[ಜಿ.ಎಚ್. ನಾಯಕರು ಕನ್ನಡದ ಖ್ಯಾತ ಸಾಹಿತ್ಯ ವಿಮರ್ಶಕರು. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದವರು. ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ನವ್ಯ ಸಾಹಿತ್ಯ ಚಳವಳಿಯಿಂದ ಪ್ರಭಾವಿತರಾದ ನಾಯಕರು ತಮ್ಮ ವಿಮರ್ಶಾ ಸಾಹಿತ್ಯದ ಉದ್ದಕ್ಕೂ ಕುವೆಂಪು ಅವರ ಸಾಹಿತ್ಯದ ಜತೆ ಜತೆಗೆ ಸೆಣಸುತ್ತಾ ಬಂದವರು. ಕುವೆಂಪು ಅವರ ಸಾಹಿತ್ಯದ ಬಗ್ಗೆ ನಾಯಕರ ವಿಮರ್ಶೆ ನಾಯಕರಿಗೆ ಸಾರಸ್ವತ ಲೋಕದಲ್ಲಿ ಅನೇಕ ವಿರೋಧಿಗಳನ್ನು ಹುಟ್ಟುಹಾಕಿತು. ಅದೇ ನಾಯಕರು ಈಗ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿ ನೇಮಕಗೊಂಡಿರುವುದು ನಾಯಕರ ಅಂಥ ವಿರೋಧಿಗಳಿಗೆ ನುಂಗಲಾರದ ತುತ್ತಾಗಿರುವುದು ಕಟು ವಾಸ್ತವ.

ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕರ ಅಧಿಕಾರವಧಿ ಒಂದು ವರ್ಷ. ಜಿ.ಎಚ್.ನಾಯಕರು. ಈ ಪೀಠದ ಐದನೆಯ ಸಂದರ್ಶಕ ಪ್ರಾಧ್ಯಾಪಕರು. ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿ ನೇಮಕಗೊಂಡ ಸಂದರ್ಭದಲ್ಲಿ ನಾಯಕರನ್ನು ‘ಕ್ಯಾಂಪಸ್ ಸುತ್ತಾ’ ಅಂಕಣಕ್ಕಾಗಿ ಮಾತನಾಡಿಸಿದಾಗ – ಕೂಡ್ಲಿ ಗುರುರಾಜ]

ಪ್ರಶ್ನೆ : ಕುವೆಂಪು ಕಾವ್ಯಾಧ್ಯಯನ ಪೀಠಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ನೇಮಕಗೊಂಡ ಬಗ್ಗೆ ನಿಮಗೆ ಏನನಿಸುತ್ತದೆ?

ಜಿ.ಎಚ್.ನಾಯಕ : ಈ ನೇಮಕಾತಿಯನ್ನು ನಾನೆಂದೂ ನಿರೀಕ್ಷಿಸಿರಲಿಲ್ಲ. ಇದು ಅರ್ಜಿ ಹಾಕಿಕೊಂಡು ಪಡೆಯುವ ಹುದ್ದೆಯಲ್ಲ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಕಳಿಸಿದ, ಆರು ಜನರ ಹೆಸರಿದ್ದ ಪಟ್ಟಿಯಿಂದ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆ ನನ್ನನ್ನು ಆಯ್ಕೆ ಮಾಡಿತೆಂದು ಕೇಳಿದಾಗ ನನಗೆ ಆಶ್ಚರ್ಯವಾಯಿತು.

