ಕೆ.ಎಸ್. ಭದ್ರಣ್ಣನವರ ಕವನ ಸಂಕಲನವೊಂದು ಪ್ರಕಟವಾಗುತ್ತಿದೆ ಎಂದು ಆತ್ಮೀಯರಾದ ಡಾ. ಪಂಡಿತಾರಾಧ್ಯರು ಹೇಳಿದಾಗ ನನಗೆ ಆಶ್ಚರ್ಯವಾಯಿತು. ಭದ್ರಣ್ಣನವರು ನಮ್ಮ ಮನೆಗೆ ಪಂಡಿತರ ಜೊತೆ ಎಷ್ಟೋ ಸಲ ಬಂದು ಹೋದವರು; ವಿವೇಕಿ, ತೂಕದ ಮಾತು-ನಡವಳಿಕೆಯ ಮನುಷ್ಯ. ನನಗೆ, ನನ್ನ ಹೆಂಡತಿಗೆ, ನನ್ನ ಮಗಳಿಗೆ ಅವರ ಬಗ್ಗೆ ಸದಭಿಪ್ರಾಯ, ಸದ್ಭಾವನೆ, ಅವರು ಕವನಗಳನ್ನು ಬರೆಯುತ್ತಾರೆಂಬುದು ನನಗೆ ಗೊತ್ತಿರಲಿಲ್ಲ.

ನನಗಾದ ಆಶ್ಚರ್ಯಕ್ಕೆ ಅದೊಂದೇ ಕಾರಣವಾಗಿರಲಿಲ್ಲ. ಅದಕ್ಕಿಂತ ಮುಖ್ಯವಾದ ಬೇರೊಂದು ಕಾರಣವೂ ಇತ್ತು; ಇದೆ. ಕೆಲವೇ ದಿನಗಳ ಹಿಂದೆ ಭದ್ರಣ್ಣನವರ ಆರೋಗ್ಯ ಸ್ಥಿತಿಯ ಬಗ್ಗೆ ಪಂಡಿತರಿಂದಲೇ ಆಘಾತಕಾರಿ ಸುದ್ದಿ ಕೇಳಿದ್ದೆ. ಅರ್ಬುದ ರೋಗದ ರೂಪದಲ್ಲಿ ಸಾವು ಕೆಕ್ಕರುಗಣ್ಣು ಬಿಟ್ಟುಕೊಂಡು ಝಂಕಿಸುತ್ತ ಅವರ ಹಿಂದೆ – ಮುಂದೆ ಗೂಂಡಾಗತ್ತಿನಿಂದ ಠಳಾಯಿಸುತ್ತಿದೆ ಎಂಬ ಸುದ್ದಿ ಅದಾಗಿತ್ತು. ಆ ಸುದ್ದಿ ನನ್ನ ಮನಸ್ಸನ್ನು ಅಲ್ಲಾಡಿಸಿತ್ತು; ಅಂತಃಕರಣ ಕಲಕಿತ್ತು. ನಮಗೆ ಆ ಸುದ್ದಿ ಗೊತ್ತಾದ ಮೇಲೆ ಒಂದು ದಿನ ಭದ್ರಣ್ಣನವರು ಅವರ ಹೆಂಡತು, ಮಕ್ಕಳೊಂದಿಗೆ ನಮ್ಮ ಮನೆಗೆ ಪಂಡಿತರ ಜೊತೆಗೂಡಿ ಬಂದಿದ್ದರು. ಆ ಸಂದರ್ಭದಲ್ಲಿ ತೋರಿಸಿಕೊಳ್ಳಲಾಗದ ಒಳಸಂಕಟದಲ್ಲಿ ನಾನು, ನನ್ನ ಹೆಂಡತಿ, ನನ್ನ ಮಗಳು ಮರುಗಿದ್ದೆವು; ಚಡಪಡಿಸಿದ್ದೆವು. ಇಂಥ ವಿಷಮ ಕಾಲಸಂದರ್ಭದಲ್ಲಿ ಭದ್ರಣ್ಣನವರು ಕವನ ಸಂಕಲನ ಪ್ರಕಟಿಸುತ್ತಾರೆ ಎಂದು ಕೇಳಿದಾಗ ಅವರ ಉತ್ಸಾಹ, ಜೀವನ ಪ್ರೀತಿ ನನ್ನಲ್ಲಿ ಸೋಜಿಗ, ಬೆರಗು ಉಂಟುಮಾಡಿತ್ತು.

ಭದ್ರಣ್ಣನವರ ಕವನ ಸಂಕಲನಕ್ಕೆ ನಾನು ಮುನ್ನುಡಿ ಬರೆಯಬೇಕೆಂಬುದು ಭದ್ರಣ್ಣನವರ ಅಪೇಕ್ಷೆ ಎಂದು ಪಂಡಿತರು ತಿಳಿಸಿದರು. ಅದು ಪಂಡಿತರ ಅಪೇಕ್ಷೆಯೂ ಆಗಿದೆ ಎಂದು ಸಾಹಿತ್ಯ ಕೃತಿಗಳಿಗೆ ಮುನ್ನುಡಿ ಬರೆಯುವುದಕ್ಕೆ ಉತ್ಸಾಹ ತೋರದ ನನ್ನ ಕೃಪಣ, ಛಾನಸಬುದ್ಧಿ ಬಲ್ಲವರಾದ ಅವರೂ ಹೇಳಿದಾಗ ಸಂದಿಗ್ಧಕ್ಕೊಳಗಾದೆ. ಪಂಡಿತರು ಭದ್ರಣ್ಣನವರ ಸಂಬಂಧಿಕರು, ಅವರಿಗಿಂತ ಒಂದು ವಾರ ಮಾತ್ರವೆ ಮುಂದಾಗಿ ಹುಟ್ಟಿದರು. ಸಮವಯಸ್ಸಿನ ಸಲುಗೆಯ ಸಂತೋಷ ಹಂಚಿಕೊಂಡು ಬೆಳೆದುಬಂದವರು. ಆ ಕಾರಣಕ್ಕಾಗಿ ಭದ್ರಣ್ಣನವರು ತಮಾಷೆಗೆ ಪಂಡಿತರನ್ನು ‘ವಾರಣ್ಣ’ ಎಂದು ಕರೆಯುವುದುಂಟು. ಪಂಡಿತರು ನನಗೆ, ನಮ್ಮ ಮನೆಯ ಎಲ್ಲರಿಗೂ ಆಪ್ತರು, ಆತ್ಮೀಯರು. ಅವರು ಅವರ ಸಂಬಂಧಿಕರ ಮಾತ್ರವಲ್ಲ ಪರಿಚಿತರಲ್ಲಿ ಯಾರ ಕಷ್ಟಕ್ಕೂ ಸ್ಪಂದಿಸುವ ಅಂತಃಕರಣವುಳ್ಳವರು. ಅವರು ತಮಗಾಗಿ ಅವರಿವರನ್ನು ಕೇಳುವ, ಬೇಡುವ ಚಾಳಿಯವರೂ ಅಲ್ಲ.

ಪ್ರಕಟವಾಗುತ್ತಿರುವುದು ಭದ್ರಣ್ಣನವರ ಪ್ರಥಮ ಕೃತಿ. ೫೪ ವರ್ಷದ ಅವರು ಉದಯೋನ್ಮುಖ ಕವಿ ಎಂಬಂಥ ವಯಸ್ಸಿನವರೇನಲ್ಲ. ಅವರ ಒಂದು ಕವನವನ್ನೂ ನಾನು ಆವರೆಗೆ ಓದಿರಲಿಲ್ಲ. ಅವರ ಬರವಣಿಗೆಯ ಗುಣಮಟ್ಟದ ಬಗ್ಗೆ ಯಾವ ಅಂದಾಜು ನನಗಿರಲಿಲ್ಲ. ಪದ್ಯ ಎಂದು ಬರೆದದ್ದೆಲ್ಲ ಕಾವ್ಯ ಎಂಬ ಭ್ರಮೆ ಬೇರೆ ಬೇರೆ ಜ್ಞಾನ, ವಿಜ್ಞಾನ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ, ಹೆಸರು ಮಾಡಿದವರಲ್ಲಿಯೂ ಎಷ್ಟೋ ಜನರಲ್ಲಿ ಇರುವುದನ್ನು ನಾನು ಕಂಡವನು. ಕವಿ ನಾಮಧಾರಕ ಚಪಲದಿಂದಾಗಿ ಬಾಲಿಶ ಬರವಣಿಗೆಗಳನ್ನೂ ಕಾವ್ಯವೆಂಬ, ಮಹಾಕಾವ್ಯವೆಂಬ ‘ಲೇಬಲ್’ ಹಚ್ಚಿ ಪ್ರಕಟಿಸಿದ ಅಂಥವರನ್ನು ನಾನು ಕಂಡವನು. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಅದ್ಭುತ ಕೊಡುಗೆ ನೀಡಿದ, ಜ್ಞಾನಪೀಠ ಪ್ರಶಸ್ತಿ ಪಡೆದ ಶಿವರಾಮ ಕಾರಂತರಂಥವರನ್ನು ಕುಡ ‘ಸೀಳ್ಗವನಗಳು’ ಎಂಬ ಅವರ ಎರಡನೆಯ ಕವನ ಸಂಕಲನ ಪ್ರಕಟಿಸುವಾಗ ಇಂಥ ಮಾಯೆ ಆವರಿಸಿದ್ದುಂಟಲ್ಲವೆ?

