‘ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನವು’ ಕನ್ನಡದ ಮೊತ್ತಮೊದಲ ಸಾಮಾಜಿಕ ನಾಟಕ. ‘ಕನ್ಯಾವಿಕ್ರಯದ ಪರಿಣಾಮವು’ ಎಂಬುದು ಈ ನಾಟಕದ ಇನ್ನೊಂದು ಹೆಸರು. ೧೮೮೭ರಲ್ಲಿ ಅಂದರೆ ಒಂದು ನೂರು ವರ್ಷಗಳ ಹಿಂದೆ ಈ ನಾಟಕ ಪ್ರಕಟವಾಯಿತು. ನಾಟಕ ಆಕಾರದಲ್ಲಿ ಕ್ರೌನ್ ಆಕಾರದಲ್ಲಿ ಒಟ್ಟು ೪೭ ಪುಟಗಳಿಷ್ಟಿದೆ. ಪ್ರಥಮ ಮುದ್ರಣ ಮುಂಬೈಯ ‘ಭಾರತೀ ಛಾಪಖಾನೆ’ಯಲ್ಲಿ ಆಯಿತು. ಪುಸ್ತಕದ ಮೇಲೆ ನಾಟಕ ಕರ್ತೃವಿನ ಹೆಸರಿಲ್ಲ. ಅದರ ಮುಖಪುಟದ ಮೇಲೆ ‘ಈ ಪುಸ್ತಕವು ಹವ್ಯಕ ಹಿತೇಚ್ಛು ಒಬ್ಬ ವಿದ್ವಾಂಸರಿಂದ ರಚಿಸಲ್ಪಟ್ಟದ್ದೆಂದು’ ಬರೆಯಲಾಗಿದೆ. ಉತ್ತಕ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯವರಾದ ಸೂರಿ ವೆಂಕಟರಮಣಶಾಸ್ತ್ರಿ ಎಂಬುವರು ಅದರ ಕರ್ತೃ ಎಂಬುದು ಈಗ ಗೊತ್ತಾಗಿದೆ. ಈ ನಾಟಕದ ಎರಡನೆಯ ಮುದ್ರಣವನ್ನು ೧೯೫೩ರಲ್ಲಿ ಪ್ರಕಟಿಸಿದ ಲಿಂಗೇಶಶರ್ಮರು ಹಾಗೆಂದು ಕೃತಿಕಾರನ ಹೆಸರನ್ನು ಸೂಚಿಸಿದ ಮೇಲೆ ಮುಂದೆ ಅದರ ಬಗ್ಗೆ ಬರೆದ ಶ್ರೀನಿವಾಸ ಹಾವನೂರ, ರಾ.ಯ. ಧಾರವಾಡಕರ ಮೊದಲಾದವರೆಲ್ಲರೂ ಸೂರಿ ವೆಂಕಟರಮಣಶಾಸ್ತ್ರಿಗಳೇ ಅದರ ಕರ್ತೃ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ನಾಟಕದ ಕರ್ತೃವಿನ ವಿಷಯದಲ್ಲಿ ಭಿನ್ನಾಭಿಪ್ರಾಯ ಇಲ್ಲದಂತಾಗಿದೆ.

ವೆಂಕಟರಮಣಶಾಸ್ತ್ರಿಗಳು ಬಾಳಿದ ಕಾಲಾವಧಿಯ ಬಗ್ಗೆ ಖಚಿತವಾದ ಒಂದು ಅಭಿಪ್ರಾಯವಿಲ್ಲ. ಅವರು ಬಾಳಿದ್ದ ಕಾಲ ಸುಮಾರು ೧೮೫೨ ರಿಂದ ೧೮೯೨ ಎಂದು ಶ್ರೀನಿವಾಸ ಹಾವನೂರರು ‘ಹೊಸಗನ್ನಡ ಸಾಹಿತ್ಯದ ಉದಯಕಾಲ;’ ಎಂಬ ಗ್ರಂಥದಲ್ಲಿ ಶಾಸ್ತ್ರಿಯವರು ಹುಟ್ಟಿದ್ದು ಸುಮಾರು ೧೮೫೫ ತೀರಿಕೊಂಡದ್ದು ಸುಮಾರು ೧೯೨೫ ಎಂದು ತಿಳಿಸಿದ್ದಾರೆ. ಶ್ರೀನಿವಾಸ ಹಾವನೂರರ ಪ್ರಕಾರ ಅವರು ೭೦ ವರ್ಷಗಳ ಕಾಲ ಬಾಳಿದ್ದಾರೆ. ಅಂತೂ ಶಾಸ್ತ್ರಿಗಳು ಬಾಳಿದ ಕಾಲಾವಧಿ ಖಚಿತವಾಗಿ ಗೊತ್ತಾಗಬೇಕಾದ ಪರಿಸ್ಥಿತಿ ಇನ್ನೂ ಇರುವಂತಾಗಿದೆ.

