ಗದುಗಿನ ಭಾರತವನ್ನು ಬರೆದ ನಾರಣಪ್ಪನ ಕೃತಿರಚನೆಯ ವಿಧಾನವನ್ನು ಕುರಿತು ಒಂದು ಸ್ವಾರಸ್ಯವಾದ ದಂತಕಥೆ ಉಂಟು: ನಾರಣಪ್ಪ ದಿನವೂ ಸ್ನಾನಮಾಡಿ ಶುಚಿರ್ಭೂತನಾಗಿ ಒದ್ದೆ ಬಟ್ಟೆಯನ್ನುಟ್ಟುಕೊಂಡು ವೀರನಾರಾಯಣನ ಸನ್ನಿಧಿಯಲ್ಲಿ ‘ಲಿಪಿಕಾರ’ನಾಗಿ ಕುಳಿತುಕೊಳ್ಳುತ್ತಿದ್ದನಂತೆ. ಎಲ್ಲಿನತನಕ ಮೈಮೇಲಿನ  ಆ ಮಡಿ ಒದ್ದೆಯಾಗಿರುತ್ತಿತ್ತೊ ಅಲ್ಲಿನ ತನಕ ಆತ ಕೃತಿರಚನೆಯಲ್ಲಿ ಮುಳುಗಿರುತ್ತಿದ್ದನಂತೆ; ಯಾವಾಗ ಆ ಬಟ್ಟೆ ಆರಿತೋ ಆಗ ತನ್ನ ರಚನೆಯನ್ನು ನಿಲ್ಲಿಸುತ್ತಿದ್ದನಂತೆ!

ಈ ದಂತಕಥೆ ಸ್ಫೂರ್ತಿತತ್ವವನ್ನು ಬಹು ಸೊಗಸಾಗಿ ನಿರೂಪಿಸುತ್ತದೆ. ಸ್ಫೂರ್ತಿತತ್ವವನ್ನು ಕುರಿತು ಎಲ್ಲ ದೇಶಗಳಲ್ಲಿಯೂ ಪ್ರಚಲಿತವಾದ, ಸಹಜವಾದ ಧಾರ್ಮಿಕ ಸಂಬಂಧಿಯಾದ ನಂಬಿಕೆಗಳನ್ನೂ ಮತ್ತು ಅದರ ವ್ಯಾಪಾರವನ್ನೂ ಇದು ಸಂಕೇತಿಸುತ್ತದೆ.

ನಾರಣಪ್ಪ ವೀರನಾರಾಯಣನ ದೇಗುಲದಲ್ಲಿ ಎಲ್ಲಿ ತನಕ ಮೈಮೇಲಿನ ಬಟ್ಟೆ ಒದ್ದೆಯಾಗಿರುತಿತ್ತೋ ಅಲ್ಲಿ ತನಕ ಕೃತಿರಚನೆಯಲ್ಲಿ ಮುಳುಗಿರುತ್ತಿದ್ದ ಎಂಬ ಕಥೆಯನ್ನೂ, ‘ವೀರನಾರಾಯಣನೆ ಕವಿ, ಲಿಪಿಕಾರ ಕುಮಾರವ್ಯಾಸ’ -ಎಂಬ ಅವನ ಹೇಳಿಕೆಯನ್ನೂ ಇರಿಸಿಕೊಂಡು ಪರಿಶೀಲಿಸಿದರೆ, ನಾರಣಪ್ಪ ‘ವೀರನಾರಾಯಣ’ ಎಂಬ ದಿವ್ಯ ಶಕ್ತಿಯೊಂದರ ಉಪಕರಣವಾಗಿ ಕೃತಿರಚನೆ ಮಾಡುತ್ತಿದ್ದ, ಅದೂ ಯಾವುದೋ ಒಂದು ನಿಯತಕಾಲದಲ್ಲಿ, ತನ್ನ ಶುಚಿತ್ವದಿಂದ ಕವಿವ್ಯಕ್ತಿ ಆ ದಿವ್ಯಶಕ್ತಿಯ ಮಾಧ್ಯಮವಾಗಲು ಪಾತ್ರವಾದ ಸಮಯದಲ್ಲಿ, ಅವನು ಉಟ್ಟ ಮಡಿ ಆರುವ ತನಕ ಅಥವಾ ಅವನು ಸ್ಫೂರ್ತಿಯಲ್ಲಿರುವ ತನಕ ಬರೆಯುತ್ತಿದ್ದ ಎನ್ನುವ ವಿಷಯ ಸ್ಪಷ್ಟವಾಗುತ್ತದೆ.  ನಾರಣಪ್ಪನ ಕೃತಿ ಸಮಸ್ತವನ್ನು ಈ ಬೆಳಕಿನಲ್ಲಿಯೂ ಪರಿಶೀಲಿಸಿದ ವಿಮರ್ಶಕರು ಕೆಲವು ವೇಳೆ ಟೀಕಿಸಿದ್ದೂ ಉಂಟು: ಈತನ ಕೃತಿಯಲ್ಲಿ ಎಷ್ಟೋ ಭಾಗಗಳು ಆತ ಉಟ್ಟ ‘ಮಡಿ’ ಆರಿದ ಮೇಲೆಯೂ ಬರೆದವುಗಳಾಗಿವೆ -ಎಂದು. ಎಂದರೆ ಆತನ ಕೃತಿಯಲ್ಲಿ ಸ್ಫೂರ್ತಿಯಿಂದ ಹೇಗೋ ಹಾಗೆಯೇ ಸ್ಫೂರ್ತಿಯಿಲ್ಲದೆ ಕೇವಲ ರಚನಾ ನೈಪುಣ್ಯದಿಂದಲೂ ಆತ ಬರೆದ ಭಾಗಗಳು ಉಂಟು-ಎಂದು!

ಇದರಿಂದ ಸ್ಪಷ್ಟವಾಗುವುದು ಇಷ್ಟು: ಕವಿಕೃತಿಯಲ್ಲಿ ಕೆಲವೆಡೆ ಏನೋ ಹೊಳಪು, ಏನೋ ಸೆಳೆವು ಇರುವ ಭಾಗಗಳುಂಟು. ಅಂಥ ಕಡೆ ನಮಗೂ ‘ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು.’ ನಾವು ಅಂಥ ಸಮಯದಲ್ಲಿ ಒಂದು ಬಗೆಯ ಸುಖ ರೋಮಾಂಚವನ್ನು ಪಡೆಯುತ್ತೇವೆ. ಆ ಉಜ್ವಲವಾದ ಭಾಗಗಳನ್ನು ಕುರಿತು ನಾವು, ನಿಜವಾಗಿಯೂ ಈ ಭಾಗಗಳನ್ನು ಕವಿಯು ಸ್ಫೂರ್ತಿಯಿಂದ ಬರೆದಿದ್ದಾನೆ. ಇಲ್ಲಿ ನಿಜಕ್ಕೂ ಪ್ರತಿಭೆಯ ಉಜ್ವಲತೆ ಇದೆ ಎನ್ನುತ್ತೇವೆ. ಮತ್ತೆ ಕೆಲವಡೆ ಕವಿಕೃತಿ ರೂಪದಲ್ಲಿ ಕಾವ್ಯವಾಗಿದ್ದರೂ, ನಮ್ಮ ಮನಸ್ಸನ್ನು ಆ ಭಾಗಗಳು ಆಳವಾಗಿ ವ್ಯಾಪಿಸದೆ ಸುಮ್ಮನೆ ರಂಜಿಸಬಹುದು. ಕೇವಲ ಸಾಂಪ್ರದಾಯಿಕವಾದ ವರ್ಣನೆಗಳ ಮೂಲಕ ಕಥಾಸರಣಿಯನ್ನು ಛಂದೋಬದ್ಧವಾಗಿ ಎಳೆದುಕೊಂಡು ಹೋಗುವಲ್ಲಾಗಲಿ, ಕವಿ ತನ್ನ ಮತ ಧರ್ಮಕ್ಕೆ ಸಂಬಂಧಪಟ್ಟ ಉಪದೇಶಗಳನ್ನು ಹೇಳುವಲ್ಲಾಗಲೀ, ಅಥವಾ ಕೇವಲ ತನ್ನ ರಚನಾನೈಪುಣ್ಯವನ್ನು ಪ್ರದರ್ಶಿಸಲೆಂದು ಬರೆದ ಭಾಗಗಳಲ್ಲಾಗಲಿ ನಮಗೆ ಅನ್ನಿಸುತ್ತದೆ, ಇಲ್ಲಿ ಸ್ಫೂರ್ತಿಯ ಸ್ಪರ್ಶವಿಲ್ಲ ಎಂದು. ಅಂಥ ಕಡೆ ಕವಿಯ ಪ್ರತಿಭೆ ಬರೀ ತೆಳ್ಳಗಾಗಿ, ಕಾವಿಲ್ಲದೆ, ಹೊಳಪಿಲ್ಲದೆ ಕೇವಲ ಬುದ್ಧಿಗೆ ವಶವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಗುರುತಿಸುತ್ತೇವೆ. ಹೀಗೆ ಕವಿಕೃತಿಯಲ್ಲಿ ಕೆಲವೆಡೆ ವಿದ್ಯುತ್ ಸಂಚಾರವೂ, ಕೆಲವೆಡೆ ಕೇವಲ ರಚನಾನೈಪುಣ್ಯವೂ ಕಾಣಿಸುತ್ತದೆ. ಇದು ಸಹೃದಯರನೇಕರ ಅನುಭವ.

ಅನೇಕ ಕವಿಗಳ ಅನುಭವ ಇದು: ಆಗಾಗ ಅವರನ್ನು ಅನೂಹ್ಯವಾದ ಅನಿರೀಕ್ಷಿತ ಶಕ್ತಿಯೊಂದು ತೆಕ್ಕನೆ ಆಕ್ರಮಿಸುತ್ತದೆ. ಆಗ ಅವರು ಉಳಿದ ಸಮಯಗಳಲ್ಲಿಗಿಂತ ಸುಲಭವಾಗಿ ಸೊಗಸಾಗಿ ಕೃತಿರಚನೆ ಮಾಡಬಲ್ಲರು. ಅತ್ಯಂತ ಜಾಗರೂಕತೆಯಿಂದ ಮತ್ತು ವಿಶೇಷ ಪ್ರಯತ್ನಗಳಿಂದ ಕೃತಿರಚನೆ ಮಾಡುವ ಕ್ಷಣಗಳಿಗಿಂತ ಬೇರೆಯಾದ ಈ ಸಮಯದಲ್ಲಿ ತಟಕ್ಕನೆ ಎಲ್ಲಿದಲೋ ಪಂಕ್ತಿ ಪಂಕ್ತಿಗಳೇ ಇಳಿದುಬರುವಂತೆ ಕವಿಗೆ ಅನುಭವವಾಗುತ್ತದೆ. ಈ ಅನುಭವದ ದಾಖಲೆ ಹೋಮರ್‌ನಲ್ಲೇ ಇದೆ. ‘ನನಗೆ ಸ್ಫೂರ್ತಿಯನ್ನು ಒದಗಿಸು, ಸತ್ಯವನ್ನು ನುಡಿಸು’ ಎಂಬ ಪ್ರಾರ್ಥನೆಯನ್ನು ಆತ ಕಾವ್ಯದೇವಿಗೆ ಸಲ್ಲಿಸುತ್ತಾನೆ. ಬಹು ಹಿಂದೆಯೇ ಪ್ಲೇಟೋ ಹೇಳಿದ: “ಎಲ್ಲ ಉತ್ತಮ ಕವಿಗಳೂ-ಭಾವಗೀತೆಯ ಕವಿಗಳಾಗಲಿ, ಮಹಾಕಾವ್ಯಗಳನ್ನು ಬರೆದ ಕವಿಗಳಾಗಲಿ- ತಮ್ಮ ಅತ್ಯುತ್ತಮ ಕೃತಿಗಳನ್ನು ಬರೆದದ್ದು ಕೇವಲ ಕುಶಲತೆಯಿಂದ ಅಲ್ಲ, ಆವೇಶದಿಂದ, ಸ್ಫೂರ್ತಿಯಿಂದ, ಮತ್ತು ಬೇರೊಂದು ಶಕ್ತಿಗೆ ವಶವಾಗುವುದರಿಂದ…. ಈ ಒಂದು ಸ್ಥಿತಿಗೆ ಒಳಗಾಗದಿರುವಾಗ ಕವಿ ಕೇವಲ ನಿರ್ಬಲ; ಅಂಥ ಹೊತ್ತಿನಲ್ಲಿ ಭವಿಷ್ಯ ವಾಣಿಯನ್ನು ನುಡಿಯುವುದು ಆತನಿಗೆ ಅಸಾಧ್ಯ.”

[1]

ಸ್ಫೂರ್ತಿ ವಿಶಾಲವಾದ ಅರ್ಥದಲ್ಲಿ ಕೇವಲ ಕಲಾನಿರ್ಮಿತಿಗೆ ಮಾತ್ರ ಸೀಮಿತವಾದುದಲ್ಲ. ಬದುಕಿನಲ್ಲಿ ಎಲ್ಲೆಲ್ಲಿ ವ್ಯಕ್ತಿಗಳು-ಸಾಮಾನ್ಯನಿಂದ ಹಿಡಿದು ಅಸಾಮಾನ್ಯನ ತನಕ-ಯಾವುದೋ ಒಂದು ಕ್ಷಣದಲ್ಲಿ ತಮ್ಮ ಅರಿವಿಗೆ ಮೀರಿದ ಶಕ್ತಿ ವಿಶೇಷವೊಂದರ ಸೆಳೆತಕ್ಕೆ ಸಿಕ್ಕು, ಅಪೂರ್ವವಾದ ವಿಸ್ಮಯಕಾರಿಯಾದ ಭಾವನೆಗಳನ್ನು ಸತ್ಯಗಳನ್ನು ಕಂಡುಕೊಳ್ಳುವರೋ, ಮತ್ತು ಕೃತಿಗಳನ್ನು ನಿರ್ವಹಿಸುವರೋ ಅಂಥ ಎಲ್ಲ ಕ್ರಿಯೆಗಳಿಗೂ ಈ ಮಾತು ಅನ್ವಯಿಸುತ್ತದೆ. ದೊಡ್ಡ ದೊಡ್ಡ ರಾಜಕೀಯ ಭಾವನೆಗಳು, ಅಪೂರ್ವ ವೈಜ್ಞಾನಿಕ ಸತ್ಯಗಳು, ಪಂಡಿತರ ಅಸಾಧಾರಣ ಸಂಶೋಧನೆಗಳು, ತತ್ವಜ್ಞರ ತತ್ವಗಳು, ಎಷ್ಟೋ ಸಲ ಸ್ಫೂರ್ತಿಯಿಂದ ಹೊಳೆದವುಗಳಾಗಿವೆ. ಸ್ಫೂರ್ತಿ ಎನ್ನುವುದು ಹೇಗೋ ಬಂದು ಏನೋ ಒಂದನ್ನು ಹೊಳೆಯಿಸಿ ಹೋಗುವ ವಿಶೇಷಾನುಭವ. ಅದೊಂದು ಅನಿರೀಕ್ಷಿತ ಶಕ್ತಿಸಂಚಾರ. ಅದರ ಮುಖ್ಯ ಲಕ್ಷಣ ಆವೇಶ; ಅದರ ಪರಿಣಾಮ ಅಪೂರ್ವ ಕೃತಿನಿರ್ಮಾಣ.