ಕುವೆಂಪು ಅವರ ಬಗ್ಗೆ ನನಗೆ ಗೌರವವಿಲ್ಲ. ಅವರ ಸಾಹಿತ್ಯದ ವಿರೋಧಿ ನಾನು, ಕುವೆಂಪು ಸಾಹಿತ್ಯ ಕುರಿತ ನನ್ನ ವಿಮರ್ಶೆ ಪೂರ್ವಗ್ರಹ ಪೀಡಿತ- ಹೀಗೆಲ್ಲ ಮೂರುವರೆ ದಶಕಗಳಿಗಿಂತ ಹೆಚ್ಚು ಕಾಲದ ನನ್ನ ಅಧ್ಯಾಪಕ ವೃತ್ತಿಯ ಉದ್ದಕ್ಕೂ ನಮ್ಮ ಕನ್ನಡ ವಿಭಾಗದ ಪರಿಸರದಲ್ಲಿ ಅಪಪ್ರಚಾರ ನಡೆಯುತ್ತಲೇ ಬಂದಿತ್ತು. ನನ್ನ ಸೇವಾವಧಿಯಲ್ಲಿ ಪಡೆಯಬೇಕಾದ ಬಡ್ತಿ, ದೊರೆಯಬೇಕಾದ ಎಷ್ಟೋ ಅವಕಾಶಗಳಿಂದಲೂ ನಾನು ವಂಚಿತನಾಗುವಂತೆ ಆದುದಕ್ಕೆ ಅದೇ ಮುಖ್ಯ ಕಾರಣವೂ ಆಗಿತ್ತು. ಆ ಹಿನ್ನೆಲೆಯನ್ನು ನೆನೆದಾಗ ಈ ಆಯ್ಕೆ ಒಂದು ಬಗೆಯ ವ್ಯಂಗ್ಯ (irony) ದಂತೆಯೂ ಅನಿಸಿತು. ಒಂದು ಬಗೆಯ ಕಾವ್ಯನ್ಯಾಯ – Poetic Justice-ದಂತೆಯೂ ಇದೆಯಲ್ಲ ಎಂದೂ ಅನಿಸಿತು.

ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಸ್ಥಾನಕ್ಕೆ ಪೈಪೋಟಿ, ಗುಂಪು ಚಟುವಟಿಕೆ ನಡೆದಿತ್ತೆನ್ನಲಾಗಿದೆ. ಯಾರಾದರೂ ಪೈಪೋಟಿ, ಗುಂಪು ಚಟುವಟಿಕೆ ನಡೆಸಿದ್ದರೊ ಇಲ್ಲವೊ ನನಗೆ ಗೊತ್ತಿಲ್ಲ. ನಾನು ಮಾತ್ರ ಪೈಪೋಟಿ, ಗುಂಪು ಚಟುವಟಿಕೆ ನಡೆಸಿಲ್ಲ. ನನ್ನ ಸೇವಾವಧಿಯ ಉದ್ದಕ್ಕೂ ಅಧ್ಯಾಪಕ ವೃತ್ತಿಗೆ ಸೇರುವಲ್ಲಿಂದ ಮೊದಲುಗೊಂಡು ನಿವೃತ್ತನಾಗುವವೆಗೆ ಎಂದಾದರೂ ಯಾವುದೇ ಹುದ್ದೆ, ಬಡ್ತಿ, ಅವಕಾಶಗಳಿಗಾಗಿ ನಾನು ಯಾರನ್ನೂ ಕೇಳಿದವನಲ್ಲ. ಅದನ್ನೊಂದು ಆತ್ಮಗೌರವದ ಪ್ರಶ್ನೆಯೆಂದು ತಿಳಿದು ಪಾಲಿಸಿಕೊಂಡು ಬಂದಿದ್ದೇನೆ. ಆ ಬಗ್ಗೆ ನನಗೆ ಅಭಿಮಾನವಿದೆ. ಇದನ್ನೆಲ್ಲ ನಾನೇ ಹೇಳಿಕೊಳ್ಳಬೇಕಾಗಿ ಬಂದ ಬಗ್ಗೆ ನನಗೆ ಸಂಕೋಚವೆನಿಸುತ್ತಿದೆ. ನಾನು ಇದ್ದ ಹುದ್ದೆಗಿಂತ ಹೆಚ್ಚಿನ ಅಧಿಕಾರ ಮತ್ತು ವೇತನ ಇರುವ ಹುದ್ದೆಗಳಿಗೆ ಅವಕಾಶಗಳು ತಾವಾಗಿ ಬಂದಾಗಲೂ ನನ್ನ ಆಸಕ್ತಿಗೆ ಹೊರತಾದವೆಂದು ನಿರಾಕರಿಸಿದ್ದೂ ಉಂಟು. ಹೀಗಿರುವಾಗ ನನ್ನ ಜೀವಮಾನದ ಈ ಹಂತದಲ್ಲಿ ಯಾವುದೋ ಸ್ಥಾನ, ಹುದ್ದೆ ಪಡೆಯಲು ನಾನು ಪೈಪೋಟಿ, ಗುಂಪು ಚಟುವಟಿಕೆ ನಡೆಸಬಹುದೆಂದು ಯೋಚಿಸುವುದಕ್ಕೂ ನನಗೆ ನಾಚಿಕೆಯಾಗುತ್ತದೆ.

