ಕರ್ನಾಟಕ ಸಂಗೀತಕ್ಕೆ ಮೈಸೂರಿನ ಕೊಡುಗೆಯು ಅಪಾರವಾಗಿದೆ. ಸಾಂಸ್ಕೃತಿಕ ಚಟುವಟಿಕೆಗಳ ಬೀಡಾಗಿದ್ದ ಮೈಸೂರಿನಲ್ಲಿ ವೀಣೆ ಶೇಷಣ್ಣನವರ ಮನೆಯು ಕಲಾದೇಗುಲವಾಗಿತ್ತು. ಸಂಗೀತ ಸರಸ್ವತಿಯ ಸೇವೆಗಾಗಿ ತಮ್ಮ ಬದುಕನ್ನೇ ಧಾರೆ ಎರೆದ ಕಲಾತಪಸ್ವಿ ಅವರು. ಅವರ ಮೊಮ್ಮಗನೇ ಸ್ವರಮೂರ್ತಿ ವೆಂಕಟನಾರಾಯಣರಾವ್‌. ತಾತನಂತೆಯೇ ಕಲಾದೇವಿಯ ಆರಾಧನೆಯಲ್ಲೇ ಬದುಕನ್ನು  ಸಾರ್ಥಕಪಡಿಸಿಕೊಂಡ ಪುಣ್ಯಜೀವಿ.

ಇವರ ತಂದೆ ವೀಣೆರಾಮಣ್ಣ. ತಾಯಿ ವೆಂಕಟಲಕ್ಷ್ಮಮ್ಮ. ಮದುವೆಯಾಗಿ ನಾಲ್ಕೈದು ವರ್ಷಗಳಾದರೂ ರಾಮಣ್ಣನವರಿಗೆ ಸಂತಾನ ಆಗದಿದ್ದಾಗ ಶೇಷಣ್ಣನವರು ಚಡಪಡಿಸಿದರಂತೆ. ಅಂತೂ ದೇವಿ ಚಾಮುಂಡೇಶ್ವರಿಯ ಉಗ್ರ ಉಪಾಸನೆಯಿಂದ ಮನೆಯಲ್ಲಿ ಮೊಮ್ಮಗನ ಜನನವಾದಾಗ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಮಗುವನ್ನು ತಿರುಪತಿಯ ಶ್ರೀನಿವಾಸನ ಪದತಲದಲ್ಲಿ ಮಲಗಿಸಿ ಆಶೀರ್ವಾದ ಪಡೆದರು. ಅರ್ಚಕರ ಸೂಚನೆಯಂತೆ ವೆಂಕಟನಾರಾಯಣ ಎಂದು ನಾಮಕರಣ ಮಾಡಿದರು. ಮನೆಯ ಮುದ್ದಿನ ಹೆಸರು ಪುಟ್ಟಸ್ವಾಮಿ. ಒಂದೂವರೆಕ ವರ್ಷದ ಮಗು ಅಡುಗೆಮನೆಯಲ್ಲಿ ಬೀಸಣಿಗೆಯ ಕೋಲಿನಿಂದ ಪಾತ್ರೆಗಳ ಮೇಲೆ ಬಡಿದು, “ಇದು ಸಾ……… ಇದು ರೀ……….ಗಾ……….. ಎಂಧು ತನ್ನ ಸ್ವರಜ್ಞಾನ ಪ್ರಕಟಿಸಲು ಆರಂಭಿಸಿದಾಗ” ತಾತನವರ ಶಿಕ್ಷಣವು ಶುರುವಾಯಿತು. ಸ್ವರಗಳು ರಕ್ತಗತವಾಗಿಯೇ ಇದ್ದುದರಿಂದ ನೇರವಾಗಿ ಪ್ರೌಢಶಿಕ್ಷಣವೇ ಮೊದಲಾಯಿತು. ಅದಕ್ಕೆ ಹೊತ್ತುಗೊತ್ತಿನ ಕಟ್ಟುಪಾಡು ಇರಲಿಲ್ಲ. ಲಹರಿ ಬಂದಾಗ ಮೊಮ್ಮಗನಿಗೆ ತಮ್ಮ ಸಂಗೀತ ಭಂಡಾರದಿಂದ ಧಾರೆಯೆರೆದರು ಶೇಷಣ್ಣ. ಬೆರಳು ತೋರಿಸಿದರೆ ಹಸ್ತವನ್ನೇ ನುಂಗುವಂತಿದ್ದ ಬಾಲಕನ ಸಂಗೀತದ ಹಸಿವು ತಾತ ನೀಡಿದುದೆಲ್ಲವನ್ನೂ ಅರಗಿಸಿಕೊಂಡಿತು, ರಕ್ತಗತವಾಗಿಸಿಕೊಂಡಿತು.

