[ಒಲವನ್ನು ಕುರಿತಂಥ ದ.ರಾ. ಬೇಂದ್ರೆಯವರ ಕನವಗಳ ಸಂಕಲನ ‘ಒಲವೆ ನಮ್ಮ ಬದುಕು’. ಆ ಸಂಕಲನದ ಕವನಗಳ ಮೂಲಕ ಪ್ರಕಟವಾಗುವ ಬೇಂದ್ರೆಯವರ ಒಲವಿನ ಮೀಮಾಂಸೆಯನ್ನು ಸಾಮಾನ್ಯ ಸಹೃದಯ ಸಮೂಹಕ್ಕೆ ಸೋದಾಹರಣವಾಗಿ ಪರಿಚಯಿಸುವುದು ಈ ನಿರೂಪಣೆಯ ಉದ್ದೇಶ. ಆದ್ದರಿಂದ ಓದುಗರು ಈ ನಿರೂಪಣೆಯನ್ನು ಒಂದು ಸಹೃದಯ ಅವಲೋಕನವೆಂದು ತಿಳಿಯಬೇಕು; ವಿಮರ್ಶೆಯ ನಿಷ್ಠುರ ಶಿಸ್ತನ್ನು ನಿರೀಕ್ಷಿಸಬಾರದು. ಈ ಅವಲೋಕನವನ್ನು ಮೈಸೂರು ಆಕಾಶವಾಣಿಯವರು ಪ್ರಸಾರ ಮಾಡಿದ್ದರು (೧೯೭೭) – ಲೇಖಕ.]

ಒಲವೆಂಬ ಹೊತ್ತಿಗೆಯನೋದ ಬಯಸುತ ನೀನಿ | ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ! / ಹಗಲಿರುಳು ದುಡಿದರೂ, ಹಲ ಜನುಮ ಕಳೆದರೂ / ನೀ ತೆತ್ತಲಾರೆ ಬರಿ ಅಂಚೆ ವೆಚ್ಚ.

ದ.ರಾ.ಬೇಂದ್ರೆಯವರು ಶ್ರೇಷ್ಠಮಟ್ಟದ ಭಾವಗೀತೆಯ ಕವಿ. ಅವರ ಭಾವಗೀತೆ ಗಳಲ್ಲಿ ಭಾವದ ಸಮೃದ್ಧಿಯಿದೆ ; ನಾದದ ಸಮ್ಮೋಹಕ ಮಾಧುರ್ಯವಿದೆ; ಅರಿವಿನ ಅಪೂರ್ವ ಸಂಪತ್ತಿಯಿದೆ; ಜೀವನ ಪ್ರೀತಿಯ ಅಚಂಚಲ ಆರಾಧಕರಾದ ಬೇಂದ್ರೆಯವರು ಇಹ ಪರಗಳು ಸಾರ್ಥಕವಾಗುವ ದಿವ್ಯತಾಣವನ್ನು ಎಲ್ಲದರಲ್ಲಿಯೂ ಎಲ್ಲೆಡೆಗಳಲ್ಲಿಯೂ ಕಾಣುವ ಹಂಬಲವುಳ್ಳವರು. ಗಂಡು ಹೆಣ್ಣುಗಳಲ್ಲಿ, ವ್ಯಕ್ತಿ ವ್ಯಕ್ತಿಗಳಲ್ಲಿ, ಧ್ರುವ ಧ್ರುವಗಳಲ್ಲಿ, ಇಡೀ ವಿಶ್ವ ವ್ಯಾಪಾರದಲ್ಲಿ ಪರಸ್ಪರ ಆಕರ್ಷಣೆಯನ್ನು, ಒಲವಿನ ಚಿರಂತನ ತತ್ವವನ್ನು ಕಾಣುವ ಕವಿ ಬೇಂದ್ರೆಯವರು.

ಬೇಂದ್ರೆಯವರ ಕವಿತೆಗಳಲ್ಲಿ ಮೂಡಿರುವ ಪ್ರೇಮತತ್ವದ ಒಂದು ಮುಖವನ್ನು, ಒಲವಿನ ಮೀಮಾಂಸೆಯ ಬಿಂಬವನ್ನು, ವಿವಿಧ ಹಂತಗಳಲ್ಲಿ ಒಲವನ್ನು ಬೇಂದ್ರೆಯವರು ಕಾಣುವ ಪರಿಯನ್ನು, ಒಂದು ಕ್ರಮದಲ್ಲಿ ಪೋಣಿಸಿ ಕವನಗಳ ಆಯ್ದ ಭಾಗಗಳನ್ನು ಕಾವ್ಯ ರಸಿಕರಿಗೆ ಪರಿಚಯ ಮಾಡಿಕೊಡುವ ನಮ್ಮ ಪ್ರಯತ್ನ ಇಲ್ಲಿದೆ :

ನಿರಂತರ ಹರಿಯುವಿಕೆಗೆ ಸಂಕೇತವಾದ ಹೊಳೆಯ ಸಾನಿಧ್ಯದಲ್ಲಿ ಹರೆಯದ ಗಂಡು ಮತ್ತು ಹೆಣ್ಣು ಪರಸ್ಪರ ಆಕರ್ಷಣೆಗೆ ಒಳಗಾದದ್ದನ್ನು ಕವಿ ಕಂಡಿದ್ದಾನೆ :

ವಾರಿ ನೋಟ ಹಾರತಿತ್ತ ಹೊಳಿಮ್ಯಾಗ | ಹೊಸಾ ಹರೆ ಈಸತಿತ್ತೋ ಹೊಳಿಯಾಗ

ಒಂದು ಬಳ್ಳಿ ಹೂ ಬಿಡಲಿತ್ತೋ ಹೊಳಿಮ್ಯಾಗ | ಗಾಳಿಯೊಂದು ಸುಳಿದಾಡತಿತ್ತೋ ಹೊಳಿಯಾಗ

ಸೂಜಿಗಲ್ಲು ತಿರುಗುತಿತ್ತೋ ಹೊಳಿಮ್ಯಾಗ / ಸೂಜಿಯೊಂದು ತೇಲತಿತ್ತೋ ಹೊಳಿಯಾಗ

-ಪ್ರೇಮದ ಈ ಆಕರ್ಷಣೆಗೆ ವಶನಾದ ಪ್ರಿಯ ತನ್ನ ಒಲವನ್ನು ಪ್ರಿಯೆಯಲ್ಲಿ ನಿವೇದಿಸಿ ಅವಳ ಪ್ರೇಮ ತುಂಬಿದ ಒಂದು ನೋಟಕ್ಕಾಗಿ ಯಾಚಿಸುತ್ತಾನೆ :

ಬಡವರ ಮಗಳಾಗಿ ನೀನು / ಸಡಗರ ನಿನಗೆಷ್ಟ / ಬಡಿವಾರ ನಿನಗ್ಯಾಕ?

