ಶ್ಯಾಮ-ಲೀಲೆಯರ ಕಥಾಭಾಗ ಮುಗಿದ ಮೇಲೆ ಮತ್ತೆ ಮಧ್ಯದಲ್ಲಿಯೇ ನಿಂತುಹೋದಂತಿದ್ದ ಕಥೆ ಮುಂದುವರಿಯುತ್ತದೆ :

ಡಾ. ವಿನಯನ ವಿಚಾರಣೆ ನಡೆಸಿದಾಗ ಅರವಿಂದ, ಸುರನಾಥರಿಗೆ ವಿನಯ ಒರಟಾಗಿ ಆದರೂ ಆತ್ಮವಿಶ್ವಾಸದಿಂದ ಉತ್ತರ ನೀಡುತ್ತಾನೆ. ಶಂಕರತನಯನನ್ನು ಬಿಡುವಂತೆ ಮಾಡಿದರೆ ಮಾತ್ರ ವಿನಯನನ್ನು ಜೀವಂತವಾಗಿ ಬಿಡುವೆವೆಂದೂ ಇಲ್ಲವಾದರೆ ಆತನ ಸಾವು ನಿಶ್ಚಿತವೆಂದೂ ತಿಳಿಸಿದರೂ ಆತ ಗುಟ್ಟು ಬಿಟ್ಟುಕೊಡುವ ಹೇಡಿಯಾಗಿರಲಿಲ್ಲ.

ಆದರೂ ಅರವಿಂದ, ಸುರನಾಥ್ ಸಲಹೆಯ ಮೇರೆಗೆ ತಮ್ಮ ಕೂಟದ ಯಜಮಾನನಿಗೆ ಫೋನ್ ಮಾಡಲು ಒಪ್ಪಿ ಹಾಗೆ ಮಾಡಿದನು. ಆತ ಫೋನ್ ಮಾಡುವಾಗ ‘ವಿನಯನ ಗೌರವದ ಮೇಲೆ ನಂಬುಗೆಯನ್ನಿಟ್ಟು’ ಅವರು ದೂರದಲ್ಲಿಯೇ ನಿಂತರು. ‘ವಿಚಿತ್ರಕೂಟ’ ದವರ ಕೃತ್ಯಗಳೆಲ್ಲವೂ ಪೈಶಾಚಕೃತ್ಯಗಳೇ ಆಗಿದ್ದರೂ ಅವರ ಮೇಲೆ ನಂಬುಗೆಯನ್ನಿಟ್ಟಾಗ ಮಾತ್ರ ಅವರು ವಿಶ್ವಾಸಘಾತಕತನವನ್ನು ತೋರುವ ಪದ್ಧತಿಯವರಲ್ಲವು. ಇದರಿಂದಲೇ ಅವರು ವಿನಯನ ಮೇಲೆ ಗೌರವವನ್ನಿಟ್ಟು ದೂರ ನಿಂತುದು. ವಿಶ್ವಾಸವನ್ನಿಟ್ಟಂತೆಯೇ ವಿನಯನೂ ಸಹ ತನ್ನ ಕಾರ್ಯವನ್ನು ಪೂರೈಸಿ ಐದಾರು ನಿಮಿಷಗಳೊಳಗಾಗಿ ಅವರ ಬಳಿಗೆ ಬಂದು ಕೂಟದವರಿಗೆ ಶಂಕರನನ್ನು ಬಿಟ್ಟುಕೊಡುವ ವಿಚಾರವಿಲ್ಲವೆಂಬುದನ್ನೂ ಜೊತೆಗೆ ಇವರು ಸೆರೆಯಲ್ಲಿಟ್ಟಿದ್ದ ಐದು ಕೈದಿಗಳು ಈಗ ತಪ್ಪಿಸಿಕೊಂಡಿರುವರೆಂಬುದನ್ನೂ ತಿಳಿಸುತ್ತಾನೆ.

ಇದನ್ನು ಕೇಳಿ ಅರವಿಂದ, ಸುರನಾಥರಿಗೆ ಆಶ್ಚರ್ಯವುಂಟಾಗುತ್ತದೆ. ಅಲ್ಲದೆ ಸುರನಾಥರಿಗೆ ಹೇಗಾದರೂ ಮಾಡಿ ಅಂದರೆ ವಿನಯ, ಪ್ರಫುಲ್ಲರನ್ನು ಕೂಟದವರಿಗೊಪ್ಪಿಸಿಯಾದರೂ ಶಂಕರತನಯನನ್ನು ಬದುಕಿಸಿದರಾಗದೆ ಎಂದು ಅನಿಸುತ್ತದೆ. ಆದರೆ ತಾವು ಹಾಗೆ ಮಾಡುವುದು ಶಂಕರತನಯನಿಗೂ ಒಪ್ಪಿಗೆಯಾಗಲಾರದೆಂದು ಅರವಿಂದ ಅದಕ್ಕೆ ಒಪ್ಪುವುದಿಲ್ಲ. ಆದ್ದರಿಂದ ವಿನಯನನ್ನು ಬಂಧನದಲ್ಲಿಟ್ಟು ಶಂಕರತನಯನನ್ನು ‘ದೇವಮಂದಿರ’ದಲ್ಲಿಟ್ಟಿರುವರೆಂದು ವಿನಯ ಮತ್ತು ಕಠೋರ ಕುಮಾರನಿರಬಹುದೆಂದು ಊಹಿಸಿದ ವ್ಯಕ್ತಿಯ ಸಂಭಾಷಣೆಗಳ ಮೂಲಕ ಗೊತ್ತಾಗಿದ್ದರಿಂದ ದೇವಮಂದಿರದ ಪತ್ತೆ ಹಚ್ಚಬೇಕೆಂದು ಯೋಚಿಸಿದರು. ವಿನಯ ಹೇಳಿದಂತೆ ಆ ಐವರು ಕೈದಿಗಳು ತಪ್ಪಿಸಿಕೊಂಡು ಹೋದರೋ ಹೇಗೆಂಬುದನ್ನು ತಿಳಿದುಬರಲು ವಿನಯನನ್ನು ಪೋಲೀಸ್ ಠಾಣೆಯಲ್ಲಿಟ್ಟು ಸುರನಾಥನು ಹೋಗಬೇಕೆಂದಾಯಿತು. ಅರವಿಂದನು ‘ದೇವಮಂದಿರ’ದ ಪತ್ತೆಗೆಂದು ಹೊರಟನು.

ಐದು ಜನ ಕೈದಿಗಳ ವಿಷಯ ತಿಳಿಯಲೆಂದು ಬ್ಯಾಂಕಿನ ಗುಪ್ತಸುರಂಗವನ್ನು ನೋಡಲು ಹೋದ ಸುರನಾಥನಿಗೆ ಅಲ್ಲಿ ಯಾರ ಸುಳಿವೂ ಹತ್ತಲಿಲ್ಲ. ಆತ ಮುಂದುವರಿದಾಗ ಯಾರೋ ಪಿಸುಗುಟ್ಟಿದ ದನಿಯು ಆತನ ಕಿವಿಗೆ ಬಿದ್ದಿತು. ಆ ಸದ್ದು ತನ್ನ ಮನೋವೈಕಲ್ಯದ ಪರಿಣಾಮವಂದೂಹಿಸಿ ಆತ ಮುಂದುವರಿದಾಗ ಆ ಕೈದಿಗಳೈವರೂ ನಿಃಶಸ್ತ್ರರಾಗಿ ದೃಷ್ಟಿಗೆ ಗೋಚರರಾದರು. ವಿನಯನ ಮಾತು ಸುಳ್ಳಾಯಿತೆಂದು ಆತನು ಬಹಳ ಹರ್ಷಗೊಂಡನು. ‘ಅಷ್ಟರಲ್ಲಿಯೇ ಅವರಲ್ಲೊಬ್ಬ ಕೈದಿಯು ಮುಂದರಿಸಿ ಬಂದುದನ್ನು ಕಂಡೊಡನೆಯೇ ಅತನು ತನ್ನ ಕಿಸೆಯಿಂದ ಬಾರುಮಾಡಿದ ಪಿಸ್ತೂಲನ್ನು ಹೊರಕ್ಕೆ ತೆಗೆದು ‘ಇದೋ ನಿತ್ತಲ್ಲಿಂದ ಕದಲಿದರೆ ಜೋಕೆ ! ಮುಂದಕ್ಕೆ ಬರಬೇಡ’ ಎಂದು ಗದರಿಸಿದನು. ಮುಂದುವರಿದು ಬಂದ ಕೈದಿ ‘ಏನನ್ನು ಮಾಡುವೆ? ನನ್ನನ್ನು ನಿನ್ನ ಪಿಸ್ತೂಲಿಗೆ ಆಹುತಿಯನ್ನಾಗಿ ಮಾಡುವೆಯಾ?’ ಹೀಗೆಂದು ಹೇಳಿ ಮತ್ತೂ ಮುಂದುವರಿದು ಬಂದನು. ಆಗ ಸುರನಾಥನು ಅವನ ಕಾಲಿಗೆ ಗುರಿಯಿಟ್ಟು ಹೊಡೆಯಬೇಕೆನ್ನುವಷ್ಟರಲ್ಲಿ ಹಿಂದಣಿಂದ ಯಾರೋ ಒಬ್ಬ ಬಲವಾದ ಮನುಷ್ಯನು ಅವನನ್ನು ಅಮುಕಿ ಹಿಡಿದು, ಅವನ ಕೈಯಿಂದ ಪಿಸ್ತೂಲನ್ನು ಕಿತ್ತುಕೊಂಡನು. ಸುರನಾಥನು ಇನ್ನೊಂದಾವೃತ್ತಿ ಕೂಟದವರ ಕೈವಶವಾದನು.

ಇತ್ತ ಅರವಿಂದನು ‘ದೇವಮಂದಿರ’ವಂದರೆ ವಿಶ್ವನಾಥಪುರದಂಥ ಪಟ್ಟಣದಲ್ಲಿ ಯಾವುದೋ ಒಂದು ಜೀರ್ಣವಾದ ಪುರಾತನಗುಡಿಯೇ ಇರಬೇಕೆಂದು ಆತನು ತರ್ಕಿಸಿ ಹೇಗಾದರೂ ಅದರ ಪತ್ತೆಯನ್ನು ಮಾಡುವ ನಿರ್ಧಾರವನ್ನು ಮಾಡಿದನು. ಅರವಿಂದನು ಗುಪ್ತವೇಷದಿಂದ ರಾತ್ರಿಯೆಲ್ಲವನ್ನು ನಗರದ ಸಂಚಾರದಲ್ಲಿ ಕಳೆದನು. ರಾತ್ರಿಯ ವೇಷವನ್ನು ಕಳಚಿ ಹಗಲಲ್ಲಿ ಶುದ್ಧ ಆಂಗ್ಲೇಯನಂತೆ ಉಡುಪು ಧರಿಸಿ ಬಾಡಿಗೆಯ ಮೋಟಾರುಬಂಡಿಯನ್ನು ತೆಗೆದುಕೊಂಡು ತಾನೇ ನಡೆಸುತ್ತ ‘ದೇವಮಂದಿರ’ದ ಶೋಧದಲ್ಲಿ ತೊಡಗಿದನು. ಮಧ್ಯಾಹ್ನ ಬಾಯಾರಿಕೆಯಾದ್ದರಿಂದ ‘ಡೆನ್ನಿಸ್ ಕ್ಲಬ್’ ಎಂಬ ಪ್ರಸಿದ್ಧ ವಿಶ್ರಾಂತಿಗೃಹವನ್ನು ಪ್ರವೇಶಿಸಿ ಮಾಂಸಹಾರಿ ಆಹಾರವನ್ನು ತೆಗೆದುಕೊಳ್ಳದೆ ಸ್ವಲ್ಪ ತಿಂಡಿಯನ್ನೂ ಕಾಫಿಯನ್ನೂ ತೆಗೆದುಕೊಂಡನು. ಕಾಫಿ, ತಿಂಡಿ ಮುಗಿಸಿದ ನಂತರ ಅರವಿಂದನು ಆ ಕ್ಲಬ್ಬಿನ ರೀಡಿಂಗ್ ರೂಮಿನಲ್ಲಿ ಮಾಸಿಕವಹಿಯೊಂದನ್ನು ಓದುತ್ತ ಕುಳಿತನು. ಅಲ್ಲೇ ದೂರದಲ್ಲಿ ತಿಂಡಿಯನ್ನು ತಿನ್ನುತ್ತಿದ್ದ ಕೆಲವರು ವಿಶೇಷ ಲಕ್ಷ್ಯವಿಟ್ಟು ಅರವಿಂದನನ್ನು ಗಮನಿಸುತ್ತಿದ್ದರು.