ಶೇಷಣ್ಣನವರು ವೀಣಾಭಕ್ಷಿಗಳಾಗಿದ್ದುದರಿಂದ ಮೈಸೂರಿಗೆ ಬಂದ ಯಾವುದೇ ಕಲಾವಿದರು ಅರಮನೆಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುವ ಮೊದಲು ಇವರ ಎದುರಿಗೆ ತಮ್ಮ ನೈಪುಣ್ಯತೆಯನ್ನು ಸಾಬೀತು ಪಡಿಸಬೇಕಾಗಿತ್ತು. ಅಲ್ಲದೆ ನಾಡಿನ ಮೂಲೆ ಮೂಲೆಯಿಂದ ಬರುತ್ತಿದ್ದ ಸಂಗೀತಗಾರರು ಶೇಷಣ್ಣನವರ ಎದುರಿಗೆ ತಾವು ಕಚೇರಿ ಮಾಡುವುದೆಂದರೆ ಭಾಗ್ಯವೆಂದು ತಿಳಿದಿದ್ದರು. ಹೀಗಾಗಿ ಅವರ ಮನೆಯಲ್ಲಿ ನಿತ್ಯವೂ ಸಂಗೀತೋತ್ಸವ. ಎಳವೆಯಲ್ಲೇ ಹೀಗೆ ನಾಡಿನ ಹಿರಿಯ ಗಾಯಕ, ವಾದಕರಕ ಸಂಗೀತವನ್ನು ಕೇಳುತ್ತಿದ್ದ ಪುಟ್ಟಸ್ವಾಮಿಯ ತೀಕ್ಷ್ಣಮತಿಯು ಚೆನ್ನಗಿ ಗ್ರಹಿಸಿದುದಲ್ಲದೆ ಹಿಂದುಸ್ತಾನಿ, ಕರ್ನಾಟಕ ಶೈಲಿಗಳೆರಡನ್ನೂ ಅರ್ಥಮಾಡಿಕೊಳ್ಳಲು ಸಹಕಾರಿಯಾಯಿತು. ಮನೆಯಲ್ಲಿ ಗೋಚರ, ಅಗೋಚರವಾಗಿ ಸಂಗೀತವೇ ಇದ್ದುದರಿಂದ ತೀರಾ ಸಣ್ಣವಯಸ್ಸಿನಲ್ಲೇ ಪುಟ್ಟಸ್ವಾಮಿಯು ಕಚೇರಿ ನೀಡುವ ಮಟ್ಟಕ್ಕೆ ಬಂದುದರಲ್ಲಿ ಯಾವ ಆಶ್ಚರ್ಯವೂ ಇರಲಿಲ್ಲ.

ಶೇಷಣ್ಣನವರು ತಮ್ಮ ಕಚೇರಿಗಳಲ್ಲಿ ಮೊಮ್ಮಗನಿಂದಲೂ ಹಾಡಿಸಲು ಆರಂಭಿಸಿದರು. ಅಷ್ಟು ಸಣ್ಣವಯಸ್ಸಿನ ಬಾಲಕ ತಾತನೊಡನೆ ತ್ರಿಕಾಲದಲ್ಲಿ ಪಲ್ಲವಿ ಹಾಡಿ, ನಿರರ್ಗಳವಾಗಿ ಕಲ್ಪನಾ ಸ್ವರಗಳನ್ನು ಹಾಕುತ್ತಿದ್ದುದನ್ನು ಶ್ರೋತೃಗಳು ಮೂಕವಿಸ್ಮಿತರಾಗಿ ಕೇಳುತ್ತಿದ್ದರು. ಗದ್ವಲ್‌ ಮಹಾರಾಜರ ಆಸ್ಥಾನದಲ್ಲಿ ಶೇಷಣ್ಣನವರ ವಿನಿಕೆ. ವಿಸ್ತಾರವಗಿ ಕಲ್ಯಾಣಿ ರಾಗವನ್ನು ನುಡಿಸಿ ಪಲ್ಲವಿ -‘ತಾರಕಬ್ರಹ್ಮಸ್ವರೂಪಿಣಿ’ಯನ್ನು ಆರಂಭಿಸಿ, ಮೊಮ್ಮಗನಿಗೂ ಜೊತೆಗೂಡಲು ಸೂಚಿಸಿದರು. ಸಿದ್ಧನಾಗಿಯೇ ಇದ್ದ ಪುಟ್ಟಸ್ವಾಮಿ ಹಾಡಲು ಉಪಕ್ರಮಿಸಿದ ತಾತನಿಗೆ ಏನೇನೂ ಕಡಿಮೆ ಇಲ್ಲವೆನ್ನುವಂತೆ ಕಲ್ಪನಾಸ್ವರಗಳನ್ನು ಓತಪ್ರೋತವಗಿ ಹರಿಯಿಸಿದಾಗ ಮಹಾರಾಜರನ್ನೂ ಒಳಗೊಂಡು ಸಭಿಕರೆಲ್ಲರಿಂದಲೂ ದೀರ್ಘ ಕಕರತಾಡನ. ಪ್ರಭುಗಳು ಬಾಲಕನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ತಮ್ಮ ಕತ್ತಿನಲ್ಲಿದ್ದ ಕಂಠೀಹಾರವನ್ನು ಅವನ ಕೊರಳಿಗೆ ಹಾಕಿದರು. ಮರುದಿನದ ವಿಶೇಷ ದರ್ಬಾರಿನಲ್ಲಿ ಅವನಿಗೆ ‘ಸ್ವರಮೂರ್ತಿ’ ಎಂಬ ಬಿರುದನ್ನು ಖಿಲ್ಲತ್ತುಗಳೊಡನೆ ನೀಡಿದರು. ಐದು ವರ್ಷದ ಬಾಲಕನಿಗೆ ನೆರೆ ಆಸ್ಥಾನದಿಂದ ಸಮದ ಈ ಗೌರವವನ್ನು ಪತ್ರಿಕೆಯ ಮೂಲಕ ಅರಿತ ಶ್ರೀಮನ್ನಾಲ್ವಡಿ ಕೃಷ್ಣರಾಜ ಒಡೆಯರು ಅವನ ವಿಶೇಷ ಕಚೇರಿಯನ್ನು ತಮ್ಮ ಆಸ್ಥಾನದಲ್ಲಿ ಏರ್ಪಡಿಸಿದರು. ತಾತನವರೇ ಪಿಟೀಲು ನುಡಿಸಲು ಕುಳಿತರು. ಖಂಡೇದಾಸಪ್ಪನ ತಬಲಾ. ಕಚೇರಿಯನ್ನು ಗಮನವಿಟ್ಟು ಕೇಳಿದ ಪ್ರಭುಗಳು ಬಾಲಕನಿಗೆ ಸಿಕ್ಕ ಬಿರುದನ್ನು ಪೂರ್ಣ ಮನಸ್ಸಿನಿಂದ ತಾವೂ ಅನುಮೋದಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು. ಅಂದಿನಿಂದ ಬಾಲಕ ವೆಂಕಟನಾರಾಯಣನು ‘ಸ್ವರಮೂರ್ತಿ’ಯೇ ಆದ.

