ದಿನನಿತ್ಯದ ಗಡಿಬಿಡಿಯ ಚಟುವಟಿಕೆಗಳಲ್ಲಿ ನಾವು ಕೆಲವೊಮ್ಮೆ ಏನಾದರೂ ಮಹತ್ವದ ಕೆಲಸಮಾಡಬೇಕೆಂದು ನಿರ್ಧರಿಸಿಕೊಂಡು ಅಂದು ಆ ಮಹತ್ವದ ಕಾರ್ಯವನ್ನೇ ಮರೆತುಬಿಟ್ಟಾಗ ಪರಿತಪಿಸುವದು ನಮ್ಮೆಲ್ಲರ ಅನುಭವ. ಮರೆಯಬಾರದೆಂದು ಕೆಲವರು ಚಿಕ್ಕ ಹಾಳೆಯಲ್ಲಿ ವಿಷಯಗಳ ಟಿಪ್ಪಣಿ ಮಾಡಿಟ್ಟುಕೊಳ್ಳುತ್ತಾರೆ. ಆದರೆ ಕೆಲವು ಸಂಗೀತಗಾರರು ಚಾಚೂ ತಪ್ಪದೇ ಕಂಠಪಾಠದಿಂದಲೇ ಹಾಡುಗಳನ್ನು ಹಾಡುವದನ್ನು ನಾವು ಕಾಣುತ್ತೇವೆ. ಆಗೀಗ ಕೆಲವರು ರಾಮಾಯಣ ಮಹಾಭಾರತದಂಥ ದೀರ್ಘ ಕಾವ್ಯಗಳನ್ನು ಬಾಯಿಪಾಠ ಮಾಡಿದ್ದನ್ನು ಕಂಡು ಅವರ ಸ್ಮರಣೆಗೆ ಬೆರಗಾಗುತ್ತೇವೆ. ಸ್ಮರಣೆ (memory) ಮಾನವನ ಅದ್ಭುತ ಸಾಧನೆ!

ಎಲ್ಲ ಪ್ರಾಣಿಗಳಿಗಿಂತ ಮಾನವನು ಹೆಚ್ಚು ವಿಕಾಸ ಹೊಂದಿದ್ದು ಅವನ ಮಿದುಳಿನಲ್ಲಿ ಸುಧಾರಣೆಗಳಾಗಿ ಸ್ಮರಣೆ ಮಾನವನ ಸಾಧನೆಯಾಗಿದೆಯಾದರೂ ಅದು ಕೇವಲ ಮಾನವನ ಸೊತ್ತಲ್ಲ.  ಹಲವಾರು ಪ್ರಾಣಿಗಳು ಅತ್ಯಂತ ಹೆಚ್ಚಿನ ಸ್ಮರಣೆ ಪಡೆದಿರುವದನ್ನು ತಜ್ಞರು ಪ್ರಯೋಗಗಳಿಂದ ಕಂಡುಕೊಂಡಿದ್ದಾರೆ.

ತಲೆಬುರುಡೆಯಲ್ಲಿರುವ ಮಿದುಳು (brain) ಅಸಂಖ್ಯಾತ ಜೀವಕೋಶಗಳಿಂದ ರಚಿತವಾಗಿದೆ. ಈ ಜೀವಕೋಶಗಳಿಗೆ ನರಕೋಶಗಳು ಎಂದಿದ್ದು ಈ ಎಲ್ಲ ಜೀವಕೋಶಗಳು ಇತರ ನರಕೋಶಗಳೊಂದಿಗೆ ನರಸಂವೇದನೆಗಳಿಂದ ಸಂಪರ್ಕದಲ್ಲಿರುತ್ತವೆ. ರಚನಾತ್ಮಕವಾಗಿ ಮಿದುಳನ್ನು ದೊಡ್ಡಮಿದುಳು (cerebrum), ಸಣ್ಣಮಿದುಳು (cerebellum), ಮಧ್ಯಮಿದುಳು (midbrain) ಹಾಗು ಪಾನ್ಸ್ (pons) ಎಂಬ ನಾಲ್ಕು ಭಾಗಗಳಾಗಿ  ವಿಭಾಗಿಸುತ್ತಾರೆ. ಆದರೆ ಈ ಎಲ್ಲ ಭಾಗಗಳು ನರತಂತುಗಳಿಂದ ಒಂದಕ್ಕೊಂದು ಬಂಧಿಸಲ್ಪಟ್ಟಿದ್ದಲ್ಲದೇ ನರಸಂವೇದನೆಗಳಿಂದ ಒಂದಕ್ಕೊಂದು ಪ್ರತಿಕ್ರಿಯಿಸುತ್ತವೆ. ಈ ಭಾಗಗಳು ಸ್ವತಂತ್ರವಾಗಿ ಕಾರ್ಯಮಾಡುವದಿಲ್ಲ.