ಆ ವಿಚಿತ್ರಕೂಟದ ಸದಸ್ಯರು ಅರವಿಂದನೇ ಬಾಡಿಗೆಯ ಕಾರೊಂದರಲ್ಲಿ ವಿಚಿತ್ರಕೂಟದವರ ಪತ್ತೆಯನ್ನು ಮಾಡುವುದಕ್ಕೊ ಇಲ್ಲವೆ ಶಂಕರತನಯನನ್ನು ಬಿಡಿಸಿಕೊಳ್ಳುವುದಕ್ಕೂ ಬಂದಂತಿದೆಯೆಂದು ಊಹಿಸಿದರು. ವಿಚಿತ್ರಕೂಟದವರಲ್ಲಿ ಮೂರನೆಯವನು ತಾನು ಅರವಿಂದನೊಡನೆ ಮಿತ್ರತ್ವವನ್ನು ಬೆಳೆಸಿ ಸಂಜೆ ಅವರಿಗೆ ‘ದೇವಮಂದಿರ’ ದಲ್ಲಿ ಸಿಗುವುದಾಗಿ ಹೇಳಿಕಳಿಸುತ್ತಾನೆ.

ಅವರ ಮಾತುಕತೆ ಮೆಲ್ಲಗೆ ನಡೆದಿದ್ದರೂ ರೀಡಿಂಗ್-ರೂಮಿನಲ್ಲಿ ಕುಳಿತಿದ್ದ ಅರವಿಂದನ ಕಿವಿಗೆ ಬೀಳದೆ ಇರಲಿಲ್ಲ. ಆದ್ದರಿಂದ ವಿಚಿತ್ರಕೂಟದ ಮೂರನೆ ಗೃಹಸ್ಥನು ಅರವಿಂದನೊಡನೆ ಸಖ್ಯ ಬೆಳೆಸಲೆಂದು ಬಂದಾಗ ಅರವಿಂದ ಜಾಣತನದಿಂದ ವರ್ತಿಸುವುದು ಸಾಧ್ಯವಾಯಿತು.

ವಿಚಿತ್ರಕೂಟದ ಆ ಸದಸ್ಯ ಒಬ್ಬ ವಕೀಲನೆಂದೂ ಆತನ ಹೆಸರು ಸುಶರ್ಮನೆಂದೂ ತನ್ನ ಪರಿಚಯ ಹೇಳಿದನು. ಬೊಂಬಾಯಿ ಪ್ರಾಂತದ ದೊಡ್ಡ ಮನುಷ್ಯರಿರಬಹುದೆಂದು ತನ್ನ ವಿಷಯದಲ್ಲಿ ಆತ ಊಹಿಸಿದ್ದೇ ನಿಜವಾದುದೆಂದು ಅರವಿಂದ ಸುಶರ್ಮನಿಗೆ ಹೇಳಿದನು. ಸುಶರ್ಮನು ಅರವಿಂದನನ್ನು ಆಗ್ರಹಪೂರ್ವಕವಾಗಿ ತನ್ನ ಮನೆಗೆ ಕರೆದನು. ಆದ್ದರಿಂದ ಅರವಿಂದನು ಒಪ್ಪಿದನಾದರೂ ಗಾಡಿಯವನಿಗೆ ಗಾಡಿಯನ್ನು ಒಪ್ಪಿಸಿ ಸಚ್ಚಿದಾನಂದರಾಯನಿಗೆ ಒಂದು ಚಿಕ್ಕ ಚೀಟಿಯನ್ನು ಅವನ ಮೂಲಕ ಗುಪ್ತವಾಗಿ ಕಳಿಸಿದನು. ಅದರಲ್ಲಿ ತಾನು ವಕೀಲ ಸುಶರ್ಮನ ಮನೆಗೆ ಊಟಕ್ಕೆಂದು ಹೋಗಿರುವುದನ್ನೂ ತಾನು ಮಧ್ಯಾಹ್ನ ಎರಡು ತಾಸಿನೊಳಗಾಗಿ ಬಾರದಿದ್ದಲ್ಲಿ ಸಚ್ಚಿದಾನಂದನು ಒಂದು ನೆಪವನ್ನು ಹುಡುಕಿಕೊಂಡು ಅಲ್ಲಿಗೆ ಬರತಕ್ಕದ್ದೆಂದೂ ಬರೆದಿದ್ದನು.

ಸುಶರ್ಮ ಮತ್ತು ಅರವಿಂದ ಒಂದು ಬಾಡಿಗೆಯ ಕುದುರೆ ಬಂಡಿಯನ್ನೇರಿ ಸುಶರ್ಮನ ಮನೆಯ ಕಡೆಗೆ ಹೊರಟರು. ದಾರಿಯಲ್ಲಿ ಅರವಿಂದನನ್ನು ಪತ್ತೆ ಹಚ್ಚಲೆಂದು ಸುಶರ್ಮ ಮಾಡಿದ ಪ್ರಶ್ನೆಗಳೆಲ್ಲ ವ್ಯರ್ಥವಾದವು. ಆದ್ದರಿಂದ ಆತ ಅರವಿಂದನಿರಲಾರನೆಂದೇ ಸುಶರ್ಮನಿಗೆ ಅನಿಸಿತು.

ಭೋಜನ ಮಾಡತೊಡಗಿದಾಗ ಅರವಿಂದನ ಹೆಸರು, ಜಾತಿ ವಿಷಯ ವಿಚಾರಿಸಿದ ಸುಶರ್ಮನಿಗೆ ಅರವಿಂದ ತಾನು ‘ಜೀವನಲಾಲ್ ಸುಂದರಲಾಲ್’ ಎಂದೂ ಮೈಥಿಲೀ ಬ್ರಾಹ್ಮಣನೆಂದೂ ಹೇಳಿದನು. ಆತನ ನಡತೆಗೆ ಮೆಚ್ಚಿದ್ದನಾದ್ದರಿಂದ ತನ್ನ ಏಕಮಾತ್ರ ಪುತ್ರಿಯಾದ ವಿಮಲೆಯನ್ನು ಆತನಿಗೆ ಕೊಟ್ಟು ವಿವಾಹ ಮಾಡಿದರೇನು, ಎಂಬ ವಿಚಾರ ಮನಸ್ಸಿನಲ್ಲಿ ಹೊಳೆಯಿತು.

ತನಗೆ ಕ್ಷಣಕಾಲ ಬೇರೆ ಕೆಲಸವಿರುವುದರಿಂದ ಜೀವನಲಾಲನನ್ನು ಬಿಟ್ಟು ಇರಬೇಕಾಗಿದೆಯೆಂದೂ ಆ ಮಧ್ಯೆ ವಿಮಲೆ ಹಾಡುಗಳಿಂದ ಆತನ ಬೇಸರ ಕಳೆಯುವಳೆಂದು ಹೇಳಿ ಸುಶರ್ಮ ಹೊರಟುಹೋದ. ಇದು ತನಕ ಸ್ತ್ರೀಪಾಶದಲ್ಲಿ ಸಿಲುಕಿಬೀಳದ ಜೀವನಲಾಲನು ವಿಮಲೆಯ ಬಲೆಗೂ ಪುರುಷಪಾಶದಲ್ಲಿ ಸಿಲುಕದ ವಿಮಲೆಯು ಜೀವನಲಾಲನ ಬಲೆಗೂ ಬಿದ್ದರು.

ಮಾತಿನ ಮಧ್ಯೆ “ನೀವಾವ ಜಾತಿಯವರು” ಎಂದು ವಿಮಲೆಯನ್ನು ಕುರಿತು ಜೀವನಲಾಲನು ಕೇಳಿದನು.ಆಕೆ ತಾವು ‘ಕಾಯಸ್ಥರು’ ಎಂದುದರಿಂದ ಸುಶರ್ಮ ಸುಳ್ಳು ಹೇಳಿದನೆಂಬುದು ಸ್ಪಷ್ಟವಾಯಿತು. ಆಕೆ ಆತನ ಜಾತಿ ಕೇಳಿದಾಗ ತಾನು ‘ಮೈಥಿಲೀ ಬ್ರಾಹ್ಮಣ’ ನೆಂದುದರಿಂದ ಆಕೆಗೆ ತೀರಾ ನಿರಾಶೆಯಾಗಿ ದುಃಖ ಒತ್ತರಿಸಿ ಬಂದಿತು. ಅವಳ ಪ್ರೇಮ ನಿಜವಾದುದೆಂದು ಖಚಿತಪಡಿಸಿಕೊಂಡು ಜೀವನಲಾಲನು ತಾನೂ ಕಾಯಸ್ಥನೆಂದೂ ಆದರೆ ಕೆಲವು ಕಾಲ ಈ ವಿಚಾರ ಗುಪ್ತವಾಗಿಡಬೇಕೆಂದೂ ಆನಂತರ ಆಕೆಯನ್ನು ಕೈಹಿಡಿಯುವೆನೆಂದೂ ತಿಳಿಸಿದನು.ಸ

ಸುಶರ್ಮನು ತನ್ನ ಮಗಳಿಗೂ ಜೀವನಲಾಲನಿಗೂ ಮಿತ್ರತ್ವ ಬೆಳೆಯಲೆಂದು ಬಯಸಿದ್ದು ಒಂದು ಕಾರಣವಾದರೂ ಆತ ಹೊರಗೆ ಹೋಗುವುದಕ್ಕೆ ಮುಖ್ಯ ಕಾರಣ ಹೊರಗಿನಿಂದ ಆಗಂತುಕರಾರೋ ಕರೆದುದೇ ಆಗಿತ್ತು. ಆ ಆಗಂತುಕ ವಿಚಿತ್ರಕೂಟದ ಸದಸ್ಯನಾಗಿದ್ದ. ಬಂದ ಆಗಂತುಕನೊಡನೆ ಮಹಡಿಯನ್ನೇರಿದ ಮೇಲೆ ಜೀವನಲಾಲನು ಶಂಕರತನಯನ ಮಿತ್ರನಾದ ಅರವಿಂದನೇ ಇರುವನೆಂದೂ, ಆದ್ದರಿಂದ ಆತನನ್ನು ಕೂಡಲೇ ಬಂಧನದಲ್ಲಿರಿಸಿ ‘ದೇವಮಂದಿರ’ಕ್ಕೆ ಬಂದಿಯಾಗಿ ಕರೆತರತಕ್ಕದ್ದೆಂದೂ ಕಠೋರ ಕುಮಾರನ ಕಟ್ಟಪ್ಪಣ್ಣೆಯಾಗಿರುವುದಾಗಿ ಬಂದವನು ತಿಳಿಸಿ ಹೋಗುತ್ತಾನೆ. ಅದಕ್ಕನುಗುಣವಾಗಿ ಸ್ವಾಮಿಕಾರ್ಯವಾದ್ದರಿಂದ ಕರ್ತವ್ಯ ನಿಷ್ಠುರತೆಯಿಂದ ತನಗೆ ಮನಸ್ಸಿಲ್ಲದಿದ್ದರೂ ಅರವಿಂದನನ್ನು ಸುಶರ್ಮ ಬಂಧಿಸಿದನು. ವಿಮಲೆ ಎಷ್ಟು ಹೇಳಿದರೂ ಕೇಳದಿರಲು ಆಕೆ ದೇವರ ಮೇಲೆ ಭರವಸೆಯಿಟ್ಟು ಸುಮ್ಮನಾದಳು. ಯಜಮಾನರ ಶೋಧನಾ ಕೆಲಸ ಮತ್ತು ಪ್ರಫುಲ್ಲನ ರಕ್ಷಣೆ ಎರಡೂ ವ್ಯರ್ಥವಾಯಿತಲ್ಲಾ ಎಂದು ಅರವಿಂದ ಕೊರಗಿದನು. ಮುಂದಿನ ಸಂಪೂರ್ಣ ಭಾರವನ್ನು ಸಚ್ಚಿದಾನಂದನ ಬುದ್ಧಿಶಕ್ತಿಯ ಮೇಲಿಟ್ಟು ಆತ ಚಿಂತಿಸುತ್ತ ಕುಳಿತಿರಬೇಕಾಯಿತು.

