‘ಸ್ಥಿತಿಪ್ರಜ್ಞೆ’ಯ ಲೇಖನಗಳಲ್ಲಿ ನಾನು ವ್ಯಕ್ತಪಡಿಸಿರುವ ಅಭಿಪ್ರಾಯಗಳು, ಮಾಡಿರುವ ವಿಮರ್ಶೆ-ವ್ಯಾಖ್ಯಾನಗಳು, ತಳೆದಿರುವ ನಿಲುವುಗಳು ಸರ್ವಸಮ್ಮತ, ಸರ್ವಮಾನ್ಯ ಎಂಬ ಭ್ರಮೆ ನನಗಿಲ್ಲ. ನನ್ನ ಚಿಂತನ ಸಂಸ್ಕಾರದ, ವಿಮರ್ಶನ ವಿವೇಕದ ಮಿತಿ-ಮೇರೆಗಳಲ್ಲಿ ನನ್ನ ಚಿಂತನೆಗಳನ್ನು ಅಗತ್ಯ ಹೊಣೆಗಾರಿಕೆಯಿಂದ ಪ್ರಾಮಾಣಿಕವಾಗಿ ನಿರೂಪಿಸಲು ಪ್ರಯತ್ನಿಸಿದ್ದೇನೆ. ನನ್ನ ಅಭಿಪ್ರಾಯ, ನಿಲುವುಗಳನ್ನು ಒಪ್ಪಬಹುದೆ, ಒಪ್ಪಬೇಕೆ ಎಂಬಂಥ ಪ್ರಶ್ನೆಗಳನ್ನು ಓದುಗರು ಗಂಭೀರವಾಗಿ ಕೇಳಿಕೊಂಡು ತಮ್ಮ ತಮ್ಮ ಅಭಿಪ್ರಾಯ, ನಿಲುವುಗಳನ್ನು ಮರುಪರಿಶೀಲಿಸಿ, ಶೋಧಿಸಿ ಸ್ಪಷ್ಟಪಡಿಸಿಕೊಳ್ಳಬೇಕೆಂಬ ಒಳಒತ್ತಡವನ್ನು ಉಂಟುಮಾಡುವಷ್ಟು ನನ್ನ ಅಭಿಪ್ರಾಯ, ನಿಲುವುಗಳು ಸಮರ್ಥವಾಗಿವೆ ಎಂದಾದರೆ ಸಾಕು. ‘ಸ್ಥಿತಿಪ್ರಜ್ಞೆ’ಯ ಲೇಖನಗಳಲ್ಲಿರುವ ನನ್ನ ಬಹುಪಾಲು ಅಭಿಪ್ರಾಯ, ನಿಲುವುಗಳನ್ನು ತೆರೆದ ಮನಸ್ಸಿನ ಓದುಗರಿಗೆ, ಚಿಂತಕರಿಗೆ ಒಪ್ಪಿಗೆಯಾದಾವು ಎಂಬ ಆತ್ಮವಿಶ್ವಾಸ ಕೂಡ ನನ್ನಲಿದೆ. ಅಂಥ ಸಂವಾದ, ಚರ್ಚೆಗಳ ಬೆಳಕಿನಲ್ಲಿ ನನ್ನ ಅಭಿಪ್ರಾಯ, ನಿಲುವುಗಳನ್ನು ಮರುಪರಿಶೀಲಿಸಿ ಪುನಾರಚಿಸಿಕೊಳ್ಳುವ ಅಗತ್ಯ ಇದೆ ಎಂದು ಮನವರಿಕೆಯಾದರೆ ಹಾಗೆ ಮಾಡುವ ವಿನಯವನ್ನು ನಾನು ಕಳೆದುಕೊಳ್ಳುವುದಿಲ್ಲ. ವಿಮರ್ಶೆಯಲ್ಲಿ ವಿನಯ ಎಂಬುದು ಹೇಡಿತನ, ಕೀಳರಿಮೆ, ದೈನ್ಯ ಅಲ್ಲ; ಅದೊಂದು ಧೀರ ಮನಃಸ್ಥಿತಿ; ನಿಜದ ನೆಲೆಯನ್ನು ಹುಡುಕುವ, ಶೋಧಿಸುವ ತವಕವುಳ್ಳ ಮನಸ್ಸಿನ ಒಳಒತ್ತಡದ ಸಾತ್ವಿಕಫಲ, ಎಂಬುದು ನನ್ನ ತಿಳಿವಳಿಕೆ.

ಸಾಹಿತ್ಯ, ಸಮಾಜ, ಸಂಸ್ಕೃತಿ ಸಂಬಂಧವಾದ ಸಂವಾದ, ಚರ್ಚೆಗಳಲ್ಲಿ ನಾವು ಹುಟ್ಟಿದ, ನಮ್ಮ ಆಯ್ಕೆಯಲ್ಲದ ಜಾತಿ-ಮತಧರ್ಮಗಳ ಹಾಗೂ ನಮ್ಮ ಆಯ್ಕೆಗಳಾದ ನಿರ್ದಿಷ್ಟ ವಿಚಾರವಾದಗಳ, ಸಾಹಿತ್ಯ ಸಿದ್ಧಾಂತಗಳ ಬಗೆಗಿನ ಸಲ್ಲದ ಮೋಹವೊ. ಕರ್ಮಠನಿಷ್ಠೆಯೊ ನಮ್ಮ ನಮ್ಮ ಚಿಂತನೆ, ನಿಲುವುಗಳಿಗೆ ಪರಮಮಾನದಂಡಗಳಾಗದಂತೆ ಎಲ್ಲರೂ ಎಚ್ಚರ ವಹಿಸಬೇಕಾಗಿದೆ. ಎಲ್ಲರೂ ಕೂಡಿ ಬಾಳುವ ಮಾನವೀಯ ಅಂತಃಕರಣ ಸಂಸ್ಕೃತಿಯನ್ನು ಕಟ್ಟುವ ಆಶಯ, ಸಮಗ್ರ ಜನತೆಯನ್ನು ಕ್ಷೇಮದೃಷ್ಟಿ ಇವುಗಳನ್ನು ಪ್ರಧಾನ ಮತ್ತು ಪರಮ ಮಾಡಿಕೊಂಡು ಸಂವಾದ, ಚರ್ಚೆಗಳು ನಡೆಯುವಂತೆ ನೋಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ; ಪ್ರಜ್ಞಾವಂತರ ಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ.

