‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಖ್ಯಾತರಾದ ದ.ರಾ.ಬೇಂದ್ರೆಯವರು ಮುಖ್ಯವಾಗಿ ಭಾವಗೀತೆಯ ಕವಿ. ಕನ್ನಡದಲ್ಲಿ ಆ ಕಾವ್ಯಪ್ರಕಾರದ ಶಿಖರ ಕವಿ. ಅವರ ಕಾವ್ಯದಲ್ಲಿ ಭಾವದ ಸಮೃದ್ಧಿಯಿದೆ ; ಗೀತದ ವೈವಿಧ್ಯವಿದೆ. ಅವುಗಳ ಅಪೂರ್ವ ಮೇಳನದಿಂದಾಗಿ ಅವರ ಕಾವ್ಯ ಅನ್ಯಾದೃಶ್ಯ ಭಾವಧೀಪ್ತ ನಾದಪ್ರಪಂಚವಾಗಿದೆ. ಆ ಪ್ರಪಂಚದಲ್ಲಿ ನಾದವೇ ಸರ್ವವ್ಯಾಪ್ತಿ; ನಾದವೇ ಅದರ ಆದಿ, ಮಧ್ಯ, ಅಂತ್ಯ. ಎಡೆಬಿಡದ ಆ ನಾದಲೀಲೆಯಲ್ಲಿ ಶಬ್ದ, ಅರ್ಥ, ಭಾವಗಳೆಲ್ಲ ಕರಗಿ ಮೆರುಗು ಪಡೆಯುತ್ತವೆ; ಮಧುರವಾಗುತ್ತವೆ. ಆ ನಾದ ಕೇವಲ ಅಮೋದಕ್ಕಾಗಿ ಇರುವ ಅಥವಾ ತರುವ ಸರಕಾಗಿಲ್ಲ. ಬೇಂದ್ರೆಯವರ ಕಾವ್ಯ ತತ್ವ, ಜೀವನತತ್ವಗಳ ಗಾಢ ಸಂಬಂಧದಲ್ಲಿ ಫಲಿಸುವ ‘ಮಾತು ಮಾತು ಮಥಿಸಿ ಬಂದ ನಾದದ ನವನೀತ’ವಾಗಿದೆ; ನಾದತತ್ವವಾಗಿದೆ.

‘ನಾದಲೀಲೆ’ ಎಂಬ ಬೇಂದ್ರೆಯವರ ಕವನವೊಂದಿದೆ. ಆ ಕವನದಲ್ಲಿ ಬೇಂದ್ರೆಯವರ ಕಾವ್ಯತತ್ವ, ಜೀವನತತ್ವ,ನಾದತತ್ವಗಳು ಧ್ವನಿಪಡೆದಿರುವುದನ್ನು ಕಾಣಬಹುದು :

