ದಯಾಶಂಕರ ಮೈಲಿ : ಸಾಹಿತ್ಯ ಸಮ್ಮೇಳನಗಳು ರಾಜಕಾರಣಿಗಳ ಕೃಪಾಕಟಾಕ್ಷದಿಂದ ಹೊರಬರಬೇಕು ಎಂಬ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಜಿ.ಎಚ್. ನಾಯಕ್ : ನಮ್ಮ ನಾಡಿನಲ್ಲಿ ಅರಮನೆ, ಗುರುಮನೆಗಳ ಕೃಪಾಕಟಾಕ್ಷ, ಪೋಷಣೆ, ಪ್ರೋತ್ಸಾಹದಲ್ಲಿ ಪ್ರಾಚೀನ ಕನ್ನಡ ಸಾಹಿತ್ಯ ಬಹುಪಾಲು ಬೆಳೆದು ಬಂದ ಚರಿತ್ರೆ ಇದೆ. ಆ ಕಾಲಮಾನ ರಾಜಪ್ರಭುತ್ವದ್ದಾಗಿತ್ತು. ಮತಧರ್ಮಗಳು ಮಠಮಾನ್ಯಗಳು ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿಗತಿಗಳನ್ನು ನಿಯಂತ್ರಿಸುವಂಥ, ನಿರ್ದೇಶಿಸುವಂಥ ಸ್ಥಿತಿ ಇತ್ತು. ಈಗ ನಮ್ಮ ದೇಶ ಪ್ರಜಾಪ್ರಭುತ್ವ ರಾಷ್ಟ್ರ, ಜನತೆಯ ಪುರೋಭಿವೃದ್ಧಿಗೆ ಅಗತ್ಯವಾದ ಎಲ್ಲಾ ಕಾರ್ಯಕ್ರಮಗಳನ್ನು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವುದು ಸರ್ಕಾರ ನಡೆಸುವವರ ಕರ್ತವ್ಯ ಭಾಗ. ಇವೆಲ್ಲ ಕಾರ್ಯಕ್ರಮಗಳನ್ನು ಸರ್ಕಾರವೇ ನಡೆಸುವುದಕ್ಕೆ ಆಗುವುದಿಲ್ಲ. ಖಾಸಗಿ ಸಂಘ-ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು ಕೂಡ ಈ ಕೆಲಸ ಮಾಡಬೇಕಾಗುತ್ತದೆ. ಅಂಥ ಸಂಘ, ಸಂಸ್ಥೆಗಳು ಜನೋಪಯೋಗಿಯಾದವು ಎಂದು ಸರ್ಕಾರಕ್ಕೆ ಮನವರಿಕೆಯಾದರೆ ಅನುದಾನ-ಧನಸಹಾಯ ನೀಡುತ್ತದೆ; ನೀಡಬೇಕು.

ಕನ್ನಡ ಸಾಹಿತ್ಯ ಪರಿಷತ್ತು ಅಂಥ ಜನೋಪಯೋಗಿಯಾದಂಥ ಸಂಸ್ಥೆ ಎಂದು ನಮ್ಮ ಸರ್ಕಾರ ಮಾನ್ಯ ಮಾಡಿದೆ. ಸಮ್ಮೇಳನದ ವೆಚ್ಚಕ್ಕೆಂದು ಆಯಾ ಕಾಲದಲ್ಲಿ ಸರ್ಕಾರ ನಡೆಸುತ್ತ ಬಂದವರೆಲ್ಲ ಅನುದಾನ-ಧನಸಹಾಯ ನೀಡುತ್ತಾ ಬಂದಿದ್ದಾರೆ. ಅದೊಂದು ಸರ್ಕಾರದ ಕರ್ತವ್ಯ ಎಂಬ ಮಟ್ಟಿಗೆ ಒಂದು ಸಂಪ್ರದಾಯವಾಗಿಬಿಟ್ಟಿದೆ.