ನಾವು ಅನುಭವಿಸಿದುದನ್ನು ಅಥವಾ ಅರಿತಿರುವ ಮಾಹಿತಿಯನ್ನು (ದೃಷ್ಟಿ, ಶ್ರವಣ, ಸ್ಪರ್ಶ, ವಾಸನೆ, ರುಚಿ ಸಂವೇದನೆಗಳು) ನಮ್ಮ ಮಿದುಳಿನಲ್ಲಿ ದಾಖಲಿಸುವದು, ಅಲ್ಲಿ ಕೆಲಕಾಲ ಹಿಡಿದಿಟ್ಟುಕೊಳ್ಳುವದು ಮತ್ತು ಅವಶ್ಯವಿದ್ದಾಗ ಅವುಗಳನ್ನು ಹೊರತೆಗೆದು ನಮ್ಮ ಪ್ರಜ್ಞೆಗೆ ಒಪ್ಪಿಸುವದೇ ಸ್ಮರಣೆ.

ಸ್ಮರಣೆಯಿಂದಲೇ ನಮ್ಮ ಅಸ್ತಿತ್ವ. ಸ್ಮರಣೆಯಿಂದಲೇ ನಮ್ಮ ಜೀವನ. ಸ್ಮರಣೆ ಇಲ್ಲದಿದ್ದರೆ ಅನಾಹುತ! ಆದರೂ ಒಂದು ವೈಚಿತ್ರ್ಯವನ್ನು ನಾವು ಗಮನಿಸಬಹುದು. ಅನವರತವೂ ವಿವಿಧ ಬಗೆಯ (ದೃಷ್ಟಿ, ಶ್ರವಣ, ಸ್ಪರ್ಶ, ವಾಸನೆ) ಸಂವೇದನೆಗಳು ನಮ್ಮ ಮಿದುಳನ್ನು ತಲಪುತ್ತಲೇ ಇರುತ್ತವೆ. ಆದರೆ ಮಿದುಳು ಇವೆಲ್ಲವುಗಳನ್ನು ಸ್ವೀಕರಿಸಿ, ಗ್ರಹಿಸಿ, ತತ್‍ಕ್ಷಣ ಪರಿಶೀಲನೆ ಮಾಡಿ ಪರಿಷ್ಕರಿಸಿ ಯಾವ ಸಂವೇದನೆ ಮಹತ್ವದ್ದು ಮತ್ತು ಯಾವುದನ್ನು ನಿರಾಕರಿಸಬೇಕು ಎಂದು ಮಿಂಚಿನ ವೇಗದಿಂದ ನಿರ್ಧರಿಸುತ್ತದೆ. ಯಾವುದು ಅವಶ್ಯಕ ಯಾವುದು ಅನವಶ್ಯಕ ಎಂಬುದು ವ್ಯಕ್ತಿಗತವಾದದ್ದು. ಉದಾಹರಣೆಗೆ ರಸ್ತೆಯಲ್ಲಿ ಸಾಗುವಾಗ ನೂರಾರು ಜನರನ್ನು ನಾವು ಕಂಡು ಬದಿಗೆ ಸರಿದು ಅವರಿಗೆ ಡಿಕ್ಕಿ ಹಾಯದಂತೆ ಮುಂದೆ ಚಲಿಸುತ್ತೇವೆ. ಅವರ ಮುಖ ಕಂಡರೂ ತತ್‍ಕ್ಷಣ ನಮ್ಮ ಸ್ಮರಣೆಯಿಂದ ಆ ಮುಖಗಳು ಮಾಯವಾಗುತ್ತವೆ! ಆದರೆ ಆ ನೂರಾರು ಮುಖಗಳಲ್ಲಿಯೂ ನಮಗೆ ಪರಿಚಯವಿರುವ ವ್ಯಕ್ತಿಯ ಮುಖ ಕಂಡರೆ ಅದೇ ಸಂದರ್ಭದಲ್ಲಿ ನಮ್ಮ ಪ್ರತಿಕ್ರಿಯೆ ಬೇರೆಯಾಗುತ್ತದೆ. ಹೀಗೆ ಮಿದುಳು ಅವಶ್ಯಕ ಅನವಶ್ಯಕ ಸಂವೇದನೆಗಳನ್ನು ಸದಾಕಾಲ ಪರಿಷ್ಕರಿಸುತ್ತಲೇ ಇರುತ್ತದೆ. ಇದೆಲ್ಲವೂ ನಮ್ಮ ಅವಪ್ರಜ್ಞೆಯಲ್ಲಿ ನಡೆದಿರುತ್ತದೆ.

