ಪ್ರಶ್ನೆ : ನಿಮಗೆ ಈಗ ತುಂಬಾ ಬರೆಯಬೇಕು ಅನ್ನಿಸುತ್ತಿದೆಯಾ? ಏಕೆ?

ಉತ್ತರ : ಇಲ್ಲ ನಾನು ಈಗ ಮಾತ್ರ ಅಲ್ಲ, ಎಂದೂ ತುಂಬಾ ಬರೆಯಬೇಕೆಂಬ ಆಶೆ, ಆದರ್ಶ ಬೆಳೆಸಿಕೊಂಡವನಲ್ಲ. ನಾನು ಸಾಹಿತ್ಯ ವಿಮರ್ಶೆ ಬರೆಯುತ್ತ ಬಂದವನು. ಕೃತಿ ಅಥವಾ ಕೃತಿ ಸಮುದಾಯವು ಓದಿನ ಸಂದರ್ಭದಲ್ಲಿ ಮನಸ್ಸಿನಲ್ಲಿ ಹುಟ್ಟಿಸುತ್ತ ಹೋದ ಭಾವ ಕಂಪನಗಳು ವಿಮರ್ಶಕನು ತನ್ನೊಳಗೆ ತಾನೆ ನಡೆಸುವ ಆಪ್ತ, ಸಂಕೀರ್ಣ ಸಂಭಾಷಣೆಗಳ ಸಂಸ್ಕರಣ ಪ್ರಕ್ರಿಯೆಗೆ ಪ್ರೇರಣೆಯಾಗಿ, ಒತ್ತಾಸೆಯಾಗಿ ಒಂದು ನಿರ್ದಿಷ್ಟಕ್ರಮ ಮತ್ತು ಅರ್ಥಪೂರ್ಣತೆಯಲ್ಲಿ ಸಂಯೋಜಿತಗೊಳ್ಳುವುದನ್ನು ಸಮರ್ಪಕವಾದ ಮಾತುಗಳಲ್ಲಿ ಹಿಡಿಯಲು ಮಾಡುವ ಪ್ರಯತ್ನದ ಪರಿಣಾಮ ಅಥವಾ ಫಲವೇ ಸಾಹಿತ್ಯ ವಿಮರ್ಶೆ ಎಂಬುದು ನನ್ನ ತಿಳಿವಳಿಕೆ. ಸಾಹಿತ್ಯ ವಿಮರ್ಶಕನಲ್ಲಿ ಇಂಥ ತಿಳಿವಳಿಕೆ ದೃಢವಾದದ್ದಾದರೆ ವಿಮರ್ಶಕನು ಯಾರನ್ನೋ ಮೆಚ್ಚಿಸುವುದಕ್ಕೆ, ಹಣ ಮಾಡುವುದಕ್ಕೆ, ಜನಪ್ರಿಯವಾಗುವುದಕ್ಕೆ, ವೃತ್ತಿ ಬಡ್ತಿಯ ಪ್ರಯೋಜನಕ್ಕೆ ಸಾಹಿತ್ಯ ವಿಮರ್ಶೆ ಬರೆಯಲಾರೆ. ಮೇಲೆ ಹೇಳಿದ ತಿಳುವಳಿಕೆಯಿಂದ ಬರೆಯುವ ವಿಮರ್ಶಕನಿಗೂ ಇವೆಲ್ಲ ದೊರೆತರೂ ದೊರೆಯಬಹುದು. ಆದರೆ ಅವುಗಳಿಗೆಂದೇ ಪ್ರಜ್ಞಾಪೂರ್ವಕವಾಗಿ ಆತ ಯೋಚಿಸಿ, ಯೋಜಿಸಿ ವಿಮರ್ಶೆ ಬರೆಯಲಾರ. ಅವನ ಪ್ರತಿಭೆ, ಪಾಂಡಿತ್ಯಗಳ ಬೀಸು ದೊಡ್ಡದಾಗಿದ್ದರೆ ಅವನೂ ಹೆಚ್ಚು ಹೆಚ್ಚು ಬರೆಯುವಂತಾಗಬಹುದು. ಆದರೆ ನನ್ನ ಪ್ರತಿಭೆ, ಪಾಂಡಿತ್ಯಗಳ ಬೀಸಿನ ಬಗ್ಗೆ ನನಗೆ ಅಂಥ ಭ್ರಮೆಗಳಿಲ್ಲ. ನನ್ನ ಪ್ರತಿಭೆ, ಪಾಂಡಿತ್ಯಗಳ ಮಿತಿಯಲ್ಲಿ ಎಷ್ಟು ಸಾಧ್ಯವೊ ಅಷ್ಟು ಉತ್ಕೃಷ್ಟವಾಗಿ ಬರೆಯಬೇಕೆಂಬ ಆದರ್ಶವನ್ನು ಮುಂದಿಟ್ಟುಕೊಂಡು ಬರೆಯುತ್ತ ಆ ಪ್ರಕ್ರಿಯೆಯ ಮೂಲಕವೇ ನನ್ನ ಮಿತಿಯ ಕ್ಷಿತಿಜವನ್ನು ಗುಣಾತ್ಮಕವಾಗಿ ಅಷ್ಟಷ್ಟಾಗಿ ವಿಸ್ತರಿಸಿಕೊಳ್ಳುತ್ತ ಹೋಗುವುದು ಆರೋಗ್ಯಕರವಾದದ್ದೆಂದು ತಿಳಿದು ಸಾಗುತ್ತಿದ್ದೇನೆ.

ಪ್ರಶ್ನೆ : ನಮ್ಮ ಭಾರತದ ಬದುಕಲ್ಲಿ ಸಾಹಿತ್ಯ ಸೃಷ್ಟಿಯ ಬಗ್ಗೆ ಕಿರಿಯರ ಉತ್ಸಾಹ, ಆಶಾಭಾವನೆಗಳ ಬಗ್ಗೆ ನಿಮಗೆ ಏನನ್ನಿಸುತ್ತದೆ?

