ಪ್ರಪಂಚದೆಲ್ಲೆಡೆಯ ಜನರ ಜೀವನಮಟ್ಟ ಏರುತ್ತಿದ್ದಂತೆ ಸಮೃದ್ಧಬದುಕಿನ ಕನಸು ಕಾಣುವವರ ಸಂಖ್ಯೆಯೂ ಹೆಚ್ಚುತ್ತಿದೆ. ಬಗೆಬಗೆಯ ವಸ್ತುಗಳನ್ನು ರಾಶಿಗಟ್ಟಲೆ ಕೊಳ್ಳುವ ಪ್ರವೃತ್ತಿ ವ್ಯಾಪಕವಾಗಿ ಬೆಳೆದಿದೆ.

‘ಬೇಕು’ಗಳ ಪಟ್ಟಿ ದೊಡ್ಡದಾಗುತ್ತಿದ್ದಂತೆ ಅದರ ಪರಿಣಾಮ ಅಂತಿಮವಾಗಿ ಆಗುವುದು ಇಂಧನಗಳ ಮೇಲೆಯೇ ತಾನೆ! ಹೀಗಾಗಿ ಇಂಧನದ ಬೇಡಿಕೆ ಕೂಡ ತೀವ್ರವಾಗಿ ಏರುತ್ತಿದೆ.

ವಿದ್ಯುತ್ತು, ಸಂಚಾರ ವ್ಯವಸ್ಥೆ, ಆಹಾರ, ಬಟ್ಟೆಬರೆ, ಸಂವಹನ ವ್ಯವಸ್ಥೆ – ಹೀಗೆ ಯಾವುದನ್ನೇ ಗಮನಿಸಿದರೂ ಅದರ ಉತ್ಪಾದನೆಯಾಗುವಲ್ಲಿಂದ ಪ್ರಾರಂಭಿಸಿ ನಾವು ಅದನ್ನು ಬಳಸುವವರೆಗೆ ಎಲ್ಲ ಹಂತಗಳಲ್ಲೂ ಒಂದಲ್ಲ ಒಂದು ಬಗೆಯ ಇಂಧನ ಬೇಕು. ಅದರಲ್ಲೂ ಪೆಟ್ರೋಲ್, ಡೀಸಲ್ ಹಾಗೂ ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳಿಲ್ಲದೆ ಕೆಲಸ ಸಾಗುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ಬಹುತೇಕ ಎಲ್ಲೆಡೆಯೂ ನಿರ್ಮಾಣವಾಗಿದೆ.

ಪಳೆಯುಳಿಕೆ ಇಂಧನಗಳ ಪೂರೈಕೆ ಸೀಮಿತವಾದದ್ದು, ಅವು ಒಂದಲ್ಲ ಒಂದು ದಿನ ಮುಗಿದುಹೋಗುತ್ತವೆ ಎನ್ನುವ ಅಂಶ ನಮಗೆಲ್ಲ ಗೊತ್ತೇ ಇದೆ. ಆದರೆ ಸಮಸ್ಯೆ ಅದೊಂದೇ ಅಲ್ಲ.

ಹಸಿರುಮನೆ ಪರಿಣಾಮ: ಪಳೆಯುಳಿಕೆ ಇಂಧನಗಳ ಬಳಕೆ ಅಪಾರ ಪ್ರಮಾಣದ ಮಾಲಿನ್ಯ ಉಂಟುಮಾಡುತ್ತದೆ. ಕಲ್ಲಿದ್ದಲನ್ನು ಸುಟ್ಟು ವಿದ್ಯುತ್ ಉತ್ಪಾದಿಸುವ ಘಟಕಗಳು ಇದಕ್ಕೆ ಅತ್ಯುತ್ತಮ ಉದಾಹರಣೆ. ವಿಶ್ವದೆಲ್ಲೆಡೆ ಲಕ್ಷಾಂತರ ಜನ ಬಳಸುವ ಫೇಸ್‌ಬುಕ್ ತಾಣ ತನ್ನ ಚಟುವಟಿಕೆಗಳಿಗೆ ಬಳಸುವ ವಿದ್ಯುತ್ತಿನ ಉತ್ಪಾದನೆಗಾಗಿ ಕಲ್ಲಿದ್ದಲು ಉಪಯೋಗಿಸಬಾರದು ಎಂದು ಪರಿಸರ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು ಇದೇ ಕಾರಣಕ್ಕಾಗಿ.