ಸ್ಮರಣೆಯ ಬಗೆಗೆ ತಜ್ಞರು ಸಂಶೋಧನೆಗಳನ್ನು ಮಾಡುತ್ತಲೇ ಇದ್ದಾರೆ. ಸ್ಮರಣೆಯ ನಿಜವಾದ ಸಮಗ್ರ ಸ್ವರೂಪ ನಮಗಿನ್ನೂ ತಿಳಿದಿಲ್ಲವೆಂದೇ ಹೇಳಬಹುದು. ಸ್ಮರಣೆಯಲ್ಲಿ ಸ್ಥೂಲವಾಗಿ ಮೂರು ತರಹಗಳನ್ನು ಗುರುತಿಸಬಹುದು. (೧) ತತ್ಕಾಲೀನ ಸ್ಮರಣೆ  (೨) ಅಲ್ಪಕಾಲಿಕ ಸ್ಮರಣೆ ಮತ್ತು  (೩) ದೀರ್ಘಕಾಲಿಕ ಸ್ಮರಣೆ

ತತ್ಕಾಲೀನ ಸ್ಮರಣೆ

ಇದು ಸೆಕೆಂದುಗಳಲ್ಲಿ ಮಾತ್ರ ಅಳೆಯುವಂಥದ್ದು. ಕೆಲವೊಮ್ಮೆ ಸೆಕೆಂದಿನ ಕೆಲವು ಭಾಗ ಮಾತ್ರವೇ ಇರಬಹುದು. ಉದಾಹರಣೆಗೆ ನೀವು ಓದುತ್ತ ಕುಳಿತಾಗ ನಿಮ್ಮ ಬದಿಯಲ್ಲಿ ಕಂಡ ವಸ್ತುವನ್ನು ಮಿದುಳು ಗ್ರಹಿಸಿದರೂ ಕೂಡ ಅದು ಸ್ಮರಣೆಯಿಂದ ತತ್‍ಕ್ಷಣ ಅಳಿಸಿಹೋಗುವದು. ಅದು ಅನವಶ್ಯಕ ಸ್ಮರಣೆ ಎಂದು ಮಿದುಳು  ಅದಕ್ಕೆ ಮಹತ್ವ ಕೊಡದಿರುವದೇ ಅದಕ್ಕೆ ಕಾರಣವಾಗಿರಬಹುದು. ಕೆಲವೊಮ್ಮೆ ನಾವು ಇತರರ ಶಬ್ದಗಳನ್ನು ಆಲಿಸಿದರೂ ಅವು ತತ್‍ಕ್ಷಣ ನಮ್ಮ ಸ್ಮರಣೆಯಿಂದ ಅಳಿಸಿಹೋಗುವದು ನಮ್ಮ ಅನುಭವ.

ಅಲ್ಪಕಾಲಿಕ ಸ್ಮರಣೆ

ಇದು ನಿಮಿಷಗಳ ವರೆಗೆ ಇರುವ ಸ್ಮರಣೆ. ಇದಕ್ಕೆ ನಾವು ಹೆಚ್ಚಿನ ಪ್ರಯತ್ನ ಮಾಡುವ ಅವಶ್ಯಕತೆ ಇರದು. ಮತ್ತೊಬ್ಬರು ಹೇಳಿದ್ದನ್ನು ಕೇಳಿ ಅದನ್ನು ನಾವು ಪುನರುಚ್ಚರಿಸುವದು ಅಲ್ಪಕಾಲಿಕ ಸ್ಮರಣೆಯಾಗಿದೆ. ಅಲ್ಪಕಾಲಿಕ ಸ್ಮರಣೆಯನ್ನು ನಾವು ನಮ್ಮ ಪ್ರಜ್ಞಾಪೂರ್ವಕ ಪ್ರಯತ್ನದಿಂದ ದೀರ್ಘಕಾಲಿಕ ಸ್ಮರಣೆಯಾಗಿ ಪರಿವರ್ತಿಸಬಹುದಾಗಿದೆ.

ದೀರ್ಘಕಾಲಿಕ ಸ್ಮರಣೆ

ಇದು ಮಾಹಿತಿಯನ್ನು ದೊಡ್ಡಪ್ರಮಾಣದಲ್ಲಿ ಮತ್ತು ದೀರ್ಘ ಕಾಲದವರೆಗೆ ಹಿಡಿದಿರಿಸುತ್ತದೆ. ಕೆಲವು ಮಾಹಿತಿ ಜೀವಪರ್ಯಂತ ಉಳಿಯಬಹುದಾಗಿದೆ. ಅಂತೆಯೇ ತೊಂಬತ್ತು ವರ್ಷದ ವ್ಯಕ್ತಿ ತನ್ನ ಬಾಲ್ಯದ ದಿನಗಳ ಘಟನೆಗಳನ್ನು ನೆನಪಿಸಿಕೊಂಡು ಅದರ ಬಗ್ಗೆ ಮಾತನಾಡಲು ಸಾಧ್ಯ.

