ಅಗೊ ಸ್ಪೂಟ್ನಿಕ್, ಇಗೊ ವಿನೋಬ,
ಈ ಎರಡೂ ಸೋಜಿಗ,
ಬಾನೊಳೊಂದು ಬುವಿಯೊಳೊಂದು ;
ಬೆರಗಾಗಿದೆ ಈ ಜಗ !

ಕಲ್ಪನೆಯೂ ಮೂಗುವಡುವ ಸಹಸ್ರಾರು ಮೈಲಿ ವೇಗ
ಅದರ ಚಲನೆ ಗಂಟೆಗೆ !
ದಿನವು ಎಂಟೊ ಹತ್ತೊ ಮೈಲಿ
ನಡೆವನಿವನು ಮೆಲ್ಲಗೆ !

ಕ್ರಮಿಸುವುದದು ದಿನವೊಂದಕೆ
ಲೋಕಾಂತರದಗಲವ !
ಬೇಡುವನಿವನೊಂದೊ ಎರಡೊ
ಎಕರೆಯಷ್ಟು ಭೂಮಿಯ !

ಬಹಿರಂಗವ ಗೆಲುವ ರಭಸದಟ್ಟಹಾಸ ಜ್ವಲಿಸುತಿಹುದು
ಸ್ಪೂಟ್ನಿಕ್ಕಿನ ಮುಖದಲಿ
ಒಳಬಗೆಗಳನೊಲಿದು ಗೆಲುವ ಚಂದ್ರಹಾಸ ಮಿನುಗುತಿಹುದು
ಇವನ ಎರಡು ಕಣ್ಣಲಿ !

ಅದೋ, ತಿರುಗಿ ಬೂದಿಯಾಗಿ
ಮೈಲಿಕಲ್ಲ ನಿಲ್ಲಿಸಿತ್ತು ವಿಜ್ಞಾನದ ಹಾದಿಗೆ.
ಇವನು ನಡೆದ ಹೆಜ್ಜೆಯೆಲ್ಲ
ಬೆಳಕಾಯಿತು ತಣ್ಣಗೆ !

ಉಪಗ್ರಹಗಳನೊಂದೆ ಸಮನೆ
ಆಕಾಶಕೆ ಏರಿಸುತಿದೆ
ರಾಕೆಟ್ಟಿನ ಸಾಧನ.
ಜನಮನಗಳ ಹಾದಿಯಲ್ಲಿ
ನಡೆದು ಮೆಲನೆ ನುಡಿವನಿವನು ;
‘ನೆಲವೆ ನನ್ನ ವಾಹನ !’