‘ವಿಚಿತ್ರ ಕೂಟ’ ಮತ್ತು ‘ಭೂತ’ ಕಾದಂಬರಿಗಳ ಅನಂತರ ಶಿವರಾಮ ಕಾರಂತರು ಬರೆದ ಕಾದಂಬರಿ ‘ನಿರ್ಭಾಗ್ಯ ಜನ್ಮ’ – ‘ನಿರ್ಭಾಗ್ಯ ಜನ್ಮ’ ಮೇಲೆ ಹೆಸರಿಸಿದ ಕಾದಂಬರಿಗಳಂತೆ ಪತ್ತೇದಾರಿ ಕಾದಂಬರಿಯಾಗಿಲ್ಲ ಅದು ಸಾಮಾಜಿಕ ಕಾದಂಬರಿಯಾಗಿದೆ. ಕಾರಂತರು ‘ವಿಯೋಗಿನಿ’ ಎಂಬ ಕಾದಂಬರಿಯನ್ನು ಪೂರ್ತಿಯಾಗಿ ಬರೆದು ಮುಗಿಸಿದ್ದುದಾದರೆ ಅದೇ ಅವರ ಮೊದಲ ಕಾದಂಬರಿಯೂ ಆಗುತ್ತಿತ್ತು. ಅವರ ಮೊದಲ ಸಾಮಾಜಿಕ ಕಾದಂಬರಿಯೂ ಆಗುತ್ತಿತ್ತು. ಆದರೆ ಈಗ ಕಾರಂತರ ಮೊದಲ ಸಾಮಾಜಿಕ ಕಾದಂಬರಿ ಎಂಬ ಖ್ಯಾತಿ ‘ನಿರ್ಭಾಗ್ಯ ಜನ್ಮ’ ಕ್ಕೆ ಸಲ್ಲುತ್ತದೆ.

‘ನಿರ್ಭಾಗ್ಯ ಜನ್ಮ’ ಕಾದಂಬರಿಯು ಕಾರಂತರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ವಸಂತ’ ಪತ್ರಿಕೆಯಲ್ಲಿ ಫೆಬ್ರವರಿ, ೧೯೨೫ರಿಂದ ಪ್ರಾರಂಭವಾಯಿತು.ಆದರೆ, ಶಿವರಾಮ ಕಾರಂತರು ಅಲ್ಲಿ ಕಾದಂಬರಿಕಾರನ ಹೆಸರನ್ನು ತಿಳಿಸಿರಲಿಲ್ಲವಾದ್ದರಿಂದಲೋ ಏನೊ, ‘ನಿರ್ಭಾಗ್ಯ ಜನ್ಮ’ ಎಂಬ ಕಾದಂಬರಿಯು ಕಾರಂತರದೇ; ಎನ್ನುವುದು ಕಾರಂತರ ಕಾದಂಬರಿಗಳನ್ನು ಶ್ರದ್ಧೆ, ಆಸಕ್ತಿಗಳಿಂದ ಅಭ್ಯಾಸ ಮಾಡಿದವರಿಗೂ ಒಂದು ಹೊಸ ಸುದ್ಧಿಯಾಗುವಂತಾಗಿಬಿಟ್ಟಿತ್ತು. ‘ವಿಚಿತ್ರ ಕೂಟ’ ಮತ್ತು ‘ಭೂತ’ ಗಳಂತೆ ಈ ಕಾದಂಬರಿಯೂ ‘ವಸಂತ’ ಪತ್ರಿಕೆಯ ಪುಟ ತುಂಬಿಸಲೆಂದು ಬರೆದುದೇ ಆಗಿದೆ. ಆದರೆ, ಆ ಎರಡು ಕಾದಂಬರಿಗಳು ಮುಂದೆ ಗ್ರಂಥ ರೂಪದಲ್ಲಿ ಪ್ರಕಟವಾದಂತೆ ಇದು ಆಗಿರಲಿಲ್ಲ. ಆದರೂ, ‘ವಸಂತ’ ಪತ್ರಿಕೆಯಲ್ಲಿ ಲೇಖಕನ ಹೆಸರಿಲ್ಲದ ಬರವಣಿಗೆಗಳೆಲ್ಲವನ್ನು ಗಮನಿಸಿದವರಿಗೆ ‘ನಿರ್ಭಾಗ್ಯ ಜನ್ಮ’ವೂ ಕಾರಂತರದೆಂದು ಊಹಿಸುವುದು ಕಷ್ಟವಾಗುವಂತೇನಿಲ್ಲ. ಆದರೂ, ಏಕೋ, ಹೇಗೋ “ನಿರ್ಭಾಗ್ಯ ಜನ್ಮ”ದ ಕರ್ತೃವಿನ ಹೆಸರು ಅಜ್ಞಾತವಾಗಿಯೇ ಉಳಿಯುವಂತಾಗಿತ್ತು. ಆದರೆ, ಶಿವರಾಮ ಕಾರಂತರೇ ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಎಂಬ ಗ್ರಂಥದಲ್ಲಿ ‘ನಿರ್ಭಾಗ್ಯ ಜನ್ಮ’ ಎಂಬ ತಮ್ಮ ಕಾದಂಬರಿಯ ಪ್ರಸ್ತಾಪ ಮಾಡಿರುವುದರಿಂದ ‘ನಿರ್ಭಾಗ್ಯ ಜನ್ಮ’ ಎಂಬ ತಮ್ಮ ಕಾದಂಬರಿಯ ಪ್ರಸ್ತಾಪ ಮಾಡಿರುವುದರಿಂದ ‘ನಿರ್ಭಾಗ್ಯ ಜನ್ಮ’ ಕಾರಂತರು ಪ್ರಕಟಿಸಿದ ಮೊದಲನೆಯ ಸಾಮಾಜಿಕ ಕಾದಂಬರಿ ಎಂದು ಈಗ ಖಚಿತವಾಗಿ ಹೇಳಬಹುದಾಗಿದೆ.

‘ನಿರ್ಭಾಗ್ಯ ಜನ್ಮ’ದ ಮೊದಲ ೧೭ ಅಧ್ಯಾಯಗಳು ನನಗೆ ದೊರೆತಿವೆ. ಆನಂತರದ ಅಧ್ಯಾಯಗಳು ಪ್ರಕಟವಾದ ‘ವಸಂತ’ದ ಸಂಚಿಕೆಗಳು ಇನ್ನೂ ನನಗೆ ದೊರೆತಿಲ್ಲ. ದೊರೆತ ಅಧ್ಯಾಯಗಳಷ್ಟರಿಂದಲೇ ದೊರೆಯುವ ಕಥಾ ಭಾಗವನ್ನು ನಿರೂಪಣೆಯ ಭಾಷೆಯ ಜಾಡಿನಲ್ಲಿಯೇ ಈ ಕೆಳಗಿನಂತೆ ಸಂಕ್ಷೇಪಗೊಳಿಸಬಹುದು :