ಪೆಟ್ರೋಲ್, ಡೀಸಲ್ ಇತ್ಯಾದಿಗಳ ಪಾಡು ಕಲ್ಲಿದ್ದಲಿಗಿಂತ ಬೇರೆಯೇನಲ್ಲ. ನಮ್ಮ ನಗರಗಳ ಪೀಕ್ ಅವರ್ ಟ್ರಾಫಿಕ್‌ನಲ್ಲಿ ವಾಹನ ಚಲಾಯಿಸುವ, ಅಥವಾ ಡೀಸಲ್ ಜನರೇಟರ್‌ನ ಆಸುಪಾಸು ಕೆಲಸಮಾಡುವ ಅನುಭವ ಇದ್ದವರಿಗೆ ಈ ಮಾತನ್ನು ವಿವರಿಸುವ ಅಗತ್ಯವೇ ಇಲ್ಲ.

ಹೀಗೆ ಸಿಕ್ಕಲ್ಲೆಲ್ಲ ಹೊಗೆ ತುಂಬಿಸಿ ಜೀವಸಂಕುಲದ ಆರೋಗ್ಯ ಕೆಡಿಸಿದ್ದಷ್ಟೇ ಅಲ್ಲ, ವಾತಾವರಣದಲ್ಲಿರುವ ಕಾರ್ಬನ್ ಸಮತೋಲನವನ್ನು ಹಾಳುಮಾಡಿದ ಕುಖ್ಯಾತಿಯೂ ಪಳೆಯುಳಿಕೆ ಇಂಧನಗಳಿಗೆ ಸಲ್ಲುತ್ತದೆ.

ಸೂರ್ಯನಿಂದ ಬರುವ ಬೆಳಕಿನಿಂದಾಗಿ ಭೂಮಿಯ ಮೇಲ್ಮೈ ಬಿಸಿಯಾಗಿ ಶಾಖ ಹೊರಹೊಮ್ಮುತ್ತದೆ. ಇದು ಸಂಪೂರ್ಣವಾಗಿ ಭೂಮಿಯನ್ನು ಬಿಟ್ಟು ಹೋಗದಂತೆ ಕಾಯ್ದುಕೊಳ್ಳುವುದು ವಾತಾವರಣದಲ್ಲಿರುವ ನೀರಾವಿ, ಕಾರ್ಬನ್ ಡೈಆಕ್ಸೈಡ್ ಹಾಗೂ ಮೀಥೇನ್‌ಗಳ ಕೆಲಸ. ಇವನ್ನು ಹಸಿರುಮನೆ ಅನಿಲಗಳೆಂದು ಕರೆಯುತ್ತಾರೆ; ಈ ಅನಿಲಗಳಿಂದಾಗಿ ಭೂಮಿಯ ಉಷ್ಣತೆ ಜೀವಿಗಳ ಬದುಕಿಗೆ ಪೂರಕವಾಗಿ ಉಳಿಯುತ್ತದಲ್ಲ, ಆ ಪ್ರಕ್ರಿಯೆಯೇ ಹಸಿರುಮನೆ ಪರಿಣಾಮ. ಪಳೆಯುಳಿಕೆ ಇಂಧನಗಳ ಮಿತಿಮೀರಿದ ಬಳಕೆಯಿಂದಾಗಿ ವಾತಾವರಣದಲ್ಲಿನ ಹಸಿರುಮನೆ ಅನಿಲಗಳ ಪ್ರಮಾಣ ಹೆಚ್ಚಾಗಿದೆ, ಹವಾಮಾನ ಬದಲಾವಣೆ ಶುರುವಾಗಿದೆ.

ಅದೆಲ್ಲ ಹೋಗಲಿ ಎಂದರೆ ಪಳೆಯುಳಿಕೆ ಇಂಧನಗಳ ಪೂರೈಕೆಯೂ ಶಾಶ್ವತವಲ್ಲ. ಈಗಿನ ಪ್ರಮಾಣದಲ್ಲೇ ಬೇಡಿಕೆ ಹೆಚ್ಚುತ್ತ ಹೋದರೆ ಕೆಲವೇ ದಶಕಗಳಲ್ಲಿ ಭೂಮಿಯಲ್ಲಿರುವ ಪಳೆಯುಳಿಕೆ ಇಂಧನಗಳ ಸಂಗ್ರಹ ಸಂಪೂರ್ಣವಾಗಿ ಮುಗಿದುಹೋಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಆ ಸಮಯ ಸಮೀಪಿಸುತ್ತಿದ್ದಂತೆ ಬೆಲೆಯೇರಿಕೆಯ ಸಮಸ್ಯೆಯೂ ಪ್ರಾರಂಭವಾಗಲಿದೆ; ಇದರ ಅನುಭವ ನಮಗೇ ಈಗಾಗಲೇ ಆಗುತ್ತಿದೆಯಲ್ಲ!