ಬಿಸಿಲು ಹಬ್ಬಿ ಗಾಳಿಯು ಹರಡಿ / ಮುಗುಳು ನಗೀ ಅರಳಿಸಲೊಲ್ಲಿ / ಎವೆಯಿಕ್ಕದೆ ದಿಟ್ಟಿಸಿದರೂ / ಉಗುರದಿಟ್ಟಿ ಇಟ್ಟ ನಡೆದಿ

ಬಂಗಾರದ ಮಾಡದಿಂದ / ಸಿಂಗಾರದ ಮಳೆಗರಸೇನ / ಹ್ಯಾಂಗಾರ ಕಣ್ಮನಸೆತ್ತಿ / ಒಮ್ಮೆ ನೋಡ, ಒಮ್ಮೆ ನೋಡ

-ಅವಳು ಅವನ ಚೆಲುವಿಗೆ ಮರುಳಾಗಿದ್ದಾಳೆ. ನೇರವಾಗಿ ತನ್ನ ಒಲವನ್ನು ಪ್ರಿಯನಲ್ಲಿ ನಿವೇದಿಸಿಕೊಳ್ಳಲು ನಾಚಿಕೆ. ಸ್ತ್ರೀ ಸಹಜ ಸಂಕೋಚದ ಪೊರೆ ಕಳಚಿಲ್ಲ. ಆದರೆ ಅತನ ಚೆಲುವನ್ನು ವಿಸ್ಮಿತಳಾಗಿ ಆಸ್ವಾದಿಸುತ್ತಾಳೆ. ಮೆಲುಕು ಹಾಕುತ್ತಾಳೆ :

ಯಾರವ್ವ ಇವ ಚೆಲುವಾ / ತನ್ನಷ್ಟಕ್ಕs / ತಾನs ನೋಡಿ ನಲಿವಾ !

ನಗಿಯೊಂದು ಬಗಿಯಾಟಾ / ಕಣ್ಣು ಹಿಗ್ಗಿನ ತೋಟಾ / ಚವತೀ ಚಂದ್ರಮನ್ಹೋಲುವಾ; / ಚವತೀ ಚಂದ್ರಮ ಕೆಳಗ / ಹಣಿಕೀ ಹಾಕಿದ್ದಾಂಗ / ಹೋಲುವಾ ಹಣಿಯೊಲವಾ / ನೋಡವ್ವಾ / ಯಾರವ್ವಾ ಇವ ಚೆಲುವಾ !

ಕಂಡವರ ಕಣ್ಣನ್ನ / ಸೋತಾಗ ಸೆರೆ ಹಿಡಿದು / ಇಡುವಂಥ ಎದೆ ಹರವಾ / ನೋಡವ್ವಾ / ಯಾರವ್ವಾ ಇವ ಚೆಲುವಾ / ತನ್ನಷ್ಟಕ್ಕ / ತಾನs ನೋಡಿ ನಲಿವಾ !

-ಪ್ರಿಯೆಯನ್ನು ಒಲಿಸಿಕೊಳ್ಳಲು ಪ್ರಿಯ ಇನ್ನೂ ಒಂದು ಹೆಜ್ಜೆ ಮುಂದುವರಿಯುತ್ತಾನೆ. ತನ್ನ ಪ್ರಣಯದ ಸಂಕೇತವಾಗಿ ಕಾಮ ಕಸ್ತೂರಿಯ ತೆನೆಯೊಂದನ್ನು ಪ್ರಿಯೆಗೆ ಅರ್ಪಿಸಲೆಂದು ಕಾದಿದ್ದಾನೆ.

ತಂದೇನಿ ನಿನಗೆಂದ / ತುಂಬಿ ತುರುಬಿನವಳs, / ಕಾಮ ಕಸ್ತೂರಿಯಾ / ತೆನಿಯೊಂದ

ಅದನ ನೀ ಮುಡಿದಂದ / ಮುಡಿದಂಥ ಮುಡಿಯಿಂದ / ಗಾಳಿಯ ಸುಳಿಯೊಂದ ಬಂದೆನಗ ತಗಲಿಂದದ / ತಣಿ ತಣಿ ತಣಿವಂದ / ಈ ಮನಕ

ಅನ್ನೋ ಜನರು ಏನು / ಅಂತsನ ಇರತಾರ / ಹೊರತಾದೆ ನೀ ಜನಕ

-ಇಬ್ಬರ ಪ್ರಣಯ ಸಹಜ ಪ್ರಣಯವಾದರೂ ಅದು ಫಲಿಸುವುದು ಗೃಹಸ್ಥ ಧರ್ಮದ ಚೌಕಟ್ಟಿನಲ್ಲಿ ಎಂಬುದನ್ನು ಅವರು ಒಪ್ಪಿದವರು. ಈಗ ಮದುವೆಯ ಸಂಭ್ರಮದಲ್ಲಿದ್ದಾರೆ :

ಮಾಂದಳಿರ ತೋರಣ ಹೂಮಿಡಿ ಗುಡಿಗಟ್ಟಿ / ಮಧುಮಾಸ ಹೊರಟಿತ್ತು ನಿಬ್ಬಣಕೆ / ಚಂದಿರ ದೇವನ ಮುಗಿಲ ಮಂದಿರದಲ್ಲಿ / ಕಣ್ಣಿದಿರು ಕೌಮುದಿ ಕುಣಿಯುತಿರೆ

ಮಂತ್ರದ ತಂತ್ರದ ಮಂದಿವಾಳದ ಮದುವೆ / ಸಂದಣಿಯಲಿ ಹೇಗೋ ಮೆರೆಯುತಿರೆ / ಅಂತಃ ಪಟದಾಚೆ ವಿಧಿತಂದ ವಧು ನೀನು / ಮಾಲೆಯ ಸಾವರಿಸಿ ನಿಂತಿದ್ದೀಯೆ