ಯಾರದೇ ನಿಲುವು, ಅಭಿಪ್ರಾಯಗಳನ್ನು ಒಪ್ಪಲಾಗದಿದ್ದರೂ ಸಹಿಸುವ ಸಂಸ್ಕೃತಿ ಅತ್ಯಗತ್ಯ. ಅದು ಚಿಂತನ ಸಂಸ್ಕೃತಿಗೆ ಒತ್ತಾಸೆಯಾಗಿ ನಿಲ್ಲದಿದ್ದರೆ ಪ್ರಜಾಸತ್ಮಾತ್ಮಕ ಜನಸಂಸ್ಕೃತಿ ನಿರ್ಮಾಣದ ಆಶಯ, ಕನಸು ಭಗ್ನವಾಗಿ ‘ಫ್ಯಾಸಿಸ್ಟ್’ ಮನೋಧರ್ಮದ ಪರಿಸರ, ವಾತಾವರಣ ಆಳ್ವಿಕೆ ನಡೆಸುವಂತಾಗುತ್ತದೆ, ನಮ್ಮ ದೇಶ ಮತ್ತು ನಮ್ಮ ರಾಜ್ಯ ಇಂದು ಅಂಥ ಅಪಾಯದ ಸೀಮೆಯ ಗಡಿಯಂಚಿಗೆ ಬಂದು ನಿಂತಿವೆ. ವಿಮರ್ಶೆಯ ಬಾಯಿ ಮುಚ್ಚಿಸುವುದೆಂದರೆ ಪ್ರಜಾಪ್ರಭುತ್ವದ ಜನಸಂಸ್ಕೃತಿಯ ವಿನಾಶಕ್ಕೆ, ಪತನಕ್ಕೆ ನಾಂದಿ ಹಾಡಿದಂತೆ ಎಂಬ ಅರಿವು ಜನರಲ್ಲಿ ಹೆಚ್ಚು ಹೆಚ್ಚು ದೃಢಗೊಳ್ಳಬೇಕಾದ ಅಗತ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಇಂಥ ಕಠಿಣ ಕಾಲದಲ್ಲಿ ನನ್ನ ಕೆಲವಾದರೂ ಲೇಖನಗಳು ಗಂಭೀರ ಸಂವಾದ, ಚರ್ಚೆಗಳನ್ನು ಬೆಳೆಸುವುದಕ್ಕೆ ಕಾರಣ ಆಗುವುದಾದರೆ ನನ್ನ ಬರವಣಿಗೆಯ ಹಿಂದಿನ ಶ್ರಮ, ಶ್ರದ್ಧೆ ಸಾರ್ಥಕವಾದಂತೆ ಎಂದು ಭಾವಿಸುತ್ತೇನೆ. ವಿಮರ್ಶೆ ಪ್ರಜಾಪ್ರಭುತ್ವದ ಜೀವಧಾತು; ಔರಸ ಸಂತಾನ.

ವಿಮರ್ಶೆ ಇತರರ ‘ಅಹಂಕಾರ’ದೊಂದಿಗೆ ನಿಷ್ಠುರವಾಗಿ ಘರ್ಷಿಸಿಕೊಳ್ಳುವ ಚಿಂತನ ವ್ಯವಹಾರ ಮತ್ತು ಆ ಮೂಲಕವೇ ಫಲಿಸುವ ವಿವೇಕ. ಅದೊಂದು ನೇರ, ಧೀರ ವ್ಯವಹಾರ. ಅದಕ್ಕೆ ಒಳದಾರಿ ಎಂಬುದಿಲ್ಲ; ಇರಬಾರದು. ಹಾಗೆಂದು ನಮ್ಮ ಸ್ವಪ್ರತಿಷ್ಠೆಯನ್ನೊ, ‘ಅಹಂಕಾರ’ವನ್ನೊ ಮೆರೆಸುವುದಕ್ಕೆ ಅಥವಾ ಯಾರನ್ನೊ ಮೆಚ್ಚಿಸುವುದಕ್ಕೆ, ಓಲೈಸುವುದಕ್ಕೆ ವಿಮರ್ಶೆ, ವಿಚಾರಗಳನ್ನು ಉಪಕರಣಗಳಾಗಿ ಮಾಡಿಕೊಳ್ಳುವ ಅಲ್ಪತನಕ್ಕೆ, ದರ್ಪ-ದಾರ್ಷ್ಟ್ಯಕ್ಕೆ, ಅಪರುಚಿಗೆ, ಇಳಿಯದಂತೆ ನಮ್ಮ ನಮ್ಮ ಸಹೃದಯ ಸಂವೇದನೆ, ವಿಮರ್ಶನ ಪ್ರಜ್ಞೆ, ಆತ್ಮಸಾಕ್ಷಿ ನಮ್ಮನ್ನು ಕಾಪಾಡುವಂತೆ ಎಲ್ಲರೂ ಎಚ್ಚರವಹಿಸಬೇಕಾಗಿದೆ.

ಋಣಸಿರಿ

‘ಸ್ಥಿತಿಪ್ರಜ್ಞೆ’ಯನ್ನು ನನ್ನ ಮತ್ತು ನನ್ನ ಹೆಂಡತಿ ಮೀರಾಳ ಜೀವನ ಸಂತೋಷವನ್ನು ಹೆಚ್ಚಿಸಿದ ಯಮುನಾಬಾಯಿ, ಮದನ, ಕೀರ್ತಿ, ಚಕಿತ ಅವರಿಗೆ ಅರ್ಪಿಸಿದ್ದೇನೆ. ಯಮುನಾಬಾಯಿ ನನ್ನ ಅಳಿಯ ಮದನನ ತಾಯಿ. ಅವಳ ಮಕ್ಕಳೆಲ್ಲ ‘ಆಯಿ’ (ತಾಯಿ) ಎಂದು ಕರೆಯುವಂತೆ ನನ್ನ ಮಗಳು ಕೀರ್ತಿ ಕೂಡ ಅವಳನ್ನು ಅವಳ ಇಚ್ಛೆಯಂತೆ ‘ಆಯಿ’ ಎಂದೇ ಕರೆಯುತ್ತ ಬಂದಿದ್ದಾಳೆ. ಹಾಗೆ ಕರೆಸಿಕೊಂಡದ್ದು ಸಾರ್ಥಕವಾಗುವಂತೆ ಕಳೆದ ಹದಿನೆಂಟು ವರ್ಷಗಳಿಂದ ಅವಳು ನನ್ನ ಮಗಳನ್ನು ನೋಡಿಕೊಂಡು, ಅವಳೊಡನೆ ನಡೆದುಕೊಂಡು ಬಂದಿದ್ದಾಳೆ. ನನ್ನ ಅಳಿಯ ಮದನ ಕೂಡ ಹೊಣೆಯರಿತ ಸ್ವಂತ ಮಗನಂತೆ ನನ್ನ ಮತ್ತು ನನ್ನ ಹೆಂಡತಿ ಮೀರಾಳ ಯೋಗಕ್ಷೇಮವನ್ನು ಕೀರ್ತಿಯಂತೆಯೇ ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಂಡು ಬರುತ್ತಿದ್ದಾನೆ.

