…ಬೇಂದ್ರೆಯವರ ‘ನಾದಲೀಲೆ’ ಕವನವನ್ನು ಹಾಡುತ್ತೇನೆ…. ಈ ಕವನದಲ್ಲಿಯೂ ಬೇಂದ್ರೆ ಕಾವ್ಯದಲ್ಲಿ ಸಾಮಾನ್ಯವಾಗಿರುವ ನಾದ ಗುಣ, ನಾದ ಸಮೃದ್ಧಿ ಇರುವುದು ನಾನು ಅದನ್ನು ಹಾಡಿ ತೋರಿಸಿದಾಗ ನಿಮ್ಮ ಅನುಭವಕ್ಕೆ ಬಂದಿದೆ ಅಂದುಕೊಂಡಿದ್ದೇನೆ. ನನಗಿಂತ ಚೆನ್ನಾಗಿ ಹಾಡುವವರಿದ್ದಾಗ ಆ ಅನುಭವ ಇನ್ನಷ್ಟು ಗಾಢವಾದೀತು.

ಈ ಕವನದಲ್ಲಿ ನಾದಗುಣದ ಸಮೃದ್ಧಿ ಇದೆ. ಕವನ ಪ್ರತಿಮಾವಿಧಾನದಲ್ಲಿ ಬೆಳೆದಿದೆ. ಚಿತ್ರವತ್ತಾದ ಸನ್ನಿವೇಶಗಳ ಸೃಷ್ಟಿ ಇದೆ. ಮೊದಲಿಂದ ಕೊನೆಯವರೆಗೂ ದ್ವನಿಶಕ್ತಿಯು ಪ್ರತಿಮೆಗಳ ಮೂಲಕ ಮಾತ್ರವಲ್ಲ, ಪದಪ್ರಯೋಗಗಳಲ್ಲಿಯೂ ಅನುರಣಿಸುತ್ತಿದೆ. ಕವನದಲ್ಲಿ ಅನುಭವವನ್ನು ಅರಿವಿನ ನೆಲೆಗೆ ವಿಸ್ತರಿಸಿ ತಾತ್ವಿಕ ನಿಲುವನ್ನು ಪ್ರತಿಪಾದಿಸುವ ಅಥವಾ ತಾತ್ವಿಕ ತಿಳುವಳಿಕೆಯನ್ನು ಹಾಯಿಸುವ ಉತ್ಸಾಹ, ಉದ್ದೇಶ ಇದೆ. ಕವನದಲ್ಲಿ ಒಂದು ನಾಟಕೀಯ ಸನ್ನಿವೇಶದ ಸೃಷ್ಟಿಯೂ ಆಗಿದೆ. ಬೇಂದ್ರೇಯವರ ಬಹಳಷ್ಟು ಕವನಗಳಲ್ಲಿ ಭಾವಗೀತೆಯ ಸ್ವರೂಪ ಲಕ್ಷಣಗಳಲ್ಲಿ ಮುಖ್ಯವಾದ ಆತ್ಮನಿಷ್ಠ ಅಥವಾ ಸ್ವನಿಷ್ಠ ದನಿ ಇರುವುದಿಲ್ಲ. ಅಂಥ ಕವನಗಳ ಸಾಲಿಗೇ ಈ ಕವನವೂ ಸೇರುತ್ತದೆ. ಆದರೆ ಒಟ್ಟಿನಲ್ಲಿ ಇದು ಬೇಂದ್ರೆಯವರ ಕಾವ್ಯದ ಅನೇಕ ಗುಣಲಕ್ಷಣಗಳನ್ನು, ಶಕ್ತಿ-ಪರಿಮಿತಿಗಳನ್ನು ಪ್ರತಿನಿಧಿಸುವ ಒಂದು ಪ್ರಾತಿನಿಧಿಕ ಕವನ ಎಂದು ಹೇಳಬಹುದಾಗಿದೆ.

ಇದು ಬೆಳಗಿನ ಚಿತ್ರ. ‘ಕೋಲು ಸಖೀ, ಚಂದ್ರಮುಖೀ, ಕೋಲೆ ನಾದಲೀಲೆ’ ಎಂಬ ಪಲ್ಲವಿಯಿಂದ ಪ್ರಾರಂಭವಾಗುತ್ತದೆ. ಪಲ್ಲವಿಯ ಸಾಲಿನಲ್ಲಿ ‘ಚಂದ್ರಮುಖಿ, ಕೋಲೆ ನಾದಲೀಲೆ’ ಎಂಬ ಪಲ್ಲವಿಯಿಂದ ಪ್ರಾರಂಭವಾಗುತ್ತದೆ. ಪಲ್ಲವಿಯ ಸಾಲಿನಲ್ಲಿ ‘ಚಂದ್ರಮುಖಿ’ ಎಂಬ ಪದವಿದೆ. ಸುಂದರ ಮುಖವಿರುವ ಹೆಣ್ಣಿಗೆ, ಹೆಣ್ಣಿನ ಮುಖಕ್ಕೆ ಕವಿಗಳು ಹೇಳುತ್ತಾ ಬಂದು, ಬಂದು ಬಹಳ ಹಳಸಲಾಗಿ ಹೋಗಿರುವ ಪದ ಅದು, ಇಂಥದಕ್ಕೆ-ಕ್ಲೀಷೆ ಅನ್ನುತ್ತಾರೆ. ಆದರೆ ಇಲ್ಲಿ ಆ ಪದವನ್ನು ಹಳಸದ ಹಾಗೆ, ಕ್ಲೀಷೆ ಎಂದು ಅನಿಸದ ಹಾಗೆ ಹೊಸ ಅರ್ಥಸೂಕ್ಷ್ಮ ಸ್ಫುರಿಸುವ ಹಾಗೆ ಕಲಾಯಿ ಮಾಡಿ ಪಾತ್ರೆ ಬೆಳಗುವಂತೆ ಮಾಡುತ್ತಾರಲ್ಲಾ ಹಾಗೆ ಕವಿ ಮಾಡಿದ್ದಾರೆ.

ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ
ತರಳ ಎರಳೆ, ಚಿಗುರೆ, ಹೂವು ಹೂವು ಹುಲ್ಲೆ
ಕಂಗೊಳಿಸುವ ಕೆಂಪು ಮುಂದೆ ಕಂಗೆಡಿಸುವ ಮಂಜು ಹಿಂದೆ
ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ
ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ

‘ಎಲ್ಲರು’ ಅಂದರೆ ಗಾಳಿ. ಆದರೆ ಗಾಳಿ ಎಂಬ ಪದಕ್ಕಿಲ್ಲದ ನವುರು, ಹಗುರ ‘ಎಲ್ಲರು’ ಎಂಬ ಪದಕ್ಕಿದೆ. ಎಲ್ಲ ಲಘುಗಳೇ, ಗುರು ಒಂದೂ ಇಲ್ಲ, ಜಿಂಕೆಗಳು ಮುಂಜಾವದ ಎಲ್ಲರನ್ನು ಮೂಸಿ ನೋಡುತ್ತಿವೆ. ಇದು ಜೀವನ ಸ್ವೀಕಾರ ಮಾಡುತ್ತಿರುವುದನ್ನು ಸೂಚಿಸುತ್ತದೆ. ದಿನದ ಪ್ರಾರಂಭ ಮುಂಜಾವು, ಬೆಳಗು. ತರಳ ಎರಳೆ ಮರಿ-ಜಿಂಕೆಗಳು; ಚಿಗುರ ಚಿಗುರೆ – ಚಿಗುರಿನಂಥ ಜಿಂಕೆಗಳು, ಹೂವು ಹೂವು ಹುಲ್ಲೆ, ಹೂವಿನಂಥ ಹುಲ್ಲೆಗಳು ಅಂದರೆ ಎಳೆಯವಲ್ಲ ಬೆಳೆದವು, ಆದರೆ ಹೂವಿನಂತೆ ಮೋಹಕವಾದವು ಕೋಮಲವಾದವು ಎಂಬ ಅರ್ಥ ಸೂಚನೆಯ ಜೊತೆಗೇ ‘ಚಿಗುರು’, ‘ಹೂವು’, ‘ಹುಲ್ಲೆ’, ಪದಗಳ ಮೂಲಕ ಚಿಗುರು, ಹೂವು, ಹುಲ್ಲು ಎಂಬ ಅರ್ಥಗಳನ್ನು ಸೂಚಿಸುತ್ತ ಬೆಳಗಿನ ಪ್ರಕೃತಿ ವಿವರಗಳನ್ನು ನವಿರಾಗಿ ಧ್ವನಿಸುತ್ತಿರುವುದೂ ಅನುಭವಕ್ಕೆ ಬರುತ್ತದೆ. ‘ಹೂವು ಹೂವು ಹುಲ್ಲೆ’ ಎಂದಾಗ ಜಿಂಕೆಯ ಮೈಮೇಲೆ ಹೂವಿನಂಥ ಚುಕ್ಕೆಗಳಿರುತ್ತವೆಯಲ್ಲಾ ! ಅದರಿಂದಾಗಿ ಬೆಳಗಿನ ಚಿತ್ರ ಕಟ್ಟಿ ಕೊಡುವುದರ ಭಾಗವಾಗಿ ಬೆಳಗಿನ ಪರಿಸರದ ಭಾವ ಪರಿಸರ ಮತ್ತು ಅದರ ಪರಿವೆಯನ್ನು ಓದುಗರ ಮನಸ್ಸಿಗೆ ಹಾಯಿಸುವ ಹವಣು ಇಲ್ಲಿದೆ.