ಉತ್ತರ : ಪ್ರಜ್ಞಾವಂತ, ಪ್ರತಿಭಾವಂತ, ಹೃದಯವಂತ ವ್ಯಕ್ತಿಗೆ ಯಾವ ದೇಶದ ಜೀವನ ಸಂದರ್ಭವಾದರೂ ಪರಿಪೂರ್ಣವಾಗಿಲ್ಲ ಎಂದು ಕಾಣಬಹುದಾದದ್ದು ಸಹಜ. ಅಂದರೆ ಅಂಥ ವ್ಯಕ್ತಿಗೆ ಮನುಷ್ಯ ಮನುಷ್ಯರ ನಡುವಿನ ಸಂಬಂಧ, ಮನುಷ್ಯನ ಒಳಗೇ ಹುಟ್ಟಿಕೊಳ್ಳುವ ಕಾಮನೆ ಕಾಮನೆಗಳ ನಡುವಿನ ಸಂಬಂಧ-ಇವು ಸಾರ್ಥಕ ಸಾಮರಸ್ಯದ ತಿಳಿವಿನ ಬೆಳಕಾಗಿ ಫಲಿಸುತ್ತಿಲ್ಲವಲ್ಲ ಎಂಬ ಕೊರಗು, ಕ್ರೋಧ, ವಿಷಾದ-ಹೀಗೆ ಏನಾದರೊಂದು ಭಾವಪ್ರೇರಣೆಯಾಗಿ ಕಾಡಬಹುದು. ಅಂಥ ತಿಳಿವಿನ ಬೆಳಕು ತರುವ ಹಂಬಲದಿಂದ ದೀಪ್ತವಾದ ಕ್ರಿಯಾಶೀಲ ನಚಿಕೇತ ಚೇತನಗಳು ಹಿಂದೆಯೂ ಇದ್ದವು; ಇಂದೂ ಇದ್ದೇ ಇವೆ. ಇಂಥ ಎಳೆಯರಲ್ಲಿ ಲೋಕಾನುಭವ, ವಿದ್ಯತ್ತುಗಳ ಕೊರತೆ ಹಾಗೂ ವಯೋಗುಣದ ಕಾರಣದಿಂದಾಗಿ ಉತ್ಸಾಹ, ಆಶಾಭಾವನೆಗಳ ಉಕ್ಕುಂದ, ಆವೇಗ ಹೆಚ್ಚಾಗಿ ಕಾಣಿಸುವುದು ಸಹಜ. ಹಿರಿಯ ತಲೆಮಾರಿಗಿಂತ ಕಿರಿಯ ತಲೆಮಾರು ಎಂದೆಂದೂ ಹೆಚ್ಚು ಅನುಕೂಲ ಸ್ಥಿತಿಯಲ್ಲಿ ಇರುತ್ತದೆ. ಆದ್ದರಿಂದ ಹಿರಿಯ ತಲೆಮಾರಿನವರಿಗೆ ಕಿರಿಯ ತಲೆಮಾರು ಎಂದೆಂದೂ ಹೆಚ್ಚು ಅನುಕೂಲ ಸ್ಥಿತಿಯಲ್ಲಿ ಇರುತ್ತದೆ. ಆದ್ದರಿಂದ ಹಿರಿಯ ತಲೆಮಾರಿನವರಿಗೆ ಈಗ ಇರುವ ಲೋಕಾನುಭವ, ವಿದ್ಯತ್ತುಗಳ ಹೆಚ್ಚಳದಿಂದಾಗಿ ಕಿರಿಯರ ಬರಹಗಳಲ್ಲಿ ಆವೇಗ, ಕನಸುಗಾರಿಕೆಗಳೇ ಹೆಚ್ಚೆಂದು ಕಾಣುವುದು ಸಹಜ. ಆದರೆ ಆ ವಯಸ್ಸಿನಲ್ಲಿ ತಮ್ಮ ತಲೆಮಾರಿನವರು ಹೇಗಿದ್ದರು ಎಂದು ಕೇಳಿಕೊಂಡು ಪ್ರಾಮಾಣಿಕವಾಗಿ ಉತ್ತರ ಕಂಡುಕೊಳ್ಳಲು ಪ್ರಯತ್ನ ಮಾಡಿದರೆ ಕಿರಿಯ ತಲೆಮಾರಿನವರು ತಮಗಿಂತ ಹೆಚ್ಚು ಚುರುಕು, ಚೂಟಿ, ಸೂಕ್ಷ್ಮ ಎಂಬುದು ಗೊತ್ತಾದೀತು.ಸ

ನಾನು ನಿಮ್ಮ ವಯಸ್ಸಿನವನಾಗಿದ್ದಾಗ ಒಳ್ಳೆಯವನೆಂದು ಇತರರಿಂದ ಅನಿಸಿಕೊಳ್ಳುವುದು ಮಾತ್ರವಲ್ಲ, ನಿಜವಾಗಿಯೂ ಒಳ್ಳೆಯವನಾಗಬೇಕು, ಒಳ್ಳೆಯ ತಿಳಿವಳಿಕಸ್ಥನಾಗಬೇಕು, ಸಾಧ್ಯವಾದರೆ ಹತ್ತು ಜನಕ್ಕೆ ಪ್ರಯೋಜನವಾಗುವಂತೆಯೂ ಬಾಳಬೇಕು, ಎಂದೆಲ್ಲಾ ಕನಸು ಕಂಡವನು. ಸಾಹಿತ್ಯದ ಬಗ್ಗೆ ಬಹಳ ಚಿಕ್ಕಂದಿನಿಂದಲೂ ಆಸಕ್ತಿ ಇತ್ತಾದರೂ, ಆಗಾಗ ಕವನಗಳನ್ನೂ ಬರೆಯುತ್ತಿದ್ದೆನಾದರೂ ಯಾಕೊ ಏನೋ ನಾನು ದೊಡ್ಡ ಸಾಹಿತಿಯಾಗುವೆನೆಂಬ ಭ್ರಮೆ ಬೆಳೆಸಿಕೊಂಡಿರಲಿಲ್ಲ. ಈಗಲೂ ಅಂಥ ಹುಸಿ ಕಲ್ಪನೆಗಳನ್ನು ಪೋಷಿಸುವ ಗೀಳು ಇಲ್ಲ. ವ್ಯಕ್ತಿಯಾಗಿ ಒಳ್ಳೆಯವನಾಗಬೇಕೆಂಬ ಹಂಬಲವೇ ಆ ವಯಸ್ಸಿನಲ್ಲಿ ಪ್ರಬಲವಾಗಿತ್ತು. ಈಗಲೂ ನನ್ನ ಬರವಣಿಗೆಗೆ ಹಿನ್ನೆಲೆಯಾಗಿರುವ ಸಾಹಿತ್ಯಕ ಪರಿಕಲ್ಪನೆಯ ಒಂದು ಗಟ್ಟಿ ಎಳೆಯಾಗಿ ಅದು ಇದ್ದೇ ಇದೆ, ಎಂಬುದು ನನ್ನ ನಮ್ರ ತಿಳಿವಳಿಕೆಯಾಗಿದೆ. ಇಂಥ ಆದರ್ಶದ ಬಗ್ಗೆ ಇದ್ದ ಆ ವಯಸ್ಸಿನ ಉತ್ಸಾಹ ಕುರಿತಂತೆ ಈಗಲೂ ನನಗೆ ಅಭಿಮಾನವೆನಿಸುತ್ತದೆ. ತಮ್ಮ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ತಾವು ಬರೆದ ಸಾಹಿತ್ಯ ಗುಣಾತ್ಮಕವಾಗಿ ಒದಗಿ ಬಂದಿದೆ ಎಂಬುದನ್ನು ತಕ್ಕಮಟ್ಟಿಗಾದರೂ ತಮ್ಮ ನಡೆ ನುಡಿಗಳಲ್ಲಿ ಕಾಣಿಸುವ ಯೋಗ್ಯತೆ ಇಲ್ಲದ ಸಾಹಿತಿಗಳ ಬಗ್ಗೆ ಹೆಚ್ಚಿನ ಗೌರವಭಾವನೆ ನನ್ನಲ್ಲಿ ಬೆಳೆಯುವುದಿಲ್ಲ.

ಪ್ರಶ್ನೆ : ನಮ್ಮ ಸಾಹಿತ್ಯ ಬರೆಯುವವರು ಒಂದು ಸಣ್ಣ ಓದುಗರ ಮತ್ತು ವಸ್ತುಗಳ ಲೋಕದೊಳಗೆ ಸುಖವಾಗಿ ಇದ್ದಾರೆ ಎಂದು ನಿಮಗನ್ನಿಸುವುದಿಲ್ಲವೆ? ನಮ್ಮ ಬರಹಕ್ಕೆ ಬಾರದ ಲೋಕಗಳನ್ನು ಹೇಗೆ ಒಳಗೊಳ್ಳಬಹುದು? ಒಳಗೊಳ್ಳದಿರುವುದರ ಬಗ್ಗೆ ನಿಮಗೆ ಕೊರಗಿದೆಯೇ?

