ಜಿ.ಹೆಚ್.ನಾಯಕ: ಚದುರಂಗರೇ, ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ನಿಮ್ಮ ‘ವೈಶಾಖ’ ಕಾದಂಬರಿಗೆ ಬಂದಿರೋದ್ರಿಂದ ನಮಗೆಲ್ಲಾ ತುಂಬಾ ಸಂತೋಷ ಆಗಿದೆ. ನಿಮಗೂ ಸಂತೋಷ ಆಗಿರಬೇಕಲ್ಲಾ?

ಚದುರಂಗ : ಇಲ್ಲಾಂತ ಹೇಗ್ಹೇಳ್ಲೀ… ಆಗಿದೆ.

ನಾ. ಸಹಜವಾಗಿಯೇ ಸಂತೋಷ ಆಗಿರಬಹುದು. ಆದ್ರೆ ಈ ಪ್ರಶಸ್ತಿ ಬರಬಹುದು ಅಂತ ನಿರೀಕ್ಷಿಸಿದ್ರಾ?

ಚ. ಒಂದು ರೀತೀಲಿ ನಿರೀಕ್ಷೆ ಇರಲಿಲ್ಲ. ಆದ್ರೆ ನಿರೀಕ್ಷೆ ಇರಲಿಲ್ಲಾಂತ್ಲೂ ಹೇಳಕಾಗಲ್ಲ. ಯಾಕೇಂತಂದ್ರೆ ನಾನು ಕಾದಂಬರಿ ಬರೆದಾಗ ನನಗದು ಏನಾಗುತ್ತೇಂತ ಗೊತ್ತಿರಲಿಲ್ಲ. ಆದರೆ ಅದಕ್ಕೆ ನಿಯತಕಾಲಿಕಗಳಲ್ಲಿ, ಪೇಪರುಗಳಲ್ಲಿ ಮತ್ತು ನನಗೆ ಬಂಧಂಥ ಅನೇಕ ಪತ್ರಗಳಲ್ಲಿ ಬಂದಂಥ ಪ್ರತಿಕ್ರಿಯೆ ನೋಡಿ, ಒಳ್ಳೆಯ ಅಭಿರುಚಿಯುಳ್ಳಂಥ ಜನರು; ವಿಮರ್ಶಕರು, ಪ್ರಾಜ್ಞರು ಅದರ ಬಗ್ಗೆ ಮೆಚ್ಚುಗೆಯ ಮಾತಾಡಿದಾಗ ನನಗೆ ಯಾವುದಾದರೂ ಒಂದು ಪ್ರಶಸ್ತಿ ಬಂದರೂ ಬರಬಹುದು ಅಂತ ಅನ್ನಿಸ್ತಿತ್ತು.

ನಾ ಅಂದ್ರೆ ನೀವು ಬರೆಯುವಾಗ ಪಡೆದ ಸಂತೋಷ, ಮತ್ತೆ ಒಳ್ಳೆಯ ಅಭಿರುಚಿಯುಳ್ಳ ವಿಮರ್ಶಕರು ಅಂತ ನೀವು ಯಾರನ್ನು ಗೌರವಿಸ್ತೀರೋ, ಅವರೆಲ್ಲ ಒಳ್ಳೆಯ ಮಾತನ್ನು ಹೇಳಿದಾಗ ಉಂಟಾದ ಆನಂದ ಹೆಚ್ಚಿನದಾಗಿತ್ತೋ, ಈಗ ಈ ಬಹುಮಾನ ಬಂದಾಗ ಆದ ಸಂತೋಷ ಹೆಚ್ಚಿನದಾಯ್ತೋ?

ಚ. ಈಗ ಬಹುಮಾನ ಬಂದಾಗ ಹೆಚ್ಚಿನದಾಯ್ತೂಂತ ಹೇಳಲಾರೆ, ಆಗ್ಲೂ ಸಂತೋಷವಾಯ್ತು ಈಗ್ಲೂ ಸಂತೋಷವಾಯ್ತು ಅಂತ ಹೇಳಬಲ್ಲೆ ಅಷ್ಟೆ.

ನಾ. ಈವರೆಗೆ ನೀವ ಒಟ್ಟು ಹತ್ತು ಕೃತಿಗಳನ್ನು ಪ್ರಕಟಿಸಿದ್ದೀರಿ. ಅವುಗಳಲ್ಲಿ ಐದು ಕಥಾಸಂಕಲನಗಳು, ಉಯ್ಯಾಲೆ, ಸರ್ವಮಂಗಳ, ವೈಶಾಖ ಹೀಗೆ ಮೂರು ಕಾದಂಬರಿಗಳು. ಕುಮಾರರಾಮ, ಇಲಿಬೋನು ಅಂತ ಎರಡು ನಾಟಕಗಳು. ಇವುಗಳನ್ನೆಲ್ಲಾ ಓದಿದಾಗ ನಮಗೆ ನೀವು ಒಂದೇ ಬಗೆಯ ಬರವಣಿಗೆಯ ನೆಲೆಯಲ್ಲಿಲ್ಲ. ಬೇರೆ ಬೇರೆ ಹಂತದ ಯತ್ನಗಳನ್ನು ಮಾಡಿದೀರಿ ಅಂತ ಅನ್ನಿಸುತ್ತೆ. ನಮ್ಮ ಊಹೆಯಲ್ಲಿ ಏನಾದರೂ ಸತ್ಯಾಂಸ ಇರಬಹುದಾ?