ಜೀವನ ಅನುಭವಿಸುವುದಕ್ಕಾಗಿ ಇದೆ. ನಿರಾಕರಿಸುವುದಕ್ಕಾಗಿ ಇಲ್ಲ. ಹಾಗೆಯೇ ಜೀವನದಲ್ಲಿ ಪಡೆಯುವ ಅನುಭವವೆಲ್ಲ ಸುಖದ ಸಂತೋಷದ ಅನುಭವವೇ ಎಂಬಂತಿಲ್ಲ ಅಥವಾ ಅದೆಲ್ಲ ದುಃಖದ ಯಾತನೆಯ ಅನುಭವವೇ ಎಂಬಂತೆಯೂ ಇಲ್ಲ. ಅದರಲ್ಲಿ ನೋವು ಇದೆ, ನಲಿವೂ ಇದೆ; ವಿನೋದವೂ ಇದೆ, ವಿಷಾದವೂ ಇದೆ. ಅದರಾಚೆ ಎದುರಿಸಲೇಬೇಕಾದ ಸಾವೂ ಇದೆ. ಸಂತೋಷದ ಸ್ವಾದದಂತೆ ವಿಷಾದದ ನಿರ್ವೇದವನ್ನೂ ಸ್ವಾದುಕೊಳಿಸಿಕೊಳ್ಳುವಂಥ ರುಚಿವಿದ್ಯೆಯನ್ನು ಬಲ್ಲವರಿಗೆ ರಸ ವಿದ್ಯೆಯೂ ಸಿದ್ಧಿಸುತ್ತದೆ. ರಸವಿದ್ಯೆ ಬಲ್ಲವರು ಕಸದಿಂದಲೂ ಕಸವರವನ್ನು ಪಡೆಯುತ್ತಾರಂತೆ. ಅಂಥವರಿಗೆ ಬಾಳನ್ನು ಬಂಗಾರವಾಗಿಸುವುದು ಸಾಧ್ಯವಾಗುತ್ತದೆ. ಸಾವನ್ನೂ ಸಸಾರವಾಗಿ ಕಾಣುವುದು ಸಾಧ್ಯವಾಗುತ್ತದೆ. ಸಸಾರ ಎಂಬ ಮಾತಿಗೆ ಸುಲಭ ಎಂಬ ಅರ್ಥವೂ ಇದೆ. ಸಾರವುಳ್ಳದ್ದು ಎಂಬ ಅರ್ಥದಲ್ಲಿಯೂ ಆ ಮಾತು ನಿಜವಾಗುತ್ತದೆ. ಕವಿ ಬೇಂದ್ರೆಯವರು ಅಂಥ ರಸ ವಿದ್ವಾಂಸರು. ಅವರಿಗೆ ಬದುಕು ಲೋಕರಕ್ಷಕನ ಆಟವಾಗಿ, ಲೀಲೆಯಾಗಿ ಪ್ರೇಮದ ರೀತಿಯಾಗಿ ಕಾಣುವುದರಿಂದ ಸಾವು ಸುಲಭವಾಗಿಯೂ ಸಾರವುಳ್ಳದ್ದಾಗಿಯೂ ಕಾಣುತ್ತದೆ. ಆ ಬಾಳಿನ ಲೀಲೆ ಮುಕ್ತಾಯವಾಗುವಲ್ಲಿಯೇ ಮುಕ್ತಿಯ ನೆಲೆ ಸಿಗುತ್ತದೆ. ಜೀವದ ಸಾರದ ಚಿರಂತನ ಸೆಲೆ ಅಲ್ಲಿದೆ ಎಂಬ ಭಾವ, ಆಸ್ತಿಕ ಧೋರಣೆ ಬೇಂದ್ರೆಯವರ ಕಾವ್ಯ ಕಡೆದು ಪಡೆಯುವ ಜೀವನ ತತ್ವವಾಗಿದೆ.