ಇವೆಲ್ಲ ನನ್ನ ಮನಸ್ಸಿಗೆ ಝಗ್ಗೆಂದು ಮಿಂಚಿಹೋದವು. ಭದ್ರಣ್ಣನವರು ಸಾಹಿತ್ಯದ ವಿದ್ಯಾರ್ಥಿಯೂ ಅಲ್ಲ; ಸಸ್ಯಶಾಸ್ತ್ರದ ಪದವೀಧರ. ಅವರ ಕವನಗಳನ್ನು ನಾನು ಸ್ವತಃ ಓದಿನೋಡದೆ-ಪಂಡಿತರಂಥವರದೇ ಆದರೂ -ಬೇರೆಯವರ ಶಿಫಾರಸು, ಅಪೇಕ್ಷೆ ಮಾತ್ರವೇ ಕಾರಣವಾಗಿ ಮುನ್ನುಡಿ ಬರೆಯಲು ಒಪ್ಪಿಗೆ ಸೂಚಿಸುವುದಕ್ಕೆ ನನ್ನ ವಿಮರ್ಶನ ವಿವೇಕವೂ, ಅಹಂಕಾರವೊ ತಡೆಹಾಕಿತು. ಸಂಕಲಿತ ಕವನಗಳನ್ನು ಓದಿ ನೋಡಿದ ಮೇಲೆಯೆ ಬರೆಯಲು ನಾನು ಒಪ್ಪುವ, ಬಿಡುವ ತೀರ್ಮಾನ ತಿಳಿಸುವುದಾಗಿ ಪಂಡಿತರಿಗೆ ಹೇಳಿದೆ; ಕವನಗಳನ್ನು ತಂದುಕೊಟ್ಟರು.

ಭದ್ರಣ್ಣನವರು ಸಹಜ ಕವಿ. ಅವರು ಅನುಭವವನ್ನು ಅದರ ವಾಸ್ತವದ ನೆಲೆಯ ಅಸ್ತಿತ್ವದ ಪರಿವೆಗೆಡದೆ ಅರಿವಿನ ನೆಲೆಗೆ ಎತ್ತಿಕೊಂಡು ಪರಿಭಾವಿಸುವ ಮನಸ್ಸಿನ ಸಂಸ್ಕಾರವುಳ್ಳವರು, ಎಂಬುದು ‘ನದಿಯ ತೀರದ ಮರಳು’ ಸಂಕಲನದ ಕವನಗಳನ್ನು ಓದಿದಾಗ ನನ್ನ ಅರಿವಿಗೆ ಬಂದಿತು. ಮುನ್ನುಡಿ ಬರೆಯಲು ಒಪ್ಪುವುದಕ್ಕೆ ಇದ್ದ ಮುಜಗರದ, ಒಳಸಂಕೋಚದ ಪೊರೆಯೊ, ಉಪಾಧಿಯೊ ಸರಿದು ನನ್ನ ಮನಸ್ಸು ನಿರಾಳವಾಯಿತು. ಸಾವಿಗೆ ಸಂಬಂಧಿಸಿದ ‘ಆಧಾರ’, ‘ಅಮ್ಮ ಮತ್ತು ಸಾವು’, ‘ಕಾಲನ ಕರೆ’,ಸಾವಿಗೆ ಸಂಬಂಧಿಸಿದಂತೆ ಅಲ್ಲಲ್ಲಿ ಬರುವ ಇತರ ಕೆಲವು ಸಾಲುಗಳು, ‘ನನ್ನವಳು-೧’, ‘ನನ್ನವಳು-೨’, ‘ಅಭಿ’, ‘ಅಕ್ಷತಾ’ -ಇವುಗಳನ್ನು ಓದುತ್ತಿರುವಾಗ ನನ್ನ ವಿಮರ್ಶನ ಸಂವೇದನೆ, ಅಂತಃಕರಣದ ವೇದನೆಯೊಂದಿಗೆ ಒಡಬೆರೆಯುತ್ತಿದ್ದಾಗಿನ ಸಂಕೀರ್ಣ ಅನುಭವಕ್ಕೆ ಮಾತುಕೊಡುವುದು ಸುಲಭವೇನೂ ಅಲ್ಲ ಎಂದು ಅನಿಸಿ ನನ್ನ ವಿಮರ್ಶನ ವಿವೇಕ ನಸುಕಂಪಿಸಿದ ಅನುಭವವೂ ಆಯಿತು.

‘ಆಧಾರ ಕವನವನ್ನು ಇಡಿಯಾಗಿಯೆ ಉದ್ಧರಿಸುತ್ತೇನೆ :

ವೆಚ್ಚಕ್ಕೆ ಹೊನ್ನಾಗಿ ಬೆಚ್ಚನೆಯ ಮನೆಯಾಗಿ
ಇಚ್ಛೆಯರಿಯುವ ಸತಿ ಇರಲು ನಿನ್ನ
ಚಿಂತೆ ನನಗಿರಲಿಲ್ಲ
ನನ್ನಲ್ಲೆ ಹುಟ್ಟಿದ ಅರ್ಬುದ ಧಿಗ್ಗೆಂದು
ಎದ್ದಾಗ ಸಾವು ನನ್ನ ಬಳಿ ಕುಳಿತಿರಲು
ನೀ ನೆನಪಿಗೆ ಬಂದೆ
ಹಿಡಿದುಕೊಳ್ಳಲು ಆಧಾರವಿಲ್ಲದೆ
ಸುತ್ತೆಲ್ಲ ನೋಡಿದರೂ ಶೂನ್ಯ
ಕಟ್ಟಿಕೊಟ್ಟ ಬುತ್ತಿ
ಬಿಚ್ಚಲು ಹಳಸಾಗಿತ್ತು
ಬೆಚ್ಚನೆಯ ಸ್ಪರ್ಶಗಳು, ಆತಂಕದ ಕಣ್ಣುಗಳು
ದುಃಖದ ಛಾಯೆಗಳು ಸುತ್ತೆಲ್ಲ ಇರಲು
ನಿನ್ನ ಹುಡುಕುವುದು ಅನಿವಾರ್ಯವಾಗಿತ್ತು
ತರ್ಕ ನಿಜ, ಸತ್ಯಕ್ಕೆ ತರ್ಕ ಅನಿವಾರ್ಯವಲ್ಲ
ಅನುಭಾವಕ್ಕೆ ಪ್ರಮಾಣ ಬೇಕಿಲ್ಲ
ಸಾಗಿದ ದಾರಿಯಲ್ಲಿ ಜಾರಿದ ಬಂಡೆ
ಬಿಡಲಿಲ್ಲ ಕುರುಹು
(
ಕಾಯುವುದು ಅನಿವಾರ್ಯ)
ಹುಡುಕಿದರೆ ಜಾಡು ತಿಳಿಯುವುದೆ
ನಿನ್ನ ತಾವು