ಕಿವಿಮಾತ ಸೊಗಸೇನು ಆಡಿದ್ದಾಡುವುದೇನು / ಹಳಸದ ಮುದ್ದಾಟ ಒಸಗುತಿರೆ / ಸವಿಬಂತು ಮುನಿಸಿಗು, ಕಳೆಬಂತು ಕನಸಿಗು / ಮೋಹದ ಮಾಟವನೆಸಗುತಿರೆ

ಹಗಲೆಲ್ಲೊ ಹಾರಿದವು ಇರುಳೆಲ್ಲ ಜಾರಿದವು / ಋತು ನಿದ್ದೆಯಾಡಿದವು ಬುಗುರೆಯೊಲೇ

-ಮದುವೆಯ ಶಾಸ್ತ್ರ ಮುಗಿದರೂ ಪ್ರೇಮದ ಸವಿ, ಸೊಗಸು ಮುಗಿಯುವಂಥದಲ್ಲ ; ಮುಂದುವರಿಯುವಂಥದು; ಮುಂದುವರಿಯಬೇಕಾದಂಥದು, ಪ್ರಿಯನು ಬಾಳಿನಲ್ಲಿ ಭರವಸೆಯನ್ನೂ ಆಶಾವಾದಿತ್ವವನ್ನೂ ಪ್ರಿಯೆಯಲ್ಲಿ ತುಂಬುವ ಆವೇಶದಲ್ಲಿದ್ದಾನೆ ; ಆತ್ಮವಿಶ್ವಾಸದಲ್ಲಿದ್ದಾನೆ. ಸಂಸಾರದಲ್ಲಿ ನಲಿವು ಮಾತ್ರವಲ್ಲ, ನೋವೂ ಇದೆ. ಬದುಕು ಭ್ರಮೆ ಮಾತ್ರವೇ ಅಲ್ಲ. ಶಾಶ್ವತ ತತ್ವದ ಒಂದು ಅಂಶವೂ ಆಗಿದೆ. ನಲಿವು, ನೋವುಗಳ ಅಪೂರ್ವ ಪಾಕದಲ್ಲಿ ಬಾಳಿನ ರುಚಿಯನ್ನು ಕಾಣಬೇಕಾಗಿದೆ, ಎಂಬ ಅರಿವನ್ನು, ಅದರ ರುಚಿನೋಡಬಲ್ಲ ಕೆಚ್ಚನ್ನು ಕುದುರಿಸಿಕೊಳ್ಳುವ ಸಂಭ್ರಮದಲ್ಲಿ ಪ್ರಿಯೆಯನ್ನು ಪ್ರಿಯ ಕುಣಿತಕ್ಕೆ ಆಹ್ವಾನಿಸುತ್ತಾನೆ.

ಕುಣಿಯೋಣು ಬಾರs / ಕುಣಿಯೋಣು ಬಾ
ಕಾಗಿ / ಯಾಕಾಗಿ / ಕುಣಿಯೋದು ಬೇಕಾಗಿ / ಇಲ್ದ ಬಣ್ಣದ ಸೋಗಿ / ಕುಣಿ….
ಹಿಗ್ಗು ಹಾಕಿತು ಕ್ಯಾಕಿ / ಇರಲಾರೆನೇಕಾಕಿ / ಬಾ, ಬಾರs ನನ್ನಾಕಿ | ಕುಣಿ…..
ತಿಣಿ ತಿಣಿಕಿ / ಇಣಿಕಿಣಕಿ / ಒಳಹೊರಗೆ ಹಣಿಹಣಿಕಿ / ಸಾಕಾತು ಸುಳ್ಳೆಣಕಿ ಕುಣಿ…..
ಬದುಕು ಬರಿ ಭ್ರಮಿ / ತಕಿದಿಮಿ ಗಿಮಿಗಿಮಿ / ಹಾಂಗೊಮಿ ಹೀಂಗೊಮ್ಮಿ / ಕುಣಿ…..
ತಾಳ್ಯಾಕ /ತಂತ್ಯಾಕ / ಆಗದ ಚಿಂತ್ಯಾಕ ಹೆಜ್ಯಾಕ / ಗೆಜ್ಯಾಗ / ಕುಣಿ…..
ಕುಲುಕಿಸಿ ಕೈ ಕೈ / ಮಲಕಿಸಿ ಮೈ ಮೈ / ಥಕ ಥಕ ಥೈ ಥೈ | ಕುಣಿ….
ನಾಚೀಗಿಗೀಚಿಗಿ / ಕಳೆದೊಗೆದಾಚೀಗಿ / ಬೀಸಾಗಿ ಈಚಿಗಿ | ಕುಣಿ….
ಕಾಗುಣಿತ / ಬರಿಗಣಿತ / ಯಾಕೆ ಡೊಂಬರ ಮಣಿತ / ಸುಗ್ಗಿಯ ಸಿರಿ ಕುಣಿತ / ಕುಣಿ…..
ಚಕ ಚಕ / ಚಂಚಲ / ಮಿಂಚಿನ ಗೊಂಚಲ / ಚಕಮಕಿ ಚಲಮಲ / ಕುಣಿ…..
ಕುಣಿತಕ್ಕ ಇತಿ ಇಲ್ಲ / ಕುಣಿತಕ್ಕ ಮಿತಿ ಇಲ್ಲ / ಬೇರೊಂದು ಗತಿ ಇಲ್ಲ / ಕುಣಿ….
ನೆಲ ಮುಗಿಲನಪ್ಪಿತು / ಚೆಲುವಾಗಿ ಒಪ್ಪಿತು / ಸಾವೊಮ್ಮೆ ತಪ್ಪಿತು / ಕುಣಿ….
ಕ್ಷೀರ / ಸಾಗರ / ದಾನಂದದಾಗರ / ತೆರಿ ತೆರಿ ತೆರದರ / ಕುಣಿ….
ಹದಿನಾಲ್ಕು ಲೋಕಕ್ಕ / ಚಿಮ್ಮಲಿ ಸುಖ / ಹಿಗ್ಗಲಿ ಸಿರಿ ಮುಖ / ಕುಣಿ….