ಮಧ್ಯಾಹ್ನ ಎರಡು ತಾಸಾದರೂ ಅರವಿಂದನು ಮನೆಗೆ ಬರಲಿಲ್ಲವಾದ್ದರಿಂದ ಕೆಲವು ಪೋಲೀಸಿನವರೊಂದಿಗೆ ಸಚ್ಚಿದಾನಂದನು ಸುಶರ್ಮನ ಮನೆಗೆ ಹೋಗಿ ವಿಚಾರಿಸಿದನು. ಅದಕ್ಕೆ ಸುಶರ್ಮನು ಆತ ಅಲ್ಲಿಂದ ಹೊರಟುಹೋದನೆಂದು ಸುಳ್ಳು ಹೇಳಿದನು. ಅದಕ್ಕೆ ಸಚ್ಚಿದಾನಂದನು ಅರವಿಂದನ ಪಾದರಕ್ಷೆ, ಕೋಟು, ಟೊಪ್ಪಿಗೆಗಳೆಲ್ಲ ಅಲ್ಲೇ ಇರುವುದನ್ನು ಗುರುತಿಸಿ ಅರವಿಂದನು ಅಲ್ಲೇ ಇರಬೇಕೆಂದು ನಿಶ್ಚೈಸಿ ಕೇಳಿದನು. ಆಗ ಸುಶರ್ಮನು ಅರವಿಂದನನ್ನು ಒಪ್ಪಿಸುವೆನೆಂದು ಹೇಳಿ ಸಚ್ಚಿದಾನಂದ ಮತ್ತು ಆತನ ಸಂಗಡಿಗರನ್ನು ನೆಲಮಾಳಿಗೆಗೆ ಒಯ್ದನು. ಕೊಠಡಿಯ ನಡುಭಾಗಕ್ಕೆ ಬಂದು ಒಂದು ಕಡೆ ಮೆಟ್ಟಿದಾಗ ಇದ್ದಕ್ಕಿದ್ದಂತೆ ಬಾಗಿಲು ತೆರೆಯಿತು. “ಆ ನಿಮ್ಮ ಮಿತ್ರನು ಎಲ್ಲಿ” ಎಂದು ಸಚ್ಚಿದಾನಂದನು ಕೇಳುತ್ತಿರುವಾಗ “ಇಲ್ಲಿ” ಎಂದು ನೆಲವನ್ನು ಒದೆದು ಸುಶರ್ಮನು ಅಲ್ಲಿಂದಲೇ ಭೂಗರ್ಭವನ್ನು ಸೇರಿದಂತೆ ಅದೃಶ್ಯನಾದನು. ಕೆಳಗಡೆ ಒಂದು ವಿಚಿತ್ರ ಬಾಗಿಲನ್ನು ತೆರೆದು ಆತನು ಕೆಳಗೆ ಸುರಕ್ಷಿತವಾಗಿ ಸೇರಿದನು. ಬಾಗಿಲನ್ನು ತತ್‌ಕ್ಷಣವೇ ತನ್ನ ಸ್ಥಾನವನ್ನು ಸೇರಿ ಭದ್ರವಾಗಿ ನಿಂತುಬಿಟ್ಟಿತು. ಸಚ್ಚಿದಾನಂದನೂ ಆತನ ಪೋಲೀಸು ಸಂಗಾತಿಗಳು ಸುಶರ್ಮನ ಬಂದಿಗಳಾದರು.

‘ದೇವರಮಂದಿರ’ ವಿಶ್ವನಾಥಪುರದ ದಕ್ಷಿಣ ಮೂಲೆಯಲ್ಲಿದೆ. ಅದರ ನೆಲಮಾಳಿಗೆಯಲ್ಲಿ ಶಂಕರತನಯನ ಆಯುಷ್ಯದ ನಿರ್ಧಾರವಾಗಬೇಕಾಗಿದೆ. ಕಠೋರಕುಮಾರನು ಆಸನಾಸೀನನಾಗಿದ್ದಾನೆ. ಹಲವು ಜನ ‘ಸಭ್ಯ ಗೃಹಸ್ಥ’ರು ಎದುರಿನಲ್ಲಿ ಕುಳಿತಿದ್ದಾರೆ. ಆಗ ಕೈದಿಗಳನ್ನು ಕುರಿತು ಕಠೋರಕುಮಾರನು ಮಾತನಾಡತೊಡಗುತ್ತಾನೆ. ಕೈದಿಗಳಿಗೆ ಇನ್ನೂ ಅರವಿಂದ, ಸಚ್ಚಿದಾನಂದರಿಂದ ಸಹಾಶಯ ಬಂದೀತೆಂಬ ಆಸೆಯಿತ್ತು. ಆದರೆ, ಅವರೂ ಪೋಲೀಸು ಜನರೊಂದಿಗೆ ಬಂದಿಗಳಾಗಿ ಬಂದುದನ್ನು ಕಂಡಾಗ ಆ ಆಸೆ ಹೊರಟುಹೋಯಿತು. ಪ್ರಫುಲ್ಲನನ್ನು ಒಪ್ಪಿಸದಿದ್ದರೆ ಎಲ್ಲರನ್ನೂ ಕೊಲ್ಲುವುದಾಗಿ ಹೆದರಿಸಿದರೂ ಪ್ರಫುಲ್ಲನನ್ನು ಒಪ್ಪಿಸಲು ಶಂಕರತನಯ ಒಪ್ಪುವುದಿಲ್ಲ. ಅದರಿಂದ ಸಂತೋಷಗೊಂಡ ಕಠೋರ ಕುಮಾರನು ತನ್ನ ಸಂತೋಷವನ್ನು ವ್ಯಕ್ತಪಡಿಸಿ ಸ್ವತಂತ್ರವಾದ ಉತ್ತರವನ್ನು ನೀಡಬೇಕೆಂದು ಹೇಳಿ ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ. ಅದಕ್ಕಿಂತ ಮೊದಲು ತನ್ನವರನ್ನು ಕುರಿತು ಅವರ ಧೈರ್ಯ, ಸಾಹಸ, ನಿಷ್ಠೆಗಳನ್ನು ಹೊಗಳಿ ಇಂದಿಗೆ ಅವರು ತಮ್ಮ ಆ ಶಕ್ತಿಯನ್ನು ದೇಶಸೇವೆಯ ಕಡೆಗೆ ತಿರುಗಿಸಬೇಕೆಂದೂ ಅಂದಿನಿಂದ ಅವರು ವಿಚಿತ್ರಕೂಟದ ಪ್ರತಿಜ್ಞೆಗಳಿಗೆ ಬದ್ಧರಾಗಿರುವುದಿಲ್ಲವೆಂತಲೂ ಆ ಕೂಟವನ್ನು ಮರೆತುಬಿಡಬೇಕೆಂತಲೂ ತಿಳಿಸಿ ಅವರಿಂದ ತಪ್ಪು ಮಾಡಿಸಿದ ಪಾಪ ತನಗೆ ಸೇರುವುದೆಂದೂ ಕಠೋರಕುಮಾರ ಘೋಷಿಸುತ್ತಾನೆ.

ಈ ಸಂದರ್ಭದಲ್ಲಿ ನಡೆಯುವ ಮಾತುಕತೆಗಳಿಂದ ಸಚ್ಚಿದಾನಂದನ ಮೊದಲಿನ ಹೆಸರು ಸುಂದರ ಶ್ಯಾಮನೆಂದೂ ಆತನ ಊರು ವಿರಾಮಪುರವೆಂದೂ ಅತನ ಮಗಳು ಲೀಲೆಯೆಂದೂ ಆ ಲೀಲೆ ಆತ್ಮಹತ್ಯೆ ಮಾಡಿಕೊಂಡಳೆಂದೂ ಆತ ಆ ಊರನ್ನೇ ಬಿಟ್ಟು ಬಂದನೆಂದೂ ತಿಳಿಯುತ್ತದೆ. ಹಾಗೆಯೇ ಶಂಕರತನಯನೇ ಲೀಲೆಯನ್ನು ಪ್ರೀತಿಸಿದ್ದ ಶ್ಯಾಮನೆಂದೂ ಗೊತ್ತಾಗುತ್ತದೆ. ಲೀಲೆ ಸಾಯಲಿಲ್ಲ; ಇಷ್ಟೇ ಅಲ್ಲ, ಅವಳು ಗಂಗೆಯಲ್ಲಿ ಒಂದು ತುಂಡನ್ನು ಕೆಡವಿ ಓಡಿಹೋದಳು. ಆಕೆ ಮಡಿದಳೆಂದು ಇವರೆಲ್ಲ ತಿಳಿದರು. ಆದರೆ ಆಕೆ ಮಾತ್ರ ಕಾಡುಪ್ರದೇಶಕ್ಕೆ ಹೋದಳು. ಅಲ್ಲಿ ಓರ್ವ ಸಾಧುವಿನ ಸಹಾಯ ಆಕೆಗೆ ದೊರೆಕಿತು. ಆತನು ಆಕೆಗೆ ಶ್ಯಾಮುವನ್ನೇ ಪುನಃ ತರಿಸಿಕೊಡುವುದಾಗಿ ಅಭಯವನ್ನಿತ್ತನು. ಆ ಸಾಧುವು ಗುಪ್ತವಾಗಿ ಕೂಡಿಸಿದ ನಾಣ್ಯ ಸಂಚಯದ ಪ್ರಭಾವದಿಂದ ವಿಚಿತ್ರಕೂಟವು ಪ್ರಾರಂಭವಾಯಿತು. ಸಚ್ಚಿದಾನಂದನ ದ್ರವ್ಯವನ್ನುಳಿದು ಇನ್ನಾರ ದ್ರವ್ಯಾಪಹಾರವನ್ನಾಗಲಿ ಪ್ರಾಣಹಾನಿಯನ್ನಾಗಲಿ ವಿಚಿತ್ರಕೂಟದವರು ಮಾಡಲಿಲ್ಲ. ಹಾಗೆ ಪರಪೀಡೆ ಮಾಡಬಾರದೆಂದೇ ಕೂಟದ ನಿಯಮ. ಆ ಸಾಧುವು ಹದಿನೈದು ದಿವಸಗಳಲ್ಲಿ ಆಕೆಯ ಕಾರ್ಯವು ಕೈಗೂಡುವುದೆಂದು ಲೀಲೆಗೆ ಹೇಳಿ ಹೊರಟುಹೋದನೆಂದೂ ಇಂದಿನ ದಿನ ಹದಿನೈದನೆಯದೆಂದೂ ಸಚ್ಚಿದಾನಂದ, ಶಂಕರತನಯರನ್ನು ಒಟ್ಟು ಸೇರಿಸುವುದಕ್ಕಾಗಿ ಬ್ಯಾಂಕು ಲೂಟಿ ನಡೆಯಿತೆಂದೂ ಬೇರೆ ಲೂಟಿಗಳಿಗೂ ಇದಕ್ಕೂ ಯಾವ ಸಂಬಂಧವೂ ಇಲ್ಲವೆಂದು ಕಠೋರ ಕುಮಾರನು ನುಡಿಯುತ್ತಾನೆ. ಲೀಲೆಯೇನಾದರೂ ಈಗ ಜೀವಂತವಾಗಿ ಕಾಣಿಸಿಕೊಂಡರೆ ಸಚ್ಚಿದಾನಂದನು ಶಂಕರತನಯನಿಗೆ ಕೊಟ್ಟು ಮದುವೆ ಮಾಡಲು ಒಪ್ಪುವನೆಂದೂ ಶಂಕರತನಯನು ಮದುವೆಯಾಗಲು ಒಪ್ಪುವನೆಂಬುದನ್ನೂ ಖಚಿತಪಡಿಸಿಕೊಂಡ ನಂತರ ಕಠೋರಕುಮಾರ ನೆಲವನ್ನು ಝಾಡಿಸುತ್ತಾನೆ. ಆಗ ಕಠೋರನ ಸ್ಥಾನದಲ್ಲಿ ಲೀಲೆಯ ಸುಂದರ ಮೂರ್ತಿಯು ಕಂಡಿತು. ಎಲ್ಲರೂ ಆಕೆಯನ್ನು ನೋಡತೊಡಗಿದರು. ಆಕೆಯು ಶಂಕರತನಯ, ಸಚ್ಚಿದಾನಂದರ ಪಾದಗಳಿಗೆರಗಿ, “ಅದೋ, ನಿಮ್ಮ ಕಠೋರಕುಮಾರನನ್ನೊ ಕುಮಾರಿಯನ್ನೋ ಪರಿಗ್ರಹಿಸುವಿರಾ”, ಎಂದಳು.ಲೀಲೆಯೇ ಕಠೋರಕುಮಾರನೆಂಬ ಗುಟ್ಟು ರಟ್ಟಾದಂತಾಯಿತು. ಅರವಿಂದ ವಿಮಲೆಯರನ್ನೂ ಕಠೋರಕುಮಾರನೇ ಒಂದುಗೂಡಿಸುತ್ತಾನೆ.

ಇಲ್ಲಿಗೆ ‘ವಿಚಿತ್ರಕೂಟ’ ಕಾದಂಬರಿ ಮುಗಿಯುತ್ತದೆ.

