‘ಅದೃಶ್ಯಪಥ’ ಶ್ರೀ ಪಿ.ವಿ.ನಂಜರಾಜ ಅರಸು ಅವರ ಮೂರನೆಯ ಕಥಾ ಸಂಕಲನ. ಇದರಲ್ಲಿ ಒಟ್ಟು ಐದು ಕಥೆಗಳಿವೆ ಮತ್ತು ಮೊದಲಿನ ಕತೆಯ ಹೆಸರನ್ನೇ ಸಂಕಲನಕ್ಕೆ ಇಡಲಾಗಿದೆ. ‘ಅದೃಶ್ಯಪಥ’ ವೆಂಬ ಹೆಸರನ್ನು ಕತೆಗೆ ಇಡುವುದರಲ್ಲಿ ಹಲವನ್ನು ಸಾಧಿಸುವ ಹಂಬಲ ಕತೆಗಾರರಿಗಿದೆ. ಆದುದರಿಂದಲೇ ಆ ಹೆಸರನ್ನು ತಪ್ಪದೆ ಹಲವು ಮೈಗಳಲ್ಲಿ ತಿರುಗಿಸಿ ತಿರುಗಿಸಿ ತೋರಿಸುತ್ತಾರೆ.

ಚಂದ್ರು ಬರೆದು ಮುಗಿಸಿದ ಹೊಸ ಕಾದಂಬರಿಯ ಹೆಸರು ‘ಅದೃಶ್ಯಪಥ’. ಹಾಗೆಯೇ ಪ್ರಭಾಳಿಗೆ ಆ ಕಾದಂಬರಿಯನ್ನು ಅರ್ಪಿಸುವಲ್ಲಿನ ಶೀಲದ ರೇಖೆಯೊಳಗೆ ಬಂಧಿತವಾಗಿ, ತನ್ನ ನಿಲುವನ್ನು ತನ್ನ ಹೆಜ್ಜೆಯನ್ನು ತಾನೇ ಅರಿಯದೆ ಅದೃಶ್ಯಪಥದಲ್ಲಿ ತೊಳಲಾಡುತ್ತಿರುವ ನಿನಗೆ ಈ ಕೃತಿ ಅರ್ಪಿತ ಎಂಬ ಮಾತುಗಳ ಮೂಲಕ ಪ್ರಭಾಳ ಬದುಕೂ ಅದೃಶ್ಯಪಥದ ತೊಳಲಾಟ ಎಂಬ ಭೋದೆ ಓದುಗರಲ್ಲುಂಟಾಗುವಂತೆ ಮಾಡುವ ಹವಣಿಕೆ ಇದೆ. ಇಷ್ಟೇ ಸಾಲದೆಂಬಂತೆ ಆಕೆಯೇ ಬರದಿರುವ ‘ನಿಜ’ ನಾನು ಅದೃಶ್ಯಪಥದಲ್ಲಿ ತೊಳಲಾಡುತ್ತಿದ್ದೇನೆ. ಜಗತ್ತೇ ಅದೃಶ್ಯಪಥದ ಗೊಂದಲವಾಗಿರುವಾಗ ಯಾರು ತಾನೆ ತೊಳಲಾಡುವುದಿಲ್ಲ. ಎಲ್ಲರೂ ಒಂದು ರೀತಿ ತೊಳಲಾಡುವವರೇ, ಒಂದಲ್ಲ ಒಂದು ಅದೃಶ್ಯಪಥವನ್ನು ಅರಸುತ್ತಿರುವವೇ….. ‘ ಎಂಬ ಮಾತುಗಳ ಮೂಲಕ ಆಕೆಯಿಂದಲೂ ಒಪ್ಪಿಸಲಾಗಿದೆಯಲ್ಲದೆ ಅದರ ಜೊತೆಗೆ ಅದರ ಅರ್ಥವ್ಯಾಪ್ತಿಯನ್ನು ಎಲ್ಲರ ಬದುಕಿನವರೆಗೂ ಮುಟ್ಟಿಸಿ ಅದನ್ನು ಸಾರ್ವತ್ರಿಕವೂ, ಸಾರ್ವಕಾಲಿಕವೂ ಎನ್ನಿಸುವ ಧೋರಣೆಯೂ ಇದೆ. ಮತ್ತೆ ಪ್ರಭಾಳ ಡೈರಿಯಲ್ಲಿಯೇ, ಚಂದ್ರ ಮದುವೆಯಾಗಲಿದ್ದಾರೆ. ಬಾಳ ಸಂಗಾತಿಯ ಕೈಹಿಡಿದು ಅದೃಶ್ಯಪಥವನ್ನು ಅರಸುವರು ಇನ್ನು ಮುಂದೆ ಎಂದಿದೆ. ಇನ್ನು ಮುಂದೆ ಎಂಬ ಮಾತಿನ ಔಚಿತ್ಯವೇನೊ ಅರ್ಥವಾಗುವುದಿಲ್ಲ. ಮದುವೆಯಾದ ಮೇಲೆ ಮಾತ್ರ ಅದೃಶ್ಯಪಥದ ಅನ್ವೇಷಣೆಯೊ ತೊಳಲಾಡವೊ ಪ್ರಾರಂಭವಾಗುತ್ತದೆ ಎಂದೆ? (ಅದೃಶ್ಯಪಥವನ್ನು ಅರಸುವವರು ಎಂಬುದ ಅನೌಚಿತ್ಯ ಇನ್ನೂ ಹೆಚ್ಚಿನದಾಗಿದೆ. ಅರಸುವುದೇ ಅದೃಶ್ಯಪಥವೆಂದು ಅರ್ಥವಾಗಿಬಿಡುವುದರಿಂದ ಕಥೆಗಾರರ ದರ್ಶನದಲ್ಲಿಯೇ ಇರುವ ಅನಿಶ್ಚಿತತೆ ಸ್ಪಷ್ಟವಾಗುತ್ತದೆ.) ಹಾಗಾದರೆ ಕಲಾಸಾಫಲ್ಯದ ಪ್ರಶ್ನೆ ಏಳುವ ಮೊದಲೇ ಹೊರಪಾತಳಿಯಲ್ಲಿಯೇ ಅದರ ಉದ್ದೇಶಿತ ಸಾರ್ವತ್ರಿಕತೆ ಹಾಗೂ ಸಾರ್ವಕಾಲಿಕತೆ ಬಿರುಕು ಬಿಡುವಂತಾಗುತ್ತದೆ.

