸಬಹುದಾಗಿದೆ !ಸ

ಕುವೆಂಪು ೧೯೫೭ರಲ್ಲಿ ಧಾರವಾಡದಲ್ಲಿ ನಡೆದ ಏಕೀಕೃತ ಅಖಂಡ ಕರ್ನಾಟಕದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಭಾಷಣದಲ್ಲಿ ಕನ್ನಡ ಭಾಷೆ, ಶಿಕ್ಷಣ ಮಾಧ್ಯಮ ಇವುಗಳ ವಿಷಯವಾಗಿ ಆಡಿದ ಮಾತುಗಳನ್ನು ಇಲ್ಲಿ ನಿಮ್ಮ ಗಮನಕ್ಕೆ ತರುತ್ತೇನೆ :

“ಇಲ್ಲಿ ಏಕೀಕೃತ ಕರ್ಣಾಟಕದ ಸಾಹಿತ್ಯ ಪರಿಷತ್ತಿನ ಪ್ರಪ್ರಥಮ ವಾರ್ಷಿಕ ಸಮ್ಮೇಳನೋತ್ಸವದಲ್ಲಿ ಭಾಗಿಗಳಾಗಲು ನೆರೆದಿದ್ದೇವೆ. ನಾವು ನಿಜವಾಗಿಯೂ ಭಾಗ್ಯಶಾಲಿಗಳಲ್ಲವೆ? ಧನ್ಯರಲ್ಲವೆ?

“ಹೌದು ಆದರೆ ಏಕೆ ಧನ್ಯರು? ಏನು ಧನ್ಯತೆ? ಶಾಶ್ವತ ಪ್ರಯೋಜನ ರೂಪವಾದ ಯಾವ ಪುರುಷಾರ್ಥ ದೊರೆಕೊಂಡಿದೆ? ಅಥವಾ ಅಂಥ ಪುರುಷಾರ್ಥ ಸಾಧನೆಗೆ ಹಾದಿಯಾದರೂ ಸಿದ್ಧವಾಗಿದೆಯೆ?….” (ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣಗಳು ಸಂಪುಟ ೩, ೧೯೭೨ ಪು.೯೯-೧೦೦).

“ಸಂಸ್ಕೃತಿಯ ಏಳಿಗೆಗೆ ತಳಹದಿಯಾಗುವ ಲೌಕಿಕ ಚೌಕಟ್ಟಿನ ಸಾಧನೆಗಾಗಿಯೇ ಜನತೆ ಭಾಷಾನುಗುಣ ಪ್ರಾಂತಗಳನ್ನು ಬಯಸಿದ್ದು… ಆಯಾ ಪ್ರದೇಶದ ಸಾಮಾನ್ಯ ಜನತೆಯ ದೈನಂದಿನ ವ್ಯವಹಾರಕ್ಕೂ ಭಾವ ಹಾಗೂ ಬುದ್ಧಿಪುಷ್ಟಿಯ ಸಾಧನೆಗೂ ವಿಶೇಷವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಿಕಾಸಕ್ಕೂ ಬೇಕಾದುದು ಆಯಾ ದೇಶಭಾಷೆಯೆ. ಆದ್ದರಿಂದ ಆಯಾ ದೇಶಭಾಷೆಗಳ ವಿಷಯದಲ್ಲಿ ಆಯಾ ಪ್ರದೇಶಗಳು ಎಷ್ಟು ಶ್ರಮಿಸಿದರೂ ಸಾಲದಾಗಿದೆ; ಎಷ್ಟೇ ಪ್ರೋತ್ಸಾಹ ಕೊಟ್ಟರೂ ಎಂದಿಗೂ ಅತಿರೇಕ ಎನ್ನಿಸಿಕೊಳ್ಳಲಾರದು, ಸರ್ಕಾರಗಳಾಗಲಿ, ವಿದ್ಯಾಭ್ಯಾಸ ಇಲಾಖೆಗಳಾಗಲಿ, ವಿಶ್ವವಿದ್ಯಾನಿಲಯಗಳಾಗಲಿ, ಇತರ ಸಾಂಸ್ಕೃತಿಕ ಸಂಸ್ಥೆಗಳಾಗಲಿ, ಕಡೆಗೆ ವ್ಯಾಪಾರ ವಾಣಿಜ್ಯಾದಿ ಸಂಸ್ಥೆಗಳಾಗಲಿ ದೇಶಭಾಷೆಗೇ ಮೊತ್ತಮೊದಲ ಸ್ಥಾನ ಕೊಡಬೇಕು. ಹಾಗೆ ಮಾಡದಿದ್ದರೆ ಪ್ರಜಾಪ್ರಭುತ್ವದ ಬುಡದ ಬೇರಿಗೆ ಬೆನ್ನೀರೆರೆದಂತಾಗುತ್ತದೆ…” (ಅದೇ ಪು.೧೦೯).

