“ಏಳು” ಎಂಬ ಈ ಕಥಾಸಂಕಲನದಲ್ಲಿ ಬರೆದಿರುವ ಎಲ್ಲ ಕಥೆಗಾರರೂ ಪ್ರತಿಭಾವಂತರು. ಜೊತೆಗೆ ಸಾಹಿತ್ಯಸೃಷ್ಟಿ ಅನುಭವವನ್ನು ಭಾಷೆಯ ಮೂಲಕ ಮೂಲತಃ ತನಗೆ ತಾನೇ ಶೋಧಿಸಿಕೊಳ್ಳಲು ನಡೆಸುವ ಪ್ರಾಮಾಣಿಕ ಪ್ರಯತ್ನ ಎಂಬ ಅರಿವನ್ನು ಪಡೆದವರು. ಆದ್ದರಿಂದ ಓದುಗರ ಕಡೆಗೆ, ಅವರ ಬೇಕು ಬೇಡಗಳ ಕಡೆಗೆ ಅನವಶ್ಯಕವಾದ ರತಿ ತೋರಿಸದೆ ಸದ್ದಿಲ್ಲದೆ ಭಾಷೆಯಲ್ಲಿ ಆಗಿಸುವ ಕುಶಲಕರ್ಮವೆಂಬಂತೆ ಕಥೆಗಳನ್ನು ಬರೆಯಲು ಪ್ರಯತ್ನಿಸುತ್ತಾರೆ. ಈ ಎಚ್ಚರ ಮತ್ತು ಅಗತ್ಯ ಅವರಿಗಿರುವುದರಿಂದ ಇಲ್ಲಿನ ಹೆಚ್ಚು ಕಥೆಗಳಲ್ಲಿ ಅವುಗಳ ಕಲಾತ್ಮಕ ಸಾಧನೆ ಏನೇ ಇರಲಿ ಅವರವರ ಸ್ವೋಪಜ್ಞತೆಯ ಅಂಶ ಗೋಚರಿಸುವಂತಾಗುತ್ತದೆ.

ಮೂಲತಃ ಅನುಭವವೇ ದೊಡ್ಡದಾದುದಲ್ಲದೆ ಕೃತಿ ದೊಡ್ಡದಾಗುವುದು ಸಾದ್ಯವೇ ಇಲ್ಲ ಮತ್ತು ಸಾಹಿತಿ ಪಡೆದಷ್ಟು ಅನುಭವವನ್ನು ಭಾಷೆಯಲ್ಲಿ ಆಗಿಸುವುದನ್ನು ನಿರಂತರ ಪರಿಶ್ರಮ ಮತ್ತು ಸಾಧನೆಯ ಮೂಲಕ ಅಷ್ಟಷ್ಟಾಗಿ ಕಲಿತುಕೊಳ್ಳುತ್ತ ಬೆಳೆಯಬೇಕಾಗುತ್ತದೆ೪. ಹೀಗಿರುವುದರಿಂದ ಇಂಥ ಕಥೆಗಾರರಲ್ಲಿ ಅನುಭವದ ಮಹತ್ವದ ದೃಷ್ಟಿಯಿಂದ ಅವರಿಗಿರುವ ಸದ್ಯದ ಮಿತಿ ಹಾಗೂ ಅಭಿವ್ಯಕ್ತಿ ಪ್ರಕ್ರಿಯೆಯಲ್ಲಿ ಭಾಷೆಯನ್ನು ದುಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆಯೂ ಅವರಿಗಿರುವ ಸದ್ಯದ ಮಿತಿ ತಕ್ಕಷ್ಟು ಪ್ರಬುದ್ಧನಾದ ಓದುಗನ ಗಮನಕ್ಕೆ ಬರಬಹುದಾದದ್ದು ಆಶ್ಚರ್ಯವಲ್ಲ. ಆದ್ದರಿಂದ ಬರೆಹಗಾರ ಅಧೀರನಾಗಬೇಕಾಗಿಯೂ ಇಲ್ಲ. ಏಕೆಂದರೆ ಸಾಚಾ ಅನುಭವ, ಪ್ರಮಾಣಿಕವಾದ ಅಭಿವ್ಯಕ್ತಿ ಪ್ರಯತ್ನ ಇದು ಆರೋಗ್ಯಕರವಾದ ಗತಿಯಲ್ಲಿ ಬರಹಗಾರನನ್ನು ನಿಯಮಿಸುತ್ತದೆ. ಅವನು ಆ ದಿಕ್ಕಿನಲ್ಲಿ ನಡೆಸುವ ಪ್ರಯತ್ನ, ಸಾಧನೆ ಅವನನ್ನು ಗುಣಾತ್ಮಕವಾಗಿ ಬೆಳೆಸುತ್ತದೆ. ಅವನ ವ್ಯಕ್ತಿತ್ವಕ್ಕೆ ಏನೆಲ್ಲವನ್ನು ಕೊಡಬಹುದಾದ ಸ್ವ ಇದೆಯೂ ಅಷ್ಟನ್ನು ಬಹುಸಮರ್ಪಕವಾಗಿ ನೀಡಬಹುದಾದ ಸಾಧ್ಯತೆಯನ್ನು ತೆರೆಯುತ್ತದೆ. ಹಾಗೆ ಕೊಟ್ಟದ್ದು ಶ್ರೇಷ್ಟ ಹೌದೊ, ಅಲ್ಲವೊ ಎನ್ನುವುದು ಆಮೇಲೆ ನಿರ್ಣಯವಾಗುವ ಅಂಶವಾದರೂ ಅವನು ಕೊಟ್ಟಷ್ಟು ಅವನದೇ ಎಂಬಂತಾಗುವುದಂತೂ ಸತ್ಯ. ಇಲ್ಲಿನ ಬರೆಹಗಳಲ್ಲಿ ಈ ಗುಣ ಖಂಡಿತವಾಗಿ ಕಾಣುತ್ತದೆ.