ಯಮುನಾಬಾಯಿಯನ್ನು ಪರಿಚಿತರೆಲ್ಲ ‘ಬಾಯಿ’ ಎಂದು ಕರೆಯುವುದು ರೂಢಿ. ನಾನು ಮೊದಲಿನಿಂದಲೂ ಹಾಗೆಯೇ ಕರೆಯುತ್ತ ಬಂದಿದ್ದೇನೆ. ನನ್ನ ಹೆಂಡತಿ ಮೀರಾ ‘ಬಾಯಕ್ಕ’ ಎಂದು ಕರೆಯುತ್ತಾಳೆ. ನನ್ನೊಡನೆ ಒಡಹುಟ್ಟಿದ ತಂಗಿಯಂತೆ, ಮೀರಾಳೊಡನೆ ತಿಳಿವಳಿಕೆಯುಳ್ಳ ಅಕ್ಕನಂತೆ ಮಮತೆ, ವಿವೇಕದಿಂದ ನಡೆದುಕೊಳ್ಳುತ್ತ ಬಂದಿರುವ ಬಾಯಿಯ ತ್ಯಾಗದ ಭಾಗವೂ ನನ್ನ ಮತ್ತು ನನ್ನ ಹೆಂಡತಿಯ ಜೀವನಸಂತೋಷವನ್ನು ಹೆಚ್ಚಿಸಿದೆ. ಇದು ಎಂದೂ ನಾವು ಪೂರ್ತಿಯಾಗಿ ತೀರಿಸಲಾಗದ ಋಣ. ಈ ಪುಸ್ತಕದ ಅರ್ಪಣೆ ನಮ್ಮ ಪ್ರೀತಿ, ಕೃತಜ್ಞತೆ, ಋಣಪ್ರಜ್ಞೆಯ ಸಾಂಕೇತಿಕ ಅಭಿವ್ಯಕ್ತಿ ಅಷ್ಟೆ. ಚಕಿತ ನಮ್ಮ ಮೊಮ್ಮಗಳು, ಮೈಸೂರಿನಲ್ಲಿಯೇ ಹುಟ್ಟಿ ನಮ್ಮೊಡನೆಯೆ ಬೆಳೆಯುತ್ತ, ನಮ್ಮ ಜೀವನ ಸಂತೋಷವನ್ನು ಹೆಚ್ಚಿಸುತ್ತಲೇ ಬಂದಿರುವವಳು. ನನ್ನ ಹಿರಿತನದ ಬೀಗುಮಾನವನ್ನು ಲೆಕ್ಕಿಸದೆ, ‘ಜಿಎಚ್’ ಎಂದೇ ಕರೆಯುತ್ತ, ಸಲುಗೆಯನ್ನು ಸೂರೆಗೊಂಡು ನನ್ನನ್ನೇ ಪ್ರೀತಿಯಿಂದ ಕಿಚಾಯಿಸುತ್ತ ಬೀಗುವ ಅವಳ ಸ್ವಾತಂತ್ರ್ಯ ನಮ್ಮ ಮನೆಯ ಜೀವಂತಿಕೆಯ ಮುಖ್ಯ ಭಾಗವಾಗಿದೆ.

ಈಗ ‘ರಾಷ್ಟ್ರಕವಿ’ಯಾಗಿರುವ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಜಿ.ಎಸ್.ಎಸ್. ವಿಶ್ವಸ್ಥ ಮಂಡಳಿ ೨೦೦೪ರಲ್ಲಿ ಕನ್ನಡದ ಶ್ರೇಷ್ಟ ವಿಮರ್ಶಕರಿಗೆ ನೀಡುವ ಪ್ರಶಸ್ತಿಯನ್ನು ನನಗೆ ನೀಡಿತ್ತು. ಫೆಬ್ರವರಿ ೭ರಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಕೃತಜ್ಞತೆ ಸೂಚಿಸುವ ಭಾಷಣ ಮಾಡುತ್ತಿರುವಾಗಲೆ ತೀರಾ ಅನಿರೀಕ್ಷಿತವಾಗಿ ಹೃದಯದ ತೊಂದರೆ ಕಾಣಿಸಿಕೊಂಡಿತು. ನೇರ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗಕ್ಕೇ ಹೋಗುವಂತಾಗಿ ಅಲ್ಲಿ ಬೆಂಗಳೂರಿನಲ್ಲಿಯೇ ‘ಎಂಜಿಯೋ ಪ್ಲಾಸ್ಟಿ’ ಚಿಕಿತ್ಸೆಯೂ ಆಯಿತು. ಕಂಟಕದಿಂದ ಪಾರಾಗಿ ಆರೋಗ್ಯ ಸುಸ್ಥಿತಿಯಲ್ಲಿದೆ ಎಂದುಕೊಳ್ಳುತ್ತಿರುವಾಗಲೇ ೨೦೦೫ರ ಏಪ್ರಿಲ್ ೧೬ರ ಮಧ್ಯರಾತ್ರಿ ಮತ್ತೆ ಹೃದಯಾಘಾತವಾಯಿತು. ಅಂಥ ಆವೇಳೆಯಲ್ಲಿ ಮದನ ಮತ್ತು ಕೀರ್ತಿ ಸ್ವಲ್ಪವೂ ತಡಮಾಡದೆ ಮೈಸೂರಿನ ವಿಕ್ರಮ ಆಸ್ಪತ್ರೆಗೆ ಸೇರಿಸಿ ‘ಬೈಪಾಸ್ ಸರ್ಜರಿ’ ಯನ್ನೂ ಮಾಡಿಸಿ ನನ್ನನ್ನು ಉಳಿಸಿಕೊಂಡರು. ಇಂಥ ಕಠಿಣ ಸಂದರ್ಭಗಳಲ್ಲಿ ನನ್ನನ್ನು ಉಳಿಸಿದ ವೈದ್ಯರಿಗೆ, ನಾನಾ ರೀತಿಯಲ್ಲಿ ನೆರವಿಗೆ ಬಂದ ಆತ್ಮೀಯರಿಗೆ ನಾನು ಋಣಿಯಾಗಿದ್ದೇನೆ. ಈ ಪುಸ್ತಕವನ್ನು ಪ್ರಕಟಿಸುತ್ತಿರುವ ಸಂದರ್ಭದಲ್ಲಿ ಇಲ್ಲಿ ಹೆಸರು ಹೇಳಿ ಮುಗಿಸಲಾರದಷ್ಟು ಸಂಖ್ಯೆಯ ಆ ಆತ್ಮೀಯರನ್ನು, ಹಿತೈಷಿಗಳನ್ನು ಪ್ರೀತಿಯಿಂದ ನೆನೆಯುತ್ತೇನೆ. ನನ್ನ ಆ ಕಷ್ಟಕಾಲದಲ್ಲಿ ನ್ಯೂಯಾರ್ಕಿನಲ್ಲಿರುವ ನನ್ನ ದೊಡ್ಡಪ್ಪನ ಮಗ ವಾಸುದೇವ ನಾಯಕ, ಸ್ಯಾನೋಸೆಯಲ್ಲಿರುವ ಅಸಿತಾ ಪ್ರಭುಶಂಕರ, ಮೈಸೂರಿನ ಸಮತಾ ವೇದಿಕೆಯ ಡಾ. ಇ. ರತಿರಾವ್ ತಾವಾಗಿ ಮುಂದೆ ಬಂದು ನೀಡಿದ ಸಹಾಯವನ್ನು ಪ್ರತ್ಯೇಕವಾಗಿ ನೆನೆಯದಿರಲಾರೆ.