‘ನಾದಲೀಲೆ’ ಎಂಬ ಕವನವನ್ನು ಈ ಹಿನ್ನೆಲೆಯಲ್ಲಿ ಪರಿಭಾವಿಸಬೇಕು. ಪ್ರಿಯೆ ತನ್ನ ಪ್ರಿಯೆಯನ್ನು ಕೋಲಾಟದ ಲೀಲೆಗಾಗಿ ಆಹ್ವಾನಿಸುತ್ತಿರುವ ಸಂದರ್ಭ ಅದು. ಕೋಮಲತೆ, ಮುಗ್ಧತೆ, ಸೌಂದರ್ಯ, ಜೀವನ ಪ್ರೀತಿಗಳಿಗೆ ಸಂಕೇತವೆಂಬಂತಿರುವ ಜಿಂಕೆಯ ಹಿಂಡು, ದನಕರು, ಹೂವುಗಳ ಹಸರ, ಮದುಮಕ್ಕಳ ಪ್ರಣಯ – ಇವುಗಳನ್ನೆಲ್ಲ ಪ್ರಿಯೆಗೆ ಆತ ತೋರಿಸುತ್ತಾನೆ.ಇಂಥ ಸೊಗದ ಬಾಳನ್ನು ನಾಶಮಾಡಲು ಬೇಟೆಗಾರನ ರೂಪದಲ್ಲಿ ಯಾವ ದಿಕ್ಕಿನಿಂದಲೊ ಹೊಂಚಿ ಬರುವ ಮೃತ್ಯು ಒಂದು ಕಡೆ, ತನ್ನ ಕೊಳಲ ನಾದದ ಮೂಲಕ ಬೀರುವ ಪ್ರಾಣವಾಯುವಿನಿಂದ ಜೀವಿಗಳಿಗೆ ಉಸಿರು ತುಂಬುತ್ತಲಿರುವ, ಬೆಳಕಿನ ಹಾಡನ್ನು ನಿರಂತರವಾಗಿ ಬೀರುತ್ತಲಿರುವ, ಲೋಕರಕ್ಷಕನಿಗೆ ಸಂಕೇತವಾಗಿರುವ ಕೊಳಲಿನವನ ನಾದ ಇನ್ನೊಂದು ಕಡೆ. ಈ ನಡುವೆ ಪ್ರಿಯನು ಪ್ರಿಯೆಗೆ ಬಾಳಲೀಲೆ, ಭಾವಲೀಲೆ, ಭವದ ಲೀಲೆ ಸಾಗಿರುವ ಪರಿಯ ಪರಿಚಯ ಮಾಡಿಸುತ್ತಾನೆ. ಮೃತ್ಯು ಆಡುವ ಜೀವದ ಬೇಟೆಯೂ ಲೋಕರಕ್ಷಕನ ಆಟ, ಲೀಲೆ; ಅದು ಅವನ ಪ್ರೇಮದ ರೀತಿ, ನೀತಿ ಎಂಬ ತಿಳಿವನ್ನೂ ನೀಡುತ್ತಾನೆ. ಆ ತಿಳಿವಿನ ಹಿನ್ನೆಲೆಯಲ್ಲಿ ಬದುಕನ್ನೂ ಒಂದು ಆನಂದದ ವಿಧ್ಯುಕ್ತಕ್ರಿಯೆಯಾಗಿ, ಕೋಲಾಟದ ಆಮೋದದ ಆಟವಾಗಿ ಸ್ವೀಕರಿಸಲು ಪ್ರಿಯೆಯನ್ನು ಆಹ್ವಾನಿಸುತ್ತಾನೆ.

‘ನಾದಲೀಲೆ’ ಕವನವನ್ನು ಈಗ ಕೇಳಿ :

ಕೋಲು ಸಖೀ, ಚಂದ್ರಮುಖೀ ಕೋಲೆ ನಾದಲೀಲೆ || ||
ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ
ತರಳ ಎರಳೆ ಚಿಗುರ ಚಿಗುರೆ ಹೂವು ಹೂವು ಹುಲ್ಲೆ
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ
ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ
ಕೋಲು ಸಖೀ…….

ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
ಕರೆವ ಕರುವು, ಕುಣಿವ ಮಣಕ, ತೊರೆವ ಗೋಗಭೀರೆ
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾಣೆ ಕೊಳಲಿನವನ ಎನುವೆ, ಎಲ್ಲು ಇಹನು ಬಾರೆ
ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
ಕೋಲು ಸಖೀ…….

ಬೆಳ್ಳಿ ಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ ; ಬಾಲೆ
ಮುಕುಲ, ಅಲರು, ಮಲರು, ಪಸರ ಕಂಡು ಕಣ್ಣು ಸೋಲೆ
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾದಲನೆಡೆ ಬೇಡ ಬಹಳು ಕಾದಲೆ ಹೂಮಾಲೆ
ಬೆಳ್ಳಿ ಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ ಬಾಲೆ
ಕೋಲು ಸಖೀ…..

