ಹಿರಿಯರಾದ ಪಾಂಡೇಶ್ವರ ಗುಣಪತಿರಾಯರೆ, ಸನ್ಮಿತ್ರರಾದ ಶಾಂತಿನಾಥ ದೇಸಾಯಿ ಮತ್ತು ಯಶವಂತ ಚಿತ್ತಾಲರೆ, ಈ ಗೋಷ್ಠಿಯ ನಿರ್ದೇಶಕರಾದ ಆರ್.ವಿ.ಭಂಡಾರಿಯವರೆ, ಪ್ರಿಯ ಸ್ನೇಹಿತರಾದ ಪ್ರೊ. ಜಿ.ಎಸ್. ಅವಧಾನಿ ಮತ್ತು ಪ್ರೊ.ವಿ.ಎ.ಜೋಶಿಯವರೆ, ನನ್ನ ಜಿಲ್ಲೆಯ ಸಹೃದಯ ಬಂಧುಗಳೇ.

‘ಸಾಹಿತ್ಯಗೋಷ್ಠಿ’ಗೆ ವಿಶೇಷ ಆಮಂತ್ರಣ ನೀಡಿದ ಸಮ್ಮೇಳನದ ವ್ಯವಸ್ಥಾಪಕ ಮಂಡಳಿಯವರ ಉದಾರತೆಗೆ ಗೌರವಪೂರ್ವಕವಾದ ಕೃತಜ್ಞತೆಯನ್ನು ಸೂಚಿಸುವುದರ ಜೊತೆಗೇ ಅನಿವಾರ್ಯ ಕಾರಣಗಳಿಂದ ನಾನು ಹಾಜರಿದ್ದು ಈ ಗೋಷ್ಠಿಯಲ್ಲಿ ಪಾಲ್ಗೊಳ್ಳುವುದಕ್ಕೆ ಸಾಧ್ಯವಾಗದಿದ್ದುದಕ್ಕೆ ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ. ಈ ವಿಶೇಷ ಸಂದರ್ಭದಲ್ಲಿ ನಿಮ್ಮೆಲ್ಲರ ಎದುರಿನಲ್ಲಿ ನನ್ನ ತಲೆಮಾರಿನ ಮತ್ತು ನನಗಿಂತ ಎಳೆಯ ತಲೆಮಾರಿನ ಸಾಹಿತಿ ಮತ್ತು ಸಹೃದಯ ಮಿತ್ರರ ಜೊತೆ ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಲು ಅನುಮತಿ ಕೋರುತ್ತೇನೆ:

ನವೋದಯ ತಲೆಮಾರಿನ ಸಾಹಿತಿಗಳಲ್ಲಿ ಸ.ಪ. ಗಾಂವಕಾರ, ದಿನಕರ ದೇಸಾಯಿ, ಪಾಂಡೇಶ್ವರ ಗಣಪತಿರಾಯರಂಥವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಯ ಗೌರವವನ್ನು ಕಾಪಾಡಿದ ಹಿರಿಯರೆಂಬ ಹೆಮ್ಮೆ ನಮಗಿದೆ. ಆದರೂ ಬಿ.ಎಂ.ಶ್ರೀ, ಡಿವಿಜಿ, ಮಾಸ್ತಿ, ಬೇಂದ್ರೆ, ಕಾರಂತ, ಕುವೆಂಪು, ಶ್ರೀರಂಗ, ವಿ.ಸೀತಾರಾಮಯ್ಯ, ಪು.ತಿ.