ಶ್ರೀ ಶಿವರಾಮ ಕಾರಂತರು ೪ನೇ ಫಾರ್ಮಿನಲ್ಲಿರುವಾಗಲೇ ‘ವಿಯೋಗಿನಿ’ ಎಂಬ ಕಾದಂಬರಿಯನ್ನು ಬರೆಯಲು ಹೊರಟು, ಅದರ ಮುಖಪತ್ರ ಮತ್ತು ಒಂದೆರಡು ಅಧ್ಯಾಯಗಳನ್ನು ಮುಗಿಸಿದ್ದರೆಂದೂ ಶ್ರೀಮತಿ ತಿರುಮಲಾಂಬಾ ಅವರ ‘ವಿರಾಗಿಣಿ’ ಕಾದಂಬರಿಗೆ ಅದು ಪ್ರತಿ ಅಸ್ತ್ರ ಎಂದೂ ಕಾರಂತರೇ ಹೇಳಿದ್ದಾರೆ.[1] ಕಾರಂತರು ಹೇಳಿಕೊಂಡಿರುವುದಕ್ಕಿಂತ ಹೆಚ್ಚಿನ ಮಾಹಿತಿಯೇನೂ ಇಂದು ನಮಗೆ ಆ ಕೃತಿಯ ವಿಷಯದಲ್ಲಿ ದೊರೆಯುವುದಿಲ್ಲ. ಆನಂತರದ ಕಾಲದಲ್ಲಿ ಕಾರಂತರು ‘ವಸಂತ’ ಪತ್ರಿಕೆಯನ್ನು ಹೊರಡಿಸಿದಾಗ ತಮ್ಮ ಇತರ ಬರೆಹಗಳ ಜೊತೆಗೆ ‘ವಿಚಿತ್ರಕೂಟ’ (ದಶಂಬರ, ೧೯೨೩) ‘ಭೂತ’ (ಅಗೋಸ್ತು, ೧೯೨೪), ‘ನಿರ್ಭಾಗ್ಯ ಜನ್ಮ’ (ಫೆಬ್ರವರಿ, ೧೯೨೫), ‘ದೇವದೂತರು’ (ಜುಲೈ, ೧೯೨೯), ‘ಸೂಳೆಯ ಸಂಸಾರ’ (ಕನ್ಯಾಬಲಿ) (ದಶಂಬರ, ೧೯೨೯) – ಎಂಬ ಕಾದಂಬರಿಗಳನ್ನು ಕ್ರಮವಾಗಿ ಪ್ರಕಟಿಸಿದರು.

ಕಾರಂತರು ಪ್ರಾರಂಭವಾದ ಕಾದಂಬರಿಗಳನ್ನು ಕುರಿತಂತೆ, ಅವುಗಳ ಕಾಲಾನುಕ್ರಮವನ್ನು ಕುರಿತಂತೆ ಒಂದು ರೀತಿಯ ಅಜ್ಞಾನ ಕಾರಂತರ ಕಾದಂಬರಿಗಳನ್ನು ಶ್ರದ್ಧೆಯಿಂದ ಅಧ್ಯಯನ ಮಾಡುತ್ತಿರುವವರನ್ನೂ ಆವರಿಸಿಕೊಂಡಿರುವಂತಿದೆ :

೧) ೧೯೪೮ನೇ ಇಸವಿಯಲ್ಲಿ ‘ಕಾರಂತರ ಕಾದಂಬರಿಗಳು’ ಎಂಬ ವಿಮರ್ಶೆಯ ಗ್ರಂಥವೊಂದನ್ನು ಬರೆದ ಶ್ರೀ ಎಸ್. ಅನಂತನಾರಾಯಣ ಅವರು ಈ ಮೇಲೆ ಹೆಸರಿಸಿದ ಪ್ರಕಟಿತ ಐದು ಕಾದಂಬರಿಗಳಲ್ಲಿ ‘ಭೂತ’ ಮತ್ತು ‘ನಿರ್ಭಾಗ್ಯ ಜನ್ಮ’ಗಳ ಹೆಸರನ್ನೂ ಹೇಳಿಲ್ಲ. ‘ವಿಚಿತ್ರಕೂಟ’ದ ಹೆಸರನ್ನು ಹೇಳುತ್ತಾರಾದರೂ, ‘ವಿಚಿತ್ರಕೂಟ’ದ ಬಗ್ಗೆ ನಮಗೆ ಏನೂ ತಿಳಿಯದು. ಇದುವರೆಗೆ ಅದರ ಪ್ರತಿಗಳೆಲ್ಲೂ ಕಾಣಸಿಕ್ಕಿಲ್ಲ. ಅದನ್ನು ಓದಿದೆನೆಂದು ಯಾರೂ ಹೇಳುವವರೂ ಇಲ್ಲ. ಕಾರಂತರನ್ನು ಅದರ ಬಗ್ಗೆ ವಿಚಾರಿಸಿದಲ್ಲಿ ಅದು ಇಲ್ಲದಂತೆಯೇ ಎಂದರು. ಅಂತೆಯೇ ನಮ್ಮ ಪಾಲಿಗೆ ‘ವಿಚಿತ್ರಕೂಟ’ ಸತ್ತ ಹುಟ್ಟು. ಕಾರಂತರ ಮುಂಬರುವ ಕಲೆಗಾರಿಕೆಯ ಸೂಚನೆಯೇನಾದರೂ ಇಲ್ಲಿ ಕಾಣುತ್ತಿತ್ತೋ, ಏನೋ, ನಮಗೆ ತಿಳಿಯದು”[2] ಎಂದು ಬರೆದಿದ್ದಾರೆ. ಹಾಗೆ ಬರೆದವರು ‘ವಿಚಿತ್ರಕೂಟ’ದ ಆನಂತರದ ಕಾದಂಬರಿ ‘ಕನ್ಯಾಬಲಿ’ ಎಂಬ ಭಾವನೆಯಿಂದ “ನಮಗೆ ಕಾರಂತರ ಮೊದಲ ಕಾದಂಬರಿ ‘ಕನ್ಯಾಬಲಿ’ ಎಂದು ಬರೆದಿದ್ದಾರೆ. ನಿಜವಾಗಿ ನೋಡಿದರೆ ‘ವಿಚಿತ್ರಕೂಟ’ದ ಆನಂತರ ‘ಭೂತ’, ‘ನಿರ್ಭಾಗ್ಯ ಜನ್ಮ’ ಎಂಬ ಕಾದಂಬರಿಗಳು ಕ್ರಮವಾಗಿ ಪ್ರಕಟವಾದವು. ಅವುಗಳ ಆನಂತರ ‘ದೇವದೂತರು’, ‘ಸೂಳೆಯ ಸಂಸಾರ’ (‘ಕನ್ಯಾಬಲಿ’)ಗಳು ಕ್ರಮವಾಗಿ ಪ್ರಕಟವಾಧವು. ಆದರೆ ಶ್ರೀ ಅನಂತನಾರಾಯಣ ಅವರು ‘ಕನ್ಯಾಬಲಿ’ಯ ಬಗ್ಗೆ ಹೇಳಿ “ಕಾರಂತರ ಮುಂದಿನ ಕೃತಿ ‘ದೇವದೂತರು'” ಎಂದು ಬರೆದಿದ್ದಾರೆ.

೨) ಶ್ರೀ ಶ್ರೀನಿವಾಸ ಹಾವನೂರ ಅವರು ‘ಕಾರಂತ ಅರುವತ್ತು’ ಎಂಬ ಗ್ರಂಥದಲ್ಲಿ ಕಾರಂತರ ಕೃತಿಗಳ ಸೂಚಿಯಲ್ಲಿ ‘ಅವರ ಹಲವಾರು ಕೃತಿಗಳು ಪುಸ್ತಕ ರೂಪದಲ್ಲಿ ಬರೆದ ಹಸ್ತಪ್ರತಿಯ ಸ್ವರೂಪದಲ್ಲಿ ಇಲ್ಲವೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿಯಾಗಲೀ ಉಳಿದಿದ್ದು ಅವನ್ನೂ ಇದರಲ್ಲಿ ಸೇರಿಸಲಾಗಿದೆ….’ ಎಂದು ಹೇಳಿಕೊಂಡಿದ್ದರೂ ‘ನಿರ್ಭಾಗ್ಯ ಜನ್ಮ’ ಕಾದಂಬರಿಯ ಹೆಸರನ್ನು ಅವರು ಸೇರಿಸಿಲ್ಲ, ಅದೂ ‘ವಸಂತ’ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾದ ಸಾಮಾಜಿಕ ಕಾದಂಬರಿ. ಕಾರಂತರು ಅದನ್ನು ಪ್ರಕಟಿಸುವಾಗ ಕೃತಿಕಾರನ ಹೆಸರನ್ನು ಹೇಳಿರಲಿಲ್ಲವಾದ್ದರಿಂದ ಬಹುಶಃ ಹಾವನೂರರ ದೃಷ್ಟಿಯಿಂದ ಅದು ನುಣುಚಿಕೊಂಡಿತೆಂದು ತೋರುತ್ತದೆ. ಆದರೆ, ಕಾರಂತರೇ ‘ನಿರ್ಭಾಗ್ಯ ಜನ್ಮ’ ಎಂಬ ಸಾಮಾಜಿಕ ಕಾದಂಬರಿಯನ್ನು ತಾವು ಬರೆದಿರುವುದಾಗಿ ಹೇಳಿಕೊಂಡಿದ್ದಾರೆ. [3] ‘ನಿರ್ಭಾಗ್ಯ ಜನ್ಮ’ ದ ವಿಷಯ ಗೊತ್ತಿಲ್ಲದ್ದರಿಂದಲೂ, ‘ದೇವದೂತರು’ ಸಾಮಾಜಿಕ ಕಾದಂಬರಿಯೆಂದು ಬಹುಶಃ ಅವರು ಒಪ್ಪದಿರುವುದರಿಂದಲೂ ‘ಕನ್ಯಾಬಲಿ’ ಅಥವಾ ‘ಸೂಳೆಯ ಸಂಸಾರ’ವು ಕಾರಂತರ ಪ್ರಥಮ ಸಾಮಾಜಿಕ ಕಾದಂಬರಿಯಾಗಿದೆ ಎಂದು ಬರೆದರೆಂದು ತೋರುತ್ತದೆ.”[4]

೩) ಶ್ರೀ ಬಡೆಕ್ಕಿಲ ಕೃಷ್ಣಭಟ್ಟರು, “‘ಭೂತ’ ಕಾರಂತರು ಬರೆದ ಮೊದಲ ಕಾದಂಬರಿ….” ಎಂದು ಬರೆದಿದ್ದಾರೆ.”[5] ಇದು ಸರಿಯಲ್ಲ.