ಚ. ತಪ್ಪೂಂತ ಹೇಳಲಾರೆ. ಯಾಕೇಂತಂದ್ರೆ ನನ್ನ ಬೆಳವಣಿಗೇನೂ ಆಗಿದೆ ಇಲ್ಲಿ. ಮೊದಲು ‘ಸರ್ವಮಂಗಳಾ’ ಬರೆದಾಗ ಅದರಲ್ಲಿ ನವೋದಯ ಮತ್ತು ಪ್ರಗತಿಶೀಲ ಸೇರ್ಕೊಂಡಿದೆ. ಆಮೇಲೆ ‘ಇಲಿಬೋನು’ ನಾಟಕದಲ್ಲಿ ಅಸಂಗತ ನಾಟಕಗಳ ಹಾಗೂ ನವ್ಯದ ಕಡೆ ಒಲವು ಹೋಗಿದೆ. ಇಲ್ಲಿ ಮಾತ್ರ ಬೇರೆ ರೀತಿಯಲ್ಲಿಯೇ ಇದು ಬಂದಿದೆ.

ನಾ ಬೇರೆ ರೀತಿ ಅಂದ್ರೆ ನಿಮ್ಮ ಹಿಂದಿನ ಎಲ್ಲ ಬರವಣಿಗೆಯ ಸಂಸ್ಕಾರ ಒಟ್ಟು ಒಂದು ಪಾಕವಾಗಿ ಏನೋ ಒಂದು ಭಿನ್ನವಾದ ಹೊಸ ರೂಪ ತಳೆದು ಹೊರಗೆ ಬಂದಿದೆ ಅಂತ ಅನ್ನಿಸುತ್ತೋ?

ಚ. ಈಗ ನೋಡಿ ನನಗಾದಂಥ ಅನೇಕ ಅನುಭವಗಳು ಕೇವಲ ನೆನಪಾಗಿಯೇ ಉಳಿದಲ್ಲ ಈ ಕಾದಂಬರಿಯಲ್ಲಿ. ಆ ನೆನಪುಗಳೆಲ್ಲಾ ಅನುಭವಿಸಿದ್ದೆಲ್ಲಾ ಒಂಥರಾ. ಆದರೆ ಒಂದು ವ್ಯವಸ್ಥಿತವಾದಂಥ ಪಾಕವಾಗಿ ಹೊರಕ್ಕೆ ಬಂದಿದೆ. ಅಂತ ನನಗೆ ಅನ್ನಿಸುತ್ತೆ.

ನಾ. ‘ಇಲಿಬೋನು’ ಎಂಬ ನಾಟಕ ಇದೆಯಲ್ಲ. ಅದರಲ್ಲಿ ನನಗೆ ಅದರ ರೂಪ, ರಚನಾ ವಿಧಾನ ಎಲ್ಲ ನೋಡಿದರೆ ಅದು ಕಟ್ಟಣದ ದೃಷ್ಟಿಯಿಂದ (ಚ.ಶಿಲ್ಪದ ದೃಷ್ಟಿಯಿಂದ) ತುಂಬಾ ಯಶಸ್ವಿ ಆದಹಾಗೆ ಕಾಣುತ್ತೆ. ಆದರೆ ‘ವೈಶಾಖ’ ನೋಡಿದಾಗ ಅಷ್ಟು ಯಶಸ್ವಿಯಾದ ಕಟ್ಟಣ, ಶಿಲ್ಪ ಇದೆ ಅಂತ ಹೇಳೋದು ಕಷ್ಟ. ಹಾಗಾದರೆ ಯಾವ ದೃಷ್ಟಿಯಿಂದ ನಿಮಗೆ ‘ವೈಶಾಖ’ ಪ್ರಿಯವಾಗಿರಬಹುದು?

ಚ. ಇಲ್ಲಿ ಅದೇ ಹೇಳಿದ್ನಲ್ಲ ಅನುಭವದ ದೃಷ್ಟಿಯಿಂದ. ನೆನಪುಗಳು ಕೇವಲ ನೆನಪುಗಳಾಗಿಯೇ ಬರದೆ ಒಂದು ಹೊಸ ಪಾಕವಾಗಿ ಬಂದಾಗ ನನಗೆ ಸಂತೋಷವಾಯ್ತು. ಆದರೆ ಇಲ್ಲಿ ನಾನು ಬರೀತಾ ಇದ್ದ ಹಾಗೆ ನನಗೆ ಬೆರಗುಂಟು ಮಾಡತಕ್ಕಂಥದೇನೋ ಮೂಡಿಬರ್ತಾ ಇದ್ದ ಹಾಗೆ ಅನುಭವಾಗ್ತಾ ಇತ್ತು. ಮತ್ತೆ ಆ ಅನುಭವವನ್ನೇ ಇನ್ನಷ್ಟು ತೀವ್ರವಾಗಿ ಆದರೆ ಬೇರೆ ರುಚಿಯಲ್ಲಿ ಅನುಭವಿಸಿದ ಹಾಗಾಯ್ತು. ಹೊಸ ಹೊಸದಾಗಿ ತೆರಕೊಂಡ ಹಾಗಾಯ್ತು.

ನಾ ಯಾವ ಯಾವಾವೋ ಮೂಲ ಅನುಭವಗಳಿವೆಯಲ್ಲ, ಅವು ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ರೀತಿಯಲ್ಲಾದವು. ಇಲ್ಲಿ ಯಾವುದೋ ಒಂದು ವಿಶೇಷ ಬಗೆಯಲ್ಲಿ ಅವೆಲ್ಲ ಮೂಡಿ ಬರ್ತಾ ಇದ್ದ ಹಾಗೆಯೇ ಒಂದು ಹೊಸ ರೂಪ ಪಡ್ಕೊಳೋದಕ್ಕೆ ಕಾರಣವಾಯ್ತು ಅಂತ ಹೇಳ್ತೀರಿ. ಆದರೆ ನೋಡಿ, ನಿಮ್ಮದೇ ಅನುಭವ ಅಂತಂದಾಗ ಮೂಲದಲ್ಲಿ ನೀವು ಆ ಆನುಭವವನ್ನು ಅದು ಆದ ಕಾಲದಲ್ಲಿ ಯಾವುದೋ ಒಂದು ಬಗೆಯಲ್ಲಿ ಸ್ವಂತವಾಗಿ ಅನುಭವಿಸಿರಬಹುದಲ್ಲ? ಆದರೆ ಕಾದಂಬರಿಯಲ್ಲಿ ಬರುವಾಗ ಲಕ್ಕನ ಪ್ರಜ್ಞೆ ಮತ್ತು ರುಕ್ಮಿಣಿ ಪ್ರಜ್ಞೆ ಮೂಲಕ ಇಲ್ಲಿರುವ ಎಲ್ಲ ವಿವರಗಳನ್ನೂ ಅನುಭವಗಳನ್ನೂ ನೀವು ದಾಖಲೆ ಮಾಡಿದ್ದೀರಲ್ವಾ ! ಹಾಗಿದ್ರೆ ನೇರವಾಗಿ ನಿಮ್ಮ ಅನುಭವವನ್ನು ನಾವು ‘ವೈಶಾಖ’ದಲ್ಲಿ, ಹೇಗೆ ಗುರುತಿಸಬೇಕು ಅಂತ ನಿಮಗೆ ಅನ್ನಿಸುತ್ತೆ?