ಸೂರಿ ವೆಂಕಟರಮಣಶಾಸ್ತ್ರಿಗಳು ಮುಂಬೈಯಲ್ಲಿ ನೆಲೆಸಿದ್ದರು. ಭಾರತೀ ಛಾಪಖಾನೆಯನ್ನು ಸ್ಥಾಪಿಸಿ ಸುಮಾರು ೨೦ ರಷ್ಟು ಕೃತಿಗಳನ್ನು ಪ್ರಕಟಿಸಿದ್ದರು. ಆ ೨೦ರಲ್ಲಿ ಎಲ್ಲವೂ ಶಾಸ್ತ್ರಿಗಳು ರಚಿಸಿದ ಕೃತಿಗಳಲ್ಲ. ಇತರ ಬರಹಗಾರರ ಕೃತಿಗಳೂ ಕೆಲವು ಇದ್ದವು. ಅವುಗಳಲ್ಲಿ ಶಾಸ್ತ್ರಿಗಳೇ ಬರೆದವೆಷ್ಟು, ಇತರ ಲೇಖಕರವು ಎಷ್ಟು ಎಂಬುದು ಇನ್ನೂ ಖಚಿತವಾಗಿ ಗೊತ್ತಾಗುತ್ತಿಲ್ಲ. ಲಿಂಗೇಶಶರ್ಮ, ಶ್ರೀನಿವಾಸ ಹಾವನೂರ, ರಾ.ಯ.ಧಾರವಾಡಕರ ಇವರೆಲ್ಲರೂ ಅಸ್ಪಷ್ಟ ಮಾತುಗಳಲ್ಲಿಯೇ ಶಾಸ್ತ್ರಿಗಳ ಬಗ್ಗೆ ಹೇಳಿದ್ದಾರೆ. ಅವರು ಪ್ರಕಟಿಸಿದ ಪ್ರಥಮ ಕೃತಿ ಎಂದು ಹೇಳಲಾದ ‘ದಕ್ಷಿಣಾ ಯಾತ್ರಾ ಚರಿತ್ರೆ’ ಎಂಬುದು ‘ಭಾರತೀ ಛಾಪಖಾನೆ’ ಮೂಲಕ ಶಾಸ್ತ್ರಿಗಳು ಪ್ರಕಟಿಸಿದ ಪ್ರಥಮ ಕೃತಿಯೊ ಅದೂ ಸ್ವತಃ ಶಾಸ್ತ್ರಿಗಳೇ ಬರದ ಕೃತಿಯೊ ಎಂಬುದು ಈ ವಿದ್ವಾಂಸರ ಮಾತುಗಳಿಂದ ಗೊತ್ತಾಗುವುದಿಲ್ಲ ಇನ್ನೂ ಸ್ವಾರಸ್ಯವೆಂದರೆ ೩೭ ಪದ್ಯಗಳ ಅಂಗೈ ಅಗಲದ ಪುಸ್ತಕವಿದು ಎಂದು ಶ್ರೀನಿವಾಸ ಹಾವನೂರರು ಹೇಳಿದರೆ ಇದು ಹೊಸಗನ್ನಡದ ಗದ್ಯದ ಪ್ರಥಮ ಪ್ರವಾಸ ಸಾಹಿತ್ಯವಾಗಿದೆ ಎಂದು ಧಾರವಾಡಕರರು ತಿಳಿಸಿದ್ದಾರೆ.