ಈ ವರೆಗೆ ಹೆಸರಿಸಿದ ಕಾರಂತರ ಕಾದಂಬರಿಗಳಲ್ಲಿ ‘ವಿಚಿತ್ರ ಕೂಟ’ ಮತ್ತು ‘ಭೂತ’ ಪತ್ತೇದಾರಿ ಕಾದಂಬರಿಗಳಾಗಿವೆ. ಈ ಎರಡೂ ಕಾದಂಬರಿಗಳನ್ನು ಈಗ ಸಂಪೂರ್ಣವಾಗಿ ಹುಡುಕಿ ತೆಗೆಯುವುದೇ ಕಷ್ಟವಾಗಿದೆ. ನನಗೆ ‘ವಿಚಿತ್ರ ಕೂಟ’ ಹಾಗೂ ‘ಭೂತ’ ಕಾದಂಬರಿಗಳು ಭಾಗಶಃ ದೊರೆತಿವೆ. ‘ವಿಚಿತ್ರ ಕೂಟ’ ಒಟ್ಟು ೧೪೩ ಪುಟಗಳಷ್ಟು ದೀರ್ಘವಾದ ಕಾದಂಬರಿ. ನನಗೆ ಮೊದಲ ೨೮ ಪುಟಗಳು ಮತ್ತು ಮಧ್ಯದ ೪ ಪುಟಗಳು (೬೯-೭೨) ಇನ್ನೂ ದೊರೆತಿಲ್ಲ. ‘ಭೂತ’ ಕಾದಂಬರಿಯ ಮೊದಲ ೨೪ ಪುಟಗಳು ಮಾತ್ರ ದೊರೆತಿವೆ.[6]

‘ವಿಚಿತ್ರ ಕೂಟ’ ದ ೨೯ನೇ ಪುಟ ಪ್ರಾರಂಭವಾಗುವುದು ‘ವಸಂತ’ ಸಂಪುಟ-೧; ಸಂಚಿಕೆ-೨; ಜನವರಿ, ೧೯೨೪ರಿಂದ, ಈ ಸಂಚಿಕೆಯಿಂದ ಮುಂದುವರಿದ ಭಾಗ ಫೆಬ್ರವರಿ ೧೯೨೪ರ ಸಂಚಿಕೆಯಲ್ಲಿ ಅಂದರೆ ಸಂಚಿಕೆ-೩ರಲ್ಲಿ ದೊರೆಯುತ್ತದೆ. ಅದಕ್ಕಿಂತ ಮುಂದಿನ ‘ಸಂಚಿಕೆ-೪’ ಮಾರ್ಚಿ ತಿಂಗಳಿನದು. ‘ವಸಂತ’ ಮಾಸಪತ್ರಿಕೆಯಾಗಿತ್ತಾದ್ದರಿಂದ ಸಂಚಿಕೆ-೧ದ ಶಂಬರ ೧೯೨೩ರಲ್ಲಿ ಪ್ರಕಟವಾಗಿರಬೇಕು. ಅದೇ ‘ವಸಂತ’ ಪತ್ರಿಕೆಯ ಮೊತ್ತಮೊದಲಿನ ಸಂಚಿಕೆಯೂ ಆಗಿರುವಂತಿದೆ. ಆಗಿನಿಂದಲೇ ‘ವಿಚಿತ್ರಕೂಟ’ ಪ್ರಕಟವಾಗಿರಲು ಪ್ರಾರಂಭವಾಗಿರಬೇಕು. ೧೯೨೪ರಲ್ಲಿ ‘ವಿಚಿತ್ರಕೂಟ’ ಗ್ರಂಥ ರೂಪದಲ್ಲಿ ಪ್ರಕಟವಾದಾಗ ಕೋ.ಶಿ. ಕಾರಂತ ಎಂದು ಗ್ರಂಥಕರ್ತನ ಹೆಸರು ನಮೂದಿತವಾಗಿದೆ. “ವಸಂತ’ದಲ್ಲಿ ಪ್ರಕಟವಾಗುತ್ತಿರುವ ಈ…. ಪತ್ತೇದಾರಿ ಕಥೆಯು ಸಂಪೂರ್ಣವಾಗಿರುವುದು ಇದು… ಪ್ರಥಮ ಯತ್ನವಾದುದರಿಂದಲೂ, ಮಾತ್ರವಲ್ಲ; ಸ್ವತಂತ್ರ ಕಾದಂಬರಿ….ಲೂ ನ್ಯೂನಾತಿರಿಕ್ತವಾಗಿ ವಿಶೇಷವಾಗಿ ವಾಚಕರ ಕಣ್ಣಿಗೆ….ಬಹುದು. ಅಂತಹ ತಪ್ಪುಗಳೆಲ್ಲವನ್ನೂ ಕ್ಷಮಿಸಿ ಇನ್ನು ಮುಂದಕ್ಕೆ…. ಹೆಚ್ಚಿನ ಕಾದಂಬರಿಗಳನ್ನು ಬರೆಯುವ ಶಕ್ತಿಯು ಉಂಟಾಗಲೆಂದು…ರಾಗಿ ನಂಬುವ, – ತಮ್ಮವನಾದ ಗ್ರಂಥಕರ್ಥ” ಎಂದು ಬರೆದಿದ್ದಾರೆ.

‘ವಿಯೋಗಿನಿ’ಯನ್ನು ಪೂರ್ಣಗೊಳಿಸಿ ಪ್ರಕಟಿಸಿದ್ದಾದರೆ ಅದೇ ಕಾರಂತರ ಪ್ರಥಮ ಕಾದಂಬರಿಯಾಗುತ್ತಿತ್ತು. ಆಗ ಸಾಮಾಜಿಕ ಕಾದಂಬರಿಯಿಂದಲೇ ಕಾರಂತರ ಕಾದಂಬರಿಗಳ ಪ್ರಾರಂಭವೆಂದಾಗುತ್ತಿತ್ತು.ಆದರೆ ಕಾರಂತರು ಸಂಪೂರ್ಣವಾಗಿ ಬರೆದು ಮುಗಿಸಿ ಪ್ರಕಟಿಸಿದ ಪ್ರಥಮ ಕಾದಂಬರಿ ‘ವಿಚಿತ್ರಕೂಟ’ ವೆಂಬ ಪತ್ತೇದಾರಿ ಕಾದಂಬರಿಯಾದ್ದರಿಂದ ಕಾರಂತರ ಕಾದಂಬರಿಗಳ ಪ್ರಾರಂಭ ಪತ್ತೇದಾರಿ ಕಾದಂಬರಿಯಿಂದಲೇ ಆದಂತಾಯಿತು. ದೊರೆತಷ್ಟು ಭಾಗಗಳಿಂದ ‘ವಿಚಿತ್ರಕೂಟದ’ ಕಥೆಯನ್ನು ಬಹುಮಟ್ಟಿಗೆ ಅದರ ಭಾಷಾಶೈಲಿಯನ್ನೇ ಅನುಸರಿಸಿ ಸಾಕಷ್ಟು ವಿವರವಾಗಿ ಸಂಗ್ರಹಿಸಿ ಇಲ್ಲಿ ಕೊಡುತ್ತಿದ್ದೇನೆ :

ವಿಶ್ವನಾಥಪುರದ ಸಚ್ಚಿದಾನಂದನೆಂಬ ಶ್ರೀಮಂತನ ಬ್ಯಾಂಕಿನ ಲೂಟಿಯಾಗುತ್ತದೆ. ಆ ಲೂಟಿ ಮಾಡಿದವರು ತಾವೇ ಎಂದು ವಿಚಿತ್ರ ಕೂಟದವರಿಂದಲೇ ತಿಳಿದುಬರುತ್ತದೆ. ವಿಚಿತ್ರ ಕೂಟದವರನ್ನು ಪತ್ತೆ ಹಚ್ಚಬೇಕೆಂದು ವಿಶ್ವನಾಥಪುರದ ಪೊಲೀಸ್ ಇನ್ಸ್‌ಪೆಕ್ಟರ್ ಸುರನಾಥ ನಿಶ್ಚಯಿಸಿಕೊಂಡು ಮನೆಗೆ ಬರುತ್ತಾನೆ. ಮನೆಗೆ ಬಂದು ‘ವಿಶ್ವನಾಥ ವಾರ್ತೆ’ ಎಂಬ ದೈನಿಕ ಪತ್ರಿಕೆಯನ್ನು ಓದುತ್ತಿರುವಾಗ ಹಿಂದಿನ ರಾತ್ರಿ ಸುರನಾಥನಿಗಾದ ಅಪಮಾನವನ್ನೂ ಕೇಡಿಗರ ಸಾಹಸವನ್ನೂ ಅದರ ಅಗ್ರ ಲೇಖನದಲ್ಲಿ ವರ್ಣಿಸಿದ್ದರು. ಜೊತೆಗೆ ಪೊಲೀಸರ ಕುರಿತಾದ ನಕಲಿಗಳೂ ಇದ್ದುವು. ಲೇಖನದ ಅಡಿಯಲ್ಲಿ ಸಂಪಾದಕರು, – ‘ಈ ವಿಚಾರವನ್ನು ಬರೆದ ಕಾಗದವೊಂದು ತಮ್ಮ ಲೆಟರ್ ಬಾಕ್ಸಿನಲ್ಲಿ ಮುಂಜಾನೆ ಪತ್ರಗಳನ್ನು ತೆರೆಯುವಾಗ ದೊರಕಿತೆಂದೂ ಪತ್ರಕ್ಕೆ ಲೇಖಕನ ಸಹಿ ಇದ್ದಿಲ್ಲವೆಂದೂ, ಆ ವಿಚಾರದ ನಿಜಾಂಶ ಬಲ್ಲವರು ತಮಗೆ ತಿಳಿಸಿದರೆ ಉಪಕಾರವಾಗುತ್ತಲಿತ್ತು’ ಎಂದೂ ಬರೆದಿದ್ದರು. ಅದರಿಂದ ಸುರನಾಥ ‘ತನಗಾದ ಪಾಡನ್ನು ಕುರಿತು ವೃತ್ತಪತ್ರಕ್ಕೆ ಬರೆದವರಾರಿಬಹುದು? ಈ ವಿದ್ಯಮಾನದ ವಿಚಾರವು ಜವಾನರಿಗೂ, ನನಗೂ, ಕೂಟದವರಿಗೂ ಮಾತ್ರ ತಿಳಿದಿತ್ತು. ನನ್ನವರಾರೂ ಅದನ್ನು ಹೊರಗೆಡವಲಿಲ್ಲ. ಅಂದ ಬಳಿಕೆ ಅದನ್ನು ನನಗೆ ಭೇಟಿಯಾದ ವಿಚಿತ್ರಕೂಟದವರೇ ಬರೆದು ಪತ್ರಿಕಾ ಕಛೇರಿಯ ಲೆಟರ್ ಬಾಕ್ಸಿನಲ್ಲಿ ಹಾಕಿರಬೇಕು…’ ಮುಂತಾಗಿ ಆಲೋಚನೆ ಮಾಡುತ್ತಾನೆ. ಆನಂತರ ಸಂಪಾದಕರನ್ನು ಕಂಡು ಆ ವಿಷಯವಾಗಿ ಇನ್ನು ಕೆಲವು ಕಾಲ ಮೌನವಾಗಿರಬೇಕೆಂದು ವಿನಂತಿಸಿಕೊಂಡು ಮೊದಲಿಗಿಂತ ಹೆಚ್ಚಿನ ದೃಢತೆ ಮತ್ತು ಕರ್ತವ್ಯನಿಷ್ಠೆಯಿಂದ ವಿಚಿತ್ರ ಕೂಟದವರ ಪತ್ತೆ ಹಚ್ಚಲು ಸಿದ್ಧನಾಗುತ್ತಾನೆ.