ಸುಡೂರು ಎಂಬ ಗ್ರಾಮದ ಅತಿ ದೊಡ್ಡ ಶ್ರೀಮಂತನಾಗಿದ್ದ ಸದಾನಂದನು ತನ್ನ ಕಾಂಚನ ಬಲದಿಂದಲೇ ಊರಿನಲ್ಲೆಲ್ಲಿಯೂ ತುಂಬ ಬಹುಮಾನವನ್ನು ಗಳಿಸಿಕೊಂಡಿದ್ದವನು. ಹಾಗೆಯೇ, ಉಡುಪಿಯಲ್ಲಿ ಪ್ರತಿಷ್ಠಾಪಿತಳಾಗಿದ್ದ ಚಂಪಾ ಎಂಬ ತುಂಬಾ ರೂಪವತಿಯಾಗಿದ್ದ ವೇಶ್ಯೆಯನ್ನು ತನ್ನ ಊರಿಗೆ ಆ ಕಾಂಚನದ ಮಹಿಮೆಯಿಂದಲೇ ಕರತಂದು ಒಂದು ಸುಂದರ ಗೃಹವನ್ನು ನಿರ್ಮಿಸಿ, ಅವಳನ್ನು ಅಲ್ಲಿ ಪ್ರತಿಷ್ಠಾಪಿಸಿ ಆ ಚಂಪಾ ದೇವತೆಯ ಆರಾಧನೆಯಲ್ಲಿಯೇ ಶಕ್ತ್ಯಾನುಸಾರ ತೊಡಗಿದ್ದವನು ಸಾಧ್ವಿಮಣಿಯಾದ ತನ್ನ ಸಹಧರ್ಮಿಣಿಯನ್ನು ಯಥಾ ಪ್ರಕಾರ ಮರೆತು ಬಾಳುತ್ತಿರುವಾಗ ಕಾಲಕ್ರಮದಲ್ಲಿ ಆಕೆ ಆನಂದನೆಂಬ ತನ್ನ ಏಕಮಾತ್ರ ಕುಮಾರನನ್ನು ಬಿಟ್ಟು ಪರಂಧಾಮವನ್ನೈದಿದಳು. ಅದರಿಂದಾಗಿ ಸದಾನಂದನಿಗೆ ಒಂದು ದೊಡ್ಡ ವಿಘ್ನ ಪರಿಹಾರವಾದಂತಾಯಿತು. ಚಂಪಾ ದೇವತೆಯ ಪೂಜೆ ಅಹರ್ನಿಶಿ ಸಾಂಗೋಪಾಂಗವಾಗಿ ನಡೆಯುವುದಕ್ಕೆ ಅನುಕೂಲವಾಯಿತು.

ಏಕಮಾತ್ರ ಪುತ್ರನಾದ ಆನಂದನನ್ನು ಸದಾನಂದ ತುಂಬಾ ಪ್ರೀತಿಯಿಂದ ನೋಡುತ್ತಿದ್ದನಲ್ಲದೆ ಆತನನ್ನು ವಿದ್ಯಾಭ್ಯಾಸಕ್ಕೆಂದು ಮಂಗಳೂರಿಗೆ ಕಳಿಸಿದ್ದನು. ಆನಂದ ಮನೆಗೆ ಬಂದು ಹೋಗುವುದೂ ಅಪರೂಪ. ಎಲ್ಲೋ ಎರಡೋ ಮೂರೋ ವರ್ಷಕ್ಕೊಮ್ಮೆ ಬಂದು ಹೋದರೆ ಹೆಚ್ಚು.

ಇತ್ತ ಚಂಪೆಯ ತಾರುಣ್ಯವು ಕಳೆಯುತ್ತ ಬಂದಂತೆ ಆಕೆಯ ಮನೆಗೆ ಹರಿಯುತ್ತಿದ್ದ ಸದಾನಂದರಾಯರ ದುಡ್ಡಿನ ಪ್ರವಾಹವೂ ಕಡಿಮೆಯಾಗುತ್ತ ಬಂದಿತು. ಕಾಮುಕನಾದ ಆತನ ಚಂಪರಾಧನೆಯ ಜತೆಯಲ್ಲಿ ಇನ್ನೂ ಅನೇಕ ಶಕ್ತಿಮಯಿಗಳ ಉಪಾಸನೆಗೂ ಆರಂಭಿಸತೊಡಗಿದನು.ಅದರಿಂದ ಚಂಪೆಗೆ ತನ್ನ ಭವಿಷ್ಯದ ಚಿಂತೆ ಹತ್ತಿತು. ರೂಪು, ತಾರುಣ್ಯ ನಶಿಸಿ ಹೋಯಿತು. ಸಂತಾನವೂ ಇಲ್ಲವಲ್ಲ ಎಂಬ ಯೋಚನೆ ಹೆಚ್ಚಾಯಿತು. ಹೀಗಿರುವಾಗ ಆಕೆಯ ದೂರದ ಕುಟುಂಬದಲ್ಲಿ ಅನಾಥಳಾದ ಹದಿನಾಲ್ಕು ವರ್ಷ ಪ್ರಾಯದ ಕಮಲಾ ಎಂಬ ಬಾಲಿಕೆಯನ್ನು ‘ಪೋರಾ’ ಎಂಬ ಹದಿನೆಂಟು-ಇಪ್ಪತ್ತು ವರ್ಷ ಪ್ರಾಯದ ಆಕೆಯ ಅಣ್ಣನನ್ನೂ ತನ್ನ ಮನೆಗೆ ಕರೆಯಿಸಿಕೊಂಡು ಪೋಷಿಸಿತೊಡಗಿದಳು.

ಚಂಪೆಯ ಮನೆಯ ಸಮಸ್ತ ಖರ್ಚುವೆಚ್ಚವು ಸದಾನಂದನ ತಲೆಯಮೇಲಿನ ಹೊರೆಯೇ ಆಗಿತ್ತಾದ್ದರಿಂದ ಪೋರ ಕೇವಲ ಖರ್ಚಿನ ಬಾಬತ್ತೆಂದೇ ಆತನಿಗ ಅನಿಸಿದರೂ ಕಮಲಾ ಇರಬಹುದೆಂದಿತ್ತು. ಕಮಲದ ಭ್ರಮರನಾಗುವ ಆಸೆಯೂ ಬಲವಾಗುತ್ತ ಬಂದುದೇ ಇದಕ್ಕೆ ಕಾರಣವಾಗಿತ್ತು. ಈ ಕಮಲಾವಲ್ಲಭನಾಗುವ ಬಗೆಯನ್ನೇ ಕುರಿತು ಚಿಂತಿಸುತ್ತಿದ್ದ ಸದಾನಂದನಿಗೆ ಇಂಟರ್ ಮೀಡಿಯಟ್ ಪರೀಕ್ಷೆಯನ್ನು ಪೂರ್ಣಗೊಳಿಸಿ ತನ್ನ ಮಗ ಆನಂದ ರಜೆ ಕಳೆಯಲು ಮನೆಗೆ ಬಂದಾಗ ಆತನ ಕಣ್ಣಿಗೆ ಕಮಲೆಯು ಬಿದ್ದರೆ ಅನರ್ಥವದೀತಲ್ಲಾ ಎಂಬ ಕಳವಳ, ಬೆದರಿಕೆ ಅಧಿಕವಾಯಿತು. ಪ್ರಾಯಭರಿತಳೂ, ರೂಪವತಿಯೂ ಆದ ಕನ್ನಿಕೆಯೋರ್ವಳನ್ನು ಆದಷ್ಟು ಬೇಗ ಆನಂದನು ಊರಿಗೆ ಬಂದೊಡನೆಯೇ ಲಗ್ನ ಮಾಡಿಸೋಣವೆಂದು ಮನಸ್ಸಿನಲ್ಲಿಯೇ ನಿಶ್ಚಯಿಸಿದ್ದರಿಂದ ಆತನ ಮನಸ್ಸು ಸ್ವಲ್ಪ ಹಗುರವಾಯಿತು.