…”ಕರ್ಣಾಟಕದಲ್ಲಿ ಕನ್ನಡ ಪ್ರಥಮ ಭಾಷೆಯಾಗದಿದ್ದರೆ ಕನ್ನಡವೆ ಶಿಕ್ಷಣ ಮಾಧ್ಯಮವಾಗದಿದ್ದರೆ ಕನ್ನಡಿಗರ ಬಾಳು ಕುಂಠಿತವಾಗುತ್ತದೆ; ಕನ್ನಡಿಗರ ಏಳಿಗೆಗೆ ಧಕ್ಕೆ ಬರುತ್ತದೆ; ಕರ್ಣಾಟಕದ ರಚನೆ ಅರ್ಥಹೀನವಾಗುತ್ತದೆ….. ನಮ್ಮ ಜನಸಾಮಾನ್ಯರ ಸರ್ವಾಂಗೀಣವಾದ ನ್ಯಾಯಬದ್ಧವಾದ ವಿಕಾಸಕ್ಕೆ ಅಡಚಣೆ ಒದಗುತ್ತದೆ; ನಮ್ಮ ಸಾಹಿತ್ಯವೂ ಸಮೃದ್ಧವಾಗಿ ಪುಷ್ಪವಾಗಿ ಬಹುಮುಖವಾಗಿ ಸರ್ವತೋಮುಖವಾಗಿ ಬದುಕಿನ ಮತ್ತು ವಿದ್ಯೆಯ ಸರ್ವಶಾಖೆಗಳಲ್ಲಿಯೂ ಚೈತನ್ಯಮಯವಾದ ಜನಜೀವನದ ನೆಲೆಯಿಂದ ಹೊಮ್ಮದೆ ಪ್ರದರ್ಶನಕ್ಕಾಗಿ ತೂಗುಹಾಕಿರುವ ಕುಂಡಗಳಲ್ಲಿ ಬೆಳೆಯುವ ಲಘು ಮನೋರಂಜನೆಯ ವಸ್ತುವಾಗುತ್ತದೆ. ಅಂತಹ ದುಃಖದ ಅಮಂಗಳದ ದುರಂತದ ಪರಿಸ್ಥಿತಿಗೆ ಕಾರಣವಾಗುವವರೆಲ್ಲರೂ ವ್ಯಕ್ತಿಗಳಾಗಲಿ, ಸಂಸ್ಥೆಗಳಾಗಲಿ, ಚಿರಂತನವಾಗಿ ಶಾಪಗ್ರಸ್ತರಾಗುತ್ತಾರೆ; ಕವಿ ಪ್ರವಾದಿಯೂ ಆಗುತ್ತಾನೆ.” (ಅದೇ ಪು. ೧೧೯)

ಶಿವರಾಮಕಾರಂತರು ೧೯೫೪ರಲ್ಲಿ ಮೈಸೂರಿನಲ್ಲಿಯೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಆಡಳಿತ ಭಾಷೆ, ಸಾಹಿತ್ಯ ಹಾಗೂ ಶಿಕ್ಷಣ ಮಾಧ್ಯಮದ ಬಗ್ಗೆ ಹೇಳಿದ ಕೆಲವು ಮಾತುಗಳನ್ನೂ ನಾನಿಲ್ಲಿ ನಿಮ್ಮ ಗಮನಕ್ಕೆ ತರಬಯಸುತ್ತೇನೆ :

