ಅಲ್ಲಮ ಪ್ರಭುಕವನ ಹೀಗಿದೆ :

ಮನದ ಬಯಲಲಿ ಬವಣೆಗೊಂಡೆ, ಬಿಸಿಲಿನಝಳದೆ
ಹುಲ್ಲೆ ಹಂಗಿಸುವ ಹುಸಿನೀರಿ ಕಾಂಬೊಲು ಕಂಡೆ – –
ನೀರ, ನೇಹಿಗ, ನಂಟ, ಬಂಟ, ಸಂವಾದಿ, ಗುರು,
ಶಿಷ್ಯ, ಪ್ರೀತಿಯ ಜಾತಿಗಾರ! ಎಲ್ಲಿರುವೆ ರಸ
ಸಿದ್ಧಗೋರಕ್ಷನುಕ್ಕಿಲೆ ಹೊಯ್ದರೂ ಮುಕ್ಕು
ತುಕ್ಕರಿಯದಿದ್ದ ಮೈಕವಚ ಕಳೆದಿಡುವಂತೆ
ಕೆಳಗಿರಿಸಿ, ಕದಳಿಯಲ್ಲಡಗಿ ಕಾಣದೆ ಹೋದ,
ಲಿಂಗ ಲೀಲಾವಿಲಾಸದಲಿ ನಟಿಸಿದ ಮೂರ್ತಿ?

ವಚನ ವಿದ್ಯಾನಟಿಯು ಕುಣಿ ಕುಣಿದಳಂದು,
ದ್ದಳೆಯ ಸೊಲ್ಲಿಗೆ ವಿವಿಧ ಭಂಗಿಯಲಿ; ಶೂನ್ಯದಲಿ
ಹುಟ್ಟುಗಟ್ಟಿತು ಹದುಳದೊಂದು ಹುಣ್ಣಿಮೆ; ಬೆಡಗು
ಬಿನ್ನಾಣ ಬಿಡಿಸಿ, ಬೆಳುದಿಂಗಳವ ಕುಡಿದ ಮಧು – –
ಮತ್ತಚಿತ್ತಚಕೋರ,ಕೇಳುತಿದೆ, ಹೇಳುತಿದೆ – –
ಬೇರೆ ದರುಶನವೇಕೆ? ಮಾತೆ ಜ್ಯೋತಿರ್ಲಿಂಗ !

ಅಧ್ಯಾತ್ಮ ಮಾರ್ಗದಲ್ಲಿ ಎತ್ತರದ ಸಿದ್ದಿಯನ್ನು ಪಡೆದ ಪ್ರಭುದೇವನನ್ನು ಕುರಿತ ದ.ರಾ.ಬೇಂದ್ರೆಯವರ ಅಷ್ಟಷಟ್ಪದಿ ಕವನವಿದು. ಕವನದ ಕರ್ತೃ (Protagonist) ಮನಸ್ಸು ಎಂಬ ಬಯಲಿನಲ್ಲಿ ಬವಣೆಗೊಂಡನಂತೆ. ಅಂದರೆ ಅಲ್ಲಿ ತೊಳಲಾಡಿದನಂತೆ, ಆಯಾಸಗೊಂಡನಂತೆ. ಆ ಬಯಲಿನಲ್ಲಿ ಬಿಸಿಲಿನ ಝಳ ಬೇರೆ ಇದೆ. ಇಲ್ಲಿ ಬಿಸಿಲಿನ ಝಳ ಎಂಬ ಪದಕ್ಕೆ ಬಿಸಿಲಿನ ಝಳ, ತಾಪ ಎಂಬ ಅಷ್ಟೇ ಅರ್ಥವಿರದೆ ಮನದಬಯಲು ಎಂಬ ಹಿನ್ನೆಲೆಯಲ್ಲಿ ಪರಿಭಾವಿಸಿದಾಗ ಜೀವವನ್ನು ತಾಪಗೊಳಿಸುವ ಕಷ್ಟಪರಂಪರೆಗಳು ಎಂಬ ಅರ್ಥವೂ ಇರುವುದರೆಂಬುದರ ಅರಿವಾಗುತ್ತದೆ. ಮರಳುಗಾಡಿನಲ್ಲಿ ಬಾಯಾರಿಕೆಯಿಂದ ಬಳಲುತ್ತಿರುವ ಜಿಂಕೆ ದಾಹ ತಣಿಸಲು ಎಲ್ಲೂ ಸಿಕ್ಕದೇ ಇರುವಾಗ ಬಿಸಿಲಿನ ಝಳದಿಂದಾಗಿ ಉಂಟಾದ ಮರೀಚಿಕೆ ಅಥವಾ ಮೃಗಜಲವನ್ನೇ ನೀರೆಂದು ಭ್ರಮಿಸಿ ಆಸೆಯಿಂದ ಓಡಿಓಡಿ ದಣಿಯುತ್ತದೆ. ಇಲ್ಲಿ, ತಾನು ಮನಸ್ಸೆನ್ನುವ ಬಯಲಿನಲ್ಲಿ ಬವಣೆಗೊಂಡಾಗ ‘ಬಿಸಿಲಿನ ಝಳದಲ್ಲಿ ಜಿಂಕೆಯನ್ನು ಹಂಗಿಸುವ’ ಅಂದರೆ ಹತ್ತಿರ ಇದ್ದಂತೆ ಕಾಣಿಸಿಕೊಂಡು ಸಿಗುವುದೆಂಬ ಭ್ರಮೆ ಹುಟ್ಟಿಸಿ ಇದು ನೀರೇ ಎಂಬ ನಂಬಿಕೆ ಮೂಡಿಸಿ ಅಣಕಿಸುವ ಮೃಗಜಲವನ್ನು ಕಾಣುವಂತೆ ನಿನ್ನನ್ನು ಅಂದರೆ ಅಲ್ಲಮಪ್ರಭುವನ್ನು ಕಂಡೆ ಎಂದು ಕರ್ತೃ ಹೇಳುತ್ತಾನೆ.ಇಲ್ಲಿ ಅಲ್ಲಮ ಪ್ರಭುವನ್ನು ಮೃಗಜಲದ ಜೊತೆಗೆ ಹೋಲಿಸಲಾಗಿದೆ.

