ಡಾ || ಬಿ.ಎಸ್.ಎನ್. ಪ್ರಸಾದ್ ಈ ‘ನಿರಂತರ’ದ ಕಂಪ್ಯೂಟರ್ ಟೈಪಿಂಗ್ ಹಂತದಲ್ಲಿದ್ದ ಡೆಮಿ ಆಕಾರದ ಮುನ್ನೂರೈವತ್ತಕ್ಕಿಂತ ಹೆಚ್ಚು ಪುಟಗಳ ಬರವಣಿಗೆಯನ್ನು ನನಗೆ ಕೊಟ್ಟು ಒಮ್ಮೆ ಓದಿ ನೋಟಿ, ಕೃತಿ ಓದಿಸಿಕೊಳ್ಳುತ್ತದೆಯೆ, ಪ್ರಕಟಣೆಗೆ ಯೋಗ್ಯವೇ ಎಂಬ ಬಗ್ಗೆ ನನ್ನ ಆಭಿಪ್ರಾಯ ತಿಳಿಸಿ ಎಂದು ತುಂಬ ಸಂಕೋಚದಿಂದಲೇ ಕೇಳಿದರು. ಅದು ನನಗೆ ಒಂದು ಅನಿರೀಕ್ಷಿತ ಕೋರಿಕೆಯಾಗಿತ್ತು ಇಷ್ಟು ಧೀರ್ಘ ಬರಹ ಓದಿ ಅಭಿಪ್ರಾಯ ಹೇಳುವುದಕ್ಕೆ ಅಗತ್ಯವಾದಷ್ಟು ಬಿಡುವು ನನಗೆ ಇರಲಿಲ್ಲ. ಉತ್ಸಾಹವೂ ಇರಲಿಲ್ಲ. ನನ್ನದೇ ಬರವಣಿಗೆಯ ಕೆಲಸ ಕೈತುಂಬ ಇತ್ತು. ಆದರೆ, ಡಾ. ಪ್ರಸಾದ್ ಅವರ ಕೋರಿಕೆಯನ್ನು ಒಪ್ಪದೆ ಇರುವುದಕ್ಕೂ ಮನಸ್ಸು ಒಪ್ಪಲಿಲ್ಲ. ಅದಕ್ಕೆ ಕಾರಣವಿತ್ತು.

೧೯೭೯ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ನನಗೆ ಸಾಹಿತಿ ಸಂಚಾರ ಅನುದಾನ (Authors’ Travel Grant)ವನ್ನು ಆಯಾಚಿತವಾಗಿ, ಅನಿರೀಕ್ಷಿತವಾಗಿ ನೀಡಿತ್ತು. ಒರಿಸ್ಸಾ, ಪಶ್ಚಿಮ ಬಂಗಾಲ, ಅಸ್ಸಾಂ, ಮೇಘಾಲಯಗಳಿಗೆ ಸಂಚಾರ ಹೋಗಿ ಆ ಪ್ರದೇಶಗಳ ಸಾಹಿತಿಗಳನ್ನು ಹಾಗೂ ಸಾಹಿತ್ಯ ಸಂಸ್ಕೃತಿ ಸಂಬಂಧವಾದ ಸಂಘ ಸಂಸ್ಥೆಗಳನ್ನು ಸಂದರ್ಶಿಸಿ ಬರುವುದು ಆ ಸಂಚಾರದ ಯೋಜನಾ ಭಾಗವಾಗಿತ್ತು. ನಾನು ಒರಿಸ್ಸಾಕ್ಕೆ ಹೋದಾಗ ಭುವನೇಶ್ವರದ ಉತ್ಕಲ ವಿಶ್ವವಿದ್ಯಾನಿಲಯದಲ್ಲಿ ಪ್ರಸಾದ್ ‘ಭೂವಾತಾವರಣ’ಕ್ಕೆ ಸಂಬಂಧಿಸಿದಂತೆ ಪಿ.ಎಚ್.ಡಿ. ಪದವಿಗೆಂದು ಸಂಶೋಧನೆಯಲ್ಲಿ ತೊಡಗಿದ್ದರು. ಒಂದು ಕಾಲದಲ್ಲಿ ನನ್ನ ವಿದ್ಯಾರ್ಥಿಯಾಗಿದ್ದು, ಮುಂದೆ ಸಹೋದ್ಯೋಗಿಯಾಗಿದ್ದು, ಈವರೆಗೂ ಆತ್ಮೀಯ ಕಿರಿಯ ಸ್ನೇಹಿತರಾಗಿರುವ ಡಾ. ಪಂಡಿತಾರಾಧ್ಯರು ಆಗ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ವಿಸ್ತರಣೆಯಾಗಿದ್ದ ಕೊಣಾಜೆಯ ಮಂಗಳ ಗಂಗೋತ್ರಿಯಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಪ್ರಸಾದ್ ಅವರೂ ಅಲ್ಲಿಯೆ ಭೌತವಿಜ್ಞಾನ ವಿಭಾಗದಲ್ಲಿ ಅಧ್ಯಾಪಕರಾಗಿದ್ದ ಕಾಲದಲ್ಲಿ ಪರಸ್ಪರರಲ್ಲಿ ಬೆಳೆದ ಸ್ನೇಹ, ಆತ್ಮೀಯತೆಯ ಕಾರಣದಿಂದಾಗಿ ಪಂಡಿತಾರಾಧ್ಯರು ನಾನು ಭುವನೇಶ್ವರಕ್ಕೆ ಬರಲಿರುವುದನ್ನು ಪ್ರಸಾದ್ ಅವರಿಗೆ ಮುಂದಾಗಿ ತಿಳಿಸಿ, ಒರಿಸ್ಸಾಕ್ಕೆ ಹೊಸಬನಾದ ನನಗೆ ಅಲ್ಲಿ ನನ್ನ ಸಂಚಾರದಲ್ಲಿ ಜೊತೆಗಿದ್ದು, ನೆರವು ನೀಡಬೇಕೆಂದು ಬರೆದಿದ್ದರು.

ಆ ಸಂಚಾರ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ನನಗೆ ಖರ್ಚು ವೆಚ್ಚಕ್ಕೆ ಇಂತಿಷ್ಟು ಹಣವೆಂದು ನಿಗದಿಗೊಳಿಸಿತ್ತು. ಇಂತಿಷ್ಟೇ ದಿನಗಳ ಪ್ರವಾಸ ಎಂದು ನಿಗದಿ ಮಾಡಿರಲಿಲ್ಲ. ಆದ್ದರಿಂದ ನಾನು ಸಂಚಾರ ಹೋದ ರಾಜ್ಯ, ಪ್ರದೇಶಗಳಲ್ಲಿ ನನ್ನ ಆಯ್ಕೆಯ ಪ್ರೇಕ್ಷಣಿಯ ಸ್ಥಳಗಳಿಗೂ ನನ್ನ ಖರ್ಚಿನಲ್ಲಿ ಹೋಗಿ, ನೋಡಿ ಬರುವ ಯೋಜನೆ ಹಾಕಿಕೊಳ್ಳಬಹುದಾದ ಸ್ವಾತಂತ್ರ್ಯ ನನಗೆ ಯಥೇಚ್ಛವಾಗಿ ಇತ್ತು. ಅದನ್ನು ಬಳಸಿಕೊಂಡಿದ್ದೆ.