“ಆಡಳಿತ ಸೌಕರ್ಯ; ಯಾರ ಸಲುವಾಗಿದೆ? ಜನಗಳಿಂದ ಅಧಿಕಾರ ಪಡೆಯುವ ಜನ, ಯಾರ ಸಲುವಾಗಿ ದುಡಿಯಬೇಕು? ಯಾರ ಹಿತ ನೋಡಬೇಕು?… ಪ್ರಜಾಪ್ರಭುತ್ವವನ್ನು ಯಶಸ್ವಿಯಾಗಿ ಮಾಡಬಲ್ಲ ಭಾಷೆ ಯಾವುದು? ಕನ್ನಡ ಜನಗಳ ಪಾಲಿಗೆ ಅದು ಕನ್ನಡ ; ಅದೊಂದೇ. ಇಂಗ್ಲಿಷ್ ಅಲ್ಲ. ಹಿಂದಿ ಅಲ್ಲ. ಕನ್ನಡ ನಾಡಿನ ಜನಕ್ಕೆ ಕನ್ನಡವೊಂದೇನೇ. ವಿಚಾರ ವಿನಿಮಯದಿಂದ ಸಮಾಜ ಹುಟ್ಟುತ್ತದೆ – ಬೆಳೆಯುತ್ತದೆ ಎಂದೆ. ನಾಗರಿಕತೆ ಹುಟ್ಟಿದ್ದು ಅದರಿಂದಲೇ ; ಬೆಳೆದುದು ಅದರಿಂದಲೇ. ಅಂಥ ವಿಚಾರ ವಿನಿಮಯ ನಡೆಯಬೇಕಾದ್ದು ‘ಭಾಷೆ’ಯ ಮೂಲಕ. ನಾಟ್ಯದಿಂದಲ್ಲ ; ಚಿತ್ರಕಲೆಯಿಂದಲ್ಲ. ಹಾಗಾದುದರಿಂದ ಕನ್ನಡದ ಜನಕ್ಕೆ ಕನ್ನಡ ಭಾಷೆ ಬದುಕಿನ ಉಸಿರು. ಅದನ್ನು ಬೇರೊಂದು ಭಾಷೆ ಬಂದು ಉತ್ಫಾಟನೆ ಮಾಡಿ, ಅದರ ಸ್ಥಾನವನ್ನು ಕಸಿದುಕೊಂಡು, ಅದು ಸಲ್ಲಿಸುವ ಸೇವೆಯನ್ನು ತಾನು ಎಂದೂ ಮಾಡಲಾರದು… ನಮ್ಮ ಪ್ರಾಂತೀಯ ಆಡಳಿತೆಯ ಭಾಷೆ ಕನ್ನಡವಾಗಿಯೆ ಉಳಿಯಬೇಕು (ಅದೇ ಪು.೬೧).

“… ವಿಜ್ಞಾನದ ಮಾತನ್ನಾಡಿದ. ಈ ಹೊತ್ತು ನಮಗೆ ಅದರ ಅರಿವಿಗೆ ಇಂಗ್ಲಿಷಿನಂಥ ಭಾಷೆ ತುಂಬಾ ಸಹಾಯ ಮಾಡಿದೆ. ಅದರಿಂದಾಗಿ ವಿಜ್ಞಾನ ಶಿಕ್ಷಣ, ಪ್ರಚಾರಗಳೆಲ್ಲವೂ ಇಂಗ್ಲಿಷಿನಿಂದಾಗಬೇಕೆಂದು ನಾವೆಂದೂ ತಿಳಿಯಬಾರದು – ಇಂಗ್ಲಿಷ್ ಮಾತೃಭಾಷೆಯಲ್ಲದ ಯಾವ ಸ್ವತಂತ್ರ ರಾಷ್ಟ್ರವೂ ಹಾಗೆ ಮಾಡುವುದಕ್ಕೆ ಸಿದ್ಧವಿಲ್ಲ; ಮಾಡಬೇಕಾಗಿಯೂ ಇಲ್ಲ. ನಮ್ಮ ವಿಶ್ವವಿದ್ಯಾನಿಲಯಗಳ ಶಿಕ್ಷಣ ಮಾಧ್ಯಮ, ನಮ್ಮ ಯಾವತ್ತು ಶಿಕ್ಷಣ ಮಾಧ್ಯಮ ಕನ್ನಡವೇ ಆಗಬೇಕು” (ಅದೇ ಪು ೭೨).