ಬೇಟೆಯಲ್ಲ; ಆಟವಲ್ಲ; ಬೇಟದ ಬಗೆ ನಾರಿ
ಮುಗಿಲ ಬಾಯ, ಗಾಳಿ ಕೊಳಲ ಬೆಳಕ ಹಾಡ ಬೀರಿ
(ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ)
ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?
ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ ನಾರಿ
ಕೋಲು ಸಖೀ……….

-ಈಗ ಕೇಳಿದ ಕವನದಲ್ಲಿ ಬೇಂದ್ರೆಯವರ ಕಾವ್ಯದ ಜೀವಂತ ಲಕ್ಷಣಗಳೆಲ್ಲ ಇವೆ. ಮುದಗೊಳಿಸುವಂಥ ನಾದಗುಣವಿದೆ, ಕಣ್ಣಿಗೆ ಕಟ್ಟುವಂಥ ಚಿತ್ರಕ ಶಕ್ತಿ ಇದೆ. ನಾಟಕೀಯ ಸನ್ನಿವೇಶವಿದೆ. ಪ್ರಾಕೃತಿಕ ಆವರಣವಿದೆ, ಸಹಜಪ್ರಾಸವಿದೆ, ಕನ್ನಡ ನುಡಿಯ ದೇಸಿಯ ಬೆಡಗಿದೆ. ಧ್ವನಿಶಕ್ತಿಯ ಅನುರಣನವಿದೆ, ಪರಂಪರೆಯಿಂದ ಸಿದ್ಧವಾದ ಅಧ್ಯಾತ್ಮ ಸ್ಪರ್ಶಿಯಾದ ತಾತ್ವಿಕ ಚೌಕಟ್ಟು ಇದೆ. ಬದುಕನ್ನು ಸ್ವಾದುಗೊಳಿಸಿಕೊಳ್ಳಬೇಕೆಂಬ ಛಲವಿದೆ. ವಿಲಯವನ್ನೂ ಒಲವಿನಿಂದ ಗೆಲ್ಲಬಹುದೆಂಬ ಜ್ವಲಂತ ಆಶಾವಾದವಿದೆ.

ಬೇಂದ್ರೆಯವರ ಕಾವ್ಯದಲ್ಲಿ ನಾದವು ಅವರ ಜೀವನ ತತ್ವದ ಅವಿಭಾಜ್ಯ ಅಂಗವಾಗಿ ಬರುವಂತೆ ಅಭಿವ್ಯಕ್ತಿ ಪಡೆಯುತ್ತಿರುವ ಭಾವಕ್ಕೆ ತಕ್ಕ ಆವರಣವನ್ನು ನಿರ್ಮಿಸುವ, ವಾತಾವರಣವನ್ನು ಸೃಷ್ಟಿಸುವ ಅಂಗವಾಗಿಯೂ ಬರುತ್ತದೆ. ಕೆಲವೊಮ್ಮೆ ಕೇವಲ ವಾತಾವರಣ ಸೃಷ್ಟಿಗಾಗಿಯೇ ಎಂಬಂತೆ ಬರುವುದೂ ಉಂಟು. ಹಾಗೆ ಬಂದಾಗ ಯಾವ ಶಾಸ್ತ್ರದ ಬಂಧನಕ್ಕೂ ಸಿಕ್ಕದ ಛಂದವಾಗಿ ಬಂಧವಾಗಿ ಧಾಟಿಯಾಗಿ ಹೊಮ್ಮುತ್ತದೆ. ಅಂಥಲ್ಲಿ ನಾದವೇ ಕಾವ್ಯವಾಗುತ್ತದೆ. ‘ಬೆಳದಿಂಗಳು ನೋಡ’ ಕವನದ ಆಯ್ದ ಕೆಲವು ಸಾಲುಗಳನ್ನು ಕೇಳಿ; ಇದೊಂದು ಪ್ರಕೃತಿ ಕವನ, ತುಂಬು ಬೆಳದಿಂಗಳಿನ ವರ್ಣನೆ ಇಲ್ಲಿದೆ; ಕೇಳಿ.