ಉತ್ತರ : ನಿಜವಾದ ಸಾಹಿತಿ ತನಗೆ ತಾನೇ ಪ್ರಥಮ ಓದುಗ, ಕೇಳುಗ, ಪ್ರೇಕ್ಷಕ. ತನ್ನೊಳಗಿನ ಅವನು ಅಹುದಹುದೆಂದು ತಲೆದೂಗುವುದೇ ಸಾಹಿತ್ಯದ ಸತ್ವಕ್ಕೆ, ಸತ್ಯಕ್ಕೆ ನಂಬಲರ್ಹವಾದ ಪ್ರಥಮ ಪ್ರಮಾಣ. ಹಾಗೆ ಹುಟ್ಟಿದ ಸಾಹಿತ್ಯಕೃತಿ ಇತರ ಎಷ್ಟು ಜನರನ್ನು ತಲೆದೂಗಿಸುತ್ತದೆ ಎಂಬ ಲೆಕ್ಕದಿಂದಲೇ ಅದರ ಹಿರಿಮೆಯನ್ನು ತೀರ್ಮಾನಿಸುವುದರಲ್ಲಿ ನನಗೆ ನಂಬಿಕೆ ಇಲ್ಲ. ಹಾಗೆಂದು, ತನ್ನೊಳಗಿನ ಓದುಗ-ಕೇಳುಗ-ಪ್ರೇಕ್ಷಕನೂ ತಲೆದೂಗುವಂತಾಗಿ ಅಸಂಖ್ಯಾತ ಜನವೂ ತಲೆದೂಗವಂಥ ಕೃತಿ ಬಂದದ್ದಾದರೆ ಅದೊಂದು ಅದ್ಭುತ ಘಟನೆ ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ.

ಇನ್ನು ವಸ್ತುವಿಗೆ ಸಂಬಂಧಿಸಿದ ಮಾತು. ನಮ್ಮ ಸ್ವಾನುಭವ, ಲೋಕಾನುಭವಗಳ ಪರಿಧಿಯಲ್ಲಿ ಫಲಿಸದಿರುವ ವಸ್ತುಗಳನ್ನು ಕುರಿತು ಬರೆಯಲು ಹೊರಡುವ ಮಹತ್ವಾಕಾಂಕ್ಷೆಗಿಂತ ತನ್ನ ಸೀಮಿತ ಅನುಭವದ ಚೌಕಟ್ಟಿನಲ್ಲಿಯೇ ಬರೆಯಲು ಹೊರಡುವ ಸತ್ಯನಿಷ್ಠೆ ಹೆಚ್ಚು ಸಾಚಾ ಆದದ್ದು. ಹೆಚ್ಚು ಜೀವನೋಪಯೋಗಿಯಾದದ್ದು. ಅತಿ ಮಹತ್ವಾಕಾಂಕ್ಷೆಯ ಫಲವಾದ ಕೃತಿಗಳು ಹೆಚ್ಚು ಅಮೂರ್ತವಾಗುತ್ತವೆ; ತತ್ವ, ಹೇಳಿಕೆಗಳ ಗದ್ದಲದ ಸಂತೆಯಾಗುತ್ತದೆ. ಸತ್ಯನಿಷ್ಠೆಯ ಫಲವಾದ ಕೃತಿಗಳು ಹೆಚ್ಚು ಮೂರ್ತವಾಗುತ್ತವೆ; ಮೌಲ್ಯ, ತತ್ವಗಳನ್ನು ನಿಷ್ಠುರ ವಾಸ್ತವದ ಬೆಳಕಿನಲ್ಲಿ ಶೋಧಿಸುತ್ತವೆ.

ಮನುಷ್ಯನ ಜ್ಞಾನದ, ಅನುಭವದ ವಿಸ್ತಾರಕ್ಕೂ ಮಿತಿ ಇದೆ. ಈ ಮಿತಿಯನ್ನು ವಿನಯದಿಂದ ಒಪ್ಪಿಕೊಂಡು ಆ ಮಿತಿಯಲ್ಲಿಯೇ ಅಡಕವಾಗಿರುವ ಮಹತ್ತನ್ನು ಕಾಣುವ ಸಂವೇದನಾ ಸೂಕ್ಷ್ಮವನ್ನು ಬೆಳೆಸಿಕೊಳ್ಳುತ್ತ, ಸಾಧ್ಯವಾದಷ್ಟು ಜ್ಞಾನ ಮತ್ತು ಅನುಭವಕ್ಕೆ ಬಾರದ ಲೋಕಗಳನ್ನು ಬರಹದಲ್ಲಿಯೇ ಒಳಗೊಳ್ಳುತ್ತೇವೆ ಎಂಬ ಹುಂಬ ಹಠವೇಕೆ? ವ್ಯರ್ಥ ಕೊರಗೇಕೆ? ಇಲ್ಲಿ ‘ಲೋಕ’ ಎಂಬ ಮಾತನ್ನು ವರ್ಗ, ಜಾತಿ, ಕೊಂಪೆ ಇತ್ಯಾದಿ ನಮ್ಮ ಪರಿಸರದ ವಾಸ್ತವ ಲೋಕಗಳ ಬಗ್ಗೆ ಹೇಳಿದ್ದೀರೆಂದು ಭಾವಿಸಿದ್ದೇನೆಯೆ ಹೊರತು ಸ್ವರ್ಗ, ನರಕ ಇತ್ಯಾದಿ ಲೋಕಗಳೆಂಬ ಅರ್ಥದಲ್ಲಿ ಬಳಸಿಲ್ಲ, ಎಂದುಕೊಂಡಿದ್ದೇನೆ. ಸ್ವರ್ಗ ನರಕಾದಿಗಳ ಅರ್ಥವ್ಯಾಪ್ತಿಯಲ್ಲಿಯೂ ಆ ಪದ ಬಳಸಿದ್ದೀರೆಂದಾದರೆ ಸ್ವಲ್ಪ ಭಿನ್ನವಾದ ಬಗೆಯ ವಿವರಣೆಯ ಅಗತ್ಯ ಉಂಟಾದೀತು ಎಂದಷ್ಟೇ ಇಲ್ಲಿ ಈಗ ಹೇಳುತ್ತೇನೆ.

ಪ್ರಶ್ನೆ : ನಿಮ್ಮ ಬಾಲ್ಯದ ನೆನಪುಗಳಿಂದ ನೀವು ತಪ್ಪಿಸಿಕೊಳ್ಳಬಯಸುತ್ತೀರಾ? ಬಾಲ್ಯದ ನೆನಪುಗಳು ನಿಮ್ಮ ಬರಹವ ಹೇಗೆ ಕಾಡುತ್ತಿವೆ?

