ಪ್ರಸ್ತುತ ಶಿಕ್ಷಣ ಪದ್ಧತಿ ಸಮರ್ಪಕವಾಗಿಲ್ಲ. ಮೂಲಭೂತವಾದ ಬದಲಾವಣೆಯ ಅಗತ್ಯ ಇದೆ ಎಂದು ಆಲೋಚಿಸುವವರಲ್ಲಿ ನಾನೂ ಒಬ್ಬ. ಆದರೆ ಇಲ್ಲಿ ಆ ಕುರಿತ ನನ್ನ ಅಭಿಪ್ರಾಯಗಳನ್ನು ಮಂಡಿಸಬೇಕಾದ ಅಗತ್ಯವಿಲ್ಲ.ಈಗ ಏನೋ ಒಂದು ಶಿಕ್ಷಣ ಪದ್ಧತಿ ‘ಇದೆ’ ಎಂದು ನಾವೆಲ್ಲ ಭಾವಿಸಿಕೊಂಡಿದ್ದೇವಲ್ಲಾ ಅದರ ಯಾವುದೋ ಒಂದು ಯಾಂತ್ರಿಕ ಭಾಗವಾಗಿ ನಾವೂ ದುಡಿಯುತ್ತಿದ್ದೇವಲ್ಲಾ ಆ ಪದ್ಧತಿಯ ಚೌಕಟ್ಟಿನಲ್ಲಿಯೇ ನವ್ಯ ಸಾಹಿತ್ಯವನ್ನು ಯಾವುದಾದರೂ ಹಂತದಲ್ಲಿ ಪಠ್ಯ ವಿಷಯವಾಗಿ ಮಾಡುವ ಸಾಧ್ಯತೆ ಇದೆಯೇ, ಸಾಧ್ಯತೆ ಇದೆ ಎಂದಾದರೆ ಯಾವ ಹಂತದಲ್ಲಿ ಮುಂತಾದ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ.

ಕಾಲೇಜು ಅಧ್ಯಾಪಕನಾಗಿ ನನಗೆ ಸುಮಾರು ಹದಿನಾಲ್ಕು ವರ್ಷಗಳ ಅನುಭವವಿದೆ. ಈ ಅವಧಿಯಲ್ಲಿ ವಿಶ್ವವಿದ್ಯಾನಿಲಯ ನಿಗದಿಪಡಿಸಿದ ಸುಮಾರು ಎಪ್ಪತ್ತೈದರಷ್ಟು ಗ್ರಂಥಗಳನ್ನಾದರೂ ತಕ್ಕ ನಿಷ್ಠೆಯಿಂದ ಪಾಠ ಹೇಳಿದ್ದೇನೆ. ಅವುಗಳಲ್ಲಿ ಸುಮಾರು ಐವತ್ತರಷ್ಟು ಗ್ರಂಥಗಳನ್ನು ಪಾಠ ಹೇಳುವಾಗ ಅವುಗಳನ್ನು ಪಠ್ಯವಾಗಿ ಇಟ್ಟಿರುವ ಉದ್ದೇಶವೇನು, ಎಂಬುದು ನನಗಂತೂ ಅರ್ಥವಾಗಿಲ್ಲ. ಅವುಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅದರಿಂದ ಏನು ಪ್ರಯೋಜನವಾದೀತು ಎಂಬುದೂ ನನಗೆ ತಿಳಿದಿಲ್ಲ. ಭಾಷಾಜ್ಞಾನ, ಸಾಹಿತ್ಯಾಭಿರುಚಿ, ಸಾಮಾನ್ಯ ಜ್ಞಾನ- ಯಾವುದೊಂದು ಇಂಥ ಗ್ರಂಥಗಳ ಅಧ್ಯಯನದಿಂದ ಸಮರ್ಪಕವಾದ ರೀತಿಯಲ್ಲಿ ಬೆಳೆದೀತು ಎಂಬ ನಂಬಿಕೆ ನನಗಂತೂ ಖಂಡಿತ ಹುಟ್ಟಿಲ್ಲ. ಆದರೂ ವಿಶ್ವವಿದ್ಯಾನಿಲಯದ ನೌಕರನಾದ ನಾನು ಅದು ನನ್ನಿಂದ ಅಪೇಕ್ಷಿಸುವ ಮಟ್ಟದ ಪ್ರಾಮಾಣಿಕತೆ, ಶ್ರದ್ಧೆಗಳಿಗೆ ಕೊರತೆ ಬಾರದ ರೀತಿಯಲ್ಲಿ ಪಾಠ ಮಾಡಿಕೊಂಡು ಬಂದಿದ್ದೇನೆ. ಅಂಥ ಗ್ರಂಥಗಳಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಹುಟ್ಟುವಂತೆ ಪಾಠ ಹೇಳಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಿಯೂ ಸೋತಿದ್ದೇನೆ. ಅಂಥ ಸಂದರ್ಭಗಳಲ್ಲಿ ಬೇರೆ ದಾರಿ ಕಾಣದೆ ಹಾಸ್ಯ, ನಗೆಹನಿಗಳ ಮೊರೆಹೊಕ್ಕು ಅವುಗಳ ನೆರವನ್ನು ನನ್ನ ದೃಷ್ಟಿಯಲ್ಲಿ ಅತಿಯೇನೊ ಎಂಬಷ್ಟನ್ನು ಪಡೆದು ಪಾಠ ಹೇಳಿ ವಿದ್ಯಾರ್ಥಿಪ್ರಿಯ ಅಧ್ಯಾಪಕನೆಂದು ತಕ್ಕಷ್ಟು ಪ್ರಸಿದ್ಧಿಯನ್ನೂ ಪಡೆದದ್ದುಂಟು. ಹಾಗೆ ಮಾಡುವುದು ನನಗೇ ಅಸಹ್ಯ ಎನಿಸಿದಾಗ ಗಾಂಭೀರ್ಯವನ್ನು ಉಳಿಸಿಕೊಳ್ಳಲು ಹೋಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ‘ಬೋರ್’ ಮಾಡಿದ್ದೂ ಉಂಟು. ಇದು ನನ್ನೊಬ್ಬನ ಅನುಭವ ಮಾತ್ರವಲ್ಲ, ಕನ್ನಡ ಅಧ್ಯಾಪಕರಾಗಿರುವ ನಿಮ್ಮಲ್ಲಿ ಹಲವರ ಅನುಭವವಾಗಿದೆ ಎಂಬುದರಲ್ಲಿ ನನಗೆ ಸಂಶಯವಿಲ್ಲ.