ಕವಿ ತನ್ನ ಅತ್ಯುತ್ತಮ ಕೃತಿಗಳನ್ನು ರಚಿಸುವುದು ಸ್ಫೂರ್ತಿಯಿಂದ ಎನ್ನುವ ಮಾತು ಅತ್ಯಂತ ಪ್ರಾಚೀನ ಕಾಲದಿಂದಲೂ ಬಂದಿದೆ. “ಸ್ಫೂರ್ತಿತತ್ವ, ಮಾನವತೆ ಯಾವುದು ಜಡ, ಯಾವುದು ಚೈತನ್ಯ ಎನ್ನುವುದನ್ನು ಗುರುತಿಸಲು ಎಂದು ಕಲಿಯಿತೋ ಅಂದೇ ಆರಂಭವಾಗಿರಬೇಕು. ಎಂದರೆ ಅದು ಇತಿಹಾಸಕ್ಕೆ ಅಸ್ಪಷ್ಟವಾದ ಮಬ್ಬಿನಾಚೆಯ ಸಂಗತಿ… ಯಾರೋ ಒಬ್ಬ ಮೈದುಂಬಿ ಮಾತನಾಡಿದಾಗ ಆತನ ಭೌತಿಕ ಶರೀರದೊಳಕ್ಕೆ ದೈವೀಚೈತನ್ಯವೆ ಪ್ರವೇಶಿಸಿದಂತೆ ತೋರಿರಬೇಕು. ಹೀಬ್ರೂ ಪ್ರವಾದಿಗಳೆಲ್ಲರೂ ಭಗವದ್‌ವಾಣಿಯಿಂದ ಮೈದುಂಬಿದವರೆಂದೂ ಅಥವಾ ಸ್ಫೂರ್ತಿಯಿಂದ ಮಾತನಾಡಿದವರೆಂದೂ ಪರಿಗಣಿಸಲ್ಪಟ್ಟಿದ್ದಾರೆ. ಕ್ರಮೇಣ ಈ ಭಾವನೆ ಕವಿಗೂ ಅನ್ವಯವಾಗತೊಡಗಿದುದು ಸಹಜವಾಗಿಯೇ ತೋರುತ್ತದೆ. ಏಕೆಂದರೆ ಕವಿಯೂ ಪ್ರವಾದಿಯಂತೆ ಅತಿಮಾನುಷ ವಾಣಿಯಿಂದ ಮಾತನಾಡುವಂತೆ ಅವರಿಗೆ ತೋರಿರಬೇಕು.”[2] ಹೀಗಾಗಿ ಕವಿಕರ್ಮವೂ ಒಂದು ಧಾರ್ಮಿಕ ಕ್ರಿಯೆಯೇ ಆಯಿತು. ಕಲಾಕೃತಿ ದಿವ್ಯಚೈತನ್ಯವೊಂದರ ಕೃಪಾವಿಶೇಷದ ಪರಿಣಾಮ ಎನ್ನುವ ಭಾವನೆ ಎಲ್ಲ ದೇಶದ ಪ್ರಾಚೀನ ಕಾಲದ ನಂಬಿಕೆಯಾಗಿದೆ. ಈ ನಂಬಿಕೆಯನ್ನು ಕವಿಗಳು ತಮ್ಮ ಕೃತಿಗಳಲ್ಲಿ ಸ್ಫೂರ್ತಿಯ ಆವಾಹನೆ ಮಾಡುವಲ್ಲಿ, ಅದನ್ನೊಂದು ದೇವ-ದೇವಿರೂಪದಲ್ಲಿ ಸ್ತುತಿಸಿ ತಮ್ಮ ಕೃತಿಯನ್ನು ನೀನೇ ನಡೆಸು ಎಂದು ಕೇಳಿಕೊಳ್ಳುವ ಹಂಬಲಿಕೆಗಳಲ್ಲಿ ಸಮರ್ಥಿಸಿದ್ದಾರೆ. ಯಾರು ತಮ್ಮ ಅಂತರಂಗ ಪರಿಶುದ್ಧತೆಯಿಂದ, ಧ್ಯಾನಧಾರಣಾದಿ ಸಾಮರ್ಥ್ಯಗಳಿಂದ ಚಿತ್ತಸ್ವಾಸ್ಥವನ್ನು ಗಳಿಸಿಕೊಳ್ಳುವರೋ ಅಂಥ ಸಾಧಕರಲ್ಲಿ ಕೃಪಾರೂಪವಾದ ಸ್ಫೂರ್ತಿ ಪ್ರವಹಿಸಿ ಕಲಾನಿರ್ಮಿತಿಗೆ ಕಾರಣವಾಗುತ್ತದೆ ಎನ್ನುವ ಈ ನಂಬಿಕೆ, ಈ ಸ್ಫೂರ್ತಿ ಅತ್ಯಂತ ಉನ್ನತವಾದ ಧಾರ್ಮಿಕ ಅಥವಾ ಆನುಭಾವಿಕ ತತ್ವದೊಂದಿಗೆ ತನ್ನ ಅಭಿನ್ನತೆಯನ್ನು ಸ್ಥಾಪಿಸಿಕೊಂಡಿದ್ದರ ಸಾಕ್ಷಿಯಾಗಿದೆ.*

ಸ್ಫೂರ್ತಿಯ ವಿಚಾರದಲ್ಲಿರುವ ನಂಬಿಕೆ ಭಾರತೀಯರಾದ ನಮ್ಮಲ್ಲಿ ಇನ್ನೂ ಆ ಪರಂಪರಾಗತವಾದ ಪಾವಿತ್ರ ವನ್ನೆ ಉಳಿಸಿಕೊಂಡಿರುವುದಾದರೂ, ಪಾಶ್ಚಾತ್ಯರಲ್ಲಿ ಹದಿನೇಳು ಹದಿನೆಂಟನೆಯ ಶತಮಾನದ ಹೊತ್ತಿಗೆ ಸ್ಫೂರ್ತಿಯನ್ನು ಕುರಿತು ಪರಂಪರಾಗತವಾಗಿ ಬಂದ ಈ ಭಾವನೆ ತನಗೆ ಧರ್ಮದೊಂದಿಗೆ ಇದ್ದ ಸಂಬಂಧವನ್ನು ಕಳಚಿಕೊಂಡಿತು. ವಿಲಿಯಂ ಮಾರಿಸ್ ಎಂಬಾತ ಉದ್ಘೋಷಿಸಿದ: “ಸ್ಫೂರ್ತಿಗೀರ್ತಿ ಎಂಬ ಮಾತೇನಿದ್ದರೂ ಕೇವಲ ಅರ್ಥಶೂನ್ಯವಾದದ್ದು; ಸ್ಫೂರ್ತಿ ಅನ್ನುವಂಥ ವಿಶೇಷ ಶಕ್ತಿಯೇ ಇಲ್ಲ; ಅದೇನಿದ್ದರೂ ರಚನಾ ನೈಪುಣ್ಯವಷ್ಟೇ.”[3] ಮನಸ್ ಶಾಸ್ತ್ರದ ಪ್ರಕಾರ “ಸ್ಫೂರ್ತಿ ಎನ್ನುವುದು ಕವಿ ನಿರ್ಮಿತಿಯಲ್ಲಿ ಕಂಡುಬರುವ ಅಜ್ಞಾತದ (Unconcious) ಅಂಶಕ್ಕೆ  ಒಂದು ಸಾಂಪ್ರದಾಯಿಕವಾದ ಹೆಸರು ಮಾತ್ರ.”[4] ಅದೊಂದು ನಿರಂತರವಾದ ಮಾನಸಿಕ ಉತ್ಸಾಹ. ಯಾರನ್ನು ಪ್ರತಿಭಾಶಾಲಿಗಳು ಎನ್ನುತ್ತೇವೆಯೋ ಅವರ ಕೃತಿರಚನೆಯ ಮನಃಸ್ಥಿತಿಯಲ್ಲಿ ಕಂಡು ಬರುವ ಉತ್ಸಾಹರೂಪದ ಆವೇಶವೇ ಸ್ಫೂರ್ತಿ.

ಯಾವಾಗ ಸ್ಫೂರ್ತಿತತ್ವ, ದೈವಿಕ ಧಾರ್ಮಿಕ ಸಂಬಂಧವನ್ನು ಕಳೆದುಕೊಂಡು ‘ಅದೊಂದು ಮಾನಸಿಕ ಉತ್ಸಾಹ’ ಎನ್ನುವ ಸಾಧಾರಣತೆಗಿಳಿಯಿತೋ ಅಂದಿನಿಂದಲೆ ಸ್ಫೂರ್ತಿಯನ್ನು ಕುರಿತ ಪ್ರಾಚೀನ – ನವೀನ ಭಾವನೆಗಳ ಘರ್ಷಣೆ ಆರಂಭವಾದಂತೆ ತೋರುತ್ತದೆ. ಪ್ರಾಚೀನರ ಪ್ರಕಾರ ಕಾವ್ಯಾರಂಭ ದೇವತಾ ಸ್ತುತಿಯಿಂದ. ಕವಿ ಅಲ್ಲಲ್ಲಿ ಮತ್ತೆ ಮತ್ತೆ ಸ್ಫೂರ್ತಿಯ ಅಧಿದೇವತೆಯನ್ನು ಆವಾಹನೆ ಮಾಡುತ್ತಾ ಮುಂದುವರಿಯುವ ಆ ರಚನೆ ಅದೆಷ್ಟು ಕೃತಕ ಅನ್ನಿಸಿದರೂ, ಕಾವ್ಯನಿರ್ಮಿತಿಗೆ ಕಾರಣ ಏನೋ ಒಂದು ದಿವ್ಯಸ್ಫೂರ್ತಿ ಎನ್ನುವ ನಂಬಿಕೆಯೇ ಅದರ ಬೆನ್ನೆಲುಬಾಗಿತ್ತು.[5] ಆದರೆ ಈ ವಿಚಾರದಲ್ಲಿ ಆಧುನಿಕ ಕವಿ ಈ ಭಾವನೆಯನ್ನು ಒಪ್ಪಲಾರ. ಆಧುನಿಕ ಕವಿಗೂ ಪ್ರಾಚೀನ ಕವಿಗೂ ಈ ವಿಚಾರದಲ್ಲಿ ಪ್ರಧಾನವಾದ ವ್ಯತ್ಯಾಸ ಇಷ್ಟೆ: ಪ್ರಾಚೀನ ಕವಿ ಅಂದುಕೊಳ್ಳುತ್ತಿದ್ದ, ತಾನು ಏನಿದ್ದರೂ ಒಂದು ಉಪಕರಣ ಮಾತ್ರ, ಅತಿಮಾನುಷ ಶಕ್ತಿಯೊಂದು ತನ್ನ ಮೂಲಕ ಬರೆಸುತ್ತಿದೆ, ಎಂದು. ಆದರೆ ಆಧುನಿಕ ಕವಿ ತನ್ನ ಕೃತಿರಚನೆಯ ಸಾಮರ್ಥ್ಯಕ್ಕೆ ಬೇರೊಂದು ದೈವೀಶಕ್ತಿಯೆ ಕಾರಣ ಎನ್ನುವುದನ್ನು ಒಪ್ಪದೆ, ಅದಕ್ಕೆ ತಾನೆ ಕಾರಣ ಎಂದು ಭಾವಿಸುತ್ತಾನೆ. ಸ್ಫೂರ್ತಿಯಿಂದ ಹೊಳೆದ ಅಲ್ಪ-ಸ್ವಲ್ಪವನ್ನು ಅನಂತರದ ನಿರಂತರ ಶ್ರಮದಿಂದ ಮತ್ತು ಬುದ್ಧಿ ಕುಶಲತೆಯಿಂದ ತಿದ್ದಿ-ತೀಡಿ ರೂಪಿಸುವ ಕಾರಣ, ಕೃತಿನಿರ್ಮಾಣದ ಹೆಮ್ಮೆಯನ್ನು ತಾನೇ ಸಂಪೂರ್ಣವಾಗಿ ಹೊರಲು ಇಚ್ಛಿಸುತ್ತಾನೆ. ಹಳೆಯ ಕವಿ, ಕೃತಿನಿರ್ಮಿತಿಯಲ್ಲಿ ತನ್ನ ಸಾಮರ್ಥ್ಯವನ್ನು ಅಗ್ಗಳಿಕೆಯನ್ನು ಗುರುತಿಸುವನಾದರೂ, ಅದೇನಿದ್ದರೂ ಭಗವತ್ ಕೃಪೆ ಎನ್ನುವ ವಿನಯದಲ್ಲಿ ತನ್ನನ್ನು ಮರೆಮಾಡಿಕೊಳ್ಳುತ್ತಾನೆ.[6] ಪ್ರಾಚೀನರ ಮತವನ್ನು ಕುರಿತು ಆಧುನಿಕರಿಗೆ ಅನ್ನಿಸುವುದು ಬಹುಶಃ ಹೀಗೆ: ಪರಂಪರಾಗತವಾದ ಭಾವನೆಯಂತೆ ಕೃತಿ ಸಂಪೂರ್ಣವಾಗಿ ದೈವೀಸ್ಫೂರ್ತಿಯಿಂದಲೇ ರಚಿತವಾಗಿದ್ದ ಪಕ್ಷದಲ್ಲಿ, ನಾವು ದೊಡ್ಡ ದೊಡ್ಡ ಕವಿಗಳೆಂದು ಭಾವಿಸತಕ್ಕವರ ಕೃತಿಗಳಲ್ಲಿ ಅಷ್ಟೊಂದು ನೀರಸವಾದ ಭಾಗಗಳು ಏಕಿವೆ? ಆ ದೈವೀಶಕ್ತಿಯೆ ಈ ನೀರಸವಾದ ಭಾಗಗಳನ್ನು  ಬರೆಯಿತೆ? ಹಾಗಿದ್ದ ಪಕ್ಷದಲ್ಲಿ ಇಂಥ ನೀರಸ ನಿರ್ಮಾಣಕ್ಕೆ ಕಾರಣವಾದ ಆ ದೈವೀಪ್ರತಿಭೆಯ ಅಸಾಮರ್ಥ್ಯವನ್ನು ಕುರಿತು ವಿಷಾದಪೂರ್ವಕವಾದ ಕನಿಕರದ ನಗೆ ಬೀರಬಹುದಲ್ಲದೆ ಮೆಚ್ಚಿಕೊಳ್ಳಬಹುದೆ? ಹೀಗೆ ದೈವೀಶಕ್ತಿಯನ್ನು ಕನಿಕರಕ್ಕೆ ಈಡುಮಾಡಿ ಕೆಳಗೆಳೆಯುವ ಬದಲು, ಕೃತಿಯನ್ನು ತಾನೇ ಬರೆದೆ ಎಂದು ಹೇಳಲಿ; ಆಗ ಕೃತಿಯ ಗುಣ ದೋಷಗಳೆರಡನ್ನೂ ತಾನೇ ಜವಾಬ್ದಾರಿಯಿಂದ ಹೊರುವ ಧೈರ್ಯ ಆತನಿಗೆ ಬಂದೀತು.

ಆಧುನಿಕ ವಿಚಾರದಲ್ಲಿನ ದಿಟ್ಟತನ ಮೆಚ್ಚಬೇಕಾದದ್ದೆ. ಆದರೆ ಆಧುನಿಕ ಕವಿ ಹೀಗೆ ಭಾವಿಸಿದ ಮಾತ್ರಕ್ಕೆ ತಾನು ಸ್ಫೂರ್ತಿಯಿಂದ ಬರೆಯುವುದೇ ಇಲ್ಲವೆಂದೇನೂ ಅವನು ಹೇಳುವುದಿಲ್ಲ. ಅದೊಂದು ಮಾನಸಿಕವಾದ ವಿಶೇಷ ಶಕ್ತಿ ಎಂದು ಆತ ಕರೆದ ಮಾತ್ರಕ್ಕೆ ಅದರ ಅಪೌರುಷೇಯತ್ವವನ್ನು ಅಲ್ಲಗಳೆದಂತೇನೂ ಆಗಲಿಲ್ಲ. ಅವನಿಗೂ ಗೊತ್ತು, ಯಾವ ಕವಿಯೂ ವೇಳಾಪಟ್ಟಿಯನ್ನು ಹಾಕಿಕೊಂಡು ತಾನು ಈ ಹೊತ್ತಿನಲ್ಲಿ ಇಂಥ ಕವಿತೆಯನ್ನು ಬರೆಯುತ್ತೇನೆ ಎಂದು ಹೇಳಲಾರ ಎಂಬುದು. ಭಾವತೀವ್ರತೆ ಯಾವ ಹೊತ್ತಿನಲ್ಲಿ ಅಜ್ಞಾತದ ತಲಾತಲದಿಂದ ಬಂದು ಆತನ ಪ್ರಜ್ಞೆಯ ಬಾಗಿಲನ್ನು ತಟ್ಟುತ್ತದೆಯೋ ಆಗ ಆತ ಅದಕ್ಕೆ ಓಗೊಡದೆ ಇರಲಾರ. ಆಧುನಿಕ ಕವಿ ತಾನು ಹಿಂದಿನವರ ಹಾಗೆ ಪ್ರವಾದಿ ಅಲ್ಲ ಎಂದು ಸಾಧಿಸಿಕೊಂಡರೂ, ತಾನು ಕೃತಿರಚನೆ ಮಾಡುವ ಸಮಯದಲ್ಲಿ, ತನ್ನ ದೈನಂದಿನ ರೂಢಿಯ ಸಮಯದಲ್ಲಿಗಿಂತ ಭಿನ್ನವಾದ ನಿಲುವಿನಲ್ಲಿ, ವಿಶೇಷವಾದ ಶಕ್ತಿಸ್ಪಂದವೊಂದರ ತುಯ್ತಕ್ಕೆ ಸಿಕ್ಕಿರುತ್ತೇನೆ ಎನ್ನುವುದನ್ನು ಆತ ತನ್ನ ಅನುಭವವನ್ನೆ ವಸ್ತುನಿಷ್ಠವಾಗಿ ವಿಶ್ಲೇಷಿಸಿಕೊಂಡಾಗ ಅಲ್ಲಗಳೆಯಲಾರ. ಹಿಂದಿನವರು ಅದೊಂದು ದೈವೀಶಕ್ತಿ ಎಂದರು; ಇಂದಿನವರು ಅದೊಂದು ವಿಶೇಷ ಮಾನಸಿಕ ಉತ್ಸಾಹ ಎಂದರು. ಅವರು ಕೊಟ್ಟುಕೊಂಡ ಹೆಸರು ಬೇರೆ ಬೇರೆಯಾದರೂ ಉಸಿರು ಮಾತ್ರ ಒಂದೇ. ಹಿಂದಿನವರು, ಈ ಶಕ್ತಿಯ ಕಾರಣ ಅಗೋಚರ ಅಗಮ್ಯ ಎಂದು ಭಾವಿಸಿದ್ದರಿಂದ ಅದೊಂದು ದೈವೀಶಕ್ತಿ ಎಂದರು. ಇಂದಿನವರು, ಅದೊಂದು ಮಾನಸಿಕ ಶಕ್ತಿ ಎಂದರೂ, ಮನಸ್ಸು ಮತ್ತು ಅದರ ಶಕ್ತಿಗಳು ಇನ್ನೂ ಅಗೋಚರ ಅಗಮ್ಯವಾಗಿಯೇ ಉಳಿದಿವೆ. ಒಟ್ಟಿನಲ್ಲಿ ಸ್ಫೂರ್ತಿ ಎನ್ನುವುದೊಂದು ಅಸಾಧಾರಣ ಅನಿರೀಕ್ಷಿತ ಶಕ್ತಿಸಂಚಾರ. “ಕಾವ್ಯ-ಕಲಾ ನಿರ್ಮಾಣಗಳಲ್ಲಿ ಸ್ಫೂರ್ತಿ ಎಂಬುದೊಂದುಂಟು. ಅದನ್ನು ಕುರಿತು ನಾವು ಹೆಚ್ಚೇನೂ ಹೇಳಲಾಗದಿದ್ದರೂ, ‘ಕವಿ ಕೇವಲ ರಚನಾ ನಿಪುಣನಷ್ಟೇ, ಹೆಚ್ಚೇನೂ ಅಲ್ಲ’ -ಎನ್ನುವ ಅಭಿಪ್ರಾಯವನ್ನು ನಾವು ಒಪ್ಪಿಕೊಳ್ಳಲು ಇಷ್ಟಪಡುವುದಿಲ್ಲ. ಸ್ಫೂರ್ತಿಯ ವಿಚಾರದಲ್ಲಿ ಪ್ರಾಚೀನರೊಂದಿಗೆ ಒಪ್ಪುವಂಥ ಸಮಾನಾಂಶಗಳನ್ನು ನಾವು ಕಡೆಗಣಿಸಲಾಗುವುದಿಲ್ಲ.”[7]