ಉತ್ತರ : ಇಲ್ಲ. ಎಡನೆಯ ಪ್ರಶ್ನೆಗೂ ‘ಇಲ್ಲ’ ಎಂದೇ ನನ್ನ ಉತ್ತರ. ನಾನು ಕಾವ್ಯ, ನಾಟಕ, ಕಥೆ, ಕಾದಂಬರಿಯಂಥ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವವನಲ್ಲವಾದ್ದರಿಂದ ಬಾಲ್ಯದ ನೆನಪುಗಳ ಕಾಟ ಬರವಣಿಗೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಇಲ್ಲ. ಆದರೆ ನನ್ನಲ್ಲಿಯೂ ಬಾಲ್ಯದ ನೆನಪುಗಳು ತುಂಬಿವೆ. ಆಗಾಗ ನೆನಪಾಗಿ ಬಂದು ಜಾಗರವಾಡುತ್ತವೆ. ಈಗಲೂ ಅವುಗಳನ್ನು ಮುಗ್ಧ ಬೆರಗಿನಲ್ಲಿ ಕಾಣುತ್ತಿರುವಂಥ ಅನುಭವಗಳಾಗುತ್ತವೆ. ಕಳೆದು ಹೋದ ಆ ಹಳೆಯ ಲೋಕ ಹೊಸ ಅರ್ಥವಂತಿಕೆಯಲ್ಲಿ ಹೊಳೆದು ತೋರಿ ಕೊಂಚಕಾಲ ನನ್ನ ಮನಸ್ಸು ಅಲ್ಲಿ ತಂಗಿ ಅಮೋದಗೊಳ್ಳುವಂತೆ, ಧ್ಯಾನಸ್ಥವಾಗುವಂತೆ ಮಾಡುತ್ತದೆ. ಆ ಆನುಭವಗಳು ಕಾವ್ಯ, ಕಥೆ, ಕಾದಂಬರಿ, ನಾಟಕ ಈ ಯಾವುದಾದರೂ ರೂಪದಲ್ಲಿ ಅಭಿವ್ಯಕ್ತಿಯನ್ನು ಬೇಡಿ ನನ್ನನ್ನು ಕಾಡುವವೇ ಎಂಬುದನ್ನು ಕಾದು ನೋಡಬೇಕಷ್ಟೆ !

ಪ್ರಶ್ನೆ : ನೀವು ಬೆಳೆಯುತ್ತಾ ವಯಸ್ಸಾಗುತ್ತಾ ಇದ್ದ ಹಾಗೆ ನಿಮ್ಮಲ್ಲಿದ್ದ ಕ್ರಾಂತಿಕಾರಿ ಹುಡುಗ ಈಗ ಹೇಗಿದ್ದಾನೆ? ನಮ್ಮ ಕನ್ನಡದ ಬರಹಗಾರರು ಮಾಗುತ್ತ ಬರೆಯುವುದನ್ನು ಓಡಾಡುವುದನ್ನು ಕಡಿಮೆ ಮಾಡುತ್ತಿರುವುದರ ಬಗ್ಗೆ ಏನು ಹೇಳುತ್ತೀರಿ?

ಉತ್ತರ : ನಾನು ಕ್ರಾಂತಿಕಾರಿ ಹುಡುಗನಾಗಿದ್ದೇನೆಂದು ಹೇಳಿಕೊಳ್ಳಲಾರೆ. ನನಗೆ ತಿಳುವಳಿಕೆ ಬಂದ ವಯಸ್ಸಿನಿಂದಲೂ ನನಗೆ ಒಪ್ಪಿಗೆಯಾದುದನ್ನು ನಾನು ಮಾಡುತ್ತಿರಲಿಲ್ಲ. ನನ್ನ ಅಭಿಪ್ರಾಯ ಹೇಳುವುದಕ್ಕೂ ಅಂಜುತ್ತಿರಲಿಲ್ಲ. ಈಗಲೂ ಅಂಥ ಅಂಜಿಕೆ ಇಲ್ಲ. ಅಷ್ಟೇ ಹೊರತು ನನಗೆ ಒಪ್ಪಿಗೆಯಾದುದನ್ನು ಪ್ರತಿಭಟಿಸಲು ಜನಸಂಘಟನೆ ಮಾಡಿ ಶತಾಯಗತಾಯ ವಿರೋಧಿಸಲು ಮುನ್ನುಗ್ಗುವ ಪ್ರವೃತ್ತಿ, ಉತ್ಸಾಹ ನನ್ನಲ್ಲಿ ಯಾವಾಗಲೂ ಹೆಚ್ಚಾಗಿದ್ದಂತಿಲ್ಲ. ಯೋಗ್ಯವಾದ ಕಾರಣಕ್ಕಾಗಿ ಸಂಘಟಿತ ಪ್ರತಿಭಟನೆ ನಡೆಯುತ್ತಿದ್ದರೆ ಅದಕ್ಕೆ ನನ್ನ ನೈತಿಕ ಬೆಂಬಲ ಸೂಚಿಸಲೆಂದು ಮೆರವಣಿಗೆ, ಧರಣಿ, ಸಮಾರಂಭಗಳಲ್ಲಿ ಆಗಾಗ ಭಾಗವಹಿಸುತ್ತ ಬಂದಿರುವುದುಂಟು. ಆದರೂ ನನ್ನದು ಏನಿದ್ದರೂ ವೈಯಕ್ತಿಕ ನೆಲೆಯಲ್ಲಿ ಪ್ರತಿಭಟಿಸುವ ವಿರೋಧ ವ್ಯಕ್ತಪಡಿಸುವ ರೀತಿ. ಸಮೂಹದ ಮಧ್ಯೆ ಇದ್ದಾಗಲೂ ಪೂರ್ವಾಪರ ವಿವೇಚನೆ ಕಳೆದುಕೊಳ್ಳದಂತೆ ಇರುವುದು ನನ್ನ ಸ್ವಭಾವ. ‘ಅತಿ’ ಎಂದಿಗೂ ನಾನು ಒಪ್ಪುವ ಮಾರ್ಗವಲ್ಲ. ಗೋಕಾಕ ಚಳವಳಿಯ ಸಂದರ್ಭದಲ್ಲಿ ಸಂಘಟನೆಗಾಗಿ ತುಂಬ ದುಡಿದೆನಾದರೂ ಆ ಚಳವಳಿ ‘ಅತಿ’ ಎಂಬಂಥ ನಿಲುವನ್ನು ತಳೆಯುವತ್ತ ಸಾಗುತ್ತಿದೆ ಎಂದೆನಿಸಿದಾಗ-ಹೀರೋ ಎನಿಸಿಕೊಳ್ಳಬಹುದಾದ ಸಂದರ್ಭ ಕೈ ಎಟುಕಿನಲ್ಲಿ ಇತ್ತಾದರೂ-ದೂರಸರಿದು ನಿಂತೆ. ನಾನು ವೈಯಕ್ತಿಕ ಪ್ರತಿಭಟನೆಯನ್ನೂ ಒಂದು ಹವ್ಯಾಸವಾಗಿ ಚಟವಾಗಿ ಬೆಳೆಸಿಕೊಂಡವನಲ್ಲ. ಅವು ಸ್ವಂತದ ಲಾಭದ ಅಂದರೆ ಸ್ವಾರ್ಥದ ದೃಷ್ಟಿಯಿಂದ ಮಾಡಿದವಲ್ಲ ಎಂಬ ಆಭಿಮಾನ, ಅಭಿಪ್ರಾಯ ನನ್ನಲ್ಲಿದೆ. ವರದಕ್ಷಿಣೆಯ ಮದುವೆ, ಅದ್ಧೂರಿಯ ಮದುವೆ ಎಷ್ಟೇ ಹತ್ತಿರದ ಸಂಬಂಧಿಕರದಾಗಿರಲಿ ನಾನು ನನ್ನ ಹೆಂಡತಿ ಅದರಲ್ಲಿ ಭಾಗವಹಿಸುವುದಿಲ್ಲ. ದೇವರ ಪೂಜೆ, ಧಾರ್ಮಿಕ ಹಬ್ಬ, ಹರಿದಿನಗಳ ಆಚರಣೆ ಬಿಟ್ಟು ಎಷ್ಟೋ ಕಾಲವಾಯಿತು. ನಾನು ಸತ್ತರೆ ಸುಡುವುದರ ಹೊರತಾಗಿ ಬೇರೆ ಯಾವ ಧಾರ್ಮಿಕ ಕ್ರಿಯೆಗಳನ್ನೂ ಮಾಡಬಾರದೆಂದು ಸಂಬಂಧಪಟ್ಟವರಿಗೆ ಈಗಾಗಲೇ ತಿಳಿಸಿದ್ದೂ ಆಗಿದೆ – ಇತ್ಯಾದಿ ಹೇಳುತ್ತ ಹೋಗಬಹುದು. ಅಭಿಪ್ರಾಯವಿಷ್ಟೆ : ಇವೆಲ್ಲ ಕ್ರಾಂತಿಕಾರಕ ವಿಚಾರಗಳು ಎಂದು ನೀವು ಭಾವಿಸಿದ್ದರೆ ನನ್ನಲ್ಲಿದ್ದಿರಬಹುದಾದ ಕ್ರಾಂತಿಕಾರಿ ಹುಡುಗ ಇನ್ನೂ ಸತ್ತಿಲ್ಲ. ನನ್ನ ವ್ಯಕ್ತಿತ್ವ ಸತ್ವದ ಪರಿಮಿತಿಯಲ್ಲಿಯೇ ತನ್ನನ್ನು ಕಾಣಿಸಿಕೊಳ್ಳುವಷ್ಟು ತಿಳುವಳಿಕೆ ಅವನಿಗ ಬಂದಿದೆ ಎನ್ನಬಹುದು. ಏಕೆಂದರೆ ತನ್ನಿಂದ ಆಗದ್ದನ್ನು ಇತರರು ಮಾಡಬೇಕೆಂದು ಆಗ್ರಹಪಡಿಸುವುದಕ್ಕಿಂತ, ಮಾಡಬೇಕಾದದ್ದೆಂದು ಉಪದೇಶಿಸುವುದಕ್ಕಿಂತ ತನ್ನಿಂದ ಆಗುವಷ್ಟನ್ನು ಸಂದರ್ಭ, ಸನ್ನಿವೇಶಗಳ ಪರಿವೆ, ಪರಿಜ್ಞಾನದ ಬೆಳಕಿನಲ್ಲಿ ಮಾಡುತ್ತ ಹೋಗುವುದು ಘನತೆಯ, ನಿಷ್ಠೆಯ ದಾರಿ ಎಂದು ಬಹುಶಃ ಆತ ಭಾವಿಸಿದ್ದಾನೆ.ಸ

