[ಸಂಪಾದಕ : ಕಡಿದಾಳು ಶಾಮಣ್ಣ, ಸಹ್ಯಾದ್ರಿ ಪ್ರಕಾಶನ, ಕಡಿದಾಳು – ಈ ಕಥಾಸಂಚಯಕ್ಕೆ ಬರೆದ ಹಿನ್ನುಡಿ ರೂಪದ ಬರಹ]

ಕಥೆಗಳ ಬಗ್ಗೆ ಹೇಳಬೇಕಾದದ್ದು

ಶ್ರೀ ಸೂ. ರಮಾಕಾಂತರ ‘ಬಾಯಾರಿದವನು’ ಈ ಸಂಕಲನದ ಮೊದಲನೆಯ ಕತೆ. ಶ್ರೀನಿವಾಸ ತಮ್ಮ ರಮೇಶನೊಂದಿಗೆ ತಾನು ಆರು ವರ್ಷದವನಾಗಿದ್ದಾಗಿನಿಂದಲೇ ತಂದೆ-ತಾಯಿ ಇದ್ದೂ ತಬ್ಬಲಿಗಳಂತೆ ದೂರದ, ಬಹಳ ದೂರದ ಮೈಸೂರಿನ ಪಾರ್ವತಮ್ಮನವರ ಮನೆಯಲ್ಲಿ ಉಳಿದ ಓದು ಸಾಗಿಸಬೇಕಾಗಿ ಬಂದಿದೆ. ತಾಯಿ, ತಂದೆ, ತಂಗಿ- ಎಲ್ಲಾ ‘ರಾಜಾಸ್ಥಾನ್’ (ದೂರದ ದೇಶವೊಂದರ ಹೆಸರಿನ ಜೊತೆಗೆ ಆ ಹೆಸರಿನಲ್ಲಿರುವ ವ್ಯಂಗ್ಯವೂ ಗಮನಿಸಬೇಕಾದದ್ದು.)ನಲ್ಲಿದ್ದಾರೆ. ತಂದೆ ಹೆಚ್ಚೆಂದರೆ ವರ್ಷಕ್ಕೊಂದು ಬರೆಯುವ ಪತ್ರ, ಕೇಳಿದ್ದಕ್ಕಿಂತ ಕಡಮೆ ಕಳಿಸುವ ಹಣ, ಅದರ ಜೊತೆಯಲ್ಲೇ ಬರುವ ‘Observe Economy’ ಎಂಬ ಉಪದೇಶ, ಈ ಮೂಲಕ ತಂದೆ ಹೇರಲು ಬಯಸುತ್ತಿರುವ ಒಂದು ರೀತಿಯ ಕ್ರೂರ ಶಿಸ್ತು-ಇವಾವುದರಲ್ಲಿಯೂ ಜೀವಕ್ಕೆ ಬೇಕು, ಬೇಕು ಎನ್ನಿಸುವ ಪ್ರೀತಿ, ವಾತ್ಸಲ್ಯ, ಸಹಾನುಭೂತಿಗಳ ಸೆಲೆ ಕಾಣದೆ ಶ್ರೀನಿವಾಸ ಬಾಯಾರಿದವನಾಗಿದ್ದಾನೆ. ಈ ವಸ್ತುವಿನ ಅಭಿವ್ಯಕ್ತಿಗೆ ಅನಿವಾರ್ಯವೆನ್ನಿಸುವ ‘ವಿಷಾದದ ಧಾಟಿ’ಯನ್ನು ಕೊನೆಯವರೆಗೂ ಎಲ್ಲಿಯೂ ಹದಗೆಡದಂತೆ ಕಾದುಕೊಳ್ಳುವುದರಲ್ಲಿ ತೋರಿದ ಎಚ್ಚರ, ಸಂಯಮ, ಯೋಜಿಸಿದ ತಂತ್ರ ಬಳಸಿದ ಪ್ರತಿಮೆಗಳು ಉದ್ದೇಶಿತ ಪರಿಣಾಮವನ್ನುಂಟು ಮಾಡುವುದರಲ್ಲಿ ಸಾರ್ಥಕವಾಗಿವೆ.

ಶ್ರೀನಿವಾಸ ಭಾರತೀಯ ಕಲೆಯಲ್ಲಿ, ಚಿತ್ರಕಲೆಯಲ್ಲಿ ಆಸಕ್ತಿ ಉಳ್ಳವನು. ಒಂದು ಬೀದಿಯ ದೃಶ್ಯ ಬರೆಯಬೇಕೆಂದುಕೊಂಡು ಅದರಲ್ಲಿ ಸಾಧ್ಯವಿದ್ದಷ್ಟು ವಾಸ್ತವಿಕತೆ ಮೂಡಲಿ ಎಂದು ಒಂದು ವಾರದಿಂದಲೂ ಬೀದಿ ಬೀದಿ ಸುತ್ತುತ್ತಾ ತನ್ನ ಮನಸ್ಸಿನ ಮೇಲೆ ಮರೆಯಲಾಗದಂತಹ ಪ್ರಭಾವ ಬೀರಿದ ವ್ಯಕ್ತಿಗಳನ್ನು ಕುರಿತಾಗಿ ತನ್ನ ಡೈರಿಯಲ್ಲಿ ಗುರುತುಹಾಕಿಕೊಳ್ಳುತ್ತಾ ಸಾಗುತ್ತಾನೆ. ಅವನು ಕೊನೆಯಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಪರಸ್ಪರ ಸಂಬಂಧವಿರದ ಆ ವ್ಯಕ್ತಿಗಳನ್ನೂ ಅವರಿಗೆ ತಾನು ಬಳಸಿದ ವಿಶೇಷಣಗಳನ್ನೂ ಒಟ್ಟಾಗಿ ಧೇನಿಸುವಾಗ ಬಿಡಿ ಬಿಡಿಯಾಗಿ ಚದುರಿ ಚದುರಿ ಬಿದ್ದಿದ್ದ ಆ ಕ್ರೂರ ವಾಸ್ತವಿಕ ಚಿತ್ರಗಳು ಒಂದರೊಡನೊಂದು ಮಿಳಿತವಾಗಿ ಮೊತ್ತದಲ್ಲಿ, ಇನ್ನಷ್ಟು ಕ್ರೂರವಾಗಿ ಕಾಣಿಸಿ ಅದು ನೇರವಾಗಿ ಅವನ ಬದುಕಿನ ವಾಸ್ತವಿಕತೆಯ ದರ್ಶನವನ್ನೇ ಮಾಡಿಕೊಡುವಂತೆನಿಸಿ ಬಿಡುತ್ತದೆ. ಅದನ್ನು ಚಿತ್ರದಲ್ಲಿಯೂ ಎದುರಿಸುವುದು ಸಾಧ್ಯವಾಗದೆ ನಿಷ್ಕ್ರೀಯ ಸ್ಥಿತಿಯಲ್ಲಿರುವ ಆ ಗಳಿಗೆಯಲ್ಲಿ ಅವನಿಗೆ ಚಿತ್ರ ಬರೆಯಲು ಸಲಹೆ ನೀಡುತ್ತ ಅವನ ಒಂಟಿತನವನ್ನು ಇಲ್ಲವಾಗಿಸಿದ್ದ ರೇಖೆಯೂ ಜಗಳವಾಡಿ ಹೊರಟುಹೋಗುತ್ತಾಳೆ. (ಹೂ ಕೊಳ್ಳುತ್ತಿದ್ದ ಒಂಟಿ ಹುಡುಗಿಯ ಪ್ರತಿಮೆ ಇಲ್ಲಿ ಫಲಿಸುವುದನ್ನು ಕಾಣಬಹುದು). ಆಗ ಸನ್ನಿವೇಶ ಇನ್ನಷ್ಟು ಅ-ಸಹ್ಯವಾಗಿ ‘ತಾಯಿ-ಮಗು’ವಿನ ಚಿತ್ರದಲ್ಲಿ ಪ್ರೀತಿ, ವಾತ್ಸಲ್ಯದ ಮಡಿಲಲ್ಲಿ ರಕ್ಷಣೆ ಪಡೆಯಲು ಹಾತೊರೆಯುತ್ತಾನೆ. ಆಗ :

“ರೇಖೆ ಮರಳಿ ಬಂದಳು. ಶ್ರೀನಿವಾಸನನ್ನು ನೋಡಿದಳು. ಎಳೆ ಮಗುವಿನಂತೆ ನೋಡುತ್ತಿದ್ದನು. ಕಣ್ಣುಗಳಲ್ಲಿ ನೀರು ಬಟ್ಟಾಡುತ್ತಿದ್ದಿತು. ರೇಖೆ ಅವನ ತಲೆಯ ಕೂದಲುಗಳಲ್ಲಿ ತೂರಿಸಿ ಅವನನ್ನು ಬರಸೆಳೆದು ಎದೆಗೊತ್ತಿಕೊಂಡಳು. ಶ್ರೀನಿವಾಸ ಹಸುಗೂಸಿನಂತೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟ.” – ಕತೆಗೆ ಕೊನೆ ಅನಿವಾರ್ಯವೆಂಬಂತಿದೆ.