ಚ. ಇಲ್ಲಿ ನೋಡಿ, ಲಕ್ಕನ ಪ್ರಜ್ಞೆ ಮೂಲಕ, ಮತ್ತೆ ರುಕ್ಮಿಣಿ ಪ್ರಜ್ಞೆ ಮೂಲಕಾನು ಇಲ್ಲಿ ಆ ಅನುಭವ ಬಂದಿದೆ. ಆದರೆ ಮೂಲತಃ ಹೆಣ್ಣು ಮತ್ತು ಕೆಳಸ್ತರದಜನ ಇದಾರಲ್ಲ ಈ ಎರಡು ವರ್ಗದ ಜನರೂ ನಮ್ಮ ಸಮಾಜದಲ್ಲಿ ಶೋಷಿತರೇ ಅಂತ ನನಗೆ ಅನ್ನಿಸುತ್ತೆ. ಅದ್ರಿಂದ ನಾನು ಇದನ್ನು ಯೋಚನೆ ಮಾಡುವಾಗ ನನ್ನ ಅನುಭವ ಈ ಬದುಕಿನಲ್ಲಿರತಕ್ಕಂತಹ ಕೆಡುಕು ಮತ್ತು ಶೋಷಣೆ ಇತ್ಯಾದಿಗಳನ್ನು ಕುರಿತ ನನ್ನ ಸಂವೇದನೆಯೊಂದಿಗೆ ಬೆರತುಕೊಂಡು ಈ ಎರಡು ಪ್ರಜ್ಞೆಗಳ ಮೂಲಕ ಬಂದಿದೆ. ಅಂದ್ರೆ ಇದರಲ್ಲಿ ಎಲ್ಲ ಸೇರ್ಕೊಂಡಿದೆ.

ನಾ. ಈ ಕಾದಂಬರಿಗೊಂದು ಕೇಂದ್ರಪ್ರಜ್ಞೆ ಇದೆಯೆ ಅನ್ನೋ ಪ್ರಶ್ನೇನ ಕೆಲವು ವಿಮರ್ಶಕರು ಎತ್ತಿದಾರಲ್ಲ. ಲಕ್ಕ ಮತ್ತು ರುಕ್ಮಿಣಿ ಪ್ರಜ್ಞೆಯ ಮೂಲಕ ನಾವು ಕಾಣಬಹುದಾದದ್ದು ಅನುಭವಿಸಬಹುದಾದದ್ದು ಇದೆಯಲ್ಲ ಅದಕ್ಕೆ ಇಲ್ಲಿ ಯಾವುದು ಕೇಂದ್ರಾಂತ ನಿಮ್ಮ ಅಭಿಪ್ರಾಯ? ಮತ್ತೆ ನೀವು ಯಾವುದು ಮೌಲ್ಯದ ಪತನ ಕೆಡುಕು ಅಂತ ಹೇಳ್ತಿದ್ದೀರೋ ಅದನ್ನು ಸ್ವಲ್ಪ ವಿವರಿಸ್ತೀರಾ?

ಚ. ಈಗ ನಮ್ಮ ಸಮಾಜ ಇರುವ ರೀತಿಯಲ್ಲಿ ನಮ್ಮ ಮೌಲ್ಯದ ಪತನವಾಗಿದೆ. ಇಲ್ಲಿ ಎಷ್ಟೊಂದು ಕೆಡಕಿದೆ. ಕ್ರೌರ್ಯ ಇದೆ, ಅದನ್ನೆಲ್ಲಾ ಇವರಿಬ್ಬರ ಮೂಲಕ ನಾನು ಹೊರಡಿಸುವ ಪ್ರಯತ್ನ ಮಾಡಿದ್ದೇನೆ.

ನಾ. ಇವರಿಬ್ಬರ ಮೂಲಕ ಹೊರಡಿಸುವುದು ಅಂದರೆ ಇವರಿಬ್ಬರೂ ಶೋಷಿತರು, ಸಾಮಾಜಿಕವಾಗಿ ಸವಲತ್ತು ಕಡಿಮೆ ಇರೋರು ಅದ್ರಿಂದ (ಚ. ಹೌದು ಹೆಚ್ಚಿಗೆ ಸಹಾನುಭೂತಿ ಅನುಕಂಪ ಅವರ ಬಗ್ಗೆ ಉಂಟಾಗಬೇಕಾದ್ದರಿಂದ-) (ನಾ ಸಹಾನುಭೂತಿ ಅನುಕಂಪ ಅಯ್ತು) – ಈ ರೀತಿ ಮೌಲ್ಯಪತನ ಆಗಿರುವಂಥ ಒಂದು ಸಮಾಜದಲ್ಲಿ ಅವರ ಮೇಲೆ ಒತ್ತಡ ಹೆಚ್ಚಿಗೆ ಇರುತ್ತೆ ನೋವು ಹೆಚ್ಚಿಗೆ ಇರುತ್ತೆ ಅನ್ನೋ ದೃಷ್ಟಿಯಿಂದ……

ಚ. ಅದನ್ನ ಇಲ್ಲಿ ಹೆಚ್ಚಿಗೆ ಪ್ರಕಾಶ ಮಾಡಬಹುದು ಎನ್ನೋ ದೃಷ್ಟಿಯಿಂದ ಈ ರೀತಿ ಅವರಿಬ್ಬರ ಮೂಲಕ ಅದನ್ನ ತರೋದಕ್ಕೆ ಪ್ರಯತ್ನ ಮಾಡಿದೀನಿ.