ಇನ್ನು ಪ್ರಶ್ನೆಯ ಎರಡನೆಯ ಭಾಗ. ಕನ್ನಡದ ಬರಹಗಾರರು ಮಾಗುತ್ತಾ ಬರೆಯುವುದನ್ನು ಕಡಮೆ ಮಾಡಿದ್ದಾರೆ ಎಂದರೆ ಹಿಂದೆ ಮಾಗುತ್ತಾ ಬರೆಯುತ್ತಿದ್ದರೆಂಬ ಗ್ರಹಿಕೆ ನಿಮ್ಮದಾಗಿದೆ ಎಂದು ತೋರುತ್ತದೆ. ಆ ಗ್ರಹಿಕೆಯೇ ತಪ್ಪು. ಮಾಸ್ತಿ, ಬೇಂದ್ರೆ, ಕಾರಂತ, ಕುವೆಂಪು ಇಂಥವರೂ ಮಾಗುತ್ತ ಬರೆಯಲಿಲ್ಲ. ಬರೆಯುತ್ತ ಮಾಗಿದರು. ಅವರ ಕೃತಿಗಳ ಸಂಖ್ಯೆ, ಅವುಗಳ ಗುಣಮಟ್ಟದ ವಿಪರೀತ ಏರುಪೇರು ಈ ಮಾತಿಗೆ ಸಮರ್ಥನೆ ನೀಡುತ್ತವೆ.ಮಾಗುತ್ತ ಬರೆಯುತ್ತ ಬಂದವರು ಬಹುಶಃ ಗೋಪಾಲಕೃಷ್ಣ ಅಡಿಗ, ಯಶವಂತ ಚಿತ್ತಾಲ, ಯು.ಆರ್.ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ದೇವನೂರ ಮಹಾದೇವ ಹೀಗೆ ಹೆಸರಿಸುವುದಕ್ಕೆ ಇನ್ನೂ ಕೆಲವರು ಸಿಗಬಹುದೇನೊ !

ಕನ್ನಡ ಬರಹಗಾರರು ಓಡಾಡುವುದನ್ನು ಕಡಮೆ ಮಾಡಿದ್ದಾರೆ ಎಂಬ ಮಾತೂ ನಿಜವಲ್ಲ. ಹೊಸಗನ್ನಡ ಸಾಹಿತಿಗಳಲ್ಲಿ ಓಡಾಟ ಕಡಮೆ ಮಾಡಿದವರು ಕುವೆಂಪು ಒಬ್ಬರೇ. ಬಿ.ಎಂ.ಶ್ರೀ., ಕಾರಂತ, ಗೋಕಾಕ, ಅನಂತಮೂರ್ತಿ, ಹಾ.ಮಾ. ನಾಯಕರಂಥವರು ತುಂಬಾ ಓಡಾಡಿದವರೆಂದು ತೋರುತ್ತದೆ. ಅದರಿಂದ ನಾಡಿಗೂ ಸ್ವಲ್ಪ ಪ್ರಯೋಜನವಾಗಿದೆ, ಎನ್ನಬಹುದು. ವಿಶ್ವವಿದ್ಯಾನಿಲಯಗಳು, ಅಕಾಡೆಮಿಗಳು, ಕನ್ನಡ ಸಾಹಿತ್ಯ ಪರಿಷತ್ತು ಇತ್ಯಾದಿ ಸಂಸ್ಥೆಗಳು, ಸಂಘಗಳು ವಿಚಾರಗೋಷ್ಠಿ, ಕಮ್ಮಟ, ಸಮ್ಮೇಳನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸುತ್ತಿರುವುದರಿಂದ, ವಿಶ್ವವಿದ್ಯಾನಿಲಯಗಳ ಅಧ್ಯಾಪಕರ ಬಡ್ತಿ ಹುದ್ದೆಗಳಿಗೆ ಪುಸ್ತಕ ಸಂಖ್ಯೆ, ಡಾಕ್ಟರೇಟ್ ಪದವಿಗಳು, ಗೋಷ್ಠಿ, ಸಮ್ಮೇಳನಗಳಲ್ಲಿ ಭಾಗವಹಿಸುವುದು ಅಗತ್ಯ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಿಂದಾಗಿ ಮಾಗದೆ ಬರೆಯುವವರೂ, ಬರೆದೂ ಮಾಗದೆ ಇರುವವರೂ ಹೆಚ್ಚಾಗುತ್ತಿದ್ದಾರೆ; ಓಡಾಡುವವರೂ ಹೆಚ್ಚಾಗುತ್ತಿದ್ದಾರೆ.

ಪ್ರಶ್ನೆ : ಮಹಾರಾಜ ಕಾಲೇಜು ದಿನಗಳು ನಿಮಗೇನು ಕೊಟ್ಟವು?

