ಕನ್ನಡನಾಡು ಏಕೀಕರಣಗೊಂಡು ಐವತ್ತು ವರ್ಷ ತುಂಬಿದ ಚಿನ್ನದ ಹಬ್ಬದ ಹರ್ಷದ ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಕನ್ನಡವನ್ನು ಕಟ್ಟಿದ ಹಿರಿಯರ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವ ಕನಸಿನ ಹೊನ್ನಾರುಮಾಲೆ ಇಲ್ಲಿರೂಪು ತಾಳಿದೆ. ಕೃಷಿಸಂಸ್ಕೃತಿಯನ್ನು ನೆಲದ ಸಂಸ್ಕೃತಿಯನ್ನಾಗಿ ಭಾವಿಸಿ ಪರಿಭಾವಿಸಿ ಕಟ್ಟಿ ಬೆಳೆಸಿದ ಕನ್ನಡ ನಾಡಿನಲ್ಲಿ ಕನ್ನಡಸಾಹಿತ್ಯ ಸಂಸ್ಕೃತಿಯ ಬೀಜವನ್ನು ಬಿತ್ತಿ ಚಿನ್ನದ ಬೆಳೆಗಳನ್ನು ಬೆಳೆದ ಹಿರಿಯ ಬೇಸಾಯಗಾರರ ಒಂದೊಂದು ಹೊಸ ಬೆಳೆಯನ್ನು ನಾಡಿಗೆ ಒಪ್ಪಿಸುವ ಧನ್ಯತಾ ಭಾವ ನಮ್ಮದು. ಹೀಗೆ ಹೊನ್ನಾರು ಚಿನ್ನದ ಬೆಳೆಯೂ ಹೌದು, ಕನ್ನಡದ ಚಿಣ್ಣರಿಗೆ ಹೊಸಬೆಳೆ ಬೆಳೆಯಲು ಪ್ರೇರಣೆಯೂ ಹೌದು.

ಕಳೆದ ಐವತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಸಂಸ್ಕೃತಿಯ ಮಣ್ಣಿನಲ್ಲಿ ತಮ್ಮ ಅನುಭವ ಮತ್ತು ಅಧ್ಯಯನದ ಮೂಲಕ ಉತ್ಸಾಹ ಪ್ರೀತಿ ಮತ್ತು ಪರಿಶ್ರಮಗಳಿಂದ ನಿರಂತರವಾಗಿ ಕನ್ನಡದ ಬಹು ಬೆಳಕೊಂಡುಬಂದ ಹಿರಿಯರ ಹೊಸಬೆಳೆಯ ಹೊನ್ನಾರು ಮಾಲೆಯಲ್ಲಿ ಅನನ್ಯ ಫಲಗಳನ್ನು ಪಡೆಯಲಾಗಿದೆ. ಸಾಹಿತ್ಯ, ಬದುಕು, ಸಂಸ್ಕೃತಿ ಇವುಗಳ ಬಗ್ಗೆ ಐವತ್ತು ವರ್ಷಗಳ ಹಿಂದೆ ಇದ್ದ ಪರಿಕಲ್ಪನೆಗಳು ಇಂದು ಬದಲಾವಣೆಗೊಂಡಿವೆ. ಯಾವುದು ಸಾಹಿತ್ಯ, ಯಾವುದು ಸಾಹಿತ್ಯ ಅಲ್ಲ ಎನ್ನುವ ಚರ್ಚೆ ಕಾಲಕಾಲಕ್ಕೆ ನಡೆದು ಬೇರೆ ಬೇರೆ ಅರ್ಥಗಳನ್ನು ಶೋಧಿಸುತ್ತ ಈ ಹಂತವನ್ನು ತಲುಪಿದೆ. ಸಾಹಿತ್ಯ ಮತ್ತು ಸಂಸ್ಕೃತಿ, ಸಾಹಿತ್ಯ ಮತ್ತು ಬದುಕು ಎನ್ನುವ ಭಿನ್ನತೆಗಳು ಕಣ್ಮರೆಯಾಗಿ ಸಂಕೀರ್ಣ ಹಾಗೂ ವೈವಿಧ್ಯದ ವಿನ್ಯಾಸಗಳು ಕಾಣಿಸಿಕೊಂಡಿವೆ. ಸೃಜನಶೀಲ ಮತ್ತು ಸೃಜನೇತರ ಎನ್ನುವ ಪ್ರಭೇದಗಳು ಸಾಹಿತ್ಯಚರ್ಚೆಗಳಲ್ಲಿ ಹಿಂದಕ್ಕೆ ಸರಿದಿವೆ. ಸಾಹಿತ್ಯದ ಪಠ್ಯ ಮತ್ತು ಪರಿಸರ ಎನ್ನುವ ವರ್ಗೀಕರಣ ಅಪ್ರಸ್ತುತವಾಗಿದೆ. ಸಾಹಿತ್ಯಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಎನ್ನುವ ಪರಿಭಾಷೆಗಳು ಈಗ ಪ್ರತ್ಯೇಕ ಅಸ್ತಿತ್ವಗಳನ್ನು ಕಳೆದುಕೊಂಡು ಒಂದು ಇನ್ನೊಂದರೊಡನೆ ಸಲ್ಲುವಂತದ್ದಾಗಿದೆ.