ಬರೆವಣಿಗೆಯ ಮೊದಲ ಹಂತದಲ್ಲಿ, ಅಂದರೆ ಅಗತ್ಯಪಕ್ವತೆ, ಪರಿಣತಿಯನ್ನು ಅನುಭವ ಮತ್ತು ಅಭಿವ್ಯಕ್ತಿಯಲ್ಲಿ ಪಡೆದುಕೊಳ್ಳುವವರೆಗೆ ಇಂಥ ಬರವಣಿಗೆಗೆ ಅಗತ್ಯವಾದ ಸಂವಾದ ನೀಡಬಹುದಾದ ಓದುಗರ ಸಮೂಹವೊಂದು ನಿರ್ಮಾಣವಾಗುವುದಿಲ್ಲ. ಏಕೆಂದರೆ, ಈಗಾಗಲೇ ಸಿದ್ಧವಾಗಿ ಪ್ರತಿಷ್ಠಿತವಾಗಿರುವ ಸಾಹಿತ್ಯದ ರೀತಿಯನ್ನು ಇವರು ವಿಧೇಯತೆಯಿಂದ ಅನುಕರಿಸುವುದಿಲ್ಲ. ಹಾಗೆಂದು ತಮ್ಮ ವಿಶಿಷ್ಟತೆ ಕಣ್ಣಿಗೆ ಹೊಡೆಯುವಷ್ಟು ಮಾಗಿ ನಿಲ್ಲುವಂತೆ ಬರೆಯುವುದೂ ಈ ಹಂತದಲ್ಲಿ ಇಂಥವರಿಗೆ ಕಷ್ಟಸಾಧ್ಯವಾದುದಾಗುತ್ತದೆ. ಆದ್ದರಿಂದ ಬಾಹ್ಯದ ಪ್ರಸಿದ್ಧಿ ಪ್ರತಿಷ್ಠೆಗಳಿಗಾಗಿ ಕಳವಳಿಸದೆ, ಕುದಿಯದೆ ತನ್ನನ್ನು ತಾನೇ ನೆಚ್ಚಿ ಆತ್ಮವಿಶ್ವಾಸದಿಂದ ಒಂದು ರೀತಿಯ ಗುಣಾತ್ಮಕ ನಿರ್ಲಿಪ್ತತೆಯಿಂದ ಇಂಥ ಬರೆಹಗಾರರು ಮಾಗುವುದಕ್ಕಾಗಿ ಕಾಯಬೇಕಾಗುತ್ತದೆ. ಹೀಗೆ ಕಾಯುವುದಕ್ಕೆ ಬೇಕಾದ ಶಕ್ತಿ ಇವರಲ್ಲಿ ಎಷ್ಟರಮಟ್ಟಿಗೆ ಇದೆಯೆನ್ನುವುದು ಸಾಹಿತ್ಯ ಕ್ಷೇತ್ರದಲ್ಲಿ ಅವರು ಕೊಡಬಹುದಾದ ಕಾಣಿಕೆಯ ಮೊತ್ತ ಮತ್ತು ಮಹತ್ವವನ್ನು ಬಹುಪಾಲು ನಿರ್ಣಯಿಸುವುದಾಗುತ್ತದೆ. ಈ ಅರಿವು ಇಲ್ಲಿನ ಕಥೆಗಾರರಲ್ಲಿದೆಯೆಂದು ಭಾವಿಸುತ್ತೇನೆ.