ವಿದ್ಯಾರ್ಥಿಗಳ ವರ್ಷಾಂತ್ಯದ ‘ಸ್ನೇಹಕೂಟ’ದ ಭಾಷಣಗಳಲ್ಲಿ ಕನ್ನಡ ಅಧ್ಯಾಪಕರ ಕೋಡಂಗಿತನವನ್ನೇ ಅವರು ಮೆಚ್ಚಿಕೊಳ್ಳುವುದನ್ನು, ಅದು ಮಾತ್ರ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಿಂತಿರುವುದನ್ನು ಕಂಡಾಗ ನಮ್ಮ ಬಗ್ಗೆ ನಮಗೇ ನಾಚಿಕೆಯಾಗುತ್ತದೆ. ಗಂಭೀರವಾಗಿ ಪಠ್ಯವಿಷಯಕ್ಕೆ ಸಂಬಂಧಪಟ್ಟಂಥ ವಿಷಯಗಳನ್ನೇ ತರಗತಿಗಳಲ್ಲಿ ಪಾಠ ಹೇಳಿದ ಅಧ್ಯಾಪಕ ಅವರ ದೃಷ್ಟಿಯಲ್ಲಿ ‘ಬೋರಯ್ಯ’ನಾಗಿರುತ್ತಾನೆ. ಇಲ್ಲಿ ‘ಬೋರಯ್ಯ’ಎನಿಸಿಕೊಳ್ಳುವ ಈ ಬಗೆಯ ಅಧ್ಯಾಪಕನಲ್ಲಿಯೂ ದೋಷ ಹುಡುಕುವಂತಿಲ್ಲ. ಹಾಗೆ ಹೇಳುವ ವಿದ್ಯಾರ್ಥಿಗಳ ಮೇಲೆಯೂ ಆರೋಪ ಹೊರಿಸುವಂತಿಲ್ಲ. ಏಕೆಂದರೆ, ಇಬ್ಬರೂ ತಮ್ಮ ತಮ್ಮ ಮಟ್ಟಿಗೆ ಪ್ರಾಮಾಣಿಕರಾಗಿಯೇ ಇರುತ್ತಾರೆ. ಇಂಥ ಒಂದು ವಿಚಿತ್ರವಾದ, ಅನಪೇಕ್ಷಣೀಯವಾದ ಮುಜಗರ, ಅವಮಾನಗಳಿಗೆ ಕಾರಣವಾಗುವಂಥ ಸನ್ನಿವೇಶ ವಿದ್ಯಾರ್ಥಿ-ಅಧ್ಯಾಪಕರ ಮಧ್ಯೆ ಉಂಟಾಗುವಂತಾಗಿದೆ. ಈ ಬಗೆಯ ನಿರುಪಯೋಗಿ ಪುಸ್ತಕಗಳು ಪಠ್ಯ ವಿಷಯವಾಗುವುದು ತೀರ ಸಾಮಾನ್ಯ ಸಂಗತಿ ಎಂಬಂತಾಗಿರುವುದರಿಂದ ಅಧ್ಯಾಪಕರಲ್ಲಿ ಕೆಲವರು ಯಶಸ್ವಿಯಾದ ಅಧ್ಯಾಪಕನಾಗುವುದೆಂದರೆ ಯಶಸ್ವಿಯಾದ ಕೋಡಂಗಿಯಾಗುವುದೆಂಬ ನಿರ್ಣಯಕ್ಕೆ ಬಂದಿರುವುದೂ ಉಂಟು. ಅಂಥ ನಿರ್ಣಯಕ್ಕೆ ಇನ್ನೂ ಬರದಿದ್ದವರು ದಿಕ್ಕು ತೋಚದ ಅಧೀರ ಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ. ಒಟ್ಟಿನಲ್ಲಿ ಅಧ್ಯಾಪಕರ ನೈತಿಕ ಧೈರ್ಯವನ್ನು ಉಡುಗಿಸುವಂಥ ಪರಿಸ್ಥಿತಿ ಸಧ್ಯಕ್ಕೆಇದೆ.