‘ಭೂತ’ ಕಾರಂತರ ಎರಡನೆಯ ಕಾದಂಬರಿಯಾಗಿದೆ. ಇದನ್ನು ‘ಅದ್ಭುತ ಪತ್ತೇದಾರಿ ಕಥೆ’ಯೆಂದು ಕಾರಂತರು ಕರೆದಿದ್ದಾರೆ. “ಬರುವ ಅಗೋಸ್ತು ತಿಂಗಳ ಸಂಚಿಕೆಯಲ್ಲಿ ‘ಭೂತ’ ಎಂಬ ಅತ್ಯುತ್ತಮ ಕಾದಂಬರಿಯು ಕ್ರಮಶಃ ಪ್ರಕಟಿಸಲ್ಪಡುವುದು” ಎಂದು ‘ವಸಂತ’ ಜುಲೈ ತಿಂಗಳ ಸಂಚಿಕೆ-೮ರ ಮುಖಪುಟದ ಮೇಲ್ಭಾಗದಲ್ಲಿ ‘ಭೂತ’ ಕಾದಂಬರಿಯನ್ನು ಕುರಿತ ಪ್ರಕಟನೆ ಇತ್ತು. ಅದೇ ಪ್ರಕಾರ ‘ವಸಂತ’ದ ಅಗೋಸ್ತು, ೧೯೨೪ (ಸಂಪುಟ-೧; ಸಂಚಿಕೆ-೯) ರಿಂದ ಪ್ರಕಟವಾಗಲು ಪ್ರಾರಂಭವಾಯಿತು. ಅಗೋಸ್ತು ಸಂಚಿಕೆಯಲ್ಲಿ ೧-೮ ಪುಟಗಳು; ಸೆಪ್ಟೆಂಬರ್ ಸಂಚಿಕೆಯಲ್ಲಿ ೯-೨೪ ಪುಟಗಳು ಹೀಗೆ ಪ್ರಕಟವಾಗಿವೆ. ಮುಂದಿನ ಸಂಚಿಕೆಗಳು ನನಗೆ ದೊರೆತಿಲ್ಲ. ಆದ್ದರಿಂದ ಇಲ್ಲಿ ಮೊದಲ ೨೪ ಪುಟಗಳ ಕಥಾಭಾಗವನ್ನೆ ಸಾಕಷ್ಟು ವಿವರವಾಗಿ ಕಾದಂಬರಿಯ ಭಾಷಾಶೈಲಿಯಲ್ಲಿಯೇ ಸಂಗ್ರಹಿಸಿಕೊಡುತ್ತಿದ್ದೇನೆ :

ಮುಂಬಯಿಯಲ್ಲಿ ವಾಸವಾಗಿದ್ದ ಸುಂದರರಾಯನೆಂಬುವನು ತನ್ನ ಆರೋಗ್ಯ ಕೆಟ್ಟುದರಿಂದ ತನ್ನ ಉದ್ಯೋಗಕ್ಕೆ ರಾಜೀನಾಮೆಯನ್ನು ಕೊಟ್ಟು ತನ್ನ ಊರಾದ ಮಂಗಳೂರಿಗೆ ಬಂದು ನೆಲೆಸಿದನು. ಆತನು ಮಂಗಳೂರಿನಲ್ಲಿದ್ದ ತನ್ನ ಸ್ವಂತ ಮನೆಯನ್ನು ಸೇರಿದ ದಿನವೇ ಆತನಿಗೆ ಅವನ ಮುಂಬಯಿಯ ಮೋಹನ್ ರಾವ್ ಎಂಬ ಮಿತ್ರನೊಬ್ಬನಿಂದ ಬಂದ ತಾರಿನಿಂದಾಗಿ ಆತ ಮುಂಬಯಿಯಲ್ಲಿ ಕೊಂಡುಕೊಂಡಿದ್ದ ಡರ್ಬಿ ಸೋಡ್ತಿ ಟಿಕೇಟಿಗೆ ಒಂಬತ್ತು ಲಕ್ಷ ರೂಪಾಯಿಗಳ ಪ್ರಥಮ ಬಹುಮಾನವು ದೊರಕಿರುವ ಸಂಗತಿ ಗೊತ್ತಾಗುತ್ತದೆ. ಮಂಗಳೂರಿನಲ್ಲಿ ಉದರ ಭರಣೆಯ ದಾರಿಯೇನು ಎಂದು ಯೋಚಿಸುತ್ತಿರುವ ಅವನಿಗೆ ಈ ಸುದ್ದಿಯಿಂದ ಹಿಗ್ಗುಂಟಾಯಿತು. ಬಹುಮಾನ ದ್ರವ್ಯವನ್ನು ಬಡ್ಡಿಗಾಗಿ ಬ್ಯಾಂಕಿನಲ್ಲಿಟ್ಟನು. ಆದ್ದರಿಂದ ಉತ್ಪತ್ತಿಯಾಗುವ ಹಣ ಸುಮಾರು ಮುಕ್ಕಾಲು ಲಕ್ಷದಷ್ಟಾಗುತ್ತಿತ್ತಾದ್ದರಿಂದ ಆತನ ಖರ್ಚು ವೆಚ್ಚಗಳಿಗೆ ಕೊರತೆಯಾಗಲಿಲ್ಲ. ಆತ ಮಂಗಳೂರಿಗೆ ಆರೇಳು ಮೈಲು ದೂರದಲ್ಲಿರುವ ಉಳ್ಳೂಲ ಎಂಬ ಊರಿನಲ್ಲಿ ಒಂದು ಸೊಗಸಾದ ಮನೆಯನ್ನು ಕಟ್ಟಿಸಿದನು. ಶಹರದಲ್ಲಿಯೂ ಸೊಗಸಾದ ನಿವಾಸ ಗೃಹವನ್ನು ಸಿದ್ಧಪಡಿಸಿದನು. ಶಾಲೆ, ಧರ್ಮಸಂಸ್ಥೆ ಮೊದಲಾದವುಗಳಿಗೂ ವಿಶೇಷ ಧನಸಹಾಯ ಮಾಡಿ ಕೀರ್ತಿಶಾಲಿಯಾದನು. ಒಟ್ಟಿನಲ್ಲಿ ನಿರಹಂಕಾರಿಯಾಗಿ ಉಡುಗೆತೊಡುಗೆಗಳಲ್ಲಿಯೂ ನಿರಾಡಂಬರಿಯಾಗಿ ಇರುತ್ತಿದ್ದನು. ಆತನಿಗೆ ಖಗೋಳಶಾಸ್ತ್ರದಲ್ಲಿ ಬಹಳ ಪ್ರೀತಿ, ತನ್ನ ವೇಳೆಯೆಲ್ಲವನ್ನೂ ಆ ವಿದ್ಯಾರ್ಜನೆಯಲ್ಲಿಯೇ ಕಳೆಯಬೇಕೆಂದು ನಿಶ್ಚೈಸಿದನು. ಅವನು ಆ ವಿಷಯದಲ್ಲಿ ಎಷ್ಟೋ ಹೊಸ ಸಂಗತಿಗಳನ್ನು ಕಂಡುಹಿಡಿದಿರುವನು. ಎಷ್ಟೋ ಪುಸ್ತಕಗಳನ್ನು ಬರೆದಿರುವನು. ಇಷ್ಟೆಲ್ಲ ಆದರೂ ಆತನ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಅನಾರೋಗ್ಯ ಒಂದು ಕಾರಣವಾದರೆ ಅದಕ್ಕಿಂತ ಹೆಚ್ಚಾಗಿ ಮುಂಬಯಿಯಲ್ಲಿ ಸಂಘಟಿಸಿದ ಪ್ರಸಂಗವೊಂದು ಆತನನ್ನು ಬಾಧಿಸುತ್ತಿತ್ತು.

ಮುಂಬಯಿಯಲ್ಲಿ ನಡೆದ ಆ ಪ್ರಸಂಗ ಇಷ್ಟು : ಸುಂದರರಾಯನು ತನ್ನ ನಿವಾಸವಾಗಿದ್ದ ಗಾಮದೇವಿಯಿಂದ ಪೋರ್ಟಿನ ಕಡೆಗೆ ತಿರುಗಾಡಲು ಹೊರಟಿದ್ದನ್‌ಉ. ಬರುವಾಗ ಕತ್ತಲೆಯಾಗಿತ್ತು. ಆ ಸಮಯದಲ್ಲಿ ಟ್ರಾಮ ಬಂಡಿಯನ್ನು ಏರಲು ಎಡೆ ದೊರೆಯುವುದು ಕಷ್ಟವೆಂಬುದರಿಂದಲೂ ವ್ಯಾಯಾಮಕ್ಕೆಂದೂ ನಡದೇ ಗಾಮದೇವಿಗೆ ಬರುವ ಯೋಚನೆಯನ್ನು ಮಾಡಿದನು. ಆದರೆ ಆತನು ಏನೇನೋ ವಿಚಾರವನ್ನು ಕುರಿತು ಯೋಚಿಸುತ್ತ ಅನ್ಯಮನಸ್ಕನಾಗಿದ್ದುದರಿಂದ ಹಾದಿಯನ್ನು ಮರೆತು ಸುತ್ತುವರಿಯುತ್ತ ಹೋದನು. ಎಲ್ಲಿಗೆ ಹೋದನೆಂಬ ಪತ್ತೆಯೂ ಆತನಿಗೆ ತಿಳಿಯಲಿಲ್ಲ. ದಾರಿಕಾರರನ್ನು ಕೇಳಲು ಸ್ವಲ್ಪ ನಾಚಿಕೆಯಾದುದರಿಂದ ಹಾಗೆಯೇ ಮುಂದುವರೆದನು. ಕಿವಿಗೆ ಕರ್ಣಾನಂದಕರವಾದ ಗಾಯನವು ಒಂದು ಕಡೆಯಿಂದ ಕೇಳಿಬಂತು. ಕೇಳುತ್ತ ಕೇಳುತ್ತ ಕಾಲುದಾರಿಯಲ್ಲಿ ಅಲ್ಲಿಯೇ ನಿಂತುಬಿಟ್ಟನು. ಆ ಮಧುರವಾದ ಕಂಠಸ್ವರವನ್ನಾಲೈಸುವ ಗಲಭೆಯಲ್ಲಿ ಮನೆಯ ಕಡೆಗೆ ಹೋಗಬೇಕೆಂಬ ಯೋಚನೆಯೂ ಕೂಡ ಅಳಿಸಿಹೋಯಿತು. ಸ್ವರಮಾಧುರ್ಯ ವಿಶೇಷತೆಯಿಂದ ಆತನ ಹೆಜ್ಜೆಗಳು ಒಂದೊಂದಾಗಿ ಆ ಮನೆಯ ಕಡೆಗೆ ಹೋಗಲಾರಂಭಿಸಿದವು. ಹಾಗೆಯೇ ಮುಂದುವರಿಯುತ್ತ ದ್ವಾರದ ಬಳಿಗೂ ಬಂದನು. ಅದನ್ನು ತಳ್ಳಿದನು. ಬಾಗಿಲು ತೆರೆಯಿತು. ಒಳಕ್ಕೆ ಪ್ರವೇಶಿಸಿದನು. ಯಾರೊಬ್ಬರು ಆತನ ದೃಷ್ಟಿಗೆ ಬೀಳಲಿಲ್ಲ. ಮುಂದಕ್ಕೆ ಒಂದು ವಿಶಾಲವಾದ ಕೊಠಡಿಯನ್ನು ಸೇರಿದನು. ಕೊಠಡಿಯಲ್ಲಿ ಹಲವು ವಿದ್ಯುಚ್ಛಕ್ತಿಯ ದೀಪಗಳು ಬೆಳಗುತ್ತಿದ್ದುವು. ಗೋಡೆಗಳೆಲ್ಲವೂ ತೈಲಚಿತ್ರದಿಂದ ರಾರಾಜಿಸುತ್ತಿದ್ದವು. ನೆಲವು ಚಂದ್ರಕಾಂತಶಿಲೆಗಳ ಇಟ್ಟಿಗೆಗಳಿಂದ ನುಣುಪಾಗಿದ್ದು ದೀಪದ ಬೆಳಕನ್ನು ಪ್ರತಿಬಿಂಬಿಸುತ್ತಿತ್ತು. ಇತ್ತ ಕೇಳುತ್ತಿದ್ದ ಗಾನವೂ ಮೆಲ್ಲಗಾಗುತ್ತ ಬಂದು, ಕೊನೆಗ ಶೂನ್ಯವೇ ಆಗಿಹೋಯಿತು. ಸುಂದರರಾಯನ ಮನಸ್ಸುಅಲ್ಲಿದ್ದ ಸುಂದರವಾದೊಂದು ತೈಲಚಿತ್ರದ ಕಡೆಗೆ ತಿರುಗಿತು. ಚಿತ್ರಕಾರ ಕಲಾಕೌಶಲವನ್ನು ಕಂಡು ಆತನು ಮುಗ್ಧನಾಗಿ ಹೋದನು. ಆ ಚಿತ್ರದಲ್ಲಿ ಬಾಲಕನೋರ್ವನು ಒಂದು ಹೆಣ್ಣುಸಿಂಹವನ್ನು ಕೆರಳಿಸುತ್ತಲಿದ್ದನು. ಚಿತ್ರದಲ್ಲಿ ಬಾಲಕನ ಮುಖದ ಮೇಲಿನ ವರ್ಚಸ್ಸು ತುಂಬಾ ಬೆಳಗುತ್ತಲಿತ್ತು. ಆ ಚಿತ್ರವನ್ನು ಕಂಡು ಅವನಿಗೆ ಶಕುಂತಳಾಪುತ್ರನ ನೆನಪಾಯಿತು. ಅಷ್ಟರಲ್ಲಿಯೇ ಯಾರೋ ಬರುವ ಕಾಲು ಸಪ್ಪಳವೂ ಕೇಳಿಸಿತು. ಇನ್ನು ಅಲ್ಲಿಯೇ ನಿಂತಿರುವುದು ಸರಿಯಲ್ಲವೆಂದು ತಿಳಿದು ಆತನು ನಿದ್ರೆಯಿಂದ ಎಚ್ಚೆತ್ತವನಂತೆ ಬಂದ ದಾರಿಯನ್ನೇ ಹಿಡಿಯಬೇಕೆಂದು ಮುಂದುವರಿದನು. ಆದರೆ ತಾನು ಬಂದ ದಾರಿಯೇ ಆತನಿಗೆ ಕಾಣಿಸದೆ ಹೋಯಿತು. ಆ ಕೊಠಡಿಯ ಗೋಡೆಗಳಲ್ಲಿ ಒಂದೇ ಒಂದು ಒಡಕಿನ ಛಿದ್ರವಾದರೂ ತೋರಿಬರಲಿಲ್ಲ. ಏನು? ಕೊಠಡಿಯನ್ನು ತ್ಯಜಿಸಲು ಆವ ದ್ವಾರವೂ ಇಲ್ಲವೇ? ಹಾಗಾದರೆ ತಾನು ಹೇಗೆ ಒಳಕ್ಕೆ ಬಂದೆನು? ಇದೇನು ಸ್ವ;ಪ್ನವೇ? ಎಂದು ಆತನು ಯೋಚಿಸುತ್ತ ಚಕಿತನಾದನು. ತನ್ನ ಉದ್ಧಟತನದ ಅಕ್ರಮಪ್ರವೇಶಕ್ಕಾಗಿ ಯಾರೋ ತನಗೀಗ ಬಂದಿವಾಸವನ್ನು ಚೆನ್ನಾಗಿ ಕಲ್ಪಸಿದರು ಎಂದು ಆತನು ತಿಳಿದುಕೊಂಡನು. ಮುಂದೆ ಏನು ಮಾಡಬೇಕೆಂಬುದೂ ಆತನಿಗೆ ತಿಳಿಯದೆ ಹೋಯಿತು. ಕೊನೆಗೆ ಆತನು ತನ್ನಲ್ಲಿಯೇ, “ಆಗುವುದೇನು, ಇಲ್ಲಿಯೇ ನಿಂತು ನೋಡುವೆನು” ಎಂದು ನಿರ್ಧರಿಸಿದನು.