-ಪ್ರೇಮತತ್ವದ ಹಿಂದಣ ದೇವತತ್ವವನ್ನು ಕೋಲಾಟದ ಕುಣಿತದಲ್ಲಿ ಮೇಳವಿಸಿ, ಪ್ರಿಯೆಗೆ ಪ್ರಿಯನು ಕಾಣಿಸುವ ಇನ್ನೊಂದು ಪರಿಯನ್ನು ಪರಿಭಾವಿಸಿ :

ಕೋಲು ಸಖೀ, ಚಂದ್ರಮುಖೀ, ಕೋಲೆ ನಾದಲೀಲೆ

ಮುಂಜಾದ ಎಲರ ಮೂಸಿ ನೋಡುತಿಹವೆ ನಲ್ಲೆ / ತರಳೆ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ / ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ / ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ / ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ / ಕೋಲು ಸಖೀ…..

ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ / ಕರೆವ ಕರುವು, ಕುಣಿವ ಮಣಕ, ತೊರೆವ ಗೋಗಭೀರೆ, / ಕಂಗೊಳಿಸುವ ಕೆಂಪು ಮುಂದೆ,ಕಂಗೆಡಿಸುವ ಮಂಜು ಹಿಂದೆ / ಕಾಣೆ ಕೊಳಲಿನವನ ಎನುವೆ, ಎಲ್ಲು ಇಹನು ಬಾರೆ / ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ / ಕೋಲು ಸಖೀ…..

ಬೇಟೆಯಲ್ಲ ; ಆಟವೆಲ್ಲ ಬೇಟದ ಬಗೆ, ನಾರಿ / ಮುಗಿಲ ಬಾಯ ಗಾಳಿ ಕೊಳಲ ಬೆಳಕ ಹಾಡಬೀರಿ / (ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ) / ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ? ಬೇಟೆಯಲ್ಲ ; ಆಟವೆಲ್ಲ ; ಬೇಟದ ಬಗೆ, ನಾರಿ / ಕೋಲು ಸಖೀ…..

-ದಾಂಪತ್ಯ ಸುಖದ, ಸೌಭಾಗ್ಯದ ಮಧುರ ದಿನಗಳು ಕುಣಿ ಕುಣಿದು ಸಾಗುತ್ತಿವೆ. ದಾಂಪತ್ಯದ ಸೊಗಸಿನ ಮುಖ ಅತ್ಯಂತ ರಮಣೀಯವಾಗಿ, ಕಮನೀಯವಾಗಿ ಕಾಣಿಸುತ್ತಿದೆ. ಬದುಕು ಸಾರ್ಥಕವಾಯಿತೆಂಬ ಧನ್ಯಭಾವವನ್ನು ಪ್ರಿಯೆ ಅನುಭವಿಸಿದ್ದಾಳೆ ; ಅನುಭವಿಸುತ್ತಿದ್ದಾಳೆ. ಅದರ ಸವಿಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ :

ನೇತ್ರ ಪಲ್ಲವಿಯಿಂದ ಸೂತ್ರಗೊಂಬೀ ಹಾಂಗ / ಪಾತ್ರ ಕುಣಿಸ್ಯಾನ ಒಲಮಿಗೆ | ದಿನ ದಿನ / ಜಾತ್ರಿಯೆನಿಸಿತ್ತ ಜನುಮವು

ಹುಬ್ಬು ಹಾರಿಸಿದಾಗ ಹಬ್ಬ ಎನಿಸಿತು ನನಗ / ‘ಅಬ್ಬ’ ಎನಬೇಡs ನನ ಗೆಣತಿ | ಸಾವಿರಕ / ಒಬ್ಬ ನೋಡವ್ವ ನನ ನಲ್ಲ

ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧಾಂಗ / ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ / ಕಣ್ಣು ಬರೆಧಾಂಗ ಕಂಡಿತ್ತು

-ಅವರ ದಾಂಪತ್ಯ ಜೀವನದಲ್ಲಿ ಸಂಪತ್ತಿನ ಬಡತನವಿದೆ; ಆದರೆ ಒಲವಿನ ಬಡತನವಿಲ್ಲ. ಒಲವೇ ಅವರ ಬದುಕು; ಅದೇ ಅವರ ಸ್ಥಿರ ಆಸ್ತಿ. ಆ ಒಲವಿನ ಸಂಪತ್ತಿನಿಂದ ಬಾಳಿನ ಸವಿ, ಸಿರಿ ಹೆಚ್ಚಿದೆ. ಆ ಸೌಭಾಗ್ಯವನ್ನು ನಲ್ಲೆ ನಿವೇದಿಸಿಕೊಳ್ಳುವ ಇನ್ನೊಂದು ಬಗೆಯನ್ನು ಸವಿಯಿರಿ :

ನಾನು ಬಡವಿ ಆತ ಬಡವ / ಒಲವೆ ನಮ್ಮ ಬದುಕು / ಬಳಸಿ ಕೊಂಡೆವದನೆ ನಾವು / ಅದಕು ಇದಕು ಎದಕು

ಅತ ಕೊಟ್ಟ ವಸ್ತು ಒಡವೆ / ನನಗೆ ಅವಗೆ ಗೊತ್ತು / ತೋಳುಗಳಿಗೆ ತೋಳಬಂದಿ / ಕೆನ್ನೆ ತುಂಬ ಮುತ್ತು

ಕುಂದು ಕೊರತೆ ತೋರಲಿಲ್ಲ / ಬೇಕು ಹೆಚ್ಚಿಗೇನು? / ಹೊಟ್ಟೆಗಿತ್ತ ಜೀವ ಫಲವ / ತುಟಿಗೆ ಹಾಲು ಜೇನು

ಸಂಸಾರದ ಈ ಅಪೂರ್ವ ಸವಿ ದಿನನಿತ್ಯದ ರುಚಿಯಾಗಿ ಬಿಟ್ಟಿದ್ದರಿಂದ ಹೊಸ ಸವಿಯ, ಹೊಸ ರುಚಿಯ ಎಳೆತಕ್ಕೆ ಪ್ರಿಯನ ಜೀವ ಒಳಗಾಯಿತೇನೊ ! ಪ್ರಿಯೆ ಅದನ್ನು ಕಾಣಳು ; ಆದರೆ ಊಹಿಸಬಲ್ಲಳು. ಊಹೆಯನ್ನೇ ನಿಜವೆಂದು ನಂಬಿ ರಂಪ ಮಾಡುವ ಮಡದಿ ಅವಳಲ್ಲ. ತನ್ನ ಊಹೆಗಿಂತ ತನ್ನ ಪ್ರೇಮ ನಿಜವಾದುದು ಎಂಬ ನೆಚ್ಚಿಕೆ ಅವಳಲ್ಲಿ ಇನ್ನೂ ಅಳಿದಿಲ್ಲ. ಗಮಗಮಿಸುವ ಮಲ್ಲಿಗೆ ಮುಡಿದು ರಸಿಕ ಗತ್ತಿನಿಂದ ಮನೆಯಿಂದ ಹೊರಹೊರಟ ಮನದನ್ನನನ್ನು ತನ್ನ ಪ್ರೇಮ ಪರಿಮಳದಿಂದ ಮರಳಿ ಸೆಳೆಯಲು ಯತ್ನಿಸುತ್ತಿದ್ದಾಳೆ :