ಸರ್ವಜ್ಞ ಕವಿ ಬಣ್ಣಿಸಿದಂಥ ಸುಂದರ, ಸುಖಮಯ ಬೆಚ್ಚಗಿನ ಜೀವನ ಸಂತೋಷ ಅನುಭವಿಸುತ್ತಿರುವ, ಇನ್ನೂ ಬಾಳಿ ಬದುಕುವ ನಿರೀಕ್ಷೆ, ಅಪೇಕ್ಷೆಯಲ್ಲಿ ಮಗ್ನವಾಗಿದ್ದ ಕವನದ ಕರ್ತೃವಿನ (Protagonist) ಬಳಿ ಸಾವು ಅರ್ಬುದ ಪೀಡೆಯ ರೂಪದಲ್ಲಿ ಬಂದು ಕುಳಿತಿರುವ ಸಂದರ್ಭ ಈ ಕವನದ ವಸ್ತು. ಈ ದಾರುಣ ಸಂದರ್ಭವನ್ನು ಮೃತ್ಯುಭೀತಿಯಿಂದ ತತ್ತರಿಸದೆ, ಭಾವುಕತೆಯ ಏರು ಅಲೆಗಳ ಬಿರುಬೀಸಿನ ಹೊಡೆತಕ್ಕೆ ಸಿಕ್ಕಿ ಕಕ್ಕಾವಿಕ್ಕಿಯಾಗದೆ, ಮನಸ್ಸಿನ ಧೃತಿತೋಲನ ಕಳೆದುಕೊಳ್ಳದೆ ಕರ್ತೃ ಎದುರಿಸುತ್ತಿದ್ದಾನೆ. ಆಧಾರದ ಅನ್ವೇಷಣೆಗೆ ಹಾತೊರೆಯುವ, ಸುತ್ತೆಲ್ಲ ನೋಡಿದರೂ’ಶೂನ್ಯ’ ಮಾತ್ರ ಕಾಣುತ್ತಿರುವಾಗ ಆಧಾರಕ್ಕಾಗಿ ಅವನನ್ನು, ಅವನ ಜಾಡನ್ನು ಹುಡುಕುವ ಕರ್ತೃವಿನ ಮನಸ್ಸು ಸಾಂಪ್ರದಾಯಿಕ ಪರಿಭಾಷೆಯಲ್ಲಿ ಹೇಳುವುದಾದರೆ – ಮುಮುಕ್ಷು ಸ್ವರೂಪದ ಮನಃಸ್ಥಿತಿಯ ಹದ, ಸಂಸ್ಕಾರ ಶ್ರುತಿಗೆ ಮಾಗುವ ಅನುಭಾವಿಕ ಕಾತರದಲ್ಲಿದೆ.

ಹುಡುಕಿದರೆ ಜಾಡು ತಿಳಿಯುವುದೆ
ನಿನ್ನ ತಾವು

– ‘ನಿನ್ನ ತಾವು’ ಅಂದರೆ ನೀನಿರುವ ಠಾವು, ನಿನ್ನ ಇರುವಿಕೆಯ ಸ್ಥಳ ಅಥವಾ ನೆಲೆ. ಅದು ಹುಡುಕಿದರೆ ಸಿಕ್ಕೇ ಸಿಕ್ಕುತ್ತದೆ ಎಂಬ ದನಿ ಈ ಸಾಲಿನಲ್ಲಿ ಇದ್ದಂತಿಲ್ಲ. ‘ತಿಳಿಯುವುದೆ ನಿನ್ನ ತಾವು’ ಎಂದು ಓದಿಕೊಂಡಾಗ ನಿನ್ನ ಜಾಡು ಬೇರೆ ಯಾರಿಂದಲೂ ತಿಳಿಯುವುದಿಲ್ಲ. ಅದು ತಿಳಿಯುವುದೇ ಆದಲ್ಲಿ ಅದು ನಿನ್ನ ತಾವು(=ನಿನ್ನ ಹತ್ತಿರ) ಮಾತ್ರ – ಕೆಂಬ ವಿಧ್ಯರ್ಥಕ ಅರ್ಥ ಸ್ಫುರಿಸುತ್ತದೆ. ‘ಹುಡುಕಿದರೆ ಜಾಡು ತಿಳಿಯುವುದೆ ನಿನ್ನ ತಾವು’ ಎಂಬುದನ್ನು ಪ್ರಶ್ನಾರ್ಥಕ ದನಿಯಲ್ಲಿ ಓದಿಕೊಂಡರೆ ಆ ಜಾಡು ತಿಳಿದೇ ತಿಳಿಯುವುದೆಂಬ ಬಗ್ಗೆ ಅನುಮಾನದ ಎಳೆ, ಸಿಗಬಹುದೇನೊ ಎಂಬ ಆಶಾವಾದದ ಎಳೆ ಇದೆಯಾದರೂ ನಿನ್ನ ಜಾಡನ್ನೇ ಹುಡುಕುತ್ತಿರುವಾಗ ಅಂದರೆ ನೀನೇ ಸಿಗದಿರುವಾಗ ನಿನ್ನನ್ನೇ ಕೇಳಿ ನಿನ್ನ ಜಾಡನ್ನು ತಿಳಿಯುವುದು ಸಾಧ್ಯವಿಲ್ಲದ ಮಾತು, ಎಂಬ ನಿಷೇದಾರ್ಥಕ ದನಿಯೂ ಹೊಮ್ಮುತ್ತದೆ. ಅದೊಂದು ಪ್ರಶ್ನೆಯಾಗಿಯೆ ಉಳಿಯುತ್ತದೆ. ಇದು ತರ್ಕದ ನೆಲೆಯ ಮಾತು. ತರ್ಕ ನಿಜ ಅಂದರೆ ತರ್ಕ ಇಲ್ಲ ಎಂದಲ್ಲ, ಅದು ಸುಳ್ಳೆಂದೂ ಅಲ್ಲ. ಆದರೆ ‘ಸತ್ಯಕ್ಕೆ ತರ್ಕ ಅನಿವಾರ್ಯವಲ್ಲ / ಅನುಭಾವಕ್ಕೆ ಪ್ರಮಾಣ ಬೇಕಿಲ್ಲ’ – ಅಂದರೆ ತರ್ಕಾತೀತವಾದದ್ದನ್ನು ತರ್ಕದಿಂದ ಅನುಭವಕ್ಕೊ, ಅರಿವಿಗೊ ತಂದುಕೊಳ್ಳುವುದು ಸಾಧ್ಯವಿಲ್ಲ; ತರ್ಕದ ನೆಲೆಯಲ್ಲಿಯೇ ಪಡೆಯಬಹುದಾದ ಅರಿವಿನಿಂದ ಇಲ್ಲಿ ಪ್ರಯೋಜನವು ಇಲ್ಲ. ಈ ಅರಿವು ಅನುಭವವೇದ್ಯ ಮಾತ್ರ. ಈ ಕವನದಲ್ಲಿ ಅಂಥ ಅನುಭಾವಿಕ ಅನುಭವಕ್ಕೆ ಧ್ವನಿ ನೀಡುವ ಯತ್ನವಿದೆ. ಧ್ವನಿವ್ಯಾಪಾರವೂ, ಆ ಮೂಲಕ ಓದುಗ ಪಡೆಯುವ ಅನುಭವವೂ ತರ್ಕದ ಸೀಮೆಯ ಒಳಗೇ ವ್ಯವಹರಿಸುವ ಅಥವಾ ವ್ಯಾಖ್ಯಾನಿಸಿಕೊಳ್ಳಬಹುದಾದ ಮುಷ್ಟಿಗ್ರಾಹ್ಯ ಸರಕಲಲ. ಅದು ಅರ್ಥತರ್ಕದ ಸೀಮೆಗೇ ಬದ್ಧವಾದುದಲ್ಲ. ಅದು ಕೂಡ ಅನುಭವ ಮಾತ್ರ ವೇದ್ಯವೇ. ಧ್ವನಿ ಅನುಭವ ವೇದ್ಯವಾದರೆ ಉಂಟು;ಇಲ್ಲದಿದ್ದರೆ ಇಲ್ಲ.

ಕವನದಲ್ಲಿ ‘ನೀನು’ ಎಂಬುದು ಅಥವಾ ಹಾಗೆ ಸಂಭೋದಿತವಾಗಿರುವವನು ‘ಸಾವು’ ಅಲ್ಲ. ‘ಸಾವು’ ಕೊಲ್ಲುವ ಶಕ್ತಿ. ಅದು ಬಳಿ ಬಂದು ಕುಳಿತಿರುವಾಗ ಈ ‘ನೀನಿ’ನ ಅಂದರೆ ಬೇರೊಬ್ಬನ ನೆನಪು, ಚಿಂತೆ ಸುಳಿದಿದೆ. ಆ ಅವನು ಈ ಸಾವಿನಿಂದ ಕಾಯುವ, ಕಾಪಾಡುವ ಶಕ್ತಿಯೊ ಅಥವಾ ಈ ಕರ್ತೃ ಜೀವ ಸಾವಿನ ಆನಂತರ ಸೇರಬೇಕಾದ ಅಥವಾ ವಿಲೀನಗೊಳ್ಳಬೇಕಾದ ಶಕ್ತಿಯೊ, ನೆಲೆಯೊ ಎಂಬುದು ಕವನದಲ್ಲಿ ಸ್ಪಷ್ಟವಾಗದಿದದರೂ ಅದೊಂದು ಕರ್ತೃ ಜೀವಕ್ಕೆ ಆಧಾರವಾಗಿ ನಿಲ್ಲುವ ಅಥವಾ ನಿಲ್ಲಬೇಕಾದ ಶಕ್ತಿ ಅಥವಾ ತಾವು ಎಂಬ ಬೋಧೆ ಓದುಗನಿಗೆ ಆಗುತ್ತದೆ. ಸಾವು ಬಳಿಬಂದು ಕುಳಿತಿರುವ ಸಂದರ್ಭದ ಯಾರೊ ಒಬ್ಬ ಸಂಸಾರವಂದಿಗ-ಗೃಹಸ್ಥ- ಈ ಕವನದ ಕರ್ತೃ; ಈ ಕವನ ಅವನಿಗೆ ಸಂಬಂಧಿಸಿದ್ದು; ಅದನ್ನು ಕವಿ ಭದ್ರಣ್ಣನವರು ಈ ಕವನದಲ್ಲಿ ಕಟ್ಟಿಕೊಡಲು ಯತ್ನಿಸಿದ್ದಾರೆ ಎಂದುಕೊಂಡು ಓದಿದಾಗ ಕವನ ಕುರಿತು ಹೇಳಬಹುದಾದಂಥ ವಿಮರ್ಶೆಯ ಮಾತುಗಳಿವು.