‘ಪ್ರಾಚೀನ ನಾಟ್ಯ ಕಥಾರ್ಣವ’, ‘ಅನಾರ್ಯರ ವಿವರ’, ‘ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನವು’-ಇವು ಶಾಸ್ತ್ರಿಗಳ ಸ್ವಂತದ ಕೃತಿಗಳೆಂದು ಹಾವನೂರು ಹೇಳಿದ್ದಾರೆ. ‘ಪ್ರಾಚೀನ ನಾಟ್ಯ ಕಥಾರ್ಣವ’ದಲ್ಲಿ ಸಂಸ್ಕೃತ ನಾಟಕ ಕಥೆಗಳಿವೆ. ಅನಾರ್ಯರ ವಿವರವು ಹಿಂದೂಗಳಲ್ಲಿ ಶೂದ್ರರ ಸ್ಥಾನಮಾನವನ್ನು ಕುರಿತ ಐತಿಹಾಸಿಕ ವಿಚಾರಗಳಿಂದ ಕೂಡಿದ ಪ್ರಬಂಧವಾಗಿದೆ. ಆ ಕಾಲದಲ್ಲಿ ಈ ಬಗೆಯ ಬರಹ ಅಪೂರ್ವವಾಗಿತ್ತು. ‘ಹವಿಕ ದ್ರಾವಿಡ ಬ್ರಾಹ್ಮಣರ ಉತ್ಪತ್ತಿಯ ಇತಿಹಾಸವು’ ಎಂಬ ಹವ್ಯಕರ ಚರಿತ್ರೆಗೆ ಸಂಬಂಧಿಸಿದ ಗ್ರಂಥವೂ ಶಾಸ್ತ್ರಿಗಳ ಸ್ವತಂತ್ರ ಕೃತಿ ಎಂದು ಧಾರವಾಡಕರರು ಹೆಸರಿಸಿದ್ದಾರೆ.

ಶಾಸ್ತ್ರಿಗಳು ಚಾರಿತ್ರಿಕ ಮಹತ್ವವುಳ್ಳ ಪತ್ರಿಕೋದ್ಯಮಿಯೂ ಆಗಿದ್ದಾರೆ. ಅವರು ‘ಹವ್ಯಕ ಸುಬೋಧ’ ದಲ್ಲಿ ಮುಖ್ಯವಾಗಿ ಉತ್ತರಕನ್ನಡ ಜಿಲ್ಲೆಯ ಸುದ್ದಿ ಸಮಸ್ಯೆಗಳನ್ನು ಕುರಿತ ಬರವಣಿಗೆಗಳು ಇರುತ್ತಿದ್ದರೆ ‘ಹಿತೋಪದೇಶ’ದಲ್ಲಿ ವ್ಯಂಗ್ಯ ಚಿತ್ರಗಳು ಪ್ರಕಟವಾಗುತ್ತಿದ್ದವು. ವ್ಯಂಗ್ಯ ಚಿತ್ರ ಪ್ರಕಟಿಸಿದ ಮೊತ್ತ ಮೊದಲ ಕನ್ನಡ ಪತ್ರಿಕೆ ಇದೇ ಇರಬೇಕೆಂದು ಶ್ರೀನಿವಾಸ ಹಾವನೂರರು ಹೇಳಿದ್ದಾರೆ. ‘ಹವ್ಯಕ ಸುಬೋಧ’ದಲ್ಲಿ ಅವರು ಪ್ರಕಟಿಸಿದ ಒಂದು ಬರಹಕ್ಕೆ ಸಂಬಂಧಪಟ್ಟಂತೆ ಸರ್ಕಾರ ಮೊಕದ್ದಮೆ ಹೂಡಿ ಶಾಸ್ತ್ರಿಯವರಿಗೆ ಶಿಕ್ಷೆಯಾಗುವಂತೆ ಮಾಡಿತಂತೆ. ಕನ್ನಡ ಪತ್ರಕರ್ತರಲ್ಲಿ ಪತ್ರಿಕಾಲೇಖನದ ಕಾರಣದಿಂದಾಗಿ ಶಿಕ್ಷೆಗೆ ಗುರಿಯಾದವರಲ್ಲಿಯೂ ಶಾಸ್ತ್ರಿಗಳೇ ಮೊದಲಿಗರು ಎನ್ನಲಾಗಿದೆ.

