ಜೆ.ಪಿ. ಬಸವರಾಜು ಅವರ ಸಮೀಪ ೧೯೯೧ರಲ್ಲಿ ಅವರು ಮೈಸೂರಿಗೆ ವರ್ಗವಾಗಿ ಬಂದ ಮೇಲೆ ಬರೆದ ಕವನಗಳ ಸಂಕಲನ, ಕವನಗಳನ್ನು ಬರೆದಂತೆಲ್ಲ ನನಗೆ ಮೊದಲಿಗೆ ಕೊಟ್ಟು ಓದಿಸುತ್ತ ಬಂದಿದ್ದಾರೆ. ಅಂದರೆ ಈ ಎಲ್ಲ ಕವನಗಳ ಮೊದಲ ಓದುಗ ಗೌರವವನ್ನು ನನಗೆ ನೀಡಿದ್ದಾರೆ. ಈ ಕವನಗಳಿಗೆ ಮಾತ್ರವಲ್ಲ ಮೈಸೂರಿಗೆ ಬಂದ ಮೇಲೆ ಅವರು ಬರೆದ ಎಲ್ಲ ಸಾಹಿತ್ಯಿಕ ಬರವಣಿಗೆಗಳಿಗೂ ನನ್ನನ್ನು ಮೊದಲ ಓದುಗನನ್ನಾಗಿ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಅವರು ತೋರಿದ ಈ ವಿಶ್ವಾಸಕ್ಕೆ ಕಾರಣವೇನೊ ನನಗೆ ಗೊತ್ತಿಲ್ಲ. ಆದರೆ ಅವರು ಕೊಟ್ಟ ಬರವಣಿಗೆಗಳನ್ನೆಲ್ಲ ಓದುತ್ತಾ ಬಂದಿರುವುದಕ್ಕೆ ಕಾರಣ ನನಗೆ ಗೊತ್ತಿಲ್ಲ ಎಂಬಂತಿಲ್ಲ. ಅವರ ವಿಷಯದಲ್ಲಿ ನನ್ನೊಳಗೆ ಸದ್ದಿಲ್ಲದೆ ತುಂಬಿಕೊಳ್ಳುತ್ತ ಬಂದ ಪ್ರೀತಿ, ಆತ್ಮೀಯತೆ ಅದಕ್ಕೆ ಮುಖ್ಯ ಕಾರಣ ಎಂದುಕೊಂಡಿದ್ದೇನೆ.

ಬಸವರಾಜು ಮೈಸೂರಿಗೆ ಬರುವ ಮೊದಲು ಅವರ ಬರವಣಿಗೆಗಳ ಮೂಲಕ ಸ್ವಲ್ಪ ಪರಿಚಯ ಇತ್ತು ; ವ್ಯಕ್ತಿ ಪರಿಚಯ ಇರಲಿಲ್ಲ. ಅವರ ನೇರ ಪರಿಚಯ ಯಾವ ದಿನ, ಹೇಗೆ ಆಯಿತು ಎಂಬುದು ನೆನಪಿಲ್ಲ. ಪರಿಚಯವಾದ ದಿನದಿಂದ ಇಂದಿನವರೆಗೆ ಅವರೊಡನೆ ಕಳೆದ ಸಮಯವೆಲ್ಲ ನನ್ನ ಮನಸ್ಸಿಗೆ ಹಿತ, ಸಂತೋಷ ನೀಡಿದೆ. ಮನುಷ್ಯ ಸಂಬಂಧದ ಬಗ್ಗೆ ಗೌರವ, ಜೀವನ ಪ್ರತೀ, ತೆರೆದ ಮನಸ್ಸಿನ ನಡೆವಳಿಕೆ ಇವು ಅವರಲ್ಲಿ ನಾನು ಗುರುತಿಸಿ ಮೆಚ್ಚಿಕೊಂಡ ಗುಣಗಳು.