ಉತ್ತರ : ಮಹಾರಾಜ ಕಾಲೇಜಿನಲ್ಲಿ ನಾಲ್ಕು ವರ್ಷ ಓದಿದ್ದೆ (೧೯೫೬-೬೦). ಮೂರುವರೆ ವರ್ಷ (೧೯೬೯-೭೨) ಅಧ್ಯಾಪಕನಾಗಿ ಪಾಠ ಹೇಳಿದ್ದೆ. ನಾನು ವಿದ್ಯಾರ್ಥಿಯಾಗಿದ್ದ ಕಾಲ ಕಾಲೇಜಿನ ವೈಭವದ ಕಾಲ. ಅದು ಆ ವೈಭವದ ಕೊನೆಯ ನಾಲ್ಕು ವರ್ಷಗಳೆಂದೂ ಹೇಳಬೇಕು.ಮುಂದೆ ಬಿ.ಎ.ಆನರ್ಸ್ ಮತ್ತು ಒಂದು ವರ್ಷದ ಎಂ.ಎ ಪದ್ಧತಿಗಳು ಕೊನೆಗೊಂಡವು. ಆಗ ಕನ್ನಡದಲ್ಲಿ ಎಂ.ಎ. ಪದವಿಯನ್ನು ಮಹಾರಾಜ ಕಾಲೇಜಿನಿಂದ ಪಡೆದ ಕೊನೆಯ ತಂಡದ ವಿದ್ಯಾರ್ಥಿಗಳಲ್ಲಿ ನಾನಿದ್ದೆ. ಒಂದು ವರ್ಷದ ಎಂ.ಎ. ತಂಡ ಮತ್ತೊಂದು ಇತ್ತಾದರೂ (ಪೂರ್ಣಚಂದ್ರ ತೇಜಸ್ವಿ ಅದರಲ್ಲಿದ್ದರು) ಅದು ಮಾನಸ ಗಂಗೋತ್ರಿಯಿಂದ ಸ್ನಾತಕೋತ್ತರ ಪದವಿ ಪಡೆದ ಮೊದಲ ತಂಡವೆನಿಸಿತು. ಅದರ ಜೊತೆಗೇ ಆನರ್ಸ್ ಪದ್ಧತಿಯೂ ಅಂತ್ಯಗೊಂಡಿತು; ಎರಡು ವರ್ಷದ ಎಂ.ಎ ಸ್ಥಿರವಾಯಿತು.

ಇಂಟರ್ ಆರ್ಟ್ಸ್ ಪರೀಕ್ಷೆಯಲ್ಲಿ ಹಳೆಯ ಮೈಸೂರು ರಾಜ್ಯಕ್ಕೆಲ್ಲ ಒಂದೇ ಆಗಿದ್ದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ನಾಲ್ಕನೆಯ ರಾಂಕ್ (ಪ್ರಥಮ ವರ್ಗದಲ್ಲಿ) ಪಡೆದು ಕನ್ನಡ ಆನರ್ಸ್‌ಗೆಂದು ಮಹಾರಾಜ ಕಾಲೇಜಿಗೆ ಬಂದೆ. ಮಾನವಿಕ ವಿಭಾಗದ ವಿಷಯಗಳಲ್ಲಿ ಹಿರಿಯ ಹೆಸರು ಮಾಡಿದ ಹಿರಿ-ಕಿರಿಯ ವಿದ್ವಾಂಸರ ಸಮೂಹವೇ ಅಲ್ಲಿತ್ತು. ತೀ.ನಂ. ಶ್ರೀಕಂಠಯ್ಯ, ಡಿ.ಎಲ್. ನರಸಿಂಹಾಚಾರ್ (ಕನ್ನಡ), ಎಸ್. ಶ್ರೀಕಂಠ ಶಾಸ್ತ್ರಿ (ಕರ್ನಾಟಕ ಇತಿಹಾಸ)ಗಳಂಥ ಶ್ರೇಷ್ಠ ವಿದ್ವಾಂಸ ಪ್ರಾಧ್ಯಾಪಕರ ಶಿಷ್ಯನಾಗುವ ಸದವಕಾಶ ಲಭಿಸಿತು. ಗಂಭೀರವಾದ ಅಧ್ಯಯನ, ಚಿಂತನೆಗಳು ಕೆನೆಗಟ್ಟಿದಂತಿದ್ದ ಆ ಗುರುಗಳ ಪಾಠಗಳು, ಒಂದು ವಿಷಯದ ಬಗ್ಗೆ ಆಡುವ ಮಾತು, ಮಾಡುವ ಪಾಠ, ಬರೆಯುವ ಬರವಣಿಗೆ ಹೇಗಿರಬೇಕೆಂಬ ಆದರ್ಶದ ಕಲ್ಪನೆಯನ್ನು ನನ್ನಲ್ಲಿ ಮೂಡಿಸಿದವು.

ಕಾಲೇಜಿನ ಪ್ರಿನ್ಸಿಪಾಲರಾದ ಪ್ರೊ. ಸಿ.ಡಿ.ನರಸಿಂಹಯ್ಯನವರ ಆಡಳಿತದಲ್ಲಿ ಚುರುಕು, ಘನತೆ ಸ್ಥಾಯಿಯಾಗಿತ್ತು. ಮೂವತ್ತಾರು ಮೂವತ್ತೇಳರ ಪ್ರಾಯದ ಪ್ರಭಾವಶಾಲಿ ಆಕರ್ಷಕ ವ್ಯಕ್ತಿತ್ವದ ಅವರು ಕಾಲೇಜಿನ ಭವ್ಯ ಪರಂಪರೆಗೆ ಚ್ಯುತಿ ಬರದಂತೆ ನೋಡಿಕೊಳ್ಳುವುದರ ಜೊತೆಗೆ ಅದನ್ನು ಇನ್ನೂ ಉನ್ನತಿಗೇರಿಸುವ ಧೀಮಂತ ಕನಸುಗಳಿಗೆ ಕಾವು ಕೊಟ್ಟು ಜೀವ ಕೊಡುವ ಸುಸಂಸ್ಕೃತ ಚೈತನ್ಯವಾಗಿದ್ದರು. ಅವರಿಗೆ ಕಾಲೇಜಿಗೆ ಸಂಬಂಧಿಸಿದ ಎಲ್ಲದರಲ್ಲಿ ಆಸಕ್ತಿ. ವಿದ್ಯಾರ್ಥಿಗಳ ಬಗ್ಗೆ ಅಂತಃಕರಣಪೂರ್ವಕ ಕಳಕಳಿ.ಆರ್ಥಿಕವಾಗಿ ದುರ್ಬಲರಾಗಿದ್ದ ನೂರಾರು ವಿದ್ಯಾರ್ಥಿಗಳ ಹಿತಕ್ಕಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸಿದರು. ಸಮರ್ಥವಾದ ರೀತಿಯಲ್ಲಿ ಕಾರ್ಯರೂಪಕ್ಕೆ ತಂದರು. ನಮ್ಮಲ್ಲಿ ದೈನ್ಯವನ್ನು ಬೆಳಸಲಿಲ್ಲ; ಘನತೆ ಸ್ವಾಭಿಮಾನಗಳನ್ನು ತುಂಬಿದರು. ಕುವೆಂಪು ಆನಂತರ ಅವರೇ ನಮ್ಮ ವಿಶ್ವವಿದ್ಯಾನಿಲಯದ ಕುಲಪತಿಗಳಾಗಬಹುದೆಂಬ ನಿರೀಕ್ಷೆ ಹಲವರಲ್ಲಿತ್ತು. ಅವರು ಎಂದೂ ಕುಲಪತಿಗಳಾಗಲಿಲ್ಲ. ಅದು ವಿಶ್ವವಿದ್ಯಾನಿಲಯ ಕಳೆದುಕೊಂಡ ಶ್ರೇಷ್ಠ ಅವಕಾಶ ಎಂದು ನಾನು ಭಾವಿಸಿದ್ದೇನೆ.