ಹೀಗೆ ಹತ್ತು ಹಲವು ಪ್ರಥಮಗಳಿಗೆ ಕಾರಣಕರ್ತರಾಗಿರುವ ಕರ್ಕಿಯ ಸೂರಿ ವೆಂಕಟರಮಣಶಾಸ್ತ್ರಿಗಳು ಬರೆದ ‘ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನವು’ ಎಂಬುದು ಅವರಿಗೆ ಕನ್ನಡದ ಮೊತ್ತಮೊದಲ ಸಾಮಾಜಿಕ ನಾಟಕಕಾರ ಎಂಬ ಕೀರ್ತಿಯನ್ನು ತಂದುಕೊಟ್ಟಿರುವ ಕೃತಿಯಾಗಿದೆ. ಆ ನಾಟಕ ಪ್ರಕಟವಾದದ್ದು ೧೮೮೭ನೇ ಇಸವಿಯ ಮಾರ್ಚಿ ೩೧ರಂದು. ಅದು ಪ್ರಕಟವಾದ ಕೇವಲ ಹದಿನೇಳು ದಿನಗಳ ಆನಂತರ ಅಂದರೆ ಅದೇ ಇಸವಿಯ ಏಪ್ರಿಲ್ ೧೭ನೆಯ ದಿನಾಂಕದಂದು ಶಿವರಾಮ ನಾರಣಪ್ಪ ಧಾರೇಶ್ವರ ಎಂಬುವರು ಒಂದು ಸಾಮಾಜಿಕ ನಾಟಕವನ್ನು ಪ್ರಕಟಿಸಿದ್ದಾರೆ. ಅದರ ಶೀರ್ಷಿಕೆ ಕೂಡ ‘ಕನ್ಯಾ ವಿಕ್ರಯ’ ಎಂದೇ ಇದೆ. ಶ್ರೀನಿವಾಸ ಹಾವನೂರರು ಆ ನಾಟಕದ ಕಥಾಸಾರಾಂಶವನ್ನು ಅವರ ಗ್ರಂಥದಲ್ಲಿ ನೀಡಿದ್ದಾರೆ. ಎರಡು ನಾಟಕಗಳು ಆ ಕಾಲದಲ್ಲಿ ಹವ್ಯಕ ಸಮಾಜದಲ್ಲಿ ಪ್ರಚಲಿತವಿದ್ದ ಕನ್ಯಾಶುಲ್ಕದ ಅಥವಾ ಕನ್ಯಾವಿಕ್ರಯದ ದುಷ್ಪರಿಣಾಮಗಳನ್ನು ಚಿತ್ರಿಸುತ್ತವೆ. ಎರಡೂ ನಾಟಕಗಳು ಹವ್ಯಕರ ಆಡುನುಡಿಯಲ್ಲಿಯೇ ಬರೆಯಲ್ಪಟ್ಟಿವೆ. ಶಾಸ್ತ್ರಿಗಳು ಮತ್ತು ಧಾರೇಶ್ವರರು ಮುಂಬೈಯಲ್ಲಿಯೇ ನೆಲೆಸಿದ್ದು ಅಲ್ಲಿಯೇ ಈ ನಾಟಕಗಳನ್ನು ಬರೆದಿದ್ದಾರೆ. ಧಾರೇಶ್ವರರೂ ಶಾಸ್ತ್ರಿಗಳಂತೆ ಉತ್ತರಕನ್ನಡ ಜಿಲ್ಲೆಯವರು. ಹವ್ಯಕ ಸಮಾಜಕ್ಕೆ ಸೇರಿದವರೂ ಆಗಿರಬೇಕೆಂದು ತೋರುತ್ತದೆ. ಈ ಎಲ್ಲ ಸಾಮ್ಯಗಳು ಸೋಜಿಗವನ್ನುಂಟು ಮಾಡುವಂತಿವೆ. ಕನ್ನಡದ ಆದ್ಯ ನಾಟಕಕಾರರನ್ನು ಕುರಿತ ಬರವಣಿಗೆಗಳಲ್ಲಿ ಧಾರೇಶ್ವರರ ಹೆಸರು ಸಾಮಾನ್ಯವಾಗಿ ಪ್ರಸ್ತಾಪವಾಗದಿರುವುದು ಕೂಡ ಸೋಜಿಗದ ಸಂಗತಿಯೇ ಆಗಿದೆ. ಅದೇನೇ ಇದ್ದರೂ ಶ್ರೀನಿವಾಸ ಹಾವನೂರರು ಕನ್ನಡದ ಆದ್ಯ ಸಾಮಾಜಿಕ ನಾಟಕ ಎಂಬ ಪಟ್ಟವನ್ನು ಕರ್ಕಿ ವೆಂಕಟರಮಣ ಶಾಸ್ತ್ರಿಯವರ “ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನವು” ಮತ್ತು ಶಿವರಾಮ ಧಾರೇಶ್ವರರ ‘ಕನ್ಯಾವಿಕ್ರಯ’ ಇವೆರಡಕ್ಕೆ ಸಮನಾಗಿ ಹಂಚಬೇಕು” ಎಂದು ಹೇಳಿರುವ ಮಾತು ಇಲ್ಲಿ ಗಮನಾರ್ಹವಾಗಿದೆ.