ಗಮಗಮಾ ಗಮಾಡಸತಾವs ಮಲ್ಲಿಗಿ ! ನೀವು ಹೊರಟಿದ್ದೀಗ ಎಲ್ಲಿಗೆ? / ಗಮ ಗಮಾ…..

ತುಳುಕ್ಯಾಡತಾವ ತೂಕಡಿಕಿ / ಎವಿ ಅಪ್ಪತಾವ ಕಣ್ಣ ದುಡುಕಿ / ಕನಸು ತೇಲಿ ಬರತಾವ ಹುಡುಕಿ / ನೀವು ಹೊರಟಿದ್ದೀಗ ಎಲ್ಲಿಗೆ?

ಚಿಕ್ಕಿ ತೋರಸ್ತಾವ ಚಾಚಿ ಬೆರಳ / ಚಂದ್ರಾಮ ಕನ್ನಡೀ ಹರಳ / ಮನಸೋತು ಆಯಿತು ಮರುಳ / ನೀವು ಹೊರಟಿದ್ದೀಗ ಎಲ್ಲಿಗೆ?

ಗಾಳಿ ತಬ್ಬತವ ಹೂಗಂಪು / ಚಂದ್ರನ ತೆಕ್ಕಿಗಿದೆ ತಂಪು / ನಿಮಕಂಡರ ಕವದಾವ ಜೊಂಪು / ನೀವು ಹೊರಟಿದ್ದೀಗ ಎಲ್ಲಿಗೆ?

ಬಂತ್ಯಾಕ ನಿಮಗ ಇಂದ ಮುನಿಸು? ಬೀಳಲಿಲ್ಲ ನಮಗೆ ಇದರ ಕನಸು / ರಾಯಾ ತಿಳಿಯಲಿಲ್ಲ ನಿಮ್ಮ ಮನಸು / ನೀವು ಹೊರಟಿದ್ದೀಗ ಎಲ್ಲಿಗೆ? ||

-ಅವಳ ಯತ್ನ ಫಲಿಸಿದಂತೆ ತೋರುವುದಿಲ್ಲ. ನಲ್ಲ ಹೇಳದೆ ಕೇಳದೆ ಎಲ್ಲಿಗೋ ಹೋಗಿರುವಂತೆ ಇದೆ. ವಿರಹದ ನೋವು ನಲ್ಲೆಯ ಜೀವನವನ್ನು ಹಿಂಡುತ್ತದೆ ; ಆತ ಎಲ್ಲಿರುವನೆಂಬುದೂ ಗೊತ್ತಿರದೆ ಮೊರೆಯಿಡುವಂತಾಗಿದೆ.

ಎಲ್ಲಿರುವೆ ರಾಜಗಂಭೀರಾ- ನೀರಾ || ಪ ||

ಬೆಳಕ ಬೇಡುತಲಿದೆ ಗಾಳಿ ಕಾಣದೆ ಬಾಡಿ / ಬಳ್ಳಿಯಾಗಿಹ ಜೀವಾ / ಮಲ್ಲಿಗೆಯಾದೆದೆ ಮೊಗ್ಗೆಯಾಗಿಯೆ ಇದೆ / ಎಲ್ಲಿರುವೆ ರಾಜಗಂಭೀರಾ – ನೀರಾ

ಕಾಣದ ವಸ್ತುವ ಕಾಣಬೇಕೆಂಬಾಸೆ / ಮಿತಿಯ ಮೀರಿದೆ ಜೀವಾ / ನಲ್ಲ, ನೀರಡಿಸಿದೆ, ಕಾವೇರಿ ಆರಿದೆ / ಎಲ್ಲಿರುವೆ ರಾಜಗಂಭೀರಾ – ನೀರಾ

-ಈ ವಿರಹ ಎಷ್ಟು ಕಾಲವಿತ್ತೋ ಕಾಣೆವು. ಎಂದೋ ಒಂದು ದಿನ ಮರಳಿ ಮನೆಗೆ ಬಂದ ಪತಿ ಮತ್ತು ಅವನ ಪತ್ನಿ ದಾಂಪತ್ಯದ ನೊಗಹೊತ್ತು ನಡೆಯುವ ಸಂಕಲ್ಪದಲ್ಲಿ ಹೊಂದಿ ನಡೆದಿದ್ದಾರೆ. ಪ್ರಿಯನು ಪ್ರಿಯೆಯ ಹೊಟ್ಟೆಗಿತ್ತ ಜೀವಫಲ ಮಗುವಾಗಿ ಫಲಿಸಿತ್ತು. ಆದರೆ ಆ ಕೂಸಿನ ಬಾಲಲೀಲೆಗಳ ವಿಲಾಸವನ್ನು ಸವಿಯುವ ಸೌಭಾಗ್ಯ ಬಹಳ ದಿನ ಉಳಿಯಲಿಲ್ಲ. ಆ ಕೂಸು ಸಾವಿನೊಡನೆ ಸೆಣಸುತ್ತ ಹಾಸಿಗೆಯಲ್ಲಿ ಈಗಲೋ ಇನ್ನೊಂದು ಗಳಿಗೆಗೋ ಎಂಬಂತೆ ಕೊನೆಯುಸಿರೆಳೆಯುತ್ತಿದೆ. ಆ ಸ್ಥಿತಿಯಲ್ಲಿ ಪತಿಯ ಕಡೆಗೆ ಕಾತರ ಮತ್ತು ಕಣ್ಣೀರು ತುಂಬಿದ ಕಣ್ಣುಗಳಿಂದ ಅಸಹಾಯಕಳಾಗಿ ಪತ್ನಿ ನೋಡುತ್ತಿದ್ದಾಳೆ. ಸಮದುಃಖಿಯಾದ ಪತಿಗೆ ಪತ್ನಿಯ ನೋಟದ ತೀಕ್ಷ್ಣತೆಯನ್ನು ಎದುರಿಸುವ ಎದೆಯೇ ಇಲ್ಲದಂತಾಗಿದೆ.