ಬೆಳುದಿಂಗಳ ನೋಡs | ಬೆಳುದಿಂಗಳು ನೋಡು || ||

ದನಕರದ ಕಾಲಿನs ಧೂಳಿ | ಸಂಜೆಯ ಹೂಳಿ
ಮುಗಿಲ ಮುಟ್ಯs | ಮುಗಿಲ ಮುಟ್ಯs
ಗೋಧೂಳಿ ಲಗ್ನಕ ಇತ್ತ | ಕೈಯ ಹಿಡಿದಿತ್ತ
ಕೈಯ ಹಿಡಿದಿತ್ತs
ಚಂದ್ರಕೀ ಚಂದ್ರಮರ ಜೋಡ | ಬೆಳುದಿಂಗಳ ನೋಡs ||

ಇದು ಹಾಲುಗಡಲಿನs ಸೀಮಿ
ಚಂದ್ರಮನೆ ಸ್ವಾಮಿ | ಚಂದ್ರಮನೆ ಸ್ವಾsಮಿs
ರೋಹಿಣಿಯು ಎದೆಯ ಕೆಂಪೆಳ್ಳು | ಗೆಳತಿ ಅವನವಳು
ನಲೀತಾಳ ಮುಂದs | ನಲೀತಾಳ ಮುಂದs
ಹಾಕ್ಯಾರ ಚಿಕ್ಕಿ ಗೆಳತ್ಯಾರ | ಕೃತ್ತಿಕೀ ಹಾರ
ಕೃತ್ತಿಕೀ ಹಾರs…………………
ಇದು ಮಾಯಕಾರರ ಬೀss
ಅರೆಮರೆವು ಮಾಡುವೀ ಬಂಧ | ಯಾವುದೀ ಛಂದ
ಯಾವುದೀ ಧಾsಟಿs | ಯಾವುದೀ ಧಾಟಿ?
ಸವಿರಾಗ ಬೆರಸಿದs ಉಸಿರು | ಇದಕ ಯಾ ಹೆಸರು
ಇದಕ ಯಾ ಹೆಸss
ಅಂಬಿಕಾತನಯನ ಹಾss
ಬೆಳುದಿಂಗಳು ನೋಡs ||

ಬೇಂದ್ರೆಯವರ ಕಾವ್ಯದಲ್ಲಿರುವ ನಾದಗುಣ ಅವರ ಅಪೂರ್ವ ಸಿದ್ಧಿಗಳಲ್ಲೊಂದು. ಆದರೂ ಎಲ್ಲ ಸಂದರ್ಭಗಳಲ್ಲಿಯೂ ಅದು ಭಾವಾನುಸಾರಿಯಾಗಿದೆ, ಅರ್ಥಾನುಸಾರಿಯಾಗಿದೆ ಎಂದು ಹೇಳುವಂತಿಲ್ಲ. ಕೆಲವು ಕಡೆಗಳಲ್ಲಿ ಬೇಂದ್ರೆಯವರು ನಾದಲೋಲುಪರಂತೆ ಕಾಣಿಸುವುದೂ ಉಂಟು. ಅವರ ಕೆಲವು ಸುಪ್ರಸಿದ್ಧ ಕವನಗಳನ್ನೂ ಎಚ್ಚರದಿಂದ ಪರಿಶೀಲಿಸಿದರೆ ಅಂಥ ನಾದಲೋಲುಪತೆಯನ್ನು ಅಲ್ಲಲ್ಲಿ ಕಾಣಬಹುದಾಗಿದೆ. ನಿದರ್ಶನಕ್ಕೆಂದು ‘ಕುರುಡು ಕಾಂಚಾಣs’ ಎಂಬ ಅವರ ಪ್ರಖ್ಯಾತ ಸಾಮಾಜಿಕ ಕವನವೊಂದನ್ನು ಕೇಳಿ :