‘ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನವು’ ಎಂಬ ನಾಟಕದಲ್ಲಿ ಇಗ್ಗಪ್ಪ ಹೆಗಡೆ ಸುಮಾರು ಅರವತ್ತರ ವಯಸ್ಸಿನವನು. ಅವನ ಎರಡನೆಯ ಹೆಂಡತಿ ಸತ್ತು ಹತ್ತೊಂಬತ್ತು ದಿನಗಳಾಗಿವೆ. ಆಗಲೇ ಮೂರನೆಯ ಮದುವೆ ವಿಚಾರ ಮಾಡುತ್ತಾನೆ. ‘ಮನೆ ಜ್ಯೋತಿ ನಡೆಸಲಿಕ್ಕೆ ವಂದ ಹುಳು ಇದ್ದಿದ್ರೆ ಮತ್ತೆ ಮದುವೆ ಯೋಚನೆ ಮಾಡುತ್ತಿರಲಿಲ್ಲ’ ಎಂದು ಅವನು ಹೇಳಿದರೆ ‘ನೀ ಮದ್ವೆ ಮಾಡ್ಕೊಂಬ ದಿನವೇನು ಮೀರಿದ್ದಿಲ್ಲೆ’ ಎಂದು ಮೂರನೆ ಮದುವೆಗೆ ಅವನ ಭಾವ ವಾಸಪ್ಪ ಹೆಗಡೆ ಉತ್ತೇಜನ ನೀಡುತ್ತಾನೆ. ಇಗ್ಗಪ್ಪ ಹೆಗಡೆ ಎರಡನೆ ಮದುವೆಗೆಂದು ಮಾಡಿದ್ದ ಸಾಲವೇ ಬಡ್ಡಿಗಿಡ್ಡಿ ಅದೂ ಇದೂ ಸುಡುಗಾಡು ಸುಂಟೀ ಅಂತ ಒಂದಕ್ಕೆ ಎರಡಾಗಿ ಅವನ ಮೈಮೇಲೆ ಇದ್ದರೂ ಅವನಿಗೆ ಮದುವೆ ಆಸೆ ತೀರುವುದಿಲ್ಲ. ಮೂರನೇ ಮದುವೆಗೆ ಹೆಣ್ಣು ಸಿಗುವುದು ಹೇಗೊ ಎಂಬ ಅನುಮಾನ ಅವನಿಗಿದ್ದರೂ ‘ರೊಕ್ಕಪ್ಪಿದ್ರೆ ಚಿಕ್ಕಪ್ಪಿದ್ದ’ – ಹಣ ಇದ್ರೆ ಎಲ್ಲಾ ಇದೆ – ಎಂಬ ಗಣೇಶ ಭಟ್ಟನ ಮಾತು ಹೌದೆನಿಸಿ ಮತ್ತೆ ಸಾಲ ಮಾಡಿಯಾದರೂ ಮದುವೆಯಾಗಬೇಕೆಂದು ಇಗ್ಗಪ್ಪ ಹೆಗಡೆ ತೀರ್ಮಾನಿಸುತ್ತಾನೆ. ಕನ್ಯಾಶುಲ್ಕದ ಅಸೆಗಾಗಿ ೬೦-೭೦ ವರ್ಷದ ಮುದುಕನಾಗಿದ್ದ ನೀರತೋಟದ ಹೆಗಡೆಗೆ ತನ್ನ ಮೊದಲಿನ ಮಗಳನ್ನು ಮದುವೆ ಮಾಡಿಕೊಟ್ಟಿದ್ದ ಹಂದಿಗೋಣ ಶಿವಭಟ್ಟ ತನ್ನ ಎರಡನೆಯ ಮಗಳು ಸಾವಿತ್ರಿಯನ್ನೂ ಕನ್ಯಾಶುಲ್ಕದ ಆಸೆಗಾಗಿ ಅರವತ್ತು ವರ್ಷದ ಮುದುಕ ಇಗ್ಗಪ್ಪ ಹೆಗಡೆಗೆ ಮದುವೆ ಮಾಡಿಕೊಡುತ್ತಾನೆ.