ನರಸಿಂಹಚಾರ್ – ಅವರಂಥ ಮುಂಚೂಣಿಯ ಸಾಹಿತಿಗಳಾಗಿ ನಮ್ಮ ಜಿಲ್ಲೆಯವರು ಯಾರೂ ಆ ತಲೆಮಾರಿನಲ್ಲಿ ಇರಲಿಲ್ಲವೆಂಬ ವಾಸ್ತವ ಸತ್ಯವನ್ನು ಅಲ್ಲಗಳೆಯುವುದಕ್ಕೆ ಕಷ್ಟವಾಗುತ್ತಿದೆ. ಚುಟುಕುಕಾರರಾಗಿ ದಿನಕರ ದೇಸಾಯಿಯವರ ಸಾಧನೆ ಕನ್ನಡದಲ್ಲಿ ಅದ್ವೀತಿಯವಾಗಿರುವುದು ನಮ್ಮ ಈ ಕೀಳರಿಮೆಯನ್ನು ತಕ್ಕಮಟ್ಟಿಗೆ ಕಡಿಮೆ ಮಾಡುವ ಸಂಗತಿಯಾಗಿದೆ. ಜೊತೆಗೆ ಇಲ್ಲಿ ಹೆಸರಿಸಿದ ಈ ನಮ್ಮ ಜಿಲ್ಲೆಯ ಹಿರಿಯ ಸಾಹಿತಿಗಳೆಲ್ಲ ಕೇವಲ ಸಾಹಿತ್ಯೋಪಜೀವಿಗಳಾಗಿ ತಮ್ಮಲ್ಲಶಕ್ತಿ, ಸಾಮರ್ಥ್ಯ, ಪ್ರತಿಭೆಗಳನ್ನು ಬಳಸಿದವರಾಗಿರದೆ ಜೀವನದ ಇತರ ರಂಗಗಳಲ್ಲಿಯೂ ಮಹತ್ವದ ಸಾಧನೆ ಮಾಡಿ ನಮ್ಮ ಜಿಲ್ಲೆಯ ಸಾಂಸ್ಕೃತಿಕ ಜೀವನವನ್ನು ಹಸನುಗೊಳಿಸಿದ, ಸಂಪನ್ನಗೊಳಿಸಿದ ಹಿರಿಯರೆಂಬುದೂ ಅವರ ಬಗ್ಗೆ ನಾವೆಲ್ಲಾ ಕೃತಜ್ಞತರಾಗಿರುವುದಕ್ಕೆ ಕಾರಣವಾಗಿದೆ, ಎಂಬ ಮಾತು ಬೇರೆ ಇದೆ.

ಆನಂತರದ ಕಾಲದಲ್ಲಿ ಬಂದ ವಿ.ಕೃ.ಗೋಕಾಕರ ನವ್ಯ ಕಾವ್ಯ ಮಾರ್ಗದ ಕವಿಗಳಲ್ಲಿ ಪ್ರಮುಖರೆಂದು ಪ್ರಸಿದ್ಧರಾಗಿರುವವರಲ್ಲಿ ನಮ್ಮ ಜಿಲ್ಲೆಯ ಗಂಗಾಧರ ಚಿತ್ತಾಲ, ಸು.ರಂ.ಎಕ್ಕುಂಡಿ, ಎಂ. ಅಕಬರ ಅಲಿಯವರು ಮುಂಚೂಣಿಯಲ್ಲಿದ್ದಾರೆ. ಅವರಲ್ಲೂ ಒಬ್ಬಿಬ್ಬರ ಕವಿಪ್ರತಿಭೆ ಗೋಕಾಕರ ಕವಿಪ್ರತಿಭೆಗಿಂತ ಹೆಚ್ಚು ಸಹಜವಾದದ್ದು ಎಂದು ನಾನು ತಿಳಿದಿರುವುದರಿಂದ ನಮ್ಮ ಜಿಲ್ಲೆಯ ಈ ಕವಿಗಳ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಆಧುನಿಕ ಕನ್ನಡ ಕಾವ್ಯದಲ್ಲಿ ವಿಡಂಬನೆಯ ದನಿ ವಿ.ಜಿ.ಭಟ್ಟರ ಕಾವ್ಯದಲ್ಲಿರುವಷ್ಟು ಶಕ್ತಿಯುತವಾಗಿ, ಪ್ರಬುದ್ಧವಾಗಿ ಕನ್ನಡದಲ್ಲಿ ಬೇರೆ ಯಾರಲ್ಲಿಯೂ ಕಾಣುವುದಿಲ್ಲವೆಂಬುದೂ ನಮ್ಮ ಜಿಲ್ಲೆಯವರ ಹೆಮ್ಮೆಗ ಮೂಡಿದ ಇನ್ನೊಂದು ಕೋಡಾಗಿದೆ. ಇದೇ ತಲೆಮಾರಿನವರೆಂದೇ ಗಣಿಸಬಹುದಾದ ಗೌರೀಶ ಕಾಯ್ಕಿಣಿ, ಬಿ.ಎಚ್.ಶ್ರೀಧರರೂ ಕನ್ನಡ ನಾಡಿನ ಗಮನಾರ್ಹ ಸಾಹಿತಿಗಳ ಸಾಲಿನಲ್ಲಿ ಸೇರುವವೆರಂಬುದನ್ನೂ ಇಲ್ಲಿಯೇ ನೆನೆಯುತ್ತೇನೆ.