ಪ್ರಶ್ನೆ : ಕುವೆಂಪು ಅವರ ಬಗ್ಗೆ ನಿಮ್ಮ ವಿಮರ್ಶೆ ವಿರೋಧಿ ಸ್ವರೂಪದ್ದು ಎಂಬ ಅಭಿಪ್ರಾಯದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಜಿ.ಎಚ್.ನಾಯಕ : ಕುವೆಂಪು ಅವರ ವ್ಯಕ್ತಿತ್ವದ ಬಗ್ಗೆ, ಅವರ ಸಾಹಿತ್ಯದ ಬಗ್ಗೆ ಆರಾಧಕ ಮನೋಧರ್ಮ ಗಾಢವಾಗಿದ್ದ ಕಾಲದಲ್ಲಿ ಕುವೆಂಪು ಅವರ ಕಾವ್ಯದ (ವ್ಯಕ್ತಿತ್ವದ ಬಗ್ಗೆ ಅಲ್ಲ-) ಗುಣದೋಷಗಳ ಬಗ್ಗೆ ಪ್ರಸ್ತಾಪಿಸುವ, ಶ್ರೇಷ್ಠತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುವ ದನಿ ನಾನು ಮಾಡಿದ ವಿಮರ್ಶೆ ಮತ್ತು ಉಪನ್ಯಾಸಗಳಲ್ಲಿ ಕೇಳಿಸುವಂತಾಯಿತು. ಅದನ್ನು ಸಹಿಸದವರು ಕುವೆಂಪು ಸಾಹಿತ್ಯದ ಬಗೆಗಿನ ನನ್ನ ವಿಮರ್ಶೆ, ಉಪನ್ಯಾಸಗಳು ಉದ್ಧಟತನದ್ದೆಂದೂ ಪೂರ್ವಗ್ರಹಪೀಡಿತವಾದದ್ದೆಂದೂ ವಿರೋಧಿ ಸ್ವರೂಪದ್ದೆಂದೂ ಹಣೆಪಟ್ಟಿ ಹಚ್ಚಿದರು. ಅಂಥವರ ಅಪಪ್ರಚಾರ ಈವರೆಗೂ ನನ್ನ ಬೆನ್ನುಬಿಟ್ಟಂತಿಲ್ಲ.

ಕುವೆಂಪು ಅವರ ಮೊಮ್ಮಗಳು – ತೇಜಸ್ವಿಯವರ ಹಿರಿಯ ಮಗಳು-ನಮ್ಮ ಮನೆಯಲ್ಲಿ ಐದು ವರ್ಷಗಳ ಕಾಲ ಇದ್ದು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ಕುವಂಪು ಅವರ ಮನೆಗೆ ಮೇಲಿಂದ ಮೇಲೆ ಹೋಗಿ ಬರುವ, ಕುವೆಂಪು ಅವರ ವ್ಯಕ್ತಿ ಪರಿಚಯವನ್ನು ಹತ್ತಿರದಿಂದ ಮಾಡಿಕೊಳ್ಳುವ ಅವಕಾಶ ನನಗೂ ನನ್ನ ಹೆಂಡತಿ ಮತ್ತು ನನ್ನ ಮಗಳಿಗೂ ದೊರೆತಿತ್ತು. ನಾನು ಅವರ ಸಾಹಿತ್ಯದ ‘ಆರಾಧಕ’ರ ಗುಂಪಿಗೆ ಸೇರಿದವನಲ್ಲ ಎಂಬುದು ಕುವೆಂಪು ಅವರಿಗೆ ಗೊತ್ತಿತ್ತು. ನನ್ನ ವಿಮರ್ಶೆಯಲ್ಲಿ ಕುವೆಂಪು ಅವರ ಕಾವ್ಯಭಾಷಾ ಪ್ರಯೋಗದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದೇನೆಂಬುದೂ ಅವರಿಗೆ ಗೊತ್ತಿತ್ತು. ಆದರ ಆ ಬಗ್ಗೆ ಎಂದೂ ಅವರು ನನ್ನೊಡನೆ ಪ್ರಸ್ತಾಪಿಸಿದ್ದಿಲ್ಲ. ದೊಡ್ಡವರು ಇಂಥ ವಿಷಯಗಳಲ್ಲಿ ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ನನ್ನೊಡನೆ ಪ್ರಸ್ತಾಪಿಸಿದ್ದಿಲ್ಲ. ದೊಡ್ಡವರು ಇಂಥ ವಿಷಯಗಳಲ್ಲಿ ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ನನ್ನೊಡನೆ, ನನ್ನ ಹೆಂಡತಿ ಮತ್ತು ಮಗಳೊಡನೆ ಕುವೆಂಪು ಅವರು ವಿಶ್ವಾಸದಿಂದ ಸದ್ಭಾವನೆಯಿಂದ ನಡೆದುಕೊಳ್ಳುತ್ತಿದ್ದ ರೀತಿಯಲ್ಲಿ ಕಂಡುಕೊಂಡಿದ್ದೆವು. ಕುವೆಂಪು ಅವರು ತೀರಿಹೋದಾಗ ನನ್ನ ಹೆಂಡತಿ ಮೀರಾ ನಾಯಕ ಅಂಥ ಎಷ್ಟೋ ಸಂದರ್ಭ ಸನ್ನಿವೇಶಗಳನ್ನು ಕೃತಜ್ಞತೆಯಿಂದ ನೆನಪಿಸಿಕೊಂಡು ಲೇಖನ ಬರೆದಿದ್ದುಂಟು.