ಆನಂದ ಊರಿಗೆ ಬಂದ ಕೆಲವೇ ದಿನಗಳಲ್ಲಿ ಇನ್ನೊಂದು ಹಳ್ಳಿಯ ಶ್ರೀಮಂತನೊಬ್ಬನ ಏಕಮಾತ್ರ ಪುತ್ರಿ ಭಾಗ್ಯಲಕ್ಷ್ಮಿಯೆಂಬ ಸುಂದರಿಯೂ ಸದ್ಗುಣಿಯೂ ಆದ ವಧುವಿನೊಡನೆ ಆನಂದನ ಮದುವೆಯಾಯಿತು. ಆದರೂ ಸದಾನಂದನಿಗೆ ಮಗನ ಕಣ್ಣಿಗೆ ಕಮಲೆಯು ಬಿದ್ದರೆ ಎಂಬ ಛಳಿಯು ಮಾತ್ರ ಹೋಗಲಿಲ್ಲ. ಆ ಕಾರಣದಿಂದಲೇ ಆನಂದನ ಮದುವೆಯ ಸಂದರ್ಭದಲ್ಲಿ ಸುಧಾರಣಾಪಕ್ಷದವನಾದ ಮಗನಿಗೆ ಅದು ಹಿಡಿಸದೆಂಬ ನೆವವನ್ನು ಮುಂದೊಡ್ಡಿ ವೇಶ್ಯೆಯರ ಕುಣಿತದ ಏರ್ಪಾಡನ್ನೂ ಮಾಡಿರಲಿಲ್ಲ. ಈಗ ಮತ್ತೆ ಮಗನಿಗೆ ಬಿ.ಎ. ಕಲಿಯುವುದಕ್ಕಾಗಿ ಪ್ರೇರೇಪಿಸಿ, ಒಪ್ಪಿಸಿ ಮಂಗಳೂರಿಗಿಂತ ದೂರದ ಮದ್ರಾಸಿಗೆ ಕಳಿಸಿದನು. ಹೀಗಾಗಿ ಭಾಗ್ಯಲಕ್ಷ್ಮಿ ಆನಂದರ ವಿರಹವೂ ಅನಿವಾರ್ಯವಾಗಿ ಆಗುವಂತಾಯಿತು.

ಈಗತಾನೆ ವೇಶ್ಯಾವೃತ್ತಿಯನ್ನು ಪ್ರಾರಂಭಿಸಲಿರುವ ಮನೋರಮೆಗೆ ಎಂಥವನು ನಾಯಕನಾಗಬೇಕು, ಎಂದು ಸದಾನಂದನೇ ಖುದ್ದಾಗಿ ವಿಚಾರಿಸುತ್ತಾನೆ. ಆತನಿಗೆ ಆಕೆಯನ್ನು ಪಡೆಯಬೇಕೆಂಬ ಚಪಲ ಇದ್ದರೂ ಆಕೆಯ ಮನಸ್ಸನ್ನು ತಿಳಿಯದೆ ದುಡುಕುವುದಕ್ಕೆ ಹಿಂಜರಿಯುತ್ತಾನೆ. ಪ್ರಾಯ ಇಲ್ಲದಿದ್ದರೂ, ವೇಶ್ಯೆಯಾಗಲಿರುವ ಆಕೆಯನ್ನು ಹಣದ ಪ್ರಭಾವದಿಂದ ಗೆಲ್ಲಬಲ್ಲನೆಂಬ ‘ಹಮ್ಮೂ’ ಇದ್ದೇ ಇದೆ. ಆದರೆ ತನ್ನ ನಾಯಕನಾಗುವವನಿಗೆ ಹೆಚ್ಚು ದುಡ್ಡಿಲ್ಲದಿದ್ದರೆ ಚಿಂತೆಯಿಲ್ಲ ಆತನು ರೂಪವಂತನೂ ವಿದ್ಯಾವಂತನೂ ಆದರೆ ಸಾಕು, ಎಂಬ ಮನೋರಮೆಯ ಮನೋಗತವನ್ನು ತಿಳಿದಮೇಲಂತೂ ಆತ ಸಿರಿವಂತಿಕೆಯ ಹಮ್ಮೂ ಕರಗಿ ಆತನಿಗೆ ತೀರಾ ನಿರಾಶೆಯಾಗುತ್ತದೆ. ಆ ನಿರಾಸೆಯೇ ಕಾರಣವಾಗಿ ಬೆಳಗಾಗುವುದರಲ್ಲಿ ಆತ ಕಾಯಿಲೆಯಿಂದ ಹಾಸಿಗೆ ಹಿಡಿಯುತ್ತಾನೆ. ಚಂಪೆಯೇ ಮೊದಲಾದ ‘ಅಪ್ಸರೆ’ಯರ ಸಹವಾಸದ ಪ್ರಸಾದರೂಪವಾಗಿ ಕಾಯಿಲೆಯಾಗುತ್ತದೆ. ಆ ಸ್ಥಿತಿಯಲ್ಲಿಯೂ ಚಂಪೆಯನ್ನು ಕರೆಸಿಕೊಂಡು ಏಕಾಂತದಲ್ಲಿ ಬೇಕಾದಷ್ಟು ಹಣ ಕೊಟ್ಟು ಮನೋರಮೆಯನ್ನು ಪಡೆಯುವ ಯೋಚನೆ ಮಾಡುತ್ತಾನೆ. ಮನೋರಮೆಯನ್ನು ಒಪ್ಪಿಸುವುದಾಗಿ ಭಾಷೆಕೊಟ್ಟು ಚಂಪೆ ತೆರಳುತ್ತಾಳೆ.

ಮನೋರಮೆಯನ್ನು ಸದಾನಂದನಿಗೆ ಅನುಕೂಲಳನ್ನಾಗಿ ಮಾಡಿಸುವೆನೆಂದು ಭಾಷೆಕೊಟ್ಟು ತನ್ನ ಮನೆಗೆ ಬಂದ ಚಂಪೆ ಮನೋರಮೆಯೊಡನೆ ಈ ವಿಷಯದ ಪ್ರಸ್ತಾಪಕ್ಕೆ ಪ್ರಸ್ತಾವನೆ ಹಾಕುತ್ತಿರುವಷ್ಟರಲ್ಲಿಯೇ ಚಂಪೆಯನ್ನು ಸದಾನಂದರಲ್ಲಿಗೆ ತಿರುಗಿ ಕರೆದುಕೊಂಡು ಹೋಗಲು ಸದಾನಂದರ ಮನೆಯ ಜವಾನನೊಬ್ಬನು ಬರುತ್ತಾನೆ.