ಅಲ್ಲಮ ಪ್ರಭುವನ್ನು ನೀರ(ಪ್ರಿಯ)ನಾಗಿ ಭಾವಿಸಿದರೆ ಅವನು ನೀರನಲ್ಲ ಎಂಬ ಅರಿವಾಯಿತು. ನಂಟ(ಬಂಧು), ಬಂಟ(ಸೇವಕ, ವೀರ ಎಂಬ ಎರಡು ಅರ್ಥಗಳಿವೆ), ಸಂವಾದಿ (ತನ್ನೊಡನೆ ಸಂವಾದ ನಡೆಸಬಲ್ಲಂಥ ಅತ್ಮೀಯ), ಗುರು, ಶಿಷ್ಯ, ಪ್ರೀತಿಯ ಜಾತಿಗಾರ (ಕವಿಯ ಜಾತಿಗೆ ಸೇರಿದವನು-ಅಂದರೆ ಕಾವ್ಯೋದ್ಯೋಗದಲ್ಲಿ ತೊಡಗಿರುವವನು) -ಏನೆಲ್ಲ ರೀತಿಯಿಂದ ಅಲ್ಲಮಪ್ರಭುವು ಕರ್ತೃವಿಗೆ ಕಂಡುಬಂದನಂತೆ. ಆದರೆ ಕೊನೆಯಲ್ಲಿ ಎಲ್ಲವೂ ಆದಂತಾಗಿ ಅವು ಯಾವುವೂ ಅಲ್ಲವಾಗಿ ಕರ್ತೃವಿನ ಅನುಭವಕ್ಕೆ ಬಂದವನು ಅಲ್ಲಮಪ್ರಭು, ಜಿಂಕೆಗೆ ಬಿಸಿಲಿನ ಝಳದಲ್ಲಿ ಏಳುವ ಮೃಗಜಲ ನೀರೆಂಬ ಭಾವನೆಯನ್ನು ಹುಟ್ಟಿಸುತ್ತದೆ. ಹಾಗೆಂದು ಭ್ರಮಿಸಿ ಹೋದಂತೆ ಆ ಭ್ರಮೆಯನ್ನು ಅದು ಇಲ್ಲಗೈಯುತ್ತ ಹೋಗುತ್ತದೆ. ಆದರೂ ಇದ್ದೀತು, ಎಂಬ ಭಾವನೆಯನ್ನು ಪೂರ್ತಿಯಾಗಿ ಹೋಗಿಸದೆಯೇ ಇರುತ್ತದೆಯೆಂಬುದೂ ಅಷ್ಟೇ ಸತ್ಯ. ಹಾಗೆಯೇ ಇಲ್ಲಿ ಅಲ್ಲಮಪ್ರಭು ಕರ್ತೃವಿಗೆ ಏನೆಲ್ಲ ಸಂಬಂಧದಲ್ಲಿ ತೋರಿಸಿಕೊಂಡಂತೆನಿಸುತ್ತದೆ. ಆದರೆ, ಅದು ಪೂರ್ತಿ ಹೌದೂ ಆಗದ, ಪೂರ್ತಿ ಅಲ್ಲವೂ ಆಗದಂಥ ಅನುಭವ ಕರ್ತೃವಿನದಾಗುತ್ತದೆ. ಏಕೆಂದರೆ, ಅಲ್ಲಮಪ್ರಭುವಿನಂಥ ಆಗಾಧ ಚೇತನದ ಅರಿವು ಕೇವಲ ಭಾಸವಾಗಿ, ಅನಿಸಿಕೆಯಾಗಿ ಮಾತ್ರ ಅವನಲ್ಲಿ ತೋರೀತೇ ಹೊರತು ಪೂರ್ತಿಯಾಗಿ ಮೂಡುವುದು ಸಾಧ್ಯವಾಗುವಂಥದಲ್ಲ. ನಮ್ಮ ಭಾವನೆ ಹೇಗೋ ಹಾಗೆ ಕಾಣಿಸಿಕೊಳ್ಳುವಂಥ ಅಗಾಧವಾದ, ಅಪಾರವಾದ ವ್ಯಕ್ತಿತ್ವ ಉಳ್ಳ ಚೇತನ ಪ್ರಭುವಿನದು,ಎನ್ನುವ ಭಾವ ಈ ವಿವರಗಳ ಹಿಂದೆ ಇದೆ.