ಈ ದೋಷಕ್ಕೆ ಕಾರಣವಾದ ದೊಡ್ಡ ದೋಷ ಅದರ ಮೂಲದಲ್ಲಿಯೇ ಇದ. ಈ ಮೇಲೆ ಉದ್ಧರಿಸಿದ ಕೊನೆಯ ಎರಡು ಉದ್ಧರಣೆಗಳು ಪ್ರಭಾಳ ಡೈರಿಯಲ್ಲಿರುವ ಮಾತುಗಳು. ಈ ಡೈರಿಯನ್ನು ಯಾರಿಂದಲೂ ಓದಿಸದೆ ಬಿಟ್ಟಿದ್ದರೇ ಕತೆಗಾರ ಸಾಧಿಸಿರುವುದಕ್ಕಿಂತ ಹೆಚ್ಚಿನದನ್ನು ಸಾಧಿಸಬಹುದಾಗಿತ್ತು. ಮೊದಲನೆಯದಾಗಿ ಆ ಡೈರಿಯನ್ನು ಪ್ರಭಾಳ ಗಂಡ ರಾವ್ ಓದಿದ್ದಾರೆ. ಅವರೇ ಅದರಲ್ಲಿ ಚಂದ್ರುವಿಗೆ ‘ರೆಫರೆನ್ಸ್’ ಇದೆ, ಎಂದು ಅವನಿಗೆ ಕೊಡುತ್ತಾರೆ. ಆ ಡೈರಿಯಲ್ಲಿ ನನಗೇನೊ ದಾಸಿಯಾಗಿರುವುದು ಇಷ್ಟವಿಲ್ಲ. ಆದರೂ ದಾಸಿಯಾಗಿದ್ದೇನೆ. ದಾಸಿಯಾಗಿರಲು ಒಪ್ಪಿಕೊಂಡಿದ್ದೇನೆ. ಒಮ್ಮೆ ಒಪ್ಪಿಕೊಂಡ ನಂತರ ಅದಕ್ಕೆ ವಿರುದ್ಧವಾಗಿ ನಡೆಯಬಾರದು ಎಂಬ ವಾಕ್ಯವಿದೆ. ಹಾಗೆಯೇ ನನ್ನಂತಹ ಕೋಟ್ಯಂತರ ಜೀವಿಗಳಿರುವಾಗ, ಮುಖಮುಚ್ಚಿ ಅನುಭವಿಸುತ್ತಿರುವಾಗ ನಾನೊಬ್ಬಳೇ ಏಕೆ ಪ್ರತಿಭಟಿಸಬೇಕು? ಎಂಬ ವಾಕ್ಯವೂ ಇದೆ. ಯಾವ ಗಂಡನೇ ಆದರೂ ತನ್ನ ಹೆಂಡತಿ ಎನಿಸಿಕೊಂಡಿದ್ದವಳು ಈ ರೀತಿ ಬರದಿರುವ ಡೈರಿಯನ್ನು ಪರಿಚಿತನಾದರೂ ಚಂದ್ರುವಿನಂಥ ಹೊರಗಿನವನಿಗೆ ಕೊಡುತ್ತಾನೆ, ಎನ್ನುವುದು ಸಹಜ ಎನ್ನಿಸುವುದಿಲ್ಲ. ಇನ್ನೊಂದು ಸ್ವಾರಸ್ಯವೆಂದರೆ ಕತೆಗಾರರಿಗೆ ಬೇಕೆನಿಸಿದ್ದನ್ನೇ ಗಾಳಿ ಡೈರಿಯಿಂದ ತೆರೆದು ತೋರಿಸುವುದು. ಡೈರಿಯನ್ನು ರಾವ್ ಮತ್ತು ರಜನಿಯರಿಂದ ಓದಿಸುವುದೂ, ಗಾಳಿ ಅನುಕೂಲ ಪಾತ್ರ ವಹಿಸುವುದೂ ವಸ್ತುವಿನ ಅಸಹಜತೆಯನ್ನು ತೋರಿಸುವುದಲ್ಲದೆ ಸಹಜತೆಯ ನೆಲೆಯಲ್ಲಿ ಅನುಭವವನ್ನು ಎದುರಿಸಲಾಗದ ಕತೆಗಾರನ ಸೋಲನ್ನು ಅದು ಸಾರುತ್ತದೆ. (ಇಂಥದೇ ಗಾಳಿಯ ಪ್ರಕರಣ ‘ಆರಿದ ಜ್ವಾಲೆ’ ಯಲ್ಲಿ ಡಾಕ್ಟರ್ ದಯಾಳ ಭೂತಕಾಲ ಆಕೆ ಪದ್ಮಾ ಆಗಿದ್ದಾಗಿನ ಕಾಲವನ್ನು ನಮ್ಮೆದುರಿಗೆ ಅದೇ ತಂದು ನಿಲ್ಲಿಸುತ್ತದೆ. ಆ ಭೂತವೇ ಅವಳ ವರ್ತಮಾನದ ಗೊಂದಲ, ಹೋರಾಟಗಳಿಗೆ ಅರ್ಥವನ್ನು ತಂದುಕೊಡುವುದಾಗಿದೆ. ಹೀಗೆ ಕತೆಯ ಆಧಾರಸ್ತಂಭದಂತಿರುವ ವಸ್ತುವನ್ನೇ ಗಾಳಿಯ ‘ಆಚಾನಕ್-ಚಾಲಕ್’ನ ಕೃಪೆಗೆ ಒಪ್ಪಿಸುವ ತಂತ್ರ ಅಸಹಜವೆನ್ನಿಸುವುದಷ್ಟೇ ಅಲ್ಲ ದೌರ್ಬಲ್ಯಜನ್ಯ ಅನಿಸುತ್ತದೆ. ಆದುದರಿಂದಲೇ ‘ಆರಿದ ಜ್ವಾಲೆ’ ಕಲಾ ದೃಷ್ಟಿಯಿಂದ ತೀರಾ ಸೋತುಹೋಗಿದೆ.)