ಸುರನಾಥನು ಸುಂದರ ಸಿಂಗ ಮತ್ತು ಪ್ರೇಮ ಸಿಂಗ ಎಂಬ ಇಬ್ಬರೊಡಗೂಡಿ ವಿಚಿತ್ರ ಕೂಟದವರು ಸಭೆ ಸೇರಲಿರುವ ‘ವಿಚಿತ್ರ ಕೂಟ ದುರ್ಗ’ದ ಶೋಧನೆಗಾಗಿ ಕುದುರೆಗಳ ಮೇಲೆ ಕುಳಿತು ಪ್ರಯಾಣ ಬೆಳೆಸುತ್ತಾನೆ. ವಿಶ್ವನಾಥಪುರದ ಗುಡ್ಡಗಾಡಿನ ಉನ್ನತ ಶಿಖರವನ್ನು ಅವರು ತಲುಪಿ ರಾತ್ರಿ ವಿಶ್ರಾಂತಿ ಪಡೆಯುತ್ತಿರುವಾಗ ವಿಚಿತ್ರ ಕೂಟದವರ ಪಂಜುಗಳು ಹೇಗೆ ಕಾಣಿಸುತ್ತವೆ. (ವಿಚಿತ್ರ ಕೂಟದವರಿಗೂ ಇವರ ಪತ್ತೆ ಹತ್ತುತ್ತದೆ.) ದೂರದಲ್ಲಿ ಕಾಣುವ ಹೊಗೆಯನ್ನನುಸರಿಸಿ ಸುರನಾಥ ಹಾಗೂ ಆತನ ಸಂಗಡಿಗರು ಹೊರಡುತ್ತಾರೆ. ಮಧ್ಯೆ ಅವರಿಗೆ ಭೋರ್ಗರೆದು ಹರಿಯುವ ನದಿಯೊಂದು ಇದಿರಾಗುತ್ತದೆ. ಅದರ ದಂಡಗುಂಟ ಹೋದಾಗ ಹಗ್ಗದಿಂದ ಮಾಡಿದ ಒಂದು ಸಂಕ ಕಾಣಿಸುತ್ತದೆ. ಕುದರೆಗಳನ್ನು ಮರೆಯಲ್ಲಿ ಕಟ್ಟಿ ಅತ್ಯಾವಶ್ಯಕ ವಸ್ತುಗಳೊಂದಿಗೆ ಸೇತುವೆಯನ್ನು ದಾಟಿ ಮುಂದೆ ಹೋದರೆ ಹೊತ್ತು ಮುಳುಗುವುದಕ್ಕೆ ಸರಿಯಾಗಿ ಧೂಮ ಹೊರಡುತ್ತಿದ್ದ ಸ್ಥಳಕ್ಕೆ ಬರುತ್ತಾರೆ. ಅಲ್ಲಿ ಸಣ್ಣ ದ್ವಾರವುಳ್ಳ ಒಂದು ಗುಹೆ ಕಾಣುತ್ತದೆ. ಆ ಗುಹೆಯಲ್ಲಿ ಮನುಷ್ಯರಾರೂ ಇಲ್ಲವೆಂಬುದನ್ನು ದೂರದಿಂದಲೇ ದುರ್ಬೀನಿನ ಸಹಾಯದಿಂದ ದೃಢಪಡಿಸಿಕೊಂಡು ಗವಿಯೊಳಕ್ಕೆ ಹೋಗುತ್ತಾರೆ. ಗವಿಯೊಳಕ್ಕೆ ಹೋಗಿ ಕುಳಿತೊಂದು ತಾಸು ಹೊತ್ತಿನಲ್ಲಿ ಗವಿಯ ಮೇಲು ಭಾಗದಿಂದ ಒಂದು ದೊಡ್ಡ ಬಂಡೆಯ ಉರುಳಿ ಬಂದು, ಗವಿಯ ದ್ವಾರವನ್ನು ಮುಚ್ಚಿಬಿಡುತ್ತದೆ. ‘ಹಗಲಿಗೂ ರಾತ್ರಿಗೂ ತಾರತಮ್ಯವಿಲ್ಲದ ಈ ಸ್ಥಳದಲ್ಲಿ ಕೊಳೆತು ಸಾಯಬೇಕು’ ಎಂದು ಸುರನಾಥನು ನಿಟ್ಟುಸಿರುಬಿಡುತ್ತಾನೆ. ಹೀಗೆ ವಿಚಿತ್ರಕೂಟದವರು ಸುರನಾಥ ಹಾಗೂ ಆತನ ಸಂಗಡಿಗರನ್ನು ಸುಲಭವಾಗಿ ಬಂಧಿಸುತ್ತಾರೆ.

ಇಲ್ಲಿಗೆ ‘ವಿಚಿತ್ರಕೂಟ’ ದವರು ಸಚ್ಚಿದಾನಂದನಿಗೆ ಒಂದು ಪತ್ರ ಬರೆದು ಅದರಲ್ಲಿ : “ರಾಯರೆ, ನಿಮ್ಮ ದ್ರವ್ಯವನ್ನಪಹರಿಸಿದ ನಮ್ಮನ್ನು ಹುಡುಕುವುದರ ಸಲುವಾಗಿ ಹೋದ ಸುರನಾಥನು ಇಂದು ನಮ್ಮ ಬಲೆಗೆ ಬಿದ್ದಿರುವನು. ಈ ಮೊದಲೇ ಆತನಿಗೆ ನಾವು ಎರಡಾವರ್ತಿ ಎಚ್ಚರಿಕೆಯನ್ನು ಕೊಟ್ಟಿದ್ದರೂ ಆತನು ಅದನ್ನು ಅಲಕ್ಷಿಸಿ ತನ್ನ ದುಡುಕುತನದಿಂದ ಅವಸಾನವನ್ನು ತಂದುಕೊಳ್ಳುತ್ತಲಿರುವನು. ದಯಾಳುಗಳಾದ ನೀವು ಇನ್ನು ಮುಂದಕ್ಕೆ ಇತರ ಯಾರನ್ನೂ ಬಲಿಗೊಡಬೇಡಿರಿ.

ಇಂತು,
ಕೆ. ಕುಮಾರ.”

ಎಂದಿತ್ತು. ಇದರಿಂದ ಸಚ್ಚಿದಾನಂದ ಸುರನಾಥನು ಹತನಾದನೆಂದೇ ತಿಳಿದು ಗಾಬರಿಯಾದನು. ಬ್ಯಾಂಕಿನ ಕರಣೀಕರಾದ ವಿಶ್ವಾಸ, ಪ್ರಪುಲ್ಲರ ಸಲಹೆಯ ಮೇರೆಗೆ ಕಲಿಕತ್ತೆಯ ಪ್ರಸಿದ್ಧ ಪತ್ತೇದಾರ ಶಂಕರತನಯನನ್ನು ಬರಮಾಡಿಕೊಂಡು ಸುರನಾಥನ ಪ್ರಾಣಹರಣ ಮಾಡಿದ ವಿಚಿತ್ರ ಕೂಟದವರಿಗೆ ತಕ್ಕ ಪ್ರಾಯಶ್ಚಿತ್ತವನ್ನು ಮಾಡಲೇಬೇಕೆಂದು ನಿಶ್ಚಯಿಸಿ ಶಂಕರತನಯನಿಗೆ ವಿಶ್ವನಾಥಪುರಕ್ಕೆ ಹೊರಟು ಬರುವಂತೆ ತಂತಿ ಸಂದೇಶ ಕಳಿಸುತ್ತಾನೆ.

ಶಂಕರತನಯನು ಸಚ್ಚಿದಾನಂದನ ರಿಪ್ಲೈಪೈಡ್ ತಂತಿಗೆ ಉತ್ತರ ಕಳಿಸದೆ ವಿಶ್ವನಾಥಪುರಕ್ಕೆ ಹೊರಡುವ ನಿಶ್ಚಯಮಾಡಿ ಹೊರಟುಬಿಡುತ್ತಾನೆ. ಅವನ ಮಿತ್ರನಾದ ಅರವಿಂದ, ನಾಯಿ ‘ಬಾಗ್’ದೊಂದಿಗೆ ಸಾಯಂಕಾಲ ಹೊರಟುಬರುವುದೆಂದಾಯಿತು.

ಟ್ರೇನಿನಲ್ಲಿ ಹೊರಡುವಾಗ ಶಂಕರನತಯನು ಕಾಬೂಲಿಯ ವೇಷದಲ್ಲಿದ್ದನು. ಅದೇ ಟ್ರೇನಿನಲ್ಲಿ ಪಂಜಾಬಿಯ ವೇಷದಲ್ಲಿದ್ದ ವಿಚಿತ್ರಕೂಟದ ಸದಸ್ಯನೊಬ್ಬನಿದ್ದನು. ಎಲ್ಲರೂ ಇಳಿದು ಹೋದ ಮೇಲೆ ಅವರಿಬ್ಬರೇ ಆ ಭೋಗಿಯಲ್ಲಿ ಇರುವಂತಾಯಿತು. ಆಗ ಬ್ಯಾಂಕ್ ಲೂಟಿಯಾದ ಪ್ರಸ್ತಾಪ ಬರುತ್ತದೆ. ಆನಂತರ ಕಾಬೂಲಿಯು ನಿದ್ದೆ ಬಂದವನಂತೆ ನಟಿಸಿದಾಗ ಪಂಜಾಬಿಯು ಕಾಬೂಲಿಯ ಗಂಟಿಗೆ ಕೈಹಾಕಿ ತೆಗೆದು ತನ್ನ ಚಿಕ್ಕಪೆಟ್ಟಿಗೆಯನ್ನು ತೆಗೆಯಹೋದನು. ಆಗ ಕಾಬೂಲಿಯು ದೊಪ್ಪನೆ ಎದ್ದು ಅವನನ್ನು ಹಿಡಿಯಹೋದನು. ಆದರೆ ಇವನ ಕೈಗೆ ಸಿಗದೆ ಪಂಜಾಬಿಯು ಗಾಡಿಯಿಂದ ಕೆಳಗೆ ಧುಮಿಕಿಬಿಟ್ಟನು. ಆತನ ಚಿಕ್ಕ ಪೆಟ್ಟಿಗೆ ಕಾಬೂಲಿಯ ಹತ್ತಿರವೇ ಉಳಿಯಿತು.ಕಾಬೂಲಿಯ ಗಂಟು ಆತನಿಗೆ ದೊರೆಯಿತು. ಇದೆಲ್ಲ ನಡೆದದ್ದು ಮಿನೋಬಾ ನಿಲ್ದಾಣದ ಸಮೀಪ.

ಪಂಜಾಬಿಯ ಪೆಟ್ಟಿಗೆಯನ್ನು ಕಾಬೂಲಿಯು ಒಡೆದು ನೋಡಲಾಗಿ ಅದರಲ್ಲಿ ಒಂದು ಕಾಗದ ದೊರೆಯಿತು. ಆ ಕಾಗದದಲ್ಲಿ :

“ನಾನು ತ್ರಿಕರಣಪೂರ್ವಕವಾಗಿ ಈ ವಿಚಿತ್ರಕೂಟಕ್ಕೆ ಸೇರಿದವನಿದ್ದು ಈ ಕೂಟದ ಮೇಲಧಿಕಾರಿಗಳ ನುಡಿಯನ್ನು ಅಕ್ಷರಶಃ ಪಾಲಿಸಲು ಎಂದಿಗೂ ಹಿಂಜರಿಯುವುದಿಲ್ಲ. ಇದಕ್ಕೆ ನಾನು ತಪ್ಪಿದರಾಗಲಿ, ಇಲ್ಲವೇ ಈ ಕೂಟದವರ ಸುದ್ದಿಯನ್ನು ಇತರರಿಗೆ ಹೊರಗೆಡವಿದರಾಗಲಿ, ಆ ತಪ್ಪಿಗೆ ಮರಣದಂಡನೆಯೇ ತಕ್ಕ ಪ್ರಾಯಶ್ಚಿತ್ತವೆಂದು ಒಪ್ಪಿಕೊಂಡಿರುವೆನು.

– ಹೀಗೆ ಬರೆದಿತ್ತು. ಸಹಿಯು ಅಸ್ಪಷ್ಟವಾಗಿದ್ದಿತ್ತು. ಆನಂತರ ಪತ್ರದಲ್ಲಿ “ಈ ಪತ್ರವನ್ನು ತೋರಿದೊಡನೆಯೇ ಇಲ್ಲವೇ ತನ್ನ ನಂಬರನ್ನು ತಿಳಿಸಿ ಕೂಟದ ಸಂಕೇತ ಸಂಜ್ಞೆಯನ್ನು ಮಾಡಿದೊಡನೆಯೇ ಈತನನ್ನು ಸಭೆಯಲ್ಲಿ ಸೇರಿಸಿಕೊಳ್ಳತಕ್ಕದ್ದು – (ಸಹಿ) ಕಠೋರ ಕುಮಾರ” – ಎಂದಿತ್ತು.

ಈ ಕಾಗದವನ್ನು ನೋಡಿದ ಮೇಲೆ ಕೂಟದವರ ಸಂಘಶಕ್ತಿಯನ್ನು ಕಂಡು ಶಂಕರತನಯನಿಗೆ (ಕಾಬೂಲಿಗೆ) ಆಶ್ಚರ್ಯವಾಯಿತು.