ಮುಂದೆ ಬರುವ ‘ಎಲ್ಲಿರುವೆ’ ಎಂಬ ಮಾತನ್ನು ಗಮನಿಸಬೇಕು. ನೀರ, ನೇಹಿಗ,ನಂಟ, ಬಂಟ, ಸಂವಾದಿ, ಗುರು, ಶಿಷ್ಯ, ಪ್ರೀತಿಯ ಜಾತಿಗಾರ ಇತ್ಯಾದಿಯಾಗಿ ಕಂಡಂತಾದರೂ ಅವನ ಅಂದರೆ ಅಲ್ಲಮನ ‘ನಿಜ’ವನ್ನು ಕಾಣಲಾಗಲಿಲ್ಲ. ಕೊನೆಗೂ ಅವನು ‘ಎಲ್ಲಿರುವ’ನೆಂದು ಕರ್ತೃವಿಗೆ ಅರ್ಥವಾಗುವುದಿಲ್ಲ. ಆದ್ದರಿಂದಲೇ ‘ಎಲ್ಲಿರುವೆ’ ಎಂದು ಕೇಳುವಂತಾಗುತ್ತದೆ.

ಗೋರಕ್ಷ ಎನ್ನುವವನೊಬ್ಬ ರಸಸಿದ್ಧ. ಆತ ಪ್ರಭುವನ್ನು ಉಕ್ಕಿನ ಕತ್ತಿಯಿಂದ ಕತ್ತರಿಸಲು ಹೊಡೆಯುತ್ತಾನೆ. ಆದರೆ ಪ್ರಭುವಿನ ದೇಹದೊಳಗಿನಿಂದಲೇ ಆ ಕತ್ತಿ ಹೋದಂತೆನಿಸಿದರೂ ಪ್ರಭು ನಿರ್ಬಾಧಿತನಾಗಿ ಇರುತ್ತಾನೆ. ಆ ಏಟಿನಿಂದ ಪ್ರಭುವಿನ ದೇಹದಲ್ಲಿ ಸ್ವಲ್ಪವೂ ಗಾಯ, ನೋವು ಏನೂ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಪ್ರತೀತಿ ಇದೆ. ಈ ಅಂಶವನ್ನು ಕವನದ ಕರ್ತೃ ಇಲ್ಲಿ ಭಾವಿಸುತ್ತಿದ್ದಾನೆ. ಗೋರಕ್ಷ ಹಾಗೆ ಹೊಡೆದಾಗಲೂ ಯಾವ ರೀತಿಯ ಬಾಧೆಗೂ ಒಳಗಾಗದಿದ್ದ ಆ ದೇಹವನ್ನು ತನ್ನ ಕೊನೆಗಾಲದಲ್ಲಿ ಮೈಮೇಲೆ ತೊಟ್ಟುಕೊಂಡಿರುವ ಕವಚವನ್ನು ತೆಗೆದಿಡುವ ರೀತಿಯಲ್ಲಿ ತೆಗೆದು ಕೆಳಗಿರಿಸಿ ಕದಳೀವನದಲ್ಲಿ ಅಲ್ಲಮಪ್ರಭು ಬಯಲಾದನೆಂದು ಹೇಳುತ್ತಾರೆ. ಆ ಕದಳೀವನದಲ್ಲಿ ಅಡಗಿ ಕಾಣದೇ ಹೋದಂತೆ ಲಿಂಗಲೀಲಾವಿಲಾಸದಲ್ಲಿ ನಟಿಸಿದ ಮೂರ್ತಿ ನೀನಿ ಎಲ್ಲಿರುವೆ ಎಂದು ಕರ್ತೃ ಕೇಳುತ್ತಿದ್ದಾನೆ. ಮೈಕವಚ ಕಳೆದಿಡು ಎಂಬಲ್ಲಿ ವೇಷಬಿಚ್ಚಿಡುವವನು ತನ್ನ ನಿಜರೂಪದಲ್ಲಿ ನಿಲ್ಲುವನು ಎಂಬ ಸೂಚನೆಯಿದೆ. ಕದಳಿಯಲ್ಲಡಗಿ ಕಾಣದೆ ಹೋದ…. ಇಲ್ಲಿಯೂ ನಾಶ ಹೊಂದಿದವನ ಚಿತ್ರವಲ್ಲ ಅಡಗಿಕೊಂಡವನ ಚಿತ್ರವಿದೆ. ಅವನು ಇದ್ದಾನೆ, ಆದರೆ ಕಾಣುತ್ತಿಲ್ಲ ಎಂಬ ಭಾವ ಮತ್ತು ನಟಿಸಿದ ಮೂರ್ತಿ ಎಂದಿರುವುದರಿಂದ ರಂಗದಲ್ಲಿ ಕಾಣಿಸಿಕೊಂಡವನು ಈಗ ಅಡಗಿ ಮರೆಯಾದ ಎಂಬ ಭಾವವಿದೆ. ವೀರಶೈವರಲ್ಲಿ ಅಲ್ಲಮಪ್ರಭು ‘ಶಿವನ ನಿಷ್ಕಲರೂಪ’ ಎಂಬ ನಂಬಿಕೆ ಇದೆ. (ಚಾಮರಸನ ‘ಪ್ರಭುಲಿಂಗಲೀಲೆ’ ಎಂಬ ಕಾವ್ಯವನ್ನು ಓದಿದವರಿಗೆ ತಿಳಿದೀತು) ಪ್ರಭು ಸಾಕ್ಷಾತ್ ಶಿವನ ನಿಷ್ಕಲರೂಪವೆಂದೂ ಪ್ರಭುದೇವ ಎನ್ನುವುದು ಶಿವನ ಒಂದು ವೇಷ, ನಟನೆ, (ಲೀಲೆ, ಅವತಾರ) ಎಂದೂ ಕಲ್ಪನೆ, ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಅರ್ಥವನ್ನು ಗ್ರಹಿಸಬೇಕು.