೧೯೨೪ರ ಬೆಳಗಾಂ ಕಾಂಗ್ರೆಸ್‌ ಅಧಿವೇಶನಕ್ಕೆ ಶೇಷಣ್ಣನವರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ತಾತನೊಡನೆ ಮೊಮ್ಮಗನೂ ಹೊರಟ. ಗಾಂಧೀಜಿ, ಕಸ್ತೂರಿ ಬಾ, ಸರೋಜಿನಿ ನಾಯುಡು, ನೆಹರೂ ಮುಂತಾದ ರಾಷ್ಟ್ರ ನಾಯಕರೆಲ್ಲರೂ ಶೇಷಣ್ಣನವರ ವೀಣಾವಾದನವನ್ನೂ ಬಾಲಕನ ಹಾಡುಗಾರಿಕೆಯನ್ನೂ ಮೆಚ್ಚಿ ಕೊಂಡಾಡಿದರು. ಕಸ್ತೂರಿ ಬಾ ಅವರಂತೂ ಅಲ್ಲಿ ಇದ್ದಷ್ಟು ದಿನ ಬಾಲಕನಿಗೆ ತಾವೇ ಜಡೆಹಾಕಿ ತೊಡೆಯ ಮೇಲೆ ಕೂರಿಸಿಕೊಂಡು, ಅವನಿಂದ ಹಾಡಿಸಿ ಸಂತೋಷ ಪಟ್ಟರಂತೆ.

ಸ್ವರಮೂರ್ತಿಯ ಸಂಗೀತಾಭ್ಯಾಸದ ಜೊತೆಗೆ ದಳವಾಯಿ ಶಾಲೆಯಲ್ಲಿ ವಿದ್ಯಾಭ್ಯಾಸವೂ ನಡೆಯುತ್ತಿತ್ತು. ಮನೆಗೆ ಬರುತ್ತಿದ್ದ ಪರಸ್ಥಳದ ಪಕ್ಕವಾದ್ಯ ವಿದ್ವಾಂಸರೊಂದಿಗೆ ಮೊಮ್ಮಗನನ್ನು ಹಾಡಿಸುತ್ತಿದ್ದರು. ಶೇಷಣ್ಣ. ಪಾಲ್ಘಾಟ್‌ ಮಣಿಅಯ್ಯರ್, ರಾಜ ಮಾಣಿಕ್ಯಪಿಳ್ಳೆ ಮುಂತಾದ ಅನೇಕ ಘನ ವಿದ್ವಾಂಸರ ಪಕ್ಕವದ್ಯದ ಜೊತೆಗೆ ನಿರ್ಭೀತಿಯಿಂದ ಹಾಡುತ್ತಿದ್ದ ಬಾಲಕ. (ತಾವು ಕೇಳಿದ ಇಂತಹ ಕೆಲವನ್ನು ತಮ್ಮ ದಿನಚರಿಯಲ್ಲಿ ಕಲಾವಿದ ವೆಂಕಟಪ್ಪನವರು ಟಿಪ್ಪಣಿಸಿದ್ದಾರೆ)