ಐದೈದು ಪಾದಗಳ ಅಂದರೆ ಸಾಲುಗಳ ಪದ್ಯಖಂಡ (ಸ್ಪಾಂಜಾ)ಗಳಿವೆ. ಎಲ್ಲ ಪದ್ಯ ಖಂಡಗಳ ನಡುವಿನಲ್ಲಿ ‘ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ’ ಎಂಬ ಸಾಲು ಇದೆ. ಕೆಂಪು ಆಶಾಪಾದಕ್ಕೆ, ಮಂಜು ದುಃಖಕ್ಕೆ ಅಥವಾ ಎದುರಾಗುವ ಅಡೆತಡೆಗಳಿಗೆ ಸಂಕೇತಗಳಾಗಿ ಇವೆ. ಆ ಸಾಲು ಎಲ್ಲಾ ಪದ್ಯಖಂಡಗಳ ನಡುವೆ ಇರುವುದರಿಂದಾಗಿ ಬದುಕಿನ ನಡುವೆ ಅಥವಾ ಬದುಕಿನ ಒಡಲಲ್ಲಿ ಈ ಎರಡೂ (ಸುಖ-ದುಃಖ) ಇವೆ ಎಂಬುದನ್ನು ಧ್ವನಿಸಲಾಗಿದೆ. ಕಂಗೊಳಿಸುವ ಕೆಂಪು-ಕಣ್ಣಿಗೆ ಮನೋಹರವಾದ ಅಪ್ಯಾಯಮಾನವಾದ ಕೆಂಪು ಬಣ್ಣ ಮುಂದಿದೆ. ಅರುಣೋದಯದ ಅಥವಾ ಸೂರ್ಯೋದಯದ ಹೊತ್ತಾದ್ದರಿಂದ ಕೆಂಪು ಬಣ್ಣ ಕಾಣಿಸುತ್ತಾ ಇದೆ ‘ಅರುಣ’ ಎಂಬುದಕ್ಕೆ ಕೆಂಪು, ಕೆಂಪು ಬಣ್ಣ ಎಂಬ ಅರ್ಥವೂ ಇದೆ. ಕಂಗೆಡಿಸುವ ಮಂಜು ಹಿಂದಿದೆ. ಆ ಕಂಗೆಡಿಸುವ ಮಂಜನ್ನು ಸರಿಸಿ ಸೂರ್ಯ ಬರುತ್ತಾ ಇದ್ದಾನೆ. ಅಂದರೆ ದೃಷ್ಟಿ ಪಥಕ್ಕೆ ಕೆಂಪನ್ನು, ಬೆಳಕನ್ನು ಕಾಣುವಂಥ ನೋಟವನ್ನು ಮಸುಕುಗೊಳಿಸುವಂಥದು ಆ ಮಂಜು, ಕಂಗೆಡಿಸುವ ಎಂಬುದಕ್ಕೆ ದಿಕ್ಕೆಡಿಸುವ, ದಿಕ್ಕುದಾರಿ ತೋರದಂತೆ ಮಾಡುವ, ಭಯ ದಿಗಿಲು ಹುಟ್ಟಿಸುವ ಅರ್ಥವೂ ಇದೆ.

ಬದುಕನ್ನು ಆಸಕ್ತಿಯಿಂದ ಅನುರಕ್ತಿಯಿಂದ ಜಿಂಕೆಗಳು, ಬೇರೆ ಬೇರೆ ಅವಸ್ಥೆಯ ಜಿಂಕೆಗಳು ಸ್ವೀಕಾರ ಮಾಡುತ್ತ ಇರುವ ಚಿತ್ರದ ಜೊತೆಗೇ ಬೇಟೆಗಾರ ಬರುವ ಅಥವಾ ಬರಲಿರುವ ಚಿತ್ರವೂ ಇದೆ ‘ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ’, ನಾವು ಕೈ ತೋರಿಸಿ ಹೇಳಿದರೆ ಅತ್ತಣಿಂದ ಎಂದರೆ ಯಾವ ದಿಕ್ಕು ಎಂಬುದು ನಿರ್ದಿಷ್ಟವಾಗಿ ಗೊತ್ತಾಗುತ್ತದೆ. ಕಾವ್ಯದಲ್ಲಿ ಹೀಗೆ ಬಂದಾಗ ‘ಅತ್ತಣಿಂದ’ ಎಂದರೆ ಯಾವ ದಿಕ್ಕು? ಅತ್ತಣಿಂದ ಎಂದಾಗ ಆ ಕಡೆಯಿಂದ ಎಂದು ನಿರ್ದಿಷ್ಟ ದಿಕ್ಕನ್ನು ಸೂಚಿಸಿದಂತೆ ಅನಿಸಿದರೂ ಅದು ಯಾವ ದಿಕ್ಕೂ ಆಗಿರಬಹುದು ಎಂಬ ಅನಿರ್ದಿಷ್ಟತೆಯನ್ನೂ ‘ಆ ಪದ ಸೂಚಿಸುವಂತಿದೆ.’ ‘ಆ ಬೇಟೆಗಾರ’ ಪ್ರಾಣಿಗಳನ್ನು ಬೇಟೆಯಾಡಲು ಬರುವ ಬೇಟೆಗಾರ ಎಂಬ ವಾಚ್ಯಾರ್ಥದ ನೆಲೆಯ ಬೇಟೆಗಾರ ಮಾತ್ರ ಇಲ್ಲಿ ಸೂಚಿತವಾಗಿಲ್ಲ. ಅತ್ತಣಿಂದ ಅಂದರೆ ಪೂರ್ವ ದಿಕ್ಕಿನಿಂದ ಬರಲಿರುವ ಸೂರ್ಯ ಮಂಜಿಗೆ ಬೇಟೆಗಾದ, ಎಂಬ ಧ್ವನಿಯೂ ಇದೆ. ಜೊತೆಗೆ ಅದಕ್ಕಿಂತ ಮುಖ್ಯವಾಗಿ ‘ಬೇಟೆಗಾರ’ ಎಂದರೆ ಮೃತ್ಯು ಬೇಟೆಗಾರ. ಅತ್ತಣಿಂದ ಎಂಬಲ್ಲಿ ನಿರ್ದಿಷ್ಟತೆಯ ಜೊತೆಗೆ ಅನಿರ್ದಿಷ್ಟತೆಯೂ ಸೂಚಿತವಾಗುವುದಕ್ಕೆ ಕಾರಣವಿಷ್ಟೇ ! ಸಾವು ಬರುವುದು ನಿಶ್ಚಿತ. ಆ ಮಟ್ಟಿಗೆ ನಿರ್ದಿಷ್ಟ. ಆದರೆ ಯಾವ ದಿಕ್ಕಿನಿಂದ ಎಂದು ಯಾರು ಹೇಳಬಲ್ಲರು?” ಆದ್ದರಿಂದ ಅನಿರ್ದಿಷ್ಟತೆಯ ದನಿ ಇದೆ. ‘ಬೇಟೆಗಾರ ಬರುವ ನಾನು ಬಲ್ಲೆ’, ಎಂಬಲ್ಲಿ ನನಗೆ ಬೇಟೆಗಾರ ಬರುವ ಎಂಬುದು ಗೊತ್ತಿದೆ ಎಂಬ ನಿಶ್ಚಿತ, ನಿರ್ದಿಷ್ಟ ದನಿ ಇದೆ ‘ನಾನು ಬಲ್ಲೆ’ ಎಂದು ಹೇಳುತ್ತಲೇ ನಲ್ಲನು ಪದ್ಯಖಂಡದ ಮೊದಲ ಸಾಲನ್ನು ಮತ್ತೆ ಹೇಳುತ್ತಾನೆ. ಬೇಟೆಯಾಡಲು ಕ್ರೂರ ಪ್ರಾಣಿಗಳು ಬರುತ್ತಿರುವುದನ್ನು ವಾಸನೆಯ ಮೂಲಕ ಜಿಂಕೆಯಂಥ ಪ್ರಾಣಿಗಳು ತಿಳಿಯುತ್ತವೆ. ಮೇಗಾಳಿ; ಕೆಳಗಿನ ದಿಕ್ಕಿನಿಂದಾದರೆ ಕಿಗ್ಗಾಳಿ- ಹೀಗೆಲ್ಲಾ ವಿವರಣೆ ಇದೆ. ಆ ಹಿನ್ನೆಲೆಯಲ್ಲಿ ಹಾಗೂ ಬೇಟೆಗಾರ ಬರುವನೆಂಬ ಹಿನ್ನೆಲೆಯಲ್ಲಿ ಈ ಕೊನೆಯ ಸಾಲನ್ನು ಓದಿದಾಗ ಈ ಪದ್ಮಖಂಡದ ಮೊದಲ ಸಾಲೂ ಚಾಚೂ ತಪ್ಪದೆ ಹಾಗೆಯೇ ಇಲ್ಲಿಯೂ ಇರುವುದನ್ನು ಗಮನಿಸಬಹುದು. ಓದುವಾಗ ಒತ್ತು ಕೊಡುವಲ್ಲಿ, ವಿಂಗಡಿಸುವಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿ ಓದಿದರೆ, ಅಂದರೆ ‘ಮೂಸಿ’ ಎಂಬಲ್ಲಿ ಸ್ವಲ್ಪ ಓದಿನ ನಡಗೆ ತಡೆದು ಆಮೇಲೆ ‘ನೋಡುತಿಹವೆ ನಲ್ಲೆ’ ಎಂದು ಓದಿದರೆ ‘ಮೂಸಿ ನೋಡುತಿಹವೆ ನಲ್ಲೆ’ ಎಂದು ಓದುವಾಗಿನ ಚಿತ್ರಕ್ಕಿಂತ ಭಿನ್ನವಾದ ಚಿತ್ರ ಓದುಗರಕ ಮನಸ್ಸಿನಲ್ಲಿ ಮೂಡಬಹುದು. ಮೊದಲಲ್ಲಿ ತಲೆ ಬಗ್ಗಿಸಿ ನೆಲದ ಕಡೆ ಮುಖ ಚಾಚಿ ಮೂಸಿ ನೋಡುತ್ತಿರುವ ಭಂಗಿ, ಚಿತ್ರ ಕಂಡರೆ ಕೊನೆಯಲ್ಲಿ ಬೇಟೆಗಾರ ಬರುವ ಸುಳಿವನ್ನು ಗ್ರಹಿಸಿ ಆತಂಕದಲ್ಲಿ ತಲೆ ಎತ್ತಿ ಮೂಸಿ ನೋಡುತ್ತಿರುವ ಜಿಂಕೆಗಳ ಚಿತ್ರ ಕಣ್ಮುಂದೆ ನಿಲ್ಲಬಹುದಾಗಿದೆ. ಚಿತ್ರಕಾರ ಈ ಸೂಕ್ಷ್ಮವನ್ನು ಚೆನ್ನಾಗಿ ಕಲ್ಪಸಿಕೊಳ್ಳಬಲ್ಲ.

ಬೀರುತ್ತಿರುವ ಪ್ರಾಣವಾಯು ಹೀರುತಿಹವೆ ನೀರೆ
ಕರೆವ ಕರುವು, ಕುಣಿವ ಮಣಕ, ತೊರೆವ ಗೋಗಭೀರೆ
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾಣೆ ಕೊಳಲಿನವನ ಎನುವೆ, ಎಲ್ಲು ಇಹನು ಬಾರೆ
ಬೀರುತ್ತಿರುವ ಪ್ರಾಣವಾಯು ಹೀರುತಿಹವೆ ನೀರೆ