ಹೀಗೆಯೇ ಕೆಲವು ನಿಮಿಷಗಳನ್ನು ಕಳೆದೊಡನೆಯೇ ಕೆಲವು ಜನರು ಗೋಡೆಯನ್ನೊಡೆದುಕೊಂಡು ಬಂದವರಂತೆ ಒಮ್ಮೆಗೇ ಪ್ರವೇಶಿಸಿದರು. ಅವರು ಪ್ರವೇಶಿಸಿದೊಡನೆಯೇ, ಅವರು ಬಂದಿದ್ದ ದಾರಿಯು ತೋರದೆ ದ್ವಾರವು ವ್ಯಯವಾಯಿತು. ಸುಂದರರಾಯನ ಲಕ್ಷ್ಯವು ಬಂದಿದ್ದ ಆಗಂತುಕರ ಕಡೆಗೆ ಹೋಯಿತು. ಬಂದವರ ಸಂಖ್ಯೆಯಲ್ಲಿ ಏಳು ಜನರಿದ್ದರು. ಅವರಲ್ಲಿ ಆರು ಜನರು ಸಾಮಾನ್ಯ ಉಡಿಗೆಯನ್ನು ಧರಿಸಿದ್ದರು. ಅವರೆಲ್ಲರೂ ಆ ಊರಿನವರಾಗಿರಲಿಲ್ಲ. ಆದರೆ ಆ ಏಳನೆಯ ಮನುಷ್ಯನು ಮಾತ್ರ ಇತರರಂತಿರದೆ, ದೀರ್ಘಕಾಯನಾಗಿಯೂ ಅಜಾನುಬಾಹುವಾಗಿಯೂ, ಭೀಕರ ಸ್ವರೂಪಿಯೂ ಆಗಿ ಇದ್ದನು. ತಲೆಗೆ ಎತ್ತರವಾದ ಒಂದು ಕಿರೀಟ; ಅದರಲ್ಲಿ ತರತರದ ಹರಳುಗಳು ಮಿನುಗುತ್ತಿದ್ದವು. ಕೈಗಳಿಗೂ ಕಾಲುಗಳಿಗೂ ದಪ್ಪವಾದ ಬೆಳ್ಳಿಯ ಬಳೆಗಳು; ದೇಹಕ್ಕೆ ಉದ್ದವಾದ ಕಾವಿಬಣ್ಣದ ನಿಲುವಂಗಿ; ಕೊರಳಿಗೆ ರುದ್ರಾಕ್ಷಿಮಾಲೆಗಳು. ಇವುಗಳಿಂದ ವಿಚಿತ್ರವಾಗಿ ಅಲಂಕೃತನಾದ ಆತನು ಮನುಷ್ಯನಾಗಿದ್ದನೋ ಇಲ್ಲವೇ ಪ್ರತ್ಯಕ್ಷ ಭೂತವೇ ಆಗಿದ್ದನೋ ಎಂಬುದನ್ನು ತಿಳಿಯುವುದು ಅಸಾಧಾರಣವಾಯಿತು.

ಸುಂದರರಾಯನು ಆ ರೂಪವನ್ನು ಕಂಡು ನಡುಗಲಾರಂಭಿಸಿದನು. ಬಂದ ಆ ದೈತ್ಯರೂಪಿಯು ಕಠೋರ ಸ್ವರದಿಂದ, – “ಪಾಪಿ, ಏತಕ್ಕಾಗಿ ನಮ್ಮಿ ಪವಿತ್ರವಾದ ಪ್ರಾರ್ಥನಾಮಂದಿರವನ್ನು ಅಪವಿತ್ರವನ್ನಾಗಿ ಮಾಡಿದೆ?.. ಇಂದು ನಿನ್ನ ಪ್ರಾಣಹರಣವನ್ನು ಮಾಡುವುದು ನಮಗೆ ಕಠಿಣ ಕಾರ್ಯವಲ್ಲ. ಆದರೆ ನಾವು ತಿಳಿಯದೆ ಮಾಡಿದ ನಿನ್ನ ಅಪರಾಧಕ್ಕಾಗಿ ಒಮ್ಮೆಗೆ ಅಷ್ಟೊಂದು ಶಿಕ್ಷೆಯನ್ನು ಮಾಡುವುದಿಲ್ಲ… ಆದುದರಿಂದ ನೀನು ಶಿಕ್ಷಯಿಂದ ಮುಕ್ತನಾದೆಯೆಂದು ತಿಳಿಯಬೇಡ. ಇನ್ನು ಕೆಲವು ವರ್ಷಗಳಲ್ಲಿಯೇ ನಿನಗೆ ನಮ್ಮ ಪ್ರಭಾವವನ್ನು ತೋರಿಸುವೆವು” ಎಂದು ನುಡಿದನು. ಬೆಪ್ಪಾಗಿಹೋಗಿದ್ದ ಸುಂದರರಾಯನನ್ನು ಕೆಲವರು ಬಾಗಿಲಬಳಿಗೆ ಬಿಟ್ಟು ಹೋದರು. ಹಾಗೂ ಹೀಗೂ ಬೆಳಗಾಗುವುದರೊಳಗೆ ಸುಂದರರಾಯನು ತನ್ನ ನಿವಾಸವನ್ನು ಸೇರಿದನು. ಅಂದಿನಿಂದ ಆತನಿಗೆ ವಿಪರೀತ ಜ್ವರಕ್ಕಾರಂಭವಾಯಿತು. ಅದೃಷ್ಟವು ಬಲವಾಗಿದ್ದುದರಿಂದ ಆ ಬೇನೆಯಿಂದ ಬದುಕಿಕೊಂಡನು.

ಮುಂಬಯಿಯಲ್ಲಿ ಈ ಘಟನೆ ನಡೆದು ಈಗ ಏಳೆಂಟು ವರ್ಷಗಳು ಕಳೆದಿವೆ. ಆದರೆ ಇಷ್ಟು ಕಾಲದ ನಂತರ ತನ್ನ ಮನೆಯಲ್ಲಿ ಒಬ್ಬೊಂಟಿಗನಾಗಿ ನಿದ್ರೆಹೋಗಿರುವಾಗ ರಾತ್ರಿ ಹನ್ನೆರಡು ತಾಸಿನಲ್ಲಿ ಸುಂದರರಾಯನ ಕಿವಿಗೆ ಮಂತ್ರಪಠಣೆಯ ಶಬ್ದವು ಬಿದ್ದಂತಾಗಿ ಎಚ್ಚೆತ್ತು ದೀಪವನ್ನು ಉರಿಸಬೇಕೆನ್ನುವಷ್ಟರಲ್ಲಿ ಎದುರಿನ ಗೋಡೆಯಲ್ಲಿ ಮಿಂಚಿನಂತೆ ಝಗಝಗಿಸುವ, “ಈಗ ನಮ್ಮ ಪ್ರಭಾವವನ್ನು ತೋರಿಸುವೆವು. ಇಂದಿಗೆ ಹನ್ನೆರಡು ದಿವಸಗಳಲ್ಲಿ ನೀನು ಸಾಯುವಿ” ಎಂಬ ಬರೆಹ ಕಂಡಿತು.

ಸುಂದರರಾಯನಿಗೆ ಕೆಲವು ವರ್ಷಗಳ ಹಿಂದೆ ಮುಂಬಯಿಯಲ್ಲಿ ಭೀಕಾರಕೃತಿಯ ವ್ಯಕ್ತಿ ಹೇಳಿದ್ದ ಮಾತಿನ ನೆನಪಾಯಿತು. ಆತನಿಗೆ ಆಶ್ಚರ್ಯವೂ ಭೀತಿಯೂ ಆಯಿತು. ತನ್ನ ನಾಲ್ವತ್ತನೆಯ ವಯಸ್ಸಿನಲ್ಲಿಯೇ, ತನ್ನ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಬೇಕೆಂದು ನಡೆಸುತ್ತಿದ್ದ ಖಗೋಳಶಾಸ್ತ್ರದ ಸಂಶೋಧನಾಗ್ರಂಥವನ್ನು ಬರೆದು ಮುಗಿಸುವ ಮೊದಲೇ ಸಾಯಬೇಕಾಗುತ್ತದಲ್ಲಾ ಎಂದು ಕೊರಗಿದನು. ಅಷ್ಟರಲ್ಲಿ ಆ ಲಿಪಿಯ ಅಕ್ಷರಗಳು ಅದೃಶ್ಯವಾದವು. ಭಯದಿಂದ ಪ್ರಜ್ಞೆತಪ್ಪಿದ ಆತನಿಗೆ ಬೆಳಿಗ್ಗೇ ಪ್ರಜ್ಞೆ ಬರುವಂತಾಯಿತು. ಬೆಳಿಗ್ಗೆ ಮಂಗಳೂರಿಗೆ ಬಂದು ಮುಂಬಯಿಯಲ್ಲಿರುವ ತನ್ನ ತಮ್ಮನಿಗೂ, ಹಿಂದೆ ಕಲಕತ್ತೆಯಲ್ಲಿ ಪರಿಚಿತನಾಗಿದ್ದ ಪ್ರಸಿದ್ಧ ಪತ್ತೇದಾರನಾಗಿದ್ದ ಶಂಕರತನಯನಿಗೂ ತಂತಿ ಕಳಿಸಿದನು. ಶಂಕರತನಯನು ಅಂದೇ ಕಲಕತ್ತೆಯಿಂದ ಹೊರಟು ನಾಲ್ಕು ದಿನಗಳೊಳಗಾಗಿ ಮಂಗಳೂರು ಸೇರಿದನು. ಸುಂದರರಾಯನ ತಮ್ಮ ಮೋಹನರಾಯನೂ ೧೫ ದಿನಗಳ ರಜೆ ಪಡೆದು ಬಂದನು.