ಹೀಗೆ ಹತ್ತು ವರ್ಷಗಳ ಕಾಲ ಶೇಷಣ್ಣನವರು ಮೊಮ್ಮಗನಲ್ಲಿ ಹುದುಗಿದ್ದ ಪ್ರತಿಭೆಗೆ ಸರಿಯಾದ ಮಾರ್ಗದರ್ಶನ ನೀಡಿ ಗಟ್ಟಿಯಾದ ತಳಪಾಯವನ್ನು ಹಾಕಿದರು. ೧೯೨೬ರಲ್ಲಿ ಅವರು ನಿಧನರಾದಾಗ ಈ ಬಾಲಕನ ಸಂಗೀತಾಭ್ಯಾಸದ ಜವಾಬ್ದಾರಿಯನ್ನು ಶ್ರೀಮನ್ನಲ್ವಡಿ ಕೃಷ್ಣರಾಜ ಒಡೆಯರರು ಹೊತ್ತರು. ಸ್ವರಮೂರ್ತಿಯನ್ನು ಕರೆಯಿಸಿಕೊಂಡು ಗೃಹಕೃತ್ಯದ ಬಗ್ಗೆ ಕೂಲಂಕುಷವಾಗಿ ತಿಳಿದುಕೊಂಡು ಅವನ ಸಂಗೀತ ಭವಿಷ್ಯಕ್ಕೆ ಭದ್ರವಾದ ಬುನಾದಿ ಹಾಕಲು ಏರ್ಪಾಡು ಮಾಡಿದರು. ವೀಣೆ ಸುಬ್ಬಣ್ಣನವರಲ್ಲಿ ಹಾಗೂ ಮುತ್ತಯ್ಯ ಭಾಗವತರಲ್ಲಿ ಪಾಠ ಮುಂದುವರೆಯಿತು. ಅಲ್ಲದೆ ಪಾಶ್ಚಾತ್ಯ ಸಂಗೀತ ಶಿಕ್ಷಣ ಪಡೆಯಲೂ ನಾಲ್ವಡಿಯವರು ಪ್ರೋತ್ಸಾಹಿಸಿದರು. ಇದರ ಫಲವಾಗಿ ವೀಣೆ, ಹಾಡುಗಾರಿಕೆಯ ಜೊತೆಗೆ ಪಾಶ್ಚಾತ್ಯ ಸಂಗೀತವೂ ಮುಪ್ಪುರಿಗೊಂಡು ಸ್ವರಮೂರ್ತಿಗಳ ಸರ್ವತೋಮುಖ ವಿಕಾಸಕ್ಕೆ ಕಾರಣವಾಯಿತು. ಮಹಾರಾಜರು ಇವರ ವಿಷಯದಲ್ಲಿ ಎಷ್ಟು ಆಸಕ್ತಿ ವಹಿಸಿದ್ದರೆಂದರೆ ಖುದ್ದಾಗಿ ಇವರನ್ನು ಆಗಾಗ್ಗೆ ಖಾಸ್‌ಬಂಗ್ಲೆಗೆ ಕರೆಯಿಸಿಕೊಂಡು ಕಲಿತಿರುವ ವಿಷಯಗಳನ್ನು ಸ್ವಯಂ ಪರೀಕ್ಷಿಸುತ್ತಿದ್ದರು. ತಾವು ಸರ್ಕೀಟ್‌ ಹೋದಾಗಲೂ ಇವರನ್ನು ಜೊತೆಗೆ ಕರೆದೊಯ್ದು ಸಂಗೀತ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸುತ್ತಿದ್ದರು. ಸ್ವರಮೂರ್ತಿಗಳ ಪ್ರತಿಭೆಯನ್ನು ಗುರುತಿಸಿದ ಒಡೆಯರು ಅರಮನೆಗೆ ಸಂಬಂಧಿಸಿದ ಅನೇಕ ಸಂಗೀತ ಕಾರ್ಯಗಳಿಗೆ ಇವರನ್ನು ನಿಯುಕ್ತಗೊಳಿಸುತ್ತಿದ್ದರು. ಅವುಗಳು ಸಫಲವಾದಾಗ ಸಂದ ಬಹುಮಾನಗಳೆಷ್ಟೋ? ಹೀಗೆ ಒಂದರ್ಥದಲ್ಲಿ ಸ್ವರಮೂರ್ತಿಗಳು ನಾಲ್ವಡಿಯವರ ಪ್ರೀತಿಪಾತ್ರರಷ್ಟೇ ಅಲ್ಲದೆ ಮುಖವಾಣಿಯೂ ಆದರು.

ಅರಮನೆಯ ಸಂಗೀತಶಾಲೆ (ಚಂದ್ರಶಾಲೆ ತೊಟ್ಟಿ) ಮತ್ತು ಅರಮನೆಯ ಹಿರಿಯ ವಿದ್ವಾಂಸರ ಮಾರ್ಗದರ್ಶನವೂ ಈ ಯುವಪ್ರತಿಭಾವಂತನಿಗೆ ಸಿಗುತ್ತಿತ್ತು. ಬಹುಶಃ ಅತ್ಯಂತ ಕಿರಿವಯಸ್ಸಿನಲ್ಲೇ ಆಸ್ಥಾನ ವಿದ್ವಾಂಸರಾಗಿದ್ದ ಇವರ ಕಚೇರಿಯು ಪ್ರಭುಗಳ ಶಿವಪೂಜೆಯ ವೇಳೆಯಲ್ಲಿ ವಾರದಲ್ಲಿ ೨-೩ ಬಾರಿಯಾದರೂ ಆಗುತ್ತಿತ್ತು. ಅಲ್ಲದೆ ಸಾಮಾನ್ಯವಾಗಿ ಒಂದು ಬಾರಿಯಷ್ಟೇ ಸಿಗುತ್ತಿದ್ದ ನವರಾತ್ರಿ ತೊಟ್ಟಿಲು ಸೇವೆಯೂ ಸಹ ಒಂದೇ ವರ್ಷದಲ್ಲಿ ಎರಡು ಸಿಕ್ಕಿದುದೂ ಉಂಟು. ಅದರೊಂದಿಗೆ ದೇವಿಯ ತೆಪ್ಪೋತ್ಸವ, ಅರಮನೆಯಲ್ಲಿ ನಡೆಯುತ್ತಿದ್ದ ಗಣೇಶನ ಕಟ್ಟಳೆ, ದೊಡ್ಡ ಮಹಾರಾಣಿಯವರ (ಚಾಮುಂಡಿ ವಿಹಾರದಲ್ಲಿ ನಡೆಯುತ್ತಿದ್ದ) ಗಣೇಶನ ಚರಪು, ಅರಮನೆಯ ವಾದ್ಯಗೋಷ್ಠಿ, ಅರಮನೆಗೆ ಭೇಟಿ ನೀಡುತ್ತಿದ್ದ ದೇಶಿ-ವಿದೇಶಿ ಗಣ್ಯರ ಎದುರಿಗೆ ಸ್ವರಮೂರ್ತಿಗಳ ಗಾಯನ-ವಾದನಗಳು ಅಗಣಿತವಾಗಿ ನಡೆದವು.