ಅಲ್ಲಮಪ್ರಭುವನ್ನು ಮದ್ದಳೆಯ ಅಲ್ಲಮಪ್ರಬು ಎಂದು ಕರೆಯುವುದೂ ಉಂಟು, ಆತ ಮದ್ದಳೆಯನ್ನು ಬಾರಿಸುವುದರಲ್ಲಿ ನಿಷ್ಣಾಣನಾಗಿದ್ದು ಆತನ ಮದ್ದಳೆಯ ಸೊಲ್ಲಿಗೆ ಮಾಯೆ ಮರುಳಾದಳೆಂದು ಚಾಮರಸನ ‘ಪ್ರಭುಲಿಂಗ ಲೀಲೆ’ಯಲ್ಲಿ ಕಥೆಯಿದೆ. ಅವನು ಮದ್ದಳೆ ಬಾರಿಸಿದಾಗ ಮಾಯೆ ಕುಣಿಯುತ್ತಾಳೆ. ಇಲ್ಲಿ ವಚನ ವಿದ್ಯಾನಟಿ ಕುಣಿದಳು ಎಂದಿದೆ. ಅಂದರೆ ಅಲ್ಲಮಪ್ರಭು ‘ವಚನ’ಗಳನ್ನೂ ಬರೆದಿದ್ದಾನೆ. ಆ ವಚನ ಅವನ ಮದ್ದಳೆಯ ದನಿಗೆ ಅನುಗುಣವಾಗಿ ನಾನಾಭಂಗಿಯಲ್ಲಿ ಕುಣಿಯಿತೆಂಬ ಭಾವವಿದೆ. ‘ಶೂನ್ಯ’ -ವೀರಶೈವರ ಪ್ರಕಾರ ಕೊನೆಯ ಸಿದ್ಧಿ ಶೂನ್ಯಸಂಪಾದನೆ ‘ಶೂನ್ಯ’ ಎನ್ನುವುದು ಅಧ್ಯಾತ್ಮ ಸೂಚಿಯಾಗಿದೆ. ಹಾಗೆಯೇ ಶೂನ್ಯ ಸಿಂಹಾಸನದಲ್ಲಿ ಪ್ರಭುದೇವ ಕುಳಿತು ‘ಅನುಭವ ಮಂಟಪ’ದ ಅಧ್ಯಕ್ಷತೆ ವಹಿಸಿದ್ದನೆಂದು ಹೇಳುತ್ತಾರೆ. ಆದ್ದರಿಂದ ಅನುಭವ ಮಂಟಪದಲ್ಲಿ ಅಧ್ಯಾತ್ಮ ಕ್ಷೇಮದ ಒಂದು ಹುಣ್ಣಿಮೆ ಹುಟ್ಟುಗಟ್ಟಿತು. ‘ಹುಟ್ಟುಗಟ್ಟು’ – ಜೇನು ಹುಟ್ಟುಗಟ್ಟಿದದನ್ನು ಧ್ವನಿಸುತ್ತೆದೆಯಾದ್ದರಿಂದ ಅಧ್ಯಾತ್ಮ ರಸಪೂರ್ಣವಾದ ಹುಣ್ಣಿಮೆ, ಬೆಳಕು ಅಲ್ಲಿ ತುಂಬಿತು ಎನ್ನುವ ಭಾವವಿದೆ.