ಪ್ರತಿ ಸಮ್ಮೇಳನ ನಡೆಯುವಾಗಲೂ ಎಷ್ಟು ಹಣ ಕೊಡಬೇಕು ಎಂದು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕು. ಸರ್ಕಾರ ನಡೆಸುವವರು ಎಷ್ಟು ಹಣ ನೀಡಬೇಕೆಂಬ ಬಗ್ಗೆ ನಿರ್ಣಯಿಸುವ ಅಧಿಕಾರವನ್ನು ತಮ್ಮ ಕೈಲಿಟ್ಟುಕೊಂಡು ಬಂದಿದ್ದಾರೆ. ಅದರಿಂದಾಗಿ ಪ್ರತಿ ಸಮ್ಮೇಳನ ನಡೆಸುವ ಕಾಲದಲ್ಲಿಯೂ ಸರ್ಕಾರ ನಡೆಸುವವರ ಮರ್ಜಿ ಕಾಯುವ, ಅವರ ಕೃಪಾಕಟಾಕ್ಷಕ್ಕಾಗಿ ಬೇಡಿಕೊಳ್ಳುವ ಗೌರವಯುತವಲ್ಲದ ಸ್ಥಿತಿಯೊಂದು ನಡೆದುಕೊಂಡೇ ಬಂದಿದೆ. ಅವರನ್ನು ಸುಪ್ರೀತರಾಗಿಸಲೆಂದು ಅವರಿಗೆ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಮೆರೆಯಲು ಅವಕಾಶ ಕಲ್ಪಿಸಿಕೊಡುವುದೂ ಅದನ್ನು ಒಂದು ಆಮಿಷವಾಗಿ ಒಡ್ಡುವುದೂ ಒಂದು ಸಂಪ್ರದಾಯವೇ ಎಂಬಂತೆ ಬೆಳೆದು ಬರುತ್ತಲೇ ಇದೆ. ಇದು ಸರಿಯೆ?

ರಾಜಕಾರಣಿಗಳಾಗಲಿ ಮಠಾಧಿಪತಿಗಳಾಗಲಿ ಅವರು ಸಾಹಿತಿಗಳೂ ಆಗಿದ್ದಲ್ಲಿ ಉಳಿದ ಸಾಹಿತಿಗಳಿಗೆ ಹೇಗೊ ಹಾಗೆ ಸಾಹಿತ್ಯಕ್ಷೇತ್ರದ ಅವರ ಸಾಧನೆ, ಕೊಡುಗೆಗಳಿಗೆ ಸಲ್ಲಬೇಕಾದ ಸ್ಥಾನಗೌರವ ಸಲ್ಲಿಸುವುದರಲ್ಲಿ ತಪ್ಪಿಲ್ಲ. ಹಾಗಲ್ಲದೆ ಸಲ್ಲದ ಅವಕಾಶಗಳನ್ನು ಅವರಿಗೆ ನೀಡುವುದರಿಂದ ಸಾಹಿತ್ಯಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದವರಿಗೆ ಸಲ್ಲಬೇಕಾದ ಮನ್ನಣೆ, ಅವಕಾಶಗಳನ್ನು ಅವರು ಕಿತ್ತುಕೊಂಡಂತಾಗುತ್ತದೆ ಅಥವಾ ತಪ್ಪಿಸಿದಂತಾಗುತ್ತದೆ.

ಅನುದಾನ-ಧನಸಹಾಯ ನೀಡುವುದೊಂದೇ ರಾಜಕಾರಣಿಗಳ ಅರ್ಹತೆಯಾಗಿದ್ದರೆ ಸಾಹಿತ್ಯ ಸಮ್ಮೇಳನದ ವೆಚ್ಚಕ್ಕೆ ಧನಸಹಾಯ ಮಾಡಲು ವ್ಯಾಪಾರೋದ್ಯಮಿಗಳು ಮುಂದೆ ಬಂದು ಹಣ ನೀಡಿದಲ್ಲಿ ಆಗ ಅವರಿಗೂ ಸಾಹಿತ್ಯ ಸಮ್ಮೇಳನದ ಉದ್ಘಾಟನೆ, ಸಮಾರೋಪ, ಸಾಹಿತ್ಯಗೋಷ್ಠಿಯ ಅಧ್ಯಕ್ಷತೆ, ಪ್ರಬಂಧ ಮಂಡನೆ ಇಂಥ ಅವಕಾಶಗಳನ್ನು ಸಾಹಿತ್ಯ ಸಮ್ಮೇಳನಗಳ ಸಂಘಟಕರು ನೀಡಲು ಸಿದ್ಧರಾಗುತ್ತಾರೆಯೇ? ಕ್ರಿಕೆಟ್/ಏಕದಿನ ಪಂದ್ಯಾವಳಿಗಳಲ್ಲಿ ಪ್ರಾಯೋಜಕರಾದವರನ್ನು ಆ ಕಾರಣಕ್ಕಾಗಿಯೆ ಆಟಗಾರರಾಗಿ ಮೈದಾನಕ್ಕಿಳಿಸುತ್ತಾರೆಯೇ?