ಈ ಕಂಟಕಗಳ ನಡುವಿನ ಮತ್ತು ಆಮೇಲಿನ ಅವಧಿಯಲ್ಲಿ, ನಾನು ಮಾಡಬೇಕೆಂದುಕೊಂಡಿದ್ದ ಬರವಣಿಗೆಗಳಲ್ಲಿ ಒಂದಷ್ಟನ್ನು ಮಾಡಿದ್ದೇನೆ. ಈ ‘ಸ್ಥಿತಿಪ್ರಜ್ಞೆ’ ಪುಸ್ತಕದಲ್ಲಿಯೂ ಆ ಕೆಲವು ಮುಖ್ಯ ಲೇಖನಗಳಿವೆ, ಭಾರತ-ಚೀಣಾ ಸಾಂಸ್ಕೃತಿಕ ವಿನಿಮಯ ಕಾರ್ಯಯೋಜನೆಯಡಿಯಲ್ಲಿ ಚೀಣಾದೇಶದ ಲೇಖಕರ ಸಂಘದ ಆಹ್ವಾನದ ಮೇರೆಗೆ ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ ನಮ್ಮ ದೇಶದ ಹತ್ತು ಜನ ಸಾಹಿತಿಗಳ ತಂಡವನ್ನು ಕಳೆದ ಅಕ್ಟೋಬರ‍್ನಲ್ಲಿ ಚೀಣಾ ದೇಶಕ್ಕೆ ಕಳಿಸಿತ್ತು. ಆ ತಂಡದಲ್ಲಿ ನಾನೂ ಒಬ್ಬ ಸದಸ್ಯನಾಗಿ ಆ ಪ್ರವಾಸಮಾಡಿ ಬಂದಿದ್ದೇನೆ. ಅನಿರೀಕ್ಷಿತವಾಗಿ ಇಂಥ ಅಪರೂಪದ ಅವಕಾಶವನ್ನು ಅಯಾಚಿತವಾಗಿ ಕಲ್ಪಿಸಿಕೊಟ್ಟ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಿಗೆ, ಕಾರ್ಯದರ್ಶಿ ಶ್ರೀ ಅಗ್ರಹಾರ ಕೃಷ್ಣಮೂರ್ತಿಯವರಿಗೆ ನಾನು ಕೃತಜ್ಞನಾಗಿದ್ದೇನೆ.

ಚೀಣಾ ಪ್ರವಾಸದ ಆ ಅವಕಾಶವನ್ನು ಬಳಸಿಕೊಳ್ಳುವುದಕ್ಕೆ ನನ್ನ ಆರೋಗ್ಯ ಸುಸ್ಥಿತಿಯಲ್ಲಿದೆಯೆ ಎಂಬ ಆತಂಕ, ಯೋಚನೆಯಲ್ಲಿದ್ದ ನಾನು ಪ್ರವಾಸ ತಂಡದ ಸದಸ್ಯನಾಗಿರಲು ಒಪ್ಪಿಗೆ ಸೂಚಿಸುವುದಕ್ಕೆ ಮೀನಮೇಷ ಎಣಿಸುತ್ತಿದ್ದೆ. ನಾನು ಆ ಆಹ್ವಾನವನ್ನು ಒಪ್ಪಿಕೊಂಡು ಪ್ರವಾಸಮಾಡಿ ಬರುವುದಕ್ಕೆ ಹಾಗೂ ‘ಎಂಜಿಯೋ ಪ್ಲಾಸ್ಟಿ’ ‘ಬೈಪಾಸ್ ಸರ್ಜರಿ’ ಗಳಾದ ಮೇಲಿನ ಕಾಲದಲ್ಲಿ ಬರವಣಿಗೆಗಳನ್ನು ನಾನು ಮಾಡುವುದಕ್ಕೆ, ಕುವೆಂಪುನಗರದ ಶ್ರೀಹರಿ’ ಡಯಾಬಿಟಿಕ್ ಸೆಂಟರ್ ಮತ್ತು ಲೆಬಾರೆಟರಿಯ, ಕಳೆದ ಮೂರು ವರ್ಷಗಳಿಂದ ನನಗೆ ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡುತ್ತ ಬಂದಿರುವ, ಡಾ. ವಿ. ಲಕ್ಷ್ಮೀನಾರಾಯಣ ಅವರು ನೀಡಿದ ಧೈರ್ಯ ಬಲುಮಟ್ಟಿಗೆ ಕಾರಣ ಎಂಬುದನ್ನು ಇಲ್ಲಿ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ.