ಕನ್ನಡ ವಿಶ್ವವಿದ್ಯಾಲಯವು ಕಳೆದ ಹದಿನೈದು ವರ್ಷಗಳಿಂದ ‘ಸಾಹಿತ್ಯ’ದ ಪ್ರಕ್ರಿಯೆಯನ್ನು ಕುರಿತ ಚರ್ಚೆ ಹಾಗೂ ‘ಸಾಹಿತ್ಯ’ ಪರಿಕಲ್ಪನೆಯ ನಿರಂತರ ಕಟ್ಟುವಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಕನ್ನಡ ಭಾಷೆ, ಸಾಹಿತ್ಯ, ಭಾಷಾಂತರ, ಹಸ್ತಪ್ರತಿ, ದ್ರಾವಿಡ ಸಂಸ್ಕೃತಿ, ಮಹಿಳಾ ಅಧ್ಯಯನ, ಚರಿತ್ರೆ, ಪುರಾತತ್ವ, ಶಾಸನಶಾಸ್ತ್ರ, ಜಾನಪದ, ಬುಡಕಟ್ಟು, ಅಭಿವೃದ್ಧಿ, ಸಂಗೀತ, ಚಿತ್ರ, ಶಿಲ್ಪ: ಹೀಗೆ ಬಹುಬಗೆಗಳಲ್ಲಿ ಬಹುಅಧ್ಯಯನ ಶಿಸ್ತುಗಳಲ್ಲಿ ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಂಸ್ಕೃತಿ ಮತ್ತು ಕನ್ನಡನಾಡನ್ನು ಹೊಸತಾಗಿ ಶೋಧಿಸುತ್ತಾ, ವಿವರಿಸುತ್ತಾ ರೂಪಿಸುತ್ತಾ ಬಂದಿದೆ. ೫೦ ವರ್ಷಗಳ ಏಕೀಕೃತ ಕನ್ನಡನಾಡಿನಲ್ಲಿ ಶರೀರದಲ್ಲಿ ೧೫ ವರ್ಷಗಳ ಕನ್ನಡ ವಿಶ್ವವಿದ್ಯಾಲಯದ ಭಾವಬುದ್ಧಿಗಳು ಜೀವಧಾತುಗಳಾಗಿವೆ.

ಕರ್ನಾಟಕ ಸರಕಾರವು ಸುವರ್ಣಕರ್ನಾಟಕ ಆಚರಣೆಯ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಹೊನ್ನಾರುಮಾಲೆಯ ಪ್ರಕಟಣೆಯ ಯೋಜನೆಯನ್ನು ಸಂತೋಷದಿಂದ ಒಪ್ಪಿಕೊಂಡು ಕನ್ನಡ ಸಂಸ್ಕೃತಿಯ ಮಹತ್ವದ ಸಾಧನೆಯೊಂದನ್ನು ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನಕಾರ್ಯದರ್ಶಿಗಳೂ ಸಾಹಿತ್ಯ ಸಂಸ್ಕೃತಿ ಪ್ರಿಯರೂ ಆಗಿರುವ ಶ್ರೀ ಐ.ಎಂ. ವಿಠ್ಠಲಮೂರ್ತಿ ಅವರು ಹೊನ್ನಾರುಮಾಲೆಯ ಯೋಜನೆಯನ್ನು ಮೆಚ್ಚಿಕೊಂಡು ಸರಕಾರದ ಅಂಗೀಕಾರವನ್ನು ದೊರಕಿಸಿಕೊಟ್ಟು ಚಿನ್ನದ ಕನಸನ್ನು ನನಸಾಗಿಸಿದ್ದಾರೆ. ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ಈ ವಿಶಿಷ್ಟ ಯೋಜನೆಯನ್ನು ಅಂಗೀಕರಿಸಿ ತಮ್ಮ ಕನ್ನಡ ಸಾಹಿತ್ಯ ಸಂಸ್ಕೃತಿಯ ಕಾಳಜಿಯನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸರಕಾರದ, ಕನ್ನಡ ಸಂಸ್ಕೃತಿ ಇಲಾಖೆಯ ಈ ಸಾಂಸ್ಕೃತಿಕ ಪ್ರೀತಿಯನ್ನು ಕನ್ನಡ ವಿಶ್ವವಿದ್ಯಾಲಯ ಅಕ್ಕರೆಯಿಂದ ಸ್ಮರಿಸುತ್ತದೆ.