ಚಂಪೆ ಹೋಗಿ ನೋಡಿದಾಗ ಯಾವ ಮುಖವು ಸ್ವಲ್ಪಹೊತ್ತಿನ ಮೊದಲು ನಿರಾಶೆಯ ಸೂರ್ಯಕಿರಣದಿಂದ ಬಾಡಿಹೋಗಿ ಪುನಃ ಆಶಾಚಂದ್ರನ ಬೆಳದಿಂಗಳಿಂದ ಬೆಳಗಿತೋ ಅದು ಈಗ ಮ್ಲಾನವಾಗಿತ್ತು. ಸಂತೋಷವು ಹೆಚ್ಚಾದುದರಿಂದಲೇ ಈ ಶಕ್ತಿ ಶೂನ್ಯವಾದ ದೇಹಕ್ಕೆ ಅದು ಸಹನವಾಗದೆ ಅವನ ನಿರ್ಭಾಗ್ಯ ಶರೀರವು ಪಕ್ಷಪಾತಕ್ಕೆ ಗುರಿಯಾಗಿ‌ತ್ತು. ಜೀವನ್ಮೃತನಂತಾದ ಸದಾನಂದನು ತನ್ನ ಅವಸ್ಥೆಯನ್ನು ಕಂಡು ಅಳುತ್ತಿದ್ದ ಚಂಪೆಗೆ ಮನೋರಮೆಯೊಡನೆ ಯಾವ ವಿಚಾರವನ್ನು ಎತ್ತಕೂಡದೆಂದು ಕಣ್ಸನ್ನೆ ಮಾಡಿಯೇ ತಿಳಿಸಿದನು. ತಂದೆಗೆ ತೀವ್ರ ಕಾಯಿಲೆಯೆಂದು ಆನಂದನನ್ನೂ ತಂತಿಕೊಟ್ಟು ಕರೆಸಲಾಯಿತು. ಮನೆಗೆ ಬಂದ ಆನಂದನಿಗೆ ತಂದೆಯ ಅವಸ್ಥೆ ಕಂಡು ತುಂಬಾ ದುಃಖವಾಗುತ್ತದೆ. ಆದರೆ ಪತಿಭಕ್ತೆಯೂ, ಆದರ್ಶ ಗೃಹಿಣಿಯೂ ಆದ ಆತನ ಪತ್ನಿ ಭಾಗ್ಯಲಕ್ಷಿಯ ಸಹವಾಸ ಆ ದುಃಖವನ್ನು ಮರೆಸುತ್ತದೆ.

ಹೀಗಿರುವಾಗ ದುರ್ದೈವದಿಂದ ಸದಾನಂದನ ಮಗ ಆನಂದ ಮೆಲ್ಲನೆ ಪೋರನ ಸ್ನೇಹಕ್ಕೆ ಬಲಿಯಾಗಿ ಅಲ್ಲಿಂದ ಪೋರನ ಸಹೋದರಿ ಮನೋರಮೆಯ ಬಲೆಗೆ ಬೀಳುತ್ತಾನೆ. ವಿದ್ಯಾವಂತನೂ ಸದ್ಗುಣಿಯೂ ಅಗಿದ್ದ ಆತ ಭಾಗ್ಯಲಕ್ಷ್ಮಿಯಂತಿದ್ದ ಭಾಗ್ಯಲಕ್ಷ್ಮಿಯೆಂಬ ಪತಿವ್ರತೆಯಾದ ಹೆಂಡತಿ ಇದ್ದಾಗಲೂ ದಾರಿತಪ್ಪಿದುದನ್ನು ಕಂಡು ನನ್ನ ಮಗನೂ ತನ್ನಂತೆಯೇ ಕೊನೆಯಲ್ಲಿ ತನ್ನ ಕರ್ಮದ ಕ್ರೂರ ಫಲವನ್ನು ಅನುಭವಿಸಬೇಕಾದೀತೆಂದು ಸದಾನಂದ ಭಯಗೊಳ್ಳುತ್ತಾನೆ. ಹಾಗೆಯೇ ಅದರ ಜೊತೆಗೆ ನಿರಪರಾಧಿನಿಯೂ ಪತಿಭಕ್ತೆಯೂ ಆದ ಭಾಗ್ಯಲಕ್ಷ್ಮಿ ನಿಷ್ಕಾರಣವಾಗಿ ಅನುಭವಿಸಬೇಕಾಗಿ ಬಂದ ಕಷ್ಟ, ದುಃಖ ಆತನನ್ನು ಬಹುವಾಗಿ ನೋಯಿಸುತ್ತದೆ. ತನ್ನ ಮಗ ಆನಂದನಿಗೆ ತನ್ನ ಕರ್ಮಪಲಗಳೆಲ್ಲವನ್ನೂ ಹೇಳಿಯಾದರೂ ಸನ್ಮಾರ್ಗಕ್ಕೆ ತರಲಾದೀತೆ, ಎಂದು ಹಲುಬುತ್ತಾನೆ. ಹಾಗೆ ಮಾಡಿಯೂ ಮಾಡುತ್ತಾನೆ. ಆದರೆ ಮಗ ಅನಂದ ತಂದೆಯ ಮಾತನ್ನು ಕಿವುಡುಗೇಳುತ್ತಾನೆ. ಇಷ್ಟೇ ಅಲ್ಲ, ತಂದೆಯ ಉಪದೇಶ ಕೇಳುವುದಕ್ಕೆ ಹೆಚ್ಚು ಹೊತ್ತು ಅಲ್ಲಿ ಕುಳಿತಿರುವುದಿಲ್ಲ.

ಆನಂದ ಮನೋರಮೆಗೆ ಹೊಸ ಸೀರೆ ಕೊಡಿಸುವ ಉತ್ಸಾಹದಲ್ಲಿ ತನ್ನ ಹೆಂಡತಿಯ ಸೀರೆಗಳನ್ನು ಕದಿಯುವ ಗುಪ್ತಾಲೋಚನೆಯನ್ನು ಪೋರನೊಂದಿಗೆ ಮಾಡುತ್ತಿರುವುದು ಹೇಗೊ ಭಾಗ್ಯಲಕ್ಷ್ಮಿಯ ಕಿವಿಗೆ ಬೀಳುತ್ತದೆ. ಆಕೆ ಜಾಣತನದಿಂದ ಕಾವಲಿರುತ್ತಾಳೆ. ಆನಂದ ಸೀರೆ, ಒಡವೆಗಳನ್ನು ಹಾರಿಸಲು ಬಂದಾಗ ಆತನ ಕಾಲುಗಳನ್ನು ತಬ್ಬಿಕೊಂಡು ಅತ್ತು ಆತನನ್ನು ದುಮಾರ್ಗದಿಂದ ತಿರುಗಿಸಲು ಪ್ರಯತ್ನಿಸಿದರೂ ಸಫಲಳಾಗುವುದಿಲ್ಲ. ಆನಂದ ಮನೆಗೇ ತಿರುಗಿ ಬರುವುದಿಲ್ಲವೆಂದು ಹೇಳಿ ಹೊರಟುಹೋಗುತ್ತಾನೆ.