ಪ್ರಸಾದ್ ಅವರು ಪೂರ್ವಪರಿಚಿತನಲ್ಲದ ನನ್ನನ್ನು ಭುವನೇಶ್ವರಕ್ಕೆ ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು. ನನ್ನೊಟ್ಟಿಗೆ ಮೂರೊ ನಾಲ್ಕೊ ದಿನ ಕಳೆದಿದ್ದರು. ಭುವನೇಶ್ವರದ ಪ್ರೇಕ್ಷಣೀಯ ಸ್ಥಳಗಳಾದ ಉದಯಗಿರಿ, ಖಂಡಗಿರಿ, ಧವಳಗಿರಿ, ಕಳಿಂಗ ಯುದ್ಧವನ್ನು ಗೆದ್ದ ಅಶೋಕ ಚಕ್ರವರ್ತಿ ಆ ಸ್ಥಳದಲ್ಲಿ ಬರೆಸಿದ್ದ ಚಾರಿತ್ರಿಕ ಮಹತ್ವದ ಶಾಸನ, ವಾಸ್ತುಶಿಲ್ಪ ಖ್ಯಾತಿಯ ಲಿಂಗರಾಜ ದೇವಾಲಯ ತೋರಿಸಿದ್ದರು. ಭುವನೇಶ್ವರದ ಹೊರಗೂ ಪುರಿ ಜಗನಾಥ ದೇವಾಲಯ, ಆದಿಶಂಕರಾಚಾರ್ಯರು ಸ್ಥಾಪಿಸಿದ್ದ ನಾಲ್ಕು ಧರ್ಮಪೀಠಗಳಲ್ಲಿ ಒಂದಾದ ಪುರಿ ಧರ್ಮಪೀಠ, ಮಿಥುನಶಿಲ್ಪ ಖ್ಯಾತಿಯ ಕೊನಾರ್ಕ್‌ದ ಸೂರ್ಯ ದೇವಾಲಯ – ಹೀಗೆ ಹಲವು ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದರು. ಭುವನೇಶ್ವರ, ಕಟಕ್‌ಗಳಲ್ಲಿರುವ ಸಾಹಿತಿಗಳನ್ನು,ಸಂಸ್ಥೆಗಳನ್ನು ಸಂದರ್ಶಿಸುವುದಕ್ಕೆ ಸಂಬಂಧಿಸಿದಂತೆ ಅರವಿಂದ ಪಟ್ನಾಯಕ್ ಎಂಬ ಮಿತ್ರರು ನೆರವು ನೀಡಿದ್ದರು. ಒರಿಯಾ ಭಾಷೆಯ ಪ್ರಸಿದ್ಧ ಸಾಹಿತ್ಯ ವಿಮರ್ಶಕರಾದ ಇಂಗ್ಲಿಷ್ ಪ್ರಾಧ್ಯಾಪಕ ಡಾ. ಜತೀಂದ್ರನಾಥ ಮೊಹಂತಿಯವರು ಕೆಲವು ಸಾಹಿತಿಗಳನ್ನು ಭೇಟಿ ಮಾಡಿಸಿದ್ದರು. ನಾನು ಬೇಟಿ ಮಾಡಬೇಕಾದ ಜ್ಞಾನಪೀಠ ಪ್ರಶಸ್ತಿ ಪಡೆದ ಗೋಪಿನಾಥ ಮೊಹಂತಿ ಮೊದಲಾದ ಸಾಹಿತಿಗಳ ಹೆಸರುಗಳನ್ನು ಸೂಚಿಸಿದ್ದರು.ಉತ್ಕಲ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದಲ್ಲಿ ಪ್ರಾಚೀನ ಮತ್ತು ಆಧುನಿಕ ಕನ್ನಡ ಸಾಹಿತ್ಯ ಕುರಿತಂತೆ ನನ್ನ ಉಪನ್ಯಾಸ ಏರ್ಪಡಿಸಿದ್ದರು. ಆ ವಿವರಗಳೆಲ್ಲ ಇಲ್ಲಿ ಬೇಡ.

ಕೊನರ್ಕ್‌ಗೆ ಹೋದಾಗ ಅಲ್ಲಿನ ಕಡಲ ದಂಡೆಗೂ ಪ್ರಸಾದ್, ನಾನು ಹೋಗಿದ್ದೆವು. ಪಶ್ಚಿಮ ಕರಾವಳಿಯವನಾದ ನಾನು ಬಂಗಾಳ ಕೊಲ್ಲಿಯ ಸಮುದ್ರತೀರವನ್ನು ನೋಡಿದ್ದು ಅದೇ ಮೊದಲ ಸಲವಾಗಿತ್ತು. ಕಡಲ ದಂಡೆಗೆ ನಾವು ಹೋಗಿದ್ದಾಗ ಮಧ್ಯಾಹ್ನ, ಸೂರ್ಯನನ್ನು ಒಂದು ಘಳಿಗೆ ಮರೆಮಾಡುತ್ತ, ಇನ್ನೊಂದು ಘಳಿಗೆ ಬಿಡುತ್ತ ನೆರಳು ಬೆಳಕಿನ ಮುಟ್ಟುವ ಬಿಡುವ ಆಮೋದದ ಆಟದಲ್ಲಿ ಮೋಡಪಡೆ ತೊಡಗಿದಂತಿತ್ತು. ಬಿಸಿಲೂ ಅಲ್ಲದ ತಂಪೂ ಅಲ್ಲದ ವಾತಾವರಣ ನಿರ್ಮಾಣವಾಗಿತ್ತು. ಆ ಕಡಲ ದಂಡೆಯನ್ನುಕಂಡ ಉತ್ಸಾಹದಲ್ಲಿ ದ.ರಾ.ಬೇಂದ್ರೆಯವರ ಕೆಲವು ಕವನಗಳನ್ನು, ಗೋಪಾಲಕೃಷ್ಣ ಅಡಿಗರ ‘ಮೋಹನ ಮುರಲಿ’ ಕವನವನ್ನು ಬಾಯ್ತುಂಬ, ಕಂಠದ ತ್ರಾಣ, ದನಿಗೈವ ಶಕ್ತಿಯನ್ನು ಸ್ವಚ್ಛಂದ ಸ್ವಾತಂತ್ರ್ಯದಿಂದ ಬಳಸಿ ಹಾಡಿ ತಣಿಯುವ ಉಮೇದು, ಹುಕಿ ನನ್ನಲ್ಲಿ ಏಕೊ ಉಕ್ಕಿ ಬಂದಿತ್ತು. ಬಹಳ ದಿನಗಳ ನಂತರ ಬೇಂದ್ರೆ ಕವನಗಳನ್ನು ಬಾಯ್ದುಂಬಿ, ಮನದುಂಬಿ, ಎದೆದುಂಬಿ ಹಾಡುವ ಸ್ಫೂರ್ತಿಗೆ ನೆರೆ ಬಂದಿತ್ತು. ಹಾಡಿ ತಣಿದೆ; ದಣಿಯಲಿಲ್ಲ. ಆಗಿನ ನನ್ನ ಹಾಡುಗಾರಿಕೆಗೆ ಕಡಲ ಮೊರೆತದ ಹಿಮ್ಮೇಳ; ಪ್ರಸಾದ್ ಅವರು ಏಕೈಕ ಕೇಳುಗ, ರಸಿಕ, ಸಹೃದಯ. ಅದೊಂದು ನನ್ನ ಮಟ್ಟಿಗೆ ಅವಿಸ್ಮರಣೀಯ ಅಮೋದ ಆನಂದ ಉಕ್ಕಿಸಿದ ಸಮಯವಾಗಿತ್ತು. ನನ್ನ ಆ ಹಾಡುಗಾರಿಕೆ – ಕಾಡುಗಿಡದ ಹಾಡುಪಾಡಿನಂಥ ಶಾಸ್ತೀಯ ಸಂಸ್ಕಾರವಿಲ್ಲದ ನನ್ನ ಆ ಹಾಡುಗಾರಿಕೆ – ಪ್ರಸಾದ್ ಅವರ ನೆನಪಿನಲ್ಲಿಯೂ ಉಳಿದುಕೊಂಡಿದೆ. ಅವರ ಈ ಕೃತಿ ‘ನಿರಂತರ’ದಲ್ಲಿ ಆ ಬಗ್ಗೆ ಕೂಡ ಪ್ರಸಾದ್ ಬರೆದಿದ್ದಾರೆ.