ನಮ್ಮ ಅನುಭವಗಳಿಂದ ಉದ್ಭವಿಸಿದ ನರಸಂವೇದನೆಗಳು (ದೃಷ್ಟಿ, ಶ್ರವಣ, ಸ್ಪರ್ಶ ಇತ್ಯಾದಿ) ಮಿದುಳಿನ ನರಕೋಶಗಳಲ್ಲಿ ತಮ್ಮ ಸುಳಿವುಗಳನ್ನು ಅಥವಾ ಗುರುತುಗಳನ್ನು ಮೂಡಿಸುತ್ತವೆ. ತತ್ಕಾಲೀನ ಸ್ಮರಣೆಯ ಸುಳಿವುಗಳು ಚಿಕ್ಕ ಸ್ಥಾನಗಳಲ್ಲಿ ಸ್ಥಾಪಿತವಾಗಿರುತ್ತವೆ. ಅವು ನರತಂತು ಸಂಧಿಗಳನ್ನು (synapse) ದಾಟಿ ದೂರಕ್ಕೆ ಚಲಿಸುವದಿಲ್ಲ, ಚಿಕ್ಕ ನರವ್ಯೂಹಗಳಲ್ಲಿರುತ್ತವೆ ಎಂದು ತಜ್ಞರ ಅಭಿಮತ. ಅಲ್ಪಕಾಲದ ಸ್ಮರಣೆಯ ಸುಳಿವುಗಳು ನರತಂತು ಸಂಧಿಗಳನ್ನು ದಾಟಿ ಪ್ರವಹಿಸುತ್ತವೆ. ಆದರೂ ತಮ್ಮ ಮೊದಲಿನ ಪರಿಣಾಮ ಮಾಡಲು ಅಸಮರ್ಥವಾಗುತ್ತವೆ. ದೀರ್ಘಕಾಲಿಕ ಸ್ಮರಣೆಯ ಸುಳಿವುಗಳು ನರತಂತು ಸಂಧಿಗಳಲ್ಲಿ ಶಾಶ್ವತ ಬದಲಾವಣೆಯನ್ನು ಮಾಡಿರುತ್ತವೆ ಎಂದು ಹೇಳಲಾಗಿದೆ.

ಆದರೆ ಸ್ಮರಣೆಯು ಮಿದುಳಿನ ಯಾವ ಭಾಗದಲ್ಲಿ ಸ್ಥಾಪಿತವಾಗಿದೆ ಎಂಬುದು ಇನ್ನೂ ಖಚಿತವಾಗಿ ತಿಳಿದಿಲ್ಲ. ಅಲ್ಪಕಾಲಿಕ ಮತ್ತು ತತ್ಕಾಲೀನ ಸ್ಮರಣೆಯು ದೊಡ್ಡ ಮಿದುಳಿನ ಮುಂಭಾಗದಲ್ಲಿನ ನರಕೋಶಗಳಲ್ಲಿ ತನ್ನ ಕಾರ್ಯ ಮಾಡುತ್ತದೆ ಎಂದೂ ದೀರ್ಘ ಕಾಲದ ಸ್ಮರಣೆಯು ಮಿದುಳಿನ ಎಲ್ಲ ಭಾಗಗಳಲ್ಲಿ, ವ್ಯಾಪಕವಾಗಿ ಸ್ಥಾಪಿತವಾಗಿದೆ ಎಂದೂ ಪ್ರಯೋಗಗಳಿಂದ ತಜ್ಞರು ಕಂಡುಕೊಂಡಿದ್ದಾರೆ. ಹಿಪ್ಪೊಕ್ಯಾಂಪಸ್ (hippocampus) ಮತ್ತು ಅಮೈಗ್ಡಲಾ (amygdala) ಎಂಬ ಮಿದುಳಿನ ಭಾಗಗಳು ದೀರ್ಘಕಾಲಿಕ ಸ್ಮರಣೆಯನ್ನು ಹಿಡಿದಿರಿಸುವಲ್ಲಿ ಬಲು ಮಹತ್ವದ ಪಾತ್ರವಹಿಸುತ್ತವೆ.