ವೈಯಕ್ತಿಕ ಪ್ರೀತಿ, ಗೌರವಗಳ ಮಾತು ಬೇರೆ. ಕೃತಿ ವಿಮರ್ಶೆಯ ಸಂದರ್ಭದಲ್ಲಿ ವಿಮರ್ಶಕ ತೋರಬೇಕಾದ ವಸ್ತುನಿಷ್ಟತೆಯ ಸ್ವರೂಪ ಬೇರೆ. ಸಾಹಿತ್ಯ ವಿಮರ್ಶೆ ಒಂದು ಸಾಂಸ್ಕೃತಿಕ ಸಂದರ್ಭದಲ್ಲಿ ಭಾಗವಹಿಸುತ್ತಿರುವ ಕಾರ್ಯ, ಕೃತಿಕಾರ ಮತ್ತು ವಿಮರ್ಶಕರಿಬ್ಬರೂ ಸಂಸ್ಕೃತಿ ನಿರ್ಮಾಣ ಕಾರ್ಯದಲ್ಲಿ ತಮ್ಮ ತಮ್ಮ ಪ್ರತಿಭೆ, ಶಕ್ತಿಗಳ ಮಿತಿ-ಮೇರೆಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಆಗ ಪರಸ್ಪರರ ವೈಯಕ್ತಿಕ ಸಂಬಂಧಗಳಿಗಿಂತ ಭಿನ್ನವಾದ ವಿಸ್ತಾರದಲ್ಲಿ ಗ್ರಹಿಕೆ, ವ್ಯಾಖ್ಯಾನ, ಮೌಲ್ಯಮಾಪನ ನಡೆಯುತ್ತಿರುತ್ತದೆ. ಈ ತಿಳಿವಳಿಕೆ ಇರುವವರು ವೈಯಕ್ತಿಕ ಪ್ರೀತಿ, ಗೌರವಗಳಿಗೂ ವಿಮರ್ಶೆಯ ನಿಲುವುಗಳಿಗೂ ಸಂಬಂಧ ಕಲ್ಪಿಸಿ ಗೊಂದಲಗೊಳ್ಳುವುದಿಲ್ಲ.

ಕುವೆಂಪು ಅವರ ಸಾಹಿತ್ಯವನ್ನು ಈ ಹಿಂದೆ ನಾನು ವಿಮರ್ಶಿಸುತ್ತಿದ್ದ ನೆಲೆ, ನೋಟ ಇಂದಿಗೂ ಹಾಗೇ ಉಳಿದಿಲ್ಲ. ಹಾಗೆಂದು ಅದು ಪೂರ್ತಿಯಾಗಿ ಉಳಿದಿಲ್ಲವೆಂದೂ ಅಲ್ಲ. ಆಗ ನಾನು ಎತ್ತಿದ ಎಷ್ಟೋ ಪ್ರಶ್ನೆಗಳು ಈಗಲೂ ಇವೆ. ಆದರೆ ಆ ಪ್ರಶ್ನೆಗಳನ್ನೂ ಒಳಗೊಂಡು ಇನ್ನೂ ಹೆಚ್ಚು ವ್ಯಾಪಕವಾದ ಮತ್ತು ಸಾಂಸ್ಕೃತಿಕವಾಗಿ ಹೆಚ್ಚು ಮಹತ್ವವಾದ ಪ್ರಶ್ನೆಗಳನ್ನೂ ಕೇಳಿ ಉತ್ತರಗಳನ್ನು ಪಡೆಯುವುದರ ಕಡೆ ನನ್ನ ಗಮನವಿದೆ.