ಪ್ರಸಾದ್ ಅವರು ಆ ಪ್ರವಾಸ ಕಾಲದಲ್ಲಿ ತೋರಿದ ಸ್ನೇಹಪರತೆ, ಸಜ್ಜನಿಕೆ ನನ್ನ ಮನಸ್ಸು ತುಂಬಿತ್ತು. ಅವರ ಆ ಋಣ ಮರೆಯುವಂಥದಲ್ಲ. ಆ ಮೇಲಿನ ವರ್ಷಗಳಲ್ಲಿ ಮೈಸೂರಿನಲ್ಲಿ ಪರಸ್ಪರ ಭೇಟಿಯಾದಾಗ ನಾವು ಮುಗುಳ್ನಗೆಯ, ಸದ್ಭಾವನೆಯ ಒಂದೆರಡು ಮಾತುಗಳ ವಿನಿಮಯ ಮಾಡಿಕೊಂಡದ್ದೆಷ್ಟೊ, ಅಷ್ಟೆ. ಅವರು ಮೈಸೂರಿನ ಮಾನಸಗಂಗೋತ್ರಿಗೆ ವರ್ಗ ಮಾಡಿಸಿಕೊಂಡು ಬಂದ ೧೯೮೧ರ ಕಾಲಸಂದರ್ಭ ಹಿತಕರವಾದದ್ದಾಗಿರಲಿಲ್ಲ. ಅವರಿಗೆ ೧೯೮೦ರಲ್ಲಿ ಪತ್ನಿ ವಿಯೋಗ ಉಂಟಾಗಿತ್ತು. ಆ ಸಂಗತಿ ನನಗೆ ಗೊತ್ತಾದದ್ದು ಎಷ್ಟೋ ಕಾಲದ ಮೇಲೆ – ಪಂಡಿತಾರಾಧ್ಯರ ಮೂಲಕ. ಪ್ರಸಾದ್ ಮನಸ್ಸನ್ನು ಒಂದು ಸಹಜ ಸ್ಥಿತಿಗೆ ತಂದುಕೊಳ್ಳುವ ಯತ್ನದಲ್ಲಿದ್ದ ಕಾಲ ಅದಾಗಿತ್ತೆಂದು ತೋರುತ್ತದೆ. ಭುವನೇಶ್ವರದಲ್ಲಿ ಕುಡಿಯೊಡೆದ ಸ್ನೇಹವು ನಿಕಟ ಒಡನಾಟದಲ್ಲಿ ಪಲ್ಲವಿಸುವ ಸಂದರ್ಭ ಏಕೊ ಉಂಟಾಗಿರಲಿಲ್ಲ. ಅಥವಾ ನನ್ನ ಅವರ ಜ್ಞಾನಾಸಕ್ತಿ ಕ್ಷೇತ್ರದ ವ್ಯತ್ಯಾಸವೂ ಬಹುಶಃ ಅದಕ್ಕೆ ಕಾರಣವಾಗಿರಬಹುದು. ಹಾಗೆಂಬಂತೆಯೂ ಇಲ್ಲವೇನೊ ! ಮಾನಸಗಂಗೋತ್ರಿಯ ಭೌತವಿಜ್ಞಾನ ವಿಭಾಗದ ಅವರ ಸಹೋದ್ಯೋಗಿಗಳಾಗಿದ್ದ ಡಾ. ಎಚ್.ಸಂಜೀವಯ್ಯ, (ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ) ಡಾ. ಎಸ್.ಗೋಪಾಲ್, ಡಾ. ಎಂ.ಎಸ್. ಮಾಧವ ಅವರುಗಳ ಮತ್ತು ನನ್ನ ಸ್ನೇಹ ಸಾಕಷ್ಟು ನಿಕಟವಾಗಿಯೆ ಇತ್ತು. ಈ ಮೂವರ ಪ್ರಸ್ತಾಪವೂ ಪ್ರಸಾದ್ ಅವರ ‘ನಿರಂತರ’ದಲ್ಲಿ ಬಂದಿದೆ.

ಡಾ. ಎಚ್. ಸಂಜೀವಯ್ಯನವರನ್ನು ಕುರಿತ ಪ್ರಸ್ತಾಪವಂತೂ ಮೇಲಿಂದ ಮೇಲೆ ‘ನಿರಂತರ’ ದಲ್ಲಿ ಬಂದಿದೆ. ಗಾಂಧೀವಾದಿ ಡಾ. ಎಚ್. ಸಂಜೀವಯ್ಯನವರು ಸಜ್ಜನರಾಗಿದ್ದರು ; ತತ್ವನಿಷ್ಠರಾಗಿದ್ದರು. ಅಂತರ್ಜಾತೀಯ ವಿವಾಹ ಮಾಡಿಕೊಂಡವರಾಗಿದ್ದರು. ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತರಾಗಿದ್ದಾಗಲೂ ಅವರಿಗೆ ಸ್ವಂತದ್ದೆಂಬ ಒಂದು ಮನೆ ಇರಲಿಲ್ಲ. ಅವರ ಶಿಷ್ಯ ಪ್ರೀತಿ, ಅವರು ತಮಗೆ ನೀಡಿದ ಪ್ರೋತ್ಸಾಹ, ಮಾರ್ಗದರ್ಶನಗಳನ್ನು ಪ್ರಸಾದ್ ಪ್ರೀತಿ, ಗೌರವ, ಕೃತಜ್ಞತಾಭಾವದಿಂದ ಗ್ರಂಥದಲ್ಲಿ ಸ್ಮರಿಸಿಕೊಂಡಿದ್ದಾರೆ. ಅಲ್ಲೆಲ್ಲ ಡಾ. ಸಂಜೀವಯ್ಯನವರ ಸಾತ್ವಿಕ ವ್ಯಕ್ತಿತ್ವದ ಪ್ರಭೆ ಬೆಳಗುವುದರ ಜೊತೆಗೆ ಪ್ರಸಾದ್ ಅವರ ಗುಣಗ್ರಾಹಿ ಮತ್ತು ಋಣನೆನಕೆ ಕುರಿತಂಥ ಮನಸ್ಸಿನ ಸಂಸ್ಕಾರವೂ ಅಷ್ಟೇ ಢಾಳವಾಗಿ ಬೆಳಗುತ್ತದೆ. ಡಾ. ಸಂಜೀವಯ್ಯನವರು ಈಗ ಬದುಕಿದ್ದು ಈ ‘ನಿರಂತರ’ವನ್ನು ಓದುವ ಅವಕಾಶ ದೊರೆತಿದ್ದರೆ ಧನ್ಯತೆಯ ಭಾವ ಸಂತೋಷವನ್ನು ಖಂಡಿತ ಅನುಭವಿಸುತ್ತಿದ್ದರು.