ಮದುವೆಯೇನೊ ಆಗುತ್ತದೆ. ಆದರೆ ಇಗ್ಗಪ್ಪ ಹೆಗಡೆಗೆ ಸಾಲದ ಹೊರೆ ವಿಪರೀತ ಆಗುತ್ತದೆ. ಆದರೆ ಮದುವೆಯಾದ ಒಂದು ತಿಂಗಳಲ್ಲಿಯೇ ಅವನು ಕಾಮಾಲೆ ರೋಗಕ್ಕೆ ಬೇರೆ ತುತ್ತಾಗಿ ಹೆಣ್ಣಿನ ಮೇಲಿನ ಆಸೆ ಕಳೆದುಕೊಳ್ಳುತ್ತಾನೆ. ಅವನ ಕಾಹಿಲೆ, ಎಳೆಯ ಹೆಂಡತಿಯ ಮೇಲಿನ ಅನುಮಾನ ಇವುಗಳಿಂದಾಗಿ ಅವನಿಗೂ ಸುಖವಿಲ್ಲ ಹೆಂಡತಿಗೂ ಸುಖ ಕೊಡುವುದಿಲ್ಲ ಎಂಬ ಪರಿಸ್ಥಿತಿ ಆಗುತ್ತದೆ. ಅವನು ಸತ್ತು ಹೋಗುತ್ತಾನೆ. ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಸಾವಿತ್ರಿ ವಾಸಪ್ಪ ಹೆಗಡೆಯನ್ನು ಅವಲಂಬಿಸುವುದು ಅನಿವಾರ್ಯವಾಗುತ್ತದೆ. ಸಾವಿತ್ರಿಯ ತಂದೆಯಾದ ಶಿವಭಟ್ಟನ ಮನೆಕಡೆಯ ಪರಿಸ್ಥಿತಿಯೂ ದುರಂತಮಯವಾಗುತ್ತದೆ. ಅವನ ಮನೆಗೆ ಬೆಂಕಿಬಿದ್ದು ಮನೆ ಸುಟ್ಟುಹೋಗುತ್ತದೆ. ಒಬ್ಬನೇ ಮಗನೂ ಆ ಬೆಂಕಿಗೆ ಆಹುತಿಯಾಗುತ್ತಾನೆ. ನಗ, ನಾಣ್ಯಗಳ ಪೆಠಾರಿ ಕಳವಾಗಿ ಹೋಗುತ್ತದೆ. ಹಿರಿಯ ಮಗಳ ಗಂಡ, ಕಿರಿಮಗಳ ಗಂಡ ಇದ್ದರೂ ವೃದ್ಧಾಪ್ಯ, ಕಾಹಿಲೆಗಳಿಂದ ಸಾಯುತ್ತಾರೆ. ಸಾವಿತ್ರಿಯ ಅಸಹಾಯಕತೆಯನ್ನು ವಾಸಪ್ಪ ಹೆಗಡೆ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಾನೆ. ವಿಧವೆ ಸಾವಿತ್ರಿ ಗರ್ಭಿಣಿಯಾಗುತ್ತಾಳೆ. ಹುಟ್ಟಿದ ಶಿಶುವನ್ನು ಹತ್ಯೆ ಮಾಡಿ ಹೂತದ್ದು ಸುದ್ದಿಯಾಗುತ್ತದೆ. ಪೋಲೀಸರು ಅಪರಾಧ ಪತ್ತೆ ಮಾಡುತ್ತಾರೆ. ಕೋರ್ಟಿನಲ್ಲಿ ಅಪರಾಧ ಸಾಬೀತಾಗುತ್ತದೆ. ವಾಸಪ್ಪ ಹೆಗ್ಗಡೆ ಮತ್ತು ಅವನ ನೆರವಿಗೆ ಬಂದ ಅವನ ಹೆಂಡತಿಯ ತಮ್ಮ ನಂಜುಂಡ ಹೆಗಡೆ ಹಾಗೂ ಸಾವಿತ್ರಿ ಶಿಕ್ಷೆಗೆ ಗುರಿಯಾಗುತ್ತಾರೆ.