ಹೀಗಿರುವಾಗ ನಮ್ಮೆಲ್ಲ ಅಗತ್ಯಗಳಿಗೂ ಪಳೆಯುಳಿಕೆ ಇಂಧನಗಳನ್ನೇ ನೆಚ್ಚಿಕೊಳ್ಳುವುದು ಎಷ್ಟು ಸರಿ? ಹೆಚ್ಚುತ್ತಿರುವ ಜನಸಂಖ್ಯೆ, ಏರುತ್ತಿರುವ ಬೇಡಿಕೆಗಳಿಗೆ ಸರಿಸಮಾನವಾಗಿ ಇಂಧನ ಪೂರೈಕೆ ವ್ಯವಸ್ಥೆಮಾಡಿಕೊಳ್ಳುವುದು ಹೇಗೆ? ಇಂಧನದ ಬಳಕೆಯಿಂದಾಗಿ ಮಾಲಿನ್ಯ ಮಿತಿಮೀರಿ ಹೆಚ್ಚದಂತೆ ತಡೆಯುವುದು ಹೇಗೆ?

ಈ ಪ್ರಶ್ನೆಗಳ ಬೆನ್ನಟ್ಟಿ ಹೊರಟವರಿಗೆ ಸಿಕ್ಕಿರುವ ಉತ್ತರವೇ ಸ್ವಚ್ಛ ಇಂಧನ.

ಸ್ವಚ್ಛ ಇಂಧನ: ಪರಿಸರಕ್ಕೆ ಹಾನಿಯಾಗದಂತೆ ಸಿದ್ಧವಾಗುವ, ಹಾಗೂ ಬಳಕೆಯಲ್ಲೂ ಹೆಚ್ಚು ಮಾಲಿನ್ಯ ಉಂಟುಮಾಡದ ಇಂಧನ ಮೂಲಗಳನ್ನು ‘ಸ್ವಚ್ಛ’ ಇಂಧನಗಳೆಂದು ಕರೆಯಬಹುದು. ಇಂತಹ ಬಹುಪಾಲು ಇಂಧನಗಳನ್ನು ನವೀಕರಿಸಬಲ್ಲ ಸಂಪನ್ಮೂಲಗಳಿಂದ ಪಡೆಯಲಾಗುತ್ತದೆ. ಉದಾಹರಣೆಗೆ ನೀರು, ಗಾಳಿ ಅಥವಾ ಸೂರ್ಯನ ಬೆಳಕಿನಿಂದ ನಾವು ವಿದ್ಯುತ್ ಉತ್ಪಾದಿಸಿದರೆ ಅದು ಸ್ವಚ್ಛ ಇಂಧನವೆಂದು ಹೇಳಬಹುದು. ಅವೆಲ್ಲವೂ ನವೀಕರಿಸಬಲ್ಲ ಇಂಧನ ಮೂಲಗಳು, ಹಾಗೂ ಅದರಿಂದ ಉಂಟಾಗುವ ಮಾಲಿನ್ಯ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