‘ನಿರಂತರ’ ಒಂದು ಆತ್ಮ ಚರಿತ್ರಾತ್ಮಕ ಬರಹ. ಹಳ್ಳಿಯಿಂದ ದಿಲ್ಲಿ ದ್ವೀಪಾಂತರಗಳವರೆಗಿನ ಸಂಪರ್ಕ, ಸಹವಾಸ, ಮನುಷ್ಯ ಸಂಬಂಧ, ಸಂಶೋಧನೆಗಳಿಗೆ ಸಂಬಂಧಿಸಿದಂಥ ಪ್ರಸಾದ್ ಅವರ ಸ್ವಾನುಭವದ ನಿರೂಪಣೆ ಈ ಗ್ರಂಥದಲ್ಲಿದೆ. ಅವರ ಸ್ವಂತದ ಮತ್ತು ಕೌಟುಂಬಿಕ ಬದುಕಿನ ಸುಖ-ಸಂತೋಷ, ಕಷ್ಟ-ಕೋಟಲೆಗಳಿಗೆ ಸಂಬಂಧಿಸಿದ ವಿವರಗಳದ್ದು ಒಂದು ವಾಹಿನಿ, ಅವರ ಅಧ್ಯಯನಾಸಕ್ತಿಯ ‘ಭೂ ವಾತಾವರಣ’ ವಿಜ್ಞಾನ ಕ್ಷೇತ್ರದ ಸಂಶೋಧನೆ, ಗೋಷ್ಠಿ, ಸಭೆ, ಸಮ್ಮೇಳನಗಳಿಗೆ ಸಂಬಂಧಿಸಿದ ವಿವರಗಳದ್ದು. ಇನ್ನೊಂದು ವಾಹಿನಿ. ಆ ಸಂಶೋಧನೆ, ಗೋಷ್ಠಿ, ಸಭೆ ಸಮ್ಮೇಳನಗಳಿಗೆ ಹೋದಾಗ ಪಡೆದ ಅನುಭವಗಳಿಗೆ, ನೋಡಿದ ಸ್ಥಳಗಳಿಗೆ, ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಗೆ ಸಂಬಂಧಿಸಿದ ವಿವರಗಳದ್ದು ಮಗದೊಂದು ವಾಹಿನಿ. ಈ ಮೂರು ವಾಹಿನಿಗಳು ಒಂದರೊಡನೊಂದು ಹೆಣೆದುಕೊಳ್ಳುತ್ತ ಸಾಗುವುದರಿಂದ ‘ನಿರಂತರ’ದ ಸ್ವಾರಸ್ಯ, ಉಪಯುಕ್ತತೆ, ಓದಿಸಿಕೊಳ್ಳುವ ಗುಣ ಹೆಚ್ಚಿದೆ.

ಹಳ್ಳಿಯ ಮುಗ್ಧ ಬಾಲಕನ ಟೆಂಟ್ ಸಿನಿಮಾಗಳ ಬಗೆಗಿನ ಕುತೂಹಲ, ಬೆರಗು, ಊರಜಾತ್ರೆ ಹಬ್ಬಗಳನ್ನು ಕುರಿತಂಥ ತನ್ಮಯಶೀಲ ಉತ್ಸಾಹ, ದೆವ್ವ ದೇವರುಗಳನ್ನು ಕುರಿತ ನಂಬಿಕೆ, ಅವುಗಳನ್ನು ಕುರಿತ ಜನಜನಿತ ಕಥೆ, ತಿರುಪತಿ ತಿಮ್ಮಪ್ಪನ ಕಳ್ಳ ಒಕ್ಕಲಿಗ ಸಂಬಂಧಿಸಿದ ಪುರಾಣ, ಆ ಸಂಬಂಧವಾದ ಭಾವನಾ ಪ್ರಪಂಚದ ವಿವರ, ಅಂಚೆ ಹುಡುಗನಾಗಿದ್ದ ಪ್ರಾರಂಭದ ಉದ್ಯೋಗದ ಕಾಲದ ಮಾವಿನಕಾಯಿ ಪ್ರಕರಣ ಹಾಗೂ ಸಂಬಳ ಹಣದ ವಿಚಿತ್ರ ವಿಲೇವಾರಿ, ಕುಟುಂಬ ಜೀವನದ ಏರುಪೇರುಗಳು, ಅವು ತಂದ ಅನುಭವಗಳು, ಬಿಕ್ಕಟ್ಟುಗಳು, ಅವುಗಳನ್ನು ಎದುರಿಸಿ ಜೀರ್ಣಿಸಿಕೊಂಡು ಬಾಳನ್ನು ಸಹ್ಯವಾಗುವಂತೆ ನೆಮ್ಮದಿಯ ನೆಲೆ ಕಂಡುಕೊಳ್ಳುವಂತೆ ತಿರುಗಿ ಕಟ್ಟಿಕೊಂಡ ಪರಿ – ಇವುಗಳನ್ನು ಕುರಿತ ಬರವಣಿಗೆಗಳು ಆಸಕ್ತಿಯಿಂದ ಓದಿಸಿಕೊಳ್ಳುತ್ತದೆ.

ಪ್ರವಾಸಪ್ರೀತಿ ಪ್ರಸಾದ್ ಅವರ ಜೀವದ ಒಳ ಎಳೆತದ ಮುಖ್ಯ ಅಂಶಗಳಲ್ಲಿ ಒಂದು. ಬಾಲ್ಯದಿಂದಲೂ ಅದೊಂದು ಗೀಳು ಎಂಬಂತೆ ಅವರ ಬೆನ್ನು ಬಿಡದೆ ಅದು ಹಿಂಬಾಲಿಸಿಕೊಂಡು ಬಂದಂತೆ ತೋರುತ್ತದೆ. ಅದೇನಿದ್ದರೂ ದಣಿವರಿಯದ ಅವರ ಪ್ರವಾಸಪ್ರೀತಿ ಗಮನ ಸೆಳೆಯುವಂತಿದೆ. ಪ್ರಸಾದ್ ಅವರು ತಮ್ಮ ಪ್ರವಾಸಪ್ರೀತಿಗೆ ತಮ್ಮ ಅಧ್ಯಯನ ಮತ್ತು ಸಂಶೋಧನಾಸಕ್ತಿಯ ಚೌಕಟ್ಟಿನಲ್ಲಿಯೆ ಸಮೃದ್ಧ ಅವಕಾಶಗಳನ್ನು ಪಡೆಯುವಂತಾದದ್ದು ಒಂದು ವಿಶೇಷ.