ಮೈಲಿ : ಸಾಹಿತ್ಯ ಸಮ್ಮೇಳನಗಳಿಂದ ಏನನ್ನು ನಿರೀಕ್ಷಿಸುತ್ತೀರಿ?

ನಾಯಕ್ : ಸಾಹಿತ್ಯ ಸಮ್ಮೇಳನವು ಒಂದು ಸಂತೆಯೊ, ಜಾತ್ರೆಯೊ ಅಲ್ಲ; ಆಗ ಬೇಕಾಗಿಲ್ಲ. ನಾಡಿನ ಸಾಹಿತಿಗಳು, ಸಾಹಿತ್ಯಾಸಕ್ತರು ವರ್ಷಕ್ಕೊಮ್ಮೆ ಒಂದೆಡೆ ಸೇರಿ ನಾಡಿನ ಸಾಹಿತ್ಯ ಕ್ಷೇತ್ರದಲ್ಲಿ ಆದ ಆಗುತ್ತಿರುವ ಸಾಧನೆ, ಸಿದ್ಧಿ, ಮುನ್ನೋಟ ಕುರಿತಂಥ ಗಂಭೀರ ಚರ್ಚೆ, ಚಿಂತನೆಗಳನ್ನು ನಡೆಸುವ ಕ್ರಿಯಾಶೀಲ ವೇದಿಕೆಯಾಗಬೇಕು.

ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವವರು ಅವರ ಸಾಹಿತ್ಯದ ಗುಣಮಟ್ಟದ ಅರ್ಹತೆಯ ಆಧಾರದ ಮೇಲೆಯೇ ಆ ಸ್ಥಾನಗೌರವಕ್ಕೆ ತಕ್ಕವರಾಗಬೇಕು. ಹಾಗಲ್ಲದೆ ಸಾಹಿತೇತರ ಕಾರಣಗಳನ್ನು ಅಂದರೆ ವಯೋವೃದ್ಧರೆಂದೊ, ಮಹಿಳೆಯರೆಂದೊ. ದಲಿತರೆಂದೊ, ಅಲ್ಪಸಂಖ್ಯಾತರೆಂದೊ, ಈ ಪ್ರದೇಶದವರೆಂದೊ ಅಧ್ಯಕ್ಷರ ಆಯ್ಕೆಯಾಗುವುದು ಸೂಕ್ತವಲ್ಲ. ಯಾಕೆಂದರೆ ಅದರಿಂದ ಎಳೆಯ ಸಾಹಿತಿಗಳಿಗೆ ಸಾಹಿತ್ಯಾಸಕ್ತರಿಗೆ ಸಾಹಿತ್ಯದ ಗುಣಮಟ್ಟದ ಬಗೆಗಿನ, ಇತರ ಸಾಹಿತಿಗಳ ಸಾಹಿತ್ಯಕ ಸಾಧನೆಯ ಬಗೆಗಿನ ತಿಳಿವಳಿಕೆ ಗೊಂದಲಕ್ಕೊಳಗಾಗುತ್ತದೆ. ಆ ಕುರಿತ ಕಲ್ಪನೆ ಅಸ್ತವ್ಯಸ್ತವಾಗುತ್ತದೆ.