ಕುರುಡು ಕಾಂಚಾಣಾ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತೋ ||
ಕುರುಡು ಕಾಂಚಾಣಾ ||

ಬಾಣಂತಿಯೆಲುಬ ಸಾ
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗ ಇತ್ತೋ ;
ಸಣ್ಣ ಕಂದಮ್ಮಗಳ
ಕಣ್ಣೀನ ಕವಡೀಯ
ತಣ್ಣನ್ನ ಜೋಮಾಲೆ
ಕೊರಳೊಳಗಿತ್ತೋ
ಬಡವರ ಒಡಲಿನ
ಬಡಬಾನಲದಲ್ಲಿ
ಸುಡು ಸುಡು ಪಂಜು ಕೈಯೊಳಗಿತ್ತೋ ;
ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ
ದುಂಬಿದಂತುಧೊ ಉಧೋ ಎನ್ನುತಲಿತ್ತೋ
ಕೂಲಿ ಕಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೋ

ಗುಡಿಯೊಳಗೆ ಗಣಣ, ಮಾ
ಹಡಿಯೊಳಗೆ ತನನ, ಅಂ
ಗಡಿಯೊಳಗೆ ಝಣಣಣ ನುಡಿಗೊಡುತ್ತಿತ್ತೋ
ಹ್ಯಾಂಗರೆ ಕುಣಿ ಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಲ್ಲಿ ಎತ್ತೋ,

ಅರ್ಥದ ದೃಷ್ಟಿಯಿಂದ ನೋಡಿದರೆ ನೀವು ಈಗ ಕೇಳಿದ ಕವನದಲ್ಲಿ ಕ್ರೌರ್ಯದ ಭಾವ ಪ್ರಧಾನವಾಗಿದೆ. ಬಾಣಂತಿಯ ಎಲುಬು, ಸಣ್ಣ ಕಂದಮ್ಮಗಳ ಕಣಿನ ಬವಡಿ, ಬಡವರ ಒಡಲಿನ ಬಡಬಾನಲ ಮುಂತಾದವುಗಳಿಗೆ ಸಂಬಂಧಿಸಿದಂತೆ ಕವನದಲ್ಲಿ ಇರುವ ವಿವರ ಹೃದಯವಿದ್ರಾವಕವಾದದ್ದಾಗಿದೆ. ಆದರೆ ಕವನದ ಛಂದೋಗತಿಯು ಒತ್ತಾಯಿಸುವ ಗೇಯತೆಗೆ, ನಾದಕ್ಕೆ ಭಾವವನ್ನು ಪೋಷಿಸುವ ಶಕ್ತಿ ಸಾಲದಾಗಿದೆ. ನಾದದಲ್ಲಿರುವ ಮುದಗೊಳಿಸುವ ಗುಣವೇ ಭಾವದ ಕಾವನ್ನು ಕಡಮೆಗೊಳಿಸುವಂತಿದೆ. ಇಂಥ ಮಿತಿಗಳನ್ನು ಅಲ್ಲೊಂದು ಇಲ್ಲೊಂದು ಕವನಗಳಲ್ಲಿ ತೊರಿಸಬಹುದಾದರೂ ಬೇಂದ್ರೆಯವರ ಕಾವ್ಯದ ನಾದವೈಭವದ ಹಿನ್ನೆಲೆಯಲ್ಲಿ ನೋಡಿದಾಗ ಅವು ಗೌಣವೆನಿಸಿಬಿಡುತ್ತವೆ.