ತಮ್ಮ ಹತ್ತೊಂಬನೆಯ ವಯಸ್ಸಿನಲ್ಲಿ ಮದ್ದೂರಿನ ಸಾಹುಕಾರ್ ರಂಗಣ್ಣನವರ ಕಿರಿಯ ಪುತ್ರಿ ರತ್ನಮ್ಮನೊಡನೆ ವಿವಾಹವಾಯಿತು. ಪತಿಯ ಎಲ್ಲ ಸಂಗೀತ ಕಾರ್ಯಗಳಿಗೆ ಸಹಕಾರ ನೀಡುತ್ತಾ ಅವರಿಗೆ ಬೆಂಬಲವಾಗಿ ನಿಂತರು. ಈಕೆ. ತತ್ಪರಿಣಾಮವಾಗಿಯೋ ಎಂಬಂತೆ ಲಂಡನ್ನಿನ ‘ಟ್ರಿನಿಟಿ ಕಾಲೇಜ್‌ ಆಫ್‌ ಮ್ಯೀಸಿಕ್‌’ನ ಡಿಪ್ಲೊಮಾ ಪದವೀಧರರಾದರು ರಾಯರು. ನಾಲ್ವಡಿಯವರು ಒಮ್ಮೆ ಆಸ್ಥಾನಕ್ಕೆ ಎಲ್ಲ ಸಂಗೀತಗಾರರನ್ನೂ ಕರೆಯಿಸಿ ಅದೇ ತಾನೆ ಈಜಿಪ್ಟ್‌ ನಿಂದ ಬಂದ ಹೊಸವಾದ್ಯವಾದ ‘ಹಾರ್ಪ್‌’ ಅನ್ನು ತೋರಿಸಿ, ಈ ವಾದ್ಯವನ್ನು ಕಲಿಯಲು ಯಾರು ಮುಂದೆ ಬರುವಿರಿ ಎಂದಾಗ ಸಭೆಯಲ್ಲಿ ಮೌನ. ತಕ್ಷಣ ಇದನ್ನು ಒಂದು ಸವಾಲಾಗಿ ಸ್ವೀಕರಿಸಿದ ಸ್ವರಮೂರ್ತಿಗಳು ತಾವು ಪ್ರಯತ್ನಿಸುವುದಾಗಿ ಹೇಳಿದಾಗ ಪ್ರಭುಗಳು ಸಂತೋಷಿಸಿ ಕಲಿಯಲು ಎರಡು ತಿಂಗಳ ಅವಧಿಯನ್ನು ನೀಡಿದರು. ಅವರು ಮನೆಗೆ ಹಾರ್ಪ್‌‌ವಾದ್ಯವನ್ನೂ ಕಳುಹಿಸಿಕೊಟ್ಟರು. ಎರಡೇ ದಿನಗಳಲ್ಲಿ ಸ್ವರಮೂರ್ತಿಗಳು ಚಾಮುಂಡೇಶ್ವರಿಯ ಮೇಲೆ ಒಂದು ಕೀರ್ತನೆಯನ್ನು ಅದರಲ್ಲಿ ಕಲಿತು ದೊರೆಗಳೆದುರಿಗೆ ನುಡಿಸಿದಾಗ, ಮೆಚ್ಚಿ ಇವರ ಪ್ರತಿಭೆಗೆ ತಕ್ಕ ಸನ್ಮಾನವನ್ನು ಮಾಡಿದರು.

ಇದೇ ಸಮಯದಲ್ಲಿ ಯುವರಾಜರು ಮದ್ರಾಸಿನ ಸಂಗೀತ ಅಕಾಡಮಿಯ ಸಮ್ಮೇಳನವನ್ನು ಉದ್ಘಾಟಿಸಿದರು. ಆಗ ಅರಮನೆಯ ಸಂಗೀತಗಾರರ ಒಂದು ತಂಡವು ಸಕ್ರಿಯವಾಗಿ ಅದರಲ್ಲಿ ಭಾಗವಹಿಸಲು ನಾಲ್ವಡಿಯವರು ಪ್ರೋತ್ಸಾಹಿಸಿದರು. ಪಾಶ್ಚಾತ್ ಯ ವಾದ್ಯಗಳಲ್ಲಿ ಭಾರತೀಯ ಸಂಗೀತದ ಸಾಧ್ಯತೆ ಹಾಗೂ ಭಾರತೀಯ ವಾದ್ಯಗಳಲ್ಲಿ ಪಾಶ್ಚಾತ್ಯ ಸಂಗೀತದ ಸಾಧ್ಯತೆಗಳನ್ನು  ಕುರಿತು ಸ್ವರಮೂರ್ತಿಗಳು ಪ್ರಾತ್ಯಕ್ಷಿಕೆ ನೀಡಿದರು. ಈ ಎರಡೂ ಸಂಗೀತ ಶೈಲಿಗಳಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದ ಇವರು, ಈ ವಿಷಯವನ್ನು ಮಂಡಿಸಲು ಸೂಕ್ತ ವ್ಯಕ್ತಿ ಎಂದು ಮಹಾರಾಜರು ಮಾಡಿದ್ದ ಆಯ್ಕೆ ಹುಸಿಯಾಗಲಿಲ್ಲ. ಅವರ ಪ್ರಾತ್ಯಕ್ಷಿಕೆಯು ವಿದ್ವಾಂಸರ ಹೆಚ್ಚಿನ ಮನ್ನಣೆಗೆ ಪಾತ್ರವಾಯಿತು.