ಇಂಥ ಪರಿಸ್ಥಿತಿಗೆ ಹೊಣೆ ಯಾರು ಎಂದು ಕೇಳಿದರೆ ಉತ್ತರಿಸುವುದು ತೀರಾ ಸುಲಭವಾಗುವುದಿಲ್ಲ. ಆದರೂ ತಕ್ಷಣ ಹೊಳೆಯುವ ಉತ್ತರ ಪಠ್ಯಪುಸ್ತಕ ಸಮಿತಿಯವರು ಎಂಬುದು ನಿಜ. ಅವರು ತಮ್ಮ ಹೊಣೆಗಾರಿಕೆಯನ್ನು ಅಲ್ಲಗಳೆಯುವುದು ಸಾಧ್ಯವಾಗುವಂತಿಲ್ಲ. ಆದರೂ ಸಂಪೂರ್ಣವಾದ ಹೊಣೆಗಾರಿಕೆಯನ್ನು ಅವರ ತಲೆಯ ಮೇಲೆಯೇ ಹೊರಿಸುವಂತೆಯೂ ಇಲ್ಲ. ಒಂದು ನಿರ್ದಿಷ್ಟವಾದ ಶಿಕ್ಷಣ ತತ್ವದ ಹಿನ್ನೆಲೆಯಲ್ಲಿ ಪಠ್ಯಗ್ರಂಥಗಳು ನಿಗದಿಯಾಗುವಂಥೆ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆಲ್ಲಾ ಮುಖ್ಯವಾದ ಕಾರಣ ಎಂದು ನನಗನಿಸುತ್ತದೆ.

ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದವರೆಗೆ ನಿಗದಿಯಾಗುವ ಅಧ್ಯಯನ ವಿಷಯಗಳಿಗೆ ಸಂಬಂಧಿಸಿದಂತೆ ಸಮಗ್ರವಾದ ಒಂದು ಶೈಕ್ಷಣಿಕವಾದ ತಾತ್ವಿಕ ಧೋರಣೆ ಇಲ್ಲ. ಪಿ.ಯು.ಸಿ./ಪೂರ್ವ ಪಠ್ಯ ಸಮಿತಿಗಳಿಗೂ ಪಿಯುಸಿ ಪಠ್ಯ ಸಮಿತಿಗಳಿಗೂ ಶೈಕ್ಷಣಿಕ ತತ್ವದ ಆಧಾರದ ಮೇಲೆ ರೂಪಿತವಾದ ಸಂಬಂಧವಾಗಲಿ ಕಾನೂನುಬದ್ಧವಾದ ಸಂಬಂಧವಾಗಲಿ ಇಲ್ಲ. ನೈತಿಕವಾದ ಸಂಬಂಧ ಎಂಬುದೊಂದು ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ. ಹಾಗೆಯೇ ಸ್ನಾತಕಪೂರ್ವ ಸ್ನಾತಕೋತ್ತರ ತರಗತಿಗಳಿಗೆ ಪಠ್ಯವಿಷಯ ನಿಗದಿ ಮಾಡುವ ಸಮಿತಿಗಳಿಗೂ ಕೆಳಗಿನ ಹಂತದ ತರಗತಿಗಳಿಗೆ ನಿಗದಿ ಮಾಡುವ ಸಮಿತಿಗಳಿಗೂ ಇರುವ ಸಂಬಂಧವೂ ಅಂಥದೇ. ಆದ್ದರಿಂದ ಯಾವ ಯಾವ ಹಂತದಲ್ಲಿ ವಿದ್ಯಾರ್ಥಿಯ ಭಾಷಾಜ್ಞಾನ, ಸಾಹಿತ್ಯಾಭಿರುಚಿ, ಸಾಮಾನ್ಯ ಜ್ಞಾನ ಎಷ್ಟಿರಬೇಕು, ಎಷ್ಟಿರುತ್ತದೆ, ನಿಗದಿಯಾಗುತ್ತಿರುವ ಪಠ್ಯಗ್ರಂಥ ಅದಕ್ಕೆ ಸರಿಯಾದ ರೀತಿಯಲ್ಲಿ ಹೊಂದಿಕೊಳ್ಳುವಂತಿದೆಯೇ ಇತ್ಯಾದಿ ಸಂಗತಿಗಳನ್ನು ನಿರ್ಣಯಿಸುವುದಕ್ಕೆ ಬೇಕಾದ ಸಮರ್ಪಕವಾದ ಹಿನ್ನೆಲೆ ಮತ್ತು ವಸ್ತುನಿಷ್ಠವಾದ ಅಳತೆಗೋಲು ಇಲ್ಲವಾಗಿದೆ. ಆದ್ದರಿಂದ ಪಠ್ಯಪುಸ್ತಕ ಸಮಿತಿಗಳಲ್ಲಿ ಇರುವವರ ವೈಯಕ್ತಿಕ ಇಷ್ಟಾನಿಷ್ಟ, ಬೇಕು ಬೇಡಗಳ ಮಟ್ಟದಲ್ಲಿಯೇ ಪಠ್ಯಪುಸ್ತಕಗಳ ತೀರ್ಮಾನವಾಗುವಂಥ ಅವೈಜ್ಞಾನಿಕ ಮತ್ತು ಅತಾತ್ವಿಕ ಪದ್ಧತಿ ಇರುವಂತಾಗಿದೆ.