ಬೇಂದ್ರೆಯವರ ಕಾವ್ಯದಲ್ಲಿ ನಾದಗುಣದಂತೆಯೇ ಸಮೃದ್ಧವಾಗಿರುವ ಇನ್ನೊಂದು ಗುಣ, ದೃಶ್ಯಗುಣ. ಅವರ ಹಲವಾರು ಕವನಗಳು ಬಿಡಿಬಿಡಿಯಾದ ನಾಟಕ ಸನ್ನಿವೇಶಗಳೆಂಬಂತೆ ಇವೆ.’ ‘ಹುಬ್ಬಳ್ಳಿಯಾಂವಾ’, ‘ಮರೆಯುವಿಯೋ ಅರಿಯುವಿಯೋ’. ‘ರಾಜಗಂಭೀರಾ’, ‘ತುಂಬಿ ಬಂದಿತ್ತು’ ಮುಂತಾದ ಕವನಗಳನ್ನು ಬೇಂದ್ರೆಯವರು ಅಲಿಖಿತ ನಾಟಕಗಳ ಹಾಡುಗಳೆಂದೇ ಹೇಳಿಕೊಂಡಿದ್ದಾರೆ. ಹಾಗೇ ಹೇಳಿಕೊಳ್ಳದಿರುವ ಹಾಡುಗಳಲ್ಲಿಯೂ ಅಂಥ ಕವನಗಳು ಹಲವಾರಿವೆ. ಜನಮದ ಜಾತ್ರಿ, ನಾನು ಬಡವಿ, ಬಿಸಿಲುಗುದುರೆ, ನನ ಕೈಯ ಹಿಡಿದಾಕೆ, ಸಚ್ಚಿದಾನಂದ, ಅನ್ನಾವತಾರ, ಬಡವರ ಮಗಳು, ಕಾಮಕಸ್ತೂರಿ, ಕುಣಿಯೋಣು ಬಾರಾ, ಗಮಗಮಾ ಗಮಾಡಸತಾವ ಮಲ್ಲಿಗೆ – ಇತ್ಯಾದಿ ಅನೇಕ ಕವನಗಳನ್ನು ಹೆಸರಿಸುತ್ತಾ ಹೋಗಬಹುದು. ಅಂಥ ಕವನಗಳಲ್ಲಿ ಕವಿ ತಾನೆ ಕವನದ ಒಳಗೆ ಕರ್ತೃವಾಗಿ ಕಾಣಿಸಿಕೊಳ್ಳುವುದಿಲ್ಲ; ದೃಶ್ಯಕಟ್ಟಿ ತಾನೂ ಪ್ರೇಕ್ಷಕನೆಂಬಂತೆ ಕವಿ ಉಳಿದುಬಿಡುವ ಬಗೆಯನ್ನು ಅಂಥ ಕವನಗಳಲ್ಲಿ ಕಾಣಬಹುದು.

ಇಲ್ಲಿ ಒಂದು ಪುಟ್ಟ ಪದ್ಯಭಾಗವನ್ನು ನಿದರ್ಶನಕ್ಕೆಂದು ಕೇಳಬಹುದು. ದಾಂಪತ್ಯ ಜೀವನದ ಸಾರ್ಥಕತೆಯನ್ನು ಧನ್ಯ ಭಾವದಿಂದ ಅನುಭವಿಸುತ್ತಿರುವವಳೊಬ್ಬಳು ತನ್ನ ಗೆಳತಿಯೊಡನೆ ಅದನ್ನು ಹೆಮ್ಮೆಯಿಂದ ನಿವೇದಿಸಿಕೊಳ್ಳುತ್ತಿರುವಂಥ ಕವನ ‘ಜನುಮದ ಜಾತ್ರಿ’, ಈಗ ಕೇಳಿ :