ಒಂದು ಶತಮಾನಕ್ಕೂ ಹೆಚ್ಚಿನ ಸಮಯದಿಂದ ಸ್ವಚ್ಛ ಇಂಧನ ಪೂರೈಸುತ್ತ ಬಂದಿರುವ ಹಿರಿಮೆ ಜಲವಿದ್ಯುತ್ ಯೋಜನೆಗಳದು. ನವೀಕರಿಸಬಲ್ಲ ಇಂಧನಮೂಲಗಳ ಪೈಕಿ ಅತ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿರುವುದೆಂದರೆ ಇದೇ. ಪ್ರಪಂಚದೆಲ್ಲೆಡೆ ಬಳಕೆಯಾಗುವ ಒಟ್ಟು ವಿದ್ಯುತ್ತಿನ ಶೇ.೧೬ರಷ್ಟು ಭಾಗ ಇದೊಂದೇ ಮೂಲದಿಂದ ಉತ್ಪಾದನೆಯಾಗುತ್ತದೆ (ನೀರಿನ ಶಕ್ತಿಯಿಂದ ವಿದ್ಯುತ್ ಪಡೆಯುವ ಪ್ರಕ್ರಿಯೆ ಮಾಲಿನ್ಯಕಾರಿಯಲ್ಲ ಎಂಬುದು ನಿಜವಾದರೂ ಜಲವಿದ್ಯುತ್ ಯೋಜನೆಗಳ ನಿರ್ಮಾಣಕ್ಕಾಗಿ ಈವರೆಗೆ ಅಪಾರ ಪ್ರಮಾಣದ ಅರಣ್ಯಸಂಪತ್ತನ್ನು ‘ಮುಳುಗಿಸಲಾಗಿದೆ’ ಎಂಬ ಕಟುಸತ್ಯವನ್ನು ಮರೆಮಾಚುವಂತಿಲ್ಲ).

ಭೂಮಿಯ ಶಾಖ (ಜಿಯೋಥರ್ಮಲ್ ಎನರ್ಜಿ), ಸ್ವಚ್ಛ ಇಂಧನದ ಇನ್ನೊಂದು ಮೂಲ. ಈ ಶಾಖವನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುವುದು ಜಿಯೋಥರ್ಮಲ್ ವಿದ್ಯುತ್ ಘಟಕಗಳ ವೈಶಿಷ್ಟ್ಯ. ಚಳಿಯ ರಾಷ್ಟ್ರಗಳಲ್ಲಿ ಕಟ್ಟಡಗಳನ್ನು ಬಿಸಿಯಾಗಿಡಲು ಶಾಖವನ್ನೇ ನೇರವಾಗಿಯೂ ಬಳಸಬಹುದು. ಆದರೆ ಜಿಯೋಥರ್ಮಲ್ ಘಟಕಗಳನ್ನು ಎಲ್ಲೆಡೆಯೂ ಸ್ಥಾಪಿಸುವುದು ಸಾಧ್ಯವಿಲ್ಲ. ಅಗತ್ಯ ಪ್ರಮಾಣದ ಶಾಖವನ್ನು ಪಡೆಯಲು ಭೂಮಿಯ ಮೇಲ್ಮೈಯಿಂದ ಕಿಲೋಮೀಟರುಗಳ ಆಳದವರೆಗೂ ಕೊಳವೆಬಾವಿ ತೋಡಬೇಕಾಗುತ್ತದೆ; ಇದು ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಕಷ್ಟದ ಕೆಲಸವಾಗಿರುವುದರಿಂದ ಜಿಯೋಥರ್ಮಲ್ ಎನರ್ಜಿಯ ಬಳಕೆ ಇನ್ನೂ ವ್ಯಾಪಕವಾಗಿ ಬೆಳೆದಿಲ್ಲ.

ಸಮುದ್ರ ಕೂಡ ಸ್ವಚ್ಛ ಇಂಧನದ ಬಹುದೊಡ್ಡ ಆಕರ. ಸಮುದ್ರದ ಅಲೆಗಳಿಂದ ಪಡೆಯಲಾಗುವ ವೇವ್ ಪವರ್ ಹಾಗೂ ಉಬ್ಬರ ಇಳಿತಗಳಿಂದ ಪಡೆಯಲಾಗುವ ಟೈಡಲ್ ಪವರ್ ಘಟಕಗಳು ಪ್ರಪಂಚದ ಹಲವೆಡೆಗಳಲ್ಲಿ ಈಗಾಗಲೇ ಕೆಲಸಮಾಡುತ್ತಿವೆ. ಆದರೆ ಇವುಗಳ ವ್ಯಾಪ್ತಿಯೂ ಸೀಮಿತ.