ಕವಿ-ಕಲಾವಿದರು ಸ್ಫೂರ್ತಿಯಿಂದ ಕೃತಿರಚನೆ ಮಾಡುತ್ತಾರೆ ಎನ್ನುವ ಭಾವನೆ ಪ್ರಾಚೀನ ಕಾಲದಿಂದಲೂ ಬಂದದ್ದು. ಮಾನವತೆಯ ಅರುಣೋದಯ ಕಾಲದಲ್ಲಿ ಕವಿ ತನಗೆ ಅದೆಲ್ಲಿಂದಲೋ ಒಂದು ಶಕ್ತಿ ಹರಿದು ಬಂದು ತನ್ನ ಮೂಲಕ ಹೊರಹೊಮ್ಮುತ್ತಿದೆ ಎಂದು ಭಾವಿಸಿದ್ದ. ಈ ಸರಳ ಸಾಧಾರಣ ನಂಬಿಕೆ ಇಂದಿಗೂ  ತನ್ನ ಸತ್ವವನ್ನು ಕಳೆದುಕೊಂಡಿಲ್ಲ. ಸ್ಫೂರ್ತಿಯ ಸ್ವರೂಪವನ್ನು ವರ್ಣಿಸತಕ್ಕವರೆಲ್ಲಾ ಈ ಭಾವನೆಯನ್ನೇ ಬೇರೆ ಬೇರೆಯ ಮಾತುಗಳಲ್ಲಿ ಹೇಳಿದ್ದಾರೆ. “ಕೆಲವರಲ್ಲಿ ಕೆಲವು ಸಲ ಸೃಷ್ಟಿಶೀಲವಾದ ಕಲ್ಪನೆ ಒಂದು ಬಗೆಯ ಭಾವದ ಅಲ್ಲೋಲ-ಕಲ್ಲೋಲದಿಂದ ಕೂಡಿರುತ್ತದೆ. ಒಂದು ಭಾವವೋ ಹಲವು ಭಾವಗಳೋ ಅಂತರಂಗದಲ್ಲಿ ಮೊದಲೇ ರೂಪುಗೊಂಡು ಯಾವ ರೀತಿಯಾದ ಪ್ರಜ್ಞಾಪೂರ್ವಕವಾದ ಪ್ರಯತ್ನವೂ ಇಲ್ಲದೆ ಅಥವಾ ಇಚ್ಛೆಯೂ ಇಲ್ಲದೆ, ಅಪೌರುಷೇಯವೆಂಬಂತೆ ಅಭಿವ್ಯಕ್ತಗೊಳ್ಳುತ್ತವೆ. ಕೃತಿನಿರ್ಮಿತಿಯ ಈ ತೀವ್ರಕ್ಷಣಗಳನ್ನು ‘ಸ್ಫೂರ್ತಿ’ ಎಂದು ನಾವು ಗುರುತಿಸುತ್ತೇವೆ.”[8] ಕವಿ ಸ್ಫೂರ್ತಿಯಲ್ಲಿದ್ದಾನೆ ಎಂದರೆ ಅವನು ಆಗಲೆ ಬೇರೆ ಯಾರೊ ಮಾಡಿದ್ದನ್ನೆ ತಿರುಗಿ ಮಾಡುತ್ತಿದ್ದಾನೆ ಅಥವಾ ವ್ಯವಸ್ಥೆಗೊಳಿಸಿ ಬರೆಯುತ್ತಿದ್ದಾನೆ ಎಂದು ಅರ್ಥವಲ್ಲ. ಅವನಿಗೇ ಅರಿಯದ ಶಕ್ತಿಯೊಂದು ಅವನನ್ನು ಸೆರೆಹಿಡಿದಿದೆ ಎಂದು ಅರ್ಥ. ಈ ಕಾರಣಕ್ಕಾಗಿಯೇ ‘ಕೃತಿನಿರ್ಮಿತಿಯ ಈ ತೀವ್ರಕ್ಷಣ’ಗಳಲ್ಲಿ ರಚಿತವಾದ ಕೃತಿ ಭಾಗಗಳನ್ನು ‘ಸೃಷ್ಟಿ’ ಎಂದೋ ಅತ್ಯಂತ ಸ್ವೋಪಜ್ಞವಾದದ್ದೆಂದೋ ಗುರುತಿಸುತ್ತೇವೆ. ಇಂಥ ಹೊತ್ತಿನಲ್ಲಿ “ಕವಿಯ ಮನಸ್ಸನ್ನು ಉಳಿದ ವ್ಯಾಪಾರಗಳಿಂದ ಬಿಡಿಸಿ ಏನೋ ಒಂದು ಅತೀತವಾದ ಶಕ್ತಿ ಆಕ್ರಮಿಸುತ್ತದೆ. ಇದು ಅವನ ಇರುವಿಕೆಯನ್ನೆಲ್ಲಾ ತುಂಬುತ್ತದೆ. ಅದರ ಸ್ವರೂಪವನ್ನು ನಾವು ವಿವರಿಸಲಾರೆವು; ಅದರ ಹಲವು ಅಂಶಗಳನ್ನು ಗುರುತಿಸಬಲ್ಲೆವು. ಈ ಎಲ್ಲದರ ಕೇಂದ್ರದಲ್ಲಿ ಏನೋ ಒಂದು ಭಾವ ಇರುವುದೆಂದು ತೋರುತ್ತದೆ. ಅದೊಂದು ಮಬ್ಬು ಮಬ್ಬಾದ ವಿವರಿಸಲಾಗದ ಸ್ಥಿತಿ. ಅದಕ್ಕೆ ತನ್ನದೇ ಆದ ಸ್ವಭಾವವೂ ಪರಿವೇಷವೂ ಉಂಟು. ಬುದ್ಧಿಯಿಂದ ಗ್ರಹಿಸಲಾಗದ, ವಿಶೇಷಿಸಲಾಗದ ಅದು, ಕವಿಯ ಮೇಲೆ ದರ್ಶನದ ಗಾಂಭೀರ್ಯ ಮತ್ತು ಅಧಿಕಾರದಿಂದ ಕವಿಯುತ್ತದೆ. ಕವಿ ಅದೇನೆಂಬುದನ್ನು ಸಂಪೂರ್ಣವಾಗಿ ಗ್ರಹಿಸಲಾರದವನಾದರೂ, ಅದು ತನ್ನ ಮೇಲೆ ಸ್ಥಾಪಿಸಿದ ಅಧಿಕಾರವನ್ನು ಅರಿಯುತ್ತಾನೆ.”[9] ಈ ಅನುಭವವನ್ನು ಕುರಿತು ಕವಿಯೊಬ್ಬನ ಹೇಳಿಕೆ ಇದು: “ನನ್ನ ಅನುಭವವನ್ನೆ ಗಮನಿಸಿ ಹೇಳುವುದಾದರೆ ಅದೊಂದು ಮಾತಿನ ಮಳೆಗರೆಯುವ ಭಾವದ ಮಬ್ಬು ಮೋಡ.”[10] ಕವಿ ಸ್ಫೂರ್ತಿಯಲ್ಲಿದ್ದಾನೆ ಎಂದರೆ ಅವನಲ್ಲಿ ಆಗ ಅಸಾಧಾರಣ ಶಕ್ತಿ ಸಂಚಾರವಾಗಿದೆ ಎಂದು ಅರ್ಥ. “ವಿಶೇಷ ಉರುಬಿನಲ್ಲಿ ಜೀವಶಕ್ತಿ ಉಕ್ಕಿ ಯಾವುದೋ ವ್ಯಾಪಾರಕ್ಕೆ ಮನಸ್ಸನ್ನೂ ಶ್ರಮವನ್ನೂ ತಿರುಗಿಸುವುದು ಅದರ ಲಕ್ಷಣ.”[11] ಸ್ಫೂರ್ತಿಯ ಸ್ವರೂಪದಲ್ಲಿ ಕಂಡುಬರುವ ಲಕ್ಷಣ ಈ “ಉರುಬು”. ಅದೊಂದು ತೀವ್ರತರವಾದ ಚಟುವಟಿಕೆ. ಶಕ್ತಿಸ್ಫೋಟವೇ ಅದರ ಸ್ವಭಾವ. ಈ ಆವೇಗದಲ್ಲಿ ಕವಿಯ ಭಾವನೆಗಳು ತಾವೇ ತಾವಾಗಿ, ಲೀಲಾಜಾಲವಾಗಿ ಅನೂಹ್ಯವಾದ ರೀತಿಯಲ್ಲಿ ಬಂದು ಒಗ್ಗೂಡುತ್ತವೆ. ಪದಗಳು, ಪ್ರತಿಮೆಗಳು ಮತ್ತು ಛಂದಸ್ಸು ಈ ಎಲ್ಲದರ ಒಂದು ಮಾಂತ್ರಿಕ ಸಂಯೋಜನೆ ನಡೆಯುತ್ತದೆ. ಆಗ ಕವಿಯೇ ಅದನ್ನು ತಡೆಯಲಾರ.  ಅವನ ಪಾಲಿಗೆ ಅದುವರೆಗೂ ಯಾವುದು ಅಜ್ಞಾತವಾಗಿತ್ತೊ ಅದು ಜ್ಞಾತವಾಗುತ್ತದೆ. ಯಾವುದು ಅಸ್ಪಷ್ಟವಾಗಿತ್ತೊ ಅದು ಸ್ಪಷ್ಟವಾಗುತ್ತದೆ. ಎಷ್ಟೋ ವೇಳೆ ಈ ಸ್ಫೂರ್ತಿಯ ಆವೇಶದಿಂದ ಹೊರಹೊಮ್ಮುವ ಭಾವಗಳು ಕವಿಯ ಅಭಿವ್ಯಕ್ತಿ ಕ್ರಿಯೆಯನ್ನು ಮುಂಚಿ ಹರಿದೋಡಬಹುದು. ಕವಿಯ ರಚನಾ ಶಕ್ತಿ ಆ ರಭಸವನ್ನು ತನ್ನಲ್ಲಿ ಹಿಡಿದಿಡಲು ಅಸಮರ್ಥವಾಗಿ ಹಿಂದೆ ನಿಲ್ಲಬಹುದು. ಈ ಉಭಯ ಸಂಕಟದಲ್ಲಿ ಕವಿ ಕೊರಗಿದರೂ ಮೂಲತಃ ಸ್ಫೂರ್ತಿಯ ಮನಃಸ್ಥಿತಿ ಒಂದು ಆನಂದದ ಸ್ಥಿತಿ ಎಂದೇ ಹೇಳಬಹುದು. ಕವಿ ವೈಯುಕ್ತಿಕವಾಗಿ ಯಾವ ಭಾವ ತುಮುಲದಲ್ಲೇ ಇರಲಿ, ಅವನು ಸ್ಫೂರ್ತಿಗೆ ವಶವಾದನೆಂದರೆ ಮುಗಿಯಿತು. ಅವನನ್ನು ಲೌಕಿಕ ಪರಿಸರದಿಂದ ಪಾರುಮಾಡಿ ಒಂದು ಬಗೆಯ ರಸಾನಂದದಲ್ಲಿ ನಿಲ್ಲಿಸುತ್ತದೆ. ಇದರಿಂದಾಗಿ ಅವನಿಗೆ ಆ ಹೊತ್ತಿನಲ್ಲಿ ಕಾಲದ ಉಪಾದಿ ಜಗುಳಿಹೋಗಿ ಕಾಲಾತೀತವಾದ ಒಂದು ಸ್ಥಿತಿಯನ್ನು ಅವನು ಅನುಭವಿಸುತ್ತಾನೆ. ಲೋಕ ಸೌಂದರ್ಯಾನುಭವದ ಸಮಯದಲ್ಲಾಗಲಿ, ಸೌಂದರ್ಯನುಭವದ ಪರಿಭಾವನೆಯ ಪರಿಣಾಮವಾದ ಸ್ಫೂರ್ತಿಯಲ್ಲಾಗಲಿ, ಕವಿಗೆ ಹಿಂದುಮುಂದುಗಳ ಭಾವನೆ ಜಾರಿಹೋಗಿ ಅವನು ಕಾಲಾತೀತವಾದ ನಿಲುವನ್ನು ಅನುಭವಿಸುತ್ತಾನೆ. ತಾನು ಇಷ್ಟು ಹೊತ್ತು ಸ್ಫೂರ್ತಿಯಲ್ಲಿ ಮುಳುಗಿದೆನೆಂಬ ಲೆಕ್ಕಾಚಾರವಾಗಲಿ, ಇಷ್ಟು ಕಾಲ ಸ್ಫೂರ್ತಿಯಲ್ಲಿದ್ದು ಕಾಲವನ್ನು ವ್ಯರ್ಥಮಾಡಿದೆನೇ ಎಂಬ ವಿಷಾದವಾಗಲಿ ಇರುವುದಿಲ್ಲ, ಅದೊಂದು ಬಗೆಯ ಸಮಾಧಿ. ಅದರಲ್ಲಿ ಕವಿಗೆ ಕಾಲ-ದೇಶ-ವ್ಯಕ್ತಿ ಪ್ರಜ್ಞೆಯೆಲ್ಲವೂ ಕರಗಿ ಹೋಗುತ್ತದೆ. ಈ ಅರ್ಥದಲ್ಲಿ ಸ್ಫೂರ್ತಿಯ ಸ್ಥಿತಿಯನ್ನು ವರ್ಣಿಸಬಹುದಾದುದು ಎರಡು ರೀತಿಯಲ್ಲಿ: “ಅದು ನಮ್ಮದೆಂದು ಕೊಳ್ಳಲಾಗದ ಏನೋ ಒಂದು ಶಕ್ತಿ. ಅದು ನಮಗೆ ಕೊಡಲ್ಪಟ್ಟಿದೆ, ಅದರಲ್ಲಿ ನಮ್ಮನ್ನು ನಾವೇ ಕಳೆದುಕೊಳ್ಳುತ್ತೇವೆ. ಇದು ಒಂದು ಮುಖ. ನಮ್ಮನ್ನು ನಾವು ಕಂಡುಕೊಳ್ಳುವುದು ಅದರಲ್ಲಿ, ನಮ್ಮ ನಿಜಸ್ವರೂಪದ ಅರಿವು ಅದರಿಂದಲೇ-ಇದು ಇನ್ನೊಂದು ಮುಖ.”[12] ಈ ಎರಡೂ ಪರಸ್ಪರ ವಿರೋಧವೆಂಬಂತೆ ತೋರಬಹುದು. ಆದರೆ ಸ್ಫೂರ್ತಿಯಲ್ಲಿ ಕವಿಗೊದಗುವ ಅನುಭವದ ಸ್ವರೂಪವೇ ಇದು : ಕವಿ ಸ್ಫೂರ್ತಿಯಲ್ಲಿ ತನ್ನನ್ನು ತಾನು ಕಳೆದುಕೊಳ್ಳುತ್ತಾನೆ ಎಂದರೆ ಅದರ ಅರ್ಥ, ಕವಿ ಸ್ಫೂರ್ತಿಯಲ್ಲಿ ತನ್ನ ಲೋಕ ವ್ಯಕ್ತಿತ್ವದಿಂದ ಪಾರಾಗಿ ತನ್ನ ವೈಯಕ್ತಿಕತೆಯನ್ನು ಕಳೆದುಕೊಳ್ಳುತ್ತಾನೆ ಅಥವಾ ಅಹಂ ವ್ಯಕ್ತಿತ್ವವನ್ನು ನೀಗಿಕೊಳ್ಳುತ್ತಾನೆ – ಎಂದು.* ಕವಿಯ ಅಹಂ ವ್ಯಕ್ತಿತ್ವದ ನಿರಸನವೇ ಆತ ತನ್ನ ನಿಜವಾದ ಕವಿ ವ್ಯಕ್ತಿತ್ವವನ್ನು ಕಂಡುಕೊಳ್ಳಲು ಇರುವ ಏಕೈಕ ಮಾರ್ಗ. ಆದಕಾರಣ ಸ್ಫೂರ್ತಿಯಲ್ಲಿ ಕವಿ ತನ್ನನ್ನು ತಾನು ಕಂಡುಕೊಳ್ಳುತ್ತಾನೆ; ಕೃತಿಮುಖೇನ ವ್ಯಕ್ತವಾಗುವ ಆ ಕವಿ ವ್ಯಕ್ತಿತ್ವವೇ ಅವನ ನಿಜಸ್ವರೂಪ. ಕವಿ ಕಳೆದುಕೊಳ್ಳುವುದು ತನ್ನ ಲೋಕ ವ್ಯಕ್ತಿತ್ವವನ್ನು; ಕಂಡುಕೊಳ್ಳುವುದು ಕವಿ ವ್ಯಕ್ತಿತ್ವವನ್ನು. ಕವಿಗೆ ಅದೊಂದು ರೂಪಾಂತರ; ಅದೊಂದು ಸ್ವಾತ್ಮಬಲಿ ಮತ್ತು ಪುನರ್‌ಜನ್ಮ. ಈ ಕ್ರಿಯೆಯಲ್ಲಿ ಕವಿ ತನ್ನ ಅಹಂ ವ್ಯಕ್ತಿತ್ವವನ್ನು ಕಳೆದುಕೊಳ್ಳದೆ, ತನ್ನಲ್ಲಿನ ಕಲಾವ್ಯಕ್ತಿತ್ವವನ್ನು ಕಂಡುಕೊಳ್ಳಲಾರ. ಈ ಅರ್ಥದಲ್ಲಿ ಪ್ರತಿಯೊಂದು ಕಲಾ ನಿರ್ಮಿತಿಯೂ ಒಂದು ನೂತನ ಸೃಷ್ಟಿ-ಕೃತಿಯ ದೃಷ್ಟಿಯಿಂದ ಮಾತ್ರವಲ್ಲ, ಕವಿಯ ದೃಷ್ಟಿಯಿಂದಲೂ. ಅತ್ಯುತ್ತಮ ಕೃತಿಯೊಂದು ನಿರ್ಮಾಣವಾದ ನಂತರ ಕೃತಿಗೆ ಹೇಗೋ ಕವಿಗೂ ಹಾಗೆಯೆ ಅದೊಂದು ಪುನರ್‌ಭವ; ಭವದ ಪುನರ್‌ಭವ.+