‘ಪ್ರಾಣವಾಯು’ ಎಂದರೆ ಆಕ್ಷಿಜನ್. ಉತ್ತರ ಕರ್ನಾಟಕದಲ್ಲಿ ಆಕ್ಷಿಜನ್‌ಗೆ ಆಮ್ಲಜನಕ ಅನ್ನುವುದಿಲ್ಲ ; ಪ್ರಾಣವಾಯು ಅನ್ನುತ್ತಾರೆ. ಇಲ್ಲಿ ‘ಪ್ರಾಣವಾಯು’ ಎಂಬ ಪದದಲ್ಲಿರುವ ‘ಪ್ರಾಣ’ ಎಂಬುದೂ ಮುಖ್ಯ. ಪ್ರಾಣ ನೀಡುವ ಅಥವಾ ‘ಪ್ರಾಣ ಸಂಬಂಧವಾದ ವಾಯು’ ಅದು. ಬೀರುತ್ತಿರುವ ಪ್ರಾಣವಾಯುವನ್ನು ‘ಕರೆವ ಕರುವು’ ಅಂದರೆ ಎಳೆಗರು, ‘ಕುಣಿವ ಮಣಕ’ ಅಂದರೆ ಬೆದೆಗೆ ಬಂದ ಪ್ರಾಯದ ಹಸು, ‘ತೊರೆವ ಗೋಗಭೀರೆ’ ಹಾಲು ತೊರೆಬಿಡುವ ತಾಯಿ ಹಸು -ಇವು ಹೀರುತ್ತಿವೆ. ಪದ್ಯಭಾಗದಲ್ಲಿ ಜಿಂಕೆಗಳಿದ್ದರೆ ಇಲ್ಲಿ ದನಗಳು. ಅಲ್ಲಿ ಇರುವಂತೆ ಇಲ್ಲಿಯೂ ಬೇರೆ ಬೇರೆ ವಯೋಮಾನದ ಅವಸ್ಥೆಯಲ್ಲಿರುವ ದನಗಳು. ಇಲ್ಲಿ ‘ಬೀರುತಿರುವ’ ಎಂಬ ಪದ ಗಮನಿಸಬೇಕು. ಯಾರೋ ಪ್ರಾಣವಾಯುವನ್ನು ಬೀರುತ್ತಿದ್ದಾರೆ ಎಂಬ ಧ್ವನಿ ಇದೆ. ‘ಕಂಗೊಳಿಸುವ….. ಹಿಂದೆ’ ಈ ಸಾಲು ಈ ಪದ್ಯಭಾಗದಲ್ಲಿಯೂ ಮಧ್ಯದಲ್ಲಿ ಇದೆ.

‘ಕಾಣೆ ಕೊಳಲಿನವನ ಎನುವೆ ಎಲ್ಲು ಇಹನು ಬಾರೆ’ ಎಂದು ಹೇಳುತ್ತಿರುವವನೂ ನಲ್ಲನೆ. ನಲ್ಲೆಯನ್ನು ಉದ್ದೇಶಿಸಿ ಹೇಳುತ್ತಾನೆ. ನಲ್ಲೆ ಕೊಳಲಿನವನು ಕಾಣಿಸುತ್ತಿಲ್ಲ ಎಂದರೆ, ನಲ್ಲ ಎಲ್ಲೆಲ್ಲೂ ಅವನು ಇದಾನೆ ಎನ್ನುತ್ತಾನೆ. ‘ಕೊಳಲಿನವನು’ ಇಲ್ಲಿ ದನಕಾಯುವ ಹುಡುಗ ಎಂಬುದು ವಾಚ್ಯಾರ್ಥ. ಕೊಳಲಿನವ ಕೃಷ್ಣ-ಶ್ರೀಕೃಷ್ಣಪರಮಾತ್ಮ ಎಂಬುದು ದ್ವನ್ಯರ್ಥ. ಆ ಅರ್ಥ ಹೊಳೆದ ತಕ್ಷಣ ಕವನದ ಅರ್ಥಪ್ರಪಂಚ ಮತ್ತು ಭಾವಪರಿಸರ ವಿಸ್ತಾರಗೊಳ್ಳುತ್ತದೆ. ಅವನು ಎಲ್ಲೂ ಇದ್ದಾನೆ ಎಂಬ ಮಾತು ಆತ ಸರ್ವಾಂತರ್ಯಾಮಿ, ಅಣುರೇಣು ತೃಣ ಕಾಷ್ಠಗಳಲ್ಲಿಯೂ ಇರುವವನು ಎಂಬ ಸಾಂಪ್ರಾಯಿಕ ಆಸ್ತಿಕ ಅರ್ಥದ ವ್ಯಾಪ್ತಿಯನ್ನು ಪಡೆದುಕೊಳ್ಳುತ್ತದೆ. ಈ ದನಕಾಯುವವನು ಕೊಲ್ಲುವವನಲ್ಲ, ಕಾಯುವವನು. ಮೊದಲಿನ ಪದ್ಯಭಾಗದಲ್ಲಿ ಬೇಟೆಗಾರ ಕೊಲ್ಲುವವನು; ಕಾಯುವವನಲ್ಲ. ಇಲ್ಲಿ ಕೊಳಲಿನವನು, ಕಾಯುವವನು, ಕಾಪಾಡುವವನು.

ಬೆಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ : ಬಾಲೆ
ಮುಕುಲ, ಅಲರು, ಮಲರು, ಪಸರ, ಕಂಡು ಕಣ್ಣುಸೋಲೆ
ಕಂಗೊಳಿಸುವ ಕೆಂಪು ಮುಂದೆ ಕಂಗೆಡಿಸುವ ಮಂಜು ಹಿಂದೆ
ಕಾದಲನೆಡೆ ಬೇಡ ಬಹಳು ಕಾದಲೆ ಹೂಮಾಲೆ
ಬೆಳ್ಳಿ ಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ ಬಾಲೆ