ಆದರೆ, ಕವನದ ಕರ್ತೃ ಕವಿ ಭದ್ರಣ್ಣನವರು ಸೃಷ್ಟಿಸಿದ ಪಾತ್ರ ಮಾತ್ರ ಅಲ್ಲ; ಸ್ವತಃ ಭದ್ರಣ್ಣನವರೇ. ಭದ್ರಣ್ಣನವರು ಸ್ವನಿಷ್ಠೆ ನೆಲೆಯ ನಿಷ್ಠುರ ವಾಸ್ತವದ ಇಂಥ ದಾರುಣ ಸಂಗತಿ, ಅನುಭವವನ್ನು ಕೂಡ, ಸಾವು ಎದುರು ಬಂದು ಕುಳಿತಿರುವ ಸ್ಥಿತಿಯಲ್ಲಿರುವ ಬೇರೆ ಯಾರದೊ ಒಬ್ಬನ ಅನುಭವದ ಕಾವ್ಯಾತ್ಮಕ ಅಭಿವ್ಯಕ್ತಿ ಎಂದುಕೊಂಡೂ ಓದುಗನು ಓದಿ ಪರಿಭಾವಿಸಿ ಮೆಚ್ಚಬಲ್ಲಂಥ, ಅರ್ಥವಿಸಿ ವ್ಯಾಖ್ಯಾನಿಸಿಕೊಳ್ಳುವಂಥ ಸಾರ್ವತ್ರಿಕ ಆಯಾಮವೂ ಇರುವ ಕವನವಾಗಿಸಿದ್ದಾರೆ. ಭದ್ರಣ್ಣನವರ ಮಾನಸಿಕದೂರ ಅಥವಾ ನಿರಪೇಕ್ಷ ನಿಲುವು ಅನುಭಾವಿಕ ಸ್ಪರ್ಶವಿರುವ ಮನಸ್ಸಿಗೆ ಸಾಧ್ಯವಾಗುವಂಥದು. ಭದ್ರಣ್ಣನವರ ಒಳಗಿನ ಕವಿ, ಚಿಂತಕ, ಅನುಭಾವಿ-ಈ ಮೂರು ಪ್ರಜ್ಞೆಗಳ ಧ್ವನಿಮೇಳನ, ದನಿಮೇಳನಗಳ ನೆಲೆಗೆ ಕವನ ಬೆಳೆದಿದೆ.ದ.ರಾ.ಬೇಂದ್ರಯವರು ಹೇಳುವಂತೆ ಪಟ್ಟಪಾಡು ಹಾಡಾಗುವ ಒಂದು ಪರಿ ಇಲ್ಲಿದೆ. ಈ ಕವನವನ್ನು ಓದುತ್ತಿರುವಾಗ ಓದುಗನಿಗೆ ಸಾರ್ಥಕ ವಚನವೊಂದನ್ನು ಓದುತ್ತಿರುವಂಥ ಅನುಭವವೂ ಆಗುತ್ತದೆ. ವಚನಕಾರರು ಇಷ್ಟದೈವದ ಎದುರಿನಲ್ಲಿ ಅದನ್ನು ಹೆಸರಿಸಿ, ಉದ್ದೇಶಿಸಿ ನಿವೇದನೆ ಮಾಡಿಕೊಂಡಂತೆ ನಿರ್ದಿಷ್ಟ ದೈವದ ಮಾತು ಮತ್ತು ಅಂಕಿತ ಇಲ್ಲಿ ಇಲ್ಲದಿದ್ದರೂ ಈ ಕವನದ ‘ನೀನು’ ಅಂಥ ಒಂದು ‘ಶರಣ ಸಂಸ್ಕೃತಿ’ ಸಂದರ್ಭ ಅಥವಾ ಸಾಂಸ್ಕೃತಿಕ ಪರಂಪರೆಯ ಭಾವಕೋಶ ಪರಿಣಾಮಗೊಳಿಸಿಕೊಟ್ಟ ‘ಕುರುಹು’ ಎಂಬಂಥ ಬೋಧೆಯಾಗುತ್ತದೆ ಯಲ್ಲವೆ? ‘ಶೂನ್ಯ’ ಪದಕ್ಕೆ ಇರುವ ಸಾಮಾನ್ಯ ಶಬ್ಧಾರ್ಥದ ಜೊತೆಗೇ ಅನುಭಾವಿಕ ಅರ್ಥವ್ಯಾಪ್ತಿಗೆ ಜಿಗಿಯುವ ಧ್ವನಿ-ಚಿಮುಕು ಕೂಡ ಅನುಭವಕ್ಕೆ ಬರುವಂತಿದೆ. ಅಲ್ಲವೆ?

‘ಅಮ್ಮ ಮತ್ತು ಸಾವು’ ಎಂಬ ಕವನವು ಅರ್ಬುದ ಅಂಟಿ ಸಾವಿನ ನಿರೀಕ್ಷೆಯಲ್ಲಿರುವ ಅಮ್ಮ ಒಳಹೊರಗೆ ಓಡಾಡಿಕೊಂಡಿರುವ ರೂಹಿಲ್ಲದ ಸಾವನ್ನು ಕಂಡು, ‘ನೋಡಿರೋ’ ಎಂದು ಹಲುಬುತ್ತಲೇ ಇದ್ದು ತೀರಿಹೋದ ಸಂದರ್ಭ ಕುರಿತ ವಸ್ತು ಉಳ್ಳದ್ದು. ಆ ಅಮ್ಮ ಇಲ್ಲವಾಗಿ, ಮನೆ – ಮಂದಿಯನ್ನು ದುಃಖ-ಬೇಗುದಿಯಾಗಿ ಆವರಿಸಿಕೊಂಡಿರುವ ಸಂದರ್ಭದಲ್ಲಿ

ನನಗಿನ್ನು ಅನುಮಾನೆ
ಸತ್ತಿಲ್ಲ ಅವಳು
ಅಂಗಳದಲ್ಲಿ ಹಬ್ಬಿದ
ಪಾರಿಜಾತ ಅಂಜೂರ ಹಲಸು
ಮರಗಳಲ್ಲಿ ಹಣ್ಣಾಗಿ ನೆರಳಾಗಿ
ತಬ್ಬುತ್ತಿದ್ದಾಳೆ
ಕುಡಿಯ ಕುಡಿಗಳ