ವಿಶ್ವನಾಥಪುರದ ನಿಲ್ದಾಣಕ್ಕೆ ಶಂಕರತನಯನನ್ನು ಎದುರುಗೊಳ್ಳಲು ಹೋದ ಸಚ್ಚಿದಾನಂದನ ಕರಣಿಕನಿಗೆ ಕಾಬೂಲಿಯ ವೇಷದಲ್ಲಿದ್ದ ಶಂಕರತನಯನ ಗುರುತು ಹಿಡಿಯಲಾಗಲಿಲ್ಲ. ಆದ್ದರಿಂದ ಶಂಕರತನಯನು ಒಂದು ಕುದುರೆ ಗಾಡಿಯನ್ನೇರಿ ಸಚ್ಚಿದಾನಂದನ ಮನೆಯ ಕಡೆ ಹೊರಟನು. ಆದರೆ ಆ ಗಾಡಿಯ ಹಿಂದೆ ಸ್ವಲ್ಪ ದೂರದಲ್ಲಿ ಇನ್ನೊಂದು ಗಾಡಿಯು ಹಿಂಬಾಲಿಸಿ ಬರುತ್ತಲಿರುವುದು ಕಾಣಿಸಿತು. ಮುಂದಿನ ಗಾಡಿ ತಿರುಗಿದಲ್ಲಿ ಹಿಂದಿನ ಗಾಡಿ ತಿರುಗುವುದು ಕಾಣಿಸಿತು. ಆದ್ದರಿಂದ ಶಂಕರತನಯನು ಗಾಡಿಯನ್ನು ಪೂರ್ವಾಭಿಮುಖವಾಗಿ ತಿರುಗಿಸಲು ಹೇಳಿದನು.ಆಗ ಹಿಂಬಾಲಿಸಿದ ಗಾಡಿಯು ನಿಂತುಬಿಟ್ಟಿತು. ಉತ್ತರಾಭಿಮುಖವಾಗಿ ಅಂದರೆ ಸಚ್ಚಿದಾನಂದನ ಮನೆಯಿರುವ ದಿಕ್ಕಿಗೆ ಹೊರಟ ಗಾಡಿಗಳನ್ನು ಅದು ಹಿಂಬಾಲಿಸಿತು. ಅದು ವಿಚಿತ್ರಕೂಟದವರ ಕಡೆಯವದು ಯಾರದೋ ಗಾಡಿ ಇರಬೇಕೆಂದು ನಿರ್ಧರಿಸಿದ ಶಂಕರತನಯನು ಗಾಡಿಯವನ ಸಹಾಯದಿಂದ ಕಾಲುನಡಿಗೆಯಿಂದಲೇ ಸಚ್ಚಿದಾನಂದನ ಮನೆ ಸೇರಿದನು.

ಸಚ್ಚಿದಾನಂದನನ್ನು ಕಂಡು ಆತನಿಗೆ ಧೈರ್ಯಕೊಟ್ಟು ತಾನು ವಿಶ್ವನಾಥಪುರಕ್ಕೆ ಬರುವ ಸುದ್ದಿ ವಿಚಿತ್ರಕೂಟದವರಿಗೆ ಹೇಗೆ ತಿಳಿಯಿತೆಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ತಂತಿ ಆಫೀಸಿನಲ್ಲಿ ವಿಚಾರಿಸಿ ಡಾಕ್ಟರ್ ವಿನಯಚಂದ್ರ ಎಂಬವರಿಗೆ : Our Calcutta friend comes passenger train night give him cordial welcome – SHACHI – ಎಂದು ತಂತಿ ಬಂದುದೂ ಮಿನೋಬಾ ಎಂಬಲ್ಲಿಂದಲೇ ತಂತಿ ಬಂದಿರುವುದೂ ತಿಳಿದ ಮೇಲೆ ಶಂಕರತನಯನಿಗೆ ಅದು ಪಂಜಾಬಿಯ ಕೆಲಸವೇ ಅಂದರೆ ವಿಚಿತ್ರ ಕೂಟದವರ ಕೆಲಸವೇ ಎಂದು ತಿಳಿಯಿತಲ್ಲದೆ ಡಾಕ್ಟರ್ ವಿನಯಚಂದ್ರನು ಆ ಗುಂಪಿಗೆ ಸೇರಿದವನಿರಬೇಕೆಂದೂ ಅನಿಸಿತು.

ಆದ್ದರಿಂದ ಡಾಕ್ಟರ್ ವಿನಚಂದ್ರನ ನಿಜವನ್ನರಿಯಲೆಂದು ಶಂಕರತನಯ ಸಚ್ಚಿದಾನಂದನ ಕರಣಿಕನೊಬ್ಬನೊಂದಿಗೆ ಡಾಕ್ಟರರ ಮನೆಗೆ ಹೋಗಿ ನಾಯಿಗೆ ಔಷದಿ ಪ್ರಯೋಗಿಸಿ ಮೂರ್ಛೆಗೊಳಿಸಿ ಮಹಡಿ ಏರುವ ಏಣಿ ಮೂಲಕ ಮಹಡಿಯನ್ನೇರಿದನು. ಅಲ್ಲಿ ನಾಲ್ವರು ಜನರು ಶಂಕರತನಯನು ಊರಿಗೆ ಬಂದ ವಿಷಯವನ್ನೇ ಕುರಿತು ಗುಪ್ತಾಲೋಚನೆ ನಡೆಸುತ್ತಿದ್ದರು. ಅದರಿಂದ ವಿನಯಚಂದ್ರನ ಗುಟ್ಟು ಬಯಲಾಯಿತಲ್ಲದೆ ತನ್ನನ್ನು ಹಿಂಬಾಲಿಸಿದ ಗಾಡಿಯು ವಿಚಿತ್ರಕೂಟದವರದೇ ಎಂಬುದೂ ಶಂಕರತನಯನಿಗೆ ಖಚಿತವಾಯಿತು. ಹಾಗಯೇ ಅದೇ ರಾತ್ರಿ ವಿಚಿತ್ರಕೂಟದವರ ಸಭೆ ಕಾಡಿನಲ್ಲಿ ಸೇರಲಿರುವುದೆಂಬ ಸಮಾಚಾರವೂ ಶಂಕರತನಯನಿಗೆ ತಿಳಿದುಬರುತ್ತದೆ. ಆದ್ದರಿಂದ ಅವರನ್ನು ಪತ್ತೆ ಹಚ್ಚಲೆಂದು ತನ್ನ ಮಿತ್ರನಾದ ಅರವಿಂದ ಹಾಗೂ ‘ಬಾಗ್’ ನಾಯಿಯೊಡಗೂಡಿ ರಾತ್ರಿಯಲ್ಲಿಯೇ ಕಾಡಿನ ದಾರಿಯಲ್ಲಿ ಪ್ರಯಾಣ ಬೆಳೆಸುತ್ತಾನೆ.

ಕಾಡಿನಲ್ಲಿ ಹೋಗುತ್ತಿರುವಾಗ ‘ಬಾಗ್’ ಸಹಾಯದಿಂದ ಅಲ್ಲಿ ಅಡಗಿದ್ದ ಒಬ್ಬ ವಿಚಿತ್ರಕೂಟದ ಸದಸ್ಯನನ್ನು ಸೆರೆಹಿಡಿಯುತ್ತಾರೆ. ಪ್ರಪುಲ್ಲನೆಂಬ ಆತನು ಡಾ. ವಿನಯಚಂದ್ರನ ಮಿತ್ರನು. ವಿನಯ ಚಂದ್ರನು ಆತನನ್ನು ಉಪಯಾಂತರಗಳಿಂದ ತೊಂದರೆಗೊಡ್ಡಿ ಮಂಡಳಿಗೆ ಸೇರುವಂತೆ ಪ್ರತಿಜ್ಞೆಯನ್ನು ಮಾಡಿಸಿಕೊಂಡಿದ್ದನು. ಆತನು ಶಂಕರತನಯನ ಸಾಮರ್ಥ್ಯದ ಬಗ್ಗೆ ಮೊದಲೇ ಕೇಳಿ ಬಲ್ಲವನಾಗಿದ್ದುದರಿಂದ ಶಂಕರತನಯನಿಗೆ ಶರಣಾಗಿ, “ಇನ್ನು ಮುಂದಕ್ಕೆ ನಾನು ನಿಮ್ಮ ಅಡಿಯಾಳಾಗಿ ಕೂಟದವರ ಪತ್ತೆಗೆ ಸಹಕಾರಿಯಾಗುವೆನು” – ಎಂದು ಹೇಳಿ ಕೂಟದವರಿಂದ ತನ್ನ ಪ್ರಾಣರಕ್ಷಣೆಯ ಬಗ್ಗೆ ಶಂಕರತನಯನಿಂದ ವಾಗ್ದಾನ ಪಡೆಯುತ್ತಾನೆ. ಆತನು ಬ್ಯಾಂಕಿನ ದರೋಡೆಯ ಕುರಿತು ತನಗೆ ತಿಳಿದಿರುವ ವಿಚಾರವೆಲ್ಲವನ್ನೂ ಹೇಳಿದ್ದಲ್ಲದೆ ಸುರನಾಥನು ಎಲ್ಲಿ ಸಿಲುಕಿ ಬಿದ್ದಿರುವನೆಂಬುದನ್ನೂ ತಿಳಿಸುತ್ತಾನೆ.

ಪ್ರಪುಲ್ಲನಿಂದ ಮುಂದಿನ ದಾರಿಯನ್ನು ತಿಳಿದುಕೊಂಡು ಗವಿಯಲ್ಲಿ ಸಿಕ್ಕಿಬಿದ್ದಿರುವ ಸುರನಾಥನನ್ನೂ ಆತನ ಸಂಗಡಿಗರನ್ನೂ ಬಿಡಿಸಿಕೊಂಡು ವಿಚಿತ್ರಕೂಟದವರ ದುರ್ಗವನ್ನು ಪತ್ತೆಹಚ್ಚಲು ಶಂಕರತನಯನು ಅರವಿಂದ ಮತ್ತು ‘ಬಾಗ್’ನೊಂದಿಗೆ ಹೊರಡುತ್ತಾನೆ.

ಗವಿಯ ಹತ್ತಿರ ಬಂದು ತಾವ್ಯಾರೆಂಬುದನ್ನು ಸುರನಾಥನಿಗೆ ತಿಳಿಸಿ ಆತನನ್ನುಳಿಸುವ ಭರವಸೆ ನೀಡುತ್ತಾನೆ. ಕತ್ತಲೆಯಾದೊಡನೆ ಗವಿಗೆ ಆನಿಸಿದ್ದ ಬಂಡೆಗಳನ್ನು ಕಟ್ಟಿಗೆಯ ಸನ್ನೆಮರದ ಸಹಾಯದಿಂದ ಮನುಷ್ಯರು ಹೊರಗೆ ನುಸುಳಿ ಬರಬಹುದಾದಷ್ಟನ್ನು ಹೇಗಾದರೂ ಮಾಡಿ ಸರಿಸಿ, ಸುರನಾಥ ಮತ್ತು ಆತನ ಸಂಗಡಿಗರನ್ನು ಬಂಧಮುಕ್ತರನ್ನಾಗಿಸುತ್ತಾನೆ….ಶಂಕರತನಯ, ಅರವಿಂದ, ಸುರನಾಥರು ವಿಚಿತ್ರಕೂಟದವರ ಪತ್ತೆಹಚ್ಚಲು ವಿಚಿತ್ರದುರ್ಗದ ಕಡೆಗೆ ಹೊರಟರು. ಅಲ್ಲಿ ಬಂದಾಗ ಯಾವುದೋ ಕೆಲಸದಿಂದ ಆಗತಾನೇ ಮರಳಿ ಬಂದಂತಿದ್ದ ಕಠೋರ ಕುಮಾರನು ತನ್ನ ಉಡಿಗೆ ತೊಡಿಗೆಯನ್ನು ಸಹ ತೆಗೆಯದೇ ಹಾಗೆಯೇ ನಿದ್ರೆ ಮಾಡುತ್ತಿದ್ದುದೂ ಉಳಿದವರೆಲ್ಲರೂ ಅಲ್ಲಿ ನಿದ್ರಾವಶರಾಗಿದ್ದುದೂ ಕಂಡು ಬಂದಿತು. ಅರವಿಂದನು ಮಲಗಿದ್ದ ಮುದುಕರ ಮೇಲೆ ಔಷದಿ ಪ್ರಯೋಗ ಮಾಡಿದನು. ಶಂಕರತನಯನು ಕಠೋರ ಕುಮಾರನ ಹಣೆಗೆ ಪಿಸ್ತೂಲನ್ನು ಹಿಡಿದು ನಿಂತ ಸ್ವಲ್ಪ ಹೊತ್ತಿನಲ್ಲಿ ಕಠೋರ ಕುಮಾರನು ಎಚ್ಚೆತ್ತನು. ಆದರೆ ಶಂಕರತನಯನು, “ಕದಲಬೇಡ, ಶರಣಾಗತನಾಗು. ಇಲ್ಲವಾದರೆ ಪ್ರಾಣ ಹೋದೀತು.ಈಗ ಯಾರೊಬ್ಬರೂ ನಿನ್ನ ಸಹಾಯಕ್ಕೆ ಬರಲಾರರು. ಎಲ್ಲರೂ ನಿಶ್ಚೇಷ್ಟಿತರಾಗಿ ಬಿದ್ದಿರುವರೆಂದ ಮೇಲೆ…” ಎಂದನು. ಅದಕ್ಕೆ ಕಠೋರ ಕುಮಾರನು ದೈರ್ಯಗೆಡದೆ, “ಮಿತ್ರಾ, ನಾನು ಸುಲಭದಲ್ಲಿಯೇ ನಿನ್ನ ಕೈಗೆ ಸಿಲುಕಿರುವೆನಾದುದರಿಂದಲೇ ನಿನ್ನೀ ಪ್ರಾಣವನ್ನು ಮತ್ತಷ್ಟು ಮತ್ತಷ್ಟು ಸಂಕಟಕ್ಕೊಡ್ಡಿದೆಯೆಂದು ತಿಳಿದಿರು…. ಹಗಲನ್ನು ರಾತ್ರಿಯನ್ನಾಗಿ ಮಾಡಲು ಸಮರ್ಥರಾದಂತಹ ಕೇಸರಿಗಳು ಈ ತಂಡದಲ್ಲಿ ಅನೇಕರಿರುವರು. ಆದುದರಿಂದ ನಿನ್ನ ಸಾಹಸಕ್ಕೆ ಕೊನೆ ಸಿಲುಕಿತೆನ್ನುವಿಯಾ? ಇಲ್ಲ, ಇಲ್ಲ.” – ಇತ್ಯಾದಿಯಾಗಿ ಹೇಳಿ ಅಪಾರ ಧೈರ್ಯವನ್ನು ಪ್ರಕಟಪಡಿಸುತ್ತಾನೆ. ಆತನು ವಿಚಿತ್ರ ಕೂಟದ ಸದಸ್ಯರಾರೆಂದು ತಿಳಿಸಿದರೆ ಆತನ ಪ್ರಾಣದಾನ ಮಾಡುವೆನೆಂಬ ಶಂಕರತನಯನ ಮಾತಿಗೆ ಕಠೋರ ಕುಮಾರನು ಕೆರೆಳಿ, “……ಹಸಿವು ಹೆಚ್ಚಿತೆಂದು ಹುಲಿಯ ಮರಿಯು ಹುಲ್ಲನ್ನು ಮೇಯುವುದೇ?… ಹುಟ್ಟಿದ ಮನುಷ್ಯನಿಗೆ ಸಾವು ಸಿದ್ಧ…..” ಇತ್ಯಾದಿಯಾಗಿ ಉತ್ತರ ಕೊಟ್ಟುದರಿಂದ ಆತನ ವಿಷಯದಲ್ಲಿ ಶಂಕರತನಯನಿಗೆ ಅಭಿಮಾನ ಹುಟ್ಟಿತ್ತಾದರೂ ಕರ್ತವ್ಯ ಪ್ರಜ್ಞೆಯಿಂದಾಗಿ ಆತನನ್ನೂ ಆತನ ಕಡೆಯವರನ್ನೂ ತನ್ನ ಇತರ ಸಂಗಾತಿಗಳನ್ನು ಕರೆಸಿ ಬಂಧಿಸಿದನು.