ರಾವ್ ಮತ್ತು ರಜನಿಯರಿಂದ ಡೈರಿಯನ್ನೋದಿಸಿದ್ದು ಇನ್ನೊಂದು ದೃಷ್ಟಿಯಿಂದಲೂ ಫಲಕಾರಿಯಾಗಿಲ್ಲ. ಚಂದ್ರ ಹೊಸದಾಗಿ ಬರೆದ ಕಾದಂಬರಿ ‘ಅದೃಶ್ಯಪಥ’. ಅದರಲ್ಲೇನಿದೆ, ಅದರ ವಸ್ತುವೇನು? ನಮಗೆ ಗೊತ್ತಿಲ್ಲ. ಅದು ಮೌನದಲ್ಲಿ ಮುಳುಗಿದೆ. ಚಂದ್ರುವೊಬ್ಬನಿಗೇ ಅದರಲ್ಲೇನಿದೆ ಎಂಬುದು ಗೊತ್ತು. ಹಾಗೆಯೇ ಪ್ರಭಾಳ ಬದುಕೂ ಒಂದು ಅದೃಶ್ಯಪಥದ ತೊಳಲಾಟ. ಅವಳೇ ಹೇಳುವಂತೆ ಅದು ಬೇರೆಯವರಿಗೆ ಅರ್ಥವಾಗುವುಂಥದಲ್ಲ. ಆದುದರಿಂದ ಚಂದ್ರುವಿನ ಕಾದಂಬರಿಯಂತೆ ಪ್ರಭಾಳ ಡೈರಿಯೂ ಮೌನದಲ್ಲೇ ಇರುವಂತಾದರೆ ಅದೂ ಅದೃಶ್ಯಪಥವೇ ಆಗುಳಿದು ಆ ಮೌನ ಕತೆಗಾರರ ಉದ್ದೇಶವನ್ನು ವ್ಯಂಜಿಸುವುದರಲ್ಲಿ ಇನ್ನೂ ಹೆಚ್ಚಿನ ಸಫಲತೆಯನ್ನು ಮೆರೆಯಬಹುದಾಗಿತ್ತು. ಗಾಳಿಯ ಪ್ರವೇಶದಿಂದ ಉಂಟಾದ ಬಂಧಶೈಥಿಲ್ಯವನ್ನೂ ತಡೆಯಬಹುದಾಗಿತ್ತು.