ನಾ. ಅಂದರೆ ಈ ಕೃತಿಗೆ ಕೇಂದ್ರ ಇದೆ ಅಥವಾ ಇಲ್ಲಾ ಅಂತ ಚರ್ಚೆ ಮಾಡುವವರು ಈ ಅಂಶವನ್ನು ಗಮನಿಸುವುದು ಒಳ್ಳೆಯದೂಂತ ನಿಮ್ಮ ಅಭಿಪ್ರಾಯ. ಇನ್ನು ಮೂಲತಃ ಅನುಭವ ಕಾದಂಬರಿಯಲ್ಲಿ ಒಂದಲ್ಲ ಒಮದು ರೀತಿಯಲ್ಲಿ ಬರ್ತದೇಂತ ಆಯ್ತು. ಅದು ನೀವು ಹೇಳಿದ ಹಾಗೆ ನೆನಪಿನ ಹಾಗೆ ಮರುಕಳಿಸುತ್ತದೆ, ಜೊತೆಗೆ ಇನ್ನೇನೋ ಒಂದು ಬಗೆಯ ಪರಿವರ್ತನೆ ಪಡೆಯುತ್ತದೆ ಅಂತಲೂ ನೀವು ಹೇಳ್ತೀರಿ. ಆ ಪರಿವರ್ತನೆ ಪಡೆಯುವುದು ಕಲೆಗೆ ತೀರಾ ಅಗತ್ಯವಾದ ಮತ್ತು ಅನಿವಾರ್ಯವಾದ ಪ್ರಕ್ರಿಯೆ ಅಂತ ಅನ್ಸತ್ತ ನಿಮಗೆ?

ಚ. ಆ ಪರಿವರ್ತನೆ ಇಲ್ದೇ ಹೋದ್ರೆ ಹಸಿಹಸಿಯಾಗಿ ಉಳಿದುಬಿಡ್ತದೆ೪.ಕಲೇನೇ ಆಗೋದಿಲ್ಲ. ಪರಿವರ್ತನೆ ಆಗಬೇಕು. ಅದು ಬೇರೆ ರೀತಿಯ ಒಂದು ಕಾಂಪೌಂಡ್ ಏ ಆಗಬೇಕು. ಎಲಿಮೆಂಟ್ ಅಲ್ಲ. ಅದು ಒಂದು ಪಾಕವಾಗಿ ಬರಬೇಕು ಇಲ್ಲದಿದ್ದರೆ ಸ್ವಾದುವಗೋದಿಲ್ಲ.

ನಾ. ಲಕ್ಕ, ರುಕ್ಮಿಣಿಯ ಪ್ರಜ್ಞೆಯ ಮೂಲಕ ಬರೆಯದಿದ್ರೆ ಬೇರೆ ಪಾತ್ರಗಳನ್ನಾದರೂ ಸೃಷ್ಟಿಸಬೇಕಾದ್ದರಿಂದ ಕಾದಂಬರಿಯಲ್ಲಿ ಪರಕಾಯ ಪ್ರವೇಶ ಅಗತ್ಯವೇ ಅಲ್ವಾ?

ಚ. ಹೌದು, ಈಗ ಷೇಕ್ಸ್‌ಪಿಯರನ್ನು ತಗೊಳ್ಳಿ. ಅವನು ಮ್ಯಾಕ್‌ಬೆತ್ ಆಗ್ತಾನೆ, ಲೇಡಿ ಮ್ಯಾಕ್‌ಬೆತ್ ಆಗ್ತಾನೆ. ಇಯಾಗೋ ಆಗ್ತಾನೆ, ಹ್ಯಾಮ್ಲೆಟ್ ಆಗ್ತಾನೆ, ಓಫಿಲಿಯಾ ಆಗ್ತಾನೆ, ಈಗ ನನ್ನ ಕಾದಂಬರಿ ತಗೊಂಡ್ರೂ ಕೂಡ- ನಾನು ಷೇಕ್ಸ್‌ಪಿಯರ‍್ಗೆ ಹೋಲಿಕೆ ಮಾಡ್ಕೊತಾ ಇಲ್ಲ- ಆದ್ರೆ ಯಾವ ಲೇಖಕನಾದರೂ ಕೂಡ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಲೇಬೇಕಾಗ್ತದೆ. ನಾನು ಕೃಷ್ಣಶಾಸ್ತ್ರೀನೂ ಹೌದು, ಲಕ್ಕನೂ ಹೌದು, ರುಕ್ಮಿಣೀನೂ ಹೌದು, ದುಷ್ಟ ನಂಜೇಗೌಡನೂ ಹೌದು.