ಈ ಕತೆಯಲ್ಲಿ ಬಳಸಿದ ಪ್ರತಿಮೆಗಳು ಗುರಿತಪ್ಪದಂತೆ ಯೋಜಿಸಲ್ಪಟ್ಟಿದ್ದರೂ ಇವುಗಳ ಹಿನ್ನೆಲೆಯಲ್ಲಿ ಒಂದು ಕುಶಲ ಲೆಕ್ಕಾಚಾರವಿದೆ ಎಂದ ಮೇಲೆ ಮೇಲೆಯೇ ಅನಿಸಿಬಿಡುವುದು ಕತೆಗಾರರಿಗೆ ಅನುಭವ ಮತ್ತು ಅಭಿವ್ಯಕ್ತಿಯಲ್ಲಿ ಸಾಕಷ್ಟು ಆತ್ಮವಿಶ್ವಾಸವಿಲ್ಲ ಎನ್ನವುದರ ಸೂಚನೆಯಾಗಿದೆ. ಈ ಕೊರತೆ ಕತೆಗಾರ ಬೆಳೆಬೆಳೆದಂತೆ ತುಂಬಿಕೊಳ್ಳಬಹುದಾದದ್ದು.

‘ಬಾಯಾರಿದವನು’ ಕತೆಯ ಸಫಲತೆ ಶ್ರೀ ಬೆಸಗರಹಳ್ಳಿ ರಾಮಣ್ಣನವರ ‘ನೆರಳುಗಳು’ ಕತೆಯ ವಿಫಲತೆಯೊಂದಿಗೆ ಹೋಲಿಸಿ ನೋಡಿದಾಗ ಇನ್ನಷ್ಟು ಸ್ಪಷ್ಟವಾದೀತು. ‘ನೆರಳುಗಳು’ ಕತೆಯಲ್ಲಿ ಒಂದಾದಮೇಲೊಂದರಂತೆ ಸ್ವಾರಸ್ಯಸಂಪೂರ್ಣವಾಗಿ ಬೆಳೆಯುತ್ತಾ ಸಾಗುವ ಘಟನೆಗಳೆಲ್ಲ ಮೊತ್ತದಲ್ಲಿ ಯಾವ ಉದ್ದೇಶ, ಪರಿಣಾಮಕ್ಕಾಗಿ ಯೋಜಿಸಲ್ಪಟ್ಟವು ಎನ್ನುವುದೇ ಕೊನೆಗೂ ಬಗೆಹರಿಯುವುದಿಲ್ಲ. ಕೊನೆಯಲ್ಲಿ ಒಟ್ಟಿನ ಅನುಭವಕ್ಕೆ ಆಂತರಂಗಿಕ ಏಕಸೂತ್ರತೆ ಸಿದ್ಧಿಸುವಂತೆ ಮಾಡಿ ಆ ಮೂಲಕ ಹೊಸ ಅರ್ಥ ಪರಂಪರೆಯನ್ನು ಹಣಿಸಬೇಕೆಂಬ ಕತೆಗಾರರ ಆಕಾಂಕ್ಷೆಯ ಬೋಧೆಯಾಗುವುದಾದರೂ ಪಟ್ಟ ಪ್ರಯತ್ನ ಫಲಕಾರಿಯಾಗಿಲ್ಲ. ಇಷ್ಟೇ ಅಲ್ಲ, ಕತೆಯ ವಸ್ತು, ಉದ್ದೇಶ, ಪರಿಣಾಮದ ಕುರಿತಾದ ಮೂಲಭೂತ ಗೊಂದಲ, ಅನಿಶ್ಚಿತತೆಗಳನ್ನು ಅದು ಸ್ಪಷ್ಟಪಡಿಸುತ್ತದೆ.

‘ನೆರಳುಗಳು’ ಕತೆಯಲ್ಲಿನ ಯಾವುದಾದರೊಂದು ಘಟನೆಯನ್ನು ಕತೆಯಿಂದ ಪ್ರತ್ಯೇಕಿಸಿ ಕತೆಯ ಉಳಿದ ಭಾಗವನ್ನಷ್ಟೇ ನೋಡಿದಾಗಲೂ ಕತೆ ಮೊದಲಿಗಿಂತ ಊನವಾಯಿತು ಎಂದೆನಿಸುವುದಿಲ್ಲ. ಅಥವಾ ಕತೆಯಲ್ಲಿನ ಘಟನಾ ಪರಂಪರೆಗಳಿಗೆ ಹೆಚ್ಚು ಕಡಮೆ ಸಂವಾದಿಯಾಗಿರಬಹುದಾದ ಘಟನೆಯನ್ನು ಸೇರಿಸಿದಾಗಲೂ ಕಲಾದೃಷ್ಟಿಯಿಂದ ಅಂಥ ಅನರ್ಥವೇನಾದರೂ ಸಂಭವಿಸೀತು ಎಂದೆನಿಸುವುದೂ ಇಲ್ಲ. ಈ ಮಾತನ್ನೇ ಶ್ರೀ ಸುಮತೀಂದ್ರ ನಾಡಿಗರ ‘ಅನಿರೀಕ್ಷಿತ’ಕ್ಕೂ ಹೇಳಬಹುದಾಗಿದೆ.ಕತೆಯ ಪ್ರಾರಂಭದಲ್ಲಿಯೇ ಅಂದರೆ ಮೊದಲ ಎರಡು ಮೂರು ಪರಿಚ್ಛೇದಗಳನ್ನು ಓದುತ್ತಿರುವಂತೆಯೇ-ಕತೆಗಾರರು ಓದುಗರನ್ನು ಯಾವ ಪರಿಣಾಮಕ್ಕಾಗಿ ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ. ಎನ್ನುವುದರ ಬೋಧೆಯಾಗಿಬಿಡುವುದರಿಂದ ಮುಂದಿನ ಬರವಣಿಗೆ ಸತ್ತಹಾವಿನ ಮೇಲೆ ಬಡಿಯುವ ಬಡಿಗೆಯ ಏಟಿನಂತಾಗಿಬಿಟ್ಟಿದೆ. ದೇಸಾಯಿಗೆ ಬಿದ್ದ ಕನಸುಗಳ ಸಂಖ್ಯೆಯಲ್ಲಿ ಒಂದೆರಡು ಹೆಚ್ಚೊ ಕಡಮೆಯೊ ಆಗಿದ್ದುದಾದರೂ ಬಹುಶಃ ಕತೆ ಮೂಡಿಸುವ ಒಟ್ಟೂ ಪರಿಣಾಮದ ದೃಷ್ಟಿಯಿಂದ ಅಂಥ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ಕತೆಯನ್ನು ಬೆಳೆಸಿಕೊಂಡು ಹೋಗುವಲ್ಲಿ ಕಲಾ ಶ್ರದ್ಧೆಗಿಂತ ಹೆಚ್ಚಾಗಿ ಓದಿನಿಂದ ಉಂಟಾಧ ಜ್ಞಾನದರ್ಪ ಕಾಣುತ್ತದೆ. ಕನಸುಗಳ ಸಂಯೋಜನೆ, ಇವುಗಳ ವಿಶ್ಲೇಷಣೆಯಲ್ಲಿನ ಜಾಣ್ಮೆ ಈ ಮಾತನ್ನು ಸಮರ್ಥಿಸುತ್ತವೆ.