ಮೋಹನರಾಯನಿಗೆ ನಿಜವಾದ ಕಾರಣವನ್ನು ತಿಳಿಸದೆ ಜ್ವರದ ಕಾರಣವನ್ನಷ್ಟೇ ಹೇಳಿ ಆತನು ನೌಕರಿ ಬಿಟ್ಟು ಬಂದು ತನ್ನೊಡನೆಯೇ ಇದ್ದುಬಿಡುವಂತೆ ಒತ್ತಾಯಿಸುತ್ತಾನೆ. ಮೋಹನರಾಯನು ತನ್ನ ದುಡಿಮೆಯಿಂದ ತಾನು ತೃಪ್ತನಾಗಿರುವೆನೆಂದು ಹೇಳಿ ಆ ಸಲಹೆಯನ್ನು ನಿರಾಕರಿಸುತ್ತಾನೆ.

ಶಂಕರತನಯನ ಜೊತೆ ಅವನ ಮಿತ್ರ ಅರವಿಂದಮಿತ್ರನೂ ಮಂಗಳೂರಿಗೆ ಬಂದಿದ್ದನು. ಇಬ್ಬರಿಗೂ ಮಾತಾಡುವಷ್ಟು ಕನ್ನಡ ಬರುತ್ತಿತ್ತು. ಸುಂದರರಾಯನು ಶಂಕರತನಯನೊಡನೆ ಸಂಗತಿಗಳನ್ನು ಸಾದ್ಯಂತವಾಗಿ ತಿಳಿಸಿದನು. ಭಯದಿಂದ ನಡುಗುತ್ತಿದ್ದ ಸುಂದರರಾಯ ಸದ್ಯದಲ್ಲಿಯೇ ರಮಣಿಯೊಂದಿಗೆ ಮದುವೆಯಾಗಲಿರುವನೆಂಬುದನ್ನೂ ಶಂಕರತನಯನಿಗೆ ತಿಳಿಸಿ ಹುಚ್ಚನಂತೆ ಆಡುತ್ತಿರುವುನೆಂದು ಸುಂದರರಾಯನಿಗೆ ಧೈರ್ಯಹೇಳಿದನು.

ಆನಂತರ ಸುಂದರರಾಯನು ಆದಿನ ಮುಂಜಾನೆ ತಾನು ೮ ಮೈಲು ದೂರದಲ್ಲಿದ್ದ ತನ್ನೊಬ್ಬ ಮಿತ್ರನನ್ನುದ್ದೇಶಿಸಿ ಹೋಗಲು ತನ್ನ ಮೋಟಾರುಬಂಡಿಯನ್ನು ತರಬೇಕೆಂದು ಅದನ್ನಿಟ್ಟಿರುವ ಕೊಠಡಿಯನ್ನು ಪ್ರವೇಶಿಸುವಷ್ಟರಲ್ಲಿ ತನ್ನ ಕಣ್ಣಿಗೆ ಒಂದು ಪುರುಷಾಕೃತಿ ಕಾಣಿಸಿಕೊಂಡಿತೆಂದೂ ಅದು ಮುಂಬಯಿಯಲ್ಲಿ ತನ್ನ ದೃಷ್ಟಿಗೆ ಬಿದ್ದ ಆ ಮನುಷ್ಯನ ರೂಪಾಗಿತ್ತೆಂದೂ ಹೇಳಿದನು. ಆ ಭೂತವು ತನ್ನ ಕಣ್ಣೆದುರಿಂದ ಮಾಯವಾದೊಡನೆ ತಾನು ಅಲ್ಲೇ ಬಳಿಯಲ್ಲಿ ಅದರ ಸಲುವಾಗಿ ಹುಡುಕಿದಾಗ ಒದ್ದೆಯಾಗಿದ್ದ ಎದುರಿನ ನೆಲದಲ್ಲಿ ಬಲವಾಗಿ ಕಂತಿದ್ದ ಅದರ ಹೆಜ್ಜೆಗುರುತುಗಳನ್ನು ಕಂಡೆನೆಂದು ಹೇಳಿ ಆ ಗುರುತಿನ ಮೇಲೆ ಒಂದು ಬಗೆಯ ಸುಣ್ಣವನ್ನು ಕರಗಿಸಿ ಹುಯ್ದು ಸಿದ್ಧಪಡಿಸಿದ ಅದರ ಮಾದರಿಯನ್ನು ತೆಗೆದು ತೋರಿಸಿ ಅದೇ ಆತನ ಹೆಜ್ಜೆಯ ಮಾದರಿಯೆಂದು ಪರೀಕ್ಷೆ ಮಾಡಲು ಶಂಕರತನಯನಿಗೆ ಹೇಳಲು ಆತನು ಆ ಅಸಮಾನ್ಯ ಅಳತೆಯ ಪಾದವನ್ನು ನೋಡಿ ಸುಂದರರಾಯನಿಂದ ಕೆಲವು ಅವಶ್ಯವಾದ ಪ್ರಶ್ನೆಗಳಿಗೆ ಉತ್ತರ ಪಡೆದು ಆ ಹೆಜ್ಜೆಯು ಮನುಷ್ಯಮಾತ್ರದವರದೇ ಇರಬೇಕೆಂದು ನಿರ್ಣಯಿಸುತ್ತಾನೆ.

ಸಾಯುವ ಮೊದಲೇ ಗ್ರಂಥವನ್ನು ಬರೆದು ಮುಗಿಸಬೇಕೆಂದು ಸುಂದರರಾಯನ ಸಂಕಲ್ಪವಿದ್ದುದರಿಂದಲೂ ಆ ಕೆಲಸಕ್ಕೆ ಸಂಬಂಧಿಸಿದಂತೆ ಉಳ್ಳಾಲದ ನಿವಾಸವೇ ಅನುಕೂಲಕರವಾದ್ದರಿಂದ ಶಂಕರತನಯ, ಅರವಿಂದರೂ ಉಳ್ಳಾಲಕ್ಕೇ ಹೋಗುವುದೆಂದು ನಿಶ್ಚಯವಾಯಿತು. ಅವರ ಕಾರ್ಯಸಾಧನೆಯಾಗುವವರೆಗೆ ಅವರ ಹೆಸರುಗಳನ್ನು ಕ್ರಮವಾಗಿ ವಿಚಿತ್ರಶರ್ಮನೆಂದೂ, ವಿನೋದಶರ್ಮನೆಂದೂ ಬದಲಿಸಿಕೊಳ್ಳತಕ್ಕದ್ದೆಂದೂ ತೀರ್ಮಾನಿಸಲಾಯಿತು. ಅವರು ತನ್ನ ಪೂರ್ವಪರಿಚಯಸ್ಥರೆಂದೂ, ಕನ್ನಡ ಬಾರದವರೆಂದೂ ಊರು ನೋಡಲು ಬಂದವರೆಂದೂ ಇತರರಿಗೆ ತಿಳಿಸಬೇಕೆಂದು ಸುಂದರರಾಯನಿಗೆ ಎಚ್ಚರಿಕೆ ನೀಡಿದರು. ಮತ್ತು ಕೆಲಸ ಕೈಗೂಡುವವರೆಗೂ ಸುಂದರರಾಯ ತನ್ನ ತಮ್ಮ ಮೋಹನರಾಯನನ್ನು ನಂಬಕೂಡದೆಂದೂ ತಿಳಿಸಿದರು.

ಒಂದು ಮೋಟಾರುಬಂಡಿಯಲ್ಲಿ ಈ ಮೂವರೂ, ಮೋಟಾರು ಡ್ರೈವರನೂ ಹೊರಟರು. ಅವರ ಜೊತೆಗೆ ಮಂಗಳೂರಿನ ಓರ್ವ ಧನಿಕನ ಮಗಳೂ, ಸುಂದರರಾಯನಂತೆ ಬ್ರಹ್ಮಸಮಾಜಕ್ಕೆ ಸೇರಿದವಳೂ ಸುಂದರರಾಯ ವಿವಾಹವಾಗಬೇಕೆಂದು ಎಣಿಸಿರುವವಳೂ, ಇಪ್ಪತ್ತುನಾಲ್ಕು ವರುಷದ ಚೆಲುವೆಯೂ ಆದ ಸುನಂದಾ ಕೂಡ ಹೊರಟ್ಟಿದ್ದಳು. ಹಾಗೆಯೇ ‘ಬಾಗ್’ ಎನ್ನುವ ಪತ್ತೇದಾರರ ನಾಯಿಯೂ ಬಂಡಿಯಲ್ಲಿತ್ತು. ದಾರಿಯಲ್ಲಿ ಎರಡು ಮೂರು ರಸ್ತೆಗಳು ಕೂಡುವ ಒಂದು ಸೇರುವಿಕೆ ಬಂದಾಗ ಪ್ರಯಾಣ ಗದ್ದಲ ವಿಶೇಷವಾಗಿದ್ದುದರಿಂದ ಬಂಡಿಯು ನಿಲ್ಲಬೇಕಾಯಿತು. ಆ ವೇಳೆಯಲ್ಲಿ ಸುಂದರರಾಯನು ಒಮ್ಮಿಂದೊಮ್ಮೆಗೆ ತನ್ನ ಮೋಟಾರು ದೋಣಿಯ ಡ್ರೈವರನಾದ ಆನಂದನನ್ನು ಕಂಡಂತಾಗಿ ಆತನನ್ನು ಹುಡುಕಹೋದನು. ಆತನು ತಿರುಗಿ ಸುಂದರರಾಯನ ದೃಷ್ಟಿಗೆ ಬೀಳಲಿಲ್ಲ. ಏಕೆಂದರೆ ಯಾವಾಗಲೂ ವಿಧೇಯನಾಗಿರುವ ಆನಂದನಿಗೆ ಮನೆಬಿಟ್ಟು ಎಲ್ಲಿಗೂ ಹೋಗಬಾರದೆಂದು ಆತ ಆಜ್ಞಾಪಿಸಿ ಬಂದಿದ್ದನಾದ್ದರಿಂದ ಆ ಘಟನೆ ಸುಂದರರಾಯನಿಗೆ ಭಯ, ಆಶ್ಚರ್ಯಕ್ಕೆ ಕಾರಣವಾಯಿತಷ್ಟೇ ಅಲ್ಲದೆ ಅದು ತನ್ನ ಚಿತ್ತಚಾಂಚಲ್ಯದ ವೈಪರೀತ್ಯವೇ ಎಂಬ ಸಂದೇಹಕ್ಕೂ ಕಾರಣವಾಯಿತು. ಅವರು ನೇತ್ರಾವತಿಯ ದಡಕ್ಕೆ ಬಂದು ಅಲ್ಲಿ ಬಂಡಿಯಿಂದಿಳಿದು ಡ್ರೈವರೊಬ್ಬನನ್ನುಳಿದು ಉಳಿದವರೆಲ್ಲ ನದಿಯನ್ನು ದಾಟಿ ಮುಂದಕ್ಕೆ ಉಳ್ಳಾಲದ ಕಡೆಗೆ ಪ್ರಯಾಣವನ್ನು ಬೆಳೆಸಿದರು. ಸುಂದರರಾಯನ ಮನೆಯ ಗೇಟುದ್ವಾರವನ್ನು ಅವರು ಪ್ರವೇಶಿಸುವಾಗ ಅವರನ್ನು ಇದಿರುಗೊಳ್ಳಲು ಆನಂದನ ಸವಾರಿಯು ಬಂದಿತು. ಆತನು ದೂರದಲ್ಲಿ ಬರುತ್ತಾ ತನ್ನ ಉಡಿಗೆಯನ್ನು ಸರಿಪಡಿಸುತ್ತಿರುವ ಒಂದು ಅಲ್ಪಸಂಗತಿಯು ವಿನೋದಶರ್ಮನ ದೃಷ್ಟಿಗೆ ಬಿದ್ದಿತು. ಆನಂದನು ಎದುರುಗೊಂಡುದರಿಂದ ತಾನು ದಾರಿಯಲ್ಲಿ ಕಂಡವನು ಆನಂದನಿದ್ದಿರಲಾರನೆಂದು ಸುಂದರರಾಯನಿಗೆ ಎಂದೆನಿಸಿತಲ್ಲದೇ ಎಲ್ಲಕ್ಕೂ ತನ್ನ ಚಿತ್ತಭ್ರಮೆಯೇ ಕಾರಣವಾಗಿರಬೇಕೆಂದೂ ಇಲ್ಲವಾದರೆ ಅಮಾನುಷವಾದ ಭೂತ-ಪ್ರೇತಗಳ ಚಮತ್ಕಾರವಾಗಿರಬೇಕೆಂದೂ ತಿಳಿದನು. ವಿಚಿತ್ರಶರ್ಮನು ಆತನಿಗೆ ಅವನ ಎರಡೂ ಸಂದೇಹಗಳು ನಿರಾಧಾರವೆಂದೂ ಅದು ಮಾನವಾಕೃತಿಯೇ ಆಗಿರಬೇಕೆಂದೂ ಅದನ್ನು ಪತ್ತೆ ಹಚ್ಚುವ ಜವಾಬ್ದಾರಿ ತನಗಿರಲೆಂದು ಹೇಳಿ ಸುಂದರರಾಯನನ್ನು ಸುಮ್ಮನಾಗಿಸುತ್ತಾನೆ. ಆ ಸಂದರ್ಭಕ್ಕೆ ಸರಿಯಾಗಿ ಮೋಹನರಾಯನು ಬರಲು ಈ ಹೊಸಬರ ಪರಿಚಯ ಆತನಿಗಾಗುತ್ತದೆ. ಅವರು ದೂರದ ಬಂಗಾಲದವರೆಂದೂ, ‘ಹಿಂದೂ’ ಪತ್ರಿಕೆಯ ಸಂಪಾದಕೀಯ ವರ್ಗದಲ್ಲಿ ಸೇರಿಕೊಂಡಿರುವ ಇವರು ಸೃಷ್ಟಿಯ ಸೊಬಗನ್ನು ನೋಡಲು ಇಲ್ಲಿಗೆ ಬಂದಿರುವರೆಂಬುದೂ ಮೋಹನರಾಯನಿಗೆ ಅವರೊಂದಿಗಿನ ಸಂಭಾಷಣೆಯಿಂದ ತಿಳಿದುಬರುತ್ತದೆ. ಇದಾದಮೇಲೆ ಸುನಂದ-ಮೋಹನರಾಯರ ಭೇಟಿಯ ಸಂದರ್ಭ ಬರುತ್ತದೆ.