ಇಷ್ಟಾದರೂ ಕಲಾದೃಷ್ಟಿಯಿಂದಲೇ ಮೆಚ್ಚಿಕೊಳ್ಳಬೇಕಾದ ಅಂಶಗಳೂ ಈ ಕತೆಯಲ್ಲಿವೆ. ಪ್ರಭಾ ಕ್ಷಯರೋಗಗ್ರಸ್ತಳಾಗಿ ಕೊನೆಯಲ್ಲಿ ಅದರಿಂದಲೇ ಸಾಯುವುದು, ಅವಳ ಅಂತರಂಗ ಹಾಗೂ ಒಟ್ಟು ವ್ಯಕ್ತಿತ್ವದ ಕ್ಷಯವನ್ನು ಧ್ವನಿಸುವ ಪ್ರತೀಕವಾಗಿ ಅದು ಬಂದಿದೆ. ಕತೆಯ ಪ್ರಾರಂಭದಲ್ಲಿಯೇನಾವು ಆಕೆಯ ಅಸ್ವಸ್ಥತೆಯನ್ನು ಕಾಣುತ್ತೇವೆ. ಅದು ಕ್ರಮೇಣ ತೀವ್ರವಾಗುತ್ತಿರುವುದನ್ನೂ ಕಾಣುತ್ತೇವೆ. ಈ ಅಸ್ವಸ್ಥತೆಯೇ ಕ್ಷಯವೇ ವ್ಯಾಪಿಸಿ ಅವಳನ್ನು ಸಂಪೂರ್ಣವಾಗಿ ಬಲಿ ತೆಗೆದುಕೊಂಡಿತೆನ್ನುವುದು ಅವಳ ಸಾವಿನ ಸೂಚನೆಯಲ್ಲಿ ಸಮರ್ಥವಾಗಿ ಧ್ವನಿ ಪಡೆದಿದೆ. ಎರಡನೆಯದಾಗಿ, ಉಳಿದೆಲ್ಲ ಐಶ್ವರ್ಯ, ಸಂಪತ್ತು ಇದದರೂ ರಿರ್ಟೈಡ್ ಆಗಲು ಒಂದೂವರೆ ವರ್ಷ ಉಳಿದಿರುವ ವಯಸ್ಸಿನ ಮುದುಕ ಗಂಡನ ಜೊತೆಯ ಸಂಸಾರದಿಂದ ತೃಪ್ತಿಗೊಳ್ಳದೇ ಇರುವ ಎಳೆಯವಳಾದ ಅವಳ ಕಾಮನೆಗಳಿಗೂ, ನೈತಿಕ ಹಾಗೂ ಧಾರ್ಮಿಕ ಅರಿವಿನಿಂದ ಉಂಟಾದ ಅವಳ ಕರ್ತವ್ಯಪ್ರಜ್ಞೆಗೂ ನಡೆಯುವ ಅವ್ಯಾಹತ ದ್ವಂದ್ವದಲ್ಲಿ ಸಿಕ್ಕಿ ಬಿಡಿಸಿಕೊಳ್ಳಲಾರದೆ ಆಕೆ ನರಳುತ್ತಿರುವುದಕ್ಕೂ ‘ಬಳುಕುವ ಹುಡುಗಿ’ ಆಕೆಯ ಹರೆಯ, ಕಾಮನೆಗಳಿಗೆ ಸಂಕೇತವಾಗಿದ್ದರೆ, ಪಂಜರದಲ್ಲಿ ‘ನರಳುವ ಗಿಣಿ’ ಕರ್ತವ್ಯಪ್ರಜ್ಞೆಯಿಂದ ಬಂಧಮುಕ್ತವಾಗಿ ಬೇಕೆನಿಸಿದಂತೆ ವಿಹರಿಸಲಾಗದೆ ನರಳುತ್ತಿರುವ ಆಕೆಯ ಆತ್ಮಕ್ಕೆ ಸಮರ್ಥ ಸಂಕೇತವಾಗಿದೆ.ಹರೆಯದ ಕಾಮನೆ ನರ್ತಿಸಿದಾಗ ಆಕೆಯ ಆತ್ಮ ನರಳುತ್ತದೆ. ಈ ಪ್ರತಿಮೆಗಳ ಸಾಮರ್ಥ್ಯವೇನೊ ಅದ್ಭುತವಾಗಿದೆ. ‘ಬಳುಕುವ ಹುಡುಗಿ’ ಗೊಂಬೆ ಬಿರುಕು ಬಿಡುವುದೂ ಅದೆನ್ನು ಹೊಂದಿಸಲು ಪ್ರಭಾ ಯೋಚಿಸುವುದೂ, ಕೊನೆಗೂ ಹೊಂದಿಸಲಾರದೆ ಉಳಿದುದು – ಎಲ್ಲಾ ಒಂದು ಧ್ವನಿಪರಂಪರೆಯನ್ನೇ ಹುಟ್ಟಿಸುವ ಸಾಮರ್ಥ್ಯದಿಂದ ಕೂಡಿವೆ. ಆದರೆ, ತಾವು ಸೃಷ್ಟಿಸಿದ ಸಂಕೇತಕ್ಕೆ ತಾವೇ ಬೆರಗಾಗಿ ಕತೆಗಾರರು ಅದರ ಕಾವು ಆರುವವರೆಗೂ ಎಳೆದುಬಿಟ್ಟಿರುವುದರಿಂದ ಪರಿಣಾಮದ ತೀವ್ರತೆ ಎಷ್ಟು ಆಗಬಹುದಾಗಿತ್ತೊ ಅಷ್ಟು ಆಗುವುದಿಲ್ಲ. ಹೀಗೆ ತಾನೇ ಹಾಕಿದ ಮರಿಯನ್ನು ತಾನೇ ನುಂಗುವ ರೀತಿಯನ್ನು ಅವರ ಕಥೆಗಳಲ್ಲಿ ಅಲ್ಲಲ್ಲಿ ಗುರುತಿಸಬಹುದಾಗಿದೆ. ‘ಅದೃಶ್ಯಪಥ’ ನಲ್ವತ್ತಾರು ಪುಟಗಳಷ್ಟು ದೀರ್ಘ ಕಥೆಯಾದರೆ ಕೊನೆಯ ಕಥೆಯಾದ ‘ಮಂಜು’ ಅರವತ್ನಾಲ್ಕು ಪುಟಗಳಷ್ಟು ಹರಡಿಕೊಂಡಿದೆ. ಎರಡು ಕತೆಗಳಲ್ಲಿಯೂ ಆ ದೀರ್ಘತೆ ಅನಿವಾರ್ಯ ಎನ್ನಿಸುವುದಿಲ್ಲ. ‘ಅದೃಶ್ಯಪಥ’ ದ ಡೈರಿಯ ಸನ್ನಿವೇಶದ ಅನೌಚಿತ್ಯ ವಿವರದ ಕುರಿತು ಈ ಮೊದಲೇ ತಿಳಿಸಿ ಆಗಿದೆ. ಹಾಗೆಯೇ ಪ್ರಾರಂಭದಲ್ಲಿ ಬರುವ ‘ಒಂದು ದೃಶ್ಯ’ ಇಲ್ಲದಿದ್ದರೆ ಕತೆಗೆ ಯಾವ ನಷ್ಟವೂ ಆಗುತ್ತಿರಲಿಲ್ಲ. ಅದು ಕತೆಯಲ್ಲಿ ಕರಗಿಹೋಗದೆ ಪ್ರತ್ಯೇಕವಾಗಿಯೇ ಉಳಿದುಬಿಡುತ್ತದೆ.ಮುಸ್ಲಿಂ ಬಾಲಿಕೆ ರೋಷನಾಳ ಪ್ರವೇಶದ ಗತಿಯೂ ಇದೇ ಆಗಿದೆ. ‘ಮಂಜು’ ಕತೆಯಲ್ಲಿಯಂತೂ ವಸ್ತು ತೀರಾ ಬಡಕಲಾಗಿರುವುದರಿಂದ ಆ ದೀರ್ಘತೆಯನ್ನು ಹೇರಿಕೊಳ್ಳುವ ಜಂಘಾಬಲವೇ ಅದಕ್ಕಿಲ್ಲ. ವಸ್ತುವಿನ ಸಾಮಾನ್ಯತೆಗೆ ಅದನ್ನು ಅನುಭವಿಸುವ, ಅದಕ್ಕೆ ಪ್ರತಿಕ್ರಿಯೆ ತೋರಿಸುವ ವ್ಯಕ್ತಿಗಳ ಭಾವನೆಯ ಗಟ್ಟಿತನಕ ತೀವ್ರತೆಯನ್ನೂ ತಂದುಕೊಡಬಹುದಾದದ್ದು ಅಸಂಭವವೇನಲ್ಲ. (ಶ್ರೀ ಲಂಕೇಶರ ‘ನಿವೃತ್ತರು’ ಎನ್ನುವ ಕತೆಯನ್ನು ಈ ಸಂದರ್ಭದಲ್ಲಿ ನೆನಪಿಗೆ ತಂದುಕೊಳ್ಳಬಹುದು.) ಆದರೆ, ‘ಮಂಜು’ ಕತೆಯ ಉಷಾ, ಉಮಾಕಾಂತರಿಗೆ ಬದುಕನ್ನು, ಬದುಕಿನ ಸಮಸ್ಯೆಗಳನ್ನು ಗಂಭೀರವಾಗಿ ಅನುಭವಿಸುವ, ಆಲೋಚಿಸುವ, ಬೆಲೆಕಟ್ಟುವ ಸಾಮರ್ಥ್ಯವಾಗಲಿ, ಅದಿಲ್ಲದಿದ್ದರೆ ಆ ಕುರಿತ ಪ್ರಜ್ಞಾಪೂರ್ವಕವಾದ ಹೋರಾಟವಾಗಲಿ ಇಲ್ಲದಿರುವುದರಿಂದ ಅವರ ಬದುಕಿನ ನಲವೆಂತೊ ನೋವೂ ಅರ್ಥವಿಲ್ಲದ್ದಾಗಿಬಿಡುತ್ತದೆ. ಆದುದರಿಂದಲೇ ಈ ಕತೆಯ ದುರಂತಕ್ಕೆ ‘ಅದೃಶ್ಯಪಥ’ ದ ದುರಂತದಷ್ಟೂ ಕಾವು ಇಲ್ಲವಾಗಿದೆ. ‘ಅದೃಶ್ಯಪಥ’ ದ ವಸ್ತುವಿನ ನಿರ್ವಹಣೆಯ ಕುರಿತಾದ ಸೋಲು ಏನೇ ಇದ್ದರೂ ಅದರ ಕೇಂದ್ರವ್ಯಕ್ತಿಯಾದ ಪ್ರಭಾ ದುರಂತದ ವೃತ್ತದಲ್ಲಿ, ಅದರ ನಿರಂತರ ಪ್ರಜ್ಞೆಯಲ್ಲಿ ಪ್ರತಿ ನಿಮಿಷವನ್ನೂ ಬದುಕುತ್ತಿದ್ದಾಳೆ. ಅಲ್ಲಿ ಅವಳಂಥವಳಿಗೆ ದುರಂತ ಅನಿವಾರ್ಯವೇ ಎನಿಸುತ್ತದೆ. ಆದರೆ, ‘ಮಂಜು’ ಕತೆಯ ಉಷಾಳಿಗಾಗಲಿ ಉಮಾಕಾಂತನಿಗಾಗಲಿ ಸಂಭವಿಸಬಹುದಾದ ದುರಂತವಾಗಲಿ ಸುಖಾಂತವಾಗಲಿ ಅನಿವಾರ್ಯ ಎಂದೆನಿಸುವಂತೆಯೇ ಇಲ್ಲ. ಅವರ ಬದುಕಿನಲ್ಲಿ ಯಾವಾಗ ಬೇಕಾದರೂ ಏನು ಬೇಕಾದರೂ ಸಂಭವಿಸಬಹುದು. ಅವರೂ ಅದನ್ನು ತಮ್ಮ ಲಹರಿಗನುಗುಣವಾಗಿ ಹೊ‌ತ್ತಿಗೊಂದು ರೀತಿ ಅನುಭವಿಸಬಲ್ಲರು. ಉದಾಹರಣೆಗೆ ಒಂದು ಸನ್ನಿವೇಶ ನೋಡಬಹುದು :