ಸಾಹಿತ್ಯ ಸಮ್ಮೇಳನದಿಂದ ಅಭಿರುಚಿ ಸಂಸ್ಕರಣ ದೊಡ್ಡ ಪ್ರಮಾಣದಲ್ಲಿ ಆಗುವುದೆಂದು ನಿರೀಕ್ಷಿಸದಿದ್ದರೂ ಅಭಿರುಚಿಯನ್ನು ಅಪಮೌಲ್ಯಗೊಳಿಸುವ ಕಾರ್ಯ ಆಗದಂತೆ ನೋಡಿಕೊಳ್ಳುವುದು ಅಗತ್ಯ. ಮಹಿಳೆ, ದಲಿತ, ಅಲ್ಪಸಂಖ್ಯಾತ, ಆಶ ಈ ಪ್ರದೇಶದ ಸಾಹಿತ್ಯ ಇಂಥವುಗಳಿಗೆ ಸಂಬಂಧಿಸಿದಂತೆ ಸಾಹಿತ್ಯಗೋಷ್ಠಿಗಳನ್ನು ಏರ್ಪಡಿಸುವುದರ ಮೂಲಕ ಚರ್ಚೆ, ಮೌಲ್ಯಮಾಪನ ಪ್ರಯತ್ನಗಳು ನಡೆಯುವಂತೆ ಮಾಡಬೇಕು. ಹಾಗೆ ಮಾಡುತ್ತಿರುವುದರಿಂದ ಸಾಹಿತ್ಯದ ಒಳಕ್ಕೆ ಬರುತ್ತಿರುವ ವೈವಿಧ್ಯಪೂರ್ಣವಾದ ಅನುಭವ ಸಂಪತ್ತಿನ ಸ್ವರೂಪ ಲಕ್ಷಣಗಳು, ಕನ್ನಡ ಸಾಹಿತ್ಯ ಪಡೆದುಕೊಳ್ಳುತ್ತಿರುವ ಹೊಸ ಹೊಸ ತಂತ್ರ, ಭಾಷಾರೂಪ ಮತ್ತು ಭಾಷಾ ಪ್ರಯೋಗಗಳು ಒಟ್ಟಿನ ಕಲಾತ್ಮಕ ಕಸುಬುಗಾರಿಕೆಯಲ್ಲಿ ಉಂಟಾಗುತ್ತಿರುವ ಪರಿವರ್ತನೆಗಳು ಮುಂತಾದವುಗಳ ಅರಿವು, ಪರಿಜ್ಞಾನ ಪಡೆಯುವುದಕ್ಕೆ ಅವಕಾಶ ಉಂಟಾಗುತ್ತದೆ. ಮಹಿಳೆ, ದಲಿತ, ಅಲ್ಪಸಂಖ್ಯಾತ ವರ್ಗದ ಸಾಹಿತಿಗಳಿಗೂ ಉಳಿದವರಂತೆಯೆ ಅರ್ಹತೆಯ ಮೇಲೆ ಗೋಷ್ಠಿಗಳಲ್ಲಿ ಅಧ್ಯಕ್ಷತೆ, ಪ್ರಬಂಧ ಮಂಡನೆ ಇತ್ಯಾದಿ ಅವಕಾಶಗಳನ್ನು ಕಲ್ಪಿಸಬಹುದು.

ಸಾಹಿತ್ಯ ಸಾಧನೆಯ ಅರ್ಹತೆಯಿಂದಲೇ ಅಂಥ ಅವಕಾಶಗಳನ್ನು ಪಡೆದುಕೊಳ್ಳಬಹುದಾದ ಸಾಹಿತಿಗಳು ದಲಿತರಲ್ಲಿ, ಮಹಿಳೆಯರಲ್ಲಿ, ಅಲ್ಪಸಂಖ್ಯಾತರಲ್ಲಿಇಂದು ಇದ್ದೇ ಇದ್ದಾರೆ. ಮಹಿಳಾ ಸಾಹಿತಿಗಳಿಗೆಂದೇ, ಅಲ್ಪಸಂಖ್ಯಾತ (ಮುಸ್ಲಿಮ್, ಕ್ರಿಶ್ಚಿಯನ್ ಇತ್ಯಾದಿ) ಸಾಹಿತಿಗಳಿಗೆಂದೇ ಇರುವ ಮತ್ತು ಇರಬಹುದಾದ ಪ್ರೋತ್ಸಾಹಕ ಬಹುಮಾನ, ಪ್ರಶಸ್ತಿ ಮುಂತಾದವುಗಳ ಬಗ್ಗೆ ನನ್ನಲ್ಲಿ ಅಭಿಪ್ರಾಯ ಭೇದವಿಲ್ಲ. ಆದರೆ ನಾಡಿನ ಸಮಸ್ತ ಸಾಹಿತಿಗಳ ಸಾಹಿತ್ಯದ ವ್ಯಾಪ್ತಿಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷಸ್ಥಾನಕ್ಕೆ ಆಯ್ಕೆಯಾಗುವಾಗ ಸಾಹಿತಿಗಳ ಒಟ್ಟಿನ ಸಾಧನೆ ಕೊಡುಗೆಯ ಗುಣಮಟ್ಟವೇ ಮಾನದಂಡವಾಗಬೇಕಾಗಿರುವುದು ಅಪೇಕ್ಷಣೀಯ, ಸೂಕ್ತ ಎಂಬುದು ನನ್ನ ಅಭಿಪ್ರಾಯ. ಆ ಆಯ್ಕೆಯಲ್ಲಿ ರಿಯಾಯತಿ ತೋರಿಸಬೇಕಾದ ಅಗತ್ಯವೇ ಉಂಟಾಗುವುದಿಲ್ಲ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಲಾಭದಾಯಕ ಹುದ್ದೆಯಲ್ಲ. ಆದ್ದರಿಂದ ಆ ಆಯ್ಕೆಯಲ್ಲಿ ‘ಸಾಮಾಜಿಕ ನ್ಯಾಯ’ ಪರಿಕಲ್ಪನೆಯ ಮೀಸಲಾತಿ ನಿಯಮಗಳನ್ನು ಅನ್ವಯಿಸುವುದು ಸರಿ ಅಥವಾ ಅಗತ್ಯ ಎಂದು ನನಗೆ ಅನಿಸುವುದಿಲ್ಲ. ಒಂದೊಮ್ಮೆ ಅದು ಸರಿ, ಅಗತ್ಯ, ಅನಿವಾರ್ಯ ಎಂದೆ ಅನಿಸಿದರೆ ಆ ಆಯ್ಕೆ ಸಂಬಂಧಪಟ್ಟಂತೆ ಮೀಸಲಾತಿ ಆಯ್ಕೆ ಎಂದು ಘೋಷಿಸಬೇಕು.