ನೀ ಹೀಂಗ ನೋಡಬ್ಯಾಡ ನನ್ನ / ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ || ಪ ||

ಸಂಸಾರ ಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ / ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾದಂಡಿ / ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ / ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ? / ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು / ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು? / ದಿಗಿಲಾಗಿ ಅನ್ನತದ ಜೀವ ನಿನ್ನ – ಕಣ್ಣಾರೆ ಕಂಡು ಒಮ್ಮಿಗಿಲs / ಹುಣ್ಣೀವೀ ಚಂದಿರನ ಹೆಣಾ ಬಂತು ಮುಗಿಲಾಗ ತೇಲತ ಹಗಲ !ಸ

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚುನಗಿ ಯಾಕ / ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ / ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ? / ಎವೆ ಬಡಿಸಿ ಕೆಡವು ಬಿರಿಗಣ್ಣುಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ

ನೀ ಹೀಂಗ ನೋಡಬ್ಯಾಡ ನನ್ನ………

-ಮಗುವನ್ನು ಮೃತ್ಯು ಮುಕ್ಕಿತೆಂದು ತೋರುತ್ತದೆ. ಪ್ರಣಯದ ಪ್ರಥಮ ದಿನಗಳ ಸೊಗಸು, ದಾಂಪತ್ಯದ ಮಧುಚಂದ್ರ ದಿನಗಳ ಒಲವು ನೀಡಿದ ಆನಂದ, ಆಹ್ಲಾದ…. ಅವೆಲ್ಲ ಅವರ ಪಾಲಿಗೆ ಇಂದು ನೆನಪಾಗಿ ಮಾತ್ರ ಉಳಿದಿವೆ. ವಿಷಾದ, ನೋವು ಅವರ ಬಾಳಿನಲ್ಲಿ ಒಡೆತನ ನಡೆಸುತ್ತಿವೆ. ಪತ್ನಿಯ ಮುಖದಲ್ಲಿ ನಗು, ಮುಗುಳ್ನಗು, ಕೇಳಿದ ಕಥೆಯಾಗಿದೆ. ಇಂದು ನಿರಾಸೆಯ ಭಾರದಲ್ಲಿ ಅವಳು ನರಳುತ್ತಿದ್ದಾಳೆ. ಈ ನರಳುವಿಕೆಯಲ್ಲಿ ನಲಿವನ್ನು, ನಲವನ್ನು ಅರಳಿಸುವ ಆಶಾವಾದ ಪತಿಯಲ್ಲಿ ಹೇಗೋ ಉಳಿದುಕೊಂಡಿದೆ. ಪತ್ನಿಯಲ್ಲಿ, ಹಿಂದಿನ ಸುಖದ ದಿನಗಳ ನೆನಪನ್ನು ಉದ್ದೀಪಿಸಿ ಇಂದಿನ ದುಃಖವನ್ನು ಮರೆಸಲು ಆತ ಯತ್ನಿಸುತ್ತಿದ್ದಾನೆ.

ಹಳ್ಳsದ ದಂಡ್ಯಾಗ ಮೊದಲಿಗೆ ಕಂಡಾಗ / ಏಸೊಂದು ನಗಿ ಇತ್ತs / ಏನೊಂದು ನಗಿ ಇತ್ತ ಏಸೊಂದು ನಗಿ ಇತ್ತ / ಏರಿಕಿ ನಗಿ ಇತ್ತs || ಪಲ್ಲವಿ ||

ನಕ್ಕೊಮ್ಮೆ ಹೇಳ ಚೆನ್ನಿ ಆ ನಗಿ ಇತ್ತಿತ್ತ / ಹೋಗೇತಿ ಎತ್ತೆತ್ತ s || ಅನುಪಲ್ಲವಿ ||

ಕಣ್ಣಾನ ಬೆಳಕೇನs ಮಾರ್ಯಾಗಿನ ತುಳುಕೇನ / ತುಟಿಯಾಗಿನ ಝಳಕೇನ / ಉಡುಗಿಯ ಮಾಟೇನs ನಡಗಿಯ ಥಾಟೇನ / ಹುಡುಗಿ ಹುಡುಗಾಟೇನ !

ಕಂಡ್ಹಾಗ ಕಾಣsಲಿಲ್ಲ ಅಂದ್ಹಾಗನ್ನsಲಿಲ್ಲ / ಬಂದ್ಹಾಂಗ ಬರಲಿಲ್ಲಾ / ಚಂದಾನ ಒಂದೊಂದ ಅಂದೇನಿ ಬೇರೊಂದ / ಅರಿವನs ಇರಲಿಲ್ಲ !

ಮುಂಗಾರಿ ಕಣಸನ್ನಿ ಹಾಂಗ ನೀ ನಗ ಚನ್ನಿ / ಮಿಂಚ್ಯೊಮ್ಮೆ ಮಿಂಚಿತ್ತ / ನಿನಮಾರಿ ನಿಟ್ಟಿಗೆ ಹಚ್ಚಿ ದಿಟ್ಟಿದಿಟ್ಟಿಗೆ ನೋಡ್ತೇನಿ ನಾನಿತ್ತ ! /ಹಳ್ಳsದ ದಂಡ್ಯಾಗ…..

-ಇಂದಿನ ದಾರುಣತೆಯ ಸಂಸಾರ ತತ್ವದ ಒಂದಂಶವೆಂಬ ಅರಿವನ್ನು ಅವಳಲ್ಲಿ ಮೂಡಿಸಿ ನಿರಾಸೆಯ ಕಾರ್ಗತ್ತಲಲ್ಲಿ ಆಸೆಯ ಹಣತೆ ಹಚ್ಚಲು ಪತಿ ಹವಣಿಸುತ್ತಿದ್ದಾನೆ :

ನನ ಕೈಯ ಹಿಡಿದಾಕೆ ಅಳುನುಂಗಿ ನಗು ಒಮ್ಮೆ / ನಾನೂನು ನಕ್ಕೇನs…./ ಹುಸಿನಗುತ ಬಂದೇವ ನಸುನಗುತ ಬಾಳೋಣ / ತುಸು ನಗುತ ತೆರಳೋಣ / ಬಡನೂರು ವರುಷಾನ ಹರುಷಾದಿ ಕಳೆಯೋಣ / ಯಾಕಾರೆ ಕೆರಳೋಣ!