ಕೆಲವೊಮ್ಮೆ ಮಿದುಳಿಗೆ ಆದ ಅಘಾತಗಳಿಂದ (ಉದಾಹರಣೆಗೆ : ತಲೆಬುರುಡೆಗೆ ಬಿದ್ದ ಪೆಟ್ಟುಗಳು ಮಿದುಳಿಗೆ ಗಾಯ ಮಾಡಿದಾಗ, ಕೆಲವು ರಾಸಾಯನಿಕ ಪದಾರ್ಥಗಳು ನರಕೋಶಗಳನ್ನು ನಾಶಮಾಡಿದಾಗ, ಮಿದುಳಿನ ಕೆಲವು ವಿಶಿಷ್ಟ ರೋಗಗಳು ನರಕೋಶಗಳನ್ನು ನಾಶಮಾಡಿದಾಗ) ಸ್ಮರಣೆಯು ವಿವಿಧಪ್ರಮಾಣದಲ್ಲಿ, ವಿವಿಧ ಪ್ರಕಾರಗಳಲ್ಲಿ ನಾಶವಾಗುವದು ಕಂಡುಬರುತ್ತದೆ. ವೃದ್ಧರಲ್ಲಿ ಮಿದುಳನ್ನು ಬಾಧಿಸುವ ಆಲ್‍ಝೈಮರ್ಸ್ (Alzheimer’s disease) ರೋಗದಲ್ಲಿ ಮಿದುಳಿನ ನರಕೋಶಗಳು ಕ್ರಮೇಣ ನಾಶವಾಗುತ್ತವೆ. ಈ ನರಕೋಶಗಳಲ್ಲಿ ಆದ ಹಾನಿಕರ ಬದಲಾವಣೆಗಳಿಂದ ಆ ವ್ಯಕ್ತಿಯ ಸ್ಮರಣೆ ಶಾಶ್ವತವಾಗಿ ನಾಶವಾಗುತ್ತದೆ. (ಬೇರೆ ಬದಲಾವಣೆಗಳೂ ಆಗುತ್ತವೆ) ಇಂಥ ಸಂದರ್ಭದಲ್ಲಿ ಆ ವ್ಯಕ್ತಿಯು ತನ್ನ ಕುಟುಂಬದ ಸದಸ್ಯರನ್ನೇ ಗುರುತಿಸಲಸಮರ್ಥನಾಗಿರುವದುಂಟು. ಇಂಥ ರೋಗಗಳನ್ನು ಆಳವಾಗಿ ಅಭ್ಯಸಿಸಿ ತಜ್ಞರು ಸ್ಮರಣೆಯ ಬಗ್ಗೆ ಸಂಶೋಧನೆ ಮಾಡುತ್ತಲಿದ್ದಾರೆ.

ಕೆಲವೊಂದು ಘಟನೆಗಳು ಭಾವಾತ್ಮಕವಾಗಿ ಮಹತ್ವದವುಗಳಾಗಿರುತ್ತವೆ. ಅಂಥವು ನಮ್ಮ ಸ್ಮರಣೆಯಲ್ಲಿ ಹೆಚ್ಚುಕಾಲ ಉಳಿಯುತ್ತವೆ. ಉದಾಹರಣೆಗೆ ನಾವು ನಮ್ಮ ಸಂಬಂಧಿಕರ ಬಗೆಗಿನ ಸುದ್ದಿ (ಸುಖ ದು:ಖದ ಸುದ್ದಿಗಳು) ದೊರೆತಾಗ, ಆ ಸುದ್ದಿ ತಲಪಿದ ರೀತಿ, ಆಘಾತಗಳು, ಹರ್ಷಾತಿರೇಕಗಳು ಅದನ್ನು ಬಹುಕಾಲ ಸ್ಮರಣೆಯಲ್ಲಿಡುವಲ್ಲಿ ಸಹಾಯ ಮಾಡುತ್ತವೆ. ಇದಕ್ಕೆ ಸ್ಮರಣೆ ವೃದ್ಧಿಸುವ ಪರಿಣಾಮ ಎನ್ನುತ್ತಾರೆ. ನಾಟಕೀಯವಾಗಿ, ದ್ವೇಷ, ಸಿಟ್ಟುಗಳೊಂದಿಗೆ ಅರುಹಿದ ಸುದ್ದಿ ಇಂಥ ಸ್ಮರಣೆಗೆ ಪುಷ್ಟಿಕೊಡುವದನ್ನೂ ಕಾಣಬಹುದಾಗಿದೆ.

ಮತ್ತೆ ಕೆಲವು ಮಿಂಚಿನ ಸ್ಮರಣಾ ಪರಿಣಾಮದವುಗಳು. ಉದಾಹರಣೆಗೆ ನಿಮ್ಮ ಕುಟುಂಬದ ಅಥವಾ ಬಲು ಆತ್ಮೀಯರ ನಿಧನದ ವಾರ್ತೆ ನಿಮಗೆ ತಲಪಿದಾಗ ನೀವು ಎಲ್ಲಿ ಇದ್ದಿರಿ, ನೀವು ಏನು ಮಾಡುತ್ತಿದ್ದಿರಿ, ಯಾವ ರೀತಿ ನಿಮಗೆ ಆ ಸುದ್ದಿ ದೊರೆಯಿತು ಇತ್ಯಾದಿಗಳು ಬಲು ಕಾಲ ನಿಮ್ಮ ಸ್ಮರಣೆಯಲ್ಲುಳಿಯುತ್ತವೆ.