‘ಬೆಡಗು ಬಿನ್ನಾಣ ಬಿಡಿಸಿ’ ಎಂಬುದಕ್ಕೆ ಎರಡು ಅರ್ಥಗಳಿರುವಂತಿದೆ. ಮೊದಲನೆಯದು ಸರಳವಾದ ರೀತಿಯಲ್ಲಿ, ಸಾದಾರೀತಿಯಲ್ಲಿ ಎಂಬ ಅರ್ಥ. ಎರಡನೆಯದು ಬೆಡಗಿನ ವಚನಗಳ ವಿಜ್ಞಾನ, ವಿಶೇಷವಾದ ಜ್ಞಾನ ಎಂದರೆ ಅಧ್ಯಾತ್ಮವನ್ನು ಬಿಡಿಸಿ (ಚಿತ್ರ ಬಿಡಿಸಿ ಎಂಬಲ್ಲಿ ಬಿಡಿಸಿ ಎಂಬುದಕ್ಕೆ ಇರುವ ಅರ್ಥ ಇರುವಂತೆ ಹಾಗೂ ಬೆಡಗು ಅಂದರೆ ಒಗಟನ್ನು ಬಿಡಿಸಿ ಎಂಬುದಕ್ಕೆ ಇರುವ ಅರ್ಥದಂತೆ). ಎನ್ನುವ ಅರ್ಥ.

ಚಕೋರ ಪಕ್ಷಿ-ಕವಿಸಮಯದ ಪಕ್ಷಿ, ಕವಿಗಳ ಸಾಂಪ್ರದಾಯಿಕ ಕಲ್ಪನೆಯ ಪ್ರಕಾರ ಚಕೋರ ಎಂಬ ಹಕ್ಕಿ ಒಂದಿದೆ. ಅದು ಬೆಳುದಿಂಗಳನ್ನು ಕುಡಿದು ಬದುಕುತ್ತದೆ. ಆದ್ದರಿಂದ ಅದರ ನಿತ್ಯ ಹಾರೈಕೆ ಬೆಳುದಿಂಗಳನ್ನು ಪಡೆಯುವುದಾಗಿದೆ. ಮೇಲೆ ಹೇಳಿದ ‘ಹದುಳದೊಂದು ಹುಣ್ಣಿಮೆ’ಯ ಬೆಳುದಿಂಗಳನ್ನು ಕುಡಿದ ‘ಮಧುಮತ್ತ’ – ಅಧ್ಯಾತ್ಮದ ಜೇನನ್ನು ಕುಡಿದು ಮತ್ತವಾಗಿರುವ ಮನಸ್ಸೆನ್ನುವ ಚಕೋರ ಪಕ್ಷಿ ಕೇಳುತ್ತಲಿದೆ, ಹೇಳುತ್ತಲಿದೆ; ‘ಬೇರೆ ದರುಶನವೇಕೆ? ಮಾತೆ ಜ್ಯೋತಿರ್ಲಿಂಗಎಂದು.

ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು. ಕವನದ ಪ್ರಾರಂಭದಲ್ಲಿ ಮನದ ಬಯಲಿನಲ್ಲಿ ಬವಣೆಗೊಂಡು ಬಾಯಾರಿರುವ ಜಿಂಕೆಯ ಪ್ರತಿಮೆ ಇದೆ. ಜೊತೆಗೆ ‘ಹುಡುಕಾಟ’ ಕಾಣುತ್ತದೆ. ಪದ್ಯದ ಕೊನೆಯ ಭಾಗದಲ್ಲಿ ‘ಬೆಳದಿಂಗಳವ ಕುಡಿದ ಚಿತ್ತ ಚಕೋರ’ ಎಂದಿದೆ. ಚಕೋರ ಎನ್ನುವಾಗಲೂ ಹಿಂದೆ ಹಾರೈಸಿ ಹಾರೈಸಿ ಇಂದು ಬೆಳದಿಂಗಳನ್ನು ಪಡೆದುಕೊಂಡಿರುವ ಚಕೋರ ಎನ್ನುವ ಭಾವವಿದೆ. ಹಿಂದೆ ನೀರಿಗಾಗಿ ಹಂಬಲಿಸಿದ ಜಿಂಕೆಯ ಚಿತ್ರದೊಂದಿಗೆ ಬೆಳದಿಂಗಳನ್ನು ಕುಡಿದ ಚಿತ್ರ ಚಕೋರವನ್ನು ಹೋಲಿಸಿ ನೋಡಬೇಕು. ಮೊದಲಿನ ಹಂಬಲ, ಹುಡುಕಾಟ, ಬಾಯಾರಿಕೆ ಇಲ್ಲಿ ಹಿಂಗಿದ. ನೀರನ್ನು ಕುಡಿದು ಬಾಯಾರಿಕೆ ಆರಿದ್ದಲ್ಲ. ಬೆಳುದಿಂಗಳನ್ನು ಕುಡಿದು ಬಂದ ಮತ್ತು ಮೈಮರೆಯುವಿಕೆ ಇಲ್ಲಿದೆ. ಲೌಕಿಕ ತೃಪ್ತಿಯನ್ನು ಸೂಚಿಸುವ ಸಂಕೇತವಾದರೆ ‘ಬೆಳುದಿಂಗಳು’ ಅಲೌಕಿಕ ತೃಪ್ತಿಯನ್ನು ಸೂಚಿಸುವುದಾಗಿದೆ. ಎರಡನೆಯದಾಗಿ, ಜಿಂಕೆ-ಮೃಗಜಲದ ಪ್ರತಿಮೆಯಲ್ಲಿ ಜಿಂಕೆಗೆ ಎಂದೂ ಬಾಯಾರಿಕೆ ಹಿಂಗದೆಂಬ ಭಾವವಿದೆ. ಇಲ್ಲಿ ಚಕೋರ, ಬೆಳುದಿಂಗಳು ಇದ್ದಲ್ಲಿ ನಿತ್ಯ ಬಾಯಾರಿಕೆ, ತೊಳಲಾಟದ ಪ್ರಶ್ನೆ ಇಲ್ಲ. ಏಕೆಂದರೆ ಚಕೋರದ ಆಗಲಿಕೆ, ಬಳಲಿಕೆ, ಬಾಯಾರಿಕೆ, ತೊಳಲಾಟ ಎಲ್ಲವೂ ಚಂದ್ರ ತಿರುಗಿ ಹುಟ್ಟುವವರೆಗಿನದು. ಕೇವಲ ಕತ್ತಲ ಕಾಲದ ತೊಳಲಾಟ, ಚಂದ್ರೋದಯವಾದಾಗ ಅದರ ಬಾಯಾರಿಕೆ ಹಿಂಗುತ್ತದೆ, ತೃಪ್ತಿ ದೊರೆಯುತ್ತದೆ. ಬದುಕಿನಲ್ಲಿ ಕತ್ತಲೆ, ನಿರಾಶೆ, ತಾಮಸ ಕವಿದಾಗ ದುಃಖ, ತೊಳಲಾಟ, ಇದ್ದರೂ ಆಧ್ಯಾತ್ಮಿಕ ಅರಿವು ಮೂಡಿದಾಗ ಆ ಕತ್ತಲೆಯಲ್ಲ ಕರಗಿಹೋಗಿ ಮನಸ್ಸು ಆ ಅರಿವಿನಲ್ಲೇ ತಲ್ಲೀನವಾಗಿ ತೃಪ್ತಿ ಪಡೆಯುವುದೆಂಬ ಭಾವ ಇಲ್ಲಿದೆ.

ಕವನದ ಪ್ರಾರಂಭದಲ್ಲಿ ಬದುಕಿನಲ್ಲಿ ಬವಣೆಗೊಂಡ ಜೀವಕ್ಕೆ ತೃಪ್ತಿ ಸಿಗದೇನೊ ಎಂಬಂಥ ಅನಿಸಿಕೆ ಇದ್ದದ್ದು ಹುಡುಕಾಟದ ಆನಂತರದಲ್ಲಿ ಆಧ್ಯಾತ್ಮಿಕ ಅನುಭವವಾದಾಗ ಜೀವಕ್ಕೆ ತೃಪ್ತಿ ಸಿಗುವುದನ್ನು ಧ್ವನಿಸಲಾಗಿದೆ.

ಅಲ್ಲಮ ಪ್ರಭುವಿನ ಕಥೆ ಹರಿಹರನ ‘ಪ್ರಭುದೇವರ ರಗಳೆ’ ಯಲ್ಲಿ ಬೇರೆ ರೀತಿಯದಾಗಿದೆ. ಅದರ ಪ್ರಕಾರ ಕಾಮಲತೆ ಎನ್ನುವ ಪ್ರೇಯಸಿ ತೀರಿಹೋದುದರಿಂದ ಭಗ್ನ ಮನಃಸ್ಥಿತಿಯುಳ್ಳವನಾಗಿ ಎಲ್ಲೆಲ್ಲೋ ಆತ ತೊಳಲಾಡಿದ ವಿವರ ಬರುತ್ತದೆ. ಕೊನೆಯಲ್ಲಿ ಆನಿಮಿಷಯೋಗಿಯ ಮೂಲಕ ಆಧ್ಯಾತ್ಮಿಕ ‘ದರ್ಶನ’ವಾಗುವುದು – ಇತ್ಯಾದಿ ಬರುತ್ತದೆ. ಇಲ್ಲಿ ಕವಿಯ ಮೊದಲಿನ ತೊಳಲಾಟ, ಕೊನೆಯ ಆ ತೊಳಲಾಟದಿಂದ ಮುಕ್ತವಾದ ತೃಪ್ತ ನಿಲುಗಡೆ ಪರೋಕ್ಷವಾಗಿ ಪ್ರಭುವಿನ ಮೊದಲ ಆ ತೊಳಲಾಟ, ಬವಣೆ ಹಾಗೂ ಕೊನೆಯ ತೃಪ್ತ ನಿಲುಗಡೆಯನ್ನು ತನ್ನ ಅವಸ್ಥೆ ಮತ್ತು ನಿಲುಗಡೆಗೆ ಸಂವಾದಿಯಾಗಿ ಅಂದರೆ ಹೊಂದಿಕೆಯಾಗಿ ಕವನದ ಕರ್ತೃ ಪರಿಭಾವಿಸಿದಂತೆ ತೋರುತ್ತದೆ.