ಗಾಳಿಶಕ್ತಿಯ ವಿಷಯವೇ ಬೇರೆ. ಗಾಳಿಯಂತ್ರಗಳನ್ನು (ವಿಂಡ್‌ಮಿಲ್) ಬಳಸಿ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನ ಈಗಾಗಲೇ ಸಾಕಷ್ಟು ಬೆಳೆದಿರುವುದರಿಂದ ಸ್ವಚ್ಛ ಇಂಧನ ಪೂರೈಕೆಯಲ್ಲಿ ಗಾಳಿಶಕ್ತಿ ಮಹತ್ವದ ಪಾತ್ರ ವಹಿಸುತ್ತಿದೆ. ಡೆನ್ಮಾರ್ಕ್ ದೇಶದ ಉದಾಹರಣೆ ತೆಗೆದುಕೊಳ್ಳುವುದಾದರೆ ಒಟ್ಟು ವಿದ್ಯುತ್ ಬಳಕೆಯ ಶೇ.೨೦ರಷ್ಟನ್ನು ಗಾಳಿಶಕ್ತಿಯಿಂದಲೇ ಪೂರೈಸಲಾಗುತ್ತಿದೆ.

ಸ್ವಚ್ಛ ಇಂಧನದ ಇನ್ನೊಂದು ಪ್ರಮುಖ ಮೂಲ ಸೌರಶಕ್ತಿ. ಸೌರಶಕ್ತಿಯಿಂದ ಬೆಳಕು ಪಡೆಯುವ, ನೀರು ಕಾಯಿಸುವ, ಅಡುಗೆ ಮಾಡುವ ತಂತ್ರಜ್ಞಾನಗಳು ನಮಗೆಲ್ಲ ಈಗಾಗಲೇ ಪರಿಚಿತ. ಇದರ ಮುಂದಿನ ಹಂತವಾಗಿ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ದೊಡ್ಡಪ್ರಮಾಣದ ಘಟಕಗಳ ಸ್ಥಾಪನೆ ಈಗಾಗಲೇ ಪ್ರಪಂಚದೆಲ್ಲೆಡೆ ನಡೆಯುತ್ತಿದೆ.

ಒಟ್ಟಿನಲ್ಲಿ ಹೇಳುವುದಾದರೆ ಸ್ವಚ್ಛ ಇಂಧನಗಳ ಬಳಕೆಯಿಂದ ಪರಿಸರದ ಮೇಲಿನ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಪಳೆಯುಳಿಕೆ ಇಂಧನಗಳ ಮೇಲಿನ ನಮ್ಮ ಅವಲಂಬನೆಯೂ ಕಡಿಮೆಯಾಗುತ್ತದೆ. ಸ್ವಚ್ಛ ಇಂಧನದ ವಿವಿಧ ಮೂಲಗಳನ್ನು ಸರಿಯಾದ ಯೋಜನೆಯೊಡನೆ ಒಟ್ಟಾಗಿ ಬಳಸಿಕೊಂಡರೆ ಇಂಧನದ ನಿರಂತರ ಪೂರೈಕೆಯೂ ಸಾಧ್ಯವಾಗುತ್ತದೆ.

ಒಟ್ಟಿನಲ್ಲಿ ನಮ್ಮ ಮುಂದಿನ ಪೀಳಿಗೆಗಳಿಗೆ ಭೂಮಿಯ ಮೇಲೆ ನೆಮ್ಮದಿಯ ಬದುಕನ್ನು ಕಟ್ಟಿಕೊಡುವಲ್ಲಿ ಸ್ವಚ್ಛ ಇಂಧನಗಳ ಪಾತ್ರ ಮಹತ್ವದ್ದು ಎನ್ನುವುದಂತೂ ನಿಜ.

ಭಾರತದ ಸಾಧನೆ: ಸ್ವಚ್ಛ ಇಂಧನ ಕ್ಷೇತ್ರದಲ್ಲಿ ನಮ್ಮ ದೇಶ ಮಹತ್ವದ ಪ್ರಗತಿ ಸಾಧಿಸಿರುವುದು ಹೆಮ್ಮೆಯ ಸಂಗತಿ. ೨೦೧೧ನೇ ಸಾಲಿನಲ್ಲಿ ಈ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ರಾಷ್ಟ್ರಗಳ ಸಾಲಿನಲ್ಲಿ ಭಾರತದ್ದು ಪ್ರಮುಖ ಸ್ಥಾನ; ಕಳೆದ ವರ್ಷ ನಮ್ಮ ದೇಶದ ಸ್ವಚ್ಛ ಇಂಧನ ಕ್ಷೇತ್ರದಲ್ಲಿ ಹೂಡಿಕೆಯಾದ ಬಂಡವಾಳ ಒಂದು ಸಾವಿರ ಕೋಟಿ ಡಾಲರುಗಳಿಗಿಂತ ಹೆಚ್ಚು ಎಂದು ‘ರಿನ್ಯೂವಬಲ್ ಎನರ್ಜಿ ವರ್ಲ್ಡ್’ ತಾಣದ ವರದಿ ಹೇಳುತ್ತದೆ. ಭಾರತದಲ್ಲಿ ಕಳೆದ ವರ್ಷ ಹೆಚ್ಚಳವಾದ ವಿದ್ಯುತ್ ಉತ್ಪಾದನೆಯ ಪ್ರಮಾಣದಲ್ಲಿ ಮೂರು ಗಿಗಾವ್ಯಾಟ್‌ನಷ್ಟನ್ನು ಗಾಳಿಶಕ್ತಿಯಿಂದ ಪಡೆಯಲಾಗಿರುವುದು ವಿಶೇಷ.