‘ನೆರಳುಗಳು’, ‘ಅನಿರೀಕ್ಷಿತ’ ಕತೆಗಳ ಒಟ್ಟಿನ ಸೋಲು ಏನೇ ಇದ್ದರೂ ಬರೆವಣಿಗೆಯಲ್ಲಿ, ಸನ್ನಿವೇಶ ನಿರ್ವಹಣೆಯಲ್ಲಿ ಸಾಕಷ್ಟು ಹಿಡಿತವಿದೆ, ಶಕ್ತಿಯಿದೆ. ಆದರೆ ಅದೇ ಶ್ರೀ ಬಿಳುಮನೆ ರಾಮದಾಸರ “ಓ…. ನಾ ಇಲ್ಲೆ ಇದ್ದೆ !” ಕತೆಯಲ್ಲಿ ‘ಕತೆ’ ಎನ್ನಿಸಿಕೊಳ್ಳುವಂಥದೇನೂ ಇಲ್ಲ. ಕತೆಯ ಕೊನೆಯಲ್ಲಿ ಸೇರೆಗಾರರ ಸಣ್ಣತನಕ್ಕೆ ಸಂಬಂಧಿಸಿದಂತೆ ಸ್ಫೋಟವಾಗುವ ಹಾಸಯ ಸ್ವಾರಸ್ಯವಾಗಿದೆ, ಎಂಬ ಒಂದೇ ಒಂದು ಮಾತನ್ನು ಕತೆಯ ಗುಣವೆಂದು ಹೇಳಿದರೆ ಹೇಳಬಹುದಾದದ್ದು. ಆದರೆ ಅಷ್ಟು ಮಾತ್ರವೇ ಕತೆಯಿಂದ ಸಾಧಿತವಾಗಬೇಕಾದುದಾಗಿದ್ದರೆ ಒಂದು ಜೋಕಿನ ಮೂಲಕ ಆ ಕೆಲಸವನ್ನು ಇನ್ನಷ್ಟು ಸಮರ್ಥವಾಗಿ ನಿರ್ವಹಿಸಬಹುದಾದದ್ದು ಅಸಾಧ್ಯವಾಗುತ್ತಿರಲಿಲ್ಲ.

ಶ್ರೀ ‘ಪ್ರೇಮಸೋದರ’ರ ‘ಯುವಜನೋತ್ಸವ’ದಲ್ಲಿ ಕುಸುಮಳ ಮೇಲಿದ್ದ ಕಥಾನಾಯಕನ ಪ್ರೇಮದ ಅಮರತೆಯ ಆದರ್ಶ, ಕನಸು ನಿರ್ಮಲೆ ಎದುರಿಗಿರುವಾಗ ಕರಗಿಹೋಗುತ್ತಿರುವ ಅನುಭವವಾಗುತ್ತಿರುವ ಜೀವಂತ ವಾಸ್ತವಿಕ ಗಳಿಗೆಯಲ್ಲಿ ಚಿತ್ರಗಳಲ್ಲೂ ಕತೆ ಕಾದಂಬರಿಗಳಲ್ಲೂ ಮೋಹಕವಾಗಿದ್ದ ಗತಕಾಲದ ಸತ್ತು ಮಣ್ಣಾಗಿ ಹೋಗಿದ್ದವರ ಅಮರಪ್ರೇಮದ ಪ್ರತೀಕವಾಗಿ ನಿಂತಿದ್ದ ತಾಜಮಹಲು ‘ಅರ್ಥಹೀನವಾಗಿ ಪ್ರೇತಕಳೆಯಿಂದ ಮಂಕಾಗಿ’ ಕಾಣಿಸುವಂತಾಗಿದೆ. ತಾಜಮಹಲನ್ನು ನೋಡಿದ್ದಕ್ಕಿಂತ ಶಿಲಾ ಬಾಲಿಕೆಯೊಬ್ಬಳ ಮೊಲೆಯ ಮಾದಕತೆಗಾಗಿ ತನ್ನ ಸ್ಥಳಬಿಟ್ಟ ಅಮೃತಶಿಲೆಯ ಚೂರಿನ ರುಚಿ, ಉಪ್ಪುಪ್ಪು ರುಚಿ ಹಿತವೆನಿಸುತ್ತದೆ. ಆ ರುಚಿಯಲ್ಲಿ ಮೈಯನ್ನಾಡಿಸುವಂಥ ಶಕ್ತಿ ತುಂಬಿರುವಂತೆನಿಸುತ್ತದೆ. ಆದರೆ ಅದೂ ನಿರ್ಮಲೆ ಸೆರಗಿನಿಂದ ಮರೆಮಾಡಿಕೊಂಡಿದ್ದ ಆಕೆಯ ಜೀವಂತ ಅಂಗಾಂಗಗಳಿಗಿಂತ ಹೆಚ್ಚು ಹಿತವೆನಿಸೀತು ಎಂದೇನೂ ಅನಿಸುವುದಿಲ್ಲ. ಹೀಗೆ, ತಾಜಮಹಲು ಶಿಲಾಬಾಲಿಕೆಯ ಮೊಲೆಯಿಂದ ಸಿಡಿದ ಅಮೃತಶಿಲೆಯ ಚೂರು, ನಿರ್ಮಲೆಯ ಸೆರಗು ಮರೆಮಾಡಿದ ಅಂಗಾಂಗಗಳ ಕುರಿತಾದ ಚಪಲ, ಕೊನೆಯಲ್ಲಿ ಆ ಚಪಲ ಕೇವಲ ಚಪಲವಾಗಿರದೆ ಇಂದ್ರಿಯಗ್ರಾಹ್ಯವಾದ ಮೂರ್ತ ಅನುಭವವಾಗುವವರೆಗೆ ಬೆಳೆಯುವುದು- ಈ ಎಲ್ಲ ಅವಸ್ಥೆ, ಅನುಭವಗಳ ಮಧ್ಯೆ ಮಧ್ಯೆ ಆಗಾಗ ಕೇಳಿಸುವ ಕುಸುಮಳ ಪ್ರೇಮದ ಕ್ಷೀಣ ಸ್ವನ- ಇವು ಕತೆಯ ಬಂಧಯೋಜನೆಯನ್ನು ಕುರಿತಾದ ಜಾಣ್ಮೆಯನ್ನು ಸಾರುತ್ತವೆ. ಆದರೂ ಕತೆಯ ನಿರ್ವಹಣೆಯಲ್ಲಿ ಅಲ್ಲಲ್ಲಿ ಜೋಲಿತಪ್ಪಿ, ಬಿರುಕು ಬಿಟ್ಟ ಕತೆಯ ಒಟ್ಟು ಶಿಲ್ಪದ ಬಿಗಿ ಮತ್ತು ಅಪೇಕ್ಷಿತ ಧ್ವನಿಶಕ್ತಿ ಸಿದ್ಧಿಸಿಲ್ಲ ಎಂದೆನಿಸುತ್ತದೆ. ಉದಾಹರಣೆಗೆ ಎರಡನೆಯ ಭಾಗದ ಕೊನೆಯ ಹನ್ನೆರಡು ಸಾಲು (ಪುಟ ೬೦)ಗಳನ್ನು ನೋಡಬಹುದಾಗಿದೆ. “ಕುಸಮಳೂ ನನ್ನ ಜೊತೆ ಇದ್ದಿದ್ದರೆ ಈ ಹುಚ್ಚಿನಲ್ಲೂ ಸೊಗಸಿತ್ತು. ಸಹಜತೆಯಿತ್ತು….. ಕುಸುಮಾ…. ಆಗ ನೀನಿಲ್ಲಿದ್ದರೆ…..ತಾಜಮಹಲು ಚಿತ್ರಗಳಲ್ಲಿ ನಿಗಿನಿಗಿಸುವಂತೆಯೇ ಇರುತ್ತಿತ್ತು.” ಇಲ್ಲಿನ ಕ್ರಿಯಾಪದಗಳ ಮೇಲಿನ ಅವಧಾರಣೆ ಗಮನಾರ್ಹ. ಕುಸುಮ ಜತೆಯಲ್ಲಿದ್ದರೆ ತಾಜಮಹಲು ಚಿತ್ರಗಳಲ್ಲಿ ನಿಗಿನಿಗಿಸುವಂತೆಯೇ ಇರುತ್ತಿತ್ತು, ಎನ್ನುವುದು ಕತೆಯ ಈ ಘಟ್ಟದಲ್ಲಿಯೇ ಖಚಿತವಾದ ತಿಳುವಳಿಕೆಯಾಗಿದ್ದುದಾದರೆ. “….ಷಾಜಹಾನನ ಪ್ರೇಮಕಥೆ ಹಸೀ ಸುಳ್ಳಿನ ಕಂತೆ……” ಇತ್ಯಾದಿ ಕಮ್ಯೂನಿಷ್ಟ್ ಧೋರಣೆಯ ಬರೆವಣಿಗೆಗೆ ಕಲಾದೃಷ್ಟಿಯಿಂದ ಇತ್ಯಾತ್ಮಕವಾದ ಅರ್ಥ ಹೇಗೆ ಸಿದ್ಧಿಸುತ್ತದೆ? ಇದೇ ರೀತಿ ಎಚ್ಚರ ತಪ್ಪಿದ ಬರವಣಿಗೆಗೆ ಇನ್ನೊಂದು ಚಿಕ್ಕ ಉದಾಹರಣೆ ನೋಡಿ :

