ಇಲ್ಲ ಖಂಡಿತ ಇಲ್ಲ
ಆ ಸ್ವರ್ಗ ಲೋಕದ ಬಯಕೆ
ನಿಜ ಹೇಳಬೇಕೆಂದರೆ
ಕಿಚ್ಚು ಹಚ್ಚಲೇ ಬೇಕು
ಆ ಸ್ವರ್ಗಕ್ಕೆ.

ಅಲ್ಲಿ, ನಮ್ಮ ಪುರಾಣಗಳ ಪ್ರಕಾರ
ಹಸಿವಾಗುವುದೇ ಇಲ್ಲ,
ಬಾಯಾರಿಕೆಯೂ ಇಲ್ಲ ;
ಇಂಥ ಹಸಿವಿರದ, ತೃಷೆಯಿರದ
ಬದುಕು, ಬದುಕೇ ಅಲ್ಲ.

ಮೇಲಿನ ಆ ಸ್ವರ್ಗದಲ್ಲಿ
ದೇವತೆಗಳು ಕಣ್ಣು ಮಿಟುಕುವುದಿಲ್ಲ.
ಬಿಟ್ಟ ಕಣ್ಣು ಬಿಟ್ಟಂತೆಯೇ ಇರುವ
ಯಾರನ್ನಾದರು ನೋಡುವುದು
ನಿಜವಾಗಿಯೂ ಸಂತೋಷವಲ್ಲ.

ಹೊಟ್ಟೆ ತುಂಬಿದವರ ಆ ಸ್ವರ್ಗದಲ್ಲಿ
ಹೊಟ್ಟೆ ಕಿಚ್ಚಿಗು ಕೂಡ ಬರಗಾಲವಿಲ್ಲ.
ಪುರಾಣಗಳ ಪ್ರಕಾರ, ಸದಾ ಅಭದ್ರ
ಸಿಂಹಾಸನದ ಪಟ್ಟಭದ್ರ, ಆ ಜೋಬದ್ರ
ದೇವೆಂದ್ರನಾಡಿದಾಟಕ್ಕೆ ಲೆಕ್ಕವೇ ಇಲ್ಲ,
ನಿತ್ಯ ಸೌಭಾಗ್ಯವತಿಯರಾದ-
ಪ್ಸರೆಯರನ್ನು ಅವನು ಬಳಸಿದ ರೀತಿ
ಗೌರವಾಸ್ಪದವಲ್ಲ.

ನಿಂತಲ್ಲೆ ನಿಂತು ಪಾಚಿಗಟ್ಟುತ್ತಿರುವ ನೀರಲ್ಲಿ
ಈಜಬಹುದೇ ಹೇಳಿ ಯಾರಾದರೂ ?
ಬೇಸಗೆಗೆ ಬತ್ತುವ, ಮಳೆಗಾಲಕ್ಕೆ ಏರುವ
ಬೆಟ್ಟ ಕಡಲಿನ ನಡುವೆ ಹರಿಯುವ ಹೊಳೆಯ
ಸೋಪಾನ ಘಟ್ಟಗಳೆ ಸಾಕು, ನಮಗಾದರೂ.