ನಾನು ಕಾಲೇಜಿನ ಚರ್ಚಾಪಟುಗಳಲ್ಲಿ ಒಬ್ಬನಾಗಿದ್ದೆ. ವಿಶ್ವವಿದ್ಯಾನಿಲಯವನ್ನೂ ಪ್ರತಿನಿಧಿಸಿದ್ದೆ. ಕಬಡ್ಡಿಯಲ್ಲಿ ಅತ್ಯುತ್ತಮ ಆಟಗಾರನಾಗಿದ್ದರೂ ಆನರ್ಸ್‌ನಲ್ಲಿ ವಿಷಯ ಶ್ರೇಷ್ಠ ವಿದ್ಯಾರ್ಥಿ ವೇತನ (Subject Scholarship) ಉಳಿಸಿಕೊಳ್ಳುವಂತೆ ಓದದಿದ್ದರೆ ಆರ್ಥಿಕ ಮುಗ್ಗಟ್ಟಿನಲ್ಲಿ ಓದುತ್ತಿದ್ದ ನನಗೆ ಓದು ಮುಂದುವರಿಸಲು ತೀರಾ ತೊಂದರೆಯಾಗಬಹುದೆಂಬ ದಿಗಿಲಿನಿಂದ ಆಟದ ಮೈದಾನದ ಕಡೆಗೇ ಸುಳಿಯುತ್ತಿರಲಿಲ್ಲ. ದಸರಾ ಕ್ರೀಡೆ ಸ್ಪರ್ಧೆಯಲ್ಲಿ ಭಾರತ ಸೇವಾದಳದ ರಾಜ್ಯಮಟ್ಟದ ಕಬಡ್ಡಿ ತಂಡದ ನಾಯಕನಾಗಿ ನಾನು ಅತ್ಯುತ್ತಮ ಮಟ್ಟದಲ್ಲಿ ಆಡಿದ್ದನ್ನು ನಮ್ಮ ಕಾಲೇಜಿನ ತಂಡದ ನಾಯಕ ಪ್ರಿನ್ಸಿಪಾಲರಿಗೆ ತಿಳಿಸಿದಾಗ ಅವರು ನನ್ನನ್ನು ಕರೆಸಿ ಕಾಲೇಜಿನ ತಂಡದ, ಆ ಮೂಲಕ ಕಾಲೇಜಿನ ಗೌರವ ಹೆಚ್ಚಿಸಲು ನಾನು ಆಡಲೇಬೇಕೆಂದು ಒತ್ತಾಯಪೂರ್ವಕವಾಗಿ ತಿಳಿಸಿ ಹೇಳಿದ್ದನ್ನು ನಾನೆಂದೂ ಮರೆಯುವಂತಿಲ್ಲ. ಮುಂದೆ ಕಾಲೇಜಿನ ಕಬಡ್ಡಿ ತಂಡದ ನಾಯಕನಾದೆ. ವಾರ್ಸಿಟಿ ಆಟಗಾರನಾದೆ; ಅಖಿಲ ಭಾರತ ಪಿ. ಎಂಡ್ ಟಿ. ಮತ್ತು ಮೈಸೂರು ರಾಜ್ಯ ತಂಡದ ನಡುವೆ ಬೆಂಗಳೂರಿನಲ್ಲಿ ನಡೆದ ಕಬಡ್ಡಿ ಪಂದ್ಯದಲ್ಲಿ ರಾಜ್ಯದ ಆಟಗಾರನಾದೆ. ಮಹಾರಾಜ ಕಾಲೇಜಿನ ಆಟದ ಮೈದಾನ ನನ್ನಲ್ಲಿ ಆತ್ಮವಿಶ್ವಾಸ, ಆತ್ಮಸ್ಥೈರ್ಯಗಳನ್ನು ಚೆನ್ನಾಗಿ ಬೆಳೆಸಿತು. ಚೆನ್ನಾಗಿ ಓದಿ ವಿಷಯ ಶ್ರೇಷ್ಠ ವಿದ್ಯಾರ್ಥಿ ವೇತನವನ್ನೂ ಆನರ್ಸ್‌ನ ಪೂರ್ಣ ಕಾಲಾವಧಿಯವರೆಗೂ ಕಾಯ್ದುಕೊಂಡೆ. ಎಂ.ಎ. ಓದುವಾಗ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆ ಬಂತು. ಅದನ್ನು ಪಡೆದೆ.