ಡಾ. ಲಕ್ಷ್ಮೀನಾರಾಯಣ ಅವರು ಕುವೆಂಪು ಅವರ ಆರೋಗ್ಯ ಸ್ಥಿತಿಯನ್ನು ನೋಡಿಕೊಳ್ಳುತ್ತಿದ್ದವರು. ರಾಷ್ಟ್ರಕವಿ ಕುವೆಂಪು ಅವರು ಕೊನೆಗಾಲದಲ್ಲಿ ಅವರ ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯ ಹಿರೇಕೊಡಿಗೆ ನೋಡಬೇಕೆಂಬ ಆಸೆ ವ್ಯಕ್ತಪಡಿಸಿದಾಗ ಅವರನ್ನು ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ಮಾಡಿತ್ತು. ಆ ವಿಶೇಷ ಸಂದರ್ಭದಲ್ಲಿ ಕುವೆಂಪು ಅವರ ಯೋಗಕ್ಷೇಮವನ್ನು ನೋಡಿಕೊಳ್ಳಲು ಅವರ ಜೊತೆಗಿದ್ದ ವೈದ್ಯರು ಡಾ. ಲಕ್ಷ್ಮೀನಾರಾಯಣ ಅವರು, ಅವರು ಒಂದು ಕಾಲದಲ್ಲಿ ನನ್ನ ವಿದ್ಯಾರ್ಥಿಯಾಗಿದ್ದರು ಎಂಬ ನೆನಪೂ ಇಲ್ಲದ ನಾನು ಬೆಂಗಳೂರಿನ ಸಾಗರ ಅಪೊಲೊ ಆಸ್ಪತ್ರೆಯಲ್ಲಿ ‘ಎಂಜಿಯೋ ಪ್ಲಾಸ್ಟಿ’ ಚಿಕಿತ್ಸೆ ನೀಡಿದ ಡಾ. ಖನೋಲ್ಕರ್ ಅವರ ನಿರ್ದೇಶನದಂತೆ ಮುಂದಿನ ನನ್ನ ಆರೋಗ್ಯ ಸ್ಥಿತಿಯ ಪರೀಕ್ಷೆ, ಪರಿಶೀಲನೆಗೆಂದು ಮೈಸೂರಿನ ಡಾ. ಲಕ್ಷ್ಮೀನಾರಾಯಣ ಅವರಲ್ಲಿಗೆ ಹೋಗಿದ್ದೆ. ಅಲ್ಲಿಂದ ಹೊರಡುವ ಮೊದಲು, ಕೆಲವು ಪರೀಕ್ಷೆಗಳಾಗಬೇಕೆಂದು ಅವರ ಲೆಬಾರೆಟರಿಗೆ ಬರೆದುಕೊಡುತ್ತಿದ್ದ ಪತ್ರದ ಕೆಳಗೆ ಕೆಂಪು ಶಾಯಿಯಿಂದ ‘Free’ ಎಂದು ಅವರು ಬರೆದು ಸಹಿಹಾಕಿದ್ದನ್ನು ನೋಡಿದೆ. ನಾನು ‘ಡಾಕ್ಟರ್, ಫ್ರೀ ಬೇಡ, ನಾನು ಚಿಕಿತ್ಸೆಯ ಫೀಸ್ ಕೊಡಬಲ್ಲೆ’ ಎಂದಾಗ ಕುಳಿತಲ್ಲಿಂದ ಎದ್ದು ನಿಂತು, ‘ಸsರ್, ನಾನು ನಿಮ್ಮ ವಿದ್ಯಾರ್ಥಿ, ನಿಮ್ಮ ಆರೋಗ್ಯ ಸ್ಥಿತಿಯ ಪರೀಕ್ಷೆ, ಪರಿಶೀಲನೆ ಮಾಡಿಸಿಕೊಳ್ಳಲು ಯಾವ ಸಂಕೋಚವು ಇಲ್ಲದೆ ಬಂದು ಹೋಗುತ್ತಿರಿ. I Serve you, Sir’ ಎಂದು ಅವರು ಹೇಳಿದ ಕ್ಷಣವನ್ನು ನಾನೆಂದೂ ಮರೆಯಲಾರೆ. ನನ್ನ ವಿದ್ಯಾರ್ಥಿ ನನ್ನೆದುರು ನನ್ನ ಗುರುವಾಗಿ ಬೆಳೆದು ನಿಂತಂಥ ಅನುಭವವಾಯಿತು. ಆ ಕ್ಷಣದಲ್ಲಿ ನಾನು ತೀರ ಭಾವುಕನಾಗಿದ್ದೆ; ಕಣ್ಣುಗಳಲ್ಲಿ ಹನಿಯೊಡದಿತ್ತು.

ಹಾಗೆಯೇ, ನನಗೆ ಬೈಪಾಸ್ ಸರ್ಜರಿ ಆಗಬೇಕಾಗಿ ಬಂದಾಗ ಅಂತಾರಾಷ್ಟ್ರೀಯ ವೈದ್ಯರ ಸಮ್ಮೇಳನಕ್ಕೆ, ಫ್ರಾನ್ಸ್ ದೇಶಕ್ಕೆ ಡಾ. ಲಕ್ಷ್ಮೀನಾರಾಯಣ ಅವರು ಹೋಗುವ ಸಿದ್ಧತೆಯಲ್ಲಿದ್ದರು. ಇದ್ದ ಕಿರು ಅವಧಿಯಲ್ಲಿಯೇ, ನನಗೆ ಬೈಪಾಸ್ ಸರ್ಜರಿ ಮಾಡಲಿರುವ ಮೈಸೂರಿನ ವಿಕ್ರಮ ಆಸ್ಪತ್ರೆಯ ವೈದ್ಯರುಗಳಾದ ಡಾ. ಎಚ್.ಪಿ.  ಗುರುಪ್ರಸಾದ್, ಡಾ. ಉಪೇಂದ್ರ ಶೆಣೈ, ಡಾ. ನಾಗೇಂದ್ರ ಪ್ರಕಾಶ್, ಡಾ. ಅರುಣ್ ಶ್ರೀನಿವಾಸ್ ಅವರನ್ನು ಕಂಡು ಚರ್ಚಿಸಿ ಆ ಬಗ್ಗೆ ಅಗತ್ಯವಾದದ್ದನ್ನು ಮಾಡಿ, ನಾನು ಇದ್ದ ಹಾಸಿಗೆಗೂ ಬಂದು ಆವರೆಗಿನ ವೈದ್ಯಕೀಯ ರಿಪೋರ್ಟ್‌ಗಳನ್ನು ಪರಿಶೀಲಿಸಿ ಧೈರ್ಯ ಹೇಳಿ ಹೋದರು. ಅವರು ಫ್ರಾನ್ಸ್‌ನಿಂದ ತಿರುಗಿ ಬಂದವರೇ ನನ್ನ ಆರೋಗ್ಯಸ್ಥಿತಿಯ ಬಗ್ಗೆ ವಿಚಾರಿಸಿಕೊಂಡು ಆಸ್ಪತ್ರೆಗೂ ಬಂದರು. ಅವರ ವೃತ್ತಿನಿಷ್ಠೆ, ಸಜ್ಜನಿಕೆ, ಔದಾರ್ಯ, ಗುರುಗೌರವಬುದ್ಧಿ ಕಂಡು ನಾನು ವಿಸ್ಮಯ, ಧನ್ಯತೆಯ ಆನಂದ ಅನುಭವಿಸುತ್ತಿದ್ದೇನೆ.