ಭಾಗ್ಯಲಕ್ಷ್ಮಿ ತನ್ನ ಕಷ್ಟಗಳೆಲ್ಲವನ್ನೂ ತನ್ನ ಪೂರ್ವಜನ್ಮದ ಕರ್ಮಫಲವೆಂದು ಭಾವಿಸಿ ಅನುಭವಿಸಲು ಸಂಕಲ್ಪಸುತ್ತಾಳೆ. ಸದಾನಂದ ತನ್ನ ಪೂರ್ವಕರ್ಮಕ್ಕೆ ಪಶ್ಚಾತ್ತಾಪಪಟ್ಟು ಖಾದಿ ವಸ್ತ್ರಧಾರಿಯಾಗುವವರೆಗೆ ಪರಿವರ್ತನೆ ಹೊಂದುತ್ತಾನೆ. ಭಾಗ್ಯಲಕ್ಷ್ಮಿ ತನ್ನ ಮನೆಯೆಲ್ಲ ಆನಂದನ ದುಂದುಗಾರಿಕೆಯಿಂದ ಬರಿದಾಗಿ ಹೋದುದರಿಂದ ರಾಟೆ ಹಿಡಿದು ನೂತು ಜೀವನ ಸಾಗಿಸುವ ಸಂಕಲ್ಪ ಮಾಡುತ್ತಾಳೆ. ಆ ಕಾಲದಲ್ಲೂ ಮಾವನಿಗೆ ಬಡತನದ ಅರಿವಾಗದಂತೆ ಆತನ ಮನಸ್ಸು ನೋಯದಂತೆ ನಡೆದುಕೊಳ್ಳಲು ಹವಣಿಸುತ್ತಾಳೆ. ಆದರಿಂದ ತನ್ನ ಸೊಸೆ ಸೀತಾದೇವಿಗೆ ಸಮಾನ ಎಂಬಂಥ ಭಾವನೆ ಸದಾನಂದನಲ್ಲಿಯೂ ಉಂಟಾಗುವಂತಾಗುತ್ತದೆ. ತನ್ನ ಸಾವು ನಿಶ್ಚಿತವೆಂದು ತಿಳಿದಾಗ ಸದಾನಂದ ಆಕೆಯನ್ನು ಕರೆದು ತೌರುಮನೆಗಾದರೂ ಹೋಗಿ ಬದುಕುವಂತೆ ಉಪದೇಶಿಸುತ್ತಾನೆ. ಆದರೂ ಆಕೆ ಕಾರಣವನ್ನು ವಿವರಿಸದೆ ತಾನು ಅಲ್ಲೇ ಇರುವುದಾಗಿ ಹೇಳುತ್ತಾಳೆ. ಬಹಳ ದಿನಗಳ ಹಿಂದೆ ಬಂದ ಪತ್ರದಲ್ಲಿದ್ದ ತಂದೆ ತಾಯಿಯರು ಮನೆಸಹಿತ ಸುಟ್ಟು ಹೋದರೆಂಬ ದುರ್ವಾತೆಯನ್ನು ಈಗ ಮಾವನಿಗೆ ಆಕೆ ಹೇಳಲೇಬೇಕಾಗಿ ಬರುತ್ತದೆ. ಇದನ್ನು ಕೇಳಿದ ಸದಾನಂದ ಮೂರ್ಛೆ ಹೋಗುತ್ತಾನೆ. ತಿರುಗಿ ಎಚ್ಚರವಾದ ಮೇಲೆ ತಾನು ಒಂದುಮರದ ಕೆಳಗೆ ಒಂದು ಲಕ್ಷ ರೂಪಾಯಿಗಳನ್ನು ಹೂತಿಟ್ಟುದನ್ನು ಆಕೆಗೆ ತಿಳಿಸುತ್ತಾನೆ. ಹಾಗೆಯೇ ಆ ಹಣದಲ್ಲಿ ಆಕೆಯ ಜೀವನಕ್ಕೆ ಬೇಕಾದುದನ್ನು ಆಕೆ ತೆಗೆದುಕೊಳ್ಳಲು ಹೇಳುತ್ತಾನೆ. ಉಳಿದ ಹಣದಿಂದ ನಮ್ಮಿಂದ ಯಾರು ಹಾಳಾಗುತ್ತಾರೋ, ಯಾರಿಂದ ನಾವು ಹಾಳಾಗುವೆವೋ ಅಂತಹ ‘ನಿರ್ಭಾಗ್ಯ ಜನ್ಮ’ಧಾರಿಗಳಾದ ಗಣಿಕೆಯರ ಕುಲವನ್ನು, ಒಂದಲ್ಲ ಒಂದು ಬಗೆಯಿಂದ ಉದ್ಧರಿಸುವ ಹಿಂದೂ ಸಮಾಜದ ಆ ಕಲಂಕವನ್ನು ಹೋಗಲಾಡಿಸುವ, ಯೋಗ್ಯ ಸೂತ್ರಧಾರಿಗಳನ್ನಾರಿಸಿ, ಆ ಕೆಲಸವನ್ನಾರಂಭಿಸಿ ಯತ್ನಿಸು ಅಷ್ಟು ಮಾಡಿದರೆ, ನನ್ನ ಆತ್ಮಕ್ಕೆ ಶಾಂತಿಯುಂಟಾಗಬಹುದು.. ಏನು? ಮಾಡಿಸುವಿಯಾ, ನನ್ನನ್ನು ಕ್ಷಮಿಸುವಿಯಾ?” ಎಂದು ಸದಾನಂದ ಹೇಳಿದ ಆರ್ಧ ತಾಸಿನಲ್ಲೇ ಆತನ ಇಹಲೀಲೆಯೂ ಮುಗಿಯುತ್ತದೆ. ಇಲ್ಲಿಗೆ ಕಥೆಯ ಒಂದು ಘಟ್ಟ ಮುಗಿಯುತ್ತದೆ.