ನಾ. ಪ್ರಗತಿಶೀಲರ ಗುಂಪಿಗೆ ಸಾಮಾನ್ಯವಾಗಿ ನಿಮ್ಮನ್ನು ಸೇರಿಸುವುದು ಉಂಟು, ಆದರೆ ಪ್ರಗತಿಶೀಲರು ಕಾಮದ ವಿಷಯವನ್ನು ಕಥೆ ಕಾದಂಬರಿಗಳಲ್ಲಿ ಎಗ್ಗಿಲ್ಲದೆ ತರ್ತಾರೆ, ಎಂಬ ಆಕ್ಷೇಪ ಆ ಕಾಲದಲ್ಲೂ ಇತ್ತು. ನಂತರದ ಕಾಲದಲ್ಲೂ ಸಾಮಾನ್ಯವಾಗಿ ಇದೆ. ಕಾಮದ ವಿಷಯವನ್ನು ಕಾದಂಬರಿಗಳಲ್ಲಿ ಒಳ್ಳೆ ಮಸಾಲೆ ಥರಾ ತರ್ತಾರೆ. ಕಲಾತ್ಮಕವಾಗಿ ಅಗತ್ಯ ಇದೆಯೋ ಇಲ್ಲವೋ ಅನ್ನೋದರ ಬಗ್ಗೆ ಹೆಚ್ಚು ಗಮನ ಕೊಡದೇ ತರ್ತಾರಂತ ಆರೋಪ ಇದೆ. ನಿಮ್ಮ ಮೇಲೆ ಆ ಆರೋಪ ನೀವು ಪ್ರಗತಿಶೀಲರಾದ ಕಾಲದಲ್ಲಿ ಅಷ್ಟಾಗಿ ಬರಲಿಲ್ಲ. ಆದರೆ ನಿಮ್ಮ ‘ವೈಶಾಖ’ದಲ್ಲಿ ನೋಡಿದ್ರೆ ಕಾಮದ ವ್ಯವಹಾರ ವಿಸ್ತಾರವಾಗಿ ವಿವರವಾಗಿ ಬರುತ್ತಲ್ಲ ಏನು ಕಾರಣ ಇರಬಹುದು? ಆಗ ಅಷ್ಟು ಒತ್ತಾಸೆ ತರದೇ ಇದ್ದದ್ದು ಈಗ ಯಾಕೆ ಇಷ್ಟು ಸೃಜನಾತ್ಮಕ ಒತ್ತಡ ತಂದಿತು?

ಚ. ನೋಡಿ ನಾನು ಪ್ರಗತಿಶೀಲ ಮೂವ್‌ಮೆಂಟ್ ಆರಂಭ ಆದ ಕಾಲದಲ್ಲಿ ಬರೆಯೋದಿಕ್ಕೆ ಪ್ರಾರಂಭ ಮಾಡ್ದೆ. ಅ.ನ.ಕೃಷ್ಣರಾಯರೇ ನನ್ನ ಮೊದಲ ಕಥಾಸಂಕಲನಕ್ಕೆ ಮುನ್ನುಡಿ ಬರೆದ್ರು. ಆಗ ಸ್ವಲ್ಪ ಕಾಲ ನಾನು ಮೈಸೂರಿನಲ್ಲಿದ್ದೆ. ಆಗ ಅವರ ಪ್ರಭಾವಕ್ಕೆ ಒಳಗಾಗಿದ್ದೆ. ಇಲ್ಲಾಂತ ನಾನು ಹೇಳೋದಿಲ್ಲ. ಆದರೆ ನಾನು ಮಾಸ್ತಿಯಪರ ಬರಹಗಳನ್ನು ಓದಿದ ಮೇಲೆ, ಇನ್ನಿತರ ಪಾಶ್ಚಾತ್ಯ ಲೇಖಕರನ್ನ, ಟಾಲ್ಸ್‌ಟಾಯ್ ಇಂಥವರನ್ನ ಓದಿದ ಮೇಲೆ ನನಗೆ ಇಲ್ಲಿ ಬಿಡುಗಡೆ ಆದ ಹಾಗೆ ಆಯ್ತು. ಮಾಸ್ತಿಯವರ ಬಗ್ಗೆ ಒಂದು ಮಾತು ಹೇಳಬೇಕೂಂತ ನಂಗನ್ನಿಸುತ್ತೆ. ನಾನು ಸಣ್ಣ ಕಥೆಗಳನ್ನು ಬರೆಯುವಾಗ ಅವರನ್ನ ನೆನೆಸ್ಕೊಂಡೆ, ಈ ಮಾತು ಒಂದ್ಕಡೆ ಬರ್ತದೆ. ದೆಸ್ತೊವಸ್ಕಿ ಗೊಗೋಲ್ ಬಗ್ಗೆ ಈ ಮಾತು ಹೇಳ್ತಾನೆ. ‘We have all issued out of Gogol’s overcoat.’ ಅಂತ. ಹಾಗೇನೇ ನಾವು ಕೂಡ ಕನ್ನಡದಲ್ಲಿ ಸಣ್ಣಕಥೆ ಬರೆಯೋರು ಯಾರಾದ್ರೂ ಮಾಸ್ತಿಯವರ ಸಣ್ಣಕಥೆಗಳಿಂದ್ಲೆ ಹೊರಬಂದವರು ಅಂತ ನಂಗನ್ನಿಸುತ್ತೆ. ಆದ್ರಿಂತ ನಂಗೆ ಅವರ ಪ್ರಭಾವಾನೂ ಆಮೇಲಾಮೇಲೆ ಬಹಳ ಹೆಚ್ಚಿಗೆ ಆದ ಹಾಗೆ ಕಾಣ್ತದೆ. ಅದನ್ನ ‘ಸರ್ವಮಂಗಳಾ’ದಲ್ಲಿ ನೀವು ಸ್ವಲ್ಪ ಕಾಣಬಹುದು. ‘ವೈಶಾಖ’ದಲ್ಲಿಕ ಬರೋಹೊತ್ಗೆ ಕಾಮ ಬದುಕಿನಲ್ಲಿ ಮಾಡತಕ್ಕಂಥ ಗಾಢವಾದ ಪರಿಣಾಮ ನೋಡಿದಾಗ ಅದನ್ನ ಮರೆತುಬಿಡೋದಕ್ಕೆ ಸಾಧ್ಯವಾಗಲಿಲ್ಲ. ಆದ್ರೆ ಬೇರೆ ರೀತಿಯಲ್ಲಿ ತಂದಿದೀನಿ. ಇಲ್ಲಿ ಕಾಮಕ್ಕೇ ಮಾರುಹೋಗಿ ಬರೆಯೋದಲ್ಲ. ಇಲ್ಲಿ ಕಾಮಕ್ಕೂ ಒಂದು ಸ್ಥಾನ ಇದೆ. ಪ್ರಬುದ್ಧವಾದ ಸ್ಥಾನ ಇದೆ. ಆದರೆ ಅದನ್ನು ಹೇಳೋ ರೀತೀಲಿ ನಾವು ಅದಕ್ಕೆ ಬೆಲೆ ಕೊಟ್ಟ ಹಾಗೂ ಇರ್ಬೇಕು ಕೊಡದೆ ಇದ್ದ ಹಾಗೂ ಇರ್ಬೇಕು. ಹಾಗೆ ಹೇಳೋದಕ್ಕೆ ಪ್ರಯತ್ನಪಟ್ಟಿದೀನಿ.