ಗುಣಮಟ್ಟದ ಮಾನದಂಡ ತೀರ್ಮಾನಿಸುವುದೂ ಕೂಡ ಸುಲಭವಲ್ಲ. ಎಂಬುದೇನೊ ನಿಜ. ಜ್ಞಾನಪೀಠ, ಪಂಪ ಪ್ರಶಸ್ತಿಗಳು, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಇನ್ನಿತರ ಪ್ರಶಸ್ತಿ, ಬಹುಮಾನಗಳಿಗೆ ಆಯ್ಕೆಮಾಡುವ ಸಂದರ್ಭಗಳಲ್ಲಿ ಅನುಸರಿಸುವ ಪರಿಪೂರ್ಣವಲ್ಲದಿದ್ದರೂ ಒಪ್ಪಬಹುದಾದ ಮತ್ತು ಸಕಾರಣವೆನ್ನಬಹುದಾದ ಆಯ್ಕೆಯ ವಿಧಿ, ವಿಧಾನಗಳಿರುತ್ತವೆಯಲ್ಲ ಹಾಗೆಯೇ ವಿಧಿ ವಿಧಾನಗಳನ್ನು ರೂಪಿಸಿಕೊಂಡು ಅಖಿಲಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬಹುದಲ್ಲವೆ?

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಅರ್ಹತೆಯುಳ್ಳ ಹಾಗೂ ವಯಸ್ಸಿನಲ್ಲಿ ಅರವತ್ತನ್ನೂ ದಾಟಿರುವ ಸಾಹಿತಿಗಳ ದೊಡ್ಡ ಬಳಗವೇ ಇದೆ; ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ, ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ, ಯಶವಂತ ಚಿತ್ತಾಲ, ರಾಮಚಂದ್ರಶರ್ಮ, ಕೆ.ಡಿ.ಕುರ್ತಕೋಟಿ, ಕೆ.ವಿ.ಸುಬ್ಬಣ್ಣ, ಜಿ.ಎಸ್. ಆಮೂರ, ಎಲ್.ಎಸ್. ಶೇಷಗಿರಿರಾವ್, ಎಲ್. ಬಸವರಾಜು, ಎಂ. ಚಿದಾನಂದಮೂರ್ತಿ, ಎಂ. ಎಂ. ಕಲಬುರ್ಗಿ, ಟಿ.ವಿ. ವೆಂಕಟಾಚಲಶಾಸ್ತ್ರಿ, ಚಂದ್ರಶೇಖರ ಪಾಟೀಲ, ಗಿರಡ್ಡಿ ಗೋವಿಂದರಾಜ ಇಂಥವರೆಲ್ಲ ಇದ್ದಾರೆ. (ಬದುಕಿದ್ದರೆ ಶ್ರೀಲಂಕೇಶರೂ ಶಾಂತಿನಾಥ ದೇಸಾಯಿಯವರೂ ಈ ಪಟ್ಟಿಗೆ ಸೇರಬೇಕಾಗಿತ್ತು) ಕಳೆದ ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಕನ್ನಡ ಸಾಹಿತ್ಯ ಚರಿತ್ರೆಗೆ ಮಹತ್ವಪೂರ್ಣವಾದ ಕೊಡುಗೆ ನೀಡಿದ, ನೀಡುತ್ತ ಬಂದಿರುವ ಸಾಹಿತಿಗಳಿವರು. ಅವರುಗಳಿಗೆ ಇನ್ನೂ ಅಧ್ಯಕ್ಷಸ್ಥಾನ ಗೌರವ ದೊರೆತಿಲ್ಲ. ದಲಿತ ಸಾಹಿತಿಗಳಲ್ಲಿ ದೇವನೂರ ಮಹಾದೇವ, ಡಾ. ಸಿದ್ಧಲಿಂಗಯ್ಯ, ಮಹಿಳೆಯರಲ್ಲಿ ವೈದೇಹಿ, ಅಲ್ಪಸಂಖ್ಯಾತರಲ್ಲಿ ರಹಮತ್ ತರೀಕೆರೆ ಮುಂತಾದ, ಮೇಲೆ ಹೆಸರಿಸಿದವರಿಗಿಂತ ಸ್ವಲ್ಪ ಕಿರಿಯ ತಲೆಮಾರಿನ ಸಾಹಿತಿಗಳು ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ ಪಡೆಯುವಂಥ ಸಾಧನೆಯ ದಾರಿಯಲ್ಲಿ ಇರುವವರು ಎಂಬುದರಲ್ಲಿ ನನಗೆ ಸಂದೇಹವಿಲ್ಲ.ಸ