ಬಡತನ ಒಡೆತನ ಕಡೆತನಕುಳಿದಾವೇನ / ಎದೆಹಿಗ್ಗು ಕಡೆಮುಟ್ಟ / ಬಾಳಿನ ಕಡಲಾಗ ಅದನ ಮುಳುಗಿಸ ಬ್ಯಾಡ / ಕಡಗೋಲು ಹಿಡಿ ಹುಟ್ಟ !

– ಈ ನಲಿವು, ನೋವುಗಳ ಕಣ್ಣು ಮುಚ್ಚಾಲೆಯಲ್ಲಿ ಸಿಕ್ಕಿಯೂ ಸಿಕ್ಕದಂತಾಗಿ, ದಕ್ಕಿಯೂ ದಕ್ಕದಂತಾಗಿ ಕನಸೋ ನನಸೋ ಎಂಬ ಭ್ರಮೆಯಲ್ಲೋ, ಬೆರಗಿನಲ್ಲೋ ಮನುಷ್ಯ ಜೀವವನ್ನು ಕುಣಿಸಿ ದಣಿಸಿ ತಣಿಸುವ ಆ ಒಲವಿನ ನಿರಂತರ ಆಕರ್ಷಣೆಯ ಹಿಂದಿನ ಸತ್ಯವೇನು? ತತ್ವವೇನು? ಎಂಬ ಪ್ರಶ್ನೆಗೆ ಬೇಂದ್ರೆಯವರು ಉತ್ತರ ಹೇಳುತ್ತಾರೆ :

ಹೆಣ್ಣು ಗಂಡಿಗೆ ಚೆಲುವು, ಗಂಡು ಹೆಣ್ಣಿಗೆ ಒಲವು / ಇದುವೆ ಹೆಣಿಗೆಯ ಒಲವು ಮೂಲೋಕಕು……… / ಸೌಂದರ್ಯವೆಂಬುದು ಕಣ್ಣಿನ ತುತ್ತಲ್ಲ / ಕಣ್ಣಿಗೆ ಕಣ್ಣಾಗಿ ಒಳಗಿಹುದು / ರೂಪ-ಲಾವಣ್ಯಕೆ ಅಳೆಯಲು ಬಾರದು / ಅವುಗಳೆ ಇದರೊಂದು ಕಣವಿಹವು.

ಎಲ್ಲಿಂದೊ ಬಂದೊಂದು ಸೌಂದರ್ಯ-ಝರಿಯಿಂದ / ಎದೆ ಎದೆಗು ಕಾರಂಜಿ ಪುಟಿಯುತಿದೆ /ಯಾರಿಂದೊ ಚಲಿಸುವ ಪ್ರಾಣದ ಸೂತ್ರವು / ಪುರುಷ-ಪ್ರಕೃತಿಗಳನ್ನು ಕುಣಿಸುತ್ತಿದೆ

-ನಮ್ಮ ನಿಮ್ಮಂಥ ಮನುಷ್ಯ ಮಾತ್ರರನ್ನು ಮಾತ್ರವಲ್ಲ ಪ್ರಕೃತಿ ಪುರುಷರನ್ನೂ ಕುಣಿಸುವ ಕಾಣದ ಕೈಯ ಸೂತ್ರವೊಂದು ಧ್ರುವ ಧ್ರುವಗಳನ್ನು, ಸೂರ್ಯ ಚಂದ್ರ ತಾರೆಗಳನ್ನು ಒಲವಿನ ಚುಂಬಕ ಗಾಳಿಯಿಂದ ಸೆಳೆಯುತ್ತಿದೆ. ಅವುಗಳ ಒಲವಿನ ಆಟದಲ್ಲೂ ನಗೆಯಿದೆ, ಮರುಕವಿದೆ, ಮಿಲನದ ಚಿಹ್ನವು ತೋರದಿದೆ, ಎನ್ನುತ್ತಾರೆ ಕವಿ ಬೇಂದ್ರೆಯವರು :

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ / ಚುಂಬಕ ಗಾಳಿಯು ಬೀಸುತಿದೆ / ಸೂರ್ಯನ ಬಿಂಬಕೆ ಚಂದ್ರನ ಬಿಂಬವು / ರಂಬಿಸಿ ನಗೆಯಲ್ಲಿ ಮೀಸುತಿದೆ

ಭೂರಂಗಕೆ ಅಭಿಸಾರಕೆ ಕರೆಯುತ / ತಿಂಗಳು ತಿಂಗಳು ನವೆಯುತಿದೆ / ತುಂಬುತ ತುಳುಕುತ ತೀರುತ ತನ್ನೊಳು / ತಾನೇ ಸವಿಯನು ಸವಿಯುತಿದೆ

ಅಕ್ಷಿ ನಿಮಿಲನ ಮಾಡದೆ ನಕ್ಷ / ತ್ರದ ಗಣ ಗಗನದಿ ಹಾರದಿದೆ / ಬಿದಿಗೆಯ ಚಂದ್ರನ ಬಿಂಬಾಧರದಲ್ಲಿ / ಮಿಲನ ಚಿಹ್ನವು ತೋರದಿದೆ