ನಾ. ನಿಮಗಿಂತ ಎಳೆಯ ತಲೆಮಾರಿನ ಬರಹಗಾರರಿದ್ದಾರಲ್ಲ-ನನ್ನ ತಲೆಮಾರಿನವರು, ಬಂಡಾಯದ ತಲೆಮಾರಿನವರು – ಅವರ ಬರವಣಿಗೆಗಳನ್ನು ನೀವು ಬಿಡದೆ ಓದ್ತಾ ಇದ್ರಾ?

ಚ. ಉದ್ದಕ್ಕೂ ಓದ್ತಾ ಬರ್ತಾ ಇದೀನಿ. ಇಪ್ಪತ್ತು ವರ್ಷ ನಾನು ಹೆಚ್ಚಿಗೆ ಬರೀದೇ ಇದ್ದದ್ದೂ ಕೂಡ ಇದಕ್ಕೇ. ಈ ತರುಣ ಲೇಖಕರೆಲ್ಲರನ್ನೂ ಆದಷ್ಟು ಓದಿದೀನಿ. ಆಮೇಲೆ ಇನ್ನೂ ಒಂದು ಒಪ್ಕೊಂಡು ಬಿಡ್ತೀನಿ ನಿಮ್ಮ ಮುಂದೆ……

ನಾ. ಅವರ ಪ್ರಭಾವವೇನಾದ್ರೂ ನಿಮ್ಮಲ್ಲಿ……

ಚ. ಖಂಡಿತವಗಿ ಇದೆ. ಯಾಕೇಂತಂದ್ರೆ ನಾನು ಅಡಿಗರ ಒಂದು ಮಾತನ್ನು ತುಂಬಾ ಮೆಚ್ಚೊಂಡಿದೀನಿ. ‘ತೊರೆಗಳೆಲ್ಲ ಬರಲಿ ಬಿಡು ಎದೆಯ ಕಡಲಿಗೆ’ ಅಂತ ಹೇಳಿದಾರೆ ಬಹಳ ಹಿಂದೆ. ನನ್ನ ಮನಸ್ಸಿನ ಕಿಟಕಿಗಳನ್ನು ಯಾವತ್ತೂ ತೆರಕೊಂಡಿದೀನಿ. ಈ ಪ್ರಭಾವ ಇಲ್ಲಿ ದೇವನೂರು ಮಹಾದೇವ ವರೆಗೂ ಬಂದಿದೆ. ಅಲ್ಲಿಂದ ಇತ್ತೀಚಿನವರೆಗೂ ಬಂದಿದೆ. ಅದೆಲ್ಲಾ ನನ್ನ ಮೇಲೆ ಪ್ರಭಾವ ಬೀರ್ತಾನೇ ಇದೆ. ಕ್ಷಣಕ್ಷಣಕ್ಕೂ ಬೀರ್ತಾ ಇದೆ. ಒಂದು ಮಗು ಕೂಡ ಹೇಳೋದನ್ನ ಕೇಳಕ್ಕೆ ನಾನು ತಯಾರು. ಅದರಲ್ಲಿ ತಪ್ಪೇನಿಲ್ಲ.

ನಾ. ವೈಶಾಖದಲ್ಲಿ ಗ್ರಾಮಾಯಣ, ಸಂಸ್ಕಾರ, ಘಟಶ್ರಾದ್ಧ, ಒಡಲಾಳ, ವಂಶವೃಕ್ಷಗಳ ಕೆಲವು ಅಂಶಗಳು ಹೇಗೋ ಯಾವುದೋ ರೀತಿಯಲ್ಲಿ ಬಂದ ಹಾಗೆ ಕಾಣಿಸುತ್ತೆ ಅಂತ ಹೇಳ್ತಾರೆ. ನನಗೂ ಹಾಗೆ ಸ್ವಲ್ಪ ಬಂದಿದೆ ಅಂತ ಅನ್ನಿಸುತ್ತೆ. ನಿಮ್ಮ ಅಭಿಪ್ರಾಯ?

ಚ. ಬಂದಿದೆ. ಎಲ್ಲ ಪ್ರಭಾವಗಳೂ ಇದ್ದೇ ಇವೆ. ಹೇಗೆ ತಪ್ಪಿಸ್ಕೊಳ್ಳೋದು? ಜೀವನದಲ್ಲಿ ತಪ್ಪಿಸ್ಕೊಳ್ಳೋದು ಸಾಧ್ಯಾನೇ ಇಲ್ಲ. ಅದರ ವಿಶಿಷ್ಟ ರೀತಿಯಲ್ಲಿ ಬಂದಾಗ ಅದು ವ್ಯತ್ಯಾಸವಾಗ್ತದೆ. ಅದಕ್ಕೊಂದು ಹೊಸ ರೂಪ ಬರ್ತದೆ. ಹಾಗೇಂತ ನನ್ನ ತಿಳಿವಳಿಕೆ.