ಮೋಹನರಾಯನಿಗೂ ಸುನಂದೆಗೂ ಕೆಲವು ವರ್ಷಗಳ ಹಿಂದೆ ಸ್ನೇಹ ಬೆಳೆದಿತ್ತು. ಆದರೆ ಕಾಲಾನಂತರದಲ್ಲಿ ಮುಂಬಯಿಯ ಗುಪ್ತಕೂಟದ ಚಾಲಕರಲ್ಲಿ ಮೋಹನರಾಯನೊಬ್ಬನೆಂಬುದೂ ಆತ ಆ ಗುಪ್ತಕೂಟದ ಭಯಂಕರ ಜಗನ್ನಾಥನ ಮಿತ್ರನೆಂಬುದೂ ಆಕೆಗೆ ತಿಳಿದುದರಿಂದ ಆತನ ಮೇಲಣ ಮಮತೆಯನ್ನು ಮುರಿದು ಅವನ ಅಗ್ರಜನಾದ ಸುಂದರರಾಯನಲ್ಲಿ ಮನಸ್ಸನ್ನಿಟ್ಟಳು. ಆದ್ದರಿಂದ ದುಷ್ಟರಾಗಿದ್ದ ಅವರ ಸಂಘವು ತಪ್ಪಿತೆಂದು ಈಗ ಸಂತೋಷವಾಗಿದ್ದಾಳೆ.ಆದರೆ ಮಂಡಳಿಯ ಅಂತರಂಗವನ್ನು ಗುಪ್ತವಾಗಿರಿಸುವೆನೆಂದು ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದುದು ತೀರಾ ತಪ್ಪು ಎಂದು ಆಕೆಗೆ ಈಗ ಅನಿಸುತ್ತದೆ. ಮೋಹನರಾಯನು ಈಗಲೂ ಆಕೆಯನ್ನು ಪ್ರೀತಿಸುತ್ತಿದ್ದಾನೆ. ತನ್ನ ಅಣ್ಣನ ಸಾವು ಸಮೀಪವಾಗಿರುವುದರಿಂದ ಆತನನ್ನು ವಿವಾಹವಾಗಲು ಯೋಚಿಸುವುದಕ್ಕಿಂತ ತನ್ನನ್ನೇ ಸೇರುವುದು ಜಾಣತನವೆಂದು ಸುನಂದೆಗೆ ಬುದ್ಧಿ ಹೇಳುತ್ತಾನೆ. ತಾನು ಸುಂದರರಾಯರನ್ನಲ್ಲದೇ ಇನ್ನಾರನ್ನೂ ಪ್ರೀತಿಸುವವಳಲ್ಲ ಎಂದು ಸುನಂದೆ ಸ್ಪಷ್ಟವಾಗಿ ಹೇಳಿದ್ದರಿಂದ ಆ ಮಾತನ್ನು ಮೋಹನರಾಯ ಅಲ್ಲಿಗೇ ನಿಲ್ಲಿಸುತ್ತಾನೆ. ಆದರೆ ಮೋಹನರಾಯ ಆಕೆಯಿಂದ ವಿಚಿತ್ರಶರ್ಮ, ವಿನೋದಶರ್ಮರ ಕುರಿತು ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ಈ ಸಂಭಾಷಣೆಯ ಮೂಲಕ ಸುಂದರರಾಯನು ತೀರ ಕಳವಳಗೊಂಡಿರುವುದು, ದಾರಿಯಲ್ಲಿ ಆನಂದನಂತಿರುವವನನ್ನು ಕಂಡು ಕಳವಳಗೊಂಡಿದ್ದನ್ನೂ ಅವನ ಹೊಸ ಮಿತ್ರರು ಅವನನ್ನು ಸಮಾಧಾನಪಡಿಸುತ್ತಿರುವುದನ್ನೂ ಆಕೆಯಿಂದ ತಿಳಿದುಕೊಳ್ಳುತ್ತಾನೆ.

ಆ ಮಾತುಕತೆಗಳು ಮಹಡಿಯ ಒಂದು ಕೊಠಡಿಯಲ್ಲಿ ನಡೆಯುತ್ತಿದ್ದಾಗ ಆ ಕೊಠಡಿಯ ದ್ವಾರಕ್ಕಿಂತ ರಂಧ್ರದ ಮುಖಾಂತರ ಸಮೀಪದಲ್ಲಿ ನಡೆಯುತ್ತಿದ್ದ ಮಾತುಕತೆಗಳನ್ನು ಕೇಳುತ್ತಿದ್ದನಲ್ಲದೇ ಅವರ ಮುಖಭಾವಗಳನ್ನು ವಿನೋದಶರ್ಮನು ಚೆನ್ನಾಗಿ ಗಮನಿಸುತ್ತಿದ್ದನು. ಸುನಂದೆಯು ಅಲ್ಲಿಂದ ಹೊರಟೊಡನೆ ವಿನೋದಶರ್ಮನು ಅಲ್ಲಿಂದ ಮಾಯವಾದನು.

ಇತ್ತ ವಿಚಿತ್ರಶರ್ಮನು ಆನಂದನ ಗುಟ್ಟನ್ನು ತಿಳಿಯಲು ಆತನೊಡನೆ ಸಂಭಾಷಣೆಯಲ್ಲಿ ತೊಡಗಿದ್ದನು. ಮಂಗಳೂರಿನಲ್ಲಿ ಬರುವಾಗ ತಾವು ಭೇಟಿಯಾದ ಆನಂದನು ಅವರು ಊರು ಸೇರುವುದರಲ್ಲಿಯೇ ಈ ಸ್ಥಳದಲ್ಲಿ ಇದುರುಗೊಳ್ಳಲು ಸಿದ್ಧವಾಗಬೇಕಾದರೆ…. ಎಂದು ಮಾತನ್ನು ಮುಗಿಸುವಷ್ಟರಲ್ಲಿಯೇ ಮಂಗಳೂರಿನಲ್ಲಿ ಕಂಡಿರಬಹುದಾದ ವ್ಯಕ್ತಿಗೂ ತನಗೂ ಯಾವುದೇ ವಿಧವಾದ ಸಂಬಂಧ ಇಲ್ಲವೆಂದೂ ತಾನು ಈ ಮನೆಯನ್ನು ಬಿಟ್ಟು ಹೊರಡಲೇ ಇಲ್ಲವೆಂದೂ ಅನಂದನು ಹೇಳಿದನು. ಆದರೆ ವಿಚಿತ್ರಶರ್ಮನು ತಮಗಿಂತ ಮುಂಚಿತವಾಗಿ ಆನಂದನು ಇಲ್ಲಿಗೆ ಓಡಿಬಂದವನಲ್ಲದಿದ್ದರೆ ತಮ್ಮನ್ನು ಎದುರುಗೊಳ್ಳಲು ಬರುವ ವೇಳೆ ಆನಂದನ ಮುಖದಲ್ಲಿ ಆಯಾಸದ ಚಿಹ್ನೆಗಳಿರಲು ಕಾರಣವೇನು? ಆನಂದನು ದೂರದಲ್ಲಿರುವಾಗ ಅವಸರದಿಂದ ತನ್ನ ಮೊದಲಿನ ಉಡುಗೆಯನ್ನು ಬದಲಿಸಲು ಕಾರಣವೇನು? ಎಂದೆಲ್ಲಾ ಪ್ರಶ್ನಿಸಿದನು. ಆದ್ದರಿಂದ ಆನಂದನ ಮುಖವು ಸಿಟ್ಟಿನಿಂದ ಕೆಂಪೇರಿತು. ಆತನು ಕೋಪವನ್ನು ತಡೆಯಲಾರದೆ ವಿಚಿತ್ರಶರ್ಮನನ್ನು ಹೊಡೆಯಲೆಂದು ಬಳಿಯಲ್ಲಿದ್ದ ಒಂದು ಕಬ್ಬಿಣದ ಚಿಕ್ಕ ಹಾರುಗೋಲಿನ ಕಡೆಗೆ ಕೈ ಚಾಚಿದನು. ವಿಚಿತ್ರಶರ್ಮನು ಆತನನ್ನು ಮತ್ತಷ್ಟು ರೇಗಿಸಿದನು. ಆಗ ಹಾರುಗೋಲನ್ನೆತ್ತಿ ಆನಂದನು ವಿಚಿತ್ರಶರ್ಮನ ತಲೆಗೆ ಗುರಿಯಿಟ್ಟನು. ಹಾರುಗೋಲು ಕೆಳಕ್ಕೆ ಇಳಿಯಿತೆನ್ನುವುದರೊಳಗಾಗಿ ವಿಚಿತ್ರಶರ್ಮನು ತನ್ನ ಸ್ಥಳದಿಂದ ಹಿಂದಕ್ಕೆ ಜಿಗಿದು ತನ್ನ ಕೈಯೊಂದನ್ನು ಹಾರುಗೋಲು ಹಿಡಿದು ಅವನ ಕರಕ್ಕೆ ಕೊಟ್ಟು ಇನ್ನೊಂದು ಕೈಯಿಂದ ಅವನ ಎದೆಯನ್ನು ಬಿಗಿದು ಅವನ ಕಾಲಿಗೆ ತನ್ನ ಕಾಲನ್ನು ಸಿಕ್ಕಿಸಿ ಧೊಪ್ಪನೆ ನೆಲಕ್ಕುರುಳಿಸಿಬಿಟ್ಟು ಭೂಮಿಯ ವಿಸ್ತಾರವನ್ನು ಅಳೆಯುತ್ತಿದ್ದ ಆನಂದನ ಎದೆಯ ಮೇಲೆ ವಿಚಿತ್ರಶರ್ಮನು ಕುಳಿತುಬಿಟ್ಟನು. ಅವರಿಬ್ಬರೂ ಹೋರಾಡುತ್ತಿರುವಾಗ ಉಂಟಾದ ಸದ್ದನ್ನು ಕೇಳಿ ಮೋಹನರಾಯನ ಸವಾರಿ ಅಲ್ಲಿಗೆ ಬಂದುದರಿಂದ ವಿಚಿತ್ರಶರ್ಮನು ಆನಂದನ ಎದೆಯ ಮೇಲಿಂದ ಎದ್ದು ಬಂದನು.ಇದೇ ತಕ್ಕ ಸಮಯವೆಂದು ಆನಂದನು ಮತ್ತೆ ವಿಚಿತ್ರಶರ್ಮನ ಮೇಲೆ ಏರಿಹೋಗಲು ಮೋಹನರಾಯನು ಮಧ್ಯದಲ್ಲಿ ತಡೆದನು. ಆನಂದನಿಂದ ವಿಷಯವೇನೆಂದು ಮೋಹನರಾಯರು ಮಧ್ಯದಲ್ಲಿ ತಡೆದನು. ಆನಂದನಿಂದ ವಿಷಯವೇನೆಂದು ಮೋಹನರಾಯರು ತಿಳಿದುಕೊಂಡನು. ಇದಿಷ್ಟು ‘ಭೂತ’ ಕಾದಂಬರಿಯ ಮೊದಲ ೨೪ ಪುಟಗಳ ಕಥಾಭಾಗ.

