ಬೆಳಿಗ್ಗೆ ಅಷ್ಟು ಹೊತ್ತಿಗೇ, ಉಮೇಶ್ ಮತ್ತು ಅವರ ಸ್ನೇಹಿತ ಸುರೇಶ್ ಇಬ್ಬರೂ ತಮ್ಮ ತಮ್ಮ ಕೆಲಸಗಳಿಗೆ ಹೋದಕಾರಣ ಮನೆಯಲ್ಲಿ ನಾನೊಬ್ಬನೇ. ಮೇಲಂತಸ್ತಿನ ಮೂರು ಕೊಠಡಿಗಳೊಂದರಲ್ಲಿ ಮಲಗಿದ್ದ ನಾನು, ಎಂಟು ಗಂಟೆಗೆ ಎದ್ದು ಕೆಳಗೆ ಬಂದು ನೋಡುತ್ತೇನೆ, ಊಟದ ಮನೆಯ ಟೇಬಲ್ ಮೇಲೆ ಉಪ್ಪಿಟ್ಟು ಮತ್ತು ‘ಸೀರಿಯಲ್’ಗಳೂ, ಜತೆಗೆ ಮಧ್ಯಾಹ್ನ ನಾನು ಮಾಡಬೇಕಾದ ಊಟದ ಸೂಚನೆಗಳನ್ನುಳ್ಳ ಚೀಟಿಯೂ ಇದ್ದುವು.

ಬೆಳಗಿನ ಉಪಹಾರ ಮುಗಿಸಿ, ಮತ್ತೆ ಮೇಲೆ ಹೋದೆ, ಕೂತೆ. ಊರೆಲ್ಲ ಒಂದು ಥರಾ ನಿಶ್ಯಬ್ದ. ಇದೇನು ಊರೋ ಕಾಡೋ ಅನ್ನಿಸಿತು. ಕಿಟಕಿಯಿಂದಾಚೆಗೆ ನೋಡಿದೆ. ಇದು ಊರೇ ಹೌದು. ರಾತ್ರಿ ಮನೆಯ ಮುಂದೆ ಸಾಲಾಗಿ ನಿಲ್ಲಿಸಿದ ಕಾರುಗಳೊಂದೂ ಈಗ ಇಲ್ಲ. ಎಲ್ಲ ಕೆಲಸಕ್ಕೆ ಹೋಗಿದ್ದಾರೆ. ಯಥಾಪ್ರಕಾರ ಒಂದೊಂದು ಮನೆಯೂ ಅವುಗಳ ಹಿಂದೆ ಮುಂದೆ ಹಾಸಿಕೊಂಡ ಹಚ್ಚಹಸುರಿನ ಮಧ್ಯೆ ಹಾಯಾಗಿ ಕೂತಿವೆ. ಉರ ತುಂಬ ದಟ್ಟವಾದ ಹಸಿರು ಮರಗಳು. ಆಗಾಗ ಸೊಯ್ ಎಂದು, ಯಾವ ಕಿರುಚೂ ಇಲ್ಲದೆ ದೂರದಲ್ಲಿ ಸಾಗುವ ಕಾರುಗಳ ಸದ್ದು. ಮನೆ ಮನೆಯ ಮುಂದೆ, ಆಯಾ ಮನೆಯವರು ಕಸವನ್ನು ತುಂಬಿಸಿ ಬಾಯಿ ಕಟ್ಟಿ ಇರಿಸಿದ ಕಪ್ಪು ಬಣ್ಣದ ಪ್ಲಾಸ್ಟಿಕ್ ಚೀಲಗಳು. ವಾರಕ್ಕೆ ಒಂದು ಸಲವೋ ಎರಡು ಸಲವೋ ಇವುಗಳನ್ನು ತುಂಬಿಕೊಂಡು ಸಾಗಿಸುವ ವಾಹನ ಬರುತ್ತದೆ. ಬೀದಿ ಬೀದಿಗಳೆಲ್ಲ, ತೊಳೆದಂತೆ ಚೊಕ್ಕಟ.