-ಇದಿಷ್ಟೂ ಸ್ಥೂಲವಾಗಿ ನಾಟಕದ ಕಥಾವಸ್ತು. ನಾಟಕದ ಶೀರ್ಷಿಕೆಯಲ್ಲಿ ‘ಪ್ರಹಸನ’ ಎಂಬ ಮಾತಿದ್ದರೂ ನಾಟಕದಲ್ಲಿ ಹಾಸ್ಯ, ಲಘುಧೋರಣೆ ಕಾಣಿಸುವುದಿಲ್ಲ. ಇಂಥ ವಿಷಮ ವಿವಾಹವೇ ಒಂದು ಪ್ರಹಸನ ಎಂಬ ಅಭಿಪ್ರಾಯ ಅವರದಾಗಿದೆ. ಕಥಾವಸ್ತುವನ್ನು ನೋಡಿದರೆ ಓದುಗರನ್ನು ಅಥವಾ ಪೇಕ್ಷಕರನ್ನು ನಗಿಸಲು, ರಂಜಿಸಲು ಇಗ್ಗಪ್ಪ ಹೆಗಡೆ ಹೆಂಡತಿಯ ಶೀಲವನ್ನು ಶಂಕಿಸಿ ಮಾತನಾಡುವ ಸನ್ನಿವೇಶ, ಹೆಗಡೆ ಮತ್ತು ಸಾವಿತ್ರಿಯ ಸಂಬಂಧದ ಸ್ವರೂಪ – ಇಂಥ ಸನ್ನಿವೇಶಗಳು ರಸವತ್ತಾಗುವಂತೆ ವಿಸ್ತರಿಸಬಹುದಾಗಿತ್ತು ಎನ್ನುವಂತಿದೆ. ಹಾಗೆಯೇ ಮುದುಕ ಮತ್ತು ಕನ್ಯೆಯ ಮದುವೆಯ ದೃಶ್ಯವನ್ನು ಸೃಷ್ಟಿಸಿ ಲೇವಡಿ ಎಬ್ಬಿಸಬಹುದಾಗಿತ್ತು. ಆದರೆ ಶಾಸ್ತ್ರಿಗಳು ಲಘುಹಾಸ್ಯ, ರಂಜನೆಗಳ ಚಪಲ ತೋರಿಸದೆ ತುಂಬ ಸಂಯಮದಿಂದ, ಗಾಂಭೀರ್ಯದಿಂದ ನಾಟಕವನ್ನು ಕೊನೆಯವರೆಗೂ ದುರಂತದ ಲಯದಲ್ಲಿಯೇ ನಡಸಿಕೊಂಡು ಹೋಗಿದ್ದಾರೆ. ಅದೂ ಅವರ ಸುಧಾರಣಾಪರ ನಿಷ್ಠೆಗೆ ಅನುಗುಣವಾಗಿಯೇ ಇದೆ ಎಂದು ಒಪ್ಪಬೇಕಾಗುತ್ತದೆ.

ಶಾಸ್ತ್ರಿಗಳು ಈ ನಾಟಕವನ್ನು ರಚಿಸಿದ ಕಾಲದಲ್ಲಿ ರಾಷ್ಟ್ರಾದ್ಯಂತ ಸುಧಾರಣಾಪರ ಆಂದೋಲನಗಳು ಚುರುಕಾಗಿದ್ದವು. ಅದರಲ್ಲಿಯೂ ಸ್ತ್ರೀಯರಿಗೆ ಸಂಬಂಧಿಸಿದಂತೆ ಇರುವ ಮೂಢ ಆಚಾರ ವಿಚಾರಗಳನ್ನು ಖಂಡಿಸಿ ಹೊಸಬಾಳಿನ ದಾರಿ ತೋರುವ ಉತ್ಸಾಹ ಆ ಕಾಲದ ಸಮಾಜ ಸುಧಾರಕರಲ್ಲಿ ಪ್ರಗತಿಪರ ಸಾಹಿತಿಗಳಲ್ಲಿ ಎದ್ದು ಕಾಣುವ ಸಂಗತಿಯಾಗಿತ್ತು. ಮುಂಬೈಯಂಥ ಆಧುನಿಕ ನಗರ ಪರಿಸರದ ಪ್ರಭಾವಕ್ಕೆ ಒಳಗಾಗಿದ್ದ ಶಾಸ್ತ್ರಿಗಳು ತಾವು ಹುಟ್ಟಿ ಬೆಳೆದ ಸಮಾಜದಲ್ಲಿ ಪ್ರಚಲಿತವಿದ್ದ ಅಂಥ ಒಂದು ದುಷ್ಟ ಪದ್ಧತಿಯ ವಿರುದ್ಧ ದನಿ ಎತ್ತಿದ್ದೂ ಕನ್ನಡದಲ್ಲಿ ಸಾಮಾಜಿಕ ನಾಟಕ ಪರಂಪರೆಯ ಉದ್ಘಾಟಕರಾದದ್ದೂ ಶ್ಲಾಘನೀಯ ಸಂಗತಿಯಾಗಿದೆ.