ಭೂ ವಾತಾವರಣ ವಿಜ್ಞಾನ ವಿಷಯದ ಗೋಷ್ಠಿ, ಸಭೆ, ಸಮ್ಮೇಳನಗಳಿಗೆ ಆಹ್ವಾನಿತರಾಗಿ ಅವರು ದೇಶವಿದೇಶಗಳನ್ನು ಯಥೇಚ್ಛವಾಗಿ ಸುತ್ತಿದವರು.ಕೆನಡಾದ ಒಟ್ಟಾವ (೧೯೮೨), ಪೂರ್ವ ಜರ್ಮನಿಯ ಬರ್ಲಿನ್ (೧೯೮೪), ಜೆಕೊಸ್ಲಾವಾಕಿಯಾದ ಪ್ರಾಗ್ (೧೯೮೯), ಇಂಡೋನೇಷ್ಯಾದ ಬಾಲಿದ್ವೀಪ (೧೯೯೫),ಜಪಾನಿನ ನಗೋಯಾ (೧೯೯೭), ಯುಎಸ್‌ಎದ ಸ್ಯಾಟಲ್ (೧೯೯೮), ನೆದರ್ ಲ್ಯಾಂಟ್ಸ್‌ನ ನೂರ‍್ಡ್ಜ್‌ವಿಕರಹೌಟ್ (೧೯೯೯), ಇಟಲಿಯ ಬಲೋನಿಯಾ (೧೯೯೯), ಯುಎಸ್‌ಎದಸಿಯಾಟಲ್-ಟಾಕೊಮಾ (೧೯೯೯), ರಷ್ಯಾದ ನೊವೊಸಿಬಿರಸ್ಕ್ (೨೦೦೦), ಯುಎಸ್‌ಎದ ಸೈಂಟ್‌ಲೂಯಿಸ್ (೨೦೦೦), ಯುಎಸ್‌ಎ ದ ಪೋರ್ಟ್‌ಲೆಂಡ್ (೨೦೦೧), ಫ್ರಾನ್ಸ್‌ನ ವಾರ್ಸೆಲ್ಸ್ (೨೦೦೩)- ಹೀಗೆ ಹತ್ತು ಹಲವು ದೇಶಗಳ ಪ್ರವಾಸದ ಅವಕಾಶಗಳನ್ನು ಸುಮಾರು ಎರಡು ದಶಕಗಳ ಕಾಲಾವಧಿಯಲ್ಲಿಯೆ ಪ್ರಸಾದ್ ಅವರ ಶೈಕ್ಷಣಿಕ ಅಧ್ಯಯನ ಸಂಶೋಧನೆ ಕ್ಷೇತ್ರದ ಸಾಧನೆ ತಂದುಕೊಟ್ಟಿದೆ. ಬಂದ ಒಂದು ಅವಕಾಶವನ್ನೂ ತಪ್ಪಿಸಿಕೊಳ್ಳದೆ ಅಥವಾ ಬಿಟ್ಟುಕೊಡದೆ ಬಳಸಿಕೊಳ್ಳುವ ಅವರ ಆಸಕ್ತಿ, ಉತ್ಸಾಹಕ್ಕೆ ಬಾಲ್ಯದಿಂದಲೂ ಅವರಲ್ಲಿ ಬೆಳೆದು ಬಂದ ಪ್ರವಾಸಪ್ರೀತಿಯೂ ಒಂದು ಕಾರಣವಾಗಿರಬಹುದು. ಅದೇನೇ ಇದ್ದರೂ ಒದಗಿಬಂದ ಅವಕಾಶಗಳನ್ನು ಬಳಸಿಕೊಳ್ಳುವ ಪ್ರಸಾದ್ ಅವರ ಮನೋಧರ್ಮ ಎಳೆಯರಿಗೆ ಅನುಕರಣೀಯವಾಗಿದೆ.

ಪ್ರಸಾದ್ ಅವರ ಅಧ್ಯಯನ ಕ್ಷೇತ್ರದಲ್ಲಿ ಹೆಸರು ಮಾಡಿದ ಭಾರತೀಯ ಮತ್ತು ವಿದೇಶೀಯ ವಿಜ್ಞಾನಿ ವಿದ್ವಾಂಸರ ಸಂಪರ್ಕ, ಒಡನಾಟ, ಬೆಳೆಸಿಕೊಂಡ ಆತ್ಮೀಯತೆ ಕುರಿತ ವಿವರಗಳು ಈ ಗ್ರಂಥದ ಉದ್ದಕ್ಕೂ ಇವೆ. ಅವರು ವ್ಯಕ್ತಿ ಸಂಬಂಧವನ್ನು ಬೆಳೆಸಿಕೊಳ್ಳುವ, ಕಾಪಾಡಿಕೊಳ್ಳುವ ಸಹೃದಯತೆಯಿಂದ ಪೋಷಿಸಿಕೊಳ್ಳುವ ಕರ್ಲೆ ಬಲ್ಲವರು. ಸಂಬಂಧಪಟ್ಟ ವಿದ್ವಾಂಸರ, ಸಂಶೋಧಕರ ವೈಯಕ್ತಿಕ ವೈಪರೀತ್ಯಗಳಿಂದ, ಹಿರಿಯ ವಿದ್ವಾಂಸರ, ಸಂಶೋಧಕರ ನಡುವಿನ ವೈಮನಸ್ಯ, ಜಿದ್ದಿನ ಒಳಜಗಳ ಶೀತಲ ಸಮರಗಳ ಕಾರಣದಿಂದ ಪ್ರಸಾದ್ ಮುಜಗರಕ್ಕೆ, ತೊಂದರೆಗೆ, ಅಧ್ಯಯನ ಸಂಶೋಧನೆಯ ಅಡ್ಡಿ ಆತಂಕಕ್ಕೆ ಗುರಿಯಾದ ಸಂದರ್ಭಗಳೂ ಉಂಟು. ಅಂಥ ಸಂದರ್ಭಗಳನ್ನು ನಿಭಾಯಿಸುವುದಕ್ಕೆ ಸಂಬಂಧಿಸಿದಂತೆ ಪ್ರಸಾದ್ ನಡೆದುಕೊಳ್ಳುವ ರೀತಿ, ವಿಧಾನಗಳು ಕೂಡ ಎಳೆಯ ಸಂಶೋಧಕರು ಗಮನಿಸುವಂತಿದೆ.