ಹದುಳದೊಂದು ಹುಣ್ಣಿಮೆಯ ಬೆಳುದಿಂಗಳನ್ನು ಕುಡಿದ ಚಿತ್ತ ಚಕೋರ ಹೇಳುವುದು ಒಂದೇ : ‘ಬೇರೆ ದರುಶನವೇಕೆ? ಮಾತೆ ಜ್ಯೋತಿರ್ಲಿಂಗ,’ ಎಂಬ ದರ್ಶನವೆ ಸಾಕು, ಬೇರೆ ದರ್ಶನ ಬೇಕಿಲ್ಲ ಎಂದು ಕರ್ತೃವಿನ ಮನಸ್ಸೆಂಬ ಚಕೋರ ಹೇಳುತ್ತದೆ, ಎನ್ನುವಲ್ಲಿಗೆ ಕವನ ಮುಕ್ತಾಯವಾಗುತ್ತದೆ. ಕವನದ ಮೊದಲಲ್ಲಿ ಮನದ ಬಯಲಲ್ಲಿ ಜಿಂಕೆಯಂತೆ ಬಾಯಾರಿಕೆಯಿಂದ ಬವಣೆಗೊಂಡ ಕರ್ತೃವಿನ ಮನಸ್ಸು ಕವನದ ಕೊನೆಯಲ್ಲಿ ಒಂದು ದರ್ಶನದ, ನೆಲೆ ತಲುಪಿದೆ. ಅದೊಂದು ತೃಪ್ತ ನೆಲೆ, ಬಳಲಿಕೆ ಹಿಂಗಿಸುವ ನೆಲೆ, ಅನುಮಾನ ಆತಂಕಗಳು ಉಪಶಮನಗೊಂಡ ನೆಲೆ.

ಇಲ್ಲಿ ‘ಮಾತೆ ಜ್ಯೋತಿರ್ಲಿಂಗ’ ಎಂಬ ದರ್ಶನಕ್ಕೆ ಒಂದೇ ಒಂದು ಅರ್ಥವೊ, ಒಂದೇ ಒಂದು ದ್ವನಿಯೊ ಇಲ್ಲ. ಏಕಕಾಲದಲ್ಲಿ ಎರಡೊ ಮೂರೊ ಅರ್ಥ ದ್ವನಿಗಳನ್ನು ಸ್ಫುರಿಸುವ ಚೈತನ್ಯ ಇರುವಂತೆ ಬೋಧೆಯಾಗುತ್ತದೆ. ‘ಮಾತೆ ಜ್ಯೋತಿರ್ಲಿಂಗ’ ಎಂಬಷ್ಟೇ ಭಾಗವನ್ನು ಕವನದಲ್ಲಿ ವಿಶೇಷ ಒತ್ತಿನೊಂದಿಗೆ ಅಂದರೆ ಅವಧಾರಣೆಯೊಂದಿಗೆ ಮುದ್ರಿಸಲಾಗಿದೆ. ಅದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅದು ವಿಶೇಷ ಧ್ವನಿಶಕ್ತಿಯಿಂದ ಕೂಡಿದೆ. ‘ಮಾತೆ ಜ್ಯೊತಿರ್ಲಿಂಗ’ ಎಂಬುದು ಅಲ್ಲಮಪ್ರಭುವಿನ ವಚನವೊಂದರಲ್ಲಿ ಬರುವ ಮಾತು. ವಚನಕಾರರ ಸಂದರ್ಭದಲ್ಲಿಯಂತೂ ಅದು ಸಾಂಸ್ಕೃತಿಕ ಮಹತ್ವವನ್ನು ಪಡೆದುಕೊಂಡಿರುವಂಥದು ಕವಿ ಬೇಂದ್ರೆಯವರ ಸಂದರ್ಭದಲ್ಲಿಯೂ ಆ ಮಾತಿಗೆ ವಿಶೇಷ ಅರ್ಥ ಸ್ಫುರಿಸುತ್ತದೆ. ಬೇಂದ್ರೆ ಆ ಕವನದ ಸಂದರ್ಭದಲ್ಲಿ ಅಪೂರ್ವವಾದ ರೀತಿಯಲ್ಲಿ ಅದನ್ನು ಬಳಸಿರುವಂತೆ ತೋರುತ್ತದೆ.