ಈ ಬಂದಿಗಳನ್ನು ಒಯ್ಯುವಾಗ ದಾರಿಯಲ್ಲಿ ನದಿಯ ಮೇಲಿನ ಹಗ್ಗದ ಸೇತುವೆಯನ್ನು ದಾಟಬೇಕಾದ ಸ್ಥಳ ಬಂದಿತು. ಆಗ ಉಳಿದವರಿಗೆ ತೊಡಿಸಿದ್ದ ಕೈ ಕೋಳವನ್ನು ಬಿಡಿಸಿ ಅವರ ಹಿಂದಕ್ಕೂ ಮುಂದಕ್ಕೂ ಸಶಸ್ತ್ರಕಾವಲಿನವರು ಇದ್ದು ಸೇತುವೆ ದಾಟಿಸಿದಂತೆ ಕಠೋರ ಕುಮಾರನ ಕೈಕೋಳ ಬಿಚ್ಚುವ ಧೈರ್ಯವಾಗಲಿಲ್ಲ. ಆದ್ದರಿಂದ ಆತನನ್ನು ಸುರನಾಥ ಮತ್ತು ಶಂಕರತನಯರು ತಮ್ಮ ಹೆಗಲ ಮೇಲೇರಿಸಿ ಸೇತುವನ್ನು ಪಾರಾಗಲುಪಕ್ರಮಿಸಿದರು. ಎಡವುತ್ತ ತಡವುತ್ತ ಭಾರವಾದ ಆ ಹೊರೆಯನ್ನು ಹೊತ್ತುಕೊಂಡು ಅವರು ಸಂಕದ ನಡುಭಾಗವನ್ನು ಸೇರಿದರೋ ಇಲ್ಲವೋ ಎಂಬುವಷ್ಟರಲ್ಲಿಯೇ ಬಂದಿಯು ಉರುಳಾಡಿ ವೇಗ ಹರಿಯುತ್ತಿದ್ದ ನದಿಯ ಪ್ರವಾಹದಲ್ಲಿ ಧುಮುಕಿಬಿಟ್ಟನು. ಹಾಗೆ ಧುಮುಕುವಾಗ ಆತನು ತನ್ನ ಶಕ್ತಿಸರ್ವಸ್ವವನ್ನೂ ಪ್ರಯೋಗಿಸಿ ಕೈಗಳನ್ನು ಬಂಧಿಸಿದ್ದ ಆ ಪೊಲೀಸು ಕೈಕೋಳವನ್ನು ಮುರಿದುಬಿಟ್ಟಿದ್ದನು. ಆತನು ನೀರಿನಲ್ಲಿ ಬಿದ್ದೊಡನೆಯೇ ಅದರಲ್ಲಿ ಅದೃಶ್ಯನಾದನು. ಬಹಳ ಆಳವಾಗಿದ್ದು ಅಲ್ಲಲ್ಲಿ ಕಲ್ಲುಬಂಡೆಗಳನ್ನು ಚುಂಬಿಸುತ್ತ ಹರಿಯುತ್ತಲಿದ್ದ ಆ ನದಿಯಲ್ಲಿ ಧುಮುಕಿದ ಮನುಷ್ಯನು ಜೀವದಿಂದ ಬದುಕುವುದು ಕಠಿಣವೆಂದು ತಿಳಿದಿದ್ದ ಪತ್ತೇದಾರನು ಹತಾಶನಾಗದೆ, ವಿಸ್ಮಯದಿಂದ ನೋಡುತ್ತಿದ್ದ ಸಂಗಾತಿಗಳಿಗೆ ಕಣ್ಣುಸೆನ್ನೆಮಾಡಿ ತಾನೂ ಸಹ ಆ ನದಿಯಲ್ಲಿ ಧುಮುಕಿ ನದಿಯ ಗರ್ಭವನ್ನು ಸೇರಿದನೋ ಎಂಬಂತೆ ಮಾಯವಾದನು.

ಕಾಲು ತಾಸು ಮೀರಿಹೋದರೂ ಯಾರೊಬ್ಬರ ಪತ್ತೆಯೂ ಸಿಗದು. ಅರವಿಂದನು ಕೈಯಲ್ಲಿ ಪಿಸ್ತೂಲನ್ನು ಹಿಡಿದುಕೊಂಡು ಪ್ರವಾಹವನ್ನು ದಂಡೆಯ ಮೇಲಿನಿಂದಲೇ ಮುಂದುವರಿದನು. ಬಹುದೂರ ನಡೆದನು; ಎಲ್ಲಿಯೂ ಸಾಹಸಿಗಳ ಸುಳಿವೇ ದೊರೆಯಲ್ಲಿಲ್ಲ. ಆತ ತುಂಬ ದೂರ ಹೋದ ಮೇಲೆ ಶಂಕರತನಯನೊಬ್ಬನು ನದಿಯ ದಡವನ್ನು ಹಿಡಿದುಕೊಂಡು ಬಡಿದಾಡುತ್ತಲಿರುವುದು ಕಾಣಿಸಿತು. ಅರವಿಂದನು ಆತನಿಗೆ ಹಿಡಿದುಕೊಳ್ಳಲು ಬಟ್ಟೆಯನ್ನೆಸೆದನು. ಆತನು ಹಾಗೂ ಹೀಗೂ ದಡಕ್ಕೆ ಬಂದು ಮೂರ್ಛೆ ಹೋದನು. ಸ್ವಲ್ಪ ಹೊತ್ತಿನ ನಂತರ ಅತನಿಗೆ ಎಚ್ಚರವಾಯಿತು. ನೀರಿನಲ್ಲಿ ಶಂಕರತನಯನ ದೇಹವನ್ನು ಆಕ್ರಮಿಸಲು ಪ್ರಯತ್ನಿಸಿದ ಕಠೋರ ಕುಮಾರನ ಸಾಹಸವು ಪ್ರತಿಕೂಲವಾದ ನೀರಿನ ಸೆಳೆತದಿಂದ ನೆರವೇರದಿದ್ದುದರಿಂದ ಆತನು, “ಇರಲಿ, ನಿನ್ನಿಂದ ಮುಂದೆ ವಿಶೇಷ ಕಾರ್ಯಗಳು ಆಗಬೇಕಾಗಿವೆ. ಆದುದರಿಂದ ಜೀವಸಹಿತವಾಗಿ ಬಿಡುವೆನು” ಎಂದು ಹೇಳಿ ಪುನಃ ಮುಳುಗಿ ಕಾಣದಾದ ಸಂಗತಿಯನ್ನು ಶಂಕರತನಯನು ಅರವಿಂದನಿಗೆ ತಿಳಿಸಿದನು.

ಆನಂತರ ಅವರೆಲ್ಲ ಕೂಡಿ ಹೊರಟು ಸಚ್ಚಿದಾನಂದನ ಮನೆಯನ್ನು ಸೇರುತ್ತಾರೆ. ಸಚ್ಚಿದಾನಂದನಿಗೆ ಸುರನಾಥನನ್ನು ಕಂಡು ಅತ್ಯಂತ ಸಂತೋಷವಾಗುತ್ತದೆ.

ಸೆರೆಯಾದ ಕಠೋರ ಕುಮಾರನು ಸಂಗಡಿಗರಾರೂ ಜೀವದಾನ ಮಾಡುವುದಾಗಿ ಪುಸಲಾಯಿಸಿದರೂ ಕೊಲ್ಲವೆವೆಂದು ಪಿಸ್ತೂಲು ಎದೆಗೆ ಹಿಡಿದು ಬೆದರಿಸಿದರೂ ತಮ್ಮ ಕಡೆಯವರ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಈ ಮಧ್ಯೆಕ ಕೂಟದವರ ಗುಟ್ಟನ್ನು ಬಿಟ್ಟುಕೊಟ್ಟ ಪ್ರಫುಲ್ಲ ಇವರ ಪಕ್ಷಕ್ಕೆ ಸೇರಿರುವ ವಿಚಾರ ವಿಚಿತ್ರಕೂಟದ ಸೆರೆಯಾಳುಗಳಿಗೆ ಗೊತಾಗುತ್ತದೆ; ಆದರೆ, ಅವರು ಸೆರೆಯಾಳುಗಳಾಗಿರುವುದರಿಂದ ಪ್ರಫುಲ್ಲನಿಗೆ ಅಂಥ ಕಳವಳಕ್ಕೆ ಕಾರಣವೇನಿಲ್ಲವೆಂದು ಭಾವಿಸಿದರು. ಆದರೆ, ಪ್ರಫುಲ್ಲನ ಕಳವಳ, ಭಯ ಮಾತ್ರ ನಿಲ್ಲಲೊಲ್ಲದು. ಶಂಕರತನಯ ಪರಿಪರಿಯಾಗಿ ಧೈರ್ಯ ಹೇಳಿ ಸಮಾಧಾನಗೊಳಿಸಲು ಪ್ರಯತ್ನಿಸಿದರೂ ಪ್ರಫುಲ್ಲನ ಭಯ ಪರಿಹಾರವಾಗುವುದಿಲ್ಲ. ವಿಚಿತ್ರಕೂಟದವರು ತನ್ನನ್ನು ಹೇಗಾದರೂ ಮಾಡಿ ಚಿತ್ರಹಿಂಸೆಗೆ ಒಳಪಡಿಸಿ ಕೊಲ್ಲದೆ ಬಿಡಲಾರರು ಎಂದು ಆತ ದೃಢವಾಗಿ ನಂಬಿದ್ದರಿಂದ ಆಪತ್ಕಾಲಕ್ಕೆ ಒದಗಬಹುದಾದ ಘೋರವಾದ ವಿಷವನ್ನು ತನಗೆ ಒದಗಿಸಿಕೊಡುವಂತೆ ಮೊರೆಯಿಡುತ್ತಾನೆ. ಆತನ ಧೈರ್ಯಕ್ಕಾಗಿ ಶಂಕರತನಯ ವಿಷ ಒದಗಿಸಿಕೊಡುವ ಭರವಸೆ ನೀಡುತ್ತಾನೆ. ಆದರೆ, ತುಂಬಾ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಬೇಕಾದರೆ ಅದರ ಉಪಯೋಗಮಾಡಬಹುದು, ಎಂದು ತಿಳಿಸಿ ಹೇಳುತ್ತಾನೆ.