ಸ್ಮರಣೆಯ ಮಿತಿಗಳು:

ಕೆಲವರು ತಮ್ಮ ಸ್ಮರಣೆ ಜೊಳ್ಳು ಎಂದೂ ತಾವು ಏನನ್ನೂ ಸ್ಮರಣೆಯಲ್ಲಿಟ್ಟುಕೊಳ್ಳಲು ಅಸಮರ್ಥರೆಂದು ತಾವೇ ಹೇಳಿಕೊಳ್ಳುತ್ತಾರೆ. ಮತ್ತೆ ಕೆಲವರು ಏನು ಬೇಕಾದುದನ್ನೂ ತಮ್ಮ ಸ್ಮರಣೆಯಲ್ಲಿಟ್ಟುಕೊಳ್ಳುತ್ತಾರೆ. ಒಮ್ಮೆ ಓದಿದುದನ್ನು ಮತ್ತೊಮ್ಮೆ ಓದುವ ಅವಶ್ಯಕತೆ ಇಂಥವರಿಗೆ ಇರಲಾರದು! ನಾವು ಅನೇಕ ಸಲ ಸ್ಮರಣೆಯಲ್ಲಿದ್ದುದನ್ನು ಹೊರಗೆಡುವುತ್ತಿರುವಾಗ ನಾಲಗೆಯಿಂದ ಸರಿಯಾದ ಶಬ್ದ ಹೊರಬೀಳದೇ ತೊಡಕನ್ನು ಕ್ಷಣಕಾಲ ಅನುಭವಿಸುತ್ತೇವೆ. “ನಾಲಗೆಯ ತುದಿಯಮೇಲಿರುವ ಶಬ್ದ” ಹೇಳಲು ನಾವು ತಡವರಿಸಿದಾಗ ಬೇರೊಬ್ಬರು ಆ ಶಬ್ದ ಹೇಳಲು ಪ್ರಾರಂಭಿಸಿದೊಡನೆಯೇ ನಾವು ಅವರೊಂದಿಗೆಯೆ ಆ ಶಬ್ದ ಹೇಳಲು ಸುಲಭವಾಗಿರುತ್ತದೆ. ನಾವು ಬಹುಕಾಲ ಕಂಡಿರದ ಪರಿಚಿತ ವ್ಯಕ್ತಿಗಳ ಮುಖವನ್ನು ನಮ್ಮ ಸ್ಮರಣೆಗೆ ತರಲು (ನಮ್ಮ ಪ್ರಜ್ಞೆಗೆ ತರಲು) ಅಸಮರ್ಥರಾದರೂ ಆ ವ್ಯಕ್ತಿಯನ್ನು ಕಂಡಾಗ ಥಟ್ಟನೇ ಗುರುತಿಸುವಲ್ಲಿ ಸಮರ್ಥರಾಗಿರುತ್ತೇವೆ. ಹೀಗೆ ಮಾಹಿತಿಯನ್ನು ನಮ್ಮ ಪ್ರಜ್ಞೆಗೆ ಹೊರತರುವ ಕ್ರಿಯೆಗಿಂತ ಹೊರತಂದ ಮಾಹಿತಿಯನ್ನು ಶೀಘ್ರವಾಗಿ ಗುರುತಿಸುವಲ್ಲಿ ನಮ್ಮ ಮಿದುಳು ಹೆಚ್ಚು ಸಮರ್ಥವಾಗಿದೆ.

ಸ್ಮರಣೆಗೆ ಸಹಾಯಗಳು:

ಪ್ರತಿಯೊಬ್ಬರಿಗೂ ತಮ್ಮದೇ ಆದ ವೈಯಕ್ತಿಕ ರೀತಿ, ವಿಧಾನಗಳಿದ್ದು ಅವುಗಳ ಸಹಾಯದಿಂದ ಅವರು ಮಾಹಿತಿಯನ್ನು ಸ್ಮರಣೆಯಲ್ಲಿಟ್ಟುಕೊಳ್ಳುತ್ತಾರೆ. ಕೆಲವು ಮಾಹಿತಿಗಳು ಯಾವುದೇ ಅನುಮಿತಿಗೆ ಸುಲಭವಾಗಿ ಸಿಕ್ಕಲಾರವು. ಅಂಥ ವಾಸ್ತವಾಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಹೆಚ್ಚು ಕಷ್ಟಪಡಬೇಕಾಗುತ್ತದೆ. ಆದರೆ ಹಲವಾರು ಸಂಬಂಧಪಟ್ಟ ಮಾಹಿತಿಯನ್ನು ನೆನಪಿನಲ್ಲಿಡಬೇಕಾದರೆ ಅವುಗಳನ್ನು ತಾರ್ಕಿಕವಾಗಿ ವಿಂಗಡಣೆ ಮಾಡಿ ನೆನಪಿನಲ್ಲಿಟ್ಟುಕೊಂಡರೆ ಮತ್ತೆ ಕೆಲವನ್ನು ಸಣ್ಣ ಸಣ್ಣ ಖಂಡಗಳಲ್ಲಿ ಹಿಡಿದಿರಿಸಿಕೊಂಡರೆ ಅನುಕೂಲ. (ಉದಾ: ದೂರವಾಣಿ ಸಂಖ್ಯೆಯನ್ನು ೧೯೨೨೪೨೬೬ ಒಂದೇ ಸಂಖ್ಯೆಯನ್ನಾಗಿ ಗ್ರಹಿಸದೇ ಅದನ್ನು ೧೯  ೨೨  ೪೨  ೬೬ ಎಂದು ವಿಂಗಡಿಸಿ ಸ್ಮರಣೆಯಲ್ಲಿಟ್ಟುಕೊಂಡರೆ ಅನುಕೂಲವಾಗಬಹುದು) ಇನ್ನು ಕೆಲವು ಮಾಹಿತಿಯನ್ನು ಈಗಾಗಲೆ ನೆನಪಿನಲ್ಲಿಟ್ಟುಕೊಂಡ ಮಾಹಿತಿಯ ಆಧಾರದಿಂದ ಅನುಮಿತಿಗೊಳಪಡುವಂತೆ ಮಾಡಿ ಹೊಸ ಮಾಹಿತಿಯನ್ನು ಸ್ಮರಣೆಯಲ್ಲಿಟ್ಟುಕೊಳ್ಳಲು ಸಹಾಯವಾಗಬಲ್ಲದು.