ಆಧುನಿಕ ಕನ್ನಡ ವಿಮರ್ಶೆಗೆ ಆಳವಾದ ಅಧ್ಯಯನ, ಸೂಕ್ಷ್ಮವಾದ ಅವಲೋಕನ ಮತ್ತು ನಿಷ್ಠುರವಾದ ಅಭಿಪ್ರಾಯಗಳ ಮೂಲಕ ವ್ಯಾಪಕತೆಯನ್ನು ಮತ್ತು ನಿರ್ದಿಷ್ಟಶಕ್ತಿಯನ್ನು ತಂದುಕೊಟ್ಟವರು ಪ್ರೊ. ಜಿ.ಎಚ್. ನಾಯಕ್ ಅವರು. ನವ್ಯವಿಮರ್ಶೆಯ ವಿಶ್ಲೇಷಣೆಯ ಸಾಮರ್ಥ್ಯ, ಸಾಂಸ್ಕೃತಿಕ ವಿಮರ್ಶೆಯ ಮಾಲ್ಯಾತ್ಮಕ ದೃಷ್ಟಿ ಹಾಗೂ ಸಾಹಿತ್ಯ ಶಿಸ್ತಿನ ಅನನ್ಯತೆಗಳ ಗುಣಗಳನ್ನು ತಮ್ಮ ವಿಮರ್ಶೆಯ ಬರೆಹಗಳಲ್ಲಿ ವಿಶಿಷ್ಟವಾಗಿ ಬಳಸಿಕೊಂಡ ಪ್ರೊ. ಜಿ.ಎಚ್. ನಾಯಕರು ತಮ್ಮ ‘ಸ್ಥಿತಿಪ್ರಜ್ಞೆ’ ಎನ್ನುವ ಈ ವಿಮರ್ಶಾಸಂಕಲನದ ಬರೆಹಗಳಲ್ಲಿ ತುಂಬಾ ವೈವಿಧ್ಯಮಯ ಬರೆಹಗಳ ಹರಹನ್ನು ಒದಗಿಸಿಕೊಟ್ಟಿದ್ದಾರೆ. ಕನ್ನಡದ ಹಿರಿಯ ಹಾಗೂ ತರುಣ ಲೇಖಕರ ಬರೆಹಗಳ ಅಧ್ಯಯನದ ಮೊದಲನೆಯ ಭಾಗ, ಸಾಂಸ್ಕೃತಿಕ ರಾಜಕೀಯ ಚಿಂತನೆಯ ಎರಡನೆಯ ಭಾಗ ಮತ್ತು ಸಾಹಿತ್ಯ ಸಂಸ್ಕೃತಿಗಳ ಸಮಾಗಮದ ಸನ್ನಿವೇಶಗಳ ಚರ್ಚೆಯ ಮೂರನೆಯ ಭಾಗ – ಹೀಗೆ ಸ್ಥಿತಿಗಳನ್ನು ಮತ್ತು ಪ್ರಜ್ಞೆಗಳನ್ನು ಒಂದೆಡೆ ಸೇರಿಸಿ ಸಾಹಿತ್ಯವಿಮರ್ಶೆಯ ಆಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡ ವಿಮರ್ಶಾ ಪರಂಪರೆಯ ಶ್ರೇಷ್ಟ ಪ್ರತಿನಿಧಿಯಾಗಿರುವ ಪ್ರೊ.ಜಿ.ಎಚ್. ನಾಯಕ ಅವರ ತಿಳಿವಳಿಕೆ, ಬದ್ಧತೆ ಮತ್ತು ಪ್ರೀತಿಗೆ ವಿಶೇಷ ನಮನಗಳು.

ಹೊನ್ನಾರುಮಾಲೆಯ ಪ್ರಕಟಣೆಗಳ ಕನಸಿನ ಬೀಜದಿಂದ ತೊಡಗಿ ನನಸಿನ ಫಲದವರೆಗೆ ನನ್ನೊಡನೆ ಸಹಕರಿಸಿದ ನಮ್ಮ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರನ್ನು ವಿಶೇಷವಾಗಿ ಸ್ಮರಿಸುತ್ತೇನೆ. ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರ ನೆರವಿಗಾಗಿ ವಂದನೆಗಳು.

ಬಿ.. ವಿವೇಕ ರೈ
ಕುಲಪತಿ