ಮುನ್ನುಡಿ, ಹಿನ್ನುಡಿ, ಬೆನ್ನುಡಿ ಬರೆಯುವುದರಲ್ಲಿ ಆಸಕ್ತಿ ಕಡಮೆ ಇರುವ, ಅಂಥ ಬರವಣಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವಲ್ಲೆಲ್ಲ ಪ್ರಯತ್ನಿಸುವ ನಾನು ಈ ಸಂಕಲನಕ್ಕೆ ಎರಡು ಮಾತು ಬರೆಯುವುದರಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಹಾಗೆನ್ನುವುದಕ್ಕಿಂತ ತಪ್ಪಿಸಿಕೊಳ್ಳಲು ಮನಸ್ಸು ಒಪ್ಪಲಿಲ್ಲ ಎಂದು ಹೇಳಿದರೆ ಸರಿಯಾದೀತು.

ಕವಿಯಾಗಿ ಬಸವರಾಜು ಅವರು ಈಗಾಗಲೇ ಶ್ರೇಷ್ಠರ ಪಂಕ್ತಿಗೆ ಸೇರಿದವರೆಂದು ನಾನು ತಿಳಿದಿಲ್ಲ; ಅವರೂ ಹಾಗೆ ಭಾವಿಸಿಲ್ಲ. ಅವರ ವ್ಯಕ್ತಿತ್ವದಲ್ಲಿ ಸಹಜವಾಗಿ ಗೋಚರವಾಗುವ ಸೌಮನಸ್ಯ, ಅಂತಃಕರಣದ ಆರ್ದ್ರತೆ, ತನ್ನ ಮಿತಿ ಮೇರೆಯ ಬಗೆಗಿನ ಪರಿವೆ ಇವು ಅವರ ಬರವಣಿಗೆಯ ಸ್ವರೂಪ ಲಕ್ಷಣಗಳನ್ನೂ ನಿರ್ಧರಿಸುತ್ತಿವೆ. ಹೀಗೆ ವ್ಯಕ್ತಿತ್ವದ ಧಾತು ಸತ್ವವೇ ಬರವಣಿಗೆಯ ಸ್ವರೂಪ ಲಕ್ಷಣಗಳನ್ನೂ ರೇಖಿಸುವುದು ಕವಿಯ ಮನಸ್ಸಿನ ಆರೋಗ್ಯವಂತಿಕೆ ಮತ್ತು ಬರವಣಿಗೆಯ ಪ್ರಾಮಾಣಿಕತೆಯನ್ನು ಕಾಪಾಡುವ ಸಂಗತಿ. ಕಲ್ಪನಾಶಕ್ತಿ, ಒಳನೋಟ, ತಾತ್ವಿಕ ದೃಷ್ಟಿಗಳು ಏನಿದ್ದರೂ ಅದರ ಕಾಂತಕ್ಷೇತ್ರದೊಂದಿಗೆ ಸಾಚಾ ಸಂಬಂಧ ಹೊಂದಿರಬೇಕು ಎಂಬುದು ನನ್ನ ಗ್ರಹಿಕೆ, ನಿರೀಕ್ಷೆ.