ಉಷಾ-ಉಮಾಕಾಂತರ ಮಧ್ಯೆ ಬೆಳೆದ ಮನಸ್ತಾಪ -ಅದೂ ಅಂಥ ಜಟಿಲವಾದ, ಗಂಭೀರವಾದ ಕಾರಣದಿಂದ ಉಂಟಾದುದೇನಲ್ಲ – ಆಕೆ ಡೈವೋರ್ಸ್ ಬಯಸುವವರೆಗೆ ಆಕೆಯನ್ನು ಮುಟ್ಟಿಸಿತ್ತು. ಕೋರ್ಟಿನ ಮೆಟ್ಟಿಲು ಹತ್ತಿಯೂ ಅಗಿತ್ತು. ಆದರೆ ಏನೋ ಅನಿಸಿ ಕೊನೆಯ ಗಳಿಗೆಯಲ್ಲಿ ಡೈವೋರ್ಸ್ ಬೇಡ ಎಂದು ಆಕೆ ತಿರುಗಿ ಎದ್ದು ಬಂದಿದ್ದಳು. ಆನಂತರದ ದಿನಗಳಲ್ಲಿ ಉಷಾ-ಉಮಾಕಾಂತರ ನಡುವೆ ನೇರ ವ್ಯವಹಾರ ನಿಂತರೂ ಅವರ ಪಾಪದ ಮಗು ಅಶೋಕ ಇಬ್ಬರನ್ನೂ ಹೇಗೆ ಹೇಗೊ ಹತ್ತಿರಕ್ಕೆ ತರುವ ಕೊಂಡಿಯಂತಾಗಿದ್ದಾನೆ. ಈ ಸಲದ ಆತನ ಹುಟ್ಟು ಹಬ್ಬದ ದಿನ ಉಷಾ-ತಾನು-ಉಮಾಕಾಂತ ಮೂವರೂ ಜೊತೆಯಲ್ಲಿಯೇ ಪೋಟೋ ತೆಗೆಯಿಸಿಕೊಳ್ಳಲು ಸ್ಟೂಡಿಯೋಕ್ಕೆ ಹೋಗಬೇಕೆಂದು ಆತ ಚಂಡಿ ಹಿಡಿದಿದ್ದಾನೆ. ಅದನ್ನು ಉಮಾಕಾಂತನಿಗೆ ನಿವೇದಿಸಿ ಅವನನ್ನು ಕರೆದೊಯ್ಯುವ ಉದ್ದೇಶದಿಂದಲೇ ಉಷಾ ಉಮಾಕಾಂತನ ಹೋಟೆಲ್ ರೂಮಿಗೆ ಬಂದಿದ್ದಾಳೆ. ಆ ಸನ್ನಿವೇಶ ಸಂಭಾಷಣೆಯ ಈ ಭಾಗವನ್ನು ಗಮನಿಸಿ.