ಮುಂದೆ, ಪತಿಯಿಂದ ತಿರಸ್ಕೃತಳಾದ ಭಾಗ್ಯಲಕ್ಷ್ಮಿ ಅನಾಥೆಯಾಗಿ ಯಾವುದೋ ಪರ್ಣಕುಟೀರದಲ್ಲಿ ನಿರ್ಭಾಗ್ಯ ಲಕ್ಷ್ಮಿಯಾಗಿ ಬದುಕಬೇಕಾಗುತ್ತದೆ. ಇಂದು ತನ್ನ ಪಾಲಿಗೆ ಬಂದಿರುವ ಈ ದಾರುಣ ವ್ಯಥೆಯು ತನ್ನ ಪೂರ್ವಜನ್ಮಗಳ ಸಂಚಿತ ಪಾಪಗಳ ಫಲವೆಂದೂ ಇಂದು ಅಂತಹ ಪರೀಕ್ಷೆಗಳಲ್ಲಿ ತುಂಬಾ ಸಹನಶಕ್ತಿಯನ್ನು ತೋರಿ ಉತ್ತೀರ್ಣಳಾದಳೆಂದರೆ, ಮುಂದೆ ಸುಖದ ದಿವಸಗಳು ಬಂದೇ ಬರುವವೆಂದೂ ಅವಳು ದೃಢವಾಗಿ ತಿಳಿದಿದ್ದಳು. ಅದಕ್ಕಾಗಿ ಅವಳು ಚಿಂತೆಯಿಂದ ಕೊರಗುತ್ತಿರದೆ ವಿರಾಮದಲ್ಲೆಲ್ಲಾ ರಾಟೆಯನ್ನು ತಿರುವುತ್ತಲೂ ಪತಿಗೆ ಸಮೃದ್ಧಿಯುಂಟಾಗಲೆಂದು ಭಗವಂತನ್ನು ಪ್ರಾರ್ಥಿಸುತ್ತಲೂ ಕಾಲವನ್ನು ಕಳೆಯುತ್ತಿದ್ದಳು.

ಆ ಕಾಲಕ್ಕೆ ಭಾಗ್ಯಲಕ್ಷ್ಮಿಯ ಚಿಕ್ಕ ಮನೆಯ ಬಳಿಯಲ್ಲಿಯೇ ವೆಂಕು ಎಂಬೊಬ್ಬ ದಾಸಿಯ ಮನೆಯಿತ್ತು. ಆ ದಾಸಿ ಐವತ್ತು ಮೀರಿದ ಪ್ರಾಯದವಳು. ಆಕೆ ಭಾಗ್ಯಲಕ್ಷ್ಮಿಯ ಮೆನಗೆ ಬಂದು ಹೋಗುತ್ತಾ ಊರಿನ ಎಲ್ಲಾ ಸುದ್ದಿ ಸಮಾಚಾರಗಳನ್ನು ಕುರಿತು ಹರಟುತ್ತಿದ್ದಳು. ಇಂಥ ಬಂಡು ಹರಟೆಗಳಲ್ಲಿ ಭಾಗ್ಯಲಕ್ಷ್ಮಿಗೆ ಆಸಕ್ತಿ ಇರಲಿಲ್ಲ. ಆಕೆಗೆ ಭಯವಾಗುತ್ತಿದ್ದುದರಿಂದ ಈ ಮುದುಕಿ ರಾತ್ರಿ ಮಲಗಲು ಬರುವುದರಿಂದ ಆಕೆಯ ಮನಸ್ಸು ನೋಯಿಸುವ ಇಷ್ಟವಿರಲಿಲ್ಲ. ಆದರೆ, ವೆಂಕು ತುಂಬಾ ‘ಸರ್ವೀಸಾ’ದ ಹಣ್ಣಿನ ಜಾತಿ. ಒಂದು ದಿನ ಭಾಗ್ಯಲಕ್ಷ್ಮಿಗೆ ತನ್ನ ಜೀವನವನ್ನೇ ದೃಷ್ಟಾಂತವಾಗಿ ಕೊಟ್ಟು ‘ವ್ಯಭಿಚಾರಯೋಗ’ದ ಉಪದೇಶ ಮಾಡಹೊರಟಳು. ಇದರಿಂದ ಭಾಗ್ಯಲಕ್ಷ್ಮಿಗೆ ಕೋಪ ಬಂದು, ಇನ್ನು ಮುಂದೆ ಇಲ್ಲಿಗೆ ಬರುವುದಾದರೆ ಅಮತಹ ಅಸಂಬದ್ಧಗಳನ್ನೆಂದಿಗೂ ಆಡಕೂಡದು. ಈ ಪಾಪಮಯ ಉಪದೇಶವನ್ನು ನನಗೆ ಕೊಡುವುದಾದರೆ ನೀನಿಲ್ಲಿಗೆ ಬರುವುದೇ ಬೇಡ” ಎಂದು ವೆಂಕುಗೆ ನಿರ್ದಾಕ್ಷಿಣ್ಯವಾಗಿ ಹೇಳಿದಳು.

ಇದರಿಂದ ವೆಂಕುಗೆ ಮುಖಭಂಗವಾಯಿತು. ಆದ್ದರಿಂದ ಆಕೆಗೆ ಪ್ರತೀಕಾರದ ಯೋಚನೆ ಅಂಟಿತು.

ಮಾರನೆಯ ದಿನ ವೆಂಕುಗೆ ಮನೋರಮೆಯ ಮನೆಯಲ್ಲಿ ಆನಂದನ ಭೇಟಿಯಾಯಿತು. ಸಮಯ ಸಾಧಿಸಿ ಆಕೆಯು ಭಾಗ್ಯಲಕ್ಷ್ಮಿಯ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಆಕೆಯ ನಡತೆ ಅಪರಿಶುದ್ಧವೆಮದು ಹೇಳಿದಳು. ಆನಂದ ಕಾಮಾಂಧನೇ ಆಗಿದ್ದರೂ ತನ್ನ ಹೆಂಡತಿಯ ಶೀಲದ ಬಗ್ಗೆ ಸಾಕಷ್ಟು ನಂಬಿಕೆಯಿದ್ದವನಾದ್ದರಿಂದ ವೆಂಕುವಿನ ಮಾತುಗಳನ್ನು ನಂಬಲಿಲ್ಲ. ಆದ್ದರಿಂದ ಇನ್ನಷ್ಟು ಅವಮಾನಿತಳಾದ ವೆಂಕು “ಒಂದು ದಿನ ತಕ್ಕ ನಿದರ್ಶನವನ್ನು ತೋರಿಸಿದರಾಯಿತಷ್ಟೆ” ಎಂದು ಹೇಳಿ ಹೊರಟುಹೋದಳು.