ಸೌರಶಕ್ತಿಯಿಂದ ವಿದ್ಯುತ್ ತಯಾರಿಸುವಲ್ಲೂ ನಮ್ಮ ದೇಶ ಹಿಂದುಳಿದಿಲ್ಲ. ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ ದುಬಾರಿ ವ್ಯವಹಾರ ಎನ್ನುವ ಅಭಿಪ್ರಾಯವನ್ನೇ ಬದಲಿಸುವ ಮಟ್ಟಿಗಿನ ಕೆಲಸ ಈ ಕ್ಷೇತ್ರದಲ್ಲಿ ನಡೆದಿದೆ. ‘ನ್ಯೂ ಸೈಂಟಿಸ್ಟ್’ನಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ ಇದೀಗ ಭಾರತದಲ್ಲಿ ಸೌರವಿದ್ಯುತ್ ಉತ್ಪಾದನೆ ಡೀಸಲ್ ಜನರೇಟರ್‌ನಿಂದ ವಿದ್ಯುತ್ ಪಡೆಯುವುದಕ್ಕಿಂದ ಕಡಿಮೆ ಖರ್ಚಿನಲ್ಲಿ ಆಗುತ್ತಿದೆಯಂತೆ. ‘ಬ್ಲೂಮ್‌ಬರ್ಗ್ ನ್ಯೂ ಎನರ್ಜಿ ಫೈನಾನ್ಸ್’ ಅಧ್ಯಯನದಂತೆ ಸೌರ ಫಲಕಗಳ ಬೆಲೆಯೂ ಕಳೆದ ವರ್ಷದಲ್ಲಿ ಅರ್ಧಕ್ಕರ್ಧ ಇಳಿದಿದೆ. ೨೦೨೨ರ ವೇಳೆಗೆ ಸೌರವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಇಪ್ಪತ್ತು ಸಾವಿರ ಮೆಗಾವ್ಯಾಟ್‌ಗೆ ಏರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಈ ಬೆಳೆವಣಿಗೆಗಳು ಮತ್ತಷ್ಟು ಪ್ರೋತ್ಸಾಹ ನೀಡುವ ನಿರೀಕ್ಷೆಯಿದೆ.

ಜೈವಿಕ ಇಂಧನ

ಸ್ವಚ್ಛ ಇಂಧನಗಳನ್ನು ಬಳಸಬೇಕು ಎನ್ನುವುದೇನೋ ಸರಿ. ಆದರೆ ನಮ್ಮೂರ ಬಸ್ಸು ನೀರು, ಗಾಳಿ ಅಥವಾ ಸೂರ್ಯನ ಬೆಳಕಿನಿಂದ ಓಡುವುದಿಲ್ಲವಲ್ಲ! ವಿದ್ಯುತ್ತು, ಸೌರಶಕ್ತಿ ಮುಂತಾದವುಗಳಿಂದ ವಾಹನ ಓಡಿಸುವುದು ಸಾಧ್ಯವಾದರೂ ಈಗಿರುವ ಎಲ್ಲ ಪೆಟ್ರೋಲ್-ಡೀಸಲ್ ಗಾಡಿಗಳನ್ನು ಅವಕ್ಕೆ ತಕ್ಕಂತೆ ಬದಲಿಸುವುದು ಕಷ್ಟದ ಕೆಲಸ. ಅಷ್ಟೇ ಅಲ್ಲ, ಪ್ರಸ್ತುತ ಬಳಕೆಯಾಗುತ್ತಿರುವ ಡೀಸಲ್-ಪೆಟ್ರೋಲ್‌ಗಳಿಗೆ ಪರ್ಯಾಯವಾಗಬಲ್ಲ ಮಟ್ಟಕ್ಕೆ ಸ್ವಚ್ಛ ಇಂಧನಗಳ ಪೂರೈಕೆ ಬೆಳೆದೂ ಇಲ್ಲ.