– ಎಂಬ ಸಾಲುಗಳಿವೆ. ಕವನ ಈ ಸಾಲುಗಳ ಮೂಲಕವೆ ಕೊನೆಗೊಳ್ಳುತ್ತದೆ. ಈ ಕೊನೆಯ ಸಾಲುಗಳಲ್ಲಿ ಕಾವ್ಯ ಸ್ವಾರಸ್ಯ ಇಲ್ಲ ಎಂಬಂತಿಲ್ಲ. ಆದರೂ ಅದು ಭಾವುಕ ಸದಿಚ್ಛೆಯ ನೆಲೆಯಲ್ಲಿ ಸಮಾಧಾನ ತಂದುಕೊಳ್ಳುವ ಬಗೆಯದಾಗಿದೆ. ಅಮ್ಮನನ್ನು ಬೇರೆ ರೂಪದಲ್ಲಿ ಅನುಭವ ಗೋಚರವಾಗುವಂತೆ ಉಳಿಸಿಕೊಳ್ಳುವ ಅಥವಾ ಪಡೆದುಕೊಳ್ಳುವ ಒಳಬಯಕೆಯ ಒತ್ತಾಸೆ ತೀವ್ರವಾಗಿಯೂ ಇದೆ. ಈ ಅಮ್ಮ ಯಾರದೋ ಅಮ್ಮನಲ್ಲ; ವಾಸ್ತವದಲ್ಲಿ ಸ್ವತಃ ಭದ್ರಣ್ಣನವರ ಅಮ್ಮನೇ. ಇಂಥ ವಸ್ತುವನ್ನು ಮನಸ್ಸಿನ ನಿರಪೇಕ್ಷ ನೆಲೆಯಿಂದ ಪರಿಭಾವಿಸಿ ಕವನವಾಗಿಸುವುದು ಕಷ್ಟಸಾಧ್ಯ; ಕಠಿಣವಾದ ಸವಾಲು. ಅರ್ಬುದ ಅಂಟಿದ ತನ್ನ ಅಮ್ಮನ ಸಾವಿನ ವಸ್ತುವಿಗಿಂತ ಅರ್ಬುದ ಅಂಟಿದ ಸ್ವತಃ ತನ್ನೆದುರು ಸಾವು ಬಂದು ಕುಳಿತ ಸಂದರ್ಭದ ಅಂದರೆ ತನ್ನ ಸಾವಿಗೇ ಸಂಬಂಧಿಸಿದ ವಸ್ತುವನ್ನು ಕಾವ್ಯವಾಗಿಸುವ ಸವಾಲು ಇನ್ನೂ ಹೆಚ್ಚು ಕಠಿಣವಾದದ್ದು. ಹೀಗಿದ್ದೂ ‘ಆಧಾರ’ ಕವನದಲ್ಲಿ ಅನುಭವಕ್ಕೆ ಬರುವಂಥ ಅನುಭಾವಿಕ ಸ್ಪರ್ಶ, ಆಯಾಮ ‘ಅಮ್ಮ ಮತ್ತು ನಾನು’ ಕವನದಲ್ಲಿ ಇಲ್ಲ. ‘ಕಾಲನ ಕರೆ’ ಎಂಬ ಕವನಕ್ಕೂ ‘ಆಧಾರ’ ಕವನದಲ್ಲಿರುವಂಥ ಸಂವೇದನೆಯ ಏರು ನೆಲೆ, ಅರಿವಿನ ಪಾಕ ಬಂದಿಲ್ಲ. ಈ ಸಂದರ್ಭದಲ್ಲಿ ಭದ್ರಣ್ಣನವರ ‘ವಾಸ್ತವ’ ಎಂಬ ಮುಕ್ತಕದ,

ಸಾವಿನ ಬಗ್ಗೆ ಭಾಷ್ಯ ಬರೆದ
ಭಾಗವತರು
ಬೇನೆಯಾದಾಗ ಬದುಕಿಸಿಕೊಳ್ಳಿ
ಎಂದು ಅತ್ತರು

– ಎಂಬ ಸಾಲುಗಳನ್ನು ನೆನಪಿಸಿಕೊಂಡರೆ ಕವಿ ಭದ್ರಣ್ಣನವರ ‘ಆಧಾರ’ ಒಂದು ‘ಧೀರ ಕಿರು-ಗಾಥೆ’ಯಾಗಿಯೂ ಕಾಣಿಸೀತು.

‘ಪಿಂಚಣಿ ದಿನ’ವು ‘ಆಧಾರ’ಕ್ಕಿಂತ ಉತ್ತಮವಾದ ಕವನ, ಅದು ನೆಲ, ನೀರು, ಬೆಂಕಿ ಮೊದಲಾದ ಪಂಚಭೂತಗಳಿಗೆ ಹತ್ತಿರವಾದ ಅಂದರೆ ಸಾವಿಗೆ ಸಮೀಪವಾದ ಹಿರಿಯ ಜೀವಗಳನ್ನು ಕುರಿತದ್ದು.

ಒಳಗೆ ಸಾಯುವ ಹೊರಗೆ
ಬದುಕುವ ನಮಗೆ
ಯಾವುದೂ ಮುಖ್ಯವಲ್ಲ
ಏಕೆಂದರೆ
ಯಾವುದು ಮುಖ್ಯವೆಂದು ನಮಗೆ ಗೊತ್ತಿಲ್ಲ

ಎಂದು ಕೊನೆಯಾಗುವ ಈ ಕವನ ‘ಬದುಕಿನ ಒತ್ತಡಕ್ಕೆ ದಣಿದ’, ‘ಸಾವಿಗೆ ಕೈಕಾಲು ಬಂದಂತೆ ಸಾಗಿಬಿಡುವ’ ಪಿಂಚಣಿದಾರರ ಪಾಡು, ಪಿಂಚಣಿ ಹಣ ವಿತರಿಸುವ ಕೆಲಸದ ಒತ್ತಡದಲ್ಲಿರುವ ಬ್ಯಾಂಕಿನ ಕೆಲಸಗಾರರ ಗೊಣಗು, ಬ್ಯಾಂಕ್ ಕೆಲಸಗಾರರಲ್ಲಿಯೇ ಒಬ್ಬನಾದ ಸಂವೇದನಾಶೀಲ ಸೂಕ್ಷ್ಮ ಮನಃಸ್ಥಿತಿಯ ಕವಿಯ ಅಂದರೆ ಕರ್ತೃವಿನ ಭಾವನೆಯ ಒತ್ತಡ ಮತ್ತು ಕವನದ ಕರ್ತೃವಿನಲ್ಲಿ ಸ್ಫುರಿಸುವ ಬದುಕನ್ನು ಕುರಿತ ಭಾವುಕವಲ್ಲದ ತತ್ವ ಚಿಂತನೆಯ ಸೆಲೆ ಇವೆಲ್ಲವನ್ನೂ ಮಾತುಗಳ ದುಂದಿಲ್ಲದೆ ಭದ್ರಣ್ಣನವರು ಕನವದಲ್ಲಿ ಕಟ್ಟಿಕೊಟ್ಟಿರುವ ಪರಿ ಮೆಚ್ಚುವಂತಿದೆ.

ಈ ಕವನವನ್ನು ಓದಿ ಮುಗಿಸುತ್ತಿದ್ದಂತೆ ಪಿ. ಲಂಕೇಶರ ಶ್ರೇಷ್ಠ ಕಥೆಗಳಲ್ಲಿ ಒಮದಾದ ‘ನಿವೃತ್ತರು’ ನೆನಪು ನನ್ನ ಮನಸ್ಸಿನಲ್ಲಿ ಮಿಂಚಿತು. ವಸ್ತುವಿನಲ್ಲಿ ಪಿಂಚಣಿದಾರರಿಗೆ ಸಂಬಂಧಿಸಿದ್ದೆಂಬ ಮಟ್ಟಿನ ಸಾಮ್ಯವಿದ್ದರೂ ಅವುಗಳ ನಡುವೆ ವಿವರದಲ್ಲಿ ಸಾಮ್ಯವಿಲ್ಲ. ಎರಡು ಸ್ವೋಪಜ್ಞ ತೇಜಸ್ಸುಳ್ಳ ಕೃತಿಗಳು. ಲಂಕೇಶರ ಆ ಕಥೆಯಲ್ಲಿ ಇರುವ ಪಿಂಚಣಿದಾರರ ಸಣ್ಣತನದ ಶೋಧ ಈ ಕವನದಲ್ಲಿ ಇಲ್ಲ; ಕೆನೆಗಟ್ಟುವ ವಿಷಾದವಿದೆ. ಕವನವನ್ನು ಓದಿ ಮುಗಿಸಿದಾಗ ನನ್ನ ಮನಸ್ಸನ್ನು ತುಂಬಿದ ವಿಷಾದದಲ್ಲಿ ಆ ಸಾಮ್ಯದ ಅನುಭವವಾಯಿತು. ಲಂಕೇಶರ ಪ್ರಜ್ಞಾಸೂಕ್ಷ್ಮ ಮತ್ತು ಕತೆಕಟ್ಟುವ ಕಸಬುಗಾರಿಕೆಯ ‘ಪರಿಣತಿ’ ಈ ಕವನದಲ್ಲಿಯೂ ಅದೇ ಮಟ್ಟದ ಹದದಲ್ಲಿ ಇದೆ, ಎಂದು ಹೇಳುವುದಕ್ಕೆ ನನ್ನಲ್ಲಿ ನಸುಹಿಂಜರಿಕೆ ಇದೆ. ಆದರೆ ಅನುಭವದ ರುಚಿಸಾಮ್ಯ ನನ್ನ ಮನಸ್ಸಿನಲ್ಲಿ ತುಂಬಿದ ಕ್ಷಣಗಳಲ್ಲಿ ಸ್ವೋಪಜ್ಞ ಅಸ್ತಿತ್ವದ ಈ ಕೃತಿಗಳ ಅವಳಿ ಸಂಬಂಧದದ ವಿಶೇಷ ಬಗೆಯ ರುಚಿಸುಖವನ್ನು ನಾನು ಅನುಭವಿಸಿದೆ; ‘ಪಿಂಚಣಿ ದಿನ’ ಕವನ ‘ನಿವೃತ್ತರು’ ಕಥೆಯೊಂದಿಗೆ ಸಾಮ್ಯದ ಹೊಲಬು, ಹೋಲಿಕೆ ಉಳ್ಳದ್ದಾಗಿದದರೂ ದೂರಾನುಕರಣದ ಕೃತಿಯೆಂದು ಕೂಡ ಹೇಳಲಾಗದಂಥ ಸ್ವೋಪಜ್ಞ ಕವನವಾಗಿದೆ, ಎಂದು ಹೇಳುವುದಕ್ಕೆ ನನ್ನಲ್ಲಿ ನಸುಹಿಂಜರಿಕೆಯೊ, ಒಳಸಂಕೋಚವೊ ಇಲ್ಲ. ‘ಬದುಕು’, ‘ಬ್ಯಾಂಕಿನವರು’ ಕೂಡ ಮನಸೆಳೆಯುವಂಥ ಕವನಗಳೇ ಆದರೂ ‘ಪಿಂಚಣಿ ದಿನ’ ಕವನದಷ್ಟು ಯಶಸ್ವೀ ಕವನಗಳಾಗಿಲ್ಲ.

ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಈ ಯುಗದ ವಾಸ್ತವಕ್ಕೆ ಕವಿ ಭದ್ರಣ್ಣನವರು ಚಿಂತನ ತೀವ್ರತೆಯಲ್ಲಿ ಸ್ಪಂದಿಸಿದ್ದಾರೆ; ಈ ಸಂಕಲನದ ನಾಲ್ಕೈದು ಕವನಗಳಲ್ಲಿ ಅದೆ ವಸ್ತು ಇದೆ. ಅವುಗಳನ್ನು ಓದುತ್ತಿರುವಾಗ ಸೂಕ್ಷ್ಮ ಸಂವೇದನಶೀಲ ಚಿಂತಕ ಕವಿಯ ಜೊತೆಗೆ ಇದ್ದೇವೆ ಎಂಬಂಥ ಅನುಭವವಾಗುತ್ತದೆ. ಅಂಥ ಕವನಗಳಲ್ಲಿ ಪೂರ್ವ ನಿರ್ಧರಿತ ಅಭಿಪ್ರಾಯದ ಸೀಮೆಯಲ್ಲಿಯೆ ಸಂವೇದನೆಯ ಸಂಚಾರ ಇದೆ; ಅದಕ್ಕೆ ಭದ್ರಣ್ಣನವರು ಕಾವ್ಯ ರೂಪದಲ್ಲಿ ಚೆನ್ನಾದ ಅಭಿವ್ಯಕ್ತಿ ನೀಡಿದ್ದಾರೆ ಎನ್ನಬಹುದು. ಆ ಮಿತಿಯಲ್ಲಿಯೇ ಆದರೂ ಅವುಗಳಲ್ಲೆಲ್ಲ ‘ಅಮೇರಿಕಾ ಗಿಡ’, ‘ಹೀಗೊಂದು ಊರು ಮುಂದಿನ ಶತಮಾನದಲ್ಲಿ’ ನನಗೆ ಹೆಚ್ಚು ಮೆಚ್ಚಿಕೆಯಾದ ಕವನಗಳು. ಈ ಸಂಕಲನದ ಮುಖ್ಯ ಮತ್ತು ಉತ್ತಮ ಕವನಗಳೆಂದು ನಾನು ಹೆಸರಿಸಬಹುದಾದವುಗಳ ಪಟ್ಟಿಯಲ್ಲಿ ಆ ಎರಡೂ ಕವನಗಳು ಸೇರುತ್ತವೆ. ಆ ಎರಡೂ ಕವನಗಳ ಕೊನೆಯ ಸಾಲುಗಳು ನನಗೆ ತುಂಬ ಮೆಚ್ಚಿಕೆಯಾಗಿವೆ. ನೋಡಿ :

ಅಕಾಶ ಮುಟ್ಟಿದ ಮರ
ನೆರಳು ಇಲ್ಲ
ಕಡಿದು ಮನೆ ಕಟ್ಟಿದರು
ಶ್ರೀಮಂತರ ಹಣದ ಪೆಟ್ಟಿಗೆಯಾಯಿತು
ಬಂದೂಕಿಗೆ ಹೇಳಿ ಮಾಡಿಸಿದ ಮರ
ನಮ್ಮ ಧ್ವಜ ಹಾರುವ ಕೋಲು
ಅಂಕಲ್ ಸ್ಯಾಮರ ಮರ
ನಾವು ಸ್ವತಂತ್ರರು ಅಂದರು
ಅಮೆರಿಕನ್ನರು
ಹೌದು ಎಂದೆವು ನಾವು.

ಗಣಕ ನಡೆಸುವ ಅನುಪಾತದಲ್ಲಿ
ಹುಟ್ಟು ಸಾವು ಸುಲಭ
ಮೆದುಳು ಚಿಪ್ಪು ಕಿತ್ತರೆ ಸಾವು
ಗೆಲ್ಲಲು ಏನೂ ಇಲ್ಲದ್ದರಿಂದ
ಯುದ್ಧಗಳಿಲ್ಲ
ಹಿಜಡಾ ದೇಶದ ದೊರೆ
ಹೇಸರಗತ್ತೆ ರಾಷ್ಟ್ರಪ್ರಾಣಿ
ನಾನು ನಾನು ನಾನು ರಾಷ್ಟ್ರಗೀತೆ

ಬೇಸರವಾಯಿತೆ ಪದ್ಯ ಕೇಳಿ (‘ಹೀಗೊಂದು ಊರು ಮುಂದಿನ ಶತಮಾನದಲ್ಲಿ’)

ಬುದ್ಧ, ಗಾಂಧಿ, ಮದರ್ ಥೆರೆಸಾ, ಕುವೆಂಪು, ಕೆಎಸ್‌ನ, ಪಿ. ಲಂಕೇಶ್, ಯು.ಆರ್. ಅನಂತಮೂರ್ತಿ, ಎಚ್ಚೆಸ್ಕೆ ಮೊದಲಾದವರನ್ನು ಕುರಿತ ‘ವ್ಯಕ್ತಿ ಚಿತ್ರ ರೂಪದ ಕೆಲವು ಕವನಗಳು’ ಈ ಸಂಕಲನದಲ್ಲಿವೆ. ಅವುಗಳ ಬಗ್ಗೆ ವಿಮರ್ಶೆ, ವ್ಯಾಖ್ಯಾನಕ್ಕೆ ಹೋಗದೆ ನನಗ ಇಷ್ಟವಾದ ಕೆಲವು ಸಾಲುಗಳು ನಿಮಗೂ ಇಷ್ಟವಾಗುತ್ತವೆ ಎಂಬ ನಂಬಿಕೆಯಿಂದ ಕೃತಿಪ್ರವೇಶರುಚಿಗೆಂದು ಇಲ್ಲಿ ಉದ್ಧರಿಸುತ್ತೇನೆ:

ನಿನ್ನ ಲೆಕ್ಕ ಇಟ್ಟವರ ಸೊಕ್ಕೆಲ್ಲಾ
ನಿನ್ನ ಮುಖದ ಸುಕ್ಕಲ್ಲಿ
ಮಾಯ !
ದೇವರೇ ನೀನು
ಕರುಣಾಮಯಿಯಾಗಿದ್ದರೆ
ಥೆರೆಸಾ ಚಿರಂಜೀವಿಯಾದ
ಮೊದಲ ಹೆಣ್ಣಾಗಬೇಕಿತ್ತು   (‘ಮದರ್ ಥೆರೆಸಾ’)

ಗಡ್ಡ ಋಷಿಗಳ ಮಾತು
ಹಳ್ಳಿ ಹೈದನ ಕೊರಳಲ್ಲಿ
ಬೇಡ ಮುನಿ ನುಡಿದ
ಯುಯುಗದ ಹಾಡು
ಬೆಟ್ಟ ಬಾಲನ ಕೈಯಲ್ಲಿ
ಕಣ್ಣಲ್ಲಿ ಕೊರಳಲ್ಲಿ ಕರುಳಲ್ಲಿ……
ಸಾವಿಲ್ಲದ ಸಾವಿರುವ
ಮನೆಯಲ್ಲಿ ಬಿಟ್ಟ
ಕುರುಹು
ನುಡಿ ಕೊಳಲು     (‘ಕುವೆಂಪು’)

