ಪಂಪನ ಬನವಾಸಿಯೂ, ಕುವೆಂಪುವಿನ ಕುಪ್ಪಳಿಯೂ
ಅಕ್ಕ ಪಕ್ಕದಲ್ಲೇ ಇದ್ದಾವೆ ಅನ್ನುವುದೊಂದು
ಆಶ್ಚರ್ಯವೇನಲ್ಲ. ಆ ಪಂಪನೂ ಅಂದು
ದೂರದರಿಕೇಸರಿಯ ರಾಜ್ಯವೈಭವದ ಮಧ್ಯೆ ಬದುಕಿಯೂ

ಈ ಬನವಾಸಿಗಾಗಿ ಉತ್ಕಟವಾದ ಹಂಬಲದ ಹಾಡು
ಕಟ್ಟಿದ್ದು, ಕುವೆಂಪು ಮೈಸೂರಲ್ಲಿ ಕುಪ್ಪಳಿಯ
ಕಾಡಿಗೆದೆತೆರೆದು ಕೂತದ್ದು, ಎರಡೂ ಹೃದಯ-
ದೊಳಮಿಡಿತವೊಂದೆ ಎನ್ನಲು ಸಾಕ್ಷಿ. ನಾವೋ ಈ ಬರಡು

ಕಾಂಕ್ರೀಟು ಕಾಡುಗಳ ಮಧ್ಯೆ ಬದುಕುತ್ತ ಯಾವುದಕ್ಕೂ
ಸ್ಪಂದಿಸದಿರುವ ಕೊರಡಾಗಿ ಬಿದ್ದಿದ್ದೇವೆ
ಕಳ್ಳು ಬಳ್ಳಿಯ ನಂಟು ಹರಿದುಕೊಂಡಿದ್ದೇವೆ
ನಮ್ಮ ಪರಿಸರದಿಂದ. ಕೊರಗುತಿದ್ದೇವೆ ಹೀಗೇ ತುಕ್ಕು

ಹಿಡಿಯುತ್ತ. ಒಂದು ಹೂವನ್ನು ಹಕ್ಕಿಯನ್ನು ಹಸಿರನ್ನು
ಪ್ರೀತಿಸಲು ಬಾರದ, ಗುಡ್ಡಕ್ಕೆ ಬಯಲಿಗೆ ಬಾನಿಗೆ
ಸ್ಪಂದಿಸಲು ತಿಳಿಯದ, ಜಡವಾದ ಮನಸ್ಸು, ಹೇಗೆ
ಪ್ರೀತಿಸಬಹುದು ಹೇಳಿ ತನ್ನ ಜತೆಗಿರುವ ಮನುಷ್ಯರನ್ನು?

ನಾವು ಕೂತಿದ್ದರೂ ಯುಗಾದಿಗಳ ಹಾದಿಯಲ್ಲಿ ಕಾಯುತ್ತ,
ನಾವೇನು ಗಿಡ ಮರಗಳೇ, ವಸಂತ ಸ್ಪರ್ಶಕ್ಕೆ
ಝಗ್ಗನೆಯೆ ಎದೆ ತೆರೆದು ಅರಳಿ ನಿಲ್ಲುವುದಕ್ಕೆ?
ಯಾವತ್ತಿನಿಂದಲೋ ಮೆತ್ತಿಕೊಂಡಿದೆ ನಮ್ಮ ಸುತ್ತ ಈ ಹುತ್ತ !