ವೈಣಿಕರಾಗಿ, ಗಾಯಕರಾಗಿ, ಬೋಧಕರಾಗಿ ಸ್ವರಮೂರ್ತಿಗಳು ಮೈಸೂರಿನ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗವಾದರು. ವಿಠ್ಠಲರಾಯರ ರಾಮಮಂದಿರ, ಸಂತೇಪೇಟೆಯ ಕುಂಚಿಟಿಗರ ರಾಮಮಂದಿರ, ಬಿಡಾರಂ ಕೃಷ್ಣಪ್ಪನವರ ರಾಮಮಂದಿರ, ವೀವರ್ಸ್‌ಲೇನಿನ ಜಾರೋಗುಪ್ಪೆ ರಾಮಮಂದಿರ, ಶಿವರಾಮ ಪೇಟೆಯ ಮೂಲೆ ರಾಮಮಂದಿರ, ಭಾರತಿ ಸ್ತ್ರೀ ಸಮಾಜ, ವನಿತಾ ಸದನ, ಸಹಕರಿ ಭವನ, ಯುವರಾಜ ಕಾಲೇಜ್‌, ಬನುಮಯ್ಯ ಕಾಲೇಜ್‌, ಹೀಗೆ ಹತ್ತು ಹಲವು ಕಡೆ ವರ್ಷದುದ್ದಕ್ಕೂ ಅವರ ಕಚೇರಿಗಳು ನಡೆಯುತ್ತಿತ್ತು. ನೆರೆರಾಜ್ಯಗಳಿಂದಲೂ ಅವರಿಗೆ ಆಹ್ವಾನಗಳು ಬರುತ್ತಿದ್ದವು. ಬೆಜವಾಡ, ಗುಂಟೂರು, ವಾಲ್ಟೇರ್, ಕಮರ್ ಮೇಟ್‌, ವಿಶಾಖಪಟ್ಟಣ, ಕಾನ್ಪುರ ಧರ್ಮಪುರಿ, ಸೇಲಂ, ಮುಂಬಯಿ, ಭೂಪಾಲ್‌, ರತ್ಲಾಂ, ಇಂದೂರ್ ಅಲ್ಲದೆ ಕರ್ನಾಟಕದ ಹಲವಾರು ಸ್ಥಳಗಳಲ್ಲಿ ಇವರ ಕಚೇರಿ ಪ್ರತಿವರ್ಷವೂ ನಡೆಯುತ್ತಿತ್ತು.

ತಮ್ಮ ತಾತನವರ ಸ್ಮರಣಾರ್ಥವಾಗಿ ಅವರ ದಿನಾಚರಣೆಯನ್ನು ಮಾಡುತ್ತಿದ್ದರು ರಾಯರು. ಇದರ ಅಂಗವಾಗಿ ವೀಣೆ ಹಾಗೂ ಹಾಡುಗಾರಿಕೆಯಲ್ಲಿ ಸ್ಪರ್ಧೆಗಳನ್ನು ನಡೆಸಿ, ಬಹುಮಾನವಾಗಿ ತಂಬೂರಿ, ವೀಣೆಗಳನ್ನೇ ನೀಡುತ್ತಿದ್ದುದು ವಿಶೇಷವಾಗಿತ್ತು. ರಾಮೋತ್ಸವವನ್ನೂ ನಡೆಸಿ, ಸಂಗೀತ ಕಚೇರಿಗಳನ್ನು  ಏರ್ಪಡಿಸುತ್ತಿದ್ದರು. ಕೊನೆಯ ದಿನವಾದ ರಾಮಪಟ್ಟಾಭಿಷೇಕದಂದು ವಿಶೇಷ ಕಾರ್ಯಕ್ರಮಗಳು ಇರುತ್ತಿದ್ದವು.

ಹೀಗೆ ಮೈಸೂರಿನೊಡನೆ ಹಾಸುಹೊಕ್ಕಾಗಿದ್ದ ರಾಯರ ಬದುಕಿನಲ್ಲಿ ಒಂದು ಹೊಸ ತಿರುವು ಉಂಟಾಯಿತು. ೧೯೬೫ರವರೆಗೂ ಶ್ರೀ ಜಯಚಾಮರಾಜೇಂದ್ರ ಒಡೆಯರ ಆಸ್ಥಾನ ವಿದ್ವಾಂಸರಾಗಿ ಮುಂದು ವರೆದ ಅವರು ಮುಂದೆ ತಮ್ಮ ವಾಸಸ್ಥಳವನ್ನು ಬೆಂಗಳೂರಿಗೆ ಬದಲಾಯಿಸಿದರು. ಅರಮನೆಯ ಸೇವೆಯಿಂದ ನಿವೃತ್ತರಾದರೂ ಅದರೊಡನೆ ಅವರಿಗೆ ಇದ್ದ ಅವಿನಾಭಾವ ಅವರ ಕೊನೆಯ ಉಸಿರಿನ ತನಕವೂ ಇತ್ತು. ಮೈಸೂರು ಹಾಗೂ ಅರಮನೆಯೊಡನೆ ಇದ್ದ ಗಾಢ ಸಂಬಂಧದ ಅನುಭೂತಿಯು ಅವರ ಮಾತುಕತೆಯಲ್ಲಿ ಎದ್ದು ಕಾಣುತ್ತಿತ್ತು. ಕನ್ನಡದ ಕಟ್ಟಾ ಅಭಿಮಾನಿಗಳೂ ಆಗಿದ್ದರು. ಕನ್ನಡದ ಪ್ರಾಚೀನತೆ ಹಾಗೂ ತಮ್ಮ ವಂಶದ ಹಿರಿಯರ ಬಗೆಗೆ ಮಾತನಾಡಲು ಅವರಿಗೆ ಸದಾ ಬತ್ತದ ಉತ್ಸಾಹ.

ಬೆಂಗಳೂರಿಗೆ ಬಂದ ಮೇಲೆ ಲಕ್ಷ್ಮೀವೆಂಕಟೇಶ ವೀಣಾ ಗಾನ ಮಂದಿರ ಎಂಬ ಸಂಗೀತ ಶಾಲೆಯನ್ನು ಸ್ಥಾಪಿಸಿದರು. ಮೈಸೂರು ಪ್ರದೇಶ ಸಂಗೀತ ನಾಟಕ ಅಕಾಡೆಮಿಯ ಮತ್ತು ಸರ್ಕಾರದ ಮಾನ್ಯತೆಯನ್ನು ಪಡೆದಿದ್ದ ಈ ಶಾಲೆಯಲ್ಲಿ ನೂರಾರು ಜನ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಿದರು. ಸರ್ಕಾರವು ನಡೆಸುತ್ತಿದ್ದ ಸಂಗೀತ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಅನೇಕ ವರ್ಷಗಳ ಕಾಲ ಹೋಗುತ್ತಿದ್ದರು.

ಸಂಗೀತಗಾರರೆಲ್ಲರನ್ನು ಒಂದುಗೂಡಿಸುವ ಅಪೇಕ್ಷೆಯಿಂದ ರೂಪು ತಳೆದ ಕರ್ನಾಟಕ ಗಾನಕಲಾ ಪರಿಷತ್ತಿನ ಸ್ಥಾಪಕ ಸದಸ್ಯರಾಗಿದ್ದ ರಾಯರು ಅದರ ತಜ್ಞರ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ೧೯೭೮ರ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ಗಾನ ಕಲಾ ಭೂಷಣರೆನಿಸಿದರು. ಸಂಗೀತಕ್ಕೆ ಸಂಬಂಧಿಸಿದ ಅಪರೂಪದ ಸಂಗತಿಗಳ ಮೇಲೆ ಬೆಳಕು ಚೆಲ್ಲುವಂತಹ ಪ್ರಾತ್ಯಕ್ಷಿಕೆಗಳನ್ನು ಬೆಂಗಳೂರು ಗಾಯನ ಸಮಾಜ ಹಾಗೂ ಪರಿಷತ್ತಿನಲ್ಲಿ ನಡೆಸಿಕೊಟ್ಟರು. ಸುರಪುರದ ಆನಂದ ದಾಸರ ಜಾವಳಿಗಳು, ಭಕ್ಷಿ ವೆಂಕಟಸುಬ್ಬಯ್ಯನವರ ಸಪ್ತತಾಳೇಶ್ವರಿ ಗೀತೆ, ಮೈಸೂರಿನ ತಾನ ಪರಂಪರೆ, ಹೀಗೆ ಅನೇಕ ಉಪಯುಕ್ತ ವಿಷಯಗಳ ಬಗ್ಗೆ ರಾಯರು ಸೋದಾಹರಣ ಭಾಷಣ ಮಾಡಿದ್ದರು.

ಪ್ರಶಸ್ತಿ, ಬಿರುದುಗಳ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದ ಅವರನ್ನು ಅರಸಿ ಸನ್ಮಾನ ಪುರಸ್ಕಾರಗಳು ಬಂದವು. ಸೋಸಲೆಯ ವ್ಯಾಸರಾಜಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥರು ಇವರಿಗೆ ‘ಮಧುರ ಗಾನ ಪ್ರವೀಣ’ ಎಂಬ ಬಿರುದನ್ನು ನೀಡಿ ಆಶೀರ್ವದಿಸಿದರು. ಲಾಲ್‌ಬಾಗಿನ ಗ್ಲಾಸ್‌ಹೌಸಿನಲ್ಲಿ ನಡೆದ ಕಿಕ್ಕಿರಿದ ಸಮಾರಂಭದಲ್ಲಿ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಪುರಜನತೆಯು ಅ.ನ. ಕೃಷ್ಣರಾಯರ ಅಧ್ಯಕ್ಷತೆಯಲ್ಲಿ ಕೆ.ಗೋಪಾಲಕೃಷ್ಣರಾವ್‌ ಮತ್ತು ತಿ.ತಾ.ಶರ್ಮರ ಸಮಕ್ಷಮದಲ್ಲಿ ಲಾ ಕಾಲೇಜಿನಲ್ಲಿ ಇವರನ್ನು ಸನ್ಮಾನಿಸಿತು.