ಶಂಕರತನಯ, ಅರವಿಂದ, ಸುರನಾಥ-ಮೂವರೂ ಕೂಡಿ ಕೈದಿಗಳ ಬಂದೋಬಸ್ತಿಯ ಕುರಿತು ಆಲೋಚನೆ ಮಾಡುತ್ತಾನೆ. ಪೊಲೀಸ್ ಠಾಣೆ ಪ್ರಶಸ್ತವಾದ ಸ್ಥಳವಲ್ಲವೆಂಬ ನಿರ್ಧಾರಕ್ಕೆ ಬಂದ ನಂತರ ಬೇರೊಂದು ಕಡೆ ಸಾಗಿಸಲು ಅಣಿಯಾಗುತ್ತಾರೆ. ಆ ಕೆಲಸಕ್ಕಾಗಿ ಮೋಟಾರು ತರಲು ಸುರನಾಥ ಹೊರಟು ಹೋಗುತ್ತಾನೆ. ಆದರೆ ಆ ಮಧ್ಯೆ ಶಂಕರತನಯ ಮತ್ತು ಅರವಿಂದರು ಕೈದಿಗಳನ್ನು ಬೇಟಿಯಾಗಲು ಹೋದರೆ ಬಂದಿಸಿಟ್ಟಿದ್ದ ಐವರು ಕೈದಿಗಳಲ್ಲಿ ಶೂರಸಿಂಗ ಎಂಬ ಒಬ್ಬನು ಪರಾರಿಯಾಗುತ್ತಾನೆ. ಆ ಕುರಿತು ಕೈದಿಗಳನ್ನು ವಿಚಾರಿಸಿದರೆ ಅವರು ಸ್ವಲ್ಪವೂ ಎದೆಗುಂದದೆ ಗಡಸು ಉತ್ತರವನ್ನೇ ನೀಡುತ್ತಾರೆ. ಆನಂತರ ಸುರನಾಥ ತಂದ ಮೋಟಾರು ಬಂಡಿಯಲ್ಲಿ ಅವರನ್ನು ಗುಪ್ತವಾಗಿ ಸಚ್ಚಿದಾನಂದನ ಬ್ಯಾಂಕಿನ ನೆಲಮಾಳಿಗೆಗೆ ಸಾಗಿಸುತ್ತಾರೆ. ಆ ಸಂಗತಿ ಮೋಟಾರು ಡ್ರೈವರನಿಗೂ ಗೊತ್ತಾಗಬಾರದೆಂದು ಅವರನ್ನು ಸಚ್ಚಿದಾನಂದನಲ್ಲಿಗೆ ಕಳುಹಿಸಿ ಶಂಕರತನಯ ಮತ್ತು ಅರವಿಂದರು ತಾವೇ ಸ್ವತಃ ಮೋಟಾರು ನಡೆಸಿಕೊಂಡು ಹೋಗುತ್ತಾರೆ.

ಇಲ್ಲಿಗೆ ಎರಡನೆಯ ಭಾಗ ಸಂಪೂರ್ಣವಾಗುತ್ತದೆ.

೩ನೆಯ ಭಾಗದಲ್ಲಿ ಸಚ್ಚಿದಾನಂದನ ಮನೆಯ ಮೊದಲನೇ ಮಹಡಿಯ ಮೇಲೆ ನಿದ್ರೆ ಹೋಗಿದ್ದ ಶಂಕರತನಯನು ವಿಚಿತ್ರಕೂಟದವರ ಕೈಯಲ್ಲಿ ಬಂದಿಯಾಗಿ ಸಿಲುಕಿದಂತೆಯೂ, ಕಠೋರನು ಪಿಸ್ತೂಲನ್ನು ಕೈಯಲ್ಲಿ ಹಿಡಿದುಕೊಂಡು ಇದಿರಿನಲ್ಲಿ ನಿಂತಿದ್ದಂತೆಯೂ ತಾನು ಆತನನ್ನು ಬೆದರಿಸುವೆನೋ ಎಂಬಂತೆ ಕೈಯನ್ನು ಆತನ ಕಡೆಗೆ ತಿರುವಿದಂತೆಯೂ ಕನಸು ಕಂಡು ಎಚ್ಚರವಾಗುತ್ತಾನೆ. ನಿಜವಾಗಿಯೂ ಆತನು ಕೈತಿರುವಿದ್ದರಿಂದ ಪಕ್ಕದಲ್ಲಿ ಉರಿಯುತ್ತಲಿದ್ದ ದೀಪವು ಬಿದ್ದು ನೊಂದುಹೋಗಿರುತ್ತದೆ. ಭಯಂಕರ ಕತ್ತಲೆ ಆವರಿಸಿರುವ ಕೋಣೆಯ ಗೋಡಯಲಲಿ ಮಿನುಗುತ್ತಿರುವ, “ಶಂಕರಾ, ಇಂದಿಗೆ ನೀನು ನಮ್ಮ ಕೈದಿಯಾದೆ -ಎಂಬ ವಿಚಿತ್ರ ಲಿಪಿಯನ್ನು ಕಾಣುತ್ತಾನೆ. ಯಾರೋ ರಂಜಕದ ಸಹಾಯದಿಂದ ಹಾಗೆ ಬರೆದಿರುವರೆಂದೂಹಿಸಿ ಪಿಸ್ತೂಲಿಗೆ ಕೈಯಿಕ್ಕುತ್ತಾನೆ. ಆನಂತರ ವಿದ್ಯುಚ್ಛಕ್ತಿಯ ಲಾಂದ್ರದಿಂದ ಬೆಳಕು ಹಾಯಿಸಿ ಕೋಣೆಯನ್ನೆಲ್ಲ ಶೋಧಿಸುತ್ತಾನೆ. ಆಗ ಅಲ್ಲಿ ಒಂದು ಭೀಕರ ಪುರುಷಾಕೃತಿ ಕಾಣಿಸುತ್ತದೆ. ಶಂಕರತನಯನುಸ ರಿವಾಲ್ವರನ್ನು ಆ ಅಕೃತಿಯ ಕಡೆಗೆ ಹಾರಿಸುತ್ತಾನೆ. ಆದರೆ ಮೊದಲೇ ರಿವಾಲ್ವರಿನ ಮದ್ದುಗಳನ್ನು ಆ ವ್ಯಕ್ತಿ ಅಪಹರಿಸಿತ್ತಾದ್ದರಿಂದ ಅವರಿಂದ ಪ್ರಯೋಜನವಾಗಲಿಲ್ಲ. ಬದಲು ಆ ಆಕೃತಿಯೇ ಮುಂದೆ ಬಂದು ರಿವಾಲ್ವರನ್ನು ಹೊರಕ್ಕೆಳೆಯುತ್ತಾನೆ. ಆ ಆಕೃತಿ ಬೇರಾರೂ ಆಗಿರದ ಕಠೋರ ಕುಮಾರನ ಪರಮ ಮಿತ್ರ ಅಬ್ದುಲ ಕರೀಮನಾಗಿರುತ್ತಾನೆ. ಆಬ್ದುಲ ಕರೀಮನು ಶಂಕರತನಯನ ಕೈಕಾಲುಗಳನ್ನು ಬಂಧಿಸಿ ಮೂಗಿಗೆ ಕ್ಲೋರೋಫಾರ್ಮಿನ ಪ್ರಯೋಗದಿಂದ ನಿಶ್ಚೇಷ್ಟಿತನನ್ನಾಗಿ ಮಾಡಿ ಸಿಳ್ಳು ಹಾಕಲು ಹೊರಗಿನಿಂದ ಒಬ್ಬ ದೃಢಕಾಯನು ಬಂದನು. ಇಬ್ಬರೂ ಶಂಕರತನಯನ ನಿಶ್ಚೇಷ್ಟಿತ ದೇಹವನ್ನು ಹಗ್ಗಗಳಿಂದ ಕೆಳಕ್ಕಿಳಿಸಿ ತಾವೂ ಸಹ ನೂಲೇಣಿಯ ಸಹಾಯದಿಂದ ಕೆಳಕ್ಕಿಳಿದು ಹೊರಗೆ ಕಾದಿದ್ದ ಮೋಟಾರು ಬಂಡಿಯಲ್ಲಿ ಶಂಕರತನಯನನ್ನಿಟ್ಟುಕೊಂಡು ಮಾಯವಾದರು. ಹೀಗೆ ಶಂಕರತನಯನು ವಿಚಿತ್ರಕೂಟದವರ ಬಂದಿಯಾಗುತ್ತಾನೆ.

ಅರವಿಂದ, ಸುರನಾಥರು ಶಂಕರತನಯನ ಬಂಧನದಿಂದ ಆತಂಕಕ್ಕೊಳಗಾಗಿ ಮುಂದಿನ ಉಪಾಯಗಳನ್ನು ಕುರಿತು ಚಿಂತಿಸುತ್ತಾರೆ. ಡಾಕ್ಟರ್ ವಿನಯಚಂದ್ರನನ್ನು ಬಂಧಿಸುವುದರಿಂದ ಏನಾದರೂ ಪ್ರಯೋಜನವಾಗಬಹುದೆಂದು ಯೋಚಿಸಿದ್ದಲ್ಲದೆ ವೇಷಪಲ್ಲಟಮಾಡಿಕೊಂಡು ರೋಗಿಗಳ ವೇಷದಿಂದ ತಾವಿಬ್ಬರೂ ವಿನಯಚಂದ್ರನಲ್ಲಿಗೆ ಹೋಗಬೇಕೆಂದು ನಿಶ್ಚಯಿಸಿರುತ್ತಾರೆ. ಹೀಗೆಂದು ಯೋಚಿಸಿ ಅವರು ಆಸನಗಳನ್ನು ಬಿಟ್ಟು ಎದ್ದೇಳುವಷ್ಟರಲ್ಲಿಯೇ ಅರವಿಂದನಿಗೆ ‘ಫೋನ್’ ಬರುತ್ತದೆ.

ಫೋನ್ ಮಾಡಿದ ವ್ಯಕ್ತಿಯು ‘…. ಈ ನಿನ್ನ ಯಜಮಾನನೂ ಆಪ್ತನೂ ಆದ ಶಂಕರತನಯನು ಈಗ ನಮ್ಮ ಬಂದಿಯಾಗಿರುವನು.ಆವನ ಬಂಧವಿಮೋಚನೆಯನ್ನು ನೀವು ಬಯಸುವುದಾದರೆ, ನಿಮ್ಮ ಬಳಿಯಲ್ಲಿರತಕ್ಕ ದ್ರೋಹಿಯಾದ ಪ್ರಫುಲ್ಲನನ್ನು ನಮ್ಮ ವಶಕೊಡತಕ್ಕದ್ದು; ಇನ್ನು ಎರಡೇ ಎರಡು ದಿವಸಗಳ ಅವಧಿಯನ್ನು ಕೊಟ್ಟಿರುವೆವು. ಅಷ್ಟರೊಳಗಾಗಿ ಆತನನ್ನು ನಮ್ಮ ಬಳಿಗೆ ಕಳುಹಿಸತಕ್ಕದ್ದು. ಇಲ್ಲದೆ ಹೋದರೆ ಶಂಕರತನಯನ ಪ್ರಾಣವು ಉಳಿಯಲಾರದು. ಆತನಂತೂ ಪ್ರಫುಲನ ಪತ್ತೆಯನ್ನು ತಿಳಿಸುವುದಿಲ್ಲವಂತೆ. ನಿಮಗಾದರೂ ಅವನು ಬೇಕೆನ್ನಿಸುವುದಾದರೆ ಕಾಲಹರಣವನ್ನು ಮಾಡದೆ ದ್ರೋಹಿಯನ್ನು ಬಿಟ್ಟು ಬಿಡಿರಿ. ಪುನಃ ಹೇಳುತ್ತೇನೆ, ಇಂದು ಕ್ಷಣಕಾಲವಾದರೂ ನಿಮ್ಮ ಪತ್ತೇದಾರ ಸಾಹಿಬರು ಬದುಕಿರಲಾರರು-ಎಚ್ಚರ”-ಎಂದು ಎಚ್ಚರಿಕೆ ನೀಡುತ್ತಾನೆ.