ಹೀಗಾದರೆ ಮಾತ್ರ ಕಾವ್ಯ ಶೇಷ್ಠವಾಗುತ್ತದೆಯೆ? ಕಾವ್ಯದ ಶ್ರೇಷ್ಠತೆ, ಕನಿಷ್ಠತೆ ಆ ಅಂಶ ಮಾತ್ರದಿಂದಲೇ ತೀರ್ಮಾನವಾಗುವುದಿಲ್ಲ ; ತೀರ್ಮಾನವಾಗುವುದೂ ಅಲ್ಲ.ಆದರೆ ಶ್ರೇಷ್ಠ ಕಾವ್ಯ ಈ ಧಾತುಮೂಲದಿಂದ ಸಹಜವಾದ ಪ್ರೇರಣೆ, ದೃಢವಾದ ಪೋಷಣೆ ಪಡೆದದ್ದಾಗಿರುತ್ತದೆ. ಹಾಗಿಲ್ಲದ ಕಾವ್ಯವು ಮನೋವ್ಯಾಪಾರದ ಚಾಲಾಕಿನ ಫಲವಾಗಿರುತ್ತದೆ. ಅಂದರೆ ಸೆರೆಬ್ರಲ್ ಆಗುತ್ತದೆ ಅಥವಾ ವುತ್ಪತ್ತಿಯ ಉಪ ಉತ್ಪನ್ನವಾಗಿರುತ್ತದೆ. ಅಂಥ ಕಾವ್ಯದಿಂದ ಪಡೆಯುವ ಅನುಭವ ನಂಬಿಕೆಗೆ ಅರ್ಹವಾಗುವುದಕ್ಕಿಂತ ನಂಬಿಸುವ ತಂತ್ರ ನೈಪುಣ್ಯದಿಂದ ಓದುಗರನ್ನು ಒಲಿಸಿಕೊಳ್ಳಲು, ಒಪ್ಪಿಸಿಕೊಳ್ಳಲು ಹವಣಿಸುತ್ತದೆ.

‘ಸಮೀಪ’ದ ಕವನಗಳಲ್ಲಿ ಚಿಂತನಾಂಶಕ್ಕಿಂತ ಭಾವನಾಂಶ ಪ್ರಧಾನವಾಗಿದೆ. ಭಾವನೆಯ ಉತ್ಕರ್ಷ ಇರುವುದು ರಮ್ಯಕಾವ್ಯದ ಲಕ್ಷಣವಿಶೇಷಗಳಲ್ಲಿ ಒಂದು, ಬಸವರಾಜು ಅವರ ಮನೋಧರ್ಮ ರಮ್ಯದ ಕಡೆಗೆ ವಾಲಿಕೊಂಡಿರುವಂಥದು.ಆದರೆ ಭಾವನೆ ಅತಿರೇಕದ ಸೆಳವಿಗೆ ಸಿಕ್ಕದಂತೆ ಉದ್ದಕ್ಕೂ ಅವರು ಎಚ್ಚರವಹಿಸುತ್ತಾರೆ. ಕಾವ್ಯಾನುಭವವನ್ನು ಒಂದು ಆಪ್ತವಾದ, ಆತ್ಮೀಯವಾದ ಭಾವಪರಿಸರದಲ್ಲಿ ಹದಗೊಳ್ಳುವ ನೆಲೆಗೆ ತಲುಪಿಸುವ ಕಡೆ ಅವರ ಲಕ್ಷ್ಯ ಇರುತ್ತದೆ.

ರಮ್ಯ ಕಾವ್ಯದಲ್ಲಿ ಸಾಮಾನ್ಯವಾದ ಅಮೂರ್ತ ಅನುಭವದತ್ತ ಧಾವಿಸುವ ಕಲ್ಪನೆಯ ಅನಿರ್ಬಂಧಿತ ಉಡ್ಡಯನಕ್ಕೆ ಬಸವರಾಜು ಕಡಿವಾಣ ಹಾಕುತ್ತಾರೆ. ಹಾಗಾಗಿ ಈ ಸಂಕಲನದ ಕವನಗಳಲ್ಲಿ ಸಂಯಮಶೀಲ ಭಾವನಾಮಯತೆಯ ಬೆಚ್ಚಗಿನ ವಾತಾವರಣ ಸೃಷ್ಟಿಯಾಗಿದೆ. ಮೌನವಾದ ಕಾಮ್ರೇಡ್, ಶಂಕರ ಸತ್ತ ಸುದ್ದಿ, ಸ್ಕಾಟ್ ಬಂಗಲೆ, ಬ್ರಹ್ಮ ಕಮಲ, ಕೈ ಹಿಡಿದುಕೋ ಕಂದಮ್ಮ, ಚಿಗುರೊಡೆದದ್ದು ಜೀವ-ಹರ್ಷ, ನನ್ನ ರಥ,ಆಚಾರ್ಯ ಅಡಿಗ, ಬರಬೇಕಾದವರು, ಕೆರೆ ಮರ ಹಕ್ಕಿ, ಬೇಡಿಕೆ ಈ ಕವನಗಳನ್ನು ಈ ಮಾತಿಗೆ ನಿದರ್ಶನಗಳಾಗಿ ನೋಡಬಹುದು.

ಈ ಸಂಯಮಶೀಲತೆ ರಮ್ಯಕ್ಕಿಂತ ನವ್ಯಕ್ಕೆ ಹೆಚ್ಚು ಹತ್ತಿರವಾದದ್ದು, ಹಾಗೆಂದು ನವ್ಯದ ಸಂಕೇತ, ಪ್ರತಿಮೆ, ಪುರಾಣ, ಸಭ್ರಾಮಕಗಳ ಸಂಕೀರ್ಣ ನೆಯ್ಗೆಯ ಅಭಿವ್ಯಕ್ತಿ ವಿಧಾನದ ಬಗೆಗಿನ ಒಲವು ಇಲ್ಲಿ ಕಾಣಿಸುವುದಿಲ್ಲ. ಆ ಕಾರಣದಿಂದ ಉಂಟಾಗಬಹುದಾಗಿದ್ದ ಸಂವಹನದ ಜಟಿಲತೆಯೂ ಇಲ್ಲಿ ಇಲ್ಲ. ಈ ಸಂಕಲನದ ಕೆಲವು ಕವನಗಳಲ್ಲಿ ಒಂದಿಷ್ಟು ಅಸ್ಪಷ್ಟತೆಯೇನೋ ಇದೆ (ಉದಾ ಜೀವಕುಡಿ, ಸ್ವಯಂಪ್ರಭೆ, ಮುತ್ತು ಹನಿ, ಸ್ವಂತ ಕಥೆ, ಲಾಲ್ ಬಾಗ್). ಅದು ಈ ಕಾರಣದಿಂದ ಉಂಟಾದದ್ದಲ್ಲ. ಅನುಭವದ ಗ್ರಹಿಕೆ ಮತ್ತು ಅದನ್ನು ಅರಿವಿಗೆ ಸೋಸಿಕೊಳ್ಳುವ ನೆಲೆಯಲ್ಲಿಯೇ ಉಂಟಾಗಿರಬಹುದಾದ ಸೃಜನಶೀಲ ಏಕಾಗ್ರತೆಯ ಕೊರತೆ ಅದಕ್ಕೆ ಕಾರಣ ಎಂದು ತೋರುತ್ತದೆ.

ಕನ್ನಡದ ನವೋದಯ ಕವಿಗಳಿಗೆ ಸಾಮಾನ್ಯವಾಗಿದದ ಆಸ್ತಿಕ ಮನೋಭಾವ, ಆ ಆಸ್ತಿಕ ಮನೋಭಾವದ ಒಡಲಿನಿಂದ ಅರಳಿಬರುವ ಅಧ್ಯಾತ್ಮದ ಬಗೆಗಿನ ಧಾರ್ಮಿಕ ಭಾವುಕತೆ ಬಸವರಾಜು ಅವರ ಮನೋಧರ್ಮದಲ್ಲಿ ಕಾಣಿಸುವುದಿಲ್ಲ. ಸುತ್ತಲಿನ ಮನುಷ್ಯ ಮತ್ತು ಮನುಷ್ಯೇತರ ಜೀವ, ಜಗತ್ತಿನೊಂದಿಗೆ ತೆರೆದ ಮನಸ್ಸಿನ ಸಂವೇದನಾ ಸಂಸ್ಕಾರಕ್ಕೆ ಸಹಜವಾಗಿ ನಿಲುಕುವ ಭಾವಾನುಭವಗಳ ನೆಲೆಯಲ್ಲಿ ಆಪ್ತ ಆರ್ದ್ರತೆಯಿಂದ ಒಡನಾಡುವುದು ಕಾಣಿಸುತ್ತದೆ. ನವ್ಯದವರಲ್ಲಿ ಸಾಮಾನ್ಯವಾಗಿರುವ ದ್ವಂದ್ವ, ಬಿಕ್ಕಟ್ಟು, ವ್ಯಂಗ್ಯ ಪರಿಭಾವನೆಗಳ ಮುಖಾಮುಖಿಯಲ್ಲಿ ಸ್ವಾನುಭವದ ನಿಜದ ನೆಲೆಯನ್ನು ಶೋಧಿಸುವ, ಅರಿವನ್ನು ಸೋಸಿಕೊಳ್ಳುವ ಬಗೆಯ ಸಂಕೀರ್ಣ ಮನೋಧರ್ಮವೂ ಅವರಲ್ಲಿ ಕಾಣಿಸುವುದಿಲ್ಲ. ತನ್ನದೇ ಆದ ವಿಶಿಷ್ಟ ಬಗೆಯಲ್ಲಿ ಹಗುರಾಗಿಸಿಕೊಂಡ – ಹಗುರವಾದ ಅಲ್ಲ – ಮನಃಸ್ಥಿತಿಯಲ್ಲಿಯೇ ಅವರ ಕಾವ್ಯ ಸೃಷ್ಟಿಕ್ರಿಯೆ ನಡೆಯುತ್ತದೆ.