ಮಹಾರಾಜ ಕಾಲೇಜು ಸೇರುವ ಮೊದಲಿನ ಎರಡು ವರ್ಷ (೧೯೫೪-೫೬) ಪಕ್ಕದ ಯುವರಾಜ ಕಾಲೇಜಿನಲ್ಲಿ ಇಂಟರ್ ಆರ್ಟ್ಸ್ ಓದುತ್ತಿದ್ದೆ. ಮೊದಲ ವರ್ಷದ ಆರಂಭದಲ್ಲಿಯೇ ಆಗ ಮೂರನೆಯ ಆನರ್ಸ್ (ಇಂಗ್ಲಿಷ್)ನಲ್ಲಿ ಓದುತ್ತಿದ್ದ ಮಹಾರಾಜ ಕಾಲೇಜಿನ ಅತ್ಯಂತ ಪ್ರತಿಭಾವಂತ ಸಾಹಿತ್ಯ ವಿದ್ಯಾರ್ಥಿಯಾಗಿದ್ದ ಯು.ಆರ್.ಅನಂತಮೂರ್ತಿಯವರ ಪರಿಚಯ ಆಯಿತು. ಇದು ಸ್ನೇಹವಾಗಿ ಬೆಳೆಯಿತು ಎಂದು ನಾನೆನ್ನಲಾರೆ. ಅನಂತಮೂರ್ತಿ ಹಾಗೆನ್ನಲು ಸಂಕೋಚಪಡುವವರಲ್ಲ. ಆದರೆ ನನ್ನ ಭಾವನೆಯಲ್ಲಿ ಅದು ಗುರುಶಿಷ್ಯ ಸಂಬಂಧಕ್ಕಿಂತ ಬೇರೆಯಾಗಿರಲಿಲ್ಲ. ಅವರ ಉಜ್ವಲ ಸಾಹಿತ್ಯಾಸಕ್ತಿ, ಕಿರಿಯರೊಡನೆಯೂ ಪ್ರೀತಿ, ಉತ್ಸಾಹಗಳಿಂದ ಸಾಹಿತ್ಯದ ಬಗ್ಗೆ ಪರಿಣಾಮ ಬೀರುವಂತೆ ಮಾತಾಡುವ ಶಕ್ತಿ, ಸಜ್ಜನಿಕೆ ಇವು ನನ್ನನ್ನು ಬಲವಾಗಿ ಆಕರ್ಷಿಸಿದ್ದರಿಂದ ಆಗ ನಮ್ಮ ವಿದ್ಯಾರ್ಥಿ ನಿಲಯದಿಂದಲೇ ಕಾಲೇಜಿಗೆ ಬರುತ್ತಿದ್ದ ಅವರೊಡನೆ- ನನಗೆ ೧೦-೩೦ ಘಂಟೆಗೆ ಕ್ಲಾಸಿರಲಿ, ಇಲ್ಲದಿರಲಿ – ತಪ್ಪದೆ ಹೊರಡುತ್ತಿದ್ದೆ. ಕವನಗಳನ್ನು ಬರೆಯುತ್ತಿದ್ದೆ. ಬೇಂದ್ರೆ, ಕುವೆಂಪು, ಕಾರಂತ, ಮಾಸ್ತಿ, ಅಡಿಗ ಎಂದು ಸಾಹಿತಿಗಳ ಹೆಸರು ಹೇಳಬಲ್ಲಷ್ಟು ಸಾಹಿತ್ಯಾಸಕ್ತಿ ಬೆಳೆದಿದ್ದ ನನ್ನ ರುಚಿ, ನೋಟಗಳನ್ನು ತಿದ್ದುವುದರಲ್ಲಿ ಅವರ ಪ್ರಭಾವ ಮುಖ್ಯವಾದದ್ದಾಯಿತು. ಅವರ ಮೂಲಕವೇ ಮಹಾರಾಜ ಕಾಲೇಜಿನ ಪ್ರಭಾವಶಾಲಿ ಪರಿಸರದ ಪರಿಚಯವೂ ಅಷ್ಟಷ್ಟಾಗಿ ಆಗತೊಡಗಿತು. ಅಲ್ಲಿ ನಡೆಯುವ ವಿದ್ವಾಂಸರ ಭಾಷಣ, ಮತ್ತು ಇತರ ಕಾರ್ಯಕ್ರಮಗಳ ಬಗ್ಗೆ ಆಕರ್ಷಣೆ, ಆಸಕ್ತಿ ಬೆಳೆಯಿತು. ಎರಡನೆಯ ವರ್ಷ ಅನಂತಮೂರ್ತಿ ಅಧ್ಯಾಪಕರಾಗಿ ಬೇರೆ ಊರಿಗೆ ಹೋದರು. ನಾನು ಪ್ರಥಮ ಆನರ್ಸ್ ವಿದ್ಯಾರ್ಥಿಯಾಗಿ ಸೇರಿದ್ದಾಗ ಅವರೂ ಎಂ.ಎ.ಓದಲು ಬಂದರು. ಆ ಒಂದು ವರ್ಷವೂ ನನ್ನ ಅವರ ಸಂಬಂಧ ಫಲಪ್ರದವಾಗಿ ಮುಂದುವರಿಯುವಂತಾಯಿತು. ಮುಂದಿನ ದಿನಗಳಲ್ಲಿ ನನ್ನ ವ್ಯಕ್ತಿತ್ವ ಮತ್ತು ಸಾಹಿತ್ಯ ಚಿಂತನೆಗಳ ಮೇಲೆ ಗಾಢ ಪ್ರಭಾವ ಬೀರಿದ ಶ್ರೀ ಗೋಪಾಲಕೃಷ್ಣ ಅಡಿಗರ ವೈಯಕ್ತಿಕ ಪರಿಚಯ ಆ ಕಾಲದಲ್ಲಿಯೇ ಅವರ ಮೂಲಕ ಆಯಿತು. ಮುಂದೆ ಅಡಿಗರ ಒಡನಾಟ, ಸಂಬಂಧ ನಿಕಟವಾಗುತ್ತ ಹೋಯಿತು.

ಮಹಾರಾಜ ಕಾಲೇಜಿನ ದಿನಗಳಲ್ಲಿಯೆ ಗುರುಗಳಾದ ಡಾ. ಹಾ.ಮಾ.ನಾಯಕ, ಡಾ. ಪ್ರಭುಶಂಕರ, ಡಾ. ಜಿ.ಎಸ್.ಶಿವರುದ್ರಪ್ಪ, ಪ್ರೊ. ಸುಜನಾ, ಮಿತ್ರರಾದ ಬಿ.ವಿ. ವೈಕುಂಠರಾಜು, ಎಚ್.ಎಂ.ಚನ್ನಯ್ಯ, ಪಿ.ಲಂಕೇಸ್, ಪೂರ್ಣಚಂದ್ರ ತೇಜಸ್ವಿ, ಡಾ. ಬಿ. ದಾಮೋದರರಾವ್, ಡಾ. ಪೋಲಂಕಿ ರಾಮಮೂರ್ತಿ, ಡಿ.ಎ.ಶಂಕರ, ವಿ.ಎಚ್. ಗೌಡ, ರಾಜೀವ ತಾರಾನಾಥ ಮೊದಲಾದವರ ಪರಿಚಯವಾದದ್ದು. ಅವರೆಲ್ಲ ಒಂದಲ್ಲ ಒಂದು ಬಗೆಯಿಂದ ನನ್ನ ಸಾಹಿತ್ಯಕ ಮತ್ತು ವೈಚಾರಿಕ ಬೆಳವಣಿಗೆಯ ದಾರಿಯಲ್ಲಿ ಒದಗಿಬಂದವರು.

ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದ ಕಾಲದಲ್ಲಿ ನನ್ನನ್ನು ಬೆಳೆಸುವಂಥ ಮಹತ್ವದ್ದೇನೂ ಕಾಣಲಿಲ್ಲ; ಆಗಲಿಲ್ಲ. ವಿದ್ಯಾರ್ಥಿಗಳ ಮುಷ್ಕರ, ಗುಂಪುಘರ್ಷಣೆಗಳು ಆಗಾಗ ನಡೆಯುತ್ತಿದ್ದುದುಂಟು. ಆಡಳಿತದಲ್ಲಿಯೂ ಬಿಗಿ, ಘನತೆ ಹಿಂದಿನಂತಿರಲಿಲ್ಲ. ಆದ್ದರಿಂದ ನಾನು ವಿದ್ಯಾರ್ಥಿಯಾಗಿದ್ದ ಕಾಲದ ಕಾಲೇಜಿನ ವೈಭವವನ್ನು ನೆನೆಸಿಕೊಂಡು ಕಲಿತ ಕಾಲೇಜಿನಲ್ಲಿಯೇ ಅಧ್ಯಾಪಕನಾಗಿರುವೆನೆಂಬ ಹೆಮ್ಮೆ ಮಾತ್ರ ಹೊತ್ತು ನನ್ನ ಮಟ್ಟಿಗೆ ಶ್ರದ್ಧೆಯಿಂದ ಪಾಠ ಹೇಳಿ, ವಿದ್ಯಾರ್ಥಿಗಳ ವಿಶ್ವಾಸ ಗಳಿಸಿ ವೃತ್ತಿ ನ್ಯಾಯಕ್ಕೆ ಚ್ಯುತಿ ಬರದಂತೆ ನೋಡಿಕೊಂಡೆ. ಯುವರಾಜ ಕಾಲೇಜಿನಲ್ಲಿ ನನ್ನ ವಿದ್ಯಾರ್ಥಿಯಾಗಿದ್ದ ದೇವನೂರು ಮಹದೇವ ಆ ಕಾಲದಲ್ಲಿಯೂ ನನ್ನ ವಿದ್ಯಾರ್ಥಿಯಾಗಿದ್ದರು (ಮುಂದೆ ಮಾನಸ ಗಂಗೋತ್ರಿಯಲ್ಲಿಯೂ ನನ್ನ ವಿದ್ಯಾರ್ಥಿಯಾದರು) ಎಂಬ ಅಭಿಮಾನ ಈಗಲೂ ಉಳಿದುಕೊಂಡಿದೆ.

೧೯೮೬