ಅರವಿಂದ, ಸುರನಾಥರಿಗೆ ಪ್ರಫುಲ್ಲನನ್ನು ಅವರಿಗೊಪ್ಪಿಸಿ ಶಂಕರತನಯನನ್ನು ಉಳಿಸಿಕೊಳ್ಳಬಹುದೆಂದು ಗೊ‌ತ್ತಾದರೂ ಶಂಕರತನಯನೇ ಅದನ್ನು ಬಯಸದಿದ್ದಾಗ ತಾವು ಹಾಗೆ ಯೋಚಿಸುವುದು ಪಾಪವೆಂದು ಇಬ್ಬರೂ ಭಾವಿಸುತ್ತಾರೆ. ಆದ್ದರಿಂದ ಮುಂದಿನ ಕಾರ್ಯ ಅವರಿಗೆ ಬಗೆಹರಿಯಲಿಲ್ಲ. ಜೊತೆಗೆ ಶಂಕರತನಯ ಇರುವ ಸ್ಥಳದ ಪತ್ತೆಹಚ್ಚುವುದೂ ತುಂಆ ಕಷ್ಟದ್ದಾಗಿತ್ತು.

ಆನಂತರ ಪ್ರಫುಲ್ಲನಿಂದ ಡಾ. ವಿನಯಚಂದ್ರನ ಕುರಿತಾದ ವಿಶೇಷ ಮಾಹಿತಿಗಳನ್ನು ಸಂಗ್ರಹಿಸಿದರು. ಆತನ ನವೀನ ಶೋಧೆಗಳಿಂದಲೇ ಕೂಟದವರ ಸಾಹಸವು ದ್ವಿಗುಣಿತ ಆಶ್ಚರ್ಯವನ್ನುಂಟು ಮಾಡುತ್ತಿಲಿರುವ ಸಮಾಚಾರವೂ, “ಆತನ ಮನೆಗೆ ರಾತ್ರಿ ಹನ್ನೊಂದು ತಾಸಿನ ಬಳಿಕ ಅಪೂರ್ವವಾಗಿ ಅವನ ಮನೆಗೆ ಓರ್ವ ಯುವಕನೂ, ಇನ್ನೋರ್ವ ಪ್ರೌಢವಯಸ್ಕಳಾದ ಕನ್ಯೆಯೂ ಬರುವುದಿದೆ. ಅವರಿಬ್ಬರ ಮುಖಭಾವದಿಂದ ಅಣ್ಣ ತಂಗಿಯರೆಂದು ಉಳಿಸಬಹುದಾಗಿದೆ. ಅವರು ವಾರಾಂಗನಾ ಕುಲದವರಂತೆ ಕಾಣಿಸುವುದಿಲ್ಲ. ಒಮ್ಮೆ ಹಾಗಲ್ಲದಿದ್ದರೂ ಅವರು ನಮ್ಮ ಊರಿನವರು ಬೇರೆ ಅಲ್ಲ” – ಎಂಬ ವಿಷಯವೂ ತಿಳಿಯುತ್ತದೆ. ಹಾಗೆಯೇ ಒಬ್ಬರು ಮೊದಲಾಗಿ, ಇನ್ನೊಬ್ಬರು ಆಮೇಲೆ ಬರುವುದೂ ಇದೆ. ಇಲ್ಲವೇ ಒಬ್ಬರೇ ಬಂದು ಇನ್ನೊಬ್ಬರು ಬಾರದೇ ಇರುವುದೂ ಉಂಟು. ಅಲ್ಲದೆ ಆ ಇಬ್ಬರ ಬರಹೋಗುವಿಕೆಯನ್ನು ಚೆನ್ನಾಗಿ ನೋಡುವ ಅನುಕೂಲತೆಯನ್ನು ಪ್ರಫುಲ್ಲನಿಗೆ ವಿನಯ ಕೊಟ್ಟಿಲ್ಲವಾದ್ದರಿಂದ ಪ್ರಫುಲ್ಲ ಯಾವುದನ್ನೂ ಹೀಗೇ ಸರಿಯೆಂದು ಖಚಿತವಾಗಿ ಹೇಳಲಾರದವನಾಗಿದ್ದಾನೆಂಬುದೂ ಅರವಿಂದ ಸುರನಾಥರಿಗೆ ತಿಳಿಯುತ್ತದೆ.

ಅರವಿಂದ, ಸುರನಾಥರು ಮಾರುವೇಷದಲ್ಲಿ ಡಾ. ವಿನಯಚಂದ್ರನ ಮನೆಗೆ ರಾತ್ರಿಯ ವೇಳೆಯಲ್ಲಿ ಗುಪ್ತರೋಗ ಚಿಕಿತ್ಸೆಗೆ ಬಂದ ರೋಗಿಗಳೆಂಬಂತೆ ಹೋದರು. ತರುಣ (ಅರವಿಂದ)ನಿಗೆ ಗುಪ್ತರೋಗವಿರುವುದೆಂದೂ ಅದಕ್ಕಾಗಿ ಔಷದಿ ಮಾಡಿಸಲು ದೂರದ ಆಂಧ್ರದಿಂದ ಬಂದಿರುವೆವೆಂತಲೂ ಆ ತರುಣ (ಅರವಿಂದ) ತನ್ನ ದಣಿಯೆಂತಲೂ ವೃದ್ಧ (ಸುರನಾಥ)ಹೇಳುತ್ತಾನೆ. ಆ ಮಾತುಕತೆಗಳು ನಡೆಯುತ್ತಿರುವಾಗಲೇ ಒಂದು ಹಕ್ಕಿಯು ಕೂಗಿದಂತಾಗುತ್ತದೆ. ಕುದುರೆ ಬಂಡಿಯೂ ಅದೇ ವೇಳೆಗೆ ಸರಿಯಾಗಿ ಬಾಗಿಲ ಬಳಿ ಕಾಣಿಸುತ್ತದೆ. ಆಗ ವಿನಯನು ಅವಸರದಿಂದ “ಸ್ತ್ರೀರೋಗಿಗಳಾರೋ ಬರುತ್ತೇವೆಂದಿರುವರು. ಅದೇ ಅವರ ಗಾಡಿಯಾಗಿರಬೇಕೆಂದು ತೋರುತ್ತದೆ. ಅವರು ಪರಕೀಯರಲ್ಲಿ ತಮ್ಮ ಮುಖದರ್ಶನವನ್ನು ತೋರತಕ್ಕವರಲ್ಲ ಎಂದುದರಿಂದ ತಾವು ಸ್ವಲ್ಪ ಸಮಯದ ತನಕ ಮರೆಯಾದ ಜಾಗದಲ್ಲಿರಬೇಕಾದೀತು” – ಎಂದು ಹೇಳಿ ತರುಣ, ವೃದ್ಧ ಇಬ್ಬರನ್ನೂ ಒಂದು ಕೋಣೆಯಲ್ಲಿಟ್ಟು ಬಂಡಿಯಿಂದಿಳಿದ ವ್ಯಕ್ತಿಯೊಡನೆ ಮಹಡಿಯಲ್ಲಿದ್ದ ತನ್ನ ಗುಪ್ತ ಆಫೀಸುಕೋಣೆಗೆ ಹೋದನು. ಅವಸರದಲ್ಲಿ ಆತ ಬಾಗಿಲು ಅಗಳಿ ಹಾಕಿ ಹೋಗಿರಲಿಲ್ಲವಾದ್ದರಿಂದ ಅರವಿಂದನು ಹೊರಬಂದು ಕತ್ತಲಲ್ಲಿ ವಿನಯನನ್ನು ಅನುಸರಿಸಿದನು. ಡಾಕ್ಟರನೂ ಅವನ ಸಂಗಾತಿಯೂ ಆಡುತ್ತಿದ್ದ ಮಾತುಗಳನ್ನು ಕದ್ದು ಕೇಳುತ್ತಿದ್ದಾಗ ಅರವಿಂದನಿಗೆ ಫೋನು ಮಾಡಿದ ವ್ಯಕ್ತಿಯೇ ಅದೆಂಬುದೂ ಜೊತೆಗೆ ಶಂಕರತನಯನು ದೇವಮಂದಿರದಲ್ಲಿ ಬಂದಿಯಾಗಿರುವನೆಂಬುದೂ ಗೊತ್ತಾಯಿತು.

ಈ ವಿಷಯ ತಿಳಿಯದ ವಿನಯಚಂದ್ರ ತಿರುಗಿ ಬಂದು ಇವರನ್ನು ತನ್ನ ಚಿಕಿತ್ಸಾಗೃಹಕ್ಕೆ ಕರೆದೊಯ್ದಾಗ ಅಲ್ಲಿ ಅರವಿಂದನು ತನ್ನ ಕಿಸೆಯಿಂದ ರಿವಾಲ್ವರ್ ತೆಗೆದು ಅದನ್ನು ವಿನಯನ ಮುಖಕ್ಕೆ ಹಿಡಿದು ಆತನ ವಿಚಾರಣೆ ನಡೆಸಿದನು. ಆದರೆ ಆತನು ಯಾವ ಗುಟ್ಟನ್ನೂ ಬಿಡದಿರಲು ಸುರನಾಥನು ಅವನ ಕೈಗಳನ್ನು ಬಂಧಿಸಿ, ಆತನು ಮಾತನಾಡದಂತೆ ಬಾಯಿಗೆ ಬಟ್ಟೆಯನ್ನು ತುರುಕಿ, ಆತನನ್ನು ಹೊರಕ್ಕೆ ಕರತಂದು ತಮಗಾಗಿ ಕಾದು ನಿಂತಿದ್ದ ಬಂಡಿಯಲ್ಲಿ ಮಲಗಿಸಿಕೊಂಡು ಅದೃಶ್ಯರಾದರು.

* * *

ಮುಂದೇನಾಯಿತು? -ಎಂದು ನಾವು ಕುತೂಹಲಭರಿತರಾಗಿರುವಾಗಲೇ “ಹಲವು ವರುಷಗಳ ಹಿಂದಿನ ವಿಚಾರ. ಬೇಡವಾದರೂ ಬೇಡವಾಗಬಹುದು. ಬೇಕಾದರೂ ಬೇಕಾಗಬಹುದು” ಎಂದು ಹೇಳಿ ಕಥೆಗಾರರು ಬೇರೊಂದು ಘಟನೆಯನ್ನು ನಿರೂಪಿಸುತ್ತಾರೆ :