“ಆಗಬಾರದಿತ್ತು, ಆಗಿ ಹೋಯಿತು. ಅದನ್ನು ಮರೆತುಬಿಡಿ. ಫಾರ್ ಹೆವನ್ಸ್ ಸೇಕ್, ಅದನ್ನಿನ್ನು ಮತ್ತೆ ಕೆದಕಬೇಡಿ. ನಮ್ಮಿಬ್ಬರ ಭಾಗ್ಯದಲ್ಲಿಲ್ಲವೆಂದು ಕಾಣುತ್ತೆ – ನಾವು ಸುಖವಾಗಿರುವುದು. ಹೀಗೇ ಇದ್ದುಬಿಡೋಣ. ಒಮ್ಮೆ ಒಡೆದುದನ್ನು ಮತ್ತೆ ಕೂಡಿಸಲಾಗದು. ಪ್ಲೀಸ್, ಪ್ಲೀಸ್ :

ಅಂದಿನ ರೂಕ್ಷತೆ ಎಲ್ಲಿ? ಇಂದಿನ ದೈನ್ಯತೆ ಎಲ್ಲಿ? ಅಂದಿನ ಅಧಿಕಾರ ದರ್ಪವೆಲ್ಲಿ? ಇಂದಿನ ಯಾಚನೆ ಎಲ್ಲಿ?

ಉಮಾಕಾಂತ ಬೆಚ್ಚಿದ. ಕೈಯಲ್ಲಿ ಮುಖಮುಚ್ಚಿಕೊಂಡು ಅಳುತ್ತಿದ್ದಳು ಉಷಾ. ಅಳುತ್ತಲೇ ಹೇಳುತ್ತಿದ್ದಳು :

“ಡೈವೋರ್ಸ್ ಮಾಡಿಕೊಂಡರೆ ನಾನು ಸತ್ತಂತೇ…. ಸೊಸೈಟಿಯಲ್ಲಿ ನಾನು ತಲೆ ಎತ್ತಿಕೊಂಡಿರುವಂತಿಲ್ಲ, ಪ್ರೆಸ್ಟೀಜ್ ಕಳೆದುಕೊಂಡಮೇಲೆ ಬದುಕಿರುವುದು ಹೇಗೆ…”

ಇಷ್ಟೇ ಅಲ್ಲ ಕಾರಣ, ಇನ್ನೂ ಏನೋ ಇದೆ, ಏನೋ ಇದೆ, ಇನ್ನೂ ಏನನ್ನೋ ಹೇಳಬೇಕು ಅನಿಸಿತು ಅವಳಿಗೆ. ಆದರೆ ಏನು ಅದು? ಏನು? ಏನು?

“ಅದಕ್ಕೆ ಈ ಸತ್ತ ಬದುಕೇ?”

” ಪ್ಲೀಸ್, ಪ್ಲೀಸ್, ದಯವಿಟ್ಟು ಈ ವಿಚಾರ ತೆಗಿಬೇಡಿ. ನನ್ನ ಕರುಳು ಕುಯ್ಯುತ್ತೆ. ನಾನು ಸಹಿಸಿಕೊಳ್ಳಲಾರೆ. ಪ್ಲೀಸ್, ಪ್ಲೀಸ್ :”

(ಪು.೧೪೩-೧೪೪)

-ಈ ಮೊದಲೇ “ನೀವು ನಾಳೆ ಖಂಡಿತಾ ಬರಬೇಕು, ಇಲ್ಲದಿದ್ದರೆ ಅವನು ತುಂಬಾ ಅಳ್ತಾನೆ” (ಪು ೧೪೩) ಎಂಬ ಒಂದು ರೀತಿಯ ಅಧಿಕಾರವಾಣಿಯಿಂದಲೇ ಉಷಾ ಉಮಾಕಾಂತನಿಗೆ ಆಮಂತ್ರಣವಿತ್ತಿದ್ದರೆ ಈ ಮೇಲೆ ಉದಾಹರಿಸಿದ ಸನ್ನಿವೇಶ, – ಸಂಭಾಷಣೆಗಳ ಆನಂತರ ಮೂವರೂ ಜೊತೆಯಲ್ಲಿಯೇ ಕಾರಿನಲ್ಲಿ ಕುಳಿತು ‘ಷಾಪಿಂಗ್’ಗೆ ಹೋಗಿದ್ದಲ್ಲದೆ ಉಮಾಕಾಂತ ಅಶೋಕನಿಗೆ ಆಟಿಕೆ ಕೊಡಿಸಿದಂತೆ ಸ್ವೆಟರ್ ಹೆಣೆಯಲೆಂದು ಉಷಾಳಿಗೆ ‘ಮಾಡೆಲ್ಲಾ ಉಲ್ಲನ್’ ದಾರವನ್ನು ಕೊಡಿಸುತ್ತಾನೆ. ಆದರೆ ಮಾರನೆಯ ದಿನವೇ ಮೊದಲಿನ ದಿನ ನಡೆದುದಕ್ಕೆ ಏನೂ ಅರ್ಥವಿಲ್ಲವೇನೊ ಎಂಬಂತೆ ಇನ್ನು ತಿರುಗಿ ಒಂದಾಗುವ ಸಾಧ್ಯತೆಯೇ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದಂತಾಗಿ ಕತೆ ದುರಂತದಲ್ಲಿ ಕೊನೆಗೊಳ್ಳುವಂತಾದುದು ವಿಚಿತ್ರವಾಗಿದೆ. ಒಟ್ಟಿನಲ್ಲಿ ಅವರ ದುರಂತಕ್ಕೆ ಕಾರಣವಾದ ಮೂಲ ಸಮಸ್ಯೆಯಿಂದ ಹಿಡಿದು ಅವರ ಎಲ್ಲಾ ವ್ಯವಹಾರಗಳಿಗೂ – ಅವರ ಅಳುವಿಗೆ, ನಗುವಿಗೆ, ಪ್ರೇಮಕ್ಕೆ, ‘ಪ್ರೆಸ್ಟೀಜ್’ ಇತ್ಯಾದಿಗಳಿಗೆ -ಯಾವ ಗಂಭೀರವಾದ ಅರ್ಥವೂ ಇರುವಂತೆನಿಸುವುದಿಲ್ಲ.