ಈಗಾಗಲೇ ಅರಿತು ದಾಖಲಿಸಿದ ಮಾಹಿತಿಯನ್ನು ನೆನಪಿಸಿಕೊಳ್ಳಲು ಅನುಕೂಲವಾಗುವಂತೆ ಕೆಲವು ಬಗೆಯ ಸಂಕ್ಷಿಪ್ತ ಸೂತ್ರಗಳನ್ನು ಬಳಸಬಹುದಾಗಿದೆ. ಇಂಥ ಸಹಾಯಕ ಸೂತ್ರಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ಗ್ರೀಕರು ಕಲಿಸುತ್ತಿದ್ದರೆಂದು ತಿಳಿದುಬಂದಿದೆ. ಇಂಥವುಗಳಿಗೆ ಸ್ಮರಣಾಸೂತ್ರಗಳು (mnemonics) ಎನ್ನುತ್ತಾರೆ. ಗ್ರೀಕ್ ಪೌರಾಣಿಕ ಕತೆಗಳಲ್ಲಿ ನೀಮೋಸೈನಿ (Mnemosyne) ಸ್ಮರಣಾ ದೇವತೆ. ಆದ್ದರಿಂದ ಈ ಸ್ಮರಣಾಸೂತ್ರಗಳಿಗೆ ಇಂಗ್ಲಿಷ್‍ನಲ್ಲಿ ನೀಮೋನಿಕ್ಸ್ ಎಂದು ಕರೆಯುತ್ತಾರೆ.

ಮಾಹಿತಿಯನ್ನು ನೆನಪಿನಲ್ಲಿಡುವಾಗ ಸಂಬಂಧ ಕಲ್ಪನೆಯೂ ಸಹಾಯಕವಾಗಬಲ್ಲದು. ಬರೆದ ಅಕ್ಷರಗಳೊಂದಿಗೆ ಸಂಬಂಧಪಟ್ಟ ಚಿತ್ರಗಳನ್ನೂ ಸ್ಮರಣೆಯಲ್ಲಿಟ್ಟುಕೊಂಡಿದ್ದರೆ ಆ ಮಾಹಿತಿಯನ್ನು ಹೊರತೆಗೆಯುವಾಗ ಮನಸ್ಸಿನಲ್ಲಿ ಚಿತ್ರದ ಕಲ್ಪನೆ ಮೂಡಿಸಿಕೊಂಡು ಸುಲಭವಾಗಿ ಹೇಳಬಹುದು. ಉದಾಹರಣೆಗೆ ಭಾರತದ ೨೮ ರಾಜ್ಯಗಳ ಹೆಸರನ್ನು ಹೇಳುವಾಗ ಭಾರತ ದೇಶದ ನಕಾಶದಲ್ಲಿರುವ ಎಲ್ಲ ರಾಜ್ಯಗಳ ಚಿತ್ರಣ ನಮ್ಮ ಸ್ಮರಣೆಯಲ್ಲಿಟ್ಟುಕೊಂಡಿದ್ದರೆ ರಾಜ್ಯಗಳ ಹೆಸರುಗಳನ್ನೊಪ್ಪಿಸುವದು ಸುಲಭವಾಗಬಲ್ಲದು.

ಸ್ಮರಣೆಗೆ ಸಹಾಯಮಾಡಬಲ್ಲ ಇಂಥ ಯುಕ್ತಿಗಳು ಎಲ್ಲರಿಗೂ ಸಹಾಯಮಾಡಲಾರವು. ಪ್ರತಿಯೊಬ್ಬರೂ ತಮ್ಮದೇ ಆದ ಯುಕ್ತಿಗಳನ್ನು ರೂಪಿಸಿಕೊಂಡು ಅವುಗಳನ್ನು ಲಾಭದಾಯಕವಾಗಿ ಬಳಸಬಹುದಾಗಿದೆ.