“ಚೋಮನ ದುಡಿ”ಯ ‘ಮುನ್ನುಡಿ’ಯಲ್ಲಿ “ವಿಚಿತ್ರಕೂಟ” ತಮ್ಮ ಮೊದಲನೆಯ ಕಾದಂಬರಿ ಎಂದು ಹೇಳಿಕೊಂಡ ಕಾರಂತರು ಆ ವಿಷಯವಾಗಿ ನನ್ನ ಅಂದಿನ ಕೆಲಸಗಳು ತೀರಾ ತೊದಲುನುಡಿಗಳಂತಿವೆ’, ಎಂದು ಹೇಳಿಕೊಂಡಿದ್ದಾರೆ.

‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಎಂಬ ಗ್ರಂಥದಲ್ಲಿ ‘ವಿಚಿತ್ರಕೂಟ’, ‘ಭೂತ’ ಕಾದಂಬರಿಗಳನ್ನು ಕುರಿತಂತೆ :

“ಪತ್ರಿಕೆ ಹೊರಡಿಸಿದ ಮೇಲೆ ಅದರಲ್ಲಿ ಲೇಖನ ತುಂಬಿಸಬೇಡವೆ? ಆಗ ತೊಡಗಿತು ಒದ್ದಾಟ. ಸ್ಥಳಿಕರಾದ ಅನೇಕ ಮಿತ್ರರನ್ನು ಕಾಡಿ, ಲೇಖನ ಬರೆಯಿಸಿದೆ.ನಾನೇ ಬಹುಭಾಗ ತುಂಬುತ್ತಿದ್ದೆ. ಮೊದಲ ಎರಡು ವರ್ಷಗಳು “ವಿಚಿತ್ರಕೂಟ”, “ಭೂತ” ಎಂಬ ಎರಡು ಪತ್ತೇದಾರಿ ಕತೆಗಳನ್ನು ಕ್ರಮಶಃ ಪ್ರಕಟಿಸಿದೆ. ಇಂದಿಗೂ ಅವುಗಳ ಕೀರ್ತಿ ಉಳಿದಿದೆ. ಎಷ್ಟೋ ಮಂದಿ “ವಿಚಿತ್ರಕೂಟ”ದ ಪ್ರತಿ ಇದೆಯೇ? ಎಂದು ಕೇಳಿ ಕಾಗದ ಬರೆಯುತ್ತಿದ್ದರು. ಸೆಕ್ಸಟನ್ ಬ್ಲೇಕನ ಕತೆಗಳನ್ನು ಓದಿದ್ದರ ಪ್ರೇರಣೆಗಳವು. ಆ ಪತ್ತೇದಾರಿ ಕತೆಗಳಲ್ಲಿ ನಾನು ಎಷ್ಟೆಲ್ಲ ಗುಂಡು ಹಾರಿಸಿದ್ದೇನೆ, ಏನು ಕೊಲೆ ಮಾಡಿಸಿದ್ದೇನೆ, ಎಂಬುದು ಈಗ ನನ್ನ ನೆನಪಿಗೆ ಬರಲಾರದು. ನನ್ನ ಆಗಿನ ಮನೋವೃತ್ತಿಯುಳ್ಳವರಿಗೆ ಇಂದಿಗೂ ಆ ಕಥೆಗಳು ರುಚಿಸಬಹುದು.ಆದರ ನನಗೆ ಬಹಳ ಬೇಗನೆ ಅತೃಪ್ತಿ ಬಂತು. ಒಬ್ಬ ಹಿರಿಯರು ಉಗ್ರಾಣ ಮಂಗೇಶರಾಯರೆಂಬವರು ನನ್ನೊಡನೆ ಒಂದು ದಿವಸ, ‘ಇಂಥ ಕತೆಗಳಿಂದ ಏನು ಉದ್ದೇಶ ಸಾಧನೆಯಾಗುತ್ತದೆ?’ ಎಂದು ಕೇಳಿದರು. ಆಗ ನಾನು ಆ ಪ್ರಶ್ನೆಯನ್ನು ಕುರಿತು ವಿಚಾರ ಮಾಡಲೇಬೇಕಾಯಿತು. ಎಂದೂ ಅದೇ ಗ್ರಂಥದಲ್ಲಿಯೇ ಇನ್ನೊಂದು ಕಡೆ ಈ ಕೃತಿಗಳನ್ನು ಕುರಿತಂತೆ :

“ವಸಂತ ಪ್ರತಿಕೆಯನ್ನು ನಡೆಯಿಸಿದಾದ ಘೋರವಾದ ಎರಡು ಪತ್ತೇದಾರಿ ಕತೆಗಳನ್ನು ಬರೆದು ಬಿಟ್ಟಿದ್ದೆ. ಅವುಗಳಲ್ಲಿನ ಪಾತ್ರವರ್ಗಕ್ಕೆ ಎಲ್ಲಾ ಬಂಗಾಲಿ ಹೆಸರುಗಳೇ! ವೆಂಕಟಾಚಾರ್ಯರ ಕಾದಂಬರಿಗಳನ್ನು ಓದಿದಜನ ನಾಯಿ, ಬೆಕ್ಕುಗಳಿಗೂ ಪರಿಮಳ, ವಿನತಾ ಎಂದು ಹೆಸರಿಡುವಂತೆ” ಎಂದೂ ಬರೆಯುತ್ತಾರೆ.

‘How deep is Western influenceon Indian Writersof Fiction?’ ಎಂಬ ಮೈಸೂರಿನ ‘ದ್ವನ್ಯಾಲೋಕ’ದಲ್ಲಿ ನಡೆದ ರಾಷ್ಟ್ರೀಯಮಟ್ಟದ ವಿಚಾರ ಸಂಕಿರಣವೊಂದರಲ್ಲಿ ಮಂಡಿಸಿದ ಪ್ರಬಂಧದಲ್ಲಿ ಕಾರಂತರು ತಾವು ಬರೆದ ಪತ್ತೇದಾರಿ ಕತೆಗಳ ಬಗ್ಗೆ ಬರೆಯುತ್ತಾ: ‘In my boy-hood, I was tempted to write one or two, inspired by the Bengali version of the novel Parimala’ ಎಂದು ಹೇಳಿಕೊಂಡಿದ್ದಾರೆ.

ಶಿವರಾಮ ಕಾರಂತರು ತಮ್ಮ ‘ವಿಚಿತ್ರಕೂಟ’ ಮತ್ತು ‘ಭೂತ’ ಕುರಿತು ಹೇಳಿಕೊಂಡಿರುವ ಮಾತುಗಳಿಂದ ಕೆಲವು ಮುಖ್ಯ ಅಂಶಗಳನ್ನು ಗುರುತಿಸಿಕೊಳ್ಳಬಹುದಾಗಿದೆ :

೧. ಬಂಗಾಲಿಯಲ್ಲಿ ರೂಪಾಂತರಿತವಾದ ಪತ್ತೇದಾರಿ ಕಾದಂಬರಿ ‘ಪರಿಮಳಾ’ ಮತ್ತು ಸೆಕ್ಸಟನ್ ಬ್ಲೇಕನ ಕಥೆಗಳು ಈ ಕಾದಂಬರಿಗಳಿಗೆ ಸ್ಫೂರ್ತಿ ಹಾಗೂ ಪ್ರೇರಣೆ ನೀಡಿದವು.

೨. ಈ ಕಾದಂಬರಿಯಲ್ಲಿರುವ ಬಂಗಾಲಿ ಹೆಸರುಗಳಿಗೆ ‘ಪರಿಮಳಾ’ ದಂತೆ ವೆಂಕಟಾಚಾರ್ಯರ ಕಾದಂಬರಿಗಳನ್ನು ಓದಿ ಮೆಚ್ಚಿಕೊಂಡುದೂ ಕಾರಣವಾಗಿದೆ.

೩. ಈ ಕೃತಿಗಳು ‘ವಸಂತ’ ಪತ್ರಿಕೆಯ ಪುಟ ತುಂಬಿಸಲೆಂದು ಬರೆದವು ಮತ್ತು ಕಾದಂಬರಿಕಾರ ಕಾರಂತರ ತೊದಲು ನುಡಿಗಳಂತಿವೆ.

೪. ಇಂಥ ಕೃತಿಗಳಿಂದ ಯಾವ ಉದ್ದೇಶವೂ ಸಾಧಿತವಾಗುವುದಿಲ್ಲವೆಂದು ಗೊತ್ತಾದ ಮೇಲೆ ಕಾರಂತರು ಅಂಥ ಕೃತಿಗಳನ್ನು ಬರೆಯಲಿಲ್ಲ.

ಒಟ್ಟಿನಲ್ಲಿ ಕಾರಂತರಿಗೆ ‘ವಿಚಿತ್ರಕೂಟ’ ಮತ್ತು ‘ಭೂತ’ ಕಾದಂಬರಿಗಳ ಸಾಮಾನ್ಯತೆ ಮತ್ತು ಮಿತಿಯ ವಿಷಯದಲ್ಲಿ ಸ್ಪಷ್ಟ ತಿಳುವಳಿಕೆ ಇದೆ. ಆದ್ದರಿಂದ ಆ ಕೃತಿಗಳ ದೋಷ ನಿರೂಪಣೆಯನ್ನು ವಿವರವಾಗಿ ಮಾಡಬೇಕಾದ ಔಚಿತ್ಯ ಮತ್ತು ಅವಶ್ಯಕತೆ ಇಂದು ಅಷ್ಟಾಗಿ ತೋರುವುದಿಲ್ಲ. ಈ ಕಾದಂಬರಿಗಳಲ್ಲಿನ ಅವಾಸ್ತವಿಕ ಘಟನಾಪರಂಪರೆಗಳು, ಸಕಾರಣ ಸಂಬಂಧವಿಲ್ಲದ ರಾಗ-ದ್ವೇಷಗಳು, ಪಾತ್ರಗಳ ವಿಚಿತ್ರ ನಡೆನುಡಿಗಳು ಮತ್ತು ಅವುಗಳ ವಿಚಿತ್ರ ಉದ್ದೇಶಗಳು-ಇವೆಲ್ಲವೂ ಸಾಹಿತ್ಯದ ವಿಷಯದಲ್ಲಿ ತಕ್ಕಮಟ್ಟಿನ ಅಭಿರುಚಿ, ಸಂಸ್ಕಾರವುಳ್ಳವರಿಗೂ ಇಂದು ಗೋಚರವಾಗುವಂತಿದೆ. ಕಾರಂತರ ಜೀವನಾನುಭವ ಮತ್ತು ಅದರ ಕಲಾತ್ಮಕ ಅಭಿವ್ಯಕ್ತಿಯ ಕುರಿತಾದ ಹುಡುಕಾಟಕ್ಕೆ ಸಂಬಂಧಿಸಿದಂತೆ ಕೂಡ ‘ವಿಚಿತ್ರಕೂಟ’ ಮತ್ತು ‘ಭೂತ’ ಕಾದಂಬರಿಗಳಲ್ಲಿ ಮಹತ್ವದ ಅಂಶವೇನೂ ಕಾಣಸಿಗುವುದಿಲ್ಲ. ಆದರೆ, ಕಾರಂತರ ಆ ಕಾಲ ವಯಸ್ಸು ಮತ್ತು ಕನ್ನಡ ಕಾದಂಬರಿ ಸಾಹಿತ್ಯದ ಚಾರಿತ್ರಿಕ ಸಂದರ್ಭವನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದಾಗ ‘ವಿಚಿತ್ರಕೂಟ’ ಮತ್ತು ‘ಭೂತ’ ಕಾದಂಬರಿಗಳಲ್ಲಿ ಪ್ರಕಟವಾಗಿರುವ ಕಾರಂತರ ಕಥೆಯನ್ನು ಕಟ್ಟುವ ಕಲ್ಪನಾಶಕ್ತಿ ಮತ್ತು ಚತುರತೆ ಉತ್ತಮ ಮಟ್ಟದ್ದಾಗಿದೆ ಎಂದೆನಿಸುತ್ತದೆ. ಹಾಗೆ ನೋಡಿದರೆ, ತನ್ನ ಸುತ್ತಮುತ್ತಲಿನ ಪರಿಸರ, ಪ್ರಭಾವಗಳಿಂದ ತನ್ನಲ್ಲಿ ರೂಪುಗೊಂಡ ಜೀವನಾನುಭವಗಳನ್ನು ಕಾದಂಬರಿಕಾರ ಕಾರಂತರು ಅಗೆಯುವ ಪ್ರಾರಂಭದ ಪ್ರಾಮಾಣಿಕ ಪ್ರಯತ್ನ ‘ನಿರ್ಭಾಗ್ಯ ಜನ್ಮ’ ಕಾದಂಬರಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ – ಎಂದಷ್ಟೇ ಈ ಸಂದರ್ಭದಲ್ಲಿ ಹೇಳಿದರೆ ಸಾಕೆಂದು ತೋರುತ್ತದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)