ಪಾಶ್ಚಿಮಾತ್ಯ ಸಂಗೀತದಲ್ಲೂ ಪಳಗಿದ್ದ ರಾಯರು ಅನೇಕ ಪಾಶ್ಚಿಮಾತ್ಯ ರಚನೆಗಳನ್ನು ಕರ್ನಾಟಕ ಸ್ವರಲಿಪಿಯಲ್ಲಿ ಬರೆದು ಅದನ್ನು ಶಿಷ್ಯರಿಂದ ಪಂಚವೀಣೆಯಲ್ಲಿ ನುಡಿಸಿಸುತ್ತಿದ್ದರು. ಸಾಮಾನ್ಯವಾಗಿ ಪಾಶ್ಚಿಮಾತ್ಯ ಸಂಗೀತವು ಐದು ಬೇರೆ ಬೇರೆ ಭಾಗಗ ಳನ್ನು (ಪಾರ್ವಸ್‌) ಒಳಗೊಂಡಿರುತ್ತದೆ. ಇವೆಲ್ಲವೂ ಒಟ್ಟಿಗೇ ಸೇರಿ ನುಡಿಸಬೇಕು. ಅದೆನ್ನೇ ಹಾರ್ಮೊನಿ ಎನ್ನುವುದು. ಇವುಗಳನ್ನು ವೀಣೆಯಲ್ಲಿ ಕೇಳುವುದು ಒಂದು ವಿಶಿಷ್ಟ ಅನುಭವ ಆಗಿರುತ್ತಿತ್ತು. ಇದನ್ನು ತಯಾರು ಮಾಡಲು ಅಗಾಧ ತಾಳ್ಮೆ ಮತ್ತು ತಿಳುವಳಿಕೆಗಳು ಬೇಕೇಬೇಕು. ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಪಥಸಂಚಲನಕ್ಕೆ ಹೊಂದುವಂತಹ ಮಟ್ಟುಗಳನ್ನೂ ಅವರು ರಚಿಸಿಕೊಟ್ಟಿದ್ದಾರೆ.

ಇದಲ್ಲದೆ ಅನೇಕ ಜಾವಳಿ, ದೇವರನಾಮ ಹಾಗೂ ವಚನಗಳಿಗೆ ವರ್ಣಮಟ್ಟುಗಳನ್ನು ಹಾಕಿದ್ದಾರೆ. ಇವು ‘ಗಾಯನಗಂಗಾ’ ಪತ್ರಿಕೆಯಲ್ಲಿ ನಿಯತವಾಗಿ ಪ್ರಕಟಗೊಂಡಿದೆ.

ತಮ್ಮ ಬಳಿ ಇದ್ದ ಅಪರೂಪದ ಪುಸ್ತಕಗಳನ್ನೋ ಪ್ರಾಚೀನ ಗ್ರಂಥಗಳನ್ನೋ ಬಿಡುವಿನ ವೇಳೆಯಲ್ಲಿ ಓದುತ್ತಿದ್ದ ರಾಯರ ಸಾಹಿತ್ಯ ಜ್ಞಾನವೂ ಕಡಿಮೆ ಇರಲಿಲ್ಲ. ಅನೇಕ ಪತ್ರಿಕೆಗಳು ಅವರ ಲೇಖನಗಳನ್ನು ಪ್ರಕಟಿಸಿವೆ. ಕರ್ಮವೀರ, ಪ್ರಜಾಮತ, ಸುಧಾ, ಪ್ರಜಾವಾಣಿ, ತಾಯಿನಾಡುಗಳಲ್ಲಿ ಸಂಗೀತಕ್ಕೆ ಸಂಬಂಧಿಸಿದ ಲೇಖನಗಳನ್ನು ಸ್ವರಮೂರ್ತಿಗಳು ಬರೆದಿದ್ದಾರೆ. ‘ಹೊಸಬೆಳಕು’ ಗ್ರಂಥದಲ್ಲಿ ಮೈಸೂರಿನ ತಾನ ಪರಂಪರೆಯನ್ನು ಕುರಿತ ಮೌಲಿಕ ಲೇಖನವೊಂದು ಇದೆ.

ಇವರು ರಚಿಸಿರುವ ಕೆಲವೇ ರಚನೆಗಳಲ್ಲಿ ಬಹಳ ಅಮೂಲ್ಯವೂ ಅಪರೂಪವೂ ಆದ ಸಪ್ತತಾಳೇಶ್ವರಿ ವರ್ಣವೂ ಸೇರಿದೆ. ೧೩ ರಾಗಗಳನ್ನು ಒಳಗೊಂಡಿರುವ ಈ ವರ್ಣವನ್ನು ಏಕಕಾಲದಲ್ಲಿ ಏಳು ತಾಳಗಳಲ್ಲಿ ಹಾಡಬಹುದು. ಇವರ ಕೃತಿಗಳ ವಿಶೇಷತೆ ಎಂದರೆ-ಪಾಶ್ಚಿಮಾತ್ಯ ಸ್ವರಮಟ್ಟುಗಳೂ ಸಹಜವಾಗಿ ಹೊಂದಿಕೊಂಡು ಬಂದಿರುವುದು. ಕೇಳಲು ಸೊಗಸು ಎನ್ನಿಸುವ ಈ ಪ್ರಯೋಗಗಳು ವಾದಕರಿಗೆ ಸವಾಲು ಹೌದು.

ಹೀಗೆ ಬದುಕಿನಲ್ಲಿ ಸಂಗೀತವನ್ನುಳಿದು ಬೇರೇನೂ ಇಲ್ಲ ಎನ್ನುವಂತೆ ಇದ್ದ ರಾಯರು ಸಾವಿನಲ್ಲೂ ಸ್ವರಮೂರ್ತಿಯಾದದ್ದು ವಿಧಿಯ

ವಿಲಾಸ. ದಿನಾಂಕ ೭.೮.೮೦ರಂದು ಸ್ವರಮೂರ್ತಿಯವರು ವಿಧಿವಶರಾದರು.