ಸ್ಫೂರ್ತಿಯ ಪ್ರಧಾನ ಲಕ್ಷಣ “ಆವೇಶ”ವಾದದ್ದರಿಂದ, ಆವೇಶದ ಸ್ವರೂಪವೆ ಅತ್ಯಂತ ತಾತ್ಕಾಲಿಕ, ಹಾಗೆ ಮಿಂಚಿ ಹೀಗೆ ಮಾಯವಾಗತಕ್ಕದ್ದು ಎನ್ನುವುದು ಸ್ವತಸ್ಸಿದ್ಧವಾದ ಸಂಗತಿ. ಕಲಾ ನಿರ್ಮಿತಿಯಲ್ಲಿ, ಅದಕ್ಕೆ ಅಗತ್ಯವಾದ ಈ ಸ್ಫೂರ್ತಿ ಅಥವಾ ಭಾವತೀವ್ರತೆ ಥಟ್ಟನೆ ಬಂದು ಥಟ್ಟನೆಯೇ ನಡುವೆ ಕಡಿದುಹೋದಾಗ, ಕೃತಿ ಅಪೂರ್ಣವಾಗಿಯೇ ನಿಲ್ಲುವುದುಂಟು. ಷೆಲ್ಲಿ ಕವಿಯ ರಚನೆಗಳಲ್ಲಿ ಹೀಗೆ ಅರ್ಧಕ್ಕೆ ನಿಂತ ಎಷ್ಟೋ ಪದ್ಯಗಳಿವೆ. ಹೀಗಾದಾಗ ಅನಂತರ ಪ್ರಯತ್ನಪಟ್ಟು ಹೇಗೋ ಮುಗಿಸಿದಾಗ ಆತನ ಪ್ರಯತ್ನದ ತೇಪೆ ಕಾಣಿಸುವುದುಂಟು. ‘ಕುಬ್ಲಾಖಾನ್’ ಕವನವನ್ನು ರಚಿಸುವ ಹೊತ್ತಿನಲ್ಲಿ ಕವಿ ಕೋಲ್‌ರಿಜ್‌ನಿಗೆ ಯಾರೋ ಬಂದು ಕಾವ್ಯವಿಮುಖನನ್ನಾಗಿ ಮಾಡಿದ್ದರ ಪರಿಣಾಮವಾಗಿ ಆ ಕವಿತೆ ಹಾಗೆಯೇ ಅಪೂರ್ಣವಾಗಿ ಉಳಿಯಿತೆನ್ನುವ ವಿಚಾರ ಇದಕ್ಕೊಂದು ನಿದರ್ಶನ. ಸ್ಫೂರ್ತಿ ಎನ್ನುವುದು ಕವಿಗೆ ಯಾವಾಗಲೋ ಬಂದು ಅವನನ್ನು ಆಕ್ರಮಿಸಿ ನಂತರ ಹಾಗೆಯೇ ಬಿಟ್ಟು ಹೋಗುವ ಒಂದು ಶಕ್ತಿ ವಿಶೇಷ.

ಕವಿಗೊದಗುವ ಭಾವತೀವ್ರತಾರೂಪವಾದ ಸ್ಫೂರ್ತಿ ಹೆಚ್ಚು ಹೊತ್ತು ನಿಲ್ಲತಕ್ಕದ್ದಲ್ಲವಾದುದರಿಂದ, ಅದು ನೀಡುವ ಅಭಿವ್ಯಕ್ತಿ ಸಹಜವಾಗಿಯೆ ಹ್ರಸ್ವವಾಗಿರಬೇಕಲ್ಲದೆ ದೀರ್ಘವಾಗಿರಲು ಸಾಧ್ಯವಿಲ್ಲ ಎನ್ನುವ ಒಂದು ಭಾವನೆ, ಭಾವಗೀತೆಯ ಸಿದ್ಧಾಂತದ ಮೇಲೆ ವಿಶೇಷ ಪರಿಣಾಮ ಮಾಡಿರುವಂತೆ ತೋರುತ್ತದೆ. ಮಹಾಕಾವ್ಯಕ್ಕೂ ಭಾವಗೀತೆಗೂ ಪ್ರಧಾನವಾಗಿ ಎದ್ದುಕಾಣುವ ವ್ಯತ್ಯಾಸ, ಅವುಗಳ ಗಾತ್ರವನ್ನು ಕುರಿತದ್ದು. ಮಹಾಕಾವ್ಯ ಗಾತ್ರದಲ್ಲಿ ದೀರ್ಘವಾದದ್ದು, ಭಾವಗೀತೆ ಹ್ರಸ್ವವಾದದ್ದು. ಭಾವಗೀತೆ ಹ್ರಸ್ವವಾಗಿರಲು ಕಾರಣ, ಕವಿಗೊದಗುವ ಈ ಭಾವತೀವ್ರತೆ (ಸ್ಫೂರ್ತಿ) ಎಷ್ಟಾದರೂ ತಾತ್ಕಾಲಿಕ, ಹೆಚ್ಚೆಂದರೆ ಅದು ಅರ್ಧ ಘಂಟೆಗಿಂತ ಮಿಗಿಲಾಗಿ ನಿಲ್ಲಲಾರದು;  ಇದು ಕೆಲವರ ವಾದ.[13] ಅವರ ಪ್ರಕಾರ ಕೃತಿನಿರ್ಮಾಣದಲ್ಲಿ ಕವಿಗೊದಗುವ ಭಾವತೀವ್ರತೆ ಅಥವಾ ಸ್ಫೂರ್ತಿ ಸಹಜವಾಗಿಯೇ ಹೆಚ್ಚು ಹೊತ್ತು ನಿಲ್ಲತಕ್ಕದ್ದಲ್ಲವಾದ್ದರಿಂದ, ಅದು ಭಾವಗೀತೆಗಳಲ್ಲಿ ಮಡುಗಟ್ಟಿ ನಿಲ್ಲುವಂತೆ ಮಹಾಕಾವ್ಯದಲ್ಲಿ ಅಖಂಡವಾಗಿ ನಿಲ್ಲದು. ಹಾಗಾದರೆ ಮಹಾಕಾವ್ಯ ಒಂದು ಅತ್ಯುತ್ತಮ ಸಾಹಿತ್ಯ ಪ್ರಕಾರವಾಗಿಲ್ಲವೆ? ಅದು ಹೆಚ್ಚೆಂದರೆ ಅರ್ಧ ಘಂಟೆಯಷ್ಟು ಮಾತ್ರ ನಿಲ್ಲಬಹುದಾದ ಭಾವತೀವ್ರತೆಯ ಪರಿಣಾಮ ಅಲ್ಲವಲ್ಲ ಎಂದರೆ, ಅವರು ಹೇಳುತ್ತಾರೆ: ವಾಸ್ತವವಾಗಿ ಯಾವುದನ್ನು ಮಹಾಕಾವ್ಯ ಎಂದು ನೀವು ಕರೆಯುತ್ತೀರೋ ಅದು, ಕವಿ ಬೇರೆ ಬೇರೆಯ ಕಾಲದಲ್ಲಿ ಬೇರೆ ಬೇರೆಯ ಕ್ಷಣಗಳಲ್ಲಿ ಇಂತಹ ಭಾವತೀವ್ರತೆಗೆ ಅಭಿವ್ಯಕ್ತಿಯನ್ನು ನೀಡಿದ ಅನೇಕ ಭಾವಗೀತೆಗಳ ಸರಣಿ ಅಲ್ಲದೆ ಬೇರೆ ಅಲ್ಲ. ಆದುದರಿಂದಲೆ ಅಲ್ಲಿ ಮೊದಲಿನಿಂದ ಕಡೆತನಕ ಭಾವಗೀತೆಯಲ್ಲಿನಂತೆ ರಸತೀವ್ರತೆಯ ಅನುಭವ ಆಗದು; ಆ ಭಾವತೀವ್ರತೆಯ ಅನುಭವ ಬಿಡಿ ಬಿಡಿಯಾಗಿ ಅಗುತ್ತದೆ. ಎಂದರೆ ಮಹಾಕಾವ್ಯದಲ್ಲಿ ಅಲ್ಲಲ್ಲಿ ಭಾವಗೀತೆಗಳ ಅಥವಾ ಭಾವತೀವ್ರತೆಯಿಂದ ಮೂಡಿದ ಭಾಗಗಳಿವೆ; ಅಲ್ಲಿ ಇಂಥ ತುಣುಕುಗಳನ್ನು ಸೇರಿಸುವ ಬೇರೊಂದು ಸಂಘಟನಾಶಕ್ತಿ ಕೆಲಸ ಮಾಡಿದೆ. ಒಂದು ಭಾವಗೀತೆಯನ್ನೂ ಮತ್ತೊಂದು ಭಾವಗೀತೆಯನ್ನೂ ಅಲ್ಲಿ ‘ನೀರಸ’ವಾದ ಕೆಲವು ಭಾಗಗಳು ಕೂಡಿಸಿರುತ್ತವೆ.[14] ಇದು ಇವರ ವಾದ. ಮಹಾಕಾವ್ಯ ಮತ್ತು ಭಾವಗೀತೆಗಳಿರುವ ಈ ವ್ಯತ್ಯಾಸದ ಚರ್ಚೆಯ ವಿವರಕ್ಕೆ ಕೈಹಾಕದೆ ಮೇಲಿನ ವಾದವಷ್ಟನ್ನೆ ಪರಿಶೀಲಿಸಬಹುದು: ಸ್ಫೂರ್ತಿ ಅನ್ನತಕ್ಕದ್ದು ಒಂದು ಆವೇಶ, ಔಜ್ವಲ್ಯ; ಆದುದರಿಂದ ಅದು ಹೆಚ್ಚು ಹೊತ್ತು ನಿಲ್ಲತಕ್ಕದ್ದಲ್ಲ ಎನ್ನುವುದನ್ನೂ, ಭಾವಗೀತೆ ಹ್ರಸ್ವವಾಗಲು ಇದೂ ಒಂದು ಕಾರಣವಿರಬಹುದೆನ್ನುವ ಆಂಶವನ್ನೂ ಒಪ್ಪಬಹುದು. ಹಾಗೆಯೇ ಮಹಾಕಾವ್ಯದಲ್ಲಿ ಸ್ಫೂರ್ತಿಯ ಸ್ಪರ್ಶವಿಲ್ಲದ ‘ನೀರಸ’ವಾದ ಎಷ್ಟೋ ಭಾಗಗಳು ಇರಬಹುದೆಂಬ ಮಾತನ್ನೂ ಒಪ್ಪಬಹುದು. ಆದರೆ ಭಾವಗೀತೆಗಳೇ ನಿಜವಾದ ಸ್ಫೂರ್ತಿಯ ವಿಸ್ಫುಲಿಂಗಗಳಾಗಬೇಕಾಗಿಲ್ಲ; ಅಲ್ಲಿಯೂ ಸ್ಫೂರ್ತಿಯಿಲ್ಲದ ವಿರಚನೆಗಳುಂಟು ಎನ್ನುವ ಸಂಗತಿಯನ್ನು ಮರೆಯಬಾರದು. ಇಷ್ಟರ ಮೇಲೆ ಮಹಾಕಾವ್ಯದ ರಚನೆಗೆ ಮೂಲವಾದ ಮತ್ತು ಭಾವಗೀತೆಗೆ ಪ್ರೇರಕವಾದ ಕವಿವ್ಯಕ್ತಿತ್ವನಿಷ್ಠವಾದ ಸ್ಫೂರ್ತಿಯ ವಿಶೇಷತೆಯಲ್ಲಿ ಎಷ್ಟೊಂದು ವ್ಯತ್ಯಾಸವಿದೆ ಎನ್ನುವ ವಿಷಯವನ್ನೂ ಗಮನಿಸಬೇಕು. ಸ್ಫೂರ್ತಿ ಎನ್ನುವುದು ಹಾಗೆ ಬಂದು ಹೀಗೆ ಹೋಗುವ ಒಂದು ಶಕ್ತಿ ಎನ್ನುವುದನ್ನು ಒಪ್ಪಿದರೂ, ಅದನ್ನು ಮಹಾಕಾವ್ಯ ರಚನೆಯಲ್ಲಿ ತಕ್ಕಮಟ್ಟಿಗೆ ಉದ್ದಕ್ಕೂ ನಿಲ್ಲಿಸಿಕೊಳ್ಳುವುದು ಮಹಾಕವಿಯ ಸಾಮರ್ಥ್ಯದ ಒಂದು ವಿಶೇಷತೆ ಎನ್ನುವುದು ಸಹೃದಯರ ಅನುಭವಕ್ಕೆ ದೂರವಾದ ವಿಚಾರವೇನಲ್ಲ. ಆದರೆ ಭಾವಗೀತೆಯನ್ನು ಕುರಿತು ಚರ್ಚಿಸಿದ ಕೆಲವರು ಒಂದು ದೀರ್ಘಕೃತಿ (ಮಹಾಕಾವ್ಯವೇ ಮೊದಲಾದ ಕಥನ ಪ್ರಕಾರಗಳು)ಯಲ್ಲಿ ಅತ್ಯುಜ್ವಲವಾದ ಭಾಗಗಳು ಅಲ್ಲಲ್ಲಿ ಇವೆ, ಹಾಗೆ ಉಜ್ವಲವಾಗಿರುವ ಭಾಗಗಳೆ ಭಾವಗೀತೆಗಳು ಅಥವಾ ಶುದ್ಧಕಾವ್ಯ- ಎಂದು ಹೇಳಿದ ಮಾತಿನಲ್ಲಿಯೂ ಅರ್ಥವಿಲ್ಲದೆ ಇಲ್ಲ. ಯಾವ ಮಹಾಕಾವ್ಯವನ್ನು ತೆಗೆದುಕೊಂಡರೂ ನಮಗೆ ಕವಿಕೃತಿಯಲ್ಲಿ ಮೊದಲಿಂದ ಕಡೆತನಕ ಕವಿ ಪ್ರತಿಭೆಯೆ ಕೆಲಸ ಮಾಡಿರುವುದಾದರೂ, ಅದು ಕೆಲವೆಡೆ ಮಾತ್ರ ಉಜ್ವಲವಾದ ಶೃಂಗಗಳನ್ನು ನಿರ್ಮಿಸಿರುವುದು ಕಂಡುಬರುತ್ತದೆ. ಇಂಥ ಭಾಗಗಳಲ್ಲಿ ಏನೋ ತೀವ್ರತೆ, ಏನೋ ಮಿಂಚು ನಮ್ಮ ಅನುಭವಕ್ಕೆ ಬರುತ್ತದೆ. ಎಂದರೆ ಕವಿಕೃತಿಯಲ್ಲಿ ಉದ್ದಕ್ಕೂ ಪ್ರತಿಭೆಯ ನಿರ್ಮಿತಿ ಉಂಟೆಂಬುದನ್ನು ಒಪ್ಪಿದರೂ, ಸ್ಫೂರ್ತಿಯ ಸ್ಪರ್ಶ ಎಲ್ಲ ಕಡೆಯೂ ಉಂಟೆಂಬುದನ್ನು ನಾವು ಒಪ್ಪುವುದಿಲ್ಲ. ಮಹಾಕಾವ್ಯದಲ್ಲಿ ಮಾತ್ರವಲ್ಲ, ಭಾವಗೀತೆಗಳಲ್ಲಿಯೂ ಸಹ ಎಷ್ಟೋ ಸಲ ಮೊದಲ ಕೆಲವು ಪಂಕ್ತಿಗಳಲ್ಲಿ ಕಾಣಿಸಿಕೊಂಡ ಸ್ಫೂರ್ತಿ ಕಡೆ ಕಡೆಯಲ್ಲಿ ಬತ್ತಿಹೋಗಬಹುದು. ಎಷ್ಟೋ ಸಲ ಪದ್ಯದ ನಡುವೆ ಬಂದ ಯಾವುದೋ ಒಂದು ಪ್ರತಿಮೆಯೋ, ಇಡೀ ಕವನವನ್ನು ಜೀವಂತವನ್ನಾಗಿಸುವ ಒಂದು ಪಂಕ್ತಿಯೋ, ಸ್ಫೂರ್ತಿಯಿಂದ ಹೊಮ್ಮಿ ಬರಬಹುದು. ಆದರೆ ಮಹಾಕಾವ್ಯದಲ್ಲಂತೂ ಈ ಏರಿಳಿತ ವಿಶೇಷವಾಗಿ ಅನುಭವಕ್ಕೆ ಬರುತ್ತದೆ. ಆಗ ಅನ್ನಿಸುತ್ತದೆ ಕಾವ್ಯ ನಿರ್ಮಾಣಕ್ಕೆ ಅಗತ್ಯವಾದ ಪ್ರತಿಭೆ ಉದ್ದಕ್ಕೂ ಇರುವುದಾದರೂ, ಸ್ಫೂರ್ತಿ ಮಾತ್ರ ಅಲ್ಲಲ್ಲಿ ಬಂದು ತನ್ನ ಮಿಂಚಿನ ಹೆಜ್ಜೆಯನ್ನು ಒತ್ತಿ ಹೋಗಿದೆ ಎಂದು.

ಈ ಚರ್ಚೆಯಿಂದ ನಾವು ಮತ್ತೊಂದು ಸಮಸ್ಯೆಗೆ ಇಳಿದಂತಾಯಿತು. ಪ್ರತಿಭೆಗೂ ಸ್ಫೂರ್ತಿಗೂ ವ್ಯತ್ಯಾಸ ಉಂಟೆ? ಹಿಂದಿನ ವಿಚಾರ ಸರಣಿಯನ್ನು ಗಮನಿಸಿದರೆ ವ್ಯತ್ಯಾಸವುಂಟು ಎನ್ನಿಸುತ್ತದೆ.

ಪಾಶ್ಚಾತ್ಯರಲ್ಲಿ Inspiration ವಿಚಾರವನ್ನು ಹೇಳುವಾಗ Imagination ಎನ್ನುವ ಮಾತನ್ನೂ Imagination ವಿಚಾರವನ್ನು ಹೇಳುವಾಗ Inspiration ಎನ್ನುವ ಮಾತನ್ನೂ, ತಾರದೆ ಅವೆರಡನ್ನೂ ಪ್ರತ್ಯೇಕವಾಗಿಯೆ ಇರಿಸಿಕೊಂಡು ಚರ್ಚಿಸಿರುವಂತೆ ತೋರುತ್ತದೆ. ಈ ಎರಡರ ವ್ಯತ್ಯಾಸ ಹಾಗೂ ಸಂಬಂಧಗಳನ್ನು ಚರ್ಚಿಸಿರುವ ಸಂಗತಿ ನಮ್ಮ ಕಣ್ಣಿಗೆ ಬಿದ್ದಿಲ್ಲ. ನಮಗೆ ತೋರುವ ಮಟ್ಟಿಗೆ ಈ ಎರಡಕ್ಕೂ ಸಂಬಂಧವೂ ಇದೆ, ವ್ಯತ್ಯಾಸವೂ ಇದೆ. ಪ್ರತಿಭೆ ಎಲ್ಲರಲ್ಲಿಯೂ ತರ-ತಮಗಳಲ್ಲಿ ಇರುವ ಒಂದು ಶಕ್ತಿ. ಆದರೆ ಇದು ಕವಿಯಲ್ಲಿ ವಿಶೇಷ ರೂಪದಲ್ಲಿ ಇರುತ್ತದೆ. ಆದುದರಿಂದಲೇ ದೈನಂದಿನ ಸಾಧಾರಣ ವಾಸ್ತವಲೋಕ ಆತನ ಕಣ್ಣಿಗೆ ಅಪರಿಚಿತ ವಿನೂತನವಾಗಿ ಕಾಣುತ್ತದೆ. ಆದರೆ ಹಾಗೆ ಕಂಡದ್ದನ್ನು ಮಾತಿನಲ್ಲಿ ಕಂಡರಿಸಬೇಕಾದರೆ, ತಾನು ಕಂಡ ಅನುಭವವನ್ನು ಉಕ್ತಿ ಕ್ರಿಯಾಭಿಮುಖವನ್ನಾಗಿ ಮಾಡಬೇಕಾದರೆ, ಅವನ ಪ್ರತಿಭೆಗೆ ಪ್ರಚೋದಕವಾದ ಒಂದು ವಿಶೇಷಾವೇಶ ಒದಗಿ ಬರುತ್ತದೆ. ಇದೇ ಸ್ಫೂರ್ತಿ. ಎಂದರೆ ಪ್ರತಿಭೆ ಕೇವಲ ಕಾಣತಕ್ಕದ್ದು ಎಂದು ಅರ್ಥವಲ್ಲ. ಪ್ರತಿಭೆ ಕಾಣುವಾಗ ಹೇಗೋ ಕಟ್ಟುವಾಗಲೂ ಇರುತ್ತದೆ. ಆದರೆ ಅದನ್ನು ಉಜ್ವಲಗೊಳಿಸುವ ಆವೇಶರೂಪವಾದ ಸ್ಫೂರ್ತಿ ಕಟ್ಟುವಾಗ ಮಾತ್ರ ಒದಗಿ ಬರತಕ್ಕ ಒಂದು ಶಕ್ತಿ. ಕಟ್ಟುವಿಕೆಗೆ ಪ್ರಚೋದಕವಾದ ಈ ಶಕ್ತಿ,* ಆವೇಶ ರೂಪವಾದುದರಿಂದ, ಅದು ಕೃತಿನಿರ್ಮಿತಿಯಲ್ಲಿ ಅಲ್ಲಲ್ಲಿ ನಿರ್ಗಮಿಸಿದಾಗ, ಸ್ಫೂರ್ತಿಯ ಸ್ಪರ್ಶವಿಲ್ಲದೆ ರಚಿತವಾದ ಭಾಗಗಳು ಕಂಡುಬರುತ್ತವೆ. ಅಲ್ಲೆಲ್ಲಾ ಕವಿಯ ಸಹಜ ಪ್ರತಿಭಾಶಕ್ತಿ ಬುದ್ಧಿಯ ಸಹಾಯದಿಂದ ಕೆಲಸ ಮಾಡುವುದರಿಂದ ಆ ಭಾಗಗಳು ನೀರಸವಾಗದೆ ರಮ್ಯವಾಗಿಯೇ ಇದ್ದರೂ, ಸ್ಫೂರ್ತಿಯಿಂದ ಹೊಮ್ಮಿದ ಭಾಗಗಳಷ್ಟು ಉಜ್ವಲವಾಗಿಲ್ಲದೆ ಇರಬಹುದು. ಆದರೆ ಎಲ್ಲಿ ಸ್ಫೂರ್ತಿಯಾಗಲಿ, ಪ್ರತಿಭೆಯಾಗಲಿ ಎರಡೂ ಇಲ್ಲದೆ ಕವಿ ಕೇವಲ ವ್ಯುತ್ಪತ್ತಿ ಮತ್ತು ನೈಪುಣ್ಯ ಬಲದಿಂದ ಹೊಸೆದ ಭಾಗಗಳಿರುತ್ತವೆಯೋ ಅವೆಲ್ಲವೂ ಛಂದೋಬದ್ಧವಾಗಿ “ಕಾವ್ಯ” ದಂತೆ ತೋರಿದರೂ, ಅವು ಬರೀ ನೀರಸವೋ ಕೇವಲ ಚಮತ್ಕಾರ ಪ್ರಧಾನವೋ ಆಗಿ, ಕಿಡಿಯಿಲ್ಲದೆ ಬೂದಿ ಬರವಣಿಗೆ ಮಾತ್ರವಾಗಿಬಿಡುತ್ತವೆ. ಆದರೆ ಎಲ್ಲೆಲ್ಲಿ ಸ್ಫೂರ್ತಿಯ ಸ್ಪರ್ಶವುಂಟೋ ಅಲ್ಲೆಲ್ಲಾ ಕಾವ್ಯ ಅತ್ಯಂತ ಉಜ್ವಲವಾಗಿ ಓದುಗನಲ್ಲಿಯೂ ಸ್ಫೂರ್ತಿಯನ್ನು ತುಂಬುತ್ತದೆ.** ಆದಕಾರಣ ಸ್ಫೂರ್ತಿ ಎನ್ನುವುದನ್ನು ಕೃತಿ ನಿರ್ಮಾಣ ಕಾಲದಲ್ಲಿ ಪ್ರಾಪ್ತವಾಗುವ ಒಂದು ವಿಶೇಷಾವೇಶ ಎಂದು ತಿಳಿಯಬೇಕು. ಅಲ್ಲದೆ ಸ್ಫೂರ್ತಿ ಎನ್ನುವ ಮಾತಿನ ಬಳಕೆಯನ್ನು ಗಮನಿಸಿದರೆ ಅದರ ಲಕ್ಷಣ ಇನ್ನೂ ಸ್ಪಷ್ಟವಾಗುತ್ತದೆ. ಕವಿ ಸ್ಫೂರ್ತಿಯಿಂದ ಬರೆದ, ಭಾಷಣಕಾರ ಸ್ಫೂರ್ತಿಯಿಂದ ಮಾತನಾಡಿದ, ಯೋಧ ಸ್ಫೂರ್ತಿಯಿಂದ ಹೋರಾಡಿದ, ಕಲಾವಿದ ಸ್ಫೂರ್ತಿಯಿಂದ ಚಿತ್ರ ಬರೆದ, ಗಾಯಕ ಸ್ಫೂರ್ತಿಯಿಂದ ಹಾಡಿದ -ಎನ್ನುತ್ತೇವೆ. ಕವಿ ಪ್ರತಿಭೆಯ ಕಣ್ಣಿಂದ ನೋಡಿದ ಎನ್ನುತ್ತೇವೆಯೆ ಹೊರತು, ಸ್ಫೂರ್ತಿಯಿಂದ ನೋಡಿದ ಎನ್ನುವುದಿಲ್ಲ. ಎಂದರೆ ಸ್ಫೂರ್ತಿ ಮಾಟಕ್ಕೆ ಸಂಬಂಧಿಸಿದ್ದೆ ಹೊರತು ನೋಟಕ್ಕಲ್ಲ. ಸ್ಫೂರ್ತಿ ಎನ್ನುವುದು ಪರಿಭಾವನಾ ತಾಟಸ್ಥ ವಲ್ಲ. ಅದೊಂದು ವಿಶೇಷ ಚಟುವಟಿಕೆ. ಎಲ್ಲೆಲ್ಲಿ ಕಲಾಪ್ರವೃತ್ತಿ ನೂತನ ನಿರ್ಮಾಣದಲ್ಲಿ ತೊಡಗುತ್ತದೆಯೋ ಅಲ್ಲಲ್ಲಿ ಆ ಪ್ರವೃತ್ತಿಯನ್ನು ತನ್ನ ಸ್ಪರ್ಶದಿಂದ ಉಜ್ವಲಗೊಳಿಸುವ ಕಾರ್ಯ ಸ್ಫೂರ್ತಿಯದು.* ಹಾಗೆ ಸ್ಫೂರ್ತಿಯಿಂದ ಉಜ್ವಲವಾದ ಕೃತಿಭಾಗಗಳನ್ನೇ ನಾವು ಆ ಕವಿಯ ಅತ್ಯುತ್ತಮ ಭಾಗಗಳೆಂದು ಗುರುತಿಸುತ್ತೇವೆ.

“ಸ್ಫೂರ್ತಿ” ಎನ್ನುವ ಪದ ನಮ್ಮಲ್ಲಿ ಹೊಳಹು, ಸ್ಪಂದನ, ಅಭಿವ್ಯಕ್ತಿ ಎನ್ನುವ ಅರ್ಥಗಳಲ್ಲಿ ಬಳಕೆಯಲ್ಲಿದ್ದರೂ+ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಅದು ಪ್ರತಿಭಾ ವ್ಯಾಪಾರಕ್ಕೆ ಸಂಬಂಧಿಸಿದ ಒಂದು ಪಾರಿಭಾಷಿಕ ಪದವಾಗಿ ಬಳಸಲ್ಪಟ್ಟಿಲ್ಲ.**

ಇಂಗ್ಲಿಷಿನ Inspiration ಎಂಬ ಪದಕ್ಕೆ ‘ಸ್ಫೂರ್ತಿ’ ಎನ್ನುವ ಪದವನ್ನು ಸಂವಾದಿಯಾಗಿ ಯಾರು ಮೊಟ್ಟಮೊದಲು ಬಳಸಲು ಮೊದಲು ಮಾಡಿದರೋ ತಿಳಿಯಬೇಕಾದ ಸಂಗತಿ. ಈಗ ನಾವು ಯಾವುದನ್ನು ಸ್ಫೂರ್ತಿ ಎಂದು ಕರೆಯುತ್ತೇವೆಯೋ ಆ ಒಂದು ವ್ಯಾಪಾರಕ್ಕೆ ನಮ್ಮ ಪ್ರಾಚೀನ ಆಲಂಕಾರಿಕರು ಕೊಟ್ಟ ಹೆಸರು ‘ರಸಾವೇಶ’ ಎಂಬುದು. ಈ ರಸವೇಶ ಎನ್ನುವುದು ಪ್ರತಿಭಾ ವ್ಯಾಪಾರದಲ್ಲಿಯೇ ಅಂತರ್ಗತವಾಗುವ ಒಂದು ಕ್ರಿಯೆ. ನಮ್ಮವರು ಹೇಳುವ ಪ್ರತಿಭಾ ವ್ಯಾಪಾರ, ಪಾಶ್ಚಾತ್ಯರು ಹೇಳುವ Imagination ಮತ್ತು Inspiration ಎರಡನ್ನೂ ಎರಡನ್ನೂ ಒಳಗೊಳ್ಳುತ್ತದೆ. ಪ್ರತಿಭೆಯೆ ಕಾವ್ಯಕ್ಕೆ ತಾಯಿ. ಅದರ ಸ್ವರೂಪವನ್ನು ವರ್ಣಿಸುತ್ತಾ ಆಲಂಕಾರಿಕರೆಲ್ಲರೂ ಅದೊಂದು ಸ್ಫುರಣೆ, ಹೊಳಹು ಎನ್ನುತ್ತಾರೆ. ಆದರೆ “ಈ ಪ್ರತಿಭಾವ್ಯಾಪಾರಕ್ಕೆ ಮೊದಲಿನಿಂದ ಕೊನೆಯತನಕ ನಿಯಾಮಕವಾದ ಮತ್ತೊಂದು ತತ್ವವುಂಟು. ಅದೇ ರಸಾವೇಶ, ಧ್ವನಿತತ್ವದ ಸಮರ್ಥಕಾರನಾದ ಅಭಿನವ ಗುಪ್ತನಿಗೂ ಅದರ ಖಂಡನಕಾರನಾದ ಮಹಿಮಭಟ್ಟನಿಗೂ ಈ ವಿಚಾರದಲ್ಲಿ ಏಕಕಂಠತೆಯಿದೆ. ‘ರಸಾವೇಶ ವೈಶದ್ಯ ಸೌಂದರ್ಯ ನಿರ್ಮಾಣ ಕ್ಷಮತ್ವ’ವೇ ಪ್ರತಿಭೆಯೆಂದು ಅಭಿನವಗುಪ್ತನ ಉಕ್ತಿ (ಧ್ವನ್ಯಾಲೋಕಲೋಚನ, ಪು. ೨೯)[15] ಅಪೂರ್ವ ವಸ್ತುವನ್ನು ನಿರ್ಮಿಸಬಲ್ಲ ಪ್ರಜ್ಞಾವಿಶೇಷವಾದ ಪ್ರತಿಭೆಯ ಲಕ್ಷಣವೇ ಇದು: ರಸಾವೇಶದ ವೈಶದ್ಯದ ಪರಿಣಾಮವಾಗಿ ಸೌಂದರ್ಯಮಯವಾದ ಕಾವ್ಯನಿರ್ಮಾಣ ಕೌಶಲ. ರಸಾವೇಶವಿಲ್ಲದೆ  ಕಾವ್ಯನಿರ್ಮಾಣವೆ ಇಲ್ಲ. “ಕವಿಯ ಹೃದಯದಲ್ಲಿ ರಸದ ಕಾವು ಉಂಟಾದಾಗಲೇ ಅವನ ಪ್ರತಿಭೆ ಉಜ್ವಲಿಸುವುದು…. ಪ್ರತಿಭೆ ಚುರುಕಾಗಿ ಓಡುವ ಕುದುರೆಯಂತೆ; ಆದರೆ ಕಡಿವಾಣವನ್ನೂ ಚಾವಟಿಯನ್ನೂ ಕೈಯಲ್ಲಿ ಹಿಡಿದು ಎಲ್ಲಿ ಎತ್ತ ಓಡಿಸಬೇಕೊ ಓಡಿಸಿ, ತಿರುಗಿಸಬೇಕೋ ತಿರುಗಿಸಿ, ಹಿಂದಕ್ಕೆ ಜಗ್ಗಬೇಕೋ ಜಗ್ಗಿ, ಸರಿಯಾದ ದಾರಿಯಲ್ಲಿ ನಡೆಸುವ ಸಾರಥಿ ಕವಿಯ ರಸಾವೇಶ.”[16] ಈ ರಸಾವೇಶವನ್ನು ಕುರಿತು ಆಲಂಕಾರಿಕರು ಹೇಳಿರುವುದು ಅತ್ಯಲ್ಪ.  ಆದರೆ ಕವಿಗಳು ಮಾತ್ರ ತಮ್ಮ ಕಾವ್ಯಾರಂಭದಲ್ಲಿ ಮಾಡುವ ದೇವತಾ ಸ್ತುತಿಯಲ್ಲಿ, ಕಾವ್ಯವನ್ನು ನಡೆಸುವ ದಿವ್ಯಶಕ್ತಿಯನ್ನು ಆವಾಹನೆ ಮಾಡುವಲ್ಲಿ ಸ್ಫೂರ್ತಿತತ್ವದ ಪ್ರಾಚೀನ ಭಾವನೆಯನ್ನೆ ವ್ಯಕ್ತಪಡಿಸಿದ್ದಾರೆ. ನಮ್ಮ ಆಲಂಕಾರಿಕರ ದೃಷ್ಟಿಯಲ್ಲಿ ಪ್ರತಿಭಾ ವ್ಯಾಪಾರವೆ ವಿಶೇಷ ವ್ಯಾಪಕವಾದ ತತ್ವ. ಪ್ರತಿಭೆ ನವನವ ಉನ್ಮೇಷಶಾಲಿನಿ – ಹೊಸಹೊಸತನ್ನು ಹೊಳೆಯಿಸುವ ಶಕ್ತಿ, ನವನವ ಉಲ್ಲೇಖ ಶಾಲಿನಿ ಹೊಸ ಹೊಸತಾಗಿ ಕಟ್ಟುವ ಶಕ್ತಿ, ಎರಡೂ ಆದುದರಿಂದ ಕಟ್ಟುವ ಶಕ್ತಿಗೆ ಅತ್ಯಗತ್ಯವಾದ ‘ರಸಾವೇಶ’ ಎನ್ನುವುದು ಸ್ಫೂರ್ತಿ ಅಲ್ಲದೆ ಬೇರೆ ಅಲ್ಲ.