ನಾವು ನೀವೂ ಈ ಕೊಲ್ಲುವವನ, ಕಾಯುವವನ ಇರುವಿಕೆಯ ಪರಿವೆ ಇದ್ದೋ ಇಲ್ಲದೆಯೊ, ದಾಂಪತ್ಯದ ಬದುಕನ್ನು ಸ್ವೀಕರಿಸಲು, ಲೋಕ ಜೀವನದಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತೇವೆ. ಬದುಕಿನ ಸಂಭ್ರಮದಲ್ಲಿ ಆಚರಣೆಯಲ್ಲಿ ತನ್ಮಯರಾಗಿ ನಾವು ಪಾಲ್ಗೊಳ್ಳುತ್ತಲೇ ಇರುತ್ತೇವೆ. ದಾಂಪತ್ಯದಲ್ಲಿ ಸುಖ ಸಂಭ್ರಮಗಳಿರುವಂತೆಯೆ, ದುಃಖ ದುಮ್ಮಾನಗಳಿರುವಂತೆಯೆ ಅವುಗಳ ಜೊತೆಗೆ ಸೃಷ್ಟಿಯನ್ನು ಮುಂದುವರಿಸುವ ಕ್ರಿಯೆಯೂ ಇರುತ್ತದೆ. ಕೊಲ್ಲುವ ಮೃತ್ಯುವಿನ, ಕಾಯುವ ದೈವದ ಕ್ರಿಯೆ ಹೇಗೆ ಅನವರತವೊ ಹಾಗೆಯೇ ಜಗತ್ತಿನಲ್ಲಿ ಜೀವನಸುಖದ ಸಂಭ್ರಮದ, ಜೀವಸೃಷ್ಟಿಯ ಕ್ರಿಯೆಯೂ ನಿರಂತರವಾಗಿಯೇ ಇರುತ್ತದೆ ಎಂಬ ಭಾವ, ತಿಳಿವು ಇಲ್ಲಿದೆ.

ನಸುಕು ಕಳೆದು ಬೆಳ್ಳಿ ನಕ್ಷತ್ರವೂ ಮುಳುಗಿ ಬೆಳಗಾಗಿದೆ. ಮೊಗ್ಗು, ಹೂವು, ಹಸಿರು ತುಂಬಿ ಕಣ್ಣಿಗೆ ಆಪ್ಯಾಯಮಾನವಾಗಿದೆ. ಕಂಗೊಳಿಸುವ ಕೆಂಪು, ಕಂಗೆಡಿಸುವ ಮಂಜು ಇವೆ. ಆ ಕಡೆ ಬೇಟೆಗಾರ, ಈ ಕಡೆ ಕೊಳಲಿನವ ಇದ್ದಾರೆ. ಈ ವಾಸ್ತವದ ನಡುವೆಯೆ ಕಾದಲೆ (ಅಂದರೆ ನಲ್ಲೆ), ಕಾದಲ (ಅಂದರೆ ನಲ್ಲ) ಮದುವೆಯ ಉತ್ಸುಕತೆಯಲ್ಲಿದ್ದಾರೆ. ನಲ್ಲೆ ನಲ್ಲನೆಡೆಗೆ ಹೂಮಾಲೆಯನ್ನು ಬೇಡಿ ಬರುತ್ತಾಳೆ. ಪರಸ್ಪರ ಮಾಲೆ ಹಾಕಿ ಮದುವೆಯ ಬಂಧನದಲ್ಲಿ ಒಂದಾಗುವುದು ಮದುವೆಯ ಮುಖ್ಯ ಭಾಗ, ‘ಅದು ಕೂಡಿ ಬಾಳುವುದಕ್ಕೆ, ಬಾಳನ್ನು ಬೆಳಗುವುದಕ್ಕೆ, ಸೃಷ್ಟಿ ಕ್ರಿಯೆಯೊಂದಿಗೆ ಸಹಕರಿಸುವುದಕ್ಕೆ ಸಂಕಲ್ಪಮಾಡುವುದರ ಸಂಕೇತ.

ಬೇಟೆಯಲ್ಲ; ಆಟವಲ್ಲ; ಬೇಟದ ಬಗೆ ನಾರಿ
ಮುಗಿಲ ಬಾಯ ಗಾಳಿ ಕೊಳಲ ಬೆಳಕ ಹಾಡ ಬೀರಿ
ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ
ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?
ಬೇಟೆಯಲ್ಲ; ಆಟವಲ್ಲ ; ಬೇಟದ ಬಗೆ, ನಾರಿ

ಬೇಟೆಯಲ್ಲ ಇದು ಆಟ, ಅದೂ ಆ ಬೇಟೆಯೂ ಬೇಟದ ಬಗೆ ಅಂದರೆ ಪ್ರೇಮದ ಬೆ. ಅದು ದೇವರ ಅಂದರೆ ಕಾಯುವವನ ಅಂದರೆ ಕೊಳಲಿನವನಾದ ಪರಮಾತ್ಮನ ಲೀಲೆ. ಅವನು ಕಾಣಿಸಿಕೊಳ್ಳುವುದಿಲ್ಲ ನಿಜ. ಹಾಗೆಂದು ಅವನು ಇಲ್ಲ ಎಂಬಂತಿಲ್ಲ. ಎಲ್ಲೆಲ್ಲೂ ಇರುವ ಆ ‘ಅವನ’ ಲೀಲೆ ಇದೆಲ್ಲ. ಆ ಲೋಕ ಜೀವನವೆಲ್ಲ ಅವನ ಲೀಲೆಯೆ ಎಂಬ ತಾತ್ವಿಕ ನಿಲುವು ಈ ಪದ್ಯಭಾಗದಲ್ಲಿ ಅಂದರೆ ಈ ಕವನದ ಶಿಖರ ಭಾಗದಲ್ಲಿ ಪ್ರತಿಪಾದಿತವಾಗಿದೆ.