“ನಿರ್ಮಲೆಯನ್ನ…… ಅವಳ ಮೊಲೆಯನ್ನ….. ಹೊಟ್ಟೆಯನ್ನ…… ನಡುವನ್ನ…… ತೆಳುವಾದ ಕುಪ್ಪಸ…… ಸೆರಗು…….. ಸೀರೆ ಮುಚ್ಚಿತ್ತು.

……………ಆ ಪರದೆ ಸರಿದರೆ………………………………..ಸರಿದರೇನಿದೆ ಮಣ್ಣು, ಈಗ ತಾಜಮಹಲಿನಿಂದಾದಷ್ಟೇ ನಿರಾಶೆ.”

– ‘ಸರಿದರೇನಿದೆ ಮಣ್ಣು. ಈಗ ತಾಜಮಹಲಿನಿಂದಾದಷ್ಟೇ ನಿರಾಶೆ‘ – ಎನ್ನುವ ತಿಳುವಳಿಕೆ ಈ ಸಂದರ್ಭದಲ್ಲಿ ಅವಸರದಿಂದ ಹೇರಿದ್ದಾಗಿರದೆ ಸನ್ನಿವೇಶದ ಅನಿವಾರ್ಯತೆಯಲ್ಲಿಯೇ ಸಂಭವಿಸಿದ್ದುದಾಗಿದ್ದರೆ ಮುಂದೆಯೂ ಹಸಿಹಸಿಯಾಗಿರುವ ನಿರ್ಮಲೆಯ ಕುರಿತಾದ ಚಾಪಲ್ಯವನ್ನು ಕಲಾದೃಷ್ಟಿಯಿಂದ ಸಮರ್ಥಿಸುವುದು ಹೇಗೆ ಸಾದ್ಯವಾಗುತ್ತದೆ?

– ಒಟ್ಟಿನಲ್ಲಿ ವಸ್ತು ಹಾಗೂ ಬಂಧಯೋಜನೆಯಲ್ಲಿ ಸಾಕಷ್ಟು ಕಸುವು, ಜಾಣ್ಮೆ ಇದ್ದೂ ನಿರ್ವಹಣೆಯಲ್ಲಿ ಸಾಕಷ್ಟು ಸಂಯಮ, ಎಚ್ಚರ ಇಲ್ಲದಿರುವುದರಿಂದ ಕತೆಯ ಶಿಲ್ಪ ಸಡಿಲವಾಗಿ ಪರಿಣಾಮದ ತೀವ್ರತೆ ಎಷ್ಟಾಗಬಹುದಾಗಿತ್ತೊ ಅಷ್ಟಾಗದೆ ಕತೆ ಸೋತುಬಿಟ್ಟಿದೆ.

ಶ್ರೀ ಶ್ರೀಕಾಂತರ ‘ಬುದ್ಧ’ದಲ್ಲಿ ವಸ್ತು ಮತ್ತು ಬಂಧಯೋಜನೆಯ ದೃಷ್ಟಿಯಿಂದ ‘ಯುವಜನೋತ್ಸವ’ ವನ್ನು ಮೀರಿಸುವ ಕಸುವು, ಜಾಣ್ಮೆ ಇದೆಯೆಂದೇನೂ ಅನಿಸುವುದಿಲ್ಲ. ಆದರ ಅನುಭವವನ್ನು ಅತ್ಯಂತ ಸಂಯಮ, ಎಚ್ಚರದಿಂದ ಭಟ್ಟಿಯಿಳಿಸಿರುವುದರಿಂದ ಸಣ್ಣಕತೆಯ ಉತ್ತಮ ಗುಣವಾದ ಭಾವಸಂಕೀರ್ಣತೆ ಮತ್ತು ಪರಿಣಾಮದ ಏಕಾಗ್ರತೆ ಎರಡೂ ಸಾಧಿತವಾಗಿ ಬಳಸಿದ ಪದ, ಸಂಕೇತ, ಪ್ರತಿಮೆಗಳು ಅವುಗಳ ಅಸ್ತಿತ್ವದ ಅನಿವಾರ್ಯತೆಯನ್ನು ಕೇವಲ ವಾಚ್ಯದ ಮಟ್ಟದಲ್ಲಿಯೇ ಸಮರ್ಥಿಸಿಕೊಂಡು ಕೈ ತೊಳೆದುಕೊಂಡು ಬಿಡದೆ ಧ್ವನಿತರಂಗಗಳನ್ನು ಉಕ್ಕಿಸುತ್ತಾ ಅನುಭವವನ್ನು ಸೂಕ್ಷ್ಮವಾಗಿಸುತ್ತ, ಚೂಪುಗೊಳಿಸುತ್ತ ಶಿಲ್ಪಸಂಸ್ಕಾರದ ನಿರಂತರ ಎಚ್ಚರದಲ್ಲಿ ಹೆಜ್ಜೆ ಹಾಕುತ್ತಿರುವಂತೆನಿಸುತ್ತದೆ.

ನಾಲ್ಕು ಜನರ ಹೆಗಲ ಮೇಲೆ ಮೆರವಣಿಗೆ ಹೊರಟ ಹೆಣವನ್ನು ಕಂಡಾಗ ರಾಮಣ್ಣನಿಗೆ ತನ್ನ ಹೆಣದ ದರ್ಶನವಾದಂತೆನಿಸುತ್ತದೆ. ‘ಅಯ್ಯೋ ಅಳೋರು ಯಾರು ಇಲ್ಲ !! ಛೇ…… ಸತ್ತಾಗ ಅಳುವವರಿಲ್ಲದಿದ್ದರೆ? ಅವನ ಕಣ್ಣು ತುಂಬಿ ನೀರು ಮಿಡಿಯಿತು……….’ – ಆಗ ಅವನಿಗೆ ಅನಿಸಿದ್ದು “ಬುದ್ಧಂ ಶರಣಂ ಗಚ್ಛಾಮಿ.’ ಸಕಲ ಭೋಗಭಾಗ್ಯಗಳಿದ್ದೂ ಹೆಣವೊಂದನ್ನು ಕಂಡಾಗ ರಾಜಕುಮಾರ ಸಿದ್ಧಾರ್ಥನಲ್ಲಿ ಉಂಟಾದ ಜ್ವಲಂತ ವೈರಾಗ್ಯವನ್ನು ತಟಕ್ಕನೆ ಜ್ಞಾಪಿಸಿ ಪ್ರಸ್ತುತ ಸನ್ನಿವೇಶದ ವೈರಾಗ್ಯದ ಬೋಧೆಯುಂಟಾಗುವಂತಾಗುತ್ತದೆ. ಇಲ್ಲಿ ರಾಮಣ್ಣ ಕ್ಷಯರೋಗಿ, ಬದುಕುವ ಭರವಸೆ ಕಳಕೊಳ್ಳುತ್ತಿರುವವನು. ಹೆಂಡತಿ ಶೀಲಳ ಶೀಲ ಮತ್ತು ವಿಧೇಯತೆಯನ್ನು ಶಂಕಿಸುತ್ತಿರುವವನು. ಸಿದ್ಧಾರ್ಥನಿಗೆ ಯಶೋಧರೆಯ ಶೀಲ, ವಿಧೇಯತೆಯಲ್ಲಿ ಶಂಕೆ ಇರಲಿಲ್ಲ. ಆದರೂ ಅವನು ಜೀವನದ ನಶ್ವರತೆಯನ್ನು ಕಂಡು ಬುದ್ಧನಾಗಲು ಹೊರಟವನು. ಇಲ್ಲಿ ಜೀವನದ ನಶ್ವರತೆ ಅನಿಸುತ್ತಿರುವುದು ತನ್ನ ಅನಾಥ ಮಸಣದ ಕಲ್ಪನೆಯಲ್ಲಿ :