ಇದ್ದುದರಲ್ಲಿಯೇ ಅನುಷಂಗಿಕವಾಗಿ ನಾನು ಸೂಚಿಸುವ ಪರಿಹಾರಮಾರ್ಗ ಇದು. ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದವರೆಗಿನ ಪಠ್ಯಕ್ರಮವನ್ನು ಆಧುನಿಕವಾದ ಶಿಕ್ಷಣ ತತ್ವದ ಆಧಾರದ ಮೇಲೆ ಸುವ್ಯವಸ್ಥಿತವಾಗಿ ರೂಪಿಸುವಂಥ ರಾಜ್ಯಮಟ್ಟದ ಪ್ರತ್ಯೇಕ ಸಂಸ್ಥೆಯೊಂದನ್ನು ಸರಕಾರ ಸ್ಥಾಪಿಸಬೇಕು. ಆ ಸಂಸ್ಥೆ ಸ್ವಾಯುತ್ತ ಸಂಸ್ಥೆಯಾಗಿರಬೇಕು. ವಿದ್ಯಾರ್ಥಿಗಳ ಭಾಷಾಜ್ಞಾನವನ್ನು ಕುರಿತಂತೆಯೂ ಯಾವ ಯಾವ ಹಂತದಲ್ಲಿ ಯಾವ ಪ್ರಮಾಣದ ತರಬೇತಿಯಾಗಿರುತ್ತದೆ ಎಂಬ ಬಗ್ಗೆ ಪಾಠ ಹೇಳುವ ಅಧ್ಯಾಪಕರಿಗೆ ಸರಿಯಾದ ತಿಳುವಳಿಕೆ ಉಂಟಾಗುವಂತೆ ಪಠ್ಯ ವ್ಯವಸ್ಥೆ ಇರಬೇಕು. ಶಿಕ್ಷಣದ ಘನತೆಗೆ ಕುಂದುಬಾರದಂತೆ ವ್ಯವಸ್ಥಿತವಾಗುವ ಅಂಥ ಸಂಸ್ಥೆ ಒಂದು ಕನಸು ಎಂಬಂತೆ ಈಗ ನಿಮಗೆ ಅನಿಸಬಹುದಾದದ್ದು ಸಹಜ. ಆದರೆ, ಆ ಕನಸು ನನಸಾಗುವವರೆಗೆ ಪಠ್ಯಪುಸ್ತಕಗಳನ್ನು ಕಡ್ಡಾಯವಾಗಿ ಓದುವ ವಿದ್ಯಾರ್ಥಿ ಮತ್ತು ಬೇರೆ ಗತಿಯಿಲ್ಲದೆ ಪಾಠ ಹೇಳಬೇಕಾಗಿ ಬರುವ ಅಧ್ಯಾಪಕ ಇಬ್ಬರ ಮಧ್ಯೆ ಪರಸ್ಪರ ಅರ್ಥಪೂರ್ಣವಾದ ಜ್ಞಾನದ ಕೊಡುಕೊಳೆ ನಡೆಯುವುದು ಸಾಧ್ಯವಾಗುವಂತೆಯೇ ಇಲ್ಲ. ಈಗಂತೂ ತಾನು ಏಕೆ ಓದುತ್ತಿದ್ದೇನೆಂಬುದು ವಿದ್ಯಾರ್ಥಿಗೆ ಗೊತ್ತಾಗಿಲ್ಲ, ತಾನು ಏಕೆ ಪಾಠ ಹೇಳುತ್ತಿದ್ದೇನೆ ಎಂಬುದು ಅಧ್ಯಾಪಕನಿಗೆ ಗೊತ್ತಾಗುತ್ತಿಲ್ಲ. ಇಂಥ ಅಶೈಕ್ಷಣಿಕವಾದ, ಅನೈತಿಕವಾದ ಕಸರತ್ತನ್ನು ವಿದ್ಯಾರ್ಥಿಗಳೂ ಅಧ್ಯಾಪಕರೂ ನಡೆಸುತ್ತಿದ್ದಾರೆ.

ಈ ಮೇಲೆ ಸ್ಥೂಲವಾಗಿ ಸೂಚಿಸಿದಂಥ ಸಂಸ್ಥೆಯ ಅಸ್ತಿತ್ವ, ಅದರ ಆದರ್ಶಪೂರ್ಣವಾದ ವ್ಯವಸ್ಥೆ ಇವುಗಳೆಲ್ಲ ಸದ್ಯಕ್ಕೆ ಕನಸಿನ ಮಾತು. ಅಧಿಕಾರದಲ್ಲಿರುವವರು ಅದನ್ನು ಕುರಿತಂತೆ ಗಂಭೀರವಾದ ಧೋರಣೆ ತಳೆದರೆ, ಅದನ್ನು ಕಾರ್ಯರೂಪಕ್ಕೆ ತರಲು ಮನಸ್ಸು ಮಾಡಿದರೆ ಆಗಬಹುದಾದದ್ದು. ಅದೇನಿದ್ದರೂ ಸದ್ಯಕ್ಕೆ ‘ರೆ’ ಪ್ರಪಂಚಕ್ಕೆ ಸೇರಿದ್ದು. ಆದರೆ, ಕಾಲೇಜು ಹಂತದ ಪಠ್ಯಕ್ರಮವನ್ನು ಸದ್ಯಕ್ಕೆ ನಿರ್ಣಯಿಸುತ್ತಿರುವ ಪಠ್ಯಪುಸ್ತಕ ಸಮಿತಿಗಳಲ್ಲಿ ಇರುವವರೆಲ್ಲ ಕಾಲೇಜು ಹಂತದಲ್ಲಿ ಇಲ್ಲವೆ ಸ್ನಾತಕೋತ್ತರ ಹಂತಗಳಲ್ಲಿ ಪಾಠ ಹೇಳಿದ ಇಲ್ಲವೆ ಹೇಳುತ್ತಿರುವ ಅಧ್ಯಾಪಕರೇ ಆಗಿದ್ದಾರೆ. ಅವರಿಗೆಲ್ಲ ಈ ಮೊದಲು ನಾನು ವಿವರಿಸಿದಂಥ ಕಷ್ಟದ, ಅವಮಾನದ, ನಾಚಿಕೆಯ ಸ್ಥಿತಿಯ ಅರಿವೇ ಆಗಿಲ್ಲ ಎಂಬಂತೆಯೂ ಇಲ್ಲ. ತಮ್ಮ ಅಧಿಕಾರವ್ಯಾಪ್ತಿಯ ಮಿತಿಯಲ್ಲಿಯೇ ಆದರೂ ಮಾಡಬಹುದಾದ ವ್ಯವಸ್ಥಿತ ಪ್ರಯತ್ನವನ್ನು ಅವರು ಇನ್ನೂ ಮಾಡಬೇಕಾಗಿದೆ. ಪ್ರತಿವರ್ಷ ನಿಗದಿಯಾಗುತ್ತಿರುವ ಪಠ್ಯಗ್ರಂಥಗಳಲ್ಲಿ ಬಹುಪಾಲು ಗ್ರಂಥಗಳು ಹೀಗೆ ಭಾವಿಸುವುದಕ್ಕೆ ಕಾರಣಗಳಾಗಿವೆ. ಆ ಕುರಿತ ಕುಂದುಕೊರತೆಗಳನ್ನು ಹುಡುಕುವುದಕ್ಕೆ ಹೋಗುವುದರಲ್ಲಿ ಹೆಚ್ಚಿನ ಪ್ರಯೋಜನವು ಇಲ್ಲ. ಇಂಥ ಒಂದು ವಿಚಾರಗೋಷ್ಠಿಯ ಸಂದರ್ಭದಲ್ಲಿ ರಚನಾತ್ಮಕವಾದ ಸಲಹೆಗಳನ್ನು ಮಾಡುವುದರಿಂದ ಪ್ರಯೋಜನವಾದೀತೆಂದು ಭಾವಿಸುತ್ತೇನೆ.