ಮಧ್ಯಾಹ್ನ ಮನೆಗೆ ಹೋಗುವ ವೇಳೆಗೆ ಆಕೆಗೆ ಪೋರನ ದರ್ಶನವಾಯಿತು. ಆತ ಆಕೆಗೆ ಭೇಟಿಯಾಗಬೇಕೆಂದು ಹೇಳಿ ಕಳಿಸಿದ್ದ. ಪೋರನ ಕಾಮುಕ ದೃಷ್ಟಿ ಭಾಗ್ಯಲಕ್ಷ್ಮಿಯ ಯೌವನದ ಮೇಲೆ ಬಿದ್ದಿತ್ತು. ವೆಂಕುವಂಥ ಮುದುಕಿಯನ್ನು ಬಲೆಗೆ ಹಾಕಿಕೊಂಡರೆ ಭಾಗ್ಯಲಕ್ಷ್ಮಿಯನ್ನು ವಶಪಡಿಸಿಕೊಳ್ಳಬಹುದೆಂಬ ಯೋಚನೆ ಅವನದು. ಇಬ್ಬರೂ ಸಾಕಷ್ಟು ಮಂತ್ರಾಲೋಚನೆ ಮಾಡಿದ ಮೇಲೆ ಬಲವಂತದಿಂದ ಅವಳನ್ನು ವಶಪಡಿಸಿಕೊಳ್ಳುವುದೆಂದೂ ಅದಕ್ಕಾಗಿ ಭಾಗ್ಯಲಕ್ಷ್ಮಿ ನಿದ್ರೆ ಮಾಡುತ್ತಿರುವಾಗ ಮೂಗಿಗೆ ‘ಕ್ಲೋರೋಫಾರ್ಮ’ ಹಿಡಿದು ಆಕೆ ನಿಶ್ಚೇಷ್ಟಿತಳಾಗಲು ಆಕೆಯನ್ನು ಬಂಧಿಸಿ ಹೊತ್ತುಕೊಂಡು ಒಂದು ಗೌಪ್ಯ ಸ್ಥಳದಲ್ಲಿಡಬೇಕೆಂದೂ ನಿರ್ಣಯಿಸಿದರು.

ಇತ್ತ ಧನಕ್ಷಯವಾಗುತ್ತ ಬಂದ ಆನಂದನಿಗೆ ಮನೋರಮೆಯ ಮನೆಯಲ್ಲಿ ಗೌರವಕ್ಷಯವು ಆಗುತ್ತ ಬಂತು. ಆನಂದ ದುಡ್ಡುಕೊಡಬಲ್ಲ ಉಡುಪಿಯಲ್ಲಿ ಹೆವ್ವಿ ಪ್ರಾಕ್ಟೀಸ್ ಇರುವ ಡಾಕ್ಟರ್ ಶಾಮರಾವ್‌ರವರನ್ನು ಮನೋರಮೆಯ ಮನೋವಲ್ಲಭನನ್ನಾಗಿ ಮಾಡುವ ವಿಚಾರದಲ್ಲಿ ಪೋರ ಮತ್ತು ಡಾಕ್ಟರರ ಮಧ್ಯೆ ಒಪ್ಪಂದವಾಗಿತ್ತು. ಆ ಸಲುಗೆಯಿಂದ ಪೋರ ಅವರಲ್ಲಿಗೇ ಹೋಗಿ ತನಗೆ ಬೇಕಾದ ಕ್ಲೋರೋಫಾರ್ಮಿನ ರೆಡಿಸಪ್ಲೈ ಪಡೆದನು.ಆನಂತರ ಮನೆಗೆ ಬಂದ ಪೋರನು ಆನಂದನ ಕಡೆಗೆ ಸಂಪೂರ್ಣ ತಿರಸ್ಕಾರಭಾವದಿಂದ ನೋಡತೊಡಗಿದನು. ಈ ವಿಚಿತ್ರ ಮರ್ಜಿಗೆ ಕಾರಣವೇನೆಂದು ಆನಂದನು ಪೋರನನ್ನು ಪ್ರಶ್ನಿಸಿದಾಗ “….ನಮ್ಮಂತಹವರಿಗೆ ಜನ್ಮವೇತಕ್ಕೆ?” ಎಂಬ ನಿಷ್ಠುರವಾದ ಉತ್ತರವನ್ನು ಪಡೆಯಬೇಕಾಯಿತು. ಇನ್ನು ತಾನಿಲ್ಲಿ ನಿಲ್ಲುವುದು ಗೌರವವಲ್ಲವೆಂದು ತಿಳಿದ ಆನಂದನು ಹೊರಡುವ ಮುನ್ನ ಮನೋರಮೆಯನ್ನು ಕಂಡು ಹೋಗಿ ಬರುವೆನು ಎಂದು ಹೇಳೀ ಆಕೆಯಿಂದ ಮೌನವನ್ನೇ ಉತ್ತರವಾಗಿ ಪಡೆದು ಆ ಮನೆಯಿಂದ ಹೊರಟೇ ಹೊರಟನು. ಆನಂದ ಹೊರಟುಹೋದನೆಂದು ಮನೋರಮೆಗೆ ದುಃಖವಾದರೂ ಪೋರ ಸಮಾಧಾನಗೊಳಿಸುವಷ್ಟು ಸಮರ್ಥನಾಗಿದ್ದ.

ಆನಂದ ಹೀಗೆ ತಮ್ಮ ಮನೆಯಿಂದ ಹೊರಟೇಹೋದದ್ದರಿಂದ ಪೋರನಿಗೆ ತನ್ನ ಕೆಲಸದ ಜರೂರಿ ಅರ್ಥವಾಯಿತು. ಇಲ್ಲಿಂದ ಹೋದ ಆನಂದ ತನ್ನ ಪತ್ನಿ ಭಾಗ್ಯಲಕ್ಷ್ಮಿಯನ್ನು ಸೇರಿದರೆ ಸಾಧ್ವಿಯಾದ ಆಕೆ ಪತಿಯ ತಪ್ಪುಗಳು ಎಷ್ಟಿದದರೂ ಮರೆತು ಪತಿಯನ್ನು ಪುನಃ ಪ್ರೀತಿಯಿಂದ ತಬ್ಬಿಕೊಳ್ಳದಿರಲಾರಳು. ಆದ್ದರಿಂದ ಆ ಇಬ್ಬರ ಮೈತ್ರಿಯುಂಟಾಗುವ ಮೊದಲೇ ತನ್ನ ಕಾರ್ಯಸಾಧನೆ ಮಾಡಿಕೊಳ್ಳಬೇಕೆಂದು ನಿಶ್ಚಯಿಸಿ ಪೋರ ವೆಂಕಿಯನ್ನು ಭಾಗ್ಯಲಕ್ಷ್ಮಿಯಲ್ಲಿಗೆ ಆ ರಾತ್ರೆ ಕಳಿಸಿದನು. ರಾತ್ರೆ ಮಾಮೂಲು ಮಾತುಕಥೆಯಾದ ಬಳಿಕ ಭಾಗ್ಯಲಕ್ಷ್ಮಿಯು ಮಲಗಿ ನಿದ್ದೆ ಹೋದಳು. ಆ ಸಂದರ್ಭದಲ್ಲಿ ವೆಂಕಿಯು ಆಕೆಯ ಮೇಲೆ ಕ್ಲೋರೋಫಾರ್ಮಿನ ಪ್ರಯೋಗ ಮಾಡಿದಳು. ಕೂಡಲೇ ಕಾದು ನಿಂತಿದ್ದ ಪೋರ ಹಾಜರಾದ. ಇಬ್ಬರೂ ಸೇರಿ, ಆ ಕೋಮಲ ಬಾಲೆಯ ಕೈಕಾಲುಗಳನ್ನು ಬಂಧಿಸಿ, ಮನೆಯಿಂದ ಹೊರಕ್ಕೆ ತಂದು ಆ ಗಾಡಾಂಧಕಾರ ಮಧ್ಯದಲ್ಲಿ ಎಲ್ಲಿಗೋ ಸಾಗಿಸಿದರು.