ಈ ಪುಸ್ತಕದಲ್ಲಿ ಪ್ರಸಾದ್ ಅವರ ಜ್ಞಾನಕ್ಷೇತ್ರದ ವಿದ್ವಾಂಸರು ಹಾಗೂ ಆಯಾ ಕಾಲಸಂದರ್ಭದಲ್ಲಿ ಶೈಕ್ಷಣಿಕ (ಅಕೆಡೆಮಿಕ್) ಆಡಳಿತ ವ್ಯವಹಾರ ನೋಡಿಕೊಳ್ಳುವ ಜವಾಬ್ದಾರಿ ಸ್ಥಾನ-ಹುದ್ದೆಗಳಲ್ಲಿದ್ದವರು ಅವರಿಗೆ ನೀಡಿದ ನೆರವು, ಮಾಡಿದ ಸಹಾಯಗಳನ್ನು ಕೂಡ ಅವರು ಸೌಜನ್ಯಪೂರ್ವಕವಾಗಿ ನೆನೆದಿದ್ದಾರೆ. ಅವರಿಗೆ ತೊಂದರೆ ಕೊಟ್ಟವರೂ, ಅವರ ಶೈಕ್ಷಣಿಕ ಕೆಲಸ, ಸಂಶೋಧನೆಗಳಿಗೆ ಅಡ್ಡಗಾಲು ಹಾಕಿದವರೂ, ಅನಿಮಿತ್ತ ಅಸಹನೆ ತೋರಿದವರೂ ಇದ್ದಾರೆ. ಅಂಥ ಸಂದರ್ಭ, ವ್ಯಕ್ತಿಗಳ ಬಗ್ಗೆಯೂ ಬರೆದಿದ್ದಾರೆ. ಅಂಥ ಕಡೆಗಳಲ್ಲಿಯೂ ಪ್ರಸಾದ್ ಸಂಯಮ ಸಡಿಲುಬಿಟ್ಟು ಉಗ್ರ ಅಸಹನೆಯಿಂದ ಬರೆಯುವುದಿಲ್ಲ. ಅಂಥವರ ಸಾಧನೆ, ಗುಣಾಂಶಗಳನ್ನು ಕೂಡ ಮರೆಮಾಡದೆ ಹೇಳುವಂಥ ವಸ್ತುನಿಷ್ಠತೆಯನ್ನು ಪ್ರಸಾದ್ ತೋರಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಗೋಷ್ಠಿ ಸಭೆ-ಸಮಾವೇಶಗಳಲ್ಲಿ ಭಾಗವಹಿಸಲು ಪ್ರಸಾದ್ ಅವರಿಗೆ ಅವಕಾಶ ದೊರೆತದ್ದು ೧೯೮೨ ರಿಂದ. ಆಮೇಲಿನ ವರ್ಷಗಳಲ್ಲಿ ಮೇಲಿಂದ ಮೇಲೆ ಅಂಥ ಅವಕಾಶಗಳ ಸರಣಿಯೆ ತೊಡಗಿತ್ತು. ಪ್ರಸಾದ್ ಅವರಿಗೆ ಅವರ ಮೊದಲ ಪತ್ನಿ ಸ್ವರ್ಣ ಅವರ ವಿಯೋಗವಾದದ್ದು ೧೯೮೦ರಲ್ಲಿ. ಈ ‘ನಿರಂತರ’ವನ್ನು ಆ ಪತ್ನಿಯ ನೆನಪಿಗೆ ಅರ್ಪಿಸಿದ್ದಾರೆ. ಸಂಸಾರ ಜೀವನದಲ್ಲಿ ಇಂಥ ಆಘಾತಕರ ಘಟನೆ ನಡೆದರೂ ಧೈರ್ಯಗುಂದದೆ ಪ್ರಸಾದ್ ಜೀವನಾಸಕ್ತಿ, ಅಧ್ಯಯನಾಸಕ್ತಿಗಳನ್ನು ಕಳೆದುಕೊಳ್ಳದೆ ಕಾಪಾಡಿಕೊಂಡು, ಬೆಳೆಸಿಕೊಂಡು ಬಂದದ್ದು ಸಾಮಾನ್ಯ ಸಂಗತಿಯೇನಲ್ಲ. ಪತ್ನಿ ಬಿಟ್ಟು ಹೋದ ಇಬ್ಬರು ಹೆಣ್ಣುಮಕ್ಕಳ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆ ಒಂದು ಕಡೆ, ಮರುಮದುವೆ ಬಾಳಿಗೆ ತಂದ ಪತ್ನಿ ಶ್ರೀಮತಿ ಪದ್ಮ ಅವರ ಸಹಕಾರದೊಂದಿಗೆ ಒಟ್ಟು ಕೌಟುಂಬಿಕ ಬದುಕನ್ನು ಸಾಮರಸ್ಯದ ನೆಮ್ಮದಿಯ ನೆಲೆಗೆ ತೂಗಿಸಿಕೊಳ್ಳುವ ಸವಾಲು ಇನ್ನೊಂದು ಕಡೆ. ಇವೆರಡನ್ನು ಘನತೆ, ಗೌರವದಿಂದ ನಿಭಾಯಿಸಿದ ಪ್ರಸಾದ್ ಅವರ ಜೀವನ ಪ್ರೀತಿ, ಜೀವನ ಸ್ವೀಕಾರ ಶ್ರದ್ಧೆ ಪ್ರಶಂಸಾರ್ಹ ಮಟ್ಟದಾಗಿ ಕಾಣಿಸುತ್ತದೆ. ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬಾಕೆ ಯುಎಸ್‌ಎ ದಲ್ಲಿ, ಇನ್ನೊಬ್ಬಾಕೆ ಮುಂಬಯಿಯಲ್ಲಿ ನೆಮ್ಮದಿಯ ಸಂಸಾರ ಜೀವನ ಪಡೆದುಕೊಂಡು ಸುಖವಾಗಿರುವುದು, ಶ್ರೀಮತಿ ಪದ್ಮ ಮತ್ತು ಆ ಹೆಣ್ಣುಮಕ್ಕಳ ಸಂಬಂಧವು ಕಿಲುಬು ಕಿಲ್ಬಿಷವಿಲ್ಲದೆ ಶುಚಿಯಾಗಿರುವುದು ‘ನಿರಂತರ’ದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುವ ಕೌಟುಂಬಿಕ ಜೀವನದ ನಿರೂಪಣೆಗಳ ಮೂಲಕ ಓದುಗರ ಅನುಭವಕ್ಕೆ ಬರುತ್ತದೆ. ಇದು ಕೂಡ ಪ್ರಸಾದ್ ಅವರ ಅಧ್ಯಯನ ಕ್ಷೇತ್ರದ ಸಾಧನೆಗಿಂತ ಕಡಿಮೆ ಮಟ್ಟದಲ ಎಂಬುದು ನನ್ನ ಅನಿಸಿಕೆ. ಈ ವಿಷಯದಲ್ಲಿ ಶ್ರೀಮತಿ ಪದ್ಮ ಅವರು ಮತ್ತು ಆ ಮಕ್ಕಳು-ತಾರಾ, ಹೇಮ-ಕೂಡ ಡಾ. ಪ್ರಸಾದರಷ್ಟೇ ಅಭಿನಂದನೆ, ಪ್ರಶಂಸೆಗೆ ಅರ್ಹರು, ಎಂದು ಯಾರಿಗಾದರೂ ಅನಿಸುತ್ತದೆ.

ಡಾ. ಬಿ.ಎಸ್.ಎನ್. ಪ್ರಸಾದ್ ಅವರು ಕನ್ನಡ ಭಾಷೆಯನ್ನು ಸಮರ್ಥವಾಗಿ ಬಳಸಬಲ್ಲರು. ಈ ‘ನಿರಂತರ’ ಅದಕ್ಕೆ ಉತ್ತಮ ನಿದರ್ಶನವಾಗಿದೆ. ಈ ಪುಸ್ತಕವನ್ನು ಕನ್ನಡ ಓದುಗರು ಸ್ವಾಗತಿಸುತ್ತಾರೆ. ಪ್ರೋತ್ಸಾಹಿಸುತ್ತಾರೆ ಎಂದು ನಂಬಿದ್ದೇನೆ. ಪ್ರಸಾದ್ ಅವರು ಕನ್ನಡದಲ್ಲಿ ಇನ್ನೂ ಹೆಚ್ಚು ಹೆಚ್ಚು ಬರವಣಿಗೆ ಮಾಡಬೇಕು ಎಂಬುದು ನನ್ನಂಥವರ ಕೋರಿಕೆಯಾಗಿದೆ. ಅವರ ಅಧ್ಯಯನಕ್ಷೇತ್ರದ ವಿಷಯಗಳಿಗೆ, ಸಂಶೋಧನೆಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ವಿವರ ವಿಸ್ತಾರದಲ್ಲಿ ಕನ್ನಡದಲ್ಲಿ ಅವರು ಬರೆಯಬೇಕು. ‘ನಾವು ಮತ್ತು ವಿದ್ಯುತ್ತು’ ೨೦೦೨), ‘ನಿರಂತರ’ (೨೦೦೩) ದಂಥ ಪುಸ್ತಕಗಳನ್ನು ಬರೆದಿರುವ ಪ್ರಸಾದ್ ಅವರಿಂದ ಅಂಥ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದಾಗಿದೆ.

ವಿಜ್ಞಾನ/ತಂತ್ರಜ್ಞಾನ ಕ್ಷೇತ್ರದ ಅಧ್ಯಯನ, ಸಂಶೋಧನೆ, ಶೋಧನೆಗಳ ಬಗ್ಗೆ ಕನ್ನಡನಾಡಿನ ವಿಜ್ಞಾನ/ತಂತ್ರಜ್ಞಾನ ಕ್ಷೇತ್ರದ ಸಂಶೋಧಕರು, ಅಧ್ಯಾಪಕರು ಕನ್ನಡದಲ್ಲಿಯೂ ಬರೆಯಬೇಕಾದ ಅಗತ್ಯವಿದೆ. ಈಗ ಕನ್ನಡದಲ್ಲಿ ಬಂದಿರುವಷ್ಟು ಅಂಥ ಬರವಣಿಗೆಗಳು ಏನೇನು ಸಾಲವು. ಕನ್ನಡ ನಾಡಿನ ಜನಸಂಸ್ಕೃತಿಯೊಂದಿಗೆ ವಿಜ್ಞಾನ/ತಂತ್ರಜ್ಞಾನ ಕ್ಷೇತ್ರದ ಧೀಮಂತರ, ವಿದ್ವಾಂಸರ, ಸ್ವೋಪಜ್ಞ ಸಂಶೋಧಕರ ಜ್ಞಾನ ಸಂಪತ್ತು ಎಷ್ಟು ಸಹಜವಾಗಿ, ಎಷ್ಟು ಪ್ರಯೋಜನಕಾರಿಯಾಗಿ ಒಡಬೆರೆಯಬೇಕಾಗಿತ್ತೊ ಅಷ್ಟು ಬೆರೆಯಲಿಲ್ಲ ಎಂದು ಯಾರಿಗಾದರೂ ಅನಿಸುತ್ತದೆ. ಇದಕ್ಕೆ ಕಾರಣಗಳೇನು ಎಂಬ ಪ್ರಶ್ನೆ ಕುರಿತಂತೆ ಸಂಬಂಧಪಟ್ಟವರು ಗಂಭೀರವಾಗಿ ಚಿಂತಿಸಬೇಕಾಗಿದೆ.

ವಿಜ್ಞಾನ/ತಂತ್ರಜ್ಞಾನ ವಿದ್ಯಾರ್ಥಿಗಳು ಕಲಾ ವಿಭಾಗದ ವಿದ್ಯಾರ್ಥಿಗಳಿಗಿಂತ ಹೆಚ್ಚು ಚುರುಕು ಬುದ್ಧಿಯವರು. ಹೆಚ್ಚಿನ ಪ್ರತಿಭಾವಂತರು ಎಂಬುದು ಸಾಮಾನ್ಯ ತಿಳಿವಳಿಕೆ, ಅದು ನಿಜವಲ್ಲ ಎಂಬಂತಿಲ್ಲ. ವಿದ್ಯಾರ್ಥಿ ದೆಸೆಯಲ್ಲಿರುವಾಗ ನಮ್ಮ ಮಕ್ಕಳಲ್ಲಿ ಯಾರು ಹೆಚ್ಚು ಚೆನ್ನಾಗಿ ಓದಿನ ಬಗ್ಗೆ ಆಸಕ್ತಿ ತೋರಿಸುತ್ತಾರೋ, ಸೂಕ್ಷ್ಮಮತಿಗಳೆಂದು ಸೂಕ್ಷ್ಮ ಗ್ರಾಹಿಗಳೆಂದು ಗುರುಗಳ, ಹಿರಿಯರ ದೃಷ್ಟಿಯಲ್ಲಿ ಮೇಲೆದ್ದು ಕಾಣಿಸಿಕೊಳ್ಳುತ್ತಾರೋ ಅವರೇ ಬಹುಪಾಲು ಕೆಲವು ಅಪವಾದಗಳಿರಬಹುದಾದರೂ – ವಿಜ್ಞಾನ/ತಂತ್ರಜ್ಞಾನ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಓದುತ್ತಾರೆ. ತಮ್ಮ ಮಕ್ಕಳು ಅಷ್ಟು ಸೂಕ್ಷ್ಮ ಮತಿಗಳಲ್ಲ, ಸೂಕ್ಷ್ಮ ಗ್ರಾಹಿಗಳಲ್ಲ ಎಂದು ತಂದೆ-ತಾಯಿಯವರಿಗೆ ಗೊತ್ತಾದರೂ ವಿಜ್ಞಾನ-ತಂತ್ರಜ್ಞಾನ ವಿಷಯಗಳನ್ನೇ ಅಧ್ಯಯನ ವಿಷಯವಾಗಿ ಆಯ್ಕೆ ಮಾಡಿಕೊಂಡು ಹೆಚ್ಚಿನ ಪರಿಶ್ರಮ ಹಾಕಿಯಾದರೂ ತಮ್ಮ ಮಕ್ಕಳು ಓದಬೇಕೆಂದು ಅವರು ಮಕ್ಕಳ ಮೇಲೆ ಒತ್ತಡ ಹೇರುವುದು, ‘ಟ್ಯೂಷನ್’ ಹೇಳಿಸುವಂಥ ಹೆಚ್ಚುವರಿ ಪಾಠದ ವ್ಯವಸ್ಥೆ ಮಾಡಿಕೊಡುವುದು, ಹೆಚ್ಚಿನ ‘ಡೊನೇಷನ್’ ಹಣವನ್ನಾದರೂ ಕೊಟ್ಟು ಕಾಲೇಜಿಗೆ, ‘ಕೋರ್ಸಿ’ಗೆ ಸೇರಿಸುವುದು ಕೂಡ ಸಾಮಾನ್ಯ ಎಂಬಂತಾಗಿದೆ. ಕಲಾ ವಿಭಾಗಕ್ಕೆ ಸೇರಿರುವವರು, ಹೀಗೆ ವಿಜ್ಞಾನ/ತಂತ್ರಜ್ಞಾನ ವಿಭಾಗಕ್ಕೆ ಸೇರಲಾಗದೆ ಉಳಿದುಕೊಂಡಿರುವವರು ಎಂಬ ಸ್ಥಿತಿ ಉಂಟಾಗಿದೆ.