ಪಿ.ಯು.ಸಿ. ಆನಂತರದ ಸ್ನಾತಕಪೂರ್ವ ತರಗತಿಗಳಿಗೆ ಸಾಮಾನ್ಯ ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಪಠ್ಯಗ್ರಂಥಗಳನ್ನು ನಿಗದಿ ಮಾಡುವಾಗ:

  1. i) ಪ್ರತಿವರ್ಷವೂ ನಮ್ಮ ಹಳೆಗನ್ನಡ ಸಾಹಿತ್ಯದ, ಭಾಷೆ ಮತ್ತು ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಮಹತ್ವದವೆನಿಸಿರುವ ಗ್ರಂಥಗಳಿಂದ ಆಯ್ದ, ಆಸಕ್ತಿ ಹುಟ್ಟಿಸುವಂಥ ಸಾಹಿತ್ಯ ಭಾಗಗಳನ್ನು ಓದಿಸಬೇಕು. ‘ಕಾವ್ಯವಲ್ಲರಿ’, ‘ಕಾವ್ಯತರಂಗಿಣಿ’ಯಂಥ ಗ್ರಂಥಗಳು ಇನ್ನೂ ಹೆಚ್ಚು ಪರಿಷ್ಕೃತ ರೀತಿಯಲ್ಲಿ ಆಗುವಂತಾದರೆ ಸಾಕು. ಆಗ ಅಧ್ಯಾಪಕನಿಗೂ ಆಯಾ ಕವಿ, ಕಾವ್ಯಗಳನ್ನು ಕುರಿತಂತೆ ಹೇಳುವುದಕ್ಕೆ ಸಾಕಷ್ಟು ವಿಷಯವಿರುತ್ತದೆ. ವಿದ್ಯಾರ್ಥಿಗೂ ಕನ್ನಡ ಸಾಹಿತ್ಯ ಪರಂಪರೆಯನ್ನು ಕುರಿತ ತಿಳುವಳಿಕೆ ಉಂಟಾಗುತ್ತದೆ.
  2. ii) ಇತರ ಕನ್ನಡ ಗ್ರಂಥಗಳನ್ನು ಆರಿಸುವಾಗ ಹೊಸಗನ್ನಡ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಅತ್ಯಂತ ಮಹತ್ವದ ಸಾಹಿತಿಗಳೆಂದು ಮಾನ್ಯತೆ ಪಡೆದಿರುವವರ ಗ್ರಂಥಗಳನ್ನು ಮಾತ್ರ ಪಠ್ಯ ವಿಷಯವಾಗಿಡಬೇಕು. ಅದನ್ನು ಬಿಟ್ಟು ಬಹಳ ಕಾಲದಿಂದ ಮಾಡುತ್ತ ಬಂದಿರುವಂತೆ ಸಾಹಿತ್ಯ ಸಾಧನೆಯ ದೃಷ್ಟಿಯಿಂದ ತೀರಾ ಸಾಮಾನ್ಯರಾದವರ, ಸಾಹಿತ್ಯ ಮೌಲ್ಯದ ದೃಷ್ಟಿಯಿಂದ ತೀರಾ ಸಾಮಾನ್ಯರಾದವರ, ಸಾಹಿತ್ಯ ಮೌಲ್ಯದ ದೃಷ್ಟಿಯಿಂದ ತೀರಾ ಸಾಮಾನ್ಯವಾದ ಗ್ರಂಥಗಳನ್ನೇ ಹೆಚ್ಚಾಗಿ ಪಠ್ಯವಾಗಿಡುವುದನ್ನು ನಿರ್ದಾಕ್ಷಿಣ್ಯವಾಗಿ ಬಿಡಬೇಕು. ಅತ್ಯಂತ ಮಹತ್ವದ ಸಾಹಿತಿಯ ಒಂದು ಗ್ರಂಥ ಪಠ್ಯವಿಷಯವಾಗಿದ್ದಾಗ ಆ ಗ್ರಂಥ ಆ ಸಾಹಿತಿಯ ಶ್ರೇಷ್ಠ ಗ್ರಂಥವಾಗಿಲ್ಲದೆ ಇದ್ದರೂ ವಿದ್ಯಾರ್ಥಿ ಮಹತ್ವದ ಸಾಹಿತಿಯೊಬ್ಬರ ಒಂದು ಗ್ರಂಥವನ್ನು ಓದುವಂತಾಗುತ್ತದೆ. ಅದರ ಜೊತೆಗೆ ಆ ಸಾಹಿತಿಯ ಇತರ ಸಾಹಿತ್ಯವನ್ನು ಕುರಿತಂತೆ ತಿಳುವಳಿಕೆ ನೀಡಲು ಅಧ್ಯಾಪಕರಿಗೆ ಸಾಕಷ್ಟು ಅವಕಾಶವುಂಟಾಗುತ್ತದೆ. ವಿದ್ಯಾರ್ಥಿಗೂ ಅದರಿಂದ ಪ್ರಯೋಜನವಾಗುತ್ತದೆ. ಅಂಥ ಸಾಹಿತಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದವರಾಗಿರುವುದರಿಂದ ಆತನನ್ನು, ಆಕೆಯನ್ನು ಕುರಿತಂತೆ ಪಡೆದ ತಿಳುವಳಿಕೆ ಕನ್ನಡ ಸಾಹಿತ್ಯ ಪರಂಪರೆಯ ಒಂದು ಮಹತ್ವದ ಆದ್ಯಾಯದ ಬಗೆಗಿನ ತಕ್ಕ ಮಟ್ಟಿನ ತಿಳುವಳಿಕೆಯಾಗುತ್ತದೆ. ಎರಡು ವರ್ಷಗಳಲ್ಲಿ ಸ್ನಾತಕಪೂರ್ವ ತರಗತಿಗಳ ಸಾಮಾನ್ಯ ಅಧ್ಯಯನದ ವಿದ್ಯಾರ್ಥಿಗಳು ಇಂಥ ಐದಾರು ಗ್ರಂಥಗಳನ್ನಾದರೂ ಪಠ್ಯ ವಿಷಯವಾಗಿ ಓದುವುದರಿಂದಕ ನಮ್ಮ ಹೊಸಗನ್ನಡದ ಅತ್ಯಂತ ಮಹತ್ವದ ಐದಾರು ಸಾಹಿತಿಗಳನ್ನು ಕುರಿತಂತೆ ತಕ್ಕ ಮಟ್ಟಿನ ತಿಳುವಳಿಕೆಯನ್ನು ಅವರಿಗೆ ನೀಡುವುದಕ್ಕೆ ಅಧ್ಯಾಪಕರಿಗೆ ಸಾಧ್ಯವಾಗುತ್ತದೆ. ಅದನ್ನು ಪಡೆಯುವುದು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ, ಪ್ರಯೋಜನಕಾರಿಯಾಗುತ್ತದೆ. ಈ ವಿದ್ಯಾರ್ಥಿಗಳಿಗೆ ನವ್ಯ ಸಾಹಿತ್ಯದ ಗದ್ಯಗ್ರಂಥವೊಂದನ್ನು ಅಂದರೆ ಕಥಾ ಸಂಕಲನ, ಕಾದಂಬರಿ, ವಿಮರ್ಶೆಯ ಗ್ರಂಥಗಳನ್ನು ಈ ಹಿನ್ನೆಲೆಯಲ್ಲಾದರೆ ಓದಿಸಬಹುದು.

೩) ಅನುವಾದಿತ ಗ್ರಂಥಗಳನ್ನು ಸಾಮಾನ್ಯ ಅಧ್ಯಯನದ ವಿಷಯವಾಗಿ ಕನ್ನಡವನ್ನು ಓದುವ ವಿದ್ಯಾರ್ಥಿಗಳಿಗೆ ಇಡಲೇಬಾರದು. ಇಡಲೇಬೇಕೆನ್ನುವುದಾದರೆ ಸ್ನಾತಕ ಪೂರ್ವ ಅವಧಿಯಲ್ಲಿ ಐಚ್ಚಿಕ ವಿಷಯವಾಗಿ ಕನ್ನಡವನ್ನು ಓದುವವರಿಗೆ ಒಂದು ಗ್ರಂಥವನ್ನು ಇಡಬಹುದು. ಅದು ಸಂಸ್ಕೃತದ ಕಾಳಿದಾಸ, ಭಾಸ, ಭಟ್ಟನಾರಾಯಣ, ಬಾಣ ಮುಂತಾದ ಕವಿ – ಸಾಹಿತಿಗಳ ಗ್ರಂಥಗಳ ಅನುವಾದವಾಗಿರಬೇಕು. ಅದರಲ್ಲೂ ಆ ಗ್ರಂಥಗಳ ಪ್ರಭಾವ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದವರೆನಿಸಿರುವ ಕವಿಗಳ ಮೇಲೆ ಆಗಿದ್ದಿರಬೇಕು. ಇಲ್ಲವೆ ಕನ್ನಡ ಸಾಹಿತ್ಯದ ಮೇಲೆ ಒಂದಲ್ಲ ಒಂದು ಬಗೆಯ ಪ್ರಭಾವವನ್ನು ಬೀರಿರುವ ಗ್ರೀಕ್ ದುರಂತನಾಟಕಗಳ ಅನುವಾದವಾಗಿರಬೇಕು. ಹಾಗಲ್ಲದೆ ಕಂಡ ಕಂಡವರ ಕಂಡ ಕಂಡ ವಿಷಯಗಳಿಗೆ ಸಂಬಂಧಿಸಿದ ಗ್ರಂಥಗಳ ಅನುವಾದಗಳನ್ನೆಲ್ಲ ಪಠ್ಯ ವಿಷಯವಾಗಿ ಓದಿಸುವುದರಲ್ಲಿ ಯಾವ ಪ್ರಯೋಜನವು ಇಲ್ಲ.ಸ