ದ.ರಾ. ಬೇಂದ್ರೆಯವರ ಕಾವ್ಯನಾಮ ‘ಅಂಬಿಕಾತನಯ ದತ್ತ’. ಕವಿಯಾಗಿ ಅವರು ದ.ರಾ.ಬೇಂದ್ರೆಯೊ, ಬೇಂದ್ರೆಯೊ ಅಲ್ಲ ; ಕವಿಯಾಗಿ ಅವರು ಅಂಬಿಕಾತನಯ ದತ್ತ. ಅಂಬಿಕೆ ಎಂಬುದು ಅವರ ಹೆತ್ತ ತಾಯಿಯ ಹೆಸರು. ಆ ಅರ್ಥದ ಮಿತಿಯಲ್ಲಿ ಪರಿಭಾವಿಸಿದಾಗ ಮಾತಾ=ಮಾತೆ ಅಂದರೆ ತಾಯಿಯೇ ಜ್ಯೋತಿರ್ಲಿಂಗ, ತಾಯಿಯೇ ಬೆಳಕ ಬೀರುವ ಅಥವಾ ಬೆಳಕನಿತ್ತ ಲಿಂಗ, ದೇವರು ಎಂಬ ದರ್ಶನವಾಗುತ್ತದೆ. ಇನ್ನೊಂದು ಆಯಾಮದಲ್ಲಿಯೂ ಧ್ವನಿವ್ಯಾಪ್ತಿ ಇರುವಂತಿದೆ. ಅಂಬಿಕೆ ಎಂದರೆ ಲೋಕಮಾತೆ – ಶಿವನ ಸತಿ. ಅವಳಿಲ್ಲದ ಶಿವ ಪೂರ್ಣನಲ್ಲ. ಅವಳಿದ್ದರೇ ಶಿವ ಅಂದರೆ ‘ಲಿಂಗ’ ಪೂರ್ಣ. ಇನ್ನೊಂದರ್ಥದ ಧ್ವನಿ ಈ ದ್ವನ್ಯರ್ಥಗಳನ್ನೆಲ್ಲ ಒಳಗೊಂಡಿರುವಂತೆ ತೋರುತ್ತದೆ. ಮನದ ಬಯಲಲಿ ಬವಣೆಗೊಂಡ ಕವಿಗೆ ‘ಮಾತೆ ಜ್ಯೋತಿರ್ಲಿಂಗ’ ಅಂದರೆ ಕವಿಗೆ ಮಾತು ಮಾತ್ರವೇ ಜ್ಯೋತಿರ್ಲಿಂಗ; ಬೇರೇನೂ ಅಲ್ಲ. ಅದೇ ಅವನ ಆರಾಧ್ಯ ದೈವ. ಅದೇ ಕವಿಯ ಬವಣೆ ನೀಗುವ ಮಂತ್ರದಂಡವೂ ಹೌದು, ಸಿದ್ಧಿಪ್ರದಾಯಕ ದೈವವೂ ಹೌದು ಎಂಬ ದರ್ಶನವಾಗುತ್ತದೆ. ಕಾವ್ಯೋದ್ಯೋಗಕ್ಕೆ ಕವಿ ಬೇಂದ್ರೆ ದೀಕ್ಷಾ ಬದ್ಧನಾಗಿದ್ದಕ್ಕೆ ಈ ದರ್ಶನವೇ, ಈ ನಂಬಿಕೆಯೇ ಕಾರಣ, ಪ್ರೇರಣೆ ಎಂಬ ಧ್ವನಿಯೂ ಇಲ್ಲಿ ಸ್ಫುರಿಸುವಂತಿದೆ. ಅಲ್ಲಮಪ್ರಭುವಿನ ವಚನವೊಂದರಲ್ಲಿ ಹೇಳಿದ ‘ಮಾತೆ ಜ್ಯೋತಿರ್ಲಿಂಗ’ ಎಂಬ ಮಾತನ್ನು ಕವಿ ಬೇಂದ್ರೆ ಆತ್ಮಸಾತ್ ಮಾಡಿಕೊಂಡು ಹೊಸ ಅರ್ಥಪ್ರಭೆ ನೀಡಿರುವುದು ಸಹೃದಯನ ಕಾವ್ಯಾನುಭವ ಸಂಸ್ಕಾರದ ಭಾಗವಾದದ್ದಾದರೆ ‘ಮಾತೆ ಜ್ಯೋತಿರ್ಲಿಂಗ’ ಬೇಂದ್ರೆಯವರ ಈ ಕವನದಲ್ಲಿ ಹೊಸ ಅರಿವಿನಲ್ಲಿ ಪಲ್ಲವಿಸಿದಂತೆ, ಫಲಿಸಿದಂತೆ ತೋರುತ್ತದೆ.