—-

* ಈವರೆಗೆ ನಾನು ಹೇಳಿರುವ ಮಾತುಗಳನ್ನು ಶ್ರೀ ಕೃಷ್ಣ ಆಲಹಳ್ಳಿಯವರ ಆಗುಂತಕ ಕಥೆಯನ್ನು ಹೊರತುಪಡಿಸಿ ಹೇಳಿದ್ದಾಗಿದೆ. ಅದಕ್ಕೆ ಕಾರಣ ಇದು : ಶ್ರೀ ಆಲನಹಳ್ಳಿಯವರ “ಆಗಂತುಕ” ಶ್ರೀ ಪೂರ್ಣಚಂದ್ರ ತೇಜಸ್ವಿಯವರ ‘ಲಿಂಗಬಂಧ’ ಕಥೆಯನ್ನು ಅಲ್ಪಸ್ವಲ್ಪ ಬದಲಾವಣೆ ಬಿಟ್ಟರೆ ವಿಧೇಯವಾಗಿ ಅನುಕರಿಸಿದಂತಿದೆ. ಬಾಲ ಮನಸ್ಸಿನಲ್ಲಿ ಭಯ ತುಂಬಿ ಭ್ರಾಂತಿಯ ಮಟ್ಟಕ್ಕೆ ಬೆಳೆಯುವುದೇ ಎರಡೂ ಕಥೆಗಳ ವಸ್ತು. ಅಲ್ಲಿಯ ಹುಡುಗನೂ ಕಿಟ್ಟಿ; ಇಲ್ಲಿಯವನೂ ಕಿಟ್ಟಿ. ಅಲ್ಲಿ ಉದ್ದಕ್ಕೂ ಕತ್ತಲು, ಮಳೆ, ಗಾಳಿ, ಸಿಡಿಲು, ಮಿಂಚುಗಳ ವಾತಾವರಣ; ಇಲ್ಲಿಯೂ ಅದೇ. ಅಲ್ಲಿ ಕಥೆ ಹೇಳುವುದಕ್ಕೆ ಬೆಂಕಿ ಕಾಯಿಸುವುದಕ್ಕೆ ಲಿಂಗ ಇದ್ದರೆ ಇಲ್ಲಿ ಬೊಬ್ಬರಿಸಿ ಇದ್ದಾನೆ. ಇಲ್ಲಿನ ಆಗಂತುಕ ಮೃತ್ಯು ಎನ್ನುವಲ್ಲಿನ ಧ್ವನಿರಮ್ಯತೆ ಮಾತ್ರವೇ ಮೆಚ್ಚಬಹುದಾದ ಅಂಶವಾಗಿದೆ. (ಈ ಅಂಶವೂ ಶ್ರೀ ಯಶವಂತ ಚಿತ್ತಾಲರ ‘ಪಯಣ’ ಕಥೆಯ ದೂರದ ಪ್ರತಿಫಲನ ಎನ್ನಿಸುತ್ತದೆ !) ಶ್ರೀ ಆಲನಹಳ್ಳಿಯವರು ಉತ್ತಮ ಮಟ್ಟದ ಪ್ರತಿಭಾವಂತ ಬರೆಹಗಾರರು. ಅವರ ಇತರ ಬರೆವಣಿಗೆಗಳು ಅದಕ್ಕೆ ಸಾಕ್ಷಿ ನೀಡುತ್ತವೆ. ಆದರೆ ‘ಆಗಂತುಕ’ ಕಥೆಯಲ್ಲಿ ಮಾತ್ರ ಅನುಭವ ಮತ್ತು ಅಭಿವ್ಯಕ್ತಿಯ ದೃಷ್ಟಿಯಿಂದ ಅವರ ‘ವಿಶಿಷ್ಟತೆ’ ಎನ್ನುವಂಥದೇನೂ ಕಾಣುವುದಿಲ್ಲ. ಒಂದು ರೀತಿಯ ‘ಜಾಣತನ’ ಪ್ರಕಟವಾಗಿದೆ.

* ‘ಏಳು ಕಥೆಗಳು’ ಸಂಪಾದಕ : ದೇವನೂರ ಮಹಾದೇವ – ಈ ಕಥಾಸಂಚಯಕ್ಕೆ ಬರೆದ ಮುನ್ನುಡಿ (ಅಕ್ಟೋಬರ್ ೧೯೭೦)