ಐಚ್ಚಿಕ ವಿಷಯವಾಗಿ ಕನ್ನಡವನ್ನು ಓದುವವರು ಸಾಮಾನ್ಯ ಅಧ್ಯಯನದ ವಿಷಯವಾಗಿ ಕನ್ನಡ ಓದುವವರೂ ಆಗಿರುವುದರಿಂದ ಅವರ ಪಠ್ಯಕ್ರಮದ ಯೋಜನೆ ಬೇರೆ ಬಗೆಯದಾಗಿರಬೇಕು. ಈಗಾಗಲೆ ಸ್ವಲ್ಪ ಬೇರೆಯಾಗಿರುವುದೂ ನಿಜ. ಈಗ ಓದಿಸುತ್ತಿರುವಂತೆ ಸಾಹಿತ್ಯ ಚರಿತ್ರೆ, ಭಾಷಾಶಾಸ್ತ್ರ, ವ್ಯಾಕರಣ, ಛಂದಸ್ಸು, ಸಾಹಿತ್ಯ ವಿಮರ್ಶೆಯ ತತ್ವಗಳನ್ನು ಹೆಚ್ಚು ಪರಿಷ್ಕೃತವಾದ ರೀತಿಯಲ್ಲಿ ಓದಿಸಬೇಕು. ಅಲ್ಲಿಯೂ ಕೂಡ ಸಾಹಿತ್ಯದ ಚರಿತ್ರೆಯಲ್ಲಿ ಮಹತ್ವದ ಘಟ್ಟಗಳು ಮತ್ತು ಮಹತ್ವದ ಕವಿಗಳನ್ನು ಕುರಿತು ವಿವರವಾದ ತಿಳುವಳಿಕೆ ನೀಡಿದರೆ ಸಾಕು. ಆ ಉದ್ದೇಶಕ್ಕಾಗಿಯೇ ಗ್ರಂಥಗಳನ್ನೂ ವಿಶ್ವವಿದ್ಯಾಲಯಗಳು ಪಠ್ಯಪುಸ್ತಕ ಸಮಿತಿಯ ಸಲಹೆ ಪಡೆದು ಬರೆಸಬೇಕು. ಈ ಮಾತು ಛಂದಸ್ಸು, ವ್ಯಾಕರಣ, ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದಂತೆಯೂ ಅನ್ವಯಿಸುತ್ತದೆ. ಹಾಗಲ್ಲದೆ ಈಗಾಗಲೇ ಬೇರಾವುದೋ ಉದ್ದೇಶಕ್ಕಾಗಿ ಈ ವಿಷಯಗಳನ್ನು ಕುರಿತು ಬರೆದ ಗ್ರಂಥಗಳನ್ನು ಪಠ್ಯ ವಿಷಯವಾಗಿ ಓದುವುದಾಗಲಿ ಓದಿಸುವುದಾಗಲಿ ವ್ಯರ್ಥ ಆಯಾಸ. ಆ ಎಲ್ಲ ವಿಷಯಗಳ ಅಧ್ಯಯನದಲ್ಲಿಯೂ ಚಾರಿತ್ರಿಕ ಬೆಳವಣಿಗೆ ಹಂತಗಳ ಪರಿಚಯವಾಗುವಂತಿರಬೇಕು. ಸ್ನಾತಕೋತ್ತರ ತರಗತಿಗಳಲ್ಲಿ ಈ ವಿಷಯಗಳನ್ನು ಐಚ್ಚಿಕ ವಿಷಯವಾಗಿ ತೆಗೆದುಕೊಳ್ಳುವವರು ಇನ್ನೂ ವಿವರವಾದ ಆಳವಾದ ಅಧ್ಯಯನವನ್ನು ಮಾಡಬಹುದು.

ಇನ್ನು ಐಚ್ಚಿಕ ವಿಷಯವನ್ನಾಗಿ ಕನ್ನಡವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ತುಂಬ ಮಹತ್ವದ ಹಳಗನ್ನಡ ಮತ್ತು ಹೊಸಗನ್ನಡ ಗ್ರಂಥಗಳನ್ನು ಅಧ್ಯಯನ ಮಾಡಿಸಬೇಕು. ಭಾಷೆ ಮತ್ತು ಸಾಹಿತ್ಯದ ದೃಷ್ಟಿಯಿಂದ ಮಹತ್ವದ ಕವಿಗಳ ಗ್ರಂಥಗಳನ್ನೇ ಅಧ್ಯಯನ ಮಾಡಿಸಬೇಕು. ನವ್ಯಕಾವ್ಯ ಸಂಚಯ (Anthology) ವೊಂದನ್ನು ಈ ವಿದ್ಯಾರ್ಥಿಗಳಿಗೆ ಓದಿಸಬಹುದು.