:”ನಿಧಾನವಾಗಿ ಎದ್ದು ತಡವರಿಸುತ್ತಾ ಆ ಬುದ್ಧನ ವಿಗ್ರಹವನ್ನು ಎರಡೂ ಕೈಗಳಲ್ಲಿ ಬಾಚಿ, ಹಿಡಿದು, ಎದೆಗಪ್ಪಿ, ಶಿರವನ್ನಾಘ್ರಾಣಿಸಿ, ಚುಂಬಿಸಿ, ನಿರ್ವಾಣಸ್ಥಿತಿಗೇರಿದ.

‘ಭಗವನ್, ಈ ಜೀವ ನಶ್ವರ’ -ಕೈಲಿದ್ದ ಬುದ್ಧನ ವಿಗ್ರಹ ನಡುಗಿತು. ‘ಈ ಜೀವ ನಶ್ವರ’ – ಬುದ್ಧ ಮತ್ತೆ ನಡುಗಿದ. ‘ಜೀವ ನ………………ಶ್ವ………….ರ’ ಬುದ್ಧ ಮತ್ತೆ ಮತ್ತೆ ನಡುಗಿದ.”

– ಈ ಅವತರಣಿಕೆಯಲ್ಲಿನ ಪ್ರತಿಪದವನ್ನೂ ಎಚ್ಚರದಿಂದ ಗಮನಿಸಬೇಕು. ‘ತಡವರಿಸುತ್ತಾ‘ ‘ನಡುಗಿತು‘ ‘ನಡುಗಿದ‘ ‘ಮತ್ತೆ ನಡುಗಿದ‘ – ಇಲ್ಲೆಲ್ಲ ರೋಗದಿಂದ ನಿಶ್ಯಕ್ತನಾದವನ ದೈಹಿಕ ನಡುಗುವಿಕೆಯನ್ನಷ್ಟೇ ವರ್ಣಿಸಿ ಈ ಮಾತುಗಳು ವಿರಮಿಸುವುದಿಲ್ಲ. ಆ ‘ನಡುಕ’ ಆತನ ಮನಸ್ಸಿನ ಆ ಸಂದರ್ಭದ ಅಸ್ಥಿರತೆಯನ್ನೂ ಧ್ವನಿಸುವಂತಿದೆ. ಬುದ್ಧನ ವಿಗ್ರಹವನ್ನು ಎರಡೂ ಕೈಗಳಲ್ಲಿ ಬಾಚಿ, ಹಿಡಿದು,ಎದೆಗಪ್ಪಿ,ಶಿರವನ್ನಾಘ್ರಾಣಿಸಿ ಚುಂಬಿಸುವ ಕ್ರಿಯೆ ಹಾಗೂ ಅದರ ವೇಗ ಮನಸ್ಸಿನ ಆರೋಗ್ಯದ ಚಿಹ್ನೆಯಲ್ಲ. ಲೌಕಿಕ ಇಲ್ಲವೆ ಅಧ್ಯಾತ್ಮಿಕ ವಲಯದಲ್ಲಿ ಮನಸ್ಸು ಹರಿಯುತ್ತಿರುವಾಗಲೂ ಪ್ರಕಟವಾಗುವ ರಾಮಣ್ಣನ ಮಾನಸಿಕ ಅವಸ್ಥೆ ಬೇಕುಬೇಕೆಂಬ ಹಲುಬುವಿಕೆಯೇ ಆಗಿದೆ. ಅದು ಬುದ್ಧನ ತತ್ವಕ್ಕೆ ತೀರಾ ವಿರುದ್ಧವಾದುದು. ಅದೇ ವೇಗದಲ್ಲಿಯೇ ‘ನಿರ್ವಾಣಸ್ಥಿತಿಗೇರಿದ’ ಎನ್ನುವುದೂ ಸೇರಿಹೋಗುವುದರಿಂದ ಧ್ವನಿತವಾಗುವ ಆ ಸ್ಥಿತಿಯ ವ್ಯರ್ಥತೆ ಮತ್ತು ವ್ಯಂಗ್ಯ ನಮ್ಮ ಮನಸ್ಸನ್ನು ತುಂಬುತ್ತದೆ. ಮುಂದೆ ‘ಭಗವನ್, ಈ ಜೀವ ನಶ್ವರ’, ‘ಈ ಜೀವ ನಶ್ವರ’, ‘ಜೀವ ನ………..ಶ್ವ………..ರ’ – ವಾಕ್ಯ ಕಿರಿಕಿರಿದಾಗುತ್ತಾ ಕೊನೆಯಲ್ಲಿ ಕರಗಿಹೋಗುತ್ತಿರುವುದನ್ನೂ ಮಧ್ಯೆ ಮಧ್ಯೆ ಬರುವ ‘ಕೈಲಿದ್ದ ಬುದ್ಧನ ವಿಗ್ರಹ ನಡುಗಿತು’, ‘ಬುದ್ಧ ಮತ್ತೆ ನಡುಗಿದ’, ‘ಬುದ್ಧ ಮತ್ತೆ ಮತ್ತೆ ನಡುಗಿದ’ – ಈ ವಾಕ್ಯಗಳು ಆ ಅನುಭವವನ್ನು ಅಭಿನಯಿಸಿ ತೋರಿಸುವಲ್ಲಿ ಸಹಕರಿಸುವುದನ್ನೂ ಅನುಭವಿಸಿಯೇ ಅರಿಯಬಹುದಾದದ್ದು. (ಇದೇ ಸಂದರ್ಭದಲ್ಲಿ ಗೋಪಾಲಕೃಷ್ಣರ ಅಡಿಗರ ‘ಹಿಮಗಿರಿಯ ಕಂದರ’ದ ಕೊನೆಯಲ್ಲಿ ಬರುವ –

“ಹಿಮಗಿರಿಯ ಕಂದರ
………………ಗಿರಿಯಕಂದರ
……………………..ಕಂದರ
…………………………….ದರ
………………………………..ರ………..”ನೆನಪಾಗುವುದಲ್ಲವೆ?