ಗೋಪಾಲಕೃಷ್ಣ ಅಡಿಗರಿಂದ ಪ್ರಾರಂಭವಾದ ನವ್ಯಸಾಹಿತ್ಯ ಮಾರ್ಗದ ಸಾಹಿತಿಗಳಲ್ಲಿ ಪ್ರಥಮ ಶ್ರೇಣಿಯ ಕಥೆಗಾರರೆಂದೂ ಕಾದಂಬರಿಕಾರರೆಂದೂ ಪ್ರಸಿದ್ಧರಾದ ಯಶವಂತ ಚಿತ್ತಾಲ ಮತ್ತು ಶಾಂತಿನಾಥ ದೇಸಾಯಿಯವರು ನಮ್ಮ ಜಿಲ್ಲೆಯ ಕಥಾಸಾಹಿತ್ಯಕ್ಕೆ ಮಾತ್ರವಲ್ಲ ಕನ್ನಡ ನಾಡಿನ ಕಥಾಸಾಹಿತ್ಯ ಪ್ರಪಂಚಕ್ಕೇ ಕೀರ್ತಿ ತಂದಿರುವಂಥ ಪ್ರತಿಭಾಶಾಲಿಗಳು.

ನಾನು ಈವರೆಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದ ಸಾಹಿತಿಗಳು ನಮ್ಮ ಜಿಲ್ಲೆಯ ಸಾಹಿತ್ಯದ ಆಧುನಿಕ ಪರಂಪರೆಯನ್ನು ನಿರ್ಮಾಣ ಮಾಡಿದ ಪ್ರಮುಖರು ಎಂಬುದರಲ್ಲಿ ಬಹುಶಃ ಭಿನ್ನಾಭಿಪ್ರಾಯವಿದ್ದಿರಲಾರದು. ಅವರೆಲ್ಲರ ಸಾಹಿತ್ಯಿಕ ಸಾಧನೆ ನಮ್ಮ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ಆಸ್ತಿ ಎಂಬುದನ್ನು ಅಭಿಮಾನದಿಂದ ಗುರುತಿಸಿ ಗೌರವಿಸಬೇಕು. ಆದರೆ ಅದರ ಜೊತೆಗೇ ಜಿಲ್ಲೆಯ ಸಾಹಿತ್ಯಮಿತ್ರರು ನಮ್ಮ ಜಿಲ್ಲೆಯ ಸಾಹಿತ್ಯದ ಸಾಧನೆಯನ್ನು ಕನ್ನಡ ನಾಡಿತ ಇತರ ಜಿಲ್ಲೆಗಳ ಸಾಹಿತ್ಯದ ಸಾಧನೆಯ ಜೊತೆ ಹೋಲಿಸಿ ನೋಡಬೇಕು. ವಸ್ತುನಿಷ್ಠವಾಗಿ ಬೆಲೆ ಕಟ್ಟಬೇಕು ಎಂದು ಕೇಳಿಕೊಳ್ಳುತ್ತೇನೆ. ಎಷ್ಟೋ ಜಿಲ್ಲೆಗಳ ಸಾಧನೆಯ ಜೊತೆ ಹೋಲಿಸಿ ನೋಡಿದಾಗ ನಮ್ಮ ಜಿಲ್ಲೆಯ ಸಾಧನೆ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವಪೂರ್ಣವಾದದ್ದೆಂಬ ಸಮಾಧಾನ ದೊರೆಯುತ್ತದೆ. ಆದರೆ ಅಕ್ಕಪಕ್ಕದ ಜಿಲ್ಲೆಗಳಾದ ಶಿವಮೊಗ್ಗ, ದಕ್ಷಿಣ ಕನ್ನಡ, ಧಾರವಾಡ ಜಿಲ್ಲೆಗಳಷ್ಟು ಮಹತ್ವದ ಸಾಹಿತ್ಯ ಪರಂಪರೆ ನಮ್ಮದಾಗಿದೆಯೆ ಎಂದೂ ಕೇಳಿಕೊಳ್ಳಬೇಕು. ಆ ಜಿಲ್ಲೆಗಳಲ್ಲಿ ಬಂದಂತೆ ನಮ್ಮ ಜಿಲ್ಲೆಯಿಂದ ಒಬ್ಬರಾದರೂ ‘ಮೇಜರ್’ ಎನ್ನಿಸಿಕೊಳ್ಳಬಹುದಾದಂಥ ಸಾಹಿತಿಯಾಗಿ ಬೆಳೆದಿಲ್ಲವೇಕೆ? ಇದು ಕೇವಲ ಪ್ರತಿಭೆಯ ಅವಿಷ್ಕಾರದ ಆಕಸ್ಮಿಕತೆಗೆ ಸಂಬಂಧಿಸಿದ್ದೊ, ತಕ್ಕಮಟ್ಟಿಗೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವಾತಾವರಣಕ್ಕೂ ಸಂಬಂಧಿಸಿದ್ದೊ? ನಮ್ಮ ನೆರೆಹೊರೆಯ ಮೂರು ಜಿಲ್ಲೆಗಳಿಗಿಂತ ನಮ್ಮ ಜಿಲ್ಲೆಯ ಸಾಹಿತ್ಯಕ್ಷೇತ್ರದ ಸಾಧನೆ ಕಡಿಮೆ ಎಂದು ನಿಮಗೂ ಕಾಣಿಸುವುದು ನಿಜವಾದರೆ ಅದಕ್ಕೆ ಕಾರಣವೇನಿರಬಹುದಂದು ಹುಡುಕುವ ಹೊಣೆಗಾರಿಕೆಯನ್ನು ಜಿಲ್ಲೆಯ ಕಿರಿಯ ತಲೆಮಾರಿನ ಸಾಹಿತಿಗಳು, ಸಾಹಿತ್ಯ ಪ್ರೇಮಿಗಳು, ಕನ್ನಡ ಭಾಷಾಭಿಮಾನಿಗಳು ಹೊರಬೇಡವೆ, ಎಂದು ಕೇಳಿಕೊಳ್ಳಬೇಕಾಗಬಹುದಲ್ಲವೆ?

ಈಗಾಗಲೇ ನಾನು ಹೆಸರಿಸಿರುವ ಮಹತ್ವದ ಸಾಹಿತಿಗಳಲ್ಲಿ ಪಾಂಡೇಶ್ವರ ಗಣಪತಿರಾಯ, ಬಿ.ಎಚ್.ಶ್ರೀಧರ, ಸು.ರಂ.ಎಕ್ಕುಂಡಿ, ಅಕಬರ ಅಲಿ – ಈ ನಾಲ್ವರೂ ಮೂಲತಃ ನಮ್ಮ ಜಿಲ್ಲೆಯವರಲ್ಲ. ಜಿಲ್ಲೆಯವರಾಗಿದ್ದು ಜಿಲ್ಲೆಯಿಂದ ದೂರದಲ್ಲಿರುವ ವಿ.ಜಿ. ಭಟ್ಟ, ಗಂಗಾಧರ ಚಿತ್ತಾಲ, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ ಮತ್ತು ನನ್ನಂಥ ಇತರ ಸಾಹಿತಿಗಳಿಗಿಂತ ಹೆಚ್ಚಾಗಿ ಜಿಲ್ಲೆಯ ಸಾಂಸ್ಕೃತಿಕ ಜೀವನವನ್ನು ಶ್ರೀಮಂತಗೊಳಿಸುವುದರಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಮಹನೀಯರಿವರು. ಆ ಕಾರಣದಿಂದಾಗಿ ಹೆಚ್ಚು ನಿಜವಾದ ಅರ್ಥದಲ್ಲಿ ಅವರೇ ನನ್ನಂಥವನಿಗಿಂತ ಹೆಚ್ಚು ಪಾಲು ನಮ್ಮ ಜಿಲ್ಲೆಯವರು. ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಮೂರನೆಯ ಸಲ. ಅವುಗಳಲ್ಲಿ ಎರಡು ಬಾರಿ ಸಮ್ಮೇಳನಾಧ್ಯಕ್ಷ ಗೌರವ ಮೂಲತಃ ಹೊರ ಜಿಲ್ಲೆಯವರಾಗಿರುವ ಪಾಂಡೇಶ್ವರ ಮತ್ತು ಶ್ರೀಧರ ಅವರ ಪಾಲಿಗೆ ಸಂದದ್ದು ಈ ನನ್ನ ಮಾತನ್ನೇ ಸಮರ್ಥಿಸುತ್ತದೆ. ಹಾಗಾದದ್ದು ನ್ಯಾಯಸಮ್ಮತವಾಗಿಯೇ ಇದೆ. ಆ ನಾಲ್ವರಲ್ಲಿಯೂ ಸು.ರಂ. ಎಕ್ಕುಂಡಿ ಮತ್ತು ಅಕಬರ ಆಲಿಯವರು ಜಿಲ್ಲೆಯಿಂದ ಈಗ ದೂರ ಇರುವಂತಾಗಿದೆ. ಈ ವಸ್ತುಸ್ಥಿತಿಯನ್ನು ಕುರಿತು ಯೋಚನೆ ಮಾಡಬಲ್ಲವರಾದರೆ ಜಿಲ್ಲೆಯಲ್ಲೇ ಈಗ ಇರುವ ಸಾಹಿತಿ ಮಿತ್ರರು ಜಿಲ್ಲೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸತ್ವವನ್ನು ಕಾಪಾಡುವ ಮತ್ತು ಬೆಳೆಸುವ ಹೊಣೆಗಾರಿಕೆಯನ್ನು ಹೆಚ್ಚಾಗಿ ಹೊರಬೇಕಾದದ್ದು ಅನಿವಾರ್ಯವಾಗಿದೆಯೆಂಬುದು ಗೊತ್ತಾಗುತ್ತದೆ.

ಈ ಹೊಣೆಗಾರಿಕೆ ಯಾವ ಬಗೆಯದು ಎಂಬ ಬಗ್ಗೆ ಅವರೆಲ್ಲಾ ಗಂಭೀರವಾಗಿ ಕುಳಿತು ಯೋಚಿಸಿ ನಿರ್ಣಯಿಸಿ ಕಾರ್ಯಪ್ರವೃತ್ತರಾಗಬೇಕಾಗಬಹುದು. ತಮ್ಮ ತಮ್ಮ ಪ್ರತಿಭೆಯ ಪ್ರಕಾಶನಕ್ಕೆ ಅಗತ್ಯವಾದ ವಾತಾವರಣವನ್ನು ನಿರ್ಮಿಸಿಕೊಳ್ಳುವ ಪ್ರಾಥಮಿಕ ಕಳಕಳಿ ಜಿಲ್ಲೆಯಲ್ಲಿರುವ ಸಾಹಿತಿಗಳಲ್ಲಿ ಹೆಚ್ಚಾದಷ್ಟೂ, ತೀವ್ರವಾದಷ್ಟೂ, ಜಿಲ್ಲೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜೀವನವನ್ನು