ಒಲವಿನ ಆಟದಲ್ಲಿ ನಲಿವೇ ಬೇಕೆಂದು ಹಠ ಹಿಡಿಯಲಾಗದು. ನೋವೇ ಬೇಡವೆಂದು ಬಿಡಲಾಗದು. ಹಿಡಿಯುವ, ಬಿಡುವ ಅಧಿಕಾರ ನಮಗಿದೆ ಎಂಬುದು ಅನಿಸಿಕೆ ಮಾತ್ರ. ಆ ಅನಿಸಿಕೆಯಲ್ಲೂ ಸತ್ಯಾಂಶವಿದೆ; ಆದರೆ ಅದು ಅಂಶ ಸತ್ಯವೇ ಹೊರತು ಪೂರ್ಣ ಸತ್ಯವಲ್ಲ ; ಒಲವಿನ ಪರಮತತ್ವವಲ್ಲ, ಎಂಬುದು ಬೇಂದ್ರೆಯವರ ಪೇಮತತ್ವ; ಒಲವಿನ ಲೌಕಿಕ ನೆಲೆಯ ರುಚಿಗೆ ಮೆಚ್ಚಿದ ಅದನ್ನೇ ನೆಚ್ಚಿದ ನಮ್ಮ ನಿಮ್ಮಂಥ ಜೀವಗಳಿಗೆ ಮಾತ್ರವಲ್ಲ ದೈವೀ ಪ್ರೇಮದ ದಿವ್ಯ ರುಚಿಯನ್ನು ಅನುಭವಿಸಿದ ಜೀವಕ್ಕೂ ಮಿಲನದ ಮಾಧುರ್ಯದಂತೆಯೇ ವಿರಹದ ವಿಷಾದವು ಬಿಟ್ಟಿದ್ದಲ್ಲ.

ನೋಡಿ, ಇಲ್ಲೊಬ್ಬಳು ಕೃಷ್ಣಪ್ರಿಯೆಯೂ ವಿರಹಕ್ಕೆ ಒಳಗಾಗಿದ್ದಾಳೆ. ಕೃಷ್ಣನ ಕೊಳಲುಲಿಯನ್ನು ಕೇಳಿ ಆಕೆ ಹಾಗೇ ಗಕ್ಕನೆ ನಿಂತುಬಿಟ್ಟಿದ್ದಾಳೆ. ಗೋಪಿಯ ಆ ಪರಿಯ ಭಾವತನ್ಮಯತೆಯನ್ನು ಕಂಡ ಅವಳ ಗೆಳತಿ ಅವಳನ್ನು ಕೇಳುತ್ತಾಳೆ :

ಕೊಳsಲನೂದಿsದಾನೇನs-ಕೃಷ್ಣ / ಕೊಳಲನೂದಿsದಾ || ಪ ||

ಏನೊ ನೋಡಿ ಕಾಣದಂತೆ / ಏನೊ ಕೇಳಿ ಕೇಳದಾಗಿ / ಎನೊ ಹೇಳ ಹೇಳ ಹೋಗಿ / ಆಡದೇನs ಇರುವಿ ನೀನು | ಕೊಳಲ…..

ಜೀವ ಸೂತ್ರಧಾರ ನಿಮ್ಮ / ಪಾತ್ರವಾಡಿಸುsವನೇನs / ಇಷ್ಟು ಕೇಳಿ ಕಿವುಡಳಿರುವೆ / ಎಲ್ಲಿ ತನ್ಮಯಳಾದೆ ನೀನs | ಕೊಳಲ……

-ವಿರಹದ ವಿಷಾದದ ಹಿನ್ನೆಲೆಯಲ್ಲಿ ಮಿಲನದ ಮಾರ್ಧುಯದ ಜೀವ ತಣಿಸಿದ ಸವಿನೆನಪು ಹಸಿರಾದದ್ದಾದರೆ ಆ ನೆನಪು ವಿಷಾದವನ್ನು ಸ್ವಾದಗೊಳಿಸಿ ಅಸ್ವಾದ್ಯವಾಗುವಂತೆ ಮಾಡುತ್ತದೆ – ಗೆಳತಿ ಕೇಳಿದ ಮಾತಿಗೆ ಗೋಪಿ ಆನಂದ ಸಮಾಧಿಯಿಂದ ಎಚ್ಚೆತ್ತು ಹೇಳುತ್ತಾಳೆ :

ಕೊಳಲನೂದಿದನsಸ್ವಾಮಿ / ಕೊಳಲನೂದಿದ /ಎಲ್ಲೋ ಕೊಳಲನೂದಿದ || ಪಲ್ಲ ||
ಕಣ್ಣುಸನ್ನೆಯಿಂದ ನಮ್ಮ / ತನ್ನ ಎದೆಗೆ ಎಳೆದುಕೊಂಡು / ಭಿನ್ನ ಭಾವ ಮರೆಸಿ ಕಲೆತು / ರಾಸಲೀಲೆ ಆಡಿದಂತೆ | ಕೊಳಲ…..

“ಪ್ರೀತಿಯಿಂದ ಭೀತಿ ಬರುತ್ತದೆ ಎನ್ನುವ ಜನರಿದ್ದಾರೆ. ಅವರು ಹುಟ್ಟಿದ್ದು ತಪ್ಪೋ ಏನೋ ! ಆಮೇಲೆ ಬಾಳುಗೇಡಾಗಿ ಅವರು ಬದುಕಿದ್ದು ಅರ್ಥಹೀನ. ಹಾಲು ಕೆಡುತ್ತದೆ; ಅದು ನಿಜವಾಗಿದ್ದರೂ ಹಾಲೇ ಕೆಟ್ಟ ಎನ್ನುವ ಮಾತು ಸರಿಯಲ್ಲ” – ಈ ಮಾತುಗಳನ್ನು ನೆನಪಿಟ್ಟುಕೊಂಡು ಜನ ಬದುಕಬೇಕೆಂಬುದು ಬೇಂದ್ರೆಯವರ ಆಶಯವಾಗಿದೆ. ಏಕೆಂದರೆ ಒಲವಿನ ಮಹತ್ತು ಅಂಥದು :

ಒಲವೆಂಬ ಹೊತ್ತಿಗೆಯನೋದಬಯಸುತ ನೀನು / ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ ! / ಹಗಲಿರುಳು ದುಡಿದರೂ ಹಲಜನುಮ ಕಳೆದರೂ / ನೀ ತೆತ್ತಲಾರೆ ಬರಿ ಅಂಚೆವೆಚ್ಚ

ಬೆವರ ಹನಿಯಲ್ಲಿ ಹಲವು, ಕಣ್ಣೀರಿನಲಿ ಕೆಲವು / ನೆತ್ತರಲಿ ಬರೆದುದಕೆ ಲೆಕ್ಕವಿಲ್ಲ / ಚಿತ್ರಚಿತ್ರಾಕ್ಷರದ ಲಕ್ಷಪತ್ರಗಳುಂಟು; / ನಕ್ಷತ್ರ ಓದುತಿವೆ ಮರೆತು ಸೊಲ್ಲ.