ಇಲ್ಲಿಯೂ ಕೊಳಲಿನ ಹಾಡು ಇದೆ. ಅದು ‘ಪ್ರಾಣವಾಯು’ವನ್ನು ಬೀರುತ್ತಿರುವ, ಆಕಾಶವೇ ಬಾಯಿಯಾಗಿರುವ ವಿರಾಟ್ ಶಕ್ತಿಯ ಬಾಯಿಯಿಂದ ಗಾಳಿಯೇ ಕೊಳಲಾಗಿ ಹೊರಡುತ್ತಿರುವ ಬೆಳಕಿನ ಹಾಡಿನ ಭವ್ಯ ಚಿತ್ರ. ‘ಬೆಳಕ-ಹಾಡು’ ಹಗಲಿನ ಬೆಳಕೂ ಒಂದು ಹಾಡು. ಈ ಬೆಳಕು ಎಂಬುದಕ್ಕೆ ಜ್ಞಾನ, ಅರಿವು ಎಂಬ ದ್ವನ್ಯರ್ಥವೂ ಸ್ಫುರಿಸುವಂತಿದೆ. ಅಂಥ ಜ್ಞಾನ, ಅರಿವು ಜೀವಕ್ಕೆ ಆದಾಗ ಅಥವಾ ಅಂಥ ದೈವದ ಉಸಿರಿನ ರಕ್ಷೆ ಜೀವಕೋಟಿಗೆ ಇದ್ದಾಗ ಬದುಕಿನಲ್ಲಿ ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜೂ ಬರಲಿ. ಎರಡೂ ಬಾಳನ್ನು ಬೆಳಗಿಸುವ, ಪೊರೆಯುವ ಶಕ್ತಿ ಅಥವಾ ಚೈತನ್ಯ ಮೂಲದಿಂದ ಹೊಮ್ಮಿದವೇ ಆಗಿರುವುದರಿಂದ ಅವು ಬರಲಿ ಎಂಬಂಥ, ಬದುಕನ್ನು ಸಂಪೂರ್ಣವಾಗಿ ನಿರ್ಭಯವಾಗಿ ಸ್ವೀಕಾರ ಮಾಡುವಂಥ ಮನೋಧರ್ಮದಲ್ಲಿ ಮನಸ್ಸಿನ ಸ್ವಸ್ಥ ನೆಲೆಗೆ, ನೆಮ್ಮದಿಯ ನೆಲೆಗೆ ಕವನ ಬೆಳೆಯುತ್ತದೆ.

‘ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?’ ಪ್ರಶ್ನಾರ್ಥಕ ಚಿಹ್ನೆ ಸಮೇತವಾಗಿಯೇ ಈ ಸಾಲು ಇರುವುದು ಸರಿಯಾದದ್ದು. ಈ ಕವನ ಮೊತ್ತಮೊದಲು ಪ್ರಕಟವಾದಾಗಲೂ ಪ್ರಶ್ನಾರ್ಥಕ ಚಿಹ್ನೆ ಇದೆ. ಮುಂದಿನ ಮುದ್ರಣಗಳಲ್ಲಿಯೂ ಹಾಗೇ ಇದೆ. ಯಾಕೋ ಮುದ್ರಣದ ದೋಷವಾಗಿಯೊ ‘ಪ್ರೂಫ್ ನೋಡುವವರಿಗೆ’ ಇಲ್ಲಿ ಪ್ರಶ್ನಾರ್ಥಕ ಚಿಹ್ನೆ ಇರುವುದರಿಂದ ಉಂಟಾಗಿರುವ ಅರ್ಥದ ಅರಿವು, ಧ್ವನಿ ಸೂಕ್ಷ್ಮ ಸರಿಯಾಗಿ ಗೊತ್ತಾಗದೇ ಇದ್ದದ್ದರಿಂದಲೋ ಏನೋ ಮುಂದಿನ ಮುದ್ರಣಗಳಲ್ಲಿ ಆ ಪ್ರಶ್ನಾರ್ಥಕ ಚಿಹ್ನೆ ಬಿಟ್ಟು ಹೋಗಿದೆ. ಹಾಗೆ ಬಿಟ್ಟು ಹೋಗಿರುವುದು ಸರಿಯಲ್ಲ.

ಕತ್ತಲಂಥ ಕತ್ತಲವೇ ಜಾರಿ ಬೆಳಗಾಗಿದೆ ; ಬೆಳಕಾಗಿದೆ. ಕಷ್ಟಗಳು ಎಷ್ಟೇ ಬಂದರೂ ಅವು ರಾತ್ರಿಯ ಕತ್ತಲೆಯಂತ ಸ್ಥಿರವಲ್ಲ, ಬೆಳಗಿನ ಬೆಳಕು ಬಂದೇ ಬರುತ್ತದೆ ಎಂಬ ಆಶಾವಾದ ಇಲ್ಲಿ ಧ್ವನಿ ಪಡೆದಿದೆ. ಈ ಕವನದ ‘ಪಲ್ಲವಿ’ಯ ಸಾಲಿನಲ್ಲಿ ನಲ್ಲ ನಲ್ಲೆಯನ್ನು ‘ಚಂದ್ರಮುಖಿ’ ಎಂದು ಸಂಬೋಧಿಸಿದ್ದರ ಅರ್ಥೌಚಿತ್ಯ, ಭಾವೌಚಿತ್ಯ ಇಲ್ಲಿ ಮನವರಿಕೆಯಾಗುವಂತಿದೆ.