ಕುವೆಂಪು ಅವರು, ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಆಗ್ಗೆ ಇಪ್ಪತ್ತಮೂರು ವರ್ಷಗಳ ಹಿಂದೆಯೆ (೧೯೩೪) ರಾಷ್ಟ್ರಪಿತ ಗಾಂಧೀಜಿಯವರು ಹೇಳಿದ್ದ ಮಾತುಗಳನ್ನೂ ತಮ್ಮ ಸಮ್ಮೇಳಾನಾಧ್ಯಕ್ಷ ಭಾಷಣದಲ್ಲಿ ಉದ್ಧರಿಸಿದ್ದಾರೆ. ಅದರ ಸ್ವಲ್ಪ ಭಾಗವನ್ನು ಕೂಡ ಇಲ್ಲಿ ನಿಮ್ಮ ಗಮನಕ್ಕೆ ತರುತ್ತೇನೆ:

“…ನಾನಿಂದು ಸರ್ವಾಧಿಕಾರಿಯಾಗಿದ್ದರೆ ಈ ಕೂಡಲೆ ಪರಭಾಷೆಯ ಮೂಲಕದ ವಿದ್ಯಾಭ್ಯಾಸವನ್ನು ನಿಲ್ಲಿಸುತ್ತಿದ್ದೆ…. ಅಂತರರಾಷ್ಟ್ರೀಯ ರಾಜಕೀಯ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಆಂಗ್ಲಭಾಷೆ ಅತ್ಯವಶ್ಯಕ ಎಂದು ನನಗೆ ಗೊತ್ತು…. ಪರಭಾಷೆಯ ಮೂಲಕದ ಶಿಕ್ಷಣದಿಂದ ರಾಷ್ಟ್ರಕ್ಕೆ ಆಗುತ್ತಿರುವ ಜ್ಞಾನಹಾನಿ ಮತ್ತು ನೈತಿಕ ನಷ್ಟ ಅಷ್ಟಿಷ್ಟಲ್ಲ. ಆ ನಷ್ಟ ಎಷ್ಟು ಎಂಬುದನ್ನು ಬಹುಶಃ ನಮಗಿಂತ ಮುಂದಿನ ಪೀಳಿಗೆಯವರು ಅರಿಯಬಲ್ಲರು… ಈ ಕೂಡಲೆ ಶಿಕ್ಷಣ ಮಾಧ್ಯಮ ಬದಲಾವಣೆ ಹೊಂದಬೇಕು. ದೇಶಭಾಷೆಗಳಿಗೆ ‘ಯೋಗ್ಯವಾದ’ ಸ್ಥಾನ ಲಭಿಸಬೇಕು. ಆ ಮಾರ್ಪಾಡಿನಿಂದ ಅಲ್ಪ ಸ್ವಲ್ಪ ಗೊಂದಲ ಕಳವಳ ತಲೆದೋರಿದರೂ ಅವೆಲ್ಲ ತಾತ್ಕಾಲಿಕವಾದವು. ಆದರೆ ದಿನದಿನವೂ ಆಗುತ್ತಿರುವ ನಷ್ಟ ಒಟ್ಟುಗೂಡಿ ಕೊನೆಗೆ ಸರ್ವನಾಶ ಸಂಭವಿಸುವುದಕ್ಕಿಂತ ಸ್ವಲ್ಪ ಕಾಲ ಗೊಂದಲದ ಪರಿಸ್ಥಿತಿ ಸಂಭವಿಸಿದರೂ ಚಿಂತೆಯಿಲ್ಲ… ಈ ದೇಶ ಸ್ವತಂತ್ರವಾದ ಕೂಡಲೇ ಶಿಕ್ಷಣ ಮಾಧ್ಯಮದ ಪ್ರಶ್ನೆ ಪ್ರಶ್ನೆಯಾಗುಳಿಯುವುದಿಲ್ಲ…”(ಅದೇ ಪು ೧೧೦-೧೧).