ವಿರಾಮಪುರವೆಂಬ ಒಂದು ಹಳ್ಳಿಯ ಶ್ಯಾಮ ಎಂಬ ಹದಿನೆಂಟು ವರುಷದ ಹುಡುಗ ಮತ್ತು ಲೀಲಾ ಎಂಬ ಹನ್ನೆರಡು ವರುಷ ವಯಸ್ಸಿನ ಹುಡುಗಿ ಪರಸ್ಪರರನ್ನು ಚಿಕ್ಕಂದಿನಿಂದಲೂ ಒಲಿದಿದ್ದರು. ಹುಡುಗನಿಗೆ ಚಿಕ್ಕಂದಿನಲ್ಲಿ ಆ ಹುಡುಗಿಯನ್ನು ತೋರಿಸಿ ‘ಲೀಲೆಯ ಗಂಡ’ ಎಂದು ಆಕೆಯ ತಾಯಿಯೇ ಮೊದಲಾಗಿ ಎಲ್ಲರೂ ಹಾಸ್ಯಮಾಡುತ್ತಿದ್ದರು. ಆಕೆ ದೊಡ್ಡವಳಾಗುತ್ತಿದ್ದಂತೆ ಆತನನ್ನೇ ಮದುವೆಯಾಗುವುದೆಂದು ಮನಸ್ಸಿನಲ್ಲಿಯೇ ಲೆಕ್ಕ ಹಾಕುತ್ತಿದ್ದಳು.ಆದರೆ ಆಕೆ ಶ್ರೀಮಂತರ ಹುಡುಗಿ. ಹುಡುಗ ಬಡವ. ಕಲಕತ್ತೆಯಲ್ಲಿ ಹೇಗೋ ಕಷ್ಟದಿಂದ ವಿದ್ಯಾರ್ಜನೆ ಮಾಡುತ್ತಿದ್ದ. ವಿರಾಮಪುರಕ್ಕೆ ಬಂದು ಹೋಗಲೂ ಖರ್ಚಿಗೆ ಹಣದ ಅನುಕೂಲವಿಲ್ಲದ್ದರಿಂದ ಆತ ಮೂರು ವರುಷದ ನಂತರ ಊರಿಗೆ ಬಂದಿರುತ್ತಾನೆ. ಅವನನ್ನು ಊರಿನ ಉದ್ಯಾನಕ್ಕೆ ಲೀಲಾ ಕರೆದುಕೊಂಡು ಹೋಗಿ ತಮ್ಮ ಮದುವೆಯ ಪ್ರಸ್ತಾಪವೆತ್ತುತ್ತಾಳೆ. ಆದರೆ ಶ್ರೀಮಂತರ ಹುಡುಗಿಯಾದ ಆಕೆಗೂ ತನಗೂ ಮದುವೆಯಾಗಲು ಆಕೆಯ ತಂದೆ-ತಾಯಿ ಒಪ್ಪಲಾರರಾದ್ದರಿಂದ ತಮ್ಮ ಮದುವೆ ಅಸಾಧ್ಯವೆಂದು ಲೋಕಬಲ್ಲ ಆತನಿಗೆ ಗೊತ್ತು. ಆಕೆಗೆ ಹಾಗೆ ತಿಳಿಸಿ ಹೇಳುತ್ತಾನೆ. ಆದರೆ ಆಕೆ ಅದಕ್ಕೆ ಒಪ್ಪಳು. ಈತ ಮದುವೆಯಾಗುವುದಿಲ್ಲವೆಂದರೆ ಹಣಕ್ಕಾಗಿ ಬೇರೆಯವನನ್ನು ಮದುವೆಯಾಗುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವ ತನ್ನ ನಿರ್ಧಾರವನ್ನು ತಿಳಿಸುತ್ತಾಳೆ. ಆತನು ಆಕೆಗೆ ನಾನಾ ಪ್ರಕಾರವಾಗಿ ಬುದ್ಧಿವಾದವನ್ನು ಹೇಳಿದರೂ ಆಕೆ ಕೇಳುವುದಿಲ್ಲ. ಲೀಲಾ ಹೋಗಿ ತಾಯಿಯೊಡನೆ ಶ್ಯಾಮ ಊರಿಗೆ ಬಂದಿರುವ ವಿಚಾರವನ್ನು ತಿಳಿಸಿದಾಗ ಲೀಲೆಯ ಮದುವೆಯನ್ನು ಬೇರೊಬ್ಬ ಧನಿಕ ವರನಿಗೆ ಆಕೆಯ ತಂದೆ ನಿಶ್ಚಯಿಸಿರುವರೆಂದು ಆಕೆಯ ತಾಯಿ ತಿಳಿಸುತ್ತಾಳೆ. ಅದಕ್ಕೆ ಶ್ಯಾಮನೊಡನೆ ವಿವಾಹ ಆಗದೇ ಹೋದರೆ ತಾನು “ಪ್ರಾಣವನ್ನಿಟ್ಟುಕೊಳ್ಳಲಾರೆ”, ಎಂದು ಖಂಡಿತವಾಗಿ ತಾಯಿಗೆ ತಿಳಿಸುತ್ತಾಳೆ. ಏಕಮಾತ್ರಪುತ್ರಿಯ ಈ ನಿರ್ಧಾರದಿಂದ ಕಳವಳಗೊಂಡ ಆಕೆಯ ತಾಯಿ ತನ್ನ ಗಂಡನೊಡನೆ ಮಗಳ ಪರವಾಗಿ ವಾದಿಸಿ ವಿಫಲಗೊಳ್ಳುತ್ತಾಲೆ. ಅಲ್ಲದೆ, “ಶ್ರೀಗಂಧವು ಹೆಚ್ಚಾಯಿತೆಂದು ಚೆಲ್ಲುವರೋ? ಹಣವು ಎಷ್ಟಿದ್ದರೂ ಅದರಿಂದ ತೃಪ್ತಿ ಹೊಂದಬಾರದು, ಹಾಗಿದ್ದರೆ ಮಾತ್ರ ಲಕ್ಷ್ಮಿ ಪ್ರಸನ್ನಳಾಗುವಳು.” ಎನ್ನುವುದು ಆಕೆಯ ತಂದೆಯ ತತ್ವವಾದರೆ ವರನ ಕಡೆಯವರು ಚಿನ್ನದ ರಾಶಿಯನ್ನು ಸುರಿಯುವಾಗ ತನ್ನಂತೆಯೇ ತನ್ನ ಮಗಳು ಒಲಿಯುವಳು ಎಂಬುದು ಅವರ ನಂಬಿಕೆಯಾಗಿತ್ತು. ಹಾಗಾಗಿ ಧನಿಕನೂ ಕಡುಲೋಭಿಯೂ ಆದ ಶರಶ್ಚಂದ್ರನಿಗೆ ಮಗಳನ್ನು ಕೊಡುವುದಾಗಿ ನಿಶ್ಚಯಿಸಿದದರು. ಹೆಂಡತಿಯ ವಕಾಲತ್ತು, ಹುಡುಗಿಯ “ಭಾಷಣ” ಯಾವುದೂ ಲೀಲೆಯ ತಂದೆಯ ಮೇಲೆ ಪರಿಣಾಮ ಬೀರಲಿಲ್ಲ. ತಂದೆ ಶರಶ್ಚಂದ್ರನೊಂದಿಗೆ ಮದುವೆ ಗಟ್ಟಿಮಾಡಿದ. ಹುಡುಗಿ ಶ್ಯಾಮನನ್ನು ಪುನಃ ಭೇಟಿಯಾಗಿ ತನ್ನ ಪ್ರೇಮವನ್ನು ತೋಡಿಕೊಂಡಳು. “ದೈವೇಚ್ಛೆಯಿಂದ ಇಂದಿಲ್ಲದಿದ್ದರೆ ನಾಳೆಯಾದರೂ ನಾನು ನಿಮ್ಮನ್ನು ಸೇರಿಯೇ ತೀರಬೇಕು” – ಎಂಬ ನಿರ್ಧಾರದ ನುಡಿಗಳನ್ನು ಆಡಿದಳು. ಅದಕ್ಕೆ ಶ್ಯಾಮನು “ಅದು ನಿನ್ನ ಇಚ್ಛೆಯಂತೆಯೇ ನರೆವೇರುವುದೆಂದು ಹೇಗೆ ನಿಶ್ಚಯ ಮಾಡಿದಿ” ಎಂದು ಕೇಳಲು “ಹೇಗೆ ನಿಶ್ಚಯವನ್ನು ಮಾಡಿದೆನೆಂದು ನಿನಗೆ ಪ್ರಸಂಗ ಬಂದಾಗ ತಿಳಿದೇ ತಿಳಿಯುವದು” ಎಂದು ಹೇಳಿದಳು. ಆದರೆ, ಆತ ತನ್ನ ಅಸಹಾಯಕತಯನ್ನು ಪ್ರಕಟಪಡಿಸಿದನಲ್ಲದೆ ಆಕೆಗೆ ತಂದೆತಾಯಿಗಳ ಮಾತು ಮೀರಬಾರದು. ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದೆಲ್ಲಾ ಉಪದೇಶ ಮಾಡಿ ಹೋದ.

ಮದುವೆಯ ದಿನ ಬಂದೇಬಂದಿತು. ವರನ ಕಡೆಯವರ ಸವಾರಿಯೂ ಬಂತು. ವರ ಯಾವ ರೀತಿಯಿಂದಲೂ ಲೀಲೆಗೆ ತಕ್ಕವನಾಗಿರಲಿಲ್ಲ. ಲಗ್ನವು ಬಂದೊದಗಿದಾಗ ಹುಡುಗಿಯನ್ನು ಕರೆತರಲು ಹುಡುಗಿಯ ತಾಯಿ ಹೋದಾಗ ಹುಡುಗಿ ಅಲ್ಲಿಂದ ಮಾಯವಾಗಿದ್ದಳು. ಮದುವೆಯ ಮನೆಯಲ್ಲಿ ವಿಶೇಷ ಗದ್ದಲವಾಯಿತು. ಒಬ್ಬಿಬ್ಬರು ನದೀತೀರಕ್ಕೆ ಬರಬೇಕೆನ್ನುವಷ್ಟರಲ್ಲಿ ನೀರಿನಲ್ಲಿ ಯಾರೋ ಧುಮುಕಿದ ಸದ್ದಾಯಿತು. ಅದನ್ನು ಕೇಳಿ ಆ ಜನರೆಲ್ಲರೂ ಮತ್ತಷ್ಟು ವೇಗದಿಂದ ಓಡಿ ಬಂದರು. ಆದರೆ ಅಲ್ಲಿ ಏನೊಂದು ವಸ್ತುವೂ ಅವರ ಕಣ್ಣಿಗೆ ಕಾಣಿಸಲಿಲ್ಲ. ವೇಗವಾಗಿ ಗಂಗಾಪ್ರವಾಹದ ನೀರಿನಲ್ಲಿ ಏನೋ ಕಪ್ಪಾದ ವಸ್ತು ತೇಲಿಕೊಂಡು ಹೋಗುತ್ತಿರುವಂತೆ ಕಾಣಿಸಿತೇ ಹೊರತು ಇನ್ನೇನೂ ವಿಶೇಷ ಘಟಿಸಲಿಲ್ಲ. ಈ ಸುದ್ದಿ ಕೇಳಿದ ಶ್ಯಾಮ ತುಂಬಾ ದುಃಖದಿಂದ ಹಲುಬಿದ.

* * *

* ‘ಕಾರಂತ ಪ್ರಪಂಚ’ ಎಂಬ ಶಿವರಾಮ ಕಾರಂತ ಅಭಿನಂದನ ಗ್ರಂಥದಲ್ಲಿ ಪ್ರಕಟವಾದ ಲೇಖನ – ೧೯೬೯

[1] ಹುಚ್ಚು ಮನಸ್ಸಿನ ಹತ್ತು ಮುಖಗಳು, (ಎರಡನೇ ಮುದ್ರಣ) ಪುಟ-೩೧೮

[2] ಕಾರಂತ ಕಾದಂಬರಿಗಳು, ಪುಟ-೧

[3] ಹುಚ್ಚು ಮನಸ್ಸಿನ ಹತ್ತು ಮುಖಗಳು, ಪುಟ-೧೧೫

[4] ಕಾರಂತರ ಅರುವತ್ತು, ಪುಟ-೩೮

[5] ಅದೇ ಪುಟ-೨೩

[6] ‘ವಿಚಿತ್ರಕೂಟ’ ‘ಭೂತ’ ಕಾದಂಬರಿಗಳ ಪ್ರತಿಗಳು ಇಲ್ಲವೆ ಭಾಗಗಳು ಯಾರೊಡನೆಯಾದರೂ ಇದ್ದಲ್ಲಿ ದಯವಿಟ್ಟು ನನಗೆ ಕೊಡುವ ಕೃಪೆ ಮಾಡಬೇಕು. ಹಾಗೆಯೇ ನನಗೆ ‘ನಿರ್ಭಾಗ್ಯ ಜನ್ಮ’ ಕಾದಂಬರಿಯ ಮೊದಲ ೧೭ ಅಧ್ಯಾಯಗಳು ಮಾತ್ರ ದೊರೆತಿವೆ, ಇತರ ಅಧ್ಯಾಯಗಳು ಯಾರೊಡನೆಯಾದರೂ ಇದ್ದಲ್ಲಿ ನನಗೆ ದಯವಿಟ್ಟು ಕೊಡಬೇಕು. ಈ ಮೂರು ಕಾದಂಬರಿಗಳ ಭಾಗಗಳನ್ನು ನನಗೆ ಒದಗಿಸಿ ಕೊಟ್ಟ ಶ್ರೀ ಶಿವರಾಮ ಕಾರಂತರನ್ನೂ, ಶ್ರೀ ಗುಂಡ್ಮಿ ಚಂದ್ರಶೇಖರ ಐತಾಳರನ್ನೂ ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತೇನೆ.