ಏನ್ನನಾದರೂ ಬರೆಯಬೇಕೆಂದು ಕೂತರೆ
ಈಚೀಚೆಗೆ ಏನೇನೂ ತೆರೆಯುವುದೇ ಇಲ್ಲ !
ಮನೆಯಂಗಳದಲ್ಲಿ ಪುಟಿಯುತ್ತಿದ್ದ
ಕಾರಂಜಿಗಳ ಬಾಯಿಗೆ ಮಣ್ಣು
ಮೆತ್ತಿಕೊಂಡು, ಒಳಗಿಂದ ನೀರು ಏರುವುದಿಲ್ಲ ;
ಆಗಾಗ ಹೇಗೋ ಮಾಡಿ ಮೆತ್ತಿರುವ ಮಣ್ಣನ್ನೊರಸಿದಾಗ
ಜಿನಗುತ್ತದೆ ಒಂದಷ್ಟು ಮರೆತ ನೆನಪು.

ಹಿಂದೆ ಬಹಳ ಬರೀತಿದ್ದೆ :
ದಿನಾ ಮೋಡ, ಮಳೆ.
ಮನೆ ಸುತ್ತ ಗರಿ ತೆರೆದು ನಿಂತ ಮರಗಳ ತುಂಬ
ಹಕ್ಕಿಗಳ ಗುಜು ಗುಂಪಲು :
ಕೂತಲ್ಲೇ ಕನಸು ಸುತ್ತಿ ಮುತ್ತಿಕೊಂಡು
ಗಲಾಟೆ.

ಈಗ ಸದ್ದಿಲ್ಲ ; ಮರ ಮರದಲ್ಲಿ ಎಲೆಯಿಲ್ಲ ;
ಎದುರಿಗೆ ಹಾಸಿಕೊಂಡಿದೆ ಕೊಯ್ಲಾದ ಹೊಲದ
ಕೂಳೆಗಳ ಸಾಲು.
ಈ ಸ್ಥಿತಿಯಲ್ಲಿ ಬರೆಯದಿದ್ದರೆ ಏನು ನಷ್ಟ ಅನ್ನಿಸಿ,
ತುಡುಗು ದನ ತೊಂಡು ಮೇಯುತ್ತಾ
ತಿರುಗುತ್ತವೆ.
ಹಿಂದೆ ಬರೆದದ್ದನ್ನೆಲ್ಲ
ಈಗ ತೆನೆ ಬಿಡಿಸಿ, ಕೇರಿ, ತೂರಿ ನೋಡಿದರೆ
ಕಾಳಿಗಿಂತ ಜಳ್ಳೇ ಹೆಚ್ಚೇನೋ ಅನ್ನಿಸುತ್ತದೆ.
ಅದನ್ನೇ, ರಾಗ-ತಾಳ-ಪಲ್ಲವಿಗಳಲ್ಲಿ ಕುರುಕುವ
ತಲೆಯಿರದ ಕಂಠಗಳನ್ನು ಕೇಳಿ
ನಗೆ ಬರುತ್ತದೆ.
ಮೊದಲಿನದು ಹೇಗೋ ಬಂತು ;
ಅನಂತರ ಒಂದರ ಹಿಂದೆ ಒಂದು
ಒಂದರ ಕಾಲ ಸಂದಿಯಲ್ಲೊಂದು ತಲೆ ಇರಿಸಿ
ಬಂದವು ಮಂದೆ ;
ತುಪಟ ಕತ್ತರಿಸಿ, ಕಂಬಳಿ ನೇದು
ಬೆಚ್ಚಗೆ ಹೊದ್ದು ಸುಮ್ಮನೆ ಕೂತಿದ್ದೇನೆ
ಈ ಎಲ್ಲದರ ಹಿಂದೆ.