ನಾನು ಈ ಭಾಷಣದಲ್ಲಿ ಈ ಮೊದಲೇ ಗುರುತಿಸಿ ಹೇಳಿರುವಂತೆ ಕರ್ನಾಟಕ ಸರಕಾರ-ಅದು ಯಾವುದೇ ಪಕ್ಷದ್ದೇ ಆಗಿರಲಿ – ಈವರೆಗೆ ನಾನು ಉದ್ಧರಿಸಿದ ಮಹನೀಯರ ಅಭಿಪ್ರಾಯಗಳಲ್ಲಿ ಹಲವಷ್ಟನ್ನು ಮಾಡಿರುವುದು, ಮಾಡುತ್ತಿರುವುದು ಮೇಲ್ನೋಟಕ್ಕೇ ಕಾಣುವಂತೆ ಇದೆ. ಆ ವಿವರಗಳನ್ನು ನನ್ನ ಭಾಷಣದಲ್ಲಿ ಈ ಮೊದಲೇ ಪ್ರಸ್ತಾಪಿಸಿದ್ದೇನೆ. ಅವೆಲ್ಲ ನಿರೀಕ್ಷಿತ, ಉದ್ದೇಶಿತ ಮಟ್ಟದಲ್ಲಿ ಸರ್ವಸಮರ್ಪಕವಾಗಿ ನಡೆಯುತ್ತಿವೆಯೆ ಎಂಬ ಪ್ರಶ್ನೆ ಬೇರೆ. ಕೆಲವು ಕೊರತೆಗಳನ್ನು ಪಟ್ಟಿ ಮಾಡಬಹುದು. ಆದರೂ ಒಟ್ಟಿನಲ್ಲಿ ಅವೆಲ್ಲ ಪ್ರಜಾಪ್ರಭುತ್ವ ಸರಕಾರ ಮಾಡಬೇಕಾದಂಥ ಕೆಲಸಗಳೇ ಆಗಿದ್ದರೂ ಅವುಗಳನ್ನು ಸರಕಾರ ಮಾಡಿದೆಯಲ್ಲ, ಮಾಡುತ್ತಿದೆಯಲ್ಲ ಎಂಬ ಬಗ್ಗೆ ಮೆಚ್ಚುಗೆ ಸೂಚಿಸುವ ವಿಷಯದಲ್ಲಿ ಕನ್ನಡ ಸಾಹಿತಿ, ಕಲಾವಿದರು ತೀರಾ ಭಾವುಕರಾಗಬೇಕಾದ್ದಿಲ್ಲವಾದರೂ ಕೃಪಣರಾಗಬೇಕಾದದ್ದಕ್ಕೂ ಕಾರಣವಿಲ್ಲ.