ಪ್ರಶ್ನೆ : ಸಂದರ್ಶಕ ಪ್ರಾಧ್ಯಾಪಕರಾಗಿ ನಿಮ್ಮ ಅಧಿಕಾರವಧಿಯಲ್ಲಿ ಕುವೆಂಪು ಸಾಹಿತ್ಯ ಕುರಿತ ಯೋಜನೆಗಳು ಯಾವುವು?

ಜಿ.ಎಚ್.ನಾ. ಕುವೆಂಪು ಅವರ ಎಂಬತ್ತನೆಯ ಹುಟ್ಟು ಹಬ್ಬದ ನೆನಪಿಗೆ ಗೌರವ ಸೂಚಿಸುವುದಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯವು ಸ್ಥಾಪಿಸಿದ ಈ ಕಾವ್ಯಾಧ್ಯಯನ ಪೀಠಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ನೇಮಕಗೊಂಡವರು ಕುವೆಂಪು ಸಾಹಿತ್ಯ ಕುರಿತ ಯೋಜನೆಗಳನ್ನೇ ಹಾಕಿಕೊಂಡು ಅಧ್ಯಯನ ಮಾಡಬೇಕೆಂಬ ಉಪನ್ಯಾಸ ನೀಡಬೇಕೆಂಬ ‘ಮಿತ್ (myth) ಒಂದು ಈಗಾಗಲೇ ಸೃಷ್ಟಿಯಾಗಿ ಬಿಟ್ಟಿದೆ. ನೀವು ಕೇಳಿದ ಪ್ರಶ್ನೆಯಲ್ಲಿ ಕೂಡ ಆ ಗ್ರಹಿಕೆ ಇದೆ. ಆದರೆ ನಿಯಮಾವಳಿಯ ಸಂದರ್ಶಕ ಪ್ರಾಧ್ಯಾಪಕ ಮಾಡಬಹುದಾದ ಅಧ್ಯಯನ, ನೀಡಬಹುದಾದ ಉಪನ್ಯಾಸ, ಬರೆಯಬಹುದಾದ ಬರವಣಿಗೆಗಳ ಬಗ್ಗೆ ಹೆಚ್ಚು ಮುಕ್ತ ಧೋರಣೆಯದಾಗಿದೆ. ಕಾವ್ಯರಸ ಗ್ರಹಣ, ಸಾಹಿತ್ಯ ವಿಮರ್ಶೆ, ಸೃಜನಶೀಲ ಬರವಣಿಗೆ ಇವುಗಳಿಗೆ ಸಂಬಂಧಿಸಿದ ಎಲ್ಲರಿಗೂ ಮುಕ್ತವಾಗಿರುವ ತರಗತಿಗಳನ್ನು ನಡೆಸುವುದಕ್ಕೆ, ಉಪನ್ಯಾಸ ನೀಡುವುದಕ್ಕೆ ಅವಕಾಶವಿದೆ. ಅದು ಕುವೆಂಪು ಅವರ ಕಾವ್ಯ, ವಿಮರ್ಶೆ, ಸೃಜನಶೀಲ ಬರವಣಿಗೆಗೇ ಸಂಬಂಧಿಸಿದ್ದೆಂದೇನಿಲ್ಲ. ಯಾವುದಿರಬೇಕೆಂಬುದು ಪ್ರಾಧ್ಯಾಪಕನ ವಿವೇಚನೆಗೆ ಬಿಟ್ಟ ವಿಷಯ. ಕಾವ್ಯ ಕೃತಿಗಳ ಸಂಚಯನ ಗ್ರಂಥ ಮಾಡುವುದಕ್ಕೂ ಅವಕಾಶವಿದೆ. ಅದು ಕುವೆಂಪು ಕಾವ್ಯ ಕೃತಿಗಳ ಸಂಚಯನ ಗ್ರಂಥವೇ ಆಗಬೇಕೆಂದೇನಿಲ್ಲ. ಆಗಬಾರದು ಎಂದೂ ಇಲ್ಲ. ಸಂದರ್ಶಕ ಪ್ರಾಧ್ಯಾಪಕರಾಗಿ ಕನ್ನಡ ಪ್ರಾಧ್ಯಾಪಕರಾಗಿದ್ದವರನ್ನೇ ನೇಮಕ ಮಾಡಬೇಕೆಂದಾಗಲಿ ಹಾಗೆ ನೇಮಕಗೊಂಡವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿಯೇ ಇದ್ದು ಕೆಲಸ ಮಾಡಬೇಕೆಂದಾಗಲಿ ಇಲ್ಲ. ಪ್ರಾಧ್ಯಾಪಕರಾಗಿ ನೇಮಕಗೊಂಡವರ ಹಿನ್ನೆಲೆಗೆ ಸೂಕ್ತವಾದ ವಿಭಾಗದಲ್ಲಿ ಕೆಲಸ ಮಾಡಬಹುದು. ಅಂದರೆ ಅಭಿಪ್ರಾಯವಿಷ್ಟೆ. ಈಗಿರುವ ನಿಯಮಾವಳಿಯಂತೆ ಕುವೆಂಪು ಕಾವ್ಯಾಧ್ಯಯನ ಪೀಠವು ತುಂಬ ಮುಕ್ತವಾದ ಮತ್ತು ವ್ಯಾಪಕವಾದ ಸ್ವರೂಪದ್ದಾಗಿದೆ. ನಿಯಮಾವಳಿಯಲ್ಲಿರುವ ಯಾವ ಕರಾರನ್ನಾದರೂ ತನ್ನ ವಿವೇಚನೆಗೆ ಅನುಗುಣವಾಗಿ ಬದಲಿಸುವ ಹಕ್ಕು ಈಗಿರುವ ನಿಯಮಾವಳಿಯ ಪ್ರಕಾರವೇ ಸಿಂಡಿಕೇಟಿಗೆ ಇದೆ. ಆದ್ದರಿಂದ ನಿಯಮಾವಳಿಯನ್ನು ಅಸ್ಪಷ್ಟತೆಗೆ ಅವಕಾಶವಿಲ್ಲದಂತೆ ಹೆಚ್ಚು ನಿರ್ದಿಷ್ಟ ವಿವರಗಳಲ್ಲಿ ಪುನಾರಚಿಸುವುದಕ್ಕೆ ಅವಕಾಶವೇನೋ ಇದ್ದೇ ಇದೆ.