ಸಮಾಜ ಸುಧಾರಣೆಯೆ ಮುಖ್ಯ ಆಶಯವಾಗಿರುವ ಈ ನಾಟಕದಲ್ಲಿ ಕನ್ಯಾವಿಕ್ರಯ ಪದ್ಧತಿಯನ್ನು ಖಂಡಿಸುವ ಮಾತುಗಳನ್ನು ಅಲ್ಲಲ್ಲಿ ಪಾತ್ರಗಳ ಮೂಲಕ ಆಡಿಸಿದ್ದಾರೆ. ಇಗ್ಗಪ್ಪ ಹೆಗಡೆ, ಸಾವಿತ್ರಿ ಕೂಡ ಅಂಥ ಮಾತುಗಳನ್ನು ಆಡುತ್ತಾರೆ. ನಾಟಕದ ಕೊನೆಯಲ್ಲಿ ನ್ಯಾಯಾಧೀಶರು ನೀಡುವ ತೀರ್ಪು ಕನ್ಯಾವಿಕ್ರಯದ ದುಷ್ಪರಿಣಾಮವನ್ನೂ ಅದರಿಂದ ಹವ್ಯಕ ಸಮಾಜದವರು ಬಿಡುಗಡೆ ಹೊಂದುವುದಕ್ಕೆ ಅಗತ್ಯವಾದ ತಿಳಿವಳಿಕೆ, ಉಪದೇಶದ ಮಾತುಗಳನ್ನೂ ಒಳಗೊಂಡಿದೆ. ತೀರ್ಪಿನ ಅಂಥ ವಾಕ್ಯಗಳನ್ನು ಉದ್ಧರಿಸಿ ನನ್ನ ಮಾತನ್ನು ಮುಗಿಸುತ್ತೇನೆ :

“ಹವ್ಯಕ ಬ್ರಾಹ್ಮಣ ಜನರಲ್ಲಿ ಯಾವನಿಗಾದರೂ ಹೆಂಡತಿ ಸತ್ತರೆ ಅವನು ತನಗೆ ಮಕ್ಕಳು ಇದ್ದಾಗ್ಯೂ ಅಥವಾ ತನ್ನ ವೃದ್ಧಾಪ್ಯದಿಂದ ಪರಲೋಕದ ಸಮನ್ಸ್ ಬಂದು ಜಾರಿಯಾಗಿ ಕೂತುಕೊಂಡದ್ದು ತನ್ನ ಸ್ವಂತ ಅನುಭವಕ್ಕೆ ಬಂದಾಗ್ಯೂ ಕೂಡ ಅಂಥ ಸಮಯದಲ್ಲಿ ಸಹ ಪುನಃ ಮದುವೆ ಮಾಡಿಕೊಳ್ಳುವುದಕ್ಕೆ ಯತ್ನಿಸುತ್ತಾನೆ…. ಹೀಗಾಗಿ ಈ ಜನರಲ್ಲಿರುವಷ್ಟು ಬಾಲವಿಧವೆಯರು ಇನ್ನೆಲ್ಲಿಯೂ ಯಾವ ಜನರಲ್ಲಿಯೂ ಇರಲಾರರು… ತರುಣ ಸ್ತ್ರೀಯರು ತಮ್ಮ ತಮ್ಮ ವೃದ್ಧಪತಿಗಳಿಂದ ಮನಃಪೂರಿತ ರತಿಸುಖಕ್ಕೆ ಪರಾಂಗ್ಮುಖರಾಗಿ ವ್ಯಭಿಚಾರ ಮಾಡುತ್ತಾರೆ…. ತರುಣ ಪುರುಷರಿಗೆ ಲಗ್ನವಿಲ್ಲ. ವೃದ್ಧಾಪ್ಯದಲ್ಲಿ ಲಗ್ನ ಮಾಡಿಕೊಂಡಿರುವ ಹೆಂಡರೆಲ್ಲರೂ ಬಾಲವಿಧವೆಯರು, ಇಷ್ಟಾಗಿಯೂ ಅಶಿಕ್ಷಿತರಾಗಿರುತ್ತಾರೆ. ಹೀಗಾದ ಮೇಲೆ ಇಂಥಾ ಗರ್ಭಖೂನಿಗಳು ನಡೆಯುವುದು ಏನು ಆಶ್ಚರ್ಯ!”*

* ೧೯೮೭ರಲ್ಲಿ ಮೈಸೂರು ಆಕಾಶವಾಣಿ ಸೂರಿ ವೆಂಕಟರಮಣ ಶಾಸ್ತ್ರಿಗಳ ‘ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನವು’ ನಾಟಕ ಕೃತಿಯ ಶತಮಾನದ ನೆನಪಿಗೆಂದು ಬಿತ್ತರಿಸಿದ ಭಾಷಣ.