ಆನಂತರದ ಸಾಲುಗಳನ್ನು ಗಮನಿಸಿ :

“ಅಲಮಾರಿನಲ್ಲಿದ್ದ ಔಷದೀಯ ಶೀಷೆಗಳನ್ನೆಲ್ಲಾ ಒಂದೊಂದಾಗಿ ಹೊರಕ್ಕೆ ಎಸೆಯಬೇಕೆಂದುಕೊಂಡ. ಆಗ ಮನೆಯ ಕೆಳಗಿನ ಹಜಾರದಿಂದ ಜೋಡಿ ದನಿಗಳು ಕೇಳಿಬಂದವು. ನಿಧಾನವಾಗಿ ಮೆಟ್ಟಲೇರಿದವು : (ಇವನು ಇಷ್ಟರೊಳಗೇ ಬುದ್ಧನನ್ನು ಸ್ವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಅವಸರವಸರವಾಗಿ ಮಂಚವನ್ನೇರಿ ಕಾಲಿನಿಂದ ತಲೆಯವರೆಗೆ ರಗ್ಗು ಹೊದ್ದು ಮೈಯೆಲ್ಲಾ ಕಿವಿಯಾಗಿ ಮಲಗಿಕೊಂಡ) ಮಂಚದ ಹತ್ತಿರ ಬಂದು ನಿಂತವು.”ಸ

-ಜೋಡಿದನಿ (ಹೆಂಡತಿ ಶೀಲ ಮತ್ತು ಗೆಳೆಯ ಆನಂದರದು) ಕೇಳಿಬರುತ್ತಿರುವಂತೆಯೇ ಕತೆ ಇನ್ನೊಂದು ವೃತ್ತಕ್ಕೆ ಸ್ಥಳಾಂತರಿತವಾಗುವ ಬಗೆ ತುಂಬ ಶಕ್ತಿಯುತವಾಗಿದೆ. ಕ್ಷಣದ ಹಿಂದಿನ ಬುದ್ಧನ ವಿಗ್ರಹವನ್ನು ಎರಡೂ ಕೈಗಳಲ್ಲಿ ಬಾಚಿ, ಹಿಡಿದು, ಎದೆಗಪ್ಪಿ ಶಿರವನ್ನಾಘ್ರಾಣಿಸಿ, ಚುಂಬಿಸಿ ನಿರ್ವಾಣ ಸ್ಥಿತಿಗೇರಿದಾಗಿನ ಆತುರ, ಅವಸರವೇ ಅದಕ್ಕೆ ತೀರ ವಿರುದ್ಧವಾದ ಮನಸ್ಸಿನ ಕ್ರಿಯೆಯಲ್ಲಿಯೂ ಪ್ರಕಟವಾಗುವುದು ಪರಿಣಾಮಕಾರಿಯಾಗಿದೆ. ಬುದ್ಧನನ್ನು ಸ್ವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಎನ್ನುವಲ್ಲಿ ಎತ್ತಿಕೊಂಡಿದ್ದ ಬುದ್ಧನ ವಿಗ್ರಹವನ್ನು ಮೊದಲಿದ್ದಲ್ಲಿಯೇ ಇಟ್ಟ ಎನ್ನುವ ವಾಚ್ಯಾರ್ಥ ಮಾತ್ರ ಸಿದ್ಧಿಸುವುದಲ್ಲದೆ ಎಳೆದ ರಬ್ಬರು ಹಿಡಿತದಿಂದ ನುಣುಚಿಕೊಂಡಾಗ ತಟಕ್ಕನೆ ತನ್ನ ಮೊದಲಿನ ಸ್ಥಿತಿಯನ್ನು ಪಡೆದುಕೊಳ್ಳುವಂತೆ ಕ್ಷಣದ ಹಿಂದೆ ಅವನಲ್ಲಿ ಆವಾಹನೆಗೊಂಡಿದ್ದ ಬುದ್ಧತ್ವ ಕೆಳಗಿನಿಂದ ಜೋಡಿದನಿ ಕೇಳಿಬಂದೊಡನೆ ತಟಕ್ಕನೆ ನುಣುಚಿಕೊಂಡಾಗ ಆತನ ಮನಸ್ಸು ಪಡೆದುಕೊಳ್ಳುವ ಸ್ಥಿತಿಸ್ಥಾಪಕತ್ವವನ್ನೂ ಧ್ವನಿಸುತ್ತದೆ. ಅಷ್ಟೇ ಅಲ್ಲದೆ ಸ್ವಸ್ಥಾನ‘, ‘ಪ್ರತಿಷ್ಠಾಪಿಸಿ‘ – ಈ ಪದಗಳ ಕೃತ್ರಿಮ ಭಾರ ಬಿಟ್ಟುಕೊಡುವ ವ್ಯಂಗ್ಯವೂ ಮನಸ್ಸನ್ನು ತುಂಬುತ್ತದೆ. ಹಾಗೆಯೇ ಇನ್ನೊಂದು ಸನ್ನಿವೇಶದ ಬರವಣಿಗೆಯನ್ನು ನೋಡಿ :

“ಆನಂದ ಅವನ ಮಂಚದ ಬಳಿಗೆ ಬಂದು, ಅದರ ಪಕ್ಕದಲ್ಲಿ ಕುಳಿತು ಹಣ್ಣಿನ ತೊಳೆಯನ್ನು ಬಿಡಿಸಲು ತೊಡಗಿದ. ‘ಅತ್ತಿಗೆಯ ಸ್ಥಿತಿ ಹೇಗಾಗ್ತಿದೆ ನೋಡಿದೆಯಾ ರಾಮಣ್ಣ’ ಎಂದ. ಮೇಲಿನ ಸಿಪ್ಪೆ ಬಿಡಿಸಿಯಾಗಿತ್ತು. ‘ನೀನು ಕಾಯಿಲೆ ಮಲಗಿ ನಾಲ್ಕು ತಿಂಗಳಾಯ್ತು. ನಿನಗೆ ಬೇಗ ಹುಷಾರಾಗದಿದ್ದರೆ, ಅತ್ತಿಗೆ ಆರೋಗ್ಯದ ಬಗ್ಗೆ ನನಗೆ ಹೆದರಿಕೆಯಾಗುತ್ತೆ:’ ತೊಳೆಗಳನ್ನು ತೆಗೆದು ಒಳಗಿನ ಬೀಜಗಳನ್ನು ತೆರೆದದ್ದಾಯಿತು…..”

-ಇಲ್ಲಿ ಖಾಯಿಲೆಯವನ ಹತ್ತಿರ ಕುಳಿತು ಹಣ್ಣಿನ ತೊಳೆ ಬಿಡಿಸುವ ಸರ್ವೇಸಾಮಾನ್ಯವಾದ ಕ್ರಿಯೆ ಅಷ್ಟಕ್ಕೇ ಬತ್ತಿ ಹೋಗದ ಆರ್ದ್ರತೆಯನ್ನು ತನ್ನಲ್ಲಿ ಹಿಡಿದಿಟ್ಟುಕೊಂಡು ಸನ್ನಿವೇಶವನ್ನು ನಾಟಕೀಯವಾಗಿಸುವ ಬಗೆ ಪ್ರಶಂಸನೀಯವಾಗಿದೆ.

ಹೀಗೆಯೇ, ಮುಖ್ಯವಾಗಿ ಬುದ್ಧನ ಪ್ರತಿಮೆ ಹೇಗೆ ಬೆಳೆದಿದೆ, ಉಳಿದ ಸನ್ನಿವೇಶ ನಿರ್ವಹಣೆ ಎಂತಿದೆ ಎನ್ನುವದನ್ನೆಲ್ಲ ಸವಿವರವಾಗಿ ತಿಳಿಸಬಹುದಾದರೂ ಕತೆಯನ್ನು ವಿವರಣೆಯ ಮೂಲಕ ತೀರ ಸರಳವಾಗಿಸುವುದು ಸಾಮಾನ್ಯ ಓದುಗರಿಗೆ ಸಹೃದಯರಿಗೆ, ಆ ಮೂಲಕ ಕತೆಗಾರನಿಗೆ ಅನ್ಯಾಯ ಮಾಡಿದಂತಾಗುವ ಭಯ ಇದ್ದೇ ಇದೆ.