ಕುವೆಂಪು ಸಾಹಿತ್ಯದಲ್ಲಿ ಸಂಸ್ಕೃತಿ ಪುನಾರಚನೆಯ ಪರಿಕಲ್ಪನೆ ಕುರಿತಂತೆ ಕೆಲವು ಉಪನ್ಯಾಸಗಳನ್ನು ಯೋಜಿಸಿಕೊಳ್ಳಬೇಕೆಂದಿದ್ದೇನೆ. ಜೊತೆ ಜೊತೆಗೆ ಆ ಪರಿಕಲ್ಪನೆಯ ದೃಷ್ಟಿಯಿಂದ ಸಾಧ್ಯವಾದರೆ ಕುವೆಂಪು ಅವರ ಆಯ್ದ ಕವನಗಳ ಸಂಚಯನ ಗ್ರಂಥವೊಂದನ್ನು ಪ್ರಸ್ತಾವನೆಯೊಂದಿಗೆ ಸಿದ್ಧಪಡಿಸಬೇಕೆಂದಿದ್ದೇನೆ. ಬೇರೆ ಕವಿ, ಸಾಹಿತಿಗಳ ಕೃತಿಗಳನ್ನು ಕುರಿತು ಹಾಗೂ ಸಾಹಿತ್ಯ ವಿಮರ್ಶೆಯ ಪರಿಕಲ್ಪನೆ ಕುರಿತು ಕೆಲವು ಉಪನ್ಯಾಸಗಳನ್ನು ನೀಡಬೇಕೆಂದಿದ್ದೇನೆ.*

೧೯೯೬

* ೧೯೯೬ ರಲ್ಲಿ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕನಾಗಿ ಮೈಸೂರು ವಿಶ್ವವಿದ್ಯಾನಿಲಯ ನನ್ನನ್ನು ನೇಮಕ ಮಾಡಿದ ಸಂದರ್ಭದಲ್ಲಿ ಪತ್ರಕರ್ತ ಶ್ರೀ ಕೂಡ್ಲಿ ಗುರುರಾಜ ಅವರು ಮಾಡಿದ ನನ್ನ ಸಂದರ್ಶನ.