ಬಿಂಬಾತ್ಮಕ ಸ್ಮರಣೆ (eidetic memory) ಕೆಲವರಲ್ಲಿ ಬಲು ತೀಕ್ಷ್ಣವಾಗಿರುವದುಂಟು. ಯಾವುದೇ ಪ್ರಜ್ಞಾಪೂರ್ವಕ ಪ್ರಯತ್ನ ಮಾಡದೇ, ಮಾಹಿತಿಯನ್ನು ಛಾಯಾಚಿತ್ರ ತೆಗೆದಂತೆ ಮಿದುಳಿನಲ್ಲಿ ಅವರು ದಾಖಲು ಪಡಿಸಿಕೊಂಡಿರುತ್ತಾರೆ. ಬೇಕಾದಾಗ ಆ ಮಾಹಿತಿಯನ್ನು ಹೊರತರುತ್ತಾರೆ.

ಅಲ್ಪಕಾಲಿಕ ಸ್ಮರಣೆಯನ್ನು ಪದೇ ಪದೇ ಮನನ ಮಾಡಿ ದೀರ್ಘಕಾಲಿಕ ಸ್ಮರಣೆಯಲ್ಲಿಡಲು ಸಾಧ್ಯ.  ನಮ್ಮ ಪೂರ್ವಜರು ಬರಹದ ಸಾಮಗ್ರಿಗಳ ಆವಿಷ್ಕಾರವಾಗುವ ಮೊದಲು ರಚಿತವಾದ ಬಲು ದೀರ್ಘ ಮತ್ತು ಕ್ಲಿಷ್ಟವಾದ ತಾತ್ವಿಕ, ಧಾರ್ಮಿಕ ಗ್ರಂಥಗಳನ್ನು ಚಾಚೂ ತಪ್ಪದೇ ಶುದ್ಧವಾಗಿ ಉಚ್ಚರಿಸಿ ನೆನಪಿನಲ್ಲಿಟ್ಟುಕೊಂಡು ಆ ಗ್ರಂಥಗಳನ್ನು ಮುಂದಿನ ಪೀಳಿಗೆಯವರಿಗೆ ಬಾಯಿಪಾಠ ಮಾಡಲು ಕಲಿಸುತ್ತ ಸಾವಿರಾರು ವರ್ಷ ಅಂಥ ಜ್ಞಾನವನ್ನು ಪ್ರಸಾರ ಮಾಡಿದ್ದು ಐತಿಹಾಸಿಕ ಪವಾಡವೆಂದೇ ಹೇಳಬಹುದು. ಹಲವಾರು ಪೀಳಿಗೆಯ ಸ್ಮರಣೆಯೇ ನಮಗೆ ಅಂಥ ಗ್ರಂಥಗಳು ದೊರೆಯುವಂತೆ ಮಾಡಿದ್ದು, ಬರಹದ ಸಾಮಗ್ರಿಗಳ ಆವಿಷ್ಕಾರ ಮತ್ತು ಸೌಲಭ್ಯಗಳು ದೊರೆತಾಗಿನಿಂದ ಅಂಥ ಅದ್ಭುತ ಸ್ಮರಣೆಯ ಅವಶ್ಯಕತೆ ಈಗ ನಮಗೆ ಬೇಕಿಲ್ಲವಾಗಿದೆ. ಆದರೆ ಮಾನವನ ಸ್ಮರಣೆಯ ವ್ಯಾಪ್ತಿ, ಆಳಗಳನ್ನು ಈ ಐತಿಹಾಸಿಕ ಘಟನೆಗಳು ತಿಳಿಸಬಲ್ಲವು.

ಈಗ ಯಾವುದೇ ಮಾಹಿತಿಯನ್ನು ಬರೆದಿಟ್ಟುಕೊಳ್ಳುವದು ಸುಲಭ. ತಂತ್ರಜ್ಞಾನದ ಸುಧಾರಣೆಗಳಿಂದಾಗಿ ಅಂಗೈಯಲ್ಲಿ ಹಿಡಿದಿಟ್ಟುಕೊಳ್ಳಬಹುದಾದಂಥ ಚಿಕ್ಕ ಗಾತ್ರದ ಸಲಕರಣೆಗಳಲ್ಲಿ ಅಪಾರವಾದ ಮಾಹಿತಿಯ ಶೇಖರಣೆ ಮಾಡಿಟ್ಟುಕೊಳ್ಳಲು ಸಾಧ್ಯವಾಗಿದೆ. ಇಂಥ ಆವಿಷ್ಕಾರದಿಂದಾಗಿ ಮತ್ತು ಅವುಗಳ ಮೇಲೆ ಹೆಚ್ಚು ಹೆಚ್ಚು ಅವಲಂಬಿತನಾಗುತ್ತಿರುವದರಿಂದ ಮಾನವನ ಸ್ಮರಣಾ ಶಕ್ತಿ ಮುಂಬರುವ ಶತಕಗಳಲ್ಲಿ ಕ್ಷೀಣಿಸುವದೇನೋ! ಅದನ್ನು ನಾವು ಭವಿಷ್ಯದಲ್ಲಿ ಅರಿಯಲು ಮಾತ್ರ ಸಾಧ್ಯ.