ಈ ಬಗೆಯ ಪಠ್ಯ ಕ್ರಮವನ್ನು ಅನುಸರಿಸುವುದಾದಲ್ಲಿ ಮಾತ್ರ ನವ್ಯ ಸಾಹಿತ್ಯವನ್ನು ಓದುವುದಕ್ಕೆ ಬೇಕಾದ ಹಿನ್ನೆಲೆ ಮತ್ತು ಸಿದ್ಧತೆ ವಿದ್ಯಾರ್ಥಿಗಳಿಗೆ ಇರುವಂತಾಗುತ್ತದೆ. ಆದರೆ, ಕನ್ನಡದ ಪಠ್ಯಕ್ರಮದಲ್ಲಿ ಈಗಿರುವ ರೀತಿಯಲ್ಲಿಯೇ ನವ್ಯ ಸಾಹಿತ್ಯವನ್ನು ಅಧ್ಯಯನ ವಿಷಯವನ್ನಾಗಿ ಇಡುವುದರಿಂದ ಪ್ರಯೋಜನವಾಗಲಿಕ್ಕಿಲ್ಲ. ಅದಕ್ಕೆ ಎರಡು ಕಾರಣಗಳಿವೆ : ಒಂದನೆಯದಾಗಿ, ವಿದ್ಯಾರ್ಥಿಗಳಿಗೆ ಈಗಿರುವ ರೀತಿಯಲ್ಲಿ ಸಾಹಿತ್ಯದ ಅಧ್ಯಯನಕ್ಕೆ ಅಗತ್ಯವಾದ ಮನೋಭಾವ ಮತ್ತು ತಕ್ಕ ತರಬೇತಿ ದೊರೆಯುತ್ತಿಲ್ಲ. ಪರಿಸ್ಥಿತಿ ಹಾಗಿರುವಾಗ ನವ್ಯ ಸಾಹಿತ್ಯವನ್ನು ಅಧ್ಯಯನ ಮಾಡುವುದಕ್ಕೆ ಬೇಕಾದ ಇನ್ನೂ ಹೆಚ್ಚಿನ ಮಟ್ಟದ ಭಾಷಾಜ್ಞಾನ, ಸಾಹಿತ್ಯಾಭಿರುಚಿ, ಚಿಂತನ ಸಾಮರ್ಥ್ಯಗಳನ್ನು ಅವರಲ್ಲಿ ಬೆಳೆಸುವುದು ಸುಲಭವಾಗಲಿಕ್ಕಿಲ್ಲ. ಎರಡನೆಯದಾಗಿ, ಈ ಮೇಲೆ ನಾನೇ ಸೂಚಿಸಿರುವಂತೆ ಪಠ್ಯಕ್ರಮವನ್ನು ವ್ಯವಸ್ಥೆಗೊಳಿಸಿದರೂ ಕನ್ನಡ ಅಧ್ಯಾಪಕರಲ್ಲಿ ಬಹುಸಂಖ್ಯಾತರಿಗೆ ನವ್ಯ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವುದಕ್ಕೆ, ಪಾಠ ಹೇಳುವುದಕ್ಕೆ ಅಗತ್ಯವಾದ ತರಬೇತಿ ಸದ್ಯಕ್ಕೆ ಇಲ್ಲ. ನವ್ಯ ಸಾಹಿತ್ಯದ ವಿಷಯವಾಗಿ ‘ಸಿನಿಕಲ್’ ಧೋರಣೆ ಇರುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಆದ್ದರಿಂದ ಅಧ್ಯಾಪಕರಲ್ಲಿ ಈಗ ಇರುವ ಸಿದ್ಧತೆಯನ್ನೇ ನೆಚ್ಚಿ ನವ್ಯ ಸಾಹಿತ್ಯವನ್ನು ಪಠ್ಯ ವಿಷಯವಾಗಿ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗುವಂತೆ ತೊರುವುದಿಲ್ಲ. ನವ್ಯಸಾಹಿತ್ಯದ ಅಧ್ಯಯನ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಬೇಕಾದರೆ ಮತ್ತು ಪಾಠ ಹೇಳುವ ಅಧ್ಯಾಪಕರಿಗೂ ಅದನ್ನು ಪಾಠ ಹೇಳುವುದು ಶಿಕ್ಷೆ ಎಂಬಂತಾಗದೆ ಸಂತೋಷದ ವಿಷಯವಾಗಬೇಕಾದರೆ ಅಧ್ಯಾಪಕರಿಗೆ ನವ್ಯ ಸಾಹಿತ್ಯದ ಬಗೆಗೆ ತಕ್ಕ ತಿಳುವಳಿಕೆ ಮತ್ತು ಅದರ ಅಧ್ಯಯನಕ್ಕೆ ಸಂಬಂಧಿಸಿದಂತೆ ತಕ್ಕ ತರಬೇತಿಯನ್ನು ನೀಡುವ ‘ಬೇಸಗೆ ಶಾಲೆ’ಗಳನ್ನು ನಡೆಸಬೇಕಾದೀತು.

ಅಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ ಈವರೆಗೆ ನಾನು ವಿವರಿಸಿದ ಪೂರ್ವಸಿದ್ಧತೆ ಮತ್ತು ಹಿನ್ನೆಲೆ ಇಲ್ಲದ ನವ್ಯ ಸಾಹಿತ್ಯವನ್ನು ಪಠ್ಯ ವಿಷಯವನ್ನಾಗಿಸುವುದರಿಂದ ಹೆಚ್ಚಿನ ಪ್ರಯೋಜನವಾಗಲಿಕ್ಕಿಲ್ಲ. ನವ್ಯ ಸಣ್ಣಕಥೆ, ಕಾದಂಬರಿ, ನಾಟಕಗಳನ್ನು ಬೇಕಾದರೆ ಇಡಬಹುದು. ಈ ಪರಿಸ್ಥಿತಿ ಇರುವಷ್ಟು ಕಾಲವೂ ನವ್ಯ ಕಾವ್ಯವನ್ನು ಸ್ನಾತಕಪೂರ್ವ ತರಗತಿಗಳಿಗೆ ಪಠ್ಯ ವಿಷಯವಾಗಿಸುವುದು ಅಪೇಕ್ಷಣೀಯವಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

೧೯೭೫