ಬಸವರಾಜು ಅವರ ದೃಷ್ಟಿ ಪ್ರಗತಿಪರವಾದದ್ದು ; ಜನಪರ – ಜೀವಪರವಾದದ್‌ದು. ಹಾಗೆಂದು ಹೆಚ್ಚಿನ ದಲಿತ-ಬಂಡಾಯದವರ ಕಾವ್ಯದಲ್ಲಿ ಕಾಣಿಸುವಂಥ ಪ್ರಗತಿಪರತೆಯನ್ನು ಕಾವ್ಯದೊಳಗೆ ಏರುದನಿ, ವೈಚಾರಿಕ ಹೇಳಿಕೆಗಳ ಮೂಲಕ ಮೆರೆಸುವ ಆತುರ ಅವರ ಕಾವ್ಯದಲ್ಲಿ ಕಾಣಿಸುವುದಿಲ್ಲ (ಉದಾ : ಮೌನವಾದ ಕಾಮ್ರೇಡ್, ಶಂಕರ ಸತ್ತ ಸುದ್ದಿ, ಕೋಟೆ, ಸ್ಥಾವರ ಇತ್ಯಾದಿ). ಅವರ ಕವನಗಳನ್ನು ಓದುತ್ತಿರುವಾಗ ಮಾನವೀಯ ಭಾವಸ್ಪಂದನ, ಸಂವೇದನೆ ಉಳ್ಳ ಸಂಸ್ಕಾರವಂತ ಮನಸ್ಸಿನ ಒಡನಾಟದಲ್ಲಿರುವುದು ವೇದ್ಯವಾಗುತ್ತದೆ.