ಆದರೆ ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಮಾತ್ರ ಕರ್ನಾಟಕ ಸರಕಾರಗಳು ಈವರೆಗೆ ಅನುಸರಿಸಿಕೊಂಡು ಬಂದ ನೀತಿ, ಪ್ರಜಾಪ್ರಭುತ್ವದ ವ್ಯವಸ್ಥೆಗೆ ಆ ಮೂಲಕ ಕನ್ನಡ ಜನತೆಗೆ ಮಾಡಿದ ಮತ್ತು ಮಾಡುತ್ತ ಬಂದ ಮಹಾದ್ರೋಹವಾಗಿದೆ, ಎನ್ನದೆ ವಿಧಿಯಿಲ್ಲ. ಗಾಂಧೀಜಿಯ ಹೆಸರು ಜಪಿಸುತ್ತ ಬಂದ ಕಾಂಗ್ರೆಸ್ಸಿನವರು, ಲೋಹಿಯಾ, ಗೋಪಾಲಗೌಡರ ಹೆಸರು ಜಪಿಸುತ್ತ ಬಂದ ಸಮಾಜವಾದಿಗಳು, ಯಾರೇ ರಾಜ್ಯ ಸರಕಾರದ ಆಡಳಿತ ಸೂತ್ರ ಹಿಡಿದಾಗಲೂ ಶಿಕ್ಷಣ ಮಾದ್ಯಮದ ನೀತಿಯಲ್ಲಿ ಕನ್ನಡ ಭಾಷೆಯನ್ನು ಅಷ್ಟಷ್ಟಾಗಿ ನಿರಂತರವಾಗಿ ಕೊಲ್ಲುವ ಕುತಂತ್ರವನ್ನು ನಡೆಸುತ್ತಲೇ ಬಂದಿದ್ದಾರೆ. ರಾಷ್ಟ್ರದ ಏಕತೆ, ರಾಷ್ಟ್ರದ ಭಾವೈಕ್ಷತೆ, ಭಾಷಾ ಅಲ್ಪಸಂಖ್ಯಾತರ, ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ, ಸಂವಿಧಾನ ವಿಧಿಗಳ ಅಡ್ಡಿ, ರಾಷ್ಟ್ರೀಯ ಅಂತಾರಾಷ್ಟ್ರೀಯ ವ್ಯವಹಾರಾನುಕೂಲ – ಹೀಗೆ ಏನೇನೊ, ಎಷ್ಟೆಷ್ಟೊ ಸಬೂಬುಗಳನ್ನು ಸೃಷ್ಟಿಸಿಕೊಂಡು ಬರಲಾಗಿದೆ. ದೇಶದ ಸ್ವಾತಂತ್ರ್ಯವನ್ನೇ ಹರಾಜಿಗಿಟ್ಟು ಜಾಗತೀಕರಣವನ್ನು ಕೆಂಪು ನಡೆಮಡಿ ಹಾಸಿ ಸ್ವಾಗತಿಸಿ ಅದರೆದುರು ದಾಸಭಾವ ಭಂಗಿಯಲ್ಲಿ ಇಡೀ ರಾಷ್ಟ್ರವೇ ಬಾಗಿ ನಿಲ್ಲುವಂಥ ವಿಪರ್ಯಾಸ ಮಿಶ್ರಿತ ದುರಂತ ಸ್ಥಿತಿ ನಿರ್ಮಾಣದಲ್ಲಿ ನಮ್ಮವರೆಂಬ ರಾಜಕಾರಣಿಗಳು ಅತ್ಯುತ್ಸಾಹದಿಂದ ಪಾಲ್ಗೊಳ್ಳುವಂತಾದದ್ದು ‘ಅಕ್ಷಮ್ಯ’ ಅಪರಾಧವಾಗಿದೆ. ಶಿಕ್ಷಣ ಮಾದ್ಯಮಕ್ಕೆ ಸಂಬಂಧಿಸಿದಂತೆ ಗಾಂಧೀಜಿ ಹೇಳಿದ ಮಾತುಗಳಿಗೆ, ತಳೆದಿದ್ದ ನಿಲುವುಗಳಿಗೆ ಕವಡೆ ಕಿಮ್ಮತ್ತನ್ನೂ ಸ್ವಾತಂತ್ರ್ಯೋತ್ತರದ ಈ ರಾಜಕಾರಣಿಗಳು ನೀಡದೆ ಹೋದದ್ದು ಯಾಕೆ? ಸ್ವಾತಂತ್ರ್ಯ ಹೋರಾಟಕಾಲದ ಸ್ವದೇಶೀ ಚಿಂತನೆಯನ್ನು ಆಳದಲ್ಲಿ ಹೂತು ಸಮಾಧಿ ಮಾಡಿ ಗಾಂಧೀಜಿಯವರ ಮಾತುಗಳನ್ನು ಮಾತ್ರ ಆ ಸಮಾಧಿಯ ಮೇಲೆ, ತಮ್ಮ ರಾಜಕೀಯ ವೇದಿಕೆಯ ಭಾಷಣಗಳ ನಡುನಡುವೆ ಪರಿಮಳ ದ್ರವ್ಯದಂತೆ ಸಿಂಪಡಿಸುತ್ತ ಬಂದದ್ದೇಕೆ?