ಕವಿ ಕಂಡದ್ದನ್ನು ಕಟ್ಟುತ್ತಾನೆ. ಹಾಗೆ ಕಟ್ಟುವಲ್ಲಿ ಸ್ಫೂರ್ತಿಯನ್ನು ಗುರುತಿಸುತ್ತೇವೆ. ಎಂದರೆ ಕವಿ ಕಾಣುವ ಘಟ್ಟ ಒಂದು ಉಂಟು, ಅದು ಮುಗಿದ ಮೇಲೆ ಕಟ್ಟುವ ಕೆಲಸ ಶುರುವಾಗುತ್ತದೆ, ಎಂದು ಅರ್ಥವಾಗಲು ಅವಕಾಶವಿದೆ. ಆದರೆ ವಾಸ್ತವಾಂಶ ಹಾಗಿಲ್ಲ. ದರ್ಶನ ಮೊದಲು, ವರ್ಣನೆ ಅದರ ಹಿಂದೆ. ಹೀಗೆ ಮಾಡುವ ವಿಭಾಗ ಕೇವಲ ಔಪಚಾರಿಕ. ನವ ನವ ಉನ್ಮೇಷ ಹಾಗೂ ನವ ನವ ಉಲ್ಲೇಖ ಎರಡೂ ಒಂದೇ ಶಕ್ತಿಯ ಎರಡು ಮುಖಗಳು. ಅಲ್ಲಿ ಕಾಣುವಾಗಲೂ ಕಟ್ಟುವ ಅಂಶವಿರುತ್ತದೆ. ಕಟ್ಟುವಾಗಲೂ ಕಾಣುವ ಅಂಶವಿರುತ್ತದೆ. ಆದರೆ ಯಾವುದು ಸ್ಫೂರ್ತಿಯಲ್ಲಿ ಕವಿಗೆ ಒದಗಿಬರುತ್ತದೆಯೋ ಅದೆಲ್ಲವನ್ನೂ ಭಾಷೆಯಲ್ಲಿ ಸಂಪೂರ್ಣವಾಗಿ ಹಿಡಿದಿಡಲಾಗುವುದಿಲ್ಲ. ಸ್ಫೂರ್ತಿಯ ಕಾವು ಎಷ್ಟೋ ವೇಳೆ ಭಾಷೆಯ ಕಟ್ಟನ್ನು ಮೀರಿ ಮುಂದೆ ಹೋಗಬಹುದು. ಅಥವಾ ಮತ್ತೆ ಕೆಲವು ವೇಳೆ ಭಾಷೆಯಲ್ಲಿ ಹಿಡಿದಿಡುವ ಪ್ರಯತ್ನದಲ್ಲಿ ಸ್ಫೂರ್ತಿಯ ಕಾವೇ ಇಳಿಮುಖವಾಗಬಹುದು. ಕವಿಗೊದಗುವ ಆವೇಶರೂಪವಾದ ಸ್ಫೂರ್ತಿಯಲ್ಲಿ ನುಗ್ಗಿ ಬರುವ ಪದ, ಪದಪುಂಜ, ಅಲಂಕಾರ ಪ್ರಕಾರಗಳು, ಈ ಎಲ್ಲವೂ ಆತನ ವ್ಯುತ್ಪತ್ತಿ ಅಭ್ಯಾಸಗಳಿಂದ ಸಿದ್ಧವಾದ ಭಾಷೆಯ ಸಾಹಚರ್ಯದಲ್ಲಿ ಅಭಿವ್ಯಕ್ತಿಯನ್ನು ಪಡೆಯುವಾಗ, ಕಲಾವಿದ ಆಶ್ರಯಿಸಬೇಕಾದ ಅಭಿವ್ಯಕ್ತಿಯ ಮಾಧ್ಯಮದ ಸಹಜ ಮಿತಿಯಿಂದಲೋ ಏನೋ, ಸ್ಫೂರ್ತಿ ಕುಂಠಿತವಾಗಲೂ ಬಹುದು. ಅಂಥ ಹೊತ್ತಿನಲ್ಲಿ ಕವಿ ಕೊರಗುವುದೂ ಉಂಟು. ಷೆಲ್ಲಿ ಕವಿ ಇಂಥ ಅನುಭವವನ್ನು ಕುರಿತು “ಯಾವಾಗ ರಚನೆ ಆರಂಭವಾಯಿತೋ ಆಗ ಸ್ಫೂರ್ತಿ ಇಳಿಮುಖವಾಗುತ್ತದೆ ಅಥವಾ ಕಾವನ್ನು ಕಳೆದುಕೊಳ್ಳುತ್ತದೆ. ಜಗತ್ತಿನ ಅತ್ಯುತ್ತಮ ಕಾವ್ಯ ಎಂದು ಯಾವುದನ್ನು ಕರೆಯುತ್ತೇವೋ ಅದು ಕೂಡ ಬಹುಶಃ ಕವಿಯ ಮೂಲಾನುಭವದ ದುರ್ಬಲ ಛಾಯೆ ಮಾತ್ರ”[17]-ಎಂದು ಹೇಳುತ್ತಾನೆ. ಈ ಹೇಳಿಕೆಯಲ್ಲಿನ ಉತ್ತರಾರ್ಧದಷ್ಟು ಪೂರ್ವಾರ್ಧ ಸರಿ ಎಂದು ತೋರುವುದಿಲ್ಲ. ಕವಿಯ ಸ್ಫೂರ್ತಿ ದೈನಂದಿನ ವ್ಯವಹಾರದ ಸಾಮಗ್ರಿಯಾದ ಭಾಷೆಯಲ್ಲಿ ಪ್ರವಹಿಸಿ ಅದನ್ನು ಪರಿವರ್ತಿಸಿ ಕವಿ ಪ್ರತಿಭೆಯ ವಲಯಕ್ಕೆ ಎತ್ತಿಕೊಡುತ್ತದೆ. ಹೀಗಿರುವಾಗ ಕವಿ ಕೃತಿರಚನೆಗೆ ತೊಡಗಿದ ಒಡನೆ ಅಥವಾ ಭಾಷಾ ಸಾಮಗ್ರಿಯಲ್ಲಿ ಅದನ್ನು ಹಿಡಿಯಲು ಮೊದಲು ಮಾಡಿದ ಒಡನೆ ಸ್ಫೂರ್ತಿ ಇಳಿಮುಖವಾಗುತ್ತದೆ ಎನ್ನುವುದು ಹೇಗೆ? ಹಾಗೆ ನೋಡಿದರೆ ಯಾವುದು ಸ್ಫೂರ್ತಿಯಲ್ಲಿ ಮೊದಲು ಕಾಣಿಸುತ್ತದೆಯೋ ಅದು ಕೃತಿಯ ಸರ್ವಸ್ವವೂ ಅಲ್ಲ. ಸ್ಫೂರ್ತಿಯಲ್ಲಿ ಮೊದಲು ಗೋಚರಿಸುವುದು ಇನ್ನೂ ಬರಲಿರುವ ಭಾವ ಪರಂಪರೆಯ ಮುಂಚೂಣಿಯ ಭಾಗವೋ ಅಥವಾ ಅದರದೊಂದು ಮುಖವೋ ಆಗಿರಬಹುದು. ಅದರ ಹಿಂದೆ ಇನ್ನೂ ಏನೇನಿದೆ ಅನ್ನುವುದು ಕವಿಗೆ ಗೋಚರಿಸುವುದು ಕೃತಿರಚನೆ ಪೂರ್ಣವಾದ  ಮೇಲೆಯೆ. ಇದರ ಮೇಲೆ ಸ್ಫೂರ್ತಿ ಎನ್ನುವುದು ಕೃತಿ ನಿರ್ಮಾಣದ ಆರಂಭ ಮಾತ್ರವಲ್ಲ, ಕವಿ ಷೆಲ್ಲಿ ಭಾವಿಸುವಂತೆ ಅದು ಕೃತಿ ನಿರ್ಮಾಣದ ಉದ್ದಕ್ಕೂ ನಡೆಯುವ, ನಡೆಯಬೇಕಾದ ಕ್ರಿಯೆ. ಕೃತಿನಿರ್ಮಾಣ ಎನ್ನುವುದು ಮೊದಲು ಸ್ಫೂರ್ತಿಯಲ್ಲಿ ಹೊಳೆದು ಆಮೇಲೆ ಭಾಷೆಯಲ್ಲಿ ಮೈದೋರುವ ಕ್ರಿಯೆ ಅಲ್ಲ: ಅದು ಬರೆಯುತ್ತಾ ಹೋದಂತೆ ತೆರೆಯುತ್ತಾ ಹೋಗುವ ಒಂದು ಚಟುವಟಿಕೆ. ಮೊಟ್ಟಮೊದಲ ಹೊಳೆ ಹರಿದಂತೆ ಅದರ ರೀತಿ. ಮೊಟ್ಟಮೊದಲ ಹೊಳೆ ತಾನು ಹರಿಯುತ್ತಲೇ ತನ್ನ ಪಾತ್ರವನ್ನೂ ನಿರ್ಮಿಸಿಕೊಂಡಂತೆ, ಸ್ಫೂರ್ತಿ ಹರಿಯುತ್ತಲೇ ತನ್ನ ರಚನೆಯ ಪಾತ್ರವನ್ನು ರೂಪಿಸುತ್ತಾ ಹೋಗಬಹುದು. ಕೃತಿನಿರ್ಮಾಣ ಮುಗಿದಮೇಲೆ ಅದರ ರಚನೆ ಕವಿಗೇ ಬೆರಗನ್ನು ತರಬಹುದು. ಆದ್ದರಿಂದ ಕೃತಿ ಮುಗಿದನಂತರವೆ ಕವಿಗೆ ಅದರ ಆಕೃತಿ ಗೋಚರವಾಗುವುದು. ಆದರೆ ಇಷ್ಟು ಮಾತ್ರ ನಿಜ: ಕವಿ ತನ್ನ ಮೂಲಾನುಭವವನ್ನು ತನ್ನ ಆಭಿವ್ಯಕ್ತಿಯೊಂದಿಗೆ ಹೋಲಿಸಿಕೊಂಡಾಗ ತನ್ನ ಉಜ್ವಲವಾದ ಅನುಭವದ ಎದುರಿಗೆ ತನ್ನ ಅಭಿವ್ಯಕ್ತಿ ತೀರ ಸಪ್ಪೆಯಾಗಿ ತೋರಬಹುದು; ತನ್ನ ಅನುಭವ ಎಷ್ಟೊಂದು ಉಜ್ವಲವಾಗಿತ್ತು, ಆದರೆ ಅದನ್ನೆಲ್ಲಾ ಹಿಡಿದಿಡಲು ಆಗಿಲ್ಲವಲ್ಲ ಎಂದು ಅನ್ನಿಸಬಹುದು. ಹಾಗನ್ನಿಸಿದ ಮಾತ್ರಕ್ಕೆ “ರಚನೆಗೆ  ತೊಡಗಿದಾಗಲೆ ಸ್ಫೂರ್ತಿ ಇಳಿಮುಖವಾಗುತ್ತದೆ” ಎಂದು ಅರ್ಥವಲ್ಲ. ಕವಿಯ ಉಜ್ವಲವಾದ ಅನುಭವವೆಲ್ಲವೂ ಭಾಷೆಯಲ್ಲಿ ಸಂಪೂರ್ಣವಾಗಿ ಪ್ರಕಟವಾಗುವುದೂ ಸಾಧ್ಯವಿಲ್ಲ; ಆದರೆ ಓದುಗರಾದ ನಮಗೆ ಭಾಷೆಯಲ್ಲಿ ಪ್ರಕಟವಾದ ಸೊಗಸು ಸಮರ್ಪಕವಾಗಿದ್ದರೆ ತೃಪ್ತಿಯನ್ನು ತರುತ್ತದೆ. ಅದು ಸಾಕು. ಕವಿಗಂತೂ ಅತೃಪ್ತಿ ಇದ್ದೇ ಇರುತ್ತದೆ; ಅವನಿಗೆ ಅದು ಅಗತ್ಯ. ಈ ಅತೃಪ್ತಿಯ ನಿಲುವಿನಲ್ಲಿ “ಜಗತ್ತಿನ ಅತ್ಯುತ್ತಮ ಕಾವ್ಯ ಎಂದು ಯಾವುದನ್ನು ಕರೆಯುತ್ತೇವೋ ಅದು ಕೂಡ ಬಹುಶಃ ಕವಿಯ ಮೂಲಾನುಭವದ ದುರ್ಬಲ ಛಾಯೆ ಮಾತ್ರ” -ಎಂದು ಕೊರಗುವ ಷೆಲ್ಲಿಯೊಂದಿಗೆ ನಾವೂ ದನಿಕೂಡಿಸಬಹುದು.

…………..[18]