ಕವನದ ಮೊದಲ ಮೂರು ಪದ್ಯಖಂಡಗಳ ಕ್ರಿಯಾ ಕೇಂದ್ರವೂ ಅನುಕ್ರಮವಾಗಿ ಕಾಡಿನಲ್ಲಿ, ನಾಡಿನಲ್ಲಿ, ಬೀಡಿನಲ್ಲಿ ಇದೆ. ಕೊನೆಯ ಪದ್ಯಖಂಡದಲ್ಲಿ ಹಿಂದಿನ ಪದ್ಯಖಂಡಗಳಲ್ಲಿ ಧ್ವನಿತವಾಗುತ್ತ ಬಂದ್ದಕ್ಕೆ ತಾತ್ವಿಕ ವ್ಯಾಖ್ಯಾನವನ್ನು ನೀಡಲಾಗಿದೆ. ಈ ಅರಿವಿನ ಸ್ವರೂಪ ಯಾವ ಬಗೆಯದು?

ಈ ಕವನ ರಚಿಸಿದ ಕವಿ ಬೇಂದ್ರೆಯವರೇ ಅದರೂ ಕವನದ ನಿರೂಪಕ ಅಥವಾ ಕರ್ತೃ (Protagonist) ‘ನಲ್ಲ’, ಕವನದ ಸಮಸ್ತ ನಿರೂಪಣೆಯೂ ಆತನ ಪ್ರಜ್ಞಾಪ್ರಪಂಚದ ಒಳಗೆ, ಆತನ ಅರಿವಿನ ಪ್ರಪಂಚದ ಒಳಗೇ ನಡೆಯುತ್ತದೆ. ಕವನವು ನಾಟಕೀಯ ಸನ್ನಿವೇಶದಲ್ಲಿ ಇಡಲ್ಪಟ್ಟಿದೆ. ಭಾವಗೀತದಲ್ಲಿ ಸಾಮಾನ್ಯವಾಗಿ ಇರುವ ಕವಿಯ ಸ್ವನಿಷ್ಠ ಅಥವಾ ಆತ್ಮನಿಷ್ಠ ನಿರೂಪಕ ದನಿ ಈ ಕವನದಲ್ಲಿ ಇಲ್ಲ. ಎರಡು ಪಾತ್ರಗಳ ಅಥವಾ ವ್ಯಕ್ತಿಗಳ ಸಂದರ್ಭದಲ್ಲಿ ನಡೆದಿದೆ. ನಲ್ಲನಲ್ಲೆ ಇದ್ದಾರೆ. ನಲ್ಲೆ ಮುಗ್ಧ ಕೇಳುಗಳು ಮಾತ್ರ. ನಲ್ಲ ಹೇಳುಗ ಅಥವಾ ನಿರೂಪಕ. ಆದ್ದರಿಂದ ಕವನದಲ್ಲಿ ಸೋಸಿ ಬರುವ ಅರಿವು ಕೂಡ ಆ ನಲ್ಲನ ನಂಬಿಕೆಯ, ಗ್ರಹಿಕೆಯ ನೆಲೆಯಲ್ಲಿಯೆ ಹುಟ್ಟಿರುವಂಥದು. ಅರಿವು ಬೇಂದ್ರೆಯವರದೆನ್ನಬೇಕೋ ಆ ‘ನಲ್ಲ’ನದೆನ್ನಬೇಕೋ? ಇದು ಕವಿ ಬೇಂದ್ರೆಯವರರಿವು ಹೌದು; ಕವಿ ಬೇಂದ್ರೆಯವರ ಅರಿವು ಬಲ್ಲ ಎಂಬ ರೀತಿಯಲ್ಲಿ ಇದೆಯಲ್ಲವೆ? ‘ನಲ್ಲ’ನ ಅರಿವೇ ಆಗಿದ್ದರೂ ಬೇಂದ್ರೆಯವರ ಅರಿವಿನ ಭಾಗವಲ್ಲ ಅಥವಾ ಬೇಂದ್ರೆಯವರ ಅರಿವಲ್ಲ ಎಂದು ಸಾಧಿಸಿ ತೋರಿಸುವುದೂ ಕಷ್ಟ.

ಈ ಕವನದ ಚಿತ್ರಕ ಶಕ್ತಿ, ಪ್ರತಿಮಾ ವಿಧಾನದಲ್ಲಿ ಕವನ ಕಟ್ಟುವ ಕಲೆಗಾರಿಕೆ, ಧ್ವನಿಶಕ್ತಿಯನ್ನು ಪರಿಣಾಮಕಾರಿಯಾಗಿ ದುಡಿಸಿಕೊಳ್ಳುವ ಪ್ರತಿಭಾಶಕ್ತಿ ಅನನ್ಯವಾಗಿದೆ; ಆದರೆ ಅರಿವು ಸ್ವೋಪಜ್ಞ ಎನ್ನಬಹುದೆ? ಇದು ಇಲ್ಲಿ ಎದುರಾಗುವ ಪ್ರಶ್ನೆ……….

* ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಫೆಬ್ರುವರಿ ೨೩, ೨೦೦೧ರಲ್ಲಿ ನಾನು ಮಾಡಿದ “ಬೇಂದ್ರೆ ಕಾವ್ಯ: ನಾದ, ಅರ್ಥ, ಅರಿವು” ಎಂಬ ಭಾಷಣದ ಒಂದು ಭಾಗದ ಲಿಖಿತ ರೂಪ