ಈಗ ಸಾಹಿತ್ಯೇತರ ಮಾನವಿಕ ವಿಷಯಗಳಲ್ಲಿ ಹಾಗೂ ವಿಜ್ಞಾನ ವಿಷಯಗಳಲ್ಲಿ ಕನ್ನಡ ಸಾಹಿತ್ಯ ಸೃಷ್ಟಿ ವಿಪುಲವಾಗಿ ಆಗುತ್ತಿದೆ. ಅವುಗಳಿಗೇ ಪ್ರತ್ಯೇಕವಾದ ಒಂದೊಂದು ಇಲ್ಲವೆ ಅವೆರಡಕ್ಕೂ ಸೇರಿ ಒಂದಾದರೂ ಸಾಹಿತ್ಯ ಸಮ್ಮೇಳನ ನಡೆಯುವಂಥ ವ್ಯವಸ್ಥೆಯಾಗುವುದು ಕನ್ನಡ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ತುರ್ತು ಅಗತ್ಯವಾಗಿದೆ.

ಮೈಲಿ : ಇಂದು ಕನ್ನಡ ಸಾಹಿತ್ಯ ನಿಂತ ನೀರಾಗಿದೆಯೇ?

ನಾಯಕ್ : ಇಲ್ಲ

ಮೈಲಿ : ಆರ್ಥಿಕ ಉದಾರೀಕರಣ ಸಾಹಿತ್ಯ ರಂಗಭೂಮಿಯಂತಹ ಕ್ರಿಯಾತ್ಮಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆಯೆ?

ನಾಯಕ್ : ಸಧ್ಯಕ್ಕೆ ಮೇಲೆದ್ದು ಕಾಣಿಸುವಂಥ ಪರಿಣಾಮ ಬೀರಿದಂತಿಲ್ಲ.ಮುಂದಿನ ದಿನಗಳಲ್ಲಿ ಏನಾಗುತ್ತದೆಯೊ, ಹೇಗಾಗುತ್ತದೆಯೊ ನೋಡೋಣ.

ಮೈಲಿ : ಸಾಹಿತ್ಯ ಜೀವಂತಗೊಳಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನಾಯಕ್ : ಸಾಹಿತ್ಯ ಜೀವಂತವಾಗಿಲ್ಲ ಎಂಬ ಅರ್ಥ ಈ ಪ್ರಶ್ನೆಯಲ್ಲಿಯೇ ಇದೆ. ಈ ಗ್ರಹಿಕೆ ಸರಿಯಲ್ಲ; ಒಪ್ಪುವಂಥದಲ್ಲ.

(ಕನ್ನಡ ಪ್ರಭ ದಿನಾಂಕ ೨೪-೦೬-೨೦೦೦, (ಶನಿವಾರ)ದಂದು ಬಾಗಲಕೋಟೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಾರಂಭವಾದ ದಿನ ಪ್ರಕಟವಾದ ಸಂದರ್ಶನ)-