ಸ್ಫೂರ್ತಿಯಲ್ಲಿರುವಾಗ ಕವಿ ಉಳಿದ ಸಮಯಗಳಲ್ಲಿಗಿಂತ ಸುಲಭವಾಗಿ ಮತ್ತು ಸೊಗಸಾಗಿ ಬರೆಯಬಲ್ಲನು. ಎಂದರೆ, ಆ ಹೊತ್ತಿನಲ್ಲಿ ರಚನಾಕೌಶಲದ ಅಥವಾ ಕಲೆಗಾರಿಕೆಯ (Craftmanship) ಅಂಶ ಇರುವುದೇ ಇಲ್ಲವೆಂದು ಅರ್ಥವಲ್ಲ. “ಕಾವ್ಯ ರಚನೆಯಲ್ಲಿ ಸ್ಫೂರ್ತಿ ಮತ್ತು ಕಲೆಗಾರಿಕೆಗಳೆರಡೂ ಕೆಲಸ ಮಾಡುತ್ತಿದ್ದರೂ, ಸ್ಫೂರ್ತಿಯೇ ಮುಖ್ಯವಾದದ್ದು” ಎನ್ನುತ್ತಾನೆ ಪಿಂಡಾರ್. “ಕಾವ್ಯ ಕ್ರಿಯೆಯಲ್ಲಿ ಸ್ಫೂರ್ತಿಗೆ ಮಹತ್ವದ ಸ್ಥಾನವಿದ್ದರೂ ಕಲೆಗಾರಿಕೆಯ ಸ್ಥಾನವೂ ಕಡಿಮೆಯದಲ್ಲ”[19] ಎನ್ನುತ್ತಾನೆ ಪ್ಲೇಟೋ. “ಕೇವಲ ಸ್ಫೂರ್ತಿಯನ್ನು ನಂಬಿಕೊಂಡು ಬರೆಯುವ ಕವಿಗಳ ವಿಚಾರದಲ್ಲಿ ಹೊರೆಸನಿಗೆ ತೀವ್ರವಾದ ತಿರಸ್ಕಾರವಿದೆ.”[20] ಈ ಅಭಿಪ್ರಾಯಗಳ ಸಾರಾಂಶವೆಂದರೆ, ಕವಿ ಸ್ಫೂರ್ತಿಯಿಂದ ಬರೆಯುವ ಸಂದರ್ಭದಲ್ಲಿ, ಸ್ಫೂರ್ತಿಯ ಜತೆಗೆ ರಚನಾಕೌಶಲ ಅಥವಾ ಕಲೆಗಾರಿಕೆಯೂ ನೆರವಾಗಿರುತ್ತದೆ ಎನ್ನುವುದು. ಈ ಕಲೆಗಾರಿಕೆಯ ಅಂಶ ಕೆಲವರಲ್ಲಿ ಕೃತಿ ನಿರ್ಮಾಣದ ಅನಂತರದ್ದೆಂಬಂತೆಯೂ ಕಾಣಬಹುದು. ಕೆಲವರು ಸ್ಫೂರ್ತಿಯಲ್ಲೇ ಥಟ್ಟನೆ ಇಡೀ ಕಾವ್ಯವನ್ನು ಲೀಲಾಜಾಲವಾಗಿ ಬರೆದಂತೆ ತೋರುತ್ತದೆ. ಅಂಥ ಸಂದರ್ಭದಲ್ಲಿ ಯಾವ ರಚನಾ ಮೂಲವಾದ ಪ್ರಯತ್ನವೂ ಕಾಣಿಸದೆ ಇರಬಹುದು. ಮತ್ತೆ ಕೆಲವರು ಸ್ಫೂರ್ತಿಯಿಂದ ಹೊಳೆದದ್ದನ್ನು ಹಿಡಿದಿರಿಸಿಕೊಂಡು ಅನಂತರ ನಿಧಾನವಾಗಿ ಕೂತು, ತಿದ್ದಿ, ತೀಡಿ, ಕಂಡರಿಸಿ ಪೂರೈಸಬಹುದು. ಒಬ್ಬ ಕವಿ ಹೇಳುತ್ತಾನೆ; “ಸ್ಫೂರ್ತಿ ಎನ್ನುವುದು ಕೃತಿಯ ಮೊದಲೂ ಹೌದು, ಕೃತಿಯ ತುದಿಯೂ ಹೌದು. ಅದು ಕವಿಯ ಮನಸ್ಸಿನಲ್ಲಿ ಗೋಚರಿಸುವ ಮೊದಲ ಭಾವ ಮತ್ತು ಶಬ್ದಗಳಲ್ಲಿ ರೂಪತಾಳುವ ಕಡೆಯ ಭಾವ. ಈ ಆರಂಭ ಮುಕ್ತಾಯಗಳ ನಡುವೆ ಬೆವರಿನ ಶ್ರಮದ ಪಂದ್ಯವನ್ನು ಕವಿ ಗೆಲ್ಲಬೇಕಾಗಿದೆ.”[21] ಮಹತ್ತಾದ ಕಲಾ ನಿರ್ಮಾಣದಲ್ಲಿ ಕೇವಲ ಸ್ಫೂರ್ತಿಯ ಕಾರ್ಯವಷ್ಟೇ ಅಲ್ಲ, ಅನಂತರದ ವಿಶೇಷ ಪರಿಶ್ರಮದ ಕಾರ್ಯವೂ ಇರುತ್ತದೆ. ದೊಡ್ಡ ಕೃತಿಯನ್ನು ಬರೆದ ಕವಿಗಳ ಹಸ್ತಪ್ರತಿಯನ್ನು ನೋಡಿದರೆ ಅವರು ಸ್ಫೂರ್ತಿದತ್ತವಾದ ಕೃತಿಯನ್ನು ಹೇಗೆ ಅನಂತರದ ತಿದ್ದುವಿಕೆಗೆ ಒಳಪಡಿಸುತ್ತಾರೆ ಎನ್ನುವುದು ಗೋಚರಿಸುತ್ತದೆ.* ನಮ್ಮವರೂ ಈ ಮಾತನ್ನು ಹೇಳಿದ್ದಾರೆ. “ರಸಾವೇಶದಲ್ಲಿ ಕಾವ್ಯವನ್ನು ರಚಿಸುವವನಿಗೆ ವಿವೇಚನೆಯುಳ್ಳ ಕಾವ್ಯ ದೃಷ್ಟಿ ಇರುವುದಿಲ್ಲ; ಆದಕಾರಣ ಆಮೇಲೆ ಪರೀಕ್ಷಿಸಬೇಕು (‘ರಸಾವೇಶತಃ ಕಾವ್ಯಂ ವಿರಚಯತೋ ನಚವಿವೇಕ್ತ್ರೀ ದೃಷ್ಟಿ, ತಸ್ಮಾದನುಪರೀಕ್ಷೇತ) ಹೆಚ್ಚಾದದ್ದನ್ನು ಬಿಡುವುದು, ಸಾಲದ್ದನ್ನು ಕೂಡಿಸುವುದು ಸರಿಯಲ್ಲದ್ದನ್ನು ಮಾರ್ಪಡಿಸುವುದು, ಮರೆತದ್ದನ್ನು ನೆನಪಿಗೆ ತಂದುಕೊಳ್ಳುವುದು; ಇತ್ಯಾದಿ’[22] ಎನ್ನುತ್ತಾನೆ ರಾಜಶೇಖರ ತನ್ನ ಕಾವ್ಯಮೀಮಾಂಸೆ ಯಲ್ಲಿ. ‘ಕಾವ್ಯಮಂ ನಡೆಸುವಾತಂ ರಸಾವೇಶ ಮರಹು ಆಲಸ್ಯವೆಡೆಗೊಳಲು” ತಪ್ಪುತ್ತಾನೆ ಎಂದು ರಾಘವಾಂಕ ಹೇಳುತ್ತಾನೆ.[23] ಎಂದರೆ ಸ್ಫೂರ್ತಿ ಅಥವಾ ರಸಾವೇಶದಲ್ಲಿ ಬರೆಯುವಾಗ ಕವಿಗೆ ವಿವೇಚನೆಯುಳ್ಳ ದೃಷ್ಟಿಯಿರುವುದಿಲ್ಲವಾದ ಕಾರಣ ಹಲವು ತಪ್ಪುಗಳಾಗುತ್ತವೆ ಎನ್ನುವ ವಿಷಯವನ್ನು ನಮ್ಮವರು ಗುರುತಿಸಿದ್ದಾರೆ. ಸ್ಫೂರ್ತಿಯಿಂದ ರಚಿತವಾದದ್ದನ್ನೂ ಲೇಖಕರು ಅನಂತರದ ವಿವೇಚನೆಯ ಅಧೀನಕ್ಕೆ ಒಪ್ಪಿಸುವುದು ಒಳ್ಳೆಯದು, ತಾನು ಕೇವಲ ಸ್ಫೂರ್ತಿಯಿಂದಲೇ ಬರೆದಿದ್ದೇನೆ, ಒಂದು ಪದವನ್ನೂ ಅಳಿಸುವ ಗೋಜಿಗೆ ನಾನು ಹೋಗಿಲ್ಲ ಎನ್ನುವುದು ಕೇವಲ ಹೆಮ್ಮೆಯ ಮಾತು.* ಕವಿಕೃತಿಯಲ್ಲಿ ಅತ್ಯುತ್ತಮವಾದ ಭಾಗಗಳನ್ನು ಕಂಡು ಇವು ಸ್ಫೂರ್ತಿಯಿಂದ ರಚಿಸಿದವುಗಳಾಗಿವೆ ಎಂದು ನಾವು ಗುರುತಿಸಬಹುದಾದರೂ, ಸ್ಫೂರ್ತಿಯಿಂದ ರಚಿತವಾದ ಭಾಗಗಳೆಲ್ಲವೂ ಅತ್ಯುತ್ತಮವಾಗಿರುತ್ತವೆ ಎಂದು ಹೇಳಲು ಬರುವುದಿಲ್ಲ. ಇದೇ ಕಾರಣಕ್ಕಾಗಿ ‘ಸ್ಫೂರ್ತಿತತ್ವ’ವನ್ನು ವಿಮರ್ಶೆಯ ಮೂಲಮಾನವನ್ನಾಗಿ ಮಾಡಿಕೊಳ್ಳಲು ಬರುವುದಿಲ್ಲ. ಏಕೆಂದರೆ ಒಂದು ಕೃತಿ ಸ್ಫೂರ್ತಿಯಿಂದ ರಚಿತವಾದ್ದರಿಂದ ಉತ್ತಮ ಕೃತಿ, ಸ್ಫೂರ್ತಿಯಿಂದ ರಚಿತವಾಗಿರದಿದ್ದರೆ ಉತ್ತಮ ಕೃತಿಯಲ್ಲ -ಎಂದು ಹೇಳುವುದು ಸಮರ್ಪಕವಾದ ವಿಮರ್ಶೆಯ ಸೂತ್ರವಾಗುವುದಿಲ್ಲ. ಕೆಲವರು ಸ್ಫೂರ್ತಿಯಿಂದಲೇ ನೇರವಾಗಿ ರಚಿಸಿರಬಹುದು; ಕೆಲವರು ಸ್ಫೂರ್ತಿಯಲ್ಲಿ ಹೊಳೆದದ್ದನ್ನು ದೀರ್ಘಕಾಲದ ಪರಿಭಾವನೆ ಪರಿಶ್ರಮಗಳಿಗೆ ಒಳಪಡಿಸಿ ರಚಿಸಿರಬಹುದು.  ಈ ಎರಡರಲ್ಲಿ ಯಾವುದು ಹೆಚ್ಚು, ಯಾವುದು ಕಡಿಮೆ ಎನ್ನುವುದು ಪ್ರಶ್ನೆಯೇ ಅಲ್ಲ. ಮೊದಲನೆಯದಾಗಿ ಅದು ಕಾವ್ಯವಾಗಿದೆಯೆ ಇಲ್ಲವೆ ಎನ್ನುವುದು ಮುಖ್ಯ, ಅದು ಕಾವ್ಯವಾಗಿದ್ದರೆ ತೀರಿತು.

ಸ್ಫೂರ್ತಿಯ ಪ್ರಕಾರಗಳು ಅನೇಕ. ಕವಿಗೆ ಸ್ಫೂರ್ತಿ ಯಾವಾಗ ಬರುತ್ತದೆ ಮತ್ತು ಹೇಗೆ ಬರುತ್ತದೆ ಎನ್ನುವುದನ್ನು ಯಾರೂ ಹೇಳಲಾರರು. “ಸ್ಫೂರ್ತಿ ಎನ್ನುವುದೊಂದು ತೀರಾ ಅನಿಶ್ಚಿತವಾದಂಥದು. ಅದು ತನಗೆ ತೋಚಿದಾಗಿ ಬರುತ್ತದೆ; ಕೃತಿ ಮುಗಿಯುವ ಮೊದಲೆ ಎಲ್ಲೊ ನಿಂತುಬಿಡುತ್ತದೆ. ಮತ್ತೆ ಕರೆದಾಗ ಬಾರದೆ ನುಣುಚಿಕೊಳ್ಳುತ್ತದೆ. ಬಹುಶಃ ಇದು ಎಲ್ಲ ಕಲಾವಿದರ ವೇದನೆ ಕೂಡಾ. ಅದರಲ್ಲೂ ಕವಿಗಳಿಗಂತೂ ಈ ಪಾಡು ಕಟ್ಟಿಟ್ಟದ್ದು.”[24]

ಪರಿಸ್ಥಿತಿ ಹೀಗಿರುವಾಗ “ಕೆಲವರು ತಮ್ಮ ಇಚ್ಛೆಯಿಂದ ಅದನ್ನು ಬರಮಾಡಿ ಕೊಳ್ಳಬಲ್ಲರು; ಕೆಲವರು ತಾವು ಬರೆಯಲು ಕೂತಾಗ ಬರುವಂತೆ ಮಾಡಿಕೊಳ್ಳಬಲ್ಲರು. ಮತ್ತೆ ಕೆಲವರು ಕೃತಿ ರಚನೆ ಮಾಡುವುದನ್ನು ಒಂದು ಕ್ರಮಬದ್ಧವಾದ ಅಭ್ಯಾಸವನ್ನಾಗಿ ಮಾಡಿಕೊಂಡು, ಸ್ಫೂರ್ತಿಯನ್ನು ಪ್ರಚೋದಿಸಿಕೊಳ್ಳಲೂ ಬಲ್ಲರು: ವರ್ಜಿಲ್ ಮೊದಲು ಒಂಬತ್ತು ಪಂಕ್ತಿಗಳನ್ನು ರಚಿಸಿದ ನಂತರ ಅವನು ಸ್ಫೂರ್ತಿಗೆ ಒಳಗಾಗುತಿದ್ದನಂತೆ; ಮಿಲ್ಟನ್ ದಿನವೂ ಐದು ಪಂಕ್ತಿಗಳನ್ನು ಬರೆದ ಕೂಡಲೆ ಅವನ ಮುಂದಿನ ಬರವಣಿಗೆ ಸ್ಫೂರ್ತಿಗೆ ಒಳಗಾಗುತ್ತಿತ್ತಂತೆ.[25] ಹೌಸ್‌ಮನ್ ಬೀರ್ ಕುಡಿದಾಗ ಸ್ಫೂರ್ತಿ ಬರುತ್ತಿತ್ತಂತೆ; ಟಾಸೋಗೆ ಅತಿ ದುಃಖವಾದಾಗ, ವರ್ಡ್ಸ್‌ವರ್ತನಿಗೆ ಭಯ-ವಿಸ್ಮಯಾನುಭವಗಳಲ್ಲಿ, ಕೋಲ್‌ರಿಜನಿಗೆ ಆನಂದದಲ್ಲಿ, ಕೃತಿನಿರ್ಮಾಣಕ್ಕೆ ಪ್ರಚೋದಕವಾದ ಸ್ಫೂರ್ತಿ ಬರುತ್ತಿತ್ತಂತೆ.[26] ಕೆಲವು ವೇಳೆ ಕನಸಿನಲ್ಲಿ ಬಂದು ನನಸಿನಲ್ಲಿ ಪ್ರಚೋದನೆ ನೀಡುವ ಸ್ವಪ್ನ ಸ್ಫೂರ್ತಿಯೂ ಉಂಟು. ಒಮ್ಮೊಮ್ಮೆ ಬಂದ ಸ್ಫೂರ್ತಿ ಇದ್ದಕ್ಕಿದ್ದಂತೆ ಬತ್ತಿಹೋಗಬಹುದು; ಆಗ ಕವಿ ಎಷ್ಟೋ ದಿನ ರಿಕ್ತಾವಸ್ಥೆಯಲ್ಲಿ ಕಾದುಕುಳಿತಾಗ ಎಂದೋ ಯಾವುದೋ ನಿಮಿತ್ತವಾಗಿ ಅದು ತಿರುಗಿಬರುವುದೂ ಉಂಟು.  ‘ರಾಮಾಯಣ ದರ್ಶನ’ವನ್ನು ಬರೆಯುವಾಗ ಶ್ರೀ ಕುವೆಂಪು ಅವರಿಗೆ ಒಂದು ಸಂದರ್ಭದಲ್ಲ ಆದ ಈ ಅನುಭವ ಸ್ವಾರಸ್ಯವಾಗಿದೆ: “ಮತ್ತೊಂದು ಸನ್ನಿವೇಶ. ಅದು ‘ಕ್ಷುದ್ರ’ವಾದುದಾದರೂ ಅದರ ಪ್ರಚೋದನೆ ಬಹಳ ಪರಿಣಾಮಕಾರಿಯಾದುದು. ಒಮ್ಮೆ ನಾಲ್ಕಾರು ತಿಂಗಳು ಬರವಣಿಗೆಯನ್ನು ಮುಂದುವರಿಸಲಾಗಲಿಲ್ಲ. ಕಾದು ಕಾದು ಬೇಸತ್ತೆ. ಹಲವರಿದೆ, ಖೇದಗೊಂಡೆ ಒಂದು ದಿನ ಬೆಳಿಗ್ಗೆ ಚಿಂತಾಮಗ್ನನಾಗಿ ಕುಳಿತಿರುವಾಗ ನನ್ನ ಮಗ ತೇಜಸ್ವಿ ಏನೋ ಕಾರಣದಿಂದ ಅಳುವುದಕ್ಕೆ ಆರಂಭಿಸಿದ. ‘ಏಕೋ ಅಳುತ್ತೀಯೆ’ ಎಂದವನೇ ನನ್ನ ಕೊಠಡಿಗೆ ನಡೆದೆ. ಸರಿ, ‘ಏಕಳುವೆ ತೇಜಸ್ವಿ?’ಯಿಂದ ‘ಅತ್ತಲಾ ಕಿಷ್ಕಿಂಧೆಯೊಳ್’ ಎಂಬ ಸಂಚಿಕೆ ಆರಂಭವಾಗಿ ಕೊನೆಗೊಂಡಿತು. ನಮ್ಮ ಮನೆಯ ಮುಂದಣ ಮರದಲ್ಲಿ ಹಕ್ಕಿಯೊಂದು ‘ಟುವ್ವಿ ಟುವ್ವಿ’ ಎಂದು ಕರೆದುದೇ ಕಾರಣವಾಗಿ ‘ಓ ಲಕ್ಷ್ಮಣಾ’ ಸಂಚಿಕೆ ಆರಂಭವಾಯಿತು.”[27] ಒಟ್ಟಿನಲ್ಲಿ ಸ್ಫೂರ್ತಿ ಯಾವ ಕಾರಣದಿಂದ ಬರುತ್ತದೆ ಎನ್ನುವುದು ಅನೂಹ್ಯವಾದ ಸಂಗತಿ. ಕೆಲವು ಕವಿಗಳಲ್ಲಿ ಒಂದು ವಯಸ್ಸಿನಲ್ಲಿದ್ದ ಸ್ಫೂರ್ತಿ ಬೇರೆ ಬೇರೆಯ ವಯೋಮಾನಗಳಲ್ಲಿ ಇಲ್ಲದೆ ಹೋಗಬಹುದು. ಮಿಲ್ಟನ್ ಕವಿ ಇಪ್ಪತ್ತೈದು ವರ್ಷಗಳ ಕಾಲ ಏನನ್ನೂ ಬರೆಯಲಿಲ್ಲ; ವಡ್ಸ್‌ವರ್ತ್ ಮೊದಮೊದಲು ಬರೆದ ಆವೇಶದಿಂದ ಅನಂತರ ಬರೆಯಲಾಗಲಿಲ್ಲ; ಥಾಮಸ್‌ಗ್ರೇ ಬರೆದದ್ದು ಒಂದೇ ಒಂದು ಸೊಗಸಾದ ಕವಿತೆಯನ್ನು. ಇವುಗಳಿಗೆಲ್ಲಾ ಕಾರಣವನ್ನು ಹೇಳಲಾಗುವುದಿಲ್ಲ. ಏಕೆಂದರೆ “ಅದು ಒಂದು ಚೈತನ್ಯ. ಅದು ಎಲ್ಲಿಂದ ಬರುವುದೋ ಏನೋ ನಮಗೆ ತಿಳಿಯದು. ಅದು ನಮ್ಮ ಆಜ್ಞಾನುವರ್ತಿಯಾಗಿ ನುಡಿಯುವುದಲ್ಲ; ನುಡಿದರೂ ಅದು ನಮ್ಮ ಭಾಷೆಯಲ್ಲಿ ಅಲ್ಲ; ಅದು ನಮ್ಮ ಸೇವಕನಲ್ಲ, ನಮ್ಮ ಪ್ರಭು.”[28]

 


[1] Herbert Read : Essays in Literary Criticism, p. 133.