ಆಧುನಿಕ ಕನ್ನಡ ಕಾವ್ಯ ಪರಂಪರೆ ಕಾಲಮಾನದ ಎಲ್ಲ ಬಗೆಯ ಪರಿವರ್ತನ, ಪರಾವರ್ತನಗಳಿಗೂ (reflections) ಸೃಜನಶೀಲವಾಗಿ ಸಂವೇದಿಸುವ ನಿಷ್ಠೆಯನ್ನು ನಿರಂತರವಾಗಿ ತೋರುತ್ತ ಬಂದಿದೆ. ಆ ಕಾರಣದಿಂದಾಗಿ ನವೋದಯ, ನವ್ಯ, ದಲಿತ-ಬಂಡಾಯ ಈ ಯಾವ ಕಾವ್ಯ ಮಾರ್ಗವೇ ಅಗಲಿ (ಅವುಗಳದ್ದೇ ಆದ ಮಿತಿ ಭಿನ್ನತೆಗಳು ಏನೇ ಇರಲಿ) ಅವು ನಮ್ಮ ಸಂಸ್ಕೃತಿ ಸಂವಾದದ ಶ್ರೇಷ್ಠ ಆಕರಗಳೂ, ಶ್ರೇಷ್ಠ ಅರಿವಿನ ನೆಲೆಗಳೂ ಆಗಿವೆ ಎಂಬುದು ನಿರ್ವಿವಾದದ ಸಂಗತಿಯಾಗಿದೆ. ಬಸವರಾಜು ಅವರ ಕಾವ್ಯವು ತನ್ನದೇ ಆದ ವಿಶಿಷ್ಟತೆಯಲ್ಲಿ ಅಂಥ ಆಕರ, ಅರಿವಿನ ನೆಲೆಯಾಗಿಯೂ ಹೆಚ್ಚು ಪ್ರಯೋಜನಕಾರಿಯಾಗುವಂತೆ ಬೆಳೆಯಬೇಕಾಗಿದೆ. ಹಾಗೆಯೆ ‘ಭಾವಸಂಸ್ಕರಣೆಯ’ ಜೊತೆಗೆ ಚಿಂತನಸಂಸ್ಕರಣ ಕೂಡ ಕಾವ್ಯದ ಕಾರ್ಯ ಎಂಬ ಅರಿವೂ ಬಸವರಾಜು ಅವರಲ್ಲಿ ಹೆಚ್ಚು ದೃಢವಾಗಬೇಕಾಗಿದೆ.

ಈಗಿರುವಂತೆ ಬಸವರಾಜು ಅವರ ಕಾವ್ಯ ಉತ್ತಮ ತಳಿಯದು. ಅನನ್ಯತೆಯ ಕೆಲವು ಉತ್ತಮ ಲಕ್ಷಣಗಳಿಂದ ಹಾಗೂ ತಾಜಾತನದಿಂದ ಕೂಡಿರುವಂಥದು. ತನ್ನದೇ ಆದ ದಾರಿ, ಜಾಡನ್ನು ಹುಡುಕಿಕೊಳ್ಳುತ್ತ ಸಾಗುತ್ತಿರುವಂಥದು. ಇಂಥ ಆರೋಗ್ಯವಂತ ಕಾವ್ಯವನ್ನು ಕಾವ್ಯಾಭ್ಯಾಸಿಗಳು ಅಗತ್ಯವಾಗಿ ಗಮನಿಸಬೇಕಾಗುತ್ತದೆ. ಇಷ್ಟಾದರೂ ಅವರ ಪ್ರತಿಭೆ ಮತ್ತು ಲೋಕಾನುಭವಗಳ ಸ್ವೋಪಜ್ಞಪ್ರಭೆಯು ಇನ್ನೂ ಹೆಚ್ಚು ವ್ಯಾಪಕವಾದ ಅನುಭವ ವಲಯವನ್ನು ಪರವೇಶಿಸುವ, ಇನ್ನೂ ಹೆಚ್ಚು ಆಳವಾದ ತಾತ್ವಿಕ ಪ್ರಶ್ನೆಗಳ ಮಗ್ಗಲುಗಳನ್ನು ದೀಪ್ತಗೊಳಿಸುವ ಮಹತ್ವಾಕಾಂಕ್ಷೆಯನ್ನು ಬೆಳೆಸಿಕೊಂಡು ಮುಂದುವರಿಯುವ ಅಗತ್ಯ ಇದೆ ಎಂದು ಇಲ್ಲಿ ಸೂಚಿಸಬಯಸುತ್ತೇನೆ.

೨೩, ಡಿಸೆಂಬರ್, ೧೯೯೫

* ಜೆ. ಪಿ. ಬಸವರಾಜು ಅವರ ಕವನ ಸಂಕಲನ ‘ಸಮೀಪ’ಕ್ಕೆ ಬರದ ಮುನ್ನುಡಿ, ೧೯೯೫.