ದೇಹದ ತೋಲನಸ್ಥೈರ್ಯ ಕುಂದುತ್ತಿರುವಂಥ ಅನುಭವವಾಗುತ್ತಿದ್ದ ಅಪರೂಪದ ಸಮಸ್ಯೆಯನ್ನು ಕೆಲವು ವರ್ಷಗಳ ಹಿಂದೆ ನಾನು ತೀವ್ರ ಆತಂಕದಿಂದ ದಶಕಕ್ಕಿಂತ ಹೆಚ್ಚು ಕಾಲ ಎದುರಿಸುತ್ತಲೇ ಇದ್ದೆ. ಕ್ರಮೇಣ ತರಗತಿಯಲ್ಲಿ ನಿಂತುಕೊಂಡು ಪಾಠಮಾಡುವುದಕ್ಕೂ ತೊಂದರೆಯಾಗತೊಡಗಿತು. ಕುಳಿತುಕೊಂಡು ಪಾಠಮಾಡುವಾಗಲೂ ಸ್ವಸ್ಥ ಅನಿಸಿದ ಹಾಗೆ ಅನುಭವವಾಗುವಂಥ ಸ್ಥಿತಿಯೂ ಉಂಟಾಗಿತ್ತು. ಕರ್ನಾಟಕದ ಆಲೋಪತಿ, ಹೋಮಿಯೋಪತಿ ವೈದ್ಯಕೀಯ ಕ್ಷೇತ್ರದ, ಮನೋವೈಜ್ಞಾನಿಕ ಚಿಕಿತ್ಸೆ ಕ್ಷೇತ್ರದ ಎಷ್ಟೋ ಪ್ರಖ್ಯಾತ ವೈದ್ಯರನ್ನು ಒಬ್ಬರಾದಮೇಲೆ ಒಬ್ಬರಂತೆ ಕಂಡೂ ಕಂಡೂ ಗುಣ, ಪರಿಹಾರ ಕಾಣದೆ ತೊಳಲಾಡುತ್ತಿದ್ದೆ. ಅವರೆಲ್ಲ ಸಮಸ್ಯೆಯ ಕಾರಣ ಮತ್ತು ಚಿಕಿತ್ಸೆಯ ಬಗ್ಗೆ ಖಚಿತ ತೀರ್ಮಾನಕ್ಕೆ ಬರಲಾಗದೆ ನನ್ನ ಮೇಲೆ ಪ್ರಯೋಗಗಳನ್ನು ಮಾಡುತ್ತಲೇ ಇದ್ದರು. ಅಂಥ ಕಾಲದಲ್ಲಿ ೧೯೮೩ರಲ್ಲಿ ವಿಸ್ಕಾನ್‌ಸಿನ್ ವಿಶ್ವವಿದ್ಯಾಲಯದ ಮ್ಯಾಡಿಸನ್‌ನಲ್ಲಿ ನಡೆದ ದಕ್ಷಿಣ ಭಾರತೀಯ ಅಧ್ಯಯನದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಲು ಅನಿರೀಕ್ಷಿತವಾಗಿ ನನಗೆ ಆಹ್ವಾನ ಬಂದಿತು. ಶಿಕಾಗೊ ವಿಶ್ವವಿದ್ಯಾಲಯದ ಜಾಗತಿಕ ಖ್ಯಾತಿಯ ವಿದ್ವಾಂಸ ಡಾ. ಎ.ಕೆ. ರಾಮಾನುಜನ್ ಅವರು ನನ್ನ ಹೆಸರನ್ನು ಸೂಚಿಸಿದ್ದರೆಂದು ತಿಳಿಯಿತು; ಅಭಿಮಾನಪಟ್ಟುಕೊಂಡೆ. ಆದರೆ ಆರೋಗ್ಯದ ಆ ಸ್ಥಿತಿಯಲ್ಲಿ ಆಹ್ವಾನ ಒಪ್ಪಿ ಹೋಗುವುದಕ್ಕೆ ನನಗೆ ಧೈರ್ಯ ಸಾಲಲಿಲ್ಲ. ನನ್ನ ಸಮಸ್ಯೆಯೂ ತೀವ್ರ ಸ್ವರೂಪದಲ್ಲಿ ಕಾಡುತ್ತಿತ್ತು.