[2] Herbert Read; Essays in Literary Criticism, p. 132-133.

* Inspiration ಎನ್ನುವ ಮಾತಿಗೆ ಮೂಲತಃ ಇರುವ ಅರ್ಥ, ಶ್ವಾಸಕೋಶದೊಳಕ್ಕೆ ಉಸಿರನ್ನು ಎಳೆದುಕೊಳ್ಳುವ ಒಂದು ದೈಹಿಕ ಕ್ರಿಯೆ (ಉಚ್ಚ್ವಾಸ) ಎನ್ನುವುದು; ಆದರೆ ಇದು ರೂಪಕವಾಗಿ ಮಾನಸಿಕ ಕ್ರಿಯೆಯಾದ ಕಲಾನಿರ್ಮಾಣಗಳಿಗೂ ಅನ್ವಯವಾಗಿದೆ. ಕೆಸ್ತಧರ್ಮ ಗ್ರಂಥಗಳಲ್ಲಿ ನೇರವಾಗಿ ವ್ಯಕ್ತಿ ದೈವೀಶಕ್ತಿಗೆ ವಶವಾಗುವಿಕೆ ಎಂಬ ಅರ್ಥವನ್ನು ಪಡೆದಿದೆ. ಹೀಗೆ ಇದು,  ದೈಹಿಕ, ಮಾನಸಿಕ-ಧಾರ್ಮಿಕ ಎಂಬ ಅರ್ಥದಲ್ಲಿ ಬಳಕೆಯಾಗಿದೆ: Encyclopaedia Britanica Vol. 12, 424

[3] C.M. Bowra : Inspiration and poetry, p. 2

[4] Austin Warren, Rene Welleck : Theory of Literature, p. 80.

[5] ಭಾರತೀಯ ಆಲಂಕಾರಿಕನಾದ ರಾಜಶೇಖರನು, ಕವಿಗಳಲ್ಲಿ ಹಲವು ಬಗೆಗಳನ್ನು ಗುರುತಿಸುತ್ತಾ ಯಾರು ಮಂತ್ರ ತಂತ್ರಾದಿಗಳ ಉಪದೇಶ ಬಲದಿಂದ ಸಿದ್ಧಿಯನ್ನು ಪಡೆದು ದೇವತಾವೇಶದ ಕಾಲದಲ್ಲಿ ಮಾತ್ರ ಕೃತಿರಚನೆ ಮಾಡಬಲ್ಲನೋ ಅಂಥವನನ್ನು ‘ಆವೇಶಿಕ’ ಎಂದು ಕರೆಯುತ್ತಾನೆ. ‘ಆವೇಶಿಕ’ – ಸ್ಫೂರ್ತಿಯಿಂದ ಬರೆಯುವ ಕವಿಯನ್ನು ಕುರಿತದ್ದು ಎನ್ನುವುದು ಸ್ಪಷ್ಟವಾಗಿದೆ.

[6] ‘ವೀರನಾರಾಯಣನೆ ಕವಿ. ಲಿಪಿಕಾರ ಕುವರವ್ಯಾಸ….’ “ಹಲಗೆ ಬಳಪವ ಹಿಡಿಯದೊಂದಗ್ಗಳಿಕೆ, ಪದವಿಟ್ಟಳಿಪದೊಂದಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ, ಬಳಸಿ ಬರೆಯಲು ಕಂಠಪತ್ರದ ಉಲಹುಗೆಡದಗ್ಗಳಿಕೆ” – ಎಂದು ನಾರಣಪ್ಪ ತನ್ನ ನಾಲ್ಕಗ್ಗಳಿಕೆಯನ್ನು ಹೆಮ್ಮೆಯಿಂದ ಗುರುತಿಸಿಕೊಂಡರೂ, “ಎಂಬೀ ಬಲುಹು ವೀರನಾರಾಯಣನ ಕಿಂಕರಗೆ’ ಎನ್ನುವ ವಿನಯದಲ್ಲಿ ಅದೆಲ್ಲವೂ ತಟಕ್ಕನೆ ಅವನತವಾಗುವ ರೀತಿ ಗಮನಾರ್ಹವಾಗಿದೆ.

[7] C.M. Bowra : Inspiration and Poetry, p. 3.

[8] Felix Clay : The Origin of the sense of Beauty, 246

[9] C.M. Bowra : Inspiration and poetry, p. 4

[10] Stephen Spender : The making of a poem, p. 53

[11] ವಿ. ಸೀತಾರಾಮಯ್ಯ : ಕವಿಕಾವ್ಯ ದೃಷ್ಟಿ, ಪು. ೬೪

[12] A.C. Bradely : A miscellany, p. 231.

* “…it is not the expression of personality, but an escape from personality.” T.S. Eliot; Selected Prose, p. 30.

+ ‘ಶ್ರೀ ಕುವೆಂಪು ಅವರು’ ರಾಮಾಯಣ ದರ್ಶನದಲ್ಲಿ “ಶ್ರೀ ಕುವೆಂಪುವ ಸೃಜಿಸಿದೀ ಮಹಾ ಛಂದಸ್ಸಿನ ಮೇರುಕೃತಿ’ -ಎಂದು ಹೇಳಿರುವ ಮಾತನ್ನು ಇಲ್ಲಿ ನೆನೆಯಬಹುದು.

[13] ಇದು Edger Allen Poe ಮತ್ತು John Drinkwater ಇವರ ಮತ; Noman Hepple : Lyrical forms in English, p. 10

[14] John Drinkwater: The Lyric, p. 43, 44.

* ಹಾಲು ಕರೆಯುವ ಮುನ್ನ ಕರು ಕೆಚ್ಚಲಿಗೆ ಬಾಯಿಟ್ಟು ಕೊಂಚ ಕುಡಿದ ನಂತರ ಗೌಳಿಗನಿಗೆ ಕರೆಯುವ ಕ್ರಿಯೆ ಹೇಗೆ ಸುಲಭವೂ ಆಗುವುದೋ ಹಾಗೆಯೆ, ಸ್ಫೂರ್ತಿಯ ಸ್ಪರ್ಶ ಪ್ರಚೋದನೆ ಲಭಿಸಿದಾಗಲೆ ಅದು ಸಲೀಸಾಗಿ ಕ್ರಿಯಾಭಿಮುಖವಾಗುತ್ತದೆ ಎನ್ನಬಹುದು. ಈ ಉಪಮೆಯನ್ನು ಹೆಚ್ಚು ವಿಲಂಬಿಸಿ ನೋಡಬಾರದು.

** ನಿದರ್ಶನಕ್ಕೆ ನಮ್ಮಯಾವ ಹಳಗನ್ನಡ ಕಾವ್ಯವನ್ನಾದರೂ ನೋಡಬಹುದು. ಪಂಪನ ಆದಿಪುರಾಣದಲ್ಲೇ ನೀಲಾಂಜನೆಯ ದೃಶ್ಯ, ಜನ್ಮಾಭಿಷೇಕ ವರ್ಣನೆ, ವಿಜಯ ಪ್ರಶಸ್ತಿಯ ಪ್ರಸಂಗ, ಭರತ ಬಾಹಬಲಿ ಯುದ್ಧ -ಇಂಥ ಪ್ರಸಂಗಗಳಲ್ಲಿ ಕಂಡುಬರುವ ಸ್ಫೂರ್ತಿಯ ಉಜ್ವಲತೆ, ಬೇರೆ ಭಾಗಗಳಲ್ಲಿ ಕಾಣದು. ಮಹಾಕವಿಯಾದವನು, ತನ್ನ ಸಹಜ ಪ್ರತಿಭೆಯಿಂದ ಕೃತಿನಿರ್ಮಾಣಕ್ಕೆ ತೊಡಗಿದಾಗ ಅವನ ಸಹಜ ಸಂಚಾರಭೂಮಿಕೆಯೆ ಅತಿಶಯವಾಗಿರುವುದರಿಂದ ಆ ನಿರ್ಮಿತಿ ಒಂದು ವೇಳೆ ಸ್ಫೂರ್ತಿಯ ಸ್ಪರ್ಶವಿಲ್ಲದೆ ಹೋದರೂ, ಪ್ರತಿಭಾಬಲದಿಂದ ಉತ್ತಮವಾಗಿಯೆ ಇರುತ್ತದೆ. ಆದರೆ ಎಲ್ಲಿ ಪ್ರತಿಭೆ, ಸ್ಫೂರ್ತಿ ಎರಡೂ ಇಲ್ಲದ “ರಚನೆ”ಗಳಿರುತ್ತವೋ, ಅವು ನೀರಸವೋ, ಚಮತ್ಕಾರವೋ ಆಗಿರುತ್ತವೆ. ಇಂಥವು ಸಾಮಾನ್ಯ ಕವಿಗಳಲ್ಲಿ ಸಮೃದ್ಧವಾಗಿ ದೊರೆಯುತ್ತವೆ.

* ಸ್ಫೂರ್ತಿ ಎನ್ನುವುದು ಕಲೆಯಲ್ಲದ ಕ್ಷೇತ್ರಗಳಲ್ಲಿಯೂ ಕಂಡುಬರುವ ಮಾಟಕ್ಕೆ ಸಂಬಂಧಿಸಿದ ಒಂದು ಶಕ್ತಿ. ದೈಹಿಕವಾಗಿ ಅತ್ಯಂತ ದುರ್ಬಲವಾದ ವ್ಯಕ್ತಿಯೂ ತನ್ನ ಮಾನ ಗೌರವದ ರಕ್ಷಣೆಯಲ್ಲಿ ಅಪ್ರತಿಮ ವೀರಾವೇಶದಿಂದ ಹೋರಾಡಿದ್ದುಂಟು; ಸಾಧಾರಣವಾದ ಬಡಕಲು ಹಸುವೊಂದು ತನ್ನ ಎಳೆಗರುವಿನ ಸಂರಕ್ಷಣೆಯಲ್ಲಿ ಹುಲಿಯೊಂದನ್ನು ತಿವಿದು ಕೊಂದದ್ದುಂಟು. ಇಲ್ಲೆಲ್ಲಾ ಒಂದು ವಿಶೇಷ ಆವೇಶವನ್ನು ಗುರುತಿಸಬಹುದು. ಒಬ್ಬನಲ್ಲಿ ವ್ಯಕ್ತವಾಗುವ ಸ್ಫೂರ್ತಿ, ಉಳಿದವರಲ್ಲೂ ಸ್ಫೂರ್ತಿಯನ್ನು ಪ್ರಚೋದಿಸಬಹುದು. ಹಿರಿಯ ಉದ್ದೇಶಕ್ಕಾಗಿ ಹೋರಾಡಿದವನ ಸ್ಫೂರ್ತಿ, ಉಳಿದವರಲ್ಲೂ ಸ್ಫೂರ್ತಿಯನ್ನು ಉಂಟುಮಾಡಬಹುದು. ವಿವೇಕಾನಂದರ ಭಾಷಣಗಳು – ಲಿಖಿತ ರೂಪದಲ್ಲಿದ್ದರೂ ನಮ್ಮಲ್ಲಿ ಸ್ಫೂರ್ತಿಯನ್ನು ಉಕ್ಕಿಸಿ ನಮ್ಮನ್ನು ಕಾರ್ಯೋನ್ಮುಖರನ್ನಾಗಿ ಮಾಡುತ್ತವೆ.

+ A.A. Macdonell, Monoir Williams. V.S. Apte, ಇವರ ಸಂಸ್ಕೃತ ನಿಘಂಟುಗಳಲ್ಲೆಲ್ಲಾ “ಸ್ಫೂರ್ತಿ” ಎನ್ನುವ ಪದಕ್ಕೆ  Flash, Sparkle, be manifested, quivering, shining, emotion of the mind, Flashing on the mind, Vibration – T.N. Sreekantaiya : Imagination in India Poetics and Other Literary studies, p. 12

** ಕಲ್ಪನೆ, ಶೈಲಿ, ಸ್ಫೂರ್ತಿ ಈ ಮೂರು ಪದಗಳು ನಮ್ಮಲ್ಲಿದ್ದರೂ, ನಮ್ಮ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಅವು ಪಾರಿಭಾಷಿಕ ಪದಗಳಾಗಿ ಪ್ರಯೋಗವಾಗಿಲ್ಲ. ಆಧುನಿಕ ವಿಮರ್ಶೆಯ ಭಾಷೆಯಲ್ಲಿ ಇವು ವಿಶೇಷವಾಗಿ ಬಳಕೆಯಲ್ಲಿವೆ.

[15] ತೀ.ನಂ. ಶ್ರೀಕಂಠಯ್ಯ : ಭಾರತೀಯ ಕಾವ್ಯಮೀಮಾಂಸೆ, ಪು. ೧೭೫.

[16] ತೀ.ನಂ. ಶ್ರೀಕಂಠಯ್ಯ: ಭಾರತೀಯ ಕಾವ್ಯಮೀಮಾಂಸೆ, ಪು. ೧೭೬.

[17] Edmund D. Jones : English Critical Essays (19th Centrury) – A Defence of poetry : Shelley, p. 132.

[18] ವಿ.ಎಂ. ಇನಾಂದಾರ್ : ಪಾಶ್ಚಾತ್ಯವಿಮರ್ಶೆಯ ಪ್ರಾಚೀನ ಪರಂಪರೆ, ಪು. ೮.

[19] ವಿ.ಎಂ. ಇನಾಂದಾರ್ : ಪಾಶ್ಚಾತ್ಯ ವಿಮರ್ಶೆಯ ಮಧ್ಯಯುಗ, ಪು. ೮.

[20] ಅಲ್ಲೇ, ಪು. ೫೭.

[21] Stephen Spender : The Making of a Poem, 52.

* After the fine first rapture of inspiration which ignites the fire there must always come the labour at the blacksmith’s bellows, the soot, the sweat, and smoke of tile forge, and the clanging of the hammer on the anvil, in order to fashion the final perception of great art. Any one who is familier with the orginal manuscripts of genius can observe the evidence of dual process of creative agony.

Louis K. Anspacher : the challenge of the Unknown, P. 22.

[22] ತೀ.ನಂ. ಶ್ರೀಕಂಠಯ್ಯ : ಭಾರತೀಯ ಕಾವ್ಯಮೀಮಾಂಸೆ, ಪು. ೧೯೦, ೧೯೧.

[23] ಹರಿಶ್ಚಂದ್ರಕಾವ್ಯ : ೧೨೩ (ಸಂ. ಎನ್. ಬಸವರಾರಾಧ್ಯ ಮತ್ತು ಪಂಡಿತ ಎಸ್. ಬಸಪ್ಪ)

* ಅತಿಮಾತಿನ ಅಪೇಕ್ಷೆಯೇನೋ ನಾರಣಪ್ಪನಲ್ಲಿ ಒಂದು ಕುಂದು. ‘ಪದವಿಟ್ಟಳುಪ ದೊಂದಗ್ಗಳಿಕೆ’ ಎಂದು ಕವಿ ತಾನೇ ಗರ್ವದಿಂದ ಘೋಷಿಸಿದ್ದಾನೆ. ಅಯ್ಯೋ! ಆ ಅಗ್ಗಳಿಕೆ ಬರಿಯ ಭ್ರಾಂತಿಯೆಂದು ಅವನಿಗೆ ತಿಳಿಯದು. ಪದವನ್ನೇ ಅಲ್ಲ, ಪಂಕ್ತಿಯನ್ನೇ ಅಲ್ಲ ಪರಿಚ್ಛೇದವನ್ನೂ ತೊಡೆದುಹಾಕಿದ್ದರೆ ಅವನ ಖ್ಯಾತಿ ಇನ್ನೂ ಹೆಚ್ಚುತ್ತಿತ್ತು….೧೧ -ಎಸ್.ವಿ. ರಂಗಣ್ಣ: ಶೈಲಿ, ಭಾಗ-೧, ಪು. ೧೩೪.

[24] Sri Aurobindo; The Future Poetry, p. 296

[25] ಅಲ್ಲೇ, p. 296

[26] C.M. Bowra : Inspiration and Poetry, p.4.

[27] ಕೋ. ಚೆನ್ನಬಸಪ್ಪ (ಸಂಪಾದಕ) ಶ್ರೀ ಕುವೆಂಪು ಸಂದರ್ಶನ, ಪು. ೧೨೭.

[28] A.C. Bradley : Oxford Lectures on Poetry, p. 27.