ನೇತ್ರಪಲ್ಲವಿಯಿಂದ ಸೂತ್ರಗೊಂಬೀ ಹಾಂಗ
ಪಾತ್ರ ಕುಣಿಸ್ಯಾನ ಒಲುವೀಗೆ | ದಿನದಿನ
ಜಾತ್ರಿಯೆನಿಸಿತ್ತ ಜನುಮವು
ಹುಬ್ಬು ಹಾರಿಸಿದಾಗ ಹಬ್ಬ ಎನಿಸಿತು ನನಗೆ
ಅಬ್ಬ ಎನಬೇಡs ನನ ಗೆಣತಿ | ಸಾವಿರಕ
ಒಬ್ಬ ನೋಡವ್ವ ನನ ನಲ್ಲ
ಕಣ್ಣೆವಿ ಎತ್ತಿದರ ಹುಣ್ಣೀವಿ ತೆರೆದಾಂಗ
ಕಣ್ಣು ಏನೆಂತ ಬಣ್ಣಿಸಲೆ | ಚಿತ್ತಕ್ಕ
ಕಣ್ಣು ಬರೆದ್ದಾಂಗ ಕಂಡಿತ್ತು

ಹೀಗೆ ಚಿತ್ರಕಟ್ಟುವುದರಲ್ಲಿ, ದೃಶ್ಯಕಟ್ಟುವುದರಲ್ಲಿ ಬೇಂದ್ರೆಯವರ ಪ್ರತಿಭೆಗೆ ಅದ್ಭುತವಾದ ಶಕ್ತಿಯಿದೆ.

ಒಟ್ಟಿನಲ್ಲಿ ಬೇಂದ್ರೆಯವರ ಕಾವ್ಯ ಬದುಕುವ ಕಾವ್ಯ, ಹುರುಪಿನಿಂದ ಬದುಕಲು ಕಲಿಸುವ ಕಾವ್ಯ. ಭಾವದಂತೆ ಅನುಭಾವವನ್ನು ನುಡಿಸುವ, ಧ್ವನಿಪಡೆಸುವ ಕವಿ ಅವರು. ಅವರ ಅನುಭಾವ ಪ್ರಧಾನವಾದ ಕವನಗಳ ಗಂಭೀರವಾದ ಅಧ್ಯಯನ ಇನ್ನೂ ನಡೆಯಬೇಕಾಗಿದೆ. ಕಾಲಾಭಾವದಿಂದಿಲ್ಲಿ ಅಂಥ ಕವನವೊಂದನ್ನೂ ಉದಾಹರಿಸಲಾಗಿಲ್ಲ. ಬೇಂದ್ರೆಯವರ ಅನುಭಾವಪರ ಕಾವ್ಯದಲ್ಲಿ ಬೆಡಗಿದೆ; ಅಲ್ಲಮ ಪ್ರಭುವಿನ ಬೆಡಗಿನ ವಚನಗಳಲ್ಲಿರುವಂತೆ ಅಡಗಿಸಿಟ್ಟುಕೊಂಡಿರುವ ಅರ್ಥಸಂಪತ್ತಿದೆ. ಅಡಗಿರುವ ಅರ್ಥಸಂಪತ್ತನ್ನು ಕಡೆದು ಪಡೆಯುವ ಭಾಗ್ಯಶಾಲಿಗಳಿಗಾಗಿ ಈ ಕವನಗಳು ಕಾದು ನಿಂತಿವೆ.

ನವೆಂಬರ್ ೧೯೮೨

* ಮೈಸೂರು ಆಕಾಶವಾಣಿಯಲ್ಲಿ ಪ್ರಸಾರವಾದ, ನಾನೇ ಸ್ವತಃ ಹಾಡಿದ, ಮಾತಾಡಿದ ಭಾಷಣ ಇದು. ನನ್ನ ಅಧ್ಯಕ್ಷತೆಯ ಮೈಸೂರಿನ ಚೇತನ ಕನ್ನಡ ಸಂಘದ ‘ಪುಸ್ತಕ ಪುರವಣಿ’ ಮಾಸಿಕ ಪತ್ರಿಕೆಯಲ್ಲಿ ನವೆಂಬರ್ – ಡಿಸೆಂಬರ್ ೧೯೮೨ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.