ನನಗೆ ಬಂದ ಆಹ್ವಾನ ಮತ್ತು ನನ್ನ ಸಮಸ್ಯೆ ಬಗ್ಗೆ ತಿಳಿಸಿದಾಗ ಆ ಆಹ್ವಾನವನ್ನು ಒಪ್ಪಿ ನಾನು ಅಮೆರಿಕಕ್ಕೆ ಬರಬೇಕೆಂದೂ ಅಲ್ಲಿ ವೈದ್ಯಕೀಯ ಪರೀಕ್ಷೆ, ಪರಿಶೀಲನೆಗೆ ವ್ಯವಸ್ಥೆ ಮಾಡುವುದಾಗಿ ಹೇಳಿ, ಒಂದು ಕಾಲದಲ್ಲಿ ನನ್ನ ವಿದ್ಯಾರ್ಥಿಯಾಗಿದ್ದ ಡಾ. ಟಿ.ಎನ್. ಕೃಷ್ಣರಾಜು ಅವರು, ನೂಯಾರ್ಕ್‌ನಲ್ಲಿರುವ ನನ್ನ ದೊಡ್ಡಪ್ಪನ ಮಗ ವಾಸುದೇವಣ್ಣ, ಅವನ ಹೆಂಡತಿ ಚೈತನ್ಯ ಮತ್ತು ಫ್ರಸ್ನೋದಲ್ಲಿರುವ, ‘ಗತಿಸ್ಥಿತಿ’ ಕಾದಂಬರಿ ಖ್ಯಾತಿಯ ನನ್ನ ಆತ್ಮೀಯ ಮಿತ್ರ ಡಾ. ಎಂ.ಎನ್. ಹೆಗಡೆ (ಗಿರಿ), ಪ್ರೇಮ ತಿಳಿಸಿದರು. ಇಲಿನೊಯ್ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಡಾ. ಕೃಷ್ಣರಾಜು ಅವರು ಚಿಕಿತ್ಸೆಗಾಗಿ ನನ್ನಿಂದ ಒಂದು ಬಿಡಿಕಾಸನ್ನೂ ಖರ್ಚು ಮಾಡಿಸದೆ, ಮೂಲತಃ ಬಿ.ಎಂ. ಶ್ರೀಯವರ ಊರಿನವರಾದ ಡಾ. ಶ್ರೀನಾಥ್ ಎನ್. ಬೆಳ್ಳೂರ್ ಅವರೂ ಸೇರಿದಂತೆ ಅವರ ಸ್ನೇಹಿತ ವರ್ಗದ ಪರಿಣತ ವೈದ್ಯರ ಹಾಗೂ ಹಿಂದೆ ಅವರು ಸೇವೆ ಮಾಡಿದ್ದ ಆಸ್ಪತ್ರೆಯೊಂದರ ನೆರವನ್ನೂ ಪಡೆದು ಅತ್ಯಾಧುನಿಕ ಉಪಕರಣ, ವಿಧಾನಗಳ ಮೂಲಕ, ಪರಿಶೀಲನೆ ನಡೆಸಿ ನನ್ನನ್ನು ಕಾಡುತ್ತಿದ್ದದ್ದು ಲಘು ತೀವ್ರತೆಯ ‘ಮಲ್ಟಿಪಲ್ ಸ್ಕ್ಲೆರಾಸಿಸ್’ ಎಂದು ತೀರ್ಮಾನಕ್ಕೆ ಬಂದು ಔಷಧದ, ವೈದ್ಯರ, ಮನೋವೈಜ್ಞಾನಿಕ ಚಿಕಿತ್ಸೆ ನೀಡುವ ಪರಿಣತರ ಅವಶ್ಯಕತೆಯೇ ಇಲ್ಲವೆಂದು ತಿಳಿಸಿ ಅನುಸರಿಸಬೇಕಾದ ಕೆಲವು ಸಲಹೆಗಳನ್ನು ನೀಡಿ ನನ್ನನ್ನು ಕಾಡುತ್ತಿದ್ದ ಆ ಸಮಸ್ಯೆಯಿಂದ ಕ್ರಮೇಣ ನಾನು ಮುಕ್ತನಾಗುವುದಕ್ಕೆ, ಆ ಬಗ್ಗೆ ಇದ್ದ ಅಳುಕು ಅಂಜಿಕೆಯಿಂದ ಬಿಡುಗಡೆ ಪಡೆಯುವುದಕ್ಕೆ ಕಾರಣರಾಗಿದ್ದರು.

ಡಾ. ಟಿ.ಎನ್. ಕೃಷ್ಣರಾಜು, ಡಾ. ವಿ. ಲಕ್ಷ್ಮೀನಾರಾಯಣ ಇಬ್ಬರೂ ಯುವರಾಜ ಕಾಲೇಜಿನಲ್ಲಿ ನನ್ನ ವಿದ್ಯಾರ್ಥಿಗಳಾಗಿದ್ದವರು. ಅವರ ವಿದ್ಯಾರ್ಥಿ ದೆಸೆಯಿಂದಲೂ ಡಾ. ಕೃಷ್ಣರಾಜು ನಮ್ಮ ಅತ್ಮೀಯರಾಗಿರುವವರು. ಅವರು ಕವಿ ಗೋಪಾಲಕೃಷ್ಣ ಅಡಿಗರ ಅಳಿಯ; ಕನ್ನಡದ ಲೇಖಕರು, ಸಣ್ಣ ಕಥೆಗಾರರು, ಆ ನನ್ನ ವಿದ್ಯಾರ್ಥಿಗಳಿಂದ ಇಂಥ ಗುರುಗೌರವಕ್ಕೆ ಪಾತ್ರನಾದ ನನ್ನ ಅರ್ಹತೆ ಏನೊ, ಎಷ್ಟೊ! ಅವರ ಔದಾರ್ಯ, ಅಂತಃಕರಣ, ಉಪಕಾರಬುದ್ಧಿಯ ಋಣವನ್ನು ನಾನು ತೀರಿಸುವುದು ಹೇಗೊ! ಆದರೆ ಅದನ್ನು ಕೃತಜ್ಞತೆಯಿಂದ ನೆನೆಯದಿರುವುದಾದರೂ ಹೇಗೆ? ರೋಗಿಗಳ ಆರೋಗ್ಯವನ್ನು ಮಾತ್ರವಲ್ಲ ಸಂಸ್ಕೃತಿಯ ಆರೋಗ್ಯವನ್ನೂ ತಮ್ಮ ನಡವಳಿಕೆಯಿಂದ ಅವರವರ ವೃತ್ತಿಕ್ಷೇತ್ರಗಳಲ್ಲಿ ಕಾಪಾಡುವ ಇಂಥ ಸದ್ದುಮಾಡದ ಸಂಸ್ಕಾರವಂತ ಸಜ್ಜನರು ಅಲ್ಲಿ ಇಲ್ಲಿಯಾದರೂ ಇದ್ದಾರೆ. ಅದನ್ನು ಗುರುತಿಸಿ ಹೇಳಬೇಕಾದ ಅಗತ್ಯ ಇಂದು ಎಂದಿಗಿಂತ ಹೆಚ್ಚಾಗಿದೆ. ನನ್ನ ಬದುಕಿನ ಅತ್ಯಂತ ಕಠಿಣ ಕಾಲಗಳಲ್ಲಿ ನನ್ನ ಆರೋಗ್ಯವನ್ನು ಸುಸ್ಥಿತಿಗೆ ತರುವುದರ ಮೂಲಕ, ನಾನು ಈವರೆಗೆ ಮಾಡಿರುವ ಬಹುಪಾಲು ಬರವಣಿಗೆ ಸಾಧ್ಯವಾಗುವುದಕ್ಕೆ ಪರೋಕ್ಷವಾಗಿ ಕಾರಣರಾದ ಇಂಥ ಶಿಷ್ಯರನ್ನು ಪ್ರೀತಿಯಿಂದ ನೆನೆದು ಕೃತಜ್ಞತೆ ಹೇಳುತ್ತೇನೆ. ಶಿಷ್ಯರಿಗೆ ಮಣಿಯಬೇಕೆಂಬ ಪ್ರೇರಣೆ ಗುರುವಿಗೇ ಉಂಟಾಗುವುದು ಗುರುತನದ ಸಾರ್ಥಕತೆ, ಧನ್ಯತೆ. ಆ ಅನುಭವದ ರುಚಿ ಅನನ್ಯ. ಅಂಥ ನನ್ನ ವಿದ್ಯಾರ್ಥಿಗಳು ಬೇರೆ ಬೇರೆ ವೃತ್ತಿ ಕ್ಷೇತ್ರಗಳಲ್ಲಿಯೂ ಇದ್ದಾರೆ. ನಾನು ಪಡೆದ ಬಲುದೊಡ್ಡ ಸಂಪತ್ತು ನನ್ನ ವಿದ್ಯಾರ್ಥಿಗಳು. ಅವರ ಪ್ರೀತಿಯ ಋಣ ದೊಡ್ಡದು. ಅವರೆಲ್ಲರನ್ನೂ ಈ ಸಂದರ್ಭದಲ್ಲಿ ಪ್ರೀತಿಯಿಂದ, ಕೃತಜ್ಞತೆಯಿಂದ ನೆನೆಯುತ್ತೇನೆ. ನನ್ನ ಬದುಕು ಸಾರ್ಥಕ ಎಂಬ ಭಾವ ಮನಸ್ಸನ್ನು ತುಂಬುವಂತೆ ನನ್ನ ಕಣ್ಣೆದುರೇ ತಾನೂ ಬೆಳೆದು, ನನ್ನನ್ನೂ ಬೆಳೆಸಿದ ನನ್ನ ಹೆಂಡತಿ ಮೀರಾಳ ಋಣಸಿರಿಗೆ ಕೃತಜ್ಞತೆ ಸೂಚಿಸುತ್ತೇನೆ.