ನಾ. ಈಗ ಇನ್ನೊಂದು ಸ್ವಲ್ಪ ನಿಮ್ಮ ಸ್ವಂತ ಬದುಕಿಗೂ ಸಂಬಂಧಿಸಿದ ಪ್ರಶ್ನೆ ಕೇಳ್ತೀನಿ. ನೀವು ನಮ್ಮ ಯಾವ ಸಾಹಿತಿಗೂ ಇಲ್ದೇ ಇರೋವಂಥ ವಿಶೇಷ ಅನುಭವದ ವಲಯದಲ್ಲಿ ಬೆಳೆದವರು. ವೈಶಾಖದಲ್ಲಿ ನೀವು ಹಳ್ಳಿಯ ಜೀವನದ ಸಮಗ್ರ ಚಿತ್ರಣ ಕೊಟ್ಟಿದ್ರೂನೂ ಅದು ಪೂತಿ ನಿಮ್ಮ ಅನುಭವವನ್ನೆಲ್ಲಾ ಒಳಗೊಂಡಿದೆ ಅಂತನ್ನಿಸೊಲ್ಲ. ಯಾಕೇಂದ್ರೆ ನಿಮ್ಮ ಅನುಭವದ ಹರಹು ಇನ್ನೂ ದೊಡ್ಡದು. ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ಮಹಾರಾಜರು ಜಾತಿಯಿಂದ ಅರಸುಗಳಷ್ಟೇ ಅಲ್ಲ, ಒಡನಾಟದಲ್ಲೂ ನಿಮ್ಮ ಸಹಪಾಟಿಗಳಾಗಿದ್ರು ಅಂತ ಕೇಳಿದೀವಿ. ಸ್ವಾತಂತ್ರ್ಯಾನಂತರದಲ್ಲಿ ನಿಮ್ಮ ಜೊತೆಗೆ ಒಂದೇ ತಾಯಿಯ ಹಾಲು ಕುಡಿದು ಬೆಳೆದ ದೇವರಾಜು ಅರಸು ಅವರೂ ಮುಖ್ಯಮಂತ್ರಿಯಂಥ ದೊಡ್ಡ ಸ್ಥಾನಕ್ಕೆ ಬಂದರು. ಈ ಎರಡೂ ಕಡೆಗಳಲ್ಲೂ ನಿಮಗೆ ನೀವು ಬಯಸಲಿ ಬಿಡಲಿ ನೀವು ದೊಡ್ಡವರಿಗೆ ಹತ್ತಿರದವರು ಅನ್ನೋವಂಥ ಒಂದು ಸನ್ನಿವೇಶ ಇತ್ತು. ಆದರೆ, ನಿಮ್ಮ ಬದುಕಿನ ರೀತಿ, ಅದರ ವಿವರ ತಿಳಿದವರಿಗೆ ಇನ್ನೊಂದು ಮುಖವೂ ಕಾಣಿಸ್ತದೆ. ನೀವು ಕಮ್ಯುನಿಸ್ಟ್ ಆದ್ರಿ, ರೊಯಿಸ್ಟ್ ಆದ್ರಿ, ಸ್ವಾತಂತ್ರ ಹೋರಾಟದ ಕಾಲದಲ್ಲಿ ಪ್ರಭುತ್ವಕ್ಕೆ ಮೆಚ್ಚಿಗೆಯಾಗದಿದ್ದ ಕಡೆಯಲ್ಲಿ ಉಳಿದ್ರಿ. ನಿಮ್ಮ ಮದುವೆಗೆ ಸಂಬಂಧಿಸಿದಂತೆಯೂ ನೀವು ಪ್ರತಿಭಟನೆಯ, ಕ್ರಾಂತಿಕಾರಕ ನಿಲುವನ್ನೇ ತಳೆದ್ರಿ. ಅಂದ್ರೆ, ಎಲ್ಲಾ ಉಳಿದಾಗ್ಲೂನೂ ನೀವು ಆಯ್ಕೆ ಮಾಡಿಕೊಂಡದ್ದು ಸ್ವಲ್ಪ ಕಷ್ಟದ ದಾರಿಯಾಯ್ತಲ್ಲ. ಹೋರಾಟದ ದಾರಿ ಆಗಿತ್ತಲ್ಲ? ಅದಕ್ಕೆ ನಿಮ್ಮ ವ್ಯಕ್ತಿತ್ವದಲ್ಲೇ ನೀವೇನಾದ್ರೂ ಕಾರಣ ಕಂಡುಕೊಂಡದ್ದು ಇದೆಯಾ?

ಚ. ನನಗೂ ಇದು ಆಶ್ಚರ್ಯ ಆಗಿದೆ. ಯಾಕೇಂದ್ರೆ ಒಂದೊಂದು ಸಲ ನಾವು ಹೇಗೆ ನಡಕೊಳ್ತೀವಿ ಅನ್ನೋದು ನಮಗೇ ಅರ್ಥವಾಗೋಲ್ಲ. ಬಹುಶಃ ನನಗೆ ಈ ಮಹಾರಾಜರ ಜೊತೇಲೇ ಬೆಳೆದರೂ ಕೂಡ ಯಾತಕ್ಕೆ ನಾನು ಭಿನ್ನವಾದ ಅಂತ ಒಂದೊಂದು ಸಲ ಹೀಗೇ ಯೋಚನೆ ಮಾಡಿದಾಗ ಅನ್ನಿಸುತ್ತೆ. ಹೆಚ್ಚಿಗೆ ಸಿಹಿ ತಿಂದ್ರೆ ಅದು ಅಪ್ರಿಯವಾಗಿ ಬಿಡುತ್ತೆ. ಹಾಗೇ ಆಯ್ತೋ ಏನೋ.. ಇದಕ್ಕೆ ಕಾರಣ ನಿಜವಾಗ್ಲೂ ಹುಡಕೋದಕ್ಕೆ ಬಹಳ ಕಷ್ಟ. ಅಂತೂ ಅದೇನೋ ಕೆಲವು ವಿಷಯದಲ್ಲಿ ಒಂದೊಂದು ರೀತಿ ಆಗ್ತೀವಿ ನಾವು. ಒಂದೊಂದು ಸಲ ನಮಗೇ ನಾವೇ ಆಶ್ಚರ್ಯವಾಗಿ ಕಾಣ್ತೀವಿ. ನಾವೇ ಒಳಗೇ ಹೋಗಿ ನೋಡಿದ್ರೆ ಏನಪ್ಪ ನಾನು ಹೀಗೆ ನಡಕೊಂಡುಬಿಟ್ನಲ್ಲ ಅಂತ ನಮಗೆ ಆಶ್ಚರ್ಯ ಆಗುತ್ತೆ. ನನಗೆ ಬಹಳ ಕಷ್ಟ ಈ ಪ್ರಶ್ನೆಗೆ ಉತ್ತರ ಕೊಡೋದು.