ಇಷ್ಟೆಲ್ಲ ಹೇಳಿದ ಮೇಲೆಯೂ ‘ಬುದ್ಧ’ ಕತೆಯ ವಸ್ತು ಮತ್ತು ಅಭಿವ್ಯಕ್ತಿಯ ಕುರಿತಾದ ಸ್ವೋಪಜ್ಞತೆಯ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಗೋಪಾಲಕೃಷ್ಣ ಅಡಿಗರ ‘ಹಿಮಗಿರಿಯ ಕಂದರ’; ಯು.ಆರ್.ಅನಂತಮೂರ್ತಿಯವರ ‘ಪಂಜರದ ಗಿಣಿ’; ರಾಜಲಕ್ಷ್ಮಿ ಎನ್.ರಾವ್‌ರವರ ‘ವೈಶಾಖ ಶುದ್ಧ ಪೂರ್ಣಿಮೆ’ – ಇವುಗಳಲ್ಲೆಲ್ಲ ಬಳಸಲ್ಪಟ್ಟು ಈಗಾಗಲೇ ಸಾಕಷ್ಟು ಸವೆದುಹೋಗಿರುವ ಬುದ್ಧನ ಪ್ರತಿಮೆ ಕನ್ನಡ ಸಾಹಿತ್ಯದಲ್ಲಿ ‘ಕ್ಲೀಷೆ’ಯೆನಿಸಿಕೊಳ್ಳುವಂತಾಗಿಬಿಟ್ಟಿದೆ. ಶ್ರೀಕಾಂತರ ‘ಬುದ್ಧ’ ಕತೆಯಲ್ಲಿಯೂ ಬುದ್ಧನೇ ಕೇಂದ್ರ ಪ್ರತಿಮೆಯಾಗಿದ್ದಾನೆ. ವಸ್ತು ಮತ್ತು ಬಳಸಲ್ಪಟ್ಟ ಬುದ್ಧನ ಪ್ರತಿಮೆ ಎರಡೂ (ಇವು ಈ ಕತೆಯಲ್ಲಿ ತಮ್ಮದೇ ಆದ ಅನನ್ಯತೆಯನ್ನು ಉಳಿಸಿಕೊಂಡಿರುವಂತೆನಿಸಿದರೂ) ನಮಗೆ ತಮ್ಮ ಸ್ವೋಪಜ್ಞತೆಯಿಂದಾಗಿ ಮಿಂಚು ತಟ್ಟಿಸುವ ಅಂತಸ್ಸತ್ವವನ್ನು ಕಳೆದುಕೊಂಡು ಬಿಟ್ಟಿವೆ. ಈ ಅಂಶವೇ ‘ಬುದ್ಧ’ ಕತೆಯ ಉತ್ತಮಿಕೆಯನ್ನು ಉಗ್ಫಡಿಸುವ ವಿಮರ್ಶಕನನ್ನು ಕಾಡುವ ಭೂತ. ಏನೇ ಇದ್ದರೂ ‘ಬುದ್ಧ ಕತೆಯ ಕುಸುರಿ ಮತ್ತು ಅಚ್ಚುಕಟ್ಟು ಕನ್ನಡ ಸಣ್ಣಕತೆಯ ಲೋಕದಲ್ಲಿ ಮೇಲ್ಪಂಕ್ತಿಯದು ಎನ್ನುವುದು ನನ್ನ ಖಚಿತವಾದ ಅಭಿಪ್ರಾಯ.

ಶ್ರೀ ಕೆ.ಆರ್.ನಾಗರಾಜರ ‘ನೆರೆ’ ಕತೆಯ ವಿಮರ್ಶೆಯಲ್ಲಿಯೂ ‘ಬುದ್ಧ’ ಕತೆಯಲ್ಲಿನಂತೆ ಅದರ ಸ್ವೋಪಜ್ಞತೆಯನ್ನು ಕುರಿತಾದ ಪ್ರಶ್ನೆ ವಿಮರ್ಶಕನನ್ನು ಮೊದಲಲ್ಲಿಯೇ ಕಾಡುತ್ತದೆ. ‘ನೆರೆ’ ಈ ಸಂಕಲನದಲ್ಲಿಯೇ ದೀರ್ಘವಾದ ಕತೆಯಾಗಿದ್ದರೂ ಅದರಲ್ಲಿ ಮೇಲ್ಪಂಕ್ತಿಯ ಸಂಗ್ರಹ ಶೀಲತೆ ಪ್ರಕಟವಾಗಿದೆ. ರಾಮಯ್ಯ ಹೆಗ್ಗಡೆಯವರ ಬಾಳಿನ ಏರುಪೇರುಗಳನ್ನು ಸಂಗ್ರಹವಾಗಿ ಮತ್ತು ಅಷ್ಟೇ ಧ್ವನಿಪೂರ್ಣವಾಗಿ ಹಿಡಿದಿಡುವುದರಲ್ಲಿ ಪ್ರಕಟವಾಗಿರುವ ಕಲೆಗಾರಿಕೆಯೂ ಮೇಲ್ಪಟ್ಟದ್ದಾಗಿದೆ. ಕತೆಯ ಕೇಂದ್ರ ಪ್ರತಿಮೆ-ನೆರೆ-ಯನ್ನು ಕುರಿತಾದ ವ್ಯಾಮೋಹ ಅಲ್ಲಲ್ಲಿ ಕಣ್ಣಿಗೆ ಹೊಡೆಯುವಂತಿದ್ದರೂ ಒಟ್ಟಿನಲ್ಲಿ ಕತೆಗಾರರು ಅದನ್ನು ನಿರ್ವಹಿಸಿದ ರೀತಿ ಸಮರ್ಥವಾದುದಾಗಿದೆ. ಹಾಗೆಯೇ ಕಾನ್ಮನೆ ತೋಟ, ಅದರ ಹಿನ್ನೆಲೆ ಮತ್ತು ವಿನಾಶ ; ಮಹಾಬಲ ಸುಂದರಿಯರ ಪ್ರಣಯದ ಸನ್ನಿವೇಶ ಇವೆಲ್ಲ ಕತೆಯ ಶಿಲ್ಪದ ಅನಿವಾರ್ಯ ಅಂಗಗಳೆನ್ನುವಷ್ಟರ ಮಟ್ಟಿಗೆ ಬೆಸೆದಿವೆ. ಆದರೂ ಅವು ಓದುಗನ ಮನಸ್ಸಿನ ಮೇಲೆ ಮೂಡಿಸಬಹುದಾಗಿದ್ದ ಪರಿಣಾಮದ ಗಾಢತೆಯನ್ನು ಕಡಮೆಗೊಳಿಸುವ ಭೂತವೊಂದು ಅವುಗಳಲ್ಲಿ ಸೇರಿಕೊಂಡಿರುವಂತೆನಿಸುತ್ತದೆ. ಯು.ಆರ್. ಅನಂತಮೂರ್ತಿಯವರ ‘ಪ್ರಕೃತಿ’ಯ ಸಂಕಪ್ಪಯ್ಯನ ಕಿತ್ತಲೆ ತೋಟ, ಶ್ಯಾನುಭೋಗರ ಮಗ-ಲಕ್ಷ್ಮಿಯರ ಪ್ರಣಯದ ಸನ್ನಿವೇಶ ಮತ್ತು ಆ ಕತೆಯಲ್ಲಿ ಅವುಗಳಿಗಿರುವ ಬೇರ್ಪಡಿಸಲಾಗದ ಗಾಢವಾದ ಸಂಬಂಧ – ಇವೆಲ್ಲವುಗಳ ಸಂವಾದಿತ್ವವನ್ನು ‘ನೆರೆ’ ಯಲ್ಲಿಯೂ ತೋರಿಸಬಹುದಾಗಿದೆ. ಒಟ್ಟಿನಲ್ಲಿ, ಅನಂತಮೂರ್ತಿಯವರ ‘ಪ್ರಕೃತಿ’ಯನ್ನು ಮರೆತು ಓದುವುದು ಸಾಧ್ಯವಾಗಬಹುದಾದರೆ ‘ನೆರೆ’ ಅತ್ಯುತ್ತಮ ಕತೆ ಎಂದು ಅನಿಸೀತೇನೊ !