ಮಹಡಿಯಿಂದಿಳಿದು ಬಂದು, ಒಂದಿಷ್ಟು. ಹಣ್ಣಿನ ರಸ ಕುಡಿದು, ಕೆಳಗಿನ ನಡುಮನೆಯೊಳಗಣ ಟಿ.ವಿ. ಹಾಕಿಕೊಂಡು ಕೂತೆ. ಅನೇಕ ಛಾನಲ್‌ಗಳ ಮೂಲಕ ಹಗಲೂ-ರಾತ್ರಿ ಹೆಚ್ಚೂ ಕಡಿಮೆ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ಕಾರ್ಯ ಕ್ರಮಗಳು ಪ್ರಸಾರವಾಗುತ್ತವೆ. ಟಿ.ವಿ.ಯಲ್ಲಿ ಕಳೆದವಾರ ತಾವು ಡೇಟಿಂಗ್‌ಗೆ ಹೋದ ಹುಡುಗನ ಜತೆ ಆದ ಅನುಭವಗಳನ್ನು ಕುರಿತು, ಹುಡುಗಿಯರಿಬ್ಬರು ಹೇಳಿಕೊಳ್ಳುವ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿತ್ತು! ಅಬ್ಬಾ ಧೈರ್ಯವೇ, ಯಾವುದಕ್ಕೂ ಮುಚ್ಚು ಮರೆ ಹಾಗೂ ಖಾಸಗಿ ಎಂಬ ಮಾತುಗಳಿಗೆ ಇಲ್ಲಿ ಅರ್ಥವೇ ಇಲ್ಲವೇ ಎನ್ನಿಸಿತು. ಮತ್ತೆ ಪ್ರತಿ ಎರಡು ಮೂರು ನಿಮಿಷಕ್ಕೆ ಒಂದೊಂದು ವ್ಯಾಪಾರದ ಜಾಹೀರಾತು ಬೇರೆ.

ಮಧ್ಯಾಹ್ನದ ವೇಳೆಗೆ, ಉಮೇಶ್ ಅವರು ಮಾಡಿ ಫ್ರಿಜ್ಜಿನಲ್ಲಿರಿಸಿದ ಅನ್ನ ಹಾಗು ಸಾಂಬಾರ್‌ಗಳನ್ನು ತೆಗೆದಿರಿಸಿಕೊಂಡು, ಪ್ಯಾಕೆಟ್‌ಗಳಲ್ಲಿದ್ದ ಗಟ್ಟಿ ಮೊಸರನ್ನು ಬಡಿಸಿಕೊಂಡು ಊಟ ಮುಗಿಸಿ, ಮಹಡಿಯ ಮೇಲೆ ಹೋಗಿ ಮಲಗಿದ್ದೆ ಗೊತ್ತು. ನನಗೆ ಎಚ್ಚರವಾದಾಗ ಉಮೇಶ್ ಅವರು ತಮ್ಮ ಕೆಲಸದಿಂದ ಹಿಂದಿರುಗಿ, ಅಡುಗೆ ಮನೆಯಲ್ಲಿ ಟೀ ಮಾಡುತ್ತಿದ್ದರು. ಟೀ ಸೇವನೆಯ ನಂತರ ಆ ಸಂಜೆ ಆ ಊರಿನಲ್ಲಿ ಒಂದಷ್ಟು ತಿರುಗಾಡಿ ಬರಲು ಕಾರಿನಲ್ಲಿ ಹೊರಟೆವು. ಸ್ಯಾಲಿಸ್ಬರಿ ನಮ್ಮಲ್ಲಿನ ತಾಲ್ಲೂಕು ಸ್ಥಳಗಳಿಗೆ ಸಂವಾದಿಯಾಗಬಹುದಾದ ಒಂದು ಊರು. ಆದರೂ ದೊಡ್ಡ ನಗರಗಳಲ್ಲಿರುವ ಎಲ್ಲ ಸೌಲಭ್ಯಗಳೂ ಇಲ್ಲಿವೆ. ಈ ಊರಿನ ಜನಸಂಖೈ ಕೇವಲ ಮೂವತ್ತು ಸಾವಿರವಂತೆ. ಆದರೆ ಕಾರುಗಳ ಸಂಖ್ಯೆಯೇ ಇಪ್ಪತ್ತು ಸಾವಿರವಂತೆ. ಹೆಚ್ಚು ಕಡಿಮೆ ಪ್ರತಿಯೊಂದು ಸಂಸಾರಕ್ಕೂ ಒಂದೊಂದು ಕಾರು ಎಂದಂತಾಯಿತು. ಹೀಗಾಗಿ ಬೀದಿ ಬೀದಿಗಳಲ್ಲಿ ಕಾರು, ಅಂಗಡಿಗಳ ಮುಂದೆ, ವಾಸಗೃಹಗಳ ಮುಂದೆ ವ್ಯಾಪಾರ ಮಳಿಗೆಗಳ ಎದುರು ಕುರಿಮಂದೆಯಂತೆ ತರುಬಿದ ಕಾರು. ಅಮೆರಿಕಾದ ಸಮಸ್ತ ವ್ಯವಹಾರವೆಲ್ಲಾ ಕಾರು ಮತ್ತು ಫೋನುಗಳನ್ನು ಅವಲಂಬಿಸಿದೆ. ನಾವು ಹೊರಟಾಗ ಆಗಲೇ ಇರುಳು ಇಳಿಯತೊಡಗಿ, ದೀಪಗಳು ಝಗಝಗಿಸುತ್ತಿದ್ದವು. ನಾವು ಒಂದು ಮಾಲ್ ಎದುರಿಗೆ ಕಿಕ್ಕಿರಿದ ಕಾರುಗಳ ನಡುವೆ ನಮ್ಮ ವಾಹನವನ್ನು ನಿಲ್ಲಿಸಿ, ಮಾಲ್ ಒಳಗೆ ಪ್ರವೇಶಿಸಿದೆವು.  ‘ಮಾಲ್’ ಎಂದರೆ ಸರ್ವಸಾಮಗ್ರಿಗಳ ಒಂದು ವಿಸ್ತಾರವಾದ  ಸಂಕೀರ್ಣ ! ಪ್ರತಿಯೊಂದು ಊರಿನಲ್ಲೂ ಆಯಾ ಊರಿನ ಅಗತ್ಯಗಳಿಗೆ ತಕ್ಕ ಪ್ರಮಾಣದ ಮಾಲ್‌ಗಳೂ, ಕೆ. ಮಾರ್ಕೆಟ್‌ಗಳೂ ಇವೆ. ಅವುಗಳಲ್ಲಿ ದೊರೆಯದ ವಸ್ತುಗಳೇ ಇಲ್ಲ. ಒಂದೊಂದು ವಸ್ತು ಜಾತಿಗಳಿಗೆ ಒಂದೊಂದು ವಿಭಾಗ. ಬಟ್ಟೆ-ಬರೆ, ಪಾತ್ರೆ – ಪಡಗ ಇತ್ಯಾದಿಗಳಿಂದ ಹಿಡಿದು, ಹಾಲು, ಮೊಸರು, ತರಕಾರಿ, ಹಣ್ಣು , ಮಾಂಸ ಇತ್ಯಾದಿ ಸಕಲ ಸಾಮಗ್ರಿಗಳೂ ದೊರೆಯುತ್ತವೆ. ಒಳಗಿನ ವಿಸ್ತಾರವನ್ನು ಹೊಕ್ಕರೆ ನನ್ನಂಥವರು ಹೋದ ಬಾಗಿಲಿನಿಂದ ಹೊರಕ್ಕೆ ಬರುವುದು ಕಷ್ಟ. ಅದರೊಳಗಿನ ವಸ್ತುಗಳನ್ನು ವಿಂಗಡಿಸಿರುವ ಕ್ರಮ, ಅವುಗಳ ಮಾರಾಟದ ವ್ಯವಸ್ಥೆ ತುಂಬ ಅಚ್ಚುಕಟ್ಟಾಗಿದೆ. ಅಗತ್ಯವಾದ ವಸ್ತುಗಳನ್ನು ತಳ್ಳುಗಾಡಿಗಳಲ್ಲಿ ತುಂಬಿಕೊಂಡು, ಕೌಂಟರ್‌ಗಳ ಬಳಿಗೆ ಬಂದರೆ ಅಲ್ಲಿನ ಲವಲವಿಕೆಯ ಮಹಿಳಾಮಣಿಯರು ಚಕಚಕನೆ ಚೆಕ್ ಮಾಡಿ, ನಿಮಿಷಾರ್ಧದಲ್ಲಿ ಬಿಲ್ ನೀಡಿ ಹಣ ಪಡೆಯುತ್ತಾರೆ. ಹಣವಿದ್ದರೆ, ನಗದು ಕೊಡಬಹುದು ಅಥವಾ ಕ್ರೆಡಿಟ್ ಕಾರ್ಡ್ ಕೊಟ್ಟರೆ, ಅದನ್ನು ಪರಿಶೀಲಿಸಿ, ಅವರವರ ಬ್ಯಾಂಕಿನಿಂದ, ಹಾಗೆ ಕೊಂಡ ವಸ್ತುಗಳ ಬೆಲೆಯನ್ನು, ಈ ಮಳಿಗೆಯ ಲೆಕ್ಕಕ್ಕೆ ಪಡೆದುಕೊಳ್ಳುತ್ತಾರೆ. ಈ ದೇಶದ ಯಾವುದೇ ಮೂಲೆಗೆ ಹೋದರೂ ಹೆಚ್ಚಿನ ವ್ಯವಹಾರ ಈ ಕ್ರೆಡಿಟ್‌ಕಾರ್ಡುಗಳ ಮೂಲಕವೇ ನಡೆಯುವಂತೆ ತೋರುತ್ತದೆ.

ಮರುದಿನ ಉಮೇಶ್ ಅವರು, ತಾವು ಕೆಲಸಕ್ಕೆ ನಿಧಾನವಾಗಿ ಹೋಗುವುದಾಗಿಯೂ, ಜತೆಗೆ ಅವರು ಕೆಲಸ ಮಾಡಲಿರುವ ಊರು ‘ಓಷನ್ ಸಿಟಿ’ ಯನ್ನು ತೋರಿಸುವುದಾಗಿಯೂ ದಿನಚರಿಯನ್ನು ವ್ಯವಸ್ಥೆಗೊಳಿಸಿಕೊಂಡು, ಊಟವಾದನಂತರ ಮಧ್ಯಾಹ್ನ ನನ್ನನ್ನು ಕರೆದುಕೊಂಡು ಹೊರಟರು. ಸ್ಯಾಲಿಸ್‌ಬರಿಯಿಂದ ಓಷನ್ ಸಿಟಿಗೆ ಕೇವಲ ಮೂವತ್ತು ಮೈಲಿ; ಮೂವತ್ತೈದರಿಂದ ನಲವತ್ತು ನಿಮಿಷಗಳ ಕಾರಿನ ದಾರಿ. ಅವರ ಕಾರ‍್ಯಾಗಾರ ಸಮುದ್ರದ ಒಳಚಾಚಿನ ಬದಿಗೆ ನಿಂತ, ರೈಲ್ವೆ ಕಂಪಾರ್ಟ್‌ಮೆಂಟ್ ಮಾದರಿಯ, ಒಂದು ಮರದ ಮನೆ. ಅವರು ಎಂಜಿನಿಯರ್ ಆದುದರಿಂದ, ಅವರು ಹಾಗೂ ಅವರ ಸಹೋದ್ಯೋಗಿಗಳು ಎಲ್ಲೆಲ್ಲಿ ಕೆಲಸ ಬೀಳುತ್ತದೊ ಅಲ್ಲಲ್ಲಿಗೆ ಸ್ಥಳಾಂತರಿಸಬಲ್ಲ ಮರದ ಕಛೇರಿ ಅದು. ಅದರೊಳಗೇ ಸಮಸ್ತ ಅನುಕೂಲಗಳೂ. ಇವರ ಪ್ರಧಾನ ಕಛೇರಿ ಇರುವುದು ಬಾಲ್ಟಿಮೋರ್ ನಗರದಲ್ಲಿ. ಈ ಬಗೆಯ ಸ್ಥಳೀಯ ಹಾಗೂ ಅಗತ್ಯಕ್ಕೆ ಅನುಸಾರವಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ಸ್ಥಳಾಂತರಿಸಬಲ್ಲ ಕಛೇರಿಯೊಳಗೆ ಸ್ವಲ್ಪ ಹೊತ್ತು ಕೂತಿದ್ದು, ನಂತರ ಅವರು ದುರಸ್ತಿ ಮಾಡಿಸುತ್ತಿದ್ದ ಎತ್ತರ ಸೇತುವೆಯೊಂದರ ಬಳಿಗೆ ನನ್ನನ್ನು ಕರೆದುಕೊಂಡು ಹೊದರು. ಅಲ್ಲಿ ಕೇವಲ ಮೂರು ನಾಲ್ಕು ಜನ ಮಾತ್ರ ಕೆಲಸ ಮಾಡುತ್ತಿದ್ದರು. ಆ ಕೆಲಸ ಕೂಡ ಕೇವಲ ಯಂತ್ರಗಳ ಮೂಲಕ ನಡೆದಿತ್ತು. ಇದರಿಂದಾಗಿ ನಮ್ಮಲ್ಲಿನ ಯಾವುದೇ ದುರಸ್ತಿ ಅಥವಾ ಕಟ್ಟುವ ಕೆಲಸಗಳಲ್ಲಿ ಯಂತೆ ತಲೆಯ ಮೇಲೆ ಕಲ್ಲು ಹೊರುವ, ಮಂಕರಿಯಲ್ಲಿ ಮಣ್ಣು ಮರಳು ಸಾಗಿಸುವ, ಜಲ್ಲಿ ಕಲ್ಲು ಒಡೆಯುವ, ಗಾರೆ ಕೆಲಸ ಮಾಡುವ ಬಹುಸಂಖ್ಯೆಯ ಕೂಲಿಗಳ ಹಾಗೂ ಉಸ್ತುವಾರಿ ನಡೆಸುವ ಮೇಸ್ತ್ರಿಗಳ ಗಡಿಬಿಡಿಯನ್ನು ಇಲ್ಲಿ ಕಾಣುವುದು ಸಾಧ್ಯವೇ ಇಲ್ಲ.

ಅಂದು ಅರ್ಧದಿನ ರಜೆ ಹಾಕಿದ ಉಮೇಶ್ ಅವರು ನನ್ನನ್ನು ಸ್ವಲ್ಪ ದೂರದಲ್ಲಿದ್ದ ಹಡಗು – ದೋಣಿಗಳ ನಿಲುಗಡೆಯ ಬಳಿಗೆ ಕರೆದುಕೊಂಡು ಹೋದರು. ಆ ನಿಲುಗಡೆಯಿಂದ ವಿಹಾರಕ್ಕಾಗಿ ಹೊರಟ ಮೋಟಾರ್ ಬೋಟನ್ನು ಹತ್ತಿ ಕೂತೆವು. ಸುಸಜ್ಜಿತವಾದ ಸೀಟುಗಳನ್ನುಳ್ಳ ಆ ವಿಹಾರದ ದೋಣಿಯಲ್ಲಿ ನಮ್ಮಂತೆಯೆ ಟಿಕೆಟ್   ಕೊಂಡ ಹಲವರು ಪ್ರವಾಸಿಗಳಿದ್ದರು. ಮಧ್ಯಾಹ್ನ ಮೂರುವರೆಗೆ ಹೊರಟ ಆ ದೋಣಿ, ಚಾಚಿಕೊಂಡ ಕಡಲ ನೀರನ್ನು ಹಾದು, ಸುಮಾರು ಎರಡು ಮೈಲಿ ದೂರದ ದ್ವೀಪವೊಂದರ ಬಳಿಗೆ ನಮ್ಮನ್ನು ಕರೆದುಕೊಂಡು ಹೋಯಿತು. ಅದೊಂದು ಹಲವು ಮೈಲಿಗಳ ಉದ್ದಕ್ಕೂ ಚಾಚಿಕೊಂಡ, ಏರಿಳಿತಗಳಿಂದ ಕೂಡಿದ ಕುರುಚಲುಗಿಡಗಳಿಂದ ತುಂಬಿದ ದ್ವೀಪ. ಈ ದ್ವೀಪದ ತುಂಬ ಬಹು ಸಂಖ್ಯೆಯ ಕಾಡುಕುದುರೆಗಳಿವೆ. ಇದು ಒಂದು ದ್ವೀಪವಾಗಿರುವುದರಿಂದ ಮತ್ತು ಇಲ್ಲಿನ ಕಾಡು ಕುದುರೆಗಳನ್ನು ನಾಗರಿಕ ಜಗತ್ತು ಹಿಡಿಯುವುದನ್ನು ನಿಷೇಧಿಸಿರುವುದರಿಂದ, ಒಂದರ್ಥದಲ್ಲಿ ಈ ಕಾಡು ಕುದುರೆಗಳ ಸಂತತಿ ಸಮೃದ್ಧವಾಗಿ ಬೆಳೆಯಲು, ಮತ್ತು ಅವುಗಳು ಸ್ವಚ್ಛಂದ ಹಾಗೂ ನಿರ್ಭಯದಿಂದ ಸಂಚರಿಸಲೂ ಈ ಸ್ಥಳ ಅವಕಾಶವನ್ನು ಒದಗಿಸಿದೆ. ನಾವು ಸ್ವಲ್ಪ ಹೊತ್ತು ಈ ಏರಿಳಿತಗಳಲ್ಲಿ ಸುತ್ತಾಡಿ ಮತ್ತೆ ದೋಣಿಯಲ್ಲಿ ಕೂತು ಹಿಂದಕ್ಕೆ ಬರುವಾಗ ಒಂದೆಡೆ ಆ ದ್ವೀಪದ ಅಂಚಿನಲ್ಲಿ ಮೇಯುತ್ತಿದ್ದ ಹಲವು ಕುದುರೆಗಳು, ಕತ್ತೆತ್ತಿ ನಮ್ಮ ಕಡೆ ನೋಡುವುದನ್ನು ಕಂಡೆವು.

ವಿಹಾರ ಮುಗಿದ ನಂತರ, ಓಷನ್‌ಸಿಟಿಯ ಬೀದಿಗಳನ್ನು ಹಾದು ಕಡಲ ತೀರಕ್ಕೆ ಬಂದೆವು. ಈ ಊರಿನ ಹೆಸರು ಓಷನ್ ಸಿಟಿ (ಸಾಗರನಗರ) ಎಂದಿದ್ದರೂ, ವಾಸ್ತವವಾಗಿ ಇದು ಸಿಟಿ (ನಗರ) ಅಲ್ಲ. ಆದರೆ ನ್ಯೂಯಾರ್ಕಿನ ದಕ್ಷಿಣದ ಕಡಲ ತೀರದಲ್ಲಿರುವ ಈ ಸಣ್ಣ ಊರು, ಪ್ರವಾಸಿಗಳ ಸೂಜಿಗಲ್ಲಾಗಿದೆ. ಬೇಸಿಗೆಯ ಮೂರು ನಾಲ್ಕು ತಿಂಗಳುಗಳಲ್ಲಂತೂ ಇದೊಂದು ಗಿಜಿಗುಟ್ಟುವ ಜೇನುಗೂಡಿನಂತಾಗುತ್ತದೆ. ಅನೇಕ ತಿಂಗಳುಗಳ ಮೊದಲೇ ಕಡಲ ತೀರದ ವಸತಿ ಗೃಹಗಳೂ, ಮತ್ತಿತರ ನಿವಾಸಗಳು ‘ಬುಕ್’ ಆಗಿರುತ್ತವೆ. ವಿಸ್ತಾರವಾದ ಅಟ್ಲಾಂಟಿಕ್ ಮಹಾಸಾಗರದ ಉದ್ದಕ್ಕೂ ಹಲವು ಅಂತಸ್ತುಗಳಲ್ಲಿ  ತಲೆಯೆತ್ತಿಕೊಂಡ ವಸತಿಗೃಹಗಳ ಸಾಲನ್ನು ದಾಟಿಕೊಂಡು, ನುಣ್ಣನೆಯ ಹಾಗೂ ಶುಭ್ರವಾದ ಮರಳು ಹಾಸಿಕೊಂಡ ಕಡಲ ತೀರವನ್ನು ತಲುಪಿದೆವು. ಅಟ್ಲಾಂಟಿಕ್ ಮಹಾಸಾಗರ, ಅಬ್ಬರವಿಲ್ಲದೆ ಪ್ರಶಾಂತವಾಗಿ, ಸಂಜೆಯ ಸೂರ‍್ಯನ ಬೆಳಕಿನಲ್ಲಿ ಬಂಗಾರದ ಹಾಸಿಗೆಯಾಗಿತ್ತು. ಆ ಚಿನ್ನದ ಬಣ್ಣದ ನೀರಮೇಲೆ, ನೀರನ್ನು ಸೀಳಿಕೊಂಡು ಹೋಗುವ ದೋಣಿಗಳು, ದೋಣಿಗಳಿಗೆ ಬಿಗಿದುಕೊಂಡು ನೀರಮೇಲೆ ನಿಂತು ವೇಗವಾಗಿ ಧಾವಿಸಲನು ಕೂಲವಾದ ಅಡ್ಡಪಟ್ಟಿಗಳನ್ನು ಕಾಲಿಗೆ ಕಟ್ಟಿಕೊಂಡು ಕ್ರೀಡೆಗಳಲ್ಲಿ ತೊಡಗಿದವರು, ಲಕಲಕಿಸುವ ನೀರಲ್ಲಿ ಹಾಯಾಗಿ ಈಜುವವರು, ಸ್ವಚ್ಛವಾದ ಮರಳ ಹಾಸಿನಮೇಲೆ ಮೈಚಾಚಿ ಅರೆಬೆತ್ತಲೆಯಾಗಿ ಮಲಗಿದ ಗಂಡು – ಹೆಣ್ಣುಗಳು, ಕೈ ಕೈ ಹಿಡಿದುಕೊಂಡು ಕಡಲ ಗಾಳಿಗೆ ಮೈಯೊಡ್ಡಿ ಕಿಲಕಿಲ ನಗುತ್ತ, ಅಲೆಗಳು ತೋಯಿಸಿದ ಹೊನ್ನೇರಿಲೆ ಬಣ್ಣದ  ಕಡಲಂಚಿನಲ್ಲಿ ವಿಹಾರ ಹೊರಟ ಹುಡುಗ-ಹುಡುಗಿಯರು, ವಿರಕ್ತರಂತೆ ವಿಷಾದದಿಂದ ನಿಧಾನಕ್ಕೆ ನಡೆಯುವ ಮುದುಕ ಮುದುಕಿಯರು.