ನಾ. ಅಂದ್ರೆ, ನಾನು ಕೇಳೋದು ಇದು; ನಿಮ್ಮ ಜೀವನದುದ್ದಕ್ಕೂ ಇದ್ದ ಈ ರಿತಿಯ ಹೋರಾಟ ಮತ್ತು ಅಪರೂಪವಾದ ಅನುಭವ ಸಾಮಗ್ರಿ ಇನ್ನೊಂದು ಕಾದಂಬರಿಗೆ ವಸ್ತು ಆಗಲಾರದೇ? ಅಂಥದೇನಾದ್ರೂ ನಿಮ್ಮ ಮನಸ್ಸಿನಲ್ಲಿ ಸುಳಿದಿದೆಯೇ?

ಚ. ಅನುಭವಗಳೇನೋ ಇವೆ. ಆದ್ರೆ ನೀವು ಸೂಚಿಸ್ತಾ ಇರೋದು ನನಗೆ ಹೊಳೆದೇ ಇಲ್ಲಾಂತ ನಾನು ಹೇಳಲಾರೆ. ಆದರೆ ಅದಕ್ಕೆ ಕಾಲ, ಅವಕಾಶ ಯಾವಾಗ ಬರುತ್ತೋ ನೋಡಬೇಕು. ಆ ಪ್ರೇರಣೆ ಬರಬೇಕಲ್ಲ?

ನಾ. ಒಂದು ತರಹದ ಕ್ರಾಂತಿಕಾರಕ ಅನ್ನಬಹುದಾದ ನಿಲವಿನಲ್ಲೇ ನೀವು ಬಂದದ್ದನ್ನು ನಾವು ಗಮನಿಸ್ತೇವೆ; ಆದರೂ ಬೇರೆ ರೀತಿಯ ಬದುಕಿನ ಬಗ್ಗೆ, ಜನರ ಬಗ್ಗೆ ಕಹಿ ಇಲ್ಲದೆ ಏನೋ ಪ್ರಶಾಂತ ರೀತಿಯಲ್ಲಿ ನೀವು ನಡೆದುಕೊಳ್ಳುತ್ತಾ ಬರ್ತಾ ಇದ್ದೀರಿ. ನಮಗೆ ಅದರ ವಿವರ ಗೊತ್ತಾದಾಗ ಮಾತ್ರ. ಓಹೋ! ಚದುರಂಗರು ಹೀಗೆಲ್ಲಾ ಇದ್ದರಾ ಅಂತ ಅನಿಸುವಹಾಗೆ ಆಗುತ್ತೆ. ನಿಮ್ಮನ್ನೇ ನೋಡಿದಾಗ ರಾಜ ಸಂಬಂಧದ ಯಾವ ದರ್ಪವೂ ಕಾಣಿಸೋದಿಲ್ಲ. ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದವರ ಬಗ್ಗೆಯೂ ನೀವು ಕಹಿಯನ್ನು ಉಳಿಸ್ಕೊಂಡ ಹಾಗೆ ಕಾಣೋದಿಲ್ಲ. ಇದರ ಗುಟ್ಟೇನು ಅಂತ ಸ್ವಲ್ಪ ತಿಳಿಸೋದಕ್ಕೆ ನಿಮಗೆ ಸಾಧ್ಯವಾ?

ಚ. ಕಷ್ಟ. ಯಾಕೇಂದ್ರೆ ಇದು ಹೇಗಾಯ್ತು ಅಂತ ನಿಜವಾಗ್ಲೂ ನನಗೆ ಗೊತ್ತಿಲ್ಲ.

ನಾ. ಕಾಲಮಿತಿಯಲ್ಲಿ ಇಲ್ಲಿಗೆ ನಿಲ್ಲಿಸಬೇಕಾಗಿದೆ. ನಿಮ್ಮಿಂದ ಇನ್ನೂ ಉತ್ತಮವಾದ ಕೃತಿಗಳು ಬರಬೇಕು ಎಂದು ಹಾರೈಸುವವರಲ್ಲಿ ನಾನೂ ಒಬ್ಬ. ವೈಶಾಖದಂಥ ಕಾದಂಬರಿಯನ್ನು ಬರೆದಿದ್ದಕ್ಕೆ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಪಡೆದಿದ್ದಕ್ಕೆ ನಿಮಗೆ ಧನ್ಯವಾದಗಳು.

ಚ. ತುಂಬಾ ಧನ್ಯವಾದಗಳು.

*

* ಚದುರಂಗರು ‘ವೈಶಾಖ’ ಕಾದಂಬರಿಗೆ ಕೆಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ (೧೯೮೩) ಸಂದರ್ಭದಲ್ಲಿ ಮೈಸೂರು ಆಕಾಶವಾಣಿಗೆ ನಾನು ಮಾಡಿದ ಅವರ ಸಂದರ್ಶನ. ನಾನು ಅಧ್ಯಕ್ಷನಾಗಿದ್ದ ಮೈಸೂರಿನ ಚೇತನ ಕನ್ನಡ ಸಂಘದ ‘ಪುಸ್ತಕ ಪುರವಣಿ’ ಮಾರ್ಚ್, ೧೯೮೩ರ ಸಂ.೭, ಸಂಚಿಕೆ ೩ರಲ್ಲಿ ಪ್ರಕಟವಾಗಿತ್ತು.