ಕೊನೆಯದಾಗಿ ಉಳಿದಿರುವ ಕತೆ ಶ್ರೀ ಜೀ.ಶಂ. ಪರಮಶಿವಯ್ಯನವರ ‘ಶನಿಯ ಕೋಪ’ ಅದೇ ಈ ಸಂಕಲನದಲ್ಲಿನ ಶ್ರೇಷ್ಠ ಕತೆ. ಶನಿದೇವರ ಪಾತ್ರಕ್ಕೆ ರಂಗಣ್ಣ ಸಿದ್ಧವಾಗುತ್ತಿರುವಂತೆಯೇ ಆತನ ಭೂತಜೀವನ -ಕಳೆದ ಆರು ತಿಂಗಳ ಬದುಕು – ಆತನನ್ನು ಅಣಕಿಸುತ್ತ ಆತನ ಮನಸ್ಸಿನ ಒಳಗೂ ಹೊರಗೂ ಪ್ರೇತನೃತ್ಯ ನಡೆಸುತ್ತದೆ. ಪುಟ್ಟೋಜಿ ಬಣ್ಣ ಬಳಿಯುತ್ತಾ ರಂಗಣ್ಣನನ್ನು ಶನಿಯ ಪಾತ್ರಕ್ಕೆ ಸಿದ್ಧಗೊಳಿಸುತ್ತಿರುವ ಕ್ರಮದಲ್ಲಿಯೇ ಆ ಸನ್ನಿವೇಶದಲ್ಲಿ ಬಿಚ್ಚಿಕೊಳ್ಳುತ್ತಿರುವ ಆತನ ಭೂತವೂ ರಟ್ಟಾಗುವ ಹೊತ್ತಿಗೆ ಸರಿಯಾಗಿ ಪುಟ್ಟೋಜಿ ಸಿದ್ಧಗೊಳಿಸಿದ ಶನಿಮಹಾತ್ಮನ ಕೋಪ ಶನಿಯನ್ನು ನಿಂದಿಸಿದ ರಾಜ್ಯ ಮದದಿಂದ ಕೊಬ್ಬಿಹೋದ ನೀಚ ವಿಕ್ರಮನ ಕಡೆಗೆ ಹಾಯಬೇಕಾಗಿದ್ದುದು ಆ ಕ್ಷಣದಲ್ಲಿಯೇ ಬೇವಿನಮರದ ಬುಡದಲ್ಲಿ ಕುಳಿತ ಕುಹಕ ನೋಟದ ಕೃತ್ತಿಮ ಮನಸ್ಸಿನ ಕುಂಬಾರ ರುದ್ರನ ಕಡೆಗೆ ಹರಿಹಾಯುತ್ತದೆ. ಆದರೆ ರಂಗಣ್ಣನ ಶನಿಯ ಕೋಪಕ್ಕೆ ವಿಕ್ರಮನಾಗಲಿ, ರುದ್ರನಾಗಲಿ, ಬಲಿಯಾಗದೆ ಸ್ವತಃ ರಂಗಣ್ಣನೇ ಬಲಿಯಾಗುವಂತಾಗುವುದರಲ್ಲಿನ ವ್ಯಂಗ್ಯ ರೋಮಾಂಚನಕಾರಿಯಾಗಿದೆ. ಇಷ್ಟೇ ಅಲ್ಲ ; ಅದು ಇಡೀ ಕತೆಯನ್ನು ಆ ಕ್ಷಣದಲ್ಲಿಯೇ ಪುನಃ ಸೃಷ್ಟಿಸಿ ಬಿಡುವ ಪವಾಡ ಅದ್ಭುತವಾಗಿದೆ. ಅನುಭವ ಹಾಗೂ ಅಭಿವ್ಯಕ್ತಿಯಲ್ಲಿನ ಸ್ವೋಪಜ್ಞತೆ ಮತ್ತು ಉದ್ದಕ್ಕೂ ಪ್ರಕಟವಾಗಿರುವ ಕತೆಗಾರರ ಆತ್ಮವಿಶ್ವಾಸ ಪ್ರಥಮ ದರ್ಜೆಯದಾಗಿದೆ..

* * *

ಈವರೆಗೆ ಈ ಸಂಕಲನದ ಎಲ್ಲ ಕತೆಗಳ ಸಮೀಕ್ಷೆ ನಡೆಸಿದ್ದಾಯಿತು. ಒಟ್ಟೂ ಎಂಟು ಕತೆಗಳಲ್ಲಿ ‘ಬುದ್ಧ’ ಮತ್ತು ‘ಶನಿಯ ಕೋಪ’ ವನ್ನುಳಿದು ಉಳಿದ ಆರು ಕತೆಗಳು ಬೆಳಕು ಕಾಣುತ್ತಿರುವುದು ಈ ಸಂಕಲನದ ಮೂಲಕವೇ. ಹಾಗೆಯೇ ‘ಬುದ್ಧ’ ಮತ್ತು ‘ಶನಿಯ ಕೋವ’ ವನ್ನು ಬರೆದಿರುವ ಶ್ರೀಕಾಂತ ಮತ್ತು ಜೀ.ಶಂ. ಪರಮಶಿವಯ್ಯನವರು ಈಗಾಗಲೇ ಎರಡೆರಡು ಕಥಾಸಂಕಲನಗಳನ್ನು ಪ್ರಕಟಿಸಿ ಸಣ್ಣ ಕತೆಗಾರರೆಂದು ಸಾಕಷ್ಟು ಪ್ರಸಿದ್ಧರಾಗಿರುವವರು. ಉಳಿದವರಲ್ಲಿ (ಸುಮತೀಂದ್ರ ನಾಡಿಗರೊಬ್ಬರು ಕವಿ, ವಿಮರ್ಶಕರೆಂದು ಪ್ರಸಿದ್ಧರಾಗಿದ್ದರೂ) ಅರ್ಧ ಡಜನ್ನಿನಷ್ಟಾದರೂ ಕತೆಗಳನ್ನು ಬರೆದು ಸಣ್ಣ ಕತೆಗಾರರಂದು ಪ್ರಸಿದ್ಧರಾಗಿರುವವರು ಯಾರೂ ಇಲ್ಲ. ಅಷ್ಟೇ ಏಕೆ? ಈ ಸಂಕಲನದ ತಮ್ಮ ಕತೆಯ ಮೂಲಕವೇ ಪ್ರಪ್ರಥಮವಾಗಿ ಕತೆಗಾರರೆನ್ನಿಸಿಕೊಳ್ಳುತ್ತಿರುವವರೂ ಇದ್ದಾರೆ. ಇದು ಕನ್ನಡದ ಅತ್ಯತ್ತಮ ಸಣ್ಣಕತೆಗಳ ಸಂಕಲನವಾಗಿರದಿದ್ದರೂ ಕತೆಗಳ ಸಮೀಕ್ಷೆ ನಡೆಸುವಾಗ ಸಾಹಿತ್ಯೇತರ ಕಾರಣಗಳಿಗಾಗಿ ರಿಯಾಯ್ತಿ ತೋರಿಸದೆ ಎಲ್ಲವನ್ನೂ ಒಂದೇ ನೆಲೆಯಲ್ಲಿ ನಿಂತು ನೋಡಲು ಪ್ರಯತ್ನಿಸಲಾಗಿದೆ. ಅಷ್ಟೇ ಅಲ್ಲದೆ ಇಲ್ಲಿರುವ ಕಥೆಗಳಷ್ಟನ್ನೇ ಕುರಿತು ಸಮೀಕ್ಷೆ ನಡೆಸಿರುವುದರಿಂದಿಲ್ಲಿ ಎತ್ತಿ ತೋರಿಸಿದ ಗುಣದೋಷಗಳು ಆಯಾ ಕತೆಗಾರ ಮತ್ತು ಆತನ ಇತರ ಕತೆಗಳಿಗೂ ಲಗತ್ತಿಸಬಹುದಾದ ಸಾಮಾನ್ಯ ವಿಮರ್ಶೆಯೆಂದು ತೆಗೆದುಕೊಳ್ಳಬೇಕಾಗಿಲ್ಲ. ಕೊನೆಯಲ್ಲಿ, ಸಣ್ಣ ಕತೆಗಾರರೆಂದು ಈಗಾಗಲೇ ಸಾಕಷ್ಟು ಪ್ರಸಿದ್ಧರಾಗಿಲ್ಲದ ಇಲ್ಲಿನ ಕೆಲವರಾದರೂ ಒಳ್ಳೆಯ ಕತೆಗಾರರಾಗಿ ಬೆಳೆಯಬಹುದಾದ ಭರವಸೆಯನ್ನು ಹುಟ್ಟಿಸುವಂಥವರು ಎಂಬ ಒಂದು ಮಾತನ್ನು ಹೇಳಬೇಕಾಗುತ್ತದೆ. ಈ ಮಾತು ಕೇವಲ ಔಪಚಾರಿಕವಾದುದಲ್ಲ.

– ನವೆಂಬರ್ ೧೯೬೫