ಹೊತ್ತು ಮುಳುಗಿತು. ನೀರಿನ ಮೇಲಿನ ಚಿನ್ನದ ಬಣ್ಣ ಮಾಸತೊಡಗಿತು. ನಾವು ಅಲ್ಲಿಂದ ಸ್ವಲ್ಪ ದೂರ ಮೇಲಕ್ಕೆ ಬಂದೆವು. ಇಡೀ ಕಡಲ ತೀರದ ಉದ್ದಕ್ಕೂ ಝಗಝಗಿಸುವ ಅಂಗಡಿಗಳು; ಕ್ರೀಡಾವಿನೋದದ ನೆಲೆಗಳು; ಹೋಟಲುಗಳು; ವಿವಿಧ ವಸ್ತುಗಳ ಮಾರಾಟದ ಮಳಿಗೆಗಳು; ಎಳೆಯರಿಗಾಗಿ ಜಯಂಟ್‌ವ್ಹೀಲ್ ಮತ್ತಿತರ ಆಕರ್ಷಕ ಕ್ರೀಡೆಗಳು. ಈ ಅಂಗಡಿ ಸಾಲುಗಳ ಎದುರಿಗೆ, ಸುಮಾರು ಎರಡು ಮೈಲಿಗಳ ದೂರ, ನೆಲಕ್ಕೆ ಮರದ ಹಲಗೆಗಳನ್ನು ಹಾಸಿ ಮಾಡಿದ ರಸ್ತೆ, ಅದರ ಮೇಲೆ ರಬ್ಬರು ಗಾಲಿಗಳನ್ನುಳ್ಳ, ನಿಧಾನಕ್ಕೆ ಚಲಿಸುವ ‘ಬೋರ್ಡ್‌ವಾಕ್ ಟ್ರೆನ್’ ಎಂಬ ವಾಹನ. ಒಂದು ಸಲಕ್ಕೆ ನೂರಾರು ಜನ ಕೂರಬಹುದು. ಇದರಲ್ಲಿ ಕೂತು ನಾವೂ ಪ್ರಯಾಣ ಮಾಡಿದೆವು. ಅತ್ತ ಅನತಿ ದೂರದಲ್ಲಿ ಹಾಸಿಕೊಂಡ ಸಾಗರ; ಇತ್ತ ಸಾಲಾಗಿ ಝಗಝಗ ದೀಪದ ಅಂಗಡಿ, ಹೋಟಲು ಹಾಗೂ ತಲೆಯೆತ್ತಿದ ವಸತಿ ಗೃಹಗಳು. ಬಿದಿಯ ತುಂಬ ಕಿಕ್ಕಿರಿದ ಜನಸಂದಣಿ, ಉತ್ಸಾಹದ ಚಿಲುಮೆಗಳಂತೆ ಪುಟಿಯುವ ಜನ, ಅವರ ಲವಲವಿಕೆ, ಜೀವನೋತ್ಸಾಹ, ಬದುಕಿನಲ್ಲಿ ಸಂತೋಷವನ್ನು ಹುಡುಕಿಕೊಂಡು ಹೋಗುವ ಹುಮ್ಮಸ್ಸು, ಎಲ್ಲಕ್ಕಿಂತ ಮಿಗಿಲಾದ ಜೀವನ ಪ್ರೀತಿ ಎದ್ದು ಕಾಣುತ್ತಿತ್ತು.

ನಮ್ಮಲ್ಲೂ ಕಡಲ ತೀರಗಳಿವೆ. ಇದಕ್ಕಿಂತ ಸೊಗಸಾದ ಕಡಲ ತೀರಗಳಿವೆ. ಆದರೆ ಅವುಗಳನ್ನು ಸೊಗಸಿನ ಹಾಗೂ  ಆಕರ್ಷಣೆಯ ನೆಲೆಗಳನ್ನಾಗಿ ಮಾಡುವ ಕಲೆಗಾರಿಕೆಯಾಗಲಿ, ಕುಶಲತೆಯಾಗಲಿ ನಮಗಿಲ್ಲ. ಇಂಥ ಒಂದು ಸಾಧಾರಣವಾದ ಕಡಲ ತೀರವನ್ನು, ಈ ಜನ ಪ್ರವಾಸಿಗಳ ಆಯಸ್ಕಾಂತವನ್ನಾಗಿ ಪರಿವರ್ತಿಸಬಲ್ಲರು. ನಿಸರ್ಗದತ್ತವಾದ ಒಂದು ಪರಿಸರವನ್ನು ಆಕರ್ಷಕವೂ ಲಾಭದಾಯಕವೂ ಆದ ನೆಲೆಯನ್ನಾಗಿ ಹೇಗೆ ಮಾಡಬಹುದೆಂಬ ಕೌಶಲ ಈ ಜನಕ್ಕೆ  ಚೆನ್ನಾಗಿ ಗೊತ್ತು. ಅದೊಂದು ವ್ಯಾಪಾರವೂ ಹೌದು, ಕಲೆಯೂ ಹೌದು.