” ಆ ಸುಕುಮಾರಿಯ ಈ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣಳಾಗುವಳೋ ಇಲ್ಲವೇ ಬಲಿ ಬೀಳುವಳೋ ಎಂದು ಹೇಗೆ ಊಹಿಸಲಿ” ಎಂದು ಕಾದಂಬರಿಕಾರರು ೧೭ನೇ ಅಧ್ಯಾಯವನ್ನು ಮುಗಿಸಿರುವುದರಿಂದ ಸದ್ಯಕ್ಕೆ ನಮ್ಮ ಉದ್ಗಾರವೂ ಇದೇ ಆಗುವಂತಾಗಿದೆ. ಇನ್ನು ಇದರ ಜೊತೆಗೆ ಮನೋರಮೆಯ ಮನೆಯಿಂದ ಆನಂದನು “ಹೊರಟೇ ಹೊರಟನು, ಎಲ್ಲಿಗೆ? ಎಂಬ ವಿಚಾರವು ಮುಂದೆ ತಿಳಿಯುವುದು” ಎಂದು ಕಾದಂಬರಿಕಾರರು ಹೇಳಿದ್ದರಿಂದಲೂ ಹದಿನೇಳನೆಯ ಅಧ್ಯಾಯದ ಕೊನೆಯೂ ಈ ಮೇಲಿನಂತೆ ಇರುವುದರಿಂದಲೂ ಇನ್ನೂ ಕೆಲವು ಕಾರಣಗಳಿಂದಲೂ ಕಥೆ ಮುಗಿದಿಲ್ಲವೆಂಬುದಂತೂ ಸ್ಪಷ್ಟವಾಗುತ್ತದೆ.

ದೊರೆತಿರುವ ಭಾಗಗಳಷ್ಟನೇ ಗಮನಿಸಿ “ನಿರ್ಭಾಗ್ಯ ಜನ್ಮ”ವನ್ನು ಕುರಿತು ಮಾಡುವ ವಿಮರ್ಶೆ ಪೂರ್ಣವಿಮರ್ಶೆಯಾಗಲಾರದಾದರೂ ಸಾಮಾನ್ಯವಾದ ಕೆಲವು ಮಾತುಗಳನ್ನು ಹೇಳಬಹುದಾಗಿದೆ. ಕಾರಂತರ ಪತ್ತೇದಾರಿ ಕಾದಂಬರಿಗಳಾದ ‘ವಿಚಿತ್ರಕೂಟ’, ‘ಭೂತ\’ ಕಾದಂಬರಿಗಳಲ್ಲಿ ಕಾರಂತರ ಜೀವನಾನುಭವ ಮತ್ತು ಅದರ ಕಲಾತ್ಮಕ ಅಭಿವ್ಯಕ್ತಿಯ ಕುರಿತಾದ ಹುಡುಕಾಟ ಯಾವುದೂ ಕಂಡುಬರುವುದಿಲ್ಲ. ಆದರೆ ಕಾರಂತರ ಜೀವನಾನುಭವ ಮತ್ತು ಅದರ ಕಲಾತ್ಮಕ ಅಭಿವ್ಯಕ್ತಿಯ ಕುರಿತಾದ ಹುಡುಕಾಟದ ದೃಷ್ಟಿಯಿಂದ, ಇನ್ನೂ ಖಚಿತವಾಗಿ ಹೇಳುವುದಾದರೆ ಸಾಹಿತಿಯಾಗಿ ಕಾರಂತರ ಕಲಾತ್ಮಕ ವ್ಯಕ್ತಿತ್ವದ ನಿರ್ದಿಷ್ಟವಾದ ಪ್ರಾರಂಭಾವಸ್ಥೆಯನ್ನು ಗುರುತಿಸುವ ದೃಷ್ಟಿಯಿಂದ “ನಿರ್ಭಾಗ್ಯಜನ್ಮ” ಕ್ಕಿರುವ ಮಹತ್ವ ‘ವಿಚಿತ್ರಕೂಟ’, ‘ಭೂತ’ಗಳಿಗೆ ಖಂಡಿತ ಇಲ್ಲ. ತನ್ನ ಸುತ್ತಮುತ್ತಲಿನ ಪರಿಸರ, ಪ್ರಭಾವಗಳಿಂದ ತನ್ನಲ್ಲಿ ರೂಪುಗೊಂಡ ಜೀವನಾನುಭವಗಳಿಗೆ ಕಲೆಗಾರ ಕಾರಂತರು ಕಾದಂಬರಿ ರೂಪ ಕೊಡುವ ಪ್ರಾರಂಭದ ಪ್ರಯತ್ನ ‘ನಿರ್ಭಾಗ್ಯ ಜನ್ಮ’ದಲ್ಲಿ ಸ್ಷಷ್ಟವಾಗಿದೆ. ಅನುಭವ ನಿರೂಪಣೆಗಳಲ್ಲಿ ಪ್ರಕಟವಾಗಿರುವ ಭಾವಾತಿರೇಕ, ಎಳಸುತನ ಇವೆಲ್ಲ ಅಪ್ರಬುದ್ಧತೆಯ ದೋಷಗಳೇ ಹೊರತು ಮೂಲಭೂತವಾಗಿ ವಸ್ತುವಿನ ಸಾಚಾತನಕ್ಕೆ, ಕಾದಂಬರಿಕಾರನ ಪ್ರಾಮಾಣಿಕತೆಗಳಿಗೆ ಸಂಬಂದಿಸಿದವುಗಳಲ್ಲ. (ಕಮಲಾ ಹೆಸರು ಇದ್ದಕ್ಕಿದ್ದಂತೆ ಮನೋರಮೆಯಾಗಿ ಬದಲಾದದ್ದೇಕೊ! ಅದೇನೇ ಇರಲಿ.) ಜೀವನಾನುಭವ ಮತ್ತು ಅದರ ಕಲಾತ್ಮಕ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಕಾರಂತತನದ ವಾಸನೆಯೇ ಇಲ್ಲದಂತಿರುವ ‘ವಿಚಿತ್ರಕೂಟ’ ‘ಭೂತ’ಗಳಿಗೂ ‘ನಿರ್ಭಾಗ್ಯ ಜನ್ಮ’ಕ್ಕೂ ಈ ದೃಷ್ಟಿಯಿಂದ ಗಮನಾರ್ಹವಾದ ವ್ಯತ್ಯಾಸವಿದೆ.*

೧೯೬೯

* ನಾನು ಅಧ್ಯಕ್ಷ ಮತ್ತು ಸಲಹೆಗಾರನಾಗಿದ್ದ ಮೈಸೂರಿನ ಚೇತನ ಕನ್ನಡ ಸಂಘದ ‘ಪುಸ್ತಕ ಪುರವಣಿ’ ಪತ್ರಿಕೆಯಲ್ಲಿ ಜನವರಿ ೧೯೮೩ರಲ್ಲಿ ಪ್ರಕಟವಾದ ಲೇಖನ.