‘ಆ ಕಣ್ಣುಗಳು’, ‘ಬಲಿಯದ ಬಿಸಿಲು’, ‘ಆರಿದ ಜ್ವಾಲೆ’ – ಈ ಕತೆಗಳೂ ಸಾಮಾನ್ಯವಾದವುಗಳಾಗಿವೆ. ‘ಆ ಕಣ್ಣುಗಳು’, ‘ಬಲಿಯದ ಬಿಸಿಲು’ – ಕತೆಗಳು ಬೆಳೆದು ಮನಸ್ಸಿನ ಓದುಗರಿಗೆ ತಟ್ಟುವುದೇ ಇಲ್ಲ. ಕಾರಣ, ಅನುಭವದ ಪಕ್ವತೆಯಲ್ಲಿ ಸಿದ್ಧಿಸುವ ಅರ್ಥವಾವುದೂ ಅವುಗಳಲ್ಲಿಲ್ಲ. ಕೊನೆಗೆ ಸಾಮಾನ್ಯ ಓದುಗರಿಗೇ ಆದರೂ ಅವರ ಕುತೂಹಲವನ್ನು ಕೆರಳಿಸುವ, ಭಾವನೆಯನ್ನು ಕಿಡಿಯೇಳಿಸುವ ಶಕ್ತಿಯೂ ಅವುಗಳಲ್ಲಿಲ್ಲವಾಗಿದೆ. ಹೀಗಾಗಿ ಈ ಕತೆಗಳು ‘ಅಲ್ಲಿಯೂ ಸಲ್ಲದೆ ಇಲ್ಲಿಯೂ ಸಲ್ಲದೆ’ ಅನಾಥವಾಗಿ ನಿಲ್ಲುತ್ತವೆ. ”ಆರಿದ ಜ್ವಾಲೆ’ ಯ ಕುರಿತು ಈ ಮೊದಲೇ ಪ್ರಸ್ತಾಪಿಸಿ ಆಗಿದೆ. ಈ ಕತೆಯ ಕುರಿತು ಅನ್ನಿಸುವ ಇನ್ನೊಂದು ಅಂಶ – ಅದನ್ನು ಓದುತ್ತಿರುವಾಗ ಶ್ರೀ ಯು.ಆರ್. ಅನಂತಮೂರ್ತಿಯವರ ‘ಹುಲಿಯ ಹೆಂಗರುಳು’ ಕತೆಯ ನೆನಪಾಗಿಬಿಡುತ್ತದೆ, ಎಂಬುದು ಅದಕ್ಕೆ ಕಾರಣ, ಮೊದಲನೆಯದಾಗಿ ಎರಡೂ ಕತೆಗಳಲ್ಲಿ ದ್ವೇಷ, ಮಾತ್ಸರ್ಯ, ಸೇಡಿನ ಭಾವನೆಗಳು – ಬೇರೆ ಬೇರೆ ಉಡುಪು ಧರಿಸಿ ಬಂದರೂ ಅವುಗಳ ಸ್ಥಾಯೀ ಒಂದೇ ಆಗಿರುವುದಲ್ಲದೆ ಅವು ಕೊನೆಗೊಳ್ಳುವ ರೀತಿಯಲ್ಲಿಯೂ ಹೆಚ್ಚು ಕಡಿಮೇ ಸಾಮ್ಯತೆಯಿದೆ. ಎರಡನೆಯದಾಗಿ, ಈ ಕತೆಯಲ್ಲಿ ಬರುವ ಕೆಲವು ವಾಕ್ಯಗಳು, (ಉದಾಹರಣೆಗೆ “…….ಇದೇನಿದು ಅಮ್ಮನ ನೆನಪು…. ಅಮ್ಮ, ಕಣ್ಣಲ್ಲೆ ಕಂಬನಿ….” ಅಮ್ಮಾ ನನ್ನಾಣೇ-ನೀ ಕಂಬನಿಯಿಡಬೇಡ. ನಾ ನೋಡಲಾರೆ, (ಪುಟ ೮೬-೮೭) ಮತ್ತು. “God is in the midst of her ; she shall not be moved” (ಪುಟ-೮೮) ಆ ಕತೆಯಲ್ಲಿ ಬರುವ ವಾಕ್ಯಗಳ ನೆನಪು ಮಾಡಿಕೊಡುತ್ತವೆ. ಆದರೆ, ಎರಡೂ ಕತೆಗಳು ಮನಸ್ಸಿನ ಮೇಲೆ ಬೀರುವ ಪರಿಣಾಮದಲ್ಲಿ, ಒತ್ತುವ ಮುದ್ರೆಯಲ್ಲಿ ದೊಡ್ಡ ವ್ಯತ್ಯಾಸ ಇರುವುದರ ಅನುಭವ ನಮಗಾಗುತ್ತದೆ. “ಹುಲಿಯ ಹೆಂಗರುಳು” ಹವಣಿಸಿಕೊಂಡ ಸಮರ್ಥ ಹಿನ್ನೆಲೆ, ಉದ್ದಕ್ಕೂ ಓದುಗರನ್ನು ಉದ್ದೇಶಿತ ಪರಿಣಾಮಕ್ಕೆ ಸಿದ್ಧಗೊಳಿಸಿಕೊಳ್ಳುವ ರೀತಿ, ಮಾತು ಎಲ್ಲಿಯೂ ಪೋಲಾಗದಂತೆ ವಹಿಸಿದ ಎಚ್ಚರ, ಅನುಭವ ಕ್ರಮ ಕ್ರಮವಾಗಿ ಘನೀಭವಿಸುತ್ತಿರುವ ಅನುಭವವನ್ನು ಓದುಗರಲ್ಲುಂಟು ಮಾಡುತ್ತದೆ. ‘ಆರಿದ ಜ್ವಾಲೆ’ಯಲ್ಲಿ ತಂತ್ರ, ತನ್ನನ್ನೇ ತಾನು ಹೇರಿಕೊಳ್ಳಲಾರದೆ ತರಹರಿಸುತ್ತಿರುವ ಹಿನ್ನೆಲೆ ತುಂಬಾ ಸರಳವಾದ, ಸಾಮಾನ್ಯವಾದ ಪರಿಣಾಮವನ್ನುಂಟು ಮಾಡುವುದರಲ್ಲಿ ಪರ್ಯಾವಸಾನವಾಗುತ್ತದೆ.