ಸುವರ್ಣ ಕರ್ನಾಟಕದ ಈ ವರ್ಷ ಕನ್ನಡ ವಿಶ್ವವಿದ್ಯಾನಿಲಯವು ‘ಕನ್ನಡನಾಡಿಗೆ ಅಪಾರ ಕೊಡುಗೆಗಳನ್ನು ಕೊಟ್ಟಿರುವ ಹಿರಿಯರ ಪುಸ್ತಕವನ್ನು ಪ್ರಕಟಿಸುವ ಯೋಜನೆ’ಯ ಅಡಿಯಲ್ಲಿ ನನ್ನ ಈ ‘ಸ್ಥಿತಿಪ್ರಜ್ಞೆ’ಯನ್ನೂ ಪ್ರಕಟಿಸುತ್ತಿದೆ. ‘ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿಶಿಷ್ಟ ಗ್ರಂಥಗಳನ್ನು ರಚಿಸಿ ಈ ನಾಡಿನ ಬೌದ್ಧಿಕ ಶ್ರೀಮಂತಿಕೆಗೆ ಕಾರಣರಾದ’ವರಲ್ಲಿ ನನ್ನನ್ನೂ ಒಬ್ಬನಾಗಿ ಪರಿಗಣಿಸಿ, ಯಾವುದೇ ರೀತಿಯ ಪುಟಮಿತಿ ನಿರ್ಬಂಧವನ್ನು ನಾನು ಹಾಕಿಕೊಳ್ಳಬೇಕಾಗಿಲ್ಲವೆಂದೂ ಕನ್ನಡ ವಿಶ್ವವಿದ್ಯಾಲಯದ ಪ್ರಕಟಣೆಗಳಲ್ಲಿ ನನ್ನದೊಂದು ಪುಸ್ತಕ ಪ್ರಕಟವಾಗುವುದು ಅವರಿಗೆ ‘ಸಂತೋಷ ಅಭಿಮಾನದ ಸಂಗತಿ’ ಎಂದೂ ತಿಳಿಸಿ ಹಸ್ತಪ್ರತಿಯೊಂದನ್ನು ಪ್ರಕಟಣೆಗೆ ಕಳಿಸಿ ಕೊಡಬೇಕೆಂದು ಕೋರಿ ಪಡೆದು ಈ ಪುಸ್ತಕವನ್ನು ಪ್ರಕಟಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹಾಗೂ ನಾಡಿನ ಹೆಸರಾಂತ ವಿದ್ವಾಂಸರಲ್ಲಿ ಒಬ್ಬರಾದ ಡಾ. ಬಿ.ಎ. ವಿವೇಕ ರೈ ಅವರ ಔದಾರ್ಯಕ್ಕೆ, ವಿಶ್ವಾಸಕ್ಕೆ ನಾನು ಕೃತಜ್ಞನಾಗಿದ್ದೇನೆ. ವಿಶ್ವವಿದ್ಯಾಲಯದ ಈ ಯೋಜನೆಗೆ ಸಂಬಂಧಪಟ್ಟ ಇತರ ಮಾನ್ಯರಿಗೆ, ಪ್ರಸಾರಾಂಗದ ನಿರ್ದೇಶಕರೂ ಪ್ರಸಿದ್ಧ ವಿದ್ವಾಂಸರೂ ಆದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ನನ್ನ ಕೃತಜ್ಞತೆ ಹೇಳುತ್ತೇನೆ. ‘ಸ್ಥಿತಿಪ್ರಜ್ಞೆ’ಯಲ್ಲಿರುವ ಲೇಖನಗಳನ್ನು ಪ್ರಕಟಿಸಿದ್ದ ಪತ್ರಿಕೆಗಳ, ನನ್ನ ಸಂದರ್ಶನಗಳನ್ನು ಮಾಡಿದ ಮಿತ್ರರ ಸದ್ಭಾವನೆಯನ್ನು, ಈ ಪುಸ್ತಕವನ್ನು ಪ್ರಕಟಣೆಗೆ ಸಿದ್ಧಪಡಿಸುವುದಕ್ಕೆ ನೆರವು ನೀಡಿದ ಜಿ.ಆರ್. ವಿಶ್ವನಾಥ್, ಜಿ.ಪಿ. ಬಸವರಾಜು, ಡಾ. ಪಂಡಿತಾರಾಧ್ಯ, ಎ.ಎಂ. ಶಿವಸ್ವಾಮಿ ಅವರನ್ನು ಕೃತಜ್ಞತೆಯಿಂದ ನೆನೆಯುತ್ತೇನೆ.

‘ಮೊದಲ ಮಾತು’ ಬರವಣಿಗೆಯ ಸಾಂಪ್ರದಾಯಿಕ ಅಂದಕ್ಕಿಂತ ಪ್ರೀತಿ, ಸದ್ಭಾವನೆಯ ಭಾವಸಂಪತ್ತಿನ ಅಂದ ಹೆಚ್ಚು ಎಂದು ತಿಳಿದು ಬರೆದ ಈ ‘ಮೊದಲ ಮಾತು’ ಮುಗಿಸುತ್ತೇನೆ.

ಜಿ.ಎಚ್. ನಾಯಕ
೨೫.೧೨.೨೦೦೬