ಇದಕ್ಕೆ ಪರಿಹಾರ ನೀಡುವ ಪ್ರಯತ್ನದಲ್ಲಿ ತಯಾರಾಗಿರುವುದು ಜೈವಿಕ ಇಂಧನಗಳ ಪರಿಕಲ್ಪನೆ. ಇಲ್ಲಿ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಎಣ್ಣೆಗಳನ್ನು ಪಳೆಯುಳಿಕೆ ಇಂಧನಗಳ ಬದಲಿಗೆ, ಅಥವಾ ಅವುಗಳೊಡನೆ ಮಿಶ್ರಮಾಡಿ ಬಳಸಲಾಗುತ್ತದೆ. ಇದಕ್ಕಾಗಿ ಇಂಜಿನ್‌ನಲ್ಲಿ ಯಾವುದೇ ರೀತಿಯ ಬದಲಾವಣೆಯ ಅಗತ್ಯವೂ ಇಲ್ಲ; ಜೊತೆಗೆ ಇದು ನವೀಕರಿಸಬಹುದಾದ ಇಂಧನಮೂಲವೂ ಹೌದು!

ಇಂತಹ ಜೈವಿಕ ಇಂಧನಗಳ ಸಾಲಿನಲ್ಲಿ ಅಗ್ರಗಣ್ಯವಾಗಿ ನಿಲ್ಲುವುದು ಎಥನಾಲ್ (ಈಥೈಲ್ ಆಲ್ಕೊಹಾಲ್). ಭಾರತವೂ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಎಥನಾಲ್ ಅನ್ನು ನಿರ್ದಿಷ್ಟ ಪ್ರಮಾಣದಲ್ಲಿ ಪೆಟ್ರೋಲಿನ ಜೊತೆಗೆ ಮಿಶ್ರಮಾಡಬೇಕೆಂಬ ನಿಯಮವೇ ಇದೆ. ಬ್ರೆಜಿಲ್ ದೇಶದಲ್ಲಂತೂ ಪೆಟ್ರೋಲಿನ ಜೊತೆಗೆ ಶೇ.೨೫ರಷ್ಟು ಎಥನಾಲ್ ಮಿಶ್ರಮಾಡಬೇಕಾದದ್ದು ಕಡ್ಡಾಯ.

ಇದೇ ರೀತಿ ಡೀಸಲ್‌ಗೂ ಕೂಡ ಜೈವಿಕ ಪರ್ಯಾಯ ಲಭ್ಯವಿದೆ, ಹಾಗೂ ಜನಪ್ರಿಯತೆ ಗಳಿಸಿಕೊಳ್ಳುತ್ತಿದೆ. ನಮ್ಮಲ್ಲಿ ಸಾಮಾನ್ಯವಾಗಿ ಬೆಳೆಯುವ ಹೊಂಗೆ, ಹಿಪ್ಪೆ, ಬೇವು, ಸುರಹೊನ್ನೆ ಮೊದಲಾದ ಮರಗಳ ಬೀಜದಿಂದ ತೆಗೆದ ಎಣ್ಣೆಯನ್ನು ಜೈವಿಕ ಡೀಸಲ್ ಉತ್ಪಾದನೆಯಲ್ಲಿ ಬಳಸಬಹುದು ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಗಮನಾರ್ಹ ಪ್ರಮಾಣದ ಪ್ರಯತ್ನವೊಂದು ನಮ್ಮ ರಾಜ್ಯದಲ್ಲಿ ನಡೆಯುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅನೇಕ ವಾಹನಗಳಲ್ಲಿ ಜೈವಿಕ ಡೀಸಲ್ ಬಳಕೆ ಈಗಾಗಲೇ ಆಗುತ್ತಿದೆ.

(ಫೆಬ್ರುವರಿ ೨೬, ೨೦೧೨ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನದ ಸಂಗ್ರಹರೂಪ)