ಶ್ರೀಮಂತಗೊಳಿಸುವ ಸಾರ್ವಜನಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದು ಅವರಿಂದ ಸಾಧ್ಯವಾಗುತ್ತದೆ. ಹೊನ್ನಾವರ, ಅಕೋಲಾಗಳಂಥ ಕಡೆ ‘ಕರ್ನಾಟಕ ಸಂಘ’ಗಳ ಮೂಲಕ ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಆಸಕ್ತಿಯುಳ್ಳ ಸಾಹಿತಿಗಳು, ಕಾರ್ಯಕರ್ತರು ಸಂಘಟಿತರಾಗಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸಿಕೊಳ್ಳುತ್ತಿದ್ದಾರೆಂಬುದು ಸಂತೋಷದ ಸಂಗತಿಯಾಗಿದೆ. ಜಿಲ್ಲೆಯ ಪ್ರತಿ ತಾಲ್ಲೂಕಿನ ಮುಖ್ಯ ಸ್ಥಳದಲ್ಲಿಯೂ ಇಂಥ ಉತ್ಸಾಹ, ಆಸಕ್ತಿ ಉಳ್ಳ ಕಾರ್ಯಕರ್ತರು ಸಂಘಟಿತರಾಗಿ ಕನ್ನಡದ ಅಭಿಮಾನ ಬೆಳೆಸುವ, ಸಾಹಿತ್ಯಾಸಕ್ತಿಯನ್ನು ಜನತೆಯಲ್ಲಿ ಕುದುರಿಸುವ ಕೆಲಸ ಮಾಡಬೇಕಾದೀತು. ಜಿಲ್ಲೆಯ ಪ್ರತಿಯೊಂದು ಕಾಲೇಜಿನಲ್ಲಿಯೂ ‘ಕನ್ನಡ ಸಂಘ’ಗಳ ಸ್ಥಾಪನೆಗಾಗಿ, ಸಾಹಿತ್ಯಿಕ ಚಟುವಟಿಕೆಗಳಿಗಾಗಿ ವಿದ್ಯಾರ್ಥಿಗಳು ಒತ್ತಾಯಿಸುವಂಥ ಪರಿಸ್ಥಿತಿಯನ್ನು ನಿರ್ಮಾಣ ಮಾಡಲು ಪ್ರಯತ್ನಿಸಬೇಕು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅಂಥ ವಾತಾವರಣವನ್ನು ಸೃಷ್ಟಿಸುವುದರಲ್ಲಿ ಜಿಲ್ಲೆಯ ಶಾಲೆ, ಕಾಲೇಜುಗಳಲ್ಲಿರುವ ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತದ ಅಧ್ಯಾಪಕರ, ಪ್ರಾಧ್ಯಾಪಕರ ಹೊಣೆಗಾರಿಕೆ ಹೆಚ್ಚಿನದಾಗಿದೆಯೆಂದು ನನಗನ್ನಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ಈ ಸಾಹಿತ್ಯ ಗೋಷ್ಠಿಯ ಅಧ್ಯಕ್ಷರಾದ ಶಾಂತಿನಾಥ ದೇಸಾಯಿಯವರು ತಮ್ಮ ಸಲಹೆ ಸೂಚನೆಗಳನ್ನು ಅವರ ಭಾಷಣದಲ್ಲಿ ನೀಡಿಯಾರೇನೊ ಎಂಬುದು ನನ್ನ ಆಸೆ.

ನಿಮಗೆಲ್ಲ ವಂದನೆಗಳು. ನನ್ನ ಮಾತುಗಳಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿರೆಂದು ಕೇಳಿಕೊಳ್ಳುತ್ತೇನೆ.

* ಕಾರವಾರದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ (೧೯೭೯) ಮಂಡಿಸಿದ ಟಿಪ್ಪಣಿ, ಗೌರೀಶ ಕಾಯ್ಕಿಣಿ ಅಭಿನಂದನ ಗ್ರಂಥ ‘ನೀಲಾಂಜನ’ದಲ್ಲಿ ಪ್ರಕಟವಾಗಿತ್ತು.