ಪ್ರೀತಿ ಪ್ರೇಮಕ್ಕೆ
ಮೈ ತೆರೆಯುವ ಹೆಣ್ಣಿನಂತೆ
ಸಾವಿಗೆದುರಾದ ಪ್ರವಾದಿಯಂತೆ
ಸೋತ ಅನುಭವವಿಲ್ಲದ
ಗೆಲ್ಲಲೇಬೇಕೆಂಬ ಹಠದ ಕುದುರೆಯಂತೆ
ನೆಲಕೆದರಿ
ಬಿಸಿಯುಸಿರಿನಲ್ಲಿ
ಅವಸರದಲ್ಲಿ ಬರೆದು ಬಂದು ಹೋದ….
ಬರೆಯುವಾಗ
ಒದರಿದ ಶಾಯಿಯಲ್ಲಿ
ಹುಟ್ಟಿದವು
ಹಲವು ಅಣಬೆಗಳು
ಕೆಲವು ಹಣತೆಗಳು (‘ಲಂಕೇಶ್’)

You are only Murthy (Idol)
ಆಗಿಬಿಡಬಹುದೆ?
ಇಲ್ಲ
ಕುದುರೆಯನೇರಿದ ನೇಸರಿನಿಗೂ
ಆಗಾಗ ಗ್ರಹಣ
ಬಿಟ್ಟರೆ
ಮುಚ್ಚಿಡಲಾಗದ ಬೆಳಕು (‘You Are Only A Murthy’)

ಸಂಕಲನದಲ್ಲಿ ನನಗೆ ತುಂಬ ಇಷ್ಟವಾದ ಕವನಗಳಲ್ಲಿ ಒಂದಾದ ‘ಮೌಲ್ಯಪಾಠ’ದ ಬಗ್ಗೆ ಹಾಗೂ ಮತ್ತಿತರ ಕೆಲವು ಕವನಗಳ ಬಗ್ಗೆ ಕೂಡ ಒಂದಷ್ಟು ಬರೆಯಬೇಕೆಂದು ಅನಿಸುತ್ತದೆ. ಆದರೆ ಮುನ್ನುಡಿ ಈಗಾಗಲೇ ಪ್ರಬಂಧದ ರೂಪ ಪಡೆದುಕೊಳ್ಳುತ್ತಿರುವುದರಿಂದ ಬರವಣಿಗೆಯನ್ನು ಮತ್ತೂ ಬೆಳೆಸುವುದು ಯುಕ್ತವಲ್ಲ, ಎಂದುಕೊಂಡಿದ್ದೇನೆ. ಆದರೂ ನನಗೆ ಪ್ರಿಯವಾದ ಇಷ್ಟವಾದ ಸಾಲುಗಳಲ್ಲಿ ಕೆಲವನ್ನಾದರೂ ಓದುಗರೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆ. ಓದಿ :

ಕುಳಿತು ನಿಂತಲ್ಲೆಲ್ಲಾ ಕನಸು.
ರುದ್ರನುರಿಗಣ್ಣ ಭಸ್ಮ ಮೈಲೈಪನ
ಹಾಯ್ ತೆಕ್ಕೆ ತೊಡೆ ತಿರುವು
ನಾಭಿ ಸುಳಿ
ಹತ್ತಿ ಮೈ ಹಗುರ, ಬೆವರಸುಖ
ಬತ್ತಲಾಗುವುದು ಸುಲಭವಲ್ಲ
ಬತ್ತಲಾದರು ಬಯಲಾಗುವುದು ಸಾಧ್ಯವೇ ಇಲ್ಲ.
(ಸಿದ್ಧಾರ್ಥನೂ ಇದರಲ್ಲಿ ಮುಳುಗೆದ್ದೇ ಆಮೇಲೆ ಬುದ್ಧನಾದದ್ದು)    (‘ವೃತ್ತ’)

ನಾನು ಸುಳ್ಳು ಹೇಳುವುದು
ನನ್ನನ್ನು ಮರುಹುಟ್ಟಿಸಿಕೊಳ್ಳಲು
ಬಾಲ್ಯದಲ್ಲಿ ಆಟವಾಗಿದ್ದು
ಬದುಕಿನಲ್ಲಿ ಚಟವಾಗಿದೆ
ಬೇಸರವಿಲ್ಲ ಸಂಕೋಚವಿಲ್ಲ
ಇಲ್ಲದ ಲೋಕ ಹುಟ್ಟಿಸಿ
ಅಲ್ಲಿಗೆ ಹೋಗಲು ಇಲ್ಲಿ
ಮೂಗು ಹಿಡಿದು ಉಪವಾಸ ಮಾಡಿ
ಹೋಗುವ ಹೊತ್ತು ಬಂದು
ಇಲ್ಲೆ ಇರಲು ಬಯಸುವುದು
ಅದು ಸುಳ್ಳಿರದ ಸತ್ಯ (‘ನಾನು ಸುಳ್ಳು ಹೇಳುವುದು’)

ನಿಯತ್ತಿನ ಮರದಲ್ಲಿ
ನಿಜದ ಹೂ ಬಿಟ್ಟು
ಪ್ರೀತಿಯ ಚಿಟ್ಟೆ
ಮುತ್ತಿಟ್ಟರೆ
ಧರ್ಮ ಫಲಬಿಟ್ಟಿತು (‘ಧರ್ಮ’)

ಆಳದಲ್ಲಿ ಸತ್ತ ಮನಸ್ಸು
ಸುಖಪಡುವುದಿಲ್ಲ ಯಾವುದಕ್ಕು
ಸಂಬಂಧಕ್ಕೆ ಸ್ಪಂದಿಸದೆ
ಏಕಾಂತದಲ್ಲಿ ನರಳುತ್ತದೆ
ಸಾವು ಕೂಡ ಮುಟ್ಟುವುದಿಲ್ಲ (‘ನಾರ್ಸಿಸಸ್’)

ನನ್ನದಾಗುವುದಿಲ್ಲ ಇಳೆಯೊಳಗೆ ಯಾವುದೂ
ತಿಳಿಯಿತಾ ಮಗುವೆ
ತಲೆ ಕೆರೆದುಕೊಂಡ ಶಿಷ್ಯ
ಜೊತೆಗಿದ್ದ ಮಾತ್ರಕ್ಕೆ ಶಿಷ್ಯರೆಲ್ಲಾ
ಬುದ್ಧರಾಗಬಲ್ಲರೆ? (‘ಬುದ್ಧ-ಬೈಗುಳು’)

ಅದ್ಭುತವಾಗಿ ಭಗವದ್ಘೀತೆಯನ್ನು
ವಾಚಿಸುತ್ತಿದ್ದ ಆಚಾರ್ಯರ ಕಣ್ಣು
ಸರಿದ ಸೆರಗಿನೆಡೆ ಹರಿದದ್ದು
ಸಹಜ ಸ್ವಭಾವದಿಂದಲೇ ಹೊರತು
ಅಧ್ಯಾತ್ಮದ ಅಭಾವದಿಂದಲ್ಲ (‘ಸ್ವಭಾವ’)

ತಿಕಬಿಟ್ಟ ಗಂಡಸು
ಮೊಲೆ ಬಿಟ್ಟ ಹೆಂಗಸು
ಬಟ್ಟೆಯಿಲ್ಲದ ಹಾದಿಯಲ್ಲಿ
ನಡೆದಾಗ
ಹಾರಿ ಬಂದು ತಬ್ಬಿಕೊಂಡ
ಎಲೆ ಬಟ್ಟೆಯಾಯ್ತು
ಬೊಬ್ಬೆಹೊಡೆದ ಹುಲಿಗೆ
ಹೆದರಿ ತಬ್ಬಿದಾಗ
ಸೇಬು ತಿನ್ನುವ ಕಥೆಗೆ
ಆದಿಯಾಯ್ತು      (‘ಮನುಕುಲದ ಹಾಡು’)

ಮಾತು ಕೊಳೆತು ನಾರುತ್ತದೆ
ಸತ್ತವನ ಬಳಿ
ಮಾತು ಮೌನವಾಗುತ್ತದೆ
ಸತ್ತವನವಳ ಬಳಿ
ಮಾತು ಅನಾಥವಾಗುತ್ತದೆ
ಸತ್ತವನ ಮಕ್ಕಳ ಬಳಿ
ಮಾತು ವಾಗರ್ಥ ವಿಧವೆಯಾಗುತ್ತದೆ
ಸತ್ತವನ ಅವನವಳ
ತಾಯಂದಿರ ಬಳಿ (‘ಮಿತಿ’)