ಒಟ್ಟಿನಲ್ಲಿ, ಬದುಕಿನಿಂದ ಪಡೆಯಬಹುದಾದ ಅನುಭವಗಳನ್ನು ವೈಯಕ್ತಿಕ ರಾಗ-=ದ್ವೇಷಗಳಿಂದ ಬಿಡಿಸಿಕೊಂಡು ಕೇವಲ ವಸ್ತುನಿಷ್ಠ ದೃಷ್ಟಿಯಿಂದ ಪರಿಭಾವಿಸುವ, ಶೋದಿಸುವ, ಬೆಲೆಕಟ್ಟುವ ಸಂಯಮವನ್ನು, ಸತ್ವವನ್ನು ಶ್ರೀ ಅರಸರು ರೂಢಿಸಿಕೊಂಡಿದ್ದಾರೆ, ಇಲ್ಲವೆ ಆ ಕುರಿತಾಗಿ ಪ್ರಾಮಾಣಿಕವಾದ ಪ್ರಯತ್ನವನ್ನೋ ತೀವ್ರವಾದ ಹೋರಾಟವನ್ನೊ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಇದುವರೆಗಿನ ಅವರ ಯಾವೊಂದು ಕತೆಯೂ ಸಾಕ್ಷಿ ನುಡಿಯುವುದಿಲ್ಲ. ಇದು ಸಿದ್ಧವಾಗದಿದ್ದಾಗ “ಹಸುರು ನಿಶಾನೆ”ಯಲ್ಲಿ “ಎಲ್ಲ ನೇಮಗಳನ್ನೂ ಮುರಿದು ಕನ್ನಡದ ಆಧುನಿಕ ಕತೆಗಾರ-ಊಹೂಂ, ಆಧುನಿಕ ಕನ್ನಡದ ನವ್ಯ ಕತೆಗಾರ-ಅಣಿಗೊಳಿಸಿದ ರಸಾಯನ, ರುಚಿಕರ”ಮತ್ತು “ಹತ್ತೇ ವರ್ಷಗಳ ಕೃಷಿ ಪ್ರಥಮ ಶ್ರೇಣಿಗೆ ನಂಜರಾಜರನ್ನು ತಂದು ನಿಲ್ಲಿಸಿದೆ” -ಎಂಬ ಮಾತುಗಳನ್ನು ಶ್ರೀ ನಿರಂಜನರು ಹೇಳಿರುವುದು ಒಂದೇ, ಬೆನ್ನು ಚಪ್ಪರಿಸುವ ಸಭ್ಯತೆಯ ಸದುದ್ದೇಶದಿಂದ ಪ್ರೇರಿತವಾದ, ಔಪಚಾರಿಕವಾದ ಹೇಳಿಕೆಯಾಗಿರಬೇಕು. ಇಲ್ಲವೇ, ಸಾಹಿತ್ಯದ ಶ್ರೇಷ್ಠತೆ ಮತ್ತು ‘ನವ್ಯತೆ’ಯ ಕುರಿತಾದ ತಪ್ಪು ತಿಳುವಳಿಕೆ ಕಾರಣವಾಗಿರಬೇಕು. ತಂತ್ರ, ಶೈಲಿ ಅವುಗಳಲ್ಲಿಯ, ಒಟ್ಟಿನಲ್ಲಿ ಅಭಿವ್ಯಕ್ತಿ ಕ್ರಮದಲ್ಲಿಯ ನಾವೀನ್ಯ ಅನುಭವಕ್ಕೆ ಅನಿವಾರ್ಯವಾಗಿ ರೂಪುಗೊಂಡುದೆ, ಅಥವಾ ನಾವೀನ್ಯದ ಮೇಲಿನ ಪ್ರೀತಿ, ಪ್ರಯೋಗಪ್ರಿಯತೆ – ಇವೇ ಕಾರಣವಾಗಿ ಬಂದುದೆ? ಜೊತೆಗೆ, ಕತೆಯ ವಸ್ತುವಿನಲ್ಲಿಯೂ ನಾವೀನ್ಯ ಇದ್ದುದಾದರೆ ಅದು ಕೇವಲ ಆಧುನಿಕ ಮಾನವನ ಜೀವನಕ್ರಮದಲ್ಲಿಯ ಹೊಸತನಕ್ಕಷ್ಟೇ ಸೀಮಿತವಾದುದೆ, ಅಥವಾ ಕೃತಿಕಾರನ ಅನುಭವವನ್ನು ನೋಡುವ ದೃಷ್ಟಿಯಲ್ಲಿ, ಅದನ್ನು ಭಾಷೆಯಲ್ಲಿ ಎದುರಿಸಬೇಕು, ಎಂಬ ಪ್ರಯತ್ನದ ಹಿಂದೆ ಇದ್ದಿರಬಹುದಾದ ಪ್ರೇರಣೆಯಲ್ಲಿನ ಹೊಸತನವೆ? – ಎಂಬೀ ಪ್ರಶ್ನೆಗಳಿಗೆಲ್ಲ ಮುಂದಿರುವ ಕೃತಿಯನ್ನು ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಪ್ರಾಮಾಣಿಕವಾಗಿ ಉತ್ತರವನ್ನು ಕಂಡುಹಿಡಿಯಲು ಪ್ರಯತ್ನಿಸಿದಲ್ಲದೆ ಕೃತಿಯ ‘ನವ್ಯತೆ’ಯನ್ನು, ಶ್ರೇಷ್ಠತೆಯನ್ನು ಕುರಿತು ತನ್ನ ಅಭಿಪ್ರಾಯ ಜವಾಬ್ದಾರಿಯುತವಾದುದು ಎಂದು ಹೇಳಿಕೊಳ್ಳುವ ಹಕ್ಕನ್ನು ವಿಮರ್ಶಕ ಪಡೆದುಕೊಳ್ಳಲಾರ.

* ‘ಕಾವ್ಯಾವಲೋಕನ’, ಪ್ರಬುದ್ಧ ಕರ್ನಾಟಕ, ಸಂಪುಟ-೪೭, ಸಂಚಿಕೆ-೨ರಲ್ಲಿ ಪ್ರಕಟವಾದ ಕೃತಿ ಅವಲೋಕನ ಲೇಖನ – ೧೯೬೫.