ನಮ್ಮ ನಾಡಿನಲ್ಲಿ ಸ್ಪರ್ಧಾತುರದಲ್ಲಿ, ತುರುಸಿನ ಪೈಪೋಟಿಯಲ್ಲಿ ರಾಂಕ್‌ಗಳಿಸಲು, ಹೆಚ್ಚಿನ ಅಂಕಗಳನ್ನು ಗಳಿಸಲು ಜೀವ ತೇಯುವ ವಿಜ್ಞಾನ/ತಂತ್ರಜ್ಞಾನದ ವಿದ್ಯಾರ್ಥಿಗಳು ಅವರ ಅಧ್ಯಯನ ವಿಷಯದ ಜ್ಞಾನ ಗಳಿಕೆಯಲ್ಲಿ ಹೆಚ್ಚು ಯಶಸ್ವಿಗಳಾದರೂ ಅವರು ಪಡೆದ ಜ್ಞಾನಸಂಪತ್ತು ನಾಡಿನ ಜನಸಂಸ್ಕೃತಿಯ ಜೊತೆಗೆ ಒಡಬೆರೆತು ಪ್ರಯೋಜನಕಾರಿಯಾಗುವುದರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಫಲಪ್ರದವಾಗುತ್ತಿಲ್ಲ. ಏಕೆ? ಸಾಹಿತ್ಯ, ಕಲೆಯಂಥ ಮಾನವಿಕ ವಿಭಾಗದವರು ಸಾಮಾನ್ಯವಾಗಿ ವಿಜ್ಞಾನ/ತಂತ್ರಜ್ಞಾನ ವಿಭಾಗದವರಷ್ಟು ಪ್ರತಿಭಾವಂತರಲ್ಲದಿದ್ದರೂ, ಅಷ್ಟು ಹರಿತ ಬುದ್ಧಿಶಕ್ತಿಯವರಲ್ಲದಿದ್ದರೂ ವಿಜ್ಞಾನ/ತಂತ್ರಜ್ಞಾನ ವಿಭಾಗದ ವಿದ್ವಾಂಸರಿಗಿಂತ ಹೆಚ್ಚು ಮಹತ್ವದ ಸಾಂಸ್ಕೃತಿಕ ವ್ಯಕ್ತಿತ್ವಗಳೆಂದು, ಜನಸಂಸ್ಕೃತಿಗೆ ಹೆಚ್ಚಿನ ಕೊಡುಗೆ ನೀಡಿದವರೆಂದು ವಿಶೇಷ ಪ್ರಚಾರ, ಪ್ರಸಿದ್ಧಿ, ಪ್ರಶಸ್ತಿಗಳನ್ನು ಪಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಏಕೆ? ಅವರು ನಾಡಿನ ಜನಭಾಷೆಯಲ್ಲಿ ಬರೆಯುವುದು, ಜನಭಾಷೆಯನ್ನು ಉಪೇಕ್ಷೆ ಮಾಡದೆ ಕರಗತ ಮಾಡಿಕೊಂಡು ತಮ್ಮ ಜ್ಞಾನಸಂಸ್ಕೃತಿಯ ಭಾಷೆಯಾಗಿ ಬಳಸುತ್ತಿರುವುದು ಅದಕ್ಕೆ ಒಂದುಮುಖ್ಯ ಕಾರಣವಿರಬಹುದೆ? ವಿಜ್ಞಾನ, ತಂತ್ರಜ್ಞಾನದಂಥ ಕ್ಷೇತ್ರಗಳಲ್ಲಿ ಪದವಿ, ಪರಿಣತಿ ಪಡೆದವರು ಸಾಮಾನ್ಯವಾಗಿ ಜನಭಾಷೆಯನ್ನು ತೀರಾ ಉಪೇಕ್ಷಿಸಿ ಇಂಗ್ಲಿಷ್ ಭಾಷೆಯನ್ನು ಮಾತ್ರ ಕರಗತ ಮಾಡಿಕೊಳ್ಳುವುದರಲ್ಲಿ ಆಸಕ್ತರಾಗಿರುವುದಲ್ಲದೆ, ಅವರು ಇಲ್ಲಿ ಸಲ್ಲುವವರಲ್ಲ ವಿದೇಶಗಳಲ್ಲಿ ಸಲ್ಲುವವರು ಎಂಬಂಥ ಮನೋಧರ್ಮವನ್ನು ಹೆಚ್ಚು ಹೆಚ್ಚಾಗಿ ಬೆಳೆಸಿಕೊಳ್ಳುತ್ತ ಅವರನ್ನು ವಿದೇಶಗಳಿಗೆ ರಫ್ತಾಗುವ ಜ್ಞಾನ ಸಂಪನ್ಮೂಲಗಳೆಂಬಂತೆ ಮಾಡಿಕೊಳ್ಳುತ್ತಿರುವುದೂ ಅದಕ್ಕೆ ಕಾರಣವಿರಬಹುದೆ? ನಮ್ಮಪರಿಸರದ ಸ್ಥಳೀಯ ಜನಸಂಸ್ಕೃತಿಗೂ ಸಲ್ಲುವವರಾಗಿ, ಜಾಗತಿಕ ಜ್ಞಾನಸಂಸ್ಕೃತಿ ಸಂದರ್ಭಕ್ಕೂ ವಿಜ್ಞಾನ/ತಂತ್ರಜ್ಞಾನ ಕ್ಷೇತ್ರಗಳ ವಿದ್ವಾಂಸರೂ ಸೇರಿದಂತೆ ಎಲ್ಲಾ ಜ್ಞಾನ ಕ್ಷೇತ್ರಗಳ ಸಂಶೋಧಕರೂ ಸಲ್ಲುವಂತಾಗುವ ಬಗೆ ಹೇಗೆ? ಇಂಥ ಪ್ರಶ್ನೆಗಳು ನಾಡಿನ ಎಲ್ಲ ಜ್ಞಾನ ಕ್ಷೇತ್ರಗಳ ವಿದ್ವಾಂಸರ ಎದುರು ನಿಂತು ಉತ್ತರ ಬೇಡುತ್ತಿವೆ.

ಆ ಬಗ್ಗೆ ವಿವರವಾಗಿ ಬರೆಯುವುದಕ್ಕೆ ಇಲ್ಲಿ ಅವಕಾಶವಿಲ್ಲ. ಈ ಪ್ರಶ್ನೆ ವಿಜ್ಞಾನ/ತಂತ್ರಜ್ಞಾನ ಕ್ಷೇತ್ರದ ಜ್ಞಾನಸಂಸ್ಕೃತಿಗೆ ಮಾತ್ರ ಸಂಬಂಧಪಟ್ಟದ್ದಾಗಿಲ್ಲ. ಅದು ಜನಸಂಸ್ಕೃತಿಯ ಸಂದರ್ಭ, ಸ್ವರೂಪ, ಸ್ಥಳೀಯ ಅಥವಾ ನಾಡಿನ ಜನಸಂಸ್ಕೃತಿ ರೂಪಿಸುವುದಕ್ಕೆ ಸಂಬಂಧಿಸಿದಂತೆ ವಿಜ್ಞಾನ/ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧಕರಾಗಿ, ಅಧ್ಯಾಪಕರಾಗಿ, ಸ್ವೋಪಜ್ಞ ಶೋಧಕರಾಗಿ ತೊಡಗಿಕೊಂಡಿರುವವರ ಜನಋಣ ಸಂಬಂಧವಾದ ಹೊಣೆಗಾರಿಕೆಗೂ ಸಂಬಂಧಿಸಿದ್ದಾಗಿದೆ. ಜೊತೆಗೆ ಪ್ರಜಾಪ್ರಭುತ್ವ ರಾಜ್ಯವ್ಯವಸ್ಥೆ ಇರುವ ದೇಶದಲ್ಲಿ ಜನಪ್ರಾತಿನಿಧ್ಯದ ಆಡಳಿತ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ, ಜಾಗತೀಕರಣದ ಅರ್ಥ ಸಂಸ್ಕೃತಿಯ ಅಬ್ಬರ ಮೊದಲಾದವುಗಳಿಗೆಕೂಡ ಸಂಬಂಧಿಸಿದ್ದಾಗಿದೆ. ಆದ್ದರಿಂದ ಚರ್ಚೆ ಆ ವ್ಯಾಪ್ತಿಯಲ್ಲಿಯೂ ಬೆಳೆಯಬೇಕಾಗಿರುವುದು, ಅದಕ್ಕೆ ಉತ್ತರ ಹುಡುಕಿಕೊಳ್ಳಬೇಕಾದದ್ದು ಇಂದಿನ ತುರ್ತು ಅಗತ್ಯವಾಗಿದೆ.

೨೩೧೨೨೦೦೩