ಮಲ್ಲಿಗೆಯ ಕವಿಯಾಗಿ
ನನ್ನವಳ ಬಣ್ಣಿಸಲು ಹೋದೆ
ಮಾತು ಸಾಕಾಗದೆ
ಮೌನವಾದೆ
ನರೆತ ಕೂದಲಿಗೆ ಬಣ್ಣ ಹಚ್ಚುವಾಗ
ಕದ್ದುನೋಡಿ
ಮುಪ್ಪು ಮುಂದುವರಿಯಿತೆ ಎಂದಾಗ
ಅವಳು ನಕ್ಕ ನಗೆಗೆ
ವಯಸ್ಸೇ ಇರಲಿಲ್ಲ…..
ಅರ್ಥ ಕೋಶದ ಸ್ನೇಹ ಪ್ರೀತಿ ಪ್ರೇಮ ಕಾಮ
ಎಲ್ಲ ಅರ್ಥಗಳ ಮೀರಿದ್ದು
ನಮ್ಮ ಸಂಬಂಧ
ಅರ್ಥವಾಗುವುದಕ್ಕೇ ಬೇಕು
ಕಣ್ಣ ಭಾಷೆಯ ವ್ಯಾಕರಣದರಿವು
ಕರುಳ ಮೌನದ ರಾಗ (‘ನನ್ನವಳು ೨’)

ಒಂದು ಸುಳ್ಳನ್ನೂ ಬರೆಯುವುದಿಲ್ಲ
ಎಂದು ಪೆನ್ನು ಹಠ ತೊಟ್ಟಿದ್ದರೆ
ಜಗತ್ತಿನಲ್ಲಿ ಒಂದು ಕವನವೂ ಸೃಷ್ಟಿಯಾಗುತ್ತಿರಲಿಲ್ಲ (‘ಮೀಮಾಂಸೆ’)

ಗಾಳಿ ಹಾಡುವ ಹಾಡು
ನದಿಯು ನುಡಿಸುವ ರಾಗ
ಬೆಟ್ಟ ತಾಳುವ ಮೌನ ಗೊತ್ತಾದರೆ
ಕವನ (‘ಕವನ ೧’)

ತಿಳಿನೀರ ಮೀನು
ಆಳಕ್ಕಿಳಿದು ಮೇಲಕ್ಕೆ ಚಿಮ್ಮಿ
ಸುತ್ತಿ ಸುಳಿದು ನಿಶ್ಚಲ ನಿಂತು
ಧ್ಯಾನಸ್ಥ ಕಣ್ಣು ಅಲ್ಲಾಡುವ ರೆಪ್ಪೆ
ನಿಟ್ಟುಸಿರ ನೀರ್ಗುಳ್ಳೆ
ಪಾತಾಳ ಮೂಸಿ ಬಯಲು ಬಿಸಿಲಿಗೆ
ಮೈಯೊಡ್ಡೆ
ಹೆಜ್ಜೆ ಮೂಡದ ಜಾಡಿನಲ್ಲಿ
ಜಾರಿ ಹೋಗುವ ಮುನ್ನ
ಗಾಳಕ್ಕೆ ಸಿಕ್ಕ
ಮೀನು   (‘ಕವನ ೨’)

ನನ್ನ ಕಾಲದ ಬದುಕ
ಹಿಡಿದಿಡಲು ಪದಗಳಿಗಾಗಿ
ಕದ ತಟ್ಟುತ್ತಿದ್ದೇನೆ ಗೊತ್ತಿದ್ದರೆ
ತಿಳಿಸಿ ಸ್ವಾಮಿ
ಎಲ್ಲವನ್ನು ಎಲ್ಲರನ್ನು ಕವನವಾಗಿಸುವ
ಕಸುವನ್ನ
ಹಾದರ ಮಾಡದ ಪದಗಳನ್ನ
ಕಂದನ ತೊದಲ್ನುಡಿಯ ಸತ್ಯವನ್ನ
ಪ್ರೇಮಿಗಳ ಪಿಸುಮಾತ ಗತಿಯನ್ನ
ನೋವ ನಿಟ್ಟುಸಿರ ನಿಜವನ್ನ
ಕಡೆಗೆ ಸಾವಿನಾಚೆಯ
ಮೌನದ ಪರಿಭಾಷೆಯನ್ನ
ಹಿಡಿದಿಡುವ ಪದಗಳ
ಗೊತ್ತಿದ್ದರೆ ತಿಳಿಸಿ ಸ್ವಾಮಿ   (‘ಬರೆಯುವಾಗ’)

ಮಾತುಗಾರ ಸನ್ಯಾಸಿ
ಮೌನವ್ರತವನಾಚರಿಸಿ
ಒಳಗೆ ಮಾತ ಹುಡುಕುತ್ತಿದ್ದ
ಗೊತ್ತೆಂಬ ಬುಡುಬುಡಿಕೆ
ದಾಸಯ್ಯನ ಸೊತ್ತೆಂದು     (‘ಶಬ್ದಕಂಜಿ’)

– ಜೀವನದ ಬಗ್ಗೆ, ಮನುಷ್ಯ ಸಂಬಂಧದ ಬಗ್ಗೆ, ಕಾವ್ಯದ ಬಗ್ಗೆ ಭದ್ರಣ್ಣನವರ ಅರಿವು, ವಿವೇಕದ ಸ್ವರೂಪ, ಗುಣಮಟ್ಟವನ್ನು ಈ ಸಾಲುಗಳು ತಿಳಿಸುವಂತಿವೆ. ಅವುಗಳಿಗೆ ವಿಮರ್ಶೆ, ವ್ಯಾಖ್ಯಾನದ ಊರುಗೋಲಿನ ಅಗತ್ಯವಿಲ್ಲ. ಅವು ಸದಭಿರುಚಿಯ ಸಂಸ್ಕಾರವುಳ್ಳ ಓದುಗರಿಗೆ ಆತ್ಮೀಯವಾಗುತ್ತವೆ, ಎಂಬ ನಂಬಿಕೆಯಿಂದಲೇ ಹೀಗೆ ಉದ್ಧರಿಸಿದ್ದೇನೆ.

ಇಂಥ ನಿಜದ ಕವಿ, ನಿಜವಾದ ಕವಿ ಭದ್ರಣ್ಣನವರು ಇಷ್ಟು ಪ್ರೌಢ, ಪ್ರಬುದ್ಧರಾಗುವವರಗೂ ಒಂದು ಕವನ ಸಂಕಲನವನ್ನೂ ಪ್ರಕಟಿಸದೆ ಮೌನವಾಗಿ ಇದ್ದದ್ದೇಕೆ, ಎಂಬ ಪ್ರಶ್ನೆಯೇನೊ ಎದುರಾಗುತ್ತದೆ. ಉತ್ತರಕ್ಕೆ ಬೇರೆಲ್ಲೂ ಹುಡುಕಬೇಕಾಗಿಲ್ಲ. ಅವರ ‘ಬರೆಯುವಾಗ’ ಎಂಬ ಕವನದ ಕೆಲವು ಸಾಲುಗಳನ್ನು ಉದ್ಧರಿಸುತ್ತೇನೆ. ಅದೇ ಉತ್ತರವಾದೀತು. ನೋಡಿ :

ನಿನ್ನೊಳಗೆ ಏನಂಥ ಒತ್ತಾಯವಿತ್ತು
ಇದನ್ನು ಬರೆಯುವಾಗ
ಸಾವಿತ್ತೆ ಸೋಲಿತ್ತೆ ನೋವಿತ್ತೆ ನಲಿವತ್ತೆ
ಬೆವರಿದೆಯಾ ಬೆದರಿದೆಯಾ
ಬತ್ತಲಾದೆಯಾ ಬಯಲಾದೆಯಾ
ಬರೆಯುವಾಗ
ಶಬ್ದದ ನಿರ್ಗುಳ್ಳೆಯೊಡೆದು
ನಿಶ್ಶಬ್ದವ ನೇವರಿಸಿದೆಯ
ಕಂಡೆಯಾ ಶಬ್ದ ಸೂತಕವ ಕಳೆದ
ಅಜಗಣ್ಣನ…..
ಮುಗಿಯಿತೆ ನಿನ್ನ ಕವನ
ಮತ್ತೆ ಓದಿದೆಯ
ನೀನೆಷ್ಟಿರುವೆ ಅದರೊಳಗೆ

ಅತೀತದ ಪ್ರಶ್ನೆ
ಕವನ ಸಂಭವಿಸುತ್ತದೆ
ಆಗುವುದಿಲ್ಲ
ವಾಸ್ತವದ ಉತ್ತರ
ಕವನ ಆಗುತ್ತದೆ

ಏನಾದರಾಗಲಿ
ನೀನೆ ಕವನವಾಗುವ ತನಕ
ಮೌನವಾಗಿರು ಮೌನವಾಗಿರು
ಮೌನವಾಗಿರು.

* ಕೆ.ಎಸ್. ಭದ್ರಣ್ಣನವರ ‘ನದಿಯ ತೀರದ ಮರಳು’ (೨೦೦೫) ಕವನ ಸಂಕಲನಕ್ಕೆ ಬರೆದ ಮುನ್ನುಡಿ.